Tag: stone mining

  • ನ್ಯಾಯಕ್ಕಾಗಿ ಸಿಎಂ ಮನೆ ಮುಂದೆ ವಿಷ ಸೇವಿಸಲು ಮುಂದಾದ ರೈತ ಕುಟುಂಬ!

    ನ್ಯಾಯಕ್ಕಾಗಿ ಸಿಎಂ ಮನೆ ಮುಂದೆ ವಿಷ ಸೇವಿಸಲು ಮುಂದಾದ ರೈತ ಕುಟುಂಬ!

    ಬೆಂಗಳೂರು: ಗಣಿ ಮಾಲೀಕರ ಬಳಿ ಇರುವ ನಮ್ಮ ಜಮೀನನ್ನು ನಮಗೆ ಸಿಗದೇ ಇದ್ದರೆ ನಾವು ಸಿಎಂ ಮುಂದೆ ವಿಷ ಸೇವಿಸುವುದಾಗಿ ರೈತ ಕುಟುಂಬ ಹೇಳಿದೆ.

    ಜೆಪಿ ನಗರದಲ್ಲಿರುವ ಸಿಎಂ ನಿವಾಸದ ಮುಂದೆ ರಾಮನಗರ ಜಿಲ್ಲೆಯ ತೆಂಗಿನಕಲ್ಲು, ಲಂಬಾಣಿತಾಂಡ, ಅಮ್ಮನದೊಡ್ಡಿ ಗ್ರಾಮದ ನಾಗೇಶ್ ನಾಯಕ, ರಾಮಣ್ಣ ಹಾಗೂ ರಾಜುನಾಯಕ್ ಆತ್ಮಹತ್ಯೆಗೆ ಯತ್ನಿಸಿದ್ದ ರೈತರು.

    ನಮಗೆ ನ್ಯಾಯ ಒದಗಿಸಿಕೊಡಿ ಅಂತಾ ಆಗ್ರಹಿಸಿ, ವಿಷ ಸೇವಿಸಲು ಮುಂದಾಗಿದ್ದರು. ನಿವಾಸದಲ್ಲಿ ಮುಖ್ಯಮಂತ್ರಿ ಇಲ್ಲವೆಂದು ತಿಳಿಯುತ್ತಿದ್ದಂತೆ, ನ್ಯಾಯ ಸಿಗದೇ ಹೋದರೆ ನಾಳೆ ಮತ್ತೆ ಬಂದು ಇಲ್ಲಿಯೇ ವಿಷ ತೆಗೆದುಕೊಳ್ಳುತ್ತೇವೆ ಎಂದು ಹೇಳಿ ರೈತರು ಮರಳಿದ್ದಾರೆ.

    ಯಾಕೆ ವಿಷ ಸೇವನೆ?
    ಬೆಂಗಳೂರು ನಿವಾಸಿ ನಂದಕುಮಾರ್ ಎಂಬವರು ಕಲ್ಲು ಗಣಿಗಾರಿಕೆಗೆ ಜಮೀನು ಬಳಸಿಕೊಂಡು ವಾಪಾಸ್ ಕೊಡುವುದಾಗಿ ಹೇಳಿ, ಅಕ್ರಮವಾಗಿ ಜಮೀನನ್ನು ಬರೆಸಿಕೊಂಡಿದ್ದಾರೆ. ಈಗ ಜಮೀನು ನನ್ನದೇ ಎಂದು ಹೇಳಿ, ಬೇರೆಯವರಿಗೆ ಮಾರಲು ಮುಂದಾಗಿದ್ದಾರೆ. ರಾಮನಗರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಮೂರು ಕುಟುಂಬದ ಜಮೀನನ್ನು ನಂದಕುಮಾರ್ ಪಡೆದು ಮೋಸ ಮಾಡಿದ್ದಾರೆ ರೈತರು ಆರೋಪಿಸಿದ್ದಾರೆ.

  • ಬಿಬಿಎಂಪಿ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ!

    ಬಿಬಿಎಂಪಿ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ!

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಅರಣ್ಯ ಪ್ರದೇಶದ ಮಧ್ಯದಲ್ಲಿಯೇ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ. 2007ರಲ್ಲಿ ಕಸ ಡಂಪ್ ಮಾಡೋದಕ್ಕೆ ಅಂತಾ ತಮ್ಮನಾಯಕನಹಳ್ಳಿಯಲ್ಲಿ ಸರ್ಕಾರ ಸುಮಾರು ಎರಡು ಎಕರೆಯಷ್ಟು ಜಾಗವನ್ನು ಮಂಜೂರು ಮಾಡಿತ್ತು. ಇದು ಅರಣ್ಯ ಪ್ರದೇಶವಾಗಿದ್ದು, ಇಲ್ಲಿ ಕಸ ಡಂಪ್ ಮಾಡೋದಕ್ಕೆ ಸಾಧ್ಯವಿಲ್ಲ ಎಂದು ಅರಣ್ಯ ಇಲಾಖೆ ವಿರೋಧ ವ್ಯಕ್ತಪಡಿಸಿತ್ತು.

    ಸದ್ಯ ಈ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತದೆ. ಡೈನಾಮೇಟ್ ಸಿಡಿಸಿಕಲ್ಲು ಪುಡಿ ಮಾಡೋದರಿಂದ ಅರಣ್ಯದಲ್ಲಿರುವ ಪ್ರಾಣಿ ಪಕ್ಷಿಗಳು ಸ್ಫೋಟಕ ಸದ್ದಿಗೆ ನಡುಗಿ ಹೋಗಿವೆ. ಬಿಬಿಎಂಪಿ ಜಾಗದಲ್ಲಿ ರಾಜಾರೋಷವಾಗಿ ಕಲ್ಲುಗಣಿಗಾರಿಕೆ ನಡೆಸಲು ಅಧಿಕಾರಿಗಳೇ ಶ್ರೀರಕ್ಷೆ ನೀಡಿದ್ದಾರೆ. ಪ್ರಭಾವಿ ರಾಜಕೀಯ ನಾಯಕರು ಈ ಕಲ್ಲುಗಣಿಗಾರಿಕೆ ರೂವಾರಿ ಅನ್ನೋದು ಪರಿಸರವಾದಿಗಳು ಆರೋಪಿಸುತ್ತಿದ್ದಾರೆ.

    2007ರಲ್ಲಿ ಕಸ ಡಂಪಿಂಗ್ ಮಾಡೋದಕ್ಕೆ ಬಿಬಿಎಂಪಿ ಆದೇಶ ನೀಡಿತ್ತು. ಅರಣ್ಯ ಪ್ರದೇಶ ಆಗಿರೋದ್ರಿಂದ ಕಸ ಡಂಪ್ ಮಾಡಲು ಸಾಧ್ಯವಾಗಲಿಲ್ಲ. ಕೆಲವು ದಿನಗಳಿಂದ ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಯಾರು ಅನುಮತಿ ನೀಡಿದ್ರೂ ಎಂಬುವುದು ಗೊತ್ತಾಗುತ್ತಿಲ್ಲ. ಈ ಸಂಬಂಧ ಕೇಂದ್ರ ಪರಿಸರ ದೂರು ಸಲ್ಲಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪರಿಸರವಾದಿ ವಿಜಯ್ ನಿಶಾಂತ್ ದೂರಿದ್ದಾರೆ.

  • ರಕ್ಷಿತಾರಣ್ಯದಲ್ಲೇ ಕಲ್ಲಿನ ಕ್ವಾರಿ ಮಾಫಿಯಾ- ರಮಾನಾಥ ರೈ ಆಪ್ತನಿಂದಲೇ ಅಕ್ರಮ

    ರಕ್ಷಿತಾರಣ್ಯದಲ್ಲೇ ಕಲ್ಲಿನ ಕ್ವಾರಿ ಮಾಫಿಯಾ- ರಮಾನಾಥ ರೈ ಆಪ್ತನಿಂದಲೇ ಅಕ್ರಮ

    ಮಂಗಳೂರು: ಮಾಜಿ ಅರಣ್ಯ ಸಚಿವ ರಮಾನಾಥ ರೈ ಆಪ್ತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸದಸ್ಯ ಪದ್ಮಶೇಖರ್ ಜೈನ್ ಎಂಬವರು ರೈ ಪ್ರತಿನಿಧಿಸುತ್ತಿದ್ದ ಬಂಟ್ವಾಳ ತಾಲೂಕಿನಲ್ಲಿ ರಕ್ಷಿತಾರಣ್ಯವನ್ನೇ ಅತಿಕ್ರಮಿಸಿ ಕಲ್ಲಿನ ಕ್ವಾರಿ ನಡೆಸ್ತಿರೋದು ಬೆಳಕಿಗೆ ಬಂದಿದೆ.

    ಬಂಟ್ವಾಳ ತಾಲೂಕಿನ ಕೊಡ್ಯಮಲೆ ರಕ್ಷಿತಾರಣ್ಯ ವ್ಯಾಪ್ತಿಯ ಸರ್ವೆ ನಂಬರ್ 164 /2 ಮತ್ತು 172/2 ರಲ್ಲಿ ಕಳೆದ ಹತ್ತು ವರ್ಷಗಳಿಂದ ಕಲ್ಲಿನ ಕೋರೆ ನಡೆಸುತ್ತಿದ್ದು, ಇದೀಗ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ.

    ಅರಣ್ಯ ಇಲಾಖೆ, ಗಣಿ ಇಲಾಖೆ ಸೇರಿದಂತೆ ಸ್ಥಳೀಯ ಪಂಚಾಯತ್ ಮಟ್ಟದ ಅಧಿಕಾರಿಗಳೂ ಈ ಅಕ್ರಮದಲ್ಲಿ ಶಾಮೀಲಾಗಿರುವ ಆರೋಪ ಕೇಳಿಬಂದಿದೆ. ಕಳೆದ ಹತ್ತು ವರ್ಷಗಳಿಂದ ಇಲ್ಲಿ ಅಕ್ರಮ ಕ್ವಾರಿ ನಡೆಯುತ್ತಿದ್ದರೂ, ಈ ಬಗ್ಗೆ ಯಾವೊಬ್ಬ ಅಧಿಕಾರಿಯೂ ಕಾನೂನು ಉಲ್ಲಂಘನೆಯ ಆಕ್ಷೇಪ ಎತ್ತಿಲ್ಲ. ವಿಶೇಷ ಅಂದ್ರೆ, ಬಂಟ್ವಾಳದ ಆರ್ ಟಿಐ ಕಾರ್ಯಕರ್ತರೊಬ್ಬರು ಅಧಿಕಾರಿ ವರ್ಗದ ಮೇಲೆ ವಿಶ್ವಾಸ ಕಳೆದುಕೊಂಡು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಮಂಗಳೂರಿನ ಗಣಿ ಇಲಾಖೆ ಅಧಿಕಾರಿಗಳು ಹೈಕೋರ್ಟಿಗೂ ತಪ್ಪು ಮಾಹಿತಿ ನೀಡಿದ್ದಾರೆ.

    ಅಕ್ರಮ ಕ್ವಾರಿ ಅರಣ್ಯ ಪ್ರದೇಶದ 10 ಎಕರೆಗೂ ಹೆಚ್ಚು ಪ್ರದೇಶದಲ್ಲಿ ನಡೀತಿದ್ದರೂ, ಅದರ ಬಗ್ಗೆ ಉಲ್ಲೇಖಿಸದೆ 2015ರ ಬಳಿಕ ಕ್ವಾರಿಗೆ ಅನುಮತಿಯನ್ನೇ ನೀಡಿಲ್ಲ ಎಂದು ಜುಲೈ 2ರಂದು ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಇದೇ ಗಣಿ ಅಧಿಕಾರಿಗಳು ಆರ್ ಟಿಐ ಮಾಹಿತಿಯಡಿ ಕೇಳಿದ ಪ್ರಶ್ನೆಗೆ, ಸದ್ರಿ ಸರ್ವೆ ನಂಬರಿನಲ್ಲಿ ಯಾವುದೇ ಕ್ವಾರಿ, ಕ್ರಷರ್ ಗೆ ಅನುಮತಿ ನೀಡಿಲ್ಲ ಎಂದಿದ್ದು ಅಧಿಕಾರಿಗಳ ಶಾಮೀಲಾತಿಯ ಶಂಕೆ ಮೂಡುವಂತಾಗಿದೆ. ಹೀಗಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಅಧಿಕಾರಿಗಳು ಮತ್ತು ಪರಿಸರ ಇಲಾಖೆ ಅಧಿಕಾರಿಗಳು ಈ ಅಕ್ರಮದಲ್ಲಿ ನೇರ ಶಾಮೀಲಾಗಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ.

    ಕ್ವಾರಿ ವಿರುದ್ಧ ಸ್ಥಳೀಯರು ಯಾವುದೇ ದೂರು ನೀಡಿದ್ರೂ, ಧಮ್ಕಿ ಮೂಲಕ ಬಾಯಿ ಮುಚ್ಚಿಸ್ತಾರೆಂಬ ಆರೋಪ ಕೂಡ ಕೇಳಿಬಂದಿದೆ.

  • ಬೆಂಗ್ಳೂರಲ್ಲೇ ಎಗ್ಗಿಲ್ಲದೆ ನಡೀತಿದೆ ಅಕ್ರಮ ಕಲ್ಲು ಗಣಿಗಾರಿಕೆ- ದೂರು ನಿಡಿದ್ರೂ ಕ್ಯಾರೇ ಎನ್ನುತ್ತಿಲ್ಲ ಖಾಕಿ!

    ಬೆಂಗ್ಳೂರಲ್ಲೇ ಎಗ್ಗಿಲ್ಲದೆ ನಡೀತಿದೆ ಅಕ್ರಮ ಕಲ್ಲು ಗಣಿಗಾರಿಕೆ- ದೂರು ನಿಡಿದ್ರೂ ಕ್ಯಾರೇ ಎನ್ನುತ್ತಿಲ್ಲ ಖಾಕಿ!

    ಬೆಂಗಳೂರು: ಇಲ್ಲಿ ನಿತ್ಯವೂ ಸಂಭವಿಸುತ್ತೆ ಸ್ಫೋಟ. ಇಲ್ಲಿನ ಜನರಿಗೆ ನಿತ್ಯವೂ ಭೂಕಂಪನದ ಅನುಭವ. ಮನೆಯಲ್ಲಿ ಪುಟ್ಟ-ಪುಟ್ಟ ಮಕ್ಕಳು ಬೆಚ್ಚಿ ಬೀಳ್ತಾರೆ. ಇದು ಎಲ್ಲೋ ನಡೆಯುತ್ತಿರುವ ಘಟನೆ ಅಲ್ಲ. ನಮ್ಮ ಬೆಂಗಳೂರಲ್ಲೇ ನಡೆಯತ್ತಿರುವ ಅಕ್ರಮ ಗಣಿಗಾರಿಕೆ.

    ಹೌದು. ಬೆಂಗಳೂರಿನ ರಾಮಚಂದ್ರಾಪುರದಲ್ಲಿ ಎಗ್ಗಿಲ್ಲದೆ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಸ್ಫೋಟಕಗಳನ್ನ ಬಳಸಬಾರದು ಅಂತ ಷರತ್ತು ವಿಧಿಸಿದ್ರೂ, ಇಲ್ಲಿ ಬ್ಲಾಸ್ಟಿಂಗ್ ನಡೆಯುತ್ತೆ. ಪೊಲೀಸರಿಗೆ ದೂರು ನೀಡಿದ್ರೂ ಕ್ಯಾರೆ ಅನ್ನಲ್ಲ. ಇನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೂ ಬೇಜಾವಾಬ್ದಾರಿ. ದೂರು ಕೊಟ್ಟು ಕೊಟ್ಟು ಸ್ಥಳೀಯರು ಬೇಸತ್ತಿದ್ದಾರೆ.

    ಉಮ್ರಾ ಡೆವಲಪರ್ಸ್ ಮೂಲಕ ನವೀದ್ ಅನ್ನೋ ಬಿಲ್ಡರ್, ಕಲ್ಲು ಗಣಿಗಾರಿಕೆ ನಡೆಸ್ತಿದ್ದಾರೆ. ಗಣಿಗಾರಿಕೆಯಿಂದ ಆಗ್ತಿರುವ ಸಮಸ್ಯೆ ವಿರುದ್ಧ ಸ್ಥಳೀಯರು ಕೋರ್ಟ್ ಮೆಟ್ಟಿಲೇರಿದ್ರು. ನಾಲ್ಕು ತಿಂಗಳೊಳಗೆ ಸ್ಥಳೀಯರ ಮನವಿಗೆ ಸ್ಪಂದಿಸಿ ಕ್ರಮ ಜರುಗಿಸಿ ಎಂದು ಕೋರ್ಟ್ ಆದೇಶ ಕೂಡ ನೀಡ್ತು. ಆದ್ರೆ ಯಲಹಂಕ ನ್ಯೂಟೌನ್ ಪೊಲೀಸರು ಮಾತ್ರ ಒಂದು ಲಾರಿ ಸೀಜ್ ಮಾಡಿ, ಬಿಟ್ಟು ಕಳಿಸಿದ್ರು. ಇನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾತ್ರ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ.

    ಅಕ್ರಮಕ್ಕೆ ಸಾಕ್ಷಿಯಾಗುವ ದೃಶ್ಯಗಳು ಇದೆ. ಆದ್ರೆ ಕ್ರಮ ಮಾತ್ರ ಜರುಗಿಸುತ್ತಿಲ್ಲ. ಇಂತಹ ಅಧಿಕಾರಿಗಳ ಸಹಕಾರದಿಂದಲೇ ಎಗ್ಗಿಲ್ಲದೇ ಗಣಿಗಾರಿಕೆ ನಡೆಯುತ್ತಿರೋದು. ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ್ ಪಾಟೀಲ್ ಈಗಲಾದ್ರೂ ಕ್ರಮ ಕೈಗೊಳ್ತಾರಾ ಅನ್ನೋದನ್ನು ಕಾದು ನೋಡಬೇಕಾಗಿದೆ.

  • ಕಲ್ಲು ಗಣಿಗಾರಿಕೆಗೆ ಪ್ರತಿದಿನ ಡೈನಮೈಟ್‍ಗಳ ಸ್ಫೋಟ- ಬಿರುಕು ಬಿಡ್ತಿವೆ ಮನೆಗಳು

    ಕಲ್ಲು ಗಣಿಗಾರಿಕೆಗೆ ಪ್ರತಿದಿನ ಡೈನಮೈಟ್‍ಗಳ ಸ್ಫೋಟ- ಬಿರುಕು ಬಿಡ್ತಿವೆ ಮನೆಗಳು

    ಬೆಂಗಳೂರು: ಮನೆಗಳ ಗೋಡೆ, ಚಾವಣಿಗಳು ಬಿರುಕು ಬಿಟ್ಟಿವೆ. ಗೋಡೆ ಗೋಡೆಗಳೇ ಕುಸಿದು ಬಿದ್ದಿವೆ. ಪ್ರತಿನಿತ್ಯ ಭೂಮಿ ನಡುಗುತ್ತಿದೆ. ಇದು ಬೆಂಗಳೂರು ನಗರದ ವಿದ್ಯಾರಣ್ಯಪುರ ಬಳಿಯ ದೊಡ್ಡಬೆಟ್ಟಹಳ್ಳಿಯ ಕಾಲೋನಿಯಲ್ಲಿನ ಪರಿಸ್ಥಿತಿ.

    ಕಳೆದ ಆರು ತಿಂಗಳಿನಿಂದ ಇಲ್ಲಿ ಉಮ್ರಾ ಡೆವಲಪರ್ಸ್ ಕಲ್ಲು ಗಣಿಗಾರಿಕೆಯನ್ನು ನಡೆಸ್ತಿದ್ದಾರೆ. ಹೀಗಾಗಿ ಇಲ್ಲಿ ಪ್ರತಿದಿನ ಹಗಲು ರಾತ್ರಿಯೆನ್ನದೇ ಡೈನಮೈಟ್ ಸ್ಫೋಟಗೊಳ್ಳುತ್ತಿವೆ. ಇದ್ರಿಂದ ಜನ ಪ್ರತಿದಿನ ಏನಾಗುತ್ತೋ ಅನ್ನೋ ಆತಂಕದಲ್ಲೇ ದಿನ ಕಳೀತಿದ್ದಾರೆ. ಪರೀಕ್ಷೆ ಸಮಯ ಕರ್ಕಶ ಶಬ್ಧದಿಂದ ಮಕ್ಕಳಿಗೆ ಓದಲು ಆಗ್ತಿಲ್ಲ.

    ಹಾನಿಕಾರಕ ಸ್ಫೋಟಕಗಳಿಂದ ಹಲವು ಮನೆಗಳು ಬಿರುಕು ಬಿಡೋದಿರಲಿ ಕುಸಿದು ಬಿದ್ದಿವೆ. ಪ್ರತಿದಿನ ಇಲ್ಲಿನ ಜನ ಆತಂಕದೊಂದಿಗೆ ದಿನ ಕಳೆಯುತ್ತಿದ್ದಾರೆ. ಜಿಲ್ಲಾಧಿಕಾರಿಗಳು, ಮೈನಿಂಗ್ ಅಧಿಕಾರಿಗಳು ಏನ್ಮಾಡ್ತಿದ್ದಾರೆ ಎಂಬುವುದು ಇಲ್ಲಿನ ಜನರ ಪ್ರಶ್ನೆಯಾಗಿದೆ.