Tag: stone mining

  • ಕೊಡಗಿನಲ್ಲಿ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ – ಸುತ್ತಮುತ್ತಲಿನ ಪ್ರದೇಶದ ಜನಕ್ಕೆ ಕಾಡ್ತಿದೆ ಶ್ವಾಸಕೋಶದ ಸಮಸ್ಯೆ!

    ಕೊಡಗಿನಲ್ಲಿ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ – ಸುತ್ತಮುತ್ತಲಿನ ಪ್ರದೇಶದ ಜನಕ್ಕೆ ಕಾಡ್ತಿದೆ ಶ್ವಾಸಕೋಶದ ಸಮಸ್ಯೆ!

    ಮಡಿಕೇರಿ: ಅದು ಪ್ರಕೃತಿಯ ತವರು ಕೊಡಗು (Kodagu), ದೇಶ ವಿದೇಶಗಳ ಜನರು ನಿತ್ಯ ಈ ಊರಿಗೆ ಭೇಟಿ ನೀಡಿ ಪ್ರಕೃತಿಯ ಮಡಿಲಲ್ಲಿ ದಿನ ಕಳೆಯುತ್ತಾರೆ. ಬೆಟ್ಟಗುಡ್ಡಗಳ ಹಸಿರಿನ ವಾತಾವರಣ ಕಂಡು ಖುಷಿಯಿಂದ ತೆರಳುತ್ತಾರೆ. ಇದರಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮ (Tourism) ಚಟುವಟಿಕೆಗಳು ಹೆಚ್ಚಾಗುತ್ತಿದೆ. ಇಂತಹ ಕೊಡಗಿನಲ್ಲಿ ಕೆಲ ದುರುಳರು ಹಣದ ಆಸೆಗೆ ಬೃಹತ್ ಬೆಟ್ಟಗಳನ್ನೇ ನಾಶ ಮಾಡಲು ಹೊರಟಿದ್ದಾರೆ. ಇಡೀ ಬೆಟ್ಟ ಪ್ರದೇಶವನ್ನೇ ರಕ್ಕಸನ ಬಾಯಿಯಂತೆ ನುಂಗುತ್ತಿದ್ದಾರೆ. ಹೀಗಾಗಿ ಆ ಊರ ಸುತ್ತಮುತ್ತ ಪ್ರದೇಶಗಳಲ್ಲಿ ವಾಸ ಮಾಡುವ ಜನರು ದಿನ ಕಳೆದಂತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ನೇರುಗಳಲೆ ಪಂಚಾಯತಿ ವ್ಯಾಪ್ತಿಯ ಯಲಕನೂರು ಹಾಗೂ ಹೊಸಳ್ಳಿ ಗ್ರಾಮದಲ್ಲಿ ಕೆಲ ದುರುಳರು ಪ್ರಕೃತಿಯ ಒಡಲಿಗೆ ಕೈಹಾಕಿದ್ದಾರೆ. ಲಾರಿ, ಇಟಾಚಿಗಳನ್ನ ಬಳಸಿಕೊಂಡು ಹಗಲು ರಾತ್ರಿ ಎನ್ನದೇ ಬಾರಿ ಸ್ಫೋಟಕಗಳನ್ನು ಸಿಡಿಸಿ ಅಕ್ರಮವಾಗಿ ಗಣಿಗಾರಿಕೆ (Illegal Mining) ನಡೆಸುತ್ತಿದ್ದಾರೆ. ಇದರಿಂದ ಹಲವಾರು ಜನರು ಅನಾರೋಗ್ಯ ಸಮಸ್ಯೆ ಎದುರಿಸಬೇಕಾಗಿದೆ.

    ಊರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 17ಕ್ಕೂ ಹೆಚ್ಚು ಕಲ್ಲು ಕೊರೆಗಳು ಇದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಇತ್ತಿಷ್ಟು ಜಾಗದಲ್ಲಿ ಗಣಿಗಾರಿಕೆ ನಡೆಸುತ್ತೇವೆ ಅಂತ ಅನುಮತಿ ಪಡೆದಿದ್ದಾರೆ. ಆದ್ರೆ ಕಲ್ಲುಗಣಿಗಾರಿಕೆ ನಡೆಸುತ್ತಿರುವರು ಇಲಾಖೆಯ ಕೆಲ ಮಾನದಂಡಗಳನ್ನ ಗಾಳಿಗೆ ತೂರಿ ಪ್ರಕೃತಿ ಮಾತೆಯ ಭೂಗರ್ಭವನ್ನೇ ಸೀಳುತ್ತಿದ್ದಾರೆ. ಹಗಲು ರಾತ್ರಿ ಎನ್ನದೇ ಭಾರೀ ಸ್ಫೋಟಕಗಳನ್ನ ಸಿಡಿಸಿ ಗಣಿ ಕೆಲಸ ನಡೆಸುತ್ತಿದ್ದಾರೆ. ಮೀಸಲು ಅರಣ್ಯ ಪ್ರದೇಶವನ್ನ ಬೀಡದೇ ಮನಸ್ಸೋ ಇಚ್ಚೆ ಗಣಿಗಾರಿಕೆ ನಡೆಸುತ್ತಿದ್ದಾರೆ. ಇದು ಸುತ್ತಮುತ್ತ ನೆಲೆಸಿರುವ ಪ್ರದೇಶದ ಜನರನ್ನೂ ಆತಂಕ್ಕೆ ದೂಡಿದೆ.

    ಇನ್ನೂ ಈ ಊರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಹಲವು ಕಲ್ಲುಗಣಿಗಾರಿಕೆ ಅಕ್ರಮವಾಗಿದೆ. ಅವೈಜ್ಞಾನಿಕ ನಿರ್ವಹಣೆಯಿಂದಾಗಿ ಊರಿನ ವಾತಾವರಣ ಕಲುಷಿತಗೊಂಡು ಗ್ರಾಮದ ಶೇ.90ರಷ್ಟು ಮಂದಿಗೆ ಶ್ವಾಸಕೋಶದ ತೊಂದರೆ ಎದುರಾಗಿದೆ. ಹೀಗಾಗಿ ಕಲ್ಲುಗಣಿಗಾರಿಕೆ ತಕ್ಷಣ ನಿಲ್ಲಿಸಬೇಕು, ಇಲ್ಲದಿದ್ದಲ್ಲಿ ದಯಾಮರಣ ನೀಡಿ ಎಂದು ಗ್ರಾಮಸ್ಥರು ವಿವಿಧ ಇಲಾಖಾ ಅಧಿಕಾರಿಗಳ ಎದುರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಕಲ್ಲುಗಣಿಗಾರಿಕೆಯಿಂದ ಜನಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಭಾರೀ ಸಮಸ್ಯೆ ಸೃಷ್ಟಿಯಾಗಿದೆ. ಅತೀ ಹೆಚ್ಚು ಭಾರದ ವಾಹನಗಳ ಸಂಚಾರದಿಂದ ರಸ್ತೆಗಳು ಹದಗೆಟ್ಟಿದ್ದು, ಜನರ ಬದುಕು ದುಸ್ತರವಾಗಿದೆ. ಸಂಜೆ ವೇಳೆ ಕೋರೆಗಳಲ್ಲಿ ಭಾರೀ ಸ್ಫೋಟಗಳನ್ನು ಬಳಸಲಾಗುತ್ತಿದೆ. ಇಲ್ಲಿನ ಮನೆಗಳೂ ಸಾಕಷ್ಟು ಬಿರುಕುಬಿಟ್ಟಿವೆ. ಜೀವನವೇ ನರಕವಾಗಿದೆ ಗ್ರಾಮಸ್ಥರು ಅಧಿಕಾರಿಗಳೆದುರು ಅಳಲು ತೋಡಿಕೊಂಡಿದ್ದಾರೆ. ಆದ್ರೆ ಇದ್ಯಾವುದಕ್ಕೂ ಕಿವಿಗೊಡದೆ ಅಧಿಕಾರಿಗಳು ತಮ್ಮ ಪಾಡಿಗೆ ಇದ್ದಾರೆ. ಇನ್ನೂ ಕೆಲವರು ಗ್ರಾಮಸ್ಥರಿಗೆ ಹಣ ನೀಡಿ ಇಲ್ಲಿ ಯಾವ್ದೇ ಸಮಸ್ಯೆ ಇಲ್ಲವೆಂದು ಹೇಳುವಂತೆ ಹೇಳಿಕೊಟ್ಟಿದ್ದಾರೆ ಅಂತ ʻಪಬ್ಲಿಕ್‌ ಟಿವಿʼ ರಿಯಾಲಿಟಿ ಚೆಕ್‌ ವೇಳೆ ಯುವಕನೊಬ್ಬ ಹೇಳಿಕೊಂಡಿದ್ದಾನೆ.

  • ಸಂಪನ್ಮೂಲ ಕ್ರೋಢೀಕರಣಕ್ಕೆ ಹೊಸ ದಾರಿ – 6,105 ಕೋಟಿ ದಂಡ ಸಂಗ್ರಹಕ್ಕೆ ಒನ್‌ಟೈಮ್ ಸೆಟಲ್ಮೆಂಟ್ ಆಫರ್‌!

    ಸಂಪನ್ಮೂಲ ಕ್ರೋಢೀಕರಣಕ್ಕೆ ಹೊಸ ದಾರಿ – 6,105 ಕೋಟಿ ದಂಡ ಸಂಗ್ರಹಕ್ಕೆ ಒನ್‌ಟೈಮ್ ಸೆಟಲ್ಮೆಂಟ್ ಆಫರ್‌!

    ಬೆಂಗಳೂರು: ಗ್ಯಾರಂಟಿಗಳ (Guarantee Scheme) ಭಾರದಿಂದ ತತ್ತರಿಸಿರುವ ರಾಜ್ಯ ಸರ್ಕಾರ ಸಂಪನ್ಮೂಲಗಳ ಕ್ರೋಢೀಕರಣಕ್ಕಾಗಿ ಹೊಸ ಹೊಸ ಮಾರ್ಗಗಳನ್ನು ಹುಡುಕ್ತಿದೆ. ಅಕ್ರಮ ಕಲ್ಲುಗಣಿಗಾರಿಕೆ ನಡೆಸಿದವರು ಬಾಕಿ ಉಳಿಸಿಕೊಂಡ 6,105 ಕೋಟಿ ದಂಡ ಸಂಗ್ರಹಕ್ಕೆ ಒನ್‌ಟೈಮ್ ಸೆಟಲ್ಮೆಂಟ್ ಯೋಜನೆ (OTS Scheme) ತರೋದಕ್ಕೆ ಮುಂದಾಗಿದೆ.

    ರಾಜಧನ ಮತ್ತು ದಂಡ ವಸೂಲಿ ಮಾಡಲು ಉಪಖನಿಜ (Submineral) ರಿಯಾಯ್ತಿ ಕಾಯ್ದೆಗೆ ತಿದ್ದುಪಡಿ ತರಲು ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಪ್ರತಿ ಟನ್‌ಗೆ 80 ರೂ. ರಾಜಧನ ನಿಗದಿ ಮಾಡಿದೆ. ಇದರಿಂದ ಸರ್ಕಾರ 311.55 ಕೋಟಿ ಹೆಚ್ಚುವರಿ ಸಂಗ್ರಹದ ನಿರೀಕ್ಷೆಯಲ್ಲಿದೆ. ಅಲ್ಲದೇ, ಪರವಾನಗಿ ಪಡೆಯದೇ ಹೆಚ್ಚುವರಿಯಾಗಿ ಸಾಗಿಸಿದ ಉಪಖನಿಜಕ್ಕೆ ದಂಡ ಹಾಕಲು ತೀರ್ಮಾನಿಸಿದೆ. ಇದನ್ನೂ ಓದಿ: ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನಿಯಮ ಸಡಿಲ – ಶೇ.25ರಷ್ಟು ವಿದ್ಯಾರ್ಥಿಗಳಿದ್ದರೂ ಮಾನ್ಯತೆ!

    ಅಷ್ಟೇ ಅಲ್ಲ, ಖನಿಜಗಳನ್ನ ಹೊಂದಿರುವ ಭೂಮಿಗೆ ತೆರಿಗೆ ಹಾಕಲು ಸರ್ಕಾರದ ನಿರ್ಧಾರ ಮಾಡಿದೆ. ಜಮೀನಿನಲ್ಲಿ ಲಭ್ಯವಾಗುವ ಖನಿಜದ ಹಕ್ಕುಗಳು ಭೂಮಾಲಿಕನಿಗೆ ಸೇರುತ್ತದೆ. ಆದರೆ, 1 ಟನ್‌ಗೆ 100 ರೂ.ನಂತೆ ರಾಯಲ್ಟಿ ಹಾಕಲು ಸರ್ಕಾರ ನಿರ್ಧರಿಸಿದೆ ಎಂದು ಕಾನೂನು ಸಚಿವ ಹೆಚ್‌.ಕೆ ಪಾಟೀಲ್‌ (HK Patil) ತಿಳಿಸಿದ್ದಾರೆ.

    ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್, ಇಂದಿನ ಸಭೆಯಲ್ಲಿ 20 ವಿಷಯಗಳ ಬಗ್ಗೆ ಚರ್ಚೆ ಮಾಡಿ ಅನುಮೋದನೆ ನೀಡಲಾಗಿದೆ. ಕಲ್ಲು ಗಣಿಗಳಲ್ಲಿನ ಕಲ್ಲುಗಳಿಗೆ ಒಂದು ಟನ್‌ಗೆ 70 ರೂ. ರಾಯಲ್ಟಿ ಇದೆ. ಅದನ್ನು ಹೆಚ್ಚಳ ಮಾಡಿ ಒಂದು ಟನ್‌ಗೆ 80 ರೂ.ಗೆ ನಿಗದಿ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: MSPಗೆ ಆಗ್ರಹಿಸಿ ದೆಹಲಿಗೆ ನುಗ್ಗಲು ಯತ್ನಿಸಿದ ರೈತರ ಮೇಲೆ ಅಶ್ರುವಾಯು ಪ್ರಯೋಗ

    ಕೆಲವು ಗುತ್ತಿಗೆಯಿಂದ ಬರಬೇಕಾದ ಬಾಕಿ ಹಾಗೆ ಇದೆ. ಹಲವು ವರ್ಷಗಳಿಂದ ದಂಡ ವಸೂಲಿಯಾಗಿಲ್ಲ. ಕಳೆದ 6-7 ವರ್ಷಗಳಿಂದ ವಸೂಲಿಯಾಗಿಲ್ಲ. ಹಾಗಾಗಿ ಒನ್ ಟೈಮ್ ಸೆಟಲ್ಮೆಂಟ್‌ಗೆ ಅವಕಾಶ ಮಾಡಿಕೊಡಲಾಗಿದೆ. ಈ ಮೂಲಕ ದಂಡ ವಸೂಲಿ ಮಾಡಲು ನಿರ್ಧಾರ ಮಾಡಲಾಗಿದೆ. ಅಲ್ಲದೇ ಡಿಜಿಟಲೀಕರಣ ಮಾಡಿದ ಮೇಲೆ ಒತ್ತುವರಿ ಸಾಧ್ಯವಾಗಿಲ್ಲ. ಒಟಿಎಸ್ ಮೂಲಕ ದಂಡವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

  • ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಸಿದ್ಧತೆ – ರೈತರಿಂದ ಭಾರೀ ಆಕ್ರೋಶ!

    ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಸಿದ್ಧತೆ – ರೈತರಿಂದ ಭಾರೀ ಆಕ್ರೋಶ!

    – ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್ ಡ್ಯಾಂಗೆ ಅಪಾಯ – ರೈತರ ಆತಂಕ

    ಮಂಡ್ಯ: ಬೇಬಿಬೆಟ್ಟದಲ್ಲಿ ಸದ್ದಿಲ್ಲದೇ ಟ್ರಯಲ್ ಬ್ಲಾಸ್ಟ್‌ಗೆ (Bebi Trial Blast) ಸರ್ಕಾರ ಸಿದ್ಧತೆ ನಡೆಸಿದೆ. ಪ್ರಾಯೋಗಿಕ ಪರೀಕ್ಷೆಗೆ ಮುಂದಿನ ವಾರವೇ ವಿಜ್ಞಾನಿಗಳನ್ನು ಕರೆಸಲು ಮುಂದಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

    ಇದರಿಂದ ರೈತರು (Farmers) ಗರಂ ಆಗಿದ್ದು, ಪ್ರತಿಭಟನೆ ನಡೆಸಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸೇರಿದಂತೆ ಹಲವು ರೈತ ಮುಖಂಡರು, ಕಾರ್ಯಕರ್ತರು ಕೆಆರ್‌ಎಸ್‌ (KRS) ಬಳಿ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ರೈತರು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಜಿಲ್ಲೆಯ ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. `ಟ್ರಯಲ್ ಬ್ಲಾಸ್ಟ್ ಬೇಡ ಬೇಡ’ ಎಂದು ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಹತ್ರಾಸ್‌ ದುರಂತ- ಮೃತರ ಕುಟುಂಬಕ್ಕೆ ತಲಾ 2 ಲಕ್ಷ, ಗಾಯಾಳುಗಳಿಗೆ ತಲಾ 50 ಸಾವಿರ ನೆರವು

    ಬಳಿಕ ಮಾತನಾಡಿದ ಪ್ರತಿಭಟನಾನಿರತ ರೈತರು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ಬಳಿಯ ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್ ಡ್ಯಾಂಗೆ ಅಪಾಯ ಇದೆ. ಡ್ಯಾಂ ಸುರಕ್ಷತೆ ದೃಷ್ಟಿಯಿಂದ ಸದ್ಯ ಗಣಿಗಾರಿಕೆ ನಿಷೇಧಿಸಲಾಗಿದೆ. ಈಗ ಮತ್ತೆ ಸರ್ಕಾರವೇ ಗಣಿಗಾರಿಕೆಗೆ ಅನುಮತಿ ನೀಡಲು ಮುಂದಾಗಿದೆ. ಅದಕ್ಕಾಗಿ ಟ್ರಯಲ್ ಬ್ಲಾಸ್ಟ್ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಟ್ರಯಲ್ ಬ್ಲಾಸ್ಟ್ ಮಾಡಿ ಡ್ಯಾಂಗೆ ಯಾವುದೇ ಅಪಾಯವಿಲ್ಲ ಅಂತ ವರದಿ ತರಿಸಿಕೊಳ್ಳಲು ಹುನ್ನಾರ ನಡೆಸಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಆರ್‌ಎಸ್ ಡ್ಯಾಮ್ ಮುಖ್ಯದ್ವಾರ, ನೀರಾವರಿ ನಿಯಮದ ಕಚೇರಿ ಬಳಿ 100ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಇದನ್ನೂ ಓದಿ: IPL 2025: ಮೆಗಾ ಹರಾಜು ಪ್ರಕ್ರಿಯೆ ಶುರು; ರಿಟೇನ್‌ ಆಟಗಾರರ ವಿಚಾರದಲ್ಲಿ ಫ್ರಾಂಚೈಸಿಗಳ ನಡುವೆ ಭಿನ್ನಾಭಿಪ್ರಾಯ!

  • ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಿಕೊಡುವಂತೆ ಮನವಿ

    ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಿಕೊಡುವಂತೆ ಮನವಿ

    ಮಂಡ್ಯ: ಅಕ್ರಮ ಗಣಿಗಾರಿಕೆಯ ಕುರಿತು ತೀವ್ರ ಚರ್ಚೆ ನಡೆಯುತ್ತಿರುವುದರ ಮಧ್ಯೆ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಸಕ್ರಮ ಮಾಡಲು ಅನುಮತಿ ಕೊಡಬೇಕೆಂದು ಶ್ರೀರಂಗಪಟ್ಟಣ ತಾಲೂಕು ಚನ್ನನಕೆರೆ, ಜಕ್ಕನಹಳ್ಳಿ ಗ್ರಾಮಸ್ಥರು ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಶೈಲಜಾ ಅವರಿಗೆ ಮನವಿ ಸಲ್ಲಿಸಿದ್ದಾರೆ.

    ಈ ಎರಡು ಗ್ರಾಮದಲ್ಲಿ ಸುಮಾರು 300 ರಿಂದ 400 ಕುಟುಂಬ ವಾಸವಾಗಿವೆ. ಗ್ರಾಮಗಳಲ್ಲಿ 20 ವರ್ಷದಿಂದ ಹಿಡುವಳಿ ಜಮೀನಿನಲ್ಲಿ ಕಲ್ಲು ಬಂಡೆ ಇದ್ದು, ಕೈಯಲ್ಲಿ ಜಲ್ಲಿ, ಸೈಜು ಮತ್ತು ಬೋಡ್ರಸ್‍ಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದೇವೆ. ಸ್ಥಳೀಯ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆದು ಸಣ್ಣ ಪುಟ್ಟ ಟ್ರ್ಯಾಕ್ಟರ್, ಲಾರಿಗಳನ್ನು ತೆಗೆದುಕೊಂಡು ಅಕ್ಕ ಪಕ್ಕದ ಗ್ರಾಮಗಳಲ್ಲಿ ಮನೆ ಕಟ್ಟಲು ಸಾಮಗ್ರಿಗಳನ್ನು ಒದಗಿಸಿಕೊಡುತ್ತಿದ್ದೇವೆ. ಹೀಗಾಗಿ ಸಕ್ರಮ ಮಾಡಿಕೊಂಡಿ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

    ಗ್ರಾಮಗಳ ವ್ಯಾಪ್ತಿಯಲ್ಲಿ ಕ್ರಷರ್‍ಗಳನ್ನು ಎಂ ಸ್ಯಾಂಡ್, ಜಲ್ಲಿಪುಡಿ ಮಾಡಲು ಸರ್ಕಾರದಿಂದ ಪರವಾನಗಿ ನೀಡಲಾಗಿದೆ. ಕಾವೇರಿ ಸ್ಟೋನ್ ಕ್ರಷರ್, ಧನಲಕ್ಷ್ಮೀ ಸ್ಟೋನ್ ಕ್ರಷರ್, ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ಟೋನ್ ಕ್ರಷರ್, ಜೆ.ಜೆ.ಸ್ಟೋನ್ ಕ್ರಷರ್ ಮಾಲೀಕರು ಸ್ಥಳೀಯ ಯುವಕರಿಗೆ ಉದ್ಯೋಗ ನೀಡಿದ್ದಾರೆ. ಇದನ್ನೇ ನಂಬಿ ನೂರಾರೂ ಕುಟುಂಬ ಜೀವನ ನಡೆಸುತ್ತಿವೆ. ಆದ್ದರಿಂದ ಗಣಿಗಾರಿಕೆ ಸಕ್ರಮ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು.

    ಮಳೆಯನ್ನೇ ನಂಬಿ ವ್ಯವಸಾಯ ಮಾಡುತ್ತಿದ್ದೇವೆ. ಕೋವಿಡ್ ಕಾರಣದಿಂದ ನಗರದಲ್ಲಿ ಕೆಲಸ ಮಾಡುತ್ತಿದ್ದ ಯುವಕರು, ಇದೀಗ ಉದ್ಯೋಗ ಕಳೆದುಕೊಂಡು ಗ್ರಾಮೀಣ ಭಾಗಕ್ಕೆ ಬಂದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಸಕಾಲಕ್ಕೆ ಮಳೆ ಬಾರದೇ ನಷ್ಟ ಅನುಭವಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

  • 90 ದಿನದಲ್ಲಿ ಉದ್ದಿಮೆದಾರರ ಮನೆ ಬಾಗಿಲಿಗೆ ಎನ್‍ಒಸಿ: ಸಚಿವ ನಿರಾಣಿ

    90 ದಿನದಲ್ಲಿ ಉದ್ದಿಮೆದಾರರ ಮನೆ ಬಾಗಿಲಿಗೆ ಎನ್‍ಒಸಿ: ಸಚಿವ ನಿರಾಣಿ

    – ಒನ್ ಟೈಮ್ ಸೆಟ್ಲ್ ಮೆಂಟ್ ಯೋಜನೆ ಪ್ರಾರಂಭ

    ಬೆಂಗಳೂರು: ಕಂದಾಯ, ಸಾರಿಗೆ, ಅರಣ್ಯ ಮತ್ತು ಪರಿಸರ ಇಲಾಖೆ ಒಳಗೊಂಡ ಏಕಗವಾಕ್ಷಿ ಪದ್ಧತಿಯನ್ನು ಜಾರಿಗೆ ತಂದು 90 ದಿನಗಳಲ್ಲಿ ಉದ್ಯಮಿಗಳ ಮನೆ ಬಾಗಿಲಿಗೆ ಎನ್‍ಒಸಿ (ನಿರಪೇಕ್ಷಣ ಪತ್ರ) ತಲುಪಿಸುವ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಘೋಷಣೆ ಮಾಡಿದರು.

    ನಗರದ ಅರಮನೆ ಮೈದಾನದಲ್ಲಿ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ಸ್ ಉದ್ಯಮಿಗಳಿಗೆ ಹಮ್ಮಿಕೊಂಡಿದ್ದ ಸುರಕ್ಷತಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

    ಕಲ್ಲು ಕ್ವಾರಿ ಮತ್ತು ಗಣಿಗಾರಿಕೆ ನಡೆಸುವ ಉದ್ಯಮಿಗಳಿಗೆ ಅನುಕೂಲವಾಗುವಂತೆ ನಾಲ್ಕು ಇಲಾಖೆಗಳನ್ನು ಒಳಗೊಂಡ ಏಕಗವಾಕ್ಷಿ ಪದ್ಧತಿಯನ್ನು ಜಾರಿ ಮಾಡಿ ಅರ್ಜಿ ಸಲ್ಲಿಸಿದ 90 ದಿನದೊಳಗೆ ಉದ್ಯಮಿದಾರರ ಮನೆ ಬಾಗಿಲಿಗೆ ಇಲಾಖೆ ವತಿಯಿಂದಲೇ ಎನ್‍ಒಸಿ ಪತ್ರಗಳನ್ನು ತಲುಪಿಸುವ ವ್ಯವಸ್ಥೆ ಜಾರಿ ಮಾಡಲಿದ್ದೇವೆ. ಉದ್ದಿಮೆದಾರರು ಇಲಾಖೆಯಿಂದ ಇಲಾಖೆಗೆ ಅಲೆಯುವುದನ್ನು ತಪ್ಪಿಸಲು ಕರಾವಳಿ ಭಾಗದಲ್ಲಿ ಪ್ರತ್ಯೇಕವಾಗಿ ಮಂಗಳೂರಿನಲ್ಲಿ ಹಾಗೂ ರಾಜ್ಯದ ನಾಲ್ಕು ಕಂದಾಯ ಭಾಗಗಳಲ್ಲಿ ಗಣಿ ಅದಾಲ್ ನಡೆಸಲಾಗುವುದು. ಇದರಿಂದ ಸ್ಥಳದಲ್ಲೇ ಉದ್ದಿಮೆದಾರರ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಅನುಕೂಲವಾಗುತ್ತದೆ ಎಂದರು.

    ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜನಸ್ನೇಹಿ ಹಾಗೂ ಜನಪರವಾಗಿ ಇರಬೇಕೆಂಬ ಗುರಿ ಇಟ್ಟುಕೊಂಡಿದೆ. 24/7 ಕೆಲಸ ಮಾಡಬೇಕು, ಉದ್ದಿಮೆದಾರರಿಗೆ ಯಾವುದೇ ರೀತಿಯ ಕಾನೂನಿನ ತೊಡಕು ಉಂಟಾಗದಂತೆ ಸರಳೀಕರಣವಾಗಿ ಉದ್ಯಮ ನಡೆಸಲು ವೇದಿಕೆ ಕಲ್ಪಿಸಿಕೊಡುವುದು ನಮ್ಮ ಮುಖ್ಯ ಗುರಿ ಎಂದರು.

    ಉದ್ದಿಮೆದಾರರಿಗೆ ಪ್ರಸ್ತುತ ಐದು ಪಟ್ಟು ದಂಡ ವಿಧಿಸುವ ನಿಯಮ ಇಲಾಖೆಯಲ್ಲಿದೆ. ಸುಮಾರು 6,700ಕೋಟಿ ರಾಜಸ್ವ ಸರ್ಕಾರಕ್ಕೆ ಬರಬೇಕಾಗಿದೆ. ಇನ್ನು ಮುಂದೆ ಏಕಕಂತು ತಿರುವಳಿ ಯೋಜನೆ (ಒನ್ ಟೈಮ್ ಸಟ್ಲ್‍ಮೆಂಟ್ ಸ್ಕೀಮ್) ಪ್ರಾರಂಭಿಸಲಾಗುವುದು. ಬಹುದಿನಗಳ ಬೇಡಿಕೆಯಂತೆ ಜಿಲ್ಲಾ ಗಣಿ ನಿಧಿ (ಡಿಎಂಎಫ್) ಪ್ರಸ್ತುತ ಶೇ.30ರಷ್ಟಿದೆ. ಇದನ್ನು ಶೇ.10ಕ್ಕೆ ಇಳಿಕೆ ಮಾಡಬೇಕೆಂಬ ಬೇಡಿಕೆಯನ್ನು ಸರ್ಕಾರದ ಮುಂದಿಡುವುದಾಗಿ ತಿಳಿಸಿದರು.

    ಉದ್ದಿಮೆದಾರರು ರಾಜಸ್ವ ಹಾಗೂ ಜಿಎಸ್‍ಟಿ ಕಟ್ಟುತ್ತಾರೆ. ಇದರಿಂದಲೇ ಕೋಟ್ಯಂತರ ರೂ. ತೆರಿಗೆ ಸರ್ಕಾರಕ್ಕೆ ಪಾವತಿಯಾಗುತ್ತದೆ. ನಿಮಗೆ ಅನುಕೂಲ ಕಲ್ಪಿಸಿಕೊಟ್ಟರೆ ಉದ್ಯಮ ಸುಲಭವಾಗಿ ನಡೆಯಲಿದೆ. ಶೀಘ್ರದಲ್ಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ಜನಪರವಾದ ಹಾಗೂ ಜನ ಸ್ನೇಹಿ ಗಣಿ ನೀತಿಯನ್ನು ಜಾರಿ ಮಾಡಲಿದ್ದೇವೆ. ಇದರಲ್ಲಿ ನಿಮ್ಮ ಪ್ರತಿನಿಧಿಗಳನ್ನು ಸೇರ್ಪಡೆ ಮಾಡಿಕೊಳ್ಳುವುದಾಗಿ ತಿಳಿಸಿದರು.

    ದೇಶಕ್ಕೆ ಮಾದರಿಯಾದ ಗಣಿ ನೀತಿಯನ್ನು ಜಾರಿ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಕರ್ನಾಟಕದ ನೀತಿಯನ್ನು ಬೇರೆ ರಾಜ್ಯಗಳು ಮಾದರಿಯಾಗಿಟ್ಟುಕೊಳ್ಳಬೇಕು. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತರುವುದಾಗಿ ಆಶ್ವಾಸನೆ ನೀಡಿದರು. ನಾನೂ ಕೂಡ ಮೂಲತಃ ಉದ್ಯಮಿಯಾಗಿದ್ದು, ಉದ್ಯಮಿದಾರರ ಸಮಸ್ಯೆಗಳು ಏನೆಂಬುದರ ಬಗ್ಗೆ ಅರಿವಿದೆ. ನೀವು ಮುಂದಿಟ್ಟಿರುವ ಬೇಡಿಕೆಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಗೌರವಯುತವಾಗಿ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ವಾಗ್ದಾನ ಮಾಡಿದರು.

    ಎಲ್ಲ ಜಿಲ್ಲೆಗಳಲ್ಲಿ ಖನಿಜ ಭವನ
    ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶೀಘ್ರದಲ್ಲೇ ಇಲಾಖೆವತಿಯಿಂದ ಪ್ರತ್ಯೇಕ ಖನಿಜ ಭವನಗಳನ್ನು ಪ್ರಾರಂಭ ಮಾಡಲಾಗುವುದು. ಕೆಲವು ಜಿಲ್ಲೆಗಳಲ್ಲಿ ಖನಿಜ ಭವನಗಳು ಇಲ್ಲದಿರುವುದು ಗಮನಕ್ಕೆ ಬಂದಿದೆ. ಹಂತ ಹಂತವಾಗಿ ಎಲ್ಲ ಜಿಲ್ಲೆಗಳಲ್ಲೂ ಖನಿಜ ಭವನಗಳನ್ನು ತೆರೆಯಲಾಗುವುದು. ಇದರಿಂದ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ ಎಂದು ಸಚಿವ ಮುರುಗೇಶ್ ನಿರಾಣಿ ಅಭಿಪ್ರಾಯಪಟ್ಟರು.

    ನಾನು 20-25 ವರ್ಷಗಳ ಹಿಂದೆ ಸಣ್ಣ ಉದ್ಯಮಿಯಾಗಿದ್ದೆ. ಅಂದು ನನ್ನ ಬಳಿ ಹೆಚ್ಚಿನ ಹಣಕಾಸು ಇರಲಿಲ್ಲ. ಇಂದು ಏಷ್ಯಾದಲ್ಲೇ ಅತಿ ದೊಡ್ಡ ಸಕ್ಕರೆ ಕಾರ್ಖಾನೆಯನ್ನು ನಾನು ನಡೆಸುತ್ತಿದ್ದೇನೆ. ನನ್ನ ಪರಿಶ್ರಮ ಹಾಗೂ ಸಾಧಿಸಬೇಕೆಂಬ ಗುರಿ ಇದ್ದಿದ್ದರಿಂದಲೇ ಇದು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.

    ಸಕ್ಕರೆ ಕಾರ್ಖಾನೆ ಜೊತೆಗೆ 300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದೇವೆ. ಅಲ್ಲದೆ ಸಹಕಾರ ಕ್ಷೇತ್ರದಲ್ಲೂ ಬ್ಯಾಂಕಿಂಗ್ ಸೇವೆ ಒದಗಿಸುತ್ತಿದ್ದೇವೆ. ಎಥಿನಾಲ್, ಸಿಮೆಂಟ್ ಉತ್ಪಾದನೆ ಸೇರಿದಂತೆ ವಾರ್ಷಿಕ 5 ಸಾವಿರ ಕೋಟಿ ವಹಿವಾಟು ನಡೆಸುತ್ತಿದ್ದೇವೆ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಮ್ಮ ಕಾರ್ಖಾನೆ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದರು. ನಮ್ಮ ಫೌಂಡೇಶನ್ ಬೆಳದು ಬಂದ ಹಾದಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು ಎಂದರು.

    ಇಲಾಖೆಯಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಶಿವಮೊಗ್ಗದ ಹುಣಸೋಡು, ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಬಳಿ ನಡೆದ ಘಟನೆಯ ನಂತರ ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಈ ಎರಡು ಘಟನೆ ನಡೆದ ನಂತರ ವಿರೋಧ ಪಕ್ಷದವರು ನನಗೆ ಮಾಲೀಕರನ್ನು ಬಂಧಿಸುವಂತೆ ಒತ್ತಡ ಹಾಕಿದರು. ಇದು ಮಾಲೀಕರಿಂದ ಪ್ರಮಾದವಾಗಿಲ್ಲ ಎಂದು ನಾನು ಮನವರಿಕೆ ಮಾಡಿಕೊಟ್ಟೆ. ಸ್ಪೋಟಕಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವಾಗ ಉಂಟಾದ ಅತಾಚುರ್ಯದಿಂದ ಇದು ಸಂಭವಿಸಿತು. ಮುಂದೆ ಈ ರೀತಿ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಹೇಳಿದರು.

    ಮಾಲೀಕರು ಬಂಡವಾಳ ಹೂಡಿ ಉದ್ಯಮ ಆರಂಭಿಸುತ್ತಾರೆ. ಅವರ ಮೇಲೆ ಕ್ರಮ ಜರುಗಿಸಿದರೆ ಕ್ರಷರ್‍ಗಳು ನಿಂತು ಹೋಗುತ್ತವೆ. ಬ್ಯಾಂಕ್‍ನಲ್ಲಿ ಪಡೆದ ಸಾಲದ ಮೇಲಿನ ಬಡ್ಡಿ ಹೆಚ್ಚಾಗುತ್ತದೆ. ಕಾರ್ಮಿಕರಿಗೆ ಕೆಲಸ ಇಲ್ಲದಂತಾಗುತ್ತದೆ. ಇದರಿಂದ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತದೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಉಪಾಧ್ಯಕ್ಷ ಎಸ್.ದತ್ತಾತ್ರೀ, ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಅಸೋಸಿಯೇಷನ್ಸ್ ಅಧ್ಯಕ್ಷ ಎಸ್.ಸಂಜೀವ ಹಟ್ಟಿಹೊಳಿ, ಗಣಿ ಸುರಕ್ಷತಾ ಮಹಾನಿದೇರ್ಶಕರಾದ ಮುರಳಿಧರ್ (ಬೆಂಗಳೂರು ವಲಯ), ಶ್ಯಾಮ್ ಸುಂದರ್ ಸೋನಿ(ಗೋವಾ ವಲಯ) ಹಾಗೂ ಉಮೇಶ್ ಎಂ.ಸಾವರ್ಕರ್ (ಬಳ್ಳಾರಿ ವಲಯ) ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

  • ಕಡಿಮೆ ಬೆಲೆಗೆ ಮರಳು ಒದಗಿಸಲು ಹೊಸ ನೀತಿ: ಮುರುಗೇಶ್ ನಿರಾಣಿ

    ಕಡಿಮೆ ಬೆಲೆಗೆ ಮರಳು ಒದಗಿಸಲು ಹೊಸ ನೀತಿ: ಮುರುಗೇಶ್ ನಿರಾಣಿ

    ಕೊಪ್ಪಳ: ರಾಜ್ಯದ ಕಟ್ಟ ಕಡೆಯ ವ್ಯಕ್ತಿಗೂ ಕಡಿಮೆ ಬೆಲೆಗೆ ಮರಳು ಮತ್ತು ಜಲ್ಲಿಕಲ್ಲು ದೊರಕಿಸಿ ಕೊಡಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಹೊಸ ಗಣಿಕಾರಿಕೆ ನೀತಿಯನ್ನು ಜಾರಿಗೊಳಿಸಲಿದೆ ಎಂದು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದರು. ಮನೆ ಕಟ್ಟುವ ಕನಸು ಹೊಂದಿರುವ ಪ್ರತಿಯೊಬ್ಬರಿಗೂ ಮರಳು ಮತ್ತು ಜಲ್ಲಿಕಲ್ಲು ಕಡಿಮೆ ಬೆಲೆಗೆ ಸಿಗಬೇಕು. ಈ ದೃಷ್ಟಿಯಿಂದ ರಾಜ್ಯದಲ್ಲಿ ಹೊಸ ಗಣಿ ನೀತಿಯನ್ನು ತರಲಾಗುತ್ತಿದೆ. ಹೊಸ ನೀತಿಯನ್ವಯ ಟ್ಯಾಕ್ಟರ್, ಎತ್ತಿನ ಬಂಡಿ, ದ್ವಿಚಕ್ರ ವಾಹನಗಳಲ್ಲಿ ಮರಳು ಸಾಗಣೆ ಮಾಡಿದರೆ ಎಫ್‍ಐಆರ್ ದಾಖಲಿಸುವುದಿಲ್ಲ. ಬದಲಿಗೆ ಮರಳು ಸಂಗ್ರಹಿಸಿ ಬೇರೆ ಬೇರೆ ಜಿಲ್ಲೆಗಳಿಗೆ ಸಾಗಾಣಿಕೆ ಮಾಡಿದರೆ ಮಾತ್ರ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

    ರಾಜ್ಯದಲ್ಲೆಡೆ ಅನಧಿಕೃತವಾಗಿ ಮರಳು ಹಾಗೂ ಜಲ್ಲಿಕಲ್ಲು ಸಾಗಾಣಿಕೆ ಮಾಡಲಾಗುತ್ತಿದೆ. ಇದರಿಂದಾಗಿ ಸರ್ಕಾರದ ಆದಾಯ ಪೋಲಾಗುತ್ತಿದೆ. ನಿಯಂತ್ರಣ ಮಾಡಿದಷ್ಟೂ ಅನಧಿಕೃತ ಗಣಿಗಾರಿಕೆ ಹೆಚ್ಚಾಗುತ್ತದೆ. ಹೀಗಾಗಿ ಎಲ್ಲಿ ಬೇಕಾದರೂ ಉಚಿತವಾಗಿ ಮರಳು ಪಡೆಯಬಹುದಾದ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಇದರಿಂದಾಗಿ ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಿಸುವವರಿಗೆ ಅನುಕೂಲ ಆಗಲಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವವರಿಗೆ ಇದು ವರದಾನ ಆಗಲಿದೆ ಎಂದರು.

    ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವತಿಯಿಂದ ಕಲ್ಲು ಗಣಿಗಾರಿಕೆ ಮಾಡುವ ಕ್ರಷರ್‍ಗಳ ಮಾಲೀಕರಿಗೆ ಕಾರ್ಯಾಗಾರ ಆಯೋಜಿಲಾಗುತ್ತದೆ. ಕಲ್ಲು ಗಣಿಗಾರಿಕೆ ಮಾಡುವ ರೀತಿ, ಗಣಿಗಾರಿಕೆ ಸಮಯದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ತಜ್ಞರಿಂದ, ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಕ್ರಷರ್ ಮಾಲೀಕರಿಗೆ ತರಬೇತಿ ನೀಡಲು ಶೀಘ್ರ ಕಾರ್ಯಾಗಾರ ಆಯೋಜಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

    ಗಂಗಾವತಿ ಭಾಗದಲ್ಲಿ ಕಲ್ಲು ಒಡೆದು ಮಾರಾಟ ಮಾಡುವ ಮೂಲಕ ಜೀವನ ಕಟ್ಟಿಕೊಂಡ ಭೋವಿ ಜನಾಂಗದವರಿಗೆ ಅಧಿಕಾರಿಗಳು ಅನಗತ್ಯವಾಗಿ ಸಮಸ್ಯೆ ಉಂಟುಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ಅವರಿಗೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ, ಪುರಾತತ್ವ ಇಲಾಖೆಯವರು ಐತಿಹಾಸಿಕ ಶಿಲೆಗಳಿರುವ ಪ್ರದೇಶಗಳಲ್ಲಿ ಗ್ರಾಮಗಳನ್ನು ಉಲ್ಲೇಖಿಸಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ಮನವಿ ಮಾಡಿದ್ದಾರೆ. ಹಾಗಾಗಿ ಅಲ್ಲಿನ ಕೆಲ ಜನರಿಗೆ ಕಲ್ಲು ಗಣಿಗಾರಿಕೆ ಮಾಡದಂತೆ ಸೂಚಿಸಿದ್ದೇವೆ ಎಂದರು.

  • ರಾಜ್ಯಕ್ಕೆ ಬೆಳಕು ನೀಡಿದ ಜನರ ಬದುಕು ಕತ್ತಲಲ್ಲಿ- ಗ್ರಾಮದಲ್ಲಿ ಪ್ರತಿ ದಿನ ಕಂಪಿಸುತ್ತೆ ಭೂಮಿ

    ರಾಜ್ಯಕ್ಕೆ ಬೆಳಕು ನೀಡಿದ ಜನರ ಬದುಕು ಕತ್ತಲಲ್ಲಿ- ಗ್ರಾಮದಲ್ಲಿ ಪ್ರತಿ ದಿನ ಕಂಪಿಸುತ್ತೆ ಭೂಮಿ

    ಕಾರವಾರ: ಆ ಊರಿನಲ್ಲಿ ಪ್ರತಿ ದಿನ ಭೂಮಿ ಕಂಪಿಸುತ್ತೆ. ಇದ್ದಕ್ಕಿದ್ದ ಹಾಗೆ ಮನೆಗಳ ಮೇಲೆ ಕಲ್ಲುಗಳು ಬಿದ್ದರೆ ಕಂಪನದಿಂದ ಮನೆಗಳೇ ಬಿರುಕು ಬಿಡುತ್ತಿವೆ. ಹೌದು ಕಲ್ಲು ಗಣಿಗಾರಿಕೆಯಿಂದ ಈ ಅವಾಂತರ ಸೃಷ್ಟಿಯಾಗಿದ್ದು, ಜನ ನಿತ್ಯವೂ ಜೀವವನ್ನು ಕೈಯಲ್ಲೇ ಹಿಡಿದುಕೊಂಡು ಬದುಕಬೇಕಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರ, ಅಡಾಳಿ, ಗೌಳಿವಾಡದ ಜನ ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಬದುಕನ್ನು ಕತ್ತಲು ಮಾಡಿಕೊಂಡು ಹೊಸ ಬದುಕು ಕಟ್ಟಿಕೊಂಡವರು. ರಾಜ್ಯ ಸರ್ಕಾರದ ಸೂಪಾ ಜಲವಿದ್ಯುತ್ ಯೋಜನೆಯಲ್ಲಿ ತಮ್ಮ ಜಮೀನನ್ನು ಕಳೆದುಕೊಂಡ ನಿರಾಶ್ರಿತರಿಗಾಗಿ 35 ವರ್ಷದ ಹಿಂದೆಯೇ ರಾಮನಗರದಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಜಮೀನನ್ನು ನೀಡಿದೆ. ಈ ಜಮೀನಿನಲ್ಲಿ ಬದುಕು ಕಟ್ಟಿಕೊಂಡ ಜನ ಇದೀಗ ಭಯದಿಂದ ಜೀವನ ಸಾಗಿಸಬೇಕಾಗಿದೆ.

    ಸರ್ಕಾರ ನೀಡಿದ ಜಮೀನಿನಲ್ಲಿ ಬದುಕು ಕಟ್ಟಿಕೊಂಡ ಜನರಿಗೆ ಜಿಲ್ಲಾಡಳಿತ ಈ ಊರಿನ ಮಾರುದೂರದಲ್ಲಿಯೇ ಗಣಿಗಾರಿಕೆಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಮೊದಲು ಎಂಟು ಗುತ್ತಿಗೆದಾರರಿಗೆ ಕಲ್ಲುಗಣಿಗಾರಿಕೆಗಾಗಿ ತಲಾ ಎರಡು ಎಕರೆ ಪ್ರದೇಶವನ್ನು ರಾಮನಗರದ ಸರ್ವೆ ನಂ.45 ರಲ್ಲಿ ಅವಕಾಶ ಮಾಡಿಕೊಟ್ಟಿತು. ಗಣಿಗಾರಿಕೆಗಾಗಿ ಗುತ್ತಿಗೆ ಪಡೆದ ಗುತ್ತಿಗೆದಾರರು ಮೊದಲು ಎರಡು ಎಕರೆ ಪ್ರದೇಶದಲ್ಲಿ ಮಾತ್ರ ಗಣಿಗಾರಿಕೆ ಪ್ರಾರಂಭಿಸಿದರು. ಆದರೆ ದುರಾಸೆಗೆ ಬಿದ್ದ ಗಣಿ ಮಾಲೀಕರು ಇಲ್ಲಿನ ನೂರು ಎಕರೆ ಪ್ರದೇಶವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಕಾನೂನು ಬಾಹಿರವಾಗಿ ನಿಯಮ ಮೀರಿ ಗಣಿಗಾರಿಕೆ ಮಾಡುತಿದ್ದು, ಮಾತ್ರವಲ್ಲದೆ ದೊಡ್ಡ ಪ್ರಮಾಣದ ಸ್ಫೋಟಕ ಬಳಸಿ ಕಲ್ಲುಗಳನ್ನು ಸಿಡಿಯಲು ಶುರುಮಾಡಿದ್ದಾರೆ.

    ಇದರಿಂದಾಗಿ ಇಡೀ ಗ್ರಾಮ ಕಲ್ಲಿನ ಧೂಳಿನಿಂದ ಆವರಿಸಿದೆ ಸಿಡಿತಲೆಯಿಂದಾಗಿ ಗ್ರಾಮದಲ್ಲಿರುವ ಮನೆಗಳು ಬಿರುಕು ಬಿಡಲು ಪ್ರಾರಂಭಿಸಿವೆ. ಗಣಿಗಾರಿಕೆಯಿಂದಾಗಿ ಗ್ರಾಮದ ಜನ ಕೃಷಿ ಭೂಮಿ ಉಳುವುದನ್ನೂ ಬಿಡುವಂತಾಗಿದ್ದು, ನರಕದಲ್ಲಿ ಜೀವನ ನಡೆಸುವಂತಾಗಿದೆ.

    ಪ್ರತಿಭಟಿಸಿದರೂ ಕೇಳೋರಿಲ್ಲ!

    ರಾಮನಗರದ ಜನ ಅಕ್ರಮ ಗಣಿಗಾರಿಕೆಯಿಂದ ತಮ್ಮ ಜಮೀನಿನಲ್ಲಿ ಕೃಷಿ ಬಿಡುವಂತಾದರೆ, ಇಡೀ ಗ್ರಾಮ ಧೂಳಿನಿಂದ ತುಂಬಿಹೋಗಿದ್ದು ಸಿಡಿತಲೆಯಿಂದಾಗಿ ಮನೆಗಳು ಬಿರುಕು ಬಿಟ್ಟಿವೆ. ಈ ಕುರಿತು ಪ್ರತಿಭಟನೆ ನಡೆಸಿ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ ಹಾಗೂ ಜೋಯಿಡಾದ ತಹಶೀಲ್ದಾರ್ ಗೆ ಮನವಿ ಸಲ್ಲಿಸುತ್ತಲೇ ಬಂದಿದ್ದು, ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೇ ಇಲ್ಲವೆಂಬಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

    ಈ ಕುರಿತು ಜೋಯಿಡಾ ದ ತಹಶೀಲ್ದಾರ್ ಸಂಜಯ್ ಕಾಂಬ್ಳೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಕೇವಲ ಎರಡು ಎಕರೆ ಪ್ರದೇಶದಲ್ಲಿ ಮಾತ್ರ ಗಣಿಗಾರಿಕೆ ನಡೆಯುತ್ತಿದೆ. ಅಕ್ರಮ ಗಣಿಗಾರಿಕೆ ನಡೆಯುತಿಲ್ಲ, ಯಾವುದೇ ಸಮಸ್ಯೆಯಾಗಿಲ್ಲ ಎಂದು ತೇಪೆ ಹಾಕುತಿದ್ದಾರೆ. ಕಾನೂನು ಬಾಹಿರ ಬ್ಲಾಸ್ಟಿಂಗ್ ನಡೆದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಸ್ಥಳ ಪರಿಶೀಲನೆ ನಡೆಸಿದಾಗ ನೂರಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಮಾಡುತಿದ್ದು, ನಿಯಮಗಳನ್ನು ಗಾಳಿಗೆ ತೂರಿ ಅತ್ಯಂತ ಪ್ರಭಲ ಸಿಡಿತಲೆ ಬಳಸಿ ಬಂಡೆಗಳನ್ನು ಒಡೆಯಲಾಗುತ್ತಿದೆ. ಇದರಿಂದಾಗಿ ಇಲ್ಲಿನ ಅಂತರ್ಜಲ ಕೂಡ ಬತ್ತಿ ಹೋಗಿದ್ದು, ಇಡೀ ಗ್ರಾಮ ಧೂಳಿನಿಂದ ತುಂಬಿದೆ. ಹೆಚ್ಚು ಧೂಳು ಆವರಿಸಿದ್ದರಿಂದ ಹಿಮ ಆವರಿಸಿದಂತೆ ಭಾಸವಾಗುತ್ತದೆ. ಅಲ್ಲದೆ ಗ್ರಾಮಕ್ಕೆ ಹೋಗುವ ದಾರಿಯನ್ನೂ ಗಣಿ ಮಾಲೀಕರು ನುಂಗಿದ್ದು, ಗಣಿಗಾರಿಕೆಗಾಗಿ ದಾರಿಯನ್ನೂ ಬಳಸಿಕೊಳ್ಳಲಾಗಿದೆ.

  • ಕಲ್ಲು ಗಣಿಗಾರಿಕೆಗೆ ಜನ ತತ್ತರ – ನೂರಾರು ಮನೆಗಳು ಬಿರುಕು

    ಕಲ್ಲು ಗಣಿಗಾರಿಕೆಗೆ ಜನ ತತ್ತರ – ನೂರಾರು ಮನೆಗಳು ಬಿರುಕು

    ಬೆಂಗಳೂರು: ಐದು ಕ್ರಷರ್ ಗಳಿಂದ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ನೆಲಮಂಗಲ ತಾಲೂಕಿನ ಗ್ರಾಮದ ಜನ ತತ್ತರಿಸಿ ಹೋಗಿದ್ದಾರೆ. ಮಾಲೀಕರ ದುರಾಸೆಯಿಂದ ನಿರ್ಮಾಣವಾಗಿರುವ ಐದು ಕಲ್ಲುಗಾಣಿಗಾರಿಕೆ ತಾಣಗಳಿಂದ, ಕ್ರಷರ್‍ಗೆ ಹೊಂದಿಕೊಂಡಿರುವ ಗ್ರಾಮದ ಜನರ ಬದುಕು ಹೇಳತೀರದಾಗಿದೆ.

    ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಗಡಿಯಂಚಿನಲ್ಲಿರುವ ಮಾಕೇನಹಳ್ಳಿಯ ಗ್ರಾಮಸ್ಥರು, ಪ್ರತಿನಿತ್ಯ ಗಣಿಗಾರಿಕೆಯ ಸ್ಫೋಟದ ಭಯಾನಕ ಶಬ್ಧ ಹಾಗೂ ಧೂಳಿನಿಂದ ಭಯಭೀತರಾಗಿದ್ದಾರೆ. ಕಲ್ಲು ಗಣಿಗಾರಿಕೆಯಿಂದ ಗ್ರಾಮದಲ್ಲಿನ ನೂರಾರು ಮನೆಗಳು ಸಹ ವಿಪರೀತ ಬಿರುಕು ಬಿಟ್ಟಿವೆ. ಯಾವಾಗ ಮನೆ ಬೀಳುತ್ತದೆಯೋ ಎಂಬ ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ.

    ನಿತ್ಯ ನೂರಾರು ಲಾರಿಗಳಲ್ಲಿ ಕಲ್ಲಿನ ಉತ್ಪನ್ನಗಳಾದ ಜಲ್ಲಿ, ಎಂ.ಸ್ಯಾಂಡ್, ಇನ್ನಿತರ ಕಲ್ಲಿನ ಉತ್ಪನ್ನಗಳನ್ನು ಸಾಗಿಸಲು ಬೆಟ್ಟದಂತಿರುವ ಕಲ್ಲು ಬಂಡೆಯನ್ನು ಕರಗಿಸುತ್ತಿದ್ದಾರೆ. ಹರ್ಷ, ಸೂರ್ಯ, ವಿನಾಯಕ, ಎಸ್.ಎಲ್.ಎನ್, ಎಸ್.ಎಲ್.ಆರ್ ಎಂಬ ಕಂಪನಿಗಳ ಗಣಿಗಾರಿಕೆ ಜೋರಾಗಿದೆ. ಈ ಗಣಿಗಾರಿಕೆಯಿಂದ ಮಾಕೇನಹಳ್ಳಿ ಗ್ರಾಮದ ನೂರಾರು ಮನೆಗಳೆಲ್ಲ ಬಿರುಕು ಬಿಟ್ಟಿದ್ದು, ಮನೆ ಬೀಳುವ ಭಯದಲ್ಲೇ ಗ್ರಾಮಸ್ಥರು ಬದುಕು ಸಾಗಿಸುತ್ತಿದ್ದಾರೆ.

    ಮನೆಯ ಗೋಡೆಗಳು ಸಂಪೂರ್ಣ ಹಾಳಾಗುವ ಪರಿಸ್ಥಿತಿಗೆ ಬಂದು ತಲುಪಿದ್ದು, ಇನ್ನೊಂದೆಡೆ ಕಲ್ಲು ಗಣಿಗಾರಿಕೆಯ ವಿಪರೀತ ಶಬ್ದದಿಂದ ರಾತ್ರಿ ವೇಳೆ ಮಲಗಲು ಸಾಧ್ಯವಾಗದೇ, ಬಾಣಂತಿ, ಚಿಕ್ಕಮಕ್ಕಳು ನಿದ್ರೆಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.

    ಗ್ರಾಮ ಪಂಚಾಯತಿಯಿಂದ ಹಿಡಿದು ಮೇಲ್ಮಟ್ಟದ ಆಡಳಿತ ವ್ಯವಸ್ಥೆಯವರೆಗೆ ಎಲ್ಲ ಜನಪ್ರತಿನಿಧಿಗಳು ಕ್ರಷರ್‍ಗಳಿಂದ ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಹ ಜಾಣ ಕುರುಡನ್ನು ಪ್ರದರ್ಶಿಸುತ್ತಿದೆ. ರಾಶಿಗಟ್ಟಲೇ ಲಾರಿ ಲೋಡ್‍ಗಳಲ್ಲಿ ಸಾಗಿಸುವ ಜಲ್ಲಿ, ಎಂ.ಸ್ಯಾಂಡ್‍ಗಳಿಗೆ ರಾಜಕಾರಣಿಗಳೇ ಶ್ರೀ ರಕ್ಷೆಯಾಗಿದ್ದಾರೆ ಎಂದು ಮಾಕೇನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.

    ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನೆಪ ಮಾತ್ರಕ್ಕೆ ಕಾಣದ ಮರದ ಕೆಳಗೆ ಕುಳಿತು ಜಾಣ ಮೌನದಲ್ಲಿ ತೊಡಗಿರುವುದು ಅನುಮಾನ ಮೂಡಿಸಿದೆ.

  • ಚಿಕ್ಕಬಳ್ಳಾಪುರದತ್ತ ಮುಖ ಮಾಡಿದ ಅಕ್ರಮ ಕಲ್ಲು ಗಣಿಗಾರಿಕೆ

    ಚಿಕ್ಕಬಳ್ಳಾಪುರದತ್ತ ಮುಖ ಮಾಡಿದ ಅಕ್ರಮ ಕಲ್ಲು ಗಣಿಗಾರಿಕೆ

    -ದಂಧೆಕೋರರ ಚಳಿ ಬಿಡಿಸಿದ ಅಧಿಕಾರಿಗಳು

    ಚಿಕ್ಕಬಳ್ಳಾಪುರ: ಇಷ್ಟು ದಿನ ರಾಜ್ಯ ರಾಜಧಾನಿಯಲ್ಲಿ ಸದ್ದು ಮಾಡ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆಯ ಮಾಫಿಯಾ ಇದೀಗ ಚಿಕ್ಕಬಳ್ಳಾಪುರದತ್ತ ಮುಖ ಮಾಡಿದೆ. ಜಿಲ್ಲೆಯಲ್ಲಿ ರಾತ್ರೋ ರಾತ್ರಿ ಜಲ್ಲಿ ಕಲ್ಲು, ಗ್ರಾನೈಟ್ ದಿಮ್ಮಿಗಳು, ಕಲ್ಲಿನ ಬೋಲ್ಡರ್ಸ್ ಗಳನ್ನು ಬೃಹತ್ ಲಾರಿಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದಾರೆ. ಇದನ್ನರಿತ ಚಿಕ್ಕಬಳ್ಳಾಪುರ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಾದ ರಾನ್ ಜಿ ನಾಯಕ್ ಹಾಗೂ ಸಂದೀಪ್ ದಾಳಿ ನಡೆಸಿದ್ದಾರೆ.

    ಯಲಗಲಹಳ್ಳಿ, ಚಿಕ್ಕನಾಗವಲ್ಲಿ ಗ್ರಾಮದ ಸುತ್ತಮುತ್ತಲಿನ ಕಲ್ಲು ಕ್ವಾರಿಗಳಲ್ಲಿನ ಟಿಪ್ಪರ್ ಲಾರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಂತರ ಅಧಿಕಾರಿಗಳ ಬೆನ್ನುಬಿದ್ದ ದಂಧೆಕೋರರು ಅಧಿಕಾರಿಗಳಿಗೆ ಭಯ ಹುಟ್ಟಿಸಿದ್ದಾರೆ. ನಾಲ್ಕೈದು ಕಾರು, ಬೈಕ್‍ಗಳಲ್ಲಿ ಅಧಿಕಾರಿಗಳನ್ನು ಹಿಂಬಾಲಿಸಿದ ಮಾಫಿಯಾ ಪಡೆ ಡಿಕ್ಕಿ ಹೊಡೆದು ಅಟ್ಯಾಕ್ ಮಾಡುವ ಹಾಗೆ ಚಮಕ್ ಕೊಟ್ಟಿದ್ದಾರೆ. ಆದ್ರೂ ಧೃತಿಗೆಡದ ಅಧಿಕಾರಿಗಳು ಯಲಗಲಹಳ್ಳಿ ಬಳಿ 8, ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದ್ರು. ಅತ್ತ ಸಾರಿಗೆ ಇಲಾಖೆಯ ಆರ್.ಟಿ.ಓ ನಾಗಿರೆಡ್ಡಿ ಸಹ ರಾಷ್ಟ್ರೀಯ ಹೆದ್ದಾರಿ 7ರ ಹೊನ್ನೇನಹಳಿ ಬಳಿ 5 ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಮೊರೆ ಹೋಗಿದ್ದಾರೆ.

    ಈ ಘಟನೆ ನಂತರ ಮತ್ತಷ್ಟು ಚುರುಕಾಗಿರುವ ಡಿಸಿ ಅನಿರುದ್ ಶ್ರವಣ್, ಪ್ರತಿ ದಿನ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ಅಕ್ರಮಗಳಿಗೆ ಕಡಿವಾಣ ಹಾಕಿ ಗಣಿ ಗ್ಯಾಂಗ್‍ಗೆ ಶಾಕ್ ನೀಡಿ ಅಂತ ಆದೇಶಿಸಿದ್ದಾರೆ. ಇದರಿಂದ ದಂಧೆಕೋರರು ಅನ್ಯ ಮಾರ್ಗಗಳತ್ತ ಮುಖ ಮಾಡ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಲ್ಲು ಗಣಿಗಾರಿಕೆ ಪರಿಶೀಲನೆಯಲ್ಲಿ ಡೀಸೆಲ್ ಬ್ಯಾರಲ್ ಸ್ಫೋಟ – ಗಣಿ ಭೂವಿಜ್ಞಾನ ಅಧಿಕಾರಿ ದುರ್ಮರಣ

    ಕಲ್ಲು ಗಣಿಗಾರಿಕೆ ಪರಿಶೀಲನೆಯಲ್ಲಿ ಡೀಸೆಲ್ ಬ್ಯಾರಲ್ ಸ್ಫೋಟ – ಗಣಿ ಭೂವಿಜ್ಞಾನ ಅಧಿಕಾರಿ ದುರ್ಮರಣ

    ಕೊಪ್ಪಳ: ಇದೇ ತಿಂಗಳ 6ರಂದು ಜಿಲ್ಲೆಯಲ್ಲಿ ನಡೆಯುತ್ತಿದ್ದ ಅನಧಿಕೃತ ಕಲ್ಲು ಗಣಿಗಾರಿಕೆಯ ಪರಿಶೀಲನೆಗೆ ತೆರಳಿದಾಗ ಡೀಸೆಲ್ ಬ್ಯಾರಲ್ ಸ್ಫೋಟಗೊಂಡು ಗಾಯಗೊಂಡಿದಂತಹ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ದಿನೇಶ್ ಭಾನುವಾರ ಸಂಜೆ ಮೃತಪಟ್ಟಿದ್ದಾರೆ.

    ಅಕ್ರಮ ಕಲ್ಲುಗಣಿಗಾರಿಕೆಯ ಮಾಹಿತಿ ಮೇರೆಗೆ ದಿನೇಶ್ ಹಾಗೂ ನವೀನ್ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಲಿಂಗನಬಂಡಿಯಲ್ಲಿ ಇರುವ ಕಲ್ಲು ಕ್ವಾರೆಗೆ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಪರಿಶೀಲನೆ ನಡೆಸುವ ಸಂಧರ್ಭದಲ್ಲಿ ಇದ್ದಕ್ಕಿದ್ದ ಹಾಗೆ ಅಲ್ಲಿದ್ದ ಡೀಸೆಲ್ ಬ್ಯಾರಲ್ ಸ್ಫೋಟಗೊಂಡಿತ್ತು. ಆಗ ದಿನೇಶ್ ಹಾಗೂ ನವೀನ್ ತೀವ್ರವಾಗಿ ಗಾಯಗೊಂಡಿದ್ದರು.

    ಸ್ಫೋಟದ ತೀವ್ರತೆಗೆ ಇಬ್ಬರಿಗೂ ಮೈ ಹಾಗೂ ಕೈ ಭಾಗಗಳಲ್ಲಿ ವಿಪರೀತವಾದ ಗಾಯವಾಗಿತ್ತು. ಆದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ತಕ್ಷಣ ಬೆಂಗಳೂರಿನ ಕೋರಮಂಗಲದಲ್ಲಿರುವ ಸೇಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ದಿನೇಶ್ ಅವರಿಗೆ ಶ್ವಾಸಕೋಶದಲ್ಲಿ ಹೊಗೆ ತುಂಬಿದ್ದರಿಂದ ಹಾಗೂ ಸುಟ್ಟ ಗಾಯಗಳಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಸಂಜೆ ಮೃತಪಟ್ಟಿದ್ದಾರೆ. ನವೀನ್ ಅವರಿಗೆ ಚಿಕಿತ್ಸೆ ಮುಂದುವರಿಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv