Tag: steel bridge

  • ಬೆಂಗಳೂರು ಸ್ಟೀಲ್ ಬ್ರಿಡ್ಜ್ ಫ್ಲೈ ಓವರ್ ಗೆ ಪುನೀತ್ ಹೆಸರಿಡಲು ಮನವಿ

    ಬೆಂಗಳೂರು ಸ್ಟೀಲ್ ಬ್ರಿಡ್ಜ್ ಫ್ಲೈ ಓವರ್ ಗೆ ಪುನೀತ್ ಹೆಸರಿಡಲು ಮನವಿ

    ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ನಿರ್ಮಾಣ ಆಗುತ್ತಿರುವ ಸ್ಟೀಲ್ ಬ್ರಿಡ್ಜ್ ಫ್ಲೈ ಓವರ್ (Steel Bridge) ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಹೆಸರು ಇಡಬೇಕು ಎಂದು ಬಿಬಿಎಂಪಿಗೆ ಮನವಿ ಮಾಡಲಾಗಿದೆ. ಶಿವಾನಂದ ಸರ್ಕಲ್ (Shivananda Circle) ಬಳಿಯೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಇರುವುದರಿಂದ ಪುನೀತ್ ಅವರ ಹೆಸರನ್ನು ಈ ಬ್ರಿಡ್ಜ್ ಗೆ ಇಡಬೇಕು ಎಂದು ಡಾ.ರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿಯೂ ಆಗಿರುವ ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್ (Ramesh) ಮನವಿ ಮಾಡಿದ್ದಾರೆ.

    ಪುನೀತ್ ರಾಜ್ ಕುಮಾರ್ ಕೇವಲ ಸಿನಿಮಾ ರಂಗಕ್ಕೆ ಮಾತ್ರವಲ್ಲ, ಸಮಾಜಕ್ಕೂ ಅದ್ಭುತ ಸಂದೇಶವನ್ನು ಸಾರಿದ್ದಾರೆ. ಸಮಾಜಮುಖಿ ಕೆಲಸಗಳಲ್ಲೂ ಭಾಗಿಯಾಗಿದ್ದಾರೆ. ಬೆಂಗಳೂರಿಗೂ ಅವರ ಕೊಡುಗೆ ಸಾಕಷ್ಟಿದೆ. ಅವರ ನೆನಪು ನಮ್ಮೊಂದಿಗೆ ಶಾಶ್ವತವಾಗಿ ಇರಬೇಕು. ಹಾಗಾಗಿ ಮಹಾನಗರ ಪಾಲಿಕೆಗೆ ಮನವಿ ಮಾಡಿರುವೆ. ಶಿವಾನಂದ ಸರ್ಕಲ್ ಬಳಿ ಇರುವ ಸ್ಟಿಲ್ ಬ್ರಿಡ್ಜ್ ಗೆ ಅಪ್ಪು ಹೆಸರು ಇಡುತ್ತಾರೆ ಎನ್ನುವ ವಿಶ್ವಾಸ ನನ್ನದು ಅಂದಿದ್ದಾರೆ. ಇದನ್ನೂ ಓದಿ:`ಕೆಜಿಎಫ್ 2’ಗೆ ಸೆಡ್ಡು ಹೊಡೆದ ಕಾಂತಾರ: 100 ಕೋಟಿ ಕಲೆಕ್ಷನ್‌ನತ್ತ ಸಿನಿಮಾ

    ಈ ಬ್ರಿಡ್ಜ್ ಗೆ ಶಿವಾನಂದ ಸ್ಟೋರ್ ನವರ ಹೆಸರು ಇಡಲು ಮಾತುಕತೆ ನಡೆದಿತ್ತು. ಇದನ್ನು ವಿರೋಧಿಸಿರುವ ರಮೇಶ್, ಇವತ್ತು ಸ್ಟಿಲ್ ಬ್ರಿಡ್ಜ್ ತಡವಾಗುವುದಕ್ಕೆ ಕಾರಣ, ಶಿವಾನಂದ ಸ್ಟೋರ್ ನವರು. ಹಾಗಾಗಿ ಅವರು ಹೆಸರನ್ನು ಇಡಬಾರದು. ಎಲ್ಲರ ಒಳಿತಿಗಾಗಿ ಬದುಕಿದ್ದ ಪುನೀತ್ ರಾಜ್ ಕುಮಾರ್ ಹೆಸರನ್ನೇ ಅಂತಿಮಗೊಳಿಸಬೇಕು ಎಂದು ರಮೇಶ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (BBMP) ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶಿವಾನಂದ ಸ್ಟೀಲ್ ಸೇತುವೆ – ಭಾರೀ ವಾಹನಗಳ ಪ್ರವೇಶಕ್ಕೆ ನಿಷೇಧ

    ಶಿವಾನಂದ ಸ್ಟೀಲ್ ಸೇತುವೆ – ಭಾರೀ ವಾಹನಗಳ ಪ್ರವೇಶಕ್ಕೆ ನಿಷೇಧ

    ಬೆಂಗಳೂರು: ಸಿಲಿಕಾನ್ ಸಿಟಿ ಜನರ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನಿರ್ಮಾಣವಾದ ಶಿವಾನಂದ ಸರ್ಕಲ್‌ ಸ್ಟೀಲ್ ಸೇತುವೆ ವಿಚಾರದಲ್ಲಿ ಬಿಬಿಎಂಪಿ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ.

    ಸೇತುವೆ ಮೇಲೆ ವಾಹನ ಸಂಚಾರ ಆರಂಭವಾದ ಎರಡೇ ದಿನಕ್ಕೆ ವೈಬ್ರೇಷನ್ ಕಾರಣ ಅದನ್ನು ಬಂದ್ ಮಾಡಿತ್ತು. ಈಗ ಘನ ವಾಹನ ಓಡಾಡದಂತೆ ಫ್ಲೈಓವರ್ ಮೇಲೆ ಹೈಟ್ ಲಿಮಿಟ್ ಗ್ಯಾಂಟ್ರಿಯನ್ನು ಅಳವಡಿಸಲಾಗಿದೆ. ಇದನ್ನೂ ಓದಿ: ಕಸ ಹಾಕಿದ್ದಕ್ಕೆ ದಂಡ ವಿಧಿಸಲು ಹೋದ ಮಾರ್ಷಲ್‌ಗಳ ಮೇಲೆ ರಿಕ್ಷಾ ಹತ್ತಿಸಿದ್ರು

    ಈ ನಿರ್ಧಾರದಿಂದ ಬಸ್ಸು, ಲಾರಿ, ಟ್ರಕ್ ಓಡಾಡುವಂತೆ ಇಲ್ಲ. ಕೇವಲ ಬೈಕ್, ಕಾರು ಮಾತ್ರ ಸಂಚರಿಸಲು ಬಿಬಿಎಂಪಿ ಅವಕಾಶ ಮಾಡಿಕೊಟ್ಟಿದೆ.

    ಹೊಸ ಬ್ರಿಡ್ಜ್ ಮೇಲೆ ಏಕಾಏಕಿ “ಘನ ವಾಹನಗಳ ಪ್ರವೇಶಕ್ಕೆ ನಿಷೇಧ” ಹೇರಿದರಿಂದ ಕಳಪೆ ಕಾಮಗಾರಿ ಆರೋಪ ಬಂದಿದೆ. ಜನರ ಆಕ್ರೋಶದ ಬೆನ್ನಲ್ಲೇ ಬಿಬಿಎಂಪಿ ಗುಣಮಟ್ಟ ಪರೀಕ್ಷೆಗಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ಮೊರೆ ಹೋಗಿದೆ.

    Live Tv
    [brid partner=56869869 player=32851 video=960834 autoplay=true]

  • ಉಸಿರುಗಟ್ಟುವ ವಾತಾವರಣದಲ್ಲಿ ಕೆಲಸ- ಪ್ರಶ್ನೆಗೆ ಸಿಎಂ ಗರಂ

    ಉಸಿರುಗಟ್ಟುವ ವಾತಾವರಣದಲ್ಲಿ ಕೆಲಸ- ಪ್ರಶ್ನೆಗೆ ಸಿಎಂ ಗರಂ

    ಬೆಂಗಳೂರು: ನಾನು ಉಸಿರುಗಟ್ಟುವ ವಾತಾವರಣದಲ್ಲಿ ಕೆಲಸ ಮಾಡ್ತಿದ್ದೇನೆ ಅಂತ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿಲ್ಲ ಅಂತ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೆಲ ಮಾಧ್ಯಮಗಳು ಊಹೆ ಮಾಡಿಕೊಂಡು ಸುದ್ದಿ ಮಾಡ್ತಿವೆ. ಇದಕ್ಕೆ ನಾನು ಉತ್ತರ ನೀಡುವುದಿಲ್ಲ. ಇವೆಲ್ಲ ಕಪೋಲ ಕಲ್ಪಿತ ಸುದ್ದಿಗಳಷ್ಟೇ. ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಆದ ವಿಷಯವೇ ಬೇರೆ. ಕೆಲ ಮಾಧ್ಯಮಗಳು ಸುದ್ದಿ ಸೃಷ್ಟಿ ಮಾಡುತ್ತಿರುವುದೇ ಬೇರೆ. ಇದಕ್ಕೆ ಏನು ಉತ್ತರ ಕೊಡಲಿ ಅಂತ ಗೊತ್ತಿಲ್ಲ ಎಂದು ಮಾಧ್ಯಮಗಳ ಮೇಲೆ ಗರಂ ಆಗಿ ಪ್ರತಿಕ್ರಿಯೆ ನೀಡಿದರು.

    ಬಳಿಕ ಸ್ಟೀಲ್ ಬ್ರಿಡ್ಜ್ ವಿಚಾರವಾಗಿ ಪ್ರತಿಕ್ರಿಯಿಸಿ, ನನಗೆ ಬೆಂಗಳೂರಿನ ಜನರ ಸಮಸ್ಯೆ ನಿವಾರಣೆ ಮಾಡೋದು ಮುಖ್ಯ. ಇದಕ್ಕೆ ನನ್ನ ಮೊದಲ ಆದ್ಯತೆ ಕೊಡುತ್ತೇನೆ. ಈ ವಿಚಾರವಾಗಿ ನನಗೆ ಯಾವುದೇ ಒತ್ತಡಗಳು ಇಲ್ಲ ಅಂತ ಸ್ಪಷ್ಟಪಡಿಸಿದರು.

    ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದೇವೇಗೌಡರಿಗೆ ಭಸ್ಮಾಸುರ ಎಂದ ವಿಚಾರವಾಗಿ ಮಾತನಾಡಿ, ಯತ್ನಾಳ್ ಬಿಜೆಪಿ ಬಿಟ್ಟು ಜೆಡಿಎಸ್‍ಗೆ ಬಂದಾಗ ಬಿಜೆಪಿ ಪಕ್ಷದ ಬಗ್ಗೆ ಏನು ಮಾತಾಡಿದ್ರು ಅಂತ ನನಗೆ ಗೊತ್ತಿದೆ. ಈಗ ಬಿಜೆಪಿಗೆ ಸೇರಿಕೊಂಡು ಏನೇನೋ ಮಾತಾಡ್ತಿದ್ದಾರೆ. ಅಂತಹ ವ್ಯಕ್ತಿಗೆ ಉತ್ತರ ಕೊಡೋದು ಸೂಕ್ತವಲ್ಲ ಎಂದರು.

    ಯಾದಗಿರಿಯ ಸುರಪುದಲ್ಲಿ ಕುಡಿಯುವ ನೀರಿಗೆ ಕೀಟನಾಶಕ ಬೆರೆಸಿದ ಪ್ರಕರಣ ತನಿಖೆಗೆ ಆದೇಶ ನೀಡಿದ್ದೇನೆ. ಈಗಾಗಲೇ ಡಿಸಿ, ಎಸ್ಪಿ, ಸಿಇಓ ಜೊತೆ ಚರ್ಚೆ ಮಾಡಿ ಸ್ಥಳಕ್ಕೆ ಭೇಟಿ ನೀಡಲು ಸೂಚನೆ ನೀಡಿದ್ದೇನೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನೀರಿಗೆ ಕ್ರಿಮಿನಾಶಕ ಬೆರೆಸಿರುವ ಬಗ್ಗೆ, ತನಿಖೆಗೆ ನೀರನ್ನು ಲ್ಯಾಬ್‍ಗೆ ಕಳುಹಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಈಗಾಗಲೇ ಸೂಚನೆ ನೀಡಿದ್ದೇನೆ ಅಂತ ತಿಳಿಸಿದರು.

    ಶಾಲೆಗಳಲ್ಲಿ ಹಿಂದಿ ಕಡ್ಡಾಯ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಸಿಎಂ ಚುನಾವಣೆ ಗಿಮಿಕ್ ಅಂತ ಬಣ್ಣಿಸಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ಕೇಂದ್ರ ಸರ್ಕಾರ ಈ ಹಂತದಲ್ಲಿ ಯಾವುದೇ ನಿರ್ಧಾರ ಮಾಡಿದರೂ ಅದಕ್ಕೆ ಮಾನ್ಯತೆ ಇಲ್ಲ. ಇದು ನನ್ನ ಅಭಿಪ್ರಾಯ. ಸಮ್ಮಿಶ್ರ ಸರ್ಕಾರ 5 ವರ್ಷಗಳ ಸುಭದ್ರವಾಗಿ ನಡೆಯುತ್ತೆ. ನಾವು ಸುಗಮವಾಗಿ ಅವಧಿ ಮುಗಿಸುತ್ತೇವೆ. ಸರ್ಕಾರದ ಬಗ್ಗೆ ಯಾರಿಗೂ ಅಪನಂಬಿಕೆ ಬೇಡ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿವಾದಿತ ಸ್ಟೀಲ್ ಬ್ರಿಡ್ಜ್‌ಗೆ ಮರುಜೀವ – ಮತ್ತೆ ಯೋಜನೆ ಕೈಗೆತ್ತಿಕೊಳ್ಳಲು ದೋಸ್ತಿಗಳ ಚಿಂತನೆ

    ವಿವಾದಿತ ಸ್ಟೀಲ್ ಬ್ರಿಡ್ಜ್‌ಗೆ ಮರುಜೀವ – ಮತ್ತೆ ಯೋಜನೆ ಕೈಗೆತ್ತಿಕೊಳ್ಳಲು ದೋಸ್ತಿಗಳ ಚಿಂತನೆ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ವಿವಾದಕ್ಕೆ ಒಳಗಾಗಿ ಕೈ ಬಿಟ್ಟಿದ್ದ ಸ್ಟೀಲ್ ಬ್ರಿಡ್ಜ್ ಯೋಜನೆಗೆ ಮರುಜೀವ ನೀಡಲು ಮೈತ್ರಿ ಸರ್ಕಾರ ಮುಂದಾಗಿದೆ. ಈ ಕುರಿತು ಡಿಸಿಎಂ ಪರಮೇಶ್ವರ್ ಹೇಳಿಕೆ ನೀಡಿ ಸರ್ಕಾರ ಚಿಂತನೆ ಬಗ್ಗೆ ಮಾಹಿತಿ ನೀಡಿದ್ದಾರೆ.

    2017 ಮಾರ್ಚ್ ತಿಂಗಳಿನಲ್ಲಿ ಸಿದ್ದರಾಮಯ್ಯ ಸರ್ಕಾರ ಯೋಜನೆಯನ್ನು ಕೈಬಿಟ್ಟಿದ್ದು, ಚಾಲುಕ್ಯ ಸರ್ಕಲ್ ನಿಂದ ಎಸ್ಟೀಮ್ ಮಾಲ್ ವರೆಗೂ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು 1,856 ಕೋಟಿ ರೂ. ಅಂದಾಜು ಮೊತ್ತ ನಿಗದಿ ಮಾಡಲಾಗಿತ್ತು. ಆದರೆ ಪರಿಸರವಾದಿಗಳ ವಿರೋಧ ಹಾಗೂ ಜನಸಾಮಾನ್ಯರ ಒತ್ತಡದಿಂದಾಗಿ ಈ ಯೋಜನೆಯನ್ನು ಕೈಬಿಡಲಾಗಿತ್ತು. ಆದರೆ ಮತ್ತೆ ಈಗ ಡಿಸಿಎಂ ಬ್ರಿಡ್ಜ್ ಕುರಿತು ಮರು ಪರೀಶಿಲನೆ ನಡೆಸಲು ತೀರ್ಮಾನ ಕೈಗೊಂಡಿದ್ದಾಗಿ ಹೇಳಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಡಿಸಿಎಂ ಪರಮೇಶ್ವರ್ ಅವರು, ಸ್ಟೀಲ್ ಬ್ರಿಡ್ಜ್ ನಿರ್ಮಾಣ ನಮಗೆ ಅಗತ್ಯವಾಗಿದ್ದು, ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಹೆಚ್ಚು ಅನುಕೂಲ ಆಗಲಿದೆ. ಈ ಯೋಜನೆಯ ಸಮಗ್ರ ಯೋಜನಾ ವರದಿ(ಡಿಪಿಆರ್) ಮರುಪರಿಶೀಲನೆಗೆ ತೀರ್ಮಾನಿಸಲಾಗಿದೆ. ಈ ಯೋಜನೆಯನ್ನು ಯಾರು ವಿರೋಧ ಮಾಡುತ್ತಾರೆ ಅಂತಹವರ ಹಾಗೂ ಜನಸಾಮಾನ್ಯರ ಅಭಿಪ್ರಾಯ ಪಡೆಯಲಾಗುವುದು. ಡಿಪಿಆರ್ ನಲ್ಲಿ ಇರುವ ಲೋಪಗಳ ಅಂಶಗಳ ಬಗ್ಗೆ ಮಾಹಿತಿ ನೀಡಿದರೆ ಅದನ್ನು ಸರಿಪಡಿಸಿಕೊಳ್ಳುತ್ತವೆ ಎಂದರು.

    ಆರಂಭದಲ್ಲಿ 1,356 ಕೋಟಿ ಇದ್ದ ಯೋಜನೆಯ ಗಾತ್ರ ಕೆಲ ದಿನಗಳ ಅಂತರದಲ್ಲಿ 450 ಕೋಟಿ ರೂ. ಹೆಚ್ಚಿಸಿ ಯೋಜನೆ ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿತ್ತು. ದಿಢೀರ್ ಆಗಿ 450 ಕೋಟಿ ರೂ. ಮೊತ್ತ ಏರಿಕೆಯಾಗಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡಿತ್ತು. ಅಂದು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ ಅವರು ಸದ್ಯ ಸಿಎಂ ಆಗಿದ್ದಾರೆ.

    ಯೋಜನೆ ನಿರ್ಮಾಣವಾದರೆ ನಗರದಿಂದ ವಿಮಾನ ನಿಲ್ದಾಣಕ್ಕೆ ತೆರಳು 20 ನಿಮಿಷ ಸಾಕು ಎಂಬ ಪರಮೇಶ್ವರ್ ಹೇಳಿಕೆ ನೀಡಲು ಬಿಡಿಎ ಎಂಜಿನಿಯರ್ ಹಾಗೂ ಗುತ್ತಿಗೆ ಕಂಪೆನಿಗಳ ಒತ್ತಡವೇ ಕಾರಣ ಎನ್ನಲಾಗಿದೆ. 6.7 ಕಿ.ಮೀ ದೂರದ ಸೇತುವೆ ನಿರ್ಮಾಣವಾದರೆ ಸುಮಾರು ಸಾವಿರಕ್ಕೂ ಹೆಚ್ಚಿನ ಮರಗಳಿಗೆ ಕೊಡಲಿ ಪೆಟ್ಟು ಬೀಳಲಿದೆ. ಇದನ್ನು ಓದಿ: ಬಿಎಸ್‍ವೈ ಡೈರಿ ಹೊಡೆತಕ್ಕೆ ಸ್ಟೀಲ್ ಬ್ರಿಡ್ಜ್ ಕುಸಿತ!

    ಡಿಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಪಕ್ಷದ ನಾಯಕಿ ತೇಜಸ್ವಿನಿ ಅವರು, ಸ್ಟೀಲ್ ಬ್ರಿಡ್ಜ್ ಪರಿಸರಕ್ಕೆ ಹೆಚ್ಚಿನ ಉಷ್ಣಾಂಶವನ್ನು ಬಿಡುಗಡೆ ಮಾಡುತ್ತದೆ. ಅಲ್ಲದೇ ನಿರ್ಮಾಣದ ವೇಳೆ ಹೆಚ್ಚಿನಮರಗಳಿಗೆ ಹಾನಿ ಆಗಲಿದೆ. ಆದ್ದರಿಂದ ಸರ್ಕಾರ ಈ ಯೋಜನೆ ಬಗ್ಗೆ ಚಿಂತನೆ ಮಾಡುವುದನ್ನು ಬಿಟ್ಟು, ಇರುವ ರಸ್ತೆಯನ್ನು ಆಗಲೀಕರಣ ಮಾಡಿ ಉತ್ತಮ ರಸ್ತೆ ನಿರ್ಮಾಣ ಮಾಡಲಿ ಎಂದು ಸಲಹೆ ನೀಡಿದರು.

    ಏನಿದು ಸ್ಟೀಲ್‍ಬ್ರಿಡ್ಜ್ ವಿವಾದ?
    ಬೆಂಗಳೂರಿನ ಚಾಲುಕ್ಯ ಸರ್ಕಲ್‍ನಿಂದ ಹೆಬ್ಬಾಳದವರೆಗೆ 1790 ಕೋಟಿ ರೂ. ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚಿಂತನೆ ನಡೆಸಿತ್ತು. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಈ ಯೋಜನೆಯನ್ನು ಮಾಡಲಾಗಿತ್ತು. ಆದ್ರೆ ಬ್ರಿಡ್ಜ್ ನಿರ್ಮಾಣದಿಂದ ಸಾವಿರಾರು ಮರಗಳ ಮಾರಣಹೋಮವಾಗಲಿದ್ದು, ಇದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ವಿವಾದವಾಗಿತ್ತು. ಪರಿಸರವಾದಿಗಳು ಚೆನ್ನೈನ ಹಸಿರು ಪೀಠದಿಂದ ಯೋಜನೆಗೆ ತಡೆಯಾಜ್ಞೆ ತಂದಿದ್ದರು. ಪ್ರತಿಪಕ್ಷ ಬಿಜೆಪಿ ಈ ಯೋಜನೆಯಲ್ಲಿ ಡೀಲ್ ನಡೆದಿದೆ. ಉತ್ತರ ಪ್ರದೇಶ ಚುನಾವಣೆಗಾಗಿ ಈ ಯೋಜನೆಯ ಹಣವನ್ನು ಬಳಕೆ ಮಾಡಲಾಗುತ್ತದೆ ಎಂದು ಬಿಜೆಪಿ ಆರೋಪಿಸಿತ್ತು. ಗೋವಿಂದರಾಜು ಡೈರಿಯಲ್ಲಿ ಸ್ಟೀಲ್‍ಬ್ರಿಡ್ಜ್‍ಗಾಗಿ ಸಿಎಂ 65 ಕೋಟಿ ರೂ. ಕಿಕ್‍ಬ್ಯಾಕ್ ಪಡೆದಿರುವ ಉಲ್ಲೇಖವಿದೆ ಎಂದು ಬಿಎಸ್‍ವೈ ಆರೋಪ ಮಾಡಿದ್ದರು. ವಿವಾದ ಜೋರಾಗುತ್ತಿದ್ದಂತೆ ಸಿದ್ದರಾಮಯ್ಯ ಸರ್ಕಾರ ಈ ಯೋಜನೆಯನ್ನು ಕೈ ಬಿಟ್ಟಿತ್ತು. ಇದನ್ನು ಓದಿ:  ಸ್ಟೀಲ್‍ ಬ್ರಿಡ್ಜ್ ನಿರ್ಮಾಣ ಕೈಬಿಡಲು ಸರ್ಕಾರ ತೀರ್ಮಾನ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಲೆಕ್ಷನ್ ಹೊತ್ತಲ್ಲಿ ಮರುಜೀವ ಪಡೆದ ಸ್ಟೀಲ್ ಬ್ರಿಡ್ಜ್ ವಿಚಾರ- ಕಾಮಗಾರಿಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿದ ಸುಪ್ರೀಂ

    ಎಲೆಕ್ಷನ್ ಹೊತ್ತಲ್ಲಿ ಮರುಜೀವ ಪಡೆದ ಸ್ಟೀಲ್ ಬ್ರಿಡ್ಜ್ ವಿಚಾರ- ಕಾಮಗಾರಿಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿದ ಸುಪ್ರೀಂ

    ಬೆಂಗಳೂರು: ವಿವಾದಿತ ಸ್ಟೀಲ್ ಬ್ರಿಡ್ಜ್ ಯೋಜನೆ ವಿಚಾರ ಎಲೆಕ್ಷನ್ ಹೊತ್ತಲ್ಲಿ ಮರುಜೀವ ಪಡೆದಿದೆ. ಬೆಂಗಳೂರಿನಲ್ಲಿ ಸ್ಟೀಲ್ ಬ್ರಿಡ್ಜ್ ಕಾಮಗಾರಿಗೆ ಮಧ್ಯಂತರ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

    ಬಿ.ಪಿ ಮಹೇಶ್ ಎಂಬವರು ಕಾಮಗಾರಿಗೆ ಮಧ್ಯಂತರ ತಡೆ ನೀಡುವಂತೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರಿಂಕೊರ್ಟ್ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿಯನ್ನ ಇತ್ಯರ್ಥಪಡಿಸಿದ್ದು, ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಮೂಲ ಅರ್ಜಿಯನ್ನು ಶೀಘ್ರ ಇತ್ಯರ್ಥಪಡಿಸುವಂತೆಯೂ ಕರ್ನಾಟಕ ಹೈಕೋರ್ಟ್‍ಗೆ ಸೂಚನೆ ನೀಡಿದೆ.

    ಮೊದಲಿಗೆ ಬಿ.ಪಿ ಮಹೇಶ್ ಕಾಮಗಾರಿಗೆ ತಡೆ ನೀಡುವಂತೆ ಹೈಕೋರ್ಟ್‍ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಆದ್ರೆ ಸ್ಟೀಲ್ ಬ್ರಿಡ್ಜ್ ಕಾಮಗಾರಿಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದ್ದ ಹಿನ್ನಲೆಯಲ್ಲಿ ಸುಪ್ರಿಂಕೊರ್ಟ್ ಮೆಟ್ಟಿಲೇರಿದ್ದರು. ಆದ್ರೆ ಈಗ ಸುಪ್ರೀಂ ಕೋರ್ಟ್‍ನಲ್ಲೂ ಮಹೇಶ್ ಅವರಿಗೆ ಹಿನ್ನಡೆಯಾಗಿದೆ.

    ಈ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣವಾಗುತ್ತಾ ಎಂಬ ಪ್ರಶ್ನೆ ಈಗ ಮೂಡಿದೆ. ಶಿವಾನಂದ ಜಂಕ್ಷನ್‍ನಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಬಿಬಿಎಂಪಿ ಯೋಜನೆ ರೂಪಿಸಿತ್ತು.

  • ಅರಣ್ಯ ಸಚಿವರಿಂದ ಮರ ಕಡಿಯಲು ಅಸ್ತ್ರ- ಯಾರ ಅನುಮತಿಯೂ ಇಲ್ಲದೇ ಕಡಿಯಬಹುದಂತೆ ವೃಕ್ಷ!

    ಅರಣ್ಯ ಸಚಿವರಿಂದ ಮರ ಕಡಿಯಲು ಅಸ್ತ್ರ- ಯಾರ ಅನುಮತಿಯೂ ಇಲ್ಲದೇ ಕಡಿಯಬಹುದಂತೆ ವೃಕ್ಷ!

    – ರೈ ವಿರುದ್ಧ ರಾಹುಲ್‍ಗೆ ದೂರು

    ಬೆಂಗಳೂರು: ಕಾಡಿನ ರಕ್ಷಣೆ ಮಾಡಬೇಕಾದ ಅರಣ್ಯ ಸಚಿವ ರಮಾನಾಥ್ ರೈ ಟಿಂಬರ್ ಮಾಫಿಯಾಗೆ ತೆರೆಮರೆಯಲ್ಲಿ ಬೆಂಬಲ ನೀಡ್ತಿದ್ದಾರೆ ಎಂಬ ಗಂಭೀರ ಆರೋಪವೊಂದು ಕೇಳಿಬಂದಿದೆ. ಈ ಹಿಂದೆ ನಗರದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಕೈ ಹಾಕಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪರಿಸರ ಪ್ರೇಮಿಗಳು ಸಿಡಿದೆದ್ದಿದ್ರು. ಮರ ಕಡಿಯಲಾಗುತ್ತೆ ಮತ್ತು ಪರಿಸರ ನಾಶವಾಗುತ್ತೆ ಅನ್ನೋ ಕೂಗು ಗಟ್ಟಿಯಾದಾಗ ಸರ್ಕಾರ ಈ ಯೋಜನೆಯನ್ನ ಕೈಬಿಟ್ಟಿತ್ತು.

    ಈಗ ಸದ್ದಿಲ್ಲದೇ 50ಕ್ಕೂ ಹೆಚ್ಚು ಜಾತಿಯ ಮರಗಳನ್ನು ಯಾರ ಅನುಮತಿಗೂ ಕಾಯದೆ ಕಡಿಯಬಹುದು ಅಂತಾ ಮರಗಳ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತಂದು ಆದೇಶ ಹೊರಡಿಸಲು ಸಜ್ಜಾಗಿದೆ. ಅಲ್ಲದೇ ಇದಕ್ಕಾಗಿ ಮಸೂದೆಯನ್ನು ಮಂಡಿಸಲಾಗಿದೆ. ಹಳ್ಳಿಯ ರೈತರ ಹಿತದೃಷ್ಟಿಯಿಂದ ಈ ಕಾಯ್ದೆ ಅಂತಾ ಅರಣ್ಯ ಸಚಿವ ರಮಾನಾಥ್ ರೈ ಮರ ಕಡಿಯಲು ಅಸ್ತ್ರ ಹಿಡಿದಿದ್ದಾರೆ. ಸರ್ಕಾರ ಗುಲ್‍ಮೋಹರ್, ಆಫ್ರಿಕನ್ ಟ್ಯೂಲಿಪ್, ಲಕ್ಷ್ಮಿತರು ಮರ, ನುಗ್ಗೇಕಾಯಿ ಮರ, ಬಾಗೇಮರ ಸೇರಿದಂತೆ ಐವತ್ತಕ್ಕೂ ಹೆಚ್ಚು ಜಾತಿಯ ಮರಗಳ ಹೆಸರನ್ನು ಲಿಸ್ಟ್ ಮಾಡಿಕೊಂಡಿದೆ.

    ಈ ಸಂಬಂಧ ರಮಾನಾಥ್ ರೈ ವಿರುದ್ಧ ಪರಿಸರ ಪ್ರೇಮಿಗಳು ಸಿಡಿದೆದ್ದಿದ್ದಾರೆ. ಈ ಕಾಯ್ದೆ ಜಾರಿಯಾದ್ರೆ ದೊಡ್ಡ ಹೋರಾಟವಾಗಲಿದೆ. ನಿಮ್ಮ ಸಚಿವರಿಗೆ ಬುದ್ಧಿ ಹೇಳಿ ಅಂತಾ ಪರಿಸರ ಪ್ರೇಮಿ ನಿಶಾಂತ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ.

    ಸರ್ಕಾರ ಟಿಂಬರ್ ಮಾಫಿಯಾಗೆ ಕುಮ್ಮಕ್ಕು ಕೊಡೋಕೆ ಈ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ ಅನ್ನೋ ಅನುಮಾನ ಮೂಡಿದೆ.

  • ಸ್ಟೀಲ್ ಬ್ರಿಡ್ಜ್ ಬದಲು ಕೆಂಪೇಗೌಡ ಪ್ರಾಜೆಕ್ಟ್ – ಎಲ್&ಟಿ ಕಂಪನಿಗೆ ಜಾರ್ಜ್ ಋಣಸಂದಾಯ

    ಸ್ಟೀಲ್ ಬ್ರಿಡ್ಜ್ ಬದಲು ಕೆಂಪೇಗೌಡ ಪ್ರಾಜೆಕ್ಟ್ – ಎಲ್&ಟಿ ಕಂಪನಿಗೆ ಜಾರ್ಜ್ ಋಣಸಂದಾಯ

    ಬೆಂಗಳೂರು: ಕೊನೆಗೂ ಸಚಿವ ಕೆ.ಜೆ.ಜಾರ್ಜ್ ಒತ್ತಡಕ್ಕೆ ಮಣಿದು ಬಿಡಿಎ ಕೆಂಪೇಗೌಡ ಲೇಔಟ್‍ನ ಸಮಗ್ರ ಅಭಿವೃದ್ದಿಯ ಪ್ರಾಜೆಕ್ಟ್ ಟೆಂಡರನ್ನು ಎಲ್ ಅಂಡ್ ಟಿ ಕಂಪನಿಗೆ ನೀಡಿದೆ.

    ಈ ಹಿಂದೆ 2 ಸಾವಿರ ಕೋಟಿ ರೂ. ಮೊತ್ತದ ಸ್ಟೀಲ್ ಬ್ರಿಡ್ಜ್ ಟೆಂಟರ್ನ್ ಎಲ್&ಟಿ ಕಂಪನಿ ಪಡೆದಿತ್ತು. ಅದಕ್ಕಾಗಿ 65 ಕೋಟಿ ರೂಪಾಯಿ ಕಪ್ಪವನ್ನೂ ನೀಡಿದ್ದ ಬಗ್ಗೆ ಗೋವಿಂದರಾಜು ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಉಲ್ಲೇಖವಾಗಿತ್ತು. ನಂತರ ತೀವ್ರ ವಿರೋಧದ ಕಾರಣ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿತ್ತು.

    ಸ್ಟೀಲ್ ಬ್ರಿಡ್ಜ್ ಬದಲಾಗಿ ಕೆಂಪೇಗೌಡ ಲೇಔಟ್‍ನ ಸಮಗ್ರ ಅಭಿವೃದ್ದಿಗೆ 1 ಸಾವಿರದ 255 ಕೋಟಿಯ ಟೆಂಡರ್ ಎಲ್&ಟಿ ಕಂಪನಿಗೆ ನೀಡುತ್ತೆ ಅನ್ನೋ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಇದೀಗ ಆ ವರದಿಯಂತೆಯೇ ಎಲ್&ಟಿ ಕಂಪನಿಗೆ 1 ಸಾವಿರದ 255 ಕೋಟಿ ರೂಪಾಯಿ ಮೊತ್ತದ ಯೋಜನೆ ಟೆಂಡರ್ ನೀಡಲಾಗಿದೆ.

    400 ಕೋಟಿಗೂ ಅಧಿಕ ಸಾಲಕ್ಕೆ ಬಡ್ಡಿ ಕಟ್ಟುತ್ತಿರೋ ಬಿಡಿಎ ಇಷ್ಟೊಂದು ಬೃಹತ್ ಯೋಜನೆಗೆ ಎಲ್ಲಿಂದ ಹಣ ತರುತ್ತೋ ಅನ್ನೋದು ಜನರ ಪ್ರಶ್ನೆ.

  • ರಾಜ್ಯ ಸುರಂಗ ಮಾರ್ಗ ಪ್ರಸ್ತಾವನೆಗೆ ಆರಂಭದಲ್ಲೇ ವಿಘ್ನ: ಬೆಂಗಳೂರಿಗರ ವಿರೋಧ ಯಾಕೆ?

    ರಾಜ್ಯ ಸುರಂಗ ಮಾರ್ಗ ಪ್ರಸ್ತಾವನೆಗೆ ಆರಂಭದಲ್ಲೇ ವಿಘ್ನ: ಬೆಂಗಳೂರಿಗರ ವಿರೋಧ ಯಾಕೆ?

    – ಪವಿತ್ರ ಕಡ್ತಲ

    ಬೆಂಗಳೂರು: ಸ್ಟೀಲ್ ಬ್ರಿಡ್ಜ್‍ಗೆ ತಿಲಾಂಜಲಿ ಇಟ್ಟ ಸರ್ಕಾರ ಸುರಂಗ ಮಾರ್ಗಕ್ಕೆ ಕೈ ಹಾಕಿತ್ತು. ಆದ್ರೆ ಸ್ಟೀಲ್‍ಬ್ರಿಡ್ಜ್ ಗೆ ವಿರೋಧ ವ್ಯಕ್ತಪಡಿಸಿದ ಸೇಮ್ ಟೀಮ್ ಈಗ ಸುರಂಗ ಮಾರ್ಗದ ಬಗ್ಗೆಯೂ ಅಪಸ್ವರವೆತ್ತಿದೆ. ಸಚಿವ ಜಾರ್ಜ್ ಅವರ ಸುರಂಗ ಕನಸು ಭಗ್ನವಾಗುತ್ತಾ ಅನ್ನೋ ಅನುಮಾನ ಮೂಡಿದೆ.

    ಸ್ಟೀಲ್ ಬ್ರಿಡ್ಜ್ ಗೆ ಜನರಿಂದ ಹಾಗೂ ಸಿಟಿಜನ್ ಫೋರಂನಿಂದ ವ್ಯಾಪಕ ಹೋರಾಟದ ಬಳಿಕ ಸರ್ಕಾರ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಸ್ಟೀಲ್ ಬಿಟ್ಟು ಏಷ್ಯಾದ ಅತಿ ದೊಡ್ಡ ಸುರಂಗ ಮಾರ್ಗವನ್ನು ರಾಜ್ಯಸರ್ಕಾರ ನಗರದ ನಾಲ್ಕು ಕಡೆ ನಿರ್ಮಾಣ ಮಾಡೋದಕ್ಕೆ ಟೊಂಕ ಕಟ್ಟಿ ನಿಂತಿದೆ. ವಿದೇಶಿ ಕಂಪನಿಗಳು ಭೇಟಿ ನೀಡಿವೆ.

    ಆದ್ರೇ ಈಗ ಮತ್ತೆ ಸಚಿವರ ಸುರಂಗ ಕನಸಿಗೆ ಸ್ಟೀಲ್ ಬ್ರಿಡ್ಜ್ ಗೆ ಹಸಿರು ಪೀಠದಲ್ಲಿ ದಾವೆ ಹೂಡಿದ್ದ ಸಿಟಿಜನ್ ಫೋರಂ ಹಾಗೂ ನಮ್ಮ ಬೆಂಗಳೂರು ಫೌಂಡೇಷನ್ ಮತ್ತೆ ರೆಡಿಯಾಗಿದೆ. ಸ್ಟೀಲ್ ಬ್ರಿಡ್ಜ್ ಗೆ ಮರ ಹೋಗುತ್ತೆ ಅಂತಾ ವಿರೋಧ ವ್ಯಕ್ತಪಡಿಸಿದ್ರು. ಹಾಗಿದ್ರೆ ಸುರಂಗಕ್ಕೆ ಯಾಕೀ ಅಡ್ಡಿ ಅಂತಾ ಕೇಳಿದ್ರೆ ಹೋರಾಟಗಾರರ ಉತ್ತರಿಸಿದ್ದು ಹೀಗೆ:

    1. ಪ್ರಾಜೆಕ್ಟ್ ಶುರುವಾಗುವ ಮುಂಚೆ ಸಾರ್ವಜನಿಕರಿಗೆ ಸಮಗ್ರ ಮಾಹಿತಿಯನ್ನಾದ್ರೂ ನೀಡಬೇಕಾಗಿತ್ತು.
    2. ಇಷ್ಟು ದೊಡ್ಡ ಸುರಂಗ ಮಾರ್ಗ ಮಾಡುವ ಕಾರ್ಯಕ್ಷಮತೆ ನಿಜವಾಗಲೂ ಇದ್ಯಾ?
    3. ಇಷ್ಟೆಲ್ಲಾ ಖರ್ಚು ಮಾಡಿ ಟ್ರಾಫಿಕ್ ಕಂಟ್ರೋಲ್ ಎಷ್ಟರಮಟ್ಟಿಗೆ ಆಗುತ್ತೆ, ಈ ಬಗ್ಗೆ ಸರ್ಕಾರ ಮೌನವಾಗಿದೆ
    4. ಸರ್ಕಾರ ಸಿಎನ್‍ಆರ್ ರಾವ್ ಅಂಡರ್‍ಪಾಸ್‍ಗೆ ಐದು ವರ್ಷ ತೆಗೆದುಕೊಂಡಿದೆ, ಇನ್ನು ಇದು ಹೆಂಗೋ.
    5. ಪಬ್ಲಿಕ್ ಟ್ರಾನ್ಸ್ ಪೋರ್ಟ್‍ನ್ನೇ ಹೆಚ್ಚು ಮಾಡಬಹುದು. ಇದ್ರ ಮಧ್ಯೆ ಈ ಪ್ರಾಜೆಕ್ಟ್ ಯಾಕೆ..?

    ಒಟ್ಟಿನಲ್ಲಿ ಸರ್ಕಾರ ಸರಿಯಾದ ಮಾಹಿತಿ ನೀಡದೇ ಏಕಾಏಕಿ ಪ್ರಾಜೆಕ್ಟ್ ಅನುಷ್ಟಾನಕ್ಕೆ ಇಳಿದ್ರೆ ಮತ್ತೆ ಸ್ಟೀಲ್ ಬ್ರಿಡ್ಜ್ ಮಾದರಿ ಹೋರಾಟ ನಡೆಸುವ ಎಚ್ಚರಿಕೆಯನ್ನು ಹೋರಾಟಗಾರರು ನೀಡಿದ್ದಾರೆ. ಇದಕ್ಕೆ ಸರ್ಕಾರದ ಉತ್ತರ ಏನು ಇರುತ್ತೋ ಕಾದು ನೋಡಬೇಕು.

  • ಉಕ್ಕಿನ ಸೇತುವೆ ಬೇಕು ಎಂದು ಬೆಂಗಳೂರಿನ ಹೆಬ್ಬಾಳದಲ್ಲಿ ಪ್ರತಿಭಟನೆ

    ಉಕ್ಕಿನ ಸೇತುವೆ ಬೇಕು ಎಂದು ಬೆಂಗಳೂರಿನ ಹೆಬ್ಬಾಳದಲ್ಲಿ ಪ್ರತಿಭಟನೆ

    ಬೆಂಗಳೂರು: ಈಗಾಗಲೇ ರಾಜ್ಯ ಸರ್ಕಾರ ಸ್ಟೀಲ್ ಬ್ರಿಡ್ಜ್ ಯೋಜನೆ ಕೈ ಬಿಟ್ಟಿದ್ದು, ಇದೀಗ ಸ್ಟೀಲ್ ಬ್ರಿಡ್ಜ್ ಯೋಜನೆ ಬೇಕು ಎಂದು ಆಗ್ರಹಿಸಿ ಹೆಬ್ಬಾಳದಲ್ಲಿ ನಾಗರೀಕರು ಪ್ರತಿಭಟನೆ ನಡೆಸುತ್ತಿದ್ದಾರೆ.

    ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲೇ ಬೇಕು ಅಂತಾ ನಾಗರೀಕರು ಎಸ್ಟೀಮ್ ಮಾಲ್ ನ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೆಬ್ಬಾಳ ದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಜಾಸ್ತಿಯಿದೆ. ಡೋಂಗಿ ಪರಿಸರವಾದಿಗಳಿಂದ ಅಭಿವೃದ್ಧಿಗೆ ಕತ್ತರಿ ಬಿದ್ದಿದೆ ಅಂತಾ ಪ್ರತಿಭಟನಾಕಾರರು ಆಕ್ರೋಶ ವ್ತಕ್ತಪಡಿಸುತ್ತಿದ್ದಾರೆ.

    ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಸಂಬಂಧಿಸಿದಂತೆ 65 ಕೋಟಿ ರೂ. ಹಣವನ್ನು ಸಿಎಂ ತೆಗೆದುಕೊಂಡಿದ್ದಾರೆ. ಐಟಿ ದಾಳಿ ವೇಳೆ ಪತ್ತೆಯಾದ ಗೋವಿಂದರಾಜು ಡೈರಿಯಲ್ಲಿ 65 ಕೋಟಿ ರೂ. ಕಪ್ಪದ ಬಗ್ಗೆ ಬರವಣಿಗೆ ಸಾಕ್ಷಿ ಇದೆ ಅಂತಾ ಬಿಎಸ್‍ವೈ ಆರೋಪ ಮಾಡಿದ್ದರು. ಆರೋಪ ಹೊತ್ತು ಯೋಜನೆಯನ್ನು ಮುಂದುವರೆಸುವುದಿಲ್ಲ ಎಂದು ಹೇಳಿ ಸರ್ಕಾರ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ಕೈ ಬಿಟ್ಟಿತ್ತು.

    ಏನಿದು ಸ್ಟೀಲ್‍ಬ್ರಿಡ್ಜ್ ವಿವಾದ?: ಬೆಂಗಳೂರಿನ ಚಾಲುಕ್ಯ ಸರ್ಕಲ್‍ನಿಂದ ಹೆಬ್ಬಾಳದವರೆಗೆ 1790 ಕೋಟಿ ರೂ. ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು ಸರ್ಕಾರ ಚಿಂತನೆ ನಡೆಸಿತ್ತು. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಈ ಯೋಜನೆಯನ್ನು ಮಾಡಲಾಗಿತ್ತು. ಆದ್ರೆ ಬ್ರಿಡ್ಜ್ ನಿರ್ಮಾಣದಿಂದ ಸಾವಿರಾರು ಮರಗಳ ಮಾರಣಹೋಮವಾಗಲಿದ್ದು ಪರಿಸರಕ್ಕೆ ಹಾನಿಯಾಗುತ್ತೆ ಎಂಬ ಕಾರಣಕ್ಕೆ ವಿವಾದವಾಗಿತ್ತು. ಪ್ರತಿಪಕ್ಷ ಬಿಜೆಪಿ ಕೂಡ ಈ ಯೋಜನೆಯನ್ನು ವಿರೋಧಿಸಿತ್ತು. ಬಳಿಕ ಈ ಯೋಜನೆಯಲ್ಲಿ ಡೀಲ್ ಆಗಿದೆ ಅಂತಾ ಬಿಜೆಪಿ ಆರೋಪಿಸಿತ್ತು. ಪರಿಸರವಾದಿಗಳು ಚೆನ್ನೈನ ಹಸಿರು ಪೀಠದಿಂದ ಯೋಜನೆಗೆ ತಡೆಯಾಜ್ಞೆ ತಂದಿದ್ದರು. ತಡೆಯಾಜ್ಞೆ ಹಿನ್ನೆಲೆಯಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ವಿಳಂಬವಾಗಿತ್ತು. ಈ ನಡುವೆ ಗೋವಿಂದರಾಜು ಡೈರಿಯಲ್ಲಿ ಸ್ಟೀಲ್‍ಬ್ರಿಡ್ಜ್‍ಗಾಗಿ ಸಿಎಂ 65 ಕೋಟಿ ರೂ. ಕಿಕ್‍ಬ್ಯಾಕ್ ಪಡೆದಿರುವ ಉಲ್ಲೇಖವಿದೆ ಎಂದು ಬಿಎಸ್‍ವೈ ಆರೋಪ ಮಾಡಿದ್ದರು.

    ಇದನ್ನೂ ಓದಿ: ಸ್ಟೀಲ್‍ ಬ್ರಿಡ್ಜ್ ನಿರ್ಮಾಣ ಕೈಬಿಡಲು ಸರ್ಕಾರ ತೀರ್ಮಾನ

    ಇದನ್ನೂ ಓದಿ:  ಬಿಎಸ್‍ವೈ ಡೈರಿ ಹೊಡೆತಕ್ಕೆ ಸ್ಟೀಲ್ ಬ್ರಿಡ್ಜ್ ಕುಸಿತ!

  • ಬಿಎಸ್‍ವೈ ಡೈರಿ ಹೊಡೆತಕ್ಕೆ ಸ್ಟೀಲ್ ಬ್ರಿಡ್ಜ್ ಕುಸಿತ!

    ಬಿಎಸ್‍ವೈ ಡೈರಿ ಹೊಡೆತಕ್ಕೆ ಸ್ಟೀಲ್ ಬ್ರಿಡ್ಜ್ ಕುಸಿತ!

    ಬೆಂಗಳೂರು: ಕರ್ನಾಟಕ ಸರ್ಕಾರ ಸ್ಟೀಲ್ ಸೇತುವೆ ನಿರ್ಮಾಣ ಯೋಜನೆಯನ್ನು ಕೈ ಬಿಟ್ಟಿರುವುದು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಡೈರಿ ಹೋರಾಟಕ್ಕೆ ಸಿಕ್ಕ ಜಯ ಎಂದು ಬಿಜೆಪಿ ಮುಖಂಡ ಸುರೇಶ್ ಕುಮಾರ್ ಬಣ್ಣಿಸಿದ್ದಾರೆ.

    ಈ ಸಂಬಂಧ ಅವರು ‘ಬಿಎಸ್‍ವೈ ಡೈರಿ ಹೊಡೆತಕ್ಕೆ ಸ್ಟೀಲ್ ಬ್ರಿಡ್ಜ್ ಕುಸಿತ’ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಸ್ಟೀಲ್ ಬ್ರಿಡ್ಜ್ ಯೋಜನೆ ಕೈ ಬಿಟ್ಟ ತಕ್ಷಣ ಡೈರಿಯಲ್ಲಿನ ಬರವಣಿಗೆ ಮಾಯವಾಗುವುದಿಲ್ಲ. ಡೈರಿ ಕುರಿತು ಬಿಜೆಪಿ ಮಾಡುತ್ತಿದ್ದ ಆರೋಪಕ್ಕೆ ಇದೊಂದು ಸಾಕ್ಷಿಯಷ್ಟೇ ಎಂದು ಬರೆದು ಸುರೇಶ್ ಕುಮಾರ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.

    ವಿಧಾನಸೌಧದಲ್ಲಿ ಬೆಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ಕುರಿತು ಶಾಸಕರ ಜೊತೆ ನಡೆದ ಮಹತ್ವದ ಸಭೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ರದ್ದು ಮಾಡುವ ನಿರ್ಧಾರ ಮಾಡಿದ್ದೇವೆ ಎಂದು ಅಧಿಕೃತವಾಗಿ ತಿಳಿಸಿದರು.

    ಸ್ಟೀಲ್ ಸೇತುವೆಯಿಂದ  65 ಕೋಟಿ ರೂ. ಹಣವನ್ನು ಸಿಎಂ ತೆಗೆದುಕೊಂಡಿದ್ದಾರೆ ಅಂತಾ ಆರೋಪ ಮಾಡಿದ್ದಾರೆ. ಬೆಳಗ್ಗೆ ಸಂಜೆಯಾದರೆ ಈ ಆರೋಪ ಕೇಳಿ ಕೇಳಿ ಸಾಕಾಗಿದೆ. ಸ್ಟೀಲ್ ಬ್ರಿಡ್ಜ್ ವಿಚಾರದಲ್ಲಿ ಒಂದು ರೂಪಾಯಿ ಯಾರಿಗೂ ಕೊಟ್ಟಿಲ್ಲ ಎಂದು ಜಾರ್ಜ್ ಹೇಳಿದರು.

    ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ಸ್ಟೀಲ್ ಸೇತುವೆಯಿಂದ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದೆ. ಭ್ರಷ್ಟಾಚಾರದ ಸ್ಮಾರಕ ಅಂತಾ ಬಿಂಬಿಸಲಾಗುತ್ತಿದೆ. ಸ್ಟೀಲ್ ಬ್ರಿಡ್ಜ್ ನಿಂದ ಸರ್ಕಾರಕ್ಕೆ ಏಕೆ ಕೆಟ್ಟ ಹೆಸರು ತೆಗೆದುಕೊಳ್ಳಬೇಕು? ಚುನಾವಣೆ ಬಳಿಕ ಯಾರು ಬರುತ್ತಾರೋ ಅವರು ಮಾಡುತ್ತಾರೆ ಬಿಡಿ ಎಂದು ತಿಳಿಸಿದರು.

    ಸ್ಟೀಲ್ ಬ್ರಿಡ್ಜ್ ಸಂಬಂಧ ಸಿಎಂ ಸಿದ್ದರಾಮಯ್ಯಗೆ 65 ಕೋಟಿ ರೂ. ಕಿಕ್‍ಬ್ಯಾಕ್ ಹೋಗಿದೆ. ಐಟಿ ದಾಳಿ ವೇಳೆ ಪತ್ತೆಯಾದ ಗೋವಿಂದರಾಜು ಡೈರಿಯಲ್ಲಿ 65 ಕೋಟಿ ರೂ. ಕಪ್ಪದ ಬಗ್ಗೆ ಬರವಣಿಗೆ ಸಾಕ್ಷಿ ಇದೆ ಅಂತಾ ಬಿಎಸ್‍ವೈ ಆರೋಪಿಸಿದ್ದರು.

    ಏನಿದು ಸ್ಟೀಲ್‍ಬ್ರಿಡ್ಜ್ ವಿವಾದ ?: ಬೆಂಗಳೂರಿನ ಚಾಲುಕ್ಯ ಸರ್ಕಲ್‍ನಿಂದ ಹೆಬ್ಬಾಳದವರೆಗೆ 1790 ಕೋಟಿ ರೂ. ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು ಸರ್ಕಾರ ಚಿಂತನೆ ನಡೆಸಿತ್ತು. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಈ ಯೋಜನೆಯನ್ನು ಮಾಡಲಾಗಿತ್ತು. ಆದ್ರೆ ಬ್ರಿಡ್ಜ್ ನಿರ್ಮಾಣದಿಂದ ಸಾವಿರಾರು ಮರಗಳ ಮಾರಣಹೋಮವಾಗಲಿದ್ದು ಪರಿಸರಕ್ಕೆ ಹಾನಿಯಾಗುತ್ತೆ ಎಂಬ ಕಾರಣಕ್ಕೆ ವಿವಾದವಾಗಿತ್ತು. ಪ್ರತಿಪಕ್ಷ ಬಿಜೆಪಿ ಕೂಡ ಈ ಯೋಜನೆಯನ್ನು ವಿರೋಧಿಸಿತ್ತು. ಬಳಿಕ ಈ ಯೋಜನೆಯಲ್ಲಿ ಡೀಲ್ ಆಗಿದೆ ಅಂತಾ ಬಿಜೆಪಿ ಆರೋಪಿಸಿತ್ತು. ಪರಿಸರವಾದಿಗಳು ಚೆನ್ನೈನ ಹಸಿರು ಪೀಠದಿಂದ ಯೋಜನೆಗೆ ತಡೆಯಾಜ್ಞೆ ತಂದಿದ್ದರು. ತಡೆಯಾಜ್ಞೆ ಹಿನ್ನೆಲೆಯಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ವಿಳಂಬವಾಗಿತ್ತು. ಈ ನಡುವೆ ಗೋವಿಂದರಾಜು ಡೈರಿಯಲ್ಲಿ ಸ್ಟೀಲ್‍ಬ್ರಿಡ್ಜ್‍ಗಾಗಿ ಸಿಎಂ 65 ಕೋಟಿ ರೂ. ಕಿಕ್‍ಬ್ಯಾಕ್ ಪಡೆದಿರುವ ಉಲ್ಲೇಖವಿದೆ ಎಂದು ಬಿಎಸ್‍ವೈ ಆರೋಪ ಮಾಡಿದ್ದರು.