Tag: Stealth Fighter Jets

  • ಪಾಕಿಸ್ತಾನಕ್ಕೆ 5ನೇ ತಲೆಮಾರಿನ 40 ಸ್ಟೆಲ್ತ್ ಫೈಟರ್ ಜೆಟ್‌ ಪೂರೈಸಲು ಚೀನಾ ಮೆಗಾ ಡೀಲ್‌

    ಪಾಕಿಸ್ತಾನಕ್ಕೆ 5ನೇ ತಲೆಮಾರಿನ 40 ಸ್ಟೆಲ್ತ್ ಫೈಟರ್ ಜೆಟ್‌ ಪೂರೈಸಲು ಚೀನಾ ಮೆಗಾ ಡೀಲ್‌

    – ಇತ್ತ  ಸ್ಟೆಲ್ತ್ ಫೈಟರ್ ಜೆಟ್‌ಗೆ ಭಾರತ ಅನುಮೋದನೆ

    ಬೀಜಿಂಗ್‌: ಭಾರತವು (India) ತನ್ನದೇ ಆದ ಸ್ಟೆಲ್ತ್ ಫೈಟರ್‌ ಜೆಟ್‌ ನಿರ್ಮಿಸುವ ಯೋಜನೆಗೆ ಇತ್ತೀಚೆಗೆ ಅನುಮೋದನೆ ನೀಡಿದೆ. ಈ ಬೆನ್ನಲ್ಲೇ ಚೀನಾ ದೇಶವು ಪಾಕಿಸ್ತಾನಕ್ಕೆ 40 ಜೆ-35 5ನೇ ತಲೆಮಾರಿನ ಸ್ಟೆಲ್ತ್ ಫೈಟರ್ ಜೆಟ್‌ (Stealth Fighter Jets) ಪೂರೈಸಲಿದೆ ಎಂದು ವರದಿಯಾಗಿದೆ. ಈ ಮೂಲಕ ಸ್ಟೆಲ್ತ್‌ ತಂತ್ರಜ್ಞಾನ ನಿರ್ವಹಿಸುವ ಕೆಲವೇ ದೇಶಗಳ ಗುಂಪಿಗೆ ಸೇರಲು ಪಾಕ್‌ ಸಜ್ಜಾಗಿದೆ.

    stealth fighter jets india

    5ನೇ ತಲೆಮಾರಿನ ಸ್ಟೆಲ್ತ್‌ ಫೈಟರ್‌ ಜೆಟ್‌ ನಿರ್ಮಿಸುವ ಯೋಜನೆಗೆ ಕೆಲ ದಿನಗಳ ಹಿಂದೆಯಷ್ಟೇ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅನುಮೋದನೆ ನೀಡಿದ್ದರು. ಇದು ಅವಳಿ-ಎಂಜಿನ್ ಹೊಂದಿರುವ 5ನೇ ತಲೆಮಾರಿನ ಮಿಲಿಟರಿ ವಿಮಾನವಾಗಿದೆ. ಈ ಕಾರ್ಯಕ್ರಮವನ್ನು ಸರ್ಕಾರಿ ಸ್ವಾಮ್ಯದ ಏರೋನಾಟಿಕಲ್ ಅಭಿವೃದ್ಧಿ ಸಂಸ್ಥೆ ಕಾರ್ಯಗತಗೊಳಿಸುತ್ತದೆ. ಆದ್ರೆ ಸ್ಟೆಲ್ತ್ ವಿಮಾನ – ಅಡ್ವಾನ್ಡ್‌ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ (AMCA) ಅನ್ನು ವಾಯುಪಡೆಗೆ ಸೇರಿಸಿಕೊಳ್ಳಲು ಕನಿಷ್ಠ 1 ದಶಕಗಳ ಕಾಲ ಸಮಯ ಬೇಕಾಗುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದ್ರೆ ಎಎಂಸಿಎ 2035ರ ವೇಳೆಗೆ ಭಾರತ ಸ್ಟೆಲ್ತ್‌ ಫೈಟರ್‌ ಜೆಟ್‌ ನಿರ್ಮಿಸುವ ಯೋಜನೆ ಪೂರ್ಣಗೊಳ್ಳಲಿದೆ. ಇದನ್ನೂ ಓದಿ: ದೊಡ್ಡಣ್ಣನ ಎಂಟ್ರಿಯಿಂದ 3ನೇ ಮಹಾಯುದ್ಧದ ಆತಂಕ – ಇರಾನ್ ಬೆಂಬಲಕ್ಕೆ ನಿಂತ ರಷ್ಯಾ

    ಈ ಹೊತ್ತಿನಲ್ಲೇ ಚೀನಾ (China), ಪಾಕಿಸ್ತಾನಕ್ಕೆ (Pakistan) 40 ಸ್ಟೆಲ್ತ್‌ ಫೈಟರ್‌ ಜೆಟ್‌ಗಳನ್ನು ಪೂರೈಸಲು ಮುಂದಾಗಿದೆ ಎಂಬ ವರದಿ ಹೊರಬಿದ್ದಿದೆ. ಈ ಕುರಿತು ಮಾಜಿ ಐಎಎಫ್ ಫೈಟರ್ ಪೈಲಟ್ ಮತ್ತು ರಕ್ಷಣಾ ವಿಶ್ಲೇಷಕ ಗ್ರೂಪ್ ಕ್ಯಾಪ್ಟನ್ ಅಜಯ್ ಅಹ್ಲಾವತ್ (ನಿವೃತ್ತ) ಮಾತನಾಡಿದ್ದು, ಚೀನಾದಲ್ಲಿ ಪಾಕಿಸ್ತಾನಿ ಫೈಟರ್‌ ಪೈಲಟ್‌ಗಳಿಗೆ ಈಗಾಗಲೇ ಸ್ಟೆಲ್ತ್‌ ಜೆಟ್‌ಗಳ ತರಬೇತಿ ನೀಡುತ್ತಿರುವುದನ್ನು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಟರ್ಕಿಯಲ್ಲಿ 2 ಏರ್ ಬಲೂನ್ ಅವಘಡ- ಪೈಲಟ್ ಸಾವು, 31 ಪ್ರವಾಸಿಗರಿಗೆ ಗಾಯ

    ಮುಂದುವರಿದು.. ಪಾಕಿಸ್ತಾನ ಈ ಜೆಟ್‌ ಸ್ವೀಕರಿಸೋದ್ರಲ್ಲಿ ಅಚ್ಚರಿ ಏನಿಲ್ಲ. ಈಗಾಗಲೇ ಪಾಕಿಸ್ತಾನದ ಫೈಟರ್‌ ಪೈಲಟ್‌ಗಳ ಒಂದು ಟೀಂ 6 ತಿಂಗಳಿಗಿಂತ ಹೆಚ್ಚು ಸಮಯದಿಂದ ಚೀನಾದಲ್ಲಿದೆ. ಸ್ಟೆಲ್ತ್‌ ಜೆಟ್‌ಅನ್ನು ಸೇನೆಗೆ ಸೇರ್ಪಡೆಗೊಳಿಸುವುದಕ್ಕೂ ಮುನ್ನವೇ ತರಬೇತಿ ಪಡೆದುಕೊಳ್ಳಾಗುತ್ತಿದೆ. ಚೀನಾ FC-31 ಆವೃತ್ತಿಯ ಜೆಟ್‌ ನೀಡುತ್ತದೆ. ಇದು ಜೆ-35ನ ರೂಪಾಂತರವಾಗಿದೆ ಎಂದು ತಿಳಿಸಿದ್ದಾರೆ.

    ಸದ್ಯ ಚೀನಾ ಪಾಕಿಸ್ತಾನಕ್ಕೆ ನೀಡಲು ಮುಂದಾಗಿರುವ ಜೆ-35 ಆವೃತ್ತಿಯ ಸಾಮರ್ಥ್ಯ ಪೀಪಲ್ಸ್ ಲಿಬರೇಶನ್ ಆರ್ಮಿ ನೇವಿ ಏರ್ ಫೋರ್ಸ್ (PLANAF)ನ ಮುಂಚೂಣಿ ವಿಮಾನಗಳಿಗಿಂತಲೂ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಇಸ್ರೇಲ್ ತಯಾರಿ

    ಸ್ಟೆಲ್ತ್‌ ತಂತ್ರಜ್ಞಾನ ಅಂದ್ರೆ ಏನು?
    ಸ್ಟೆಲ್ತ್ ತಂತ್ರಜ್ಞಾನ ಅಂದ್ರೆ ಕಡಿಮೆ ಗೋಚರ ತಂತ್ರಜ್ಞಾನ. ಅಂದರೆ ಶತ್ರುಗಳ ಪತ್ತೆ ವ್ಯವಸ್ಥೆಗಳಾದ ರಾಡಾರ್, ಸೋನಾರ್‌ಗಳ ಕಣ್ತಪ್ಪಿಸುವ ತಂತ್ರಜ್ಞಾನ. ಮುಖ್ಯವಾಗಿ ಮಿಲಿಟರಿ ವ್ಯವಸ್ಥೆಗಳಾದ ಫೈಟರ್‌ ಜೆಟ್‌, ಹಡಗು ಮತ್ತು ಕ್ಷಿಪಣಿಗಳಿಗೆ ಈ ತಂತ್ರಜ್ಞಾನವನ್ನು ಅಳವಡಿಸಲಾಗುತ್ತದೆ.

  • ಸಿಕ್ಕಿಂನಿಂದ 150 ಕಿಮೀ ದೂರದ ಗಡಿಯಲ್ಲಿ ಚೀನಾ ಅತ್ಯಾಧುನಿಕ ಫೈಟರ್ ಜೆಟ್ ನಿಯೋಜನೆ!

    ಸಿಕ್ಕಿಂನಿಂದ 150 ಕಿಮೀ ದೂರದ ಗಡಿಯಲ್ಲಿ ಚೀನಾ ಅತ್ಯಾಧುನಿಕ ಫೈಟರ್ ಜೆಟ್ ನಿಯೋಜನೆ!

    – ಜೆ-20 ಸ್ಟೆಲ್ತ್ ಫೈಟರ್ ಜೆಟ್ ವಿಶೇಷನೆ ಏನು?
    – ಭಾರತಕ್ಕೆ ಇದರ ಸಂದೇಶ ಏನು?

    ಗ್ಯಾಂಗ್ಟಾಕ್/ಬೀಜಿಂಗ್: ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನವು ತನ್ನ ರಕ್ಷಣಾ ಬಲ ಹೆಚ್ಚಿಸಿಕೊಳ್ಳಲು ಚೀನಾ (China) ನೆರವು ನೀಡಿದೆ ಎಂಬ ಸ್ಫೋಟಕ ಮಾಹಿತಿ ಬಯಲಾಗಿರುವ ಹೊತ್ತಿನಲ್ಲೇ ಮತ್ತೊಂದು ಮಹತ್ವದ ಬೆಳವಣಿಗೆ ಕಂಡುಬಂದಿದೆ. ಸಿಕ್ಕಿಂನಲ್ಲಿ ಭಾರತದ ಗಡಿಯಿಂದ ಸುಮಾರು 150 ಕಿಮೀ ದೂರದಲ್ಲಿ ಚೀನಾ ತನ್ನ ಅತ್ಯಾಧುನಿಕ ಜೆ-20 ಸ್ಟೆಲ್ತ್ ಯುದ್ಧ ವಿಮಾನಗಳನ್ನು (Stealth Fighter Jets) ಭದ್ರತೆಗೆ ನಿಯೋಜಿಸಿದೆ. ಮೇ 27ರಂದು ಸಂಗ್ರಹಿಸಲಾದ ಉಪಗ್ರಹ ಚಿತ್ರಗಳು ಇದನ್ನು ದೃಢಪಡಿಸಿವೆ.

    ಟಿಬೆಟ್‌ನ 2ನೇ ಅತಿದೊಡ್ಡ ನಗರವಾದ ಶಿಗಾಟ್ಸೆಗೆ ಸೇವೆ ಸಲ್ಲಿಸುತ್ತಿರುವ ಮಿಲಿಟರಿ ಮತ್ತು ನಾಗರಿಕ ವಿಮಾನ ನಿಲ್ದಾಣದಲ್ಲಿ 6 ಚೀನೀ ವಾಯುಪಡೆಯ ಜೆ-20 ಸ್ಟೆಲ್ತ್ ಯುದ್ಧ ವಿಮಾನಗಳ ಉಪಸ್ಥಿತಿಯನ್ನು ಉಪಗ್ರಹ ಚಿತ್ರವು ಬಹಿರಂಗಪಡಿಸುತ್ತದೆ. ಈ ವಿಮಾನ ನಿಲ್ದಾಣವು ಸುಮಾರು ಸಮುದ್ರಮಟ್ಟದಿಂದ 12,408 ಅಡಿಗಳಷ್ಟು ಎತ್ತರದಲ್ಲಿದ್ದು, ವಿಶ್ವದ ಅತಿ ಎತ್ತರದ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.

    ಸದ್ಯ ಜೆ-20 ಯುದ್ಧ ವಿಮಾನಗಳನ್ನು ನಿಯೋಜನೆ ಮಾಡಿರುವ ಬಗ್ಗೆ ಭಾರತೀಯ ವಾಯುಪಡೆ (IAF) ಗಮನಕ್ಕೆ ಬಂದಿದ್ದು, ಪ್ರತಿಕ್ರಿಯಿಸಲು ನಿರಾಕರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಜೆ-20 ಸ್ಟೆಲ್ತ್ ಫೈಟರ್ ಜೆಟ್‌ನ ವಿಶೇಷತೆ ಏನು?
    ಮೈಟಿ ಡ್ರ‍್ಯಾಗನ್ ಎಂದೂ ಕರೆಯಲ್ಪಡುವ, ಡಬಲ್ ಇಂಜಿನ್ ಸಾಮರ್ಥ್ಯದ ಜೆ-20 ಸ್ಟೆಲ್ತ್ ಫೈಟರ್ ಜೆಟ್ ಅನ್ನು 2017ರಲ್ಲಿ ಸೇವೆಗೆ ಪರಿಚಯಿಸಲಾಯಿತು. ಜೆ-20 ಸ್ಟೆಲ್ತ್ ಯುದ್ಧ ವಿಮಾನವು ಚೀನಾದ ಅತ್ಯಂತ ಸುಧಾರಿತ ಕಾರ್ಯಾಚರಣೆಯ ಯುದ್ಧ ವಿಮಾನಗಳಲ್ಲಿ ಒಂದಾಗಿದೆ.

    ಚೀನಾದ ಪೂರ್ವ ಪ್ರಾಂತ್ಯಗಳಲ್ಲಿ ಭದ್ರತೆಗೆ ಇವುಗಳನ್ನು ನಿಯೋಜಿಸಿದೆ. ಈ ವಿಮಾನಗಳು ಇದೀಗ ಟಿಬೆಟ್‌ನ ಶಿಗಾಟ್ಸೆ ಮತ್ತು ಭಾರತೀಯ ಗಡಿ ಸಮೀಪದಲ್ಲಿ ಕಾರ್ಯಾಚರಣೆಗೆ ನಿಯೋಜನೆಗೊಂಡಿವೆ. ಇವು ಭಾರತ ನಿಯೋಜಿಸಿರುವ ಫ್ರಾನ್ಸ್ ನಿರ್ಮಿತ ರಫೇಲ್ (Rafale) ಯುದ್ಧ ವಿಮಾನಗಳಿಗೆ ಪೈಪೋಟಿ ನೀಡಲಿವೆ. ಚೀನಾ ಒಟ್ಟು 250 ಸ್ಟೆಲ್ತ್ ಫೈಟರ್‌ಗಳನ್ನು ಹೊಂದಿರಬಹುದು ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

    ಟಿಬೆಟ್‌ನಗರದಲ್ಲಿ ಚೀನಾ ಜೆ-20 ಯುದ್ಧ ವಿಮಾನ ನಿಯೋಜನೆ ಮಾಡಿರುವುದು ಇದೇ ಮೊದಲೇನಲ್ಲ. 2020 ಮತ್ತು 2023ರ ಸಂದರ್ಭದಲ್ಲೂ ಚೀನಾದ ಹೊಟಾನ್ ಪ್ರಾಂತ್ಯದ ಕ್ಸಿನ್‌ಜಿಯಾಂಗ್‌ನಲ್ಲಿ ಜೆಟ್‌ಗಳನ್ನು ನಿಯೋಜಿಸಲಾಗಿತ್ತು.

    ಕಳೆದ 5 ವರ್ಷಗಳಲ್ಲಿ ಟಿಬೆಟ್ ಮತ್ತು ಭಾರತದ ಗಡಿ ಭಾಗಗಳಲ್ಲಿ ಚೀನಾ ವ್ಯವಸ್ಥಿತವಾಗಿ ತನ್ನ ವಾಯುಶಕ್ತಿ ಸಾಮರ್ಥ್ಯವನ್ನು ನಿಯೋಜಿಸುತ್ತಾ ಬಂದಿದೆ. ಹೊಸ ವಾಯುನೆಲೆಗಳನ್ನು ನಿರ್ಮಿಸಿದ್ದು, ಅಸ್ತಿತ್ವದಲ್ಲಿರುವ ವಾಯುನೆಲೆಗಳಿಗೆ ಸಾಕಷ್ಟು ಮೂಲ ಸೌಕರ್ಯಗಳನ್ನು ಒದಗಿಸಿಕೊಟ್ಟಿದೆ. ಇದರೊಂದಿಗೆ ಚೀನಾ ಜೆ-20 ಮತ್ತು ಹೆಚ್-6 ಪರಮಾಣು ಬಾಂಬರ್‌ಗಳಂತಹ ವಿಮಾನಗಳನ್ನು ಈ ಗಡಿ ಪ್ರದೇಶಗಳಿಗೆ ನಿಯೋಜಿಸಲು ಪ್ರಾರಂಭಿಸಿದೆ ಎಂದು ಚೀನಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.