Tag: Statue of Liberty

  • ತನ್ನ ಹುಟ್ಟುಹಬ್ಬದಂದು ಪತಿ ಯುವಿಯನ್ನು ವಿಶೇಷ ಸ್ಥಳಕ್ಕೆ ಕರೆದುಕೊಂಡ ಹೋದ ಹಜೇಲ್

    ತನ್ನ ಹುಟ್ಟುಹಬ್ಬದಂದು ಪತಿ ಯುವಿಯನ್ನು ವಿಶೇಷ ಸ್ಥಳಕ್ಕೆ ಕರೆದುಕೊಂಡ ಹೋದ ಹಜೇಲ್

    ನ್ಯೂಯಾರ್ಕ್: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು, ತಮ್ಮ ಪತ್ನಿ ಹಜೇಲ್ ಕೀಚ್ ಅವರಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ.

    ಯುವರಾಜ್ ಸಿಂಗ್ ಅವರ ಪತ್ನಿ ನಟಿ ಹಜೇಲ್ ಕೀಚ್ ಅವರು ಇಂದು ತಮ್ಮ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯುವರಾಜ್ ಮತ್ತು ಹಜೇಲ್ ನ್ಯೂಯಾರ್ಕಿಗೆ ತೆರಳಿದ್ದು, ಅಲ್ಲಿ ಲಿಬರ್ಟಿ ಪ್ರತಿಮೆ ಬಳಿ ಸೆಲ್ಫಿ ಕ್ಲಿಕ್ಕಿಸಿ ಅದನ್ನು ತಮ್ಮ ಇಸ್ಟಾಗ್ರಾಮ್‍ನಲ್ಲಿ ಹಾಕಿ ಪ್ರೀತಿಯ ಪತ್ನಿಗೆ ಯುವಿ ವಿಶ್ ಮಾಡಿದ್ದಾರೆ.

    https://www.instagram.com/p/B9GVHuhjVoB/?utm_source=ig_embed

    ಪತ್ನಿ ಹಜೇಲ್ ಜೊತೆ ಲಿಬರ್ಟಿ ಪ್ರತಿಮೆ ಎದುರು ತೆಗೆದಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಯುವಿ, ಹೇ ಹಜೇಲ್ ಇಂದು ನಿನ್ನ ಹುಟ್ಟುಹಬ್ಬ, ನಿನ್ನ ಹುಟ್ಟಹುಬ್ಬಕ್ಕಾಗಿ, ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಕ್ಕೆ ಧನ್ಯವಾದಗಳು. ಇಂದು ನಿನಗೆ ಒಂದು ಒಳ್ಳೆಯ ದಿನವಾಗಿರಲಿ ಎಂದು ಪ್ರೀತಿಯ ಹೆಂಡತಿಗೆ ಹುಟ್ಟುಹಬ್ಬದ ವಿಶ್ ಮಾಡಿದ್ದಾರೆ.

    1987 ಫೆಬ್ರವರಿ 28 ರಂದು ಇಂಗ್ಲೆಂಡಿನ ಎಸೆಕ್ಸ್ ನಲ್ಲಿ ಜನಿಸಿದ ಹಜೇಲ್ ಕೀಚ್, 2016 ನವೆಂಬರ್ 30 ರಂದು ಯುವರಾಜ್ ಸಿಂಗ್ ಅವರನ್ನು ಮದುವೆಯಾಗಿದ್ದರು. ಬ್ರಿಟಿಷ್ ನಟಿ ಮತ್ತು ಮಾಡೆಲ್ ಆಗಿದ್ದ ಹಜೇಲ್ ಕೀಚ್ ಅವರು, ಮೊದಲ ಬಾರಿಗೆ 2007ರಲ್ಲಿ ತಮಿಳಿನ ಬಿಲ್ಲಾ ಚಿತ್ರದಲ್ಲಿ ನಟಿಸಿದ್ದರು. ನಂತರ ಅವರು ಸಲ್ಮಾನ್ ಖಾನ್ ಅಭಿನಯದ ಬಾಡಿಗಾರ್ಡ್ ಚಿತ್ರದಲ್ಲಿ ನಟಿಸಿ ಜನಪ್ರಿಯರಾಗಿದ್ದರು.

    ಇತ್ತೀಚೆಗೆ ಯುವರಾಜ್ ಸಿಂಗ್ ಅವರು ಪತ್ನಿ ಹಾಗೂ ಸಹೋದರ ಜೋರಾವರ್ ಸಿಂಗ್ ಅವರ ಜೊತೆ ಒಂದು ವೆಬ್ ಸರಣಿಯಲ್ಲಿ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ಇದರಲ್ಲಿ ಅವರ ತಾಯಿ ಶಬ್ನಮ್ ಸಿಂಗ್ ಕೂಡ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈ ಗಾಳಿ ಸುದ್ದಿಗೆ ತೆರೆ ಎಳೆದಿದ್ದ ಯುವರಾಜ್ ಸಿಂಗ್ ಅವರು, ನಾನು ಯಾವುದೇ ವೆಬ್ ಸೀರಿಸ್ ನಟನೆ ಮಾಡುತ್ತಿಲ್ಲ ಎಂದು ಹೇಳಿದ್ದರು.

    ಭಾರತ ತಂಡದ ಪರ 17 ವರ್ಷ ಅಮೋಘವಾಗಿ ಆಟವಾಡಿದ್ದ ಯುವರಾಜ್ ಸಿಂಗ್, ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. 2011 ರ ವಿಶ್ವಕಪ್‍ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದ ಯುವಿ, ಇಂಡಿಯಾಗೆ ಕಪ್ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಯಾವುದೇ ವಿದಾಯ ಪಂದ್ಯಗಳನ್ನು ಆಡದೇ ನಿವೃತ್ತಿ ಘೋಷಿಸಿದ್ದು, ಅವರ ಅಭಿಮಾನಿಗಳಿಗೆ ಬೇಸರ ತರಿಸಿತ್ತು.

    https://www.instagram.com/p/B8lBH-8DXA2/

  • ಅಮೆರಿಕದ ಲಿಬರ್ಟಿ ಪ್ರತಿಮೆಯನ್ನು ಹಿಂದಿಕ್ಕಿದ ಏಕತಾ ಪ್ರತಿಮೆ

    ಅಮೆರಿಕದ ಲಿಬರ್ಟಿ ಪ್ರತಿಮೆಯನ್ನು ಹಿಂದಿಕ್ಕಿದ ಏಕತಾ ಪ್ರತಿಮೆ

    ಅಹ್ಮದಾಬಾದ್: ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಏಕತಾ ಪ್ರತಿಮೆ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಅಮೆರಿಕದ ಸ್ಟ್ಯಾಚು ಆಫ್ ಲಿಬರ್ಟಿಯನ್ನು ಹಿಂದಿಕ್ಕಿದೆ.

    ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಏಕತಾ ಪ್ರತಿಮೆ ವಿಶ್ವಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಸುಮಾರು 133 ವರ್ಷ ಹಳೆಯದಾದ ಅಮೆರಿಕದ ಸ್ಟ್ಯಾಚು ಆಫ್ ಲಿಬರ್ಟಿಯನ್ನು ಹಿಂದಿಕ್ಕಿದೆ. ಏಕತಾ ಪ್ರತಿಮೆಯನ್ನು ಕಣ್ತುಂಬಿಕೊಳ್ಳಲು ಪ್ರತಿನಿತ್ಯ ಸರಾಸರಿ 15 ಸಾವಿರ ಜನ ಭೇಟಿ ನೀಡುತ್ತಿದ್ದಾರೆ. ಈ ಮೂಲಕ ಸ್ಥಾಪನೆಯಾದ ಪ್ರಥಮ ವರ್ಷದಲ್ಲೇ ಏಕತಾ ಪ್ರತಿಮೆ ಅತಿ ಹೆಚ್ಚು ಜನರನ್ನು ಆಕರ್ಷಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಪ್ರತಿನಿತ್ಯ ಭೇಟಿ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನವೆಂಬರ್ 1, 2018ರಿಂದ ಅಕ್ಟೋಬರ್ 31, 2019ರ ವರೆಗೆ ಪ್ರವಾಸಿಗರ ಭೇಟಿಯಲ್ಲಿ ಸರಾಸರಿ ಶೇ.74 ರಷ್ಟು ಹೆಚ್ಚಿದೆ. ಇದೀಗ ಎರಡನೇ ವರ್ಷದ ಮೊದಲ ತಿಂಗಳಲ್ಲಿ ಪ್ರತಿದಿನ ಸರಾಸರಿ 15,036 ಜನ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

    ಅಲ್ಲದೆ ವಾರಾಂತ್ಯದ ದಿನಗಳಲ್ಲಿ ಇದು ಸುಮಾರು 22,430ಕ್ಕೆ ಏರುತ್ತದೆ. ಅಮೆರಿಕದ ನ್ಯೂಯಾರ್ಕ್‍ನ ಸ್ಟ್ಯಾಚು ಆಫ್ ಲಿಬರ್ಟಿ ಪ್ರತಿಮೆಯು ನಿತ್ಯ 10 ಸಾವಿರ ಪ್ರವಾಸಿಗರನ್ನು ಮಾತ್ರ ಆಕರ್ಷಿಸುತ್ತಿದೆ ಎಂದು ಸರ್ದಾರ್ ಸರೋವರ ನಿಗಮ ಲಿ. ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಏಕತೆಯ ಪ್ರತೀಕವಾಗಿ ಭಾರತದ ಮೊದಲ ಗೃಹ ಸಚಿವರಾಗಿದ್ದ ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಪಡೆದ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಪುತ್ಥಳಿಯನ್ನು ನರ್ಮದಾ ನದಿಯ ತಟದಲ್ಲಿ ಸ್ಥಾಪಿಸಲಾಗಿದೆ. ಇದು 182 ಮೀಟರ್ ಎತ್ತರವಿದ್ದು, ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ನರ್ಮದಾ ನದಿಯ ತಟದ ಸರ್ದಾರ್ ಸರೋವರ ಡ್ಯಾಂ ಬಳಿ ಇದ್ದು, ಗುಜರಾತ್‍ನ ಕೇವಾಡಿಯಾ ಕಾಲೋನಿ ಬಳಿ ಸ್ಥಾಪಿತವಾಗಿದೆ.

    ಪ್ರವಾಸಿಗರ ಭೇಟಿಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಅದರಲ್ಲೂ ನವೆಂಬರ್ 2019ರಲ್ಲಿ ಹೆಚ್ಚು ಜನ ಭೇಟಿ ನೀಡಿದ್ದಾರೆ. ಈ ವರ್ಷ ನವೆಂಬರ್ 30ರ ವರೆಗೆ ಒಟ್ಟು 30.91 ಲಕ್ಷ ಪ್ರವಾಸಿಗರು ಕೆವಾಡಿಯಾಗೆ ಭೇಟಿ ನೀಡಿದ್ದಾರೆ. ಒಟ್ಟು 85.57 ಕೋಟಿ ರೂ.ಗಳ ಆದಾಯ ದಾಖಲಾಗಿದೆ ಎಂದು ಸರ್ದಾರ್ ಸರೋವರ ನಿಗಮ ಲಿ. ತಿಳಿಸಿದೆ.

    ಅಲ್ಲದೆ ಪ್ರವಾಸಿಗರನ್ನು ಆಕರ್ಷಿಸಲು ಜಂಗಲ್ ಸಫಾರಿ, ಮಕ್ಕಳ ನ್ಯೂಟ್ರಿಷನ್ ಪಾರ್ಕ್, ಕ್ಯಾಕ್ಟಸ್ ಗಾರ್ಡನ್, ಚಿಟ್ಟೆಗಳ ಗಾರ್ಡನ್, ಎಕತಾ ನರ್ಸರಿ, ದಿನೋ ಟ್ರೈಯಲ್, ರಿವರ್ ರ್ಯಾಫ್ಟಿಂಗ್, ಬೋಟಿಂಗ್ ಅಲ್ಲದೆ ವಿವಿಧ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ.

    ಏಕತಾ ಪ್ರತಿಮೆ ಅಹಮದಾಬಾದ್ ನಿಂದ 200 ಕಿ.ಮೀ ದೂರದಲ್ಲಿರುವ ಸರ್ದಾರ್ ಸರೋವರ ಅಣೆಕಟ್ಟಿನ ಬಳಿ ನಿರ್ಮಾಣವಾಗಿದೆ. ನರ್ಮದಾ ಜಿಲ್ಲೆಯ ನರ್ಮದಾ ಡ್ಯಾಮ್‍ನಿಂದ 3.2 ಕಿ.ಮೀ ದೂರದಲ್ಲಿರುವ `ಸಾಧು ಬೆಟ್’ ದ್ವೀಪದಲ್ಲಿ ಯೋಜನಾ ಸ್ಥಳವಿದೆ. ಅಕ್ಟೋಬರ್ 31ರಂದು ಸರ್ದಾರ್ ವಲ್ಲಭ್‍ಭಾಯಿ ಪಟೇಲ್ ಅವರ ಜನ್ಮದಿನ. ಹೀಗಾಗಿ ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆಯನ್ನು ಅನಾವರಣ ಮಾಡಿದ್ದರು.

    ಈ ಏಕತಾ ಪ್ರತಿಮೆ 182 ಮೀಟರ್ ಎತ್ತರವಿದ್ದು, ನಿರ್ಮಾಣಕ್ಕೆ 2 ಸಾವಿರದ 300 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. 25 ಸಾವಿರ ಟನ್ ಕಬ್ಬಿಣ ಬಳಕೆ ಮಾಡಲಾಗಿದ್ದು, 90 ಸಾವಿರ ಟನ್ ಸಿಮೆಂಟ್ ಬಳಕೆ ಮಾಡಲಾಗಿದೆ. ಇದಕ್ಕಾಗಿ 250 ಎಂಜಿನಿಯರ್ಸ್, 3,400 ಕಾರ್ಮಿಕರು ಬರೋಬ್ಬರಿ 33 ತಿಂಗಳ ಕಾಲ ಶ್ರಮವಹಿಸಿದ್ದಾರೆ. ಲೋಹ ಅಭಿಯಾನದ ಮೂಲಕ 1.69 ಲಕ್ಷ ಲೋಹದ ತುಣುಕುಗಳನ್ನು ದೇಶದೆಲ್ಲೆಡೆಯಿಂದ ಸಂಗ್ರಹಿಸಲಾಗಿತ್ತು. ಏಕತಾ ಪ್ರತಿಮೆ ಭಾರತದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ತನ್ನ ವಿಶೇಷತೆಯಿಂದ ಇಂದು ಬ್ರಿಟನ್‍ನ ಪ್ರತಿಷ್ಠ ಪ್ರಶಸ್ತಿಯ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.