Tag: States

  • ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ – ಯಾವ ರಾಜ್ಯದಲ್ಲಿದೆ? ಸ್ಥಳ ಪುರಾಣ ಏನು?

    ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ – ಯಾವ ರಾಜ್ಯದಲ್ಲಿದೆ? ಸ್ಥಳ ಪುರಾಣ ಏನು?

    ನೀಲಕಂಠ, ಶಂಕರ, ಪರಮಾತ್ಮ, ಕರುಣಾಸಾಗರ, ಭೋಲೆನಾಥನಾಗಿ ಸರ್ವರ ಮನದಲ್ಲೂ ನೆಲೆಸಿರುವ ಶಿವ ಅತಿ ಭಕ್ತಿ ಹಾಗು ಶೃದ್ಧೆಗಳಿಂದ ಪೂಜಿಸಲ್ಪಡುವ ಮಹಾದೇವ. ಶಿವನಿಗೆ ಮುಡಿಪಾದ ಅದೇಷ್ಟೊ ಅಸಂಖ್ಯಾತ ದೇವಾಲಯಗಳು ನಮ್ಮ ಭಾರತ ದೇಶದಲ್ಲಿವೆ. ಇದೆ ರೀತಿಯಾಗಿ ಶಿವನ 12 ಜ್ಯೋತಿರ್ಲಿಂಗಗಳು ಹಿಂದುಗಳ ಪಾಲಿಗೆ ಅತ್ಯಂತ ಪವಿತ್ರವಾಗಿದ್ದು ಈ 12 ಜ್ಯೋತಿರ್ಲಿಂಗಗಳನ್ನು ದರ್ಶಿಸಿದರೆ ಪರಮೇಶ್ವರನ ಕೃಪಾಕಟಾಕ್ಷ ದೊರೆತು ಮೋಕ್ಷ ಲಭಿಸುತ್ತೆ ಅನ್ನೋ ನಂಬಿಕೆ ಇದೆ. 182 ವರ್ಷಗಳ ಬಳಿಕ ಬಂದಿರೋ ಈ ಪವಿತ್ರ ಶಿವರಾತ್ರಿ ಹೊತ್ತಲ್ಲಿ.. ದೇಶದಲ್ಲಿ ಇರೋ ದ್ವಾದಶ ಜ್ಯೋತಿರ್ಲಿಂಗಗಳು. ಅವು ಇರೋ ರಾಜ್ಯಗಳು, ಅವುಗಳ ಸ್ಥಳ ಮಹಿಮೆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ಓದಿ

    ದೇಶದಲ್ಲಿ ಮೂಲತಃ 64 ಜ್ಯೋತಿರ್ಲಿಂಗಗಳಿವೆಯೆಂದು ನಂಬಲಾಗಿದ್ದು ಅವುಗಳಲ್ಲಿ 12 ಜ್ಯೋತಿರ್ಲಿಂಗಗಳು ಅತೀ ಪವಿತ್ರವಾದವುಗಳೆಂದು ಪರಿಗಣಿಸಲಾಗಿದೆ.

    1. ಸೋಮನಾಥೇಶ್ವರ, ಗುಜರಾತ್
    ಗುಜರಾತ್ ರಾಜ್ಯದ ಸೌರಾಷ್ಟ್ರ ಭಾಗದ ವೇರಾವಳ್ ಪ್ರದೇಶದ ಪ್ರಭಾಸ ಕ್ಷೇತ್ರದಲ್ಲಿ ಸೋಮನಾಥ ಜ್ಯೋತಿರ್ಲಿಂಗವಿದೆ. ಇದನ್ನು ಅನಂತಮಯ ದೇಗುಲವೆಂದು ಬಣ್ಣಿಸಲಾಗಿದೆ. ಈ ದೇವಾಲಯ ಬಹಳ ಪುರಾತನವಾದುದು ಮತ್ತು ಶತಮಾನಗಳ ಇತಿಹಾಸವುಳ್ಳದ್ದು. ಬಹಳ ಶ್ರೀಮಂತವಾದ ದೇಗುಲ ಎಂಬ ಖ್ಯಾತಿ ಪಡೆದಿದೆ. ವಿಶಾಲವಾದ ಆವರಣದಲ್ಲಿ 56 ಕಂಬಗಳ ಮೇಲೆ ದೇವಾಲಯ ರಚನೆಯಾಗಿದೆ. ಇದು ಅದ್ಭುತ ವಾಸ್ತು ಶಿಲ್ಪ, ಉತ್ತಮ ಕೆತ್ತನೆಗಳ ಸಂಗಮವಾಗಿದೆ. ಇದು ಹೊಸದಾಗಿ ನಿರ್ಮಿಸಿದ ಅಥವಾ ಜೀರ್ಣೋದ್ಧಾರ ಮಾಡಿದ ದೇವಾಲಯ. ಪ್ರಾಚೀನ ದೇವಾಲಯದ ಕಂಬಗಳ ಮೇಲೆ ಮುತ್ತುರತ್ನಗಳನ್ನು ಕೂರಿಸಿದ್ದರೆಂದೂ ಇಡೀ ಮಂದಿರ ಬೆಳ್ಳಿ ಬಂಗಾರದಿಂದ ಶೋಭಿಸುತ್ತಿತೆಂದೂ, ಬಂಗಾರದ ಕಳಸವಿತ್ತೆಂದೂ ಹೇಳುತ್ತಾರೆ. ಆದರೆ ಈ ದೇವಾಲಯದ ಮೇಲೆ ಅನೇಕ ಬಾರಿ ಅನ್ಯ ಮತೀಯರ ದಾಳಿ ನಡೆದು ಆ ಐಶ್ವರ್ಯವನ್ನೆಲ್ಲಾ ಕೊಳ್ಳೆ ಹೊಡೆದಿದ್ದಾರೆಂದು ಇತಿಹಾಸ ಹೇಳುತ್ತದೆ. ಆದರೆ ದಾಳಿಯ ಬಳಿಕ ಸೋಮನಾಥ ದೇವಾಲಯವನ್ನು ಪುನರ್‍ನಿರ್ಮಾಣ ಮಾಡಲಾಯಿತು ಎನ್ನುತ್ತದೆ ಇತಿಹಾಸ.

    ಸ್ಥಳ ಪುರಾಣ: ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ಶ್ರೇಷ್ಠರಾರು ಎಂಬ ಚರ್ಚೆ ನಡೆದಾಗ ಶೀವನು ಮೂರು ಜ್ಯೋತಿಗಳ ಕಂಬಗಳನ್ನು ಸೃಷ್ಠಿಸಿದನು. ವಿಷ್ಣು ಮತ್ತು ಬ್ರಹ್ಮರಿಗೆ ಅದರ ಮೇಳಿನ ಮತ್ತು ಕೆಳ ತುದಿಗಳನ್ನು ಕಂಡುಹಿಡಿಯಲು ಸೂಚಿಸಿದನು. ವಿಷ್ಣುವು ಅದರ ಎರಡೂ ತುದಿಗಳನ್ನು ಕಂಡುಹಿಡಿಯಲಾಗದೇ ಹಿಂದಿರುಗಿದ.. ಆದರೆ ಬ್ರಹ್ಮನು ತಾನು ನೋಡಿರುವುದಾಗಿ ಸುಳ್ಳು ಹೇಳಿದ. ಆದರೆ ಸತ್ಯ ಹೇಳಿದ ವಿಷ್ಣುವೇ ಪೂಜೆಗೆ ಅರ್ಹ ಎಂದು ಹೇಳಿದನು. ಆ ಜ್ಯೋತಿಯೇ ಈ ಜ್ಯೊತಿರ್ಲಿಂಗ ಎಂದು ನಂಬಲಾಗಿದೆ.

    2. ಉಜ್ಜೈನಿ ಮಹಾಕಾಳೇಶ್ವರ, ಮಧ್ಯಪ್ರದೇಶ
    ಮಧ್ಯಪ್ರದೇಶದ ಪುರಾತನ ಹಾಗು ಪವಿತ್ರ ನಗರವಾದ ಉಜ್ಜಯಿನಿಯಲ್ಲಿ ಮಹಾಕಾಲೇಶ್ವರ ಜ್ಯೋತಿರ್ಲಿಂಗವಿದೆ. ಸ್ವಯಂಭೂ ಲಿಂಗ ರೂಪದ ಮಹಾಕಾಲೇಶ್ವರ ದೇವಸ್ಥಾನವು ರುದ್ರ ಸಾಗರ ಕೆರೆಯ ತಟದಲ್ಲಿದೆ. ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಾಲಯವು ವಿಶಾಲವಾದ ಆವರಣದಲ್ಲಿದೆ. ಅದಕ್ಕೆ ಬಹಳ ಎತ್ತರವಾದ ದೊಡ್ಡ ಗೋಪುರವಿದೆ. ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದರ್ಶನಕ್ಕೆ ಉದ್ದನೆಯ ಕ್ಯೂ ಇರುತ್ತದೆ. ಮಂದಿರದ ಮಧ್ಯದಲ್ಲಿ ಸುಂದರವಾದ ಕೊಳವಿದೆನೀರಿನ ಕಾರಂಜಿ ಮನಸ್ಸಿಗೆ ಆನಂದವನ್ನೀಯುತ್ತದೆ.

    ಸ್ಥಳ ಪುರಾಣ : ಶ್ರೀಮಹಾಕಾಳೇಶ್ವರ ಜ್ಯೋತಿರ್ಲಿಂಗವು ಚಿಕ್ಕದಾಗಿದೆ. ಸ್ವತಃ ಅಭಿಷೇಕ ಮಾಡಿ ಪೂಜೆ ಮಾಡಬಹುದು. ಶಿವಲಿಂಗವನ್ನು ಸ್ಪರ್ಶಿಸಿ ಪುಣ್ಯವನ್ನೂ ಪಡೆಯಬಹುದು. ಸಾಲು ಇರುವುದರಿಂದ ಹೆಚ್ಚು ಹೊತ್ತು ನಿಲ್ಲುವಂತಿಲ್ಲ. ವಿಶೇಷವೆಂದರೆ ಇಲ್ಲಿ ಎರಡು ನಂದಾದೀಪಗಳು ನಿರಂತರವಾಗಿ ಉರಿಯುತ್ತಾ ಬಂದಿವೆ ಎನ್ನಲಾಗುತ್ತದೆ. ಈ ದೇವಸ್ಥಾನಕ್ಕೆ ಪೋಲೀಸರ ಬಲವಾದ ಕಾವಲಿದೆ. ಮಂದಿರದ ಮೇಲು ಭಾಗದಲ್ಲಿ ನಾಗ ಮಂದಿರವಿದೆ. ನೂರು ಕಿಲೋಗ್ರಾಂ ಬೆಳ್ಳಿಯಿಂದ ಮಾಡಿದ ರುದ್ರ ಯಂತ್ರವಿದೆ.

    3. ಕೇದಾರನಾಥ, ಉತ್ತರಾಖಂಡ್
    ಉತ್ತರಾಖಂಡ್ ರಾಜ್ಯದ ಹಿಮಾಲಯ ಶ್ರೇಣಿಯ ಗಡ್ವಾಲ್ ಪ್ರದೇಶದ ಮಂದಾಕಿನಿ ನದಿ ಬಳಿಯಿರುವ ಕೇದಾರನಾಥ ಒಂದು ಪ್ರಸಿದ್ಧವಾದ ಜ್ಯೋತಿರ್ಲಿಂಗವಾಗಿದೆ. ಈ ಜ್ಯೋತಿರ್ಲಿಂಗವು ವರ್ಷದ ಏಪ್ರಿಲ್ ಕೊನೆಯಿಂದ ನವಂಬರ್ ತಿಂಗಳಿನವರೆಗೆ ಮಾತ್ರ ತೆರೆದಿರುತ್ತದೆ. ಕೇದಾರನಾಥದಲ್ಲಿ ಮೂಲ ದೇವಾಲಯವು ಕಲ್ಲಿನ ಸುಂದರ ಶಿಲ್ಪವಾಗಿದ್ದು ಇದನ್ನು ಸುಮಾರು 8ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಸ್ಥಾಪಿಸಿದರೆಂದು ಹೇಳಲಾಗುತ್ತಿದೆ. ಇದು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲೊಂದು.

    ಸ್ಥಳಪುರಾಣ: ಕೇದಾರನಾಥವು ಚತುರ್ಧಾಮ ಯಾತ್ರೆಯಲ್ಲಿ ಇದೊಂದು ಮುಖ್ಯ ಯಾತ್ರಾ ಸ್ಥಳ. ಕೇದಾರನಾಥ ಯಾತ್ರೆಯು `ಭಾರತ-ಚೀನಾ’ ಗಡಿಗೆ ಅಂಟಿಕೊಂಡಂತಿರುವ `ಗೌರಿಕುಂಡ’ವೆಂಬ ಪ್ರದೇಶದಿಂದ ಪ್ರಾರಂಭವಾಗುತ್ತದೆ. ಇನ್ನು ದೇವಾಲಯದ ಮುಖ್ಯದ್ವಾರದಿಂದ ಒಳಗೆ ಬಂದೊಡನೆ ಪ್ರಾಕಾರದಲ್ಲಿ ಪಾಂಡವರ, ಕೃಷ್ಣ, ನಂದಿ ಮತ್ತು ವೀರಭದ್ರನ ಮೂರ್ತಿಗಳಿವೆ. ಈ ದೇವಾಲಯ ವಿಚಿತ್ರವೆಂದರೆ ತ್ರಿಕೋನಾಕಾರದ ಕಲ್ಲಿನ ಮೇಲೆ ಕೆತ್ತಿರುವ ಮಾನವನ ತಲೆ. ಈ ದೇವಸ್ಥಾನದ ಹಿಂದೆಯೇ ಶಂಕರರ ಸಮಾಧಿ ಮಂದಿರವಿದೆ. ವಿಶೇಷವೆಂದರೆ ಇದರ ಮುಖ್ಯಸ್ಥರು ಕರ್ನಾಟಕದವರೆಂಬುದು ಹೆಮ್ಮೆಯ ಸಂಗತಿ.

    4. ಭೀಮಾಶಂಕರ, ಮಹಾರಾಷ್ಟ್ರ
    ಜ್ಯೋತಿರ್ಲಿಂಗ ತಾಣವಾದ ಭೀಮಾಶಂಕರ ದೇವಸ್ಥಾನವು ಮಹಾರಾಷ್ಟ್ರ ರಾಜ್ಯದ ಪುಣೆ ಬಳಿಯಿರುವ ಖೇದ್ ತಾಲೂಕಿನಲ್ಲಿದೆ. ಭೀಮಾ ನದಿ ತಟದಲ್ಲಿ ಶಿವನು ಭೀಮಾಶಂಕರನಾಗಿ ನೆಲೆಸಿ ಭಕ್ತರನ್ನು ಆಶಿರ್ವದಿಸುತ್ತಿದ್ದಾನೆ. ಭೀಮಾಶಂಕರ ದೇವಾಲಯವು, ಪೂನಾ ಸಮೀಪದ ಖೇಡ್ ನ ವಾಯವ್ಯ ದಿಕ್ಕಿನಲ್ಲಿ 50 ಕಿಲೋಮೀಟರ್ ದೂರದಲ್ಲಿರುವ ಭೋರ್ ಗಿರಿ ಎಂಬ ಹಳ್ಳಿಯಲ್ಲಿ ಸ್ಥಾಪಿತವಾಗಿದೆ. ಭೀಮಾಶಂಕರ ದೇವಾಲಯದ ತಟದಲ್ಲಿ ಭೀಮಾ ನದಿಯ ಉಗಮವಾಗುತ್ತದೆ.

    ಸ್ಥಳ ಪುರಾಣ : ಭೀಮಾಶಂಕರವು ತ್ರಿಪುರಾಸುರನನ್ನು ಸಂಹಾರ ಮಾಡಿದ ಸ್ಥಳ ಇದಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜ ಮತ್ತು ಆತನ ಮಗ ಈ ಜ್ಯೋತಿರ್ಲಿಂಗ ದರ್ಶನ ಮಾಡುತ್ತಿದ್ದರು. ದಶಾವತಾರದ ಮೂರ್ತಿಗಳು, ಸುಂದರ ಕೆತ್ತನೆಯ ಶಿಲ್ಪಕಲೆಯನ್ನು ಕಾಣಬಹುದು. ಇನ್ನು ಮಂದಿರದ ಹತ್ತಿರವೇ ಶನಿದೇವರ ಮಂದಿರದಲ್ಲಿ ಐದು ಮಣ ಭಾರದ ಮಹಾದ್ಭುತ ಗಂಟೆಯೊಂದು ಕ್ರಿ.ಶ. 1721 ಎಂದು ಇಸವಿಯನ್ನು ಕೆತ್ತಲಾಗಿದೆ. ಇಲ್ಲಿ ಪ್ರಕೃತಿ ಸೌಂದರ್ಯ ಸವಿದು ಪರಶಿವನ ಅಡಿಗಳಿಗೆ ವಂದಿಸುವುದು ಮಹಾ ಆನಂದದಾಯಕ. 3000 ಅಡಿಗಳ ಎತ್ತರದಿಂದ ಕೊಂಕಣ ತೀರವನ್ನು ವೀಕ್ಷಿಸುವುದೇ ರೋಮಾಂಚಕ ಅನುಭವ.

    5. ಕಾಶಿ ವಿಶ್ವನಾಥ, ಉತ್ತರ ಪ್ರದೇಶ
    ಉತ್ತರ ಪ್ರದೇಶದ ವಾರಣಾಸಿ ಅಥವಾ ಕಾಶಿಯಲ್ಲಿ ಶಿವನು ವಿಶ್ವನಾಥನಾಗಿ ಭಕ್ತರನ್ನು ಹರಸುತ್ತಿದ್ದಾನೆ. ಇದೊಂದು ಬಹು ಪ್ರಖ್ಯಾತ ಹಿಂದು ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ. ದಕ್ಷಿಣ ಮಧುರೈ ನ ರಾಜ ಹರಿಕೇಸರಿ ಪರಕ್ಕಿರಮ್ ಪಾಂಡ್ಯನ್ ಕಾಶಿಯಿಂದ ಒಂದು ಶಿವಲಿಂಗವನ್ನು ತಂದು ತನ್ನ ರಾಜ್ಯದಲ್ಲಿ ಪ್ರತಿಷ್ಠಾಪಿಸಿದನು. ಹೀಗೆ ಈ ಸ್ಥಳಕ್ಕೆ ಆ ಹೆಸರು ಬಂದಿತು. 15 ಮತ್ತು 16 ನೆಯ ಶತಮಾನದಲ್ಲಿ ಪಾಂಡ್ಯ ರಾಜ ಹಾಗೂ ತಿರುಮಲೈನಾಯ್ಕರ್ ಈ ಶಿವ ದೇವಾಲಯವನ್ನು ಮತ್ತಷ್ಟು ವಿಸ್ತರಿಸಿದರು ಹಾಗೂ ಕಾಶಿ ವಿಶ್ವನಾಥ ಸ್ವಾಮಿ ದೇವಾಲಯ ಎಂದು ಕರೆದಿದ್ದರು.

    ಸ್ಥಳ ಪುರಾಣ: ಕಾಶಿ ವಿಶ್ವನಾಥ ದೇವಾಲಯವನ್ನು ಹಲವು ಬಾರಿ ನವೀಕರಣ ಮಾಡಲಾಗಿದೆ. ಮೊದಲ ಸಲ ಆನೈಪ್ಪ ಗಾನಿ ಇದನ್ನು ಪುನರ್ ನಿರ್ಮಿಸಿದನು. ನಾಯ್ಕರ್‍ಗಳು 1659 ರಲ್ಲಿ ಈ ದೇವಾಲಯವನ್ನು ಪುನರ್ ನವೀಕರಣ ಮಾಡಿದರು. ಮುತ್ತು ವೀರಪ್ಪ ನಾಯ್ಕರ್ ಈ ದೇವಾಲಯಕ್ಕೆ ರಥವನ್ನು ನೀಡಿದನು. ಇದನ್ನು ಈಗಲೂ ಉತ್ಸವದ ಸಮಯದಲ್ಲಿ ಬಳಸಲಾಗುತ್ತದೆ.

    6. ತ್ರ್ಯಂಬಕೇಶ್ವರ, ಮಹಾರಾಷ್ಟ್ರ
    ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬಕ ಪಟ್ಟಣದಲ್ಲಿರುವ ತ್ರ್ಯಂಬಕೇಶ್ವರ ದೇವಸ್ಥಾನವು ಪುರಾತನ ಪ್ರಸಿದ್ಧ ಜ್ಯೋತಿರ್ಲಿಂಗ ದೇವಾಲಯವಾಗಿದೆ. ನಾಸಿಕ್ ಪಟ್ಟಣದಿಂದ 28 ಕಿ.ಮೀ ದೂರದಲ್ಲಿರುವ ತ್ರ್ಯಂಬಕೇಶ್ವರವು ಭಾರತದ ಅತಿ ಉದ್ದನೆಯ ನದಿಯಾದ ಗೋದಾವರಿ ನದಿ ಮೂಲದ ಸಮೀಪ ಸ್ಥಿತವಿದೆ.

    ಸ್ಥಳ ಪುರಾಣ : ಗೌತಮ ಮಹರ್ಷಿಗಳ ತಪೋಭೂಮಿ ಈ ಬ್ರಹ್ಮ ಪರ್ವತ. ಪತ್ನಿ ಅಹಲ್ಯೆಯೊಡನೆ ತಪಸ್ಸು ಮಾಡಿ ವರುಣನು ಪ್ರತ್ಯಕ್ಷವಾಗುವಂತೆ ಮಾಡಿದ ಪುಣ್ಯ ಸ್ಥಳ. ಇದನ್ನು ಗೌತಮೀ ತಟ ಎಂದು ಕರೆದು ಭಗವಾನ್ ಶಂಕರನು ಜ್ಯೋತಿರ್ಲಿಂಗ ರೂಪದಲ್ಲಿದ್ದಾನೆ. ಇಲ್ಲಿಯ ವಿಶೇಷವೆಂದರೆ ಲಿಂಗದಲ್ಲಿ ಜಲಹರಿ ಇಲ್ಲ. ಬದಲಿಗೆ ಒರಳಿನಾಕಾರದ ಗುಳಿ ಇದ್ದು, ಇದರಲ್ಲಿ 3 ಲಿಂಗಗಳಿವೆ. ಈ ಮೂರೂ ಲಿಂಗಗಳು ಬ್ರಹ್ಮ, ವಿಷ್ಣು, ಮಹೇಶ್ವರರ ಸಂಕೇತವಾಗಿವೆ. ಆದ್ದರಿಂದಲೇ ಈ ಕ್ಷೇತ್ರಕ್ಕೆ ತ್ರ್ಯಂಬಕೇಶ್ವರ ಎಂಬ ಹೆಸರು ಬಂದಿದೆ.

    7. ಶ್ರೀಶೈಲ ಮಲ್ಲಿಕಾರ್ಜುನ, ಆಂಧ್ರ ಪ್ರದೇಶ
    ಶ್ರೀಶೈಲ ಮಲ್ಲಿಕಾರ್ಜನ ಜ್ಯೋತಿರ್ಲಿಂಗವು ಆಂಧ್ರಪ್ರದೇಶದ ಶ್ರೀಶೈಲದಲ್ಲಿದೆ. ಇದು ಜ್ಯೋತಿರ್ಲಿಂಗವಲ್ಲದೇ ಮಹಾ ಶಕ್ತಿ ಪೀಠವೆಂದು ಹೆಸರಾಗಿದೆ.. ಇದು ಕರ್ನೂಲು ಜಿಲ್ಲೆಯ ದ್ರೋಣಾಚಲ ಬೆಟ್ಟಗಳ ಸಾಲಿನಲ್ಲಿದೆ. ಜ್ಯೋತಿರ್ಲಿಂಗದ ಪಕ್ಕದಲ್ಲೇ ಕೃಷ್ಣಾನದಿ ಹರಿಯುತ್ತದೆ. ಇದು ಶೈವರಿಗೂ, ಕನ್ನಡನಾಡಿನ ವೀರಶೈವರಿಗೂ ಮುಖ್ಯ ಯಾತ್ರಾಸ್ಥಳವಾಗಿದೆ.

    ಸ್ಥಳ ಪುರಾಣ: ಕನ್ನಡನಾಡಿನ ಶಿವಭಕ್ತೆಯೂ ಶರಣೆಯೂ ಆದ ಅಕ್ಕಮಹಾದೇವಿ ಸರ್ವಸಂಗ ಪರಿತ್ಯಾಗಳಾಗಿ ಚೆನ್ನಮಲ್ಲಿಕಾರ್ಜುನನ್ನೇ ತನ್ನ ಪತಿಯೆಂದು ಅವನನ್ನು ಅರಸುತ್ತಾ ಶ್ರೀಶೈಲಕ್ಕೆ ಬಂದು ಅಲ್ಲಿನ ಕದಳೀವನದಲ್ಲಿ ಶಿವನಲ್ಲಿ ಐಕ್ಯಳಾದಳು ಎನ್ನುತ್ತದೆ ಇತಿಹಾಸ. ವಿಶೇಷವೆಂದರೆ ಶ್ರೀಶೈಲ ಮಲ್ಲಿಕಾರ್ಜುನನ ಕ್ಷೇತ್ರದ ಪಕ್ಕದಲ್ಲೇ ಶರಣಶ್ರೇಷ್ಟರಾದ ಅಲ್ಲಮಪ್ರಭುಗಳು ಇದ್ರು ಎನ್ನಲಾಗುತ್ತದೆ..

    8. ವೈದ್ಯನಾಥೇಶ್ವರ, ಜಾರ್ಖಂಡ್
    ಜಾರ್ಖಂಡ್ ರಾಜ್ಯದ ದೇವಗಡ್‍ನಲ್ಲಿರುವ ವೈದ್ಯನಾಥ ಜ್ಯೋತಿರ್ಲಿಂಗವನ್ನು 12 ಜ್ಯೋತಿರ್ಲಿಂಗಗಳ ಪೈಕಿ ಒಂದೆಂದು ಪರಿಗಣಿಸಲಾಗಿದೆ. ಭಗವಾನ್ ವಿಷ್ಣುವು ದೇವತೆಗಳಿಗೆ ಅಮೃತ ಒದಗಿಸಿದುದಕ್ಕೆ ಇದು ತೀರ್ಥಸ್ಥಳವಾಗಿದೆ. ಪರಶಿವನು ಭಕ್ತಿಯಿಂದ ಆರಾಧಿಸುವ ತನ್ನ ಭಕ್ತರಿಗೆ ಅಮೃತ ನೀಡುತ್ತಾನೆ. ಆದರೆ ಇದನ್ನು ಸ್ಪರ್ಶಿಸಿ, ಪೂಜಿಸಲು ಯಾವ ಭೇದವಿಲ್ಲ. ಇಲ್ಲಿ ಮಹೇಶ್ವರ, ಅಮೃತೇಶ್ವರ, ಧನ್ವಂತರಿ, ವೈದ್ಯನಾಥ ಎಂದು ಪೂಜಿಸಲ್ಪಡುತ್ತಾನೆ.

    ಸ್ಥಳ ಪುರಾಣ: ವೈದ್ಯನಾಥನಿಗೆ ಯಾವುದೇ ರೋಗವನ್ನು ನಿವಾರಿಸುವ ಶಕ್ತಿಯಿದೆ ಎಂದು ಪ್ರತಿಥಿ ಇದೆ.. ಈ ಶ್ರೀ ವೈದ್ಯನಾಥ ಜ್ಯೋತಿರ್ಲಿಲಿಂಗ ವನ್ನು ರಾವಣ ಕೈಲಾಸದಿಂದ ತಂದನೆಂದು ಪ್ರತೀತಿ ಇದೆ. ಈ ದೇವಾಲಯ ತುಂಬಾ ಚೆನ್ನಾಗಿದೆ. ಗರ್ಭಗುಡಿಯ ಒಳಗಿರುವ ವೈದ್ಯನಾಥ ಜ್ಯೋತಿರ್ಲಿಲಿಂಗ ತುಂಬಾ ಚಿಕ್ಕದಾಗಿದೆ. ಪಾಣೀಪೀಠದ ಮದ್ಯೆ ಕಪ್ಪದಾದ ಚಿಕ್ಕ ಲಿಂಗವನ್ನು ಕಾಣಬಹುದು. ದೇವಾಲಯದ ಒಳಗೇ ಪೂಜಾ ಸಾಮಗ್ರಿಗಳು ದೊರೆಯುತ್ತವೆ. ಅಲ್ಲಿ ದೊರೆಯುವ ಹಾಲು, ನೀರು ಹೂ, ಪತ್ರೆಗಳನ್ನು ತಂದು ಭಕ್ತರೇ ಸ್ವತಃ ಅಭಿಷೇಕಮಾಡಿ ಪೂಜೆ ಮಾಡಿ ಸಂತೋಷ ಪಡಬಹುದು.

    9. ನಾಗೇಶ್ವರ, ಉತ್ತರಾಖಂಡ
    ಉತ್ತರಾಖಂಡ್ ರಾಜ್ಯದ ಜಾಗೇಶ್ವರದಲ್ಲಿರುವ ನಾಗೇಶ್ವರ ಜ್ಯೋತಿರ್ಲಿಂಗ ತಾಣವು ಬಹು ಪ್ರಖ್ಯಾತಿ ಪಡೆದಿದೆ. ಈ ಜ್ಯೋತಿರ್ಲಿಂಗವನ್ನು ಭೂಮಿಯ ಮೊದಲ ಜ್ಯೋತಿರ್ಲಿಂಗವೆಂದು ಪರಿಗಣಿಸಲಾಗಿದೆ. ಆದ್ದರಿಂದ ಈ ಜ್ಯೋತಿರ್ಲಿಂಗಕ್ಕೆ ವಿಶೇಷ ಪ್ರಾಮುಖ್ಯತೆ ಇದೆ.. ಅಲ್ಲದೇ ಇಲ್ಲಿಗೆ ಅಪಾರ ಭಕ್ತರು ಆಗಮಿಸುತ್ತಾರೆ.. ಆದರೆ ಈ ಕ್ಷೇತ್ರದ ಪ್ರವಾಸ ಸೀಮಿತ ಅವಧಿಗೆ ನಿಗದಿಯಾಗಿರುತ್ತದೆ. ನಾಗೇಶ್ವರ ಕ್ಷೇತ್ರದ ನಂದಿಯು ಈಶ್ವರನ ಮುಂದೆ ಇಲ್ಲ. ಆದ್ದರಿಂದ ನಂದಿಗೆ ಪ್ರತ್ಯೇಕವಾದ ದೇವಾಲಯವಿದೆ. ಈ ಕ್ಷೇತ್ರದಲ್ಲಿ 108 ಶಿವಾಲಯಗಳಿವೆ. ಎಲ್ಲ ಕಡೆಯೂ ಸುಂದರ ಕೆತ್ತನೆಯನ್ನು ಶಿಲ್ಪಕಲೆಯ ಅದ್ಭುತವನ್ನು ಕಾಣಬಹುದು. ಸಂತ ನಾಮದೇವನ ಭಕ್ತಿ ಮುಂತಾದ ಅನೇಕ ಘಟನಾವಳಿಗಳು ಇಲ್ಲಿ ದೊರೆಯುತ್ತವೆ. ಆದ್ದರಿಂದ ಈ ಕ್ಷೇತ್ರ ಭಕ್ತರ ಪಾಲಿನ ಮೆಚ್ಚಿನ ತಾಣವಾಗಿದೆ.

    10. ರಾಮೇಶ್ವರ, ತಮಿಳುನಾಡು
    ತಮಿಳುನಾಡಿನ ರಾಮೇಶ್ವರಮ್‍ನಲ್ಲಿರುವ ರಾಮನಾಥಸ್ವಾಮಿ ಮಂದಿರದ ಮುಖ್ಯ ದೇವರು. ಇದು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು. ರಾಮನಾಥೇಶ್ವರನನ್ನು ಶಿವನ ರೂಪದಲ್ಲಿ ಪೂಜಿಸಲಾಗುತ್ತಿದೆ. ರಾಮೇಶ್ವರಮ್‍ನ ರಾಮನಾಥೇಶ್ವರ ಮತ್ತು ಕಾಶಿಯ ವಿಶ್ವನಾಥರನ್ನು ಜೀವನದಲ್ಲಿ ಒಮ್ಮೆಯಾದರೂ ದರ್ಶನ ಮಾಡಬೇಕೆಂದು ಹೇಳಲಾಗುತ್ತದೆ. ಆದ್ದರಿಂದ ಇವೆರಡೂ ಹಿಂದುಗಳಿಗೆ ಅತಿ ಪವಿತ್ರ ಸ್ಥಳಗಳು.

    ಸ್ಥಳ ಪುರಾಣ: ರಾಮನಾಥೇಶ್ವರ ಮಂದಿರವನ್ನು ಪಾಂಡ್ಯ ರಾಜರು ನಿರ್ಮಿಸಿದರೆನ್ನುತ್ತಾರೆ. ಸೇತುಪತಿ ಸಾಮ್ರಾಜ್ಯದ ರಾಜರ ಮಂದಿರದ ಸೇವೆಯನ್ನು ಕೂಡ ತುಂಬ ಶ್ರದ್ಧೆಯಿಂದ ಮಾಡಿದರೆನ್ನುತ್ತರೆ. ರಾಮೇಶ್ವರ ದೇವಾಲಯವು ಭಾರತದಲ್ಲಿಯೇ ಅತಿದೊಡ್ಡ ದೇವಾಲಯವೆಂದು ಹೆಸರು ಪಡೆದಿದೆ. ಹೊರಪ್ರಕಾರದಲ್ಲಿ ಸಾವಿರ ಕಂಬಗಳಿವೆ. ಅಪೂರ್ವ ಕೆತ್ತನೆಯ ಭವ್ಯ ಕಂಬಗಳಿರುವ ಪ್ರಾಕಾರ ನೋಡಲು ಬಹಳ ಚೆನ್ನಾಗಿದೆ. ದೇವಾಲಯದ ಹೊರ ಮತ್ತು ಒಳ ಆವರಣದಲ್ಲಿ ಇಪ್ಪತ್ನಾಲ್ಕು ತೀರ್ಥಗಳಿವೆ.

    11. ಓಂಕಾರೇಶ್ವರ, ಮಧ್ಯಪ್ರದೇಶ
    ಓಂಕಾರೇಶ್ವರ ಶಿವನ ದೇವಸ್ಥಾನವು ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಹರಿದಿರುವ ನರ್ಮದಾ ನದಿಯ ಮೇಲಿನ ಶಿವಪುರಿ ಅಥವಾ ಮಂಡತ ಎಂಬ ದ್ವೀಪದಲ್ಲಿ ಸ್ಥಿತವಿದೆ. ಈ ದ್ವೀಪವು ಹಿಂದುಗಳ ಪವಿತ್ರ ಸಂಕೇತವಾದ ಓಂ ಆಕಾರದಲ್ಲಿರುವುದರಿಂದ ಓಂಕಾರೇಶ್ವರ ಎಂಬ ಹೆಸರು ಬಂದಿದೆ.

    ಸ್ಥಳ ಪುರಾಣ: ಮಂಡತ ದ್ವೀಪದಲ್ಲಿ ಎರಡು ದೇವಸ್ಥಾನಗಳಿದ್ದು ಅವುಗಳು ಪ್ರಣವನಾದ ಓಂಕಾರೇಶ್ವರ ದೇವಸ್ಥಾನ ಹಾಗು ಚಿರಾಯು/ಅಮರನಾದ ಅಮರೇಶ್ವರ ದೇವಸ್ಥಾನಗಳೆಂದು ಖ್ಯಾತಿ ಪಡೆದಿದೆ. ದಂತಕಥೆಯ ಪ್ರಕಾರ, ಇಲ್ಲಿನ ಶಿವಲಿಂಗವನ್ನು ಎರಡು ಭಾಗಗಳನ್ನಾಗಿ ಮಾಡಿ ಒಂದು ಓಂಕಾರೇಶ್ವರವಾಗಿಯೂ ಇನ್ನೊಂದು ಮಾಮಲೇಶ್ವರ ಅಥವಾ ಅಮರೇಶ್ವರವಾಗಿಯೂ ಸ್ಥಾಪಿಸಲಾಗಿದೆ ಎಂಬ ಪ್ರತಿಥಿ ಇದೆ.

    12. ಘುೃಷ್ಣೇಶ್ವರ, ರಾಜಸ್ಥಾನ
    ರಾಜಸ್ಥಾನ ರಾಜ್ಯದ ರಾಜಧಾನಿ ಜೈಪುರ್ ನಗರದಿಂದ 100 ಕಿ.ಮೀ ದೂರವಿರುವ ಶಿವಾರ್ ಎಂಬಲ್ಲಿ ಈ ಜ್ಯೋತಿರ್ಲಿಂಗ ದೇವಸ್ಥಾನವಿದೆ. ಇದನ್ನು ಕೊನೆಯ ಅಥವಾ ಹನ್ನೆರಡನೆಯ ಜ್ಯೋತಿರ್ಲಿಂಗವೆಂದು ಪರಿಗಣಿಸಲಾಗಿದೆ. ಅಲ್ಲದೇ ಘುೃಷ್ಣೇಶ್ವರ ಕ್ಷೇತ್ರಕ್ಕೆ ಅಪಾರ ಭಕ್ತರು ಆಗಮಿಸುತ್ತಾರೆ. ಅಲ್ಲದೇ ಇಲ್ಲಿಗೆ ವರ್ಷದ ಯಾವುದೇ ಸಮಯದಲ್ಲಾದರೂ ಭೇಟಿ ನೀಡಲು ಅವಕಾಶವಿದೆ.

    ಸ್ಥಳ ಪುರಾಣ : ಘುೃಷ್ಣೇಶ್ವರ ಕ್ಷೇತ್ರದಲ್ಲಿ ಶಿವ ಪಾರ್ವತಿಯರು ಜೊತೆಯಾಗಿ ಪೂಜೆಗೊಳ್ಳುತ್ತಾರೆ. ಯೇಲ ಗಂಗಾನದಿ ಇಲ್ಲಿ ಹರಿಯುತ್ತದೆ. ಇನ್ನು ಭವ್ಯ ದೇವಾಲಯಕ್ಕೆ ಚಿನ್ನದ ಶಿಖರವಿದ್ದು ಸುಂದರ ಕೆತ್ತನೆಯ 24 ಕಂಬಗಳ ಸಭಾ ಮಂಟಪಕ್ಕೆ ಅತ್ಯಂತ ಸುಂದರ ಕುಸುರಿ ಕೆಲಸ ಮಾಡಲಾಗಿದೆ. 21 ಗಣೇಶನ ಮೂರ್ತಿ, ಒಂದು ಲಕ್ಷ ವಿನಾಯಕ ಮೂರ್ತಿ ಇದೆ.. ಆದ್ದರಿಂದ ಇದು ಭಕ್ತರ ಪಾಲಿನ ಪ್ರಮುಖ ಸ್ಥಳ ಎಂದರೆ ತಪ್ಪಿಲ್ಲ.

    ಭಾರತೀಯರಿಗೂ ದೇವರಿಗೂ ಅವಿನಾಭಾವ ಸಂಬಂಧವಿದೆ.. ಅದರಲ್ಲೂ ಜ್ಯೋತಿರ್ಲಿಂಗಗಳು ಭಾರತೀಯರ ಜೀವನದಲ್ಲಿ ಪ್ರಮುಖ ಸ್ಥಾನಪಡೆದಿವೆ.. ಆದ್ದರಿಂದ ಜ್ಯೋತಿರ್ಲಿಂಗ ದರ್ಶನ ಹಿಂದೂಗಳ ಪಾಲಿಗೆ ಬಹುಮುಖ್ಯ ಎಂಬ ಪ್ರತೀತಿ ಇದೆ.

    – ಆನಂದ ಪಿಎನ್

  • ದೇಶದ ವಿವಿಧ ರಾಜ್ಯಗಳಲ್ಲಿ ದಸರಾ ಹೇಗೆ ಆಚರಿಸುತ್ತಾರೆ? – ಇಲ್ಲಿದೆ ಮಾಹಿತಿ

    ದೇಶದ ವಿವಿಧ ರಾಜ್ಯಗಳಲ್ಲಿ ದಸರಾ ಹೇಗೆ ಆಚರಿಸುತ್ತಾರೆ? – ಇಲ್ಲಿದೆ ಮಾಹಿತಿ

    ಸರಾ ಕರ್ನಾಟಕ ರಾಜ್ಯದ ನಾಡ ಹಬ್ಬ. ಹಿಂದೂ ಧರ್ಮದವರಿಗೆ ಇದೊಂದು ಪ್ರಮುಖ ಹಬ್ಬ. ವಿಜಯನಗರದ ಅರಸರ ಕಾಲದಿಂದಲೇ ‘ನವರಾತ್ರಿ’ ಅಥವಾ ‘ದಸರಾ ಹಬ್ಬ’ ಚಾಲ್ತಿಗೆ ಬಂದಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಬ್ಬವನ್ನು ಭಾರತದ ಉತ್ತರ ಭಾಗಗಳಲ್ಲಿ ‘ದಶೇರ’ವಾಗಿಯೂ, ‘ದುರ್ಗಾ ಪೂಜೆ’ಯಾಗಿಯೂ ಆಚರಿಸುತ್ತಾರೆ.

    ಮೈಸೂರು: ಆಯುಧ ಪೂಜೆ, ವಿಜಯದಶಮಿ ಕರ್ನಾಟಕ ರಾಜ್ಯದಲ್ಲಿ ಅದರಲ್ಲೂ ಮೈಸೂರು ಪ್ರಾಂತ್ಯದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಇತಿಹಾಸ ಪ್ರಸಿದ್ಧ ಮೈಸೂರಿನ ಅರಮನೆ ದೀಪಾಲಂಕಾರದಿಂದ ಕಂಗೊಳಿಸುತ್ತದೆ. ಮೈಸೂರನ್ನು ಆಳಿದ ರಾಜಮನೆತನ ಒಡೆಯರ ಕುಲ ದೇವತೆಯಾದ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲದೇ ವಿಜಯದಶಮಿಯಂದು ಆನೆಯ ಮೇಲೆ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಕುಳ್ಳಿರಿಸಿ ಮೆರವಣಿಗೆಯ ಮೂಲಕ ಅರಮನೆಯಿಂದ ಬನ್ನಿ ಮಂಟಪಕ್ಕೆ ಒಯ್ಯುವುದು ಮೈಸೂರಿನ ವಿಶೇಷತೆ.

    ಮಂಗಳೂರು: ಮಂಗಳೂರಲ್ಲಿ ನವರಾತ್ರಿ ಎಂದು ಕರೆಯುವ ಈ ಹಬ್ಬದಲ್ಲಿ ಹುಲಿಯ ನೃತ್ಯ, ಕರಡಿಯ ನೃತ್ಯ ಹಾಗೂ ಸಿಂಹ ನೃತ್ಯ ಮಾಡುತ್ತಾರೆ. ಹತ್ತು ದಿನದ ಆಚರಣೆಯಲ್ಲಿ ಇಡೀ ನಗರವನ್ನು ಬೆಳಕಿನಿಂದ ಅಲಂಕರಿಸಲಾಗುತ್ತದೆ. ಹುಲಿ ವೇಷ, ದಸರಾದಲ್ಲಿ ಮಾಡುವ ಜನಪದ ನೃತ್ಯವಾಗಿದ್ದು, ಯುವಕರು ಐದರಿಂದ ಹತ್ತು ಪಡೆಗಳನ್ನು ಮಾಡಿಕೊಳ್ಳುತ್ತಾರೆ. ಅವರು ಹುಲಿಗಳಂತೆ ವೇಷ ಹಾಕಿಕೊಂಡು ಇಬ್ಬರಿಂದ ಮೂರು ಜನ ಡೋಲು ವಾದ್ಯದವರನ್ನು ಬಳಸಿ ಊರೆಲ್ಲಾ ತಿರುಗಾಡುತ್ತಾರೆ. ಶಾರದಾ ದೇವಿಗೆ ಹುಲಿ ವಾಹನ ಆದ್ದರಿಂದ ಅವಳಿಗೆ ಗೌರವ ಸೂಚಿಸಲು ಹುಲಿ ವೇಷ ಧರಿಸುತ್ತಾರೆ.

    ಮಂಗಳೂರಿನಲ್ಲಿ ಜನರು ತಮ್ಮ ಮನೆಗಳನ್ನು, ಅಂಗಡಿಗಳನ್ನು, ಉಪಹಾರ ಕೇಂದ್ರಗಳನ್ನು ಅಲಂಕರಿಸುತ್ತಾರೆ. ನವದುರ್ಗೆಯರ, ಮಹಾಗಣಪತಿಯ ಹಾಗೂ ಶಾರದೆಯ ಮೂರ್ತಿಗಳನ್ನು ಮೆರವಣಿಗೆ ಮಾಡಿ ಹೂಗಳಿಂದ ಅಲಂಕರಿಸಿದ ಛತ್ರಿ, ವರ್ಣ ಚಿತ್ರ, ಜಾನಪದ ನೃತ್ಯ, ಯಕ್ಷಗಾನ ಪಾತ್ರ, ಡೊಳ್ಳು ಕುಣಿತ, ಹುಲಿವೇಶ ಹಾಗು ಇನ್ನಿತರ ಸಾಂಪ್ರದಾಯಿಕ ಕಲಾ ರೂಪ ಈ ಹಬ್ಬಕ್ಕೆ ಮೆರಗು ನೀಡುತ್ತದೆ.

    ಮಡಿಕೇರಿ: ಮಡಿಕೇರಿಯಲ್ಲಿ ಹತ್ತು ದಿನಗಳ ನವರಾತ್ರಿ ಹಬ್ಬದ ಆಚರಣೆ ನಡೆಯುತ್ತದೆ. ಇಲ್ಲಿ ನಡೆಯುವ ದಸರಾಗೆ ನೂರು ವರ್ಷಗಳ ಇತಿಹಾಸವಿದ್ದು, ಇದರಲ್ಲಿ ಅಸುರರನ್ನು ಕೊಲ್ಲುತ್ತಿರುವ ಸುರರನ್ನು ಚಿತ್ರಿಸಿರುವ 10 ಮಂಟಪಗಳಿರುತ್ತವೆ. ಒಂದು ಮಂಟಪದಲ್ಲಿರುವ ಮೂರ್ತಿಗಳು ಸುಮಾರು 8 ರಿಂದ 15 ಅಡಿ ಎತ್ತರವಿದ್ದು, ಒಂದು ಮಂಟಪದ ವೆಚ್ಚ 3 ರಿಂದ 5 ಲಕ್ಷಗಳಾಗುತ್ತವೆ.

    ದಂತ ಕಥೆಗಳ ಪ್ರಕಾರ, ಬಹಳ ವರ್ಷಗಳ ಹಿಂದೆ ಮಡಿಕೇರಿಯ ಜನ ರೋಗ ಋಜಿನಗಳಿಂದ ನರಳುತ್ತಿದ್ದಾಗ ಮಡಿಕೇರಿಯ ರಾಜನು ಆಗಿನಿಂದ ಮಾರಿಯಮ್ಮ ಹಬ್ಬವನ್ನು ಆಚರಿಸಲು ಆರಂಭಿಸಿದನು. ಆಗಿನಿಂದ ಮಹಾಲಯ ಅಮಾವಾಸ್ಯೆಯ ನಂತರ ದಸರಾ ದಿನದಿಂದ ಮಾರಿಯಮ್ಮ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಬಾರಿ ಜಿಲ್ಲೆಯಲ್ಲಿ ವ್ಯಾಪಕ ನೆರೆ ಬಂದ ಹಿನ್ನೆಲೆಯಲ್ಲಿ ಸರಳ ದಸರಾ ಆಚರಿಸಲು ಜನ ತೀರ್ಮಾನಿಸಿದ್ದಾರೆ.

    ಕೇರಳ: ಕೇರಳದಲ್ಲಿ ನವರಾತ್ರಿಯ ಕೊನೆಯ ಮೂರು ದಿನಗಳ ಕಾಲ ಮಾತ್ರ ದೇವಿಯ ಆರಾಧನೆ ನಡೆಯುತ್ತದೆ. ಅಷ್ಟಮಿ, ನವಮಿ ಮತ್ತು ದಶಮಿಯ ದಿನ ಕೇರಳದಲ್ಲಿ ತಾಯಿ ಸರಸ್ವತಿಯ ಪೂಜೆ ನಡೆಸಲಾಗುತ್ತದೆ. ಕಲೆಯನ್ನು ಸರಸ್ವತಿ ಎಂದೇ ಪರಿಗಣಿಸುವ ಕೇರಳದ ಜನರು ಮನೆಯಲ್ಲಿರುವ ಸಂಗೀತ ಸಲಕರಣೆಗಳು, ಪುಸ್ತಕಗಳು ಎಲ್ಲವನ್ನೂ ಸರಸ್ವತಿಯ ಮೂರ್ತಿಯ ಮುಂದೆ ಇಟ್ಟು ಪೂಜಿಸುತ್ತಾರೆ. ನವರಾತ್ರಿಯ ಕೊನೆಯ ದಿನವಾದ ವಿಜಯ ದಶಮಿಯ ದಿನ ಪೂಜೆಗಿಟ್ಟ ಪುಸ್ತಕಗಳನ್ನು ತೆಗೆದು ಓದುತ್ತಾರೆ. ವಿದ್ಯಾದಶಮಿ ಎಂದು ಕರೆಯಲ್ಪಡುವ ಅಂದು ಅಧ್ಯಯನ ಮಾಡುವುದರಿಂದ ಸರಸ್ವತಿ ಒಲಿಯುತ್ತಾಳೆ ಎಂಬ ನಂಬಿಕೆ ಕೇರಳದಲ್ಲಿದೆ.

    ಆಂಧ್ರಪ್ರದೇಶ: ಆಂಧ್ರಪ್ರದೇಶದಲ್ಲಿ ನವರಾತ್ರಿಗೆ `ಬತುಕಾಮ್ಮ ಪಾಂಡುಗ’ ಎಂದು ಕರೆಯುತ್ತಾರೆ. ತೆಲಂಗಾಣ ಪ್ರದೇಶದಲ್ಲಿ ವಿಶೇಷವಾಗಿ ಈ ಬತುಕಾಮ್ಮ ಪಾಂಡುಗವನ್ನು ಆಚರಿಸುತ್ತಾರೆ. ಬತುಕಾಮ್ಮ ಪಾಂಡುಗ ಎಂದರೆ ತಾಯಿ ದುರ್ಗೆಗೆ ನೀಡುವ ಆಹ್ವಾನ. ನವರಾತ್ರಿಯ ಸಂದರ್ಭದಲ್ಲಿ ದೇವಿಯ ಆರಾಧನೆಗಾಗಿ ಮನೆ ಮನೆಯಲ್ಲಿ ಮಹಿಳೆಯರು ಬತುಕಾಮ್ಮನನ್ನು ಹೂವಿನಿಂದ ತಯಾರಿಸುತ್ತಾರೆ. ಕುಂಭದ ಆಕೃತಿಯಲ್ಲಿ ಬತುಕಾಮ್ಮನನ್ನು ತಯಾರಿಸಿ ಪೂಜಿಸುತ್ತಾರೆ. ನವರಾತ್ರಿಯ 9 ದಿನಗಳು ಸಂಜೆ ದೇವಿಗೆ ಪೂಜೆ ನಡೆಸಿ ಭಕ್ತಿ ಗೀತೆಗಳನ್ನು ಹಾಡಿ, ಬತುಕಾಮ್ಮನ ಸುತ್ತ ನೃತ್ಯ ಮಾಡಿ ಸಂಭ್ರಮಿಸುತ್ತಾರೆ. ನಂತರ ವಿದ್ಯಾದಶಮಿಯ ದಿನ ಹೂವಿನಿಂದ ತಯಾರು ಮಾಡಲಾಗಿದ್ದ ಬತುಕಾಮ್ಮನನ್ನು ನೀರಿನಲ್ಲಿ ತೇಲಿಬಿಡುತ್ತಾರೆ.

    ಪಂಜಾಬ್: ಪಂಜಾಬ್‍ನಲ್ಲಿ ನವರಾತ್ರಿಯ ಮೊದಲ ಏಳು ದಿನಗಳ ಕಾಲ ಹೆಚ್ಚಿನ ಪಂಜಾಬಿ ಜನರು ಹಗಲಿನಲ್ಲಿ ಉಪವಾಸ ಮಾಡಿ ದೇವಿಯನ್ನು ಪೂಜಿಸುತ್ತಾರೆ. ಪ್ರತಿ ರಾತ್ರಿ ದೇವಿಯ ಭಜನೆ ಮಾಡಿ ಪೂಜೆ ನೆರವೇರಿಸುತ್ತಾರೆ. ಅಷ್ಟಮಿಯ ದಿನ ಉಪವಾಸ ವ್ರತವನ್ನು ಕೈಬಿಟ್ಟು ವಿಜಯ ದಶಮಿಯ ತನಕ ನೆರೆಹೊರೆಯ ಒಂಬತ್ತು ಯುವತಿಯರನ್ನು ಆಮಂತ್ರಿಸಿ ಅವರಿಗೆ ಹಣ, ಸಿಹಿ ತಿಂಡಿಗಳನ್ನು ನೀಡಿ ಉಡುಗೊರೆಗಳನ್ನು ಕೊಟ್ಟು ಗೌರವಿಸಲಾಗುತ್ತದೆ. ಮನೆಗೆ ಆಹ್ವಾನಿಸುವ ಹೆಣ್ಣುಮಕ್ಕಳನ್ನು ದುರ್ಗೆಯ ಅವತಾರಗಳು ಎಂದು ಪರಿಗಣಿಸಲಾಗುತ್ತದೆ.

    ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ದಸರಾದಂದು ದುರ್ಗೆಯ ಪೂಜೆ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಆ ಸಮಯದಲ್ಲಿ ಕೋಲ್ಕತ್ತಾದಲ್ಲಿ ವಿಪರೀತವಾದ ಜನಸಂದಣಿ ಸೇರುತ್ತದೆ. ಅಲ್ಲದೇ ಸಾರ್ವಜನಿಕವಾಗಿ ದೇವಿ ಪೂಜೆಯನ್ನು ನಡೆಸುವ ಪರಿಪಾಠವೂ ಇದೆ. ಸಿಂಹದ ಮೇಲೆ ಕುಳಿತು ವಿವಿಧ ಬಗೆಯ ಆಯುಧಗಳನ್ನು ಹಿಡಿದಿರುವ ದೇವಿಯ ದೊಡ್ಡ ಮೂರ್ತಿಯನ್ನು ಇರಿಸಿ ಬೆಳಗ್ಗೆ ಸಂಜೆಗಳಲ್ಲಿ ಪೂಜೆ ಭಜನೆಗಳನ್ನು ಅರ್ಪಿಸುತ್ತಾರೆ. ಗಣೇಶ ಚತುರ್ಥಿಯಂತೆ ಸಾಮಾನ್ಯವಾಗಿ ಪಶ್ಚಿಮ ಬಂಗಾಳದಾದ್ಯಂತ ದುರ್ಗೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿ ನಂತರ ನೀರಿನಲ್ಲಿ ವಿಸರ್ಜಿಸಲಾಗುತ್ತದೆ.

    ಕೋಲ್ಕತ್ತಾದಲ್ಲಿ 10 ದಿನಗಳ ಕಾಲ ಬಣ್ಣ, ಭಾರೀ ಶಬ್ಧ, ದೀಪಾಲಂಕಾರ ಹಾಗೂ ವಿವಿಧ ರೀತಿಯ ಆಹಾರಗಳನ್ನು ತಯಾರಿಸುತ್ತಾರೆ. ಅಲ್ಲದೇ ಇಲ್ಲಿನ ಜನರು ಹಬ್ಬದಂದು ತೆಂಗಿನ ಸಿಪ್ಪೆಯೊಳಗೆ ಬೆಂಕಿ ಹಾಕಿ ಅದನ್ನು ಕೈಯಲ್ಲಿ ಹಿಡಿದು ನೃತ್ಯ ಮಾಡುತ್ತಾರೆ. ದಸರಾದಂದು ಈ ರಾಜ್ಯದ ಮುತ್ತೈದೆಯರು ದೇವರ ಮೇಲೆ ಕುಂಕುಮ ಹಾಕುತ್ತಾರೆ. ಆ ದಿನ ದೇವಿ ತನ್ನ ಪತಿಯ ಮನೆಗೆ ಹಿಂದಿರುತ್ತಿದ್ದಾಳೆ ಎಂದು ಅಲ್ಲಿನ ಜನರು ನಂಬುತ್ತಾರೆ. ದೇವಿಗೆ ಕುಂಕುಮ ಹಾಕಿದ್ದ ನಂತರ ಮುತ್ತೈದೆಯರು ಒಬ್ಬರಿಗೊಬ್ಬರು ತಮ್ಮ ಮೇಲೆ ಕುಂಕುಮ ಎರಚಿಕೊಳ್ಳುತ್ತಾರೆ. ತಮ್ಮ ಪತಿಯ ಆಯಸ್ಸು ವೃದ್ಧಿಗಾಗಿ ಈ ರೀತಿ ಆಚರಣೆ ಮಾಡುತ್ತಾರೆ.

    ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲೂ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ದೆಹಲಿಯ ರಾಮ್‍ಲೀಲಾ ಮೈದಾನದಲ್ಲಿ ರಾಮಾಯಣ ನಾಟಕವನ್ನು ಮಾಡುತ್ತಾರೆ. ಸಾಂಸ್ಕೃತಿಕ ಉಡುಗೆ ತೊಟ್ಟು ರಾಮಾಯಣದ ನಾಟಕವನ್ನು ಮಾಡುತ್ತಾರೆ. ಅಲ್ಲದೇ ರಾವಣ, ಕುಂಭಕರ್ಣ, ಮೇಘನಾದ ದೊಡ್ಡ ಪ್ರತಿಕೃತಿಯನ್ನು ರಾಮ ಹಾಗೂ ಲಕ್ಷ್ಮಣ ವೇಷಧಾರಿ ತಮ್ಮ ಬಾಣಕ್ಕೆ ಬೆಂಕಿಗೆ ಹಚ್ಚಿ ಪ್ರತಿಕೃತಿಯನ್ನು ಸುಟ್ಟು ಹಾಕುತ್ತಾರೆ.

    ಗುಜರಾತ್: ಗುಜರಾತ್ ನಲ್ಲಿ ನವರಾತ್ರಿಯಂತೂ ಅತ್ಯಂತ ಅದ್ಧೂರಿಯಿಂದ ನಡೆಯುತ್ತದೆ. ಈ ಹಬ್ಬದಂದು ಮಹಿಳೆಯರು ಹಾಗೂ ಪುರುಷರು ಸೇರಿ ಗರ್ಭಾ ನೃತ್ಯ ಮಾಡುತ್ತಾರೆ. ಈ ಹಬ್ಬದಂದು ಗುಜರಾತಿನ ತುಂಬ ದಾಂಡಿಯಾ ಕೋಲು ಮತ್ತು ಡೋಲಿನ ಶಬ್ಧವೇ ಕೇಳಿಸುತ್ತದೆ. ಸಂಪ್ರದಾಯಸ್ಥರು 9 ದಿನಗಳ ಕಾಲವೂ ಉಪವಾಸ ಮಾಡಿ ಸಂಜೆಯ ವೇಳೆ ದುರ್ಗೆಯ ಪೂಜೆ ಮಾಡಿ ನಂತರ ಊಟ ಮಾಡುತ್ತಾರೆ. ಸಂಜೆ ಹೊತ್ತಿನಲ್ಲಿ ದೇವಿಗೆ ಆರತಿ ಬೆಳಗಿ ದೇವಿಯ ಮುಂದೆ ಗರ್ಭಾ ಅಥವಾ ದಾಂಡಿಯಾ ಎಂದು ಕರೆಯಲ್ಪಡುವ ವಿಶಿಷ್ಟ ನೃತ್ಯ ಮಾಡಿ ಸಂಭ್ರಮಿಸುತ್ತಾರೆ.

    ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ನವರಾತ್ರಿಯನ್ನು ಹಬ್ಬವನ್ನು ವಿಜೃಂಭಣೆಯಿಂದ ಅತ್ಯಂತ ವೈಭವವಾಗಿ ಆಚರಿಸಲಾಗುತ್ತದೆ. ಇಲ್ಲಿ ಮಣ್ಣಿನ ಪಾತ್ರೆಯಲ್ಲಿ ಧ್ಯಾನಗಳ ಬೀಜವನ್ನು ತುಂಬಿ ಅದರ ಮೇಲೆ ಜೋಳದ ತೆನೆಗಳನ್ನು ಇಡಲಾಗುತ್ತದೆ, ನಂತರ ಆ ಮಡಿಕೆಯನ್ನು ಅದರೊಳಗಿನ ಬೀಜಗಳು ಮೊಳಕೆಯೊಡೆದು ಬರುವವರೆಗೂ ಸತತವಾಗಿ 9 ದಿನಗಳ ಕಾಲ ಭಕ್ತಿಯಿಂದ ಪೂಜಿಸುತ್ತಾರೆ. ಅಲ್ಲದೇ ಮಹಾರಾಷ್ಟ್ರದಲ್ಲಿ ನವರಾತ್ರಿ ಹಬ್ಬವನ್ನು ಹೊಸದಾಗಿ ಪ್ರಾರಂಭ ಮಾಡಲು ಇರುವ ಶುಭ ಸಂದರ್ಭವಾಗಿ ಪರಿಗಣಿಸಲಾಗುತ್ತದೆ. ಹೊಸ ಮನೆ ಅಥವಾ ಕಾರನ್ನು ಖರೀದಿಸುವುದು ಹೀಗೆ ಹೊಸ ಆರಂಭವನ್ನು ನವರಾತ್ರಿಯಿಂದಲೇ ಆರಂಭಿಸಬೇಕು ಎನ್ನುವ ನಂಬಿಕೆಯನ್ನು ಮರಾಠಿಗರು ಇಟ್ಟುಕೊಂಡಿದ್ದಾರೆ.

    ದಸರಾ ಸುದ್ದಿಗಳು:

    1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    4. ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

    5. ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    6. ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ

    7. ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv