Tag: States

  • ಭಾರತದ ರಾಜ್ಯಗಳಲ್ಲಿ ಆಚರಿಸಲಾಗುವ ವಿಭಿನ್ನ ರೀತಿಯ ದಸರಾ ಹೇಗಿರುತ್ತೆ?

    ಭಾರತದ ರಾಜ್ಯಗಳಲ್ಲಿ ಆಚರಿಸಲಾಗುವ ವಿಭಿನ್ನ ರೀತಿಯ ದಸರಾ ಹೇಗಿರುತ್ತೆ?

    ಸರಾ ಹಿಂದೂಗಳು ಆಚರಿಸುವ ವಿಶಿಷ್ಟ ಹಬ್ಬಗಳಲ್ಲಿ ಒಂದು. ಇದು ವಿಜಯದ ಸಂಕೇತ ಹಾಗೂ ಸಂಭ್ರಮವನ್ನು ಎತ್ತಿ ಹಿಡಿಯುತ್ತದೆ. ಒಂದೇ ಹಬ್ಬವನ್ನು ದೇಶಾದ್ಯಂತ ವಿಭಿನ್ನ ರೀತಿಯಲ್ಲಿ ಆಚರಿಸಲಾಗುವ ಹಬ್ಬ ಎಂದರೆ ತಪ್ಪಾಗಲಾರದು. ಕೆಲವು ಕಡೆ 9 ದಿನಗಳ ಉಪವಾಸದಿಂದ ಅಂತ್ಯವಾದರೆ, ಇನ್ನೊಂದು ಕಡೆ ದೊಡ್ಡ ಆಚರಣೆಗಳಿಂದ ಅಂತ್ಯವಾಗುತ್ತದೆ. ಈ ಹಬ್ಬವನ್ನು ರಾಮನಿಂದ ರಾವಣನನ್ನು ಸೋಲಿಸಿದ ದಿನವಾಗಿಯೂ, ದುರ್ಗಾದೇವಿ ಮಹಿಸಾಸುರ ನಾಶ ಮಾಡಿದ ದಿನವಾಗಿಯೂ ಆಚರಿಸುತ್ತಾರೆ.

    ಭಾರತದ ರಾಜ್ಯಗಳಲ್ಲಿ ದಸರಾ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಈ ಕುರಿತು ಕೆಲವು ರಾಜ್ಯಗಳಲ್ಲಿ ಆಚರಿಸುವ ವಿಧಾನ ಇಲ್ಲಿದೆ.
    ಪಶ್ಚಿಮ ಬಂಗಾಳ:
    ಪಶ್ಚಿಮ ಬಂಗಾಳದ ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಈ ಹಬ್ಬವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಇಲ್ಲಿ ಗಣೇಶ, ಲಕ್ಷ್ಮಿ ಮತ್ತು ಸರಸ್ವತಿ ಸೇರಿದಂತೆ ಇತರ ದೇವತೆಗಳ ಜೊತೆಗೆ ದುರ್ಗಾದೇವಿಯ ಅದ್ಭುತ ವಿಗ್ರಹಗಳನ್ನು 5 ದಿನಗಳವರೆಗೆ ಪೂಜಿಸಲಾಗುತ್ತದೆ. ದಸರಾ ಸಂದರ್ಭದಲ್ಲಿ ದುರ್ಗಾಪೂಜೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ದುರ್ಗಾಮಾತೆಯನ್ನು ಪೂಜಿಸುವ ಉತ್ಸುಕತೆ ಭಾರತದಲ್ಲಿ ಎಲ್ಲಿಯೂ ಕಾಣುವುದಿಲ್ಲ.

    ಗುಜರಾತ್:
    ಗುಜರಾತ್‌ನಲ್ಲಿ ದಸರಾವನ್ನು ನವರಾತ್ರಿ ಎಂದು ಆಚರಿಸಲಾಗುತ್ತದೆ. ಇಲ್ಲಿನ ಪ್ರಸಿದ್ಧ ಜಾನಪದ ನೃತ್ಯವಾಗಿರುವ ಗರ್ಬಾ ಈ ಹಬ್ಬದ ಪ್ರಧಾನ ಅಂಶವಾಗಿದೆ. ಈ ಹಬ್ಬದ ಸಂದರ್ಭದಲ್ಲಿ ಗರ್ಬಾ ಹಾಗೂ ಬಣ್ಣ ಬಣ್ಣದ ಕೋಲಾಟದೊಂದಿಗೆ ಜನರನ್ನು ಆಕರ್ಷಿಸುತ್ತದೆ. ದುರ್ಗಾದೇವಿಯನ್ನು ಪೂಜಿಸಿದ ನಂತರ ರಾತ್ರಿಯಿಡೀ ಗರ್ಬಾವನ್ನು ನೃತ್ಯ ಮಾಡಲಾಗುತ್ತದೆ. ಈ ಸಮಯದಲ್ಲಿ ಗರ್ಬಾ ನೃತ್ಯಕ್ಕಾಗಿ ಪುರುಷರು ಹಾಗೂ ಮಹಿಳೆಯರು ಸಾಂಪ್ರದಾಯಿಕ ಉಡುಗೆಯನ್ನು ಧರಿಸುತ್ತಾರೆ.

    ಹಿಮಾಚಲ ಪ್ರದೇಶ:
    ರಾಜ್ಯದ ಕುಲು ಪ್ರದೇಶದಲ್ಲಿ ಭಗವಾನ್ ರಘುನಾಥನ ಭವ್ಯ ಮೆರವಣಿಗೆಯೊಂದಿಗೆ ದಸರಾ ಆಚರಿಸಲಾಗುತ್ತದೆ. ಕುಲು ಪಟ್ಟಣದಲ್ಲಿ ದಸರಾ ವಿಶೇಷ ಮಹತ್ವವನ್ನು ಹೊಂದಿದ್ದು, ಇದನ್ನು ಬಹಳ ಉತ್ಸಾಹದಿಂದ ಹಾಗೂ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ. ಒಟ್ಟು 7 ದಿನಗಳ ಕಾಲ ನಡೆಯುತ್ತದೆ. ಕುಲುವಿನ ಜನರು ಧಾಲ್ಪುರ್ ಮೈದಾನದ ಜಾತ್ರೆಯ ಮೈದಾನದಲ್ಲಿ ಭಗವಾನ್ ರಘುನಾಥನನ್ನು ಪೂಜಿಸುತ್ತಾರೆ. ಈ ಮೆರವಣಿಗೆ ಸಮಯದಲ್ಲಿ ಸ್ಥಳೀಯರು ದೇವತೆಗಳ ಪ್ರತಿಮೆಯನ್ನು ತಂದು ಪೂಜಿಸುತ್ತಾರೆ.

    ದೆಹಲಿ:
    ದೆಹಲಿಯಲ್ಲಿ ದಸರಾವನ್ನು ರಾಮ್ ಲೀಲಾದೊಂದಿಗೆ ಹಾಗೂ ರಾಮನಿಂದ ರಾವಣನನ್ನು ಸೋಲಿಸಿದ ದಿನವೆಂದು ಆಚರಿಸುತ್ತದೆ. ಈ ಸಮಯದಲ್ಲಿ ದೇವಾಲಯಗಳನ್ನು ಅದ್ಭುತವಾಗಿ ಅಲಂಕರಿಸಲಾಗುತ್ತದೆ. ರಾಮ್ ಲೀಲಾವು ನಗರದಲ್ಲಿ ಇದನ್ನು ಅದ್ಭುತವಾಗಿ ಆಚರಿಸಲಾಗುತ್ತದೆ. ರಾವಣ, ಮೇಘನಾದ ಮತ್ತು ಕುಂಭಕರನ್ ಸೇರಿದಂತೆ ಎಲ್ಲಾ ಮೂರು ರಾಕ್ಷಸರ ವಿಗ್ರಹಗಳನ್ನು ನಗರದ ವಿವಿಧ ಸ್ಥಳಗಳಲ್ಲಿ ಬೆಂಕಿ ಹಚ್ಚಲಾಗುತ್ತದೆ. ಈ ನಗರದಲ್ಲಿ ಹೆಚ್ಚಿನ ಜನರು 9 ದಿನಗಳ ಉಪವಾಸವನ್ನು ಮಾಡುತ್ತಾರೆ. ದೆಹಲಿಯಲ್ಲಿ ರಾಮಲೀಲಾ – ರಾಮಾಯಣದ ನಾಟಕೀಯ ಆವೃತ್ತಿಯನ್ನು ನೋಡುವುದು ಒಂದು ಸುಂದರ ಅನುಭವವಾಗಿದೆ.

    ಪಂಜಾಬ್:
    ಪಂಜಾಬ್‌ದಲ್ಲಿ 9 ದಿನದ ಉಪವಾಸ ಹಾಗೂ ಶಕ್ತಿಯ ಆರಾಧನೆಯೊಂದಿಗೆವ ದಸರಾ ಆಚರಿಸಲಾಗುತ್ತದೆ. ಇಲ್ಲಿ ಶಕ್ತಿದೇವಿಯನ್ನು ಪೂಜಿಸುತ್ತಾರೆ. ನವರಾತ್ರಿಯ ಸಮಯದಲ್ಲಿ ಅನೇಕ ಸ್ಥಳಗಳಲ್ಲಿ 7 ದಿನಗಳ ಉಪವಾಸವನ್ನು ಆಚರಿಸುತ್ತಾರೆ. ಜಾಗ್ರತಾ ಎಂದು ಕರೆಯಲ್ಪಡುವ ಭಕ್ತಿಗೀತೆಗಳನ್ನು ಹಾಡುವ ಮೂಲಕ ಇಡೀ ರಾತ್ರಿ ಎಚ್ಚರಗೊಂಡಿರುತ್ತಾರೆ. 8ನೇ ದಿನ ಕಂಜಿಕಾ ಎಂದು ಕರೆಯಲ್ಪಡುವ 9 ಬಾಲಕಿಯರಿಗೆ ಭಂಡಾರವನ್ನು ಆಯೋಜಿಸುವುದರ ಜೊತೆಗೆ ತಮ್ಮ ಉಪವಾಸವನ್ನು ಮುಗಿಸುತ್ತಾರೆ.

    ತಮಿಳುನಾಡು:
    ತಮಿಳುನಾಡಿನಲ್ಲಿ ದೇವತೆಗಳ ಆರಾಧನೆಯೊಂದಿಗೆ ಹಾಗೂ ಇಲ್ಲಿ ಸಂಪೂರ್ಣ ವಿಭಿನ್ನ ರೀತಿಯಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿ ದೇವಿಯರನ್ನು ಪೂಜಿಸುವ ಮೂಲಕ ಈ ಹಬ್ಬದಲ್ಲಿ ವಿಶೇಷ ಧಾರ್ಮಿಕ ಭಾವನೆಯನ್ನು ತರುತ್ತಾರೆ. ಈ ಸಮಯದಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಜನಪ್ರಿಯ ಗೊಂಬೆ ಪ್ರದರ್ಶನಗಳನ್ನು ಏರ್ಪಡಿಸುತ್ತದೆ. ಕುಲಶೇಖರಪಟ್ಟಿನಂನಲ್ಲಿ ಆಚರಿಸುವ ದಸರಾ ವಿಭಿನ್ನ ವಿಧಾನವಾಗಿದೆ. 10 ದಿನಗಳ ಕಾಲ ಆಚರಿಸಲಾಗುತ್ತದೆ. ಮುತ್ತರಮ್ಮನ್ ದೇವಾಲಯದ ಸುತ್ತಲೂ ಅದ್ಭುತವಾದ ರೋಮಾಂಚಕ ವೇಷಭೂಷಣಗಳನ್ನು ಪ್ರದರ್ಶಿಸಲಾಗುತ್ತದೆ. ವಿವಾಹಿತ ಮಹಿಳೆಯರು ಸಂಜೆಯ ಸಮಯದಲ್ಲಿ ಪ್ರತಿಯೊಬ್ಬರನ್ನು ತಮ್ಮ ಮನೆಗೆ ಆಹ್ವಾನಿಸುವ ಮೂಲಕ ವೈವಾಹಿಕ ಚಿಹ್ನೆಗಳಿಗೆ ಸಂಬಂಧಿಸಿದ ಬಿಡಿಭಾಗಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಪರಸ್ಪರ ತೆಂಗಿನಕಾಯಿ, ವೀಳ್ಯದೆಲೆ ಹಾಗೂ ಹಣವನ್ನೂ ಅರ್ಪಿಸುತ್ತಾರೆ.

    ಉತ್ತರಪ್ರದೇಶ:
    ಉತ್ತರಪ್ರದೇಶದಲ್ಲಿ ರಾವಣನ ಪ್ರತಿಮೆಗೆ ರಾಮನು ಬೆಂಕಿಯಿಡುವ ಮೂಲಕ ದಸರಾವನ್ನು ಆಚರಿಸಲಾಗುತ್ತದೆ. ಇದು ವಿಜಯದ ಸಂಕೇತವನ್ನು ಸೂಚಿಸುತ್ತದೆ. ವಾರಣಾಸಿ, ಲಕ್ನೋ ಮತ್ತು ಕಾನ್ಪುರದಂತಹ ನಗರಗಳಲ್ಲಿ ರಾಮ್ ಲೀಲಾವನ್ನು ಭವ್ಯವಾದ ಮಟ್ಟದಲ್ಲಿ ಪ್ರದರ್ಶಿಸಲಾಗುತ್ತದೆ. ಹಾಗೆಯೇ ರಾಮ, ಲಕ್ಷ್ಮಣ ಮತ್ತು ಹನುಮಾನ್ ಅವರ ವೇಷಭೂಷಣದಲ್ಲಿರುವ ನಟರು ಆಡಿಯೊ, ದೃಶ್ಯ ಸಾಧನಗಳನ್ನು ಬಳಸಿಕೊಂಡು ಮಹಾಕಾವ್ಯದ ಸಾಹಸವನ್ನು ಪ್ರದರ್ಶಿಸುತ್ತಾರೆ. ರಾವಣ, ಕುಂಭಕರನ್ ಮತ್ತು ಮೇಘನಾಥನ ವಿಗ್ರಹಗಳನ್ನು ವಧಿಸುವಾಗ ಪ್ರೇಕ್ಷಕರು ಅವರನ್ನು ನೋಡಲು ರೋಮಾಂಚನಗೊಳ್ಳುತ್ತಾರೆ.

    ಛತ್ತೀಸ್‌ಗಢ
    ಛತ್ತೀಸ್‌ಗಢದಲ್ಲಿ ವಿಶಿಷ್ಟ ರೀತಿಯ ದಸರಾವನ್ನು ಆಚರಿಸಲಾಗುತ್ತದೆ. ಅದು ಪ್ರಕೃತಿ, ಆಧ್ಯಾತ್ಮಿಕತೆ ಮತ್ತು ರಾಜ್ಯದ ಪ್ರಧಾನ ದೇವತೆಯನ್ನು ಸಂತೋಷಪಡಿಸುವ ಅಂಶವನ್ನು ಒಳಗೊಂಡಿದೆ. ಅವರು ಬಸ್ತರ್‌ನ ಪ್ರಧಾನ ದೇವತೆಯಾದ ದಂತೇಶ್ವರಿಯನ್ನು ಪೂಜಿಸುತ್ತಾರೆ. ಈ ರಾಜ್ಯದಲ್ಲಿ ದಸರಾದಂದು ಆಚರಿಸುವ ವಿಶಿಷ್ಟ ಆಚರಣೆಗಳೆಂದರೆ ಪಟ ಜಾತ್ರೆ (ಮರದ ಪೂಜೆ), ದೇರಿ ಗಧೈ (ಕಲಶ ಸ್ಥಾಪನೆ), ಕಚನ್ ಗಾಡಿ (ದೇವಿ ಕಚನ ಸಿಂಹಾಸನದ ಪ್ರತಿಷ್ಠಾಪನೆ), ನಿಶಾ ಜಾತ್ರಾ (ರಾತ್ರಿಯ ಉತ್ಸವ), ಮುರಿಯಾ ದರ್ಬಾರ್ (ಸಮ್ಮೇಳನ). ಬುಡಕಟ್ಟು ಮುಖ್ಯಸ್ಥರ) ಮತ್ತು ಓಹಡಿ (ದೇವತೆಗಳಿಗೆ ವಿದಾಯ) ಎಂದು ಆಚರಿಸಲಾಗುತ್ತದೆ.

    ಕರ್ನಾಟಕ:
    ಮೈಸೂರಿನಲ್ಲಿ ಆನೆಯು ಅಂಬಾರಿಯನ್ನು ಹೊತ್ತುಕೊಂಡು ಹೋಗುವ ಮೂಲಕ ಭವ್ಯವಾದ ಮೆರವಣಿಗೆ ಸಾಗುತ್ತದೆ. ಜೊತೆಗೆ ಕರ್ನಾಟಕದಾದ್ಯಂತ ದೇವಿಯ ಪೂಜೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಮೈಸೂರು ಸೇರಿದಂತೆ ಮಡಿಕೇರಿ, ಮಂಗಳೂರು ಹೀಗೆ ಹಲವಾರು ಕಡೆ ವಿಭಿನ್ನ ರೀತಿಯಲ್ಲಿ ದಸರಾ ಆಚರಿಸಲಾಗುತ್ತದೆ. ಕೆಲವು ಕಡೆ 9 ದಿನದ ಉಪವಾಸ ಮಾಡುತ್ತಾರೆ. ಆಯುಧ ಪೂಜೆಯ ದಿನ ಬನ್ನಿಯನ್ನು ನೀಡಲಾಗುತ್ತದೆ. ಜೊತೆಗೆ ಗೊಂಬೆಗಳನ್ನು ಕೂರಿಸುವ ಸಂಪ್ರದಾಯವು ಇಲ್ಲಿದೆ. ಕೂರ್ಗ್ನ ಶಾಂತಿಯುತ ಪರಿಸರದ ಮಧ್ಯೆ, ಮಡಿಕೇರಿಯ ದಸರಾವನ್ನು ಕರ್ನಾಟಕದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದು ಹಾಲೇರಿ ರಾಜರ ಆಳ್ವಿಕೆಗೆ ಸೇರಿದ ಸುದೀರ್ಘ ಮತ್ತು ಆಕರ್ಷಕ ಇತಿಹಾಸವನ್ನು ಹೊಂದಿದೆ. ಈ ರೋಮಾಂಚಕ ಹಬ್ಬವನ್ನು ಮಾರಿಯಮ್ಮ ಹಬ್ಬ ಎಂದೂ ಕರೆಯಲಾಗುತ್ತದೆ. ಜನರು ದ್ರೌಪದಿಗೆ ಮೀಸಲಾಗಿರುವ ಜಾನಪದ ನೃತ್ಯಗಳನ್ನು ಮಾಡುತ್ತಾರೆ. ಇದು ದಸರಾ ಆಚರಿಸುವ ವಿಭಿನ್ನ ವಿಧಾನವಾಗಿದೆ.

  • ಕೋವಿಡ್‌ ಹೆಚ್ಚಳ; ಸ್ವಾತಂತ್ರ್ಯೋತ್ಸವದಲ್ಲಿ ಜನಸಂದಣಿಗೆ ಅವಕಾಶ ನೀಡಬೇಡಿ – ರಾಜ್ಯಗಳಿಗೆ ಕೇಂದ್ರ ಸೂಚನೆ

    ಕೋವಿಡ್‌ ಹೆಚ್ಚಳ; ಸ್ವಾತಂತ್ರ್ಯೋತ್ಸವದಲ್ಲಿ ಜನಸಂದಣಿಗೆ ಅವಕಾಶ ನೀಡಬೇಡಿ – ರಾಜ್ಯಗಳಿಗೆ ಕೇಂದ್ರ ಸೂಚನೆ

    ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚುತ್ತಿದೆ. ಹೀಗಾಗಿ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ವೇಳೆ ಬೃಹತ್‌ ಸಭೆ-ಸಮಾರಂಭ ಆಯೋಜಿಸದಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

    ಸ್ವಾತಂತ್ರ್ಯ ದಿನಾಚರಣೆ ಸಭೆ-ಸಮಾರಂಭಗಳಲ್ಲಿ ಹೆಚ್ಚಿನ ಜನಸಂದಣಿಗೆ ಅವಕಾಶ ನೀಡಬೇಡಿ. ಕಾರ್ಯಕ್ರಮಗಳಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಕೇಂದ್ರ ಸಲಹೆ ನೀಡಿದೆ. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನ – ಅಂಚೆ ಇಲಾಖೆಯಿಂದ 10 ದಿನಗಳಲ್ಲಿ 1 ಕೋಟಿ ಧ್ವಜ ಮಾರಾಟ

    covid

    ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿ ಜಿಲ್ಲೆಯ ಪ್ರಮುಖ ಸ್ಥಳದಲ್ಲಿ ‘ಸ್ವಚ್ಛ ಭಾರತ್’ ಅಭಿಯಾನ ಕೈಗೊಳ್ಳಿ. ತಿಂಗಳ ಅವಧಿಯ ಅಭಿಯಾನ ಕೈಗೊಂಡು, ನಾಗರಿಕರು ಸ್ವಯಂಪ್ರೇರಿತರಾಗಿ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಲು ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯವು ತಿಳಿಸಿದೆ.

    ಭಾರತದಲ್ಲಿ 16,561 ಹೊಸ ಕೊರೊನಾ ವೈರಸ್‌ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 4,42,23,557 ಕ್ಕೆ ತಲುಪಿದೆ. ಆದರೆ ಸಕ್ರಿಯ ಪ್ರಕರಣಗಳು 1,23,535 ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇದನ್ನೂ ಓದಿ: ಈಗ ಚುನಾವಣೆ ನಡೆದರೆ ಎನ್‌ಡಿಎಗೆ 286, ಕರ್ನಾಟಕದಲ್ಲಿ ಬಿಜೆಪಿಗೆ 13 ಸ್ಥಾನ

    ಸ್ವಾತಂತ್ರ್ಯ ದಿನಾಚರಣೆಯಂದು ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮೂಡಿಸಲು ಗಿಡ ನೆಡುವ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಿ ಇಲಾಖೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಗೃಹ ಸಚಿವಾಲಯವು ಸಲಹೆ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಇಂಧನಗಳ ಮೇಲಿನ ತೆರಿಗೆ ಕಡಿತಗೊಳಿಸಿ: ರಾಜ್ಯಗಳಿಗೆ ಮೋದಿ ಮನವಿ

    ಇಂಧನಗಳ ಮೇಲಿನ ತೆರಿಗೆ ಕಡಿತಗೊಳಿಸಿ: ರಾಜ್ಯಗಳಿಗೆ ಮೋದಿ ಮನವಿ

    ನವದೆಹಲಿ: ಇಂಧನಗಳ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (VAT) ಕಡಿತಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳಿಗೆ ಮನವಿ ಮಾಡಿದ್ದಾರೆ.

    ಒಕ್ಕೂಟ ವ್ಯವಸ್ಥೆಗೆ ಸಹಕಾರಿಯಾಗಿ ಈ ಕ್ರಮಕೈಗೊಳ್ಳಬೇಕಿದೆ. ಈ ಮನೋಭಾವದಿಂದಾಗಿ ಕೋವಿಡ್ ವಿರುದ್ಧ ಸುದೀರ್ಘ ಹೋರಾಟ ನಡೆಸಲು ಸಾಧ್ಯವಾಯಿತು. ಯುದ್ಧದ ಪರಿಸ್ಥಿತಿಯಿಂದಾಗಿ ಜಾಗತಿಕವಾಗಿ ಸೃಷ್ಟಿಯಾಗಿರುವ ಆರ್ಥಿಕ ಸಮಸ್ಯೆಗಳ ಪರಿಹಾರಕ್ಕೂ ಅದೇ ರೀತಿ ಮಾಡಬೇಕಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಉಪ-ತಳಿಗಳು ಅಪಾಯವನ್ನುಂಟು ಮಾಡುತ್ತವೆ: ಮೋದಿ ಎಚ್ಚರಿಕೆ

    ನಾನು ಯಾರನ್ನೂ ಟೀಕಿಸುತ್ತಿಲ್ಲ, ಚರ್ಚಿಸುತ್ತಿದ್ದೇನಷ್ಟೆ. ಕಾರಣಾಂತರಗಳಿಂದ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಜಾರ್ಖಂಡ್‌ ರಾಜ್ಯಗಳು ಇಂಧನದ ಮೇಲಿನ ಮೌಲ್ಯವರ್ಧಿತ ತೆರಿಗೆ ಕಡಿತಗೊಳಿಸಲು ಒಪ್ಪಲಿಲ್ಲ. ಪರಿಣಾಮವಾಗಿ ಹೆಚ್ಚಿನ ಬೆಲೆಗಳ ಹೊರೆ ನಾಗರಿಕರ ಮೇಲೆ ಉಳಿಯಿತು ಎಂದು ಹೇಳಿದ್ದಾರೆ.

    MODi

    ನಾಗರಿಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಕೇಂದ್ರವು ಕಳೆದ ನವೆಂಬರ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿದೆ. ರಾಜ್ಯಗಳು ತಮ್ಮ ತೆರಿಗೆಯನ್ನು ಕಡಿಮೆ ಮಾಡಿ ಅದರ ಲಾಭವನ್ನು ಜನರಿಗೆ ವರ್ಗಾಯಿಸುವಂತೆ ನಾವು ವಿನಂತಿಸಿದ್ದೇವೆ. ಕೆಲವು ರಾಜ್ಯಗಳು ತೆರಿಗೆಯನ್ನು ಕಡಿಮೆ ಮಾಡಿವೆ. ಆದರೆ ಇನ್ನೂ ಕೆಲವು ರಾಜ್ಯಗಳು ಜನರಿಗೆ ಇದರಿಂದ ಯಾವುದೇ ಪ್ರಯೋಜನ ನೀಡಿಲ್ಲ. ಇದರಿಂದಾಗಿ ಈ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚುತ್ತಲೇ ಇದೆ. ಇದರಿಂದ ಈ ರಾಜ್ಯಗಳ ಜನತೆಗೆ ಅನ್ಯಾಯವಾಗಿರುವುದಲ್ಲದೇ ಬೇರೆ ರಾಜ್ಯಗಳ ಮೇಲೂ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸದ್ಯಕ್ಕೆ ಟಫ್ ರೂಲ್ಸ್ ಜಾರಿಯಿಲ್ಲ: ಸಿಎಂ

  • ಅಮೆರಿಕದಲ್ಲಿ ಮಾರಕ ಟಿಕ್ ವೈರಸ್ ಪತ್ತೆ – ಒಮ್ಮೆ ಕಚ್ಚಿದರೆ ಸಾವು ಖಚಿತ

    ಅಮೆರಿಕದಲ್ಲಿ ಮಾರಕ ಟಿಕ್ ವೈರಸ್ ಪತ್ತೆ – ಒಮ್ಮೆ ಕಚ್ಚಿದರೆ ಸಾವು ಖಚಿತ

    ವಾಷಿಂಗ್ಟನ್: ಅಮೆರಿಕದ 6 ಪ್ರದೇಶಗಳಲ್ಲಿ ಮಾರಕ ಟಿಕ್ ವೈರಸ್ ಮತ್ತೆಯಾಗಿ ಆತಂಕ ಮೂಡಿಸಿದೆ.

    ಟಿಕ್ ಎಂಬ ಕೀಟ ಹಾರ್ಟ್‍ಲ್ಯಾಂಡ್ ವೈರಸ್‍ನ್ನು ಒಡಲಲ್ಲಿ ತುಂಬಿಕೊಂಡು ಓಡಾಡುತ್ತಿದೆ. ಇದು ಮನುಷ್ಯನಿಗೆ ಒಮ್ಮೆ ಕಚ್ಚಿದರೆ, ನಿಗೂಢ ಕಾಯಿಲೆಯಿಂದ ಬಳಲುವಂತಾಗಿಸುತ್ತದೆ. ವಯಸ್ಕರನ್ನು ಅಸ್ವಸ್ಥಗೊಳಿಸಿ, ಸಾಯಿಸುವಷ್ಟು ಈ ವೈರಸ್ ಅಪಾಯಕಾರಿ ಎಂದು ಅಮೆರಿಕದ ಸಂಶೋಧಕರ ತಂಡವೊಂದು ವರದಿ ಮಾಡಿದೆ. ಇದನ್ನೂ ಓದಿ: ತರಗತಿಯಲ್ಲಿ ಅವಮಾನ – 30 ವರ್ಷದ ಬಳಿಕ ಶಿಕ್ಷಕಿಯನ್ನು 101 ಬಾರಿ ಇರಿದು ಹತ್ಯೆಗೈದ ವಿದ್ಯಾರ್ಥಿ

    ಅಮೆರಿಕದ ಎಮೋರಿ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಈ ಟಿಕ್ ವೈರಸ್ ಬಗ್ಗೆ ಮಾಹಿತಿ ಕಳೆಹಾಕಿದ್ದು, ಟಿಕ್ ಬಗ್ಗೆ ಎಲ್ಲೆಡೆ ಅರಿವು ಮೂಡಿಸುತ್ತಿದ್ದಾರೆ. ಟಿಕ್ ಕಚ್ಚಿದರೆ ಮನುಷ್ಯನ ಜೀವಕ್ಕೆ ಅಪಾಯವಾಗಿದ್ದು, ಟಿಕ್ ವೈರಸ್‍ನಿಂದಾಗಿ ಹಲವು ಕಾಯಿಲೆಗಳು ಕಂಡುಬಂದಿರುವ ಬಗ್ಗೆ ಸಂಶೋಧನಾ ವರದಿಯಿಂದ ಮಾಹಿತಿ ಹೊರಬಿದ್ದಿದೆ.

    ಸಂಶೋಧಕರು ತಿಳಿಸಿರುವ ಪ್ರಕಾರ, ಅಮೆರಿಕದ 6 ಪ್ರದೇಶಗಳಲ್ಲಿ ಈ ಟಿಕ್ ವೈರಸ್ ಕಂಡುಬಂದಿದ್ದು, ಮನುಷ್ಯನಿಗೆ ಕಚ್ಚಿದ ಬಳಿಕ ವಿಪರೀತ ಜ್ವರ, ತಲೆನೋವು, ಮೈಕೈನೋವು, ಮಾಂಸಖಂಡಗಳಲ್ಲಿ ನೋವು ಇದರ ಲಕ್ಷಣವಾಗಿದ್ದು, ಒಂದು ಬಾರಿ ಕಚ್ಚಿದರೆ ಮನುಷ್ಯ ಬದುಕುವುದು ಕಷ್ಟ ಎಂಬ ಬಗ್ಗೆ ಮಾಹಿತಿ ನೀಡಿದೆ. ಅಲ್ಲದೆ ಈ ವೈರಸ್ ಹರಡುವ ಲಕ್ಷಣಗಳನ್ನು ಹೊಂದಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ಯುದ್ಧ ಸಾರಿ ಕೈಸುಟ್ಟುಕೊಂಡ ರಷ್ಯಾ

    ಅಲ್ಲದೇ ಈ ಟಿಕ್ ವೈರಸ್ 2009ರಲ್ಲಿ ಮೊಟ್ಟ ಮೊದಲು ಮಿಸೌರಿಯಲ್ಲಿ ಪತ್ತೆಯಾಗಿದ್ದು, ಈವರೆಗೆ ಒಟ್ಟು 50 ಕೇಸ್ ಪತ್ತೆಯಾಗಿರುವ ಬಗ್ಗೆ ಸಂಶೋಧಕರ ತಂಡ ನಡೆಸಿದ ಸರ್ವೇಯಲ್ಲಿ ತಿಳಿದುಬಂದಿದೆ. ಅಲ್ಲದೆ ಈ ಟಿಕ್ ವೈರಸ್‍ಗಾಗಿ ಔಷಧಿ ಸಂಶೋಧನೆ ಕೂಡ ನಡೆಯುತ್ತಿರುವುದಾಗಿ ವರದಿಯಾಗಿದೆ.

  • ನೈಸರ್ಗಿಕ ವಿಕೋಪ – 5 ರಾಜ್ಯಗಳಿಗೆ ಕೇಂದ್ರದಿಂದ ನೆರವು

    ನೈಸರ್ಗಿಕ ವಿಕೋಪ – 5 ರಾಜ್ಯಗಳಿಗೆ ಕೇಂದ್ರದಿಂದ ನೆರವು

    ದೆಹಲಿ: 2020ರ ಅವಧಿಯಲ್ಲಿ ಉಂಟಾದ ನೈಸರ್ಗಿಕ ವಿಕೋಪ ಮತ್ತು ಕೀಟಗಳ ದಾಳಿಯಿಂದ ತತ್ತರಿಸಿದ್ದ 5 ರಾಜ್ಯಗಳಿಗೆ ಕೆಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಸಮಿತಿ ಸಭೆಯಲ್ಲಿ ಸುಮಾರು 3,113 ಕೋಟಿ ಅನುಮೋದನೆ ನೀಡುವುದಾಗಿ ಶನಿವಾರ ಗೃಹ ಸಚಿವಾಲಯ ಪ್ರಕಟಿಸಿದೆ.

    ಕೇಂದ್ರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ(ಎನ್‍ಡಿಆರ್‍ಎಂಎಫ್) ಆಂಧ್ರಪ್ರದೇಶ, ಬಿಹಾರ, ತಮಿಳುನಾಡು, ಪುದುಚೇರಿ ಮತ್ತು ಮಧ್ಯಪ್ರದೇಶಕ್ಕೆ ಹೆಚ್ಚುವರಿ ನೆರವು ನೀಡಲಾಗುತ್ತಿದೆ.

    ನೈಋತ್ಯ ಮಾನ್ಸೂನ್‍ನಿಂದ ಆಂಧ್ರಪ್ರದೇಶದಲ್ಲಿ ಉಂಟಾದ ಪ್ರವಾಹಕ್ಕೆ 280.78 ಕೋಟಿ ಮತ್ತು ಬಿಹಾರಕ್ಕೆ 1,255.27 ಕೋಟಿ ರೂ. ನೆರವು ನೀಡಲಾಗುತ್ತಿದೆ. ತಮಿಳುನಾಡಿನಲ್ಲಿ ಉಂಟಾದ ನಿವಾರ್ ಚಂಡಮಾರುತಕ್ಕೆ 63.14 ಕೋಟಿ ಮತ್ತು ಬುರೆವಿ ಚಂಡಮಾರುತಕ್ಕೆ 3,22,377 ಕೋಟಿ ನೆರವು ನೀಡಲಾಗುತ್ತಿದೆ. ನಿವಾರ್ ಚಂಡಮಾರುತದ ಪರಿಣಾಮ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಗೆ 9.91 ಕೋಟಿ ರೂ. ದೊರೆತಿದೆ.

    ಜೊತೆಗೆ ಮಿಡತೆ ದಾಳಿಯಿಂದ ಕೃಷಿ ನಷ್ಟಕ್ಕೆ ತುತ್ತಾಗಿದ್ದ ಮಧ್ಯ ಪ್ರದೇಶದಲ್ಲಿ 1,280.18 ಕೋಟಿ ಹಣ ನೆರವು ನೀಡಲಾಗುತ್ತಿದೆ.

  • ನೀಟ್, ಜೆಇಇ ಪರೀಕ್ಷೆಗಳನ್ನು ಮುಂದೂಡಿ – ಸುಪ್ರೀಂಕೋರ್ಟಿಗೆ 6 ರಾಜ್ಯಗಳಿಂದ ಅರ್ಜಿ

    ನೀಟ್, ಜೆಇಇ ಪರೀಕ್ಷೆಗಳನ್ನು ಮುಂದೂಡಿ – ಸುಪ್ರೀಂಕೋರ್ಟಿಗೆ 6 ರಾಜ್ಯಗಳಿಂದ ಅರ್ಜಿ

    ನವದೆಹಲಿ: ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಪರೀಕ್ಷೆ ಗೊಂದಲ ಬಗೆಹರಿದ ಬೆನ್ನಲ್ಲೇ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ನಡೆಸಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಆರು ರಾಜ್ಯ ಸರ್ಕಾರಗಳು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ.

    ಕೊರೊನಾ ಸಂಕಷ್ಟ ಕಾಲದಲ್ಲಿ ಪರೀಕ್ಷೆಗಳು ಬೇಡ ಎಂದಿರುವ ಪಶ್ಚಿಮ ಬಂಗಾಳ, ಜಾರ್ಖಂಡ್, ಚತ್ತೀಸ್‍ಗಢ, ಮಹಾರಾಷ್ಟ್ರ, ಪಂಜಾಬ್ ಹಾಗೂ ರಾಜಸ್ಥಾನ ಸರ್ಕಾರಗಳು ಸುಪ್ರೀಂ ಕೋರ್ಟಿನ ಆಗಸ್ಟ್ 17ರ ಆದೇಶವನ್ನು ಪ್ರಶ್ನಿಸಿವೆ.

    ಸೆಪ್ಟೆಂಬರ್ 1ರಿಂದ 6ವರೆಗೆ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಕಲ್ಪಿಸುವ ಜೆಇಇ ಹಾಗೂ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಕ್ಕೆ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನೀಟ್‍ಗೆ ಸೆಪ್ಟೆಂಬರ್ 16ರಂದು ದಿನಾಂಕ ನಿಗಧಿ ಮಾಡಲಾಗಿದೆ. ಸುಮಾರು 28 ಲಕ್ಷ ಮಂದಿ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯುತ್ತಿದ್ದಾರೆ. ಇದರಿಂದ ಕೊರೊನಾದಿಂದ ಸಂಕಷ್ಟ ಸೃಷ್ಟಿಯಾಗಬಹುದು ಸೋಂಕು ಹರಡಲು ಮತ್ತೊಂದು ವೇದಿಕೆಯಾಗಬಹುದು ಎಂದು ರಾಜ್ಯ ಸರ್ಕಾರಗಳು ಆರೋಪಿಸಿ ಪರೀಕ್ಷೆ ಮುಂದೂಡಲು ಮನವಿ ಮಾಡಿದೆ.

    ಈ ಹಿಂದೆ ಪರೀಕ್ಷೆ ಸಂಬಂಧ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜುಗಳು ಅರ್ಜಿ ಸಲ್ಲಿಸಿದ್ದ ವೇಳೆ ವಿದ್ಯಾರ್ಥಿಗಳು ಹಿತ ದೃಷ್ಟಿಯಿಂದ ಪರೀಕ್ಷೆ ಮುಖ್ಯ, ಪರೀಕ್ಷೆಗೆ ತಡೆ ಇಲ್ಲ ಎಂದು ಆದೇಶ ನೀಡಿತ್ತು. ಈ ಆದೇಶವನ್ನು ಪಶ್ನಿಸಿ ಈಗ ರಾಜ್ಯ ಸರ್ಕಾರಗಳು ಅರ್ಜಿ ಸಲ್ಲಿಸಿವೆ.

  • ಕರ್ನಾಟಕಕ್ಕೆ ‘ಸಪ್ತ’ ರಾಜ್ಯಗಳಿಂದ ಕೊರೊನಾ ಕಂಟಕ

    ಕರ್ನಾಟಕಕ್ಕೆ ‘ಸಪ್ತ’ ರಾಜ್ಯಗಳಿಂದ ಕೊರೊನಾ ಕಂಟಕ

    ಬೆಂಗಳೂರು: ಲಾಕ್‍ಡೌನ್ ಸಡಿಲ ಆಗಿದೆ. ಕಾಕತಾಳಿಯ ಎಂಬಂತೆ ರಾಜ್ಯದಲ್ಲಿ ಕೊರೊನಾ ಸುನಾಮಿ ಎದ್ದಿದೆ. ಕಳೆದ ನಾಲ್ಕು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗಿದೆ. 400ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

    ಮಹಾಮಾರಿ ಡೆಡ್ಲಿ ಕೊರೊನಾ ವೈರಸ್ ಕರುನಾಡಿಗೆ ಕಾಲಿಟ್ಟು 2 ತಿಂಗಳು ಕಳೆದಿದೆ. ವಿದೇಶದಿಂದ ಬಂದವರು, ನಂತರ ತಬ್ಲಿಘಿಗಳು, ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆ ಕಾರ್ಮಿಕ, ಬಿಹಾರ ಕಾರ್ಮಿಕರು. ಈ ನಾಲ್ಕು ನಂಟು ರಾಜ್ಯದಲ್ಲಿ ಒಂದು ಹಂತದಲ್ಲಿ ಕೊರೊನಾ ಸುನಾಮಿಗೆ ಕಾರಣವಾಯಿತು. ಈ ನಂಟಿನ ಕಂಟಕ ತಣ್ಣಗಾಗುತ್ತಿದ್ದಂತೆ ರಾಜ್ಯ ಸರ್ಕಾರ ಬಹುತೇಕ ಲಾಕ್‍ಡೌನ್ ರಿಲೀಫ್ ಕೊಟ್ಟಿದೆ.

    ಈಗ ಏಳು ರಾಜ್ಯಗಳು ಕರುನಾಡಿಗೆ ಕಂಟಕವಾಗುತ್ತಿವೆ. ದಿನಕ್ಕೊಂದು ರಾಜ್ಯ ಕರ್ನಾಟಕ ಜನರ ನೆಮ್ಮದಿಗೆಡಿಸಲು ಎಂಟ್ರಿ ಕೊಡುತ್ತಿದೆ. ಆರಂಭದಲ್ಲಿ ದೆಹಲಿಯ ಜಮಾತ್ ರಾಜ್ಯಕ್ಕೆ ದೊಡ್ಡ ಆಘಾತ ನೀಡಿತ್ತು. ನಂತರ ಅಜ್ಮೀರ್ ನಿಂದ ಬಂದವರಿಂದ, ಅಹ್ಮದಾಬಾದ್‍ನಿಂದ ಬಂದವರಿಂದ ಕಂಟಕ ಎದುರಾಗಿತ್ತು. ಆದರೆ ಈಗ ಲಾಕ್ ಓಪನ್ ಆಗುತ್ತಿದ್ದಂತೆ ಮಹಾರಾಷ್ಟ್ರದ ಮುಂಬೈ ಇಡೀ ಕರುನಾಡನ್ನ ಕೊರೊನಾ ಇಕ್ಕಟ್ಟಿಗೆ ಸಿಲುಕಿಸಿದೆ.

    ಗುರುವಾರ ಒಂದೇ ದಿನ 147 ಮಂದಿಗೆ ಕೊರೊನಾ ಬಂದಿದ್ದು, ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1609 ಆಗಿದೆ. ಹೆಲ್ತ್ ಬುಲೆಟಿನ್‍ನಲ್ಲಿ ಯಾವ್ಯಾವ ರಾಜ್ಯಗಳಿಂದ ಬಂದ ಎಷ್ಟೆಷ್ಟು ಮಂದಿಗೆ ಕೊರೊನಾ ಬಂದಿದೆ ಅನ್ನೋ ವಿವರವನ್ನು ನೋಡೋದಾದರೆ:

    ಕರುನಾಡಿಗೆ ‘ಸಪ್ತ’ ಸಂಕಷ್ಟ
    * ಮಹಾರಾಷ್ಟ್ರ ಲಿಂಕ್ – 100 ಕೇಸ್ (78 ಮುಂಬೈ, 22 ಕೇಸ್ ಮಹಾರಾಷ್ಟ್ರದ ಥಾಣೆ, ಪುಣೆ, ಪಾಲ್ಘರ್, ಮಲ್ಲಚಾಂದೀವಲ್ಲೀ, ಸಾಯಿಲ್, ಔರಂಗಾಬಾದ್)
    * ತೆಲಂಗಾಣ ಲಿಂಕ್         –  5 ಕೇಸ್
    * ತಮಿಳುನಾಡು ಲಿಂಕ್  – 6 ಕೇಸ್
    * ಜಾರ್ಖಂಡ್ ಲಿಂಕ್       – 3 ಕೇಸ್
    * ರಾಜಸ್ಥಾನ ಲಿಂಕ್        – 2 ಕೇಸ್ (ಅಜ್ಮೇರ್)
    * ಛತ್ತೀಸ್‍ಘಡ ಲಿಂಕ್     – 1 ಕೇಸ್
    * ಕೇರಳ ಲಿಂಕ್               – 9 ಕೇಸ್

    ರಾಜ್ಯದ ಒಳಗಿರುವ ಮಂದಿ ಹೆಚ್ಚು ಕಡಿಮೆ ಸೇಫ್ ಆಗಿಯೇ ಇದ್ದಾರೆ. ನಮ್ಮ ರಾಜ್ಯಕ್ಕೆ ಈಗ ಅನ್ಯ ರಾಜ್ಯಗಳಿಂದ ಬಂದು ಕ್ವಾರಂಟೈನ್ ಆಗಿರುವ ಜನರಿಂದ ಗಂಡಾಂತರ ಎದುರಾಗಿದೆ. ಇದರಲ್ಲಿ ಅತಿ ಹೆಚ್ಚು ಅಂದರೆ ಮಹಾರಾಷ್ಟ್ರ, ಮುಂಬೈನಿಂದ ಬಂದವರಿಗೆ ಹೆಚ್ಚು ಸೋಂಕು ಪತ್ತೆಯಾಗುತ್ತದೆ. ತದನಂತರದಲ್ಲಿ ತಮಿಳುನಾಡು, ತೆಲಂಗಾಣ, ಕೇರಳ, ಛತ್ತೀಸ್‍ಘಡ, ಜಾರ್ಖಂಡ್, ರಾಜಸ್ಥಾನದಿಂದ ಬಂದವರಿಗೆ ಕೊರೊನಾ ಸೋಂಕು ತಗುಲಿದೆ.

  • ಮೋದಿ ಸರ್ಕಾರಕ್ಕೆ ಶುರುವಾಗಿದೆ ಪಂಚ ರಾಜ್ಯಗಳ ಚಿಂತೆ

    ಮೋದಿ ಸರ್ಕಾರಕ್ಕೆ ಶುರುವಾಗಿದೆ ಪಂಚ ರಾಜ್ಯಗಳ ಚಿಂತೆ

    – 5 ರಾಜ್ಯಗಳಿಂದಲೇ ಲಾಕ್‍ಡೌನ್ ನಿರ್ಧಾರ?

    ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಆದರೆ ಕೇಂದ್ರ ಸರ್ಕಾರಕ್ಕೆ ಮಾತ್ರ ಇಡೀ ದೇಶಕ್ಕಿಂತ ಐದು ರಾಜ್ಯಗಳ ಪರಿಸ್ಥಿತಿ ಚಿಂತಿಗೀಡು ಮಾಡಿದ್ದು, ಈ ರಾಜ್ಯಗಳೇ ಲಾಕ್‍ಡೌನ್ ವಿಸ್ತರಣೆ ಮಾಡಲು ಕಾರಣವಾಗಿದೆಯಂತೆ. ಈ ರಾಜ್ಯಗಳು ಮುಂದೆ ಏಪ್ರಿಲ್ 20ರ ಬಳಿಕ ಸರ್ಕಾರ ನೀಡುವ ವಿನಾಯಿತಿಯನ್ನು ನಿರ್ಧರಿಸಲಿದೆ.

    ಮೇ 3ರವರೆಗೂ ಲಾಕ್‍ಡೌನ್ ವಿಸ್ತರಣೆಯಾಗಿದೆ. ಹೀಗಾಗಿ ಎಲ್ಲರೂ ಕೂಡ ಲಾಕ್‍ಡೌನ್ ಅಂತ್ಯದವರೆಗೂ ಮನೆಯಲ್ಲೇ ಇರಬೇಕು. ಅಂದಹಾಗೆ ಪ್ರಧಾನಿ ಮೋದಿ ಲಾಕ್‍ಡೌನ್ ವಿಸ್ತರಣೆ ಮಾಡೋಕೆ ಐದು ರಾಜ್ಯಗಳು ಕಾರಣ ಎಂದು ತಿಳಿದುಬಂದಿದೆ. ಲಾಕ್‍ಡೌನ್ ವಿನಾಯಿತಿ ನೀಡಬೇಕು ಅಂದುಕೊಂಡಿದ್ದ ಕೇಂದ್ರ ಸರ್ಕಾರ ಐದು ರಾಜ್ಯಗಳ ಪರಿಸ್ಥಿತಿ ನೋಡಿ ಯಾವ ವಿನಾಯಿತಿಯೂ ಇಲ್ಲದೇ ಲಾಕ್‍ಡೌನ್ ಮುಂದುವರಿಸಿ ಅಂತ ಘೋಷಿಸಿದ್ದಾರೆ. ಇದನ್ನೂ ಓದಿ: ಧಾರಾವಿ ಸ್ಲಂನಲ್ಲಿ ಕೊರೊನಾ ನಿಯಂತ್ರಣ ಅಸಾಧ್ಯ ಯಾಕೆ? ಜನಸಾಂದ್ರತೆ ಎಷ್ಟಿದೆ?

    ದೇಶಕ್ಕೆ ಪಂಚರಾಜ್ಯ ಕಂಟಕ
    1. ಮಹಾರಾಷ್ಟ್ರ – 2,455 ಕೇಸ್
    2. ದೆಹಲಿ – 1,561 ಕೇಸ್
    3. ತಮಿಳುನಾಡು – 1,204 ಸೋಂಕಿತರು
    4. ಮಧ್ಯಪ್ರದೇಶ – 741 ಪ್ರಕರಣ
    5. ಗುಜರಾತ್ – 650 ಕೇಸ್

    ಮಹಾರಾಷ್ಟ್ರದಲ್ಲಿ ದೇಶದ ಅತಿ ಹೆಚ್ಚು ಕೊರೊನಾ ಸೋಂಕಿತರು ಇರುವುದು. ನಂತರ ದೆಹಲಿಯಲ್ಲಿ 1561 ಕೇಸ್‍ಗಳಿರೋದು ಕೇಂದ್ರ ಸರ್ಕಾರಕ್ಕೆ ಚಿಂತೆಗೀಡು ಮಾಡಿದೆ. ಇನ್ನೂ ತಮಿಳುನಾಡಲ್ಲಿ ಸದ್ಯ 1204 ಕೊರೊನಾ ಪೀಡಿತರಿದ್ದರೆ, ಮಧ್ಯಪ್ರದೇಶದಲ್ಲಿ 741, ಗುಜರಾತ್‍ನಲ್ಲಿ 650 ಕೇಸ್‍ಗಳಿವೆ. ಇಲ್ಲಿ ಚೇತರಿಕೆಗಿಂತ ಪ್ರತಿದಿನ ಸೋಂಕಿಗೆ ಒಳಪಡುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ.

    ಚೀನಾದ ವುಹಾನ್ ಆಗುತ್ತಾ ಮಹಾರಾಷ್ಟ್ರ?
    ಮಹಾರಾಷ್ಟ್ರ, ದೆಹಲಿಯಲ್ಲಿ ಸದ್ಯ ಸೋಂಕಿನ ಪ್ರಮಾಣ ಏರಿಕೆ ಕಾಣುತ್ತಲೇ ಇದೆ. ದೆಹಲಿಯಲ್ಲಿ ಒಂದೇ ದಿನ 350ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಮುಂಬೈ ಚೀನಾದ ವುಹಾನ್ ನಗರವಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಧಾರಾವಿ ಸ್ಲಂನಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚುತ್ತಿದ್ದು, ಮಹಾರಾಷ್ಟ್ರದಲ್ಲಿ ಸೋಂಕಿತ ಪ್ರಮಾಣ ಏರಿಕೆ ನಿಂತಿಲ್ಲ. ಮಂಗಳವಾರ ಲಾಕ್‍ಡೌನ್ ವಿಸ್ತರಿಸಿದ್ದನ್ನ ವಿರೋಧಿಸಿ ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಬೀದಿಗೆ ಬಂದು ಪ್ರತಿಭಟನೆ ನಡೆಸಿದರು. ದೆಹಲಿಯ ಮರ್ಕಜ್ ಪ್ರಕರಣ ಬಳಿಕ ಅತಿ ಹೆಚ್ಚು ಆತಂಕ ಸೃಷ್ಟಿಸಿರುವ ಘಟನೆ ಇದು ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದು, ಸೋಂಕು ಮತ್ತಷ್ಟು ಹರಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಗೃಹ ಸಚಿವ ಅಮಿತ್ ಶಾ ಈ ಐದು ರಾಜ್ಯಗಳಿಂದ ಪ್ರತಿನಿತ್ಯ ವಿಶೇಷ ವರದಿ ತರಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಈ ರಾಜ್ಯಗಳನ್ನು ಆಧರಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಚಿಂತನೆ ನಡೆಸಿದ್ದಾರೆ. ಹೀಗಾಗಿ ಏಪ್ರಿಲ್ 20ರ ಬಳಿಕ ಸಿಗಲಿರುವ ವಿನಾಯತಿಯನ್ನು ಈ ರಾಜ್ಯಗಳೇ ನಿರ್ಧರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  • ರಾಜ್ಯವನ್ನ ಮತ್ತೆ ಕಡೆಗಣಿಸಿದ ಕೇಂದ್ರ?- ಕೊರೊನಾದಿಂದ ತತ್ತರಿಸಿದ ಕರ್ನಾಟಕಕ್ಕೆ ಇಲ್ಲ ಅನುದಾನ

    ರಾಜ್ಯವನ್ನ ಮತ್ತೆ ಕಡೆಗಣಿಸಿದ ಕೇಂದ್ರ?- ಕೊರೊನಾದಿಂದ ತತ್ತರಿಸಿದ ಕರ್ನಾಟಕಕ್ಕೆ ಇಲ್ಲ ಅನುದಾನ

    ನವದೆಹಲಿ: ನೆರೆ ಪರಿಹಾರ ವಿಚಾರದಲ್ಲಿ ರಾಜ್ಯವನ್ನು ಕಡೆಗಣಿಸಿದ್ದ ಕೇಂದ್ರ ಸರ್ಕಾರ ಈಗ ಮತ್ತೆ ಅದೇ ಧೋರಣೆ ಮುಂದುವರಿಸಿದೆ. ಕೊರೊನಾ ವೈರಸ್‍ನಿಂದ ತತ್ತರಿಸುತ್ತಿರುವ ಕರ್ನಾಟಕಕ್ಕೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದಂತೆ ಕಂಡು ಬಂದಿದೆ.

    ಕೊರೊನಾ ವೈರಸ್ ಭೀತಿ ಹಿನ್ನೆಲೆ ರಾಜ್ಯಗಳಿಗೆ ನೆರವಾಗುವ ನಿಟ್ಟಿನಲ್ಲಿ ಇಂದು 17,287.08 ಕೋಟಿ ಹಣವನ್ನು ಕೇಂದ್ರ ಹಣಕಾಸು ಇಲಾಖೆ ಬಿಡುಗಡೆ ಮಾಡಿದೆ. ಎಸ್‍ಡಿಆರ್‍ಎಫ್ ಅನುದಾನದ ಅಡಿ 2020-21 ರ ಮೊದಲ ಕಂತಾಗಿ 11,092 ಕೋಟಿ ಹಾಗೂ 15 ನೇ ಹಣಕಾಸು ಆಯೋಗದ ಶಿಫಾರಸು ಹಿನ್ನಲೆ ಆದಾಯ ಕೊರತೆ ಅನುದಾನದ ಅಡಿಯಲ್ಲಿ 6,195 ಕೋಟಿ ಬಿಡುಗಡೆ ಮಾಡಿದೆ.

    14 ರಾಜ್ಯಗಳಿಗೆ ಕೇಂದ್ರ ಸರ್ಕಾರ ಈ ಅನುದಾನ ಹಂಚಿಕೆ ಮಾಡಿದೆ. ಆಂಧ್ರಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಕೇರಳ, ಮಣಿಪುರ್, ಮೇಘಾಲಯ, ಮಿಜೋರಾಂ, ನಾಗಲ್ಯಾಂಡ್, ಪಂಜಾಬ್, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರಾಖಂಡ, ಪಶ್ಚಿಮ ಬಂಗಾಳಕ್ಕೆ ಅನುದಾನ ನೀಡಿದೆ. ಈ ಪಟ್ಟಿಯಲ್ಲಿ ಎಲ್ಲೂ ಕರ್ನಾಟಕದ ಹೆಸರು ಉಲ್ಲೇಖಿಸಿಲ್ಲದ ಹಿನ್ನಲೆ ಮೊದಲ ಕಂತಿನ ಅನುದಾನ ಹಂಚಿಕೆಯಲ್ಲಿ ಕರ್ನಾಟಕನ್ನ ಕೇಂದ್ರ ಸರ್ಕಾರ ಕೈ ಬಿಟ್ಟಿತಾ ಎಂಬ ಪ್ರಶ್ನೆ ಎದ್ದಿದೆ.

    ನೆರೆ ಪರಿಹಾರ:
    ರಾಜ್ಯದಲ್ಲಿ ನೆರೆ ನಷ್ಟ ಅಂದಾಜು 1 ಲಕ್ಷ ಕೋಟಿ ರೂ. ಆಗಿತ್ತು. ಆದರೆ ಪ್ರಧಾನಿ ಮೋದಿ ಸರ್ಕಾರ ಈವರೆಗೂ ಎರಡು ಕಂತುಗಳಲ್ಲಿ 3,069 ಕೋಟಿ ರೂ. ಮಾತ್ರ ನೀಡಿದೆ. ಉಳಿದ ಪರಿಹಾರವನ್ನು ಯಾವಾಗ ನೀಡುತ್ತೆ ಅಂತಾ ಕಾಯ್ತಿದ್ದ ಕರ್ನಾಟಕಕ್ಕೆ ಕೇಂದ್ರದ ನಡೆ ದೊಡ್ಡ ಶಾಕ್ ನೀಡಿದೆ.

    ಇದೇ ವಿಚಾರವಾಗಿ ಜನರಿಯಲ್ಲಿ ಟ್ವೀಟ್ ಮಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ನೆರೆ ಪರಿಹಾರಕ್ಕಾಗಿ 1869 ಕೋಟಿ ರೂ. ಪರಿಹಾರ ನೀಡಿರುವ ನರೇಂದ್ರ ಮೋದಿ ಸರ್ಕಾರಕ್ಕೆ ಧನ್ಯವಾದಗಳು. ಅಂದಾಜು ನೆರೆ ನಷ್ಟ 1 ಲಕ್ಷ ಕೋಟಿ ರೂ. ಸಿಎಂ ಯಡಿಯೂರಪ್ಪ ಸರ್ಕಾರ ಕೇಳಿದ್ದು 38 ಸಾವಿರ ಕೋಟಿ ರೂ. ಎರಡು ಕಂತುಗಳಲ್ಲಿ ಕೇಂದ್ರ ನೀಡಿರುವುದು ರೂ.3,069 ಕೋಟಿ. ಉಳಿದದ್ದು ಯಾವಾಗ ಎಂದು ಪ್ರಶ್ನಿಸಿದ್ದರು.

    ಆಗಸ್ಟ್ ತಿಂಗಳ ನೆರೆಹಾವಳಿಯ ಸಮೀಕ್ಷಾ ವರದಿ ಆಧಾರದಲ್ಲಿ ಸಿಎಂ ಯಡಿಯೂರಪ್ಪನವರು ರೂ.38 ಸಾವಿರ ಕೋಟಿ ಪರಿಹಾರ ಕೇಳಿದ್ದರು. ಅಕ್ಟೋಬರ್ ತಿಂಗಳ ಅತಿವೃಷ್ಟಿಯ ಸಮೀಕ್ಷೆ ಇನ್ನೂ ನಡೆದಿಲ್ಲ. ಅದನ್ನು ತಕ್ಷಣ ಪೂರ್ಣಗೊಳಿಸಿ. ಆ ಸಮೀಕ್ಷಾ ವರದಿಯ ಜೊತೆ ಪರಿಹಾರಕ್ಕಾಗಿ ಪೂರಕ ಬೇಡಿಕೆ ಸಲ್ಲಿಸಬೇಕೆಂದು ಆಗ್ರಹಿಸುತ್ತೇನೆ ಎಂದಿದ್ದರು.

  • ದೇಶದ ಎಲ್ಲ ರಾಜ್ಯಗಳು ಲಾಕ್‍ಡೌನ್- ಇಡೀ ದೇಶವೇ ಸ್ತಬ್ಧ

    ದೇಶದ ಎಲ್ಲ ರಾಜ್ಯಗಳು ಲಾಕ್‍ಡೌನ್- ಇಡೀ ದೇಶವೇ ಸ್ತಬ್ಧ

    ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ದೇಶವ್ಯಾಪಿ ತಾಂಡವಾಡುತ್ತಿರುವ ಹಿನ್ನೆಲೆಯಲ್ಲಿ ದೇಶದ ಮೂರು ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ರಾಜ್ಯಗಳನ್ನು ಲಾಕ್‍ಡೌನ್ ಮಾಡಲಾಗಿದೆ.

    ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 30 ರಾಜ್ಯಗಳಲ್ಲಿ ಸಂಪೂರ್ಣ ಲಾಕ್‍ಡೌನ್ ಘೋಷಿಸಲಾಗಿದ್ದು, ಒಟ್ಟು 548 ಜಿಲ್ಲೆಗಳು ಬಂದ್ ಆಗಿವೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ಒರಿಸ್ಸಾ ರಾಜ್ಯಗಳಲ್ಲಿ ಕೆಲವು ಜಿಲ್ಲೆಗಳನ್ನು ಮಾತ್ರ ಲಾಕ್‍ಡೌನ್ ಮಾಡಲಾಗಿದೆ. ಉಳಿದಂತೆ ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸಂಪೂರ್ಣವಾಗಿ ಲಾಕ್‍ಡೌನ್ ಆಗಿವೆ.

    ಲಕ್ಷ್ಯದ್ವೀಪದಲ್ಲಿಯೂ ಸಹ ಎಲ್ಲ ಕಾರ್ಯಚಟುವಟಿಕೆಗಳನ್ನು ಬಂದ್ ಮಾಡಲಾಗಿದ್ದು, ಸಂಪೂರ್ಣ ಲಾಕ್‍ಡೌನ್ ಘೋಷಿಸಲಾಗಿದೆ. ದೇಶದ ಎಲ್ಲ ರಾಜ್ಯಗಳು ಮಾರ್ಚ್ 31ರ ವರೆಗೂ ಸಂಪೂರ್ಣವಾಗಿ ಬಂದ್ ಆಗಲಿವೆ.

    ಜಗತ್ತಿನಾದ್ಯಂತ ಲಂಗುಲಗಾಮಿಲ್ಲದೇ ರೌದ್ರತಾಂಡವವಾಡ್ತಿರುವ ಕೊರೋನಾ ಹೆಮ್ಮಾರಿಗೆ ಇಲ್ಲಿವರೆಗೆ 15,306 ಮಂದಿ ಬಲಿಯಾಗಿದ್ದಾರೆ. 3.50 ಲಕ್ಷ ಮಂದಿ ಸೋಂಕಿತರಾಗಿದ್ದಾರೆ. ಅಮೆರಿಕಾದಲ್ಲಿ ಕೊರೋನಾಗೆ ನಿನ್ನೆ ಒಂದೇ ದಿನ 100 ಮಂದಿ ಮೃತಪಟ್ಟಿದ್ದು, ಒಟ್ಟಾರೆ 458 ಮಂದಿ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 34 ಸಾವಿರ ದಾಟಿದೆ.

    ಚೀನಾ ಇಟಲಿ ಬಳಿಕ ಹೆಚ್ಚಿನ ಸಂಖ್ಯೆ ವೈರಸ್ ಬಾಧಿತರು ಇರೋದು ಅಮೆರಿಕಾದಲ್ಲಿ ಎಂದು ವರದಿಯಾಗಿದೆ. ಇಟಲಿಯಲ್ಲಿ ಎರಡು ದಿನಕ್ಕೆ ಹೋಲಿಸಿದ್ರೆ ನಿನ್ನೆ ಮೃತರ ಸಂಖ್ಯೆ ಕಡಿಮೆಯಾಗಿದೆ. ನಿನ್ನೆ 651 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 5500ಕ್ಕೆ ಏರಿಕೆಯಾಗಿದೆ. ಸ್ಪೇನ್‍ನಲ್ಲಿ 2182, ಇರಾನ್‍ನಲ್ಲಿ 1812, ಫ್ರಾನ್ಸ್ 674, ಬ್ರಿಟನ್ 281, ನೆದರ್ ಲೆಂಡ್‍ನಲ್ಲಿ 179, ಜರ್ಮನಿಯಲ್ಲಿ 111 ಮಂದಿ ಸಾವನ್ನಪ್ಪಿದ್ದಾರೆ. ಜರ್ಮನಿ ಚಾನ್ಸಲರ್ ಏಂಜೆಲಾ ಮಾರ್ಕೆಲ್‍ರಲ್ಲಿ ಸೋಂಕು ಲಕ್ಷಣ ಕಂಡು ಬಂದಿದ್ದು, ಕ್ವಾರಂಟೇನ್‍ನಲ್ಲಿ ಇರಿಸಲಾಗಿದೆ. ನ್ಯೂಯಾರ್ಕ್ ನಗರದ ಜೈಲುಗಳಲ್ಲಿ 38 ಮಂದಿಗೆ ಕೊರೋನಾ ಸೋಂಕು ಕಂಡು ಬಂದಿದೆ.