Tag: state

  • ಇಂದು, ನಾಳೆ ರಾಜ್ಯಾದ್ಯಂತ ಸುರಿಯಲಿದೆ ಮಳೆ

    ಇಂದು, ನಾಳೆ ರಾಜ್ಯಾದ್ಯಂತ ಸುರಿಯಲಿದೆ ಮಳೆ

    ಬೆಂಗಳೂರು: ರಾಜ್ಯಾದ್ಯಂತ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

    ಪಬ್ಲಿಕ್ ಟಿವಿಗೆ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಪ್ರತಿಕ್ರಿಯಿಸಿ, ಛತ್ತೀಸ್‍ಗಡ ದಿಂದ ತಮಿಳುನಾಡುವರೆಗೆ ಟ್ರಫ್ (ಮೋಡಗಳ ಸಾಲು) ಇರುವ ಹಿನ್ನೆಲೆಯಲ್ಲಿ ಇಂದು ಕೂಡ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ತಿಳಿಸಿದರು.

    ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡಿನಲ್ಲಿ ಹೆಚ್ಚಿನ ಮಳೆಯಾಗುವ ಸಂಭವವಿದೆ. ಬೆಂಗಳೂರಿನಲ್ಲಿ ಕೂಡ ಮಳೆಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.

  • ಹೊಸ ವರ್ಷದ ಹೊತ್ತಲ್ಲೇ ಶಾಕ್- ಬೆಂಗಳೂರಿನ ಮೇಲೆ ಅಲ್‍ಖೈದಾ ವಕ್ರದೃಷ್ಟಿ

    ಹೊಸ ವರ್ಷದ ಹೊತ್ತಲ್ಲೇ ಶಾಕ್- ಬೆಂಗಳೂರಿನ ಮೇಲೆ ಅಲ್‍ಖೈದಾ ವಕ್ರದೃಷ್ಟಿ

    ಬೆಂಗಳೂರು: ಹೊಸ ವರ್ಷದ ದಿನ ರಾಜ್ಯದ ಮೇಲೆ ಅಲ್‍ಖೈದಾ ವಕ್ರದೃಷ್ಟಿ ಬೀರಿದೆ ಎನ್ನಲಾಗಿದೆ.

    ಸಮುದ್ರ ಮಾರ್ಗದ ಮೂಲಕ ರಾಜ್ಯಕ್ಕೆ ನುಸುಳಲಿರುವ ಉಗ್ರರು ಬೆಂಗಳೂರು, ಮಂಗಳೂರು, ಮೈಸೂರಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.

    ಕಳೆದ ವರ್ಷ ಹೊಸ ವರ್ಷಾಚರಣೆ ವೇಳೆ ಬೆಂಗಳೂರು ಮಾನ ರಾಷ್ಟ್ರಮಟ್ಟದಲ್ಲಿ ಹರಾಜಾಗಿತ್ತು. ಇದರಿಂದ ಎಚ್ಚೆತ್ತಿರೋ ಪೊಲೀಸ್ ಇಲಾಖೆ ಈ ಬಾರಿ ಹೊಸ ವರ್ಷಾಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

    ನಗರದಾದ್ಯಂತ 15 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲು ನಿರ್ಧರಿಸಿದೆ. ಹೊಸ ವರ್ಷದಂದು ರಾತ್ರಿ 2 ಗಂಟೆವರೆಗೆ ಪಬ್ ಮತ್ತು ಬಾರ್ ಗಳು ತೆರೆಯಲು ಅವಕಾಶ ನೀಡಲಾಗಿದೆ. ಕಬ್ಬನ್ ರೋಡ್, ಎಂಜಿ ರೋಡ್, ಬ್ರಿಗೇಡ್ ರೋಡ್‍ ಗಳ ಪ್ಯಾರಲಲ್ ರೋಡ್ ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

    ಡಿಸೆಂಬರ್ 31ರ ರಾತ್ರಿ 9 ಗಂಟೆಯ ನಂತರ ನಗರದ ಪ್ರಮುಖ ಫ್ಲೈಓವರ್ ಗಳ ಮೇಲೆ ವಾಹನ ಸಂಚಾರ ನಿಷೇಧಿಸಲಾಗಿದೆ.

    2018ರ ಸ್ವಾಗತಕ್ಕೆ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. 4 ಅಡಿಷನಲ್ ಸಿಪಿ, ಇಬ್ಬರು ಜಂಟಿ ಪೊಲೀಸ್ ಆಯುಕ್ತರು, 19 ಡಿಸಿಪಿಗಳು, 49 ಎಎಸ್‍ಪಿಗಳು, 250 ಪೊಲೀಸ್ ಇನ್ಸ್ ಪೆಕ್ಟರ್, 400 ಎಸ್‍ವೈ, 700 ಎಎಸ್‍ಐ, 40 ಕೆಎಸ್‍ಆರ್ ಪಿ, 30 ಸಿಎಆರ್ ತುಕಡಿ, 1,500 ಸಾವಿರ ಹೋಂಗಾಡ್ರ್ಸ್, 1,000 ಸಿವಿಲ್ ಡಿಫೆನ್ಸ್ ಪೊಲೀಸರನ್ನ ನಿಯೋಜಿಸಲಿದ್ದಾರೆ.

    ಒಟ್ಟು 800 ಸಿಸಿಟಿವಿಗಳನ್ನ ಅಳವಡಿಕೆ ಮಾಡಲಾಗುತ್ತದೆ. 500 ಹೊಯ್ಸಳ ವಾಹನ ಹಾಗೂ 250 ಬೈಕ್‍ ಗಳು ಗಸ್ತಿನಲ್ಲಿ ಇರಲಿವೆ.

  • 2 ದಿನಗಳ ಕಾಲ ರಾಜ್ಯದ ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆ

    2 ದಿನಗಳ ಕಾಲ ರಾಜ್ಯದ ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆ

    ಬೆಂಗಳೂರು: ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿ ಹಿನ್ನಲೆಯಲ್ಲಿ ರಾಜ್ಯದ ಕರಾವಳಿ ಭಾಗ ಹಾಗೂ ಮಲೆನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

     

    ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ನಿರ್ದೇಶಕ ಶ್ರೀನಿವಾಸ ರೆಡ್ಡಿ, ಮುಂದಿನ ಎರಡು ದಿನಗಳ ಕಾಲ ಸುಮಾರು 60 ರಿಂದ 100 ಮಿಲಿ ಮೀಟರ್ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಮೋಡ ಕವಿದ ವಾತವರಣವಿರಲಿದ್ದು ಅಲ್ಲಲ್ಲಿ ಚದುರಿದಂತೆ ಅಲ್ಪ ಪ್ರಮಾಣದಲ್ಲಿ ಮಳೆಯಾಗಲಿದೆ. ಹಾಗೂ ಇನ್ನೂ ಉತ್ತರ ಒಳನಾಡಿನ ಮತ್ತು ದಕ್ಷಿಣ ಒಳನಾಡಿನ ಕೆಲ ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಮಾಹಿತಿ ನೀಡಿದರು.

  • ರಾಜ್ಯದಲ್ಲಿ ಮುಂದುವರಿದ ಮಳೆಯ ಅಬ್ಬರ- ವಿರಾಜಪೇಟೆಯಲ್ಲಿ ಕರ್ನಾಟಕ-ಕೇರಳ ಸಂಪರ್ಕ ರಸ್ತೆ ಕಟ್

    ರಾಜ್ಯದಲ್ಲಿ ಮುಂದುವರಿದ ಮಳೆಯ ಅಬ್ಬರ- ವಿರಾಜಪೇಟೆಯಲ್ಲಿ ಕರ್ನಾಟಕ-ಕೇರಳ ಸಂಪರ್ಕ ರಸ್ತೆ ಕಟ್

    ಬೆಂಗಳೂರು: ರಾಜ್ಯದ ಹಲವೆಡೆ ಮಳೆಯ ಅಬ್ಬರ ಮುಂದುವರೆದಿದೆ. ಮಡಿಕೇರಿಯ ಕಾವೇರಿ ನದಿಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಹಳ್ಳ-ಕೊಳ್ಳ ನದಿ ತೊರೆಗಳು ಹರಿಯುವ ತಟಗಳಲ್ಲಿರುವ ಗದ್ದೆ-ತೋಟಗಳಿಗೆ ನೀರು ನುಗ್ಗಿದೆ. ಕರ್ನಾಟಕ-ಕೇರಳ ಸಂಪರ್ಕ ಕಲ್ಪಿಸುವ ವಿರಾಜಪೇಟೆ ತಾಲೂಕಿನ ಪೆರುಂಬಾಡಿ ಬಳಿ ರಸ್ತೆಯೇ ಕುಸಿದು ಸಂಪರ್ಕ ಕಡಿತಗೊಂಡಿದೆ. ತಾತ್ಕಾಲಿಕವಾಗಿ ರಸ್ತೆ ರಿಪೇರಿ ಕೆಲಸ ನಡೆಯುತ್ತಿದೆ.

    ಮಹಾರಾಷ್ಟ್ರದಲ್ಲಿ ಭೀಕರ ಮಳೆಯಾಗುತ್ತಿದ್ದು ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ದಿನಗಳಿಂದ ರಾಯಭಾಗ ಹಾಗೂ ಅಥಣಿ ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ. 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಬಿಡಲಾಗ್ತಿದೆ. ದೂದಗಂಗಾ, ವೇದಗಂಗಾ ಕೃಷ್ಣಾ ನದಿ ಮೇಲಿರುವ ಕೆಳ ಹಂತದ 6 ಸೇತುವೆಗಳು ಜಲಾವೃತಗೊಂಡಿವೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನದಿ ಪಾತ್ರದಲ್ಲಿ ಜನರ ಸಂಚಾರ ಅಸ್ತವ್ಯಸ್ಥವಾಗಿದೆ. ಪ್ರವಾಹದ ಆತಂಕವಿಲ್ಲ, 2 ಲಕ್ಷ ಕ್ಯೂಸೆಕ್ ಮೇಲೆ ನೀರು ಬಂದರೆ ಮಾತ್ರ ಸಮಸ್ಯೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

    ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಮಳೆ ಸ್ವಲ್ಪಮಟ್ಟಿಗೆ ತಗ್ಗಿದೆ. ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಕಳಸ, ಕುದುರೆಮುಖದಲ್ಲಿ ಮಳೆಯಾಗ್ತಿದ್ದು, ತುಂಬಾ, ಭದ್ರಾ ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ.

     

  • ರಾಜ್ಯದ ರೈತರಿಗೆ ಕಹಿ ಸುದ್ದಿ, ಜುಲೈನಲ್ಲೂ ಮಳೆ ಕೈ ಕೊಡುವ ಸಾಧ್ಯತೆ!

    ರಾಜ್ಯದ ರೈತರಿಗೆ ಕಹಿ ಸುದ್ದಿ, ಜುಲೈನಲ್ಲೂ ಮಳೆ ಕೈ ಕೊಡುವ ಸಾಧ್ಯತೆ!

    ಬೆಂಗಳೂರು: ರಾಜ್ಯದ ರೈತರಿಗೆ ಕಹಿ ಸುದ್ದಿ. ಜುಲೈ ತಿಂಗಳಲ್ಲಿ ಮುಂಗಾರು ಮಳೆ ಕೈಕೊಡುವ ಸಾಧ್ಯತೆ ಇದೆ.

    ಇನ್ನೂ ಮುಂದಿನ ಹತ್ತು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ. ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ಮೋಡಗಳು ಕೊರತೆಯಿಂದಾಗಿ ಹವಾಮಾನ ಬದಲಾವಣೆಯಾಗದ ಕಾರಣ ಮಳೆಯಾಗುವ ಸಾಧ್ಯತೆ ಕಡಿಮೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಕಳೆದ ವರ್ಷದ ಜೂನ್‍ನಲ್ಲಿ ಸುರಿದ ಮಳೆ ಈ ವರ್ಷವು ಸುರಿದಿಲ್ಲ. ರಾಜ್ಯದ 14 ಜಿಲ್ಲೆಗಳಲ್ಲಿ ಜೂನ್ ತಿಂಗಳಲ್ಲಿ ಮಳೆಯ ಕಡಿಮೆಯಾಗಿದೆ. ಶೇಕಡಾ 5 ರಷ್ಟು ಈ ಬಾರಿ ಜೂನ್ ತಿಂಗಳಲ್ಲಿ ಮಳೆಯ ಕೊರತೆ ಕಂಡಿದೆ. ಕಳೆದ ವರ್ಷ ಜೂನ್‍ನಲ್ಲಿ 220 ಎಂಎಂ ಮಳೆಯಾಗಿದ್ದರೆ, ಈ ಬಾರಿ ಕೇವಲ 185 ಎಂಎಂ ಮಳೆಯಾಗಿದೆ ಎಂದು ಮಾಹಿತಿ ನೀಡಿದರು.

    ಈ ವರ್ಷ ಜೂನ್‍ನಲ್ಲಿ ಮಳೆಯ ಪ್ರಮಾಣದ ಅಂಕಿ ಅಂಶದ ಪ್ರಕಾರ ಮಲೆನಾಡಿನ ಎರಡು ಜಿಲ್ಲೆಗಳಲ್ಲಿ ಮಳೆಯ ಕೊರತೆ ಕಂಡಿದೆ. ಕರಾವಳಿ ಭಾಗದ ಮೂರು ಜಿಲ್ಲೆಗಳಲ್ಲಿ ಮಳೆಯ ಕೊರತೆ ಕಾಣಿಸಿದೆ. ದಕ್ಷಿಣ ಒಳನಾಡಿನ 9 ಜಿಲ್ಲೆಯಲ್ಲಿ ಮಳೆಯ ಕೊರತೆ ಇದೆ. ಉತ್ತರ ಒಳನಾಡಿನ ನಾಲ್ಕು ಜಿಲ್ಲೆಗಳಲ್ಲಿ ಮಳೆಯ ಕೊರತೆ ಕಂಡಿದೆ ಶ್ರೀನಿವಾಸ್ ರೆಡ್ಡಿ ತಿಳಿಸಿದರು.

  • ಜೂನ್ 26 ರಿಂದ ಕರ್ನಾಟಕದಲ್ಲಿ ಮುಂಗಾರು ಚುರುಕು

    ಜೂನ್ 26 ರಿಂದ ಕರ್ನಾಟಕದಲ್ಲಿ ಮುಂಗಾರು ಚುರುಕು

    ಬೆಂಗಳೂರು: ಜೂನ್ 26 ರಿಂದ ಕರ್ನಾಟಕದಲ್ಲಿ ಮುಂಗಾರು ಚುರುಕುಗೊಳ್ಳುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ತೇವಾಂಶ ಕೊರತೆ ಹಾಗೂ ಗಾಳಿಯು ದುರ್ಬಲವಾಗಿರುವ ಹಿನ್ನಲೆಯಲ್ಲಿ ಮುಂಗಾರು ಮಳೆ ದುರ್ಬಲವಾಗಿದೆ. ರಾಜ್ಯದ 30 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ ಮುಂಗಾರು ಮಳೆ ಕೊರತೆ ಇದೆ. ದಕ್ಷಿಣ ಒಳನಾಡಿನ 8 ಜಿಲ್ಲೆಗಳಲ್ಲಿ, ಹಾಗೂ ಉತ್ತರ ಒಳನಾಡಿನ ಮೂರು ಜಿಲ್ಲೆಗಳಲ್ಲಿ, ಉತ್ತರ ಕರ್ನಾಟಕ ಏಳು ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ ಎಂದು ತಿಳಿಸಿದರು.

    ಮಲೆನಾಡಿನ ಕೊಡಗು ಜಿಲ್ಲೆಯಲ್ಲಿ ಅತ್ಯಧಿಕ ಶೇ.42 ರಷ್ಟು ಮಳೆ ಕೊರತೆ ಇದೆ. ಹಾಗೆ ಕಾವೇರಿ ಭಾಗದಲ್ಲಿ ಶೇಕಡಾ 36ರಷ್ಟು ಮಳೆ ಕೊರತೆ ಇದೆ. ಇನ್ನೂ ನಾಲ್ಕು ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಕಡಿಮೆ ಎಂದು ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದರು.

  • ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಡಾರ್ಜಿಲಿಂಗ್‍ನಲ್ಲಿ ಬಿಜಿಎಂ ಸಂಘಟನೆಯಿಂದ ಘರ್ಷಣೆ

    ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಡಾರ್ಜಿಲಿಂಗ್‍ನಲ್ಲಿ ಬಿಜಿಎಂ ಸಂಘಟನೆಯಿಂದ ಘರ್ಷಣೆ

    ಡಾರ್ಜಿಲಿಂಗ್: ಗೂರ್ಖಾ ಜನಮುಕ್ತಿ ಮೋರ್ಚಾ ಪ್ರತಿಭಟನಾಕಾರರು ಪ್ರತ್ಯೇಕ ಗೂರ್ಖಾ ಲ್ಯಾಂಡ್ ರಾಜ್ಯಕ್ಕಾಗಿ ಡಾರ್ಜಿಲಿಂಗ್‍ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಶನಿವಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಭಾರತೀಯ ಮೀಸಲು ಬಟಾಲಿಯನ್(ಐಆರ್‍ಬಿ) ಸಹಾಯಕ ಕಮಾಂಡೆಂಟ್ ಅವರನ್ನು ಹತ್ಯೆ ಮಾಡಲಾಗಿದೆ.

    ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ಧಿಷ್ಠಾವಧಿ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯನ್ನು ಹತ್ತಿಕ್ಕುವ ಯತ್ನ ಮುಂದುವರಿದಿದ್ದು, ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು ತೂರಿದ್ದರಿಂದ ಘರ್ಷಣೆ ತೀವ್ರ ಸ್ವರೂಪ ಪಡೆದುಕೊಂಡಿದೆ.

    ಭದ್ರತಾ ಸಿಬ್ಬಂದಿ ಮತ್ತು ಗೂರ್ಖಾ ಜನ ಮುಕ್ತಿ ಮೋರ್ಚಾ(ಜಿಜೆಎಂ)ದೊಂದಿಗೆ ನಡೆದ ಘರ್ಷಣೆಯಲ್ಲಿ ಐಆರ್‍ಬಿ ಸಹಾಯಕ ಕಮಾಂಡೆಂಟ್ ಕಿರಣ್ ತಮಂಗ್ ಅವರು ಗಂಭೀವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಬಿಜೆಎಂ ಇಬ್ಬರು ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ಗೂರ್ಖಾ ಜನ ಮುಕ್ತಿ ಮೋರ್ಚಾದ ಸಹಾಯಕ ಪ್ರಧಾನ ಕಾರ್ಯದರ್ಶಿ ಬಿನಯ್ ತಮಂಗ್ ಹೇಳಿದ್ದಾರೆ.

    ಪ್ರಸ್ತುತ ಡಾರ್ಜಿಲಿಂಗ್‍ನಲ್ಲಿ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿದ್ದು, ಜಿಜೆಎಂ ಕಾರ್ಯಕರ್ತರು ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್ ಹಾಗೂ ಕಲ್ಲುಗಳನ್ನು ಎಸೆಯುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಟೀಯರ್ ಗ್ಯಾಸ್ ಹಾಗೂ ಲಾಠಿ ಚಾರ್ಜ್ ನಡೆಸುತ್ತಿದ್ದಾರೆ.

    ಜಿಜೆಎಂ ಕಾರ್ಯಕರ್ತರು ಹಾಗೂ ಪೊಲೀಸರ ನಡುವಿನ ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದು, ಸಿಂಗ್ಮರಿ ಪ್ರದೇಶದಲ್ಲಿ ಸೇನೆ ನಿಯೋಜಿಸಲಾಗಿದೆ.

     

  • ನಾಲ್ವರು ಐಪಿಎಸ್ ಅಧಿಕಾರಿಗಳು ರಾಜ್ಯದಿಂದ ಕೇಂದ್ರ ಸೇವೆಗೆ

    ನಾಲ್ವರು ಐಪಿಎಸ್ ಅಧಿಕಾರಿಗಳು ರಾಜ್ಯದಿಂದ ಕೇಂದ್ರ ಸೇವೆಗೆ

    ಬೆಂಗಳೂರು: ರಾಜ್ಯ ಐಪಿಎಸ್ ಅಧಿಕಾರಿಗಳ ಗುಳೆ ಪರ್ವ ಆರಂಭವಾಗಿದೆ. ರಾಜ್ಯ ಸೇವೆಗೆ ಗುಡ್ ಬೈ ಹೇಳಿ ಕೇಂದ್ರ ಸೇವೆಗೆ ತೆರಳಲು ನಾಲ್ವರು ಐಪಿಎಸ್ ಅಧಿಕಾರಿಗಳು ತಯಾರಾಗಿದ್ದಾರೆ.

    ಈ ಲಿಸ್ಟ್ ನಲ್ಲಿ ಮೊದಲಿಗೆ ಇರೋರು ಮಧುಕರ್ ಶೆಟ್ಟಿ. ರಾಜ್ಯದಲ್ಲಿ ಒಳ್ಳೆಯ ಪೋಸ್ಟಿಂಗ್ ನೀಡದ ಹಿನ್ನೆಲೆಯಲ್ಲಿ ಕೇಂದ್ರದ ಕದ ತಟ್ಟಿದ್ದಾರೆ. ಇದೀಗ ನ್ಯಾಷನಲ್ ಪೊಲೀಸ್ ಅಕಾಡೆಮಿ ಐಜಿಯಾಗಿ ಮಧುಕರ್ ಶೆಟ್ಟಿ ನಿಯೋಜನೆಗೊಂಡಿದ್ದಾರೆ.

    ಖಡಕ್ ಮಹಿಳಾ ಅಧಿಕಾರಿ ಸೋನಿಯಾ ನಾರಂಗ್ ಅವರು ಲೋಕಾಯುಕ್ತದಲ್ಲಿ ನಡೆದಿದ್ದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದವರು. ಪಿಯುಸಿ ಪ್ರಶ್ನೆ ಪತ್ರಿಕೆ ಲೀಕಾಸುರರನ್ನ ಹೆಡೆಮುರಿ ಕಟ್ಟಿದವರು. ಸದ್ಯ ಸಿಐಡಿ ಯಲ್ಲಿ ಡಿಐಜಿ ಯಾಗಿ ಕರ್ತವ್ಯ ನಿರ್ವಹಿಸ್ತಿದ್ದು, ಏಪ್ರಿಲ್ 1ರಿಂದ ಕೇಂದ್ರ ಸೇವೆಗೆ ತೆರಳಲಿದ್ದಾರೆ. ಈ ಮೂಲಕ ಎನ್‍ಐಎ ಡಿಐಜಿಯಾಗಿ ಹೊಸ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಕಳೆದ ವರ್ಷವೇ ಕೇಂದ್ರ ಸೇವೆಗೆ ತೆರಳಬೇಕಿದ್ದ ನಾರಂಗ್ ಅವರನ್ನು ರಾಜ್ಯ ಸರ್ಕಾರ ಕಳುಹಿಸಿಕೊಟ್ಟಿರಲಿಲ್ಲ.

    ದಕ್ಷ ಪ್ರಾಮಾಣಿಕ ಅಧಿಕಾರಿ ಲಾಭೂರಾಮ್ ಅವರ ಹೆಸರು ಕೇಳಿದಾಕ್ಷಣ ಒಳ್ಳೆ ಆಫೀಸರ್ ಅಂತಾರೆ ಜನ. ಸದ್ಯ ಬೆಂಗಳೂರು ಉತ್ತರ ವಿಭಾಗದ ಡಿಸಿಪಿಯಾಗಿರೋ ಲಾಭೂರಾಮ್ ಕೇಂದ್ರಕ್ಕೆ ತೆರಳಲಿದ್ದಾರೆ. ಇವರ ಜೊತೆಗೆ ಸಿಸಿಬಿ ಡಿಸಿಪಿ ಕೌಶಲೇಂದ್ರ ಕುಮಾರ್ ಸಹ ಕೇಂದ್ರ ನಿಯೋಜನೆಗೆ ತೆರಳಲಿದ್ದಾರೆ. ಕೇಂದ್ರ ಗುಪ್ತಚರ ಇಲಾಖೆಗೆ ಇಬ್ಬರೂ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

    ಈ ನಾಲ್ವರ ಟ್ರಾನ್ಸ್ ಫರ್ ಗೆ ಕೇಂದ್ರ ಗೃಹ ಇಲಾಖೆ ಸಮ್ಮತಿ ನೀಡಿದೆ. ಆದ್ರೆ ಇಂಥ ಒಳ್ಳೆ ಆಫೀಸರ್ ಗಳನ್ನು ಸರ್ಕಾರ ಉಳಿಸಿಕೊಳ್ಳೋಕೆ ಆಗ್ತಿಲ್ವಲ್ಲ ಅನ್ನೋದೇ ವಿಪರ್ಯಾಸ.