Tag: state

  • ಬೆಂಗಳೂರಿನಲ್ಲಿ ಮುಂದಿನ 2 ದಿನ ಮಳೆ ಸಾಧ್ಯತೆ

    ಬೆಂಗಳೂರಿನಲ್ಲಿ ಮುಂದಿನ 2 ದಿನ ಮಳೆ ಸಾಧ್ಯತೆ

    ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಕರ್ನಾಟಕದ ಹಲವೆಡೆ ವರುಣನ ಆರ್ಭಟ ಮುಂದುವರಿದೆ. ಜೊತೆಗೆ ರಾಜಧಾನಿ ಬೆಂಗಳೂರಿನಲ್ಲಿಯೂ ಇನ್ನೂ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ನಿನ್ನೆ ಹಾಗೂ ಇಂದು ಉತ್ತಮ ಮಳೆಯಾಗಿದ್ದು, ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ 22 ಸೆಂ.ಮೀ. ಮಳೆಯಾಗಿದೆ. ಬೆಳಗಾವಿಯ ನಿಪ್ಪಾಣಿಯಲ್ಲಿ 14 ಸೆಂಟಿ ಮೀಟರ್ ಮಳೆಯಾಗಿದೆ. ಉತ್ತರ ಕನ್ನಡದ ಮಂಚಿಗೆರೆಯಲ್ಲಿ 11 ಸೆಂ.ಮೀ. ಮಳೆ, ಚಿಕ್ಕಮಗಳೂರಿನ ಶೃಂಗೇರಿಯಲ್ಲಿ 12 ಸೆಂ.ಮೀ. ಮಳೆಯಾಗಿದೆ. ಜೂನ್ 17ರಿಂದ 21ರವರೆಗೆ ವ್ಯಾಪಕ ಮಳೆ ಸಾಧ್ಯತೆಯಿದೆಯೆಂದು ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.

    ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ವ್ಯಾಪಕ ಮಳೆಯಾಗಿದ್ದು, ಜೂನ್ 17, 18 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಹಾಗೂ ಜೂನ್ 19, 20ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಮಳೆ ಜೂನ್ 17ರಂದು ಆರೆಂಜ್ ಅಲರ್ಟ್ ಹಾಗೂ ಜೂನ್ 18ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಳಗಾವಿ, ಬೀದರ್, ಕಲಬುರಗಿಯಲ್ಲಿ ಯೆಲ್ಲೋ ಅಲರ್ಟ್, 3 ಜಿಲ್ಲೆಗಳಲ್ಲಿ ಜೂನ್ 17, 18ರಂದು ಯೆಲ್ಲೋ ಅಲರ್ಟ್‍ನ್ನು ಹವಾಮಾನ ಇಲಾಖೆ ಘೋಷಣೆ ಮಾಡಿದೆ. ಜೊತೆಗೆ ಬೆಂಗಳೂರಲ್ಲಿಯೂ ಮುಂದಿನ ಎರಡು ದಿನ ಮಳೆಯಾಗುವ ನಿರೀಕ್ಷೆಯಿದೆಯೆಂದು ತಿಳಿಸಿದೆ. ಇದನ್ನೂ ಓದಿ: ಮಲೆನಾಡಲ್ಲಿ ಮುಂಗಾರು ಚುರುಕು- ಜೋಗಕ್ಕೆ ಜೀವದ ಕಳೆ

  • ರಾಜ್ಯಗಳಿಗೆ 25 ಕೋಟಿಗೂ ಹೆಚ್ಚು ಲಸಿಕೆ ನೀಡಲಾಗಿದೆ – ಕೇಂದ್ರ ಸರ್ಕಾರ

    ರಾಜ್ಯಗಳಿಗೆ 25 ಕೋಟಿಗೂ ಹೆಚ್ಚು ಲಸಿಕೆ ನೀಡಲಾಗಿದೆ – ಕೇಂದ್ರ ಸರ್ಕಾರ

    ನವದೆಹಲಿ: ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈವರೆಗೆ 25,06,41,440 ಕೋವಿಡ್-19 ಲಸಿಕೆಯನ್ನು ಕೇಂದ್ರ ಸರ್ಕಾರ ಉಚಿತವಾಗಿ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

    ಇಂದಿನವರೆಗೂ ನೀಡಲಾದ ಲಸಿಕೆ ಹಾಗೂ ವ್ಯರ್ಥವಾದ ಲಸಿಕೆ ಸೇರಿಸಿದಂತೆ 23,74,21,808 ಲಸಿಕೆಗಳನ್ನು ಬಳಸಲಾಗಿದ್ದು, ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಇನ್ನೂ 1,33,68,727 ಕೋವಿಡ್ ಲಸಿಕೆ ಪ್ರಮಾಣಗಳು ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಲಭ್ಯವಿದೆ. ಅಲ್ಲದೆ 3 ಲಕ್ಷಕ್ಕೂ ಹೆಚ್ಚು(3,81,750) ಲಸಿಕೆ ಪ್ರಮಾಣವನ್ನು ರವಾನಿಸಲಾಗುತ್ತಿದ್ದು, ಮುಂದಿನ ಮೂರು ದಿನಗಳ ಒಳಗೆ ರಾಜ್ಯಗಳು ಲಸಿಕೆಗಳನ್ನು ಸ್ವೀಕರಿಸಲಿದೆ. ಇದನ್ನು ಓದಿ: ಕೊರೊನಾಗೆ ಹೆದರಿ ಊರು ಬಿಟ್ಟು ಗುಡಿಸಲಲ್ಲಿ ಕುಟುಂಬ ಜೀವನ

    ವ್ಯಾಕ್ಸಿನೇಷನ್ ಡ್ರೈವ್‍ನ ಮೂರನೇ ಹಂತವನ್ನು ಈಗಾಗಲೇ ಮೇ 1ರಿಂದ ಆರಂಭಿಸಲಾಗಿದೆ. ಜೂನ್21 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಭಾರತೀಯ ನಾಗರಿಕರಿಗೆ ಕೇಂದ್ರ ಸರ್ಕಾರದಿಂದಲೇ ಉಚಿತವಾಗಿ ಕೊರೊನಾ ಲಸಿಕೆಯನ್ನು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಪ್ರಕಟಿಸಿದ್ದಾರೆ.

  • ಕೋವಿಶೀಲ್ಡ್ ದರ ಇಳಿಕೆ ಮಾಡಿದ ಸೀರಂ ಇನ್‍ಸ್ಟಿಟ್ಯೂಟ್

    ಕೋವಿಶೀಲ್ಡ್ ದರ ಇಳಿಕೆ ಮಾಡಿದ ಸೀರಂ ಇನ್‍ಸ್ಟಿಟ್ಯೂಟ್

    ಪುಣೆ: ಕೇಂದ್ರ ಸರ್ಕಾರದ ಮನವಿಗೆ ಸ್ಪಂದಿಸಿದ ಸೀರಂ ಇನ್‍ಸ್ಟಿಟ್ಯೂಟ್ ಕೋವಿಶೀಲ್ಡ್ ದರವನ್ನು ಇಳಿಕೆ ಮಾಡಿದೆ. ರಾಜ್ಯಗಳಿಗೆ ಈ ಹಿಂದೆ ನಿಗದಿ ಮಾಡಿದ್ದ 400 ರೂಪಾಯಿ ದರವನ್ನು 300 ರೂ.ಗಳಿಗೆ ಇಳಿಕೆ ಮಾಡಲಾಗಿದೆ.

    ಕೋವಿಶೀಲ್ಡ್ ಲಸಿಕೆಗೆ ಈ ಹಿಂದೆ 400 ರೂಪಾಯಿ ನಿಗದಿಯಾಗಿತ್ತು. ಇದೀಗ 100 ರೂಪಾಯಿ ಕಡಿತ ಮಾಡಿ 300 ರೂಪಾಯಿ ದರ ನಿಗದಿ ಪಡಿಸಿದೆ. ಇದರೊಂದಿಗೆ ಕೋವ್ಯಾಕ್ಸಿನ್ ದರವೂ ಇಳಿಕೆಯಾಗುವ ಸಾಧ್ಯತೆಗಳಿವೆ. ಈ ಮಧ್ಯೆ, ರಾಜ್ಯದಲ್ಲಿ ಸೋಂಕು ಹೆಚ್ಚಾದಂತೆ ವ್ಯಾಕ್ಸಿನ್‍ಗೆ ಬೇಡಿಕೆ ಹೆಚ್ಚಾಗಿದೆ. ಜನತೆ ವ್ಯಾಕ್ಸಿನ್ ಪಡೆಯಲು ಮುಗಿಬೀಳುತ್ತಿದ್ದಾರೆ.

    ಈ ಕುರಿತು ಟ್ವಿಟ್ಟರ್ ಮೂಲಕ ತಿಳಿಸಿರುವ ಸೀರಂ ಇನ್‍ಸ್ಟಿಟ್ಯೂಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದಾರ್ ಪೂನಾವಾಲಾ, ಲೋಕೋಪಾಕಾರಿಯಾಗಿ ಗುರುತಿಸಿ ಕೊಂಡಿರುವ ಸೀರಂ ಇನ್‍ಸ್ಟಿಟ್ಯೂಟ್ ಲಸಿಕೆಯ ದರವನ್ನು ರಾಜ್ಯಗಳಿಗೆ ಈ ಹಿಂದೆ ನಿಗದಿ ಮಾಡಿದ್ದ 400 ರೂಪಾಯಿ ದರವನ್ನು 300 ರೂ.ಗಳಿಗೆ ಇಳಿಕೆ ಮಾಡಿದೆ. ಇದರಿಂದ ಸಾವಿರಾರು ಕೋಟಿ ರೂಪಾಯಿ ರಾಜ್ಯಗಳ ಹಣ ಉಳಿಕೆಯಾಲಿದೆ. ಹಾಗೆ ಹೆಚ್ಚು ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೋತ್ಸಾಹ ಸಿಗಲಿದೆ ಮತ್ತು ಹಲವು ಜನರ ಪ್ರಾಣ ಉಳಿಯಲಿದೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

    ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಫಾರ್ಮಾ ಪ್ರಮುಖ ಅಸ್ಟ್ರಾಜೆನಿಕಾ ಸಹಭಾಗಿತ್ವದಲ್ಲಿ ಸೀರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೋಲ್ಡ್ ಲಸಿಕೆಯನ್ನು ಅಭಿವೃದ್ದಿ ಪಡಿಸಿದ್ದು, ಈಗಾಗಲೇ ಸಾವಿರಾರು ಜನ ಲಸಿಕೆಯನ್ನು ಪಡೆದಿದ್ದಾರೆ. ಹಾಗೆ ಬೇರೆ ಬೇರೆ ದೇಶಗಳಿಗೆ ವ್ಯಾಕ್ಸಿನ್‍ನ್ನು ಕಳುಹಿಸಿ ಕೊಡಲಾಗಿದೆ.

    ಇದೀಗ ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ವ್ಯಾಕ್ಸಿನ್ ಪಡೆಯಲು ಕೋವಿನ್ ಆ್ಯಪ್ ಮೂಲಕ ನೋಂದಣಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

  • ಗುಣಮಟ್ಟದ ಜೀವನ – ದೇಶದಲ್ಲೇ ಬೆಂಗಳೂರು ನಂಬರ್ 1 ಸಿಟಿ

    ಗುಣಮಟ್ಟದ ಜೀವನ – ದೇಶದಲ್ಲೇ ಬೆಂಗಳೂರು ನಂಬರ್ 1 ಸಿಟಿ

    – ಕೇಂದ್ರ ಸರ್ಕಾರದಿಂದ ಘೋಷಣೆ

    ಬೆಂಗಳೂರು: ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಈಸ್ ಆಫ್ ಲಿವಿಂಗ್ ಮತ್ತು ಮುನ್ಸಿಪಲ್ ಫಾರ್ಮಾಮೆನ್ಸ್ ಇಂಡಿಸಿಸ್ ಕಾರ್ಯಕ್ರಮದಡಿ, ಗುಣಮಟ್ಟದ ಜೀವನ ನಡೆಸಲು (ಈಸ್ ಆಫ್ ಲಿವಿಂಗ್) ಸೂಕ್ತ ನಗರಗಳ ಪೈಕಿ ಬೆಂಗಳೂರಿಗೆ ನಂಬರ್ ವನ್ ಸ್ಥಾನ ಎಂದು ಘೋಷಿಸಿದೆ.

    ದೇಶದ ಟಾಪ್ 51 ನಗರಗಳ ಪೈಕಿ, ರಾಜ್ಯದ ಜಿಲ್ಲೆಗಳಾದ ಹುಬ್ಬಳ್ಳಿ- ಧಾರವಾಡ 37ನೇ ಸ್ಥಾನದಲ್ಲಿದೆ. ಪ್ರತೀ ವರ್ಷ ಕೇಂದ್ರ ಸರ್ಕಾರ ಸೂಚ್ಯಂಕ ಬಿಡುಗಡೆ ಮಾಡುತ್ತದೆ. ಈಸ್ ಆಫ್ ಲಿವಿಂಗ್ ಪ್ರಕಾರ, ನಗರದಲ್ಲಿ ವಾಸಿಸುತ್ತಿರುವ ಜನರ ಜೀವನ ಮಟ್ಟ, ಗುಣಮಟ್ಟದಲ್ಲಿ ಜೀವನ ನಡೆಸಲು ಬೇಕಾದ ಸೌಕರ್ಯಗಳು, ಶಿಕ್ಷಣ, ಆರೋಗ್ಯ, ಸುರಕ್ಷತೆ, ಘನತ್ಯಾಜ್ಯ ನಿರ್ವಹಣೆ ಸೌಲಭ್ಯಗಳ ಬಗ್ಗೆ ಹಾಗೂ ಜನರ ಆರ್ಥಿಕ ಅಭಿವೃದ್ಧಿಗಾಗಿ ನಗರ ಎಷ್ಟು ಸಹಕಾರಿಯಾಗಿದೆ, ಜೊತೆಗೆ ನಗರದ ಪರಿಸರ ಯಾವ ಗುಣಮಟ್ಟದಲ್ಲಿದೆ ಎಂಬ ಮೂರು ವಿಭಾಗಗಳಲ್ಲಿ ಕೇಂದ್ರ ಸರ್ಕಾರ ಜನರ ಸಮೀಕ್ಷೆ ನಡೆಸಿದೆ. ಒಟ್ಟು 100 ಅಂಕಗಳಿದ್ದು, 30 ಅಂಕಗಳು ಜನರ ಅಭಿಪ್ರಾಯಕ್ಕೆ ಬಿಟ್ಟಿತ್ತು. ಈ ಸರ್ವೇಯನ್ನು ಈಗಾಗಲೇ ಕೇಂದ್ರ ಸರ್ಕಾರ ಮಾಡಿದ್ದು, ಇಂದು ಫಲಿತಾಂಶ ಘೋಷಣೆ ಮಾಡಿದೆ.

    ಇಡೀ ದೇಶದಲ್ಲಿ ನಗರಗಳನ್ನು ಎರಡು ವಿಭಾಗ ಮಾಡಿ, ಹತ್ತು ಲಕ್ಷ ಜನಸಂಖ್ಯೆಯ ನಗರ ಹಾಗೂ ಹತ್ತು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯ ನಗರವಾಗಿ ವಿಭಾಗಿಸಲಾಗಿದೆ. ಇಡೀ ದೇಶದಲ್ಲಿ ಗುಣಮಟ್ಟದ ಜೀವನ ನಡೆಸಲು ಉತ್ತಮ ನಗರ ಎಂದು ಬೆಂಗಳೂರಿಗೆ ಮೊದಲ ರ್ಯಾಂಕಿಂಗ್ ನೀಡಿದೆ. ಈ ಹಿಂದೆ, ಕಡಿಮೆ ರ್ಯಾಂಕ್ ಪಡೆಯುತ್ತಿದ್ದ ಬೆಂಗಳೂರು ಈ ಬಾರಿ ನಂಬರ್ ವನ್ ಬಂದಿದ್ದು, ಇದು ಕೇವಲ ಬಿಬಿಎಂಪಿಗಷ್ಟೇ ಅಲ್ಲ ಜಲಂಮಡಳಿ, ಬಿಡಿಎ, ಬೆಸ್ಕಾಂ, ಮೆಟ್ರೋ, ಬಿಎಂಟಿಸಿಗೂ ಸೇರಿದೆ, ಇಲ್ಲಿನ ಸಂಘಸಂಸ್ಥೆಗಳು- ಜನರಿಗೂ ಈ ಶ್ರೇಯಸ್ಸು ಸೇರಿದೆ ಎಂದು ಆಯುಕ್ತರಾದ ಮಂಜುನಾಥ್ ಪ್ರಸಾದ್ ತಿಳಿಸಿದರು.


    ಇದೇ ರ್ಯಾಂಕಿಂಗ್ ಮುಂದೆಯೂ ಉಳಿಸಿಕೊಂಡು ಹೋಗಲು, ಬೆಂಗಳೂರನ್ನು ಸುಂದರವಾಗಿ ಮಾಡಲು ಸಿಎಂ ಕೂಡಾ ಹಲವಾರು ಯೋಜನೆ ಕೈಗೊಂಡಿದ್ದಾರೆ, ಮುನ್ಸಿಪಲ್ ಪರ್ಫಾಮೆನ್ಸ್ ಇಂಡೆಕ್ಸ್ ನ ಐದು ವಿಭಾಗಗಳಲ್ಲಿ ಬಿಬಿಎಂಪಿಗೆ ಉತ್ತಮ ಅಂಕಗಳು ಬಂದಿಲ್ಲ. ಎಲ್ಲೆಲ್ಲಿ ಎಡವಿದ್ದೇವೆ, ಎಂದು ನೋಡಬೇಕಿದೆ. ಹಾಗೆ ಹಣಕಾಸು, ತಂತ್ರಜ್ಞಾನ, ಪಾಲಿಸಿ, ಆಡಳಿತ ವಿಭಾಗಗಳಲ್ಲಿ ಕೆಲವೆಡೆ ಕಡಿಮೆ ಅಂಕಗಳು ಬಂದಿವೆ. ಇದನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

    ಇನ್ನು ಸಂಸದರಾದ ಪಿ.ಸಿ ಮೋಹನ್ ಮಾತನಾಡಿ, ಈಸ್ ಆಫ್ ಲಿವಿಂಗ್ ಸರ್ವೇಯಲ್ಲಿ ಬೆಂಗಳೂರಿಗೆ ಮೊದಲನೇ ಸ್ಥಾನ ಬಂದಿರುವುದಕ್ಕೆ ಅಭಿನಂದನೆಗಳು. ಒಂದುಕಾಲು ಕೋಟಿ ಜನಸಂಖ್ಯೆಗೆ ಎಲ್ಲಾ ರೀತಿಯ ಸೌಲಭ್ಯ ನೀಡಿ, ಪಾರ್ಕ್-ಕೆರೆಗಳ ಅಭಿವೃದ್ಧಿಯಿಂದ ಈ ಸರ್ವೇಯಲ್ಲಿ ಪ್ರಥಮ ಸ್ಥಾನ ಬಂದಿದೆ. ಕೇಂದ್ರಸರ್ಕಾರದ ಎಲ್ಲಾ ಸಹಕಾರವೂ ಬೆಂಗಳೂರು ನಗರದೊಂದಿಗೆ ಇದೆ ಎಂದರು.

  • ರಾಜ್ಯದ ಹಲವೆಡೆ ಬಿಸಿಲ ಬೇಗೆಗೆ ತಂಪೆರೆದ ವರುಣ

    ರಾಜ್ಯದ ಹಲವೆಡೆ ಬಿಸಿಲ ಬೇಗೆಗೆ ತಂಪೆರೆದ ವರುಣ

    ಬೆಂಗಳೂರು: ಬಿಸಿಲಿನಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಇಂದು ಮತ್ತೆ ವರುಣನ ದರ್ಶನವಾಗಿದೆ. ಬೆಳಗಾವಿ, ಮಂಡ್ಯ, ಹುಬ್ಬಳ್ಳಿ, ಹಾಸನ, ಸೇರಿ ಹಲವೆಡೆ ಇಂದು ಸುರಿದ ಮಳೆಯಿಂದಾಗಿ ಸ್ವಲ್ಪ ಮಟ್ಟಿಗೆ ವರುಣ ತಂಪೆರೆದಂತಾಗಿದೆ.

    ಕುಂದಾನಗರಿ ಬೆಳಗಾವಿಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಬೆಳಗಾವಿಯ ಲಕ್ಷ್ಮೀ ನಗರದಲ್ಲಿ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ. ಏಕಾಏಕಿ ಮಳೆ ಹಿನ್ನೆಲೆಯಲ್ಲಿ ಎಪಿಎಂಸಿಯಲ್ಲಿ ದೂರದ ಊರಿಂದ ಬಂದಂತಹ ರೈತರು, ವ್ಯಾಪಾರಸ್ಥರು ಪರದಾಡುವಂತಾಗಿತ್ತು. ಸವದತ್ತಿಯಲ್ಲೂ ಮಳೆಯಾಗಿದ್ದು, ಶ್ರೀಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಬಂದ ಭಕ್ತರು ಮಳೆಯಿಂದಾಗಿ ಪರದಾಡುವಂತಾಗಿತ್ತು. ಇತ್ತ ಮಳೆ ಸುರಿಯುತ್ತಿದ್ದರು ಅತ್ತ ಮಳೆಯಲ್ಲೂ ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವಿಯ ದರ್ಶನ ಪಡೆದರು.

    ಶ್ರೀರಂಗಪಟ್ಟಣದಲ್ಲಿ ಅಕಾಲಿಕ ಮಳೆಯಿಂದ ಸಾರ್ವಜನಿಕರ ತೊಂದರೆಗೊಳಗಾದರು. ಕೆಆರ್‍ಎಸ್ ವ್ಯಾಪ್ತಿ ಸೇರಿದಂತೆ ಮೈಸೂರಿನಲ್ಲಿ ಜಿಟಿ ಜಿಟಿ ಮಳೆಯಾಗಿದೆ. ಹಾವೇರಿಯ ರಾಣೆಬೆನ್ನೂರು, ಹಿರೇಕೆರೂರುಗಳಲ್ಲಿ ಗಾಳಿ ಸಮೇತ ಮಳೆಯಾಗಿದೆ. ಅರ್ಧ ಗಂಟೆ ಕಾಲ ಸುರಿದ ಅಕಾಲಿಕ ಮಳೆಯೊಂದಿಗೆ ಕೆಲವೆಡೆ ಆಲಿಕಲ್ಲು ಬಿದ್ದಿದೆ. ಚಿತ್ರದುರ್ಗ ಜಿಲ್ಲೆಯಾದ್ಯಂತ ದಟ್ಟವಾದ ಮೋಡ ಕವಿದ ವಾತಾವರಣ ಮೂಡಿದೆ. ಹಾಗೆ ಹುಬ್ಬಳ್ಳಿ, ಹಾಸನದ ಹಲವು ಭಾಗಗಳಲ್ಲೂ ಮಳೆರಾಯ ತಂಪೆರೆದಿದ್ದಾನೆ. ಒಟ್ಟಿನಲ್ಲಿ ಬಿಸಿಲ ಧಗೆಯಿಂದ ಕಂಗಾಲಾಗಿದ್ದ ಜನರ ಮೊಗದಲ್ಲಿ ಮಂದಹಾಸ ಮೂಡಿದೆ.

     

  • ರಾಜ್ಯದಲ್ಲಿ ದಿಢೀರ್ ಮಳೆಯಾಗಲು ಕಾರಣವೇನು..?

    ರಾಜ್ಯದಲ್ಲಿ ದಿಢೀರ್ ಮಳೆಯಾಗಲು ಕಾರಣವೇನು..?

    ಬೆಂಗಳೂರು: ರಾಜ್ಯದ ಹಲವೆಡೆ ನಿನ್ನೆ ತುಂತುರು ಮಳೆಯಾಯಿತು. ಇನ್ನೂ ನಾಲ್ಕು ದಿನ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜನವರಿಯಲ್ಲಿ ಉಂಟಾದ ಅನಿರೀಕ್ಷಿತ ಮಳೆಗೆ ಕಾರಣವೇನು..?, ಎಲ್ಲೆಲ್ಲಿ ಎಷ್ಟೇಷ್ಟು ದಿನ ಮಳೆಯಾಗುತ್ತೆ ಅನ್ನೋದನ್ನು ನೋಡೋಣ.

    * ದಿಢೀರ್ ಮಳೆಯಾಗಲು ಕಾರಣವೇನು…?
    ದಿಢೀರ್ ಮಳೆಗೆ ಪೂರ್ವ ಅಲೆಗಳೇ ಪ್ರಮುಖ ಕಾರಣ. ಚಳಿಗಾಲದಲ್ಲಿ ಸಾಮಾನ್ಯವಾಗಿ ಜನವರಿ ಮತ್ತು ಫೆಬ್ರವರಿ ಅವಧಿಯಲ್ಲಿ ಪೂರ್ವ ದಿಕ್ಕಿನಿಂದ ಗಾಳಿ ಬೀಸುವುದರಿಂದ ಆಗಾಗ ಮಳೆ ಸುರಿಯುತ್ತದೆ. ಬಂಗಾಳ ಕೊಲ್ಲಿಯ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಪ್ರಬಲವಾಗಿರೋದ್ರಿಂದ ಮಳೆಯಾಗುತ್ತಿದೆ. ರಾತ್ರಿ ಹಾಗೂ ಹಗಲು ತಾಪಮಾನ ಒಂದೇ ಆಗಿರೋದ್ರಿಂದ ಚಳಿಯ ಪ್ರಮಾಣ ಹೆಚ್ಚಿದೆ.

    * ಎಷ್ಟು ವರ್ಷಕೊಮ್ಮೆ ಜನವರಿ ತಿಂಗಳಲ್ಲಿ ಮಳೆಯಾಗುತ್ತೆ…?
    ಹವಾಮಾನ ತಜ್ಞರು ಹೇಳೋ ಪ್ರಕಾರ 30 ವರ್ಷದಲ್ಲಿ 4- 5 ಬಾರಿ ಜನವರಿಯಲ್ಲಿ ಮಳೆಯಾಗಿರಬಹುದೆಂದು ಅಂದಾಜಿಸಿದ್ದಾರೆ.

    * ರಾಜ್ಯದ ಯಾವ ಯಾವ ಭಾಗಗಳಲ್ಲಿ ಎಷ್ಟು ದಿನ ಮಳೆಯಾಗಲಿದೆ…?
    ಹವಮಾನ ಇಲಾಖೆಯ ಮುನ್ಸೂಚನೆಯಂತೆ ಕರ್ನಾಟಕದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ. ಕಳೆದ ಎರಡು-ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಇತ್ತು. ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಅಲ್ಲಲ್ಲಿ ಮಳೆಯಾಗಿದೆ.

    ಜ. 10ರವರೆಗೆ ಕರಾವಳಿಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಇನ್ನು ಉತ್ತರ ಒಳನಾಡಿನಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಸಾಧ್ಯತೆ. ದಕ್ಷಿಣ ಒಳನಾಡಿನಲ್ಲಿ ಇಂದು ಹಲವು ಕಡೆ ಮಳೆಯಾಗುವ ಸಾಧ್ಯತೆ ಇದೆ. 8 ಹಾಗೂ 9 ರಂದು ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ.

  • ರಾಜ್ಯದಲ್ಲಿ ಇನ್ನೂ 4 ದಿನ ಮಳೆ – ಮಂಗಳೂರು, ಉಡುಪಿಯಲ್ಲಿ ರಾತ್ರಿ ಅವಾಂತರ

    ರಾಜ್ಯದಲ್ಲಿ ಇನ್ನೂ 4 ದಿನ ಮಳೆ – ಮಂಗಳೂರು, ಉಡುಪಿಯಲ್ಲಿ ರಾತ್ರಿ ಅವಾಂತರ

    ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಿನ್ನೆ ಮಳೆಯಾಗಿದೆ. ಇಂದು ಮೋಡ ಕವಿದ ವಾತಾವರಣ ಮನೆ ಮಾಡಿದ್ದು, ತುಂತುರ ಮಳೆಯಾಗುತ್ತಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಮಳೆಯಾಗಿದೆ.

    4 ದಿನ ಗುಡುಗು ಸಿಡಿಲು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ಕೊಡಗು ಜಿಲ್ಲೆಯ ಹಲವೆಡೆಯೂ ಮಳೆ ಸುರಿದಿದೆ. ಸುಂಟಿಕೊಪ್ಪ ಸುತ್ತಮುತ್ತ ಸುರಿಯುತ್ತಿರುವ ಅಕಾಲಿಕ ಮಳೆಗೆ ರೈತರು ಕಂಗಾಲಾಗಿದ್ದಾರೆ. ಕಾಫಿ ಮತ್ತು ಭತ್ತದ ಬೆಳೆಗೆ ಮಳೆಯಿಂದ ಹಾನಿಯಾಗುವ ಆತಂಕ ರೈತರಲ್ಲಿ ಮನೆ ಮಾಡಿದೆ.

    ರಾಜ್ಯದ 9 ಜಿಲ್ಲೆಗಳಲ್ಲಿ ನಿನ್ನೆ ತುಂತುರು ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಅಕಾಲಿಕ ಮಳೆಯಾಗಿದೆ. ಮಂಗಳೂರು, ಬಂಟ್ವಾಳ, ಮೂಡಬಿದ್ರೆ, ಸುರತ್ಕಲ್, ಮುಲ್ಕಿಯಲ್ಲಿ ಸಿಡಿಲು ಮಿಂಚಿನೊಂದಿಗೆ ಮಳೆಯಾಗಿದೆ. ಉಡುಪಿಯ ಬ್ರಹ್ಮಾವರದಲ್ಲಿ ಆಕಾಶವಾಣಿ ಸಮೀಪವಿರುವ ಸಪ್ತಮಿ ಹೊಟೇಲ್‍ಗೆ ಸಿಡಿಲು ಬಡಿದಿದ್ದು, ಸಂಪೂರ್ಣ ಭಸ್ಮವಾಗಿದೆ. ರೆಫ್ರಿಜರೇಟರ್‍ನ ಕಂಪ್ರೇಸರ್ ಸಿಡಿದು ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.

    ಉಡುಪಿ ಜಿಲ್ಲೆಯ ಹೆಬ್ರಿ, ಕಾರ್ಕಳ ತಾಲೂಕಿನ ಕೆಲವೆಡೆ ಮಿಂಚು, ಗುಡುಗು ಸಹಿತ ಮಳೆಯಾಗಿದೆ. ಪಶ್ಚಿಮಘಟ್ಟದ ತಪ್ಪಲಿನಲ್ಲಿ ಮೊದಲು ಮಳೆ ಆರಂಭಗೊಂಡಿದ್ದು ಹೆಬ್ರಿ ತಾಲೂಕಿನ ಸೋಮೇಶ್ವರ ಅಜೆಕಾರು ಮುನಿಯಾಲು ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಕಾರ್ಕಳ, ಬ್ರಹ್ಮಾವರದಲ್ಲೂ ತುಂತುರು ಮಳೆ ಮುಂದುವರಿದಿದೆ.

    ಅಕಾಲಿಕ ಮಳೆಗೆ ಬೆಂಗಳೂರಿನಲ್ಲಿ ಹಲವು ಅವಾಂತರ ಸೃಷ್ಟಿಯಾಗಿದೆ. ಮಳೆಯಿಂದ ತುಂಡರಿಸಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ತಿಲಕ್ ನಗರದ ಸಾಗರ್ ಅಪೋಲೋ ಆಸ್ಪತ್ರೆ ಬಳಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ವೆಂಕಟೇಶ್ (41) ಎಂದು ಗುರುತಿಸಲಾಗಿದೆ. ಇವರು ಖಾಸಗಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರನಾಗಿದ್ದರು.

    ಇನ್ನು ಬೆಂಗಳುರಿನಲ್ಲಿ ಇಂದು ಕೂಡ ತುಂತುರು ಮಳೆಯಾಗುತ್ತಿದ್ದು, ಕೆಲವೆಡೆ ಮರಗಳು ನೆಲಕ್ಕುರುಳಿವೆ. ತುಂತುರು ಮಳೆಯಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರರೆ.

    ಎಲ್ಲೆಲ್ಲಿ ಎಷ್ಟು ಮಳೆ…!
    ರಾಜಾಜಿನಗರ : 15.5 ಮೀ.ಮೀ
    ಅರಕೆರೆ: 15.5 ಮೀ.ಮೀ
    ದಯಾನಂದ ನಗರ: 14.5 ಮೀ.ಮೀ
    ಕೊಟ್ಟಿಗೆಪಾಳ್ಯ: 13.5 ಮೀ.ಮೀ
    ಸಂಪಂಗಿರಾಮನಗರ: 13. ಮೀ.ಮೀ
    ಮಾರುತಿ ಮಂದಿರ: 12. ಮೀ.ಮೀ
    ಬಿಟಿಎಂ ಲೇಔಟ್: 12. ಮೀ.ಮೀ
    ನಾಗರಭಾವಿ: 12 ಮೀ.ಮೀ

  • ರಾಜ್ಯದಲ್ಲಿ ಅಕ್ಟೋಬರ್ 27 ರವರೆಗೆ ಭಾರೀ ಮಳೆಯ ಮನ್ಸೂಚನೆ

    ರಾಜ್ಯದಲ್ಲಿ ಅಕ್ಟೋಬರ್ 27 ರವರೆಗೆ ಭಾರೀ ಮಳೆಯ ಮನ್ಸೂಚನೆ

    ಬೆಂಗಳೂರು: ರಾಜ್ಯದಲ್ಲಿ ಅಕ್ಟೋಬರ್ 27ರವರೆಗೆ ಭಾರೀ ಮಳೆಯಾಗುತ್ತದೆ. ಬೆಂಗಳೂರಿನಲ್ಲಿ ಇನ್ನೆರಡು ದಿನ ಮಳೆ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ಎಚ್ಚರಿಕೆ ನೀಡಿದೆ.

    ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಆಯ್ತು, ಈಗ ಬೆಂಗಳೂರು ಸರದಿ. ಮುಂಬೈ, ಹೈದರಾಬಾದ್ ರೀತಿ ಬೆಂಗಳೂರು ಕೂಡ ಮುಳುಗುತ್ತಾ ಎಂಬ ಆತಂಕ ಸದ್ಯ ಎದುರಾಗಿದೆ. ಅಕ್ಟೋಬರ್ ತಿಂಗಳ ಈ ಮಳೆ ಕಂಟಕ ಇನ್ನೆಷ್ಟು ದಿನ ಅನ್ನೋ ಪ್ರಶ್ನೆ ಮೂಡಿದೆ. ಈ ಮಧ್ಯೆ ಮಳೆ ಭವಿಷ್ಯದ ಮಾಹಿತಿ ಭಯ ಹುಟ್ಟಿಸಿದೆ. ಸಿಲಿಕಾನ್ ಸಿಟಿಯಲ್ಲಿ ಇನ್ನೆರೆಡು ದಿನ ಯಲ್ಲೋ ಆಲರ್ಟ್ ಘೋಷಿಸಲಾಗಿದೆ.

    ನಿನ್ನೆ ಬಂದ ಅರ್ಧ ಗಂಟೆ ಮಳೆಗೆ ಹೊಸಕರೆಹಳ್ಳಿ ಜಲಾವೃತವಾಗಿದೆ. ಇದೇ ರೀತಿ ಸತತ 2ರಿಂದ 4 ಗಂಟೆ ಮಳೆಯಾದ್ರೆ ಬೆಂಗಳೂರು ಮುಳುಗೋದು ಫಿಕ್ಸ್ ಅನ್ನೊವಂತಾಗಿದೆ. ಹೊಸಕೆರೆಹಳ್ಳಿಯಲ್ಲಿ ಇಂದು ಶುಚಿತ್ವ ಕಾರ್ಯ ನಡೀತಿದೆ. ಬೆಳ್ಳಂಬೆಳಗ್ಗೆಯೇ ಪೌರಕಾರ್ಮಿಕರು ಫೀಲ್ಡ್ ಗೆ ಇಳಿದಿದ್ದಾರೆ. ನಿನ್ನೆ ನೀರು ನುಗ್ಗಿದ ರಸ್ತೆಗಳ ಕ್ಲೀನಿಂಗ್ ಕಾರ್ಯ ಭರದಿಂದ ಸಾಗಿದೆ.

    ಹೊಸಕೆರೆ ಹಳ್ಳಿಯ ದತ್ತಾತ್ರೇಯ ದೇವಾಲಯ ಸಂಪೂರ್ಣ ಜಲಾವೃತಗೊಂಡಿದೆ. ದೇವಾಲಯ ಹಿಂಭಾಗದಲ್ಲಿರುವ ಕಲ್ಯಾಣ ಮಂಟಪವೂ ಸಂಪೂರ್ಣ ಜಲಾವೃತವಾಗಿದ್ದು, ಕಲ್ಯಾಣ ಮಂಟಪದ ಅಂಡರ್ ಗ್ರೌಂಡ್ ನಲ್ಲಿ ಕಾಲಿಡಲು ಆಗದಂತೆ ಕೆಸರಿನ ಗದ್ದೆಯಂತಾಗಿದೆ. ಸಂಪೂರ್ಣವಾಗಿ ನೀರು ಹೋಗಿ ಕೆಸರು ಉಳಿದಿದೆ. ಕಲ್ಯಾಣ ಮಂಟಪದ ಕೆಸರನ್ನ ತಗೆಯಲು ಕನಿಷ್ಠ ಒಂದು ದಿನ ಬೇಕಾಗುತ್ತೆ.

  • ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಯೇ ನಿರ್ಧರಿಸುತ್ತಾರೆ: ನಳಿನ್

    ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಯೇ ನಿರ್ಧರಿಸುತ್ತಾರೆ: ನಳಿನ್

    ಮಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರ ಜೊತೆ ಮಾತನಾಡಿ ಮುಖ್ಯಮಂತ್ರಿಯೇ ನಿರ್ಧಾರ ಕೈಗೊಳ್ಳುತ್ತಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟಿದ್ದಾರೆ.

    ಮಂಗಳೂರಿನಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯಾದಾಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಶಾಸಕ, ಹಿರಿಯರೂ ಆದ ಎಸ್ ಅಂಗಾರ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ನನ್ನ ಅಭಿಪ್ರಾಯ ಹಾಗೂ ಬೇಡಿಕೆ ಇದೆ. ಮುಖ್ಯಮಂತ್ರಿಯವರ ಮುಂದೆ ನನ್ನ ಅಭಿಪ್ರಾಯವನ್ನು ಇಟ್ಟಿದ್ದೇನೆ. ಮಂತ್ರಿ ಸ್ಥಾನ ಕೊಡೋದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟ ವಿಚಾರ. ಅವರೇ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

    ಶುಕ್ರವಾರವಷ್ಟೇ ರಾಜ್ಯ ಬಿಜೆಪಿ ಪದಾಧಿಕಾರಿಗಳ ನೇಮಕ ಮಾಡಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಕಟಿಸಿದ್ದರು. ಉಪಾಧ್ಯಕ್ಷರಾಗಿ ವಿಜಯೇಂದ್ರ, ತೇಜಸ್ವಿನಿ ಅನಂತಕುಮಾರ್, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಅರವಿಂದ ಲಿಂಬಾವಳಿ, ನಿರ್ಮಲಾ ಕುಮಾರ್ ಸುರಾನಾ, ಮಾಲೀಕಯ್ಯ ಗುತ್ತೇದಾರ್ ಅವರನ್ನು ನೇಮಿಸಲಾಗಿದೆ.

    ಪ್ರಧಾನ ಕಾರ್ಯದರ್ಶಿಗಳಾಗಿ ರವಿಕುಮಾರ್, ಮಾಜಿ ಎಂಎಲ್‍ಸಿ ಅಶ್ವಥ್ ನಾರಾಯಣ, ಸಿದ್ದರಾಜು, ಮಹೇಶ್ ಟೆಂಗಿನ ಕಾಯಿ ಅವರಿಗೆ ಹೊಣೆ ನೀಡಲಾಗಿದೆ. ವಕ್ತಾರರಾಗಿ ಗಣೇಶ್ ಕಾರ್ಣಿಕ್‍ರನ್ನು ನೇಮಿಸಲಾಗಿದೆ. ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಗೀತಾ ವಿವೇಕಾನಂದ, ಯುವ ಮೋರ್ಚಾದ ಅಧ್ಯಕ್ಷ ಸಂದೀಪ್ ಅನ್ನೋವ್ರನ್ನು ನೇಮಿಸಲಾಗಿದೆ.

  • ರಾಜ್ಯದೆಲ್ಲೆಡೆ ಇಂದು `ಪೌರತ್ವ’ ಕಿಚ್ಚು- ಅರ್ಧ ಗಂಟೆ ಮಾತ್ರ ಪ್ರತಿಭಟನೆಗೆ ಅವಕಾಶ

    ರಾಜ್ಯದೆಲ್ಲೆಡೆ ಇಂದು `ಪೌರತ್ವ’ ಕಿಚ್ಚು- ಅರ್ಧ ಗಂಟೆ ಮಾತ್ರ ಪ್ರತಿಭಟನೆಗೆ ಅವಕಾಶ

    ಬೆಂಗಳೂರು: ರಾಜ್ಯದೆಲ್ಲೆಡೆ ಇಂದು ಪೌರತ್ವ ಕಾಯ್ದೆ ಖಂಡಿಸಿ ಜನ ಬೀದಿಗಿಳಿಯಲಿದ್ದಾರೆ. ಆದರೆ ಪೊಲೀಸರು ಈಗಾಗಲೇ ಕಂಡೀಷನ್ ಹಾಕಿದ್ದಾರೆ.

    ಪೌರತ್ವ ಕಾಯ್ದೆ ಬಗ್ಗೆ ಬೆಂಗಳೂರಿನಲ್ಲಿ ರ‍್ಯಾಲಿ ನಡೆದರೆ ಇಂದು ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಯಲಿದೆ. ಕಾಯ್ದೆ ಖಂಡಿಸಿ ಹತ್ತಾರು ಸಂಘಟನೆಗಳು, ಸಾವಿರಾರು ಜನ ರೋಡಿಗಿಳಿಯಲಿದ್ದಾರೆ. ಆದರೆ ಅರ್ಧ ಗಂಟೆ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಿದ್ದು, ಅದಕ್ಕೂ ಮೀರಿ ಪ್ರತಿಭಟನೆ ನಡೆಸಿದ್ರೆ ಕಾನೂನು ಕ್ರಮ ಗ್ಯಾರೆಂಟಿ ಅಂತ ಪೊಲೀಸರು ಗುಡುಗಿದ್ದಾರೆ. ಅಲ್ಲದೆ ಪೊಲೀಸರು ಗುರುತಿಸಿದ ಸರ್ಕಲ್‍ನಲ್ಲೇ ಪ್ರತಿಭಟನೆ ನಡೆಸಬೇಕು. ಅದು ಬಿಟ್ಟು ಬೇರೆಡೆ ಪ್ರತಿಭಟನೆ ನಡೆಸುವಂತಿಲ್ಲ.

    ಪೌರತ್ವ ಕಾಯ್ದೆ ಖಂಡಿಸಿ ಇಂದು ಬೀದರ್ ಬಂದ್‍ಗೆ ಕರೆ ನೀಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಂದತಿ ಹಬ್ಬಿತ್ತು. ಆದರೆ ಈ ಬಗ್ಗೆ ಸ್ವತಃ ಎಸ್ ಪಿ ಟಿ. ಶ್ರಿಧರ್ ಸ್ಪಷ್ಟನೆ ನೀಡಿದ್ದು, ಬಂದ್ ಇಲ್ಲ, ರ‍್ಯಾಲಿಯೂ ಇಲ್ಲ. ಬರೀ ಪ್ರತಿಭಟನೆ ಇದೆ ಎಂದಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದು ಎಸ್ ಪಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಕಾರವಾರದ ಭಟ್ಕಳದಲ್ಲಿ ಮುಸ್ಲಿಂ ಸಂಘಟನೆ ಬೃಹತ್ ಪ್ರತಿಭಟನೆ ನಡೆಸಲಿದೆ. ಸೆಕ್ಷನ್ 144 ಸಡಿಲಿಕೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಷರತ್ತುಬದ್ಧ ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಭಟ್ಕಳ ನಗರದಾದ್ಯಂತ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದ್ದು ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

    ಇಂದು ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ಪ್ರತಿಭಟನೆ ನಾಳೆಗೆ ಮುಂದೂಡಿಕೆಯಾಗಿದೆ. ಸಿ.ಎಂ ಇಬ್ರಾಹಿಂ ಹಾಗೂ ಅಂಜುಮನ್ ಇಸ್ಲಾಂ ಸಂಸ್ಥೆ ಮುಖಂಡರೊಂದಿಗೆ ಸಭೆ ನಡೆಸಿ ನಾಳೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಚಾಮರಾಜನಗರದಲ್ಲಿ ಪ್ರತಿಭಟನೆಗೆ ಅನುಮತಿ ಇಲ್ಲ ಅಂತ ಪೊಲೀಸ್ ಇಲಾಖೆ ಹೇಳಿದೆ. ಇತ್ತ ಬೆಳಗಾವಿಯಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ಬಳಿಕ ಕಲ್ಲು ತೂರಾಟ ಮಾಡಿದ ಸಂಬಂಧ ಮಾರ್ಕೆಟ್ ಠಾಣೆ ಪೊಲೀಸರು ಮತ್ತೋರ್ವ ಆರೋಪಿಯನ್ನ ಬಂಧಿಸಿದ್ದಾರೆ.

    ಕಲಬುರಗಿ, ಮೈಸೂರು, ರಾಮನಗರ, ಗದಗ ಸೇರಿದಂತೆ ರಾಜ್ಯದೆಲ್ಲೆಡೆ ಮುಸ್ಲಿಂ ಸಂಘಟನೆಗಳು ಪ್ರತಿಭಟನೆಗೆ ಕರೆಕೊಟ್ಟಿದೆ. ಪೊಲೀಸರು ಈಗಾಗಲೇ ಎಲ್ಲೆಡೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದು ಪ್ರತಿಭಟನೆ ಅಂತ ಕಾನೂನು ಕೈಗೆ ತೆಗೆದುಕೊಳ್ಳುವ ಮುನ್ನ ಎಚ್ಚರವಾಗಿರಿ.