Tag: State Tour

  • ಅಮಿತ್ ಶಾ ರಾಜ್ಯ ಪ್ರವಾಸ ರದ್ದು

    ಅಮಿತ್ ಶಾ ರಾಜ್ಯ ಪ್ರವಾಸ ರದ್ದು

    ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರು ಇದೇ 9 ರಿಂದ ಕೈಗೊಳ್ಳಬೇಕಾಗಿದ್ದ ರಾಜ್ಯ ಪ್ರವಾಸ ರದ್ದಾಗಿದೆ.

    ಚಳಿಗಾಲದ ಸಂಸತ್ ಅಧಿವೇಶನದ ಅವಧಿಯ ವಿಸ್ತರಿಸರಣೆ ಆಗಿರುವುದರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಪ್ರವಾಸ ರದ್ದಾಗಿದ್ದು, ಸಂಸತ್ ಅಧಿವೇಶನದಲ್ಲಿ ಅಮಿತ್ ಶಾ ಉಪಸ್ಥಿತರಿರುವ ತೀರ್ಮಾನದ ಹಿನ್ನೆಲೆಯಲ್ಲಿ  ಪ್ರವಾಸವನ್ನು ಮುಂದೂಡಲಾಗಿದೆ.

    ಈ ಹಿಂದೆ ನಿಗದಿ ಪಡಿಸಿದ್ದಂತೆ ಅಮಿತ್ ಶಾ ಅವರು ತುಮಕೂರಿಗೆ ಆಗಮಿಸಬೇಕಾಗಿತ್ತು. ಇಲ್ಲಿ ಏರ್ಪಡಿಸಲಾಗಿದ್ದ ಪಕ್ಷದ ವಿವಿಧ ಸಭೆಗಳಲ್ಲಿ ಅಮಿತ್ ಶಾ ಪಾಲ್ಗೊಳ್ಳುವವರಿದ್ದರು. ಒಂದೇ ದಿನದಲ್ಲಿ ಕೋಲಾರ, ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹೀಗೆ 5 ಲೋಕಸಭೆ ಕ್ಷೇತ್ರಗಳ ಪ್ರಮುಖರ ಜೊತೆ ವಿಶೇಷ ಸಭೆ ನಿಗಧಿಯಾಗಿತ್ತು. ಈ 5 ಲೋಕಸಭೆ ಕ್ಷೇತ್ರಗಳ ಬೂತ್ ಪ್ರಮುಖರು, ಶಕ್ತಿ ಕೇಂದ್ರ ಪ್ರಮುಖರು ವಿಶೇಷ ಸಭೆ ಸೇರಿದಂತೆ, 20 ರಿಂದ 30 ಸಾವಿರ ಪ್ರಮುಖ ಕಾರ್ಯಕರ್ತರ ಜೊತೆ ವಿಶೇಷ ಸಭೆ ನಡೆಸಿ ಚರ್ಚೆ ನಡೆಸುವ ಸಾಧ್ಯತೆ ಇತ್ತು.

    ಸದ್ಯ ಮುಂದೂಡಲಾಗಿರುವ ಪ್ರವಾಸವನ್ನು ಅಧಿವೇಶನ ಮುಕ್ತಾಯದ ನಂತರ ದಿನಾಂಕ ನಿಗಧಿ ಮಾಡಲಾಗುವುದು ಎಂದು ಹೇಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಸಭೆ ಚುನಾವಣೆ ಸಿದ್ಧತೆ- 3 ತಂಡಗಳಲ್ಲಿ ಬಿಜೆಪಿ ನಡೆಸಲಿದೆ ರಾಜ್ಯ ಪ್ರವಾಸ

    ಲೋಕಸಭೆ ಚುನಾವಣೆ ಸಿದ್ಧತೆ- 3 ತಂಡಗಳಲ್ಲಿ ಬಿಜೆಪಿ ನಡೆಸಲಿದೆ ರಾಜ್ಯ ಪ್ರವಾಸ

    ಬೆಂಗಳೂರು: ವಿಧಾನ ಸಭೆ ಚುನಾವಣೆಯ ನೋವು ಮರೆತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಲೋಕಸಭೆ ಚುನಾವಣೆಗೆ ಭಾರೀ ಸಿದ್ಧತೆ ನಡೆಸಿದ್ದಾಗಿ ಹೇಳಿಕೊಂಡಿದ್ದು, ಅದನ್ನು ಶನಿವಾರ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.

    ಆಗಸ್ಟ್ 9 ಕ್ರಾಂತಿ ದಿನ, ಅವತ್ತೇ ನಮ್ಮ ರಾಜ್ಯ ಪ್ರವಾಸ ಆರಂಭ ಮಾಡುತ್ತೇವೆ. ರಾಜ್ಯ ಬಿಜೆಪಿ ನಾಯಕರ ನೇತೃತ್ವದಲ್ಲಿ ಒಟ್ಟು 3 ತಂಡಗಳು ರಚನೆಯಾಗಿವೆ. ಒಂದನೇ ತಂಡದ ನೇತೃತ್ವವನ್ನು ನಾನು ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಗೋವಿಂದ ಕಾರಜೋಳ ವಹಿಸಿಲಿದ್ದೇವೆ. ನಾವು ಉತ್ತರ ಕರ್ನಾಟಕದ 13 ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದೇವೆ. ಉಳಿದಂತೆ ಎರಡನೇ ತಂಡದಲ್ಲಿ ಜಗದೀಶ್ ಶೆಟ್ಟರ್, ಆರ್.ಅಶೋಕ್, ಅರವಿಂದ ಲಿಂಬಾವಳಿ ಹಾಗೂ ಕೊನೆಯ ತಂಡ ನೇತೃತ್ವವನ್ನು ಈಶ್ವರಪ್ಪ, ಸಿ.ಟಿ.ರವಿ, ಲಕ್ಷ್ಮಣ ಸವದಿ ಅವರು ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

    ಲೋಕಸಭೆ ಅಧಿವೇಶನದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅಂದು ಲೋಕಸಭೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ರಾಜ್ಯದ 28 ಕ್ಷೇತ್ರಗಳಿಂದ ಬಿಜೆಪಿ ಸ್ಪರ್ಧೆಗೆ ಇಳಿಯಲಿದೆ. ಆದರೆ ಶೋಭಾ ಕರಂದ್ಲಾಜೆ ಮತ್ತು ಡಿ.ವಿ.ಸದಾನಂದಗೌಡ ಅವರ ಮತಕ್ಷೇತ್ರಗಳ ಬದಲಾವಣೆ ಆಗುತ್ತದೆ ಎನ್ನುವುದು ಕೇವಲ ಊಹಾಪೋಹ ಅಷ್ಟೇ. ಆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

    ಡಿಸೆಂಬರ್ ಒಳಗಾಗಿ ಬಿಜೆಪಿ ಸರ್ಕಾರ ಬರುತ್ತೆ ಎನ್ನುವ ಬಗ್ಗೆ ನಾನು ಭವಿಷ್ಯ ಹೇಳುವುದಿಲ್ಲ. ಆದರೆ ಕಾಂಗ್ರೆಸ್-ಜೆಡಿಎಸ್ ಜಗಳ, ಬಡಿದಾಟದಿಂದ ಸರ್ಕಾರ ಬಿದ್ದರೆ ನಾವೇನು ಮಾಡುವುದಕ್ಕೆ ಆಗುತ್ತದೆ ಎಂದ ಅವರು, ಪುತ್ರ ವಿಜಯೇಂದ್ರ ಅಗತ್ಯವಿರುವ ಕಡೆ ರಾಜ್ಯ ಪ್ರವಾಸ ಮಾಡುತ್ತಾರೆ. ಆದರೆ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದರು.

    ಪ್ರತ್ಯೇಕ ರಾಜ್ಯ:
    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬಗ್ಗೆ ಬಿಜೆಪಿ ನಾಯಕರು ಬೆಂಬಲ ನೀಡುವುದಿಲ್ಲ. ಶಾಸಕ ಶ್ರೀರಾಮುಲು ಅವರ ಜೊತೆ ನಾನು ಮಾತನಾಡಿರುವೆ. ಅಖಂಡ ಕರ್ನಾಟಕ ಬಿಜೆಪಿಯ ಸ್ಪಷ್ಟ ನಿಲುವು. ಉತ್ತರ ಹಾಗೂ ದಕ್ಷಿಣ ಕರ್ನಾಟಕ ಎಂದು ಒಡೆದು ಆಳುವ ನೀತಿಯನ್ನು ಸಿಎಂ ಕುಮಾರಸ್ವಾಮಿ ತೋರುತ್ತಿದ್ದಾರೆ. ಇದರ ಬಗ್ಗೆ ಕಾಂಗ್ರೆಸ್ ತನ್ನ ನಿಲುವುವನ್ನು ಸ್ಪಷ್ಟಪಡಿಸಬೇಕು. ಒಂದು ರೀತಿಯಲ್ಲಿ ಪ್ರತ್ಯೇಕ ರಾಜ್ಯದ ಕೂಗಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನೇರ ಕಾರಣ ಎಂದು ಆರೋಪಿಸಿದರು.

    ಹಿರಿಯ ಸಾಹಿತಿಗಳು, ಹೋರಾಟಗಾರರು ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ್ದಾರೆ. ಆದರೆ ಕುಮಾರಸ್ವಾಮಿ ಅದನ್ನು ಅಧಿಕಾರ ದಾಹದಿಂದ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಅವರು ಕೇವಲ 37 ಕ್ಷೇತ್ರಗಳಿಗೆ ಮಾತ್ರ ಮುಖ್ಯಂಮಂತ್ರಿ ಎನ್ನುವ ರೀತಿ ಇರುವುದು ರಾಜ್ಯದ ದುರ್ದೈವ. ಕುಮಾರಸ್ವಾಮಿ ಕುಟುಂಬದ ಕೆಟ್ಟ ಸ್ವಾರ್ಥಕ್ಕಾಗಿ ಕೈ ಹಿಡಿದವರಿಗೆ ದ್ರೋಹ ಮಾಡಿ, ಈಗ ರಾಜ್ಯ ಒಡೆಯುವ ಷಡ್ಯಂತ್ರ ಮಾಡುತ್ತಿದ್ದಾರೆ. ಮುಂದಿನ ಪೀಳಿಗೆ ಅವರನ್ನು ಎಂದೆಂದೂ ಕ್ಷಮಿಸುವುದಿಲ್ಲ ಎಂದು ಹರಿಹಾಯ್ದರು.

    ಸಂಪೂರ್ಣ ಸಾಲ ಮನ್ನಾದ ಹೋರಾಟದಿಂದ ಬಿಜೆಪಿ ಹಿಂದೆ ಸರಿಯುವುದಿಲ್ಲ. ಸರ್ಕಾರ ಈಗಾಗಲೇ ಘೋಷಣೆ ಮಾಡಿರುವ ಸಾಲಮನ್ನಾ ತಕ್ಷಣ ಆಗಬೇಕು. ಸಂಪೂರ್ಣ ಸಾಲಮನ್ನ ಆಗದೇ ಇರಬಹುದು. ಆದರೆ ಸಹಕಾರಿ ಬ್ಯಾಂಕುಗಳಲ್ಲಿ 1 ಲಕ್ಷ ರೂ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 2 ಲಕ್ಷ ರೂ. ಸಾಲಮನ್ನಾ ಶೀಘ್ರವೆ ಮಾಡುವಂತೆ ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದ ಬಿಎಸ್ ಯಡಿಯೂರಪ್ಪ ಅವರು, ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಟಾಂಗ್ ಕೊಟ್ಟರು.

  • ಇಂದಿನಿಂದ ಅಮಿತ್ ಶಾ ರಾಜ್ಯ ಪ್ರವಾಸ- ಮಠಗಳ ಭೇಟಿ ಮೂಲಕ ರಾಹುಲ್‍ಗೆ ಸೆಡ್ಡು

    ಇಂದಿನಿಂದ ಅಮಿತ್ ಶಾ ರಾಜ್ಯ ಪ್ರವಾಸ- ಮಠಗಳ ಭೇಟಿ ಮೂಲಕ ರಾಹುಲ್‍ಗೆ ಸೆಡ್ಡು

    ಬೆಂಗಳೂರು: ಇಂದಿನಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ರಾಹುಲ್ ಪ್ರವಾಸದ ವೇಳೆ ಮೈಸೂರಿನ ಸುತ್ತೂರು ಮಠ ಮತ್ತು ಮಂಡ್ಯದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿರಲಿಲ್ಲ. ಆದ್ರೆ ಅಮಿತ್ ಶಾ ಮಠಗಳಿಗೆ ಭೇಟಿ ನೀಡುವ ಮೂಲಕ ರಾಹುಲ್‍ಗೆ ಪರೋಕ್ಷವಾಗಿ ತಿರುಗೇಟು ನೀಡಲಿದ್ದಾರೆ.

    ಭಾನುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿರುವ ಅಮಿತ್ ಶಾ, ಇಂದು ಬೆಳಗ್ಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡುವ ಮೂಲಕ ಪ್ರವಾಸ ಆರಂಭಿಸಲಿದ್ದಾರೆ. ಈ ಮೂಲಕ ಕರುನಾಡು ಜಾಗೃತಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಜೊತೆಗೆ ರಾಜ್ಯ ಬಿಜೆಪಿ ನಾಯಕರೊಂದಿಗೆ ಸಿದ್ದಗಂಗಾ ಮಠ ಸೇರಿದಂತೆ ಲಿಂಗಾಯತ ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡಿ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಮಠಕ್ಕೆ ಭೇಟಿ ನೀಡಿರುವ ಮಾಜಿ ಸಚಿವ ಸೊಗಡು ಶಿವಣ್ಣ ಪರಿಶೀಲನೆ ನಡೆಸಿದ್ದಾರೆ.

    ಇಂದು ಬೆಳಗ್ಗೆ 9.40ಕ್ಕೆ ಅಮಿತ್ ಶಾ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ 11ಕ್ಕೆ ತಿಪಟೂರಿನಲ್ಲಿ ತೆಂಗು ಬೆಳೆಗಾರರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 1.20ಕ್ಕೆ ಶಿವಮೊಗ್ಗದ ಕುಪ್ಪಳ್ಳಿಯ ಕವಿಶೈಲಕ್ಕೆ ಭೇಟಿ ನೀಡಿ, 2.45ಕ್ಕೆ ತೀರ್ಥಹಳ್ಳಿಯಲ್ಲಿ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ವಾಣಿಜ್ಯೋದ್ಯಮಿಗಳ ಜೊತೆ ಸಂವಾದ, ಶಿವಮೊಗ್ಗದ ಬೆಕ್ಕಿನ ಕಲ್ಮಠಕ್ಕೆ ಭೇಟಿ, ಶಿವಮೊಗ್ಗದಲ್ಲಿ ರೋಡ್ ಶೋ ಬಳಿಕ ಈಶ್ವರಪ್ಪ ನಿವಾಸದಲ್ಲಿ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ಡಿನ್ನರ್ ಹೆಸರಲ್ಲಿ ಭಿನ್ನಮತ ಶಮನಕ್ಕೆ ಅಮಿತ್ ಷಾ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

    ಮಂಗಳವಾರದಂದು ದಾವಣಗೆರೆಯಲ್ಲಿ ಮುಷ್ಠಿಧಾನ್ಯ ಸಂಗ್ರಹ ಅಭಿಯಾನದಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ. ಜೊತೆಗೆ ನಾಳೆ ಮಧ್ಯಾಹ್ನ ದಾವಣಗೆರೆಯಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಚಿತ್ರದುರ್ಗದ ಸಿರಿಗೆರೆ ಮಠ, ಮಾದಾರ ಚೆನ್ನಯ್ಯ ಮಠ, ಮುರಘಾರಾಜ ಮಠಗಳಿಗೆ ಭೇಟಿ ನೀಡಿ, ಸಂಜೆ ಚಳ್ಳಕೆರೆಯಲ್ಲಿ ಎಸ್‍ಟಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

  • ರಾಹುಲ್ ಗಾಂಧಿ ಹೋಗುವ ರಸ್ತೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು!

    ರಾಹುಲ್ ಗಾಂಧಿ ಹೋಗುವ ರಸ್ತೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು!

    ವಿಜಯಪುರ: ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬರುವ ರಸ್ತೆಗೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಘಟನೆ ವಿಜಯಪುರ ತಾಲೂಕಿನ ತಿಕೋಟ ಬಳಿ ನಡೆದಿದೆ.

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಮಧ್ಯಾಹ್ನ ಸುಮಾರಿಗೆ ತಿಕೋಟದಿಂದ ತೋರವಿಗೆ ರಸ್ತೆಯ ಮೂಲಕ ಪ್ರಯಾಣ ಬೆಳೆಸಲಿದ್ದರು. ಈ ಮಾರ್ಗದ ಅಥಣಿ-ವಿಜಯಪುರ ರಸ್ತೆಯ ಒಂದು ಭಾಗದ ಸರ್ಕಾರಿ ಜಾಲಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ. ಇದರಿಂದ ಬೆಂಕಿಯ ಕೆನ್ನಾಲಿಗೆ ರಸ್ತೆಗೆ ಹಬ್ಬಿದ್ದು, ಹೊಗೆಯಿಂದ ರಸ್ತೆಯು ತುಂಬಿಕೊಂಡಿತ್ತು.

    ರಾಹುಲ್ ಗಾಂಧಿ ಅವರ ವಿರೋಧಿಗಳು ಈ ಕೃತ್ಯವನ್ನ ಎಸಗಿರುವ ಶಂಕೆಯಿದ್ದು, ಘಟನೆ ನಡೆದ ಸ್ಥಳದಲ್ಲಿ ಹೊಗೆಯಿಂದ ದಾರಿ ಕಾಣದೆ ವಾಹನ ಸವಾರರು ಪರದಾಡುವ ಪರಿಸ್ಥಿತಿ ಉಂಟಾಯಿತು.

    ಈ ವೇಳೆ ಅಥಣಿಯಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಮೋದಿ ವೋಟ್‍ಗಾಗಿ ಬಸವಣ್ಣನವರ ಹೆಸರನ್ನು ಬಳಸುತ್ತಾರೆ. ಆದರೆ ಬಸವಣ್ಣನವರ ನುಡಿದಂತೆ ನಡೆಯಬೇಕು ಎಂಬ ವಚನವನ್ನು ಪಾಲಿಸಿದ್ದಾರೆಯೇ? ಎಂದು ಪ್ರಶ್ನಿಸಿದರು.

    ತಮ್ಮ ಭಾಷಣದಲ್ಲಿ ಬಸವಣ್ಣ ನವರ ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ… ಎಂಬ ವಚನವನ್ನು ಹೇಳಿದ ಅವರು, ಇದನ್ನು ಪ್ರಧಾನಿ ಮೋದಿ ಪಾಲಿಸ್ತಿಲ್ಲ. ಮೋದಿ ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

    ಅಥಣಿಯಿಂದ ನೇರ ಬಬಲೇಶ್ವರದ ತಿಕೋಟಾಗೆ ಬಂದ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ, ಬೃಹತ್ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡರು. ರಾಹುಲ್ ಗಾಂಧಿಗೆ ಏಲಕ್ಕಿ ಮಾಲೆ ಹಾಕಿ ವಿಭೂತಿ ಬಳಿದು, ಬಸವಣ್ಣನ ಪ್ರತಿಮೆ ಕೊಟ್ಟು ಸಚಿವ ಎಂಬಿ ಪಾಟೀಲ್ ಸನ್ಮಾನಿಸಿದರು. ಬಳಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್, ಇಲ್ಲೂ ಬಸವಣ್ಣ, ಅಕ್ಕಮಹಾದೇವಿ, ರಾಣಿ ಚೆನ್ನಮ್ಮರನ್ನು ಸ್ಮರಿಸಿದರು. ಅಲ್ಲದೇ ಸಿದ್ದರಾಮಯ್ಯ ಸರ್ಕಾರ, ಮಹಿಳೆಯರಿಗಾಗಿ ರೂಪಿಸಿದ ಯೋಜನೆಗಳನ್ನು ಹೊಗಳಿದರು.

     

  • ಕರಾವಳಿಯಲ್ಲಿ ನಾಲ್ಕು ದಿನ ಅಮಿತ್ ಶಾ ಟೂರ್- ಬಿಜೆಪಿಯಲ್ಲಿ ಮಿಂಚಿನ ಸಂಚಲನ

    ಕರಾವಳಿಯಲ್ಲಿ ನಾಲ್ಕು ದಿನ ಅಮಿತ್ ಶಾ ಟೂರ್- ಬಿಜೆಪಿಯಲ್ಲಿ ಮಿಂಚಿನ ಸಂಚಲನ

    ಮಂಗಳೂರು: ಬಿ.ಜೆ.ಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿರಂತರ ನಾಲ್ಕು ದಿನಗಳ ರಾಜ್ಯ ಪ್ರವಾಸಕ್ಕೆ ಚಾಲನೆ ಸಿಕ್ಕಿದೆ. ದೆಹಲಿಯಿಂದ 7.30ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣಕ್ಕೆ ಅಮಿತ್ ಶಾ ಆಗಮಿಸಿದ್ದಾರೆ.

    ಜಿಲ್ಲಾ ಬಿ.ಜೆ.ಪಿಯಿಂದ ರಾಷ್ಟ್ರೀಯ ಅಧ್ಯಕ್ಷರಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು. ರಾಜ್ಯ ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ಮೊದಲ ಹಂತದ ರಾಜ್ಯಪ್ರವಾಸವನ್ನು ಕರಾವಳಿ ಜಿಲ್ಲೆಯಿಂದ ಆರಂಭಿಸಿರುವ ಅಮಿತ್ ಶಾ ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ ಹೂಡಿದ್ದಾರೆ. ಶಾ ಆಗಮನ ಹಿನ್ನೆಲೆಯಲ್ಲಿ ಬಜ್ಪೆಯ ಕೆಂಜಾರುವಿನಲ್ಲಿ ಬಿ.ಜೆ.ಪಿ ಕಾರ್ಯಕರ್ತರು, ಜನಸ್ತೋಮವೇ ನೆರೆದಿತ್ತು.

    ಜಿಲ್ಲಾ ಬಿ.ಜೆ.ಪಿ ಅಮಿತ್ ಶಾ ಸಂಚಾರಿ ವೇದಿಕೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡುವ ಸಿದ್ಧತೆಯನ್ನು ನಡೆಸಿತ್ತು. ವಿಮಾನ ನಿಲ್ದಾಣದಿಂದ ಕೆಂಜಾರುವಿಗೆ ಆಗಮಿಸಿದ ಶಾ ಅವರಿಗೆ ವೇದಿಕೆಯಲ್ಲಿ ಸನ್ಮಾನ ಮಾಡಲಾಯಿತು. ಆದರೆ ಅಮಿತ್ ಶಾ ಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಭಾಷಣ ಮಾಡದೆ ಹೊರಟರು. ಇದರಿಂದಾಗಿ ಶಾ ಭಾಷಣಕ್ಕೆ ಗಂಟೆಗಟ್ಟಲೆ ಕಾದಿದ್ದ ಕಾರ್ಯಕರ್ತರಿಗೆ ಕೊಂಚ ಬೇಸರವಾಯಿತು.

    ನಾಯಕರು ಕಾರ್ಯಕರ್ತರ, ಅಭಿಮಾನಿಗಳ ಕ್ಷಮೆ ಕೋರಿದರು. ಬಳಿಕ ಅಮಿತ್ ಶಾ ರಸ್ತೆ ಮಾರ್ಗದ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿದರು. ಪೊಲೀಸರು ರಸ್ತೆಯುದ್ದಕ್ಕೂ ಬಿಗಿ ಭದ್ರತೆಯನ್ನು ಕೈಗೊಂಡಿದ್ದರು. ನಾಳೆ ಅಮಿತ್ ಶಾ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಪುತ್ತೂರು, ಬಂಟ್ವಾಳ, ಉಡುಪಿಯ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಉಡುಪಿಯಲ್ಲೆ ವಾಸ್ತವ್ಯ ಮಾಡಿ ಉಡುಪಿಯಲ್ಲಿ ನಾಲ್ಕು ಕಾರ್ಯಕ್ರಮ ಮುಗಿಸಿ ಕಾರವಾರಕ್ಕೆ ತೆರಳಲಿದ್ದಾರೆ.

    ಸ್ಥಳೀಯ ಬಿಜೆಪಿ ನಾಯಕ ಸುದರ್ಶನ್ ಮಾತನಾಡಿ, ಅಮಿತ್ ಶಾ ಆಗಮನದಿಂದ ಪಕ್ಷದಲ್ಲಿ ಸಂಚಲನ ಸೃಷ್ಟಿಯಾಗಿದೆ. ಕಾರ್ಯಕರ್ತರ ಹುರುಪು ಹೆಚ್ಚಾಗಿದೆ ಎಂದರು. ಮೂರು ದಿನ ಕರಾವಳಿ ಜಿಲ್ಲೆಯಲ್ಲಿ ಶಾ ಚುನಾವಣಾ ಅಲೆ ಸೃಷ್ಟಿ ಮಾಡುತ್ತಾರೆ ಎಂದರು.

    ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂದೇಶ್ ಶೆಟ್ಟಿ ಮಾತನಾಡಿ ಕೆಂಜಾರು ಜಂಕ್ಷನ್ ನಲ್ಲಿ ಸಾವಿರಾರು ಜನ ಅಮಿತ್ ಶಾ ಮಾತು ಕೇಳಲು ಕಾತುರರಾಗಿದ್ದರು. ಶಾ ಅವರಿಗೆ ಅನಾರೋಗ್ಯ ಇರೊದ್ರಿಂದ ಅವರು ಮಾತನಾಡಲಿಲ್ಲ. ಗಂಟಲು ಸಮಸ್ಯೆಯಿಂದ ಬಳಲುತ್ತಿರುವ ಶಾ ಸುಧಾರಿಸಿಕೊಂಡು ನಾಳೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ 13 ಕ್ಕೂ ಹೆಚ್ಚು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.