Tag: State Politics

  • ರಾಜ್ಯ ರಾಜಕಾರಣಕ್ಕೆ ಬರುವ ವಿಚಾರವಾಗಿ ಸಂಸದೆ ಸುಮಲತಾ ಹೇಳಿದ್ದೇನು..?

    ರಾಜ್ಯ ರಾಜಕಾರಣಕ್ಕೆ ಬರುವ ವಿಚಾರವಾಗಿ ಸಂಸದೆ ಸುಮಲತಾ ಹೇಳಿದ್ದೇನು..?

    ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಅವರು ರಾಜ್ಯ ರಾಜಕಾರಣಕ್ಕೆ ಬರುತ್ತಾರೆ ಎಂಬ ವಿಚಾರ ಇದೀಗ ಭಾರೀ ಚರ್ಚೆಯಾಗುತ್ತಿದೆ. ಈ ಸಂಬಂಧ ಸ್ವತಃ ಸುಮಲತಾ ಅವರೇ ಇದೀಗ ಪ್ರತಿಕ್ರಿಯಿಸಿದ್ದಾರೆ.

    ಮಂಡ್ಯದ ಹೊನಗನಹಳ್ಳಿಯಲ್ಲಿ ಚರ್ಚೆ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಈ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಸದ್ಯಕ್ಕೆ ಎಂಪಿಯಾಗಿದ್ದರೂ ಎಂಎಲ್‍ಎಗಳ ಕೆಲಸಗಳನ್ನು ಹೊತ್ತುಕೊಂಡು ಮಾಡುತ್ತಿದ್ದೇನೆ. ರಾಜ್ಯ ರಾಜಕಾರಣಕ್ಕೆ ಬಂದು ಮಾಡಬೇಕು ಎಂಬುದೇನೂ ಇಲ್ಲ. ಮಂಡ್ಯ ಜಿಲ್ಲೆಗೆ ಮಾಡಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. ಬೇರೆಯವರು ಮಾಡಿದ್ದಾರೆ. ಆದರೆ ನಾನು ಪ್ರಯತ್ನ ಪಟ್ಟಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ನಾನು ಸಚಿವರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಜಿಲ್ಲೆ ಅಭಿವೃದ್ಧಿ ಮಾಡುವಂತೆ ಮನವಿ ಮಾಡಿದ್ದೇನೆ ಎಂದರು.

    ಇದೇ ವೇಳೆ ಕ್ರೆಡಿಟ್ ವಾರ್ ಬಗ್ಗೆ ಮಾತನಾಡಿ, ಸಂಸದೆಯಾಗಿ ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಶಾಸಕರು ಮಾಡಬೇಕಾದ ಕೆಲಸಗಳನ್ನು ನಾನು ಮಾಡುತ್ತಿದ್ದೇನೆ. ಈ ನಡುವೆ ನಾನು ಮಾಡಿದ ಕೆಲಸಗಳಿಗೆ ಕ್ರೆಡಿಟ್ ತೆಗೆದುಕೊಳ್ಳಲು ಅವರುಗಳು ಮುಂದಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಎಲ್ಲೆಂದರಲ್ಲಿ ಕಾಣಿಸುತ್ತಿದೆ Z ಸಿಂಬಲ್ – ಇದು ರಷ್ಯಾದ ಯುದ್ಧದ ಸಂಕೇತ!

    ಶಿಂಷಾ ನದಿಗೆ ಸೇತುವೆ ನಿರ್ಮಾಣ ವಿಚಾರವಾಗಿ ಸಂಸದೆಯಾಗಿ ನಾನು ಕೆಲಸ ಮಾಡಿದ್ದೇನೆ. ದೇವೇಗೌಡರು, ಪ್ರತಾಪ್ ಸಿಂಹ ಪ್ರಯತ್ನ ಪಟ್ಟಿಲ್ಲ ಎಂದು ಹೇಳಿದ್ದಿಲ್ಲ. ನಾನು ನಿತಿನ್ ಗಡ್ಕರಿಯನ್ನು ಎಷ್ಟು ಬಾರಿ ಭೇಟಿಯಾಗಿದ್ದೇನೆ ಎಂಬುದನ್ನ ಅವರ ಸಚಿವಲಾಯದಿಂದ ತಿಳಿದುಕೊಳ್ಳಬಹುದು. ಬೇರೆ ಜಿಲ್ಲೆ ಸಮಸ್ಯೆ ತೆಗೆದುಕೊಂಡು ಹೋದರೆ ನಿಮ್ಮ ಜಿಲ್ಲೆ ಸಮಸ್ಯೆ ತೆಗೆದುಕೊಂಡು ಬಾ ಅನ್ನೋ ಉತ್ತರ ಬರುತ್ತೆ. ನನ್ನ ಕ್ಷೇತ್ರದ ಸಮಸ್ಯೆಗೆ ಪರಿಹಾರ ಕೇಳಿದಾಗ ಗಡ್ಕರಿಯವರು ಸ್ಪಂದಿಸಿದ್ದಾರೆ. ಈಗ ಸಂಸದರ ಕೆಲಸಕ್ಕು ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗುತ್ತಿದ್ದಾರೆ. ಆದರೆ ಅವರು ಮಾಡಬೇಕಾದ ಕೆಲಸ ಮಾಡುತ್ತಿಲ್ಲ ಎಂದರು.

    ಎಂಎಲ್‍ಎ ಗೆ ಎರಡು ಕೋಟಿ ಅನುದಾನ ಸಿಗುತ್ತೆ. ಆದರೆ ನನಗೆ ಒಂದು ತಾಲೂಕಿಗೆ ಸಿಗೋದು 40 ಲಕ್ಷ ಮಾತ್ರ. ಶಾಸಕರು ಕೆಲಸ ಮಾಡಿದ್ದರೆ ಜನರು ನನ್ನನ್ನು ಏಕೆ ಕೇಳುತ್ತಾರೆ. ಜನರನ್ನು ದಾರಿ ತಪ್ಪಿಸಿ ರಾಜಕೀಯ ಲಾಭ ಪಡೆಯುವ ಕಾಲ ಇತ್ತು. ಆದರೆ ಈಗ ಜನರು ಎಚ್ಚೆತ್ತಕೊಂಡಿದ್ದಾರೆ ಎಲ್ಲವನ್ನು ಗಮನಿಸುತ್ತಿದ್ದಾರೆ. ಇಂತಹ ರಾಜಕಾರಣಿಗಳಿಗೆ ಜನಗಣಮನ ಹೇಳಿ ಕಳುಹಿಸಲು ಜನರು ಕಾಯುತ್ತಿದ್ದಾರೆ. ಹೆಸರೇಳದೆ ಜೆ.ಡಿ.ಎಸ್ ಶಾಸಕರಿಗೆ ಟಾಂಗ್ ಕೊಟ್ಟರು.

    ಮೈಶುಗರ್ ಕಾರ್ಖಾನೆ ಪ್ರಾರಂಭಕ್ಕೆ ಬಜೆಟ್ ನಲ್ಲಿ 50 ಕೋಟಿ ವಿಚಾರ ಬಗ್ಗೆ ಮಾತನಾಡಿ, ಮೂರು ವರ್ಷಗಳ ನನ್ನ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಎಲ್ಲರ ಶ್ರಮದ ಜೊತೆಗೆ ನನ್ನ ಶ್ರಮವು ಇದೆ. ಹಿಂದೆ 400 ಕೋಟಿ ಬಿಡುಗಡೆಯಾಗಿತ್ತು ಆ ಹಣವೆಲ್ಲ ಎಲ್ಲೊಯ್ತು ಎಂದು ಎಲ್ಲರ ಗೊತ್ತಿದೆ. ಈ ಹಣ ಭ್ರಷ್ಟಾಚಾರ ಎಂಬ ಇಲಾಖೆಗೆ ಸೇರಿತ್ತು. ಇದರಿಂದ ಏನು ಕಾರ್ಖಾನೆ ಉದ್ದಾರ ಆಗಲಿಲ್ಲ. ಎರಡು ವರ್ಷ ಸರ್ಕಾರವೆ ಕಾರ್ಖಾನೆ ನಡೆಸುತ್ತೆ ಎಂದು ಹೇಳಿದೆ. ಅದು ಯಾವ ರೀತಿಯಲ್ಲಾದರೂ ಪ್ರಾರಂಭವಾಗಲಿ. ಅಥವಾ ಎಷ್ಟು ಕೋಟಿಯಾದರೂ ಹಾಕಲಿ. ಆದರೆ ಚಾಲನೆ ಮಾಡುತ್ತಾರೋ ಇಲ್ಲವೋ ಎಂಬುದಷ್ಟೆ ನಾವು ಕೇಳಬೇಕು. ನಮ್ಮ ಬೇಡಿಕೆಯು ಕಾರ್ಖಾನೆ ಆರಂಭವಾಗಬೇಕಿರೋದು ಎಂಬುದಷ್ಟೆ ಇರೋದು ಎಂದು ಹೇಳಿದರು.

  • ಡಿ.19ರ ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ-ಸಿಎಂಗೆ ಕಾದಿದೆ ಮುಳ್ಳಿನ ಹಾಸಿಗೆ

    ಡಿ.19ರ ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ-ಸಿಎಂಗೆ ಕಾದಿದೆ ಮುಳ್ಳಿನ ಹಾಸಿಗೆ

    ರಾಯಚೂರು: ಗುರು ಬದಲಾವಣೆಯಿಂದ ಡಿಸೆಂಬರ್ 19ರ ಬಳಿಕ ರಾಜ್ಯ ರಾಜಕಾರಣದಲ್ಲಿ ಮಹಾ ಬದಲಾವಣೆಯಾಗಲಿದೆ ಅಂತ ರಾಜಗುರು ಬೆಳ್ಳೂರು ಶಂಕರನಾರಾಯಣ ದ್ವಾರಕನಾಥ ಗುರೂಜಿ ಭವಿಷ್ಯ ನುಡಿದಿದ್ದಾರೆ.

    ಸಿಎಂ ಕುಮಾರಸ್ವಾಮಿ ಗೆ ಗುರು ಬದಲಾವಣೆಯಿಂದ ಬಾರಿ ಕಂಟಕ ಕಾದಿದ್ದು ಮುಂದಿನದ್ದು ಮುಳ್ಳಿನ ಹಾದಿ ಅಂತ ಗುರೂಜಿ ಹೇಳಿದ್ದಾರೆ. ಮಾರ್ಚ್ 27 ರವರೆಗೆ ಸಿಎಂ ತುಂಬಾ ಎಚ್ಚರವಾಗಿರಲೇ ಬೇಕು. ಇಲ್ಲದಿದ್ದರೇ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ. ಕುಮಾರಸ್ವಾಮಿ ಮಾತಿನ ಮೇಲೆ ನಿಗಾ ಇರಬೇಕು. ಎಲ್ಲದಕ್ಕೂ ಪ್ರತಿಕ್ರಿಯಿಸುತ್ತಾ ಹೋದರೆ ಸಿಎಂ ಖುರ್ಚಿಗೆ ಕಂಟಕ. ಉತ್ತಮ ಕುಟುಂಬದಿಂದ ಬಂದಿರುವ ಕುಮಾರಸ್ವಾಮಿಗೆ ಇನ್ನೂ ಶನಿ ಕಂಟಕ ಇದೆ ಅಂತ ಗುರೂಜಿ ಹೇಳಿದ್ದಾರೆ.

    ಬಿಎಸ್‍ವೈ ಸೇಫ್:
    ಡಿಸೆಂಬರ್ 19ರ ಬಳಿಕ ಮೋದಿಗೆ ಸಮಯ ಸರಿಯಿಲ್ಲ, ರಾಷ್ಟ್ರ ರಾಜಕಾರಣದಲ್ಲೂ ದೊಡ್ಡ ಬದಲಾವಣೆಯಿದೆ ಅಂತ ಗುರೂಜಿ ಭವಿಷ್ಯ ನುಡಿದಿದ್ದಾರೆ. ಆದ್ರೆ ಯಡಿಯೂರಪ್ಪ ನವರಿಗೆ ಗುರು ಪ್ರಭಾವ ಬೀರಲ್ಲ. ಶನಿ ದೂರವಾಗುತ್ತಿರುವುದರಿಂದ ಬಿಎಸ್‍ವೈಗೆ ಶಾಂತಿ ಜೀವನ ಲಭಿಸಲಿದೆ. ಡಿಸೆಂಬರ್ 19ರ ಬಳಿಕ ಯಡಿಯೂರಪ್ಪ ನವರ ಚಿಂತೆಗಳು ಕಡಿಮೆಯಾಗುತ್ತವೆ. ಈಗಾಗಲೇ ಸಾಕಷ್ಟು ಕಷ್ಟಗಳನ್ನ ಅನುಭವಿಸಿರುವ ಬಿಎಸ್‍ವೈ ಗೆ ಉತ್ತಮ ದಿನಗಳು ಎದುರಾಗಲಿವೆ ಎಂದಿದ್ದಾರೆ.

    ಡಿಕೆಶಿ ಸಿಎಂ ಆಗೋದು ಪಕ್ಕಾ:
    ಶನಿಯ ಕಾಟವೂ ಇಲ್ಲದಿರುವುದರಿಂದ ಗುರು ಬದಲಾವಣೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಗೆ ಹೆಚ್ಚು ಬಲ ತರಲಿದೆ. ಮುಂದೆ ಡಿಕೆಶಿ ಸಿಎಂ ಆಗುವುದರಲ್ಲಿ ಅನುಮಾನವಿಲ್ಲ. ಗುರು ಬಲ ಹೆಚ್ಚುವುದರಿಂದ ಡಿ.ಕೆ.ಶಿವಕುಮಾರ್ ಎಷ್ಟೇ ಕಷ್ಟ ಬಂದರೂ ಎಲ್ಲಾ ಕಷ್ಟ ಎದುರಿಸುತ್ತಾರೆ. ತಮ್ಮ ಮಾತಿನ ಶೈಲಿ, ವರ್ತನೆಯನ್ನು ಅವರು ಬದಲಾಯಿಸಿಕೊಳ್ಳಬೇಕಿದೆ. ಗುರು ಬದಲಾವಣೆ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇದ್ದರೆ ಯಾವ ಕೆಡುಕು ಉಂಟಾಗಲ್ಲ. ಡಿಕೆ ಶಿವಕುಮಾರ್ ಉಚ್ಛ ಸ್ಥಾಯಿಗೆ ಏರುತ್ತಾರೆ ಅನ್ನೋ ನನ್ನ ಮಾತು ಸುಳ್ಳಾಗಲ್ಲ. ಡಿಕೆಶಿ ವಿಚಾರದಲ್ಲಿ ನನ್ನ ಮೇಲೂ ಶೋಧ ನಡೆಯಿತು. ಗುರು ಬಲ ಚೆನ್ನಾಗಿರುವುದರಿಂದ ಎಂದೂ ಕೆಡುಕಾಗಲ್ಲ ಅಂತ ದ್ವಾರಕನಾಥ್ ಗುರೂಜಿ ತಿಳಿಸಿದರು.

    ಗುರು ಪ್ರಭಾವ ಏನೆಲ್ಲಾ ಬೀರಿದೆ?
    ಗುರು ಬದಲಾವಣೆ ಪರಿಣಾಮವಾಗಿ ಕೆಲ ಸಚಿವರ ವರ್ತನೆ ಬದಲಾಗಿದೆ. ಸಚಿವರು ಅಥವಾ ಕಾಂಗ್ರೆಸ್ ನ ಕೆಲ ಮುಖಂಡರಿಂದ ಸರ್ಕಾರಕ್ಕೆ ತೊಂದರೆಯಿದೆ. ಸಿಎಂ ಕುಮಾರಸ್ವಾಮಿ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ ಅಂತ ನಾನು ನೇರವಾಗಿ ಹೇಳುವುದಿಲ್ಲ. ಬದಲಾವಣೆಗಳ ಬಗ್ಗೆ ತುಂಬಾ ಎಚ್ಚರ ವಹಿಸಲೇ ಬೇಕು. ಡಿಸೆಂಬರ್ 19 ರಾಜ್ಯ ರಾಜಕಾರಣದ ಮಹತ್ವದ ದಿನ ಅಂತ ದ್ವಾರಕನಾಥ್ ಗುರೂಜಿ ಭವಿಷ್ಯ ನುಡಿದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv