Tag: State Level Essay Competition

  • ಬಹುಜನ ವಿದ್ಯಾರ್ಥಿ ಸಂಘದಿಂದ ಪ್ರಬಂಧ ಸ್ಪರ್ಧೆ- ಗೆದ್ದವರಿಗೆ 5 ಲಕ್ಷ ರೂ. ಬಹುಮಾನ

    ಬಹುಜನ ವಿದ್ಯಾರ್ಥಿ ಸಂಘದಿಂದ ಪ್ರಬಂಧ ಸ್ಪರ್ಧೆ- ಗೆದ್ದವರಿಗೆ 5 ಲಕ್ಷ ರೂ. ಬಹುಮಾನ

    ರಾಮನಗರ: ಬಹುಜನ ವಿದ್ಯಾರ್ಥಿ ಸಂಘಟನೆ(ಬಿವಿಎಸ್) ವತಿಯಿಂದ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಸಮ್ಮೇಳನದ ಅಂಗವಾಗಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದು, ಉತ್ತಮ ಪ್ರಬಂಧಕಾರರಿಗೆ 5 ಲಕ್ಷ ರೂ. ಬಹುಮಾನವಾಗಿ ನೀಡಲಾಗುವುದು ಎಂದು ಬಿವಿಎಸ್ ತಿಳಿಸಿದೆ.

    ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಸಂಯೋಜಕ ಎಸ್.ಕುಮಾರ್ ಮಾತನಾಡಿ, ಸಂವಿಧಾನ ಸಮರ್ಪಣಾ ದಿನವಾದ ನ. 26ರಿಂದ ಸಂವಿಧಾನ ಜಾರಿಗೆ ಬಂದ ಜ. 26ರವರೆಗೆ ರಾಜ್ಯಾದ್ಯಂತ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ಶಾಲಾ ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗುತ್ತಿದ್ದು, ಮೂರು ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗುತ್ತದೆ. ವಿಜೇತರಾದವರಿಗೆ 5 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

    ಪದವಿ ಮತ್ತು ಸ್ನಾತಕೋತ್ತರ ವಿಭಾಗದವರಿಗೆ `ಭಾರತೀಯ ಸಮಾಜ ಪರಿವರ್ತನೆಯಲ್ಲಿ ಸಂವಿಧಾನದ ಮೂಲಭೂತ ಹಕ್ಕುಗಳು ಹಾಗೂ ರಾಜ್ಯ ನಿರ್ದೇಶಕ ತತ್ವಗಳ ಪಾತ್ರ’ ಕುರಿತು ಪ್ರಬಂಧ ಸ್ಪರ್ಧೆ ಇರಲಿದೆ. ಪದವಿ ಪೂರ್ವ ಮತ್ತು ತತ್ಸಮಾನ ಕೋರ್ಸ್ ಗಳ ವಿಭಾಗಕ್ಕೆ `ಭಾರತ ಸಂವಿಧಾನದ ಪ್ರಸ್ತಾವನೆಯ ಮಹತ್ವ, ಪ್ರೌಢಶಾಲೆಯ ವಿಭಾಗಕ್ಕೆ `ಭಾರತದ ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪಾತ್ರ’ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.

    ಪ್ರಬಂಧದಲ್ಲಿ ಪ್ರೌಢಶಾಲಾ ಹಾಗೂ ಪದವಿ ಪೂರ್ವ/ತತ್ಸಮಾನ ವಿಭಾಗದ ಸ್ಪರ್ಧಾಳುಗಳು ಒಂದು ಸಾವಿರ ಪದಗಳು ಹಾಗೂ ಪದವಿ ಮತ್ತು ಸಂಶೋಧನ ವಿಭಾಗದ ಸ್ಪರ್ಧಿಗಳು 2,500 ಪದ ಮೀರದಂತೆ ಪ್ರಬಂಧ ಬರೆಯಬೇಕು. ಪ್ರಬಂಧವನ್ನು ವಿಷಯ ತಜ್ಞರಿಂದ ಮೌಲ್ಯಮಾಪನ ಮಾಡಿಸಲಾಗುತ್ತದೆ. ತಜ್ಞರ ತೀರ್ಮಾನವೇ ಅಂತಿಮವಾಗಿರುತ್ತದೆ. ಜನವರಿ ತಿಂಗಳ 10ರೊಳಗೆ ರಾಮನಗರದ ರಾಯರದೊಡ್ಡಿ ಸರ್ಕಾರಿ ಪ್ರಥಮ ದರ್ಜಿ ಮಹಿಳಾ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಬೀರಯ್ಯ ಅವರಿಗೆ ವಿದ್ಯಾರ್ಥಿಗಳು ಪ್ರಬಂಧ ತಲುಪಿಸಬೇಕು ಎಂದು ಮಾಹಿತಿ ನೀಡಿದರು.