Tag: State Legislative Council

  • ಇದುವರೆಗೂ 38 ಮಂದಿ ಮೆಟ್ರೋ ಅವಘಡಕ್ಕೆ ಬಲಿಯಾಗಿದ್ದಾರೆ: ಸಿಎಂ

    ಇದುವರೆಗೂ 38 ಮಂದಿ ಮೆಟ್ರೋ ಅವಘಡಕ್ಕೆ ಬಲಿಯಾಗಿದ್ದಾರೆ: ಸಿಎಂ

    ಬೆಂಗಳೂರು: ಮೆಟ್ರೋ (Metro)ಕಾಮಗಾರಿಗೆ ಸಂಬಂಧಿಸಿದಂತೆ ಇದುವರೆಗೂ 50 ಜನ ಅಪಘಾತಕ್ಕೊಳಗಾಗಿದ್ದಾರೆ. ಅದರಲ್ಲಿ 38 ಜನರು ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಿಧಾನಪರಿಷತ್‍ನಲ್ಲಿ (State Legislative Council) ತಿಳಿಸಿದ್ದಾರೆ.

    ವಿಧಾನಪರಿಷತ್ ಸದಸ್ಯರೊಬ್ಬರ ಪ್ರಶ್ನೆಗೆ ಅವರು ಉತ್ತರಿಸುವಾಗ, ಇದುವರೆಗೂ ಆದ ಮೆಟ್ರೋ ಕಾಮಗಾರಿ ವೇಳೆ ಸಂಭವಿಸಿದ ವಿವಿಧ ಅನಾಹುತಗಳಿಂದ ಆದ ಸಾವು ನೋವುಗಳು, ನೀಡಲಾದ ಪರಿಹಾರ ಹಾಗೂ ಜರುಗಿಸಲಾದ ಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

    ಕಾಮಗಾರಿ ನಡೆಯುವಾಗ ಆದ ಅವಘಡಗಳಿಂದ ಮೃತಪಟ್ಟವರ ಕುಟುಂಬಗಳಿಗೆ 3.15 ಕೋಟಿ ರೂ.ಗಳನ್ನು ಪರಿಹಾರವಾಗಿ ನೀಡಲಾಗಿದೆ. ಅವಘಡಕ್ಕೆ ಕಾರಣರಾದ ಮೂರು ಎಂಜಿನಿಯರ್‌ಗಳನ್ನು (Engineer) ಅಮಾನತು ಮಾಡಲಾಗಿದೆ. ಗುತ್ತಿಗೆದಾರರಿಗೆ 1.17 ಕೋಟಿ ರೂ.ಗಳನ್ನು ದಂಡ ವಿಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮೀನೂಟ ಸವಿದು ದೇವರ ದರ್ಶನ ಮಾಡಿದ ಸಿ.ಟಿ ರವಿ ಫೋಟೋ ವೈರಲ್

    ಅವಘಡಗಳನ್ನು ತಪ್ಪಿಸಲು ಹೆಣ್ಣೂರು ಮೆಟ್ರೋ ಪಿಲ್ಲರ್ ದುರಂತದ ಬಳಿಕ ತೆಗೆದುಕೊಂಡ ಕ್ರಮಗಳು ಮತ್ತು ಕೈಪಿಡಿ ಪ್ರಕಾರವೇ ಕೆಲಸ ಮಾಡಬೇಕು ಎಂದು ಅವರು ಸೂಚಿಸಿದ್ದಾರೆ.

    ಗುತ್ತಿಗೆದಾರರ ಸುರಕ್ಷತೆ, ಆರೋಗ್ಯ ಮತ್ತು ಪರಿಸರ ಕೈಪಿಡಿ ಯೋಜನೆಗೆ ಅನುಗುಣವಾಗಿ ಎಲ್ಲಾ ಸಿಬ್ಬಂದಿಯನ್ನು ಆಯ್ಕೆ ಮಾಡಬೇಕು. ಯೋಜನೆಯ ನಿಯಮದಂತೆ ತಪಾಸಣೆ ಮತ್ತು ಪರಿಶೋಧನೆ ನಡೆಸಬೇಕು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಬೇಕು, ಶೀಘ್ರವೇ ಪ್ರಕರಣದ ವಿಚಾರಣೆ ನಡೆಸಿ- ಸುಪ್ರೀಂಗೆ ವಕೀಲರ ಮನವಿ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಧಾನ ಪರಿಷತ್ ಚುನಾವಣೆ- ಜೆಡಿಯು ಅಭ್ಯರ್ಥಿಯಾಗಿ ಚಂದ್ರಶೇಖರ್ ಸ್ಥಾವರಮಠ ಕಣಕ್ಕೆ

    ವಿಧಾನ ಪರಿಷತ್ ಚುನಾವಣೆ- ಜೆಡಿಯು ಅಭ್ಯರ್ಥಿಯಾಗಿ ಚಂದ್ರಶೇಖರ್ ಸ್ಥಾವರಮಠ ಕಣಕ್ಕೆ

    – ಮಹಿಮಾ ಪಟೇಲ್ ಘೋಷಣೆ

    ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಜೆಡಿಯು ಪಕ್ಷದಿಂದ ಚಂದ್ರಶೇಖರ್ ವಿ. ಸ್ಥಾವರಮಠ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ.

    ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಅವರು ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಮಟ್ಟದಿಂದ ನಮ್ಮ ಹೋರಾಟ ನಡೆದಿದೆ. ಗ್ರಾಮ ಸ್ವರಾಜ್ಯ ನಮ್ಮ ಕಲ್ಪನೆ. ಗ್ರಾಮಗಳ ಉದ್ಧಾರವೇ ನಮ್ಮ ಪಕ್ಷ ಧ್ಯೇಯವಾಗಿದೆ. ಜೆಡಿಯು ಹಿಂದಿನಿಂದಲೂ ಶಿಕ್ಷಕರ ಪರ ಹೋರಾಟ ಮಾಡುತ್ತಿದೆ. ಪರಿಷತ್ ನಲ್ಲಿ ನಮ್ಮ ಹೋರಾಟ ಮುಂದುವರೆಯಲಿದ್ದು, ಚಂದ್ರಶೇಖರ್ ಸ್ಥಾವರಮಠ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ನೇಮಕ ಮಾಡಲಾಗಿದೆ ಎಂದರು.

    ಕೋವಿಡ್-19 ಮಹಾಮಾರಿ ಕಾರಣಕ್ಕೆ ಪರಿಷತ್ ಚುನಾವಣೆ ಮುಂದೂಡುವ ಸಾಧ್ಯತೆ ಇದೆ. ಆದರೆ ನಾವು ಪಕ್ಷದ ವತಿಯಿಂದ ಚಂದ್ರಶೇಖರ್ ಸ್ಥಾವರಮಠ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿ, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕ ಮಾಡುವ ಕೆಲಸ ಮಾಡುತ್ತೇವೆ. ಅಲ್ಲದೆ ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಸೂಕ್ತ ಅಭ್ಯರ್ಥಿಯ ಹುಡುಕಾಟ ನಡೆಸುತ್ತೇವೆ ಎಂದರು.

    ಚಂದ್ರಶೇಖರ್ ಸ್ಥಾವರಮಠ ಸ್ವತಃ ಶಿಕ್ಷಕರಾಗಿರುವ ಕಾರಣ ಶಿಕ್ಷಕರ ಪರ ಹೋರಾಟ ನಡೆಸಲಿದ್ದಾರೆ. ಸಾಮಾಜಿಕ ಕಳಕಳಿ ಇರುವ ಚಂದ್ರಶೇಖರ್, ಶಿಕ್ಷಕರ ಹಕ್ಕುಗಳಿಗಾಗಿ ಹೋರಾಟ ಮಾಡಲಿದ್ದಾರೆ ಎಂದರು.

    ಪಕ್ಷ ಸಂಘಟನೆ ಎಂದರೆ ಪ್ರತಿಭಟನೆ, ಹೋರಾಟ ಮಾತ್ರವಲ್ಲ. ಅದಕ್ಕೆ ಮೂಲ ಉದ್ದೇಶ ಇರಬೇಕು. ಗ್ರಾಮ ಸ್ವರಾಜ್ಯದ ಕಲ್ಪನೆಯೊಂದಿಗೆ ಜೆಡಿಯು ಸಂಘಟನೆಯನ್ನು ಗ್ರಾಮೀಣ ಮಟ್ಟದಲ್ಲಿ ಮಾಡುತ್ತಿದ್ದೇವೆ. ಗ್ರಾಮೀಣ ಪ್ರದೇಶದವರ ಸ್ಥಿತಿ ಸುಧಾರಿಸಿದರೆ ದೇಶದ ಸ್ಥಿತಿ ಸುಧಾರಣೆ ಆಗುತ್ತದೆ. ಇತ್ತೀಚಿನ ಸರ್ಕಾರಗಳು ಗ್ರಾಮೀಣ ಪ್ರದೇಶದವರನ್ನು ಬಿಕಾರಿಗಳನ್ನಾಗಿ ಮಾಡಿವೆ. ರೈತರನ್ನು, ಹಳ್ಳಿಯವರಿಗೆ ಒಂದಷ್ಟು ಹಣ, ಕೊಡುಗೆ ಕೊಟ್ಟು ಅವರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿವೆ. ಹೀಗಾಗಿ ಈ ಮಾರ್ಗ ಬಿಟ್ಟು ಗ್ರಾಮಗಳನ್ನು ಸಶಕ್ತೀಕರಣ ಮಾಡಲು ಗ್ರಾಮಸ್ವರಾಜ್ ಕಲ್ಪನೆಯೊಂದಿಗೆ, ಪಂಚಾಯತ್ ರಾಜ್ ವ್ಯವಸ್ಥೆ ಭದ್ರಪಡಿಸಲು ಗ್ರಾಮೀಣ ಪ್ರದೇಶಗಳಿಗೆ ಹೋಗುತ್ತಿದ್ದೇವೆ ಎಂದರು.

    ಜೆಡಿಯು ಅಭ್ಯರ್ಥಿ ಚಂದ್ರಶೇಖರ್ ಸ್ಥಾವರಮಠ ಮಾತನಾಡಿ, ಈ ಹಿಂದೆ ಶಿಕ್ಷಕರನ್ನು ಸೃಷ್ಟಿಕರ್ತ ಬ್ರಹ್ಮನಿಗೆ ಹೋಲಿಸುತ್ತಿದ್ದೆವು. ಉತ್ತಮ ರಾಷ್ಟ್ರವನ್ನು, ಸಮಾಜವನ್ನು ಕಟ್ಟುವ ಶಕ್ತಿ ಹೊಂದಿದ್ದ ಶಿಕ್ಷಕರನ್ನು 70ರ ದಶಕದ ನಂತರ ಅಧಿಕಾರಕ್ಕೆ ಬಂದ ಸರ್ಕಾರರಗಳು ಶಿಕ್ಷಕರನ್ನು ಕಡೆಗಣನೆ ಮಾಡುತ್ತಾ ಬಂದಿವೆ. ಇದೀಗ ಕೋವಿಡ್-19 ನಿಂದ ರಾಜ್ಯಾದ್ಯಂತ 35 ಸಾವಿರ ಶಿಕ್ಷಕರು ಕಷ್ಟದಲ್ಲಿದ್ದಾರೆ. ಹಲವು ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಈ ನಿಟ್ಟಿನಲ್ಲಿ ಜೆಡಿಯುನಿಂದ ಜ್ಯೋತಿ ಯಾತ್ರೆ ಆರಂಭಿಸುತ್ತಿದ್ದೇವೆ. ಪಕ್ಷದ ಕಚೇರಿಯಿಂದ ಜ್ಯೋತಿ ಯಾತ್ರೆ ಆರಂಭಿಸಿ ಮುಖ್ಯಮಂತ್ರಿಗಳ ಕಚೇರಿವರೆಗೆ ತೆರಳಿ ಮನವಿ ನೀಡುವ ಮೂಲಕ ಜನಾಭಿಯಾನ ಆರಂಭಿಸುತ್ತಿದ್ದೇವೆ ಎಂದರು.

  • ಎಲ್ಲರೂ ಈಜಿ ದಡ ಸೇರಿದರು, ನಾನು ಸೇರಿಲ್ಲ: ಎಚ್.ವಿಶ್ವನಾಥ್

    ಎಲ್ಲರೂ ಈಜಿ ದಡ ಸೇರಿದರು, ನಾನು ಸೇರಿಲ್ಲ: ಎಚ್.ವಿಶ್ವನಾಥ್

    – ನನ್ನ ಧ್ವನಿ ಅಡಗಿಸಲು ಸಾಧ್ಯವಿಲ್ಲ

    ಬೆಂಗಳೂರು: ಭಾರೀ ನಿರೀಕ್ಷೆ ಹುಟ್ಟಿಸಿದ್ದ ಬಿಜೆಪಿಯ ವಿಧಾನ ಪರಿಷತ್ ಟಿಕೆಟ್ ಹಂಚಿಕೆ ಪ್ರಕ್ರಿಯೆ ಕೊನೆಗೂ ಪೂರ್ಣಗೊಂಡಿದೆ. ನಿರೀಕ್ಷೆಯಂತೆಯೇ ಬಿಜೆಪಿ ಸರ್ಕಾರ ರಚಿಸಲು ಕಾರಣರಾದವರಿಗೆ ಟಿಕೆಟ್ ನೀಡಲಾಗಿದೆ. ಆದರೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಎಚ್.ವಿಶ್ವನಾಥ್ ಅವರನ್ನು ಕೈ ಬಿಡಲಾಗಿದೆ.

    ಈ ಕುರಿತು ಮಾಜಿ ಸಚಿವ ಎಚ್.ವಿಶ್ವನಾಥ್ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ನಾನು ಬಿಜೆಪಿಗೆ ಹೊಸಬ, ನನಗೆ ಬಿಜೆಪಿಯ ಆಳ ಅಗಲ ಗೊತ್ತಿಲ್ಲ. ನನ್ನ ಜೊತೆಗೆ ಬಂದವರು ಎಲ್ಲರೂ ಈಜಿ ದಡ ಸೇರಿದ್ದಾರೆ. ನಾನು ಇನ್ನು ಸೇರಿಲ್ಲ. ನಾನು ಹಿಂದುಳಿದ ವರ್ಗದ ಹಿರಿಯ ನಾಯಕ. ಯಾಕೆ ಟಿಕೆಟ್ ತಪ್ಪಿಸಿದ್ದಾರೆ ಗೊತ್ತಿಲ್ಲ. ಇದರಿಂದ ನಾನು ಹತಾಷನಾಗಿಲ್ಲ. ನಮ್ಮ ನಾಯಕ ಯಡಿಯೂರಪ್ಪ, ತ್ಯಾಗಕ್ಕೆ ಪ್ರತಿಫಲ ಸಿಗುತ್ತೆ. ಈಗಲು ಯಡಿಯೂರಪ್ಪನವರ ಮೇಲೆ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ರಾಜ್ಯ ನಾಯಕರು ನಾಲ್ಕು ಜನರ ಹೆಸರನ್ನು ಅಂತಿಮಗೊಳಿಸಿ ದೆಹಲಿಗೆ ಕಳುಹಿಸಿದ್ದರು. ಆದರೆ ಇದೀಗ ನನ್ನ ಹೆಸರನ್ನು ಕೈ ಬಿಡಲಾಗಿದೆ. ಕಡೆ ಘಳಿಗೆವರೆಗೂ ಯಡಿಯೂರಪ್ಪನವರು ನನ್ನ ಪರವಾಗಿ ಪ್ರಯತ್ನ ಮಾಡಿದ್ದಾರೆ. ಆದರೆ ದೆಹಲಿಯಲ್ಲಿ ನನಗೆ ಟಿಕೆಟ್ ತಪ್ಪಿದೆ. ಇದರ ಹಿಂದೆ ಯಾರಿದ್ದಾರೆ ಗೊತ್ತಿಲ್ಲ. ಇಂತಹ ಸಾಕಷ್ಟು ಸಂಕಷ್ಟಗಳನ್ನ ಎದುರಿಸಿಯೇ ನಾನು ಈ ಹಂತಕ್ಕೆ ಬಂದಿದ್ದೇನೆ. ನನಗೆ ಇದು ಹೊಸತೇನು ಅಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಈಗಲೂ ನಂಬಿಕೆ ಇದೆ. ಕಾದು ನೋಡೋಣ ಎಂದು ತಿಳಿಸಿದ್ದಾರೆ.

    ಯಾರ ಕೈವಾಡವಿದೆ ಎಂದು ತಿಳಿದಿಲ್ಲ. ವೈಯಕ್ತಿಕವಾಗಿ ನನಗೆ ಬೇಸರವಿಲ್ಲ. ಆದರೆ ನನ್ನಂಥ ಒಬ್ಬ ಹಿರಿಯ ಹಿಂದುಳಿದ ನಾಯಕನಿಗೆ ಯಾಕೆ ಟಿಕೆಟ್ ತಪ್ಪಿತು ಎಂಬ ನೋವಿದೆ. ಈಗಾಗಲೇ ಹಲವು ನೋವುಗಳನ್ನು ನುಂಗಿಕೊಂಡು ಬಂದವನು. ಈಗ ಎಂಎಲ್‍ಸಿ ಟಿಕೆಟ್ ಸಿಗಲಿಲ್ಲವೆಂದು ಹತಾಶನಾಗಿಲ್ಲ.

    ನನ್ನ ಧ್ವನಿ ಅಡಗಲಿಕ್ಕೆ ಸಾಧ್ಯವಿಲ್ಲ, ಯಾರಿಂದಲೂ ಅಡಗಿಸಲೂ ಸಾಧ್ಯವಿಲ್ಲ. ವಿಶ್ವನಾಥ್ ಧ್ವನಿ ಯಾವಾಗಲೂ ಮಾರ್ಧನಿಸುತ್ತಿರುತ್ತದೆ. ಮೆತ್ತಗಾಗುವ ಪ್ರಶ್ನೆಯೇ ಇಲ್ಲ. ಕಾದು ನೋಡಬೇಕಿದೆ ಎಂದು ತಿಳಿಸಿದ್ದಾರೆ.

    ತಡರಾತ್ರಿ ಬಿಜೆಪಿ ತನ್ನ ಮೇಲ್ಮನೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಇಂದು ನಾಲ್ವರು ನಾಮಪತ್ರ ಸಲ್ಲಿಸಲಿದ್ದಾರೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವ ಹೆಚ್. ವಿಶ್ವನಾಥ್ ಬಿಜೆಪಿ ಬಿಗ್ ಶಾಕ್ ನೀಡಿದೆ. ಎಂಟಿಬಿ ನಾಗರಾಜ್, ಆರ್.ಶಂಕರ್, ಸುನಿಲ್ ವಲ್ಯಾಪುರೆ ಮತ್ತು ಪ್ರತಾಪ್ ಸಿಂಹ ನಾಯಕ್ ನಾಲ್ವರಿಗೆ ಟಿಕೆಟ್ ಸಿಕ್ಕಿದೆ. ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿದ್ದ ಎಂಟಿಬಿ ನಾಗರಾಜ್, ಆರ್.ಶಂಕರ್ ಗೆ ನೀಡಿದ ಮಾತನ್ನು ಸಿಎಂ ಯಡಿಯೂರಪ್ಪ ಉಳಿಸಿಕೊಂಡಿದ್ದಾರೆ. ಆದರೆ ವಿಶ್ವನಾಥ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಸಿಎಂ ವಿಫಲವಾಗಿರೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

  • ನಮ್ಮ ಸಹೋದರ ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿಯಲ್ಲ: ಉಮೇಶ್ ಕತ್ತಿ

    ನಮ್ಮ ಸಹೋದರ ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿಯಲ್ಲ: ಉಮೇಶ್ ಕತ್ತಿ

    ಚಿಕ್ಕೋಡಿ: ವಿಧಾನ ಪರಿಷತ್ ಟಿಕೆಟ್‍ಗಾಗಿ ಬಿಜೆಪಿಯಲ್ಲಿ ಯಾವುದೇ ಪೈಪೋಟಿ ಇಲ್ಲ. ಪಕ್ಷದ ಹೈ ಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದು ಬಿಜೆಪಿಯ ಹಿರಿಯ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.

    ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾತನಾಡಿದ ಅವರು, ಹೈ ಕಮಾಂಡ್ ಹೇಳಿದವರಿಗೆ ನಾವು ವೋಟ್ ಹಾಕುತ್ತೇವೆ. ವಿಧಾನ ಪರಿಷತ್ ಚುನಾವಣಾ ಟಿಕೆಟಿಗಾಗಿ ಪೈಪೋಟಿ ನಡೆಸಿಲ್ಲ. ಸಹೋದರನಿಗೆ ರಾಜ್ಯ ಸಭಾ ಟಿಕೆಟ್ ಕೇಳಿದ್ದೆವು. ಆದರೆ ಹೈ ಕಮಾಂಡ್ ಒಳ್ಳೆಯ ಕಾರ್ಯಕರ್ತರನ್ನು ರಾಜ್ಯ ಸಭೆಗೆ ಆಯ್ಕೆ ಮಾಡಿದೆ. ರಮೇಶ್ ಕತ್ತಿಗೆ ಲೋಕಸಭಾ ಟಿಕೆಟ್ ಸಿಕ್ಕರೆ ಸರಿ, ಇಲ್ಲವಾದಲ್ಲಿ ರಾಜ್ಯ ಸಭೆಗೆ ಪ್ರಯತ್ನ ಮಾಡುತ್ತೇವೆ. ವಿಧಾನ ಪರಿಷತ್‍ಗೆ ರಮೇಶ್ ಕತ್ತಿ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಆನ್‍ಲೈನ್ ಶಿಕ್ಷಣ ರದ್ದು ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. 7ನೇ ತರಗತಿ ವರೆಗಿನ ವಿದ್ಯಾರ್ಥಿಗಳ ಪಾಲಕರು ಯಾರೂ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ನೀಡಬೇಡಿ ಎಂದು ಹುಕ್ಕೇರಿ ಶಾಸಕ ಉಮೇಶ ಕತ್ತಿ ಪಾಲಕರಲ್ಲಿ ವಿನಂತಿಸಿದ್ದಾರೆ.

  • ಸರ್ಕಾರ ಬರಲು ಕಾರಣರಾದವರಿಗೆ ಪರಿಷತ್‍ನಲ್ಲಿ ಸ್ಥಾನ: ಸಚಿವ ಈಶ್ವರಪ್ಪ

    ಸರ್ಕಾರ ಬರಲು ಕಾರಣರಾದವರಿಗೆ ಪರಿಷತ್‍ನಲ್ಲಿ ಸ್ಥಾನ: ಸಚಿವ ಈಶ್ವರಪ್ಪ

    – ಪರಿಷತ್ ಚುನಾವಣೆ ನಂತರ ಸಂಪುಟ ವಿಸ್ತರಣೆ

    ಶಿವಮೊಗ್ಗ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಕಾರಣರಾದವರಿಗೆ ವಿಧಾನ ಪರಿಷತ್ ಟಿಕೆಟ್ ನೀಡುವ ಮೂಲಕ ಅವರ ಋಣ ತೀರಿಸುವುದರ ಜೊತೆಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಈ ಮೂಲಕ ಎಂಟಿಬಿ ನಾಗರಾಜ್, ಎಚ್.ವಿಶ್ವನಾಥ್ ಹಾಗೂ ಆರ್.ಶಂಕರ್ ಗೆ ಪರಿಷತ್ ಟಿಕೆಟ್ ನೀಡುವ ಸುಳಿವು ನೀಡಿದ್ದಾರೆ.

    ಶಿವಮೊಗ್ಗದ ವೀರಣ್ಣನ ಬೆನವಳ್ಳಿ ಗ್ರಾಮದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಬೇಕು ಎಂಬ ದೃಷ್ಟಿಯಿಂದ ಕೆಲ ಕಾಂಗ್ರೆಸ್, ಜೆಡಿಎಸ್ ಶಾಸಕರು ಪಕ್ಷ ತೊರೆದು ಬಿಜೆಪಿಗೆ ಬಂದಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಅವರಿಗೆ ಮಾತು ಕೊಟ್ಟು ಮೋಸ ಮಾಡಲು ಬರುವುದಿಲ್ಲ. ಅಲ್ಲದೆ ಅನೇಕ ವರ್ಷಗಳಿಂದ ಪಕ್ಷ ಸಂಘಟನೆ ಮಾಡಿಕೊಂಡು ಬಂದಿರುವ ಅನೇಕ ಸಾಮಾನ್ಯ ಕಾರ್ಯಕರ್ತರು ಇದ್ದಾರೆ. ಅವರಿಗೂ ಅವಕಾಶ ಮಾಡಿಕೊಡಬೇಕಿದೆ ಎಂದರು.

    ಪರಿಷತ್ ಚುನಾವಣೆ ಸಂಬಂಧ ಸೋಮವಾರ ಸಂಜೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ನಡೆಯಲಿದೆ. ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸುತ್ತೇವೆ. ಟಿಕೆಟ್ ಹಂಚಿಕೆ ವಿಷಯದಲ್ಲಿ ಹೊಸಬರು, ಹಳಬರು ಎಂಬ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ಬರಲು ಕಾರಣರಾದವರನ್ನು ಹಾಗೂ ಕಾರ್ಯಕರ್ತರನ್ನು ಮರೆಯಲು ಸಾಧ್ಯವಿಲ್ಲ. ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

    ಟಿಕೆಟ್ ಹಂಚಿಕೆ ವೇಳೆ ಡಿವಿಜನ್ ವಾರ್, ಜಿಲ್ಲಾವಾರು ಹಾಗೂ ಜಾತಿವಾರು ಎಂಬುದು ನಡೆಯುವುದಿಲ್ಲ. ಬಿಜೆಪಿಯಲ್ಲಿ ಜಾತಿವಾರು ಟಿಕೆಟ್ ಹಂಚಿಕೆ ಮಾಡುತ್ತಾರೆ ಎಂಬುದು ಸುಳ್ಳು. ಬಿಜೆಪಿಯಲ್ಲಿ ಕಾರ್ಯಕರ್ತರ ಶಕ್ತಿ ಮೇಲೆ ಟಿಕೆಟ್ ಹಂಚಿಕೆ ನಡೆಯಲಿದೆ. ಪರಿಷತ್ ಚುನಾವಣೆ ನಂತರ ಸಂಪುಟ ವಿಸ್ತರಣೆ ನಡೆಯಲಿದ್ದು, ಸಂಪುಟದಲ್ಲಿ ಖಾಲಿ ಇರುವ ಸ್ಥಾನವನ್ನು ಭರ್ತಿ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರದ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.