Tag: State Leaders

  • ಹೆಚ್ಚಿದ ಕೊರೊನಾ ಭೀತಿ- ರಾಜ್ಯ ರಾಜಕೀಯದಲ್ಲಿ ಶುರುವಾಯ್ತು ಕೆಸರೆರಚಾಟ

    ಹೆಚ್ಚಿದ ಕೊರೊನಾ ಭೀತಿ- ರಾಜ್ಯ ರಾಜಕೀಯದಲ್ಲಿ ಶುರುವಾಯ್ತು ಕೆಸರೆರಚಾಟ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ಕೈಗೊಳ್ಳಬೇಕಾದ ರಾಜಕೀಯ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕಾಲೆಳೆಯುವ, ಟಾಂಗ್ ಕೊಡುವಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದಾರೆ.

    ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಮಾಡಿ, ಕೊರೊನಾ ವಿರುದ್ಧ ಕೈಗೊಂಡ ಕ್ರಮಗಳ ಕುರಿತ ಸುದ್ದಿಯನ್ನು ಜನರಿಗೆ ತಿಳಿಸುವ ವಿಚಾರದಲ್ಲಿ ಸರ್ಕಾರದಲ್ಲಿ ಎರಡು ಧ್ರುವಗಳು ಸೃಷ್ಟಿಯಾದಂತಿವೆ. ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಒಮ್ಮತದಿಂದ ಕಾರ್ಯ ನಿರ್ವಹಿಸಲಿ. ಪರಸ್ಪರರ ನಡುವೆ ಸಹಕಾರವಿರಲಿ. ಇದು ಪ್ರಚಾರ ಪಡೆಯುವ ಪ್ರಹಸನವಾಗಬಾರದು. ಜನರಲ್ಲಿ ಗೊಂದಲ ಮೂಡದಿರಲಿ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು.

    ಕೊರೊನಾ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡುವುದೇ ಮುಂಜಾಗ್ರತಾ ಕ್ರಮ. ಇದಕ್ಕಾಗಿ ಕೆಲ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಿಭಾಗ ತೆರೆದಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಇತರ ರೋಗಿಗಳ ಜೊತೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸರಿಯೇ? ಇದರ ಬದಲು ಖಾಲಿ ಉಳಿದಿರುವ ಸರ್ಕಾರಿ ಕಟ್ಟಡಗಳನ್ನು ಇದಕ್ಕಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು.

    ರಾಜ್ಯದಲ್ಲಿ ಹಲವು ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳು ಖಾಲಿ ಉಳಿದಿವೆ. ಅವುಗಳನ್ನು ಕೊರೊನಾ ವೈರಸ್ ಸೋಂಕಿತರಿಗೆ ಕ್ವಾರಂಟೈನ್ ಕೇಂದ್ರಗಳಾಗಿ ಪರಿವರ್ತಿಸಬೇಕು. ಜನನಿಬಿಡ ಪ್ರದೇಶಗಳಿಂದ ದೂರದಲ್ಲಿ ಕ್ವಾರಂಟೈನ್ ಕೇಂದ್ರ ತರೆಯಬೇಕು. ಸೋಂಕಿತರ ರಕ್ತ ಮಾದರಿ ಸಂಗ್ರಹಕ್ಕೆ ಅವರಿರುವಲ್ಲಿಯೇ ವ್ಯವಸ್ಥೆಯಾಗಬೇಕು ಎಂದಿದ್ದರು.

    ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು, ಕೊರೊನಾ ನಿರ್ವಹಣೆ ವಿಚಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಾಲಿಶ ಹೇಳಿಕೆ ನೀಡಿದ್ದನ್ನು ಗಮನಿಸಿದ್ದೇನೆ. ವಿಪತ್ತನ್ನು ಎದುರಿಸಲು ಸಿಎಂ ಯಡಿಯೂರಪ್ಪ ಅವರ ಆದೇಶದಂತೆ ರಾಜ್ಯಸರ್ಕಾರ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿದ್ದು ಆರೋಗ್ಯ ಸಚಿವ ಶ್ರೀರಾಮುಲು ಮತ್ತು ನಾನು ಪರಸ್ಪರ ಸಮನ್ವಯದಿಂದ ಕರ್ತವ್ಯ ನಿರ್ವಹಿಸುತ್ತದ್ದೇವೆ ಎಂದು ತಿರುಗೇಟು ನೀಡಿದ್ದಾರೆ.

    ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದು, ಸೋಂಕಿತರ ಪತ್ತೆಗೆ ಸರ್ವ ಪ್ರಯತ್ನ, ಸೋಂಕಿತರ ಚಿಕಿತ್ಸೆಗೆ ಎಲ್ಲ ಸೌಕರ್ಯ, ಪ್ರತ್ಯೇಕ ನಿಗಾ ಘಟಕಗಳು, ತಜ್ಞ ವೈದ್ಯರ ಮತ್ತು ಇತರ ಸಿಬ್ಬಂದಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಎಲ್ಲ ಮುಂಜಾಗ್ರತಾ ಕ್ರಮಗಳನ್ನು ರಾಜ್ಯಸರ್ಕಾರ ತೆಗೆದುಕೊಂಡಿದೆ. ಇದನ್ನು ಜನರೂ ಮೆಚ್ಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಮಾಜಿ ಮುಖ್ಯಮಂತ್ರಿಗಳಲ್ಲಿ ನನ್ನ ವಿನಂತಿಯೆಂದರೆ, ಈ ಸೂಕ್ಷ್ಮ ಪರಿಸ್ಥಿತಿಗಳಲ್ಲಿ ರಾಜಕೀಯ ಬದಿಗಿಟ್ಟು, ಜಾಗೃತಿ ಮೂಡಿಸುವ ಕೆಲಸದಲ್ಲಿ ಆದಷ್ಟು ಸಹಕರಿಸಿ. ತಾವು ಕೂಡ ಎಚ್ಚರಿಕೆಯಿಂದ ಇದ್ದು ಸುರಕ್ಷಿತವಾಗಿರಿ. ಇಂತಹ ಸಂದರ್ಭಗಳಲ್ಲಿ ಜನರಲ್ಲಿ ಆತಂಕ ಹೆಚ್ಚಿಸುವ ಯಾವುದೇ ಪ್ರಯತ್ನ ಅಪೇಕ್ಷಣೀಯವಲ್ಲ ಎಂದು ಗುಡುಗಿದ್ದಾರೆ.

    ಅಷ್ಟೇ ಅಲ್ಲದೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಕೂಡ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿಯವರೇ, ನಾನು ಹಾಗೂ ಸುಧಾಕರ್ ಅವರು ಜೊತೆಜೊತೆಗೆ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ತಮ್ಮ ಗೊಂದಲದಲ್ಲಿ ಯಾವುದೇ ಹುರುಳಿಲ್ಲ. ಇತ್ತೀಚೆಗೆ ಹೆಚ್ಚಾಗಿ ಗೊಂದಲದಲ್ಲಿರುವ ತಾವು, ಜನರನ್ನು ಗೊಂದಲಕ್ಕೆ ದೂಡುವ ಕೆಲಸಕ್ಕೆ ಕೈಹಾಕದಿರಿ ಎಂದು ವಿನಂತಿಸುತ್ತೇನೆ ಎಂದು ಕುಟುಕಿದ್ದಾರೆ.

  • ವಿಧಾನಸಭೆ ಚುನಾವಣೆ – ದೆಹಲಿ ಕನ್ನಡಿಗರನ್ನು ಸೆಳೆಯಲು ಮುಂದಾದ ರಾಜ್ಯ ಬಿಜೆಪಿ ನಾಯಕರು

    ವಿಧಾನಸಭೆ ಚುನಾವಣೆ – ದೆಹಲಿ ಕನ್ನಡಿಗರನ್ನು ಸೆಳೆಯಲು ಮುಂದಾದ ರಾಜ್ಯ ಬಿಜೆಪಿ ನಾಯಕರು

    ನವದೆಹಲಿ: ಫೆಬ್ರವರಿ 8 ರಂದು ದೆಹಲಿ ವಿಧಾನಸಭೆಗೆ ಮತದಾನ ಹಿನ್ನೆಲೆ ಇಂದು ರಾಜ್ಯ ಬಿಜೆಪಿ ನಾಯಕರು ಪ್ರಚಾರ ನಡೆಸಿದರು. ಆರ್.ಕೆ ಪುರಂ ನಲ್ಲಿರುವ ಕನ್ನಡಿಗರ ನಿವಾಸಗಳಿಗೆ ತೆರಳಿದ ಬಿಜೆಪಿ ನಾಯಕರು ಬಿಜೆಪಿ ಬೆಂಬಲಿಸಿ ಮತ ನೀಡುವಂತೆ ಮನವಿ ಮಾಡಿದರು.

    ಡಾ.ವೆಂಕಟೇಶ ಮೌರ್ಯ ನೇತೃತ್ವದಲ್ಲಿ ಸಂಸದೆ ಶೋಭ ಕರಾಂದ್ಲಾಜೆ, ನಟಿ ತಾರಾ ಸೇರಿ ರಾಜ್ಯದಿಂದ ಆಗಮಿಸಿದ್ದ ಹಲವು ಬಿಜೆಪಿ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಕನ್ನಡಿಗರು ವಾಸಿಸುವ ಆರ್ ಕೆ.ಪುರಂ ನಲ್ಲಿ ಮನೆ ಮನೆ ಪ್ರಚಾರ ನಡೆಸಿ ಮಾತನಾಡಿದ ಶೋಭಾ ಕರಂದ್ಲಾಜೆ, ಕೇಂದ್ರದಲ್ಲಿ ಮೋದಿ ಸರ್ಕಾರ ಆಡಳಿತದಲ್ಲಿ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದು ದೆಹಲಿಯಲ್ಲೂ ಬಿಜೆಪಿಯನ್ನು ಕನ್ನಡಿಗರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

    ಕೇಂದ್ರ ಸರ್ಕಾರ ಸಾಕಷ್ಟು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದೆ. ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಮ್ ಅದ್ಮಿ ಸರ್ಕಾರದ ಆಡಳಿತ ನೋಡಿದ್ದಿರಿ. ನೀಡಿದ ಯಾವ ಭರವಸೆಗಳನ್ನು ಆ ಸರ್ಕಾರಗಳು ಈಡೇರಿಸಿಲ್ಲ. ಹೀಗಾಗಿ ಒಮ್ಮೆ ಬಿಜೆಪಿ ಸರ್ಕಾರಕ್ಕೆ ಅವಕಾಶ ನೀಡಬೇಕು ಎಂದು ಮತಬೇಟೆ ಮಾಡಿದರು.