Tag: State leader

  • ಬಿಜೆಪಿ ಹೈಕಮಾಂಡ್‍ನಿಂದ ರಾಜ್ಯ ನಾಯಕರಿಗೆ ಬುಲಾವ್

    ಬಿಜೆಪಿ ಹೈಕಮಾಂಡ್‍ನಿಂದ ರಾಜ್ಯ ನಾಯಕರಿಗೆ ಬುಲಾವ್

    ಬೆಂಗಳೂರು: ಸರ್ಕಾರ ರಚನೆಯ ಕುರಿತು ಚರ್ಚೆ ನಡೆಸುವುದಕ್ಕಾಗಿ ರಾಜ್ಯ ನಾಯಕರಿಗೆ ಬಿಜೆಪಿ ಹೈಕಮಾಂಡ್‍ ಬುಲಾವ್ ನೀಡಿದೆ.

    ಹೈಕಮಾಂಡ್ ಸೂಚನೆಯಂತೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕರಾದ ಅರವಿಂದ ಲಿಂಬಾವಳಿ, ಮಾಧುಸ್ವಾಮಿ, ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಹಾಗೂ ರಾಜ್ಯ ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಈ ಮೂಲಕ ಗುರುವಾರ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ, ವಿಶೇಷ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಬಿಎಸ್ ಯಡಿಯೂರಪ್ಪ ಅವರು ಗುರುವಾರ ಅಥವಾ ಶುಕ್ರವಾರ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಗುರುವಾರ ಬೆಳಗ್ಗೆ 9.40 ರಿಂದ 10.30 ಅಥವಾ ಸಂಜೆ 4.30ರ ನಂತರ ಹಾಗೂ ಶುಕ್ರವಾರ ಮಧ್ಯಾಹ್ನ 2 ರಿಂದ 3 ಗಂಟೆ ಅಥವಾ ಸಂಜೆ 4.30ರ ನಂತರ ಅಂದರೆ, ಎರಡು ದಿನಾಂಕಗಳಲ್ಲಿ ನಾಲ್ಕು ಮುಹೂರ್ತವನ್ನ ಜ್ಯೋತಿಷಿಗಳು ನಿಗದಿ ಮಾಡಿದ್ದಾರಂತೆ.

    ಈ ಕುರಿತು ಬುಧವಾರ ಮಾತನಾಡಿದ್ದ ಬಿ.ಎಸ್.ಯಡಿಯೂರಪ್ಪ ಅವರು, ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಮಾಡೋದಾಗಿ ತಿಳಿಸಿದ್ದರು. ಹೀಗಾಗಿ ಬುಧವಾರ ರಾತ್ರಿ ರಾಜ್ಯದ 5 ಜನರ ಮುಖಂಡರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಮೂಲಗಳಿಂದ ಕೇಳಿ ಬಂದಿದೆ.

    ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಒಬ್ಬರಿಂದಲೇ ಪ್ರಮಾಣ ವಚನ ನಡೆಯಲಿದ್ದು, ಆ ನಂತರ ವಿಶ್ವಾಸಮತ ಸಾಬೀತುಪಡಿಸಿ ಸಂಪುಟ ರಚನೆ ಮಾಡುತ್ತಾರೆ ಎನ್ನಲಾಗುತ್ತಿದೆ.