Tag: State governments

  • ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಸ್ಯಾಂಪಲ್‌ ಕಳುಹಿಸಿ: ರಾಜ್ಯಗಳಿಗೆ ಕೇಂದ್ರ ಸೂಚನೆ

    ನವದೆಹಲಿ: ಎಲ್ಲ ಹಾಟ್‌ಸ್ಪಾಟ್‌ಗಳಲ್ಲಿ ಪತ್ತೆಯಾಗುವ ಕೊರೊನಾ ಸೋಂಕಿತರ ಮಾದರಿಗಳನ್ನು ವಿಶೇಷ ಲ್ಯಾಬ್‌ಗಳಿಗೆ ಕಳುಹಿಸುವಂತೆ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಓಮಿಕ್ರಾನ್ ಸೇರಿದಂತೆ ಭಾರತದಲ್ಲಿ ಕೊರೊನಾ ಹೊಸ ರೂಪಾಂತರಿಗಳನ್ನು ಆರಂಭಿಕವಾಗಿ ಪತ್ತೆ ಹಚ್ಚುವ ಸಲುವಾಗಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

    ಓಮಿಕ್ರಾನ್ ಸೋಂಕು ಭಾರತದಲ್ಲಿ ಕಂಡುಬರುವ ಸಾಧ್ಯತೆಗಳು ಇರುವ ಹಿನ್ನೆಲೆಯಲ್ಲಿ ನಿನ್ನೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಎಲ್ಲ ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳು ಭಾಗಿಯಾಗಿದ್ದರು. ಇತ್ತೀಚೆಗೆ ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತಿರುವ ಸೋಂಕಿತರ ಬಗ್ಗೆ ಚರ್ಚೆ ನಡೆಸಲಾಯಿತು. ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಸೇರಿದಂತೆ ಇತರೆ ದೇಶಗಳಿಂದ ಬಂದ 6 ಮಂದಿಗೆ ಕೊರೊನಾ

    ಈ ವೇಳೆ ದೇಶದ ಎಲ್ಲ ಹಾಟ್‌ಸ್ಪಾಟ್‌ಗಳಲ್ಲಿ ಪತ್ತೆಯಾಗುತ್ತಿರುವ ಕೊವೀಡ್ ರೋಗಿಗಳ ಸ್ಯಾಂಪಲ್‌ಗಳನ್ನು ಸರ್ಕಾರ ಗೊತ್ತುಪಡಿಸಿದ INSACOG ಲ್ಯಾಬ್‌ಗಳಿಗೆ “ಪ್ರಾಂಪ್ಟ್ ರೀತಿಯಲ್ಲಿ” ಕಳುಹಿಸಲು ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಆರಂಭಿಕವಾಗಿ ಧಾರವಾಡ ಮತ್ತು ಥಾಣೆಯಿಂದ ಸ್ಯಾಂಪಲ್‌ ಕಳುಹಿಸಲು ತಿಳಿಸಲಾಗಿದೆ. ಧಾರವಾಡದ ವೈದ್ಯಕೀಯ ಕಾಲೇಜು ಮತ್ತು ಥಾಣೆಯ ಭಿವಂಡಿಯಲ್ಲಿರುವ ವೃದ್ಧಾಶ್ರಮದಲ್ಲಿ ದೊಡ್ಡ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಓಮಿಕ್ರಾನ್ ಸೇರಿದಂತೆ ಇತರೆ ರೂಪಾಂತರಗೊಂಡ ತಳಿಗಳ ಬಗ್ಗೆ ಅಧ್ಯಯನ ನಡೆಸಲು ಆರೋಗ್ಯ ಇಲಾಖೆ ಸ್ಯಾಂಪಲ್‌ ಕಳುಹಿಸಲು ಸೂಚನೆ ನೀಡಿದೆ. ಇದನ್ನೂ ಓದಿ: ಕೋವಿಡ್‌ ವಾರಿಯರ್ಸ್‌ಗೆ ಬೂಸ್ಟರ್‌ ಡೋಸ್‌ ನೀಡುವ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚೆ: ಸಿಎಂ

    ಇದೇ ವೇಳೆ ಅಪಾಯ ಇರುವ ದೇಶಗಳಿಂದ ಆಗಮಿಸುತ್ತಿರುವ ಪ್ರಯಾಣಿಕರ ಮೇಲೆ‌ ನಿಗಾವಹಿಸಲು ರಾಜ್ಯಗಳಿಗೆ ಸೂಚಿಸಿದೆ. ಪ್ರಯಾಣಿಕರಲ್ಲಿ ನೆಗೆಟಿವ್ ವರದಿ ಬಂದರೂ ಅವರನ್ನು ಕ್ವಾರಂಟೈನ್‌ನಲ್ಲಿರಿಸಬೇಕು. ಏಳು ದಿನಗಳ ಬಳಿಕ ಮತ್ತೊಮ್ಮೆ ಪರೀಕ್ಷೆ ನಡೆಸಬೇಕು. ಎರಡನೇ ವರದಿಯೂ ಋಣಾತ್ಮಕವಿದ್ದಲ್ಲಿ ಒಂದು ವಾರದ ಅವರ ಆರೋಗ್ಯದ ಮೇಲೆ ನಿಗಾ ವಹಿಸಬೇಕು ಎಂದು ತಿಳಿಸಿದೆ.

  • ಲಾಕ್‍ಡೌನ್ ವಿಸ್ತರಣೆಗೆ ವಿವಿಧ ರಾಜ್ಯಗಳಿಂದ ಕೇಂದ್ರಕ್ಕೆ ಮನವಿ

    ಲಾಕ್‍ಡೌನ್ ವಿಸ್ತರಣೆಗೆ ವಿವಿಧ ರಾಜ್ಯಗಳಿಂದ ಕೇಂದ್ರಕ್ಕೆ ಮನವಿ

    ನವದೆಹಲಿ: ದೇಶಾದ್ಯಂತ ಹೆಮ್ಮಾರಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಹೀಗಾಗಿ ದೇಶಾದ್ಯಂತ ಜಾರಿಯಲ್ಲಿರುವ ಲಾಕ್‍ಡೌನ್ ಅನ್ನು ವಿಸ್ತರಿಸುವಂತೆ ಅನೇಕ ರಾಜ್ಯ ಸರ್ಕಾರಗಳು ಮತ್ತು ತಜ್ಞರು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

    ಇತ್ತ ಕೇಂದ್ರ ಸರ್ಕಾರವೂ ಲಾಕ್‍ಡೌನ್ ವಿಸ್ತರಿಸುವ ನಿಟ್ಟಿನಲ್ಲಿ ಯೋಚನೆ ನಡೆಸಿದೆ. ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 24ರಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ದೇಶಾದ್ಯಂತ 21 ದಿನಗಳ ಲಾಕ್‍ಡೌನ್ ವಿಧಿಸುವ ಕ್ರಮವನ್ನು ಘೋಷಿಸಿದ್ದರು. ಅಂದು ಮಧ್ಯರಾತ್ರಿಯಿಂದ ಲಾಕ್‍ಡೌನ್ ಜಾರಿಗೆ ಬಂದಿತ್ತು. ಒಂದು ವೇಳೆ 21 ದಿನಗಳ ಲಾಕ್‍ಡೌನ್ ವಿಸ್ತರಿಸದೆ ಹೋದಲ್ಲಿ ಏಪ್ರಿಲ್ 14 ರಂದು ಕೊನೆಗೊಳ್ಳುತ್ತದೆ. ಆದರೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

    ಇದೇ ವಿಚಾರವಾಗಿ ಮಾತನಾಡಿರುವ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು, ಲಾಕ್‍ಡೌನ್ ಅನ್ನು ಮೇ ಕೊನೆಯ ವಾರದವರೆಗೂ ವಿಸ್ತರಿಸವ ಅಗತ್ಯವಿದೆ. ದೇಶದಲ್ಲಿ ಕೊರೊನಾವೈರಸ್ ಹರಡುತ್ತಿರುವ ಮಾಹಿತಿ ಮೇಲೆ ಕೇಂದ್ರ ಸರ್ಕಾರ ಲಾಕ್‍ಡೌನ್ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

    ಕೇಂದ್ರ ಸರ್ಕಾರ ಅಂತಿಮವಾಗಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧರಾಗಿರುವಂತೆ ವೆಂಕಯ್ಯ ನಾಯ್ಡು ದೇಶದ ಜನರಿಗೆ ಕೇಳಿಕೊಂಡಿದ್ದಾರೆ. ಮಾರ್ಚ್ 25ರಿಂದ ಜಾರಿಗೆ ಬಂದ ಲಾಕ್‍ಡೌನ್ ಎರಡು ವಾರ ಪೂರ್ಣಗೊಂಡಿದೆ. ಇದರಿಂದಾಗಿ ಅನೇಕ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಿವೆ. ದೇಶದ ಜನರ ಕಾಯುತ್ತಿರುವ ನಾಯಕತ್ವವನ್ನು ಬೆಂಬಲಿಸುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

    ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಭಾರತದಲ್ಲಿ ಮಂಗಳವಾರದ ಮಧ್ಯಾಹ್ನದ ವೇಳೆಗೆ ಒಟ್ಟು 4,421 ಜನರಿಗೆ ಕೊರೊನಾ ಸೋಂಕು ತಗುಲಿದೆ. ಮೃತರ ಸಂಖ್ಯೆ ಈಗ 114 ಕ್ಕೆ ಏರಿದೆ.