ನವದೆಹಲಿ: ಕೋವಿಡ್ 19 ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ. ರಾಜ್ಯಗಳ ರಾಜ್ಯ ವಿಪತ್ತು ಪರಿಹಾರ ನಿಧಿ(SDRF) ಖಾತೆಗೆ ಕೇಂದ್ರ ಗೃಹ ಇಲಾಖೆ 7,274 ಕೋಟಿ ರೂ. ಬಿಡುಗಡೆ ಮಾಡಿದೆ.
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಎರಡನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಇದಕ್ಕೂ ಮುನ್ನ ಗೃಹ ಇಲಾಖೆ ಮುಂಗಡವಾಗಿ 1,599 ಕೋಟಿ ಹಣ ಬಿಡುಗಡೆ ಮಾಡಿತ್ತು. ಇದನ್ನೂ ಓದಿ: ಯಾರೇ ಇರಲಿ ಮಹಿಳೆಯರ ಬಗ್ಗೆ ಗೌರವದಿಂದ ಮಾತನಾಡಬೇಕು: ಬಿ.ಸಿ ಪಾಟೀಲ್
ಕೋವಿಡ್ ಮತ್ತು ಇತರೆ ಆರ್ಥಿಕ ಪರಿಸ್ಥಿತಿಗಳನ್ನು ನಿಭಾಯಿಸಲು ಕೇಂದ್ರ ಸರ್ಕಾರ ರಾಜ್ಯಗಳಲ್ಲಿ ಹಣಕಾಸಿನ ನೆರವು ನೀಡುತ್ತಿದ್ದು ಸದ್ಯ ರಾಜ್ಯಗಳ ಎಸ್‍ಡಿಆರ್‍ಎಫ್ ಖಾತೆಯಲ್ಲಿ 2021-22 ಅವಧಿಯಲ್ಲಿ 23,186ಕೋಟಿ ಲಭ್ಯವಿದೆ ಎಂದು ಗೃಹ ಇಲಾಖೆ ಹೇಳಿದೆ.
ಕೋವಿಡ್ 19 ನಿಂದ ಮೃತಪಟ್ಟರಿಗೆ SDRF ಮೂಲಕ 50 ಸಾವಿರ ಪರಿಹಾರ ನೀಡುವುದಾಗಿ ಸುಪ್ರೀಂಕೋರ್ಟಿಗೆ ಕೇಂದ್ರ ಸರ್ಕಾರ ಅಫಿಡವಿಟ್ ಮೂಲಕ ಹೇಳಿತ್ತು. ಅದರ ಭಾಗವಾಗಿ ಗೃಹ ಇಲಾಖೆ ಹಣ ವರ್ಗಾವಣೆ ಮಾಡಿದೆ.
ಮೈಸೂರು: ಆರೋಗ್ಯ ಕರ್ನಾಟಕ ಕಟ್ಟಬೇಕು ಎಂಬುದು ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸರ್ಕಾರದ ಗುರಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನೋತ್ಸವದ ಅಂಗವಾಗಿ ನಗರದ ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ದೇವಸ್ಥಾನದ ಉದ್ಯಾನವನದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮೋದಿ ಯುಗ್ ಉತ್ಸವ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇದನ್ನೂ ಓದಿ: ಪಾದಯಾತ್ರೆ ಶಾಪದಿಂದ ಬಿಎಸ್‍ವೈ ಅಧಿಕಾರ ಕಳೆದುಕೊಂಡರು: ಕಾಶಪ್ಪನವರ್
ಕೋವಿಡ್ ಬಂದಂತಹ ಸಂದರ್ಭದಲ್ಲಿ ಲಸಿಕೆ ಬರುವುದಿಲ್ಲ. ಈ ಸರ್ಕಾರ ಮಾರ್ಗಸೂಚಿಗಳನ್ನಾಗಲಿ ಅಥವಾ ಕೆಲಸವನ್ನಾಗಲಿ ಸರಿಯಾದ ರೀತಿಯಲ್ಲಿ ಮಾಡುತ್ತಿಲ್ಲ ಎಂದು ಪ್ರಾರಂಭದಿಂದ ಟೀಕೆಗಳನ್ನು ಮಾಡಲಾಗುತ್ತಿತ್ತು. ಲಸಿಕೆ ಬಂದಂತಹ ಸಂದರ್ಭದಲ್ಲಿ ಬಿಜೆಪಿ ಲಸಿಕೆ, ಮೋದಿ ಲಸಿಕೆ ಎಂದೂ ಸಹ ಟೀಕಿಸಲಾಗಿತ್ತು. ಈ ಲಸಿಕೆಯ ಬಗ್ಗೆ ಸಾಕಷ್ಟು ತಪ್ಪು ಸಂದೇಶ ಹಾಗೂ ಮಾಹಿತಿಗಳು ಹೋದವು. ಇದರಿಂದ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂಜರಿದರು ಎಂದರು.
ದೇಶದ ಕಂಪನಿಗಳೇ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ತಯಾರಿಸಿದವು. ವಿಶ್ವದ ಇತರೆ ಲಸಿಕೆಗಳ ಜೊತೆಗೆ ಸರಿಸಮಾನವಾಗಿ ನಮ್ಮ ಲಸಿಕೆಗಳು ಹೊರಬಂದಿರುವುದು ಐತಿಹಾಸಿಕವಾದದ್ದು. ಇದರಿಂದ ಮೋದಿ ಅವರ ಆತ್ಮನಿರ್ಬರ ಭಾರತ ಕನಸು ನನಸಾಗಿದೆ ಎಂದರು. ಇದನ್ನೂ ಓದಿ: ಎರಡು ಉಪಚುನಾವಣೆಯಲ್ಲಿ ಬಿಜೆಪಿ ಧೂಳಿಪಟ ಖಚಿತ: ಎಸ್‍ಆರ್ ಪಾಟೀಲ್
ಕೋವಿಡ್ 3ನೇ ಅಲೆ ಕಡಿಮೆ ಪ್ರಮಾಣದಲ್ಲಿಯೇ ಇದೆ. ಹೀಗಾಗಿ ಭಯಪಡುವ ಅಗತ್ಯವಿಲ್ಲ. ಒಂದುವೇಳೆ 3ನೇ ಅಲೆ ಬಂದರೂ ಅದನ್ನು ನಿಯಂತ್ರಿಸುವ ಕಾರ್ಯ ಮಾಡಲಾಗುವುದು. ಈಗಾಗಲೇ ಮಕ್ಕಳಿಗೆ ಲಸಿಕೆ ನೀಡಲು ಟ್ರಯಲ್ ನಡೆಯುತ್ತಿದೆ. ಶೀಘ್ರವಾಗಿ ಮಕ್ಕಳಿಗೂ ಲಸಿಕೆ ನೀಡಲಾಗುತ್ತದೆ ಎಂದರು. ವಿಶ್ವದಲ್ಲೇ ಅತಿದೊಡ್ಡ ಆರೋಗ್ಯ ವಿಮಾ ಯೋಜನೆ ಇದ್ದರೆ ಅದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಂದಂತಹ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆ. ಇದರಿಂದ ಬಡಜನರಿಗೆ ಲಕ್ಷಾಂತರ ರೂಪಾಯಿ ಉಳಿತಾಯವಾಗಲಿದೆ ಎಂದು ಹೇಳಿದರು.
ಶಾಸಕರಾದವರು ರಸ್ತೆಗಳನ್ನು, ಕಟ್ಟಡಗಳನ್ನು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾರೆ. ಆದರೆ ಶಾಸಕ ರಾಮದಾಸ್ ಅವರು ಕ್ಷೇತ್ರದ ಮನೆಯ ಸದಸ್ಯರಾಗಿ ಪ್ರತಿಯೊಬ್ಬರ ಆರೋಗ್ಯವನ್ನು ವಿಚಾರಿಸುತ್ತಿರುವುದು ವಿನೂತನವಾದ ಕಾರ್ಯಕ್ರಮವಾಗಿದೆ ಅವರ ಕಾರ್ಯ ಮೆಚ್ಚುವಂತದ್ದು ಎಂದರು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ನಡೆಸುತ್ತಿದ್ದಾರೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ರಕ್ತದಾನ ಮಾಡುವ ದಾನಿಗಳು ಕಡಿಮೆಯಾಗಿದ್ದು, ಕೋವಿಡ್ ಮಾತ್ರ ಕಡಿಮೆಯಾಗಿಲ್ಲ. ರಕ್ತದ ಅವಶ್ಯಕತೆ ಹಾಗೆ ಇದೆ. ನಮ್ಮಲ್ಲಿನ ಸಂಶೋಧನಕಾರರು ಎಲ್ಲವನ್ನೂ ಕಂಡುಹಿಡಿದಿದ್ದರೂ ಕೃತಕ ರಕ್ತವನ್ನು ತಯಾರು ಮಾಡುವುದನ್ನು ಸಾಧ್ಯವಾಗಿಲ್ಲ. ಹೀಗಾಗಿ ರಕ್ತಕ್ಕೆ ಪರ್ಯಾವಾಗಿ ವವ್ಯಸ್ಥೆ ಇಲ್ಲ. ಹೀಗಾಗಿ ರಕ್ತದಾನ ಒಂದು ಪುಣ್ಯವಾದ ಕಾರ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರದಲ್ಲಿ ಎಸ್.ಎ.ರಾಮದಾಸ್, ಎಂ.ಎಂ.ಸಿ.ಆರ್.ಐ ನಿರ್ದೇಶಕ ಡಾ.ಸಿ.ಪಿ.ನಂಜರಾಜ್, ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ವಿಜಯಾನಂದ ತೀರ್ಥಸ್ವಾಮೀಜಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್, ತಾಲೂಕು ವೈದ್ಯಾಧಿಕಾರಿ ಡಾ.ಮಹದೇವ ಪ್ರಸಾದ್ ಸೇರಿದಂತೆ ಇತರರು ಹಾಜರಿದ್ದರು.
ಬೆಂಗಳೂರು: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದಲ್ಲಿ (ಕೆಎಸ್‍ಐಸಿ) ವಹಿವಾಟು ವಿಸ್ತರಣೆಗೆ ಕ್ರಮವಹಿಸಿ, ಉತ್ಪಾದನೆಯನ್ನು ದ್ವಿಗುಣಗೊಳಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಹಾಗೂ ಹಾಲಿ ಇರುವ ನೌಕರರನ್ನೇ ಬಳಸಿಕೊಂಡು, ಮಾರುಕಟ್ಟೆ ವಿಸ್ತರಣೆಗೆ ಕ್ರಮ ವಹಿಸಬೇಕು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಸೂಚಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ನಡೆಸಿದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕೆಎಸ್‍ಐಸಿ ಯಲ್ಲಿನ ಅಧಿಕಾರಿಗಳ ಕಾರ್ಯವೈಖರಿಗೆ ಪ್ರಶ್ನಿಸಿ ತರಾಟೆ ತೆಗೆದುಕೊಂಡರು. ಈ ಹಿಂದೆಯೇ ಕೆಎಸ್‍ಎಮ್‍ಬಿ ಇಂದ ಕಚ್ಚಾ ರೇಷ್ಮೆ ಖರೀದಿಸಬೇಕು ಎಂದು ಕೆ.ಎಸ್.ಐ.ಸಿ.ಗೆ ಸೂಚನೆ ನೀಡಲಾಗಿತ್ತು. ಆದರೆ ಇಲ್ಲದ ನೆಪವೊಡ್ಡಿ ಕೆಎಸ್‍ಎಂಬಿಯಿಂದ ಖರೀದಿಸದೆ ಖಾಸಗಿಯವರಿಂದ ಖರೀದಿಸುತ್ತಿದ್ದಾರೆ. ಇನ್ನು ಮುಂದೆ ಅಗತ್ಯವಿರುವ ಕಚ್ಚಾ ರೇಷ್ಮೆಯನ್ನು ಕೆಎಸ್‍ಎಂಬಿ ಖರೀದಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್ ಸೇರ್ಪಡೆಗೆ ಎಷ್ಟು ಜನ ಆಸಕ್ತರು ಎಂದು ಹೇಳಲ್ಲ: ಡಿಕೆಶಿ
ಖಾಸಗಿಯವರಿಗೆ ಸ್ಪರ್ಧೆ ನೀಡುವ ರೀತಿಯಲ್ಲಿ ಕೆಎಸ್‍ಐಸಿ ಮಾರ್ಕೆಟಿಂಗ್ ಮಾಡುವ ಕೆಲಸ ಮಾಡುತ್ತಿಲ್ಲ. ಮಾರುಕಟ್ಟೆ ನಿರ್ವಹಣೆಗೆ ಜವಾಬ್ದಾರಿ ವಹಿಸಿ ಒಬ್ಬರನ್ನು ನೇಮಿಸಬೇಕು. ಮಾರುಕಟ್ಟೆ ವಿಸ್ತರಣೆ ಆಗಬೇಕು. ಲಕ್ಷಾಂತರ ರೂಪಾಯಿ ಬೆಲೆಬಾಳುವ ರೇಷ್ಮೆ ಸೀರೆಯನ್ನು ಖರೀದಿಸಿದವರಿಗೆ ಅತ್ಯುತ್ತಮವಾದ ಬ್ಯಾಗ್ ಅಥವಾ ಸೂಟ್‍ಕೇಸ್‍ನಲ್ಲಿ ಸೀರೆಯನ್ನು ಹಾಕಿ ಕೊಡಬೇಕು. ಗುಣಮಟ್ಟದ ಮತ್ತು ಆಕರ್ಷಕ ರೀತಿಯ ಮಾರ್ಕೆಟಿಂಗ್ ಅತಿ ಮುಖ್ಯ ಎಂದು ಹೇಳಿದರು.
ಮಾರ್ಕೆಟಿಂಗ್ ಜೊತೆಗೆ ಹೊಸ ಹೊಸ ಡಿಸೈನ್ಸ್ ಕೂಡ ಬರಬೇಕು. ಅದಕ್ಕಾಗಿ ಓರ್ವ ಡಿಸೈನರ್ ನೇಮಿಸಿ ಅಥವಾ ಇಲಾಖೆಯಲ್ಲಿ ಇರುವವರಿಗೆ ಆ ಜವಾಬ್ದಾರಿ ನೀಡಬೇಕು. ಮೈಸೂರು ರೇಷ್ಮೆ ಬೇಡಿಕೆ ಇದೆ. ಆದರೆ ಉತ್ಪಾದನೆ ಕಡಿಮೆ ಪ್ರಮಾಣದಲ್ಲಿದೆ. ಎರಡು ಪಾಳಿಯಲ್ಲಿ ಕೆಲಸ ಮಾಡುವ ಮೂಲಕ, ಉತ್ಪಾದನೆಯನ್ನು ದ್ವಿಗುಣಗೊಳಿಸುವ ಕೆಲಸ ಮಾಡಬೇಕು. ಅದಕ್ಕಾಗಿ ಯುನಿಯನ್ ಲೀಡರ್‍ಗಳ ಜೊತೆ ಸಭೆ ಕರೆದು ಚರ್ಚೆ ನಡೆಸಬೇಕು. ರೇಷ್ಮೆ ಸೀರೆ ಎಲ್ಲಾ ವರ್ಗದವರಿಗೆ ಸಿಗುವ ಹಾಗೆ ವಿವಿಧ ಗುಣಮಟ್ಟದಲ್ಲಿ ಸಿದ್ಧಪಡಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಜೆಡಿಎಸ್‍ನದ್ದು ಮಿಷನ್ 123, ಬಿಜೆಪಿ 150, ನಮ್ಮದು 224: ಡಿಕೆಶಿ
ರೇಷ್ಮೆ ನೂಲು ತೆಗೆಯುವ ಯಂತ್ರ ಹಾಸನ, ಬೆಳಗಾವಿ, ಗುಲ್ಬರ್ಗ, ಕೂಡ್ಲಗಿಯಲ್ಲಿ ಬಳಕೆಯಾಗದೆ ನಿರುಪಯುಕ್ತವಾಗಿ ಬಿದ್ದಿದೆ. ಅದನ್ನು ಸರಿಪಡಿಸಿ ಮೈಸೂರು, ಕನಕಪುರ, ಚನ್ನಪಟ್ಟಣ ಹಾಗೂ ಟಿ.ನರಸಿಪುರದಲ್ಲಿರುವ ಕೆಎಸ್‍ಐಸಿಯ ಘಟಕಗಳಿಗೆ ತರಬೇಕು. ದುರಸ್ತಿ ಮಾಡಿ ಆ ಯಂತ್ರಗಳನ್ನು ಬಳಕೆ ಮಾಡಿಕೊಳ್ಳಬೇಕು. ಅನುಪಯುಕ್ತ ರೇಷ್ಮೆಯನ್ನು ಸರಿಯಾದ ರೀತಿಯಲ್ಲಿ ಹರಾಜು ಮಾಡದಿರುವುದು ಗಮನಕ್ಕೆ ಬಂದಿದೆ. ಇ ಟೆಂಡರ್ ಮೂಲಕವೇ ಎಲ್ಲವನ್ನೂ ಹರಾಜು ಹಾಕಬೇಕು ಎಂದು ಸೂಚಿಸಿದರು.
ಬೆಂಗಳೂರು ಹಾಗೂ ದೆಹಲಿ ವಿಮಾನ ನಿಲ್ದಾಣದಲ್ಲಿ ರೇಷ್ಮೆ ಉತ್ಪಾದನಾ ಮಾರಾಟ ಮಳಿಗೆ ಶೀಘ್ರವೇ ತೆರೆಯಬೇಕು. ಅದಕ್ಕಾಗಿ ಮುಖ್ಯಕಾರ್ಯದರ್ಶಿಯವರ ನೇತೃತ್ವದಲ್ಲಿ ಅಧಿಕಾರಿಗಳು ಸಭೆ ನಡೆಸಬೇಕು. ಮುಂಬೈನಲ್ಲಿ ಅತಿ ಹೆಚ್ಚು ಕನ್ನಡಿಗರು ಇರುವ ದಾದರ ಹಾಗೂ ಮಾಟುಂಗಾ ಪ್ರದೇಶದಲ್ಲಿ ಮಳಿಗೆ ಆರಂಭಿಸುವ ಬಗ್ಗೆ ಪರಿಶೀಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಹುಬ್ಬಳ್ಳಿಯಲ್ಲಿ ರೇಷ್ಮೆ ಟೆಸ್ಟಿಂಗ್ ಲ್ಯಾಬ್, ಗುಲ್ಬರ್ಗದಲ್ಲಿ ಪರ್ಚೇಸಿಂಗ್ ಸೆಂಟರ್, ಸ್ಥಾಪಿಸುವ ಸಂಬಂಧ ಸಚಿವರು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
ರೇಷ್ಮೆ ಬೆಳೆಗೆ ತ್ರಿಪ್ಸ್ ಅಂಡ್ ಮೈಟ್ಸ್ ಕೀಟದ ಬಾಧೆ ಕೆಲವು ಕಡೆಗಳಲ್ಲಿ ಶುರುವಾಗಿದೆ. ಅಂತಹ ಸ್ಥಳಗಳನ್ನು ಗುರುತಿಸಿ ಇಲಾಖೆಯಿಂದಲೇ ಔಷಧಿ ಸಿಂಪಡಿಸುವ ಕೆಲಸ ವಾರದೊಳಗೆ ಮಾಡಬೇಕು ಎಂದು ನಾರಾಯಣಗೌಡ ಹೇಳಿದರು.
ನಿನ್ನೆ ಶಿವಮೊಗ್ಗದ ಕಾಚಿನಕಟ್ಟೆಯಲ್ಲಿ ರೈತರೊಂದಿಗೆ ಸಂವಾದ ನಡೆಸಿದರು. ರೈತರು ರೇಷ್ಮೆಗೆ ತ್ರಿಪ್ಸ್ ಅಂಡ್ ಮೈಟ್ಸ್ ಕೀಟದಿಂದ ಸಮಸ್ಯೆ ಆಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ರೇಷ್ಮೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಆಯುಕ್ತ ಪೆದ್ದಪ್ಪಯ್ಯ ಅವರಿಗೆ ರೈತರ ಸಚಿವರು ಸೂಚನೆ ನೀಡಿದರು.
ಶಿವಮೊಗ್ಗ ಹಾಗೂ ದಾವಣೆಗೆರೆ ಭಾಗದ ರೇಷ್ಮೆ ಬೆಳೆಗಾರರು ರೇಷ್ಮೆ ಗೂಡನ್ನು ಮಾರುಕಟ್ಟೆಗೆ ಸಾಗಿಸುವಾಗ ಪೆÇಲೀಸರು ಹಾಗೂ ದಲ್ಲಾಳಿಗಳಿಂದ ಕಿರಿಕಿರಿ ಆಗುತ್ತಿದೆ. ವಿನಾಕಾರಣ ತಪಾಸಣೆ ನೆಪದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗಳಿಂದ ಮುಕ್ತಿ ನೀಡಿ ಎಂದು ರೈತರು ನಿನ್ನೆ ಶಿವಮೊಗ್ಗದಲ್ಲಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ಐಡಿ ಕಾರ್ಡ್ ನೀಡುವ ಭರವಸೆ ಕೊಟ್ಟಿದ್ದ ಸಚಿವರು, ಇಂದು ಆಯುಕ್ತರಿಗೆ ತಕ್ಷಣ ವಿಶೇಷ ಗುರುತಿನ ಚೀಟಿ ಮಾಡಿ ರೈತರಿಗೆ ನೀಡಬೇಕು ಎಂದು ಸೂಚಿಸಿದರು.
ಈ ವಿಚಾರದಲ್ಲಿ ದೂರು ಬರಬಾರದು. ಅಲ್ಲದೆ ಈ ಮೊದಲು ಶಿವಮೊಗ್ಗ, ದಾವಣಗೆರೆಯ ರೈತರು ಮಾರುಕಟ್ಟೆಗೆ ರೇಷ್ಮೆ ತಂದಾಗ ಪ್ರತಿ ಕೆ.ಜಿ.ಗೆ 10 ರೂಪಾಯಿ ಸಾರಿಗೆ ವೆಚ್ಚ ನೀಡಲಾಗುತ್ತಿತ್ತು. ಈಗ ಅದನ್ನು ನಿಲ್ಲಿಸಿದ್ದಾರೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ತಕ್ಷಣವೇ ಸಾರಿಗೆ ವೆಚ್ಚ ಪ್ರತಿ ಕೆಜಿಗೆ 10 ರೂ. ನೀಡುವುದನ್ನು ಪುನಾರಂಭಿಸಬೇಕು. ರೇಷ್ಮೆ ಇಲಾಖೆ ಆಯುಕ್ತರು ಈ ಬಗ್ಗೆ ಕ್ರಮ ವಹಿಸಿ ಮಾಹಿತಿ ನೀಡಬೇಕು ಎಂದು ಸಚಿವರು ಸೂಚಿಸಿದರು.
ಕಲಬುರಗಿ: ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಚಿತ್ತಾಪುರ ತಾಲೂಕಿನ ಶಹಾಬಾದ್ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಗಳಿಗೆ ನೀರು ನುಗ್ಗಿ ವಿದ್ಯಾರ್ಥಿಗಳು ರಾತ್ರಿಯಿಡೀ ಪರದಾಡಿದರು.
ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ, ನಾಗಾವಿ ಹಳ್ಳದ ಪ್ರವಾಹದಿಂದ ಈ ವಸತಿ ನಿಲಯ ಸಂಪೂರ್ಣ ಜಲಾವೃತವಾಗಿದೆ. ವಸತಿ ನಿಲಯದಲ್ಲಿ ಒಟ್ಟು 8 ವಿದ್ಯಾರ್ಥಿಗಳು, ಮಹಿಳಾ ಕಾವಲುಗಾರರು ಸೇರಿ ಎಲ್ಲರೂ ವಸತಿ ನಿಲಯದ ಕಟ್ಟಡದ ಛಾವಣಿ ಹತ್ತಿ ಕುಳಿತುಕೊಂಡಿದ್ದರು. ಇದನ್ನೂ ಓದಿ: ಭಾರತ್ ಬಂದ್ ಮಾಡಿದ್ದು ರೈತರಲ್ಲ, ಮಧ್ಯವರ್ತಿಗಳು: ನಾರಾಯಣಗೌಡ
ವಸತಿ ನಿಲಯದಲ್ಲಿ 3 ರಿಂದ 4 ಅಡಿವರೆಗೆ ನೀರು ಸಂಗ್ರಹವಾದ ಹಿನ್ನೆಲೆ, ಪಠ್ಯಪುಸ್ತಕ ಹಾಗೂ ಪೀಠೋಪಕರಣಗಳು ಕೊಚ್ಚಿ ಹೋಗಿವೆ. ಇನ್ನು ಕೆಲ ಪೀಠೋಪಕರಣಗಳು ನೀರಿನಲ್ಲಿ ಜಲಾವೃತಗೊಂಡಿವೆ. ಮಕ್ಕಳ ಪಠ್ಯ ಪುಸ್ತಕವೆಲ್ಲ ನೀರಿನಲ್ಲಿ ಮುಳುಗಿದ್ದರಿಂದ ಮುಂದಿನ ವಿದ್ಯಾಭ್ಯಾಸಕ್ಕೆ ಪಠ್ಯ ಪುಸ್ತಕಗಳು ಇಲ್ಲದೆ ಮಕ್ಕಳು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಭಾರತ್ ಬಂದ್ ನಡುವೆ ಕಾರ್ಖಾನೆಗೆ ಬೀಗ ಹಾಕಲು ರೈತರ ಯತ್ನ
ಇಂದು ಬೆಳಗ್ಗೆ ಮಳೆ ಕಡಿಮೆಯಾಗುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದಾರೆ. ಕಳೆದ ಬಾರಿ ಕೂಡ ಮಳೆಗಾಲದಲ್ಲಿ ಇದೇ ರೀತಿ ವಸತಿ ನಿಲಯಗಳು ಜಲಾವೃತವಾಗಿದ್ದವು. ಪ್ರತಿ ಬಾರಿ ಧಾರಾಕಾರ ಮಳೆ ಸುರಿದರೆ ಸಾಕು ಈ ವಸತಿ ನಿಲಯಕ್ಕೆ ನೀರು ಹರಿದು ಬರುತ್ತದೆ. ಹೀಗಾಗಿ ಇದಕ್ಕೆ ಮುಕ್ತಿ ಕೊಡಿಸಬೇಕಾದ ಕೆಲಸವನ್ನು ಸರ್ಕಾರ ಇನ್ನಾದರೂ ಮಾಡಬೇಕಾಗಿದೆ.
ಚಿಕ್ಕಮಗಳೂರು: ದೇಶದಲ್ಲಿ ಲಸಿಕೆ ವಿತರಣಾ ಕಾರ್ಯಕ್ರಮವೇ ದೊಡ್ಡ ತಪ್ಪು ನಿರ್ಧಾರ. ಆ ತಪ್ಪು ನಿರ್ಧಾರಗಳನ್ನ ಮೋದಿ ಸರ್ಕಾರ ಮಾಡುತ್ತಿದೆ. ಆ ನಿರ್ಧಾರಗಳನ್ನ ರಾಜ್ಯ ಸರ್ಕಾವೂ ಮಾಡುತ್ತಿದೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ವಿರುದ್ಧ ಸದನದ ಹೊರಗೆ, ಒಳಗೆ ಹೋರಾಟಕ್ಕೆ ಕಾಂಗ್ರೆಸ್ ಸಿದ್ದತೆ: ಡಿಕೆಶಿ
ಚಿಕ್ಕಮಗಳೂರಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ದೇಶ ಜನಸಂಖ್ಯೆ ಎಷ್ಟು. ನಮ್ಮ ಬಳಿ ಎಷ್ಟು ವ್ಯಾಕ್ಸಿನ್ ಇದೆ. ಅದನ್ನ ನೋಡಿಕೊಂಡು ಹೇಳಿಕೆಗಳನ್ನ ಕೊಡಬೇಕು. ನಾಳೆ ಬೆಳಗ್ಗೆ ಲಸಿಕೆ ನೀಡುತ್ತೇವೆ ಅಂತಾರೆ. ಬೆಳಗ್ಗೆ ಲಸಿಕೆ ಬಂದಿಲ್ಲ ಅಂತಾರೆ. ನಮ್ಮ ಬಳಿ ಇರೋದು ಇಷ್ಟೆ ಎಂದು ಹೇಳಬೇಕು. ನಾಳೆಯಿಂದ 18 ವರ್ಷದವರಿಗೆ ಕೊಡುತ್ತೇವೆ ಅಂತಾರೆ ಆಮೇಲೆ ಒಂದು ವಾರ ಲೇಟ್ ಅಂತಾರೆ ಇದು ಏಕೆ. ಇದನ್ನ ಸರ್ಕಾರವೇ ಹೇಳುವುದು. ನೂರು ತಪ್ಪುಗಳನ್ನ ಕೇಂದ್ರ ಸರ್ಕಾರವೂ ಮಾಡಿದೆ. ರಾಜ್ಯ ಸರ್ಕಾರವೂ ಮಾಡಿದೆ ಎಂದು ಸರ್ಕಾರ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ, ಸರ್ಕಾರ ಶಾಲಾ-ಕಾಲೇಜುಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ತಜ್ಞರು ಕೊಡುವ ವರದಿಯನ್ನ ಫಾಲೋ ಮಾಡಬೇಕು. ತಜ್ಞರೇ ತಪ್ಪು ವರದಿ ನೀಡಿದರೆ ಯಾರೇನು ಮಾಡಲು ಸಾಧ್ಯವಿಲ್ಲ. ಆದರೆ ತಜ್ಞರು ಕೊಡುವ ವರದಿಯನ್ನ ಸರ್ಕಾರ ಫಾಲೋ ಮಾಡಬೇಕೆಂದು ಸೂಚಿಸಿದ್ದಾರೆ. ಸರ್ಕಾರ ತಜ್ಞರ ವರದಿಯ ವಿರುದ್ಧ ಕಾರ್ಯಕ್ರಮಗಳನ್ನ ಮಾಡಬಾರದು ಎಂದಿದ್ದಾರೆ.
ತಜ್ಞರು ಸಾಮಾನ್ಯ ಅಭಿಪ್ರಾಯ ನೀಡುವುದಿಲ್ಲ, ಫ್ಯಾಕ್ಟ್ ಹೇಳುತ್ತಾರೆ. ಹಿಂದಿನ ಫಲಿತಾಂಶ ಆಧರಿಸಿ ಮುಂದಾಗೋ ಅನಾಹುತಗಳ ಬಗ್ಗೆ ಅಭಿಪ್ರಾಯ ನೀಡಿರುತ್ತಾರೆ. ತಜ್ಞರ ವರದಿಯನ್ನ ಆಧರಿಸಿ ಸರ್ಕಾರ ಮುಂದುವರೆಯಬೇಕೆಂದು ಸೂಚಿಸಿದ್ದಾರೆ. ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ. ಸರ್ಕಾರ ತಜ್ಞರ ವರದಿ ವಿರುದ್ಧ ನಡೆದದ್ದೇ, ಈಗಾಗಿರೋ ಅನಾಹುತಗಳಿಗೆ ಕಾರಣ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.
ಮೈಸೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವುದನ್ನು ರಾಜ್ಯ ಸರ್ಕಾರ ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮೈಸೂರಿನಲ್ಲಿ ಹೇಳಿದ್ದಾರೆ.
ಕಳೆದ ಬಾರಿಯೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದೇವೆ. ಅದೇ ಮಾದರಿಯಲ್ಲಿ ಈ ಬಾರಿಯೂ ಪರೀಕ್ಷೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಎಸ್‍ಎಸ್‍ಎಲ್‍ಸಿ ನಂತರ ಪಿಯುಸಿಯಲ್ಲಿ ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆ ನಡೆಸುವ ಸಂಬಂಧ ಈ ವಾರವೇ ಎಲ್ಲಾ ಜಿಲ್ಲೆಗಳ ಡಿಡಿಪಿಐ ಮತ್ತು ಬಿಇಒಗಳ ಸಭೆ ನಡೆಸಲಾಗುವುದು ಎಂದಿದ್ದಾರೆ
ಈ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ವಿದ್ಯಾರ್ಥಿಗಳಲ್ಲಿ ಇರುವ ಗೊಂದಲ ಅನುಮಾನಗಳನ್ನು ಹೋಗಲಾಡಿಸಲಾಗುವುದು. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಈಗಾಗಲೇ ಎರಡು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ರವಾನಿಸಲಾಗಿದೆ. ಈ ಮೂಲಕ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಗೊಂದಲವಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ 8 ಲಕ್ಷ 76 ಸಾವಿರದ 581 ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲಿದ್ದಾರೆ. ಇಷ್ಟೊಂದು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು ಸವಾಲಿನ ಕೆಲಸವಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕಳೆದ ಬಾರಿಯಂತೆ ಸುಸೂತ್ರವಾಗಿ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ:ಕೆ.ಆರ್.ಎಸ್ ಡ್ಯಾಮ್‍ನಲ್ಲಿ ಲೀಕೇಜ್ ಇಲ್ಲ: ಮುರುಗೇಶ್ ನಿರಾಣಿ
ಬೆಂಗಳೂರು: ಕೈಗಾರಿಕೆಗಳ ಅನುಕೂಲ ಹಾಗೂ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿವೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದ ನೂತನ ಕೈಗಾರಿಕಾ ನೀತಿ 2020-2025 ರಲ್ಲಿ ಎಂಎಸ್‍ಎಂಇಗಳಿಗೆ ಹೆಚ್ಚಿನ ಸೌಲಭ್ಯ ಹಾಗೂ ಆದ್ಯತೆ ನೀಡಲಾಗಿದೆ. ಅಲ್ಲದೆ, ಸಾರ್ಥಕ್ ಯೋಜನೆಯ ಮೂಲಕ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಈ ಬಗ್ಗೆ ಉದ್ಯಮಿಗಳಲ್ಲಿ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಎಂದು ಲೆಕ್ಕಪರಿಶೋಧಕರ ಸಂಘದ ಪದಾಧಿಕಾರಿಗಳಿಗೆ ಕರೆ ಸಚಿವರು ನೀಡಿದ್ದಾರೆ.
ಇಂದು ವಿಶ್ವ ಎಂಎಸ್‍ಎಂಇ ದಿನದ ಅಂಗವಾಗಿ ಬೆಂಗಳೂರು ಬ್ರಾಂಚ್ ಆಫ್ ಎಸ್‍ಐಆರ್‍ಸಿ ‘ದಿ ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ’ ಎಂಎಸ್‍ಎಂಇ ಮತ್ತು ಸ್ಟಾರ್ಟ್ ಅಪ್ ಆಫ್ ಐಸಿಎಐ ಸಮಿತಿ, ಪೀಣ್ಯ ಕೈಗಾರಿಕಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ವೆಬಿನಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಲೆಕ್ಕಪರಿಶೋಧಕರು ಕೈಗಾರಿಕೆಗಳು ಸಫಲತೆಯಾಗುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಈ ಕೈಗಾರಿಕೆಗಳ ಅನುಕೂಲ ಹಾಗೂ ಅಭಿವೃದ್ದಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿವೆ. ಜೊತೆಗೆ ರಾಜ್ಯದಲ್ಲೂ ಎಂಎಸ್‍ಎಂಇಗಳ ಅಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.
ಈ ಬಾರಿಯ ನೂತನ ಕೈಗಾರಿಕಾ ನೀತಿಯಲ್ಲಿ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಆದ್ಯತೆಯನ್ನು ನೀಡಲಾಗಿದೆ. ಅಲ್ಲದೆ, ಕ್ರಾಂತಿಕಾರಿ ನೀತಿ ಹಾಗೂ ಕಾಯ್ದೆಗಳಾದ ಕೈಗಾರಿಕಾ ಸೌಲಭ್ಯ ಕಾಯ್ದೆ ಹಾಗೂ ಅಫಿಡವಿಟ್ ಬೇಸ್ಡ್ ಕ್ಲಿಯರೆನ್ಸ್ ನಂತಹ ಕ್ರಮಗಳ ದೇಶದಲ್ಲೇ ಮೊದಲಾಗಿದ್ದು ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಇದ್ದಂತಹ ಹಲವಾರು ಅಡೆತಡೆಗಳನ್ನು ನಿವಾರಿಸುವಲ್ಲಿ ಯಶಸ್ವಿಯಾಗಿದ್ದೇವೆ.
ಅಲ್ಲದೆ, ಸಾರ್ಥಕ್ ಆನ್‍ಲೈನ್ ಪ್ಲಾಟ್‍ಫಾರಂ ಮುಖಾಂತರ ಸಣ್ಣ ಕೈಗಾರಿಕೆಗಳು ಮತ್ತು ಹಲವಾರು ಪಾಲುದಾರರ ಮಧ್ಯೆ ಸಂಪರ್ಕ ಕೊಂಡಿಯನ್ನು ನಿರ್ಮಿಸಿದ್ದೇವೆ. ಇದರ ಮೂಲಕ ಸಣ್ಣ ಕೈಗಾರಿಕೆಗಳು ಕಚ್ಚಾವಸ್ತುಗಳ ಖರೀದಿ, ಹಂಚಿಕೆದಾರರೊಂದಿಗೆ ಸಂಪರ್ಕ, ಕೌಶಲ್ಯ ಹೊಂದಿದ ಕಾರ್ಮಿಕರೊಂದಿಗೆ ಹೀಗೆ ಹತ್ತು ಹಲವಾರು ಸೌಲಭ್ಯಗಳನ್ನುಪಡೆದುಕೊಳ್ಳಬಹುದಾಗಿದೆ. ಕೈಗಾರಿಕೆಗಳು ಹಾಗೂ ಉದ್ಯಮಿಗಳ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಲೆಕ್ಕಪರಿಶೋಧಕರು ಈ ಎಲ್ಲಾ ಯೋಜನೆಗಳ ಬಗ್ಗೆ ತಮ್ಮ ಸಂಘದ ಅಡಿಯಲ್ಲಿ ಜನರಲ್ಲಿ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆಂಪೇಗೌಡ ಜಯಂತಿ – 60 ಟನ್ ತರಕಾರಿ ವಿತರಿಸಿದ ಸೋಮಶೇಖರ್
ಬೆಂಗಳೂರು: ಲಸಿಕೆಯೊಂದರಿಂದಲೇ ಕೊರೊನಾ ಸೋಂಕಿನಿಂದ ದೂರವಿರಲು ಸಾಧ್ಯ. ಡಿಸೆಂಬರ್ ಅಂತ್ಯಕ್ಕೆ ಎಲ್ಲರಿಗೂ ಎರಡೂ ಡೋಸ್ ಲಸಿಕೆಯನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ರಾಜ್ಯ ವಕೀಲರ ಪರಿಷತ್ತಿನಲ್ಲಿ ಕೋವಿಡ್-19 ಉಚಿತ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಡಿಸೆಂಬರ್ ಅಂತ್ಯದಲ್ಲಿ ಕರ್ನಾಟಕದ ಸಮಸ್ತ ಜನರಿಗೆ ಎರಡೂ ಡೋಸ್ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿದೆ. ಲಸಿಕೆಯೊಂದರಿಂದಲೇ ನಾವು ಕೊರೊನಾದಿಂದ ದೂರವಿರಲು ಸಾಧ್ಯ. ಇಲ್ಲದಿದ್ದರೆ ಯಾವಾಗಲೂ ಮಾಸ್ಕ್ ಧರಿಸಿಕೊಂಡೇ ಇರಬೇಕಾಗುತ್ತದೆ. ಮಾಸ್ಕ್ ಬಿಟ್ಟು ಮುಕ್ತವಾಗಿ ಮೊದಲಿನಂತೆ ಇರುವ ಸ್ಥಿತಿ ಬರಲು ಎಲ್ಲರೂ ಲಸಿಕೆ ಪಡೆಯಬೇಕು ಎಂದರು.
ಕೋವಿಡ್ ಎರಡನೇ ಅಲೆಯಲ್ಲಿ ನಿರೀಕ್ಷೆಗೆ ಮೀರಿ ಸೋಂಕು ಹೆಚ್ಚಿದ್ದರೂ, ಸರ್ಕಾರದ ಕ್ರಮಗಳಿಂದ ಸಾವಿನ ಪ್ರಮಾಣ ಬಹಳ ಕಡಿಮೆಯಾಗಿದೆ. ಸೋಂಕು ನಿಯಂತ್ರಣಕ್ಕೆ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಹೆಚ್ಚಿಸಲಾಗಿದೆ. ಕಳೆದ ಇಪ್ಪತ್ತೈದು ವರ್ಷಗಳಲ್ಲೇ ವೈದ್ಯರ ನೇರ ನೇಮಕ ಆಗಿರಲಿಲ್ಲ. ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಿಂದ, ಜಿಲ್ಲಾಸ್ಪತ್ರೆಗಳವರೆಗೂ ಖಾಲಿ ಇರುವ 1,760 ವೈದ್ಯ, ವೈದ್ಯಾಧಿಕಾರಿ ಹುದ್ದೆಗಳನ್ನು ತುಂಬಲಾಗಿದೆ. ಮೂರನೇ ಅಲೆಗೆ ಸಂಬಂಧಿಸಿದಂತೆ ಡಾ.ದೇವಿಶೆಟ್ಟಿ ಸಮಿತಿ ನೀಡಿದ ವರದಿಯ ಶಿಫಾರಸು ಆಧರಿಸಿ ಜಿಲ್ಲಾಮಟ್ಟದಲ್ಲಿ ಆರೋಗ್ಯ ಸೌಕರ್ಯ ಬಲಪಡಿಸಲಾಗುತ್ತಿದೆ ಎಂದು ಹೇಳಿದರು.
ಲಸಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡಲಾಗುತ್ತಿದೆ. ಅದನ್ನೇ ಜನರು ಬೇಗ ನಂಬುತ್ತಿದ್ದಾರೆ. ಆದರೆ ಸರ್ಕಾರ ನೀಡುವ ಅಂಕಿ ಅಂಶಗಳನ್ನು ನಂಬಬೇಕು. ಸಿಡುಬು ರೋಗಕ್ಕೆ ಲಸಿಕೆ ಕಂಡುಹಿಡಿದಾಗ ಅದನ್ನು ನಂಬಲು ಹಲವು ವರ್ಷಗಳೇ ಬೇಕಾಯಿತು. ಹೆಪಟೈಟಿಸ್ ಬಿ ಲಸಿಕೆ ಆವಿಷ್ಕಾರವಾದರೂ ಭಾರತಕ್ಕೆ ಬರಲು 20 ವರ್ಷ ಬೇಕಾಯಿತು. ಆದರೆ ಕೋವಿಡ್ ಆರಂಭವಾದ ಬಳಿಕ ಬೇಗ ಲಸಿಕೆ ದೊರೆತಿದೆ. ಇದು ವಿದೇಶದ್ದಾಗಿರದೆ, ದೇಶೀಯವಾಗಿಯೇ ತಯಾರಾಗಿರುವುದು ಹೆಮ್ಮೆಯ ವಿಚಾರ. ಅತ್ಯಂತ ಪರಿಣಾಮಕಾರಿಯಾದ ಈ ಲಸಿಕೆಗಳನ್ನು ಎಲ್ಲರೂ ಪಡೆಯಬೇಕು ಎಂದರು. ಇದನ್ನೂ ಓದಿ: ಹಾಸನ ಪೊಲೀಸರ ಕಾರ್ಯಾಚರಣೆಯಿಂದ ಸುರಕ್ಷಿತವಾಗಿ ಪೋಷಕರನ್ನು ಸೇರಿದ ಹೆಣ್ಣುಮಕ್ಕಳು
ವಿದೇಶದ ಲಸಿಕೆಗಳು ಹೆಚ್ಚು ದರ ಹೊಂದಿವೆ. ಆದರೆ ನಮ್ಮ ದೇಶದ ಲಸಿಕೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಸಂಪೂರ್ಣ ಉಚಿತವಾಗಿ ನೀಡಿದ್ದಾರೆ. ಲಸಿಕೆಯ ಬಗ್ಗೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಅರ್ಥ ಮಾಡಿಕೊಂಡು ಜನರಿಗೆ ಉತ್ತಮ ಸಂದೇಶ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿರುವ ಸುಮಾರು 1 ಲಕ್ಷ ವಕೀಲರು ಹಾಗೂ ಅವರ ಕುಟುಂಬ ಸದಸ್ಯರಿಗೆ ಪ್ರಾಶಸ್ತ್ಯದಲ್ಲಿ ಲಸಿಕೆ ನೀಡಲು ರಾಜ್ಯ ಸರ್ಕಾರ ಕ್ರಮ ವಹಿಸಿದೆ. ಹೆಚ್ಚು ಜನರ ಸಂಪರ್ಕ ಇರುವ ವೃತ್ತಿಪರರಿಗೆ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಎರಡು ಡೆಲ್ಟಾ ಪ್ಲಸ್ ಕೇಸ್ ದಾಖಲು – ಸುಧಾಕರ್
ಬೆಂಗಳೂರು: ರಾಜ್ಯ ಹೈಕೋರ್ಟ್ ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ತಾತ್ಕಾಲಿಕವಾಗಿ ತಡೆ ನೀಡಿದೆ
ಕೊರೊನಾ ರಣಾರ್ಭಟ ಹಿನ್ನೆಲೆಯಲ್ಲಿ ಪರೀಕ್ಷೆ ಇಲ್ಲದೆ ದ್ವಿತೀಯ ಪಿಯು ವಿದ್ಯಾರ್ಥಿಗಳು ಪಾಸ್ ಅಂತ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಆದರೆ ರಿಪೀಟರ್ಸ್ ಅಂದ್ರೆ ಈಗಾಗಲೇ ಫೇಲ್ ಆಗಿರೋ ವಿದ್ಯಾರ್ಥಿಗಳನ್ನು ಪರೀಕ್ಷೆ ಮಾಡಿಯೇ ಪಾಸ್ ಮಾಡಲು ನಿರ್ಧರಿಸಿದೆ. ಸರ್ಕಾರದ ಈ ದ್ವಂದ್ವ ನಿರ್ಧಾರಕ್ಕೆ ರಾಜ್ಯ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ರಿಪೀಟರ್ಸ್ ಪರವಾಗಿ ದಾಖಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪರೀಕ್ಷೆ ಇಲ್ಲದೇ ಪಾಸ್ ಮಾಡೋದಾದರೆ ಎಲ್ಲರನ್ನು ಪಾಸ್ ಮಾಡಿ. ಕೇವಲ ರೆಗ್ಯೂಲರ್ ವಿದ್ಯಾರ್ಥಿಗಳನ್ನು ಪಾಸ್ ಮಾಡಿ, ರಿಪೀಟರ್ಸ್ ಗೆ ಪರೀಕ್ಷೆ ಮಾಡುವ ನಿರ್ಧಾರ ಸರಿಯಲ್ಲ. ಗುರುವಾರದವರೆಗೆ ಪಿಯು ಫಲಿತಾಂಶ ಪ್ರಕಟಿಸುವಂತಿಲ್ಲ. ಈ ಬಗ್ಗೆ ಗುರುವಾರದೊಳಗೆ ಸ್ಪಷ್ಟನೆ ನೀಡಿ ಎಂದು ಅಡ್ವೋಕೇಟ್ ಜನೆರಲ್‍ಗೆ ಹೈಕೋರ್ಟ್ ಸೂಚನೆ ನೀಡಿದೆ. ಅಲ್ಲಿಯವರೆಗೂ ಫಲಿತಾಂಶ ಪ್ರಕಟಿಸಬಾರದು ಎಂದು ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.
ಇದೇ ಗುರುವಾರ ಮತ್ತೆ ಅರ್ಜಿ ವಿಚಾರಣೆ ನಡೆಯಲಿದೆ. ಸರ್ಕಾರ ಎಲ್ಲರನ್ನೂ ಒಂದೇ ತಕ್ಕಡಿಗೆ ಹಾಕಿ ಪಾಸ್ ಮಾಡುವ ನಿರ್ಧಾರ ಕೈಗೊಳ್ಳುತ್ತಾ..? ಇಲ್ಲ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಾ ಎಂಬ ಕುತೂಹಲ ಮನೆ ಮಾಡಿದೆ.
ಹಾವೇರಿ: ಕೊರೊನಾ ಸಂಕಷ್ಟದ ಸಮಯದಲ್ಲಿ ಕೊರೊನಾ ನಿರ್ವಹಣೆ ಬಿಟ್ಟು ಅಧಿಕಾರ ದಾಹ ಪ್ರದರ್ಶನ ಮಾಡುತ್ತಿದ್ದಾರೆ. ಕುರ್ಚಿ ದಾಹ ಬಿಡ್ರಿ, ಸರಿಯಾಗಿ ಕೆಲಸ ಮಾಡಿ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಒಬ್ಬರಿಗೊಬ್ಬರು ತಾಳ ಮೇಳ ಇಲ್ಲ. ಸಿಎಂ ಬದಲಾವಣೆ ಮಾಡಬೇಕು ಅಂತಾರೆ. ಪರಸ್ಪರ ಸಹಕಾರವಿಲ್ಲ. ಕೊರೊನಾ ಸಂದರ್ಭದಲ್ಲಿ ಜನರ ಜೀವ ಉಳಿಸೋ ಕೆಲಸ ಮಾಡಬೇಕು ಎಂದು ಎಂ.ಬಿ.ಪಾಟೀಲ್ ಅವರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಕೋವಿಡ್‍ನಲ್ಲಿ ಸುರೇಶ್ ಅಂಗಡಿಯವರನ್ನ ಕಳೆದುಕೊಂಡಿದ್ದೇವೆ. ಡಿಸಿಎಂ ಲಕ್ಷ್ಮಣ ಸವದಿಯವರ ಮನೆಯಲ್ಲಿ ಅವರ ಸಹೋದರರನ್ನ ಕಳೆದುಕೊಂಡಿದ್ದೇವೆ. ಕುರ್ಚಿ ಬಿಡ್ರಿ, ನಿಮ್ಮ ಮನೆ, ನಮ್ಮ ಮನೆಯಲ್ಲೂ ನೋವಾಗಿವೆ. ಸರಿಯಾಗಿ ಕೆಲಸ ಮಾಡಿ ಎಂದರು.
ನರ್ಸ್, ವೈದ್ಯರು ಗಂಟೆಗಟ್ಟಲೆ ಪಿಪಿಇ ಕಿಟ್ ಹಾಕೊಕೊಂಡು ನಮಗಾಗಿ ಕೆಲಸ ಮಾಡಿದ್ದಾರೆ. ಕೊರೊನಾದಲ್ಲಿ ವೈಫಲ್ಯ, ಬೆಲೆ ಏರಿಕೆ ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಅಧಿಕಾರದ ಮದದಲ್ಲಿವೆ. ಇವರು ಜನರ ಒಳಿತು ಬಯಸಿಲ್ಲ. ಈ ಸರ್ಕಾರಗಳು ತೊಲಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯೋ ನೈತಿಕ ಹಕ್ಕಿಲ್ಲ. ಲಕ್ಷಾಂತರ ಜನರ ಜೀವ ಕಳೆದಿದ್ದೀರಿ, ಲಕ್ಷಾಂತರ ಮಕ್ಕಳನ್ನ ಅನಾಥರನ್ನಾಗಿ ಮಾಡಿದ್ದೀರಿ, ಲಕ್ಷಾಂತರ ಕುಟುಂಬಗಳನ್ನ ಮುರಿದಿದ್ದೀರಿ. ಇದೆಲ್ಲದರ ಜೊತೆಗೆ ಜನರ ಮೇಲೆ ಭಾರ ಹಾಕಿದ್ದೀರಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯರಿಗೆ ವರುಣಾ ಕ್ಷೇತ್ರ ಬಿಟ್ಟು ಹೋಗ್ಬೇಡಿ ಅಂದಿದ್ದೆ: ಸುಧಾಕರ್