Tag: State Government

  • ಸಂಪುಟ ರಚನೆ ಗೊಂದಲಕ್ಕೆ ಎರಡು ದಿನದಲ್ಲಿ ತೆರೆ: ಮಲ್ಲಿಕಾರ್ಜುನ ಖರ್ಗೆ

    ಸಂಪುಟ ರಚನೆ ಗೊಂದಲಕ್ಕೆ ಎರಡು ದಿನದಲ್ಲಿ ತೆರೆ: ಮಲ್ಲಿಕಾರ್ಜುನ ಖರ್ಗೆ

    ನವದೆಹಲಿ: ರಾಜ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಸಂಪುಟ ರಚನೆಯ ಕಗ್ಗಂಟು ಎರಡು ದಿನಗಳಲ್ಲಿ ಪೂರ್ಣಗೊಳ್ಳುತ್ತದೆ ಎಂದು ಲೋಕಸಭೆಯ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜನ ಖರ್ಗೆ ಹೇಳಿದ್ದಾರೆ.

    ನವದೆಹಲಿಯಲ್ಲಿ ಮಾತನಾಡಿದ ಅವರು, ಸಮಿಶ್ರ ಸರ್ಕಾರ ರಚನೆ ವೇಳೆ ಇಂತಹ ಗೊಂದಲ ಉಂಟಾಗುವುದು ಸಹಜ. ಆದರೆ ಈ ಎಲ್ಲಾ ಗೊಂದಲಗಳು ಎರಡು ದಿನದಲ್ಲಿ ಬಗೆ ಹರಿಯುತ್ತದೆ. ಖಾತೆ ಹಂಚಿಕೆ ಬಗ್ಗೆ ಎಲ್ಲರು ಒಟ್ಟಾಗಿ ಚರ್ಚೆ ಮಾಡುತ್ತಾರೆ. ಎಲ್ಲರ ಗುರಿ ಸರ್ಕಾರ ಉಳಿಸಿಕೊಳ್ಳುವುದು ಎಂದರು.

    ಖಾತೆ ಹಂಚಿಕೆ ಬಗ್ಗೆ ಯಾವುದೇ ಗೊಂದಲ ಇಲ್ಲ, ಖಾತೆಗಾಗಿ ನಾವು ಸರ್ಕಾರ ಮಾಡಿಲ್ಲ. ಸಂವಿಧಾನದ ಮೌಲ್ಯ ಸಂರಕ್ಷಿಸಲು ಸರ್ಕಾರ ಮಾಡಿದ್ದೇವೆ ಹೊರತು ಖಾತೆಗಾಗಿ ಅಲ್ಲ. ಹಂಚಿಕೆ ವೇಳೆ ಒಂದು ಖಾತೆ ಹೆಚ್ಚು ಕಡಿಮೆ ಹಂಚಿಕೆ ಆಗಬಹುದು. ಮಾಧ್ಯಮಗಳಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಶೀಘ್ರವಾಗಿ ಸಮಸ್ಯೆ ಬಗೆಹರಿಯಲಿದೆ ಎಂದು ಸ್ಪಷ್ಟನೆ ನೀಡಿದರು.

    ಸಮ್ಮಿಶ್ರ ಸರ್ಕಾರ ರಚನೆ ಬಿಜೆಪಿ ಹಾಗೂ ಆರ್ ಎಸ್‍ಎಸ್ ದೂರ ಇಡಲು ಒಟ್ಟಾಗಿ ಸರ್ಕಾರ ಮಾಡಿದ್ದೇವೆ. ಪ್ರಧಾನಿ ಮೋದಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಡೆಗಣಿಸಿದ್ದಾರೆ. ಸಂವಿಧಾನ ಬದಲಾಯಿಸುವ, ಸಮಾಜದ ಸಾಮರಸ್ಯ ಹಾಳು ಮಾಡುವ ಜನರಿಂದ ರಾಜ್ಯವನ್ನು ರಕ್ಷಿಸಬೇಕಿತ್ತು. ದಲಿತ ಅಲ್ಪಸಂಖ್ಯಾತರ ರೈತರ ಜನರಿಗೆ ಕೇಂದ್ರ ಸ್ಪಂದಿಸುತ್ತಿಲ್ಲ. ಬಿಜೆಪಿಯ ತತ್ವಗಳನ್ನು ವಿರೋಧಿಸಲು ನಾವು ಸರ್ಕಾರ ಮಾಡಿದ್ದೇವೆ. ಜಾತ್ಯತೀತ ಪಕ್ಷಗಳು ಎರಡು ಸೇರಿ ಸರ್ಕಾರ ರಚನೆ ಮಾಡಿದೆ ಎಂದರು.

    ಇದೇ ವೇಳೆ ಶಾಸಕ ಸಿದ್ದು ನ್ಯಾಮಗೌಡ ನಿಧನಕ್ಕೆ ಸಂತಾಪ ಸೂಚಿಸಿದ ಮಲ್ಲಿಕಾರ್ಜುನ ಖರ್ಗೆ, ನ್ಯಾಮಗೌಡ ಅವರು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದರು. ಅಲ್ಲದೇ ರೈತರಿಗಾಗಿ ಬ್ಯಾರೇಜ್ ನಿರ್ಮಾಣ, ಸಕ್ಕರೆ ಕಾರ್ಖಾನೆ ಪ್ರಾರಂಭಿಸಿದ್ದರು. ಕೆಲ ದಿನಗಳ ಹಿಂದೆಯಷ್ಟೇ ದೆಹಲಿಯಲ್ಲಿ ಎಲ್ಲ ನಾಯಕರನ್ನು ಭೇಟಿಯಾಗಿದ್ದರು. ಸದ್ಯ ಅವರ ಸಾವು ಅಘಾತ ತಂದಿದೆ. ಅವರ ಆತ್ಮಕ್ಕೆ ಶಾತಿ ಸಿಗಲಿ, ಕುಟುಂಬಕ್ಕೆ ದು:ಖ ಸಹಿಸಿಕೊಳ್ಳುವ ಶಕ್ತಿ ಕೊಡಲಿ ಎಂದು ಹೇಳಿದರು.

  • ಹಣಕಾಸು `ಕ್ಯಾತೆ’ ಆಯ್ತು ಈಗ ಕಾಂಗ್ರೆಸ್ ಪ್ರಭಾವಿ ಮಕ್ಕಳ ನಡುವೆ ಕುಸ್ತಿ!

    ಹಣಕಾಸು `ಕ್ಯಾತೆ’ ಆಯ್ತು ಈಗ ಕಾಂಗ್ರೆಸ್ ಪ್ರಭಾವಿ ಮಕ್ಕಳ ನಡುವೆ ಕುಸ್ತಿ!

    ಬೆಂಗಳೂರು: ರಾಜ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ರಚನೆ ಕಸರತ್ತು ಮುಂದುವರಿದಿದ್ದು, ಕಾಂಗ್ರೆಸ್ ನಾಯಕರ ಪುತ್ರರ ನಡುವೆ ಸಚಿವ ಸ್ಥಾನದ ಕುರಿತು ಪೈಪೋಟಿ ಆರಂಭವಾಗಿದೆ.

    ಇದರ ನಡುವೆ ರಾಜ್ಯದ ಪ್ರಭಾವಿ ಕಾಂಗ್ರೆಸ್ ಮುಖಂಡರು ಸಹ ತಮ್ಮ ಮಕ್ಕಳಿಗೆ ಸಚಿವ ಸ್ಥಾನ ಕೊಡಿಸಲು ಮುಂದಾಗಿದ್ದು, ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯಲು ನಾಲ್ವರು ಕಾಂಗ್ರೆಸ್ ನಾಯಕರ ಮಕ್ಕಳ ಮಧ್ಯೆ ತೀವ್ರ ಪೈಪೋಟಿ ಆರಂಭವಾಗಿದೆ.

    ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಪುತ್ರ ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಅವರು ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದು, ಮೈಸೂರು ಭಾಗದ ಕೋಟಾದಲ್ಲಿ ಸಚಿವ ಸ್ಥಾನ ನೀಡಲು ಒತ್ತಡ ಹೆಚ್ಚಾಗಿದೆ. ಆದರೆ ಇಲ್ಲಿ ಮಾಜಿ ಸಚಿವ ತನ್ವೀರ್ ಸೇಠ್ ಅವರು ಸಹ ಸಚಿವ ಸ್ಥಾನಕ್ಕೆ ಒತ್ತಡ ಹಾಕುತ್ತಿರುವ ಪರಿಣಾಮ ಪೈಪೋಟಿಗೆ ಕಾರಣವಾಗಿದೆ.

    ಕಲಬುರಗಿ ಜಿಲ್ಲಾ ಕೋಟಾದಡಿ ಸಂಸದ ಮಲ್ಲಿಕಾರ್ಜುನ ಖರ್ಗೆ ಪುತ್ರ ಚಿತ್ತಾಪುರ ಶಾಸಕ ಪ್ರಿಯಾಂಕ ಖರ್ಗೆ ಸಹ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಇಲ್ಲಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಪುತ್ರ ಜೇವರ್ಗಿ ಶಾಸಕ ಅಜಯ್ ಸಿಂಗ್ ಇರುವ ಕಾರಣ ಯಾರಿಗೆ ಮಂತ್ರಿಸ್ಥಾನ ನೀಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.

    ಈ ಬಾರಿಯ ಸಂಪುಟದಲ್ಲಿ ಸ್ಥಾನ ಪಡೆಯಲು ಮಹಿಳಾ ಶಾಸಕಿಯರ ನಡುವೆಯೂ ಸ್ಪರ್ಧೆ ಆರಂಭವಾಗಿದ್ದು, ಮಹಿಳಾ ಕೋಟಾದಡಿ ಕೇಂದ್ರದ ಮಾಜಿ ಸಚಿವ, ಸಂಸದ ಮುನಿಯಪ್ಪ ಪುತ್ರಿ ಕೆಜಿಎಫ್ ಕ್ಷೇತ್ರದ ಶಾಸಕಿ ರೂಪಾ ಶಶಿಧರ್ ಹೆಸರು ಚರ್ಚೆಯಾಗುತ್ತಿದೆ. ಆದರೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಸಹ ಈ ರೇಸ್ ನಲ್ಲಿದ್ದಾರೆ.

    ಕಾಂಗ್ರೆಸ್ ನಾಯಕರ ಮಕ್ಕಳ ಈ ಪೈಪೋಟಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಡಿವಾಣ ಹಾಕುವ ಸಾಧ್ಯತೆ ಇದ್ದು, ಯುವ ನಾಯಕರಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎನ್ನುವುದು ಕಾದುನೋಡಬೇಕಿದೆ.

  • ಭೂಮಿ ಖರೀದಿ ಮಾಡೋ ಮಂದಿಗೆ ಗುಡ್ ನ್ಯೂಸ್- ನಿಮ್ಮ ನೆರವಿಗೆ ಬರಲಿದೆ `ದಿಶಾಂಕ್’ ಆ್ಯಪ್

    ಭೂಮಿ ಖರೀದಿ ಮಾಡೋ ಮಂದಿಗೆ ಗುಡ್ ನ್ಯೂಸ್- ನಿಮ್ಮ ನೆರವಿಗೆ ಬರಲಿದೆ `ದಿಶಾಂಕ್’ ಆ್ಯಪ್

    ಬೆಂಗಳೂರು: ಹೊಸ ಜಾಗ ಖರೀದಿ ಮಾಡಲು ನೀವು ಪ್ರಯತ್ನ ಮಾಡುತ್ತಿದ್ದೀರಾ? ನೀವು ಖರೀದಿ ಮಾಡಿದ ಜಾಗದಲ್ಲಿ ರಾಜಕಾಲುವೆ ಎಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳಬೇಕೇ? ಹಾಗಾದ್ರೆ ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ನಿಮ್ಮ ಎಲ್ಲ ಸಂಶಯ, ಗೊಂದಲಗಳನ್ನು ಪರಿಹಾರ ಮಾಡುತ್ತೆ `ದಿಶಾಂಕ್’ ಆ್ಯಪ್. ಹೇಗೆ ಈ ಅಪ್ಲಿಕೇಶನ್ ಪರಿಹಾರ ಮಾಡುತ್ತೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ.

    ಏನಿದು ಆ್ಯಪ್, ಯಾವ ಮಾಹಿತಿ ಸಿಗುತ್ತೆ?
    ಕಂದಾಯ ಇಲಾಖೆಯಲ್ಲಿ ಲಭ್ಯವಿರುವ 1960ರ ಸರ್ವೆ ನಕಾಶೆಗಳ ಆಧಾರದಲ್ಲಿ ದಿಶಾಂಕ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್‍ನಲ್ಲಿರುವ ನಕಾಶೆಯನ್ನು ನೋಡಿ ಆಸ್ತಿಯ ಕುರಿತ ಮೂಲ ವಿವರಗಳನ್ನು ತಿಳಿದುಕೊಳ್ಳಬಹುದಾಗಿದೆ. ದಿಶಾಂಕ್ ಆ್ಯಪ್ ಬೆಂಗಳೂರು ಮಾತ್ರವಲ್ಲದೇ ರಾಜ್ಯದ 30 ಜಿಲ್ಲೆಯಗಳ ಪ್ರತಿ ಭೂ ಭಾಗದ ಮಾಹಿತಿಯನ್ನು ಹೊಂದಿದೆ.

    ಯಾವುದಾದರೂ ಆಸ್ತಿಯ ನಿಖರವಾದ ಸರ್ವೆ ನಂಬರ್ ಹುಡುಕಲು ಹಾಗೂ ಆ ಭೂಮಿಯ ಬಗ್ಗೆ ವಿವರಗಳನ್ನು ಪಡೆಯಲು ದಿಶಾಂಕ್ ಆ್ಯಪ್ ಸಹಕಾರಿಯಾಗಲಿದೆ. ಭೂ ಭಾಗದ ವಿವರ, ರಾಜಕಾಲುವೆ, ಕೆರೆ ಕುಂಟೆ ಸುತ್ತಲಿನ ಪ್ರದೇಶ ಹಾಗೂ ಆಸ್ತಿಯ ಆಸುಪಾಸಿನಲ್ಲಿರುವ ಇತರೇ ಭೂ ಭಾಗದ ಮಾಹಿತಿಯನ್ನು ನೀಡಲಿದೆ. ಇದರಿಂದ ಭೂ ಒತ್ತುವರಿಯನ್ನೂ ಸುಲಭವಾಗಿ ಪತ್ತೆಹಚ್ಚಬಹುದುದಾಗಿದೆ.

    ಬಳಕೆ ಹೇಗೆ?
    ಮೊಬೈಲ್ ಫೋನ್‍ಗಳಲ್ಲಿ ಈ ಆ್ಯಪ್ ಡೌನ್‍ಲೋಡ್ ಮಾಡಿ, ಲೊಕೇಷನ್ ವಿವರವನ್ನು ಅಪ್‍ಡೇಟ್ ಮಾಡಿಕೊಳ್ಳಬೇಕು. ಈ ವೇಳೆ ವ್ಯಕ್ತಿ ಯಾವ ಪ್ರದೇಶದಲ್ಲಿ ಇರುತ್ತಾರೆ ಆ ಸ್ಥಳದ ಯಾವ ಸರ್ವೆ ನಂಬರ್ ನಲ್ಲಿದೆ ಎಂಬುದನ್ನು ತಿಳಿಸುತ್ತದೆ. ಇದರೊಂದಿಗ ಯಾವುದೇ ಆಸ್ತಿಯ ಸರ್ವೆ ನಂಬರ್ ನಮೂದಿದರೆ ಆ ನಿರ್ದಿಷ್ಟ ಜಾಗಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಬಹುದು. ಆ ಜಾಗದಕ್ಕೆ ರಸ್ತೆ ಮಾರ್ಗ ಇದೆಯೇ ಎಂಬುದನ್ನೂ ತಿಳಿದುಕೊಳ್ಳಬಹುದಾಗಿದೆ.

    ಕಾನೂನು ಬದ್ಧ ದಾಖಲೆ ಅಲ್ಲ:
    ದಿಶಾಂಕ್ ಆ್ಯಪ್ ನೀಡುವ ಭೂಮಿಯ ವಿವರ ಕೇವಲ ಮಾಹಿತಿ ಆಗಿದೆ. ಇದನ್ನು ಕಾನೂನು ಬದ್ಧ ದಾಖಲೆ ಎಂದು ಪರಿಗಣಿಸಲಾಗುವುದಿಲ್ಲ.

    ಯಾರಿಗೆ ಉಪಯುಕ್ತ?
    ರಾಜ್ಯದ ಎಲ್ಲಾ ಸಾರ್ವಜನಿಕರು, ರಿಯಲ್ ಎಸ್ಟೇಟ್ ಉದ್ಯಮಿಗಳು ಸೇರಿಂತೆ ಎಲ್ಲರೂ ಭೂಮಿಯ ವಿವರ ಪಡೆಯಲು ಆ್ಯಪ್ ಉಪಯುಕ್ತವಾಗಿದೆ. ಆಸ್ತಿ ವ್ಯವಹಾರ, ಹೊಸ ಭೂಮಿ ಖರೀದಿ ಹಾಗೂ ಮಾರಾಟ ವೇಳೆ ಮಾಹಿತಿಗಾಗಿ ಆ್ಯಪ್ ಬಳಕೆ ಮಾಡಬಹುದು. ಭೂಮಿಯ ಖಾತೆ ವಿವರದಲ್ಲಿ ನಮೂದಿಸಿರುವ ಸರ್ವೆ ನಂಬರ್ ಸರಿಯಾಗಿದೆಯೇ ಎಂಬುದನ್ನೂ ಪರಿಶೀಲಿಸಬಹುದಾಗಿದೆ. ಆದರೆ ಇದರಲ್ಲಿ ಆಸ್ತಿಗಳ ಆಥವಾ ನಿವೇಶನಗಳ ಮೂಲ ಭೌಗೋಳಿಕ ವಿವರಗಳನ್ನು ಲಭಿಸುವುದಿಲ್ಲ.

    ಆ್ಯಪ್ ಸಿದ್ಧಪಡಿಸಿದ್ದು ಯಾರು?
    ದಿಶಾಂಕ್ ಆ್ಯಪ್ ಅನ್ನು ರಾಜ್ಯ ಸರ್ಕಾರದ ಕಂದಾಯ ಇಲಾಖೆ ಸತತ ಮೂರು ವರ್ಷಗಳಿಂದ ಪರಿಶ್ರಮವಹಿಸಿ ಸಿದ್ಧಪಡಿಸಿದೆ. ಇಲಾಖೆಯು 70 ಲಕ್ಷದಷ್ಟು ಸರ್ವೆನಂಬರ್‍ಗಳಿಗೆ ಸಂಬಂಧಿಸಿದ ವಿವರಗಳು ಇದರಲ್ಲಿ ಲಭ್ಯವಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಯಾವ ಭಾಗದಲ್ಲಿಯಾದರೂ ಭೂ ಮಾಹಿತಿ ಪಡೆಯುವವರ ನೆರವಿಗೆ ಬರಲು ಕಂದಾಯ ಇಲಾಖೆ `ದಿಶಾಂಕ್ ಆ್ಯಪ್’ ಬಿಡುಗಡೆಗೊಳಿಸಿದೆ.

    ಆ್ಯಪ್ ಉದ್ದೇಶ ಏನು?
    ಒಂದೇ ಆ್ಯಪ್‍ನಲ್ಲಿ ಭೂದಾಖಲೆಗಳಿಗೆ ಸಂಬಂಧಿಸಿದ ಎಲ್ಲ ಸೇವೆ ಸಿಗುವಂತೆ ಮಾಡುವುದು ಇಲಾಖೆಯ ಉದ್ದೇಶವಾಗಿದೆ. ದಿಶಾಂಕ್ ಆ್ಯಪ್ ತಯಾರಿಸಲು ಕಂದಾಯ ಇಲಾಖೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬಿಎಂಆರ್‍ಡಿಎ, ಬಿಬಿಎಂಪಿ ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವವನನ್ನು ಪಡೆದುಕೊಂಡಿದೆ. ಆ್ಯಪ್ ಮತ್ತಷ್ಟು ಜನ ಸ್ನೇಹಿಯಾಗಿ ಮಾಡಲು ಕಂದಾಯ ಇಲಾಖೆ ಚಿಂತನೆ ನಡೆಸಿದೆ. ಮುಂದಿನ ಹಂತದಲ್ಲಿ ಆ್ಯಪ್‍ನಲ್ಲಿ ಆಸ್ತಿ ಮಾಲೀಕರಿಗೆ ಸಂಬಂಧಿಸಿದ ವಿವರಗಳನ್ನೂ ಜೋಡಿಸುವ ಮೂಲಕ ಮತ್ತಷ್ಟು ಉಪಯುಕ್ತ ಮಹಿತಿ ಕೇಂದ್ರವಾಗಿ ರೂಪಿಸಲು ಇಲಾಖೆ ಚಿತಿಂಸಿದೆ.

    ಎಲ್ಲಿ ಸಿಗುತ್ತೆ?
    ಗೂಗಲ್ ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿ ಈ ಆ್ಯಪ್ ಲಭ್ಯವಿದ್ದು 10 ಸಾವಿರಕ್ಕೂ ಹೆಚ್ಚು ಮಂದಿ ಡೌನ್‍ಲೋಡ್ ಮಾಡಿದ್ದಾರೆ. ಪ್ಲೇ ಸ್ಟೋರ್ ನಲ್ಲಿ ಲಭ್ಯವಿದ್ದರೂ, ಮಾಹಿತಿ ಕೊರತೆಯಿಂದ ಹೆಚ್ಚಿನ ಜನರು ಇದನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ. ಆ್ಯಪ್ ಡೌನ್ ಲೋಡ್ ಮಾಡಲು ಕ್ಲಿಕ್ ಮಾಡಿ – ದಿಶಾಂಕ್ 

  • ಬಸವ ತತ್ವ ಪರಿಪಾಲಕರಿಗೆ ಪ್ರತ್ಯೇಕ ಧರ್ಮ- ಕ್ಯಾಬಿನೆಟ್ ಸಭೆಯ ಇನ್‍ಸೈಡ್ ಸ್ಟೋರಿ ಇಲ್ಲಿದೆ

    ಬಸವ ತತ್ವ ಪರಿಪಾಲಕರಿಗೆ ಪ್ರತ್ಯೇಕ ಧರ್ಮ- ಕ್ಯಾಬಿನೆಟ್ ಸಭೆಯ ಇನ್‍ಸೈಡ್ ಸ್ಟೋರಿ ಇಲ್ಲಿದೆ

    ಬೆಂಗಳೂರು: ರಾಜ್ಯದಲ್ಲಿ ಇತಿಹಾಸದಲ್ಲೇ ಅತಿದೊಡ್ಡ, ಐತಿಹಾಸಿಕ ವಿದ್ಯಮಾನವೊಂದು ಜರುಗಿದೆ. ಶತ ಶತಮಾನಗಳಿಂದ ಹಿಂದೂ ಧರ್ಮದ ಭಾಗವಾಗಿ ಇದ್ದ ವೀರಶೈವ-ಲಿಂಗಾಯತರು ಇನ್ನು ಮುಂದೆ ಹಿಂದೂಗಳಲ್ಲ. ಅವರು ಅಲ್ಪಸಂಖ್ಯಾತರು. ಹೀಗೆಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರ್ಣಯ ತೆಗೆದುಕೊಂಡಿದೆ.

    ರಾಜ್ಯ ಸರ್ಕಾರ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದು,  ಧರ್ಮ ಇಬ್ಭಾಗದ ತಂತ್ರ ಅನುಕರಿಸಿದೆ. ನ್ಯಾಯಮೂರ್ತಿ ನಾಗಮೋಹನ್‍ದಾಸ್ 2ನೇ ಶಿಫಾರಸ್ಸಿನ ಅನ್ವಯ, ಪ್ರತ್ಯೇಕ ಲಿಂಗಾಯತ ಧರ್ಮದ ಬದಲಿಗೆ, ಲಿಂಗಾಯತ ಮತ್ತು ವೀರಶೈವ, ಬಸವತತ್ವದಡಿ ನಂಬಿಕೆ ಇರುವವರಿಗೆ ಪ್ರತ್ಯೇಕ ಧರ್ಮಕ್ಕೆ ರಾಜ್ಯಸರ್ಕಾರ ಶಿಫಾರಸು ಮಾಡಿದೆ. ನಾಗಮೋಹನ್‍ದಾಸ್ ವರದಿ ಪ್ರಕಾರ ಅಲ್ಪಸಂಖ್ಯಾತ ಕೋಟಾದಡಿ ಮುಸ್ಲಿಮರಿಗೆ ಸಿಗುತ್ತಿರುವ ಸೌಲಭ್ಯಗಳು ಲಿಂಗಾಯತ-ವೀರಶೈವ ಧರ್ಮಕ್ಕೆ ಸಿಗುವುದಿಲ್ಲ.

    ಸಿಎಂ ನಿವಾಸ ಕಾವೇರಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾರೀ ನಾಟಕೀಯ ಬೆಳವಣಿಗೆಗಳು ನಡೆದಿತ್ತು. ಮಧ್ಯಾಹ್ನ 12 ಗಂಟೆಗೆ ಆರಂಭವಾದ ಈ ಸಭೆಯಲ್ಲಿ ಭಾರೀ ಚರ್ಚೆಗಳು ನಡೆದು ಸಂಜೆ 3.30ರ ವೇಳೆಗೆ ಅಂತಿಮ ನಿರ್ಧಾರಕ್ಕೆ ಬರಲಾಯಿತು. ಹೀಗಾಗಿ ಸಭೆಯಲ್ಲಿ ಏನು ಚರ್ಚೆ ನಡೆಯಿತು, ಯಾರು ಏನು ಹೇಳಿದರು ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಇಬ್ಬರು ಸಚಿವರು ರಾಜೀನಾಮೆ ನೀಡಿದ್ರೆ ಏನಾಗುತ್ತೆ ಅಂತ ವಿನಯ್ ಕುಲಕರ್ಣಿ ಹೇಳಿದ್ದಾನೆ. ನಾವು ಏಕೆ ರಾಜೀನಾಮೆ ಕೊಡಬೇಕು. ಅವನೇ ರಾಜೀನಾಮೆ ಕೊಟ್ಟು ಹೋಗಲಿ ಎಂದು ಹೇಳಿದ್ದಾರೆ. ಇದಕ್ಕೆ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್, ನಮ್ಮ ಜೊತೆ ನೀವು ಬರುವುದಾದರೆ ಬನ್ನಿ. ಇಲ್ಲಾಂದ್ರೆ ಸುಮ್ಮನಿರಿ. ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಮರು ಉತ್ತರ ನೀಡಿದ್ದಾರೆ.

    ಈ ಉತ್ತರಕ್ಕೆ ಗರಂ ಆದ ಎಸ್.ಎಸ್. ಮಲ್ಲಿಕಾರ್ಜುನ್, ಅನಗತ್ಯವಾಗಿ ಸಮುದಾಯವನ್ನು ಹಾಳ್ ಮಾಡ್ತಾ ಇದ್ದೀರಿ. ನಿಮ್ ಇಬ್ರಿಂದಾನೆ (ಎಂ.ಬಿ. ಪಾಟೀಲ್, ಕುಲಕರ್ಣಿ) ಏನೋ ಮಾಡೋಕೆ ಹೋಗಿ ಏನೋ ಆಗಿದೆ. ವೀರಶೈವ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಹಾಸಭಾ ಮನವಿ ಕೊಟ್ಟಿದ್ದು. ಆದ್ರೀಗ, ಲಿಂಗಾಯತ ಸ್ವತಂತ್ರ ಧರ್ಮ ಅಂತ ಗುಲ್ಲೆಬ್ಬಿಸಿ ಹಾಳ್ ಮಾಡಕ ಹತ್ತೀರಿ ಎಂದಿದ್ದಾರೆ.

    ಮಲ್ಲಿಕಾರ್ಜುನ್ ಆರೋಪಕ್ಕೆ ವಿನಯ ಕುಲಕರ್ಣಿ, ಹಾಳ್ ಮಾಡ್ತಿರೋದು ನಾವಲ್ಲ, ನೀವು. ನಮ್ಮ ಬಸವಣ್ಣ ಸ್ಥಾಪನೆ ಮಾಡಿದ್ದೇ ನಿಜವಾದ ಧರ್ಮ. ಬಸವ ಧರ್ಮ. ಲಿಂಗಾಯತ ಸ್ವತಂತ್ರ ಧರ್ಮ ಆಗಬೇಕು ಅಂತ ಸ್ವಾಮೀಜಿಗಳೇ ಸಿಎಂ ಹತ್ರ ಬಂದು ಒತ್ತಾಯ ಮಾಡ್ತಿದ್ದಾರೆ. ನೀವು ಅದನ್ನ ದಿಕ್ಕು ತಪ್ಪಿಸ್ತಾ ಇದ್ದೀರಿ ಎಂದು ಸಿಟ್ಟಿನಿಂದ ಹೇಳಿದರು.  ಇದಾದ ಬಳಿಕ ಸಂಪುಟ ಸಭೆಯಿಂದ ಸಚಿವ ವಿನಯ ಕುಲಕರ್ಣಿ ಸಿಟ್ಟಿನಿಂದ ಹೊರಬಂದು 10 ನಿಮಿಷಗಳ ಬಳಿಕ ಮತ್ತೆ ವಾಪಸ್ ಹಾಜರಾದರು.

    ಈ ವೇಳೆ ಆರೋಗ್ಯ ಸಚಿವ ರಮೇಶ್ ಕುಮಾರ್ ಮಾತನಾಡಿ, ಎಲ್ಲರೂ ನಿಮ್ಮ ಅಭಿಪ್ರಾಯಗಳನ್ನಷ್ಟೇ ತಿಳಿಸಿ. ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಸುಮ್ಮನೆ ಕೂಗಾಟ-ಕಿತ್ತಾಟ ಸರಿಯಲ್ಲ ಎಂದು ಸಲಹೆ ನೀಡಿದರು.

    ಈ ಚರ್ಚೆ ವೇಳೆ ಮಧ್ಯಪ್ರವೇಶಿಸಿ ಸಿಎಂ ಸಿದ್ದರಾಮಯ್ಯ, ಲಾಭ ನಷ್ಟದ ಲೆಕ್ಕಚಾರದ ಬಗ್ಗೆ ನನಗೆ ಹೇಳ್ತೀರಾ ನೀವು. ರಾಜಕೀಯ ಲಾಭ-ನಷ್ಟ ನನಗೂ ಗೊತ್ತಿದೆ. ಇದೇನ್ ಕ್ಯಾಬಿನೆಟ್ ಅಂತಾ ತಿಳ್ಕೊಂಡಿದ್ದೀರೋ? ಏನು? ಇಷ್ಟೊಂದು ವೈಯಕ್ತಿಕ ಮಟ್ಟಕ್ಕೆ ಇಳಿದು ಜಗಳ ಮಾಡಿದ್ರೆ ಏನು ಆಗಲ್ಲ. ಸುಮ್ಮನಿರಿ. ಈ ವಿಚಾರದ ಬಗ್ಗೆ ನಿಮ್ಮ ನಿಮ್ಮ ಅಭಿಪ್ರಾಯಗಳನ್ನಷ್ಟೇ ತಿಳಿಸಿ ಎಂದರು. ಈ ಸಂದರ್ಭದಲ್ಲಿ ಪ್ರತ್ಯೇಕ ಧರ್ಮದ ಸಾಧಕ-ಬಾಧಕ ಬಗ್ಗೆ ಅಡ್ವೋಕೇಟ್ ಜನರಲ್ ಮಧುಸೂದನ್ ನಾಯಕ್ ಅವರನ್ನು ಸಂಪುಟ ಸಭೆಗೆ ಕರೆಸಿ ಸಿದ್ದರಾಮಯ್ಯ ಮಾಹಿತಿ ಪಡೆದರು.

    ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಬಹುತೇಕ ಸಚಿವರು ಒಪ್ಪಿಗೆ ನೀಡಿದರು. ಆದರೆ ಸಚಿವ ಈಶ್ವರ ಖಂಡ್ರೆ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಈಶ್ವರ ಖಂಡ್ರೆ ಮಾತನಾಡಿ, ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸರ್ಕಾರ ಶಿಫಾರಸು ಮಾಡಿದರೆ ಕನಿಷ್ಠ 20 ಸ್ಥಾನಗಳನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ ಎಂದಾಗ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ನನಗೂ ಕೂಡ ಹೀಗೆ ಅನಿಸುತ್ತಿದೆ. ಈಡಿಗರಿಗೂ ಪ್ರತ್ಯೇಕ ಧರ್ಮದ ಸ್ಥಾನ ನೀಡುತ್ತೀರಾ ಎಂದು ಪ್ರಶ್ನಿಸಿದರು.

    ಶಿಕ್ಷಣ ಸಚಿವ ತನ್ವೀರ್ ಸೇಠ್ ಮಾತನಾಡಿ, ನೀವು ಅಲ್ಪಸಂಖ್ಯಾತರ ಸ್ಥಾನಮಾನ ನೀಡಿ. ಆದರೆ, ಅಲ್ಪಸಂಖ್ಯಾತರಿಗೆ ಯಾವುದೇ ದುಷ್ಪರಿಣಾಮ ಆಗದಂತೆ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದರು. ಎಲ್ಲರ ಮಾತು ಕೇಳಿ ಕೊನೆಗೆ ಪ್ರತ್ಯೇಕ ಲಿಂಗಾಯತ ಧರ್ಮದ ಬದಲಿಗೆ ಲಿಂಗಾಯತ ಮತ್ತು ವೀರಶೈವ ಲಿಂಗಾಯತ, ಬಸವ ತತ್ವ ಪಾಲಕರಿಗೆ ಪ್ರತ್ಯೇಕ ಧರ್ಮ ಎನ್ನುವ ಸಾಲು ಸೇರಿಸಿ. ಮುಂದೆ ಏನಾಗುತ್ತೋ ಅಂತ ನೋಡೋಣ ಎಂದು ಹೇಳಿ ಸಭೆಯನ್ನು ಮುಕ್ತಾಯಗೊಳಿಸಿದರು ಎಂದು ಹೇಳಲಾಗುತ್ತಿದೆ.

    ಸಚಿವ ಸಂಪುಟದ ನಿರ್ಣಯಗಳೇನು?
    * ಬಸವ ತತ್ವ ಒಪ್ಪಿ ಬರುವವರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ
    * ಲಿಂಗಾಯತ ಮತ್ತು ವೀರಶೈವ, ಬಸವತತ್ವದಡಿ ನಂಬಿಕೆ ಇರುವವರಿಗೆ ಅನ್ವಯ
    * ಪ್ರತ್ಯೇಕ ಧರ್ಮಕ್ಕೆ ಒಳಗಾಗುವವರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ
    * ಕರ್ನಾಟಕ ಅಲ್ಪಸಂಖ್ಯಾತ ಕಾಯ್ದೆಯ ಸೆಕ್ಷನ್ 2ಡಿ ಅಡಿ ಶಿಫಾರಸು
    * ಕೇಂದ್ರದ ಅಲ್ಪಸಂಖ್ಯಾತ ಆಯೋಗದ 2 (ಸಿ) ಕಾಯ್ದೆ ಅನ್ವಯ

    ಅಲ್ಪಸಂಖ್ಯಾತರ ಸ್ಥಾನಮಾನ ಯಾರಿಗೆ?
    * ರಾಜ್ಯ ಸರ್ಕಾರವೇನೋ ಶಿಫಾರಸು ಮಾಡಿದೆ ಆದ್ರೆ ಕೇಂದ್ರ ಸಂಪುಟ ಒಪ್ಪಿಗೆ ನೀಡಬೇಕು
    * ಅಲ್ಪಸಂಖ್ಯಾತರ ಸ್ಥಾನಮಾನ ಬೇಕಾದರೆ ವೀರಶೈವರು ಕೂಡ ಬಸವ ತತ್ವ ಪಾಲನೆ ಮಾಡಬೇಕು
    * ವೀರಶೈವರು ತಮ್ಮದೇ ಆದ ತತ್ವ ಸಿದ್ಧಾಂತ ಹೊಂದಿರುವುದರಿಂದ ಬಸವ ತತ್ವ ಅನುಕರಣೆ ಅಸಾಧ್ಯ
    * ಅಲ್ಪಸಂಖ್ಯಾತರ ಸ್ಥಾನಮಾನ ಸಿಕ್ಕಿದ್ರೆ, ಲಿಂಗಾಯತರು ಮತ್ತು ವೀರಶೈವರು ಹಿಂದುಗಳಲ್ಲ!

  • ಸಿಎಂ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ಐಪಿಎಸ್ ಅಧಿಕಾರಿಗಳ ಸಂಘ

    ಸಿಎಂ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ಐಪಿಎಸ್ ಅಧಿಕಾರಿಗಳ ಸಂಘ

    ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆ ಉಲ್ಲೇಖಿಸಿ ಐಪಿಎಸ್ ಅಧಿಕಾರಿಗಳ ಸಂಘ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಪತ್ರ ಬರೆದಿದ್ದಾರೆ.

    ಪತ್ರದಲ್ಲಿ ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿಗಳನ್ನ ಕೀಳು ಮಟ್ಟದಲ್ಲಿ ನೋಡುತ್ತಿದೆ. ಹಲವು ಪ್ರಕರಣಗಳ ತನಿಖೆ ವೇಳೆ ರಾಜಕಾರಣಿಗಳು ಹಸ್ತಕ್ಷೇಪ ಮಾಡುತ್ತಾರೆ. ಅಲ್ಲದೇ ತನಿಖೆಯ ದಿಕ್ಕು ತಪ್ಪಿಸಿ ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿಸಲಾಗಿದೆ.

    ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಪತ್ರದಲ್ಲಿ ಉಲ್ಲೇಖಸಿರುವ ಐಪಿಎಸ್ ಸಂಘದ ಅಧ್ಯಕ್ಷರಾಗಿರುವ ಎಡಿಜಿಪಿ ಆರ್ ಪಿ ಶರ್ಮಾ ಅವರು, ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಮೇಲೆ ಚಾಕು ಇರಿತ ಪ್ರಕರಣ, ಐಪಿಎಸ್ ಅಧಿಕಾರಿಗಳ ಪದೇ ಪದೇ ವರ್ಗಾವಣೆ, ಪೊಲೀಸರ ವರ್ಗಾವಣೆ, ಮೈಸೂರು ಐಎಎಸ್ ಆಧಿಕಾರಿ ರಶ್ಮಿ ಮೇಲೆ ಕಚೇರಿಯಲ್ಲೆ ಹಲ್ಲೆ ಪ್ರಕರಣ, ಮೈಸೂರು ಡಿಸಿ ಶಿಖಾ ಅವರ ಮೇಲಿನ ದಾಳಿ ಹಾಗೂ ಈ ಸಂಬಂಧ ಎಫ್‍ಐಆರ್ ದಾಖಲಿಸಿಕೊಳ್ಳಲು ತಡ ಮಾಡಿರುವ ಘಟನೆ, ಯುಬಿ ಸಿಟಿ ಬಳಿ ದಾಳಿ ಪ್ರಕರಣ, ಸರ್ಕಾರಿ ಕಚೇರಿಗೆ ಬೆಂಕಿ ಹಚ್ಚಿಲು ಯತ್ನಿಸಿದ ರಾಜಕಾರಣಿ ಪ್ರಕರಣಗಳನ್ನು ತಮ್ಮ ಪತ್ರದ ಮೂಲಕ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದಾರೆ.

    ಭಾರತೀಯ ಪೊಲೀಸ್ ಇಲಾಖೆಗೆ ತನ್ನದೇ ಸಂಸ್ಕೃತಿ ಇದೆ, ಆದರೆ ಅದಕ್ಕೆ ಈಗ ಕರಿನೆರಳು ಬಿದ್ದಿದೆ. ಪೊಲೀಸ್ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಯಾವುದೇ ತಪ್ಪು ಕಂಡು ಬಂದರೂ ಪೊಲೀಸರನ್ನೇ ಬಲಿಪಶುವಾಗಿ ಮಾಡಲಾಗುತ್ತಿದೆ. ಪೊಲೀಸರು ಮನಸ್ಫೂರ್ತಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಕಳೆದ ನಾಲ್ಕೂವರೆ ವರ್ಷದಲ್ಲಿ ಬೆಂಗಳೂರು ಆರು ಮಂದಿ ಆಯುಕ್ತರನ್ನು ಕಂಡಿದೆ. ಐಪಿಎಸ್ ಅಧಿಕಾರಿಗಳಿಗೆ ಸೇವೆ ಸಲ್ಲಿಸಲು ಸ್ವತಂತ್ರ್ಯ ನೀಡಬೇಕು. ಚುನಾವಣೆಗೆ ಮುನ್ನ ಪೊಲೀಸ್ ಆಧಿಕಾರಿಗಳು ಹಾಗೂ ಮಾಜಿ ಪೊಲೀಸರನ್ನು ಸೇರಿಸಿ ಸಭೆ ಮಾಡಬೇಕು ಎಂದು ಸಂಘದ ಅಧ್ಯಕ್ಷ ಆರ್.ಪಿ.ಶರ್ಮಾ ಪತ್ರದ ಮೂಲಕ ಮನವಿ ಮಾಡಿದ್ದಾರೆ.

     

     

  • ಖಡಕ್ ಅಧಿಕಾರಿ ರವಿ ಡಿ ಚೆನ್ನಣ್ಣವರ್ ಬೆಂಗಳೂರಿಗೆ ವರ್ಗಾವಣೆ

    ಖಡಕ್ ಅಧಿಕಾರಿ ರವಿ ಡಿ ಚೆನ್ನಣ್ಣವರ್ ಬೆಂಗಳೂರಿಗೆ ವರ್ಗಾವಣೆ

    ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೆ ಸರ್ಕಾರ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ನೀಡಿದೆ ಎಂಬ ಮಾಹಿತಿ ಲಭಿಸಿದೆ.

    ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ ರವಿ ಡಿ ಚೆನ್ನಣ್ಣನವರ್ ಅವರನ್ನು ಬೆಂಗಳೂರು ಪಶ್ಚಿಮ ವಿಭಾಗದ ಅನುಚೇತ್ ಅವರ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಈಶಾನ್ಯ ವಿಭಾಗದ ಗಿರೀಶ್ ಅವರಿಗೆ ಮಂಡ್ಯ ಎಸ್ಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.

    ಚುನಾವಣಾ ಆಯೋಗದ ನೀಡಿರುವ ನಿರ್ದೇಶನ ಮೇರೆಗೆ ವರ್ಗಾವಣೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಕೈಗೊಳ್ಳಲಾಗಿದೆ ಎನ್ನಲಾಗಿದೆ. ನ್ಯಾಯ ಸಮ್ಮತ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಈ ವರ್ಗಾವಣೆ ಕೈಗೊಳ್ಳಲಾಗಿದೆ. ಸೋಮವಾರ ಬೆಳಗ್ಗೆ ಅಧಿಕಾರಿಗಳ ವರ್ಗಾವಣೆಗೆ ಅಧಿಕೃತ ವರ್ಗಾವಣೆ ಪತ್ರ ಲಭಿಸುವ ಸಾಧ್ಯತೆ ಎಂದು ಮೂಲಗಳು ಖಚಿತ ಪಡಿಸಿದೆ.

    ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ:
    ಗೃಹ ಕಾರ್ಯದರ್ಶಿ – ಉಮೇಶ್ ಕುಮಾರ್
    ರವಿ ಚನ್ನಣ್ಣನವರ್ – ಡಿಸಿಪಿ, ಪಶ್ಚಿಮ ಬೆಂಗಳೂರು
    ಅಮಿತ್ ಸಿಂಗ್ – ಮೈಸೂರು ಎಸ್ಪಿ.
    ಗಿರೀಶ್ – ಮಂಡ್ಯ ಎಸ್ಪಿ.
    ಜಗದೀಶ್ – ಬಳ್ಳಾರಿ ಎಸ್ಪಿ
    ಬಳ್ಳಾರಿ ವಲಯ ಐಜಿಪಿ – ಎಸ್.ರವಿ.
    ಕೇಂದ್ರ ವಲಯ ಐಜಿಪಿ – ದಯಾನಂದ್.
    ಸೌಮೇಂದ್ರ ಮುಖರ್ಜಿ – ದಕ್ಷಿಣ ವಲಯ ಐಜಿಪಿ
    ಅನುಚೇತ್ – ಸಿಐಡಿ
    ಶಿವಪ್ರಸಾದ್- ಕೆಎಸ್‍ಆರ್  ಟಿಸಿ ವಿಜಿಲೆನ್ಸ್
    ಅಮೃತಪೌಲ್- ಐಜಿಪಿ, ಆಡಳಿತ
    ಕುಲ್‍ದೀಪ್ ಜೈನ್ – ಕೆಎಸ್‍ಆರ್  ಟಿಸಿ, ಕಮಾಂಡೆಂಟ್
    ರಾಧಿಕ – ಎಸ್‍ಪಿ, ಎಸಿಪಿ
    ಅನುಪ್ ಶೆಟ್ಟಿ – ಎಸ್‍ಪಿ, ಗುಪ್ತಚರ ಇಲಾಖೆ
    ರೇಣುಕ ಸುಕುಮಾರ್- ಎಸ್‍ಪಿ, ಕೊಪ್ಪಳ
    ಕಲಾ ಕೃಷ್ಣಮೂರ್ತಿ – ಡಿಸಿಪಿ, ಈಶಾನ್ಯ ಬೆಂಗಳೂರು
    ಚೇತನ್ – ಎಸ್‍ಪಿ, ದಾವಣಗೆರೆ

    https://www.youtube.com/watch?v=ZRLxRuJJEi4

  • ಕಾರಿನಲ್ಲಿ ಕ್ರಾಶ್ ಗಾರ್ಡ್ ಬ್ಯಾನ್: ಅಳವಡಿಸಿದ್ರೆ ಬೀಳುತ್ತೆ ಭಾರೀ ದಂಡ!

    ಕಾರಿನಲ್ಲಿ ಕ್ರಾಶ್ ಗಾರ್ಡ್ ಬ್ಯಾನ್: ಅಳವಡಿಸಿದ್ರೆ ಬೀಳುತ್ತೆ ಭಾರೀ ದಂಡ!

    ನವದೆಹಲಿ: ಕಾರ್ ಹಾಗೂ ಇತರೇ ವಾಹನಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ಬುಲ್ ಬಾರ್ ಅಥವಾ ಕ್ರಾಶ್ ಗಾರ್ಡ್ ಗಳನ್ನು ತೆಗೆಯಲು ತಕ್ಷಣವೇ ಕ್ರಮಕೈಗೊಳ್ಳಬೇಕೆಂದು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ಹೊರಡಿಸಿದೆ.

    ರಸ್ತೆ ಅಪಘಾತದ ಹೆಚ್ಚಿನ ಸಮಯದಲ್ಲಿ ವಾಹನಗಳಿಗೆ ಅಳವಡಿಸಿರುವ ಬುಲ್ ಬಾರ್‍ ಗಳಿಂದ ಪಾದಚಾರಿಗಳಿಗೆ ಹೆಚ್ಚು ಅಪಾಯವಾಗುತ್ತಿದೆ ಎಂದು ತಿಳಿಸಿರುವ ಸಚಿವಾಲಯ ತಕ್ಷಣವೇ ವಾಹನಗಳಲ್ಲಿ ಅಳವಡಿಸಿರುವ ಕ್ರಾಶ್ ಗಾರ್ಡ್ ಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದೆ. ಅಲ್ಲದೇ ಬುಲ್ ಬಾರ್ ಅಳವಡಿಸಿರುವ ವಾಹನಗಳಿಗೆ ಭಾರೀ ದಂಡವನ್ನು ವಿಧಿಸಲು ಅವಕಾಶವನ್ನು ನೀಡಿದೆ.

     

    ಏನಿದು ಕ್ರಾಶ್ ಗಾರ್ಡ್?
    ವಾಹನಗಳಿಗೆ ಸಣ್ಣ ಅಪಘಾತದ ಸಮಯದಲ್ಲಿ ಹೆಚ್ಚಿನ ಹಾನಿಯಾಗದಿರಲಿ ಎಂಬ ಕಾರಣಕ್ಕೆ ಹಾಗೂ ವಾಹನಗಳ ಅಂದವನ್ನು ಹೆಚ್ಚಿಸಲು ಬುಲ್ ಬಾರ್ ಅಥವಾ ಕ್ರಾಶ್ ಗಾರ್ಡ್ ಗಳನ್ನು ಅಳವಡಿಸಲಾಗುತ್ತದೆ. ಕಾರು, ಎಸ್‍ಯುವಿ, ಪಿಕಪ್, ಬಸ್, ಟ್ರಕ್ ಗಳಲ್ಲಿ ಕ್ರಾಶ್ ಗಾರ್ಡ್ ಗಳನ್ನು ಅಳವಡಿಸಲಾಗುತ್ತದೆ. ಇವುಗಳನ್ನು ಕಬ್ಬಿಣ ಮತು ಫೈಬರ್ ನಿಂದ ತಯಾರಿಸಲಾಗುತ್ತದೆ. ಕೆಲವರು ಹೆಚ್ಚಿನ ಸಂಖ್ಯೆಯ ಲೈಟ್ ಗಳನ್ನು ಹಾಕಿ ವಾಹನದ ಅಂದವನ್ನು ಹೆಚ್ಚಿಸಲು ಈ ಕ್ರಾಶ್ ಗಾರ್ಡ್ ಅಳವಡಿಸುತ್ತಾರೆ.

    ಕಾನೂನು ಏನು ಹೇಳುತ್ತೆ?
    1988ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 52 ರ ಪ್ರಕಾರ ಯಾವುದೇ ರೀತಿಯ ವಾಹನಗಳಿಗೆ ಬುಲ್ ಬಾರ್ ಮತ್ತು ಕ್ರಾಶ್ ಗಾರ್ಡ್ ಅಳವಡಿಸುವುದನ್ನು ನಿಷೇಧಿಸಲಾಗಿದೆ. ಈ ಕಾರಣದಿಂದ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಈ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೆ ಮಾಡಲು ರಾಜ್ಯ ಸರ್ಕಾರಿಗಳಿಗೆ ಪತ್ರ ಬರೆದಿದೆ.

    ಕೇಂದ್ರದ ಅದೇಶದ ಅನ್ವಯ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು, ಆಯಾ ರಾಜ್ಯಗಳ ಸಾರಿಗೆ ಇಲಾಖೆ ಕಾರ್ಯದರ್ಶಿಗಳು ಮತ್ತು ಆಯುಕ್ತರು ಈ ಕುರಿತು ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೇ 1998 ರ ಕಾಯ್ದೆಯ 190, 191 ಸೆಕ್ಷನ್ ಗಳ ಅನ್ವಯ ಬುಲ್ ಬಾರ್ ಅಳವಡಸಿರುವ ವಾಹನ ಚಾಲಕ ಅಥವಾ ಮಾಲೀಕರಿಗೆ ದಂಡ ವಿಧಿಸುವ ಅವಕಾಶವನ್ನು ನೀಡಲಾಗಿದೆ.

    ನಿಷೇಧ ಯಾಕೆ?
    ಅಪಘಾತದ ಸಂದರ್ಭದಲ್ಲಿ ವಾಹನವನ್ನು ರಕ್ಷಿಸಲು ಮತ್ತು ಪಾದಾಚಾರಿಗಳು ವಾಹನ ಸವಾರರಿಗೆ ಗಂಭೀರವಾಗಿ ಏಟು ಬೀಳದೇ ಇರಲಿ ಎನ್ನುವ ಕಾರಣಕ್ಕೆ ಮುಂದುಗಡೆ ಫೈಬರ್ ಬಂಪರ್ ಅಳವಡಿಸಲಾಗುತ್ತದೆ. ಒಂದು ವೇಳೆ ವಾಹನ ಡಿಕ್ಕಿಯಾದಾಗ ಪಾದಾಚಾರಿಗಳು, ಸವಾರರು ಮೇಲಕ್ಕೆ ಚಿಮ್ಮಿ ಬಾನೆಟ್ ಮೇಲೆ ಬೀಳುವಂತೆ ಈ ಕ್ರಾಶ್ ಗಾರ್ಡ್ ವಿನ್ಯಾಸ ಮಾಡಲಾಗುತ್ತದೆ. ಆದರೆ ಅಪಘಾತದ ವೇಳೆ ವಾಹನಕ್ಕೆ ಡಿಕ್ಕಿ ಹೊಡೆಯುವ ಬೈಕ್ ಸವಾರರಿಗೆ, ಪಾದಚಾರಿಗಳಿಗೆ, ಪ್ರಾಣಿಗಳಿಗೆ ಹೆಚ್ಚಿನ ಪೆಟ್ಟು ಬೀಳುತ್ತದೆ. ಈ ಬಂಪರ್ ಬಿದ್ದ ನಂತರ ಪಾದಾಚಾರಿಗಳು ಮೇಲಕ್ಕೆ ಹಾರುವ ಬದಲು ಕೆಳಕ್ಕೆ ಬಿದ್ದು ಮೃತಪಡುವ ಸಾಧ್ಯತೆ ಹೆಚ್ಚಿರುತ್ತದೆ.

    ಎರಡನೇಯದಾಗಿ ಕಾರಿನಲ್ಲಿ ಡ್ರೈವರ್ ಮತ್ತು ಪ್ರಯಾಣಿಕರ ರಕ್ಷಣೆಗೆ ಏರ್ ಬ್ಯಾಗ್ ಇರುತ್ತದೆ. ಈ ಏರ್ ಬ್ಯಾಗ್  ಸೆನ್ಸರ್ ಗಳನ್ನು ಹೆಡ್ ಲ್ಯಾಂಪ್ ಹಿಂಬಂದಿಯಲ್ಲಿ ಅಳವಡಿಸಲಾಗುತ್ತದೆ. ಆದರೆ ಗಂಭೀರ ಅಪಘಾತವಾದಾಗ ಬುಲ್ ಬಾರ್ ನಿಂದಾಗಿ ಅಪಘಾತದ ತೀವ್ರತೆ ಈ ಸೆನ್ಸರ್ ಗೆ ತಟ್ಟುವುದಿಲ್ಲ. ಗಂಭೀರ ಅಪಘಾತ ಸಂಭವಿಸಿದರೂ ಈ ಏರ್ ಬ್ಯಾಗ್ ತೆರೆಯದೇ ಇದ್ದರೆ ಕಾರಿನ ಒಳಗಡೆ ಇರುವ ವ್ಯಕ್ತಿಗಳು ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ.

    ಈ ಕ್ರಾಶ್ ಗಾರ್ಡ್ ಗಳನ್ನು ವಾಹನಗಳ ಚಾಸಿಗಳಿಗೆ ಅಳವಡಿಸಲಾಗುತ್ತದೆ. ಯಾವುದೇ ಅಪಘಾತವಾದರೂ ಚಾಸಿಗೆ ಭಾರೀ ಪೆಟ್ಟು ಬೀಳುತ್ತಿರುತ್ತದೆ. ರಕ್ಷಣೆಗಿಂತಲೂ ಅಪಾಯವೇ ಹೆಚ್ಚಾಗುತ್ತಿರುವ ಕಾರಣ ಈಗ ಸರ್ಕಾರ ಈ ಕ್ರಾಶ್ ಗಾರ್ಡ್ ಗಳನ್ನು ತೆಗೆಯುವಂತೆ ಸೂಚಿಸಿದೆ.

    ದಂಡ ಎಷ್ಟು?
    ಬುಲ್ ಬಾರ್ ತೆರವಿಗೆ ರಾಜ್ಯ ಸರ್ಕಾರದ ಅಧಿಕಾರಿಗಳು ನಿಗಧಿತ ಅವಧಿಯನ್ನು ಕಲ್ಪಿಸಿಕೊಡುತ್ತಾರೆ. ನಂತರದಲ್ಲಿಯೂ ವಾಹನಗಳಿಂದ ಬುಲ್ ಬಾರ್ ಗಳನ್ನು ತೆರವುಗೊಳಿಸದೇ ಇದ್ದರೆ ದಂಡ ವಿಧಿಸಲಾಗುತ್ತದೆ. ಮೊದಲ ಬಾರಿ 1 ಸಾವಿರ ರೂ. ದಂಡ ವಿಧಿಸಬಹುದಾಗಿದ್ದು, ಎರಡನೇ ಬಾರಿ ಈ ಮೊತ್ತವನ್ನು 2 ಸಾವಿರಕ್ಕೆ ಹೆಚ್ಚಿಸಲಾಗುತ್ತದೆ. ಒಂದು ವೇಳೆ ವಾಹನದ ತಯಾರಕರು ಬುಲ್ ಬಾರ್ ಅಳವಡಿಸಿದ್ದರೆ ಹಾಗೂ ಬುಲ್ ಬಾರ್ ಗಳನ್ನು ಮಾರಾಟ ಮಾಡುವವರಿಗೆ 5 ಸಾವಿರ ರೂ ದಂಡ ವಿಧಿಸಬಹುದಾಗಿದೆ.

  • ರಾಜ್ಯ ಸರ್ಕಾರದ ವಿರುದ್ಧ ರಸ್ತೆಗಿಳಿದ ಸರ್ಕಾರಿ ನೌಕರರು-ಬೃಹತ್ ಪ್ರತಿಭಟನೆ

    ರಾಜ್ಯ ಸರ್ಕಾರದ ವಿರುದ್ಧ ರಸ್ತೆಗಿಳಿದ ಸರ್ಕಾರಿ ನೌಕರರು-ಬೃಹತ್ ಪ್ರತಿಭಟನೆ

    ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧ ವರ್ಗಗಳ ನೌಕರರು ಇಂದು ನಗರದ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು.

    ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ 62 ವಿವಿಧ ವರ್ಗಗಳ ಸಾವಿರಾರು ನೌಕರರು ಅಹಿಂಸಾ ಸಂಘಟನೆ(ಅಲ್ಪ ಸಂಖ್ಯಾತ, ಹಿಂದುಳಿದ, ಸಾಮಾನ್ಯ ವರ್ಗ) ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

    ಇಂದು ಬೆಳಗ್ಗೆ ಫ್ರೀಡಂ ಪಾರ್ಕ್ ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಅರಮನೆ ಮೈದಾನದ ವರೆಗೂ ನಡೆಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೌಕರರು ಮುಂಬಡ್ತಿ ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿರುವ ಆದೇಶ ಜಾರಿ ಮಾಡುವಂತೆ ಎಂದು ಒತ್ತಾಯ ಮಾಡಿದರು. ಅಲ್ಲದೇ ಸುಪ್ರೀಂ ಆದೇಶವಿದ್ದರೂ ರಾಜ್ಯ ಸರ್ಕಾರ ಮುಂಬಡ್ತಿಯನ್ನು ನೀಡಲು ಹಿಂದೇಟು ಹಾಕುತ್ತಿದೆ. ರಾಜ್ಯ ಸರ್ಕಾರದ ಶೇ.82 ರಷ್ಟು ನೌಕರರಿಗೆ ಮುಂಬಡ್ತಿ ನೀಡಬೇಕು ಆಗ್ರಹಿಸಿದರು.

    ಅಲ್ಲದೇ ರಾಜ್ಯ ಸರ್ಕಾರವು ಸುಪ್ರೀಂ ಆದೇಶಕ್ಕೆ ತದ್ವಿರುದ್ಧವಾಗಿ ಕಾನೂನು ಜಾರಿಗೆ ಮಾಡಲು ನಿರ್ಧರಿಸಿದೆ. ಆದರಿಂದಲೇ ಈ ಕಾಯ್ದೆಯನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತರಲು ರಾಜ್ಯಪಾಲರಿಗೆ ಕಡತ ರವಾನಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಬಿಜೆಪಿಯನ್ನ ಅಲುಗಾಡಿಸಲು ಸಿದ್ದವಾಗಿದೆ ಸೂತ್ರ- ಸಿಬಿಐ ಕೈಬಿಟ್ಟದ್ದ ಅಕ್ರಮ ಅದಿರು ಪ್ರಕರಣವನ್ನು ಎಸ್‍ಐಟಿಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ

    ಬಿಜೆಪಿಯನ್ನ ಅಲುಗಾಡಿಸಲು ಸಿದ್ದವಾಗಿದೆ ಸೂತ್ರ- ಸಿಬಿಐ ಕೈಬಿಟ್ಟದ್ದ ಅಕ್ರಮ ಅದಿರು ಪ್ರಕರಣವನ್ನು ಎಸ್‍ಐಟಿಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ

    ಬೆಂಗಳೂರು: ಕರ್ನಾಟಕದ ರಾಜಕಾರಣದಲ್ಲಿ ಮತ್ತೆ ಗಣಿ ಗದ್ದಲ ಶುರುವಾಗಿದೆ. ಸಿಬಿಐ ಕೈಬಿಟ್ಟದ್ದ ಅಕ್ರಮ ಅದಿರು ಪ್ರಕರಣವನ್ನು ಎಸ್‍ಐಟಿ ಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

    ಎರಡು ಮಹತ್ವದ ಪ್ರಕರಣಗಳನ್ನು ಸಿಬಿಐ ಕೈಬಿಟ್ಟಿತ್ತು. ಕಾರವಾರ, ಮಂಗಳೂರು ಬಂದರಿನಲ್ಲಿ ಅಕ್ರಮ ರಫ್ತು ಪ್ರಕರಣವನ್ನು ಸಿಬಿಐ ಸೂಕ್ತ ಸಾಕ್ಷ್ಯಗಳಿಲ್ಲ ಎಂದು ಕೈಬಿಟ್ಟಿತ್ತು. ಈ ಸಹಸ್ರಾರು ಕೋಟಿ ಪ್ರಕರಣದ ಹಿಂದೆ ಕಳ್ಳ ಕುಳಗಳೇ ಇದ್ದು, ನರೇಂದ್ರ ಮೋದಿ, ಅಮಿತ್ ಶಾ ಜೊತೆ ಇರುವ ಉದ್ಯಮಿಗಳು ಶಾಮೀಲಾಗಿದ್ದಾರೆ ಎನ್ನಲಾಗಿದೆ.

    ಉದ್ಯಮಿಗಳ ಮೇಲೆ ಎಸ್‍ಐಟಿ ಅಸ್ತ್ರ ಪ್ರಯೋಗಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಬಿಜೆಪಿಯ ಹಣಬಲಕ್ಕೆ ಬ್ರೇಕ್ ಹಾಕಲು ಈ ಪ್ಲ್ಯಾನ್ ಮಾಡಿದೆ. ಬಿಜೆಪಿಯ ಐಟಿ ಶಸ್ತ್ರಕ್ಕೆ ಪ್ರತಿಯಾಗಿ ಎಸ್‍ಐಟಿ ಶಸ್ತ್ರ ಬಳಸಲು ಮುಂದಾಗಿದೆ. ನವೆಂಬರ್ 8ರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನವಾಗುವ ಸಾಧ್ಯತೆ ಇದೆ.

  • ನಾವು ಅಬಕಾರಿ ಸುಂಕ ಇಳಿಸಿದ್ದೇವೆ, ನೀವು ವ್ಯಾಟ್ ಇಳಿಸಿ: ಧರ್ಮೇಂದ್ರ ಪ್ರಧಾನ್

    ನಾವು ಅಬಕಾರಿ ಸುಂಕ ಇಳಿಸಿದ್ದೇವೆ, ನೀವು ವ್ಯಾಟ್ ಇಳಿಸಿ: ಧರ್ಮೇಂದ್ರ ಪ್ರಧಾನ್

    ಬೆಂಗಳೂರು: ಮಂಗಳವಾರವಷ್ಟೇ ಪ್ರತಿ ಲೀಟರ್ ಪೆಟ್ರೋಲ್, ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು 2 ರೂ. ಕಡಿತಗೊಳಿಸಿದ್ದು ಕೇಂದ್ರ ಸರ್ಕಾರ ಇದೀಗ ರಾಜ್ಯ ಸರ್ಕಾರಗಳಿಗೆ ಮೌಲ್ಯವರ್ಧಿತ ತೆರಿಗೆ ಕಡಿತಗೊಳಿಸುವಂತೆ ಹೇಳಿದೆ.

    ಕಳೆದ 3 ತಿಂಗಳಿಂದ ನಾಗಾಲೋಟದಲ್ಲಿ ಸಾಗುತ್ತಿದ್ದ ತೈಲ ಬೆಲೆ ಇಳಿಕೆಗೆ ಅಬಕಾರಿ ಸುಂಕದಲ್ಲಿ 2 ರೂಪಾಯಿ ಕಡಿತ ಮಾಡಿದ್ದ ಕೇಂದ್ರ ಸರ್ಕಾರ ಈಗ ರಾಜ್ಯಗಳೂ ಶೇ.5ರಷ್ಟು ಕಡಿತಗೊಳಿಸಿ ಅಂತ ಹೇಳಿ ಜಾಣತನ ಮೆರೆದಿದೆ.

    ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ರಾಜ್ಯ ಸರ್ಕಾರಗಳು ವ್ಯಾಟ್ ಮೂಲಕ ಹೇರುತ್ತಿರುವ ತೆರಿಗೆಗಳನ್ನು ಇಳಿಕೆ ಮಾಡುವಂತೆ ಸೂಚಿಸಿದೆ. ಈ ಸಂಬಂಧ ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೆಂದ್ರ ಪ್ರಧಾನ್ ಕೂಡ ಪತ್ರ ಬರೆದಿದ್ದಾರೆ. ಅಬಕಾರಿ ಸುಂಕವನ್ನು ನಾವು ಇಳಿಕೆ ಮಾಡಿರೋದ್ರಿಂದ ಪೆಟ್ರೋಲ್ ಬೆಲೆ ಲೀಟರ್‍ಗೆ 2 ರೂಪಾಯಿ 50 ಪೈಸೆ ಹಾಗೂ ಡೀಸೆಲ್ ಬೆಲೆ 2 ರೂಪಾಯಿ 25 ಪೈಸೆ ಇಳಿಕೆಯಾಗಿದೆ. ನೀವು ಕೂಡ ವ್ಯಾಟ್ ರೂಪದಲ್ಲಿ ಹಾಕುತ್ತಿರುವ ತೆರಿಗೆಯನ್ನು ಇಳಿಕೆ ಮಾಡಿದ್ರೆ ಪೆಟ್ರೋಲ್ ಬೆಲೆ ಲೀಟರ್‍ಗೆ 5 ರೂಪಾಯಿ ಇಳಿಕೆಯಾಗಲಿದೆ ಅಂತ ಜಾರಿಕೊಂಡಿದ್ದಾರೆ. ಇಷ್ಟಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಾಕುತ್ತಿರುವ ತೆರಿಗೆಯನ್ನು ಇಳಿಸಿದ್ರೆ ಅರ್ಧಕರ್ಧ ಬೆಲೆ ಇಳಿಕೆಯಾಗುವುದಂತೂ ಸತ್ಯ.

    ಯಾವ ರಾಜ್ಯದಲ್ಲಿ ವ್ಯಾಟ್ ಎಷ್ಟಿದೆ?
    ಕರ್ನಾಟಕ: ಪೆಟ್ರೋಲ್ – ಶೇ.30, ಡೀಸೆಲ್ – ಶೇ.19
    ಮಹಾರಾಷ್ಟ್ರ: ಪೆಟ್ರೋಲ್ – ಶೇ.47.64, ಡೀಸೆಲ್ – ಶೇ.28.39
    ಆಂಧ್ರ ಪ್ರದೇಶ: ಪೆಟ್ರೋಲ್ – ಶೇ. 38.83, ಡೀಸೆಲ್ – ಶೇ. 30.82
    ಮಧ್ಯಪ್ರದೇಶ: ಪೆಟ್ರೋಲ್ – ಶೇ. 38.79, ಡೀಸೆಲ್ – ಶೇ. 30.22
    ತೆಲಂಗಾಣ: ಪೆಟ್ರೋಲ್ – ಶೇ. 35.20, ಡೀಸೆಲ್ – ಶೇ.27.00
    ಕೇರಳ: ಪೆಟ್ರೋಲ್ – ಶೇ. 34.06

    ಪೆಟ್ರೋಲ್ ಹಾಗೂ ಡೀಸೆಲ್ ಮೂಲಕ ಆದಾಯ ಸಂಗ್ರಹ ಮಾಡುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ದೇಶದಲ್ಲೇ ಐದನೇ ಸ್ಥಾನವಿದೆ. ದೇಶದಲ್ಲೇ ಅತಿ ಹೆಚ್ಚು ತೆರಿಗೆ ವಿಧಿಸೋ ಮಹಾರಾಷ್ಟ್ರ ಸರ್ಕಾರ ಆದಾಯ ಸಂಗ್ರಹದಲ್ಲಿ ಮೊದಲ ಸ್ಥಾನವಿದೆ. ಸೇವಾ ತೆರಿಗೆ, ಪ್ರವೇಶ ತೆರಿಗೆಗಳ ಮೂಲಕ ರಾಜ್ಯಗಳು ಸಂಗ್ರಹ ಮಾಡುವ ಹಣ ಈ ಕೆಳಗಿನಂತಿದೆ.

    ತೆರಿಗೆ ಸಂಗ್ರಹದಲ್ಲಿ ಯಾರು ಮೊದಲು:
    ನಂ.1 ಮಹಾರಾಷ್ಟ್ರ: 23,160 ಕೋಟಿ ರೂ.
    ನಂ.2 ಗುಜರಾತ್: 15,958 ಕೋಟಿ ರೂ.
    ನಂ.3 ಉತ್ತರಪ್ರದೇಶ: 15, 850 ಕೋಟಿ ರೂ.
    ನಂ.4 ತಮಿಳುನಾಡು: 12, 563 ಕೋಟಿ ರೂ.
    ನಂ.5 ಕರ್ನಾಟಕ: 11,103 ಕೋಟಿ ರೂ.

    ಯಾರಿಗೆ ಎಷ್ಟು?
    ಪೆಟ್ರೋಲ್ ಮೇಲೆ ಅಬಕಾರಿ ಸುಂಕ: 21.48 ಪೈಸೆ (ಲೀಟರ್‍ಗೆ)
    ಪೆಟ್ರೋಲ್ ಮೇಲೆ ವ್ಯಾಟ್: ಶೇ.27
    ಡೀಲರ್ಸ್‍ಗಳ ಕಮಿಷನ್: 3.23 (ಲೀಟರ್‍ಗೆ)

    ಡೀಸೆಲ್ ಮೇಲೆ ಅಬಕಾರಿ ಸುಂಕ: 17.33 (ಲೀಟರ್‍ಗೆ)
    ಡೀಸೆಲ್ ಮೇಲಿನ ವ್ಯಾಟ್: ಶೇ.27
    ಡೀಲರ್ಸ್‍ಗಳ ಕಮಿಷನ್: 2.17 (ಲೀಟರ್‍ಗೆ)