Tag: State Government

  • ಸಿದ್ದರಾಮಯ್ಯ ಹೇಳಿಕೆಯಿಂದ ಸರ್ಕಾರದ ಮೇಲೆ ಪರಿಣಾಮವಿಲ್ಲ – ಮಾಜಿ ಸಿಎಂಗೆ ಡಿಕೆಶಿ ನೇರ ಟಾಂಗ್

    ಸಿದ್ದರಾಮಯ್ಯ ಹೇಳಿಕೆಯಿಂದ ಸರ್ಕಾರದ ಮೇಲೆ ಪರಿಣಾಮವಿಲ್ಲ – ಮಾಜಿ ಸಿಎಂಗೆ ಡಿಕೆಶಿ ನೇರ ಟಾಂಗ್

    ಬೆಂಗಳೂರು: ದೋಸ್ತಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಡಿಸಿಎಂ ಪರಮೇಶ್ವರ್ ಟಾಂಗ್ ಕೊಟ್ಟ ಬೆನ್ನಲ್ಲೇ, ವೈದ್ಯಕೀಯ ಶಿಕ್ಷಣ, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸರ್ಕಾರದ ಕುರಿತ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನೇರವಾಗಿಯೇ ಟಾಂಗ್ ನೀಡಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹೇಳಿಕೆಯಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮವಿಲ್ಲ. ಇಲ್ಲಿ ಪಕ್ಷ ಮುಖ್ಯವೇ ಹೊರತು ವ್ಯಕ್ತಿ ಅಲ್ಲ. ಸಿದ್ದರಾಮಯ್ಯ ಹೇಳಿಕೆ ಅಧಿಕೃತವೂ ಅಲ್ಲ. ಅವರ ಹೇಳಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಅಗತ್ಯವಿಲ್ಲ. ಈ ಸರ್ಕಾರ ಐದು ವರ್ಷ ಇದ್ದೇ ಇರುತ್ತೆ. ಈ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ವೇಣುಗೋಪಾಲ್ ಅವರ ಸಮ್ಮುಖದಲ್ಲಿ ಸಹಿ ಮಾಡಿ ದಾಖಲೆ ಮಾಡಿದ್ದೇವೆ. ಅದ್ದರಿಂದ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಲಾಗಿದೆ. ಪಕ್ಷ ವಿರೋಧಿ ಹೇಳಿಕೆಗಳನ್ನ ಯಾರೇ ನೀಡಬಾರದು ಎಂದು ಹೇಳಿದರು.

    ಸಿದ್ದರಾಮಯ್ಯ ಅವರು ಲೋಕಾಭಿರಾಮವಾಗಿ ಹೇಳಿದ ಮಾತನ್ನು ಕಿಡಿಗೇಡಿಗಳು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಜೆಡಿಎಸ್ ಜತೆ ಕಾಂಗ್ರೆಸ್ ನಾಯಕರು ಅಶೋಕ ಹೊಟೇಲ್ ನಲ್ಲಿ ಮಾಡಿಕೊಂಡ ಒಪ್ಪಂದವೇ ಅಧಿಕೃತ. ಯಾರೂ ಕೂಡ ಪಕ್ಷದ ಬಗ್ಗೆಯಾಗಲಿ ಮೈತ್ರಿಯ ಬಗ್ಗೆಯಾಗಲಿ ಹೇಳಿಕೆ ನೀಡುವಂತಿಲ್ಲ. ಈ ಕುರಿತು ಯಾವುದೇ ಗೊಂದಲ ಸೃಷ್ಠಿ ಮಾಡಬೇಡಿ ಎಂದು ಮನವಿ ಮಾಡಿದರು.

    ಇದೇ ವೇಳೆ ಮಾಜಿ ಶಾಸಕ ಚೆಲುವರಾಯಸ್ವಾಮಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿ, ಮೈತ್ರಿ ಬೆಂಗಳೂರಿಗೆ ಸೀಮಿತ ಮಂಡ್ಯಕ್ಕಲ್ಲ ಎಂದು ಹೇಳಿಕೆ ನೀಡಿದ್ದೂ ಸರಿಯಲ್ಲ. ಚುನಾವಣಾ ಹೊಂದಾಣಿಕೆಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ ಎಂದರು.

    ಅಧಿವೇಶನಕ್ಕೆ ಗೈರು ಅಪಾರ್ಥ ಬೇಡ: ಜುಲೈ 5 ರಂದು ನೊಣವಿನಕೆರೆ ಗುರುಗಳ ಆಶ್ರಮದಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗಿದೆ. ಚುನಾವಣೆಗೆ ಮುನ್ನವೇ ಕಾರ್ಯಕ್ರಮ ನಿಗದಿಯಾಗಿತ್ತು. ರಾಜ್ಯಪಾಲರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಹಾಗಾಗಿ ಅಂದು ಬಜೆಟ್ ಮಂಡನೆ ಇದ್ದರೂ ಒಂದು ದಿನದ ಮಟ್ಟಿಗೆ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ರಾಜ್ಯಪಾಲರ ಜತೆಗೆ ಅಥವಾ ಹೆಲಿಕ್ಯಾಪ್ಟರ್ ನಲ್ಲಿ ಬಂದು ಹೋಗುವ ಪ್ರಯತ್ನ ಮಾಡುತ್ತೇನೆ. ಇದಕ್ಕೆ ಯಾವುದೇ ಅಪಾರ್ಥ ಕಲ್ಪಿಸುವುದು ಬೇಡ ಎಂದು ಮನವಿ ಮಾಡಿದರು.

    ತಿಪಟೂರು ತಾಲೂಕಿನ ನೊಣವಿನಕೆರೆಯ ಕಾಡುಸಿದ್ದೇಶ್ವರ ಸಚಿವ ಡಿಕೆಶಿ ಅವರ ಆರಾಧ್ಯ ದೈವವಾಗಿದೆ. ಯಾವುದೇ ಶುಭ ಕಾರ್ಯವನ್ನು ಕೈಗೊಳ್ಳುವ ಮೊದಲು ಅವರು ಕಾಡುಸಿದ್ದೇಶ್ವರ ಮಠದ ಶಿವಯೋಗಿ ಸ್ವಾಮೀಜಿಯವರ ಆಶೀರ್ವಾದ ಪಡೆಯುತ್ತಾರೆ.

    https://www.youtube.com/watch?v=NHZJagDSyjk

  • ಸಿದ್ದರಾಮಯ್ಯ ಆಪ್ತ ಅಧಿಕಾರಿಗಳ ವರ್ಗಾವಣೆ ಮಾಡಿದ ಸರ್ಕಾರ

    ಸಿದ್ದರಾಮಯ್ಯ ಆಪ್ತ ಅಧಿಕಾರಿಗಳ ವರ್ಗಾವಣೆ ಮಾಡಿದ ಸರ್ಕಾರ

    – ಸಿದ್ದರಾಮಯ್ಯಗೆ ಬಿಸಿ ಮುಟ್ಟಿಸಿದ್ರಾ ಎಚ್.ಡಿ.ಕೆ

    ಬೆಂಗಳೂರು: ಅತ್ತ ಧರ್ಮಸ್ಥಳದ ಶಾಂತಿವನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಅವಧಿ, ಉಳಿವಿನ ಬಗ್ಗೆ ಮಾತನಾಡುತ್ತಿದ್ದರೆ, ಇತ್ತ ಬೆಂಗಳೂರಿನಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಆಪ್ತ ಅಧಿಕಾರಿಗಳ ವರ್ಗಾವಣೆ ಮಾಡಿ ಎತ್ತಂಗಡಿ ಭಾಗ್ಯ ಕರುಣಿಸಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ, ಬೆಂಗಳೂರು ಡಿಸಿ ದಯಾನಂದ್ ಅವರನ್ನು ವರ್ಗಾವಣೆ ಮಾಡಲಾಗಿದೆ. ದಯಾನಂದ್ ಅವರ ಸ್ಥಾನಕ್ಕೆ ಬಿಎಂ ವಿಜಯಶಂಕರ್ ಅವರನ್ನು ನೇಮಕ ಮಾಡಿದ್ದಾರೆ. ಆದರೆ ದಯಾನಂದ್ ಅವರಿಗೆ ಮಾತ್ರ ರಾಜ್ಯ ಸರ್ಕಾರ ಯಾವುದೇ ಹುದ್ದೆಯನ್ನೇ ತೋರಿಸಿಲ್ಲ. ಸಿದ್ದರಾಮಯ್ಯ ಅವರ ಆಪ್ತ ವಲಯದ ಮತ್ತೊಬ್ಬ ಅಧಿಕಾರಿ ಶಂಕರಪ್ಪ ಅವರನ್ನು ಸಹ ವರ್ಗಾವಣೆ ಮಾಡಲಾಗಿದ್ದು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದ ಶಂಕರಪ್ಪ ಅವರನ್ನು ಸಿಎಡಿಎ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ. ಇನ್ನು ಇತರೇ 8 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದ್ದು, ಅಂತಿಮ ಪಟ್ಟಿ ಇಂತಿದೆ.

    ಎಂ.ಲಕ್ಷ್ಮೀನಾರಾಯಣ್- ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ
    ಇವಿ ರಮಣರೆಡ್ಡಿ – ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ
    ಅನಿಲ್ ಕುಮಾರ್- ಕಾರ್ಯದರ್ಶಿ, ವಸತಿ ಇಲಾಖೆ
    ನಿತೇಶ್ ಪಾಟೀಲ್ – ಹೆಚ್ಚುವರಿ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ
    ಕಪಿಲ್ ಮೋಹನ್ – ಡಿಜಿ, ಆಡಳಿತ ಮತ್ತು ತರಬೇತಿ ಕೇಂದ್ರ
    ಮುನೀಷ್ ಮೌದ್ಗಿಲ್ – ಆಯುಕ್ತರು, ಸರ್ವೆ ಇಲಾಖೆ
    ಬಿಎಸ್ ಶಂಕರಪ್ಪ – ನಿರ್ದೇಶಕರು, ಸಿಎಡಿಎ
    ನಳಿನಿ ಅತುಲ್ – ಜಂಟಿ ವ್ಯವಸ್ಥಾಪಕ ನಿರ್ದೇಶಕರು, ಕೆಯುಐಡಿಎಫ್‍ಸಿ

    ಈ ವರ್ಗಾವಣೆ ಪಟ್ಟಿ ಹೊರಬಿದ್ದ ಬಳಿಕ ಮೈತ್ರಿ ಸರ್ಕಾರದಲ್ಲಿ ಇನ್ನೇನೆಲ್ಲಾ ಬೆಳವಣಿಗೆಗಳಾಗುತ್ತೋ ಕಾದುನೋಡಬೇಕಿದೆ.

  • ಪಾರ್ಲಿಮೆಂಟ್ ಎಲೆಕ್ಷನ್‍ವರೆಗೂ ಅಷ್ಟೇ ಆಟ – ಶಾಂತಿವನದಲ್ಲಿ ಮಾಜಿ ಸಿಎಂ ಸಿದ್ದು ಸಿಡಿಗುಂಡು ?

    ಪಾರ್ಲಿಮೆಂಟ್ ಎಲೆಕ್ಷನ್‍ವರೆಗೂ ಅಷ್ಟೇ ಆಟ – ಶಾಂತಿವನದಲ್ಲಿ ಮಾಜಿ ಸಿಎಂ ಸಿದ್ದು ಸಿಡಿಗುಂಡು ?

    ಬೆಂಗಳೂರು: ಲೋಕಸಭಾ ಚುನಾವಣೆಯ ಮುಗಿದ ಬಳಿಕ ಸರ್ಕಾರದ ಕುರಿತು ಏನಾಗುತ್ತೇ ಎಂದು ನೋಡೋಣ ಎಂದು ಮಾಜಿ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.

    ಧರ್ಮಸ್ಥಳದ ಶಾಂತಿವನದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರದ ಅವಧಿಯ ಕುರಿತು ಮಾತನಾಡಿರುವ ವಿಡಿಯೋ ಲಭ್ಯವಾಗಿದೆ. ವಿಡಿಯೋದಲ್ಲಿ ಸಿಎಂ ಸಿದ್ದರಾಮಯ್ಯ ಅವರು ವ್ಯಕ್ತಿಯೊಬ್ಬರೊಂದಿಗೆ ಮಾತುಕತೆ ನಡೆಸುತ್ತಿದ್ದು, ಈ ವೇಳೆ ವ್ಯಕ್ತಿ ಸರ್ಕಾರದ ಅವಧಿಯ ಕುರಿತು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಪಾರ್ಲಿಮೆಂಟ್ ಎಲೆಕ್ಷನ್ ವರೆಗೂ ಸರ್ಕಾರ ಇರುತ್ತೆ. ಪಾರ್ಲಿಮೆಂಟ್ ಎಲೆಕ್ಷನ್ ಬಳಿಕ ಏನು ಬೆಳವಣಿಗೆ ಆಗುತ್ತೆ ನೋಡೋಣ ಎಂದು ಹೇಳಿದ್ದಾರೆ.

    ಸದ್ಯ ಸಿದ್ದರಾಮಯ್ಯ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಿಎಂ ಕುಮಾರಸ್ವಾಮಿ ಅವರ ಸರ್ಕಾರದ ಆಯಸ್ಸು ಒಂದೇ ವರ್ಷವೇ ಎಂಬ ಪ್ರಶ್ನೆ ಮೂಡಿದೆ. ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದ್ಕಡೆ, ಸಿಎಂ ಕುಮಾರಸ್ವಾಮಿ ಮತ್ತೊಂದು ಕಡೆ, ಅವರೇ ಬಡಿದಾಡಿಕೊಳ್ಳುತ್ತಿದ್ದಾರೆ. ನಮಗೂ ಇದಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

    ಇದೇ ವೇಳೆ ಅಮಿತ್ ಶಾ ಭೇಟಿ ಕುರಿತು ವಿವರಿಸಿದ ಬಿಎಸ್‍ವೈ, ನಾನು ಮತ್ತೆ ಬಸವರಾಜ್ ಬೊಮ್ಮಾಯಿ ಅವರನ್ನು ಅಮಿತ್ ಶಾ ಅವರನ್ನು ಭೇಟಿಯಾಗಲು ಹೋಗಿದ್ದೆವು. ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಇದೇ ತಿಂಗಳ 29ರಂದು ರಾಜ್ಯ ಕಾರ್ಯಕಾರಣಿ ಸಭೆ ಕರೆಯಲಿದ್ದೇವೆ. ಹೀಗಾಗಿ ಅದಕ್ಕಾಗಿ ಪೂರ್ವಭಾವಿ ಸಿದ್ಧತೆ ಹಾಗೂ ಇತರ ಕೆಲವೊಂದಷ್ಟು ವಿಚಾರಗಳ ಕುರಿತು ಚರ್ಚಿಸಿದ್ದೇವೆ. ಮಾತ್ರವಲ್ಲದೇ ಸಾಧ್ಯವಾದ್ರೆ ಕಾರ್ಯಕ್ರಮಕ್ಕೆ ತಾವೇ ಬರಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ ಅಂತ ಹೇಳಿದ್ದರು.

  • ನಿಮ್ಮತ್ರ ಯಾವ್ ಡೈರಿ ಇದೆ ಅವನ್ನ ರಿಲೀಸ್ ಮಾಡಿ ತನಿಖೆ ಮಾಡಿಸಿ ಸ್ವಾಮಿ – ಡಿಕೆಶಿಗೆ ಬಿಎಸ್‍ವೈ ಸವಾಲ್

    ನಿಮ್ಮತ್ರ ಯಾವ್ ಡೈರಿ ಇದೆ ಅವನ್ನ ರಿಲೀಸ್ ಮಾಡಿ ತನಿಖೆ ಮಾಡಿಸಿ ಸ್ವಾಮಿ – ಡಿಕೆಶಿಗೆ ಬಿಎಸ್‍ವೈ ಸವಾಲ್

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಡೈರಿ ಪಾಲಿಟಿಕ್ಸ್ ತೀವ್ರಗೊಂಡಿದ್ದು, ನಿಮ್ಮ ಬಳಿ ಯಾವ ಡೈರಿಗಳನ್ನು ಬಿಡುಗಡೆ ಮಾಡಿ ಅವುಗಳನ್ನು ರಾಜ್ಯ ಸರ್ಕಾರದ ಬಳಿ ಇರುವ ಸಿಐಡಿ, ಎಸಿಬಿ ಸಂಸ್ಥೆಗಳಿಂದ ತನಿಖೆ ಮಾಡಿಸಿ ಎಂದು ವೈದ್ಯಕೀಯ ಶಿಕ್ಷಣ ಮತ್ತು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸವಾಲು ಹಾಕಿದ್ದಾರೆ.

    ನಗದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಡಿಕೆ ಶಿವಕುಮಾರ್ ಹೇಳಿಕೆ ಕುರಿತು ಯಾವುದೇ ಕಲ್ಪನೆ ಮಾಡಿಕೊಳ್ಳಲು ಹೋಗಲ್ಲ. ಅದೇನು ಡೈರಿಗಳಿದೆ ಬಿಡುಗಡೆ ಮಾಡಿ. ನನಗೂ ಕುತೂಹಲವಿದೆ. ನಿಮ್ಮ ಬಳಿಯೇ ಇರುವ ಸಿಐಡಿ, ಎಸಿಬಿ ಸಂಸ್ಥೆಗಳಿಂದ ತನಿಖೆ ನಡೆಸಿ ಎಂದು ಬಹಿರಂಗ ಸವಾಲು ಎಸೆದಿದ್ದಾರೆ.

    ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ 4 ವರ್ಷದ ಸಾಧನೆಯ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಅಭಿವೃದ್ಧಿ ಕಾರ್ಯವನ್ನು ಹೊಗಳಿದರು. ದೇಶದಲ್ಲಿ ವಿರೋಧ ಪಕ್ಷಗಳು ಪ್ರಧಾನಿ ಮೋದಿ ಅವರ ಭಯದಿಂದ ಒಂದಾಗುತ್ತಿದ್ದು, ಇದರಿಂದ ಯಾವುದೇ ಪ್ರಯೋಜನವಿಲ್ಲ ಜನರ ಬೆಂಬಲ ಮೋದಿ ಪರ ಇದೆ ಎಂದರು. ಸದ್ಯ ಪಕ್ಷದ ಕಾರ್ಯಕರ್ತರು ಪ್ರಧಾನಿಗಳ ಸಾಧನೆಗಳನ್ನು ಜನರಿಗೆ ತಿಳಿಸಿ, ಇದಕ್ಕಾಗಿ ಕಿರು ಪುಸ್ತಕವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದರು.

    ಕೊಟ್ಟ ಭರವಸೆ ಈಡೇರಿಸಿ: ಸಿಎಂ ಕುಮಾರಸ್ವಾಮಿ ಅವರು ರೈತರಿಗೆ ಭರವಸೆ ಕೊಟ್ಟಂತೆ ನಡೆಯಬೇಕು. 24 ಗಂಟೆಯೊಳಗೆ ಕಾರ್ಯರೂಪಕ್ಕೆ ತರುವ ನಿರೀಕ್ಷೆ ಇತ್ತು. ಇನ್ನೂ ಯಾವ ಯೋಜನೆಯನ್ನು ಕಾರ್ಯರೂಪ ಮಾಡಿಲ್ಲ. ನಾವು ಕಾದು ನೋಡ್ತೇವೆ. ಹೀಗಾಗಿ 15 ದಿನಗಳಿಂದ ನಾನು ರಾಜ್ಯ ಸರ್ಕಾರದ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದರು.

    ಕಲಾಂ ಹೆಸರಿಡಲಿ: ಹಜ್ ಭವನ ನಿರ್ಮಾಣದ ಮಾಡಿದ್ದು ನಮ್ಮ ಅವಧಿಯಲ್ಲಿ, ಭವನಕ್ಕೆ ಬೇಕಾದರೆ ಡಾ ಅಬ್ದುಲ್ ಕಲಾಂ ಅವರ ಹೆಸರು ಇಡಲಿ. ಯಾವುದೇ ಕಾರಣಕ್ಕೂ ಟಿಪ್ಪು ಸುಲ್ತಾನ್ ಹೆಸರು ಇಡುವುದು ಬೇಡ. ರಾಜ್ಯದಲ್ಲಿ ಇರುವ ಶಾಂತಿ ಕದಡುವುದು ಬೇಡ ಎಂಬ ಸಲಹೆ ನೀಡಿದರು.

    ಐಟಿ ದಾಳಿ ಬಳಿಕ ನೋಟಿಸ್ ಪಡೆದು ವಿಚಾರಣೆ ಎದುರಿಸಿದ್ದ ಸಚಿವ ಡಿಕೆ ಶಿವಕುಮಾರ್ ಅವರು ಐಟಿ ದಾಳಿ ವೇಳೆ ಸಿಕ್ಕ ಡೈರಿ ಕುರಿತು ಪ್ರತಿಕ್ರಿಯೆ ನೀಡಿದ್ದರು. ನನ್ನ ಬಳಿಯೂ ಕೆಲವರ ಡೈರಿಗಳಿವೆ. ಯಾರು? ಯಾರಿಗೆ? ಏನೇನು? ಬರೆದಿದ್ದಾರೆ ಎಂಬುವುದ ಸಹ ಗೊತ್ತಿದೆ. ಕೊನೆಯಲ್ಲಿ ಏನೂ ಆಗಲ್ಲವೆಂದಾಗ ಅದನ್ನು ಬಹಿರಂಗ ಮಾಡುತ್ತೇನೆ. ನನ್ನನ್ನ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಡಿಕೆ ಶಿವಕುಮಾರ್ ಯಾವುದಕ್ಕೂ ಹೆದರುವುದಿಲ್ಲ. ನಾನು ಕಾನೂನಿಗೆ ಬೆಲೆ ಕೊಡುವವನು ಎಂದು ಪ್ರತಿಕ್ರಿಯಿಸಿದ್ದರು.

  • ಇಂದಿರಾ ಗಾಂಧಿ ಮುಕ್ತ ವಿವಿ ಪರೀಕ್ಷೆ ಬರೆದ 100ಕ್ಕೂ ಹೆಚ್ಚು ನಕ್ಸಲರು!

    ಇಂದಿರಾ ಗಾಂಧಿ ಮುಕ್ತ ವಿವಿ ಪರೀಕ್ಷೆ ಬರೆದ 100ಕ್ಕೂ ಹೆಚ್ಚು ನಕ್ಸಲರು!

    ಭುವನೇಶ್ವರ: ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲು ಇಚ್ಛಿಸಿರುವ 100 ಕ್ಕೂ ಅಧಿಕ ನಕ್ಸಲರು ಪೊಲೀಸರಿಗೆ ಶರಣಾಗಿ ತಮ್ಮ ಶಿಕ್ಷಣ ಮುಂದುವರಿಸಲು ಇಂದಿರಾ ಗಾಂಧಿ ಮುಕ್ತ ವಿವಿ (ಇಗ್ನೋ) ನಡೆಸುವ ಪರೀಕ್ಷೆಯನ್ನು ಬರೆದಿದ್ದಾರೆ.

    ಇವರೆಗೂ ಒಡಿಸ್ಸಾದಲ್ಲಿ 120ಕ್ಕೂ ಅಧಿಕ ನಕ್ಸಲರು ಪೊಲೀಸರಿಗೆ ಶರಣಾಗಿದ್ದು, ಅದರಲ್ಲಿ 107 ಮಂದಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಜೂನ್ 21 ರಂದು ನಡೆದಿದ್ದು, ಬ್ಯಾಚುಲರ್ ಪ್ರಿಪರೇಟರಿ ಯೋಜನೆ (ಬಿಬಿಪಿ) ಅಡಿಯಲ್ಲಿ ಎಲ್ಲರಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಈ ಪರೀಕ್ಷೆಯಲ್ಲಿ ಅವರು ಉತ್ತೀರ್ಣರಾದರೆ ಪದವಿಗೆ ಸೇರಲು ಅರ್ಹತೆ ಪಡೆಯುತ್ತಾರೆ ಎಂದು ಪರೀಕ್ಷಾ ಅಧಿಕಾರಿಗಳು ತಿಳಿಸಿದ್ದಾರೆ.

    ಯುವ ಜನತೆ ಉತ್ತಮ ಜೀವನ ರೂಪಿಸಿಕೊಳ್ಳಲು ಅವಕಾಶ ನೀಡುವ ಉದ್ದೇಶಕ್ಕಾಗಿ ಜಿಲ್ಲಾ ಆಡಳಿತವೇ ಅಭ್ಯರ್ಥಿಗಳ ಪರೀಕ್ಷಾ ವೆಚ್ಚವನ್ನು ಪಾವತಿಸಿತ್ತು. ಪರೀಕ್ಷೆ ಎದುರಿಸಿದ ಯುವಕ ಈ ವೇಳೆ ಪ್ರತಿಕ್ರಿಯೆ ನೀಡಿದ್ದು, ತಾವು ಸಮಾಜದ ಒಂದು ಭಾಗವಾಗಿರಲು ಇಚ್ಛಿಸುತ್ತೇವೆ. ಅದ್ದರಿಂದಲೇ ಪರೀಕ್ಷೆ ಬರೆಯುತ್ತಿದ್ದೇವೆ ಎಂದು ತಿಳಿಸಿದರು.

    ಛತ್ತೀಸ್‍ಗಢ ಹಾಗೂ ಒಡಿಶಾ ರಾಜ್ಯಗಳಲ್ಲಿ ನಕ್ಸಲ್ ಸಮಸ್ಯೆ ಹೆಚ್ಚಾಗಿದ್ದು, ಇತ್ತೀಚಿಗೆ ಹಲವರು ಪೊಲೀಸರಿಗೆ ಶರಣಾಗಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದರು. ಸದ್ಯ ಇವರಿಗೆ ಪುನರ್ ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಪೂರಕ ಯೋಜನೆಗಳನ್ನು ರೂಪಿಸಿದೆ. ಆದರೆ ಕಳೆದ ಕೆಲ ದಿನಗಳ ಹಿಂದೆ ಛತ್ತೀಸ್‍ಗಢದ ಸುಕ್ಮಾ ಪ್ರದೇಶದಲ್ಲಿ ಸಿಆರ್ ಪಿಎಫ್ ಯೋಧರ ವಾಹನವನ್ನ ನಕ್ಸಲರು ಬಾಂಬ್ ಇಟ್ಟು ಸ್ಫೋಟಿಸಿದ್ದರು. ಈ ವೇಳೆ 9 ಯೋಧರು ಮೃತಪಟ್ಟಿದ್ದರು. ಈ ಘಟನೆ ಬಳಿಕ ಕೇಂದ್ರ ಸರ್ಕಾರ ನಕ್ಸಲ್ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿತ್ತು.

  • ಶಾಸಕರ ಭವನದಲ್ಲಿ ಶಿಸ್ತು ಕಾಪಾಡಲು ಸ್ಪೀಕರ್ ಖಡಕ್ ವಾರ್ನಿಂಗ್ – ಹೊಸ ನಿಯಾಮಾವಳಿ ಜಾರಿ

    ಶಾಸಕರ ಭವನದಲ್ಲಿ ಶಿಸ್ತು ಕಾಪಾಡಲು ಸ್ಪೀಕರ್ ಖಡಕ್ ವಾರ್ನಿಂಗ್ – ಹೊಸ ನಿಯಾಮಾವಳಿ ಜಾರಿ

    ಬೆಂಗಳೂರು: ಶಾಸಕರ ಖಾಸಗಿತನ ಹಾಗೂ ಶಾಸಕರ ಭವನದ ದುರ್ಬಳಕೆ ತಡೆಯಲು ಸ್ಪೀಕರ್ ರಮೇಶ್ ಕುಮಾರ್ ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ.

    ಈ ಕುರಿತು ಮಾಹಿತಿ ನೀಡಿದ ಅವರು, ಶಾಸಕರ ಭವನದ ಭೇಟಿಯ ಸಮಯವನ್ನು ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ನಿಗಧಿ ಮಾಡಲಾಗಿದೆ. ಈ ಸಮಯ ಬಿಟ್ಟು ಶಾಸಕರ ಭವನದಲ್ಲಿ ಶಾಸಕರ ಕುಟುಂಬ ಸದಸ್ಯರು ಬಿಟ್ಟು ಇನ್ನು ಯಾರಿಗೂ ಪ್ರವೇಶವಿಲ್ಲ ಎಂದು ಹೇಳಿದರು.

    ಹೊಸ ನಿಯಾಮವಳಿ ಅನ್ವಯ ಪಾಸ್ ಹೊರತಾಗಿ ಬರುವ ಖಾಸಗಿ ವಾಹನಗಳಿಗೂ ನಿರ್ಬಂಧ ಹೇರಲಾಗುತ್ತದೆ. ಶಾಸಕರ ಭವನ ದುರ್ಬಳಕೆ ಆಗುತ್ತಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಇಂತಹ ನಿರ್ಧಾರ ಮಾಡಿದ್ದು, ಇಂದಿನಿಂದಲೇ ಈ ನಿಯಮ ಜಾರಿಗೆ ಬರುತ್ತೆ. ಇನ್ನು ಮುಂದೆ ಇಂತಹವುಗಳಿಗೆ ಹೇಗೆ ಕಡಿವಾಣ ಹಾಕುತ್ತೇನೆ ನೋಡಿ ಎಂದು ಹೇಳಿದರು.

    ಇದೇ ವೇಳೆ ಸರ್ಕಾರದ ಗೊಂದಲಗಳ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರಮೇಶ್ ಕುಮಾರ್ ಅವರು, ನಾನು ಸ್ಪೀಕರ್ ಆಗಿದ್ದು ಸದನ ನಡೆಸುವುದು ನನ್ನ ಕೆಲಸ ಅಷ್ಟೇ. ಆದರೆ ಶಾಸಕರ ಹಾಜರಾತಿಗಾಗಿ ಬಯೋ ಮೆಟ್ರಿಕ್ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್ ಈ ಬಗ್ಗೆ ಯಾವುದೇ ಚಿಂತನೆ ಇಲ್ಲ. ಈಗಲೇ ಶಾಸಕರು ಬರೋದಿಲ್ಲ ಅಂತ ಹೇಳೋದು ಬೇಡ. ಶಾಸಕರು ಎಂಪ್ಲಾಯ್ ಗಳು ಅಲ್ಲ. ಅವರು ಜನ ಪ್ರತಿನಿಧಿಗಳು ಎಂದು ಹೇಳುವ ಮೂಲಕ ಬಯೋ ಮೆಟ್ರಿಕ್ ವ್ಯವಸ್ಥೆ ಜಾರಿಯನ್ನು ವಿರೋಧಿಸಿದರು.

  • ಹೊಸ ಬಜೆಟ್ ಮಂಡನೆಗೆ ರಾಹುಲ್ ವಿರೋಧವಿಲ್ಲ: ಎಚ್‍ಡಿಕೆ

    ಹೊಸ ಬಜೆಟ್ ಮಂಡನೆಗೆ ರಾಹುಲ್ ವಿರೋಧವಿಲ್ಲ: ಎಚ್‍ಡಿಕೆ

    ನವದೆಹಲಿ: ಹೊಸ ಸರ್ಕಾರ ಬಂದಾಗ ಹೊಸ ಬಜೆಟ್ ಮಂಡಿಸುವುದು ವಾಡಿಕೆ. ಹೊಸ ಬಜೆಟ್ ಮಂಡನೆ ಮಾಡಲು ಎಐಸಿಸಿ ರಾಹುಲ್ ಗಾಂಧಿ ಅವರ ವಿರೋಧ ಇಲ್ಲ ಎಂದು ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಹೊಸ ಬಜೆಟ್ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಭೇಟಿ ವೇಳೆ ಸಮ್ಮಿಶ್ರ ಸರ್ಕಾರದ ಆಡಳಿತ ಬಗ್ಗೆ ಚರ್ಚೆ ಮಾಡಿದ್ದು, ರೈತರ ಸಾಲ ಮನ್ನಾ ವಿಚಾರದಲ್ಲಿ ರಾಹುಲ್ ಗಾಂಧಿ ಸಲಹೆ ಪಡೆದಿದ್ದೇನೆ. ಆದರೆ ಈ ವೇಳೆ ಯಾವುದೇ ನಾಯಕರ ಬಗ್ಗೆ ವೈಯಕ್ತಿಕವಾಗಿ ಚರ್ಚೆ ಮಾಡಿಲ್ಲ ಎಂದು ತಿಳಿಸಿದರು.

    ಸಿದ್ದರಾಮಯ್ಯ ಕುರಿತು ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಬಜೆಟ್ ಮಂಡನೆಗೂ ಸಂಪೂರ್ಣ ಒಪ್ಪಿಗೆ ಸಿಕ್ಕಿದೆ. ರಾಜಕೀಯವಾಗಿ ಕೆಲ ವಿಚಾರಗಳನ್ನು ಚರ್ಚೆ ಮಾಡಿದ್ದು, ಎಲ್ಲಾ ವಿಷಯಗಳನ್ನು ಮಾಧ್ಯಮದ ಮುಂದೇ ಬಹಿರಂಗ ಪಡಿಸಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಪಡೆದರೇ ದೇಶದ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ. ಕರ್ನಾಟದ ರೈತರ ಸಾಲಮನ್ನಾ ಮಾಡಲು ರಾಹುಲ್ ಗಾಂಧಿ ಈಗಾಗಲೇ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.

    ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಪ್ರಚೋದಿತ ಹೇಳಿಕೆ ಕೊಡದಂತೆ ಸಿಎಂ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

    ಪ್ರಕರಣದ ತನಿಖೆ ನಡೆಯುತ್ತಿದೆ, ಸತ್ಯಾಂಶ ಹೊರ ಬರುವವರೆಗೂ ಸಮಧಾನ ಇರಲಿ. ಪ್ರಚೋದಿತ ಹೇಳಿಕೆ ಮೂಲಕ ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಬಾರದು. ಶಾಂತಿ ಕದಡಿದರೆ ಎಂತಹ ದೊಡ್ಡ ವ್ಯಕ್ತಿಯಾದರೂ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ನಿರ್ದೇಶನ ನೀಡುವುದಾಗಿ ಎಚ್ಚರಿಕೆ ನೀಡಿದರು.

    https://www.facebook.com/CMofKarnataka/photos/a.720456501336150.1073741828.708459142535886/1712343435480780/?type=3&theater

  • ಸಿಎಂ ಕುಮಾರಸ್ವಾಮಿ ಪ್ರಧಾನಿ ಮೋದಿ ಭೇಟಿ – ಸಾಲಮನ್ನಾ, ಕಾವೇರಿ ಪ್ರಾಧಿಕಾರ ರಚನೆ ಬಗ್ಗೆ ಚರ್ಚೆ

    ಸಿಎಂ ಕುಮಾರಸ್ವಾಮಿ ಪ್ರಧಾನಿ ಮೋದಿ ಭೇಟಿ – ಸಾಲಮನ್ನಾ, ಕಾವೇರಿ ಪ್ರಾಧಿಕಾರ ರಚನೆ ಬಗ್ಗೆ ಚರ್ಚೆ

    ನವದೆಹಲಿ: ಬ್ಯಾಂಕ್ ಪರಿಸ್ಥಿತಿ ಉತ್ತಮ ಪಡಿಸಲು ಕೇಂದ್ರ ಸರ್ಕಾರ 2 ಲಕ್ಷ ಕೋಟಿ ರೂ. ಹಣವನ್ನು ಬಾಂಡ್ ಮೂಲಕ ಪಡೆಯುವ ನಿರ್ಧಾರ ಮಾಡಿದೆ. ಈ ಹಣದಲ್ಲಿ ರೈತರ ಸಾಲಮನ್ನಾ ಮಾಡಲು ನೆರವು ನೀಡಲು ಕೇಂದ್ರಕ್ಕೆ ಮನವಿ ಮಾಡಿದ್ದಾಗಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮ್ಮ ಭೇಟಿ ವೇಳೆ ಚರ್ಚೆ ನಡೆಸಿದ ಅಂಶಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ಪ್ರಮುಖವಾಗಿ ಕರ್ನಾಟಕದ ಜನರ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರದ ಸಚಿವರ ಗಮನ ಸೆಳೆಯಲು ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.

    ಗೃಹ ಸಚಿವರ ಭೇಟಿ ವೇಳೆ ರಾಜ್ಯಕ್ಕೆ ಪೊಲೀಸ್ ಇಲಾಖೆ ಭದ್ರತೆಯ ಕೆಲವು ಹೆಚ್ಚುವರಿ ಯೋಜನೆ ಜಾರಿ ತರಲು ಆರ್ಥಿಕ ನೆರವು ಕೇಳಲಾಗಿದೆ. ಪ್ರಕೃತಿ ವಿಕೋಪಕ್ಕೆ ಎನ್‍ಡಿಆರ್ ಎಫ್ ಮೂಲಕ ರಾಜ್ಯಕ್ಕೆ ಕಡಿಮೆ ಹಣ ಬಿಡುಗಡೆ ಆಗಿರುವ ಕುರಿತು ಗಮನ ಸೆಳೆದಿದ್ದು, ಇತರೆ ರಾಜ್ಯಗಳಿಗೆ ನೀಡಿರುವ ಅನುದಾನದ ಪ್ರಮಾಣವನ್ನು ತಿಳಿಸಿ ಚರ್ಚೆ ನಡೆಸಿದ್ದೇವೆ. ಈ ಕುರಿತು ಸಚಿವರು ಆಗಿರುವ ವ್ಯತ್ಯಾಸವನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಅಶ್ವಾಸನೆ ನೀಡಿದ್ದಾಗಿ ಸ್ಪಷ್ಟಪಡಿಸಿದರು.

    ಬಳಿಕ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ಭೇಟಿ ಮಾಡಿ ರಾಜ್ಯದ ರಸ್ತೆಗಳ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಿದ್ದಾಗಿ ಹಾಗೂ ರಾಜ್ಯಕ್ಕೆ 34 ಸಾವಿರ ಕೋಟಿ ರೂ. ಯೋಜನೆಗೆ ಒಪ್ಪಿಗೆ ಸಿಕ್ಕಿರುವುದಾಗಿ ತಿಳಿಸಿದರು. ಅಲ್ಲದೇ ಚರ್ಚೆ ವೇಳೆ ಸಾಗರ, ಸಿಗಂಧೂರು, ಹಾಸನ, ತುಮಕೂರು ಹೆದ್ದಾರಿ ಸೇರಿದಂತೆ ಹಲವು ಹೊಸ ಯೋಜನೆಗಳಿಗೆ ಅನುದಾನಕ್ಕೆ ಮನವಿ ಮಾಡಿದ್ದಾಗಿ ತಿಳಿಸಿದರು.

    ಕಾವೇರಿ ಪ್ರಾಧಿಕಾರ ರಚನೆ ಗೊಂದಲ: ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಕೇದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿರುವ ಲೋಪದೋಷಗಳನ್ನು ಹೆಸರಿಸಿ ಗಮನ ಸೆಳೆದಿರುವುದಾಗಿ ತಿಳಿಸಿದರು. ಪ್ರಮುಖವಾಗಿ ಪ್ರತಿ ಹತ್ತು ದಿನಕ್ಕೆ ಡ್ಯಾಂ ನೀರು ಅಳತೆ ಮಾಡುವುದು, ನಮ್ಮ ರೈತರು ಯಾವ ಬೆಳೆ ಬೆಳೆಯಬೇಕು ಎಂಬುದು ಪ್ರಾಧಿಕಾರ ನಿರ್ಧಾರ ಮಾಡಲಿರುವ ಅವೈಜ್ಞಾನಿಕ ಅಂಶ ಹಾಗೂ ಮಳೆ ಕೊರತೆ ಆಧರಿಸಿ ನೀರು ಬಿಡುವ ವ್ಯವಸ್ಥೆ, ಬೆಳೆ ಬೆಳೆಯುವ ವಿಚಾರಕ್ಕೆ ಸಂಬಂಧಿಸಿದಂತೆ ರೈತರ ಮನವೊಲಿಸುವುದು ಕಷ್ಟ ಎಂಬುವುದನ್ನು ಮನವರಿಕೆ ಮಾಡಿದ್ದಾಗಿ ತಿಳಿಸಿದರು. ಈ ಕುರಿತು ಇನ್ನೊಂದು ಸಭೆ ಸೇರಿ ಮಾತುಕತೆ ನಡೆಸುವ ಭರವಸೆ ನೀಡಿದ್ದಾರೆ. ಅಧಿಸೂಚನೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಚರ್ಚೆ ಆಗಬೇಕಿತ್ತು. ಕೆಲ ಬದಲಾವಣೆ ಇದ್ದಲ್ಲಿ ಅಲ್ಲಿ ಚರ್ಚೆ ಬಳಿಕ ಬದಲಾಗಲಿಸಲಾಗುವುದು ಎಂದು ತಿಳಿಸಿದ್ದಾಗಿ ವಿವರಿಸಿದರು.

  • ರೈತರ ಸಾಲ ಮನ್ನಾ: ಕೇಂದ್ರದ ಸಹಕಾರ ಕೇಳಿದ ಸಿಎಂ ಕುಮಾರಸ್ವಾಮಿ

    ರೈತರ ಸಾಲ ಮನ್ನಾ: ಕೇಂದ್ರದ ಸಹಕಾರ ಕೇಳಿದ ಸಿಎಂ ಕುಮಾರಸ್ವಾಮಿ

    ನವದೆಹಲಿ: ಕರ್ನಾಟಕದಲ್ಲಿ 85 ಲಕ್ಷ ಜನ ರೈತರು ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆ. ರೈತರ ಹಿತಾಸಕ್ತಿ ಕಾಪಾಡಲು ರಾಜ್ಯ ಸರ್ಕಾರ ಸಿದ್ಧವಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಬೆಂಬಲ ನೀಡಬೇಕು ಎಂದು ಸಿಎಂ ಎಚ್‍ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

    ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ನೀತಿ ಆಯೋಗದ ಸಭೆಯ ಮಾತನಾಡಿದ ಅವರು, ಕರ್ನಾಟಕದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊದಲ ಬಾರಿಗೆ ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಿದ್ದೇನೆ. ಹೊಸ ಸರ್ಕಾರ ಜನರ ನಿರೀಕ್ಷೆಗಳನ್ನು ಈಡೇರಿಸಲಿದೆ. ಈ ಬಗ್ಗೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲಿದ್ದೇವೆ. ಕೇಂದ್ರ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಂಸ್ಥೆಗಳ ಬೆಂಬಲ ರಾಜ್ಯಕ್ಕೆ ಬೇಕು. ರಾಜ್ಯದಲ್ಲಿ 85 ಲಕ್ಷ ಮಂದಿ ರೈತರು ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆ. ಬರಗಾಲದ ಕಾರಣದಿಂದ ರೈತರು ಮತ್ತಷ್ಟು ತೊಂದರೆ ಅನುಭವಿಸಿದ್ದಾರೆ. ಹೀಗಾಗಿ ರಾಜ್ಯಗಳಿಗೆ ಕೇಂದ್ರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

    ಇದೇ ವೇಳೆ ನಾವು ಹಲವು ರಾಜಕೀಯ ಸಿದ್ಧಾಂತಗಳನ್ನು ಗೌರವಿಸುತ್ತೇವೆ ಎಂದು ಹೇಳಿದ ಎಚ್‍ಡಿಕೆ, ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರಕಾರದ ಜೊತೆ ಕೈ ಜೋಡಿಸುತ್ತೇವೆ. ಕೇಂದ್ರ ಸರ್ಕಾರಕ್ಕೆ ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣ ಸಹಕಾರ ನೀಡುತ್ತೇವೆ. ಕೃಷಿ ವಲಯದಲ್ಲಿ ದೇಶ ಸಮಸ್ಯೆ ಎದುರಿಸುತ್ತಿದ್ದು, ಹಳ್ಳಿಗಾಡಿನಲ್ಲಿ 70% ರಷ್ಟು ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ಕೃಷಿ ಕ್ಷೇತ್ರದ ಬೆಳವಣಿಗೆ ರೈತರಿಗೆ ಲಾಭದಾಯಕ ಆದಾಯ ಸಿಗುತ್ತಿಲ್ಲ. ಗ್ರಾಮೀಣ ಭಾಗದ ಋಣಭಾರ ಸರ್ಕಾರದ ಮೇಲಿದೆ. ಈ ಬಿಕ್ಕಟ್ಟು ನಿಭಾಯಿಸಲು ಒಟ್ಟಾಗಿ ಕೆಲಸ ಮಾಡಬೇಕಿದೆ. ರೈತರ ಋಣಭಾರ ತಗ್ಗಿಸಲು ಗಣನೀಯ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಸಿದ್ಧವಿದೆ. ರಾಜ್ಯ ಸರ್ಕಾರಕ್ಕೆ ಪ್ರಯತ್ನಕ್ಕೆ ಕೇಂದ್ರ ಸಹಕಾರ ನೀಡಬೇಕು ಎಂದರು.

    ಕಳೆದ 16 ವರ್ಷಗಳಲ್ಲಿ 13 ವರ್ಷ ಬರಗಾಲ ಎದುರಿಸಿದ್ದೇವೆ. ಪ್ರಾಕೃತಿಕ ವಿಕೋಪಗಳನ್ನು ಗಮನದಲ್ಲಿರಿಸಿ ನೀತಿ ರಚಿಸಬೇಕಿದೆ. ಜಲ ಸಂರಕ್ಷರಣೆ ಉತ್ತೇಜಿಸುವ ಕೆಲಸ ನೀತಿ ಆಯೋಗ ಮಾಡಬೇಕಿದೆ. ರಾಜ್ಯದಲ್ಲಿ ನೀರಿನ ಸಮಸ್ಯೆ ನೀಗಿಸಲು ಕೆರೆ ಸಂಜೀವಿನಿ ಯೋಜನೆ ಹಮ್ಮಿಕೊಂಡಿದ್ದೇವೆ. ಜಲ ದಶಕ ಎಂದು ಪರಿಗಣಿಸಿ ಸಂರಕ್ಷಣೆಗೆ ಪಣತೊಡಬೇಕಿದೆ. ಕೇಂದ್ರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದೇವೆ. ಹಿಂದುಳಿದ ಜಿಲ್ಲೆಗಳಿಗೆ ನೂರು ಕೋಟಿ ಕೇಂದ್ರದ ಅನುದಾನ ಅಗತ್ಯವಿದ್ದು, ಎನ್‍ಡಿಆರ್ ಎಫ್ ಅನುದಾನದಲ್ಲಿ ರಾಜ್ಯಕ್ಕೆ ಹೆಚ್ಚಿನ ಪರಿಹಾರ ಬೇಕಿದೆ. ಪ್ರಾಕೃತಿಕ ವಿಕೋಪದಿಂದ ನಾಲ್ಕು ವರ್ಷದಲ್ಲಿ ರಾಜ್ಯಕ್ಕೆ 70 ಸಾವಿರಕೋಟಿ ನಷ್ಟ ಉಂಟಾಗಿದ್ದು, ಇಪ್ಪತ್ತು ಸಾವಿರ ಕೋಟಿ ಪರಿಹಾರ ನೀಡುವ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಕೇವಲ 5 ಸಾವಿರ ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ ಎಂದು ವಿವರಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಾಲ್ಕನೇ ಬಾರಿಗೆ ನಡೆಯುತ್ತಿರುವ ಸಭೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ ಹಾಗೂ ಕೇಂದ್ರ ಸಚಿವರು ಮತ್ತು ತಜ್ಞರು ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ಬಾರಿಯ ಸಭೆಯಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾದ ಕ್ರಮಗಳ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯಿತು. ಅಲ್ಲದೇ ಕೇಂದ್ರ ಸರ್ಕಾರದ ಪ್ರಮುಖ ಮಹಾತ್ವಾಕಾಂಕ್ಷೆಯ ಯೋಜನೆಗಳಾದ ಆಯುಷ್ಮಾನ್ ಭಾರತ, ರಾಷ್ಟ್ರೀಯ ಪೋಷಕಾಂಶ ಅಭಿಯಾನ, ಇಂದ್ರಧನುಷ್‍ನಂತಹ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚೆ ನಡೆಯಿತು. ಕರ್ನಾಟಕದಿಂದ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಹಾಗೂ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಭಾಗಿದ್ದಾರೆ.

    ಅರುಣ್ ಜೇಟ್ಲಿ ಹಿಂದೆ ಹೇಳಿದ್ದೇನು?
    ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಸಹಕಾರಿ ಬ್ಯಾಂಕಗಳಲ್ಲಿನ ಸಾಲಮನ್ನಾ ಮಾಡಿ ರಾಷ್ಟ್ರೀಕೃತ ಬ್ಯಾಂಕಗಳ ಸಾಲಮನ್ನಾ ಮಾಡಲು ಕೇಂದ್ರಕ್ಕೆ ಕೋರಿದ್ದರು. ಆದರೆ ಈ ವೇಳೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ರಾಜ್ಯ ಸರ್ಕಾರಗಳ ಬೇಡಿಕೆಗೆ ಕುರಿತು ಪ್ರತಿಕ್ರಿಯೆ ನೀಡಿ, ಸಾಲಮನ್ನಾ ಮಾಡಬೇಕೋ? ಬೇಡವೋ ಎನ್ನುವುದು ರಾಜ್ಯ ಸರ್ಕಾರದ ತೀರ್ಮಾನಕ್ಕೆ ಬಿಟ್ಟ ವಿಚಾರ. ಕೇಂದ್ರ ಸರ್ಕಾರ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ರಾಜ್ಯಗಳಿಗೆ ಹಣಕಾಸಿನ ನೆರವು ನೀಡುವುದಿಲ್ಲ. ಈ ವಿಚಾರವನ್ನು ಈ ಹಿಂದೆಯೇ ಸ್ಪಷ್ಟಪಡಿಸಿದ್ದೇವೆ, ಇದನ್ನು ಬಿಟ್ಟು ಹೊಸದಾಗಿ ಏನು ಹೇಳುವುದಿಲ್ಲ ಎಂದು 2017 ಜೂನ್ ಮೂರನೇ ವಾರದಲ್ಲಿ ತಿಳಿಸಿದ್ದರು.

    ಆರ್ ಬಿಐ ಏನು ಹೇಳುತ್ತೆ?
    ರೈತರ ಸಾಲಮನ್ನಾ ಮಾಡಿದರೆ ಹಣಕಾಸು ಸ್ಥಿತಿ ಬಿಗಡಾಯಿಸಬಹುದು. ದೇಶದ ಆರ್ಥಿಕ ಸ್ಥಿತಿ ಕೈ ತಪ್ಪಿ ಹೋಗಬಹುದು. ಈ ಯೋಜನೆಗಳನ್ನು ಪ್ರಕಟಿಸುವ ಮೊದಲು 100 ಬಾರಿ ಯೋಚಿಸಬೇಕು ಎಂದು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಆರ್ ಬಿಐ ಗವರ್ನರ್ ಉರ್ಜಿತ್ ಪಟೇಲ್ ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು.

    https://www.facebook.com/CMofKarnataka/photos/pcb.1711066348941822/1711061452275645/?type=3&theater

  • ರಾಜ್ಯದ 9 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೈತ್ರಿ ಇರಲ್ಲ!

    ರಾಜ್ಯದ 9 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೈತ್ರಿ ಇರಲ್ಲ!

    ಬೆಂಗಳೂರು: 2019 ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಮಹಾಮೈತ್ರಿಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ 250 ಸ್ಥಾನಗಳಲ್ಲಿ ಮಾತ್ರ ಸ್ಪರ್ಧೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಆದರೆ ಈ 250 ಕ್ಷೇತ್ರಗಳಲ್ಲಿ 44 ಕ್ಷೇತ್ರಗಳು ಕಳೆದ ಬಾರಿ ಗೆದ್ದ ಕ್ಷೇತ್ರಗಳಾಗಿದ್ದು, ಇವುಗಳಲ್ಲಿ ಮೈತ್ರಿಗೆ ಮುಂದಾಗುವುದಿಲ್ಲ ಎನ್ನಲಾಗಿದೆ. ಸದ್ಯ `ಕೈ’ ಹೈಕಮಾಂಡ್ ಈ ನಿರ್ಧಾರಕ್ಕೆ ಬಲವಾಗಿ ಅಂಟಿಕೊಂಡರೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ ಎನ್ನುವ ವಿಶ್ಲೇಷಣೆ ಈಗ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.

    ಹೌದು, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಮಾಡಿದೆ. ಅಲ್ಲದೇ ಮುಂದಿನ ಲೋಕಸಭಾ ಚುನಾವಣೆಗೂ ಈ ಮೈತ್ರಿ ಮಾಡಲು ಕಾಂಗ್ರೆಸ್ ಮುಂದಾಗಿದೆ. ಆದರೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ಈಗ ಪ್ರಾಬಲ್ಯ ಹೊಂದಿರುವ ಕಾರಣ ಕೇತ್ರಗಳ ಹಂಚಿಕೆ ಕಗ್ಗಂಟಾಗುವ ಸಾಧ್ಯತೆಯಿದೆ.

    ಕಳೆದ 2014 ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯ ನಡುವೆಯೂ ಕೋಲಾರ ಕ್ಷೇತ್ರದಿಂದ ಕೆಎಚ್ ಮುನಿಯಪ್ಪ, ಚಿಕ್ಕಬಳ್ಳಾಪುರ ಕ್ಷೇತ್ರದಿಂದ ವೀರಪ್ಪ ಮೊಯ್ಲಿ, ತುಮಕೂರಿನಿಂದ ಮುದ್ದಹನುಮೆಗೌಡ, ಚಾಮರಾಜನಗರದಿಂದ ಆರ್ ಧೃವನಾರಯಣ್, ಬೆಂಗಳೂರು ಗ್ರಾಮಾಂತರ ಡಿಕೆ ಸುರೇಶ್, ಚಿಕ್ಕೋಡಿಯಿಂದ ಪ್ರಕಾಶ್ ಹುಕ್ಕೇರಿ, ಚಿತ್ರದುರ್ಗದಿಂದ ಬಿಎನ್ ಚಂದ್ರಪ್ಪ, ಕಲಬುರಗಿಯಿಂದ ಮಲ್ಲಿಕಾರ್ಜುನ ಖರ್ಗೆ, ರಾಯಚೂರಿನಿಂದ ಬಿವಿ ನಾಯಕ್ ಜಯಗಳಿಸಿದ್ದರು. ವಿಶೇಷ ಏನೆಂದರೆ ಕೆಲ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಮುಂದೆ ಪೈಪೋಟಿ ಎದುರಿಸಿ ಕೈ ನಾಯಕರು ಜಯಗಳಿಸಿದ್ದರು.

    ಹೈಕಮಾಂಡ್ ಲೋಕಾಸಭಾ ಚುನಾವಣೆ ಮೈತ್ರಿ ಕುರಿತು ಘೋಷಣೆ ಮಾಡುತ್ತಿದಂತೆ ಕಾಂಗ್ರೆಸ್ ನಲ್ಲೂ ಅಸಮಾಧಾನದ ಮಾತು ಕೇಳಿ ಬಂದಿತ್ತು. ಒಂದೊಮ್ಮೆ ಮೈತ್ರಿಗೆ ಮುಂದಾದರೆ ಮೈಸೂರು(ಪ್ರತಾಪ್ ಸಿಂಹ), ಮಂಡ್ಯ (ಸಿಎಸ್ ಪುಟ್ಟರಾಜು), ಹಾಸನ (ಎಚ್‍ಡಿ ದೇವೇಗೌಡ) ಕ್ಷೇತ್ರಗಳನ್ನು ಮಾತ್ರ ಕೊಡಬಹುದು. ಆದರೆ ಕೇವಲ ಮೂರು ಕ್ಷೇತ್ರಗಳಿಗೆ ಮಾತ್ರ ಜೆಡಿಎಸ್ ಮೈತ್ರಿ ನಡೆಸುವುದು ಅನುಮಾನ ಎನ್ನುವ ವಿಶ್ಲೇಷಣೆ ಅಂದೇ ಕೇಳಿಬಂದಿತ್ತು.

    ಗೆದ್ದ ಕ್ಷೇತ್ರಗಳಲ್ಲಿ ಹಾಲಿ ಜಯಗಳಿಸಿದ ಪಕ್ಷದ ಅಭ್ಯರ್ಥಿ ನಿಲ್ಲಬೇಕು ಮತ್ತು ಉಳಿದ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಯಾಗಿ ಒಮ್ಮತದ ಅಭ್ಯರ್ಥಿಯಾಗಿ ನಿಂತರೆ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಸಮಸ್ಯೆಯಿಲ್ಲ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಹಳೆ ಮೈಸೂರು ಭಾಗದಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದೆ. ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಗೆದ್ದಿರುವ ಲೋಕಸಭಾ ಕ್ಷೇತ್ರಗಳ ಪೈಕಿ ಕೆಲವನ್ನು ನಮಗೆ ಬಿಟ್ಟುಕೊಡಿ ಎಂದು ಕೇಳಿದರೆ ಕಾಂಗ್ರೆಸ್ ನಿಲುವು ಏನು ಎನ್ನುವ ಪ್ರಶ್ನೆ ಈಗ ಎದ್ದಿದೆ. ಇದನ್ನು ಓದಿ: ಮೋದಿ ಅಲೆ ಎದುರಿಸಲು ರಾಹುಲ್ ಬಿಗ್ ಪ್ಲಾನ್ – ಕೊನೆಗೂ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧೆ ಅನ್ನೋದು ನಿರ್ಧಾರವಾಯ್ತು! 

    ಈ ಚರ್ಚೆಯ ನಡುವೆ ಶುಕ್ರವಾರ ಸಿಎಂ ಕುಮಾರಸ್ವಾಮಿಯವರು ಇನ್ನು ಒಂದು ವರ್ಷ ನನ್ನನ್ನು ಯಾರು ಟಚ್ ಮಾಡಲು ಸಾಧ್ಯವಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆ ವೇಳೆ ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಯಾವ ರೀತಿ ಮೈತ್ರಿ ಮಾಡಿಕೊಳ್ಳಲಿದೆ ಎನ್ನುವ ಕುತೂಹಲ ಈಗ ಹೆಚ್ಚಾಗಿದೆ.