Tag: State Government

  • ಸಿಎಂ ಕುಮಾರಸ್ವಾಮಿಗೆ ಜ್ವರ – ಕಲಬುರಗಿಯ ಜನತಾದರ್ಶನ ರದ್ದು

    ಸಿಎಂ ಕುಮಾರಸ್ವಾಮಿಗೆ ಜ್ವರ – ಕಲಬುರಗಿಯ ಜನತಾದರ್ಶನ ರದ್ದು

    ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾದ ಬಳಿಕ ನಿರಂತರವಾಗಿ ಚಟುವಟಿಕೆಯಿಂದ ಇರುವ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ಸದ್ಯ ಜ್ವರದಿಂದ ಬಳಲುತ್ತಿದ್ದು, ಸದ್ಯ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

    ಮುಖ್ಯಮಂತ್ರಿಗಳ ಪೂರ್ವ ನಿಯೋಜಿತ ವೇಳಾಪಟ್ಟಿಯಂತೆ ಸೋಮವಾರ ಕಲಬುರಗಿ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿತ್ತು. ಆದರೆ ಈಗ ಕಲಬುರಗಿಯಲ್ಲಿ ನಡೆಯಬೇಕಿದ್ದ ಜನತಾದರ್ಶನ ಕಾರ್ಯಕ್ರಮ ಇರುವುದಿಲ್ಲ ಎಂದು ಸಿಎಂ ಕಚೇರಿ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

    ಇದೇ ವೇಳೆ ಆಪರೇಷನ್ ಕಮಲದ ಭೀತಿಯಲ್ಲಿರುವ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಡಿಕೆ ಶಿವಕುಮಾರ್ ಇಂದು ಕಲಬುರಗಿಯ ಗಾಣಗಾಪುರದಲ್ಲಿರುವ ದತ್ತಾತ್ರೆಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ದೇವಾಲಯಕ್ಕೆ ನಾಳೆ ಸಿಎಂ ಹೆಚ್‍ಡಿಕೆ ಕೂಡ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ.

    ಇತ್ತ ವಿದೇಶಿ ಪ್ರವಾಸದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬರುತ್ತಿದಂತೆ ರಾಜ್ಯ ರಾಜಕೀಯ ಮತ್ತೆ ಬಿರುಸುಗೊಂಡಿದೆ. ಇಂದು ಬೆಳಗ್ಗೆಯೇ ವೇಣುಗೋಪಾಲ್ ಸೇರಿದಂತೆ ಹಲವರು ಸಿದ್ದರಾಮಯ್ಯ ಭೇಟಿಯಾಗಿ ಚರ್ಚಿಸಿದರು. ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಉಸ್ತುವಾರಿ ವೇಣುಗೋಪಾಲ್, ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿ ಇದೆ. ಜಾರಕಿಹೊಳಿ ಬ್ರದರ್ಸ್ ಬಂಡಾಯ ಅದೊಂದು ಸಮಸ್ಯೆಯೇ ಅಲ್ಲ. ಬಿಜೆಪಿ ಕಪ್ಪು ಹಣದ ಮೂಲಕ ಸರ್ಕಾರವನ್ನು ಕೆಡವಲು ಪ್ಲಾನ್ ಮಾಡ್ತಿದೆ ಅಂತ ಆರೋಪಿಸಿದರು. ಬಳಿಕ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿಯವರು ನೀತಿಗೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಬೀಳಿಸಲು ಯತ್ನಿಸ್ತಿಲ್ಲ. ಅವರ ವಿರುದ್ಧ ಸುಮ್ಮನೇ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಳೆಯೇ ಸರ್ಕಾರ ಪತನ ಆಗ್ಬಹುದು ನಮಗೇನು ಗೊತ್ತು – ಸತೀಶ್ ಜಾರಕಿಹೊಳಿ ಹೊಸ ಬಾಂಬ್

    ನಾಳೆಯೇ ಸರ್ಕಾರ ಪತನ ಆಗ್ಬಹುದು ನಮಗೇನು ಗೊತ್ತು – ಸತೀಶ್ ಜಾರಕಿಹೊಳಿ ಹೊಸ ಬಾಂಬ್

    ಬೆಳಗಾವಿ: ಸಮ್ಮಿಶ್ರ ಸರ್ಕಾರ ಬೀಳಿಸಲು ಬಿಜೆಪಿ ಮುಖಂಡರು ಪ್ರಯತ್ನಿಸುತ್ತಿದ್ದಾರೆ ಎಂದು ಸಿಎಂ ಎಚ್‍ಡಿ ಕುಮಾರಸ್ವಾಮಿ ಆರೋಪ ಮಾಡುತ್ತಿದ್ದರೆ ಇತ್ತ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಪಕ್ಷದ ಕೆಲ ಶಾಸಕರು ಪಕ್ಷ ತೊರೆದರೆ ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

    ಬಿಜೆಪಿ ಅಪರೇಷನ್ ಕಮಲ ಕುರಿತು ನಗರದಲ್ಲಿ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ ಅವರು, ಈ ಹಿಂದೆ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರು ಪಕ್ಷ ಬಿಟ್ಟು ಹೋಗಿ ಮತ್ತೆ ಬಂದರು. ಸದ್ಯದ ಪರಿಸ್ಥಿತಿಯಲ್ಲಿ ಅಂತಹ ಶಾಸಕರು ಯಾರು ಪಕ್ಷದಲ್ಲಿ ಇಲ್ಲ. ಆದರೆ ಒಂದೊಮ್ಮೆ ಪಕ್ಷದ ಇತರೇ ಶಾಸಕರು ಬಿಟ್ಟು ಹೋದರೆ ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಸಂಚಲನ ಮೂಡಿಸಿದ್ದಾರೆ.

    ಸಮ್ಮಿಶ್ರ ಸರ್ಕಾರಕ್ಕೆ ಜಾರಕಿಹೊಳಿ ಸಹೋದರರಿಂದ ತೊಂದರೆ ಆಗಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, ಯಾವುದೇ ಕಾರಣಕ್ಕೂ ನಮ್ಮ ಕಾರಣದಿಂದ ಸರ್ಕಾರಕ್ಕೆ ತೊಂದರೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ, ಕಾಂಗ್ರೆಸ್ ಪಕ್ಷ ತೊರೆದು ಕೆಲ ಶಾಸಕರು ಹೋದರೆ ನಾವು ಏನು ಮಾಡಲು ಸಾಧ್ಯವಿಲ್ಲ. ನಾಳೆಯೇ ಸರ್ಕಾರ ಪತನ ಆಗಬಹುದು ನಮಗೇನು ಗೊತ್ತು? ಬೇರೆಯಾದರೂ ಹೋಗಬಹುದು ನಾವು ಪಕ್ಷ ಬಿಟ್ಟು ಹೋಗಲ್ಲ ಎಂದರು.

    ಇದೇ ವೇಳೆ ಮಾಜಿ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಮನೆಗೆ ಕಾಂಗ್ರೆಸ್ ವರಿಷ್ಠರ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಉದ್ಭವವಾಗಿರುವ ಸಮಸ್ಯೆಗಳ ಬಗೆಹರಿಸಲು ವರಿಷ್ಠರು ಬಂದಿದ್ದಾರೆ. ಈ ರೀತಿಯ ಸಭೆಗಳು ನಡೆಯವುದು ಸಾಮಾನ್ಯ. ಮೇಲಿಂದ ಮೇಲೆ ಇಂತಹ ಸಭೆ ನಡೆಯುವುದು ರಾಜಕೀಯ ಸಹಜವಾದ ಪ್ರಕ್ರಿಯೆ. ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಅಧ್ಯಕ್ಷರಾಗಿರುವುದರಿಂದ ಸಿಎಂ ಸೇರಿದಂತೆ ಎಷ್ಟೇ ದೊಡ್ಡವರಾದರು ಚರ್ಚೆ ಮಾಡಲೇಬೇಕು. ಇದು ನಮ್ಮ ಪಕ್ಷದ ನಿಯಮವಾಗಿದೆ ಎಂದರು.

    ಜಾರಕಿಹೊಳಿ ಸಹೋದರರಿಗೆ ಸಿದ್ದರಾಮಯ್ಯ ಬ್ರೇಕ್ ಹಾಕಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವರು, ಸಿದ್ದರಾಮಯ್ಯ ಅವರು ನನಗೆ ಆಗಲಿ, ರಮೇಶ್ ಅವರಿಗೆ ಆಗಲಿ ಹೇಳುವ ಅವಶ್ಯಕತೆ ಇಲ್ಲ. ಅಂತಹ ಸಮಸ್ಯೆಗಳು ಉದ್ಭವವಾಗಿಲ್ಲ. ಸದ್ಯ ಇದರಲ್ಲಿ ನಮ್ಮ ಪಾತ್ರವೇನು ಇಲ್ಲ. ಪಕ್ಷದ ಕೆಲಸವನಷ್ಟೇ ನಾವು ಮಾಡುತ್ತೇವೆ ಎಂದು ತಿಳಿಸಿದರು.

  • ಬಿಜೆಪಿ, ಜೆಡಿಎಸ್ ಸರ್ಕಾರ ಇದ್ದಾಗ ಎಚ್‍ಡಿಕೆ ಯಾವುದೇ ತೊಂದರೆ ಇಲ್ದೇ ಆಡಳಿತ ಮಾಡಿದ್ರು: ಈಶ್ವರಪ್ಪ

    ಬಿಜೆಪಿ, ಜೆಡಿಎಸ್ ಸರ್ಕಾರ ಇದ್ದಾಗ ಎಚ್‍ಡಿಕೆ ಯಾವುದೇ ತೊಂದರೆ ಇಲ್ದೇ ಆಡಳಿತ ಮಾಡಿದ್ರು: ಈಶ್ವರಪ್ಪ

    ಶಿವಮೊಗ್ಗ: ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ಕುಮಾರಸ್ವಾಮಿ ಯಾವುದೇ ತೊಂದರೆ ಇಲ್ಲದೆ ಆಡಳಿತ ನಡೆಸಿದ್ದರು ಎಂದು ಬಿಜಪಿ ಹಿರಿಯ ಮುಖಂಡ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಮ್ಮ ದೇಶದಲ್ಲಿ ಆಡಳಿತ ನಡೆಸಿದ ಮುಖ್ಯಮಂತ್ರಿಗಳಲ್ಲಿ ದುರ್ಬಲ ಮುಖ್ಯಮಂತ್ರಿ ಎಂದರೆ ಸಿಎಂ ಕುಮಾರಸ್ವಾಮಿ. ಇದು ಮುಖ್ಯಮಂತ್ರಿ ಸ್ಥಾನಕ್ಕೆ ಶೋಭೆ ತರುವುದಿಲ್ಲ. 20 ತಿಂಗಳು ಮುಖ್ಯಮಂತ್ರಿಯಾದಾಗ ಬಿಜೆಪಿಯವರಿಂದ ಯಾವುದೇ ಸಮಸ್ಯೆಗಳನ್ನು ಎದುರಿಸಿರಲಿಲ್ಲ. ಆದರೆ ಕಾಂಗ್ರೆಸ್ ನಿಂದ ಅನೇಕ ತೊಂದರೆ ಅನುಭವಿಸುತ್ತಿದೆ ಎಂದು ಅವರೇ ಸ್ವತಃ ಹೇಳಿದ್ದಾರೆ. ಎಷ್ಟು ದಿನ ಈ ಸಿಎಂ ಆಗಿರುತ್ತೇನೋ ಗೊತ್ತಿಲ್ಲ ಅಂತ ಅವರೇ ಹೇಳಿದ್ದಾರೆ ಎಂದರು.

    ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳುವುದೇ ಕುಮಾರಸ್ವಾಮಿ ಅವರಿಗೆ ರಾಜ್ಯದಲ್ಲಿ ಒಂದು ದೊಡ್ಡ ಕೆಲಸ ಆಗಿ ಬಿಟ್ಟಿದೆ. ಕಾಂಗ್ರೆಸ್ ನಲ್ಲಿರುವ ಗುಂಪುಗಾರಿಕೆ ಹಾಗೂ ಸರ್ಕಾರದಲ್ಲಿನ ಆಂತರಿಕ ಗೊಂದಲಗಳಿಂದ ರಾಜ್ಯದ ಮೇಲೆ ಏನೂ ಗಮನ ಹರಿಸದೇ ಆಡಳಿತ ನಡೆಯುತ್ತಿದೆ. ಶನಿವಾರ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ತಮ್ಮಣ್ಣ ಅವರು ಬಂದಾಗ ಎಲ್ಲಾ ಸಮಸ್ಯೆಗಳು ಹಾಗೆ ಇದೆ. ಯಾವ ಸಮಸ್ಯೆಯನ್ನು ಕೂಡ ರಾಜ್ಯ ಸರ್ಕಾರ ಪರಿಹಾರ ಮಾಡಿಲ್ಲ ಎಂದು ದೂರಿದರು.

    ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಅನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡುವುದಿಲ್ಲ. ಕಾಂಗ್ರೆಸ್ ನಿಂದಲೇ ಸಿಎಂ ತೊಂದರೆ ಅನುಭವಿಸುತ್ತಿದ್ದಾರೆ. ಡಿ.ಕೆ ಶಿವಕುಮಾರ್, ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಪರಸ್ಪರ ಬಡಿದಾಡುತ್ತಿರುವುದನ್ನು ಜನತೆ ನೋಡುತ್ತಿದ್ದಾರೆ ಎಂದರು.

    ಬಿಜೆಪಿ ರೌಡಿಗಳ ಮೂಲಕ ಸರ್ಕಾರವನ್ನು ಬೀಳಿಸುವ ಪ್ರಯತ್ನ ನಡೆಸುತ್ತಿದೆ ಎನ್ನುವ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್‍ನವರು ನನ್ನನ್ನು ಇಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲು ಸಿಎಂ ಕುಮಾರಸ್ವಾಮಿಗೆ ಶಕ್ತಿ ಇಲ್ಲ. ಇದನ್ನು ಹೇಳುವ ಬದಲು ಬಿಜೆಪಿ ಜೊತೆ ರೌಡಿಗಳ ಹೆಸರು ಸೇರಿಸಿ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೆಡಿಎಸ್ ಹೆಸರೇಳಿಕೊಂಡು ಬಿಜೆಪಿ 30 ಸೀಟ್ ಗೆದ್ದಿದೆ: ರೇವಣ್ಣ ಆಕ್ರೋಶ

    ಜೆಡಿಎಸ್ ಹೆಸರೇಳಿಕೊಂಡು ಬಿಜೆಪಿ 30 ಸೀಟ್ ಗೆದ್ದಿದೆ: ರೇವಣ್ಣ ಆಕ್ರೋಶ

    ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವೂ ಜೆಡಿಎಸ್ ಪಕ್ಷದಿಂದಲೇ 30 ಸ್ಥಾನಗಳನ್ನು ಹೆಚ್ಚಾಗಿ ಗಳಿಸಿದೆ ಎಂದು ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಹೇಳಿದ್ದಾರೆ.

    104 ಶಾಸಕರಿಗೂ ದೇವರ ಆಶೀರ್ವಾದವಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ವಿಧಾನಸೌಧಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯ 104 ಮಂದಿ ಶಾಸಕರಿಗೆ ದೇವರ ಆಶೀರ್ವಾದ ಇದೆ ಎಂದು ಅವರ ಮುಂಖಡರು ಹೇಳುತ್ತಾರೆ. ಆದರೆ ಅವರೇ ಏಕೆ ಸರ್ಕಾರ ರಚೆನ ಮಾಡಲು ಆಗಲಿಲ್ಲ. ದೇವರ ಆಶೀರ್ವಾದ ಇದ್ದಿದ್ದರೆ ಅವರೇ ಅಧಿಕಾರ ಪಡೆಯಬಹುದಿತ್ತು ಎಂದು ಕಿಡಿಕಾರಿದರು.

    ಇದೇ ವೇಳೆ ಬಿಜೆಪಿ 104 ಸ್ಥಾನ ಗೆಲ್ಲಲು ಜೆಡಿಎಸ್ ಕಾರಣ ಎಂದ ರೇವಣ್ಣ ಬಿಜೆಪಿ ರಾಜ್ಯದಲ್ಲಿ ಜೆಡಿಎಸ್ ಹೆಸರು ಹೇಳಿಕೊಂಡು ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಿಸಿದೆ. ನಮ್ಮಿಂದಲೇ 30 ಸೀಟು ಹೆಚ್ಚಾಗಿ ಲಭಿಸಿದೆ. ಜೆಡಿಎಸ್ ಇಲ್ಲದಿದ್ದರೆ ಆ ಸ್ಥಾನಗಳು ಕೂಡ ಬರುತ್ತಿರಲಿಲ್ಲ. ರಾಜ್ಯದಲ್ಲಿ ಇದಕ್ಕೂ ಮುನ್ನ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಏನು ಸಾಧನೆ ಮಾಡಿದ್ದಾರೆ ತಿಳಿದಿದೆ. ಈ ಕುರಿತು ನಾನು ಹೆಚ್ಚಿನ ಪ್ರತಿಕ್ರಿಯೆ ನೀಡಲ್ಲ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರ ಹೋದ ಮೇಲೆ ಸಂತೋಷ ಪಡಿ – ಮಾಧ್ಯಮಗಳ ಮೇಲೆ ಎಚ್‍ಡಿಡಿ ಕಿಡಿ

    ಸರ್ಕಾರ ಹೋದ ಮೇಲೆ ಸಂತೋಷ ಪಡಿ – ಮಾಧ್ಯಮಗಳ ಮೇಲೆ ಎಚ್‍ಡಿಡಿ ಕಿಡಿ

    ಶಿವಮೊಗ್ಗ: ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿರುವುದು ಮಾಧ್ಯಮಗಳಿಗೆ ಇಷ್ಟವಿಲ್ಲ. ಕುಮಾರಸ್ವಾಮಿ ಅವರ ಜನ ಪರ ಕಾರ್ಯಗಳ ಬಗ್ಗೆ ಜನರಿಗೆ ತೋರಿಸುವ ಆಸಕ್ತಿ ಇಲ್ಲ. ಸರ್ಕಾರ ಹೋದ ಮೇಲೆ ಸಂತೋಷ ಪಡಿ ಎಂದು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

    ನಗರಕ್ಕೆ ಆಗಮಿಸಿದ್ದ ವೇಳೆ ಪರಮೇಶ್ವರ್ ಭೇಟಿ, ರಮೇಶ್ ಜಾರಕಿಹೊಳಿ ಅವರ ಬಂಡಾಯದ ಕುರಿತು ಮಾಧ್ಯಮ ಪ್ರತಿನಿಧಿಗಳಿಂದ ಪ್ರಶ್ನೆ ಕೇಳಿಬರುತ್ತಿದಂತೆ ಸಿಡಿಮಿಡಿಗೊಂಡ ಅವರು, ಇಂತಹ ಪ್ರಶ್ನೆಗಳನ್ನು ಅವರಿಗೆ ಕೇಳಿ. ಇದು ನಿಮಗೇ ಅತ್ಯಂತ ಪ್ರಮುಖ ವಿಷಯವೇ ಎಂದು ಖಾರವಾಗಿ ಮರುಪ್ರಶ್ನೆ ಹಾಕಿದರು.

    ಇಂತಹ ವಿಷಯಗಳನ್ನೇ ಬೆಳಗ್ಗೆಯಿಂದ ಸಂಜೆವರೆಗೂ ಕಳೆದ ಮೂರು ತಿಂಗಳಿನಿಂದ ತೋರಿಸುತ್ತಿದ್ದೀರಿ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳ ಕುರಿತು ನೀವು ಯಾಕೆ ವರದಿ ಮಾಡುವುದಿಲ್ಲ ಎಂದು ಗರಂ ಆಗಿ ಪ್ರಶ್ನಿಸಿದರು.

    ಸಕುಮಾರಸ್ವಾಮಿ ಅವರ ಒಳ್ಳೆಯ ಕೆಲಸಗಳು ನಿಮ್ಮಗೆ ಕಾಣಿಸುವುದಿಲ್ಲ. ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿರುವುದು ಒಂದು ಸಮುದಾಯಕ್ಕೆ ಇಷ್ಟವಿಲ್ಲ. ಅದ್ದರಿಂದ ಸರ್ಕಾರ ಉರುಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಬೀಳಿಸಲು ಮುಹೂರ್ತ ಫಿಕ್ಸ್ ಮಾಡಿದವರಿಗೆ ನಿರಾಸೆ ಉಂಟಾಗಲಿದೆ ಎಂದರು.

    ಬಳಿಕ ಶಿವಮೊಗ್ಗದ ಮಲೆನಾಡು ಸೊಸೈಟಿ ರಜತ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಎಚ್‍ಡಿಡಿ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಪರವಾಗಿ ನೇರ ಬ್ಯಾಟಿಂಗ್ ನಡೆಸಿದರು. ಕುಮಾರಸ್ವಾಮಿ ಬಗ್ಗೆ ವಾತ್ಸಲ್ಯದಿಂದ ಮಾತನಾಡುತ್ತಿಲ್ಲ. ಕೇವಲ 37 ಜನ ಶಾಸಕರನ್ನು ಇಟ್ಟುಕೊಂಡು ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುವಂತ ಸ್ಥೈರ್ಯ ತೋರಿದ್ದಾರೆ. ರಾಜ್ಯದ ಒಂದು ಸಮುದಾಯ ಸರ್ಕಾರ ಹೋಗಲಿ ಎಂದು ನಿರಂತರವಾಗಿ ಪ್ರಯತ್ನಿಸುತ್ತಿದೆ. ಸರ್ಕಾರ ಬೀಳಿಸಲು ಮಹೂರ್ತ ಫಿಕ್ಸ್ ಮಾಡಿದವರು ನಿರಾಶರಾಗಲಿದ್ದಾರೆ. ಮೈತ್ರಿ ಸರ್ಕಾರಲ್ಲಿ ಸಣ್ಣ ಪುಟ್ಟ ದೋಷಗಳಿವೆ ಆದರೆ, ಸರ್ಕಾರ ಬೀಳುವುದಿಲ್ಲ ಎಂದು ಹೇಳಿದರು.

    ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ, ಆದಿಚುಂಚನಗಿರಿ ಶ್ರೀ ನಿರ್ಮಲಾನಂದ ಸ್ವಾಮೀಜಿ, ಸಿಎಂ ಎಚ್‍ಡಿಕೆ 37 ಜನ ಶಾಸಕರನ್ನು ಇಟ್ಟುಕೊಂಡು ನಾಡಿನ ಅಳ್ವಿಕೆ ನಡೆಸುತ್ತಿರುವುದು ಅಚ್ಚರಿಯ ವಿಷಯ. ದೈವಶಕ್ತಿ ಇದರ ಹಿಂದೆ ಇರುವುದರಿಂದ ಮಾತ್ರ ಸಾಧ್ಯವಾಗಿದೆ. ಇದಕ್ಕೆ ವಿರುದ್ಧವಾಗಿ ನಡೆಯುವುದು ದೈವದ ವಿರುದ್ಧದ ಕೆಲಸ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=Qy8pYpFkfo0

  • ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ- ಸಿಎಂ ಆರೋಪಕ್ಕೆ ಬಿಜೆಪಿ ತಿರುಗೇಟು

    ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ- ಸಿಎಂ ಆರೋಪಕ್ಕೆ ಬಿಜೆಪಿ ತಿರುಗೇಟು

    ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ದಂಧೆ ಹಣ ಬಳಕೆ ಮಾಡುತ್ತಿದೆ ಎಂಬ ಸಿಎಂ ಎಚ್‍ಡಿ ಕುಮಾರಸ್ವಾಮಿ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ರಾಜ್ಯದಲ್ಲಿ ಆಡಳಿತ ನಡೆಸಲು ಸಿಎಂ ಅಸಮರ್ಥರಾಗಿದ್ದಾರೆ ಎಂಬುವುದು ಸ್ಪಷ್ಟವಾಗಿದೆ ಎಂದು ಟಾಂಗ್ ನೀಡಿದೆ.

    ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಅವರು, ಆಡಳಿತ ನಡೆಸುವಲ್ಲಿ ಸಂಪೂರ್ಣ ಅಸಮರ್ಥ ಎನ್ನುವುದು ಇಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆಯಿಂದ ಸ್ಪಷ್ಟವಾಗಿದೆ. ಇಂತಹ ಅಸಮರ್ಥ ಮುಖ್ಯಮಂತ್ರಿಯಿಂದ ರಾಜ್ಯಕ್ಕೆ ಸಿಗಬೇಕಾದ ಕೊಡುಗೆಯೇನೂ ಇಲ್ಲ. ಮುಖ್ಯಮಂತ್ರಿಗಳು ಕೈಲಾಗದವರು ಮೈ ಪರಚಿಕೊಂಡರು ಎನ್ನುವಂತೆ ಹೇಳಿಕೆ ನೀಡುತ್ತಿದ್ದು. ಸಿಎಂ ಹತಾಶರಾಗಿದ್ದಾರೆ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಕಿಡಿಕಾರಿದ್ದಾರೆ.

    ಪತ್ರಿಕಾ ಹೇಳಿಕೆಯಲ್ಲಿ ಏನಿದೆ?
    ನಾಡಿನ ಆರೂವರೆ ಕೋಟಿ ಜನರಿಗೆ ನ್ಯಾಯ ದೊರೆಯಬಹುದೆಂಬ ನಿರೀಕ್ಷೆಯಲ್ಲಿದ್ದ ಜನರು ಈಗ ಭ್ರಮನಿರಸನಗೊಂಡಿದ್ದಾರೆ. ಕಷ್ಟದಲ್ಲಿರುವ ರಾಜ್ಯದ ಜನರ ಕಣ್ಣೀರು ಒರೆಸಬೇಕಾಗಿದ್ದ ಮುಖ್ಯಮಂತ್ರಿಗಳು ಆರಂಭದಲ್ಲೇ ಸ್ವತಃ ಕಣ್ಣೀರು ಹಾಕಿದ್ದರು. ಈಗ ಸರ್ಕಾರದ ಮೇಲಿನ ಹಿಡಿತವನ್ನು ಸಂಪೂರ್ಣ ಕಳೆದುಕೊಂಡಿರುವ ಸಿಎಂ ವೃಥಾ ಬಿಜೆಪಿ ವಿರುದ್ಧ ಆರೋಪಿಸುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ.

    ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಆಡಳಿತ ನಡೆಸುವುದನ್ನು ಬಿಟ್ಟು ತಮ್ಮ ದಿನದ ಬಹುತೇಕ ಸಮಯವನ್ನು ಬಿಜೆಪಿ ಮತ್ತು ಅದರ ನಾಯಕರನ್ನು ನಿಂದಿಸುವುದಕ್ಕೆ ಮೀಸಲಿಟ್ಟಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ನಡುವಿನ ಹೊಂದಾಣಿಕೆಯ ಕೊರತೆಯೇ ಪ್ರಸಕ್ತ ರಾಜಕಾರಣದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಗಲು ಕಾರಣ ಎನ್ನುವುದು ಇಡೀ ರಾಜ್ಯದ ಜನರ ಗಮನಕ್ಕೆ ಬಂದಿದೆ. ಆದರೆ ಮುಖ್ಯಮಂತ್ರಿಗಳು ಎಲ್ಲ ಗೊಂದಲಕ್ಕೂ ಬಿಜೆಪಿ ಕಾರಣ ಎನ್ನುವಂತೆ ಬಿಂಬಿಸಲು ಯತ್ನಿಸುತ್ತಿದ್ದಾರೆ.

    ಆಪರೇಷನ್ ಕಮಲದ ಮೂಲಕ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎನ್ನುವ ಮುಖ್ಯಮಂತ್ರಿಗಳ ಹೇಳಿಕೆ ಬೇಜಾಬ್ದಾರಿಯ ಪರಮಾವಧಿ. ಸಮ್ಮಿಶ್ರ ಸರ್ಕಾರದೊಳಗಿನ ಸಮಸ್ಯೆಗಳನ್ನು ನಿಭಾಯಿಸುವ ಸಾಮಥ್ರ್ಯವಲ್ಲದೇ ಅವರು ಬಿಜೆಪಿ ಮೇಲೆ ಗೂಬೆ ಕೂರಿಸುವ ಯತ್ನ ನಡೆಸಿದ್ದಾರೆ. ಮುಖ್ಯಮಂತ್ರಿಗಳಿಗೆ ಖಚಿತ ಮಾಹಿತಿ ಇದ್ದರೆ ನೇರವಾಗಿ ಕ್ರಮ ಜರುಗಿಸಬಹುದಾದ ಉನ್ನತ ಸ್ಥಾನದಲ್ಲಿ ಅವರಿದ್ದಾರೆ. ಆದರೆ ಅವರೀಗ ಸಾಮಾನ್ಯ ವ್ಯಕ್ತಿಯಂತೆ ಬೀದಿಯಲ್ಲಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಾ ಓಡಾಡುತ್ತಿದ್ದಾರೆ. ಇದು ಅವರ ಹತಾಶೆಯ ಪ್ರತೀಕ ಕಾಂಗ್ರೆಸ್ ಶಾಸಕರನ್ನು ನಿಭಾಯಿಸುವುದು ಮುಖ್ಯಮಂತ್ರಿಗಳಿಗೆ ಸವಾಲಿನ ಕೆಲಸವಾಗಿದೆ. ಅಷ್ಟೇ ಅಲ್ಲ ಸ್ವತಃ ತಮ್ಮ ಪಕ್ಷದ ಶಾಸಕರ ಮೇಲೂ ಅವರು ನಿಯಂತ್ರಣ ಕಳೆದುಕೊಂಡಿರುವುದರ ಸೂಚನೆ ಇದು ಎಂದು ವಿವರಿಸಿದ್ದಾರೆ.

    ಈ ಹಿಂದೆ ಜೆಡಿಎಸ್ ಮುಖಂಡರಾದ ಸಚಿವ ಎಚ್.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರೇ ಜೆಡಿಎಸ್‍ನಲ್ಲಿ ಸೂಟ್‍ಕೇಸ್ ರಾಜಕೀಯ ನಡೆಯುತ್ತಿದೆ ಎಂದು ದೂರಿದ್ದರು. ಮುಖ್ಯಮಂತ್ರಿಗಳು ಇದನ್ನು ಮರೆತಿದ್ದಾರೆ. ಸೂಟ್‍ಕೇಸ್ ಪಕ್ಷ ಯಾವುದು ಎನ್ನುವುದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಜೆಡಿಎಸ್ ಪಕ್ಷದ ಮುಖಂಡರೇ ಇದನ್ನು ಬಯಲು ಮಾಡಿದ್ದರೂ, ಮುಖ್ಯಮಂತ್ರಿಗಳಿಗೆ ಬುದ್ಧಿ ಬಂದಿಲ್ಲ. ಸರ್ಕಾರದ ಮೇಲೆ ಸಂಪೂರ್ಣ ಹತೋಟಿ ಕಳೆದುಕೊಂಡಿರುವ ಮುಖ್ಯಮಂತ್ರಿಗಳು ಜನರನ್ನು ದಾರಿ ತಪ್ಪಿಸುವ ಹೇಳಿಕೆ ನೀಡುತ್ತಲೇ ನಾಡಿನ ಆರುವರೆ ಕೋಟಿ ಜನರಿಗೆ ದ್ರೋಹ ಬಗೆಯುತ್ತಿದ್ದಾರೆ. ಮಾನಸಿಕ ಹತೋಟಿಯನ್ನು ಕಳೆದುಕೊಂಡವರಂತೆ ಹೊಣೆಗೇಡಿತನದಿಂದ ಮಾತನಾಡುವುದು ಮುಖ್ಯಮಂತ್ರಿಗಳಿಗೆ ಶೋಭೆಯಲ್ಲ. ವಸ್ತುಸ್ಥಿತಿ ಅರಿತು ಜವಾಬ್ದಾರಿಯಿಂದ ಮಾತನಾಡುವುದನ್ನು ಮುಖ್ಯಮಂತ್ರಿ ಇನ್ನಾದರೂ ಅಭ್ಯಾಸ ಮಾಡಿಕೊಳ್ಳಲಿ ಬಿಜೆಪಿಯೇ ಗೊಂದಲ ಮೂಡಿಸುತ್ತಿದೆ ಎನ್ನುವ ರೀತಿಯಲ್ಲಿ ನಿರಾಧಾರವಾಗಿ ಮಾತನಾಡುವ ಮುಖ್ಯಮಂತ್ರಿ ವರ್ತನೆ ಖಂಡನಾರ್ಹ. ಇಂತಹ ಹೊಣೆಗೇಡಿ ವರ್ತನೆ ತೋರುವ ಮುಖ್ಯಮಂತ್ರಿ ವಿರುದ್ಧ ಬಿಜೆಪಿ ಬೀದಿಗಳಿದು ಹೋರಾಟ ಮಾಡಬೇಕಾದೀತು ಎಂದು ಎಚ್ಚರಿಕೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.

  • ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿದ್ರೆ ದೇವರು ಮೆಚ್ಚಲ್ಲ: ಆದಿಚುಂಚನಗಿರಿ ಶ್ರೀ

    ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿದ್ರೆ ದೇವರು ಮೆಚ್ಚಲ್ಲ: ಆದಿಚುಂಚನಗಿರಿ ಶ್ರೀ

    ಶಿವಮೊಗ್ಗ: ಸಿಎಂ ಎಚ್‍ಡಿ ಕುಮಾರಸ್ವಾಮಿ ದೈವಾನುಗ್ರಹದಿಂದ ಸಿಎಂ ಆಗಿದ್ದಾರೆ. ಅವರ ಸರ್ಕಾರವನ್ನು ಬೀಳಿಸಿದರೆ ದೇವರು ಮೆಚ್ಚಲ್ಲ ಎಂದು ಆದಿಚುಂಚನಗಿರಿ ಮಠದ ಪೀಠದ್ಯಕ್ಷ ಡಾ. ನಿರ್ಮಲಾನಂದ ಶ್ರೀ ಹೇಳಿದ್ದಾರೆ.

    ಮಲೆನಾಡು ಸೊಸೈಟಿ ರಜತ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶ್ರೀಗಳು, ಒಂದು ವೇಳೆ ರಾಜ್ಯ ಸರ್ಕಾರವನ್ನು ಕೆಡವಿದರೆ ಅದು ದೇವರಿಗೆ ದ್ರೋಹ ಬಗೆದಂತೆ. 37 ಶಾಸಕರನ್ನ ಹೊಂದಿರುವ ಕುಮಾರಸ್ವಾಮಿ ದೈವಾನುಗ್ರಹದಿಂದ ಸಿಎಂ ಆಗಿದ್ದಾರೆ. ದೈವಾನುಗ್ರಹದಿಂದ ಮಾತ್ರ ಕುಮಾರಸ್ವಾಮಿ ಸಿಎಂ ಆಗಲು ಸಾಧ್ಯವಾಗಿದೆ ಎಂದು ಹೇಳಿದರು.

    ರಾಜಕಾರಣದ ಕುರಿತು ಮಾತನಾಡಲು ನನಗೆ ಇಷ್ಟವಿಲ್ಲ ಆದರೆ ಕೆಲ ಅಂಶಗಳನ್ನು ತಿಳಿಸುತ್ತೆನೆ. ಸಿಎಂ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇವಲ 37 ಶಾಸಕರನ್ನು ಹೊಂದಿರುವ ವ್ಯಕ್ತಿ ಸರ್ಕಾರ ಮಾಡುವುದು ಸಾಮಾನ್ಯ ಕೆಲಸವಲ್ಲ. ಅವರಿಗೆ ದೈವದ ಶಕ್ತಿ ಇದೆ. ಅವರ ಕಾರ್ಯ ನಮಗೇ ಅಚ್ಚರಿ ಮೂಡಿಸಿದೆ ಎಂದು ತಿಳಿಸಿದರು.

    ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು, ಕೇವಲ 37 ಜನ ಶಾಸಕರನ್ನು ಇಟ್ಟುಕೊಂಡು ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುವಂತ ಸ್ಥೈರ್ಯ ತೋರಿದ್ದಾರೆ. ಇದನ್ನು ಕುಮಾರಸ್ವಾಮಿ ಬಗ್ಗೆ ವಾತ್ಸಲ್ಯದಿಂದ ಹೇಳುತ್ತಿಲ್ಲ, ಅವರು ರೈತರ ಸಮಸ್ಯೆಗಳನ್ನು ಬಗೆಹರಿಸಲು ಕಾರ್ಯನಿರ್ವಹಿಸುತ್ತಿರುವುದನ್ನು ಕಂಡು ಹೇಳುತ್ತಿದ್ದೇನೆ. ಆದರೆ ರಾಜ್ಯದ ಒಂದು ಸಮುದಾಯ ಸರ್ಕಾರ ಹೋಗಲಿ ಎಂದು ನಿರಂತರವಾಗಿ ಪ್ರಯತ್ನಿಸುತ್ತಿದೆ. ಆದರೆ ಸರ್ಕಾರ ಬೀಳಿಸಲು ಮಹೂರ್ತ ಫಿಕ್ಸ್ ಮಾಡಿದವರು ನಿರಾಶರಾಗಲಿದ್ದಾರೆ. ಮೈತ್ರಿ ಸರ್ಕಾರಲ್ಲಿ ಸಣ್ಣ ಪುಟ್ಟ ದೋಷಗಳಿವೆ ಆದರೆ, ಸರ್ಕಾರ ಬೀಳುವುದಿಲ್ಲ ಎಂದು ಭವಿಷ್ಯ ನುಡಿದರು.

  • ಲಾಟರಿ, ಇಸ್ಪೀಟ್ ದಂಧೆ ಹಣದಲ್ಲಿ ಸರ್ಕಾರ ಬೀಳಿಸಲು ಯತ್ನ: ಸಿಎಂ ಎಚ್‍ಡಿಕೆ

    ಲಾಟರಿ, ಇಸ್ಪೀಟ್ ದಂಧೆ ಹಣದಲ್ಲಿ ಸರ್ಕಾರ ಬೀಳಿಸಲು ಯತ್ನ: ಸಿಎಂ ಎಚ್‍ಡಿಕೆ

    ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಲಾಟರಿ ಹಾಗೂ ಇಸ್ಪೀಟ್ ದಂಧೆಯ ಹಣದಲ್ಲಿ ಪ್ರಯತ್ನ ನಡೆಸಲಾಗುತ್ತಿದ್ದು, ಎಲ್ಲವೂ ನನಗೆ ಗೊತ್ತಿದೆ. ಸರ್ಕಾರ ಉಳಿಸಲು ಬೇಕಾದ ಕ್ರಮ ನಾನು ಮಾಡುತ್ತಿದ್ದು, ಸುಮ್ಮನೆ ಕುಳಿತಿಲ್ಲ ಎಂದು ಸಿಎಂ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಿಎಂ ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಲಾಟರಿ ಹಾಗೂ ಇಸ್ಪೀಟ್ ದಂಧೆಯಲ್ಲಿ ತೊಡಗಿರುವ ಕಿಂಗ್ ಪಿನ್ ಗಳು ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿರುವವರೊಂದಿಗೆ ಸೇರಿ ಹಣ ಸಂಗ್ರಹಿಸುತ್ತಿದ್ದಾರೆ. ಈ ಬಗ್ಗೆಯೂ ನಮಗೇ ಮಾಹಿತಿ ಇದೆ. ಆದರೆ ಸರ್ಕಾರ ಉಳಿಸಲು ಬೇಕಾದ ಪ್ರಯತ್ನವನ್ನು ನಾನು ಖಂಡಿತ ಮಾಡುತ್ತಿದ್ದು, ಸುಮ್ಮನೆ ಕುಳಿತ್ತಿಲ್ಲ ಎಂದರು.

    ಇದೇ ವೇಳೆ ತಮ್ಮ ಆರೋಪಕ್ಕೆ ಹಲವು ಉದಾಹರಣೆ ಸಮೇತ ಮಾಹಿತಿ ನೀಡಿದ ಸಿಎಂ, 2009-10 ರಲ್ಲಿ ಬಿಬಿಎಂಪಿ ಕಡತದ ಕಚೇರಿಗೆ ಬೆಂಕಿ ಇಟ್ಟ ಪ್ರಮುಖ ಕಿಂಗ್ ಪಿನ್ ಯಾರು? ಸಕಲೇಶಪುರದಲ್ಲಿ ಕಾಫಿ ರೆಸಾರ್ಟ್ ಮಾಡಲು ಯತ್ನಿಸಿ ಸ್ವತಃ ಕುಟುಂಬವನ್ನು ಕೊಲೆ ಮಾಡಿದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಪ್ರಕರಣದ ಹಿಂದಿನ ಕಿಂಗ್ ಪಿನ್ ಯಾರು? ಇಲ್ಲಿ ಪ್ರತಿನಿತ್ಯ ಇಸ್ಪೀಟ್ ದಂಧೆ ನಡೆಸಿ ನಿತ್ಯ ಕೋಟ್ಯಾಂತರ ರೂಪಾಯಿ ಸಂಗ್ರಹಿಸುವ ಕಿಂಗ್ ಪಿನ್ ಯಾರು ಎನ್ನುವ ಮಾಹಿತಿ ಬಗ್ಗೆ ನನಗೆ ತಿಳಿದಿದೆ. ಈ ಹಣದಲ್ಲಿ ಸರ್ಕಾರ ಉರುಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

    ಇದೇ ವೇಳೆ ಸರ್ಕಾರ ಹಲವು ಶಾಸಕರಿಗೆ ಹಣದ ಅಮಿಷ ನೀಡಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಅಡ್ವಾನ್ಸ್ ಹಣವನ್ನು ನೀಡಲಾಗುತ್ತಿದೆ. ಎಲ್ಲವೂ ಅತೀ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ. ಸರ್ಕಾರ ಉರುಳಿಸಿ ರೆಸಾರ್ಟ್ ರಾಜಕೀಯ ಆರಂಭಿಸಿದರು ಯಾವುದೇ ಚಿಂತೆ ಇಲ್ಲ. ಆದರೆ ಸದ್ಯ ನನಗೆ ಸಿಎಂ ಆಗಿ ಕಾರ್ಯನಿರ್ವಹಿಸಲು ಯಾರ ಅಡ್ಡಿಯೂ ಇಲ್ಲ. ಸಮ್ಮಿಶ್ರ ಸರ್ಕಾರದ ಎಲ್ಲ ಸಚಿವರು, ಶಾಸಕರು ನಿರಂತರ ಸಂಪರ್ಕದಲ್ಲಿದ್ದಾರೆ. ರಾಜ್ಯ ಅಭಿವೃದ್ಧಿ ಕಡೆಗೆ ಮಾತ್ರ ಗಮನ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಶಾಸಕ ಸಿಟಿ ರವಿ, ಸರ್ಕಾರದ ಒಳಗಿನ ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಸಿಎಂ ಎಚ್‍ಡಿಕೆ ಈ ರೀತಿ ಆರೋಪ ಮಾಡಿದ್ದಾರೆ. ಆದರೆ ನಮ್ಮ ಪಕ್ಷ ಕೆಲವು ಸಿದ್ಧಾಂತಗಳನ್ನ ಹೊಂದಿದೆ. ಕುಟುಂಬದ ಅಭಿವೃದ್ಧಿ ಮಾಡುವ ಪಕ್ಷ ನಮ್ಮದಲ್ಲ. ಪ್ರತಿ ಚುನಾವಣೆ ವೇಳೆ ಯಾರು ಎಷ್ಟು ಹಣ ಪಡೆಯುತ್ತಾರೆ ಎಂಬುವುದು ಜನತೆಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು.

  • ಸೋಮವಾರದಿಂದ ಮತ್ತಷ್ಟು ಕಠಿಣವಾಗ್ತೀನಿ: ಸಿಎಂ ಎಚ್‍ಡಿಕೆ

    ಸೋಮವಾರದಿಂದ ಮತ್ತಷ್ಟು ಕಠಿಣವಾಗ್ತೀನಿ: ಸಿಎಂ ಎಚ್‍ಡಿಕೆ

    ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಉಳಿವಿನ ವಿರುದ್ಧ ಶಂಕೆ ವ್ಯಕ್ತಪಡಿಸಿ ತಮ್ಮ ಕರ್ತವ್ಯ ಮಾಡಲು ಅಸಡ್ಡೆ ಪ್ರದರ್ಶಿಸುತ್ತಿರುವ ಕೆಲ ಇಲಾಖೆಗಳ ಅಧಿಕಾರಿಗಳಿಗೆ ಚಾಟಿ ಬೀಸಿ ತಮ್ಮಷ್ಟು ಕಠಿಣವಾಗಲಿದ್ದೇನೆ ಎಂದು ಸಿಎಂ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಅಭಿವೃದ್ಧಿ ದೃಷ್ಟಿಯಿಂದ ನಾನು ನಿರಂತರವಾಗಿ ಎಲ್ಲಾ ಸಚಿವರೊಂದಿಗೆ ಸಂಪರ್ಕದಲ್ಲಿದ್ದು ಯೋಜನೆಗಳ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸಲು ಇಚ್ಛಿಸಿದ್ದೇನೆ. ಇಂದು ಮಹದಾಯಿ ತೀರ್ಪಿನ ಸಾಧಕ ಭಾದಕಗಳ ಬಗ್ಗೆ ನೀರಾವರಿ ಸಚಿವ ಹಾಗೂ ಕಾನೂನು ತಜ್ಞರ ಜೊತೆ ಸಭೆ ನಡೆಸಿ ಮಾತಾನಾಡಲಿದ್ದೇನೆ. ಸರ್ಕಾರದ ಜವಾಬ್ದಾರಿಯುತವಾಗಿ ನಡೆಯಲು ಸೋಮವಾರದಿಂದ ಇಲಾಖೆಗಳ ಪ್ರತ್ಯೇಕ ಸಭೆ ನಡೆಸಲಿದ್ದೇನೆ ಎಂದರು.

    ಇದೇ ವೇಳೆ ಬಿಎಸ್‍ವೈ ಅವರಿಗೆ ಟಾಂಗ್ ನೀಡಿದ ಎಚ್‍ಡಿಕೆ, ರಾಜ್ಯ ವಿರೋಧಿ ಪಕ್ಷದ ನಾಯಕರಿಗೆ ಇಂತಹ ಕಾರ್ಯಗಳು ಬೇಕಿಲ್ಲ. ಅವರು ತಮ್ಮದೇ ಕಾರ್ಯದಲ್ಲಿದ್ದಾರೆ. ಸಚಿವರಲ್ಲಿ ಯಾವುದೇ ಬಂಡಾಯವಿಲ್ಲ. ಜಾರಕಿಹೊಳಿ ಅವರು ಕೂಡ ನನ್ನ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ನಾನು ಸುಮ್ಮನೆ ಕುಳಿತಿಲ್ಲ. ಗೌರಿ ಗಣೇಶ ಹಬ್ಬದ ವೇಳೆಗೆ ಡೆಡ್ ಲೈನ್ ನೀಡಿದ್ದರು. ಈಗ ಸೋಮವಾರಕ್ಕೆ ನೀಡಲಾಗಿದೆ. ಶಾಸಕರಿಗೆ ಹಣ ಅಮಿಷ ನೀಡಲಾಗುತ್ತಿದೆ. ಎಲ್ಲವೂ ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ. ಸದ್ಯ ಶನಿವಾರ ಬೆಳಗಾವಿಗೆ ತೆರಳಿ ರಾಷ್ಟ್ರಪತಿಗಳ ಕಾರ್ಯಕ್ರಮದ ಬಳಿಕ ಅಲ್ಲಿನ ಜನರ ಸಮಸ್ಯೆ ಕೇಳಲು ಜನತಾ ದರ್ಶನ ನಡೆಸಲಾಗುತ್ತಿದೆ ಎಂದರು.

    ಬಿಜೆಪಿ ಸರ್ಕಾರದೊಂದಿಗೆ ಸ್ನೇಹಿತರಾಗಿದ್ದ ಕೆಲ ಬಿಜೆಪಿ ಮುಖಂಡರು ನನ್ನ ಸಂಪರ್ಕದಲ್ಲಿದ್ದು, ಆದರೆ ಮೈಸೂರು ಭಾಗದ ಶಾಸಕರನ್ನು ಇಲ್ಲಿ ಹೆಸರಿಸಲ್ಲ. ಏಕೆಂದರೆ ನನ್ನ ಬಳಿ ಇರುವ ಪಟ್ಟಿಯೇ ಬೇರೆ. ಮೈಸೂರು ಭಾಗದ ಬಿಜೆಪಿಯವರು ಎಂಬ ನಿಮ್ಮ ಊಹೆ ತಪ್ಪು. ಬೆಳಗಾವಿಯಲ್ಲಿ ರಾಷ್ಟ್ರಪತಿಗಳ ಕಾರ್ಯಕ್ರಮದ ಬಳಿಕ ಅಲ್ಲಿನ ಜನರ ಸಮಸ್ಯೆ ತಿಳಿಯಲು ಜನತಾ ದರ್ಶನ ಕೂಡ ನಡೆಸಲಾಗುತ್ತದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಳಗಾವಿ ಬಂಡಾಯಕ್ಕೆ ಎರಡು ದಿನ ಬ್ರೇಕ್!

    ಬೆಳಗಾವಿ ಬಂಡಾಯಕ್ಕೆ ಎರಡು ದಿನ ಬ್ರೇಕ್!

    ಬೆಂಗಳೂರು: ಕಳೆದ ಕೆಲ ದಿನಗಳಿಂದ ರಾಜ್ಯ ರಾಜಕೀಯದಲ್ಲಿ ತಮ್ಮ ಬಂಡಾಯದ ಮೂಲಕ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿದ್ದ ಸಚಿವ ರಮೇಶ್ ಜಾರಕಿಹೊಳಿ ಸಹೋದರರು ಸದ್ಯ ಬೆಳಗಾವಿಗೆ ಹಿಂದಿರುಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿದೇಶ ಪ್ರವಾಸದಿಂದ ಹಿಂದಿರುಗಿದ ಬಳಿಕ ಅತೃಪ್ತಿ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

    ಶನಿವಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ವಾಪಸ್ ಆಗುವ ಸಾಧ್ಯತೆಗಳಿವೆ. ಇದಕ್ಕೂ ಮುನ್ನ ಸಿಎಂ ಕುಮಾರಸ್ವಾಮಿ ಅವರು ಜಾರಕಿಹೊಳಿ ಸಹೋದರರೊಂದಿಗೆ ಶನಿವಾರ ಸಂಜೆ ಮಾತುಕತೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಬಳಿಕ ಭಾನುವಾರ ಸಿದ್ದರಾಮಯ್ಯರನ್ನು ಜಾರಕಿಹೊಳಿ ಸಹೋದದರು ಭೇಟಿ ಮಾಡಲಾಗಿದ್ದಾರೆ. ಸಿದ್ದರಾಮಯ್ಯ ಅವರೊಂದಿನ ಚರ್ಚೆ ಬಳಿಕವಷ್ಟೇ ಜಾರಕಿಹೊಳಿ ಬ್ರದರ್ಸ್ ಬಂಡಾಯ ಶಮನವಾಗುತ್ತ ಎಂಬ ಅಂಶ ಸ್ಪಷ್ಟವಾಗುವ ಸಾಧ್ಯತೆ ಇದೆ. ಅದ್ದರಿಂದ ಸದ್ಯ ಸತೀಸ್ ಜಾರಕಿಹೊಳಿ ಇಂದು ಬೆಳಗ್ಗೆ ಬೆಳಗಾವಿಗೆ ತೆರಳಿದರೆ, ಸಂಜೆ ವೇಳೆಗೆ ರಮೇಶ್ ಜಾರಕಿಹೊಳಿ ಬೆಂಗಳೂರಿನಿಂದ ತೆರಳಿದ್ದು ಜಿಲ್ಲೆಯಲ್ಲಿ ನಡೆಯುತ್ತಿರುವ ಗಣೇಶ ಉತ್ಸವದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

    ಇತ್ತ ಬಿಜೆಪಿ ಅಪರೇಷನ್ ಕಮಲ ಮೂಲಕ ಸಮ್ಮಿಶ್ರ ಸರ್ಕಾರದ ಶಾಸಕರನ್ನು ತನ್ನದ ಸೆಳೆಯುವ ಕಸರತ್ತು ನಡೆಸುತ್ತಿದೆ. ಬಿಜೆಪಿ ರಾಜ್ಯಾದ್ಯಕ್ಷ ಅಮಿತ್ ಶಾ ಕೂಡ ಬಿಎಸ್‍ವೈ ರೊಂದಿಗೆ ಫೋನ್ ಮೂಲಕ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಅಪರೇಷನ್ ಕಮಲ ಕಾರ್ಯತಂತ್ರವನ್ನು ಶಾಸಕ ಶ್ರೀರಾಮುಲು ಜೊತೆಗೂಡಿ ನಡೆಸುತ್ತಿದ್ದು, ಈ ಕುರಿತ ಎಲ್ಲಾ ಬೆಳವಣಿಗೆಗಳನ್ನು ತಿಳಿಸುವುದಾಗಿ ಬಿಎಸ್‍ವೈ ಹೇಳಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಈ ನಡುವೆ ಸಮ್ಮಿಶ್ರ ಸರ್ಕಾರದಲ್ಲಿ ಸದ್ಯ ಖಾಲಿ ಇರುವ 6 ಸಚಿವ ಸ್ಥಾನಗಳಿಗೆ ಲಾಭಿ ಆರಂಭವಾಗಿದ್ದು ಶಾಸಕರು ತಮ್ಮ ಸ್ಥಾನವನ್ನು ಭದ್ರಪಡಿಸಲು ಒತ್ತಡದ ತಂತ್ರಕ್ಕೆ ಮುಂದಾಗಿದ್ದಾರೆ. ಉದಾಹರಣೆ ಎಂಬಂತೆ ಬಳ್ಳಾರಿ ಹಗರಿಬೊಮ್ಮನಹಳ್ಳಿ ಶಾಸಕ ಭೀಮನಾಯಕ್ ತಾನು ಸಚಿವ ಸ್ಥಾನ ಅಕಾಂಕ್ಷಿ ಎಂದು ಶಾಸಕ ಬಹಿರಂಗ ಹೇಳಿದ್ದಾರೆ. ಅಲ್ಲದೇ ಜಿಲ್ಲೆಯ 6 ಶಾಸಕರು ಸಚಿವ ಸ್ಥಾನಕ್ಕೆ ಅರ್ಹರಾಗಿದ್ದು, ತಮ್ಮ ಬೇಡಿಕೆಯನ್ನು ಹೈಕಮಾಂಡ್‍ಗೆ ತಿಳಿಸಿದ್ದೇವೆ. ಅವರೇ ಅರ್ಹರನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.

    ಸಿದ್ದರಾಮಯ್ಯ ರಾಜ್ಯಕ್ಕೆ ಬಂದ ಬಳಿಕ ಮತ್ತೆ ರಾಜಕೀಯ ಬೆಳವಣಿಗೆಗಳು ಗರಿಗೆದರಲಿದೆ ಎನ್ನಲಾಗಿದೆ. ಆದರೆ ಈ ನಡುವೆ ಬಿಜೆಪಿ ನಡೆಸಲು ಉದ್ದೇಶಿಸಲಾಗುವ ಅಪರೇಷನ್ ಕಮಲಕ್ಕೆ ತಡೆ ನೀಡಲು ಆರ್‍ಎಸ್‍ಎಸ್ ಮುಂದಾಗಿದೆ ಎನ್ನಲಾಗಿದೆ. ಈ ಕುರಿತು ಬಿಜೆಪಿ ಹೈಕಮಾಂಡ್‍ಗೆ ಎಚ್ಚರಿಕೆ ನೀಡಿರುವ ಆರ್‍ಎಸ್‍ಎಸ್ ಮುಖಂಡರು, ಈಗ ಸರ್ಕಾರ ರಚನೆ ಮಾಡಲು ಮುಂದಾದರೆ ಲೋಕಸಭಾ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ದೋಸ್ತಿ ಸರ್ಕಾರ ರಾಜ್ಯಮಟ್ಟದಲ್ಲಿ ಮತ್ತಷ್ಟು ಒಂದಾಗುವ ಸಂಭವದ ಕುರಿತು ಸೂಚನೆ ನೀಡಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv