Tag: State Government

  • ಮಂಡ್ಯ ಕ್ಷೇತ್ರವನ್ನ ಜೆಡಿಎಸ್‍ಗೆ ಕೊಡಬೇಕು ಅನ್ನೋದು ಕಾನೂನೇನು ಆಗಿಲ್ಲ: ಚಲುವರಾಯಸ್ವಾಮಿ

    ಮಂಡ್ಯ ಕ್ಷೇತ್ರವನ್ನ ಜೆಡಿಎಸ್‍ಗೆ ಕೊಡಬೇಕು ಅನ್ನೋದು ಕಾನೂನೇನು ಆಗಿಲ್ಲ: ಚಲುವರಾಯಸ್ವಾಮಿ

    ಮಂಡ್ಯ: ಲೋಕಸಭೆಗೆ ಉಪ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಪಕ್ಷ ಹಾಗೂ ಕಾರ್ಯಕರ್ತರ ಹಿತ ದೃಷ್ಟಿಯಿಂದ ಜಿಲ್ಲೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳದಿರುವುದು ಒಳ್ಳೆಯದು ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

    ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಮಾತನಾಡಿದ ಅವರು, ನಾನು ಚುನಾವಣೆಯಲ್ಲಿ ಅಭ್ಯರ್ಥಿಯಾಗಲ್ಲ. ಆದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಚುನಾವಣಾ ಆಯೋಗ ನಿನ್ನೆಯಷ್ಟೇ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ನಮ್ಮ ಪಕ್ಷದ ಮುಖಂಡರು ಇನ್ನು ಸಭೆ ಕರೆದಿಲ್ಲ. ಪಕ್ಷದ ಮುಖಂಡರು ಈ ಕುರಿತು ತೀರ್ಮಾನ ಮಾಡುತ್ತಾರೆ. ಆದರೆ ಕ್ಷೇತ್ರದ ಜನರ ಅಭಿಪ್ರಾಯವನ್ನು ನಾನು ಮುಖಂಡರಿಗೆ ತಿಳಿಸುತ್ತೇನೆ ಎಂದರು.

    ದೇವೇಗೌಡರೇ ಹೇಳಿರುವಂತೆ ಹೊಂದಾಣಿಕೆ ಅನ್ನುವುದು ವಿಧಾನಸೌಧಕ್ಕೆ ಮಾತ್ರ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರೇ ಈ ಹಿಂದೆ ನಡೆದ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಅವರೇ ಮುಂದೆ ನಿಂತು ಪ್ರಚಾರ ಮಾಡಿದ್ದಾರೆ. ಅಲ್ಲದೇ ಸ್ನೇಹಯುತ ಸ್ಪರ್ಧೆ ಮಾಡುವುದರಿಂದ ಸರ್ಕಾರದ ಮೇಲೆ ಪರಿಣಾಮ ಬೀರಲ್ಲ. ಜಿಲ್ಲೆಯಲ್ಲಿ 7 ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಇದ್ದರೂ ಕೂಡ ಕಾಂಗ್ರೆಸ್ ಪಕ್ಷ ಹೋರಾಟ ಮಾಡಲಿದೆ. ಚುನಾವಣೆಯಲ್ಲಿ ಯಾರೇ ಗೆದ್ದರೂ 5 ರಿಂದ 10 ಸಾವಿರ ಮತಗಳ ಅಂತರದಿಂದ ಗೆಲ್ಲಬಹುದು ಅಷ್ಟೇ ಎಂದು ತಿಳಿಸಿದರು.

    ಜೆಡಿಎಸ್ ಮುಖಂಡರ ವಿರುದ್ಧ ಅಕ್ರೋಶ: ಕಾಂಗ್ರೆಸ್ ಅವರು 80 ಜನ ಇಟ್ಟುಕೊಂಡು ನಮಗೆ ಮುಖ್ಯಮಂತ್ರಿ ಕೊಟ್ಟಿದ್ದಾರೆ ಎಂಬ ನಡವಳಿಕೆ ವಿಧಾನಸೌಧದಲ್ಲೂ ನಡೆಯುತ್ತಿಲ್ಲ, ರಾಜ್ಯದಲ್ಲೂ ನಡೆಯುತ್ತಿಲ್ಲ. ಪಕ್ಷ ತೀರ್ಮಾನ ಮಾಡಿದೆ ಎಂದು ನಾವು ಎಲ್ಲೂ ಮಾತನಾಡುತ್ತಿಲ್ಲ ಎಂದು ಜೆಡಿಎಸ್ ಪಕ್ಷದ ನಡವಳಿಕೆ ವಿರುದ್ಧ ಆಕ್ರೋಶ ಹೊರಹಾಕಿದರು.

    ಕ್ಷೇತ್ರದ ಜನ ಮತ್ತು ಕಾರ್ಯಕರ್ತರು ಹೊಂದಾಣಿಕೆ ಬೇಡ ಎನ್ನುತ್ತಿದ್ದಾರೆ. ಆದರೆ ಮೈತ್ರಿ ಬಗ್ಗೆ ಅಂತಿಮವಾಗಿ ಪಕ್ಷದ ವರಿಷ್ಠರು ನಿರ್ಧಾರ ಮಾಡಲಿದ್ದಾರೆ. ಮಂಡ್ಯ ಕ್ಷೇತ್ರವನ್ನ ಜೆಡಿಎಸ್‍ಗೆ ಕೊಡಬೇಕು ಎಂಬ ಕಾನೂನು ಆಗಿಲ್ಲ. ಜೆಡಿಎಸ್ ಅವರು ಕೇಳುವುದು ಮಾಮೂಲಿ ಕೇಳುತ್ತಾರೆ. ಪಕ್ಷ ಹಾಗೂ ಕಾರ್ಯಕರ್ತರ ಹಿತ ದೃಷ್ಟಿಯಿಂದ ಹೊಂದಾಣಿಕೆ ಅಗತ್ಯವಿಲ್ಲ ಎಂಬುವುದು ನನ್ನ ಅಭಿಪ್ರಾಯ.

    ಇದೇ ವೇಳೆ ಚುನಾವಣಾ ಆಯೋಗದ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸಂವಿಧಾನ ಪೀಠದಲ್ಲಿರುವವರು ನೈಸರ್ಗಿಕ ನ್ಯಾಯದ ಬಗ್ಗೆಯೂ ಚಿಂತನೆ ಮಾಡಬೇಕು. ಚುನಾವಣೆ 6 ತಿಂಗಳಿಗಿಂತ ಹೆಚ್ಚು ದಿನ ಖಾಲಿ ಇರಬಾರದು ಎಂದಿದೆ. ಈಗಿನ ಚುನಾವಣೆ ಘೋಷಣೆ ಪ್ರಕಾರ ಡಿಸೆಂಬರ್ 12 ಕ್ಕೆ ಫಲಿತಾಂಶ ಬರುತ್ತದೆ. ಆಗಿನಿಂದ ಮಾರ್ಚ್ ವರೆಗೆ ಮಾತ್ರ ಸಂಸದರಾಗಿರುತ್ತಾರೆ. ಆದ್ದರಿಂದ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಇದ್ದಾಗ ಮತ್ತು ಅಗತ್ಯ ಇರುವ ಕಡೆ ಮಾತ್ರ ಚುನಾವಣೆ ನಡೆಸುವ ಬಗೆಗೆ ಸಂವಿಧಾನ ತಿದ್ದುಪಡಿ ಮಾಡಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರಿ ನೌಕರರಿಗೆ 5 ದಿನ ಕೆಲಸದ ಪದ್ದತಿ ತನ್ನಿ: ಸಿಎಂಗೆ ಪ್ರಿಯಾಂಕ್ ಖರ್ಗೆ ಪತ್ರ

    ಸರ್ಕಾರಿ ನೌಕರರಿಗೆ 5 ದಿನ ಕೆಲಸದ ಪದ್ದತಿ ತನ್ನಿ: ಸಿಎಂಗೆ ಪ್ರಿಯಾಂಕ್ ಖರ್ಗೆ ಪತ್ರ

    ಬೆಂಗಳೂರು: ಸರ್ಕಾರಿ ರಂಗದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ವಾರಕ್ಕೆ 5 ದಿನದ ಕೆಲಸದ ಪದ್ಧತಿಯನ್ನು ಜಾರಿಗೆ ತನ್ನಿ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

    5 ದಿನದ ಕೆಲಸದ ಪದ್ದತಿಯಲ್ಲಿ ಗುಣಮಟ್ಟ ಹಾಗೂ ಉತ್ಪಾದನೆ ಹೆಚ್ಚಳವಾಗುವುದು. ನೌಕರರಿಗೆ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಹೆಚ್ಚು ಅವಕಾಶಗಳು ದೊರೆಯುವುದರಿಂದ ಕಚೇರಿ ಗೈರು ಹಾಜರಾತಿ ನಿಯಂತ್ರಣಗೊಳ್ಳಬಹುದು ಎಂದು ಪ್ರಿಯಾಂಕ್ ಖರ್ಗೆ ಪತ್ರದಲ್ಲಿ ತಿಳಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    ರಾಜ್ಯದಲ್ಲಿ ಈಗ ಸರ್ಕಾರಿ ಕಚೇರಿಗಳು ವಾರದಲ್ಲಿ 6 ದಿನ ಕಾರ್ಯ ನಿರ್ವಹಿಸುತ್ತಿದ್ದು, 5 ದಿನಗಳ ಕೆಲಸ ನಡೆಯಬೇಕೆಂಬ ಚರ್ಚೆ ನಡೆಯುತ್ತಿದೆ. ಮುಖ್ಯವಾಗಿ ಕರ್ನಾಟಕ ಸರ್ಕಾರ ನೇಮಿಸಿದ್ದ 6ನೇ ವೇತನ ಆಯೋಗ 5 ದಿನಗಳ ವಾರದ ಪದ್ಧತಿಯನ್ನು ರಾಜ್ಯದಲ್ಲಿಯೂ ಜಾರಿಗೆ ತರಬೇಕೆಂದು ಶಿಫಾರಸು ಮಾಡಿದೆ. ಕರ್ನಾಟಕ ಸರ್ಕಾರದ ಉದ್ಯೋಗಿಗಳು ಸಹ ಐದು ದಿನಗಳ ವಾರವನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರ ಈ ಹಿಂದೆಯೇ ಐದು ದಿನಗಳ ವಾರದ ಪದ್ದತಿಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿದೆ. ಕೆಲಸದ ವೇಳೆಯನ್ನು ಹೆಚ್ಚಿಸುವ ಮೂಲಕ ಸಮತೋಲನವನ್ನು ತರಲಾಗಿದೆ.

    ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶ, ಜಾತಿ ಮತಗಳಿಗೆ ಅನುಗುಣವಾಗಿ ಹಬ್ಬ, ಉತ್ಸವ, ಜಯಂತಿಗಳನ್ನು ಆಚರಿಸುತ್ತಾ ಬಂದಿದೆ. ಅವರವರ ಆಚರಣೆಗಳಿಗೆ ಸೂಕ್ತವಾಗುವಂತೆ ರಜೆ ಪಡೆಯುವ ಸೌಲಭ್ಯ ನೀಡಿದ್ದಲ್ಲಿ ನಾವು ಅಭಿವೃದ್ಧಿಯ ಪಥದಲ್ಲಿ ಸಾಗಿದಾಂತಗುವುದು. ಮಾನವ ಸಂಪನ್ಮೂಲ ಸದ್ಭಳಕೆಯೂ ಆಗುವುದು. ಈ ಹಿನ್ನೆಲೆಯಲ್ಲಿ ಸರ್ಕಾರ ಈಗ ನೀಡುತ್ತಿರುವ ಸಾರ್ವತ್ರಿಕ ರಜೆಗಳನ್ನು ಮಿತಿಗೊಳಿಸಿ, ಅವಶ್ಯವಿರುವವರು ಅವಶ್ಯವಿರುವ ದಿನಗಳಂದು ರಜೆ ತೆಗೆದುಕೊಳ್ಳುವಂತೆ ನಿರ್ಬಂಧಿತ ರಜೆಯನ್ನು ಹೆಚ್ಚಳ ಮಾಡುವ ಮೂಲಕ 5 ದಿನಗಳ ಕೆಲಸದ ವಾರವನ್ನು ರಾಜ್ಯದಲ್ಲಿ ತರಬಹುದು ಎನ್ನುವುದು ನನ್ನ ಅಭಿಪ್ರಾಯ.

    5 ದಿನಗಳ ವಾರದ ಪದ್ಧತಿಯನ್ನು ಜಾರಿಗೆ ತರುವುದರಿಂದ ಸರ್ಕಾರದ ಹಾಗೂ ಸರ್ಕಾರಿ ಉದ್ಯೋಗಿಗಳಿಗೆ ಹಲವಾರು ಅನುಕೂಲಗಳಿವೆ. ನೌಕರರಿಂದ ಫಲಿತಾಂಶ ಆಧರಿತ ಕಾರ್ಯ ನಿರೀಕ್ಷಿಸಬಹುದಲ್ಲದೇ ಕೆಲಸದಲ್ಲಿ ಗುಣಮಟ್ಟ ಹಾಗೂ ಉತ್ಪಾದನೆ ಹೆಚ್ಚಳವಾಗುವುದು. ನೌಕರರಿಗೆ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಹೆಚ್ಚು ಅವಕಾಶಗಳು ದೊರೆಯುವುದರಿಂದ ಕಚೇರಿ ಗೈರು ಹಾಜರಾತಿ ನಿಯಂತ್ರಣಗೊಳ್ಳುವುದು. ಈ ಹಿನ್ನೆಲೆಯಲ್ಲಿ ಸರ್ಕಾರ ಈಗ ನೀಡುತ್ತಿರುವ ಸಾರ್ವತ್ರಿಕ ರಜೆಗಳನ್ನು ಮಿತಿಗಳಿಸಿ ಅವಶ್ಯಕವಿರುವವರು ರಜೆ ತೆಗೆದುಕೊಳ್ಳುವಂತೆ ನಿರ್ಬಂಧಿತ ರಜೆಯನ್ನು ಹೆಚ್ಚಳ ಮಾಡುವ ಮೂಲಕ ಐದು ದಿನಗಳ ಕೆಲಸದ ವಾರವನ್ನು ರಾಜ್ಯದಲ್ಲಿ ಜಾರಿಗೆ ತರಬಹುದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿದ್ದರಾಮಯ್ಯ ಏಯ್ ಅಂದ್ರೆ ನಾವು ಒಂದು ಕ್ಷಣವೂ ಇರೋದಿಲ್ಲ: `ಕೈ’ ಶಾಸಕ

    ಸಿದ್ದರಾಮಯ್ಯ ಏಯ್ ಅಂದ್ರೆ ನಾವು ಒಂದು ಕ್ಷಣವೂ ಇರೋದಿಲ್ಲ: `ಕೈ’ ಶಾಸಕ

    ಕೋಲಾರ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಐದು ವರ್ಷ ರಾಜ್ಯದಲ್ಲಿ ಅಧಿಕಾರ ನಡೆಸಬೇಕೆಂದರೆ ಸಿದ್ದರಾಮಯ್ಯ ಆಶೀರ್ವಾದ ಇರಬೇಕು. ಸಿದ್ದರಾಮಯ್ಯ ಅವರು ಒಮ್ಮೆ ಗುಟುರು ಹಾಕಿದರೆ ಸರ್ಕಾರ ಇರುವುದಿಲ್ಲ ಎಂದು ಜಿಲ್ಲೆಯ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹೇಳಿದ್ದಾರೆ.

    ಮಾಲೂರಿನಲ್ಲಿ ನಡೆದ ಕನಕದಾಸ ಹಿಂದುಳಿದ ವರ್ಗಗಳ ಹಾಸ್ಟೆಲ್ ಉದ್ಘಾಟನೆಗೆ ಸಿದ್ದರಾಮಯ್ಯ ಅವರು ಆಗಮಿಸಿದ್ದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಸಿದ್ದರಾಮ್ಯಯ ಅವರ ಕೈಯಲ್ಲಿ ರಾಜ್ಯ ಸರ್ಕಾರ ಇದೆ. ಯಾವೊಬ್ಬ ಶಾಸಕರೂ ಕೂಡಾ ಸೇಲ್‍ಗಿಲ್ಲ. ಸರ್ಕಾರ ಬಿದ್ದು ಹೋಗುತ್ತದ್ದೆ ಎಂಬ ಯಾವುದೇ ಯೋಚನೆ ಬೇಡ. ಸಿದ್ದರಾಮಯ್ಯ ಅವರ ಬೆಂಬಲ ಇರುವವರೆಗೂ ಸರ್ಕಾರ ಬೀಳುವ ಪ್ರಶ್ನೆಯೇ ಇಲ್ಲ. ಒಂದೊಮ್ಮೆ ಸಿದ್ದರಾಮಯ್ಯ ಅವರು ಏಯ್ ಎಂದರೆ ಸಾಕು ನಾವು ಸರ್ಕಾರದಲ್ಲಿ ಇರುವುದಿಲ್ಲ. ಸಮಿಶ್ರ ಸರ್ಕಾರದಲ್ಲೂ ಸಿದ್ದರಾಮಯ್ಯ ಅವರೇ ಪವರ್‍ಫುಲ್ ಎಂದು ಹೇಳಿದರು.

    ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ವಾಮ ಮಾರ್ಗದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಹಗಲು ಕನಸು ಕಾಣುತ್ತಿದೆ. ಸಮ್ಮಿಶ್ರ ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತೆ. ಸರ್ಕಾರ ಅಸ್ಥಿರಗೊಳಿಸುವಲ್ಲಿ ನನ್ನ ಪಾತ್ರ ಇಲ್ಲ, ನನ್ನ ಆಪ್ತರ ವಲಯದಲ್ಲೂ ಯಾವುದೇ ಗುಂಪುಗಾರಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಬಿಜೆಪಿ ಸಿಎಂ ಕುಮಾರಸ್ವಾಮಿ ದಂಗೆ ವಿಚಾರವಾಗಿ ನೀಡಿದ ಹೇಳಿಕೆಗೆ ಸಂಬಂದಪಟ್ಟಂತೆ ರಾಜ್ಯಪಾಲರಿಗೆ ದೂರು ನೀಡಿರುವುದು ರಾಜಕೀಯ ಅಷ್ಟೇ ಅದರಲ್ಲಿ ಬೇರೆ ಉದ್ದೇಶ ಇಲ್ಲಾ. ಕೇಂದ್ರ ಸರ್ಕಾರವಾಗಲೀ ರಾಜ್ಯ ಸರ್ಕಾರವಾಗಲೀ ಯಾವುದೇ ಸರ್ಕಾರವಿದ್ದರು ಜನರಿಂದ ಆಯ್ಕೆಯಾಗಿರುವ ಸರ್ಕಾರಗಳು ಕಾನೂನು ಬಿಟ್ಟು ಏನುಮಾಡಲು ಸಾಧ್ಯವಿಲ್ಲ. 25 ರಂದು ಕಾಂಗ್ರೆಸ್ ಶಾಸಕಾಂಗ ಸಭೆಯನ್ನ ಖಾಸಗಿ ಹೋಟೆಲ್‍ನಲ್ಲಿ ಕರೆಯಲಾಗಿದೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲಾ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಜೊತೆಗೆ ಅರಣ್ಯ ಸಚಿವ ಶಂಕರ್, ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಕೆಜಿಎಫ್ ಶಾಸಕಿ ರೂಪ ಶಶಿಧರ್ ಭಾವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಾಳ್ಮೆಯಿಂದ ಇರುವಂತೆ ಹೇಳಿದ್ದೆ, ಆದ್ರೆ ದುಡುಕಿನ ನಿರ್ಧಾರ – ಮಂಡ್ಯ ರೈತನ ಆತ್ಮಹತ್ಯೆ ಬಗ್ಗೆ ಸಿಎಂ ವಿಷಾದ

    ತಾಳ್ಮೆಯಿಂದ ಇರುವಂತೆ ಹೇಳಿದ್ದೆ, ಆದ್ರೆ ದುಡುಕಿನ ನಿರ್ಧಾರ – ಮಂಡ್ಯ ರೈತನ ಆತ್ಮಹತ್ಯೆ ಬಗ್ಗೆ ಸಿಎಂ ವಿಷಾದ

    ಚಿಕ್ಕಮಗಳೂರು: ಸಾಲ ಬಾಧೆಯಿಂದ ಬಳಲುತ್ತಿದ್ದ ಮಂಡ್ಯ ರೈತ ಕುಟುಂಬ ಆತ್ಮಹತ್ಯಗೆ ಶರಣಾಗಿರುವ ಕುರಿತು ಸಿಎಂ ಕುಮಾರಸ್ವಾಮಿ ಅವರು ವಿಷಾದ ವ್ಯಕ್ತಪಡಿಸಿದ್ದು, ತಾಳ್ಮೆಯಿಂದ ಇರುವಂತೆ ಅವರಿಗೆ ಹೇಳಿದ್ದೆ. ಆದರೆ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.

    ಸಿಎಂ ಅವರಿಗೆ ರೈತ ಕುಟುಂಬ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಮಾಹಿತಿ ಪಡೆದು ಮಾಧ್ಯಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ನಂದೀಶ್ ವೈಯಕ್ತಿಕ ವಿಷ್ಯಕ್ಕೆ ಆತ್ಮಹತ್ಯೆ ಮಾಡ್ಕೊಂಡಿದ್ದಾರೆ. 15 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು. ಹೀಗಾಗಿ ತಾಳ್ಮೆಯಿಂದ ಇರುವಂತೆ ಸೂಚಿಸಿದ್ದೆ. ಸಮಸ್ಯೆ ಬಗೆಹರಿಸಲು ಸ್ವಲ್ಪ ಸಮಯವಕಾಶ ಕೇಳಿದ್ದೆ. ಆದರೆ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ ಎಂದು ಶೃಂಗೇರಿಯಲ್ಲಿ ವಿಷಾದ ವ್ಯಕ್ತಪಡಿಸಿದರು.

    ಜನತಾ ದರ್ಶನಕ್ಕೆ ಹಾಜರಾಗಿದ್ದ ದಂಪತಿ:
    ಕುಟುಂಬ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿರುವ ದಂಪತಿ 2 ಬಾರಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಆತ್ಮಹತ್ಯೆಗೂ ಮುನ್ನ ದಂಪತಿ ಡೆತ್ ನೋಟ್ ಬರೆದಿಟ್ಟು ಮನವಿ ಮಾಡಿಕೊಂಡಿದ್ದಾರೆ.

    ಡೆತ್ ನೋಟ್ ನಲ್ಲೇನಿದೆ?:
    ಈ ಹಿಂದೆ ನಾವು ಕುಮಾರಸ್ವಾಮಿಯವರನ್ನು ಭೇಟಿಯಾಗಿ ನನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದೇನೆ. ಆದ್ರೆ ನಮ್ಮ ಸಮಸ್ಯೆ ಪರಿಹಾರವಾಗಿಲ್ಲ. ಇದೀಗ ನಾವು ಹೇಡಿತನದಿಂದ ಸಾಯ್ತಿಲ್ಲ. ಆದ್ರೆ ಬದುಕೋದಕ್ಕೆ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ನಾವು ಸಾಯ್ತಾ ಇದ್ದೀವಿ. ಕಡೆಯದೊಂದು ನಮ್ಮ ಮನವಿ ಇದೆ. ನಮ್ಮ ಮೃತದೇಹಗಳನ್ನು ಯಾರೂ ಕೂಡ ಮುಟ್ಟಬಾರದು. ನಮ್ಮ ಶವಗಳನ್ನು ಕಾರ್ಪೊರೇಷನ್ ಗೆ ಬಿಸಾಕಿ ಅಂತ ದಂಪತಿ ಡೆತ್ ನೋಟ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಂದು ಪೋನ್ ಕಾಲ್‍ಗೆ ಸಿಎಂ ಎಚ್‍ಡಿಕೆ ಫುಲ್ ಟೆನ್ಷನ್!

    ಒಂದು ಪೋನ್ ಕಾಲ್‍ಗೆ ಸಿಎಂ ಎಚ್‍ಡಿಕೆ ಫುಲ್ ಟೆನ್ಷನ್!

    ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಸ್ಥಿರ ಭೀತಿ ನಡುವೆ ದೇವರ ಮೊರೆ ಹೋಗಿರುವ ಸಿಎಂ ಕುಮಾರಸ್ವಾಮಿ ಅವರಿಗೆ ಇಂದು ಬೆಳಗ್ಗೆ ಬಂದಿದ್ದ ಫೋನ್ ಕಾಲ್ ನಿಂದ ಟೆನ್ಷನ್ ಒಳಗಾಗಿದ್ದರು ಎನ್ನಲಾಗಿದೆ.

    ಬೆಳಗ್ಗೆ 8 ಗಂಟೆಗೆ ವೇಳೆಗೆ ಬಂದ ಫೋನ್ ಕಾಲ್ ಅವರ ಟೆನ್ಷನ್ ಜಾಸ್ತಿ ಮಾಡಿತ್ತು. ಶೃಂಗೇರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಸಿಎಂ ಕುಮಾರಸ್ವಾಮಿ ಅವರಿಗೆ ಗುಪ್ತಚರ ಇಲಾಖೆ ಅಧಿಕಾರಿಗಳು ಫೋನ್ ಮಾಡಿ ವಿಶೇಷ ಮಾಹಿತಿ ನೀಡಿದ್ದರು. ಗುಪ್ತಚರ ಇಲಾಖೆ ಅಧಿಕಾರಿಗಳು ಕಾಂಗ್ರೆಸಿನಲ್ಲಿ ಬಂಡಾಯ ಎದ್ದಿರುವ ಕೆಲ ಶಾಸಕರು ಮುಂಬೈಗೆ ತೆರಳಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿಯನ್ನು ಈ ವೇಳೆ ನೀಡಿದ್ದರು ಎನ್ನಲಾಗಿದೆ.

    ಕಾಂಗ್ರೆಸ್ಸಿನ ಪ್ರಮುಖ ನಾಯಕರ ನೇತೃತ್ವದಲ್ಲಿ ಕೆಲ ಶಾಸಕರು ಆಪರೇಷನ್ ಕಮಲ ಒಳಗಾಗುವ ಸಾಧ್ಯತೆ ಇದ್ದು, ವಿಶೇಷ ವಿಮಾನ ಮೂಲಕ ಹೊರ ರಾಜ್ಯಕ್ಕೆ ಹೋಗಲು ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಸಿಎಂ ಅವರಿಗೆ ಲಭಿಸಿದೆ ಎನ್ನಲಾಗಿದೆ. ಇದಕ್ಕಾಗಿ ವಿಶೇಷ ವಿಮಾನ ಬುಕ್ ಮಾಡಲು ಸಿದ್ಧತೆ ಕೂಡ ನಡೆದಿದ್ದು, ಸುಮಾರು 10 ರಿಂದ 15 ಶಾಸಕರು ಮುಂಬೈಗೆ ಹೋಗಲು ಸಿದ್ಧರಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎನ್ನಲಾಗಿದೆ.

    ಸದ್ಯ ಗುಪ್ತ ಇಲಾಖೆ ಅಧಿಕಾರಿಗಳು ನೀಡಿದ್ದಾರೆ ಎನ್ನಲಾಗಿರುವ ಮಾಹಿತಿ ಆಪರೇಷನ್ ಕಮಲದ ಮೊದಲ ಭಾಗ ಎಂಬ ಶಂಕೆಗೆ ಕಾರಣವಾಗಿದೆ. ಇತ್ತ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ಶಾಸಕರಿಗೆ ಸೋಮವಾರದ ಸಭೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಜೆಡಿಎಸ್ ಶಾಸಕರ ಸಭೆಯನ್ನೂ ಕರೆಯಲಾಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು, ಶನಿವಾರ ಆದ್ದರಿಂದ ಶಾಸಕರ ಭೇಟಿಗೆ ಕರೆಯಲಾಗಿದೆ. ಆದರೆ ಇದು ಕೇವಲ ಔಪಚಾರಿಕ ಸಭೆ ಅಷ್ಟೇ ಯಾವುದೇ ಮಹತ್ವದ ಸಭೆ ಅಲ್ಲ ಎಂದು ಸ್ಪಷ್ಟನೆ ನೀಡಿದ್ದರು. ವಿಶೇಷವಾಗಿ ಮುಂಬೈಗೆ ತೆರಳಲು ಸಿದ್ಧತೆ ನಡೆಸುವ ಶಾಸಕರು ಆಗಮಿಸುತ್ತಾರೆ ಎಂದು ತಿಳಿಸಿದ್ದರು.

    ರಾಜ್ಯ ರಾಜಕೀಯ ಉಂಟಾಗುತ್ತಿರುವ ಬೆಳಗವಣಿಗೆ ನಡುವೆ ಹಾಸನದಲ್ಲಿ ನಡೆಯಲಿರುವ ಜೆಡಿಎಸ್ ಶಾಸಕರ ಸಭೆ ಮಹತ್ ಎನ್ನಲಾಗಿದ್ದು, ರಾಜ್ಯ ರಾಜಕಾರಣದ ಕುರಿತು ಶಾಸಕರ ಬಗ್ಗೆ ಮಾಹಿತಿ ನೀಡಿ ಅವರ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸಭೆಯ ಭಾಗವಾಗಿದೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಪಕ್ಷದ ಶಾಸಕರ ಸಭೆ ನಡೆಸಿದ್ದರು. ಅಲ್ಲದೇ ಮುಂದಿನ ದಿನಗಳಲ್ಲಿ ತಾವು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗುವಂತೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಪರೇಷನ್ ಕಮಲ ಬೆನ್ನಲ್ಲೇ ದೋಸ್ತಿಗಳ ದಿಢೀರ್ ಸಭೆಯ ಇನ್‍ಸೈಡ್ ಸ್ಟೋರಿ!

    ಆಪರೇಷನ್ ಕಮಲ ಬೆನ್ನಲ್ಲೇ ದೋಸ್ತಿಗಳ ದಿಢೀರ್ ಸಭೆಯ ಇನ್‍ಸೈಡ್ ಸ್ಟೋರಿ!

    ಬೆಂಗಳೂರು: ಸಮ್ಮಿಶ್ರ ಸರ್ಕಾರ ಬೀಳಿಸಲು ಬಿಜೆಪಿ ಯತ್ನಿಸುತ್ತಿರುವ ಸಂದರ್ಭದಲ್ಲಿ ಆಪರೇಷನ್ ಕಮಲ ವಿರುದ್ಧ ರಣತಂತ್ರ ರೂಪಿಸಲು ದೋಸ್ತಿ ಸರ್ಕಾರದ ಪ್ರಮುಖ ನಾಯಕರು ಇಂದು ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರು ಎಚ್‍ಡಿ ಕುಮಾರಸ್ವಾಮಿ ಅವರ ದಂಗೆ ಹೇಳಿಕೆ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಸಿದ್ದರಾಮಯ್ಯ ನಿವಾಸದಲ್ಲಿ ಸಿಎಂ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಪರಮೇಶ್ವರ್, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯದರ್ಶಿ ಈಶ್ವರ್ ಖಂಡ್ರೆ ಸಭೆ ನಡೆಸಿ ಚರ್ಚಿಸಿದರು. ಪ್ರಮುಖವಾಗಿ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಬಗ್ಗೆ ಹೆಚ್ಚಿನ ಚರ್ಚೆ ನಡೆಸಲಾಗಿದೆ. ಎರಡು ಪಕ್ಷದ ಶಾಸಕರನ್ನ ಬಿಜೆಪಿ ಸಂಪರ್ಕ ಮಾಡಿರುವುದು ಸತ್ಯ ಎಂದು ಒಪ್ಪಿಕೊಂಡ ನಾಯಕರು ಆಪರೇಷನ್ ಕಮಲಕ್ಕೆ ಒಳಗಾಗಿ ಜೆಡಿಎಸ್-ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟರೆ ಅಂಗೀಕರಿಸದಂತೆ ಸ್ಪೀಕರ್ ಮೇಲೆ ಒತ್ತಡ ಹೇರುವುದು. ಶಾಸಕರು ನೀಡಿದ ರಾಜೀನಾಮೆಯನ್ನು ಸಭಾಧ್ಯಕ್ಷರು ಸ್ವೀಕರಿಸುವುದನ್ನು ತಡವಾಗುವಂತೆ ಮಾಡಿ ಬಿಜೆಪಿಯ 8 ರಿಂದ 10 ಶಾಸಕರನ್ನು ಸೆಳೆದು ಬಿಜೆಪಿಗೆ ಪೆಟ್ಟು ನೀಡುವುದು. ಇದು ಯಾವುದು ಸಾಧ್ಯವಾಗದೇ ಇದ್ದರೆ ವಿಧಾನಸಭೆ ವಿಸರ್ಜಿಸುವ ಬಗ್ಗೆ ಕ್ಯಾಬಿನೆಟ್‍ನಲ್ಲಿ ತೀರ್ಮಾನ ಕೈಗೊಳ್ಳುವ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

    ನಾಯಕರ ಮನವೊಲಿಕೆ: ಪಕ್ಷದ ನಾಯಕರ ವಿರುದ್ಧವೇ ಬಂಡಾಯ ಬಾವುಟ ಹಾರಿಸಿದ್ದ ಜಾರಕಿಹೊಳಿ ಬ್ರದರ್ಸ್ ಮತ್ತು ಬಳ್ಳಾರಿ ಜಿಲ್ಲೆಯ ಕೆಲ ಶಾಸಕರ ಮೇಲೆ ಪಕ್ಷ ಮುಖಂಡರಿಗೆ ಇನ್ನು ವಿಶ್ವಾಸ ಬಂದಿಲ್ಲ. ಇಬ್ಬರನ್ನು ಮನವೊಲಿಸುವ ಕೆಲಸ ಪಕ್ಷ ಮತ್ತು ಸರ್ಕಾರದ ಮಟ್ಟದಿಂದ ನಡೆಸಲು ತೀರ್ಮಾನಿಸಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಸಮ್ಮಿಶ್ರ ಸರ್ಕಾರ ಬಿಳಿಸುವ ಪ್ರಯತ್ನ ಬಿಜೆಪಿ ಮಾಡುತ್ತೆ ಎಂಬ ವಿಷಯವೂ ಚರ್ಚೆ ನಡೆಸಲಾಗಿದ್ದು, ಇದಕ್ಕೆ ಅವಕಾಶ ಕೊಡಬಾರದು ನೀಡಬಾರದು ಎಂಬ ತೀರ್ಮಾನವನ್ನು ನಾಯಕರು ಕೈಗೊಂಡಿದ್ದಾರೆ.

    ಸಿದ್ದು ಅಸಮಾಧಾನ: ಸಿಎಂ ಕುಮಾರಸ್ವಾಮಿ ಅವರು ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುವ ವೇಳೆ ನೀಡಿದ ಹೇಳಿಕೆ ಸದ್ಯ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಸಿಎಂ ಆಗಿ ಎಚ್‍ಡಿಕೆ ಇಂತಹ ಹೇಳಿಕೆ ನೀಡಬಾರದು. ವಿರೋಧ ಪಕ್ಷದವರು ಏನೇ ಹೇಳಿದರೂ ಸಂಯಮ ಕಳೆದುಕೊಳ್ಳಬಾರದು. ಎಚ್ಚರಿಕೆಯಿಂದ ಮಾತನಾಡಬೇಕು. ಕಾನೂನು, ಸುವ್ಯವಸ್ಥೆ ಕಾಪಾಡಬೇಕಾದ ಜವಾಬ್ದಾರಿ ಸರ್ಕಾರದ್ದು. ಪ್ರತಿಯೊಂದಕ್ಕೂ ಪ್ರತಿಕ್ರಿಯಿಸಿ ಗೊಂದಲ ಸೃಷ್ಟಿಸಬೇಡಿ ಎಂಬ ಸಲಹೆಯನ್ನು ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ.

    ಪರಿಷತ್ ಚುನಾವಣೆ: ಇಂದಿನ ಸಭೆಯಲ್ಲಿ ಪ್ರಮುಖವಾಗಿ ಮುಂದಿನ ವಿಧಾನ ಪರಿಷತ್ ಚುನಾವಣೆ ಹೊಂದಾಣಿಕೆ ಕುರಿತು ಕೂಡ ಚರ್ಚೆ ನಡೆಸಲಾಗಿದೆ. ಚುನಾವಣೆ ನಡೆಯುವ 6 ಸ್ಥಾನಗಳಲ್ಲಿ 4 ಕಾಂಗ್ರೆಸ್ 2 ಸ್ಥಾನ ಜೆಡಿಎಸ್ ಸ್ಪರ್ಧೆ ನಡೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಅಡ್ಡಮನತದಾನ ತಪ್ಪಿಸಲು ವಿಧಾನ ಪರಿಷತ್ ಸದಸ್ಯರ ಹೆಸರನ್ನು ಎಲ್ಲೂ ಬಹಿರಂಗವಾಗಿ ಮಾಡದೇ ನೇರವಾಗಿ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ನಾಮಿನೇಷನ್ ಮಾಡಿಸಿ ಮತ ಚಲಾವಣೆ ಮಾಡುವುದು ಉತ್ತಮ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

    ಸಭೆಯಲ್ಲಿ ಸಚಿವ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯದರ್ಶಿ ಈಶ್ವರ್ ಖಂಡ್ರೆ, ಡಿಸಿಎಂ ಪರಮೇಶ್ವರ್ ಅವರು ಸಭೆಯಲ್ಲಿ ಮಾತುಕತೆ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನನ್ನ ಮನಸ್ಸಲ್ಲಿ ಏನಿದೆ ಅಂತ ನಾಳೆ ಹೇಳ್ತೇನೆ: ಶಾಸಕ ಎಂಟಿಬಿ ನಾಗರಾಜ್

    ನನ್ನ ಮನಸ್ಸಲ್ಲಿ ಏನಿದೆ ಅಂತ ನಾಳೆ ಹೇಳ್ತೇನೆ: ಶಾಸಕ ಎಂಟಿಬಿ ನಾಗರಾಜ್

    ಬೆಂಗಳೂರು: ಸಮ್ಮಿಶ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ನನ್ನ ಮನಸ್ಸಿನಲ್ಲಿ ಏನಿದೆ ಎಂದು ನಾಳೆ ಹೇಳುತ್ತೇನೆ ಎಂದು ಹೇಳುವ ಮೂಲಕ ಟ್ವಿಸ್ಟ್ ಕೊಟ್ಟಿದ್ದಾರೆ

    ನಗರದಲ್ಲಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ ಬಳಿಕ ಮಾತನಾಡಿದ ಶಾಸಕ ಎಂಟಿಬಿ ನಾಗರಾಜ್, ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡುವುದಾಗಿ ತಿಳಿಸಿದ್ದೆ. ಆದರೆ ಅದನ್ನು ನಾಳೆ ತಿಳಿಸುತ್ತೇನೆ. ಸರ್ಕಾರದಲ್ಲಿ ನಾನು ಪ್ರಮುಖ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಈ ಕುರಿತು ಅಸಮಾಧಾನವಿದೆ. ನನ್ನ ಜೊತೆ ಮತ್ತಿಬ್ಬರು ಶಾಸಕರು ಕೂಡ ಆಗಮಿಸುವ ನಿರೀಕ್ಷೆ ಇದೆ ಎಂದರು.

    ಅಪರೇಷನ್ ಕಮಲ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನನ್ನನ್ನು ಯಾವುದೇ ಬಿಜೆಪಿ ಶಾಸಕರು ಭೇಟಿ ಮಾಡಿ ಮಾತನಾಡಿಲ್ಲ. ಆದರೆ ಕೆಲ ಸ್ನೇಹಿತರು ಫೋನ್ ಮೂಲಕ ಸಂಪರ್ಕ ಮಾಡಿದ್ದಾರೆ. ಈ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ. ರಮೇಶ್ ಜಾರಕಿಹೊಳಿ ಅವರ ಬಳಿ ಅಪರೇಷನ್ ಕಮಲದ ಬಗ್ಗೆಯೂ ಚರ್ಚೆ ಮಾಡಿಲ್ಲ. ಈ ತಿಂಗಳ ಕೊನೆಯ ವೇಳೆಗೆ ನಿಗಮ ಮಂಡಳಿ ಹಾಗೂ ಮಂತ್ರಿ ಮಂಡಲ ರಚನೆ ಆಗಲಿದೆ ಎಂದು ರಮೇಶ್ ಜಾರಕಿಹೊಳಿ ಅವರು ತಿಳಿಸಿದರು. ಈ ಕುರಿತು ಕಾದು ನೋಡುವ ಎಂದು ಹೇಳಿದ್ದಾರೆ. ಅದ್ದರಿಂದ ನಾಳೆ ನಿಮ್ಮನ್ನು ಭೇಟಿ ಮಾಡಿ ಮಾಹಿತಿ ನೀಡುತ್ತೇನೆ ಎಂದರು. ಇದನ್ನೂ ಓದಿ: ಸಮ್ಮಿಶ್ರ ಸರ್ಕಾರಕ್ಕೆ ಮಂಗಳವಾರ ಕೊನೆಯ ದಿನ?

    ಎಂಟಿಬಿ ಅಸಮಾಧಾನಕ್ಕೆ ಕಾರಣ ಏನು?
    ನಾವು ಹೇಳಿದ ಯಾವುದೇ ಕೆಲಸಗಳು ಈ ಸಮ್ಮಿಶ್ರ ಸರ್ಕಾರದಲ್ಲಿ ಆಗುತ್ತಿಲ್ಲ. ಸಿದ್ದರಾಮಯ್ಯನವರನ್ನು ಕುಮಾರಸ್ವಾಮಿ ಕಡೆಗಣಿಸುತ್ತಿದ್ದು ಹೀಗಾಗಿ ಅವರ ಬೆಂಬಲಿಗರಿಗೂ ಸರ್ಕಾರದಲ್ಲಿ ಪ್ರಾಶಸ್ತ್ಯ ಸಿಗುತ್ತಿಲ್ಲ. ಜೆಡಿಎಸ್ ಶಾಸಕರು ಸರ್ಕಾರದ ಎಲ್ಲಾ ಇಲಾಖೆಯಲ್ಲಿ ಕೈ ಆಡಿಸುತ್ತಿದ್ದಾರೆ ಎನ್ನುವುದು ಎಂಟಿಬಿ ನಾಗಾರಾಜ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊನೆಗೂ ಸಚಿವ ರಮೇಶ್ ಜಾರಕಿಹೊಳಿಗೆ ಮಣಿದ ರಾಜ್ಯ ಸರ್ಕಾರ

    ಕೊನೆಗೂ ಸಚಿವ ರಮೇಶ್ ಜಾರಕಿಹೊಳಿಗೆ ಮಣಿದ ರಾಜ್ಯ ಸರ್ಕಾರ

    ಬೆಂಗಳೂರು: ಪೌರಾಡಳಿತ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ರಮೇಶ್ ಜಾರಕಿಹೊಳಿಯವರ ಬೇಡಿಕೆಗೆ ರಾಜ್ಯ ಸರ್ಕಾರ ಮಣಿದಿದ್ದು, ಬೆಳಗಾವಿ ಜಿಲ್ಲಾಧಿಕಾರಿ ಎಸ್ ಜಿಯಾವುಲ್ಲಾ ಅವರನ್ನು ಎತ್ತಂಗಡಿ ಮಾಡಲಾಗಿದೆ.

    ಬೆಳಗಾವಿ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡುವಂತೆ ರಮೇಶ್ ಜಾರಕಿಹೊಳಿ ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕಿದ್ದರು. ಈಗ ಜಿಯಾವುಲ್ಲಾ ಅವರನ್ನು ವರ್ಗಾವಣೆ ಮಾಡಿಸುವ ಮೂಲಕ ಕುಮಾರಸ್ವಾಮಿ ಬೆಳಗಾವಿ ಬಂಡಾಯವನ್ನು ಸ್ವಲ್ಪ ಶಮನ ಮಾಡುವ ಪ್ರಯತ್ನ ನಡೆಸಿದ್ದಾರೆ.

    ಬೆಳಗಾವಿ ಜಿಲ್ಲಾಧಿಕಾರಿಯಾಗಿ ಎಸ್.ಬಿ ಬೊಮ್ಮನಹಳ್ಳಿ ಅವರನ್ನು ನೇಮಕ ಮಾಡಲಾಗಿದೆ. 2017ರ ಆಗಸ್ಟ್ ನಲ್ಲಿ ಮಂಡ್ಯ ಜಿಲ್ಲಾಧಿಕಾರಿಯಾಗಿದ್ದ ಜಿಯಾವುಲ್ಲಾ ಅವರನ್ನು ಸರ್ಕಾರ ಬೆಳಗಾವಿಗೆ ವರ್ಗಾವಣೆ ಮಾಡಿತ್ತು.

    ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡುವಂತೆ ರಮೇಶ್ ಜಾರಕಿಹೊಳಿ ಎರಡು ತಿಂಗಳ ಹಿಂದೆ ಬೇಡಿಕೆ ಇಟ್ಟಿದ್ದರು. ಆದರೆ ಸರ್ಕಾರ ಈ ಬೇಡಿಕೆಯನ್ನು ಈಡೇರಿಸದ ಹಿನ್ನೆಲೆಯಲ್ಲಿ ತನ್ನ ಆಪ್ತರ ವಿರುದ್ಧ ಜಾರಕಿಹೊಳಿ ಸರ್ಕಾರದ ವಿರುದ್ಧ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರ ಬಲವಿದ್ದರೂ ನಮ್ಮ ಮಾತಿಗೆ ಬೆಲೆ ಇಲ್ಲ ಎಂದು ಆಕ್ರೋಶ ಹೊರ ಹಾಕುತ್ತಿದ್ದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಾಂಬಾರ್ ಬಡಿಸುವ ವೇಳೆ ಅನ್ನದ ತಟ್ಟೆ ಕಿತ್ಕೊಂಡ್ರು- ಪಕ್ಷೇತರ ಶಾಸಕ ನಾಗೇಶ್ ಸಿಟ್ಟು

    ಸಾಂಬಾರ್ ಬಡಿಸುವ ವೇಳೆ ಅನ್ನದ ತಟ್ಟೆ ಕಿತ್ಕೊಂಡ್ರು- ಪಕ್ಷೇತರ ಶಾಸಕ ನಾಗೇಶ್ ಸಿಟ್ಟು

    ಕೋಲಾರ: ಸಮ್ಮಿಶ್ರ ಸರ್ಕಾರದ ಅಸ್ತಿತ್ವದ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದರೆ, ಇತ್ತ ಕೋಲಾರ ಜಿಲ್ಲೆಯ ಮುಳಬಾಗಿಲು ಶಾಸಕ ಎಚ್ ನಾಗೇಶ್ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ ನಾಗೇಶ್, ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ  ಸರಿಯಾಗಿ ಆಗುತ್ತಿಲ್ಲ. ಒಳ್ಳೆಯ ಕೆಲಸ ಮಾಡಲು ನಮಗೆ ಅವಕಾಶ ನೀಡಬೇಕು. ಆದರೆ ಇಲ್ಲಿ ಸೂಕ್ತ ಸ್ಥಾನಮಾನ ನೀಡದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಮತ್ತೆ ಗೆದ್ದು ಬರಲು ನಾವು ಜನರ ನಿರೀಕ್ಷೆಯನ್ನು ಈಡೇರಿಸುವ ಅಗತ್ಯವಿದೆ. ಸರ್ಕಾರದಲ್ಲಿ ನಮ್ಮ ಮಾತಿಗೆ ಬೆಲೆಯೇ ಇಲ್ಲವಾಗಿದೆ. ನಾನೇನು ಪಾಪ ಮಾಡಿದ್ದೇನೆ ಗೊತ್ತಿಲ್ಲ, ಈಗಲಾದ್ರು ನಮಗೇ ಸೂಕ್ತ ಜವಾಬ್ದಾರಿ ನೀಡಿ ನಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಅವಕಾಶ ನೀಡಬೇಕು ಎಂದರು.

    ಬೆಣ್ಣೆ ಮಾತುಗಳಿಂದಲೇ ಕೆಲಸ:
    ಶಾಸಕರಾಗಿ ನಾವು ಯಾವುದೇ ಒಂದು ಮನವಿಯನ್ನ ಸರ್ಕಾರ ಮುಂದಿಟ್ಟರೆ ಅದನ್ನು ಮಾಡಿಕೊಡಬೇಕು. ಆದರೆ ಇಲ್ಲಿ ಬೆಣ್ಣೆ ಮಾತುಗಳ ಮೂಲಕವೇ ಎಲ್ಲವನ್ನು ಮಾಡುವುದಾಗಿ ಹೇಳುತ್ತಾರೆ. ಅನ್ನ ಬಡಿಸಿ ಸಾಂಬಾರ್ ಹಾಕುವ ವೇಳೆಗೆ ತಟ್ಟೆ ಕಿತ್ತುಕೊಳ್ಳುತ್ತಾರೆ. ಈ ಕುರಿತು ಅವರೇ ಆತ್ಮವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ. ಈ ರೀತಿ ಅನೇಕರು ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಆದರೆ ಅವರಿಗೆ ಹೇಳಲು ಧೈರ್ಯವಿಲ್ಲ. ಆದರೆ ನಾನು ಹೇಳುತ್ತಿದ್ದೇನೆ. ಸರ್ಕಾರದ ನಡೆ ಸರಿ ಅನಿಸುತ್ತಿಲ್ಲ ಎಂದು ನೇರವಾಗಿಯೇ ಹೇಳಿದರು.

    ಇದೇ ವೇಳೆ ಒಂದು ತಾಲೂಕು ಅಧಿಕಾರಿಯನ್ನು ವರ್ಗಾವಣೆ ಮಾಡಿ ಅಂದರು ಆಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಯಾರು ನಮ್ಮ ಮಾತಿಗೆ ಬೆಲೆ ನೀಡುತ್ತಿಲ್ಲ. ಆದರೆ ನಾನು ಕಾಂಗ್ರೆಸ್ ಪಕ್ಷದ ವಿರೋಧಿ ಅಲ್ಲ. ಆದರೆ ಅವರು ತಮ್ಮ ಸಿದ್ಧಾಂತ ಬಗ್ಗೆ ಜಂಬ ಪಡುತ್ತಾರೆ. ಒಬ್ಬ ಶಾಸಕನ ಕಷ್ಟ ಏನು ಎಂದು ಅರ್ಥೈಸಿಕೊಳ್ಳದೇ ಇದ್ದರೆ ಏನು ಪ್ರಯೋಜನ? ನಮ್ಮ ಮಾತಿಗೆ ಬೆಲೆ ಕೊಟ್ಟರೆ ಮಾತ್ರ ಸರ್ಕಾರಕ್ಕೆ ಬೆಲೆ ಇರುತ್ತದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರೇವಣ್ಣ ವಿರುದ್ಧವೇ ಭೂ ಕಬಳಿಕೆ ಆರೋಪ: ಎ ಮಂಜು ದಾಖಲೆ ರಿಲೀಸ್

    ರೇವಣ್ಣ ವಿರುದ್ಧವೇ ಭೂ ಕಬಳಿಕೆ ಆರೋಪ: ಎ ಮಂಜು ದಾಖಲೆ ರಿಲೀಸ್

    ಹಾಸನ: ಕಾಂಗ್ರೆಸ್ – ಜೆಡಿಎಸ್ ನಾಯಕರು ನಮ್ಮ ಸರ್ಕಾರ ಸುಭದ್ರವಾಗಿದೆ ಎಂದು ಹೇಳಿಕೆ ನೀಡುತ್ತಿದ್ದರೆ, ಇತ್ತ ಸಮ್ಮಿಶ್ರ ಸರ್ಕಾರದ ಸೂಪರ್ ಸಿಎಂ ಎಂದೇ ಗುರುತಿಸಿಕೊಂಡಿರುವ ರೇವಣ್ಣ ವಿರುದ್ಧ ಮಾಜಿ ಸಚಿವ, ಕೈ ನಾಯಕ ಎ ಮಂಜು ಭೂ ಕಬಳಿಕೆಯ ಗಂಭೀರ ಆರೋಪ ಮಾಡಿದ್ದಾರೆ.

    ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಅವರು ತಮ್ಮ ಪ್ರಭಾವ ಬಳಸಿ ತಮ್ಮ ಮಗನ ಹೆಸರಿಗೆ ಭೂಮಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಎ ಮಂಜು ದಾಖಲೆ ಬಿಡುಗಡೆ ಮಾಡಿದ್ದಾರೆ.

    ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಎ ಮಂಜು ಅವರು, ಜಿಲ್ಲೆಯ ದುದ್ದ ಹೋಬಳಿ ಸೋಮನಹಳ್ಳಿ ಕಾವಲ್ ಪ್ರದೇಶದಲ್ಲಿ ನಿಯಮ ಮೀರಿ ಭೂಮಿಯನ್ನು ಎಚ್ ರೇವಣ್ಣ ಅವರು ತಮ್ಮ ಪುತ್ರ ಪ್ರಜ್ವಲ್ ರೇವಣ್ಣ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ.

    ಸರ್ಕಾರಿ ದಾಖಲೆಗಳನ್ನು ನಿಯಮಗಳ ವಿರುದ್ಧವಾಗಿ ತಿದ್ದಿ ಸುಮಾರು 54.29 ಎಕರೆ ಭೂಮಿಯನ್ನು ದುರುಪಯೋಗ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿಯಾಗಿದ್ದ ವೇಳೆ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಭೂಮಿ ಕಬಳಿಸಲಾಗಿದೆ. ಈ ಕುರಿತ ಎಲ್ಲಾ ದಾಖಲೆಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ತನಿಖೆ ನಡೆಸಬೇಕು. ಸರ್ಕಾರಿ ಭೂಮಿಯನ್ನು ತಮ್ಮ ಹೆಸರಿಗೆ ಹಾಗೂ ಬೇಕಾದವರಿಗೆ ಮಾಡಿದ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

    ಪ್ರಭಾವಿ ರಾಜಕಾರಣಿಗಳೇ ಅಧಿಕಾರ ದುರುಪಯೋಗ ಮಾಡಿಕೊಂಡು ತಮ್ಮ ಅನುಕೂಲಕ್ಕೆ ಮಾಡಿಕೊಳ್ಳುವುದಾದರೆ ಸಾಮಾನ್ಯ ಜನರ ಸ್ಥಿತಿ ಏನು? ಸರ್ಕಾರಿ ಭೂಮಿ ಮತ್ತೆ ಸರ್ಕಾರದ ಸುಪರ್ದಿಗೆ ಬರಬೇಕು. ಭೂಮಿ ಯಾರಿಗೆ ಮಂಜೂರು ಆಗದಿದ್ದರೂ ಕೂಡ ಅದು ಹೇಗೆ ಬೇರೆಯವರಿಗೆ ಪರಭಾರೆ ಆಗಿದೆ ಎಂಬುವುದರ ಬಗ್ಗೆ ತನಿಖೆ ನಡೆಸಬೇಕು ಎಂದರು.

    ಏನಿದು ಆರೋಪ?
    ಹಾಸನ ಜಿಲ್ಲೆಯ ದುದ್ದ ಹೋಬಳಿ ಬಳಿ ಇದ್ದ ಸರ್ಕಾರದ ಭೂಮಿಯನ್ನು ಸಣ್ಣೇಗೌಡ ಎಂಬವರು ಗಿರಿಯಪ್ಪ ಎಂಬವರಿಗೆ ಮಾರಾಟ ಮಾಡಿದ್ದಾರೆ. ಆದರೆ ಅದು ಸರ್ಕಾರಿ ಭೂಮಿಯಾಗಿದ್ದು ಸಣ್ಣೇಗೌಡ ಹೆಸರಿಗೆ ಸರ್ಕಾರ ಭೂಮಿ ಮಂಜೂರು ಆಗದೇ ಇದ್ದರೂ ಆತ ಹೇಗೆ ಮಾರಾಟ ಮಾಡಿದ್ದಾನೆ ಎಂದು ಪ್ರಶ್ನಿಸಿದರು. ಬಳಿಕ ವಿವಿಧ ಹೆಸರಿಗಳಲ್ಲಿ ನೋಂದಣಿ ಮಾಡಿಸಿದ ಭೂಮಿಯನ್ನು ಅಧಿಕಾರ ಬಳಸಿ ತಮ್ಮ ಹೆಸರಿಗೆ ಮಾಡಿಸಿಕೊಳ್ಳಾಗಿದೆ. ಈ ಪ್ರಕರಣದಲ್ಲಿ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಮೂಲಕ ಗಿರಿಯಪ್ಪನಿಂದ ಪ್ರಜ್ವಲ್ ರೇವಣ್ಣ ಹೆಸರಿಗೆ ಭೂಮಿ ಹಕ್ಕು ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ಅಧಿಕಾರಿಗಳ ಲೋಪವೂ ಇದೆ ಎಂದು ಎ ಮಂಜು ಆರೋಪಿಸಿದರು.

    ಇದೇ ವೇಳೆ ಹಾಸನ ತಾಲೂಕಿನ ಕಸಬಾ ಹೋಬಳಿಯ ರಾಂಪುರ, ದೊಡ್ಡಕುಂಡಗೋಳ, ನಿಡುಡಿ ಗ್ರಾಮಗಳಲ್ಲಿ ಸದ್ಯ ಸುಮ್ಮನೆ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಸರ್ವೆ ಮಾಡಲು ಯಾವುದೇ ಆದೇಶ ನೀಡಿಲ್ಲ. ಸುಮ್ಮನೆ ಸರ್ವೆ ಮಾಡಿಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಇರುವುದರಿಂದ ಈ ರೀತಿ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಅಲ್ಲದೇ ಈ ಭೂ ಅವ್ಯವಹಾರದ ಕುರಿತು ಅಂತ್ಯ ಕಾಣುವವರೆಗೂ ನಿರಂತರವಾಗಿ ಹೋರಾಡುತ್ತೇನೆ ಎಂದು ತಿಳಿಸಿದ ಎ ಮಂಜು ಅವರು, ನಾನು ಸದ್ಯ ಕಾಂಗ್ರೆಸ್ ಪಕ್ಷದಲ್ಲಿದ್ದು, ಅಲ್ಲಿಯೇ ಇರುತ್ತೇನೆ. ಯಾವುದೇ ಕಾರಣಕ್ಕೂ ಪಕ್ಷದ ವಿರುದ್ಧ ನಾನು ಹೋಗುವುದಿಲ್ಲ. ಈ ರೀತಿಯ ಅನ್ಯಾಯವಾದಗ ಹೇಳುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv