Tag: State Government

  • ಸಂಪುಟ ವಿಸ್ತರಣೆಯಲ್ಲಿ ಸಮತೋಲನ ಇಲ್ಲ – ರಮೇಶ್ ಜಾರಕಿಹೊಳಿ ಕೈಬಿಟ್ಟಿದ್ದು ಸರಿಯಲ್ಲ : ಶಾಸಕ ಸುಧಾಕರ್

    ಸಂಪುಟ ವಿಸ್ತರಣೆಯಲ್ಲಿ ಸಮತೋಲನ ಇಲ್ಲ – ರಮೇಶ್ ಜಾರಕಿಹೊಳಿ ಕೈಬಿಟ್ಟಿದ್ದು ಸರಿಯಲ್ಲ : ಶಾಸಕ ಸುಧಾಕರ್

    ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ನಡೆಸಿದ ಸಂಪುಟ ವಿಸ್ತರಣೆಯಲ್ಲಿ ಸಮತೋಲನ ಇಲ್ಲ. ಅಲ್ಲದೇ ಸರ್ಕಾರ ರಚನೆಯಾದ 6 ತಿಂಗಳ ಒಳಗೆ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದು ಸರಿಯಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಂಪುಟ ವಿಸ್ತರಣೆ ಅಸಮಾಧಾನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಂಪುಟ ವಿಸ್ತರಣೆ ವೇಳೆ ಒಕ್ಕಲಿಗ ಸಮುದಾಯದವರಿಗೆ ಪ್ರಾತಿನಿಧ್ಯ ಕೊಟ್ಟಿಲ್ಲ. ಒಕ್ಕಲಿಗ ಸಮುದಾಯದಲ್ಲಿ ಡಿಕೆ ಶಿವಕುಮಾರ್ ಮತ್ತು ಕೃಷ್ಣಬೈರೇಗೌಡ ಈ ಇಬ್ಬರೇ ಸಚಿವರಿದ್ದು, ಮತ್ತೊಬ್ಬರಿಗೆ ಅವಕಾಶ ನೀಡಬಹುದಿತ್ತು. ಆದರೆ ಒಕ್ಕಲಿಗ ಸಮುದಾಯದಿಂದ ನನಗೆ ನೀಡಬೇಕು ಎಂದು ಹೇಳುತ್ತಿಲ್ಲ. ನಮ್ಮ ಸಮುದಾಯದವರಾದ ಕೃಷ್ಣಪ್ಪ, ಎಸ್.ಟಿ ಸೋಮಶೇಖರ್ ಇಬ್ಬರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ಕೊಡಬೇಕಿತ್ತು. ಈ ಬಗ್ಗೆ ಸಚಿವ ಡಿಕೆ ಶಿವಕುಮಾರ್ ಸಹ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಇದೇ ವೇಳೆ ರಮೇಶ್ ಜಾರಕಿಹೊಳಿ ಅವರನ್ನು 6 ತಿಂಗಳಲ್ಲೇ ಸಚಿವ ಸ್ಥಾನದಿಂದ ಕೆಳಗಿಳಿಸಿದ್ದು ಸರಿಯಲ್ಲ. ಸಂಪುಟ ವಿಸ್ತರಣೆಯಲ್ಲಿ ಸಮತೋಲನ ಇಲ್ಲ. ಬಿಜಾಪುರ ಜಿಲ್ಲೆಯಲ್ಲಿ 3 ಜನರಿಗೆ ಸಚಿವ ಸ್ಥಾನ ಕೊಡುವ ಬದಲು ಹಾವೇರಿ, ದಾವಣಗೆರೆಗೆ ಒಂದು ಸ್ಥಾನ ಕೊಡಬಹುದಿತ್ತು. ಅಲ್ಲದೇ ಪಕ್ಷೇತರ ಶಾಸಕರಾದ ಶಂಕರ್ ಅವರನ್ನು ಸಚಿವ ಸ್ಥಾನದಿಂದ ತೆಗೆದಿದ್ದು ಕೂಡ ಸರಿಯಲ್ಲ. ಪಕ್ಷೇತರರಾದ ಕಾರಣ ಶಂಕರ್ ಮತ್ತು ನಾಗೇಶ್ ಇಬ್ಬರಿಗೂ ಮೊದಲೇ ನಿಗಮ ಮಂಡಳಿ ಸ್ಥಾನ ನೀಡಬೇಕಿತ್ತು. ಏಕೆಂದರೆ ಸರ್ಕಾರದ ರಚನೆ ವೇಳೆ ಕಾಂಗ್ರೆಸ್ ಮೈತ್ರಿಗೆ ಬಹುಮತ ಇತ್ತು ಎಂದು ವಾದವನ್ನು ಸಮರ್ಥಿಸಿಕೊಂಡರು.

    ಅಸಮಾಧಾನಿತ ಶಾಸಕರನ್ನು ಬಿಜೆಪಿ ಸಂಪರ್ಕ ಮಾಡುವ ವಿಚಾರ ಪ್ರತಿಕ್ರಿಯೆ ನೀಡಿದ ಶಾಸಕ ಸುಧಾಕರ್, ರಾಜ್ಯದ ಮಾಜಿ ಮುಖ್ಯಮಂತ್ರಿಯಾದವರು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುವುದು ಸರಿಯಲ್ಲ. ನನಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಅಸಮಾಧಾನ ಆಗಿರುವುದು ನಿಜ. ಹಾಗಂತ ನಾನು ಬಿಜೆಪಿಗೆ ಹೋಗುವುದಿಲ್ಲ. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಹೀಗಾಗಿ ಕಾಂಗ್ರೆಸ್ ತೊರೆಯುವ ಪ್ರಶ್ನೆಯೇ ಇಲ್ಲ. ನನಗೆ ಆಗಿರುವ ಅನ್ಯಾಯದ ಬಗ್ಗೆ ಪಕ್ಷದ ಮಟ್ಟದಲ್ಲಿ ಚರ್ಚೆ ಮಾಡುತ್ತೇನೆ ಎಂದರು.

    ನನಗೆ ಆರ್ಹತೆ ಇದೆ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗುವ ಎಲ್ಲ ಅರ್ಹತೆ ತಮಗಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದ ಸುಧಾಕರ್, ನಾನು ಮೆಡಿಕಲ್ ಡಾಕ್ಟರ್ ಆಗಿದ್ದರು ಫೊರೆನ್ಸಿಕ್, ಮೈಕ್ರೋ ಬಯಾಲಜಿ, ಪರಿಸರ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದೇನೆ. ನನಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನ ನಿರ್ವಹಣೆ ಮಾಡುವ ಎಲ್ಲ ಅರ್ಹತೆಗಳೂ ಇವೆ. ಹಸಿರು ನ್ಯಾಯಾಧೀಕರಣ ಮಾನದಂಡಗಳಲ್ಲಿ ತಿಳಿಸಿರುವ ಅರ್ಹತೆ ತಮಗಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷಗಿರಿ ಕೊಟ್ಟಿರುವ ಬಗ್ಗೆ ಯಾರಿಗಾದರೂ ಆಕ್ಷೇಪ ಇದರೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ದುರಂತದ ಬಳಿಕ ಎಚ್ಚೆತ್ತ ಮುಜರಾಯಿ ಇಲಾಖೆ! – ಆದೇಶದಲ್ಲಿ ಏನಿದೆ?

    ಸುಳ್ವಾಡಿ ದುರಂತದ ಬಳಿಕ ಎಚ್ಚೆತ್ತ ಮುಜರಾಯಿ ಇಲಾಖೆ! – ಆದೇಶದಲ್ಲಿ ಏನಿದೆ?

    ಬೆಂಗಳೂರು: ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯದಲ್ಲಿ ನೀಡಿದ್ದ ವಿಷ ಪ್ರಸಾದ ಸೇವಿಸಿ 14 ಮಂದಿ ಸಾವನ್ನಪ್ಪಿದ ಬಳಿಕ ಎಚ್ಚೆತ್ತಿರುವ ರಾಜ್ಯ ಮುಜರಾಯಿ ಇಲಾಖೆ, ದೇವಾಲಯಗಳಲ್ಲಿ ಅನ್ನದಾಸೋಹ, ಪ್ರಸಾದ ವಿತರಣೆಗೆ ಸ್ಥಳೀಯ ಅಧಿಕಾರಿಗಳ ಅನುಮತಿ ಕಡ್ಡಾಯ ಎಂಬ ಖಡಕ್ ಆದೇಶವನ್ನು ಹೊರಡಿಸಿದೆ.

    ಆದೇಶದಲ್ಲಿ ಏನಿದೆ?
    ದೇವರ ನೈವೇದ್ಯ ಮತ್ತು ದಾಸೋಹ ತಯಾರಿಸುವ ಕೋಣೆಯಲ್ಲಿ ಸಿಸಿ ಟಿವಿ ಅಳವಡಿಕೆಯೂ ಕೂಡ ಕಡ್ಡಾಯ. ಪ್ರಮುಖವಾಗಿ ದೇವಾಲಯದ ಅಡುಗೆ ಕೋಣೆಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ ಮೇಲೆ ಕಟ್ಟುನಿಟ್ಟಿನ ನಿಗಾವಹಿಸುವುದು.

    ತಯಾರಿಸಿದ ನೈವೇದ್ಯ/ ಅಡುಗೆಗೆ ಸ್ವೀಕರಿಸಲು ಯೋಗ್ಯವಾಗಿರುವ ಬಗ್ಗೆ ಖಚಿತಪಡಿಸಿಕೊಂಡು ನಂತರ ವಿತರಣೆ ಮಾಡಬೇಕು. ದೇವಾಲಯಗಳಲ್ಲಿ ತಯಾರಿಸುವ ಪ್ರಸಾದವನ್ನು ಆರೋಗ್ಯಾಧಿಕರಿಗಳು ಪರಿಶೀಲನೆ ನಡೆಸಬೇಕು. ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ನೀಡುವ ಪ್ರಸಾದಕ್ಕೆ ಆರೋಗ್ಯಾಧಿಕಾರಿಯಿಂದ ಅನುಮತಿ ಪಡೆದ ಮೇಲೆಯೇ ವಿತರಣೆ
    ಮಾಡಬೇಕು.

    ದೇವಾಲಯದ ಪರಿಸರದಲ್ಲಿ ಭಕ್ತಾದಿಗಳೇ ಪ್ರಸಾದ ತಯಾರಿಸಿ ನೇರವಾಗಿ ಭಕ್ತರಿಗೆ ನೀಡುವ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ತಂಡದಿಂದ ಪರೀಕ್ಷೆ ಒಳಪಡಿಸಿ ಅನುಮತಿ ಪತ್ರ ಪಡೆಯುವುದು ಕಡ್ಡಾಯ ಮಾಡಲಾಗಿದೆ.

    ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಾಲಯಗಳಲ್ಲಿ ಇಲಾಖೆ ನೀಡಿದ ನಿಯಮಗಳನ್ನು ಆಯಾ ದೇವಾಲಯ ಸಂಸ್ಥೆಗಳು ಪಾಲಿಸಬೇಕು ಎಂದು ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿದೇಶದಲ್ಲಿ ವ್ಯಾಸಂಗ ಮಾಡೋ ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

    ವಿದೇಶದಲ್ಲಿ ವ್ಯಾಸಂಗ ಮಾಡೋ ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

    ಸಾಂದರ್ಭಿಕ ಚಿತ್ರ

    – ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ.ಗಿಂತ ಕಡಿಮೆ ಇದ್ರೆ ಸರ್ಕಾರದಿಂದ ವೆಚ್ಚ

    ಬೆಂಗಳೂರು: ವಿದೇಶದಲ್ಲಿ ವ್ಯಾಸಂಗ ಮಾಡುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಪ್ರಬುದ್ಧ ಯೋಜನೆ ಮೂಲಕ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.

    ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆ ಪ್ರಬುದ್ಧ ಯೋಜನೆ ಜಾರಿಗೆ ತಂದಿತ್ತು. ಈ ಯೋಜನೆಗೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ವಿಧಾನಸೌಧದಲ್ಲಿ ಇಂದು ಚಾಲನೆ ನೀಡಿದ್ದಾರೆ.

    ಸಾಂದರ್ಭಿಕ ಚಿತ್ರ

    ಈ ಮೂಲಕ ದೇಶದಲ್ಲಿಯೇ ಇದೇ ಮೊದಲ ಬಾರಿಗೆ ವಿದೇಶದಲ್ಲಿ ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಇಂತಹ ಅವಕಾಶ ಸಿಗಲಿದೆ. ಪ್ರಬುದ್ಧ ಯೋಜನೆಯಲ್ಲಿ ವಿಶೇಷ ಚೇತನರಿಗೆ ಶೇ. 4 ಹಾಗೂ ವಿದ್ಯಾರ್ಥಿನಿಯರಿಗೆ ಶೇ. 33 ಮೀಸಲಾತಿ ನೀಡಲಾಗಿದೆ.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿಸಿಎಂ ಪರಮೇಶ್ವರ್ ಅವರು, ವಿದ್ಯಾರ್ಥಿ ವೇತನ ಪಡೆದು ನಾನು ಸಂಶೋಧನೆ ಮಾಡಿ ಆಸ್ಟ್ರೇಲಿಯಾದಲ್ಲಿ ಪಿಎಚ್‍ಡಿ ಪದವಿ ಪಡೆದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಕೂಡ ವಿದ್ಯಾರ್ಥಿ ವೇತನ ಪಡೆದು ವಿದೇಶದಲ್ಲಿ ವ್ಯಾಸಂಗ ಮಾಡಿ ಸಂವಿಧಾನ ರಚನೆ ಮಾಡಿದರು. ಹಿಂದುಳಿದವರಿಗೆ ಉನ್ನತ ಮಟ್ಟದ ಶಿಕ್ಷಣ ಕೊಡಿಸುವ ಉದ್ದೇಶದಿಂದ ಸರ್ಕಾರ ಪ್ರಬುದ್ಧ ಯೋಜನೆ ಜಾರಿಗೆ ತಂದಿದೆ ಎಂದರು. ಕಾರ್ಯಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಹಲವರು ಭಾಗವಹಿಸಿದ್ದರು.’

    ಸಾಂದರ್ಭಿಕ ಚಿತ್ರ

    ಯೋಜನೆಯಲ್ಲಿ ಏನಿದೆ?:
    ಕುಟುಂಬದ ವಾರ್ಷಿಕ ಆದಾಯ ಗರಿಷ್ಟ 8 ಲಕ್ಷ ರೂ. ಇರುವರಿಗೆ ವಿದೇಶದಲ್ಲಿ ವ್ಯಾಸಂಗ ಮಾಡಲು ಸಂಪೂರ್ಣ ವೆಚ್ಚ ಸರ್ಕಾರವೇ ಭರಿಸಲಿದೆ. 8-15 ಲಕ್ಷ ರೂ. ವಾರ್ಷಿಕ ಆದಾಯ ಹೊಂದಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಹಣವನ್ನು ಸರ್ಕಾರ ಭರಿಸುತ್ತದೆ. 15 ಲಕ್ಷ ರೂ. ಮೇಲ್ಪಟ್ಟ ಆದಾಯ ಇರುವ ವಿದ್ಯಾರ್ಥಿಗಳಿಗೆ ಶೇ.33 ಹಣ ಸಹಾಯ ಮಾಡಲಾಗುತ್ತದೆ. ಪ್ರಬುದ್ಧ ಯೋಜನೆಯಲ್ಲಿ ವಿಕಲಚೇತನರಿಗೆ ಶೇ.4 ಹಾಗೂ ವಿದ್ಯಾರ್ಥಿನಿಯರಿಗೆ ಶೇ.33 ಮೀಸಲಾತಿ ಸಿಗಲಿದೆ.

    ಆರ್ಥಿಕ ಸಹಾಯ ನೀಡುವ ಸರ್ಕಾರವು ಕೆಲವು ಷರತ್ತುಗಳನ್ನು ಹಾಕಿದೆ. ವಿದ್ಯಾರ್ಥಿಯೂ ವಿದೇಶದಲ್ಲಿ ವ್ಯಾಸಂಗ ಮಾಡಿದ ಬಳಿಕ ಮತ್ತೆ ಮರಳಿ ರಾಜ್ಯಕ್ಕೆ ಬರಬೇಕು. ಒಂದು ವೇಳೆ ಆತನಿಗೆ ವಿದೇಶದಲ್ಲಿ ಕೆಲಸ ಸಿಕ್ಕರೆ ತೆರಳಬಹುದು ಎಂದು ತಿಳಿಸಲಾಗಿದೆ.

    ಸಾಂದರ್ಭಿಕ ಚಿತ್ರ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜನ ಪರ ಸರ್ಕಾರ ಅಲ್ಲ, ವಾಸ್ತು ಸರ್ಕಾರ: ಆರ್. ಅಶೋಕ್ ವ್ಯಂಗ್ಯ

    ಜನ ಪರ ಸರ್ಕಾರ ಅಲ್ಲ, ವಾಸ್ತು ಸರ್ಕಾರ: ಆರ್. ಅಶೋಕ್ ವ್ಯಂಗ್ಯ

    ಕೋಲಾರ: ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ತಾನಾಗಿಯೇ ಬೀಳುವ ಸರ್ಕಾರ, ನಾವು ಕಲ್ಲು ಹೊಡೆಯಲು ಹೋಗುವುದಿಲ್ಲ. ರಾಜ್ಯದಲ್ಲಿ ಇರುವುದು ಜನಪರ ಸರ್ಕಾರ ಅಲ್ಲ. ಅದೊಂದು ವಾಸ್ತು ಸರ್ಕಾರ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ವ್ಯಂಗ್ಯ ಮಾಡಿದ್ದಾರೆ.

    ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೀಲುಕೊಪ್ಪ ಕೆರೆ ಮತ್ತು ನಲ್ಲಗುಟ್ಲಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧಡೆ ಬರ ಪ್ರವಾಸ ಕೈಗೊಂಡು ಅವರು ಮಾಧ್ಯಮದವರೊಂದಿಗೆ ಮಾತನಾಡಿ ಅವರು, ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಾನೊಬ್ಬ ಸಾಂದರ್ಭಿಕ ಶಿಶು ಎಂದು ಹೇಳಿಕೊಂಡಿರುವ ಕುಮಾರಸ್ವಾಮಿ ಅವರ ಸರ್ಕಾರ ತಾನಾಗಿಯೇ ಬೀಳಲಿದ್ದು, ಯಾರು ಬೀಳಿಸುವ ಪ್ರಮೇಯ ಇಲ್ಲ. ಸರ್ಕಾರ ಬೀಳುವುದಕ್ಕೆ ಬಿಜೆಪಿ ಕಾರಣ ಆಗುವುದಿಲ್ಲ, ಬದಲಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕಾರಣರಾಗಲಿದ್ದಾರೆ ಎಂದು ಆರೋಪಿಸಿದರು.

    ಇದೇ ವೇಳೆ ಸರ್ಕಾರದ ಆಡಳಿತ ಬಗ್ಗೆ ವ್ಯಂಗ್ಯವಾಡಿದ ಅಶೋಕ್ ಅವರು, ಕುಮಾರಸ್ವಾಮಿ ಅವರದ್ದು ಜನ ಪರ ಸರ್ಕಾರ ಅಲ್ಲ. ಅದೊಂದು ವಾಸ್ತು ಸರ್ಕಾರ. ವಿಧಾನ ಸಭೆ ನಡೆಯಲು ರಾಹುಕಾಲ ನೋಡುವ ಇಂತಹ ಕೆಟ್ಟ ಸರ್ಕಾರವನ್ನ ನಾನು ನೋಡಿಯೇ ಇಲ್ಲವೆಂದು ದೂರಿದರು. ಅಲ್ಲದೇ ರೇವಣ್ಣನವರು ತಮ್ಮ ಮನೆಗಳಲ್ಲಿ ವಾಸ್ತು, ಪೂಜೆಗಳನ್ನ ಇಟ್ಟುಕೊಳ್ಳಲಿ, ವಿಧಾನ ಸಭೆಗೆ ಇವೆಲ್ಲಾ ತರಬೇಡಿ ಎಂದು ಕಿಡಿಕಾರಿದರು.

    ರಾಜ್ಯದಲ್ಲಿ ಬರದಿಂದ ತತ್ತರಿಸುತ್ತಿರುವ ತಾಲೂಕುಗಳಿಗೆ ಸರ್ಕಾರ ಕೂಡಲೇ ನೆರವಿಗೆ ದಾವಿಸಬೇಕು. ಇಲದಿದ್ದರೆ ಬೆಳಗಾವಿಯಲ್ಲಿ ನಡೆಯುವ ಅಧಿವೇಶನ ಹೊರಗೆ ಹಾಗೂ ಒಳಗೆ ಬಿಜೆಪಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಳಗಾವಿ ಅಧಿವೇಶನದ ಬಳಿಕವೇ ಸಂಪುಟ ವಿಸ್ತರಣೆ : ಸಿದ್ದರಾಮಯ್ಯ

    ಬೆಳಗಾವಿ ಅಧಿವೇಶನದ ಬಳಿಕವೇ ಸಂಪುಟ ವಿಸ್ತರಣೆ : ಸಿದ್ದರಾಮಯ್ಯ

    ಬೆಂಗಳೂರು: ಡಿಸೆಂಬರ್ 22 ರಂದು ಸಂಪುಟ ವಿಸ್ತರಣೆ ಮಾಡಲು ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

    ಸಮನ್ವಯ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮ್ಯಯ ಅವರು, ಬಹಳ ದಿನಗಳ ನಂತರ ಸಮನ್ವಯ ಸಭೆ ಸೇರಿದ್ದು, ಅಧಿವೇಶನ ಡಿಸೆಂಬರ್ 10 ರಂದು ಆರಂಭವಾಗಲಿರುವ ಕಾರಣ ಡಿಸೆಂಬರ್ 22ಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಸಭೆಯಲ್ಲಿ ಸಂಪುಟ ವಿಸ್ತರಣೆ, ಶಾಸಕರಿಗೆ ಬೋರ್ಡ್ ಕಾರ್ಪೋರೇಷನ್ ನೇಮಕ ಕೂಡ ಮಾಡಲಾಗುವುದು. ಸದ್ಯ 10 ಮಂದಿ ಜೆಡಿಎಸ್ ಹಾಗೂ 20 ಕಾಂಗ್ರೆಸ್ ಶಾಸಕರಿಗೆ ನಿಗಮ ಮಂಡಳಿ ಸ್ಥಾನ ನೀಡಲಾಗುವುದು. ಅಲ್ಲದೇ ಸಭೆಯಲ್ಲಿ ಸರಕಾರ ಸುಗಮವಾಗಿ ನಡೆಯುವ ಕುರಿತು ಕೈಗೊಳ್ಳಬೇಕಾದ ಬಗ್ಗೆ ಸಾಕಷ್ಟು ಚರ್ಚೆ ನಡೆಸಲಾಯಿತು ಎಂದರು.

    ಇದೇ ವೇಳೆ ಸರ್ಕಾರದ ಯಾವುದೇ ಶಾಸಕರು ಕೂಡ ರಾಜೀನಾಮೆ ನೀಡಲ್ಲ. ಅಂತಹ ಯಾವುದೇ ಬೆಳವಣಿಗೆ ಇಲ್ಲ. ಕೇವಲ ಕೆಲ ವರದಿಗಳು ಬಂದಿದೆ ಅಷ್ಟೇ. ಮಾಜಿ ಸಚಿವ ಸತೀಶ್ ಜಾರಕಿಹೊಳಿ ಕೂಡ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಒಂದು ವೇಳೆ ಶಾಸಕರು ಸದನಕ್ಕೆ ಗೈರಾದರೆ ಬನ್ನಿ ಎಂದು ಹೇಳುತ್ತೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಯಾವುದೇ ನಾಯಕರು ರಾಜೀನಾಮೆ ನೀಡಲ್ಲ. ಇದು ಕೇವಲ ಬಿಜೆಪಿ ನಾಯಕರ ಹೇಳಿಕೆ ಮಾತ್ರ. ಒಮ್ಮೆ ಆಪರೇಷನ್ ಕಮಲ ಮಾಡಿ ಯಶಸ್ವಿಯಾಗಿದ್ದಾರೆ. ಈ ಬಾರಿ ಇಂತಹ ಯಾವುದೇ ಕ್ರಮ ನಡೆಯುವುದಿಲ್ಲ ಎಂದರು.

    ನಾನು ಸಮನ್ವಯ ಸಮಿತಿಯ ಮುಖ್ಯಸ್ಥನಾದ ಕಾರಣ ಪಕ್ಷದ ಶಾಸಕರು ಆಗಮಿಸಿ ಚರ್ಚೆ ನಡೆಸುತ್ತಾರೆ. ಸದ್ಯ ಸಂಪುಟ ವಿಸ್ತರಣೆ 9 ರಂದೇ ಮಾಡಲು ತೀರ್ಮಾನ ಮಾಡುವ ಬಗ್ಗೆ ಈ ಹಿಂದೆ ಚಿಂತನೆ ಮಾಡಲಾಗಿತ್ತು. ಆದರೆ ಬೆಳಗಾವಿಯಲ್ಲಿ ಸದನ ಆರಂಭವಾಗುವುದರಿಂದ ಡಿಸೆಂಬರ್ 22ಕ್ಕೆ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೌರ್ಜನ್ಯ ನಡೆಸಿ ವಿಷ್ಣು ಸ್ಮಾರಕಕ್ಕೆ ಜಮೀನು ಕಿತ್ತುಕೊಳ್ಳೋ ಬದಲು ವಿಷ ಕೊಟ್ಟು ಬಿಡಿ – ರೈತ ಮಹಿಳೆ

    ದೌರ್ಜನ್ಯ ನಡೆಸಿ ವಿಷ್ಣು ಸ್ಮಾರಕಕ್ಕೆ ಜಮೀನು ಕಿತ್ತುಕೊಳ್ಳೋ ಬದಲು ವಿಷ ಕೊಟ್ಟು ಬಿಡಿ – ರೈತ ಮಹಿಳೆ

    ಮೈಸೂರು: ನಮ್ಮ ಮೇಲೆ ದೌರ್ಜನ್ಯ ನಡೆಸಿ ಜಮೀನು ಕಿತ್ತು ಕೊಳ್ಳುವ ಬದಲು ವಿಷ ಕೊಟ್ಟು ಬಿಡಿ ಇಲ್ಲೆ ಎಲ್ಲಾ ಸತ್ತು ಹೋಗುತ್ತೇವೆ ಎಂದು ಡಾ. ವಿಷ್ಣು ಸ್ಮಾರಕ ನಿರ್ಮಾಣ ಮಾಡಲು ಗುರುತಿಸಿರುವ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ರೈತ ಮಹಿಳೆ ಜಯಮ್ಮ ಹೇಳಿದ್ದಾರೆ.

    ಮೈಸೂರಿನ ಹೊರವಲಯದ ಹಾಲಾಳು ಗ್ರಾಮದಲ್ಲಿ ಸ್ಮಾರಕ ನಿರ್ಮಾಣಕ್ಕೆ ಸರಕಾರ ಮುಂದಾಗಿತ್ತು. ಸರ್ಕಾರದ ನಿರ್ಧಾರಕ್ಕೆ ಈ ಜಾಗದಲ್ಲಿ ಕಳೆದ 4 ತಲೆಮಾರುಗಳಿಂದ ಉಳುಮೆ ಮಾಡುತ್ತಿರುವ ಜಯಮ್ಮ ಕುಟುಂಬ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದೆ.

    ವಿಷ್ಣು ಸ್ಮಾರಕ ವಿವಾದಕ್ಕೆ ಅಭಿಮಾನಿಗಳು ಆಗ್ರಹಿಸಿದ ಅಭಿಮಾನಿಗಳ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರೈತ ಮಹಿಳೆ ಜಯಮ್ಮ, ನಮಗೆ ಸೂಕ್ತವಾದ ಪರಿಹಾರ ಕೊಟ್ಟು ಜಮೀನು ತೆಗೆದುಕೊಳ್ಳಿ ಎಂದು ಹೇಳಿದ್ದೇನೆ. ಅದನ್ನು ಬಿಟ್ಟು ದೌರ್ಜನ್ಯ ಮಾಡಿ ಜಮೀನು ಕಿತ್ತು ಕೊಳ್ಳುವುದಾರೆ ವಿಷ ಕೊಡಿ. ನಮ್ಮ ಸಮಾಧಿಯೂ ಇಲ್ಲೇ ಮಾಡಿ ಎಂದರು.

    ಭಾರತಿ ವಿಷ್ಣುವರ್ಧನ್ ಅವರು ನಮ್ಮ ಜೊತೆ ಸರಿಯಾಗಿ ಮಾತನಾಡಿಲ್ಲ. ಇಲ್ಲಿಗೆ ಬರುವ ಎಲ್ಲರೂ ದೌರ್ಜನ್ಯದಿಂದ ನಡೆದುಕೊಳ್ಳುತ್ತಿದ್ದಾರೆ. ನಾಳೆಯಿಂದ ಈ ಜಮೀನಿಗೆ ಯಾರಿಗೂ ಕಾಲಿಡುವುದಕ್ಕೂ ಬಿಡಲ್ಲ. ನಮಗೇ ಸೂಕ್ತ ಪರಿಹಾರ ನೀಡದೆ 4 ತಲೆ ಮಾರುಗಳಿಂದ ಇದೇ ಭೂಮಿಯನ್ನು ನಂಬಿ ಜೀವನ ನಡೆಸುವ ನಮ್ಮ ಅನ್ನಕ್ಕೆ ಕಲ್ಲು ಹಾಕಬೇಡಿ. ನಿಮಗೇ ಇದೇ ಜಾಮೀನು ಬೇಕೆಂದರೆ ಸೂಕ್ತ ಪರಿಹಾರ ನೀಡಿ. ಈ ವಿಚಾರದಲ್ಲಿ ಭಾರತಿ ವಿಷ್ಣುವರ್ಧನ್ ಅವರು ಅಸಹಾಯಕರಾಗಿದ್ದಾರೆ. ಈ ಹಿಂದೆ ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ಹಣ ನೀಡಲ್ಲ ಎಂದು ಹೇಳಿ, ಸ್ವತಃ ಅವರೇ ಹಣ ನೀಡುತ್ತೇನೆ ಎಂದು ಮಾಹಿತಿ ನೀಡಿದ್ದರು. ಆದರೆ ಅವರು ನೀಡುವ 20 ಲಕ್ಷ ರೂ. ಮಾತ್ರ ನೀಡಿದರೆ ನಮಗೆ ಅನ್ಯಾಯವಾಗುತ್ತದೆ. ಸರ್ಕಾರ ಗೋಮಾಳ ಎಂದು ಹೇಳುತ್ತೆ. ಅದಕ್ಕೆ ನಾವು ಪರಿಹಾರಕ್ಕಾಗಿ ನ್ಯಾಯಾಲಯ ಮೋರೆ ಹೋಗಿದ್ದೇವೆ ಎಂದರು. ಇದನ್ನು ಓದಿ : ಸಾಹಸ ಸಿಂಹನಿಗೆ ಪೂಜೆ ಸಲ್ಲಿಸಿದ ಅಭಿಮಾನಿಗಳು – ಸ್ಮಾರಕ ನಿರ್ಮಾಣಕ್ಕೆ ಶಂಕು ಸ್ಥಾಪನೆ

    ಎಷ್ಟು ಪರಿಹಾರ ಬೇಕು ಎಂದು ಕೇಳಿದ್ದಕ್ಕೆ, 20 ಲಕ್ಷ ಬೇಡ. ನಮ್ಮ ಮನೆಯಲ್ಲಿ 5 ಮಂದಿ ಇದ್ದಾರೆ. ಒಂದೊಂದು ತಲೆಗೆ 30 ಲಕ್ಷ ಕೊಡಬೇಕು. ನಮ್ಮ ಬೇಡಿಕೆಗೆ ಭಾರತಿ ವಿಷ್ಣುವರ್ಧನ್ ಒಪ್ಪಿಗೆ ನೀಡಲಿಲ್ಲ ಎಂದು ಹೇಳಿದರು.

    ಕಲಾವದರಿಗೂ ಕಷ್ಟ ಸುಖ ಗೊತ್ತಿರುತ್ತದೆ. ನಮಗೆ ಮಾತುಕತೆ ಮೂಲವೇ ಚರ್ಚೆ ನಡೆಸಿ ಪರಿಹಾರ ನೀಡಲು ಮುಂದಾದರೆ ಸಿದ್ಧರಾಗಿದ್ದೇವೆ. ಈ ಕುರಿತು ಸರ್ಕಾರದ ಅಧಿಕಾರಿಗಳಿಗೂ ಕೂಡ ನಮ್ಮ ಬೇಡಿಕೆ ತಿಳಿಸಿದ್ದೇವೆ. ಈ ಭೂಮಿಯನ್ನು ನಂಬಿಯೇ ನಮ್ಮ ಕುಟುಂಬ ಜೀವನ ನಡೆಸುತ್ತಿದ್ದು, ಸೂಕ್ತ ಪರಿಹಾರ ನೀಡಬೇಕು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉತ್ತರ ಕರ್ನಾಟಕ ಕಡೆಗಣನೆ, ಸಿಎಂ ಎಚ್‍ಡಿಕೆ ಬಂಡತನದ ವರ್ತನೆ – ಶೆಟ್ಟರ್ ಕಿಡಿ

    ಉತ್ತರ ಕರ್ನಾಟಕ ಕಡೆಗಣನೆ, ಸಿಎಂ ಎಚ್‍ಡಿಕೆ ಬಂಡತನದ ವರ್ತನೆ – ಶೆಟ್ಟರ್ ಕಿಡಿ

    ಹುಬ್ಬಳ್ಳಿ: ಸಿಎಂ ಕುಮಾರಸ್ವಾಮಿ ಅವರು ಉದ್ದೇಶ ಪೂರ್ವಕವಾಗಿ ಉತ್ತರ ಕರ್ನಾಟಕವನ್ನು ಕಡೆಗಣಿಸುತ್ತಿದ್ದು, ಹಾಸನ, ರಾಮನಗರ, ಮಂಡ್ಯಗಳನ್ನು ಮಾತ್ರ ರಾಜ್ಯ ಎಂದು ತಿಳಿದುಕೊಂಡಿದ್ದಾರೆ. ಉತ್ತರ ಕರ್ನಾಟಕದವರು ತಮಗೆ ಮತಹಾಕಿಲ್ಲ ಎನ್ನುವ ಮೂಲಕ ಸಿಎಂ ಬಂಡತನದಿಂದ ವರ್ತಿಸುತ್ತಿದ್ದಾರೆಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

    ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಸ್ಥಿತಿ ಈಗ ದುಸ್ಥಿತಿ ತಲುಪಿದೆ. ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ರಾಜ್ಯ ಸರ್ಕಾರ ಸತ್ತು ಹೋಗಿದೆ ಎನ್ನುವ ಭಾವನೆ ಮೂಡುತ್ತಿದೆ. ಸರ್ಕಾರದ ಬಂಡತನದ ವಿರುದ್ಧ ಡಿಸೆಂಬರ್ 10 ರಂದು ಬೆಳಗಾವಿಯ ಸುವರ್ಣಸೌಧದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

    ಬರಗಾಲದ ಹಿನ್ನೆಲೆಯಲ್ಲಿ ಹಂಪಿ ಉತ್ಸವ ರದ್ದು ಮಾಡಿದ್ದು ಸರಿಯಲ್ಲ, ರದ್ದು ಮಾಡುವುದಾದರೆ ರಾಜ್ಯದ ಎಲ್ಲಾ ಉತ್ಸವಗಳನ್ನು ರದ್ದು ಮಾಡಲಿ. ಕೆಲವು ಉತ್ಸವಗಳನ್ನು ಮಾಡಿ, ಇನ್ನು ಕೆಲವನ್ನು ಮಾಡದಿರುವುದು ಸರಿಯಲ್ಲ. ಸರಳವಾಗಿಯಾದರೂ ಹಂಪಿ ಉತ್ಸವ ಮಾಡಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

    ಕಮಿಷನ್ ಆಸೆಗೆ ಬಿದ್ದ ರಾಜ್ಯ ಸರ್ಕಾರ:
    ರಾಜ್ಯದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸರ್ವಶಿಕ್ಷಣ ಅಭಿಯಾನದಡಿ ಎರಡು ಜೊತೆ ಸಮವಸ್ತ್ರ ಕೊಡಬೇಕಿತ್ತು. ಆದರೆ ಇದುವರೆಗೂ ಸರ್ಕಾರ ಒಂದು ಜೊತೆ ಸಮವಸ್ತ್ರ ಮಾತ್ರ ಕೊಟ್ಟಿದೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಹಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಬಟ್ಟೆ ಖರೀದಿಯಾಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.

    ಪ್ರತಿ ವರ್ಷ ಶಾಲಾ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ವಿತರಿಸಲಾಗುತ್ತದೆ. ಆದರೆ ಕಮಿಷನ್ ಆಸೆಗೆ ಬಿದ್ದ ಸರ್ಕಾರ ದೊಡ್ಡ ಕಂಪನಿಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಮುಂಬಯಿ ಮೂಲದ ಮಫತ್ಲಾಲ್, ಸಂಗಮ್ ಕಂಪನಿಗಳಿಗೆ ಗುತ್ತಿಗೆ ಕೊಡಲು ಮುಂದಾಗಿದ್ದರು, ಆದರೆ ನಮ್ಮ ಆಕ್ಷೇಪದಿಂದ ಒಪ್ಪಂದ ರದ್ದುಪಡಿಸಿ, ಎಸ್‍ಡಿಎಮ್‍ಸಿಗೆ ಬಟ್ಟೆ ಖರೀದಿಸಲು ಸೂಚಿಸಿದ್ದರು. ಆದರೆ ಆರು ತಿಂಗಳು ಕಳೆದರೂ ಬಟ್ಟೆ ಖರೀದಿಸಲು ಶಾಲೆಗಳಿಗೆ ಹಣ ಕೊಟ್ಟಿಲ್ಲ. ಕೇಂದ್ರ ಸರ್ಕಾರ ತನ್ನ ಪಾಲಿನ ಹಣ ಕೊಟ್ಟರೂ ರಾಜ್ಯ ಸರ್ಕಾರ ಮಾತ್ರ ಕೊಡುತ್ತಿಲ್ಲ ಎಂದು ದೂರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಷ್ಟದ ಹೊತ್ತಲ್ಲಿ ಶಕ್ತಿ ತುಂಬಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಸುಮಲತಾ ಅಂಬರೀಶ್

    ಕಷ್ಟದ ಹೊತ್ತಲ್ಲಿ ಶಕ್ತಿ ತುಂಬಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಸುಮಲತಾ ಅಂಬರೀಶ್

    – ಕರ್ನಾಟಕದ ಪುಣ್ಯ ಭೂಮಿಯಲ್ಲಿ ಹುಟ್ಟಿದ್ದೇ ಅಂಬಿ ಅದೃಷ್ಟ

    ಬೆಂಗಳೂರು: ಜೀವನದ ಅತ್ಯಂತ ಕಷ್ಟದ ಮತ್ತು ದುಃಖದ ಹೊತ್ತಿನಲ್ಲಿ ನನ್ನನ್ನು ಮತ್ತು ನನ್ನ ಕುಟುಂಬವನ್ನು ಬೆಂಬಲಿಸಿ ನಿಂತ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಹಾಗೆಯೇ ಸಕಲ ಸರ್ಕಾರಿ ಗೌರವ ನೀಡಿದ ಸರ್ಕಾರ, ಪೊಲೀಸ್ ಇಲಾಖೆ, ಮಂಡ್ಯ ಜನತೆ ಹಾಗೂ ಅಭಿಮಾನಿಗಳಿಗೆ ಸುಮಲತಾ ಅಂಬರೀಶ್ ಧನ್ಯವಾದ ತಿಳಿಸಿದ್ದಾರೆ.

    ಈ ಕುರಿತು ತಮ್ಮ ಫೇಸ್‍ಬುಕ್ ನಲ್ಲಿ ಬರೆದುಕೊಂಡಿರುವ ಸುಮಲತಾ ಅವರು, ನಿಮ್ಮ ಸಾಂತ್ವನದ ಮಾತುಗಳು ಮತ್ತು ನಿಮ್ಮ ಪ್ರೀತಿಯ ನಡೆಗಳು ಈ ಸಂಕಷ್ಟದ ಹೊತ್ತಿನಲ್ಲಿ ನಮಗೆ ಶಕ್ತಿ ತುಂಬಿದವು. ನಾನು, ಅಭಿಷೇಕ್ ಮತ್ತು ಅಂಬರೀಶ್ ಇಡೀ ಕುಟುಂಬವು ಕರ್ನಾಟಕದ ಜನತೆಗೆ ಸದಾ ಕಾಲ ಅಭಾರಿಯಾಗಿರುತ್ತೇವೆ. ವಿಶೇಷವಾಗಿ ಅಂಬರೀಶ್ ಅವರನ್ನು ತಮ್ಮ ರಾಜನಂತೆ ಗೌರವರಿಸಿ ಅತ್ಯಂತ ಪ್ರೀತಿಯಿಂದ ಕಳಿಸಿಕೊಟ್ಟ ಮಂಡ್ಯದ ಅಭಿಮಾನಿಗಳು ಮತ್ತು ಎಲ್ಲ ಅಭಿಮಾನಿಗಳಿಗೆ ನಾವುಗಳು ಯಾವಾಗಲು ಚಿರಋಣಿ ಎಂದು ತಿಳಿಸಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಅಂತ್ಯಕ್ರಿಯೆಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಡುವುದರ ಜೊತೆಗೆ ಅಂಬರೀಶ್ ಅವರಿಗೆ ಸಕಲ ಸರಕಾರಿ ಗೌರವದೊಂದಿಗೆ ಕಳುಹಿಸಿಕೊಟ್ಟ ಸನ್ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೂ, ಮಂಡ್ಯದ ಸಂಸದ ಸಿ.ಎಸ್.ಪುಟ್ಟರಾಜು ಅವರಿಗೂ, ಇನ್ನಿತರ ಶಾಸಕರು ಮತ್ತು ಸಂಸದರಿಗೂ, ಕರ್ನಾಟಕ ಸರ್ಕಾರಕ್ಕೂ ನಾನು ಈ ಮೂಲಕ ಅಭಿನಂದನೆ ತಿಳಿಸುತ್ತೇನೆ. ಮೂರು ದಿನಗಳ ಕಾಲ ಸತತವಾಗಿ ಶ್ರಮವಹಿಸಿ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಂಡ ಪೋಲಿಸ್ ಇಲಾಖೆಯವರಿಗೂ, ಅರ್ ಎ ಎಫ್ ಸಿಬ್ಬಂದಿಯವರಿಗೂ, ಮಂಡ್ಯ ಮತ್ತು ಬೆಂಗಳೂರು ಜಿಲ್ಲೆಯ ಅಧಿಕಾರಿ ವರ್ಗದವರಿಗೂ ನಾನು ಈ ಮೂಲಕ ಅಭಿನಂದನೆ ತಿಳಿಸಲು ಇಚ್ಚಿಸುತ್ತೇನೆ.

    ಅಂಬರೀಶ್ ಅವರು ಮೇಲೆ ಸದಾ ಕಾಲ ಪ್ರೀತಿ ಮತ್ತು ಅಭಿಮಾನವನ್ನು ತೋರಿಸಿದ ಮಂಡ್ಯ ಜನತೆಯ ಬಗ್ಗೆ ಹೇಳಲು ಪದಗಳೇ ಸಾಲುತ್ತಿಲ್ಲ. ಅವರು ಬದುಕಿದ್ದಾಗ ಹೇಗೆ ಪ್ರೀತಿ ಅಭಿಮಾನ ತೋರಿಸಿದರೋ ಹಾಗೆಯೇ ಅವರು ಸತ್ತ ನಂತರವು ಪ್ರೀತಿ ಅಭಿಮಾನಕ್ಕೆ ಯಾವುದೇ ಕೊರತೆಯಾಗದಂತೆ ನಡೆದುಕೊಂಡ ಮಂಡ್ಯದ ಜನತೆಗೆ ನಾನು ಸದಾ ಅಭಾರಿ. ಅವರೊಬ್ಬ ನಟ, ಕೇಂದ್ರದ ಮಂತ್ರಿ, ರಾಜ್ಯದ ಮಂತ್ರಿ, ಒಬ್ಬ ಸೂಪರ್ ಸ್ಟಾರ್, ಎಲ್ಲರಿಗೂ ಒಬ್ಬ ಒಳ್ಳೆಯ ಗೆಳೆಯರಾಗಿದ್ದರು. ಆದರೆ ಇವೆಲ್ಲಕ್ಕೂ ಮಿಗಿಲಾಗಿ ನಿಮ್ಮೆಲ್ಲರ ಪ್ರೀತಿ ಅಭಿಮಾನವೇ ಅವರಿಗೆ ದೊಡ್ಡ ಕಳಶದಂತೆ. ಅಂಬರೀಶ್ ಅವರು ನಮ್ಮ ಕರ್ನಾಟಕದ ಪುಣ್ಯ ಭೂಮಿಯಲ್ಲಿ ಹುಟ್ಟಿದ್ದೇ ಅವರಿಗೊಂದು ಅದೃಷ್ಟ. ಹಾಗೆಯೇ ಮಂಡ್ಯದ ಮಣ್ಣಿನ ಮಗ ಎನಿಸಿಕೊಳ್ಳಲು ಅಷ್ಟೇ ಅದೃಷ್ಟ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ವಿಷ್ಣುದಾದಾ ಸ್ಮಾರಕಕ್ಕೆ ಭೂಮಿ ನೀಡಲು ಮುಂದಾದ ಅಭಿಮಾನಿ

    ವಿಷ್ಣುದಾದಾ ಸ್ಮಾರಕಕ್ಕೆ ಭೂಮಿ ನೀಡಲು ಮುಂದಾದ ಅಭಿಮಾನಿ

    – ವಿಷ್ಣುವರ್ಧನ್ ಸ್ಮಾರಕ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಸಿಎಂ ಎಚ್‍ಡಿಕೆ ಸ್ಪಷ್ಟನೆ

    ಬೆಂಗಳೂರು: ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲು ಸ್ವಂತ ಜಾಗವನ್ನು ನೀಡಲು ಅಭಿಮಾನಿಯೊಬ್ಬರು ಮುಂದಾಗಿದ್ದಾರೆ.

    ಮಂಡ್ಯದ ಕೆ.ಸಿ.ಪಿ ರಾಜಣ್ಣ ಅವರು ಸ್ಮಾರಕ ಸ್ಥಳಕ್ಕೆ ಜಮೀನು ನೀಡಲು ಮುಂದಾದ ಅಭಿಮಾನಿಯಾಗಿದ್ದು, ಮೈಸೂರಿನ ಕೆ.ಆರ್.ಎಸ್. ಜಲಾಶಯ ಬಳಿ ತಮ್ಮ ಹೆಸರಿನಲ್ಲಿ ಇರುವ 100*80 ನಿವೇಶನ ಹಾಗೂ ಪಕ್ಕದಲ್ಲೇ ಇರುವ 13 ಗುಂಟೆ ಜಾಗವನ್ನು ತಮ್ಮ ಹಣದಲ್ಲಿ ಖರೀದಿ ಮಾಡಿ ಸ್ಮಾರಕಕ್ಕೆ ನೀಡಲು ಮುಂದಾಗಿದ್ದಾರೆ.

    ಮೂರು ತಿಂಗಳ ಹಿಂದೆಯಷ್ಟೆ 100*80 ನಿವೇಶನವನ್ನು ರಾಜಣ್ಣ ಅವರು ಖರೀದಿ ಮಾಡಿದ್ದರು. ವೃತ್ತಿಯಲ್ಲಿ ಕಂಟ್ರ್ಯಾಕ್ಟರ್ ಆಗಿರುವ ರಾಜಣ್ಣ ಅವರು ವಿಷ್ಣುದಾದಾರ ಬಹುದೊಡ್ಡ ಅಭಿಮಾನಿ. ಹೀಗಾಗಿ ಸ್ಮಾರಕಕ್ಕೆ ಜಮೀನು ನೀಡಲು ಮುಂದಾಗಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ರಾಜಣ್ಣ ಅವರು, ಕೆ.ಆರ್.ಎಸ್ ಬಳಿ ಇರುವ ನನ್ನ ಭೂಮಿಯಲ್ಲಿ ದೇವಾಲಯವನ್ನು ನಿರ್ಮಾಣ ಮಾಡಲು ತೀರ್ಮಾನ ಮಾಡಿ ಸ್ಥಳ ಖರೀದಿ ಮಾಡಿದೆ. ಇದರ ಪಕ್ಕದಲ್ಲೇ 13 ಗುಂಟೆ ಖಾಸಗಿ ವ್ಯಕ್ತಿಯ ಸ್ಥಳವಿದೆ. ಅದನ್ನು ಖರೀದಿ ಮಾಡಿ ಸರ್ಕಾರಕ್ಕೆ ನೀಡುತ್ತೇನೆ. ಅಲ್ಲದೇ ಈ ಸ್ಥಳದಲ್ಲಿ ಸರ್ಕಾರದ 4 ಎಕರೆ ಪ್ರದೇಶವಿದೆ. ನಾನು ಅಶ್ರಮ ಮಾಡಬೇಕು ಎಂದಿದೆ. ಆದರೆ ವಿಷ್ಣು ಅವರ ಸ್ಮಾರಕಕ್ಕೆ ಉಂಟಾಗಿರುವ ಗೊಂದಲ ನಿವಾರಣೆ ಮಾಡಬೇಕಿದೆ. ಅದ್ದರಿಂದ ನಮ್ಮ ಕುಟುಂಬ ಈ ನಿರ್ಧಾರ ಮಾಡಿದೆ ಎಂದು ತಿಳಿಸಿದರು.

    ವಿಷ್ಣು ಅವರ ಸ್ಮಾರಕ ವಿಚಾರಕ್ಕೆ ಈ ರೀತಿ ಹೋರಾಟ ಗೊಂದಲ ಉಂಟಾಗುವುದು ಬೇಡ. ಇದರಿಂದ ನಮ್ಮ ವಿಷ್ಣು ಕುಟುಂಬಕ್ಕೆ ಸಮಸ್ಯೆ ಉಂಟಾಗುತ್ತದೆ. ಅಲ್ಲದೇ ಅಭಿಮಾನಿಗಳಿಗೂ ಒಂದು ರೀತಿ ಅವಮಾನ ಆಗುತ್ತದೆ. ಸರ್ಕಾರ ಹಾಗೂ ಭಾರತಿ ವಿಷ್ಣುವರ್ಧನ್ ಅಮ್ಮನವರು ಈ ಬಗ್ಗೆ ಮಾತನಾಡಿ ತೀರ್ಮಾನ ತೆಗೆದುಕೊಂಡರೆ ನಾನು ಈ ಕ್ಷಣಕ್ಕೆ ಜಾಗ ನೀಡಲು ಸಿದ್ಧ ಎಂದು ಸ್ಪಷ್ಟಪಡಿಸಿದರು.

    ಎಚ್‍ಡಿಕೆ ಸ್ಪಷ್ಟನೆ: ವಿಷ್ಣುದಾದಾ ಸ್ಮಾರಕ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿದ್ದು, ಡಾ. ರಾಜ್‍ಕುಮಾರ್, ಡಾ. ವಿಷ್ಣುವರ್ಧನ್ ಸ್ಮರಿಸುವ ವಿಷ್ಯದಲ್ಲಿ ನಾನು ಬದ್ಧ. ವಿಷ್ಣು ಸ್ಮಾರಕ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಇತ್ತ ಇಂದು ಮಧ್ಯಾಹ್ನ 2 ಗಂಟೆಗೆ ನಿರ್ಮಾಪಕರ ಸಂಘದ ಸದಸ್ಯರು ವಿಷ್ಣು ಕುಟುಂಬಸ್ಥರನ್ನು ಭೇಟಿ ಆಗಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv