Tag: State Government

  • ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣ – ಭಾನುವಾರ ಬಂದರುಗಳು ಬಂದ್!

    ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣ – ಭಾನುವಾರ ಬಂದರುಗಳು ಬಂದ್!

    ಉಡುಪಿ: ಜಿಲ್ಲೆಯ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ 7 ಮಂದಿ ಮೀನುಗಾರರು ನಾಪತ್ತೆಯಾಗಿ 20 ದಿನಗಳು ಕಳೆದಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸದ್ಯ ಕರಾವಳಿಯ ಮೀನುಗಾರರು ಅನಾಥರಾಗಿದ್ದು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ನಾವು ನಿರ್ಧರಿಸಿದ್ದೇವೆ ಎಂದು ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.

    ಡಿಸೆಂಬರ್ 13ರಿಂದ ಈವರೆಗೆ ನಾಪತ್ತೆಯಾದ ಮೀನುಗಾರರು ಮತ್ತು ಬೋಟನ್ನು ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಗೋವಾ ಮತ್ತು ಮಹಾರಾಷ್ಟ್ರ ಸಮುದ್ರದ ಗಡಿಯಲ್ಲಿ ಮೀನುಗಾರರು ಕಣ್ಮರೆಯಾಗಿರುವ ವಿಚಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ಬಂದರೂ ಈವರೆಗೆ ಯಾವುದೇ ಫಲಿತಾಂಶ ಸಿಕ್ಕಿಲ್ಲ. 7 ಮಂದಿ ಕಡಲ ಮಕ್ಕಳು ಏನಾದರು ಎನ್ನುವುದು ಇನ್ನು ನಿಗೂಢವಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ಸರ್ಕಾರಗಳ ವಿರುದ್ಧ ಜನವರಿ 6 ರಂದು ಕಡಲ ಮಕ್ಕಳು ಬೀದಿಗಿಳಿದು ಹೋರಾಟ ಮಾಡಲಿದ್ದಾರೆ ಎಂದರು.

    ಪ್ರತಿಭಟನೆ ಭಾಗವಾಗಿ ಮಲ್ಪೆಯಿಂದ ಉಡುಪಿಯ ಕರಾವಳಿ ಬೈಪಾಸ್ ವರೆಗೆ ಪಾದಯಾತ್ರೆ ಮಾಡಲಾಗುವುದು. ಈ ಪ್ರತಿಭಟನೆಯಲ್ಲಿ ಸುಮಾರು 50 ಸಾವಿರ ಮಂದಿ ಮೀನುಗಾರರು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ರಸ್ತೆಗಿಳಿಯಲಿದ್ದು ಹೆದ್ದಾರಿ ಬಂದ್ ಮಾಡಲಿದ್ದಾರೆ. ಇದನ್ನು ಓದಿ: ಕಸುಬಿಗಾಗಿ ಕಡಲಿಗಿಳಿದವರು 17 ದಿನದಿಂದ ಕಣ್ಮರೆ- ಇದು ಮಿಸ್ಸಿಂಗ್ ಸೆವೆನ್ ಮಿಸ್ಟರಿ

    ಘಟನೆ ನಡೆದು ತಿಂಗಳಾದರೂ ಸಿಎಂ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಹಾಗೂ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಈ ಕುರಿತು ಒಂದೇ ಒಂದು ಹೇಳಿಕೆ ನೀಡದಿರುವುದು ಕರಾವಳಿಯ ಪ್ರಬಲ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಭಾನುವಾರ ಮೂರೂ ಜಿಲ್ಲೆಯ ಬಂದರುಗಳನ್ನು ಬಂದ್ ಮಾಡುವ ಎಚ್ಚರಿಕೆಯನ್ನೂ ಮೀನುಗಾರ ಮುಖಂಡರು ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಪತ್ತೆಯಾದ ಮೀನುಗಾರರ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ- ಶೋಭಾ ಕರಂದ್ಲಾಜೆ ಗಂಭೀರ ಆರೋಪ

    ನಾಪತ್ತೆಯಾದ ಮೀನುಗಾರರ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ- ಶೋಭಾ ಕರಂದ್ಲಾಜೆ ಗಂಭೀರ ಆರೋಪ

    ನವದೆಹಲಿ: ಉಡುಪಿಯಿಂದ ಸುವರ್ಣ ತ್ರಿಭುಜ ಅನ್ನೋ ದೋಣಿ 2018ರ ಡಿ.13ರಿಂದ ಉಡುಪಿಯಿಂದ ಹೊರಟಿದ್ದು, ನಾಪತ್ತೆಯಾಗಿದೆ. ಇದೂವರೆಗೂ ದೋಣಿಯ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಳ್ಳಲು ಮುಂದಾಗಿಲ್ಲ ಅಂತ ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೀನುಗಾರರು ಮೀನು ಹಿಡಿಯಲು ಹೋಗುವ ಸಂದರ್ಭದಲ್ಲಿ 8-10 ದೋಣಿಗಳು ಒಟ್ಟಿಗೆ ಸಾಗುತ್ತವೆ. 15ನೇ ತಾರೀಕಿನಂದು ರಾತ್ರಿ 1 ಗಂಟೆಯವರೆಗೆ ಈ ಎಲ್ಲಾ ದೋಣಿಗಳಲ್ಲಿದ್ದ ಮೀನುಗಾರರು ಪರಸ್ಪರ ಸಂಪರ್ಕದಲ್ಲಿದ್ದರು. ಮಹಾರಾಷ್ಟ್ರದ ಸಿಂಧುದುರ್ಗದಿಂದ ಕೊನೆಯ ವಯರ್ ಲೆಸ್ ಮೆಸೇಜ್ ಮತ್ತು ಮೊಬೈಲ್ ಮೆಸೇಜ್ ಸುವರ್ಣ ತ್ರಿಭುಜ ಅನ್ನೋ ದೋಣಿಯಲ್ಲಿದ್ದ ಮೀನುಗಾರರಿಂದಲೂ ಮೆಸೇಜ್ ಗಳು ಬಂದಿತ್ತು. ಅದರಲ್ಲಿ 7 ಮೀನುಗಾರರಿದ್ದರು. ಅದಾದ ಬಳಿಕ ಇದುವರೆಗೂ ಮೀನುಗಾರರ ದೋಣಿ ನಾಪತ್ತೆಯಾಗಿದೆ. ಎಲ್ಲಿದೆ ಅನ್ನೋದು ಇನ್ನೂ ತಿಳಿದುಬಂದಿಲ್ಲ ಅಂದ್ರು.

    ಕೋಸ್ಟಲ್ ಗಾರ್ಡ್ ಅವರಲ್ಲಿ ವಿನಂತಿ ಮಾಡಿಕೊಂಡ ಬಳಿಕ ಕರಾವಳಿಯ ಎಲ್ಲಾ ಪ್ರದೇಶದಲ್ಲಿಯೂ ಹುಡುಕಾಡಿದ್ದಾರೆ. ಸಾಮಾನ್ಯವಾಗಿ ದೋಣಿ ಮುಳುಗಡೆಯಾದ್ರೆ ಅದರ ಡೀಸೆಲ್ ನೀರಿನಲ್ಲಿ ತೇಲುತ್ತದೆ. ಅಲ್ಲದೇ ಮೀನುಗಾರಿಕೆಗೆ ಬೇಕಾದ ಪ್ಲಾಸ್ಟಿಕ್ ಡಬ್ಬಗಳು ತೇಲುತ್ತವೆ. ಆದ್ರೆ ಆ ರೀತಿಯ ಯಾವುದೇ ಕುರುಹುಗಳು ಕಾಣಿಸುತ್ತಿಲ್ಲ ಅಂತ ಮೀನುಗಾರರು ಹೇಳುತ್ತಿದ್ದಾರೆ.

    ಈ 7 ಜನ ಮೀನುಗಾರರ ಕುಟುಂಬ ಇಂದು ತುಂಬಾ ನೊಂದಿದ್ದು, ದುಃಖದಲ್ಲಿದ್ದಾರೆ. ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳಿಗೆ, ಮಹಾರಾಷ್ಟ್ರ ಸರ್ಕಾರದ ಗೃಹಸಚಿವ, ಡಿಜಿ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಇವರಿಗೆ ಎಲ್ಲಾ ವಿಚಾರಗಳನ್ನು ಈಗಾಗಲೇ ತಿಳಿಸಿದ್ದೇವೆ. ಪತ್ರನೂ ಬರೆದಿದ್ದೇನೆ ಅಂದ್ರು.

    ಕರ್ನಾಟಕ ರಾಜ್ಯ ಸರ್ಕಾರ ಮೀನುಗಾರಿಕಾ ಇಲಾಖೆ ಯಾವ ಕ್ರಮವನ್ನು ಕೈಗೊಳ್ಳಬೇಕಾಗಿತ್ತೋ ಅದನ್ನು ಇಂದಿನವರೆಗೆ ತೆಗೆದುಕೊಂಡಿಲ್ಲ. ಸಹಜವಾಗಿ ನಾವು ಒಬ್ಬರು ತೀರಿಕೊಂಡರೆ ಆತಂಕ ಪಡುತ್ತೇವೆ. ಆದ್ರೆ 7 ಜನ ನಾಪತ್ತೆಯಾದ್ರೂ ಕೂಡ ಇಂದಿನವರೆಗೆ ಯಾವುದೇ ರೀತಿಯ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರು.

    ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ನಾನು ಮಾತನಾಡಿದ ಬಳಿಕ ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ಈ ಒಂದು ಪತ್ರದ ಹೊರತಾಗಿ ಮೀನುಗಾರರನ್ನು ಹುಡುಕೋದ್ರಲ್ಲಿ ಯಾವುದೇ ರೀತಿಯ ಪ್ರಯತ್ನಗಳು ಕಾಣಿಸುತ್ತಿಲ್ಲ ಅಂತ ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಇದನ್ನೂ ಓದಿ: ಕಸುಬಿಗಾಗಿ ಕಡಲಿಗಿಳಿದವರು 17 ದಿನದಿಂದ ಕಣ್ಮರೆ- ಇದು ಮಿಸ್ಸಿಂಗ್ ಸೆವೆನ್ ಮಿಸ್ಟರಿ

    ಉಡುಪಿಯ ಮಲ್ಪೆಯಲ್ಲಿರುವ ಮೀನುಗಾರರ ಜೊತೆ ಇತ್ತೀಚೆಗೆ ಮಾತುಕತೆ ನಡೆಸಿದಾಗ ಅವರು, ಈ ಹಿಂದೆ ಕೂಡ ಸಿಂಧುದುರ್ಗದಿಂದ ನಮ್ಮ ದೋಣಿಯನ್ನು ತಗೊಂಡೋಗಲಾಗಿತ್ತು. ಬಳಿಕ ಅವರನ್ನು ಒತ್ತೆಯಾಳಗಿರಿಸಿಕೊಳ್ಳಲಾಗಿತ್ತು. ಈ ಕಾರಣದಿಂದ ಇಂದು ಈ ದೋಣಿ ಕೂಡ ಮುಳುಗಡೆ ಆಗಿಲ್ಲ ಅಂತಂದ್ರೆ ಎಲ್ಲಿ ಹೋಯಿತು ಅನ್ನೋ ಪ್ರಶ್ನೆ ಅವರಲ್ಲಿ ಮೂಡಿದೆ. ಯಾರು ಅವರನ್ನು ಹಿಡಿದಿಟ್ಟುಕೊಂಡಿದ್ದಾರೆ. ಯಾರು ಅವರನ್ನು ಒತ್ತೆಯಾಳಾಗಿರಸಿಕೊಂಡಿದ್ದಾರೆ. ಯಾವುದಾದರೂ ಡ್ರಗ್ ಮಾಫಿಯಾದ ಕೈವಾಡವಿದೆಯಾ ಅನ್ನೋವಂತದ್ದನ್ನು ಪತ್ತೆ ಹಚ್ಚುವ ದೊಡ್ಡ ಜವಾಬ್ದಾರಿ ಇದೆ. ಹೀಗಾಗಿ ರಾಜ್ಯ ಸರ್ಕಾರ ಮುತುವರ್ಜಿವಹಿಸಿ ಕ್ರಮ ಕೈಗೊಳ್ಳಬೇಕು ಅಂತ ಅವರು ಆಗ್ರಹಿಸಿದ್ರು. ಇದನ್ನೂ ಓದಿ: ಕಡಲಿನಿಂದ್ಲೇ ಅಪಹರಣ ಮಾಡಿದ್ರಾ ಉಗ್ರರು!

    ಇಂದು ಕೇವಲ ಒಂದು ದೋಣಿಯ ಪ್ರಶ್ನೆಯಲ್ಲ. ಇಡೀ ಉಡುಪಿ ಜಿಲ್ಲೆಯ, ಉತ್ತರ ಕನ್ನಡ ಹಾಗೂ ದಕ್ಷಿಣ ಕ್ನನಡದ ವಿಚಾರವಾಗಿದೆ. ಇಲ್ಲಿ ಮೀನುಗಾರಿಕೆ ಕಳೆದ 10 ದಿನಗಳಿಂದ ಬಂದ್ ಆಗಿದೆ. ಯಾಕಂದ್ರೆ ಎಲ್ಲರೂ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಕರ್ನಾಟಕ ಸರ್ಕಾರ ತಕ್ಷಣ ಗೋವಾ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಜೊತೆ ಸಿಎಂ ಎಚ್ ಡಿ ಕುಮಾರಸ್ವಾಮಿಯವರು ಮಾತನಾಡಬೇಕು. ಕೇಂದ್ರ ಸರ್ಕಾರದ ಸಹಾಯವನ್ನೂ ಕೂಡ ಪಡೆದುಕೊಂಡು ತಕ್ಷಣ ಮೀನುಗಾರರನ್ನು ಹಾಗೂ ದೋಣಿಯನ್ನು ಹುಡುಕುವ ಕೆಲಸವನ್ನು ಮಾಡಬೇಕು ಅಂತ ಅವರು ಒತ್ತಾಯಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಾವ ಪಕ್ಷದಲ್ಲಾದರೂ ಇರಿ, ನಮ್ಮ ಕಣ್ಮುಂದೆ ಇರಿ

    ಯಾವ ಪಕ್ಷದಲ್ಲಾದರೂ ಇರಿ, ನಮ್ಮ ಕಣ್ಮುಂದೆ ಇರಿ

    – ರಮೇಶ್ ಜಾರಕಿಹೊಳಿಗೆ ಸ್ನೇಹಿತ ಬರೆದ ಪತ್ರ ವೈರಲ್

    ಬೆಳಗಾವಿ: ಸಮ್ಮಿಶ್ರ ಸರ್ಕಾರ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸಂಪುಟದಿಂದ ಕೈಬಿಟ್ಟ ಪರಿಣಾಮ ಪಕ್ಷದ ಮುಖಂಡರು, ಮಾಧ್ಯಮ ಹಾಗೂ ಸ್ನೇಹಿತ ಕೈಗೆ ಸಿಗದೆ ಇರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸ್ನೇಹಿತರೊಬ್ಬರು ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ವಾಟ್ಸಾಪ್ ಮೂಲಕ ವೈರಲ್ ಆಗಿರುವ ಪತ್ರದಲ್ಲಿ ರಮೇಶ್ ಜಾರಕಿ ಹೊಳಿ ಅವರಿಗೆ ಮನವಿ ಮಾಡಿರುವ ಸ್ನೇಹಿತ, ನಿಮ್ಮ ನೇರಮಾತು, ನಿಷ್ಕಪಟ ನಡೆಯನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನೀವು ಎಂಟು ದಿನಗಳಿಂದ ನಮ್ಮೆಲ್ಲರಿಂದ ದೂರ ಉಳಿದಿರುವುದು ಸರಿಯಲ್ಲ. ನಿಮ್ಮನ್ನು ಹುಡುಕಿ ಸಾಕಾಗಿದೆ ಎಂದು ಅಶೋಕ್ ಚಂದರಗಿ ಎಂಬವರು ಮಾತ್ರ ಬರೆದಿದ್ದಾರೆ.

    ನೀವು ಕಾಂಗ್ರೆಸ್, ಬಿಜೆಪಿ ಯಾವುದೇ ಪಕ್ಷದಲ್ಲಾದರೂ ಇರಿ, ಆದರೆ ಸದಾ ನಮ್ಮ ಕಣ್ಣು ಮುಂದೆಯೇ ಇರಿ. ರಮೇಶ್ ಜಾರಕಿಹೊಳಿ ಎಂದು ನಿಂತ ನೀರಲ್ಲ. ನಿಮ್ಮ ದೀರ್ಘಕಾಲದ ಕಣ್ಮರೆ ನಮಗಷ್ಟೇ ಅಲ್ಲ. ನಿಮ್ಮಿಂದ ದೂರ ಸರಿದವರಿಗೆ ಎಲ್ಲರಿಗೂ ದುಃಖ ಉಂಟು ಮಾಡಿದೆ. ತಾವು ಎಲ್ಲಿದ್ದರೂ ಬೆಳಗಾವಿಗೆ ಮರಳಿ ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಬೆಳಗಾವಿ ಗಂಡುಮೆಟ್ಟಿನ ನಾಡು. ನಾವು ಅಡಗಿ ಕುಳಿತುಕೊಳ್ಳುವ ಬೆಕ್ಕುಗಳಲ್ಲ. ಘರ್ಜಿಸುವ ಸಿಂಹಗಳು ಇದ್ದಂಗೆ ಎಂದು ರಮೇಶ್ ಅವರ ಸ್ನೇಹಿತ ಅಶೋಕ್ ಪತ್ರ ಬರೆದು ಬೆನ್ನಿಗೆ ನಿಂತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿವಾದಿತ ಸ್ಟೀಲ್ ಬ್ರಿಡ್ಜ್‌ಗೆ ಮರುಜೀವ – ಮತ್ತೆ ಯೋಜನೆ ಕೈಗೆತ್ತಿಕೊಳ್ಳಲು ದೋಸ್ತಿಗಳ ಚಿಂತನೆ

    ವಿವಾದಿತ ಸ್ಟೀಲ್ ಬ್ರಿಡ್ಜ್‌ಗೆ ಮರುಜೀವ – ಮತ್ತೆ ಯೋಜನೆ ಕೈಗೆತ್ತಿಕೊಳ್ಳಲು ದೋಸ್ತಿಗಳ ಚಿಂತನೆ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ವಿವಾದಕ್ಕೆ ಒಳಗಾಗಿ ಕೈ ಬಿಟ್ಟಿದ್ದ ಸ್ಟೀಲ್ ಬ್ರಿಡ್ಜ್ ಯೋಜನೆಗೆ ಮರುಜೀವ ನೀಡಲು ಮೈತ್ರಿ ಸರ್ಕಾರ ಮುಂದಾಗಿದೆ. ಈ ಕುರಿತು ಡಿಸಿಎಂ ಪರಮೇಶ್ವರ್ ಹೇಳಿಕೆ ನೀಡಿ ಸರ್ಕಾರ ಚಿಂತನೆ ಬಗ್ಗೆ ಮಾಹಿತಿ ನೀಡಿದ್ದಾರೆ.

    2017 ಮಾರ್ಚ್ ತಿಂಗಳಿನಲ್ಲಿ ಸಿದ್ದರಾಮಯ್ಯ ಸರ್ಕಾರ ಯೋಜನೆಯನ್ನು ಕೈಬಿಟ್ಟಿದ್ದು, ಚಾಲುಕ್ಯ ಸರ್ಕಲ್ ನಿಂದ ಎಸ್ಟೀಮ್ ಮಾಲ್ ವರೆಗೂ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು 1,856 ಕೋಟಿ ರೂ. ಅಂದಾಜು ಮೊತ್ತ ನಿಗದಿ ಮಾಡಲಾಗಿತ್ತು. ಆದರೆ ಪರಿಸರವಾದಿಗಳ ವಿರೋಧ ಹಾಗೂ ಜನಸಾಮಾನ್ಯರ ಒತ್ತಡದಿಂದಾಗಿ ಈ ಯೋಜನೆಯನ್ನು ಕೈಬಿಡಲಾಗಿತ್ತು. ಆದರೆ ಮತ್ತೆ ಈಗ ಡಿಸಿಎಂ ಬ್ರಿಡ್ಜ್ ಕುರಿತು ಮರು ಪರೀಶಿಲನೆ ನಡೆಸಲು ತೀರ್ಮಾನ ಕೈಗೊಂಡಿದ್ದಾಗಿ ಹೇಳಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಡಿಸಿಎಂ ಪರಮೇಶ್ವರ್ ಅವರು, ಸ್ಟೀಲ್ ಬ್ರಿಡ್ಜ್ ನಿರ್ಮಾಣ ನಮಗೆ ಅಗತ್ಯವಾಗಿದ್ದು, ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಹೆಚ್ಚು ಅನುಕೂಲ ಆಗಲಿದೆ. ಈ ಯೋಜನೆಯ ಸಮಗ್ರ ಯೋಜನಾ ವರದಿ(ಡಿಪಿಆರ್) ಮರುಪರಿಶೀಲನೆಗೆ ತೀರ್ಮಾನಿಸಲಾಗಿದೆ. ಈ ಯೋಜನೆಯನ್ನು ಯಾರು ವಿರೋಧ ಮಾಡುತ್ತಾರೆ ಅಂತಹವರ ಹಾಗೂ ಜನಸಾಮಾನ್ಯರ ಅಭಿಪ್ರಾಯ ಪಡೆಯಲಾಗುವುದು. ಡಿಪಿಆರ್ ನಲ್ಲಿ ಇರುವ ಲೋಪಗಳ ಅಂಶಗಳ ಬಗ್ಗೆ ಮಾಹಿತಿ ನೀಡಿದರೆ ಅದನ್ನು ಸರಿಪಡಿಸಿಕೊಳ್ಳುತ್ತವೆ ಎಂದರು.

    ಆರಂಭದಲ್ಲಿ 1,356 ಕೋಟಿ ಇದ್ದ ಯೋಜನೆಯ ಗಾತ್ರ ಕೆಲ ದಿನಗಳ ಅಂತರದಲ್ಲಿ 450 ಕೋಟಿ ರೂ. ಹೆಚ್ಚಿಸಿ ಯೋಜನೆ ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿತ್ತು. ದಿಢೀರ್ ಆಗಿ 450 ಕೋಟಿ ರೂ. ಮೊತ್ತ ಏರಿಕೆಯಾಗಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡಿತ್ತು. ಅಂದು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ ಅವರು ಸದ್ಯ ಸಿಎಂ ಆಗಿದ್ದಾರೆ.

    ಯೋಜನೆ ನಿರ್ಮಾಣವಾದರೆ ನಗರದಿಂದ ವಿಮಾನ ನಿಲ್ದಾಣಕ್ಕೆ ತೆರಳು 20 ನಿಮಿಷ ಸಾಕು ಎಂಬ ಪರಮೇಶ್ವರ್ ಹೇಳಿಕೆ ನೀಡಲು ಬಿಡಿಎ ಎಂಜಿನಿಯರ್ ಹಾಗೂ ಗುತ್ತಿಗೆ ಕಂಪೆನಿಗಳ ಒತ್ತಡವೇ ಕಾರಣ ಎನ್ನಲಾಗಿದೆ. 6.7 ಕಿ.ಮೀ ದೂರದ ಸೇತುವೆ ನಿರ್ಮಾಣವಾದರೆ ಸುಮಾರು ಸಾವಿರಕ್ಕೂ ಹೆಚ್ಚಿನ ಮರಗಳಿಗೆ ಕೊಡಲಿ ಪೆಟ್ಟು ಬೀಳಲಿದೆ. ಇದನ್ನು ಓದಿ: ಬಿಎಸ್‍ವೈ ಡೈರಿ ಹೊಡೆತಕ್ಕೆ ಸ್ಟೀಲ್ ಬ್ರಿಡ್ಜ್ ಕುಸಿತ!

    ಡಿಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಪಕ್ಷದ ನಾಯಕಿ ತೇಜಸ್ವಿನಿ ಅವರು, ಸ್ಟೀಲ್ ಬ್ರಿಡ್ಜ್ ಪರಿಸರಕ್ಕೆ ಹೆಚ್ಚಿನ ಉಷ್ಣಾಂಶವನ್ನು ಬಿಡುಗಡೆ ಮಾಡುತ್ತದೆ. ಅಲ್ಲದೇ ನಿರ್ಮಾಣದ ವೇಳೆ ಹೆಚ್ಚಿನಮರಗಳಿಗೆ ಹಾನಿ ಆಗಲಿದೆ. ಆದ್ದರಿಂದ ಸರ್ಕಾರ ಈ ಯೋಜನೆ ಬಗ್ಗೆ ಚಿಂತನೆ ಮಾಡುವುದನ್ನು ಬಿಟ್ಟು, ಇರುವ ರಸ್ತೆಯನ್ನು ಆಗಲೀಕರಣ ಮಾಡಿ ಉತ್ತಮ ರಸ್ತೆ ನಿರ್ಮಾಣ ಮಾಡಲಿ ಎಂದು ಸಲಹೆ ನೀಡಿದರು.

    ಏನಿದು ಸ್ಟೀಲ್‍ಬ್ರಿಡ್ಜ್ ವಿವಾದ?
    ಬೆಂಗಳೂರಿನ ಚಾಲುಕ್ಯ ಸರ್ಕಲ್‍ನಿಂದ ಹೆಬ್ಬಾಳದವರೆಗೆ 1790 ಕೋಟಿ ರೂ. ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚಿಂತನೆ ನಡೆಸಿತ್ತು. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಈ ಯೋಜನೆಯನ್ನು ಮಾಡಲಾಗಿತ್ತು. ಆದ್ರೆ ಬ್ರಿಡ್ಜ್ ನಿರ್ಮಾಣದಿಂದ ಸಾವಿರಾರು ಮರಗಳ ಮಾರಣಹೋಮವಾಗಲಿದ್ದು, ಇದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ವಿವಾದವಾಗಿತ್ತು. ಪರಿಸರವಾದಿಗಳು ಚೆನ್ನೈನ ಹಸಿರು ಪೀಠದಿಂದ ಯೋಜನೆಗೆ ತಡೆಯಾಜ್ಞೆ ತಂದಿದ್ದರು. ಪ್ರತಿಪಕ್ಷ ಬಿಜೆಪಿ ಈ ಯೋಜನೆಯಲ್ಲಿ ಡೀಲ್ ನಡೆದಿದೆ. ಉತ್ತರ ಪ್ರದೇಶ ಚುನಾವಣೆಗಾಗಿ ಈ ಯೋಜನೆಯ ಹಣವನ್ನು ಬಳಕೆ ಮಾಡಲಾಗುತ್ತದೆ ಎಂದು ಬಿಜೆಪಿ ಆರೋಪಿಸಿತ್ತು. ಗೋವಿಂದರಾಜು ಡೈರಿಯಲ್ಲಿ ಸ್ಟೀಲ್‍ಬ್ರಿಡ್ಜ್‍ಗಾಗಿ ಸಿಎಂ 65 ಕೋಟಿ ರೂ. ಕಿಕ್‍ಬ್ಯಾಕ್ ಪಡೆದಿರುವ ಉಲ್ಲೇಖವಿದೆ ಎಂದು ಬಿಎಸ್‍ವೈ ಆರೋಪ ಮಾಡಿದ್ದರು. ವಿವಾದ ಜೋರಾಗುತ್ತಿದ್ದಂತೆ ಸಿದ್ದರಾಮಯ್ಯ ಸರ್ಕಾರ ಈ ಯೋಜನೆಯನ್ನು ಕೈ ಬಿಟ್ಟಿತ್ತು. ಇದನ್ನು ಓದಿ:  ಸ್ಟೀಲ್‍ ಬ್ರಿಡ್ಜ್ ನಿರ್ಮಾಣ ಕೈಬಿಡಲು ಸರ್ಕಾರ ತೀರ್ಮಾನ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದರಾಮಯ್ಯನವರೇ ಆಪರೇಷನ್ ಕುಮಾರಸ್ವಾಮಿ ಮಾಡ್ತಿದ್ದಾರೆ – ಉಮೇಶ್ ಕತ್ತಿ

    ಸಿದ್ದರಾಮಯ್ಯನವರೇ ಆಪರೇಷನ್ ಕುಮಾರಸ್ವಾಮಿ ಮಾಡ್ತಿದ್ದಾರೆ – ಉಮೇಶ್ ಕತ್ತಿ

    ಚಿಕ್ಕೋಡಿ: ಸಂಕ್ರಾಂತಿ ಹಬ್ಬ ಮುಗಿದ ಮೇಲೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತೆ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಸಿದ್ದರಾಮಯ್ಯನವರೇ ಆಪರೇಷನ್ ಕುಮಾರಸ್ವಾಮಿ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಉಮೇಶ್ ಕತ್ತಿ ಹೊಸ ಬಾಂಬ್ ಹಾಕಿದ್ದಾರೆ.

    ಹುಕ್ಕೇರಿ ಪಟ್ಟಣದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಸಂಕ್ರಾಂತಿಯ ಬಳಿಕ ರಾಜ್ಯದಲ್ಲಿ ಹೊಸ ಸರ್ಕಾರ ಬರಲಿದ್ದು, ನಾಡಿನ ಜನತೆಗೆ ಒಳ್ಳೆಯ ಆಡಳಿತ ನೀಡುವ ಸರ್ಕಾರ ಬರುತ್ತದೆ. ಬಿಎಸ್ ಯಡಿಯೂರಪ್ಪ ಅವರ ಸರ್ಕಾರ ಒಳ್ಳೆಯ ತೀರ್ಮಾನ ತೆಗೆದುಕೊಂಡು ನಾಡಿನ ಜನತೆಗೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುತ್ತದೆ ಎನ್ನುವ ಆಶ್ವಾಸನೆ ನೀಡಿದರು.


    ಇದೇ ವೇಳೆ ಸಿದ್ದರಾಮಯ್ಯ ಅವರ ಆಪರೇಷನ್ ಕಮಲ ಟೀಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಉಮೇಶ್ ಕತ್ತಿ, ಕಳೆದ 10 ವರ್ಷದಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇಲ್ಲ. ನಮ್ಮ ಬಳಿ ದುಡ್ಡಿಲ್ಲ ಸಿದ್ದರಾಮಯ್ಯ ಅವರು ಹೇಳಿದಷ್ಟು ಹಣವೂ ಇಲ್ಲ. ಆದರೆ ಸಿದ್ದರಾಮಯ್ಯ ಅವರು ಹೇಳುವುದನ್ನು ನೋಡಿದರೆ ಅವರೇ ಆಪರೇಷನ್ ಕುಮಾರಸ್ವಾಮಿ ಮಾಡುತ್ತಿದ್ದಾರೆ ಎನಿಸುತ್ತದೆ. ಸಮ್ಮಿಶ್ರ ಸರ್ಕಾರ ಬೀಳಿಸಲು ಸಿದ್ದರಾಮಯ್ಯ ಅವರೇ ಹಣ ನಿಯೋಜನೆ ಮಾಡುತ್ತಿದ್ದಾರೆ. ಏಕೆಂದರೆ ಕಳೆದ 5 ವರ್ಷ ಅಧಿಕಾರದಲ್ಲಿ ಬಳಿಕ ಈಗ ಅಧಿಕಾರ ಕಳೆದುಕೊಂಡಿದ್ದಾರೆ. ಅವರೇ ಸರ್ಕಾರ ಉರುಳಿಸುವ ಪ್ರಯತ್ನ ಮಾಡಿ ಬಿಜೆಪಿ ಪಕ್ಷದ ಹೆಸರನ್ನು ಲೇಪನ ಮಾಡುತ್ತಿದ್ದಾರೆ. ಸರ್ಕಾರ ಉರುಳಿಸುವ ಮುಂಚೂಣಿಯಲ್ಲಿ ಸಿದ್ದರಾಮಯ್ಯ ಅವರು ಇದ್ದಾರೆ ಎಂದು ತಿರುಗೇಟು ನೀಡಿದರು.

    ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ರಮೇಶ್ ಜಾರಕಿಹೊಳಿ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾರನ್ನು ಭೇಟಿ ಮಾಡಿರುವ ಬಗ್ಗೆ ನನಗೆ ಗೊತ್ತಿಲ್ಲ. ಇದೆಲ್ಲಾ ಊಹಾಪೋಹಗಳನ್ನು ಸಿದ್ದರಾಮಯ್ಯ ಅವರೇ ಎಬ್ಬಿಸುತ್ತಿದ್ದಾರೆ. ಶಾಸಕರಿಗೆ 25 ರಿಂದ 30 ಕೋಟಿ ರೂ. ಕೊಟ್ಟು ಅವರೇ ಸರ್ಕಾರವನ್ನು ಬೀಳಿಸುತ್ತಿದ್ದಾರೆ. ಅವರ ಈ ಪ್ರಯತ್ನಕ್ಕೆ ಧನ್ಯವಾದ ಹೇಳುತ್ತಿದ್ದೇನೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಆಪರೇಷನ್ ಕಮಲಕ್ಕೆ ಗ್ರೀನ್ ಸಿಗ್ನಲ್ ? – ಸುದ್ದಿಗೋಷ್ಠಿಯಲ್ಲಿ ಬಿಎಸ್‍ವೈ ಫುಲ್ ಖುಷ್

    ಆಪರೇಷನ್ ಕಮಲಕ್ಕೆ ಗ್ರೀನ್ ಸಿಗ್ನಲ್ ? – ಸುದ್ದಿಗೋಷ್ಠಿಯಲ್ಲಿ ಬಿಎಸ್‍ವೈ ಫುಲ್ ಖುಷ್

    ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಮಾಧ್ಯಮಗಳ ಮುಂದೇ ಸಾಕಷ್ಟು ಗಂಭೀರವಾಗಿ ಕಂಡು ಬರುತ್ತಿದ್ದ ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಹಸನ್ಮುಖಿಯಾಗಿ ಕಂಡು ಬಂದರು. ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಎಸ್‍ವೈ ಹೊಸ ವರ್ಷದಲ್ಲಿ ಏನಾದರು ನಡೆಯಬಹುದು ಎಂದು ಹೇಳುವ ಮೂಲಕ ಪರೋಕ್ಷವಾಗಿ ಆಪರೇಷನ್ ಕಮಲದ ಮುನ್ಸೂಚನೆ ನೀಡಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ನಗುತ್ತಾ, ಕೆಲ ಪ್ರಶ್ನೆಗಳಿಗೆ ಮೌನವಾಗುವ ಮೂಲಕ ಉತ್ತರಿಸಿದ ಬಿಎಸ್‍ವೈ, ಅಂತಿಮವಾಗಿ ಎಲ್ಲಾ ಮುಗಿಯಿತು ಅಲ್ವಾ ಎಂದು ಮಾಧ್ಯಮಗಳನ್ನು ಪ್ರಶ್ನೆ ಮಾಡಿ ನಗುತ್ತಾ ಸುದ್ದಿಗೋಷ್ಠಿ ಪೂರ್ಣಗೊಳಿಸಿದರು. ಸದ್ಯ ಬಿಎಸ್‍ವೈ ಅವರ ದೇಹಭಾಷೆಯನ್ನು ಕಂಡ ಹಲವರು ಆಪರೇಷನ್ ಕಮಲದಲ್ಲಿ ಬಿಎಸ್‍ವೈ ಒಂದು ಹಂತದಲ್ಲಿ ಯಶಸ್ವಿಯಾಗಿದ್ದಾರಾ ಎನ್ನುವ ಚರ್ಚೆ ಆರಂಭವಾಗಿದೆ. ಇದನ್ನು ಓದಿ : ಅಗಸ್ತಾ ವೆಸ್ಟ್ ಲ್ಯಾಂಡ್ ಹಗರಣ – ಇಡಿ ವಿಚಾರಣೆಲ್ಲಿ ಸೋನಿಯಾ ಹೆಸರು ಬಾಯ್ಬಿಟ್ಟ ಕ್ರಿಶ್ಚಿಯನ್? 

    ಸುದ್ದಿಗೋಷ್ಠಿಯಲ್ಲಿ ಅಗಸ್ತಾ ವೆಸ್ಟ್ ಲ್ಯಾಂಡ್ ಹಗಣರದ ಕುರಿತು ಪ್ರಸ್ತಾಪ ಮಾಡಿದ ಬಿಎಸ್‍ವೈ, ಪಕ್ರರಣದ ಪ್ರಮುಖ ದಲ್ಲಾಳಿ ಕ್ರಿಶ್ಚಿಯನ್ ತನಿಖೆ ವೇಳೆ ಕಾಂಗ್ರೆಸ್ ಮುಖಂಡರ ಹೆಸರನ್ನು ಬಹಿರಂಗ ಪಡಿಸಿದ್ದಾರೆ ಎಂದು ವರದಿಯಾಗಿದೆ. ಸದ್ಯ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಹೆಸರು ಪ್ರಸ್ತಾಪ ಮಾಡಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಫಲಾನುಭವಿ ಎಂಬ ಸುಳಿವನ್ನು ನೀಡಿದ್ದಾರೆ. ಈ ಮೂಲಕ ಕಳ್ಳನೇ ಬೇರೆ ಅವರನ್ನು ಕಳ್ಳ ಎಂದು ಕೂಗುತ್ತಾನೆ ಎಂಬ ಗಾದೆ ಸಾಬೀತು ಆಗಿದೆ. ಅಲ್ಲದೇ ಪ್ರಧಾನಿ ಮೋದಿ ದೇಶದ ಸಂಪತ್ತನ್ನು ಲೂಟಿ ಮಾಡುವ ಕಳ್ಳರ ವಿರುದ್ಧ ನಿಗಾ ಇರಿಸುವ ಚೌಕಿದಾರ ಎಂಬುವುದು ಸಾಬೀತಾಗಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಚ್‍ಡಿಕೆ ಬೇಜವಾಬ್ದಾರಿ ಸಿಎಂ – ಹೊಸ ವರ್ಷದಲ್ಲಿ ಏನಾದ್ರು ಆಗಬಹುದು : ಬಿಎಸ್‍ವೈ

    ಎಚ್‍ಡಿಕೆ ಬೇಜವಾಬ್ದಾರಿ ಸಿಎಂ – ಹೊಸ ವರ್ಷದಲ್ಲಿ ಏನಾದ್ರು ಆಗಬಹುದು : ಬಿಎಸ್‍ವೈ

    – ರಾಜ್ಯ ರಾಜಕೀಯದಲ್ಲಿ ಏನ್ ಬೇಕಾದ್ರೂ ಆಗಬಹುದು
    – ಸುಮ್ಮನೆ ಕೂರಲು ನಾವೇನು ಸನ್ಯಾಸಿಗಳಲ್ಲ

    ಬೆಂಗಳೂರು: ರಾಜ್ಯದಲ್ಲಿ 156 ತಾಲೂಕುಗಳು ಬರದಿಂದ ತತ್ತರಿಸಿ ಹೋಗಿದ್ದು, ಹಲವು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸಿಎಂ ಕುಮಾರಸ್ವಾಮಿ ಅವರು ಬೇಜವಾಬ್ದಾರಿಯಿಂದ ಹೊಸ ವರ್ಷದ ಸಂಭ್ರಮಾಚರಣೆಗೆ ಸಿಂಗಾಪುರ ಪ್ರವಾಸ ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕಿಡಿಕಾಡಿದ್ದಾರೆ.

    ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಸ್‍ವೈ, ಸಿಎಂ ಎಚ್‍ಡಿಕೆ ಬೇಜವಾಬ್ದಾರಿ ಸಿಎಂ ಆಗಿದ್ದು, ಬರಗಾಲದಿಂದ ರಾಜ್ಯ ಜನತೆ ತತ್ತರಿಸುತ್ತಿದ್ದರೆ ಸಿಎಂ ವಿದೇಶದಲ್ಲಿ ಹೊಸ ವರ್ಷ ಆಚರಣೆ ಮಾಡುವುದು ಎಷ್ಟು ಸರಿ? ಅವರ ಸಚಿವ ಸಂಪುಟ ಸಹದ್ಯೋಗಿಗಳು ಹಲವರು ಹೊಸ ವರ್ಷ ಆಚರಣೆಗೆ ರಾಜ್ಯ ಬೇರೆ ಬೇರೆ ಕಡೆ ಹೋಗಿದ್ದಾರೆ. ರೈತರ ಸಾಲಮನ್ನಾ ಬಗ್ಗೆ ಪ್ರಶ್ನಿಸಿದರೆ ಕಥೆ ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

    ಸಮ್ಮಿಶ್ರ ಸರ್ಕಾರದ ನಾಯಕರು ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದು, ನನ್ನ ಸೋಲಿಗೆ ಕಾರಣರಾಗಿ ಸಿಎಂ ಸ್ಥಾನ ತಪ್ಪಿಸಿದ್ದಾರೆ ಎಂದು ಪದೇ ಪದೇ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಹೇಳುತ್ತಾರೆ. ಆಡಳಿತ ನಡೆಸುತ್ತಿರುವ ಎರಡು ಪಕ್ಷದ ಮುಖಂಡರ ನಡುವಿನ ಕಚ್ಚಾಟದಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲಿ ಗೊಂದಲ ಇದೆ. ಸರ್ಕಾರ ಅಸ್ತಿರಗೊಳ್ಳುತ್ತಿದೆ ಎಂದು ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ನೋಡಿ ನಾವು ಹೇಳಿಕೆ ಕೊಡುತ್ತಿದ್ದೇವೆ. ನಾವಾಗಿಯೇ ಸರ್ಕಾರ ಅಸ್ತಿರಗೊಳಿಸುತ್ತಿಲ್ಲ. ಒಂದೊಮ್ಮೆ ಸರ್ಕಾರ ತಾನಾಗಿಯೇ ಬಿದ್ದು ಹೋದರೆ ಸುಮ್ಮನೆ ಕೂರಲು ನಾವೇನು ಸನ್ಯಾಸಿಗಳಲ್ಲ. ಹೊಸ ವರ್ಷದಲ್ಲಿ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಅಷ್ಟರ ಮಟ್ಟಿಗೆ ಕಾಂಗ್ರೆಸ್, ಜೆಡಿಎಸ್ ನಲ್ಲಿ ಅತೃಪ್ತಿ, ಅಸಮಾಧಾನ ಜಾಸ್ತಿಯಾಗಿದೆ. ಆದ್ದರಿಂದ ರಾಜ್ಯ ರಾಜಕಾರಣದಲ್ಲಿ ಯಾವಾಗ ಬೇಕಾದರೂ ಏನು ಬೇಕಾದರೂ ಆಗಬಹುದು ಎಂದರು.

    ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್ ಕುರಿತ ಪ್ರಶ್ನೆಗೆ ಉತ್ತರಿಸಿದ ಬಿಎಸ್‍ವೈ, ಆಪರೇಷನ್ ಕಮಲದ ಮೂಲಕ ಶಾಸಕರ ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪದೇ ಪದೇ ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಈ ರೀತಿ ಮಾತನಾಡುವುದು ಶೋಭೆ ತರುವುದಿಲ್ಲ. ರಾಜ್ಯ ರಾಜಕೀಯದಲ್ಲಿ ಏನು ಬೇಕಾದರು ಆಗಬಹುದು. ಅವರ ಸರ್ಕಾರ ಬಿದ್ದರೆ ನಾವು ಸರ್ಕಾರ ರಚನೆ ಮಾಡುತ್ತೇವೆ. ಬಿಜೆಪಿ ಸರ್ಕಾರ ರಚನೆ ಆದರೆ ಸಿದ್ದರಾಮಯ್ಯ ಅವರು ವಿರೋಧಿ ಪಕ್ಷದ ನಾಯಕರಾಗುತ್ತಾರೆ ಎಂದು ತಿಳಿಸಿದರು.

    ದೆಹಲಿ ಭೇಟಿ ಬಗ್ಗೆ ಸ್ಪಷ್ಟನೆ: ಬಿಜೆಪಿ ರಾಷ್ಟ್ರೀಯ ಸಭೆ ನಡೆಯಲಿದ್ದು ಅಲ್ಲಿಗೆ ರಾಜ್ಯದಿಂದ ತೆರಳುವ ಕಾರ್ಯಕರ್ತರಿಗೆ ವ್ಯವಸ್ಥೆ ಮಾಡಬೇಕಿತ್ತು. ಅಲ್ಲದೇ ರಾಜ್ಯದ ಕೆಲ ಯೋಜನೆಗಳ ಬಗ್ಗೆ ಚರ್ಚೆ ನಡೆಸಲು ಕೆಲ ಸಚಿವರನ್ನು ಭೇಟಿ ಮಾಡಿದ್ದೆ ಅಷ್ಟೇ. ಯಾವುದೇ ಆಪರೇಷನ್ ಕಮಲ ಇಲ್ಲ. ಜನವರಿಯಲ್ಲಿ ಜಂಟಿ ಅಧಿವೇಶನ ಕರೆಯಲಿದ್ದು, ಆಗ ಎಲ್ಲಾ ಶಾಸಕರು ಒಂದೆಡೆ ಸೇರುತ್ತಾರೆ. ಈ ಹಂತದಲ್ಲಿ ಏನಾದರೂ ಆಗಬಹುದು ಎಂದು ಮಾರ್ಮಿಕವಾಗಿ ಉತ್ತರಿಸಿದರು. ಅಲ್ಲದೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕುರಿತ ಪ್ರಶ್ನೆಗೆ ಉತ್ತರಿಸಿ, ರಮೇಶ್ ಜಾರಕಿಹೊಳಿ ಅವರು ಎಲ್ಲೆಲ್ಲಿ, ಯಾರ ಜೊತೆ ತಿಂಡಿ ಮಾಡುತ್ತಾರೆ ಎಂಬುವುದು ಮಾಧ್ಯಮಗಳಿಗೆ ಗೊತ್ತಿರಬೇಕು ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.

    ನಟ ಲೋಕನಾಥ್ ನಿಧನಕ್ಕೆ ಸಂತಾಪ: ಕನ್ನಡದ ಹಿರಿಯ ನಟ ಲೋಕನಾಥ್ ನಿಧನಕ್ಕೆ ಬಿಎಸ್ ಯಡಿಯೂರಪ್ಪ ಅವರು ಸಂತಾಪ ಸೂಚಿಸಿದರು. 5 ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಲೋಕನಾಥ್ ಅವರನ್ನ ಕಳೆದುಕೊಂಡ ನಾಡು ಹಾಗೂ ಚಿತ್ರರಂಗ ಬಡವಾಗಿದೆ. ಅವರ ಅಗಲಿಕೆ ನೋವನ್ನ ಸಹಿಸಿಕೊಳ್ಳುವ ಶಕ್ತಿಯನ್ನ ಭಗವಂತ ಅವರ ಕುಟುಂಬಕ್ಕೆ ಕೊಡಲಿ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜೆಪಿ ಮುಖಂಡರನ್ನು ಮುದಿ ನಾಯಿಗೆ ಹೋಲಿಸಿ ಸಚಿವ ಡಿ.ಸಿ ತಮ್ಮಣ್ಣ ವ್ಯಂಗ್ಯ!

    ಬಿಜೆಪಿ ಮುಖಂಡರನ್ನು ಮುದಿ ನಾಯಿಗೆ ಹೋಲಿಸಿ ಸಚಿವ ಡಿ.ಸಿ ತಮ್ಮಣ್ಣ ವ್ಯಂಗ್ಯ!

    ಮಂಡ್ಯ: ರಾಜ್ಯ ಮೈತ್ರಿ ಸರ್ಕಾರ ಪತನ ಆಗುತ್ತೆ ಎಂದು ಕೌಂಟ್ ಡೌನ್ ಹೇಳುತ್ತಿರುವ ಬಿಜೆಪಿ ಮುಖಂಡರು, ಮುದಿ ನಾಯಿಯಂತೆ ಕಾಯುತ್ತಿದ್ದಾರೆ ಎಂದು ಹೇಳುವ ಮೂಲಕ ಸಚಿವ ಡಿ.ಸಿ ತಮ್ಮಣ್ಣ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದೇ ಪಕ್ಷದ ಸರ್ಕಾರ ಇದ್ದರು ಕೂಡ ಅಸಮಾಧಾನ ಇರುವುದು ಸಾಮಾನ್ಯ. ಅಂತೆಯೇ ಇಂದು ಕೂಡ ಸಮ್ಮಿಶ್ರ ಸರ್ಕಾರದಲ್ಲಿ ಕೆಲ ಅಸಮಾಧಾನಗಳು ಇದೆ ಅಷ್ಟೇ. ಆದರೆ ಸರ್ಕಾರ ಸುಭದ್ರವಾಗಿದ್ದು, ಯಾವುದೇ ತೊಂದರೆ ಇಲ್ಲ. ಈ ಹಿಂದೆ ವಿಧಾನಸೌಧದಲ್ಲಿ ಜೆಎಚ್ ಪಾಟೇಲರು ಒಂದು ಮಾತು ಹೇಳಿದ್ದರು. ಇಂತಹದ್ದೇ ಸನ್ನಿವೇಶ ಇಂದು ನಿರ್ಮಾಣವಾಗಿದ್ದು, ಆನೆ ಮುಂದೆ ಹೋಗುವಾಗ ಹಿಂದೆ ಮುದಿನಾಯಿ ಆನೆ ಬೀಳುತ್ತೆ ಎಂದು ಹೋಗುತ್ತಿತ್ತು. ಆದರೆ ಆನೆ ಬೀಳಲಿಲ್ಲ, ನಾಯಿಗೆ ಸಿಗಲಿಲ್ಲ. ಸರ್ಕಾರದ ಬಗ್ಗೆ ಹೇಳಿಕೆ ನೀಡುವುದು ಕೆಲವರಿಗೆ ಚಟ ಆಗಿದೆ. ಇದರಂತೆ ಬಿಜೆಪಿಯವರು ಕಾದುಕುಳಿತ್ತಿದ್ದಾರೆ ಎಂದರು.

    ಇದೇ ವೇಳೆ ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಚಲುವರಾಯ ಸ್ವಾಮಿ ವಿರುದ್ಧ ಕಿಡಿಕಾರಿದ ಸಚಿವ ತಮ್ಮಣ್ಣ ಅವರು, ಅಧಿಕಾರದಲ್ಲಿ ಇಲ್ಲದೇ ಇರುವ ವೇಳೆ ಟೀಕೆ ಮಾಡುವುದು ಮಾನವ ಸಹಜ ಗುಣ. ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನವಿದ್ದರೆ ಸಿದ್ದರಾಮಯ್ಯ, ಪರಮೇಶ್ವರ್, ಕುಮಾರಸ್ವಾಮಿ ಅವರಂತಹ ನಾಯಕರು ಹೇಳಿಕೆ ನೀಡಿದರೆ ಮಾತ್ರ ಒಂದು ಮೌಲ್ಯ, ಅರ್ಥ ಇರುತ್ತೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜೆಡಿಎಸ್ ಮುಖಂಡರಿಗೆ ಅಹಂ – ಸಮ್ಮಿಶ್ರ ಸರ್ಕಾರ ಕಾರ್ಯವೈಖರಿ ಬಗ್ಗೆ ಚಲುವರಾಯಸ್ವಾಮಿ ಅಸಮಾಧಾನ

    ಜೆಡಿಎಸ್ ಮುಖಂಡರಿಗೆ ಅಹಂ – ಸಮ್ಮಿಶ್ರ ಸರ್ಕಾರ ಕಾರ್ಯವೈಖರಿ ಬಗ್ಗೆ ಚಲುವರಾಯಸ್ವಾಮಿ ಅಸಮಾಧಾನ

    ಮಂಡ್ಯ: ರಾಜ್ಯದಲ್ಲಿ ನಮ್ಮ ಪಕ್ಷ ಜೆಡಿಎಸ್‍ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟಿರುವುದು ಸತ್ಯ. ಆದರೆ ಆಡಳಿತದ ಲಕ್ಷಣದಲ್ಲಿ ಸಮ್ಮಿಶ್ರ ಸರ್ಕಾರದ ರೀತಿ ನಡೆಯುತ್ತಿಲ್ಲ ಎಂದು ಬಗ್ಗೆ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಚಲುವರಾಯಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.

    ಮದ್ದೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಆದೇಶ ಪಾಲಿಸಲು ಕಾಂಗ್ರೆಸ್ ಮುಖಂಡರು ಬಾಯಿ ಮುಚ್ಚಿಕೊಂಡಿದ್ದಾರೆ. ಅವರು ಹೇಗಾದರು ಆಡಳಿತ ಮಾಡಲಿ. ನಮ್ಮ ಪಕ್ಷ ಅವರಿಗೆ ಅಧಿಕಾರ ಕೊಟ್ಟಿರುವವರೆಗೂ ಸಹಿಸಿಕೊಂಡು ಹೋಗುತ್ತೇವೆ. ಆದರೆ ಮಂಡ್ಯ ಜಿಲ್ಲೆಯಲ್ಲಿ ಏಳು ಸ್ಥಾನ ಗೆಲ್ಲಿಸಿದ್ದಾರೆ ಎಂಬ ಅಹಂ ಅವರಿಗೆ ಬಂದಿದೆ ಎಂದು ಕಿಡಿಕಾರಿದರು.

    ಎಲ್ಲದಕ್ಕೂ ಒಂದು ಇತಿಮಿತಿ ಇದೆ. ಆ ಇತಿಮಿತಿ ಮೀರುವವರೆಗೂ ಸಮಾಧಾನದಿಂದ ಇರುತ್ತೇವೆ. ನಮ್ಮ ಜಿಲ್ಲೆಯಲ್ಲಿ ಶಾಂತಿ ವಾತಾವರಣ ಇಲ್ಲ. ಬಹಳಷ್ಟು ವ್ಯವಸ್ಥೆ ಕೆಟ್ಟಿದೆ. ಮುಖ್ಯಮಂತ್ರಿಗಳೇ ಬಂದು ಹೋಗಿರುವುದರಿಂದ ಬದಲಾವಣೆ ಆಗಬಹುದು. ಇಲ್ಲದಿದ್ದರೆ ಎಲ್ಲದ್ದಕ್ಕೂ ಒಂದು ಕೊನೆ ಇರುತ್ತೆ. ಅಲ್ಲಿವರೆಗೂ ಕಾದು ನೋಡುತ್ತೇವೆ. ಆದರೆ ಜಿಲ್ಲೆಯಲ್ಲಿ ಕಾನೂನು ಸಮಸ್ಯೆ ಬಗ್ಗೆ ನಾವು ಅಧಿಕಾರಿಗಳಿಗೆ ಹೇಳುವ ಪರಿಸ್ಥಿತಿ ಜಿಲ್ಲೆಯಲ್ಲಿ ಉಳಿದಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

    ಜೆಡಿಎಸ್ ನಾಯಕರಿಗೆ ಕಾಂಗ್ರೆಸ್ ಪಕ್ಷದವರು ಅಧಿಕಾರ ಕೊಟ್ಟಿದ್ದಾರೆ. ಆದರೆ ಬಿಜೆಪಿಗೆ ತಪ್ಪಿಸಲು ಇವರು ನಮಗೆ ಅಧಿಕಾರ ಕೊಟ್ಟಿದ್ದಾರೆ ಎಂಬ ರೀತಿಯ ಧೋರಣೆ ಜೆಡಿಎಸ್‍ಗೆ ಇದೆ. 38 ಸ್ಥಾನ ಇರುವವರಿಗೆ 80 ಸ್ಥಾನ ಇರುವವರು ಅಧಿಕಾರ ಕೊಟ್ಟರೆ, ಈ ರೀತಿ ಧೋರಣೆಯಲ್ಲಿ ಮಾತನಾಡಿದರೆ ನಾವೇನು ಹೇಳಲು ಸಾಧ್ಯ. ಆದ್ದರಿಂದ ಮಾತನಾಡದಿರುದೇ ಸೂಕ್ತ ಎಂದು ಬೇಸರ ವ್ಯಕ್ತಪಡಿಸಿದರು.

    ಇದೇ ವೇಳೆ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಆದರೆ ನಮ್ಮ ನೋವನ್ನು ತಡೆದುಕೊಂಡಿರುವುದು ಅನಿವಾರ್ಯವಾಗಿದೆ. ಈ ಬಗ್ಗೆ ಚರ್ಚೆ ಮಾಡಿದರು ಪರಿಹಾರ ಸಿಗುವ ಪರಿಸ್ಥಿತಿ ಇಲ್ಲ. ನನಗೆ ಬಾಯಿ ಕಟ್ಟಿದೆ. ಮಾತನಾಡಲು ಆಗುತ್ತಿಲ್ಲ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಶೂ ಭಾಗ್ಯ ಯೋಜನೆ ಜಾರಿ ಹಿಂದಿದೆ ಮನಕಲಕುವ ಕಥೆ: ಸಿದ್ದರಾಮಯ್ಯ ನೆನಪು

    ಶೂ ಭಾಗ್ಯ ಯೋಜನೆ ಜಾರಿ ಹಿಂದಿದೆ ಮನಕಲಕುವ ಕಥೆ: ಸಿದ್ದರಾಮಯ್ಯ ನೆನಪು

    ಬಾಗಲಕೋಟೆ: ತಾವು ಶಾಲಾ ದಿನಗಳ ಸಮಯದಲ್ಲಿ ಟೈರ್ ನಿಂದ ತಯಾರಿಸಿದ್ದ ಚಪ್ಪಲಿ ಧರಿಸಿ ಹೋಗುತ್ತಿದ್ದೇವು, ಈಗಿನ ಮಕ್ಕಳಿಗೆ ಇಂತಹ ತೊಂದರೆ ಆಗಬಾರದು ಎಂದು ಹೇಳಿ ಶೂ ಭಾಗ್ಯ ಯೋಜನೆ ಜಾರಿ ಮಾಡಿದ್ದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

    ಬಾದಾಮಿಯಲ್ಲಿ ಪುಸ್ತಕ ಪ್ರಾಧಿಕಾರದ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಟೈರ್ ಚಪ್ಪಲಿ ಪ್ರಸಂಗ ನೆನೆಸಿಕೊಂಡರು. ನಾನು ಶಾಲೆಗೆ ಹೋಗುವಾಗ ಟೈರ್ ಚಪ್ಪಲಿ ಧರಿಸುತ್ತಿದ್ದೆ. ಇಂತಹ ತೊಂದರೆ ಬರಬಾರದೆಂದು ವಿದ್ಯಾರ್ಥಿಗಳಿಗೆ ಶೂ ಭಾಗ್ಯ ಜಾರಿಗೆ ತಂದಿದ್ದೇವೆ ಎಂದರು. ಇದೇ ವೇಳೆ ತಮ್ಮ ಅಧಿಕಾರ ಮತ್ತು ಸಂಪತ್ತು ಯಾವತ್ತೂ ಬಲಾಡ್ಯರ ಕೈಯಲ್ಲಿರಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೇ ನಾನು ಧರಿಸುತ್ತಿದ್ದ ಟೈರ್ ಚಪ್ಪಲಿ ಮೂರು ವರ್ಷ ಆದ್ರು ಹರಿದಿರಲಿಲ್ಲ ಎಂದು ನಗೆಚಟಾಕಿ ಹಾರಿಸಿದರು.

    ಬಾದಾಮಿಯ ಕನಕ ಜಯಂತಿ ಕಾರ್ಯಕ್ರಮದ ವೇಳೆ ಸಿದ್ದರಾಮಯ್ಯ ಅವರು ಸ್ವತಃ ಡೋಲು ಬಾರಿಸಿ ಗಮನ ಸೆಳೆದರು. ಆದರೆ ಆ ವೇಳೆ ಡೋಲು ಬಾರಿಸುವ ಕೋಲಿನ ಸಿಬಿರು ಚುಚ್ಚಿ ಸಿದ್ದರಾಮಯ್ಯ ಅವರ ಬೆರಳಿಗೆ ಗಾಯವಾಯಿತು. ಕೂಡಲೇ ಎಚ್ಚೆತ್ತ ಕಾರ್ಯಕರ್ತರು ಬೆರಳಿಗೆ ಚುಚ್ಚಿದ್ದ ಸಿಬಿರು ತೆಗೆದು ಪ್ರಥಮ ಚಿಕಿತ್ಸೆ ನೀಡಿದರು.

    ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಗಮಿಸಿದ್ದ ಸಿದ್ದರಾಮಯ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದರು. ಈ ವೇಳೆ ಸಿದ್ದರಾಮಯ್ಯನವರಿಗೆ ಮೈತ್ರಿ ಸರ್ಕಾರ ನಡೆಸುವ ಉದ್ದೇಶ ಇಲ್ಲ ಎಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ವಿಚಾರವಾಗಿ ಮಾಧ್ಯಮಗಳು ಪ್ರಶ್ನೆಗೆ ಪ್ರತಿಕ್ರಿಯೆ ನೀಡದ ಅವರು, ಹೊರಟ್ಟಿ ಹೇಳಿಕೆ ಕೊಟ್ಟಿದ್ದರೆ ತೋರಿಸಿ ಎಂದು ರಾಜ್ಯ ರಾಜಕಾರಣದ ಬಗ್ಗೆ ಮಾತನಾಡದೆ ತೆರಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv