Tag: State Government

  • ಏಪ್ರಿಲ್, ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ – ರಾಜ್ಯಗಳಿಗೆ ಚುನಾವಣಾ ಆಯೋಗದಿಂದ ಪತ್ರ

    ಏಪ್ರಿಲ್, ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ – ರಾಜ್ಯಗಳಿಗೆ ಚುನಾವಣಾ ಆಯೋಗದಿಂದ ಪತ್ರ

    ನವದೆಹಲಿ: ಲೋಕಸಭಾ ಚುನಾವಣೆ ಏಪ್ರಿಲ್, ಮೇ ತಿಂಗಳಿನಲ್ಲಿ ನಡೆಯುವ ಸಾಧ್ಯತೆಯಿದ್ದು ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದ್ದಂತೆ ಚುನಾವಣಾ ಆಯೋಗ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿ ಮತ್ತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

    ಚುನಾವಣೆಗೆ ಸಂಬಂಧಿಸಿದಂತೆ ನೇರವಾಗಿ ಭಾಗಿಯಾಗುವ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರಗಳು ಈಗಲೇ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದೆ.

    16ನೇ ಲೋಕಸಭೆಯ ಅವಧಿ ಜೂನ್ 3 ರಂದು ಅಂತ್ಯಗೊಳ್ಳಲಿದೆ. ಹೀಗಾಗಿ ಲೋಕಸಭೆಯ ಜೊತೆಗೆ ಆಂಧ್ರಪ್ರದೇಶ, ಒಡಿಸ್ಸಾ ಮತ್ತು ಸಿಕ್ಕಿಂ ರಾಜ್ಯಗಳಲ್ಲೂ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

    ಪತ್ರದಲ್ಲಿ ಏನಿದೆ?
    ಪ್ರಮುಖವಾಗಿ ರಾಜ್ಯ, ಲೋಕಸಭಾ ಚುನಾವಣೆಯಲ್ಲಿ ನೇರವಾಗಿ ಭಾಗವಹಿಸುವ ಅಧಿಕಾರಿಗಳನ್ನು ತಮ್ಮ ಸ್ವ-ಜಿಲ್ಲೆಗಳಲ್ಲಿ ಅಥವಾ ದೀರ್ಘಕಾಲದ ಸೇವೆ ಸಲ್ಲಿಸಿದ ಸ್ಥಳದಲ್ಲಿ ಪೋಸ್ಟ್ ಮಾಡಬಾರದು ಎಂದು ತಿಳಿಸಿದೆ. ಅಲ್ಲದೇ ಸ್ವಂತ ಊರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಅಥವಾ 2019 ಮೇ 31ರ ಒಳಗೆ 4 ವರ್ಷಗಳಲ್ಲಿ ಅದೇ ಸ್ಥಳದಲ್ಲಿ 3 ವರ್ಷ ಕರ್ತವ್ಯವನ್ನು ಪೂರ್ಣಗೊಳಿಸಿದ್ದರೆ ಅಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು.

    ಯಾವುದೇ ಡಿಇಒ/ಆರ್‍ಒ/ಎಆರ್‍ಒ/ ಪೊಲೀಸ್ ಅಧಿಕಾರಿಗಳು ಈ ಹಿಂದೆ ನಡೆದ ಚುನಾವಣೆ ಹಾಗೂ 2017ರ ಉಪಚುನಾವಣೆ ನಡೆದ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳನ್ನು ವರ್ಗಾಯಿಸಬೇಕು.

    ಚುನಾವಣೆಯ ಹಂತದ ಮತದಾನದ ವೇಳೆ ಭದ್ರತಾ ಪಡೆಗಳ ಅವಶ್ಯಕತೆ ಲಭ್ಯತೆ ಕ್ಷೇತ್ರಗಳನ್ನು ಅವಲಂಬಿಸಿರುತ್ತದೆ. ಅಲ್ಲದೇ ಲೋಕಸಭೆಯ ಜೊತೆಗೆ ಈ ರಾಜ್ಯಗಳು ವಿಧಾನಸಭೆಗೆ ತಯಾರಿ ಆರಂಭಿಸಬಹುದು.

    2014ರ ಚುನಾವಣೆಯ ಸಮಯದಲ್ಲಿ ಮಾರ್ಚ್ 5 ರಂದು ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿತ್ತು. 9 ಹಂತದಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಚುನಾವಣಾ ಪ್ರಕ್ರಿಯೆ ನಡೆದಿತ್ತು. ಮೊದಲ ಹಂತದ ಮತದಾನ ಏಪ್ರಿಲ್ 7 ರಂದು ನಡೆದಿದ್ದರೆ, ಕೊನೆಯ ಹಂತದ ಚುನಾವಣೆ ಮೇ 12 ರಂದು ನಡೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 5 ನಿಮಿಷದಲ್ಲೇ ಇಡೀ ಜಿಲ್ಲೆಯ ಬರ ಅಧ್ಯಯನ ಮಾಡಿದ ಯಡಿಯೂರಪ್ಪ!

    5 ನಿಮಿಷದಲ್ಲೇ ಇಡೀ ಜಿಲ್ಲೆಯ ಬರ ಅಧ್ಯಯನ ಮಾಡಿದ ಯಡಿಯೂರಪ್ಪ!

    ಚಿಕ್ಕಬಳ್ಳಾಪುರ: ಬರೀ ಐದೇ ನಿಮಿಷದಲ್ಲಿ ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯ ಬರ ಪರಿಶೀಲನೆಯನ್ನ ಮಾಜಿ ಸಿಎಂ ಯಡಿಯೂರಪ್ಪ ಮುಗಿಸಿದ್ದಾರೆ.

    ಕೋಲಾರ ಜಿಲ್ಲೆಯ ಬರ ಪ್ರವಾಸ ಮುಗಿಸಿ ಸಂಜೆ 5 ಗಂಟೆ 10 ನಿಮಿಷ ಸುಮಾರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಬರ ಪ್ರವಾಸಕ್ಕೆ ಆಗಮಿಸಿದ ಯಡಿಯೂರಪ್ಪ ಮತ್ತು ತಂಡ ಚಿಕ್ಕಬಳ್ಳಾಪುರ ತಾಲ್ಲೂಕಿನ ಗಿಡ್ನಹಳ್ಳಿ ಬಳಿ ರಸ್ತೆ ಬದಿಯೇ ಇರುವ ರೈತ ಜಯರಾಮ್ ರವರ ಹಿಪ್ಪುನೇರಳೆ ತೋಟಕ್ಕೆ ಭೇಟಿ ನೀಡಿ ಬರ ಪರಿಶೀಲನೆ ನಡೆಸಿದರು. ವಿಫಲ ಕೊಳವೆಬಾವಿಯ ಬಗ್ಗೆ ರೈತನ ಬಳಿ ಮಾಹಿತಿ ಪಡೆದ ಯಡಿಯೂರಪ್ಪ ವಿದ್ಯುತ್ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ಓಣಗಿದ ರಾಗಿ ಬೆಳೆ ವೀಕ್ಷಣೆ ಮಾಡಿದರು. ಇದೆಲ್ಲವೂ ಕೇವಲ 5 ನಿಮಿಷದಲ್ಲಿ ನೋಡಿದ್ದಾರೆ ಅನ್ನೋದು ವಿಶೇಷ.

    ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ನೇರವಾಗಿ ಚಿಕ್ಕಬಳ್ಳಾಪುರ ಜಿಲ್ಲಾಢಳಿತ ಭವನಕ್ಕೆ ಅಗಮಿಸಿದ ಯಡಿಯೂರಪ್ಪ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ಜೊತೆ ಜಿಲ್ಲೆಯ ಬರದ ಬಗ್ಗೆ ಚರ್ಚಿಸಿ ಅಂಕಿ ಸಂಖ್ಯೆಗಳ ಮಾಹಿತಿ ಪಡೆದುಕೊಂಡರು. ಹೀಗಾಗಿ ಬರೀ ಕೇವಲ ಜಿಲ್ಲೆಯ ಒಂದು ಕಡೆ ಮಾತ್ರ ಬರ ಪರಿಶೀಲನೆ ನಡೆಸಿ, ಅದು 5 ನಿಮಿಷದಲ್ಲಿಯೇ ಇಡೀ ಜಿಲ್ಲೆಯ ಬರ ಅಧ್ಯಯನ ಮಾಡಿದ ಯಡಿಯೂರಪ್ಪ ನವರ ನಡೆ ಇದೆಂಥಾ ಬರ ಅಧ್ಯಯನ ಅಂತ ಹಲವರಲ್ಲಿ ಪ್ರಶ್ನೆ ಮೂಡುವಂತೆ ಮಾಡಿತ್ತು.

    ಜಿಲ್ಲೆಯ ಗಡಿ ತಾಲೂಕುಗಳಾದ ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ ಭಾಗದಲ್ಲಿ ತೀವ್ರತರವಾದ ಬರದಿಂದ ಜನ ಕಂಗೆಟ್ಟಿದ್ದರು. ಆ ಕಡೆಗೆ ರಾಜ್ಯ ಸರ್ಕಾರದ ಬರ ಸಂಪುಟದ ಉಪಸಮಿತಿ ಸಹ ಭೇಟಿ ನೀಡಿರಲಿಲ್ಲ. ಈಗ ವಿರೋಧ ಪಕ್ಷದ ನಾಯಕರಾದ ಯಡಿಯೂರಪ್ಪ ನವರು ಭೇಟಿ ಮಾಡಲಿಲ್ಲ. ಹೀಗಾಗಿ ಬರ ಅಧ್ಯಯನ ಅನ್ನೋದು ಕಾಟಚಾರಕ್ಕೆ ಮಾಡಿದ್ರಾ ಅನ್ನೋ ಪ್ರಶ್ನೆ ಎದುರಾಗುವಂತೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆನಂದ್ ಸಿಂಗ್ ಸ್ಥಿತಿ ನೋಡಿ ಬಹಳ ಗಾಬರಿ ಆಯ್ತು, ಅದು ರಾಕ್ಷಸರು ಮಾಡೋ ಕೆಲಸ: ಶಾಸಕ ರಾಜೂಗೌಡ ಆಕ್ರೋಶ

    ಆನಂದ್ ಸಿಂಗ್ ಸ್ಥಿತಿ ನೋಡಿ ಬಹಳ ಗಾಬರಿ ಆಯ್ತು, ಅದು ರಾಕ್ಷಸರು ಮಾಡೋ ಕೆಲಸ: ಶಾಸಕ ರಾಜೂಗೌಡ ಆಕ್ರೋಶ

    – ಆನಂದ್ ಸಿಂಗ್ ಆರೋಗ್ಯ ವಿಚಾರಿಸಿದ ಶಾಸಕ ಸಿಟಿ ರವಿ, ಮಾಜಿ ಸಚಿವ ಜನಾರ್ದನ ರೆಡ್ಡಿ
    – ಕಾಂಗ್ರೆಸ್ ಪಕ್ಷದಲ್ಲಿ ಡಿವೈಡ್ ಅಂಡ್ ರೂಲ್ ಪಾಲಿಸಿ: ಜರ್ನಾದನ ರೆಡ್ಡಿ

    ಬೆಂಗಳೂರು: ಈಗಲ್ಟನ್ ರೆಸಾರ್ಟಿನಲ್ಲಿ ಕಂಪ್ಲಿ ಶಾಸಕ ಗಣೇಶ್ ಅವರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ಸೇರಿರುವ ಶಾಸಕ ಆನಂದ್ ಸಿಂಗ್ ಅವರನ್ನು ಬಿಜೆಪಿ ಶಾಸಕ ಸಿಟಿ ರವಿ, ರಾಜೂಗೌಡ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

    ಆಸ್ಪತ್ರೆಗೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ರಾಜೂಗೌಡ, ಮೊದಲ ದಿನ ಅವರ ಭೇಟಿಗೆ ಬಂದ ವೇಳೆ ಏಕೆ ಅವಕಾಶ ನೀಡಿಲ್ಲ ಎನ್ನುವುದು ಇಂದು ಆನಂದ್ ಸಿಂಗ್ ಅವರನ್ನು ನೋಡಿದ ಬಳಿಕ ತಿಳಿಯಿತು. ಅವರ ಸ್ಥಿತಿ ನೋಡಿ ಬಹಳ ಗಾಬರಿ ಆಯ್ತು. ಆ ಮಟ್ಟದಲ್ಲಿ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಇಂತಹ ಕೃತ್ಯವನ್ನು ಮನುಷ್ಯರು ಮಾಡುವ ಕೆಲಸ ಅಲ್ಲ, ಇದು ರಾಕ್ಷಸರು ಮಾಡುವ ಕೆಲಸ. ನಮ್ಮ ಶತ್ರುಗಳಿಗೂ ಇಂತಹ ಪರಿಸ್ಥಿತಿ ಬರುವುದು ಬೇಡ. ಈಗಲೂ ಆನಂದ್ ಸಿಂಗ್ ಆತಂಕದಲ್ಲೇ ಇದ್ದಾರೆ ಎಂದು ಹಲ್ಲೆ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಪಕ್ಷವರು ಅವರ ಶಾಸಕರನ್ನೇ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಸಾಮಾನ್ಯ ಜನರಿಗೆ ರಕ್ಷಣೆ ಕೊಡುವುದು ಸರ್ಕಾರದಿಂದ ಸಾಧ್ಯವೇ? ಉದ್ದೇಶ ಪೂರ್ವಕವಾಗಿಯೇ ಶಾಸಕ ಗಣೇಶರನ್ನು ರಕ್ಷಣೆ ಮಾಡಲಾಗುತ್ತಿದ್ದು, ನಾವೇನಾದ್ರೂ ಈ ವಿಚಾರದಲ್ಲಿ ಒತ್ತಾಯ ಮಾಡಿದರೆ ಅದಕ್ಕೆ ರಾಜಕೀಯ ಬಣ್ಣ ಹಚ್ಚುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೇ ಪೊಲೀಸರು ಶಾಸಕ ಗಣೇಶರನ್ನು ಬಂಧನ ಮಾಡೋದಕ್ಕೆ ಅಷ್ಟು ಆಸಕ್ತಿ ತೋರಿಸುತ್ತಿಲ್ಲ ಎಂದೆನಿಸುತ್ತದೆ. ಆದ್ದರಿಂದ ಆನಂದ್ ಸಿಂಗ್ ಅವರ ಸ್ನೇಹಿತನಾಗಿ ನಾನು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇನೆ. ಇತರೇ ಶಾಸಕರು ಮಾನವೀಯ ದೃಷ್ಟಿಯಿಂದ ಆದ್ರು ಈ ಬಗ್ಗೆ ಸಾಕ್ಷಿ ಹೇಳಬೇಕು ಎಂದರು.

    ಇದಕ್ಕೂ ಮುನ್ನ ಆಸ್ಪತ್ರೆಗೆ ಭೇಟಿ ನೀಡಿ ಶಾಸಕ ಸಿ.ಟಿ ರವಿ, ಆನಂದ್ ಸಿಂಗ್ ಅವರ ಆರೋಗ್ಯ ವಿಚಾರಿಸಿದರು. ನಾನು ಆನಂದ್ ಸಿಂಗ್ ಹತ್ತು ವರ್ಷದಿಂದ ಸ್ನೇಹಿತರು. ಅವರ ಆರೋಗ್ಯ ವಿಚಾರಣೆ ಮಾಡಿದ ವೇಳೆ ಬೇಡಿಕೊಂಡರೂ ಬಿಡದೇ ಹಲ್ಲೆ ಮಾಡಿದ್ದಾಗಿ ಆನಂದ್ ಅವರು ಹೇಳಿದ್ದು. ಇಂತಹ ಘಟನೆಗಳು ಶಾಸಕಾಂಗಕ್ಕೆ ಆಗಿರುವ ಅವಮಾನ ಎಂದರು.

    ಇದೇ ವೇಳೆ ಗಣೇಶ್ ಬಗ್ಗೆ ಬಿಜೆಪಿ ಸಾಫ್ಟ್ ಕರ್ನರ್ ವಿಚಾರ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅಲ್ಲದೇ ಬಿಜೆಪಿ ಯಾರನ್ನು ರಕ್ಷಣೆ ಮಾಡುವ ಕೆಲಸ ಮಾಡಿಲ್ಲ. ಈ ಪ್ರಕರಣ ಯಾರು? ಮುಚ್ಚಿ ಹಾಕಲು ಯಾರು ಪ್ರಯತ್ನಿಸಿದ್ದರೋ ಅವರನ್ನು ಈ ಬಗ್ಗೆ ಪ್ರಶ್ನೆ ಮಾಡಿ ಎಂದು ಗರಂ ಆದರು. ಆನಂದ್ ಸಿಂಗ್ ಆರೋಗ್ಯ ವಿಚಾರಣೆಗೆ ಬಂದಿದ್ದು, ಇದು ಅದನ್ನೆಲ್ಲ ಮಾತನಾಡುವ ವೇದಿಕೆ ಅಲ್ಲ ಎಂದು ತೆರಳಿದರು.

    ಡಿವೈಡ್ ಅಂಡ್ ರೂಲ್ ಪಾಲಿಸಿ : ಬಳಿಕ ಬಿಜೆಪಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ತುಕಾರಾಂ ಅವರು ಭೇಟಿ ಮಾಡಿ ಆರೋಗ್ಯ ವಿಚಾರಣೆ ಮಾಡಿದರು. ಶಾಸಕ ಎಂಬುವುದನ್ನು ನೋಡದೇ ಹಲ್ಲೆ ಮಾಡಿದ್ದಾರೆ. ಆದರೆ ಹಲ್ಲೆ ಮಾಡಿದ ಶಾಸಕ ನಾಪತ್ತೆ ಎಂದು ಹೇಳುತ್ತಿರುವುದು ನಾಚಿಕೆ ವಿಚಾರ. ಶಾಸಕರನ್ನು ಬಂಧಿಸಿದರೆ ಸರ್ಕಾರ ತೊಂದರೆ ಎಂಬ ಕಾರಣದಿಂದ ಬಂಧನಕ್ಕೆ ಹಿಂದೇಟು ಹಾಕಲಾಗುತ್ತದೆ. ಘಟನೆಯಿಂದ ಇಡೀ ದೇಶದಲ್ಲೇ ರಾಜ್ಯದ ಮುಖ್ಯಮಂತ್ರಿಗಳು ತಲೆ ತಗ್ಗಿಸುವಂತೆ ಮಾಡಿದೆ. ಬಳ್ಳಾರಿ ಜಿಲ್ಲೆಯಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವೇ ಪೈಪೋಟಿ ನಡೆದಿದೆ. ಆದ್ದರಿಂದಲೇ ಬಳ್ಳಾರಿ ಶಾಸಕರಲ್ಲಿ ಭಿನ್ನಭಿಪ್ರಾಯ ಉಂಟಾಗಿದೆ. ಕಾಂಗ್ರೆಸ್ ನಾಯಕರು ಶಾಸಕರನ್ನು ವಿಭಜನೆ ಮಾಡಿ ಆಳ್ವಿಕೆ ಮಾಡಲು ತೆರಳಿದ್ದಾರೆ ಎಂದು ಆರೋಪಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಸಕರಿಗೆ ಹೆಚ್ಚಿನ ಧೈರ್ಯ, ಆತ್ಮಬಲ ತುಂಬಲು ಗುರುಗ್ರಾಮದಲ್ಲಿ ಇರಿಸಿದ್ದೇವೆ: ವಾಮನಾಚಾರ್ಯ

    ಶಾಸಕರಿಗೆ ಹೆಚ್ಚಿನ ಧೈರ್ಯ, ಆತ್ಮಬಲ ತುಂಬಲು ಗುರುಗ್ರಾಮದಲ್ಲಿ ಇರಿಸಿದ್ದೇವೆ: ವಾಮನಾಚಾರ್ಯ

    ಬೆಂಗಳೂರು: ಬಿಜೆಪಿ ಪಕ್ಷ ಯಾವುದೇ ಆಪರೇಷನ್ ಮಾಡುತ್ತಿಲ್ಲ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಶಾಸಕರು ಹಾಗೂ ಸಂಸದರಿಗೆ ಹೆಚ್ಚಿನ ಧೈರ್ಯ ಹಾಗೂ ಆತ್ಮಬಲ ತುಂಬಲು ಗುರುಗ್ರಾಮದಲ್ಲಿ ಇರಿಸಲಾಗಿದೆ ಎಂದು ಬಿಜೆಪಿ ವಕ್ತಾರ ವಾಮನಾಚಾರ್ಯ ಅವರು ತಿಳಿಸಿದ್ದಾರೆ.

    ಆಪರೇಷನ್ ಕಮಲ ಮಾಡುತ್ತಿದ್ದಾರೆ ಎನ್ನುವ ಆಡಳಿತ ಪಕ್ಷದ ನಾಯಕರ ಆರೋಪ ಹಿನ್ನೆಲೆಯಲ್ಲಿ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಒಂದು ವಾರದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ನಡೆಯುತ್ತಿರುವ ಗೊಂದಲದಿಂದಾಗಿ ಸಿಎಂ ಕುಮಾರಸ್ವಾಮಿ ಅವರು ಅಸಮಾಧಾನಗೊಂಡಿದ್ದಾರೆ. ಪರಿಣಾಮ ಮೈತ್ರಿ ಸರ್ಕಾರದಲ್ಲಿ ಶಾಸಕರ ನಂಬರ್ ಕುಸಿಯುತ್ತದೆ ಎಂಬ ಗೊಂದಲದಲ್ಲಿದ್ದಾರೆ. ಹಾಗಾಗಿ ನಮ್ಮ ಬಿಜೆಪಿ ಶಾಸಕರನ್ನು ಸೆಳೆಯುತ್ತೇವೆ ಎಂದು ಸಿಎಂ ಹೇಳಿಕೆ ನೀಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿಎಂ ಅವರೇ ಈ ರೀತಿ ಹೇಳಿಕೆ ನೀಡುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಈ ಮೂಲಕ ಇಲ್ಲದ ಗೊಂದಲವನ್ನು ಅವರೇ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಸಿಎಂ ಅವರೇ ಹೇಳಿದಂತೆ ನಮ್ಮ ಶಾಸಕರನ್ನ ಸೆಳೆಯುವ ಪ್ರಯತ್ನ ಅವರು ಮಾಡುತ್ತಿರುವುದರಿಂದ, ಶಾಸಕರಲ್ಲಿ ಆತ್ಮ ಬಲ ಹೆಚ್ಚಿಸಿ ಚುನಾವಣೆಗೆ ಸಿದ್ಧತೆ ನಡೆಸಲಾಗುತ್ತಿದೆ. ಲೋಕಸಭೆ ಚುನಾವಣಾ ಪೂರ್ವ ಸಿದ್ಧತೆ ಬಗ್ಗೆ ಚರ್ಚೆ ನಡೆಸಲು ಇದು ಒಳ್ಳೆಯ ಸಮಯವಾಗಿರುವ ಕಾರಣ ಅಲ್ಲಿದ್ದಾರೆ ಅಷ್ಟೇ. ಒಂದೊಮ್ಮೆ ಮೈತ್ರಿ ಸರ್ಕಾರದ ಶಾಸಕರ ಬಗ್ಗೆ ಅಷ್ಟೊಂದು ಭಯ ಇದ್ದರೆ, ಅವರನ್ನು ಹಿಡಿದಿಟ್ಟುಕೊಳ್ಳಿ ಎಂದು ಟಾಂಗ್ ನೀಡಿದರು.

    ಕಾಂಗ್ರೆಸ್ ಶಾಸಕರು ಪಕ್ಷದ ಒಳಗಿನ ಆಂತರಿಕ ಕಲಹದಿಂದ ಮುಂಬೈಗೆ ಹೋಗಿದ್ದಾರೆ. ಆದರೆ ನಾವು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ ಕಾಂಗ್ರೆಸ್ ಶಾಸಕರೇ ಮುಂಬೈಗೆ ತೆರಳಿದ ಮೇಲೆ ನಮ್ಮ ಶಾಸಕರನ್ನು ಬೇರೆ ವಿಚಾರಕ್ಕೆ ಸಂಪರ್ಕ ಮಾಡಿರಬಹುದು. ಅದು ಶಾಸಕರನ್ನ ಸೆಳೆಯುವ ಪ್ರಯತ್ನ ಅಲ್ಲ. ಬಿಜೆಪಿ ಕಾರಣದಿಂದ ಶಾಸಕರು ಮುಂಬೈಗೆ ಹೋಗಿಲ್ಲ. ಅಲ್ಲದೇ ನಾವು ಯಾವ ಶಾಸಕರನ್ನು ಸಂಪರ್ಕ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

    ಇದೇ ವೇಳೆ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಅವರು ಮುಂಬೈನಲ್ಲಿ ಶಾಸಕ ಉಮೇಶ್ ಜಾದವ್ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅವರು ಮುಂಬೈಗೆ ಏಕೆ ಹೋಗಿದ್ದಾರೆ ಎನ್ನುವುದು ಗೊತ್ತಿಲ್ಲ. ಕಾಂಗ್ರೆಸ್ ಶಾಸಕರೇ ನಮ್ಮ ಶಾಸಕರನ್ನ ಭೇಟಿ ಮಾಡಬೇಕು ಎಂದಾಗ ಹೋಗಿರಬಹುದು ಎಂದರು. ಅಲ್ಲದೇ ಮಹಾರಾಷ್ಟ್ರ ಸಚಿವರ ಹೇಳಿಕೆ ಬಗ್ಗೆ ಬಿಎಸ್ ಯಡಿಯೂರಪ್ಪ ಹೇಳುತ್ತಾರೆ. ಅದರ ಬಗ್ಗೆ ಅವರಿಗೆ ಹೆಚ್ಚಿನ ಮಾಹಿತಿ ಇರುತ್ತದೆ. ಆದರೆ ನಮ್ಮ ಪಕ್ಷದ ಮೊದಲಿಗೆ ಸರ್ಕಾರ ರಚನೆ ಮಾಡಲು ಮುಂದಾಗಿತ್ತು. ಸಾಧ್ಯವಾಗದೇ ಇದ್ದಾಗ ಆ ಪ್ರಯತ್ನವನ್ನು ಕೈಬಿಟ್ಟು, ಮತ್ತೆ ಸರ್ಕಾರ ರಚಿಸಲು ಮುಂದಾಗಲಿಲ್ಲ. ಅಲ್ಲದೇ ಇಬ್ಬರು ಪಕ್ಷೇತರ ಶಾಸಕರು ಬೆಂಬಲ ವಾಪಸ್ ಪಡೆದಿರುವುದರಲ್ಲಿ ನಮ್ಮ ಹಸ್ತಕ್ಷೇಪ ಇಲ್ಲ. ನಾವು ಮೈತ್ರಿ ಸರ್ಕಾರ ಕೆಡವಲು ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದರು.

    ರಾಜ್ಯ ಸರ್ಕಾರದಲ್ಲಿ ಈಗ ಇರುವ ವಾತಾವರಣದ ಸ್ಥಿತಿ ರಸ್ತೆಯಲ್ಲಿ ಹೋಗುವವನಿಗೂ ತಿಳಿಯುತ್ತದೆ. ಅಂಗೈ ಹುಣ್ಣಿಗೆ ಕನ್ನಡಿ ಏಕೆ? ಸರ್ಕಾರ ತಾನಾಗಿಯೇ ಬಿದ್ದರೆ ಸಾಮಾನ್ಯವಾಗಿಯೇ ಅತಿ ಹೆಚ್ಚು ಸಂಖ್ಯಾ ಬಲ ಹೊಂದಿರುವ ಬಿಜೆಪಿ ಸರ್ಕಾರ ರಚಿಸುತ್ತದೆ. ದೋಸ್ತಿ ಸರ್ಕಾರದಲ್ಲಿ ನಡೆಯುತ್ತಿರುವ ಅಂತರಿಕ ಕಿತ್ತಾಟದಿಂದ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರೇ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ವತಃ ಡಿಕೆ ಶಿವಕುಮಾರ್ ಅವರೇ ನಮ್ಮ ಶಾಸಕರನ್ನ ಸೆಳೆಯುವ ಪ್ರಯತ್ನ ಮಾಡಿದ್ದರು. ಆದರೆ ಸಾಧ್ಯವಾಗಲಿಲ್ಲ. ಇನ್ನು ಮುಂದಾದರೂ ಬಿಜೆಪಿ ಮೇಲೆ ಈ ರೀತಿಯ ಆರೋಪ ಮಾಡಬಾರದು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಡಿಯೂರಪ್ಪನವರದ್ದು ಬಸ್‍ಸ್ಟಾಂಡ್ ಲವ್ ಸ್ಟೋರಿ: ಇಬ್ರಾಹಿಂ ಲೇವಡಿ

    ಯಡಿಯೂರಪ್ಪನವರದ್ದು ಬಸ್‍ಸ್ಟಾಂಡ್ ಲವ್ ಸ್ಟೋರಿ: ಇಬ್ರಾಹಿಂ ಲೇವಡಿ

    ಬೆಂಗಳೂರು: ಸಮ್ಮಿಶ್ರ ಸರ್ಕಾರ ಬೀಳುವ ಭಯ ನಮಗೇ ಇಲ್ಲ. ಏಕೆಂದರೆ ಕಾಂಗ್ರೆಸ್ ಶಿಸ್ತಿನ ಪಕ್ಷವಾಗಿದ್ದು, ಶಾಸಕರನ್ನು ಸೃಷ್ಟಿ ಮಾಡುವ ಪಕ್ಷವಾಗಿದೆ. ಆದರೆ ಬಿಎಸ್ ಯಡಿಯೂರಪ್ಪ ಅವರದ್ದು ಬಸ್ ಸ್ಟಾಂಡ್ ಲವ್ ಆಗಿದ್ದು, ಮದುವೆಯಾದವರನ್ನು ಸೆಳೆಯಲು ಪ್ರಯತ್ನಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಲೇವಡಿ ಮಾಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಆಪರೇಷನ್ ಕಮಲದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷದೊಂದಿಗೆ ಜನರು ಇದ್ದಾರೆ. ನಮ್ಮ ಪಕ್ಷದ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ರಾಜ್ಯ ಉಸ್ತುವಾರಿ ವೇಣುಗೋಪಾಲ್ ರಾವ್ ಸೇರಿದಂತೆ ಹಲವು ನಾಯಕರು ಈ ಬಗ್ಗೆ ಸ್ಪಷ್ಟವಾದ ಹೇಳಿಕೆ ನೀಡಿದ್ದಾರೆ. ನಮ್ಮ ಪಕ್ಷ ಶಿಸ್ತಿನ ಪಕ್ಷವಾಗಿದ್ದು, ಸರ್ಕಾರವನ್ನು ಹಾಗೆಯೇ ನಡೆಸಿಕೊಂಡು ಹೋಗುತ್ತಿದ್ದೇವೆ. ಆದರೆ ಮದುವೆ ಮನೆಯಲ್ಲಿ ನಿದ್ದೆ ಕಣ್ಣಲ್ಲಿ ಕೈ ಹಾಕಿದರು ಎನ್ನುವಂತೆ ಬಿಜೆಪಿ ಒದ್ದಾಡುತ್ತಿದೆ ಎಂದು ವ್ಯಂಗ್ಯವಾಡಿದರು.

    ಸಮ್ಮಿಶ್ರ ಸರ್ಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದ್ದು, ಮದುವೆಯಾದ ಪತಿವ್ರತೆಯರನ್ನು ಕರೆದುಕೊಂಡು ಹೋಗಲು ಯಡಿಯೂರಪ್ಪ ಪ್ರಯತ್ನ ಮಾಡುತ್ತಿದ್ದಾರೆ. ಆಮಿಷಗಳನ್ನು ನೀಡುವ ಮೂಲಕ ಬಸ್‍ಸ್ಟಾಂಡ್ ಲವ್ ಮಾಡಲು ಮುಂದಾಗಿದ್ದಾರೆ. ಆದರೆ ಬಸ್‍ಸ್ಟಾಂಡ್ ಬಸವಿಯರು ಮಾತ್ರ ಅವರೊಂದಿಗೆ ಹೋಗುತ್ತಾರೆ. ಸಮ್ಮಿಶ್ರ ಸರ್ಕಾರ ಬಂದು 5 ತಿಂಗಳೂ ಆಗಿಲ್ಲ, ಇಂತ ಸಂದರ್ಭದಲ್ಲಿ ಅವರಿಗೆ ನೋವಾಗುವ ಸಂದರ್ಭ ಬಂದಿದೆ. ಏಕೆಂದರೆ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಪಕ್ಷ ಸೋಲುಂಡಿದೆ. ಬಿಜೆಪಿಯವರಿಗೆ ಅವರ ಶಾಸಕರ ಮೇಲೆಯೇ ನಂಬಿಕೆಯಿಲ್ಲ ಎಂದು ಆರೋಪಿಸಿದರು.

    ಇದೇ ವೇಳೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಇಬ್ರಾಹಿಂ ಅವರು, ಶ್ರಮಿಕ ವರ್ಗದ ಬಾಯಿಗೆ ಮೋದಿ ಮಣ್ಣು ಹಾಕಿದ್ದಾರೆ. ಎಚ್‍ಎಎಲ್ ಸಂಸ್ಥೆ ಮುಚ್ಚುವ ಹಂತ ತಲುಪಿದೆ. ಆದರೆ ಉದ್ಯಮಿಗಳ ಪರ ಇರುವ ಕೇಂದ್ರ ಡೀಲ್ ಮಾಡಲು ಮುಂದಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಯನ್ನು ರಾಜ್ಯದ ಜನರು ಗಮನಿಸುತ್ತಿದ್ದು, ನಮ್ಮ ಮೇಲೆ ರಾಜ್ಯದ ಜನರ ಅನುಕಂಪ ಮೂಡಿದೆ. ಎಲ್ಲೋ ಕಳೆದುಕೊಂಡು ಇಲ್ಲಿ ಬಂದು ಹುಡುಕುವ ಪ್ರಯತ್ನವನ್ನು ಮೋದಿ ಅವರು ಮಾಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಸುಭದ್ರವಾಗಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ – ಜಯದೇವ ಹೃದ್ರೋಗ ತಜ್ಞರಿಂದ ತಪಾಸಣೆ

    ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ – ಜಯದೇವ ಹೃದ್ರೋಗ ತಜ್ಞರಿಂದ ತಪಾಸಣೆ

    ತುಮಕೂರು: ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಮಂಜುನಾಥ್ ನೇತೃತ್ವದ ನುರಿತ ವೈದ್ಯರ ತಂಡ ಸಿದ್ದಗಂಗಾ ಶ್ರೀಗಳ ಆರೋಗ್ಯ ತಪಾಸಣೆ ನಡೆಸಿದೆ. ಒಟ್ಟು ಐದು ಜನ ತಜ್ಞರ ತಂಡ ಸುಮಾರು 1 ಗಂಟೆಗಳ ಕಾಲ ಶ್ರೀಗಳ ತಪಾಸಣೆ ನಡೆಸಿ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ತಿಳಿಸಿದೆ.

    ಶ್ರೀಗಳ ಆರೋಗ್ಯ ತಪಾಸಣೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಾ. ಮಂಜುನಾಥ್ ಅವರು, ಶ್ರೀಗಳ ರಕ್ತದೊತ್ತಡ, ಹೃದಯ ಬಡಿತ ಎಲ್ಲವೂ ಸಹಜ ಸ್ಥಿತಿಗೆ ಬಂದಿದ್ದು, ಶ್ವಾಸಕೋಶದ ಸೋಂಕು ಕೂಡಾ ಕಡಿಮೆಯಾಗಿದೆ. ಆದರೆ ಶ್ರೀಗಳಿಗೆ ನಿಶ್ಯಕ್ತಿ ಇದ್ದು, ಬೆನ್ನು ಬಾಗಿರುವುದರಿಂದ ಶ್ವಾಸ ಕೋಶದ ಮೇಲೆ ಪರಿಣಾಮ ಬೀರುತ್ತಿದೆ. ಪರಿಣಾಮ ಉಸಿರಾಟಕ್ಕೆ ತೊಂದರೆಯಾಗುತ್ತಿರುವ ಕಾರಣ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿದೆ. ಆದ್ರೂ ಶ್ರೀಗಳು ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದರು.

    ಶ್ರೀಗಳು ಕಣ್ಣು ಬಿಟ್ಟು ನೋಡುತ್ತಿದ್ದು, ಸಿದ್ದಗಂಗಾ ಆಸ್ಪತ್ರೆಯಲ್ಲಿ ವಿಶ್ವ ದರ್ಜೆಯ ಐಸಿಯು ವ್ಯವಸ್ಥೆ ಇದೆ. ಇದರಿಂದ ಬೇರೆ ಕಡೆ ಶಿಪ್ಟ್ ಮಾಡುವ ಅವಶ್ಯಕತೆ ಇಲ್ಲ. ರಾಜ್ಯ ಸರ್ಕಾರದ ನಿರ್ದೇಶನದಂತೆ ನಾವು ಐದು ಜನ ವೈದ್ಯರು ಬಂದಿದ್ದೇವೆ. ಶ್ರೀಗಳ ದೇಹದಲ್ಲಿ ಪ್ರೊಟೀನ್ ಅಂಶ ಏರಿಕೆಯಾಗಿರುವುದರಿಂದ ಅವರ ಆರೋಗ್ಯ ಗುಣವಾಗುತ್ತೆ ಎಂಬ ಆಶಾಭಾವನೆ ಇದೆ ಎಂದರು.

    ಸಿದ್ದಗಂಗಾ ಶ್ರೀ ಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನ ಆಸ್ಪತ್ರೆಗೆ ಸುತ್ತೂರು ಶ್ರೀ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಳಗೆ ಮಲಗಿದ್ದರೂ ಬಾಲಕಿಯನ್ನ ಮಾತಾಡಿಸ್ಲಿಲ್ಲ- ತುಮಕೂರಲ್ಲಿ ಹೆಲ್ತ್ ಮಿನಿಸ್ಟರ್ ದರ್ಪ

    ಕೆಳಗೆ ಮಲಗಿದ್ದರೂ ಬಾಲಕಿಯನ್ನ ಮಾತಾಡಿಸ್ಲಿಲ್ಲ- ತುಮಕೂರಲ್ಲಿ ಹೆಲ್ತ್ ಮಿನಿಸ್ಟರ್ ದರ್ಪ

    ತುಮಕೂರು: ಆಸ್ಪತ್ರೆಯಲ್ಲಿ ಸಿಗುವ ವೈದ್ಯಕೀಯ ಸೇವೆ ಹಾಗೂ ಅಧಿಕಾರಿಗಳ ಕಾರ್ಯ ವೈಖರಿಯನ್ನು ಪರಿಶೀಲನೆ ನಡೆಸಲು ಆಯಾ ಇಲಾಖೆ ಸಚಿವರು, ಉನ್ನತ ಅಧಿಕಾರಿಗಳು ಭೇಟಿ ನೀಡುವುದು ಸಾಮಾನ್ಯ. ಇದರಂತೆ ಆರೋಗ್ಯ ಸಚಿವರಾದ ಶಿವಾನಂದ ಪಾಟೀಲ್ ಅವರು ಇಂದು ಜಿಲ್ಲೆಯ ಆಸ್ಪತ್ರಗೆ ಭೇಟಿ ನೀಡಿದ್ದರು. ಆದರೆ ಸಚಿವರು ಭೇಟಿ ನೀಡಿದ ವೇಳೆಯೂ ಕೂಡ ಬಾಲಕಿಯೊಬ್ಬಳು ನೆಲದ ಮೇಲೆ ಮಲಗಿ ಚಿಕಿತ್ಸೆ ಪಡೆಯುತ್ತಿದ್ದರೂ ಸಚಿವರು ಕಂಡು ಕಾಣದಂತೆ ತೆರಳಿದ್ದಾರೆ.

    ತಮ್ಮ ಭೇಟಿ ವೇಳೆ ಆಸ್ಪತ್ರೆ ಒಳಬಂದ ಸಚಿವರು ರೋಗಿಗಳನ್ನು ವಿಚಾರಿಸದೇ ತೆರಳಿದ್ದಾರೆ. ಅಲ್ಲದೇ ಆಸ್ಪತ್ರೆಯಲ್ಲಿ ನೆಲದ ಮೇಲೆ ಬಾಲಕಿ ಮಲಗಿರುವುದನ್ನು ಕಂಡ ವೈದ್ಯರು ಮಾತನಾಡಿಸದೇ ಮುಂದೆ ಸಾಗಿದ್ದಾರೆ. ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಎಲ್ಲಾ ವಾರ್ಡ್ ಗಳಲ್ಲಿ ಸುತ್ತಾಡಿ ಸಮಯ ವ್ಯರ್ಥ ಮಾಡಿದ್ದಾರೆ.

    ಆಸ್ಪತ್ರೆಯ ವಾರಂಡದಲ್ಲಿ ಮಲಗಿದ್ದ ಬಾಲಕಿಯನ್ನ ಸೌಜನ್ಯಕ್ಕೂ ಮಾತನಾಡಿಸದೇ ಮುಂದೆ ಸಾಗಿದರು. ಸಚಿವರು ಆಗಮಿಸುತ್ತಿದ್ದಾಗ ಬಾಲಕಿ ಮಲಗಿದ್ದಳು. ಇದನ್ನು ಕಂಡ ಓರ್ವ ಎದ್ದೇಳು ಎಂದು ಹೇಳಿದ್ದರೂ ಕೂಡ ಸಚಿವರು ಗಮನಿಸದೇ ಮುಂದೆ ಸಾಗಿದ್ದಾರೆ. ವಾರ್ಡ್ ಗಳಲ್ಲಿ ಕೂಡ ಸಂಬಂಧ ಪಟ್ಟ ಅಧಿಕಾರಿಗಳ ಹತ್ತಿರ ಮಾತ್ರ ಮಾಹಿತಿ ಪಡೆದು ತೆರಳಿದರು.

    ಈ ಕುರಿತು ಪ್ರತಿಕ್ರಿಯೆ ನೀಡಿದ ಬಾಲಕಿಯ ಅಜ್ಜಿ, ಬಾಲಕಿಗೆ ಕೆಮ್ಮು ಜ್ವರ ಇತ್ತು. ಆದ್ದರಿಂದ ವೈದ್ಯರು ಬರುತ್ತಾರೆ ಎಂದು ಕಾದು ಕುಳಿತ್ತಿದ್ದೆವು. ಬಾಲಕಿಯ ತಾಯಿ ಕೂಡ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿದ್ದು, ಆದ್ದರಿಂದ ನಾವು ವರಾಂಡದಲ್ಲೇ ಮಲಗಿದ್ದಾಗಿ ತಿಳಿಸಿದ್ದಾರೆ.

    ಸುಳ್ವಾಡಿ ಪ್ರಕರಣದ ಸಂದರ್ಭದಲ್ಲೂ ಸಚಿವರು ಭೇಟಿ ನೀಡದೇ ಬೇಜವಾಬ್ದಾರಿ ಉತ್ತರ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಲೋಕ ಸಮರಕ್ಕೆ ರಣಕಹಳೆ ಊದಲು ಬಿಎಸ್‍ವೈ ಸಿದ್ಧತೆ

    ಲೋಕ ಸಮರಕ್ಕೆ ರಣಕಹಳೆ ಊದಲು ಬಿಎಸ್‍ವೈ ಸಿದ್ಧತೆ

    ಶಿವಮೊಗ್ಗ: 2019ರ ಲೋಕಸಭಾ ಚುಣಾವಣೆಗೆ ರಾಜ್ಯ ಬಿಜೆಪಿ ಸಿದ್ಧತೆ ನಡೆಸುತ್ತಿದ್ದು, ಚುನಾವಣಾ ರಣಕಹಳೆ ಊದಲು ಈಗಾಗಲೇ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರೊಂದಿಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ.

    ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದ ಬಿಎಸ್‍ವೈ, ಜನವರಿ 11 ಹಾಗೂ 12ರಂದು ದೆಹಲಿಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ರಾಜ್ಯದ ಸಂಸದರು ಹಾಗೂ ಶಾಸಕರ ಜೊತೆ ಪ್ರತ್ಯೇಕ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಸಭೆಗೆ ಪ್ರಧಾನಿ ಮೋದಿ ಅವರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.

    ಸಭೆಯಲ್ಲಿ ಲೋಕಸಭಾ ಕ್ಷೇತ್ರಗಳ ಇಂದಿನ ಸ್ಥಿತಿ-ಗತಿಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಬಳಿಕ ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಅಲ್ಲದೇ ಇದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆಗೆ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಪ್ರವಾಸದ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

    ಇದೇ ವೇಳೆ ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಎಸ್‍ವೈ, ದೋಸ್ತಿ ಸರ್ಕಾರ ಎರಡು ಪಕ್ಷಗಳಲ್ಲಿ ಎಲ್ಲವೂ ಸರಿಯಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ದಿನೇ ದಿನೇ ಈ ಗೊಂದಲ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಬರಗಾಲ ಉಂಟಾಗಿ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಲು ಯಾವ ಸಚಿವರು ತಯಾರಿಲ್ಲ. ಸರ್ಕಾರದ ಸಚಿವರುಗಳಲ್ಲಿ ಒಬ್ಬರ ಮುಖ ಒಬ್ಬರು ನೋಡಲು ಆಗದ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ನಿಗಮ ಮಂಡಳಿ ಕಚ್ಚಾಟ, ಲೋಕಸಭೆಗೆ ಯಾರು ಸ್ಪರ್ಧಿಸಬೇಕು ಎಂಬುವುದರ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದ್ದು, ಇಬ್ಬರ ಕಚ್ಚಾಟ, ಕಿತ್ತಾಟ ಮಧ್ಯೆ ರಾಜ್ಯದ ಅಭಿವೃದ್ಧಿ ಮತ್ತು ಬರಗಾಲದ ಬಗ್ಗೆ ಚಿಂತಿಸಲು ಇವರಿಗೆ ಸಮಯವಿಲ್ಲದಂತಾಗಿದೆ ಎಂದು ಟೀಕಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಗಮ ಮಂಡಳಿ ನೇಮಕಕ್ಕೆ ಸಿಎಂ ಕುಮಾರಸ್ವಾಮಿ ಅಂಕಿತ, ಯಾರಿಗೆ ಯಾವ ಮಂಡಳಿ?

    ನಿಗಮ ಮಂಡಳಿ ನೇಮಕಕ್ಕೆ ಸಿಎಂ ಕುಮಾರಸ್ವಾಮಿ ಅಂಕಿತ, ಯಾರಿಗೆ ಯಾವ ಮಂಡಳಿ?

    ಬೆಂಗಳೂರು: ಕಾಂಗ್ರೆಸ್ ಒತ್ತಡಕ್ಕೆ ಮಣಿದು, ಕೈ ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದ ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಗೆ ಕೊನೆಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಂಕಿತ ಹಾಕಿದ್ದಾರೆ.

    ಈ ಮೂಲಕ 14 ಶಾಸಕರು ನಿಗಮ ಮಂಡಳಿಗೆ ಅಧ್ಯಕ್ಷರಾಗಿ ಹಾಗೂ 8 ಶಾಸಕರು ಸಂಸದೀಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ನಿಗಮ ಮಂಡಳಿ ಅಧ್ಯಕ್ಷರಾದವರಿಗೆ ಸಂಪುಟ ದರ್ಜೆ ಹಾಗೂ ಸಂಸದೀಯ ಕಾರ್ಯದರ್ಶಿಗಳಿಗೆ ರಾಜ್ಯ ಸಚಿವ ಸ್ಥಾನಮಾನ ಸಿಗಲಿದೆ. ಬಿಡಿಎ, ಬಿಎಂಟಿಸಿ, ಮಾಲಿನ್ಯ ನಿಯಂತ್ರಣ ಮಂಡಳಿ, ರೇಷ್ಮೆ ಕೈಗಾರಿಕಾ ನಿಗಮ, ಕೆಆರ್ ಡಿಸಿ ಮಂಡಳಿಗೆ ಯಾವುದೇ ಶಾಸಕರ ನೇಮಕವಾಗಿಲ್ಲ. ಇತ್ತ ಕಾಂಗ್ರೆಸ್ ಪಟ್ಟಿಯಲ್ಲಿದ್ದ ಐವರನ್ನು ಕೈಬಿಡಲಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

    ಯಾರಿಗೆ ಯಾವ ಮಂಡಳಿ?:
    * ಬಿ.ಕೆ.ಸಂಗಮೇಶ್ – ಭದ್ರಾವತಿ ಶಾಸಕ – ಕೆಆರ್‍ಐಡಿಎಲ್ (ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ)
    * ಆರ್ ನರೇಂದ್ರ – ಹನೂರು ಶಾಸಕ – ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ
    * ಬಿ ನಾರಾಯಣ್ ರಾವ್ – ಬಸವಕಲ್ಯಾಣ ಶಾಸಕ – ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
    * ಡಾ. ಉಮೇಶ್ ಜಿ ಜಾಧವ್ -ಚಿಂಚೋಳಿ ಶಾಸಕ – ಕರ್ನಾಟಕ ರಾಜ್ಯ ಉಗ್ರಾಣ ನಿಗಮ
    * ರಘುಮೂರ್ತಿ – ಚಳ್ಳಕೆರೆ ಶಾಸಕ – ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
    * ಯಶವಂತರಾಯಗೌಡ ವಿ ಪಾಟೀಲ್ – ಇಂಡಿ ಶಾಸಕ – ಕರ್ನಾಟಕ ನಗರ ನೀರು ಸರಬರಾಜು

    * ಬೈರತಿ ಬಸವರಾಜ -ಕೆ ಆರ್ ಪುರಂ – ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ
    * ಬಿ ಶಿವಣ್ಣ – ಆನೇಕಲ್ ಶಾಸಕ – ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ
    * ಎಸ್‍ಎನ್ ನಾರಾಯಣಸ್ವಾಮಿ – ಬಂಗಾರಪೇಟೆ – ಡಾ.ಬಿಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮ ನಿಯಮಿತ
    * ಮುನಿರತ್ನ – ಆರ್ ಆರ್ ನಗರ – ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿತ
    * ಶಿವರಾಂ ಹೆಬ್ಬಾರ್ – ಯಲ್ಲಾಪುರ – ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ
    * ಬೈರತಿ ಸುರೇಶ್ – ಹೆಬ್ಬಾಳ – ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ
    * ಲಕ್ಷ್ಮೀ ಹೆಬ್ಬಾಳ್ಕರ್ – ಬೆಳಗಾವಿ ಗ್ರಾಮೀಣ – ಕರ್ನಾಟಕ ರಾಜ್ಯ ಖನಿಜ ನಿಗಮ
    * ಟಿಡಿ ರಾಜೇಗೌಡ – ಶೃಂಗೇರಿ – ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ

    ಸಂಸದೀಯ ಕಾರ್ಯದರ್ಶಿಗಳು?:
    * ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್
    * ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್
    * ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ
    * ಬೈಲಹೊಂಗಲ ಶಾಸಕ ಮಹಂತೇಶ್ ಕೌಜಲಗಿ
    * ಕೆಜಿಎಫ್ ಶಾಸಕಿ ರೂಪಾ ಶಶಿಧರ್
    * ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜ್
    * ಕೊಪ್ಪಳ ಶಾಸಕ ರಾಘವೇಂದ್ರ ಬಸವರಾಜ್ ಹಿಟ್ನಾಳ್
    * ಲಿಂಗಸೂಗೂರು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಹೂಲಗೇರಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾನೂನಿಗೆ ಗೌರವ ಕೊಟ್ಟು ಹೋಗಿದ್ವಿ – ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನೊಬ್ಬ ರಾಜಕಾರಣಿ: ಡಿಕೆಶಿ

    ಕಾನೂನಿಗೆ ಗೌರವ ಕೊಟ್ಟು ಹೋಗಿದ್ವಿ – ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನೊಬ್ಬ ರಾಜಕಾರಣಿ: ಡಿಕೆಶಿ

    ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಗಳು ನೀಡಿದ ನೋಟಿಸ್‍ಗೆ ಉತ್ತರವಾಗಿ ಕಾನೂನಿಗೆ ಗೌರವ ಕೊಟ್ಟು ನಾನು, ನನ್ನ ತಾಯಿ ಐಟಿ ಕಚೇರಿಗೆ ಹೋಗಿದ್ದೇವು ಎಂದು ಜಲಸಂಪ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಈ ಕುರಿತು ನಗರದ ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಸಚಿವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನೊಬ್ಬ ರಾಜಕಾರಣಿಯಾಗಿದ್ದು, ಮಾಧ್ಯಮಗಳಿಗೆ ಗೌರವ ಕೊಡಬೇಕಿದೆ. ನಮ್ಮ ತಾಯಿ ಅವರ ಬಳಿ ಐಟಿ ಅಧಿಕಾರಿಗಳು ಹೇಳಿಕೆ ಪಡೆದುಕೊಳ್ಳಲು ಊರಿಗೆ ಹೋಗಿದ್ದರು. ಆದರೆ ಅಂದು ನನ್ನ ತಾಯಿ ಊರಲ್ಲಿ ಇರಲಿಲ್ಲ. ಪರಿಣಾಮ ನೋಟಿಸ್ ಕೊಟ್ಟಿದ್ದರು. ಆದ್ದರಿಂದ ನಾನು ಮತ್ತು ನನ್ನ ತಾಯಿ ಕಾನೂನಿಗೆ ಗೌರವ ಕೊಟ್ಟು ಐಟಿ ಕಚೇರಿಗೆ ಹೋಗಿದ್ದೇವು ಎಂದು ತಿಳಿಸಿದರು.

    ವಿಚಾರಣೆಗೆ ನಡೆಸುವ ವೇಳೆ ನನಗೆ ಹೋಗಲು ಅವಕಾಶ ಇರಲಿಲ್ಲ. ಆದರೆ ನಮ್ಮ ತಾಯಿಗೆ 80 ವರ್ಷ ವಯಸ್ಸು ಆಗಿರುವ ಕಾರಣ, ತಾಯಿಗೆ ಸಹಕರಿಸಲು ಅಧಿಕಾರಿಗಳು ಅವಕಾಶ ಕೊಟ್ಟಿದ್ದರು. ಆದರೆ ನಾನು ತಪ್ಪು ಮಾಡಿಲ್ಲ, ಕಾನೂನಿನ ಪ್ರಕಾರವೇ ಎಲ್ಲವನ್ನು ಮಾಡಿದ್ದೇನೆ. ಇಂದು ನಡೆದ ವಿಚಾರಣೆ ವೇಳೆಯೂ ನನ್ನ ತಾಯಿಗೆ ತಿಳಿದಿದ್ದಷ್ಟು ಹೇಳಿದ್ದಾರೆ. ಅವರಿಗೆ ಅಧಿಕಾರಿಗಳು ಕೂಡ ಗೌರವ ಕೊಟ್ಟಿದ್ದಾರೆ. ಕಾನೂನಿನಲ್ಲಿ ನನಗೆ ನ್ಯಾಯ ಸಿಗುವ ವಿಶ್ವಾಸ ಇದೆ. ಆದರೆ 80 ವರ್ಷದ ತಾಯಿಯನ್ನ 6 ಗಂಟೆಗಳ ಕಾಲ ಕೂರಿಸಿಕೊಂಡಿದ್ದರು ಎಂಬುದು ನನಗೆ ನೋವು ತಂದಿದೆ. ಆದರೆ ನಾನು ಹೋರಾಟ ಮಾಡುತ್ತೇನೆ, ಎಲ್ಲದಕ್ಕೂ ಉತ್ತರ ನೀಡಬಲ್ಲೆ. ನನ್ನನ್ನು ವಿಚಾರಣೆಗೆ ಕರೆಯುವ ಸಂದರ್ಭಗಳು ಬರುತ್ತವೆ ಎಂದು ತಿಳಿಸಿದರು.

    ಈ ಹಿಂದೆಯೇ ನನಗೆ ಹಲವು ನೋಟಿಸ್ ಬಂದಿದೆ. ಆ ಬಗ್ಗೆ ಮಾಹಿತಿ ನೀಡಲು ಸದ್ಯ ಸಾಧ್ಯವಿಲ್ಲ. ಆದರೆ ನನ್ನನ್ನು ಇಂದು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಪರಿಣಾಮ ನಾನು ಹೆಚ್ಚು ಮಾತನಾಡಲು ಸಾಧ್ಯವಿಲ್ಲ. ಈ ಹಿಂದೆ ಆಸ್ಪತ್ರೆಯಿಂದ ಬಿಡುಗಡೆಯಾದ ವೇಳೆಯೇ ಎಲ್ಲದಕ್ಕೂ ಉತ್ತರ ಕೊಟ್ಟಿದ್ದೇನೆ. ಈಗ ಹೆಚ್ಚೇನು ಮಾತನಾಡಲ್ಲ ಎಂದರು.

    ಇದೇ ವೇಳೆ ಸಿನಿಮಾ ನಟರ ಮೇಲೆ ಐಟಿ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಸಿನಿಮಾ ನಟರ ಪಕ್ಕದ ಮನೆಯ ನಿವಾಸಿ. ಬೆಳಗಾದರೆ ಒಬ್ಬರ ಮುಖ ಒಬ್ಬರು ನೋಡಬೇಕು. ಆದ್ದರಿಂದಲೇ ನಾನು ನಿನ್ನೆ ಅಲ್ಲಿ ನಿಂತು ಮಾತನಾಡಿಸಿದ್ದೆ. ಆದರೆ ಅಲ್ಲಿ ತನಿಖೆ ಪೂರ್ಣಗೊಳಿಸಿರಲಿಲ್ಲ. ವಿಷಯ ತಿಳಿಯುತ್ತಿದಂತೆ ವಾಪಸ್ ಮನೆಗೆ ಬಂದೆ ಅಷ್ಟೇ. ಕಾನೂನಿನಲ್ಲಿ ಇರುವಂತೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿದ್ದಾರೆ. ಈ ಬಗ್ಗೆ ನಾನು ಏನು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv