Tag: State Government

  • ಸ್ವಲ್ಪ ಎಡುವಿದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ: ಬಿಎಸ್‍ವೈ

    ಸ್ವಲ್ಪ ಎಡುವಿದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ: ಬಿಎಸ್‍ವೈ

    ಮೈಸೂರು: ದಾಸೋಹ ಅಂದರೆ ವೀರಶೈವ ಲಿಂಗಾಯತರಲ್ಲಿ ವಿಶೇಷ ಅರ್ಥ ಇದೆ. ನಾವೆಲ್ಲರೂ ಒಟ್ಟಾದಾಗ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯ. ವರ್ಗಾವಣೆ ಸಂದರ್ಭದಲ್ಲಿ ಸರ್ಕಾರ ಲಿಂಗಾಯತರನ್ನು ಮೂಲೆಗುಂಪು ಮಾಡಿದ್ದಾರೆ. ಎಡವದಿದ್ದರೆ ನೀವು ಹೀಗೆ ಇರುತ್ತಿರಲಿಲ್ಲ, ನಾನು ಕೂಡ ಹೀಗೆ ಇರುತ್ತಿರಲಿಲ್ಲ ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

    ಮೈಸೂರಿನಲ್ಲಿ ನಡೆದ ವೀರಶೈವ ಲಿಂಗಾಯತ ನೌಕರರ ಸಮ್ಮೇಳನದಲ್ಲಿ ಭಾಗವಹಿಸಿ ಬಿಎಸ್‍ವೈ ಮಾತನಾಡಿದರು. ವರ್ಗಾವಣೆ ವಿಚಾರದಲ್ಲಿ ತಾರತಮ್ಯ, ಜಾತಿ ನೋಡುವುದು ರಾಜ್ಯ ಸರ್ಕಾರಕ್ಕೆ ಶೋಭೆ ತರಲ್ಲ. ಎಲ್ಲಾ ವರ್ಗಕ್ಕೆ ನ್ಯಾಯ ಒದಗಿಸುವ ಜವಾಬ್ದಾರಿ ಹೊಂದಿರುವ ಸಿಎಂ ಹಾಗೂ ಸಚಿವರು ಅನ್ಯಾಯ ಮಾಡಿದಂತಾಗುತ್ತೆ. ಇದನ್ನ ಸರಿಪಡಿಸೋ ಕೆಲಸ ಸರ್ಕಾರ ಮಾಡಬೇಕು, ನಾನೂ ಕೂಡ ವಿರೋಧ ಪಕ್ಷದ ನಾಯಕನಾಗಿ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

    ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಎಸ್‍ವೈ, ಸ್ವಾರ್ಥ ರಾಜಕಾರಣ ಮಾಡುವ ವಿಚಿತ್ರ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಜನ ಧಂಗೆ ಏಳುವ ಪರಿಸ್ಥಿತಿ ಬರುತ್ತೆ. ಬರಗಾಲದ ಪರಿಸ್ಥಿತಿಯನ್ನು ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ. ಸರ್ಕಾರ ಕೇವಲ ಮೂರು ನಾಲ್ಕು ಜಿಲ್ಲೆಗೆ, ಒಂದು ಜನಾಂಗಕ್ಕೆ ಸೀಮಿತ ಎನ್ನುವುದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾದದ್ದು. ಇನ್ನಾದರೂ ಇದನ್ನು ಸರಿಪಡಿಸಿಕೊಳ್ಳಲಿ ಎಂದು ಸಮಿಶ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬಿ ಮಾಡಲು ಸಾಧ್ಯವಾಗದ ಜಿಲ್ಲೆಯ ಅಭಿವೃದ್ಧಿಗೆ ನಾನು ಚಾಲನೆ ನೀಡಿದ್ದೇನೆ: ಸಿಎಂ ಎಚ್‍ಡಿಕೆ

    ಅಂಬಿ ಮಾಡಲು ಸಾಧ್ಯವಾಗದ ಜಿಲ್ಲೆಯ ಅಭಿವೃದ್ಧಿಗೆ ನಾನು ಚಾಲನೆ ನೀಡಿದ್ದೇನೆ: ಸಿಎಂ ಎಚ್‍ಡಿಕೆ

    – ಆತ್ಮೀಯರ ನಡುವೆ ಬಿರುಕು ಮೂಡಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ

    ಮಂಡ್ಯ: ಜಿಲ್ಲೆಯ ಜನರ ಋಣದ ಭಾರ ನನ್ನ ಮೇಲಿದ್ದು, ಆ ಋಣವನ್ನು ತೀರಿಸುವ ಕಾರ್ಯ ನನ್ನ ಮೇಲಿದೆ. ಅಭಿವೃದ್ಧಿಯ ವಿಚಾರಕ್ಕೆ ಜಿಲ್ಲೆಗೆ ದೊಡ್ಡ ಅನಾಯ್ಯವಾಗಿದ್ದು, ಅಂಬರೀಶ್ ಅವರ ಕಾಲದಲ್ಲಿ ಮಾಡಲು ಸಾಧ್ಯವಾಗದ ಕಾರ್ಯಗಳಿಗೆ ನಾನು ಚಾಲನೆ ಕೊಟ್ಟಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಮಂಡ್ಯ ಅಭಿವೃದ್ಧಿ ಯೋಜನೆಗಳ ಚಾಲನೆ ನೀಡುವ ಸಂಬಂಧ ಇಂದು ನಗರದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮ ಉದ್ದೇಶಿಸಿ ಸಿಎಂ ಕುಮಾರಸ್ವಾಮಿ ಅವರು ಮಾತನಾಡಿದರು. ಅಂಬರೀಶ್ ಹಾಗೂ ನಾನು ಆತ್ಮೀಯ ಸ್ನೇಹಿತರು. ಅವರು ನಿಧನ ಹೊಂದಿದ್ದ ಸಂದರ್ಭದಲ್ಲಿ ಅವರಿಗೆ ನೀಡಿದ ಗೌರವ ಇಡೀ ಜಿಲ್ಲೆಗೆ ನೀಡಿದ ಗೌರವ. ಇದನ್ನು ಅಂಬರೀಶ್ ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕು. ಅಂದು ಮಂಡ್ಯ ಜಿಲ್ಲೆಗೆ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಕರೆತರುವುದು ಬೇಡ ಎಂದವರು ಇಂದು ಈ ಮಣ್ಣಿನ ಬಗ್ಗೆ ಪ್ರೀತಿ ತೋರಿಸುತ್ತಿದ್ದಾರೆ. ಅಂಬರೀಶ್ ಅವರಿಂದ ಮಾಡಲಾಗದ ಅಭಿವೃದ್ಧಿ ಕಾರ್ಯಗಳನ್ನು ನಾನು ಮಾಡುತ್ತಿದ್ದು, ನಿಮ್ಮ ಋಣವನ್ನು ತೀರಿಸುವ ಕಾರ್ಯವನ್ನು ಮಾಡಿದ್ದೇನೆ ಎಂದರು.

    ನನ್ನ ಕುಟುಂಬವನ್ನು ಇಂದು ಬೀದಿಗೆ ಎಳೆದಿದ್ದಾರೆ. ನಾನು ಎಂದಾದರೂ ನನ್ನ ಮಗನನ್ನು ರಾಜಕೀಯಕ್ಕೆ ಕರೆತರುವ ಬಗ್ಗೆ ಮಾತನಾಡಿದ್ದೇನಾ ಎಂದು ಪ್ರಶ್ನಿಸಿದರು. ಅಲ್ಲದೇ ಜಿಲ್ಲೆಯ ಅಭಿವೃದ್ಧಿ ನನ್ನ ಜೀವನದ ಗುರಿಯಾಗಿದ್ದು, ಕಳೆದ ಚುನಾವಣೆಯಲ್ಲಿ 7 ಸ್ಥಾನಗಳಲ್ಲಿ ನಮ್ಮನ್ನು ಗೆದ್ದು ತಂದಿದ್ದೀರಿ. ನಿಮ್ಮ ಆಶೀರ್ವಾದದಿಂದ ಈ ಜಾಗದಲ್ಲಿ ನಿಂತಿದ್ದೇನೆ. ನನ್ನ ಕೊನೆಯ ಉಸಿರು ಇರುವವರೆಗೂ ಇದನ್ನು ಮರೆಯಲ್ಲ. ಕೇವಲ ಮಂಡ್ಯ ಜಿಲ್ಲೆಗಾಗಿ ಕಾರ್ಯಕ್ರಮ ಮಾಡುತ್ತೇನೆ ಎಂದು ಸಣ್ಣತನದ ಮಾತನಾಡುತ್ತಾರೆ. ಆದರೆ ಬೇರೆ ಬೇರೆ ಜಿಲ್ಲೆಗಳಿಗೆ ಯಾವ ಕೊಡುಗೆ ನೀಡಿದ್ದೇನೆ ನನಗೆ ಗೊತ್ತಿದೆ ಎಂದು ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿ ತಮ್ಮ ವಿರುದ್ಧದ ಟೀಕೆಗಳಿಗೆ ಉತ್ತರಿಸಿದರು.

    ಬದುಕಿರುವುದೇ ನಿಮಗಾಗಿ: ಮತ್ತೆ ತಮ್ಮ ಬದುಕಿನ ಕುರಿತು ಪ್ರಸ್ತಾಪ ಮಾಡಿದ ಸಿಎಂ ಎಚ್‍ಡಿಕೆ ನಾನು ಬದುಕಿರುವುದು ನಿಮಗಾಗಿ, ನಾಡಿನ ಜನತೆಗಾಗಿ ಎಂದರು. ಅಲ್ಲದೇ ರೈತರ ಸಾಲಮನ್ನಾ ವಿಚಾರದಲ್ಲಿ ನಾನು ಎಂದು ಸುಳ್ಳು ಹೇಳಿಲ್ಲ. ನಿನ್ನೆ ಬೆಳಗ್ಗೆ ಹತ್ತು ಗಂಟೆವರೆಗೂ 6 ಲಕ್ಷದ 40 ಸಾವಿರ ರೈತ ಕುಟುಂಬಗಳಿಗೆ 4 ಸಾವಿರದ 103 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೇನೆ. ರಾಜ್ಯ ಸರ್ಕಾರದ ಖಜಾನೆಯಲ್ಲಿ ಇನ್ನೂ 6 ಸಾವಿರ ದುಡ್ಡು ಇಟ್ಟಿದ್ದೇನೆ. ಕೇಂದ್ರ ಪ್ರಧಾನಿ ರೀತಿ ನಾನು ಮಾತನಾಡಲ್ಲ ಎಂದು ಕಿಡಿಕಾರಿದರು.

    ರೈತರ ಸಾಲಮನ್ನಾ ಮಾಡಿದರೆ ಮಾತ್ರ ರೈತರು ಆರಾಮವಾಗಿ ಇರುತ್ತಾರೆ ಎಂಬ ಭ್ರಮೆ ನನಗಿಲ್ಲ. ಸಮಗ್ರ ಅಭಿವೃದ್ಧಿಗಾಗಿ ನಾನು ದುಡಿಯುತ್ತೇನೆ. ಗಿರವಿ ಇಟ್ಟಿರುವ ಒಡವೆಗಳನ್ನ ಬಿಡಿಸಿಕೊಡುವ ನಿಟ್ಟಿನಲ್ಲಿ ಹೊಸ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಯೋಜನೆ ಮುಗಿಯುವವರೆಗೂ ಯಾವುದೇ ಮಾನಸಿಕ ಹಿಂಸೆ ಕೊಟ್ಟರೂ ಅಧಿಕಾರದಲ್ಲಿ ಇರುತ್ತೇನೆ. ಆದರೆ ಜಿಲ್ಲೆಯ ಟಿಕೆಟ್ ವಿಚಾರದಲ್ಲಿ ಈ ವೇದಿಕೆಯಲ್ಲಿ ಪ್ರಸ್ತಾಪ ಮಾಡಲ್ಲ. ಅದಕ್ಕೆ ರಾಜಕೀಯ ವೇದಿಕೆ ಇದೆ. ಆಗ ಮಾತನಾಡುತ್ತೇನೆ ಎಂದರು.

    ಜಿಲ್ಲೆಯ ಜನ ಹಣ ಪಡೆದು ಮೋಸ ಹೋಗುವುದಿಲ್ಲ. ಯಾವುದೇ ಆಮಿಷಗಳಿಗೆ ಒಳಗಾಗಲ್ಲ. ಇದೇ ರೀತಿ ನಿಮ್ಮ ಬೆಂಬಲ ನಮಗೆ ನೀಡಿ ಯಾವುದೇ ಕಾರಣಕ್ಕೂ ಅನುಕಂಪದ ಮಾತುಗಳಿಗೆ ಮರುಳಾಗಬೇಡಿ. ನಿಜವಾಗಿ ಕೆಲಸ ಮಾಡುವವರಿಗೆ ಅವಕಾಶ ಮಾಡಿಕೊಡಿ ಎಂದು ಪರೋಕ್ಷವಾಗಿ ಸುಮಲತಾ ಅಂಬರೀಶ್ ಅವರಿಗೆ ಟಾಂಗ್ ಕೊಟ್ಟರು.

    ಕನ್ನಡಿಗ ಮತ್ತೊಮ್ಮೆ ಪ್ರಧಾನಿ: ರಾಜ್ಯದಲ್ಲಿ 20 ಸ್ಥಾನಗಳಿಗೆ ಹೆಚ್ಚು ಸ್ಥಾನ ಪಡೆದುಕೊಂಡರೆ ದೆಹಲಿಯಲ್ಲಿ ಮತ್ತೊಮ್ಮೆ ಕನ್ನಡಿಗರೊಬ್ಬರು ಪ್ರಧಾನಿಯಾಗ ಬಹುದು ಎಂದು ಹೇಳಿದ ಕುಮಾರಸ್ವಾಮಿ ಅವರು ಪರೋಕ್ಷವಾಗಿ ಎಚ್‍ಡಿಡಿ ಮತ್ತೊಮ್ಮೆ ಪ್ರಧಾನಿ ಆಗುವ ವಿಚಾರವನ್ನು ಬಿಚ್ಚಿಟ್ಟರು. ಅಲ್ಲದೇ ದೇವೇಗೌಡರು ಪ್ರಧಾನಿ ಆಗಿದ್ದಾಗ ಒಂದೇ ಒಂದು ಯೋಧರ ಕುಟುಂಬ ಅನಾಥರಾಗುವ ಘಟನೆ ನಡೆಯಲಿಲ್ಲ. ರೈತರ ಸಾಲಮನ್ನಾ ಮಾಡುವುದು ಪಾಪದ ಕೆಲಸ ಎನ್ನುವ ಪ್ರಧಾನಿಗೆ ಸರಿಯಾದ ಉತ್ತರ ಕೊಡಿ ಎಂದರು.

    ಗುರು ಪತ್ನಿಗೆ ನಾಳೆಯೇ ಉದ್ಯೋಗ: ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹುತಾತ್ಮ ಗುರು ಪತ್ನಿ ಕಲಾವತಿಯರಿಗೆ ಸಂತ್ವಾನ ಹೇಳಿದ ಸಿಎಂ ಕುಮಾರಸ್ವಾಮಿ ಅವರು, ಕಲಾವತಿಯವರು ಗೌರವಯುತವಾಗಿ ಬದುಕು ನಡೆಸಲು ಕೆಲಸ ನೀಡುವ ಆಶ್ವಾಸನೆ ನೀಡಿದ್ದೆ. ಅದರಂತೆ ಅವರಿಗೆ ಬೆಂಗಳೂರಿಗೆ ಬರಲು ಹೇಳಿದ್ದೇನೆ. ನಾಳೆಯೇ ಕೆಲಸ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಓಲಾ, ಉಬರ್ ಕ್ಯಾಬ್ ಮಾದರಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ವ್ಯವಸ್ಥೆ: ಬಂಡೆಪ್ಪ ಕಾಶೇಂಪುರ

    ಓಲಾ, ಉಬರ್ ಕ್ಯಾಬ್ ಮಾದರಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ವ್ಯವಸ್ಥೆ: ಬಂಡೆಪ್ಪ ಕಾಶೇಂಪುರ

    ಬೆಂಗಳೂರು: ಕೇಂದ್ರದ ಮೋದಿ ಸರ್ಕಾರ ರೈತರ ಖಾತೆಗೆ 2 ಸಾವಿರ ಹಾಕಿದ ಬೆನ್ನಲ್ಲೇ, ಇತ್ತ ರಾಜ್ಯ ಸರ್ಕಾರ ರೈತರಿಗೆ ಟ್ರ್ಯಾಕ್ಟರ್ ಸೇವೆ ನೀಡಲು ಚಿಂತನೆ ನಡೆಸಿದೆ. ಓಲಾ, ಉಬರ್ ಕ್ಯಾಬ್ ಮಾದರಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ವ್ಯವಸ್ಥೆ ಮಾಡಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೇಂಪುರ ತಿಳಿಸಿದರು.

    ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಬಂಡೆಪ್ಪ ಕಾಶೇಂಪುರ, ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಾಗಿಸಲು ಓಲಾ, ಉಬರ್ ಕ್ಯಾಬ್ ಮಾದರಿಯಲ್ಲಿ ಟ್ರ್ಯಾಕ್ಟರ್ ವ್ಯವಸ್ಥೆ ಮಾಡಲಾಗುವುದು. ಹೊಲದಿಂದಲೇ ಉತ್ಪನ್ನಗಳನ್ನು ಸಾಗಿಸಲು ರೈತರು ಟ್ರ್ಯಾಕ್ಟರ್ ಬುಕ್ ಮಾಡಬಹುದುದಾಗಿದೆ. ಇನ್ಮುಂದೆ ಕೃಷಿ ಉತ್ಪನ್ನಗಳ ಖರೀದಿ ಗೋಡಾನ್‍ನಲ್ಲಿ ಆಗಲಿದ್ದು, ಇದಕ್ಕೆ ಆ್ಯಪ್ ಸಿದ್ಧ ಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಬೆಳೆಗಳಿಗೆ ಬೆಂಬಲ ಬೆಲೆ ತೊಂದರೆ ಆಗದಂತೆ ಲಭ್ಯ ಆಗುತ್ತಿದೆ. ಹೆಸರು, ಉದ್ದು, ಸೋಯಾ, ತೊಗರಿ ಎಲ್ಲ ಬೆಳೆಗಳಿಗೂ ಬೆಂಬಲ ಬೆಲೆ ಸಿಗುತ್ತಿದೆ. ಸರ್ಕಾರ ಸಾಲಮನ್ನಾ ಮಾಡಿ ರೈತರ ಭಾರ ಇಳಿಸಿದೆ. ಈ ಯೋಜನೆ ಚುರುಕಾಗಿ ಸಾಗುತ್ತಿದ್ದು, ಹಲವು ಯೋಜನೆಗಳ ಮೂಲಕ ರಾಜ್ಯ ಸರ್ಕಾರ ರೈತರ ಬದುಕು ಸುಭದ್ರಗೊಳಿಸಲು ಬದ್ಧವಾಗಿದೆ. ಬಡವರ ಬಂಧು ಯೋಜನೆ ಸಫಲತೆ ಹಾದಿಯಲ್ಲಿದ್ದು, ಇದುವರೆಗೂ 18 ಸಾವಿರ ಜನರಿಗೆ ಉಪಯೋಗವಾಗಿದೆ ಎಂದರು.

    ಲೋಕಸಭಾ ಚುನಾವಣೆಯ ಸ್ಥಾನಗಳ ಹಂಚಿಕೆಯನ್ನು ಹೈಕಮಾಂಡ್ ಹಾಗು ರಾಹುಲ್ ಗಾಂಧಿ ಅವರು ನಿರ್ಧಾರ ಮಾಡುತ್ತಾರೆ. ಯಾರಿಗೆ ಎಷ್ಟು ಸೀಟು ಎಂಬುವುದು ಆ ಬಳಿಕ ತಿಳಿಯಲಿದೆ. ಸೀಟು ಹಂಚಿಕೆಯಾದ ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಉಂಟಾಗುವುದು ಸಹಜ. ಆದರೆ ಅದನ್ನು ಸರಿಪಡಿಸಿಕೊಳೂತ್ತೇವೆ. ಎಲ್ಲವೂ ಮಾತುಕತೆಯ ಮೂಲಕ ಸುಗಮವಾಗಿ ಹಂಚಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶೋಭಾ ಕರಂದ್ಲಾಜೆಗೆ ಬುದ್ಧಿಭ್ರಮಣೆಯಾಗಿದೆ: ದಿನೇಶ್ ಗುಂಡೂರಾವ್ ತಿರುಗೇಟು

    ಶೋಭಾ ಕರಂದ್ಲಾಜೆಗೆ ಬುದ್ಧಿಭ್ರಮಣೆಯಾಗಿದೆ: ದಿನೇಶ್ ಗುಂಡೂರಾವ್ ತಿರುಗೇಟು

    ಮಂಗಳೂರು: ಪುಲ್ವಾಮ ದಾಳಿಗೂ, ಏರ್ ಶೋ ದುರಂತಕ್ಕೂ ಲಿಂಕ್ ಮಾಡುವ ಮಟ್ಟಿಗೆ ಸಂಸದೆ ಶೋಭಾ ಕರಂದ್ಲಾಜೆಗೆ ಬುದ್ಧಿಭ್ರಮಣೆಯಾಗಿದೆ. ಯಾವಾಗ ಏನು ಮಾತನಾಡಬೇಕು ಅಂತ ಅವರಿಗೆ ಗೊತ್ತಾಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.

    ಏರ್ ಶೋನಲ್ಲಿ ಬೆಂಕಿ ಅನಾಹುತಕ್ಕೆ ರಾಜ್ಯ ಸರ್ಕಾರದ ವೈಫಲ್ಯತೆ ಕಾರಣ ಎಂದು ಶೋಭಾ ಕರಂದ್ಲಾಜೆ ಟೀಕೆಗೆ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪುಲ್ವಾಮ ದಾಳಿಯ ವೈಫಲ್ಯದ ಬಗ್ಗೆ ಶೋಭಾ ಮಾತಾಡಲಿ. ಇಂಟೆಲಿಜೆನ್ಸ್ ವರದಿ ಬಗ್ಗೆ ಮೋದಿ ಸುಮ್ಮನಿದ್ದಾರೇಕೆ ಅನ್ನುವುದನ್ನು ಹೇಳಲಿ. ಅದನ್ನ ಬಿಟ್ಟು ಪುಲ್ವಾಮ ದಾಳಿಗೂ, ಏರ್ ಶೋ ದುರಂತಕ್ಕೂ ಲಿಂಕ್ ಮಾಡುವ ಮಟ್ಟಿಗೆ ಶೋಭಾ ಅವರಿಗೆ ಬುದ್ಧಿಭ್ರಮಣೆಯಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:ಏರ್ ಶೋ ಬೆಂಕಿ ಅವಘಡಕ್ಕೂ ಪುಲ್ವಾಮಾ ದಾಳಿಗೂ ಲಿಂಕ್ ಇದೆಯಾ – ಘಟನೆಯನ್ನು ರಾಜಕೀಯಗೊಳಿಸಿದ್ರಾ ಕರಂದ್ಲಾಜೆ?

    ಶೋಭಾ ಏನು ಮಾತಾಡುತ್ತಾರೆಂದು ಅವರಿಗೇ ಗೊತ್ತಿಲ್ಲ. ಕೇಂದ್ರದ ವಾಯುನೆಲೆ ಸುಪರ್ದಿಯಲ್ಲಿ ಯಲಹಂಕದಲ್ಲಿ ಏರ್ ಶೋ ನಡೆಯುತ್ತಿದೆ. ಏನಾದರೂ ವಿಫಲತೆ ಆಗಿದ್ದರೆ ರಕ್ಷಣಾ ಇಲಾಖೆ ವೈಫಲ್ಯ ಅನ್ನಬೇಕಷ್ಟೇ. ಇಡೀ ಕಾರ್ಯಕ್ರಮಕ್ಕೆ ಸಹಕಾರ ಕೊಡುವುದಷ್ಟೆ ರಾಜ್ಯ ಸರ್ಕಾರದ ಕೆಲಸ. ಸುಮ್ಮನೆ ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವುದು ಸರಿಯಲ್ಲ. ಶೋಭಾ ಸಂಸದರಾಗಿ ಕ್ಷೇತ್ರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಹೇಳಲಿ. ಅವರು ಏನೂ ಕೆಲಸ ಮಾಡದೇ ಈ ರೀತಿ ಹೇಳಿಕೆಯಿಂದ ಪ್ರಚಾರ ಗಿಟ್ಟಿಸಿಕೊಳ್ತಾರೆ ಎಂದು ದಿನೇಶ್ ಗುಂಡೂರಾವ್ ಹರಿಹಾಯ್ದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾವೇರಿ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್-1,016 ಹೋರಾಟಗಾರರು ಪ್ರಕರಣದಿಂದ ಖುಲಾಸೆ

    ಕಾವೇರಿ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್-1,016 ಹೋರಾಟಗಾರರು ಪ್ರಕರಣದಿಂದ ಖುಲಾಸೆ

    ಬೆಂಗಳೂರು: ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆಯ ಕಾವೇರಿ ಹೋರಾಟಗಾರರಿಗೆ ಸಂತಸದ ಸುದ್ದಿ ನೀಡಿದ್ದು, ಕಾವೇರಿ ನದಿ ನೀರಿನ ವಿಷಯವಾಗಿ ನಡೆದ ಪ್ರತಿಭಟನೆಗಳಲ್ಲಿ ದಾಖಲಾಗಿದ್ದ 51 ಪಕ್ರರಣಗಳನ್ನ ಹಿಂಪಡೆದಿದೆ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಮಾಹಿತಿ ನೀಡಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಿಗೆ ಸಚಿವರು, ಸರ್ಕಾರದ ನಿರ್ಧಾರದಿಂದ ಒಟ್ಟು 1,016 ಹೋರಾಟಗಾರರಿಗೆ ಪ್ರಕರಣಗಳಿಂದ ಮುಕ್ತಿ ಸಿಗಲಿದೆ. ಆದರೆ ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟ ಮಾಡಿದವರ ವಿರುದ್ಧದ ಪ್ರಕರಣಗಳನ್ನ ಸರ್ಕಾರ ವಾಪಸ್ ಪಡೆಯದೇ ಇರಲು ನಿರ್ಧಾರ ಮಾಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಮಂಡ್ಯದಲ್ಲಿ 14 ಪ್ರಕರಣಗಳಲ್ಲಿ 180 ಆರೋಪಿಗಳು, ಮದ್ದೂರಿನಲ್ಲಿ 6 ಪ್ರಕರಣಗಳಲ್ಲಿ 94 ಆರೋಪಿಗಳು, ಮಳವಳ್ಳಿಯಲ್ಲಿ 3 ಪ್ರಕರಣಗಳಲ್ಲಿ 36 ಆರೋಪಿಗಳು, ಶ್ರೀರಂಗಪಟ್ಟಣದಲ್ಲಿ 11 ಪ್ರಕರಣಗಳಲ್ಲಿ 74 ಆರೋಪಿಗಳು, ಕೆಆರ್ ಪೇಟೆಯಲ್ಲಿ 1 ಪ್ರಕರಣದಲ್ಲಿ ಒಬ್ಬ ಆರೋಪಿ, ಇನ್ನು ಪಾಂಡವಪುರದಲ್ಲಿ ದಾಖಲಾಗಿದ್ದ 16 ಪ್ರಕರಣಗಳಲ್ಲಿ 631 ಆರೋಪಿಗಳು ಖುಲಾಸೆಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

    ಮಂಡ್ಯ ಕಾವೇರಿ ಹೋರಾಟಗಾರರ ವಿರುದ್ಧ ಪ್ರಕರಣಗಳ ಬಗ್ಗೆ ಇಂದು ಮಾತನಾಡಿದ್ದ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಅವರು, ಕಾವೇರಿ ಹೋರಾಟಗಾರರ ಮೇಲಿನ ಕೇಸನ್ನು ಸರ್ಕಾರ ವಾಪಸ್ ಪಡೆದ ಹಿನ್ನೆಲೆ ರೈತರು ಸ್ವಂತಕ್ಕೇನು ಹೋರಾಟ ಮಾಡಲಿಲ್ಲ. ಕಾವೇರಿ ನೀರಿಗಾಗಿ ಹೋರಾಡಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ ಒಬ್ಬ ರೈತರು. ಅವರಿಗೆ ರೈತರ ಕಷ್ಟ ಗೊತ್ತು. ರೈತರು ಸ್ವಂತಕ್ಕೇನು ಹೋರಾಟ ಮಾಡಲಿಲ್ಲ. ಕಾವೇರಿ ನೀರಿಗಾಗಿ ಹೋರಾಡಿದ್ದರು. ರೈತರ ಕಷ್ಟ ಅರ್ಥ ಮಾಡಿಕೊಂಡು ಕೇಸುಗಳನ್ನು ಸಿಎಂ ವಾಪಸ್ ಪಡೆದಿದ್ದಾರೆ. ಆದರಿಂದ ಸಿಎಂ ಕುಮಾರಸ್ವಾಮಿ ಅವರಿಗೆ ಕೇಸು ವಾಪಸ್ ಪಡೆದಿದ್ದಕ್ಕೆ ರೈತರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಪ್ಪ ಮುಸ್ಲಿಂ, ಅಮ್ಮ ಕ್ರಿಶ್ಚಿಯನ್, ಮಗ ಹಿಂದು – ಜಗತ್ತಿನಲ್ಲಿ ಸಿಗದ ಹೈಬ್ರಿಡ್ ಪುತ್ರ: ಅನಂತಕುಮಾರ್ ಹೆಗ್ಡೆ ವ್ಯಂಗ್ಯ

    ಅಪ್ಪ ಮುಸ್ಲಿಂ, ಅಮ್ಮ ಕ್ರಿಶ್ಚಿಯನ್, ಮಗ ಹಿಂದು – ಜಗತ್ತಿನಲ್ಲಿ ಸಿಗದ ಹೈಬ್ರಿಡ್ ಪುತ್ರ: ಅನಂತಕುಮಾರ್ ಹೆಗ್ಡೆ ವ್ಯಂಗ್ಯ

    ಕಾರವಾರ: ದೇವಾಲಯಗಳಿಗೆ ಎಂದು ಭೇಟಿ ನೀಡದ ಕೆಲ ಮಂದಿ ಇಂದು ಮತಕ್ಕಾಗಿ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಅವರ ಜಾತ್ಯಾತೀತ ಭಾವನೆ ಮತಗಳಿಗಾಗಿ ಬದಲಾಗಿದ್ದು, ಮಸೀದಿ ಹಾಗೂ ಚರ್ಚ್‍ಗೆ ಹೋಗುವವರು ದೇವಸ್ಥಾನಕ್ಕೆ ಹೋಗಿ ನಾನು ಹಿಂದು ಎನ್ನುತ್ತಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ವ್ಯಂಗ್ಯವಾಡಿದ್ದಾರೆ.

    ಅಪ್ಪ ಮುಸ್ಲಿಂ, ಅಮ್ಮ ಕ್ರಿಶ್ಚಿಯನ್ ಆದರೆ ಮಗ ಹಿಂದು. ಜಗತ್ತಿನಲ್ಲಿ ಸಿಗದ ಹೈಬ್ರಿಡ್ ಪುತ್ರ ಸಿಕ್ಕಿದ್ದಾರೆ. ಅಮ್ಮ ಅಪ್ಪನ ಪರಿಚಯ ಇಲ್ಲದವರು ಇಂದು ದೇವರ ಪೂಜೆ ಮಾಡುತ್ತಿದ್ದಾರೆ. ಇಂತಹ ಹೈಬ್ರಿಡ್ ಪುತ್ರರು ಬೇಕು ಎಂದರೆ ಅದು ಕಾಂಗ್ರೆಸ್ ನಲ್ಲಿ ಮಾತ್ರ ಇದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿಯನ್ನು ಪರೋಕ್ಷವಾಗಿ ಲೇವಡಿ ಮಾಡಿದರು.

    ಸಿದ್ದಾಪುರದ ಶಂಕರಮಠದಲ್ಲಿ ನಡೆದ ಕಾರ್ಯಕರ್ತರ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಜನಪರ ಸರ್ಕಾರ. 65 ವರ್ಷ ಆಡಳಿತ ನಡೆಸಿದವರು ಜನರನ್ನು ಪ್ರಾಣಿ ಸಂಗ್ರಹಾಲಯದಲ್ಲಿ ಇಟ್ಟ ರೀತಿ ನಡೆಸಿಕೊಂಡರು. ಜನರನ್ನು ಭಿಕ್ಷುಕರ ರೀತಿ ನಡೆಸಿಕೊಂಡಿದ್ದಾರೆ. ಜನರ ಭಾವನೆಗಳ ಜೊತೆ ಚಕ್ಕಂದವಾಡಿದ್ದು, ಆದರೆ ಇಂದು ನಮ್ಮ ಸರ್ಕಾರ ಜನರ ಖಾತೆಗೆ ನೇರವಾಗಿ ಹಣ ಜಮಾ ಮಾಡುವ ವ್ಯವಸ್ಥೆ ಮಾಡಿದೆ. ಕೆಲವು ಯೋಜನೆಗಳಲ್ಲಿ ರಾಜ್ಯದ ಕಂಬಳದ ಕೋಣಗಳ ಸರ್ಕಾರ ಹಣವನ್ನು ದುರುಪಯೋಗ ಮಾಡಿದೆ ಎಂದು ಆರೋಪ ಮಾಡಿದರು.

    ಲೋಕಸಭಾ ಚುನಾವಣೆಯಲ್ಲಿ ನಾವು 300 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಈ ದೇಶವನ್ನು ಭಾರತೀಯ ರಕ್ತವೇ ಆಳಬೇಕು, ವಿದೇಶಿ ಇಟಲಿ ರಕ್ತ ಬೇಡ. ನಮ್ಮ ದೇಶವನ್ನು ಇಷ್ಟು ದಿನ ಆಳಿದ ಕಾಂಗ್ರೆಸ್ ದಿವಾಳಿಯಾಗಬೇಕು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾವೇರಿ ಹೋರಾಟಗಾರರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ

    ಕಾವೇರಿ ಹೋರಾಟಗಾರರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ

    ಮಂಡ್ಯ: ಜಿಲ್ಲೆಗೆ 5 ಸಾವಿರ ಕೋಟಿಗೂ ಹೆಚ್ಚಿನ ಅನುದಾನ ಘೋಷಿಸಿದ ಬೆನ್ನಲ್ಲೇ ಕಾವೇರಿ ಹೋರಾಟಗಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.

    ಹೌದು. ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ಹೋರಾಟದ ಸಂದರ್ಭದಲ್ಲಿ ರೈತರ ಮೇಲೆ ಹಾಕಿದ್ದ ಕೇಸುಗಳ ವಾಪಸ್ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮದ್ದೂರಿನ ಕೆಎಂ ದೊಡ್ಡಿಯಲ್ಲಿ ಮಾತನಾಡಿದ್ದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಕ್ಯಾಬಿನೆಟ್ ಉಪ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕಾವೇರಿ ಹೋರಾಟದ ಸಮಯದಲ್ಲಿ ರೈತರ ಮೇಲೆ ದಾಖಲಾಗಿದ್ದ ಶೇ.95 ರಷ್ಟು ಕೇಸುಗಳನ್ನು ಕೈಬಿಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.

    ಈಗಾಗಲೇ ರೈತರ ಮೇಲೆ ಹೂಡಿರುವ ಕೇಸುಗಳ ಬಗ್ಗೆ ತಾಲೂಕುವಾರು ಮಾಹಿತಿ ಕಲೆ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೋರಾಟದ ಸಂದರ್ಭದಲ್ಲಿ ಸರ್ಕಾರದ ಆಸ್ತಿ-ಪಾಸ್ತಿ ನಷ್ಟ ಮಾಡಿರುವ ಕೇಸುಗಳು ವಾಪಸ್ ಪಡೆಯಲಿದ್ದೇವೆ. ಆದರೆ ಖಾಸಗಿ ಆಸ್ತಿ ನಷ್ಟಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಕ್ಯಾಮೆರಾ, ಕಾರುಗಳ ಜಖಂ, ಅಂಗಡಿ, ಮುಗ್ಗಟ್ಟು ಮೇಲೆ ಕಲ್ಲು ತೂರಾಟ, ಪಾಂಡವಪುರ ಜಡ್ಜ್ ಮನೆ ಮೇಲೆ ದಾಳಿ ಸೇರಿದಂತೆ ಖಾಸಗಿಯಾಗಿ ನೀಡಿರುವ ಕೇಸುಗಳು ಕೋರ್ಟ್ ನಲ್ಲೇ ಇತ್ಯರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

    ಈಗಾಗಲೇ ಹೋರಾಟಗಾರರ ಪಟ್ಟಿ ಕಾರ್ಯ ಭರದಿಂದ ಸಾಗಿದ್ದು, ಇದೇ ತಿಂಗಳು 27 ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯಕ್ಕೆ ಆಗಮಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಅಂದೇ ಕಾವೇರಿ ಹೋರಾಗಾರರ ಮೇಲಿನ ಕೇಸ್ ವಾಪಸ್ ಪಡೆಯುವ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿ: ಬಿಜೆಪಿಗೆ ಶಾ ಗ್ರೀನ್ ಸಿಗ್ನಲ್

    ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿ: ಬಿಜೆಪಿಗೆ ಶಾ ಗ್ರೀನ್ ಸಿಗ್ನಲ್

    ಬೆಂಗಳೂರು: ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ರಾಜಕೀಯ ಬೆಳವಣಿಗೆಗಳು ತೀವ್ರಗೊಳ್ಳುತ್ತಿದಂತೆ ಬಿಜೆಪಿ ಹೈಕಮಾಂಡ್ ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಉರುಳಿಸಲು ರಾಜ್ಯ ನಾಯಕರಿಗೆ ಗ್ರೀನ್ ಸಿಗ್ನಲ್ ನೀಡಿದೆ.

    ರಾಜ್ಯ ಬಿಜೆಪಿ ನಾಯಕರು ಸಮ್ಮಿಶ್ರ ಸರ್ಕಾರಕ್ಕೆ ಸದಸ್ಯರ ಬೆಂಬಲ ಇಲ್ಲ ಎಂದು ಹೇಳಿದ್ದರೂ ಬಿಜೆಪಿ ಹೈ ಕಮಾಂಡ್ ಇಲ್ಲಿಯವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿರಲಿಲ್ಲ. ಆದರೆ ಬುಧವಾರ ಮತ್ತು ಗುರುವಾರ ಅಧಿವೇಶನಕ್ಕೆ ವಿಪ್ ಜಾರಿಯಾಗಿದ್ದರೂ ಮಿತ್ರ ಪಕ್ಷದ ಶಾಸಕರು ಗೈರಾದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಧಿಕೃತವಾಗಿ ಸರ್ಕಾರವನ್ನು ಬೀಳಿಸಲು ಒಪ್ಪಿಗೆ ನೀಡಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದೆ.

    ಎಷ್ಟು ಜನ ಶಾಸಕರು ರಾಜೀನಾಮೆಗೆ ಸಿದ್ಧರಿದ್ದಾರೋ ಅಷ್ಟೂ ಜನರಿಂದ ರಾಜೀನಾಮೆ ಕೊಡಿಸಿ ಎಂದು ಬಿಎಸ್‍ವೈಗೆ ಶಾ ನಿರ್ದೇಶನ ನೀಡಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ. ಅತೃಪ್ತಗೊಂಡಿರುವ ನಾಲ್ವರು ಶಾಸಕರ ಜೊತೆ ಇನ್ನೂ 5 ಮಂದಿ ಶಾಸಕರು ರಾಜೀನಾಮೆ ನೀಡಲು ಸಿದ್ಧರಿದ್ದಾರೆ ಎನ್ನಲಾಗಿದೆ.

    ಇಂದು ಸದನದಲ್ಲಿ ಏನಾಯ್ತು?
    ಗುರುವಾರದ ಕಲಾಪದ ವೇಳೆ 175 ಶಾಸಕರ ಹಾಜರಿದ್ದರು. ಜೆಡಿಎಸ್ 25, ಕಾಂಗ್ರೆಸ್ 60, ಬಿಜೆಪಿ 90 ಶಾಸಕರು ಉಪಸ್ಥಿತರಿದ್ದರು. ಬುಧವಾರ ಗೈರಾಗಿದ್ದ ಸೌಮ್ಯಾರೆಡ್ಡಿ, ಕೃಷ್ಣಪ್ಪ ಹಾಜರಾಗಿದ್ದರೆ, ಕಾಂಗ್ರೆಸ್ ನಿಂದ ಇವತ್ತು ಪ್ರತಾಪ್ ಗೌಡ ಪಾಟೀಲ್ ಗೈರಾಗಿದ್ದಾರೆ. ಬಿಜೆಪಿ ಬಾಲಚಂದ್ರ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಅಶ್ವಥ್ ನಾರಾಯಣ್ ಗೈರು ಹಾಜರಿ ಹಾಕಿದ್ದಾರೆ.

    ಸದನ ಆರಂಭಗೊಳ್ಳುತ್ತಲೇ ಬಿಜೆಪಿ ಶಾಸಕರು ಸರ್ಕಾರಕ್ಕೆ ಶಾಸಕರ ಬೆಂಬಲ ಇಲ್ಲ. ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಬೇಕೆಂದು ಹೇಳಿ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಮೈತ್ರಿ ಪಕ್ಷದ ನಾಯಕರು ಬಿಜೆಪಿಗೆ ಧಿಕ್ಕಾರ, ಬ್ಲೂ ಬಿಜೆಪಿಗೆ ಧಿಕ್ಕಾರ ಎಂದು ಕೂಗಿದರು. ಗಲಾಟೆ ಜಾಸ್ತಿಯಾಗುತ್ತಿದ್ದಂತೆ ಸ್ಪೀಕರ್ ಸದನವನ್ನು ಶುಕ್ರವಾರ ಮಧ್ಯಾಹ್ನ 12.30ಕ್ಕೆ ಮುಂದೂಡಿದರು.

    ವಿಧಾನಸೌಧದಲ್ಲಿ ಶ್ರೀರಾಮುಲು ಮಾತನಾಡಿ, ಬಿಜೆಪಿ ಹೋರಾಟ ಸದನದಲ್ಲಿ ಇವತ್ತೂ ಮುಂದುವರಿದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರಿಗೆ ವಿಪ್ ಜಾರಿ ಮಾಡಿದರೂ ಹಲವು ಶಾಸಕರು ಗೈರಾಗಿದ್ದಾರೆ. ಸರ್ಕಾರಕ್ಕೆ ಬಹುಮತವೇ ಇಲ್ಲ. ಹೀಗಾಗಿ ಸಿಎಂ ಈ ಕೂಡಲೇ ರಾಜೀನಾಮೆ ನೀಡಬೇಕು. ಸುಮಾರು 20 ಮಂದಿ ಶಾಸಕರಿಗೆ ಸಿಎಂ ಮೇಲೆ ವಿಶ್ವಾಸವಿಲ್ಲ. ನಾವು ಯಾರು ಆಪರೇಷನ್ ಕಮಲ ಮಾಡುತ್ತಿಲ್ಲ. ಇನ್ನಷ್ಟು ಕಾಂಗ್ರೆಸ್ ಶಾಸಕರು ಹೊರಬರುವ ಸಾಧ್ಯತೆಯಿದೆ ಎಂದು ಶ್ರೀರಾಮುಲು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೇರಳ ಸರ್ಕಾರದ ‘ಯು ಟರ್ನ್’ – ಶಬರಿಮಲೆಗೆ ದೇಗುಲಕ್ಕೆ ಪ್ರವೇಶಿಸಿದ್ದು ಇಬ್ಬರೇ!

    ಕೇರಳ ಸರ್ಕಾರದ ‘ಯು ಟರ್ನ್’ – ಶಬರಿಮಲೆಗೆ ದೇಗುಲಕ್ಕೆ ಪ್ರವೇಶಿಸಿದ್ದು ಇಬ್ಬರೇ!

    ತಿರುವನಂತಪುರಂ: ಕಳೆದ ಕೆಲ ದಿನಗಳ ಹಿಂದೆ ಶಬರಿಮಲೆಯ ಅಯ್ಯಪ್ಪ ಸನ್ನಿಧಿಗೆ 51 ಮಹಿಳೆಯರು ಪ್ರವೇಶ ಪಡೆದಿದ್ದಾರೆ ಎಂದು ಹೇಳಿದ್ದ ಕೇರಳ ಸರ್ಕಾರ ಇಂದು ಯು ಟರ್ನ್ ಹೊಡೆದಿದ್ದು, ದೇವಾಲಯಕ್ಕೆ ಇಬ್ಬರು ಮಾತ್ರ ಪ್ರವೇಶ ಮಾಡಿದ್ದಾರೆ ಎಂದು ಮಾಹಿತಿ ನೀಡಿದೆ.

    ಕೇರಳ ಸರ್ಕಾರ ಸಚಿವರಾದ ಕಡಕಂಪಲ್ಲಿ ಸುರೇಂದ್ರನ್ ಅವರು ಕೇರಳ ವಿಧಾನಸಭೆಗೆ ಇಂದು ಮಾಹಿತಿ ನೀಡಿದ್ದು, ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಇದುವರೆಗೂ ಇಬ್ಬರು ಮಹಿಳೆಯರು ಮಾತ್ರ ಪ್ರವೇಶ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಈ ವರದಿ ದೇವಾಲಯದ ಕಾರ್ಯಕಾರಿ ಅಧಿಕಾರಿಗಳು ನೀಡಿದ ಮಾಹಿತಿ ಎಂದು ಸ್ಪಷ್ಟಪಡಿಸಿದ್ದಾರೆ. ಅಯ್ಯಪ್ಪ ಸನ್ನಿಧಿಗೆ ಎಷ್ಟು ಮಂದಿ ಮಹಿಳೆಯರು ಪ್ರವೇಶ ಮಾಡಿದ್ದಾರೆ ಎಂದು ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

    ಇದೇ ವೇಳೆ ಶ್ರೀಲಂಕಾ ಮಹಿಳೆಯೊಬ್ಬರು ದರ್ಶನ ಪಡೆದಿದ್ದಾರೆ ಎಂಬ ಸುದ್ದಿಯ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಕೇರಳ ಪೊಲೀಸರು ಅಯ್ಯಪ್ಪ ಸನ್ನಿಧಿ ದರ್ಶನ ಪಡೆಯಲು ಇಷ್ಟಪಟ್ಟ ಮಹಿಳೆಯರಿಗೆ ಬಿಗಿ ಭದ್ರತೆ ನೀಡುವುದಾಗಿ ತಿಳಿಸಿದರು. ಇದರಂತೆ ಜನವರಿಯಲ್ಲಿ ಇಬ್ಬರು ಮಹಿಳೆಯರು ಅಯ್ಯಪ್ಪ ದರ್ಶನ ಪಡೆದಿದ್ದರು.

    ಈ ಹಿಂದ ಕೇರಳ ಸರ್ಕಾರದ ಪರವಾಗಿ ರಾಜ್ಯ ಪೊಲೀಸ್ ಇಲಾಖೆ ಮುಖ್ಯಸ್ಥರು ಈ ಮಾಹಿತಿಯನ್ನು ನೀಡಿ 50 ವರ್ಷದೊಳಗಿನ 51 ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟಿಗೆ ತಿಳಿಸಿದ್ದರು. ಆದರೆ ಈ ವರದಿಯನ್ನು ಘನ ನ್ಯಾಯಾಲಯ ತಿರಸ್ಕಾರ ಮಾಡಿತ್ತು. ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯ ಮಾಹಿತಿಯಂತೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದ ಮಹಿಳೆಯರು ದರ್ಶನ ಪಡೆದಿದ್ದಾಗಿ ವಿವರಿಸಲಾಗಿತ್ತು. ಅಲ್ಲದೇ ದೇಗುಲ ಪ್ರವೇಶ ಮಾಡಲು ಸುಮಾರು 16 ಸಾವಿರ ಮಂದಿ ಮಹಿಳೆಯರು ತಮ್ಮ ಆಧಾರ್ ಮಾಹಿತಿ ಮೂಲಕ ನೋಂದಣಿ ಮಾಡಿಕೊಂಡಿದ್ದರು ಹಾಗೂ ಆದರಲ್ಲಿ 10 ರಿಂದ 50 ವರ್ಷದೊಳಗಿನ ಮಹಿಳೆಯರ ಸಂಖ್ಯೆ 7,500 ಇತ್ತು ಎಂದು ಮಾಹಿತಿಯಲ್ಲಿ ನೀಡಲಾಗಿತ್ತು.

    ಈ ಕುರಿತು ಸ್ಪಷ್ಟನೆ ನೀಡಿರುವ ಸಚಿವರು, ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡ ಮಹಿಳೆಯಲ್ಲಿ 51 ಮಂದಿ ದರ್ಶನ ಪಡೆದಿದ್ದಾರೆ. ಸಾಮಾನ್ಯವಾಗಿ ದೊರೆಯುವ ದೇವಾಲಯದ ಟಿಕೆಟ್ ಪಡೆದು, ಆಧಾರ್ ಮಾಹಿತಿ ನೀಡಿಯೇ ದರ್ಶನ ಪಡೆದಿದ್ದಾರೆ. ಆದರೆ ಭಕ್ತರ ವಯಸ್ಸಿನ ಬಗ್ಗೆ ನಿಖರ ಮಾಹಿತಿ ಪಡೆಯಲು ನಮಗೆ ಯಾವುದೇ ಅವಕಾಶವಿಲ್ಲ ಎಂದು ವಿವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೇಂದ್ರದ್ದು ಪಾಪ್ ಕಾರ್ನ್ ಬಜೆಟ್ – ಸಚಿವ ಡಿಕೆಶಿ ವ್ಯಂಗ್ಯ

    ಕೇಂದ್ರದ್ದು ಪಾಪ್ ಕಾರ್ನ್ ಬಜೆಟ್ – ಸಚಿವ ಡಿಕೆಶಿ ವ್ಯಂಗ್ಯ

    ಬೆಂಗಳೂರು: ಇದು ಚುನಾವಣೆ ಬಜೆಟ್ ಅಷ್ಟೆ. ಮೋದಿ ಅವರು ರಾಜ್ಯ ಸರ್ಕಾರದ ಸಾಲಮನ್ನಾವನ್ನು ಲಾಲಿಪಪ್ ಅಂತ ಹೇಳಿದ್ದರು. ಮೋದಿ ಬಜೆಟ್ ಪಾಪ್ ಕಾರ್ನ್ ಬಜೆಟ್ ಆಗಿದೆ ಎಂದು ಸಚಿವ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ರು.

    ಮೋದಿ ಸರ್ಕಾರದ ಕೊನೆಯ ಕೇಂದ್ರ ಬಜೆಟ್ ಇಂದು ಮಂಡನೆಯಾಗಿದ್ದು, ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ರೈತರನ್ನು ಬದುಕಿಸಬೇಕು. ಕೇಂದ್ರದ ಇಂದಿನ ಬಜೆಟ್ ರೈತರಿಗೂ ಅನುಕೂಲವಾಗೋದಿಲ್ಲ. ಬಿಜೆಪಿ ಅವರಿಗೆ ರಾಜಕೀಯಕ್ಕೂ ಈ ಬಜೆಟ್ ಅನುಕೂಲ ಆಗೊಲ್ಲ ಎಂದು ತಿಳಿಸಿದ್ದಾರೆ.

    ಜೆಡಿಎಸ್, ಕಾಂಗ್ರೆಸ್ ಪ್ರಣಾಳಿಕೆಯಲ್ಲೇ ಒಣಭೂಮಿ ಬೇಸಾಯ ಮಾಡೋರಿಗೆ 10 ಸಾವಿರ ನಾವು ಘೋಷಣೆ ಮಾಡಿದ್ದೆವು. ವ್ಯವಸಾಯ ಮಾಡೋರಿಗೆ 6 ಸಾವಿರ ಕೊಡ್ತೀನಿ ಅಂತ ಹೇಳ್ತಿದ್ದಾರೆ ಅಷ್ಟೇ. ಇದರಲ್ಲಿ ಯಾವುದೇ ಲಾಭವಿಲ್ಲ. ಏನಾದ್ರೂ ಕೊಟ್ಟರೆ ಹೊಟ್ಟೆ ತುಂಬ ಕೊಡಬೇಕು ಎಂದು ಹೇಳಿದ್ದಾರೆ.

    ರೈತನಿಗೆ ನಮ್ಮ ರಾಜ್ಯದಲ್ಲಿ 50 ಸಾವಿರದಷ್ಟು ಉಚಿತ ವಿದ್ಯುತ್ ನೀಡುತ್ತಿದ್ದೇವೆ. ನಮ್ಮ ಸರ್ಕಾರ ಮೋದಿ ಸರ್ಕಾರಕ್ಕಿಂತ ಉತ್ತಮ ಯೋಜನೆಗಳನ್ನ ನೀಡಿದೆ. ಇದೊಂದು ಫೇಲ್ಯೂರ್ ಬಜೆಟ್ ಆಗಿದೆ. ಈ ಬಜೆಟ್ ನಿಂದ ಯಾವುದೇ ಲಾಭ ಇಲ್ಲ. ಉದ್ಯೋಗ ಸೃಷ್ಟಿಯಲ್ಲೂ ಯಾವುದೇ ಆಶಾಭಾವನೆ ಈ ಬಜೆಟ್ ನಲ್ಲಿ ಇಲ್ಲ ಎಂದು ಅವರು ಪ್ರತಿಕ್ರಿಯಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv