Tag: State Government

  • ಹೆಣಗಳ ಮೇಲೆ ರಾಜಕೀಯ ಮಾಡಿದ್ದ ಬಿಜೆಪಿ ನಾಯಕರು ಈಗ ಕತ್ತೆ ಕಾಯುತ್ತಿದ್ದೀರಾ: ಪ್ರಮೋದ್ ಮುತಾಲಿಕ್

    ಹೆಣಗಳ ಮೇಲೆ ರಾಜಕೀಯ ಮಾಡಿದ್ದ ಬಿಜೆಪಿ ನಾಯಕರು ಈಗ ಕತ್ತೆ ಕಾಯುತ್ತಿದ್ದೀರಾ: ಪ್ರಮೋದ್ ಮುತಾಲಿಕ್

    – ಗೋ ರಕ್ಷಕ ಶಿವು ಹತ್ಯೆ ಪ್ರಕರಣ ಹಿನ್ನೆಲೆ ಬಿಜೆಪಿ ವಿರುದ್ಧ ಕಿಡಿ

    ಯಾದಗಿರಿ: ಚುನಾವಣೆಯಲ್ಲಿ ಹೆಣಗಳ ಮೇಲೆ ರಾಜಕೀಯ ಮಾಡಿದ ಬಿಜೆಪಿ ಅವರು ಈಗ ಕತ್ತೆ ಕಾಯುತ್ತಿದ್ದೀರಾ? ಚುನಾವಣೆ ಬಳಿಕ ಬಾಯಿ ಬಂದಾಯ್ತ ಎಂದು ಗೋ ರಕ್ಷಕ ಶಿವು ಹತ್ಯೆ ಪ್ರಕರಣದಲ್ಲಿ ಧ್ವನಿ ಎತ್ತದ ಬಿಜೆಪಿ ವಿರುದ್ಧ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚಿಗೆ ಬೆಳಗಾವಿಯಲ್ಲಿ ಗೋ ರಕ್ಷಕ ಶಿವಕುಮಾರ್ ಉಪ್ಪಾರರನ್ನು ಕೊಲೆ ಮಾಡಲಾಗಿದೆ. ಇದರ ಬಗ್ಗೆ ಯಾವುದೇ ತನಿಖೆ ನಡೆಸದೇ ಪ್ರಕರಣ ಮುಚ್ಚು ಹಾಕುವ ಪ್ರಯತ್ನ ನಡೆಯತ್ತಿದೆ. ಬಿಜೆಪಿ ಎಂಎಲ್‍ಎ, ಎಂಪಿಗಳು ಏನೂ ಕತ್ತೆ ಕಾಯುತ್ತಿದ್ದೀರಾ? ಚುನಾವಣೆ ವೇಳೆ ಹೆಣಗಳ ಮೇಲೆ ರಾಜಕೀಯ ಮಾಡುತ್ತೀರಾ? ಚುನಾವಣೆ ಮುಗಿದ ಬಳಿಕ ನಿಮ್ಮ ಬಾಯಿ ಬಂದಾಯ್ತ? ಒಬ್ಬರಾದರೂ ಈ ಪ್ರಕರಣದ ಬಗ್ಗೆ ಧ್ವನಿ ಎತ್ತಿದ್ದೀರಾ ಎಂದು ಪ್ರಶ್ನಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಇದೇ ಮುಸ್ಲಿಂ ಸಮುದಾಯದವರಿಗೆ ಆಗಿದ್ದರೆ ಕೋಮುವಾದಿಗಳ ಕೃತ್ಯ, ಶ್ರೀರಾಮಸೇನೆ, ಭಜರಂಗದಳ ಕೃತ್ಯ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಈ ಪ್ರಕರಣವನ್ನು ಸರ್ಕಾರ ಮುಚ್ಚಿಹಾಕಲು ಪ್ರಯತ್ನಿಸಿದರೆ ರಾಜ್ಯಾದ್ಯಂದ ಉಗ್ರ ಹೋರಾಟ ಮಾಡಬೇಕುತ್ತದೆ ಎಂದು ಎಚ್ಚರಿಕೆ ನೀಡಿದರು.

    ಗೋ ರಕ್ಷಕ ಶಿವು ಪ್ರಕರಣವನ್ನು ಸರಿಯಾದ ತನಿಖೆ ನಡೆಸಿ, ಸತ್ಯಾಂಶ ಬಹಿರಂಗ ಪಡಿಸದೆ ಹೋದರೆ ಬಿಜೆಪಿ ಶಾಸಕರು ಹಾಗೂ ಸಂಸದರ ಮನೆ ಮುಂದೆ ಧರಣಿ ಕೂರುತ್ತೇವೆ ಎಂದು ಅವರು ತಿಳಿಸಿದರು.

  • ಧರ್ಮಸ್ಥಳದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಸರ್ಕಾರ ಚಿಂತನೆ

    ಧರ್ಮಸ್ಥಳದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಸರ್ಕಾರ ಚಿಂತನೆ

    ಬೆಂಗಳೂರು: ಧರ್ಮಸ್ಥಳದಲ್ಲಿ ಚೆಕ್ ಡ್ಯಾಂ ನಿರ್ಮಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

    ಈ ಬಾರಿ ಧರ್ಮಸ್ಥಳದಲ್ಲೂ ನೀರಿನ ಅಭಾವ ಉಂಟಾಗಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಸರ್ಕಾರ ಚೆಕ್ ಡ್ಯಾಂ ನಿರ್ಮಿಸಿ ನೀರಿನ ಸಮಸ್ಯೆ ಪರಿಹರಿಸಲು ಮುಂದಾಗಿದೆ.

    ಮುಖ್ಯಮಂತ್ರಿ ಸಲಹೆ ಮೇರೆಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಧರ್ಮಸ್ಥಳದಲ್ಲಿರುವ ನೀರಿನ ಅಭಾವದ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಇನ್ನೊಂದು ಚೆಕ್‍ಡ್ಯಾಂ ನಿರ್ಮಾಣ ಮಾಡಿಕೊಡುವಂತೆ ಶ್ರೀ ಹೆಗ್ಗಡೆಯವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳ ಸೂಚನೆಯಂತೆ ದ.ಕ. ಜಿ.ಪಂ. ಸಿಇಒ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆಗಾಗಿ ಇಂದು ಸಂಜೆ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಟ್ವಿಟ್ಟರ್‍ ನಲ್ಲಿ ತಿಳಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಡಾ.ಡಿ ವೀರೇಂದ್ರ ಹೆಗ್ಗಡೆ ಅವರು, 15 ದಿನ ಮಳೆ ಬರದಿದ್ದರೆ ಮಂಜುನಾಥನ ಅಭಿಷೇಕಕ್ಕೂ ನೀರಿಲ್ಲ. ಈಗ ಅಭಿಷೇಕಕ್ಕೆ ನೇತ್ರಾವತಿಯಲ್ಲಿ ತಾತ್ಕಲಿಕವಾಗಿ ನೀರಿದೆ ಎಂದು ತಮ್ಮ ಕಳವಳವನ್ನು ಹೊರಹಾಕಿದ್ದರು.

    ಶ್ರೀ ಕ್ಷೇತ್ರದಲ್ಲಿ ನೀರಿನ ಅಭಾವ ಇರುವ ಹಿನ್ನೆಲೆ ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳ ಉಪಯೋಗಕ್ಕೆ ಅಧಿಕ ಪ್ರಮಾಣದ ನೀರು ಬೇಕಾಗುತ್ತದೆ. ಆದ್ದರಿಂದ ಭಕ್ತಾದಿಗಳು ಹಾಗೂ ಪ್ರವಾಸಿಗರು ತಮ್ಮ ಪ್ರವಾಸವನ್ನು ಕೆಲವು ದಿನಗಳ ಕಾಲ ಮುಂದೂಡಿ ಸಹಕರಿಸುವಂತೆ ವೀರೇಂದ್ರ ಹೆಗ್ಗಡೆಯವರು ಮನವಿಯನ್ನು ಮಾಡಿಕೊಂಡಿದ್ದರು.

  • ಇಂದು ಅಥಣಿ ಬಂದ್‍ಗೆ ಕರೆ- ನಸುಕಿನ ಜಾವದಿಂದ್ಲೇ ಬಸ್ ಸಂಚಾರ ಸ್ಥಗಿತ!

    ಇಂದು ಅಥಣಿ ಬಂದ್‍ಗೆ ಕರೆ- ನಸುಕಿನ ಜಾವದಿಂದ್ಲೇ ಬಸ್ ಸಂಚಾರ ಸ್ಥಗಿತ!

    – ಪ್ರಯಾಣಿಕರ ಪರದಾಟ

    ಬೆಳಗಾವಿ: ಬರಿದಾಗಿರುವ ಕೃಷ್ಣಾ ನದಿಗೆ ನೀರು ಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಹೀಗಾಗಿ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಇಂದು ಅಥಣಿ ಪಟ್ಟಣ ಬಂದ್‍ಗೆ ಕರೆ ನೀಡಲಾಗಿದೆ.

    10ಕ್ಕೂ ಹೆಚ್ಚು ಸಂಘಟನೆಗಳಿಂದ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣ ಬಂದ್ ಕರೆ ನೀಡಲಾಗಿದೆ. ರೈತ ಪರ ಸಂಘಟನೆಗಳ ಜೊತೆಗೆ ಕನ್ನಡಪರ ಹಾಗೂ ದಲಿತ ಸಂಘಟನೆಗಳು ಕೂಡ ಈ ಬಂದ್‍ಗೆ ಬೆಂಬಲ ನೀಡುತ್ತಿವೆ. ನೀರಿಲ್ಲದೆ ಬರಿದಾಗಿರುವ ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಬಂದ್ ಮಾಡಲಾಗುತ್ತಿದೆ ಎಂದು ಸಂಘಟನೆಗಳು ತಿಳಿಸಿವೆ.

    ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕೃಷ್ಣಾ ನದಿಗೆ 4 ಟಿಎಂಸಿ ನೀರು ಬಿಡಿಸುವಂತೆ ಬಂದ್ ಮೂಲಕ 10ಕ್ಕೂ ಹೆಚ್ಚು ಸಂಘಟನೆಗಳು ಆಗ್ರಹಿಸಿದೆ. ಕೃಷ್ಣೆಗೆ ನೀರು ಹರಿಸುವಂತೆ ಚಿಕ್ಕೋಡಿ ತಾಲೂಕಿನಲ್ಲೂ ಇಂದು ವಿವಿಧೆಡೆ ವಿವಿಧ ಸಂಘಟನೆಗಳು ರಸ್ತೆ ತಡೆದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಅಲ್ಲದೆ ಬಂದ್ ಹಿನ್ನೆಲೆ ನಸುಕಿನ ಜಾವದಿಂದಲೇ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

  • ಮುಂಗಾರು ಕೈಕೊಡುವ ಮುನ್ಸೂಚನೆ – 88 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆ

    ಮುಂಗಾರು ಕೈಕೊಡುವ ಮುನ್ಸೂಚನೆ – 88 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆ

    ಬೆಂಗಳೂರು: ಈ ಬಾರಿ ಮುಂಗಾರು ಕೈ ಕೊಡುವ ಮುನ್ಸೂಚನೆ ದೊರೆತಿರುವ ಹಿನ್ನಲೆಯಲ್ಲಿ ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.

    ಗೃಹ ಕಚೇರಿ ಕೃಷ್ಣದಲ್ಲಿ ಮಾತನಾಡಿದ ಅವರು, ಈ ಬಾರಿ ಮುಂಗಾರು ಕೈ ಕೊಡುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಮೋಡ ಬಿತ್ತನೆ ಮಾಡುವುದಕ್ಕೆ ನಿರ್ಧಾರ ಮಾಡಿದ್ದೇವೆ. ಈ ಬಾರಿ ಎರಡು ವರ್ಷದ ಅವಧಿಗೆ ಟೆಂಡರ್ ಕರೆಯಲು ತೀರ್ಮಾನ ಮಾಡಿದ್ದು, ಜೂನ್ ಕೊನೆ ವಾರದಲ್ಲಿ ಈ ಬಾರಿ ಮೋಡ ಬಿತ್ತನೆ ನಡೆಯಲಿದ್ದು, ಸುಮಾರು 88 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆಗೆ ನಿರ್ಧಾರ ಮಾಡಿದ್ದೇವೆ. ಆದಷ್ಟು ಬೇಗ ಟೆಂಡರ್ ಪ್ರಕ್ರಿಯೆ ಪ್ರಾರಂಭ ಮಾಡುವುದಾಗಿ ತಿಳಿಸಿದರು.

    ರಾಜ್ಯಾದ್ಯಂತ ಮೋಡ ಬಿತ್ತನೆ ಮಾಡಲಿದ್ದು, ಹುಬ್ಬಳಿ ಮತ್ತು ಬೆಂಗಳೂರಿನಲ್ಲಿ ಎರಡು ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ. ಎರಡು ವಿಮಾನದಲ್ಲಿ ಈ ಬಾರಿ ಮೋಡ ಬಿತ್ತನೆ ಮಾಡಲಾಗುತ್ತದೆ. ತಜ್ಞರ ಸಮಿತಿ ಕೂಡಾ ಮೋಡ ಬಿತ್ತನೆ ಅವಶ್ಯಕತೆ ಇದೆ ಎಂದು ತಿಳಿಸಿದೆ. ಹೀಗಾಗಿ ಮೋಡ ಬಿತ್ತನೆಗೆ ಸರ್ಕಾರ ನಿರ್ಧಾರ ಮಾಡಿದೆ ಎಂದು ಸ್ಪಷ್ಟಪಡಿಸಿದರು.

    ಇದೇ ವೇಳೆ ಬರ ಪರಿಹಾರ ಕ್ರಮವಾಗಿ ಕೈಗೊಂಡಿರುವ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ ಸಚಿವರು, ಇಷ್ಟು ದಿನ ಚುನಾವಣಾ ನೀತಿ ಸಂಹಿತೆ ಜಾರಿದ್ದ ಪರಿಣಾಮ ಸಭೆಗೆ ಅನುಮತಿ ಇರಲಿಲ್ಲ. ಇಂದು ಆಯೋಗದಿಂದ ಅನುಮತಿ ಪಡೆದು ಸಭೆ ನಡೆಸುತ್ತಿದ್ದೆವೆ. ಈಗಾಗಲೇ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿದ್ದೇವೆ. ಎಲ್ಲಾ ತಾಲೂಕು, ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಗೆ ಹಣ ಸಂದಾಯ ಮಾಡಿದ್ದು, ಅಗತ್ಯ ಕಡೆಗಳಲ್ಲಿ ಟ್ಯಾಂಕರ್ ನಲ್ಲಿ ನೀರು ಕೊಡಿ ಎಂದು ಹೇಳಿದ್ದೇವೆ. ಈಗಾಗಲೇ ಬಾಡಿಗೆಗೆ ಬೋರ್ ವೇಲ್‍ಗಳ ನೀಡು ಪಡೆದು ಪೂರೈಕೆ ಮಾಡುತ್ತಿದ್ದೇವೆ. ಜಾನುವಾರುಗಳ ಮೇವಿನ ಬಗ್ಗೆ ಸೂಕ್ತ ಕ್ರಮಕ್ಕೂ ಸೂಚನೆ ನೀಡಿದ್ದೇವೆ ಎಂದರು.

    ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 200 ಕೋಟಿ ರೂ.ಗಳನ್ನು ಟಾಸ್ಕ್ ಫೋರ್ಸ್ ಗೆ ಬಿಡುಗಡೆ ಮಾಡಿದ್ದೇವೆ. ಹಣ ಖರ್ಚಾದರೆ ಎಷ್ಟು ಹಣ ಬೇಕಾದರೂ ಕೊಡಲು ಸರ್ಕಾರ ಸಿದ್ಧವಾಗಿದೆ. 24 ಗಂಟೆಯೊಳಗೆ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡಿದ್ದೇವೆ. ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಇಲಾಖೆ ಸ್ಥಾಪಿಸಿರುವ ಸಹಾಯವಾಣಿಗೆ ಕರೆ ಮಾಡಬಹುದು ಎಂದರು.

  • ಮೇ 23ರ ಬಳಿಕ ಸಿದ್ದು ‘ಕಂಡೀಷನ್’ ಮೇಲೆಯೇ ಸರ್ಕಾರದ ಆಡಳಿತ?

    ಮೇ 23ರ ಬಳಿಕ ಸಿದ್ದು ‘ಕಂಡೀಷನ್’ ಮೇಲೆಯೇ ಸರ್ಕಾರದ ಆಡಳಿತ?

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮೇ 23ರ ನಂತರ ಮಹತ್ವದ ಬೆಳಣಿಗೆಗಳು ನಡೆಯಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ, ಸಿಎಂ ಸ್ಥಾನದ ಚರ್ಚೆ ಮಹತ್ವ ಪಡೆದುಕೊಂಡಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಹೇಳುವ ಮೂಲಕ “ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಲಿ” ಎಂಬ ಆಪ್ತರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಬೆನ್ನಲ್ಲೇ ಆಪ್ತ ಶಾಸಕರು ತಮ್ಮ ಕನಸ್ಸನ್ನು ಕೈ ಬಿಟ್ಟಿದ್ದಾರೆ ಎನ್ನಲಾಗಿದ್ದು, ಲೋಕ ಫಲಿತಾಂಶದ ಬಳಿಕ ಸಿಎಂ ಸ್ಥಾನ ಬದಲಾಗುವುದಿಲ್ಲ. ಆದರೆ ಸಿಎಂ ಸ್ಥಾನ ಬೇಡ ಎಂದು ಮೈತ್ರಿ ಮುಂದೆ 9 ಷರತ್ತುಗಳನ್ನು ಸಿದ್ದರಾಮಯ್ಯ ಅವರು ಇಟ್ಟಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ದೋಸ್ತಿ ಸರ್ಕಾರವನ್ನ ಉಳಿಸಿಕೊಳ್ಳುವ ಸಲುವಾಗಿ ಹಾಗೂ 37 ಜೆಡಿಎಸ್ ಶಾಸಕರಿಗೆ ಇರುವ ಲಾಭ ತಪ್ಪಿಸಲು ಷರತ್ತುಗಳನ್ನು ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ. ಇದರಲ್ಲಿ ಸರ್ಕಾರದಲ್ಲಿ 2 ಡಿಸಿಎಂ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷಕ್ಕೆ 26 ಸಚಿವ ಸ್ಥಾನ ನೀಡುವುದು ಪ್ರಮುಖ ಬೇಡಿಕೆಗಳಾಗಿದೆ. ಜೆಡಿಎಸ್ ಪಕ್ಷಕ್ಕೆ ಸದ್ಯ ನೀಡಿರುವ 12 ಸಚಿವ ಸ್ಥಾನದ ಬದಲಾಗಿ 5 ಸ್ಥಾನ ನೀಡುವುದು ಹಾಗೂ ಪ್ರಮುಖ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‍ಗೆ ನೀಡುವುದು ಷರತ್ತುಗಳ ಪಟ್ಟಿಯಲ್ಲಿ ಸೇರಿದೆ.

    ದೋಸ್ತಿ ಸರ್ಕಾರದ ಆಡಳಿತ ಕಾರ್ಯದಲ್ಲೂ ಕೆಲ ಷರತ್ತುಗಳನ್ನು ವಿಧಿಸಿದ್ದು, ಪ್ರತಿ ಸಂಪುಟ ಸಭೆಗೂ ಮುನ್ನ ಸಮನ್ವಯ ಸಮಿತಿ ಸಭೆ ಕಡ್ಡಾಯ ಸೇರಿದಂತೆ ಪ್ರಮುಖ ನೀತಿ ನಿರ್ಧಾರಗಳು ಜಂಟಿ ಘೋಷಣೆ ಮಾಡಬೇಕೆಂಬ ಬೇಡಿಕೆ ಇದೆ. ಸರ್ಕಾರದ ಆಡಳಿತದಲ್ಲಿ ಆಯಾ ಸಚಿವರು ತಮ್ಮ ಇಲಾಖೆಯಲ್ಲಿನ ಕಾರ್ಯಗಳನ್ನೇ ನಿರ್ವಹಿಸಿ ಬೇಕೆ ವಿನಃ ಇತರೇ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಗೃಹ ಇಲಾಖೆ ವಿಚಾರದಲ್ಲಿ ಮಾತ್ರ ಸ್ವತಂತ್ರವಾಗಿ ಇರಬೇಕು ಎಂಬುದು ಬೇಡಿಕೆಗಳ ಪಟ್ಟಿಯಲ್ಲಿದೆ. ಅಂತಿಮವಾಗಿ ಯಾವುದೇ ಇಲಾಖೆಗಳಲ್ಲಿ ಅಧಿಕಾರಿಗಳ ವರ್ಗಾವಣೆ ನಡೆಯಬೇಕಾದರೆ ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಆ ಬಳಿಕ ವರ್ಗಾವಣೆ ಮಾಡಬೇಕೆಂಬ ಷರತ್ತಗಳನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ.

  • ಇಂದು ರಾಜ್‍ಕುಮಾರ್ ಹುಟ್ಟುಹಬ್ಬ ಆಚರಣೆ- ಅಂಬಿ, ವಿಷ್ಣು ಅಭಿಮಾನಿಗಳಿಂದ ಎಚ್ಚರಿಕೆ

    ಇಂದು ರಾಜ್‍ಕುಮಾರ್ ಹುಟ್ಟುಹಬ್ಬ ಆಚರಣೆ- ಅಂಬಿ, ವಿಷ್ಣು ಅಭಿಮಾನಿಗಳಿಂದ ಎಚ್ಚರಿಕೆ

    ಬೆಂಗಳೂರು: ಇಂದು ನಟಸಾರ್ವಭೌಮ ಡಾ. ರಾಜ್‍ಕುಮಾರ್ ಅವರ 90ನೇ ಜಯಂತಿಯಾಗಿದ್ದು, ಅಣ್ಣಾವ್ರ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇತ್ತ ಸರ್ಕಾರದಿಂದ ಕೂಡ ಹುಟ್ಟುಹಬ್ಬ ಆಚರಿಸುತ್ತಿದ್ದು, ಅಂಬರೀಶ್ ಹಾಗೂ ವಿಷ್ಣು ಅಭಿಮಾನಿಗಳು ಸಿಎಂ ಎಚ್ ಡಿ ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದ್ದಾರೆ.

    ಚಾಮರಾಜನಗರದಲ್ಲಿ ರಾಜ್ ಅಭಿಮಾನಿಗಳು ನೇತ್ರದಾನದ ಬಗ್ಗೆ ಅರಿವು ಮೂಡಿಸುತ್ತಾ ವಿಶೆಷ್ಠ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ರಾಜ್ಯದೆಲ್ಲೆಡೆ ಸಡಗರ ಸಂಭ್ರಮದಿಂದ ತಮ್ಮ ನೆಚ್ಚಿನ ನಟ ಹಾಗೂ ಅಭಿಮಾನಿಗಳು ಆರಾಧ್ಯ ದೈವವೆಂದು ಪೂಜಿಸುವ ರಾಜ್‍ಕುಮಾರ್ ಅವರ 90ನೇ ವರ್ಷದ ಜಯಂತಿಯನ್ನು ಆಚರಿಸಲಾಗುತ್ತಿದೆ.

    ಡಾ. ರಾಜ್‍ಕುಮಾರ್ ಹುಟ್ಟುಹಬ್ಬವನ್ನು ಸರ್ಕಾರದ ವತಿಯಿಂದ ಆಚರಣೆ ಮಾಡುವ ಬಗ್ಗೆ ಸಿಎಂ ನಿರ್ಧಾರದ ಬೆನ್ನಲ್ಲೆ ವಿಷ್ಣು ಹಾಗೂ ಅಂಬಿ ಅಭಿಮಾನಿಗಳು ಸಿಎಂಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಡಾ ರಾಜ್ ಹುಟ್ಟುಹಬ್ಬದಂತೆ ಕನ್ನಡ ಚಿತ್ರರಂಗದ ದಿಗ್ಗಜರಾಗಿರುವ ಡಾ ವಿಷ್ಣು, ಅಂಬಿ ಹುಟ್ಟುಹಬ್ಬವನ್ನು ಆಚರಿಸುತ್ತೀರಾ ಎಂದು ಸವಾಲೆಸೆದಿದ್ದಾರೆ.

    ರಾಜ್ ಹುಟ್ಟುಹಬ್ಬದ ನಿರ್ಧಾರ ಸ್ವಾಗತ. ಅವರಂತೆ ಕನ್ನಡ ಚಿತ್ರರಂಗದ ದಿಗ್ಗಜರ ಸಾಲಲ್ಲಿ ಡಾ. ವಿಷ್ಣುವರ್ಧನ್, ಅಂಬರೀಶ್ ಇದ್ದಾರೆ. ಅವರ ಹುಟ್ಟುಹಬ್ಬವನ್ನು ಆಚರಿಸದೇ ತಾರತಮ್ಯ ಮಾಡೋದು ಸರಿಯಲ್ಲ. ಚಿತ್ರರಂಗದ ದಿಗ್ಗಜರ ವಿಚಾರದಲ್ಲಿ ತಾರತಮ್ಯ ಮಾಡಬೇಡಿ. ಒಬ್ಬರ ಹುಟ್ಟುಹಬ್ಬವನ್ನು ಆಚರಿಸಿ, ಇನ್ನೊಬ್ಬರನ್ನು ನಿರ್ಲಕ್ಷ್ಯ ಮಾಡಬೇಡಿ ಎಂದು ಸಿಎಂಗೆ ಎಚ್ಚರಿಕೆ ನೀಡಿದ್ದಾರೆ.

    ಹಾಗೆಯೇ ಸರ್ಕಾರ ಈ ಸಮಯದಲ್ಲಾದರೂ ವಿಷ್ಣು ಸ್ಮಾರಕದ ಬಗ್ಗೆ ಮಾತಾನಾಡಲೇಬೇಕು. ರಾಜಕೀಯ ದಾಳವನ್ನಾಗಿ ಡಾ. ರಾಜ್ ಹುಟ್ಟುಹಬ್ಬವನ್ನು ಆಚರಿಸಬೇಡಿ ಎಂದು ಮನವಿ ಮಾಡಿದ್ದಾರೆ.

  • ಸಿಎಂ ಎಚ್‍ಡಿಕೆ ವಿರುದ್ಧ ಕಮಿಷನ್ ಬಾಂಬ್- ಚುನಾವಣೆ ಬಳಿಕ ಅಧಿಕಾರಕ್ಕೆ ಬಂದು ತನಿಖೆ: ಶ್ರೀರಾಮುಲು

    ಸಿಎಂ ಎಚ್‍ಡಿಕೆ ವಿರುದ್ಧ ಕಮಿಷನ್ ಬಾಂಬ್- ಚುನಾವಣೆ ಬಳಿಕ ಅಧಿಕಾರಕ್ಕೆ ಬಂದು ತನಿಖೆ: ಶ್ರೀರಾಮುಲು

    ಗದಗ: ಲೋಕಸಭಾ ಚುನಾವಣೆಯಲ್ಲಿ ನಿಖಿಲ್, ಪ್ರಜ್ವಲ್ ರೇವಣ್ಣರನ್ನ ಗೆಲ್ಲಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ಸರ್ಕಾರ ಗುತ್ತಿಗೆದಾರರಿಂದ ಕೋಟಿ ಕೋಟಿ ರೂ. ಕಮಿಷನ್ ಹಣವನ್ನು ಸಂಗ್ರಹ ಮಾಡಿದೆ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ.

    ಕ್ಷೇತ್ರದಲ್ಲಿ ಪಕ್ಷದ ಪರ ಪ್ರಚಾರ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಮಗನನ್ನು ಗೆಲ್ಲಿಸಿಕೊಳ್ಳಲು ಗುತ್ತಿಗೆದಾರರಿಂದ ನೂರಾರು ಕೋಟಿ ರೂ. ಕಮಿಷನ್ ಪಡೆದಿದ್ದಾರೆ. ಇತ್ತ ಪ್ರಜ್ವಲ್, ದೇವೇಗೌಡರನ್ನು ಗೆಲ್ಲಿಸಿಕೊಳ್ಳಲು ಪಿಡಬ್ಲ್ಯೂಡಿ ಗುತ್ತಿಗೆದಾರರಿಂದ ಕಮಿಷನ್ ಪಡೆದು ಭ್ರಷ್ಟಾಚಾರ ನಡೆಸಿದ್ದಾರೆ. ಲೋಕಸಭಾ ಚುನಾವಣೆಯ ಬಳಿಕ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದರು.

    ಹಲವು ಕಾಮಗಾರಿಗಳು ಇಲಾಖೆಯಲ್ಲಿ ಪೂರ್ಣಗೊಳ್ಳದಿದ್ದರು ಕೂಡ ಹಣ ಬಿಡುಗಡೆ ಮಾಡಿರುವುದು ಇದಕ್ಕೆ ಸಾಕ್ಷಿಯಾಗಿದ್ದು, ಆ ಮೂಲಕ ಕಮಿಷನ್ ಪಡೆದಿದ್ದಾರೆ ಎಂದರು. ಇದೇ ವೇಳೆ ಸುಮಲತಾ ಅವರ ಪರ ಮಾತನಾಡಿ, ಪಕ್ಷ ತೀರ್ಮಾನ ತೆಗೆದುಕೊಂಡಿದೆ. ಮೋದಿ ಅವರು ಕೂಡ ಬೆಂಬಲ ನೀಡಿದ್ದಾರೆ. ಮಂಡ್ಯ ಜನ ಸ್ವಾಭಿಮಾನಿ ಜನಗಳಾಗಿದ್ದು, ಸುಮಲತಾ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದರು.

    ಮೈತ್ರಿಯಲ್ಲಿ ಹೊಂದಾಣಿಕೆ ಸರಿ ಇಲ್ಲ. ಮೈತ್ರಿ ಸೋಲುಂಟಾದರೆ ನೀವು ಹೊಣೆ ಎಂದು ಜೆಡಿಎಸ್ ಪಕ್ಷದ ಮಂತ್ರಿಗಳು ಬಹಿರಂಗವಾಗಿ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡಿದ್ದಾರೆ. ನಿಖಿಲ್ ಸೋತು ಕುಮಾರಸ್ವಾಮಿ ರಾಜೀನಾಮೆ ನೀಡುತ್ತಾರೆ. ಪರಿಣಾಮ ಚುನಾವಣೆ ಬಳಿಕ ಸರ್ಕಾರ ಉರುಳಿ ಹೋಗಲಿದೆ ಎಂದು ಭವಿಷ್ಯ ನುಡಿದರು. ಅಲ್ಲದೇ ನಮ್ಮ ಪಕ್ಷ ರಾಜ್ಯದಲ್ಲಿ 22 ಸ್ಥಾನಗಳಲ್ಲಿ ಗೆಲುವು ಪಡೆಯಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

  • ಎಲಿವೇಟೆಡ್ ಕಾರಿಡಾರ್ ಬೇಡವೇ ಬೇಡ-ಬೀದಿಗಿಳಿದು ಪ್ರತಿಭಟಿಸಿದ ಬೆಂಗಳೂರಿಗರು

    ಎಲಿವೇಟೆಡ್ ಕಾರಿಡಾರ್ ಬೇಡವೇ ಬೇಡ-ಬೀದಿಗಿಳಿದು ಪ್ರತಿಭಟಿಸಿದ ಬೆಂಗಳೂರಿಗರು

    ಬೆಂಗಳೂರು: ರಾಜ್ಯ ಸರ್ಕಾರ ಬೆಂಗಳೂರಿನ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಜಾರಿ ಮಾಡಲು ಮುಂದಾಗಿದ್ದ ಎಲಿವೇಟೆಡ್ ಕಾರಿಡರ್ ಯೋಜನೆಗೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿದ್ದು, ಇಂತಹ ಯೋಜನೆ ಬೇಡವೇ ಬೇಡ ಎಂಬ ಕೂಗು ಜೋರಾಗುತ್ತಿದೆ.

    ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿ ಮಾಡಲು ಉದ್ದೇಶಿಸಿದ್ದ ಸ್ಟೀಲ್ ಬ್ರಿಡ್ಜ್ ಬೇಡವೇ ಬೇಡಾ ಎಂದಿದ್ದ ಸಿಲಿಕಾನ್ ಸಿಟಿ ಮಂದಿ ಈಗ ಎಲಿವೇಟೆಡ್ ಕಾರಿಡಾರ್ ಯೋಜನೆ ಬೇಡ ಎಂದು ಮತ್ತೆ ಸಮ್ಮಿಶ್ರ ಸರ್ಕಾರದ ಯೋಜನೆ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಕೈಯಲ್ಲಿ ಬ್ಯಾನರ್ ಹಿಡಿದು ಧಿಕ್ಕಾರ, ಬೇಡವೇ ಬೇಡ ಈ ಯೋಜನೆ ಬೇಡ. ಪರಿಸರ ಉಳಿಸಿ ಬೆಂಗಳೂರು ಬೆಳಸಿ ಎಂದು ಘೋಷಣೆ ಕೂಗಿ ನಗರದ ಮೌರ್ಯ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದರು.

    ಸುಮಾರು 50ಕ್ಕೂ ಹೆಚ್ಚು ನಾಗರಿಕ ಸಂಘಟನೆಯವರು ನಗರದ ಮೌರ್ಯ ಸರ್ಕಲ್‍ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಸರ್ಕಾರ ತನ್ನ ಲಾಭಕ್ಕಾಗಿ ಟ್ರಾಫಿಕ್ ಕಾರಣವನ್ನೇ ಮುಂದಿಟ್ಟುಕೊಂಡು ಬೇಡದಂತಹ ಯೋಜನೆಗಳನ್ನ ತಂದು ಬೆಂಗಳೂರನ್ನ ಹಾಳು ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ಅಲ್ಲದೇ ಈ ಯೋಜನೆಯನ್ನ ಕೈಬಿಡಬೇಕು ಎಂದು ನಟಿ, ಪರಿಸರ ಪ್ರೇಮಿ ಅರುಂಧತಿ ನಾಗ್ ಆಗ್ರಹಿಸಿದರು.

    ಈಗಾಗಲೇ ಕೆಆರ್ ಪುರಂನಿಂದ ಯಶವಂತಪುರ, ಹೆಬ್ಬಾಳದಿಂದ ಗುಟ್ಟಹಳ್ಳಿ ಮುಖಾಂತರ ಸರ್ಜಾಪುರ ರಸ್ತೆ, ಕೋರಮಂಗಲದಿಂದ ಮೈಸೂರು ರಸ್ತೆ, ಬೆಳ್ಳಂದೂರು ಟು ಎಲೆಕ್ಟ್ರಾನಿಕ್ ಸಿಟಿಗೆ ಕನೆಕ್ಟ್ ಆಗುವ ಹಾಗೇ ಎಲಿವೇಟೆಡ್ ರಸ್ತೆಯನ್ನ ಮಾಡಲು ಸರ್ಕಾರ ಮುಂದಾಗಿದೆ. ಅದರ ಬದಲು ಬೈಸಿಕಲ್ ಕಾರಿಡಾರ್ ಗಳನ್ನ ಮಾಡಬೇಕು. ಇಂಟರ್ ಟ್ರೈನ್‍ಗಳನ್ನ ಹಾಕಬೇಕು ಎಂದು ಪರಿಸರ ಹೋರಾಟಗಾರ ಪ್ರಕಾಶ್ ಬೆಳವಾಡಿ ಮನವಿ ಮಾಡಿದರು.

    ಸರ್ಕಾರ ಎಲಿವೇಟೆಡ್ ಕಾರಿಡರ್ ಮಾಡಲು ಈಗಾಗಲೇ ಟೆಂಡರ್ ಕೂಡ ಮಾಡಿದ್ದು, ಪರಿಸರ ಪ್ರೇಮಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸ್ತಿದ್ದಾರೆ. ಇದರ ನಡುವೆಯೇ ಹೋರಾಟಗಾರರೊಂದಿಗೆ ಮಾತುಕತೆ ನಡೆಸಲು ಸಿದ್ಧ, ಈ ಬಗ್ಗೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುವ ಕುರಿತು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಅಕ್ರಮ ಸೀಮೆಎಣ್ಣೆ ಸಾಗಾಟ ಮಾಡ್ತಿದ್ದ ಕ್ಯಾಂಪ್ ಮೇಲೆ ಅಧಿಕಾರಿಗಳು ದಾಳಿ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಅಕ್ರಮ ಸೀಮೆಎಣ್ಣೆ ಸಾಗಾಟ ಮಾಡ್ತಿದ್ದ ಕ್ಯಾಂಪ್ ಮೇಲೆ ಅಧಿಕಾರಿಗಳು ದಾಳಿ

    ಕೊಪ್ಪಳ: ಬಡವರ ಮನೆ ಸೆರಬೇಕಿದ್ದ ಸರ್ಕಾರದ ಸೀಮೆ ಎಣ್ಣೆ ಜೆ.ಡಿ.ಎಸ್ ಕಾರ್ಯಕರ್ತನೊಬ್ಬನ ಮನೆ ಸೇರುತ್ತಿರುವ ಕುರಿತು ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್‍ನಲ್ಲಿ ಕಾರ್ಯಕರ್ತನ ಬಂಡವಾಳ ಬಯಲು ಮಾಡಿದ್ದು, ಇದೀಗ ಆಹಾರ ಇಲಾಖೆಯ ಅಧಿಕಾರಿಗಳು ಅಂಗಡಿ ಸಂಗಣ್ಣ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದಾರೆ.

    ಈ ವೇಳೆ ಅಧಿಕಾರಿ ಎಸ್.ಐ. ಬಾಗಲಿಯವರು 9 ತುಂಬಿದ ಬ್ಯಾರಲ್, 30 ಖಾಲಿ ಬ್ಯಾರಲ್ ಮತ್ತು 50 ಖಾಲಿ ಸೀಮೆ ಎಣ್ಣೆ ಡಬ್ಬಗಳನ್ನು ವಶಕ್ಕೆ ಪಡೆದಿದ್ದಾರೆ. ಆಕ್ರಮ ಮಾಡುವವರನ್ನು ಬಿಟ್ಟು ಮನೆ ಬಾಡಿಗೆ ಕೊಟ್ಟವರ ಮೇಲೆ ಅಧಿಕಾರಿಗಳು ಪ್ರಕರಣ ದಾಖಲಿಲಿಸಿದ್ದಾರೆ. ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

    ಘಟನೆ ವಿವರ:
    ಕೊಪ್ಪಳದ ಗಂಗಾವತಿ ನಿವಾಸಿ ಆಗಿರುವ ಶೇಖ್ ನಭಿಸಾಭ ಗಂಗಾವತಿ ನಗರ ಸಭೆಯ ಮಾಜಿ ಸದಸ್ಯ. ಈಗ ರಾಜ್ಯದಲ್ಲಿ ಅಧಿಕಾರದಲ್ಲಿರೋ ಜೆಡಿಎಸ್ ಪಕ್ಷದ ನಗರಘಟಕದ ಅಧ್ಯಕ್ಷನೂ ಆಗಿದ್ದಾನೆ. ಈತನಿಗೆ ಸಹೋದರರಾದ ಉಮರ್ ಮತ್ತು ಅಮೀದ್ ಸಾಥ್ ನೀಡುತ್ತಿದ್ದರು. ಪ್ರತಿ ತಿಂಗಳು ತಾಲೂಕಿನ ಹಳ್ಳಿಗಳ ಸೊಸೈಟಿಗೆ ಹೋಗಬೇಕಾದ ಸೀಮೆಎಣ್ಣೆ, ನೇರವಾಗಿ ಗಂಗಾವತಿಯಲ್ಲಿ ಇರುವ ಈತನ ಮನೆ ಸೇರುತ್ತಿದೆ. ಈತ ಅದೆಷ್ಟು ಪ್ರಭಾವಿ ಅಂದರೆ, ಗಂಗಾವತಿಯ ಮುರಾರಿ ನಗರದಲ್ಲಿರುವ ಗುರುರಾಜ್ ಮತ್ತು ಶ್ರೀನಿವಾಸ್ ಎಂಬ ಬಂಕ್‍ಗಳ ಮಾಲೀಕರ ಜೊತೆ ಸೆಟ್ಲ್ ಮೆಂಟ್ ಮಾಡ್ಕೊಂಡು ಅಲ್ಲಿಂದ ನೇರವಾಗಿ ತಮ್ಮ ಮನೆಗೆ ಬ್ಯಾರಲ್‍ಗಳಲ್ಲಿ ಹಾಕಿಸಿಕೊಳ್ತಾನೆ ಎಂದು ಸ್ಥಳೀಯರಾದ ಮೊಹಮ್ಮದ್ ಜಾಕೀರ್ ಆರೋಪಿಸಿದ್ದರು.

    ಹೀಗೆ ಅಕ್ರಮವಾಗಿ ಸಂಗ್ರಹಿಸಿದ ಸೀಮೆಎಣ್ಣೆ ಕ್ಯಾನ್‍ಗಳನ್ನು ಆಟೋಗಳ ಮೂಲಕ ಬೇರೆಡೆಗೆ ರಾತ್ರೊರಾತ್ರಿ ಸಾಗಿಸ್ತಾನೆ. ಇದನ್ನು ಪ್ರಶ್ನೆ ಮಾಡಲು ಹೋದ್ರೆ ಬೆದರಿಕೆ ಹಾಕಿ ಅಲ್ಲಿಂದ ಜಾಗ ಖಾಲಿ ಮಾಡಿಸುತ್ತಾನೆ. ಸಿಟಿ ಮಧ್ಯಭಾಗದಲ್ಲೆ ಇಷ್ಟೆಲ್ಲ ಅಕ್ರಮ ನಡೆಯುತ್ತಿರೋ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರೆ ಯಾವೊಬ್ಬ ಅಧಿಕಾರಿಗಳು ಕ್ಯಾರೆ ಅಂದಿಲ್ಲ ಎಂದು ಜಾಕೀರ್ ಗರಂ ಆಗಿದ್ದರು. ಈ ಕುರಿತು ಇಂದು ಬೆಳಗ್ಗೆ ಪಬ್ಲಿಕ್ ಟಿವಿ ಸುದ್ದಿ ಪ್ರಸಾರ ಮಾಡಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಸಮರದ ಬಳಿಕ ಬಸ್ ಪ್ರಯಾಣಿಕರಿಗೆ ಶಾಕ್!

    ಲೋಕಸಮರದ ಬಳಿಕ ಬಸ್ ಪ್ರಯಾಣಿಕರಿಗೆ ಶಾಕ್!

    ಬೆಂಗಳೂರು: ಲೋಕಸಭೆ ಚುನಾವಣೆ ಬಳಿಕ ಬಸ್ ಪ್ರಯಾಣಿಕರಿಗೆ ಶಾಕ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಲೋಕಸಭೆ ಚುನಾವಣೆ ಬಳಿಕ ಬಸ್ ಟಿಕೆಟ್ ದರ ಹೆಚ್ಚಳ ಕುರಿತು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ದಿನೇ ದಿನೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗುತ್ತಿದೆ. ಹೀಗಾಗಿ ಟಿಕೆಟ್ ದರ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಆದರೆ ಚುನಾವಣೆ ಮುಗಿಯುವವರೆಗೂ ಪ್ರಯಾಣ ದರ ಏರಿಕೆ ಬೇಡ ಎಂದು ಸಿಎಂ ಹೇಳಿದ್ದಾರೆ ಎಂದರು. ಈ ಮೂಲಕ ಲೋಕಸಭೆ ಚುನಾವಣೆ ಬಳಿಕ ಬಸ್ ಪ್ರಯಾಣ ದರ ಹೆಚ್ಚಳ ಖಚಿತ ಎಂಬ ಸುಳಿವನ್ನು ನೀಡಿದರು.

    ಇದೇ ವೇಳೆ ಬಾಡಿಗೆಯಲ್ಲಿ ಎಲೆಕ್ಟ್ರಿಕ್ ಬಸ್ ಖರೀದಿ ಪ್ರಸ್ತಾಪ ಕೈ ಬಿಟ್ಟಿರುವುದಾಗಿ ಸ್ಪಷ್ಟನೆ ನೀಡಿದರು. ಎಲೆಕ್ಟ್ರಿಕ್ ಬಸ್ ಖರೀದಿಗೆ ಸರ್ಕಾರ ಅನುಮತಿಯೇ ಕೊಟ್ಟಿರಲಿಲ್ಲ. ಹಿಂದಿನ ಸರ್ಕಾರದ ಅಧಿಕಾರಿಗಳು ಎಲೆಕ್ಟ್ರಿಕ್ ಬಸ್ ಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರು. ಬಾಡಿಗೆಯಲ್ಲಿ ಎಲೆಕ್ಟ್ರಿಕ್ ಬಸ್ ಖರೀದಿಗೆ ನನ್ನ ವಿರೋಧ ಇತ್ತು. ನಾನು ಸ್ವತಃ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ನಾವೇ ಎಲೆಕ್ಟ್ರಿಕ್ ಬಸ್ ಖರೀದಿ ಮಾಡಿದರೆ ನಮಗೆ ಹೆಚ್ಚು ಅನುಕೂಲ ಆಗುತ್ತೆ ಈ ಪ್ರಸ್ತಾಪ ಕೈ ಬಿಟ್ಟಿದ್ದೇವೆ. ನಾವೇ 80 ಬಸ್ ಖರೀದಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

    ಇಲಾಖೆಯಲ್ಲಿ ಇರುವ ಹಳೆ ಬಸ್ ಬದಲಾವಣೆ ಮಾಡಲು ಹೊಸ ಬಸ್ ಖರೀದಿಗೆ ನಿರ್ಧಾರ ಮಾಡಿದ್ದೇವೆ. 3 ಸಾವಿರ ಕೆಎಸ್‍ಆರ್ ಟಿಸಿ, ಬಿಎಂಟಿಸಿ ಬಸ್ ಖರೀದಿ ಮಾಡುತ್ತಿದ್ದೇವೆ. 7 ಲಕ್ಷ ಕಿಲೋಮೀಟರ್ ಓಡಿರುವ ಬಸ್ ಗಳನ್ನ ಬದಲಾವಣೆ ಮಾಡಲಾಗುತ್ತೆ. ಹಳೆ ಬಸ್ ಗಳ ಬದಲಾವಣೆ ಮಾಡಿ ಮತ್ತಷ್ಟು ಸುಸ್ಥಿತಿಯಲ್ಲಿ ಬಸ್ ಸೇವೆ ಸಾರ್ವಜನಿಕರಿಗೆ ಒದಗಿಸುತ್ತೇವೆ ಎಂದರು. ಅಲ್ಲದೇ ಆರ್ ಟಿಓ ಹುದ್ದೆಗಳು ಖಾಲಿ ಇದ್ದು, ಹೊಸ ನೇಮಕಾತಿಗೆ ಕೇಂದ್ರ ಸರ್ಕಾರದ ಕಾಯ್ದೆ ಅಡ್ಡಿ ಇದೆ. ಚುನಾವಣೆ ಆದ ಬಳಿಕ ಕಾಯ್ದೆಗೆ ಒಂದಿಷ್ಟು ಬದಲಾವಣೆ ತಂದು ನಮ್ಮ ಇಲಾಖೆಯೆ ಆರ್ ಟಿಓ ನೇಮಕಾತಿ ಮಾಡಿಕೊಳ್ಳುತ್ತೆ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv