Tag: State Government

  • ತಿಂಗಳ 4ನೇ ಶನಿವಾರ ಸರ್ಕಾರಿ ರಜೆ – ಹೊರಬಿತ್ತು ಅಧಿಕೃತ ಆದೇಶ

    ತಿಂಗಳ 4ನೇ ಶನಿವಾರ ಸರ್ಕಾರಿ ರಜೆ – ಹೊರಬಿತ್ತು ಅಧಿಕೃತ ಆದೇಶ

    ಬೆಂಗಳೂರು: ರಾಜ್ಯ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಸರ್ಕಾರಿ ಉದ್ಯೋಗಿಗಳಿಗೆ ತತ್ ಕ್ಷಣದಿಂದಲೇ 4ನೇ ಶನಿವಾರವೂ ಸರ್ಕಾರಿ ರಜೆ ಸಿಗಲಿದೆ.

    ಈ ಕುರಿತು ಹೊರಡಿಸಲಾದ ರಾಜ್ಯಪತ್ರದ ಪ್ರತಿಯಲ್ಲಿ, ಮುಂದಿನ ಆದೇಶದವರೆಗೂ ಪ್ರತಿ ತಿಂಗಳ 4ನೇ ಶನಿವಾರ ಸಾರ್ವತ್ರಿಕ ರಜೆ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ಇದ್ದ ಹರಿನೈದು ದಿನಗಳ ಸಾಂದರ್ಭಿಕ ರಜೆಯನ್ನು 10 ದಿನಗಳಿಗೆ ಇಳಿಸುವುದಾಗಿ ಉಲ್ಲೇಖಿಸಲಾಗಿದೆ.

    ಜೂನ್ 6 ರಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ರಜೆ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ದೇಶದ 17 ರಿಂದ 18 ರಾಜ್ಯಗಳಲ್ಲಿ ಶನಿವಾರ ರಜೆ ನೀಡಲಾಗುತ್ತಿದೆ. ಇನ್ನು ಕೆಲವು ರಾಜ್ಯಗಳಲ್ಲಿ ಎರಡು ಶನಿವಾರ ರಜೆ ನೀಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ 4ನೇ ಶನಿವಾರ ರಜೆ ನೀಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದ್ದರು.

    ಜಯಂತಿಗಳ ರಜೆ ಕಡಿತಗೊಳಿಸಿ ನಾಲ್ಕನೇ ಶನಿವಾರ ರಜೆ ನೀಡಲು 6ನೇ ವೇತನ ಆಯೋಗದ ಶಿಫಾರಸಿನಲ್ಲಿ ತಿಳಿಸಲಾಗಿತ್ತು. ಈ ಕುರಿತು ಕೃಷ್ಣ ಭೈರೇಗೌಡ ನೇತೃತ್ವದ ಸಂಪುಟ ಉಪ ಸಮಿತಿ ವರದಿ ನೀಡಿತ್ತು. ಆದರೆ ಸದ್ಯಕ್ಕೆ ಯಾವುದೇ ಜಯಂತಿಯ ರಜೆ ಕಡಿತಗೊಳಿಸದಿರಲು ಸರ್ಕಾರ ತೀರ್ಮಾನಿಸಿದೆ.

    ಈ ವರ್ಷದ ರಜಾ ಕ್ಯಾಲೆಂಡರ್ ಈಗಾಗಲೇ ಬಿಡುಗಡೆಯಾಗಿರುವುದರಿಂದ ಸದ್ಯಕ್ಕೆ ಈ ಪರಿಷ್ಕರಣೆ ಅಸಾಧ್ಯ. ಮುಂದಿನ ವರ್ಷದಿಂದ ಜಾರಿಯಾಗಬಹುದು ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಸರ್ಕಾರ ಈಗ ರಾಜ್ಯಪತ್ರ ಹೊರಡಿಸಿ ರಜೆಯನ್ನು ನಾಲ್ಕನೇ ಶನಿವಾರದ ರಜೆಯನ್ನು ಅಧಿಕೃತಗೊಳಿಸಿದೆ.

  • ಜಿಂದಾಲ್ ದಂಗಲ್- ಕಿಕ್ ಬ್ಯಾಕ್ ಆರೋಪ ತಳ್ಳಿ ಹಾಕಿದ ಸಚಿವ ತುಕಾರಾಂ

    ಜಿಂದಾಲ್ ದಂಗಲ್- ಕಿಕ್ ಬ್ಯಾಕ್ ಆರೋಪ ತಳ್ಳಿ ಹಾಕಿದ ಸಚಿವ ತುಕಾರಾಂ

    ಕೊಪ್ಪಳ: ಜಿಂದಾಲ್ ಕಾರ್ಖಾನೆಗೆ ಜಮೀನು ನೀಡುವ ವಿಚಾರದಲ್ಲಿ ಸರ್ಕಾರ ಕಿಕ್ ಬ್ಯಾಕ್ ಪಡೆದಿದೆ ಎಂಬ ವಿರೋಧ ಪಕ್ಷದ ನಾಯಕರು ಮಾಡುತ್ತಿರುವ ಆರೋಪ ಸುಳ್ಳು ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ ತುಕಾರಾಂ ಹೇಳಿದ್ದಾರೆ.

    ಜಿಲ್ಲೆಯ ಕುಷ್ಟಗಿಯಲ್ಲಿ ಮಾತನಾಡಿದ ತುಕಾರಾಂ, ನಮ್ಮ ಸರ್ಕಾರ ಕಿಕ್ ಬ್ಯಾಕ್ ಪಡೆಯುವಂತಹ ಯಾವುದೇ ಕೆಲಸವನ್ನು ಮಾಡಿಲ್ಲ. ಯಾರ ಬಾಯಿಯಲ್ಲಿ ಏನ್ ಮಾಡಿರುತ್ತಾರೋ ಅದನ್ನು ನುಡಿಸುತ್ತೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪರಿಗೆ ತಿರುಗೇಟು ನೀಡಿದರು.

    ಜಿಂದಾಲ್‍ಗೆ ಏನು ಭೂಮಿ ಕೊಡಲಾಗಿದೆ ಅದು ಲೀಗಲ್ ಆಗಿದೆ. ನಾವೆಲ್ಲ ದೇಶ ಕಟ್ಟಬೇಕಾಗಿದ್ದು, ಯುವಕರಿಗೆ ಉದ್ಯೋಗ ಅವಕಾಶಗಳನ್ನು ಕೊಡಬೇಕಾಗಿದೆ. ಗ್ಲೋಬಲ್ ಇನ್‍ವೆಸ್ಟ್ಮೆಂಟ್ ಮಾಡುವ ಮೂಲಕ ಇಂಡಸ್ಟ್ರಿಗಳನ್ನು ಬೆಳೆಸುವುದು ಸರ್ಕಾರದ ಉದ್ದೇಶವಾಗಿದ್ದು, ಕೈಗಾರಿಕೆಗಳು ದೇಶದ ಆಸ್ತಿ, ಅವುಗಳಿಂದ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತೆ ಎಂದರು.

    ಜಿಂದಾಲ್ ಕಂಪನಿಗೆ 2016ರಲ್ಲಿಯೇ ಭೂಮಿ ನೀಡಲು ಲೀಸ್ ಕಮಿಟಿಯಲ್ಲಿ ನಿರ್ಣಯ ಮಾಡಿ ನೀಡಲಾಗಿತ್ತು. 2006ರಲ್ಲಿ 5 ಮಿಲಿಯನ್ ಟನ್ ಸ್ಟೀಲ್ ಉತ್ಪಾದನೆ ಇತ್ತು, 2010 ರಲ್ಲಿ 10 ಮಿಲಿಯನ್ ಟನ್, 2011ರಲ್ಲಿ 15 ಮಿಲಿಯನ್ ಟನ್ ಇತ್ತು, ಸದ್ಯ 20 ಮಿಲಿಯನ್ ಟನ್ ಅಗತ್ಯ ಇದೆ. ಸ್ಟೀಲ್ ಉತ್ಪಾದನೆಯಿಂದ ಇತರೆ ಉತ್ಪನ್ನಗಳು ಉತ್ಪತ್ತಿಯಾಗುತ್ತಿವೆ. ಸಿಮೆಂಟ್, ಪೇಂಟ್, ಪವರ್ ಹಾಗೂ ಡಾಂಬರ್ ಉತ್ಪಾದನೆ ಆಗುತ್ತಿದ್ದು ಅವುಗಳ ಪ್ಲಾಂಟ್‍ಗಳನ್ನು ನಿರ್ಮಿಸಲಾಗಿದೆ. ಇದೊಂದು ನೈಸರ್ಗಿಕ ಸಂಪನ್ಮೂಲವಾಗಿದ್ದು, ಬಳಕೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಮುಸುನಾಯಕನ ಹಳ್ಳಿ ಹಾಗೂ ಯರಬನಳ್ಳಿ ಗ್ರಾಮಗಳಲ್ಲಿ ಪ್ಲಾಂಟ್ ಆಗಿದೆ. ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಲಾಗುತ್ತಿದ್ದು. ಸರೋಜಿನಿ ಮಹಿಷಿ ವರದಿ ಪ್ರಕಾರ ಪಾಲೋ ಮಾಡಲಾಗುತ್ತಿದೆ ಎಂದರು.

    ಇನ್ನು ಬ್ರಾಹ್ಮಿಣಿ ಮತ್ತು ಮಿತ್ತಲ್‍ಗೆ ಬಿಜೆಪಿ ಸರ್ಕಾರದಲ್ಲಿ ಭೂಮಿ ಕೊಡಲಾಗಿದ್ದು, 6100 ಎಕರೆ ಉತ್ತಮ್ ಗಾಲ್ವಾ ಕೊಟ್ಟು ಇಂಡಸ್ಟ್ರಿ ಯಾರಿಗೂ ಸಿಗದಂಗೆ ಮಾಡಿದ್ದಾರೆ ಅದು ಸಿಬಿಐಗೆ ಸಿಲುಕಿದೆ. ಇದರ ಬಗ್ಗೆ ಬಿಜೆಪಿ ಅವರು ಯಾರು ಮಾತನಾಡುವುದಿಲ್ಲ. ಬಿಜೆಪಿಯವರು ಯಾವುದೇ ಕೆಲಸ ಮಾಡಿಲ್ಲ. ನಮ್ಮ ಸರ್ಕಾರ ಮಾಡುತ್ತಿದೆ ಅದಕ್ಕಾಗಿ ಹತಾಶರಾಗಿದ್ದಾರೆ ಎಂದು ಟೀಕಿಸಿದರು.

    ಈಗಾಗಲೇ ನಮ್ಮ ಸರ್ಕಾರದಲ್ಲೇ ಕೆಲವರು ಇದಕ್ಕೆ ವಿರೋಧ ಹೇಳಿಕೆ ನೀಡಿದ್ದರು. ಅವರಿಗೂ ಮನವರಿಕೆ ಮಾಡಲಾಗಿದ್ದು, ಇದು ದೇಶದ ಯುವಕರ ಹಾಗೂ ರೈತರ ಅಭಿವೃದ್ಧಿಗಾಗಿ ಮಾಡುತ್ತಿರುವ ಕೆಲಸ ಎಂದು ಈ ತುಕಾರಾಂ ವಿಶ್ವಾಸ ವ್ಯಕ್ತಪಡಿಸಿದರು.

  • ರಾಜ್ಯದಲ್ಲಿ ಸರ್ಕಾರ ಇದ್ಯಾ? ಇದೆ ಎಂದು ಒಪ್ತಿರಾ? – ಮೈತ್ರಿ ಸರ್ಕಾರದ ವಿರುದ್ಧ ಈಶ್ವರಪ್ಪ ವ್ಯಂಗ್ಯ

    ರಾಜ್ಯದಲ್ಲಿ ಸರ್ಕಾರ ಇದ್ಯಾ? ಇದೆ ಎಂದು ಒಪ್ತಿರಾ? – ಮೈತ್ರಿ ಸರ್ಕಾರದ ವಿರುದ್ಧ ಈಶ್ವರಪ್ಪ ವ್ಯಂಗ್ಯ

    ಬಾಗಲಕೋಟೆ: ರಾಜ್ಯದಲ್ಲಿ ಸರ್ಕಾರ ಇದೆಯಾ, ಇದೇ ಎಂದು ನೀವು ಒಪ್ಪುತ್ತಿರಾ ಎಂದು ಪ್ರಶ್ನೆ ಮಾಡುವ ಮೂಲಕ ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಅವರು ಮೈತ್ರಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಮಾತನಾಡಿದ ಈಶ್ವರಪ್ಪ, ರೋಷನ್ ಬೇಗ್, ರಾಮಲಿಂಗಾರೆಡ್ಡಿ ಏನೇನು ಹೇಳುತ್ತಿದ್ದಾರೆ ಅದನ್ನು ನಾನು ರಿಪೀಟ್ ಮಾಡೋದಿಲ್ಲ. ಕಾಂಗ್ರೆಸ್ ಜೆಡಿಎಸ್‍ನವರೇ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ನಾವು ಸರ್ಕಾರ ಬೀಳಿಸುವುದಿಲ್ಲ. ಅದು ಬಿದ್ದು ಹೋದ ಸಂದರ್ಭದಲ್ಲಿ ನಮ್ಮ ರಾಜ್ಯ ಮತ್ತು ರಾಷ್ಟ್ರ ನಾಯಕರು ಸೇರಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.

    ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಮುಖಂಡರ ಹೇಳಿಕೆ ವಿಚಾರದ ಬಗ್ಗೆ ಕೇಳಿದಾಗ, ರಾಜಕಾರಣದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಾಗ ಹೀರೋಗಳು ಆಗಿರುತ್ತಾರೆ. ವಿಶ್ವಾಸ ಕಳೆದುಕೊಂಡಾಗ ವಿಲನ್ ಆಗುತ್ತಾರೆ. ರಾಜಕಾರಣದಲ್ಲಿ ಒಳ್ಳೆಯ ಸ್ಥಾನಮಾನ ಸಿಕ್ಕಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಆಗ ಮುಂದೆಯೂ ಒಳ್ಳೆಯದಾಗುತ್ತದೆ ಎಂಬುದು ನನ್ನ ಭಾವನೆ ಎನ್ನುವ ಮೂಲಕ ಸಿದ್ದರಾಮಯ್ಯ ವಿಲನ್ ರೀತಿಯಲ್ಲಿ ಬಿಂಬಿತರಾಗುತ್ತಿದ್ದಾರೆ ಎಂದು ಪರೋಕ್ಷವಾಗಿ ಹೇಳಿದರು.

    ಜಿಂದಾಲ್ ಕಂಪನಿಗೆ ಜಾಗ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಿಂದಾಲ್‍ಗೆ ಭೂಮಿ ನೀಡುವ ಪ್ರಭಾವಿಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಬಗ್ಗೆ ನಮ್ಮ ಎಲ್ಲ ನಾಯಕರು ಸೇರಿ ಪ್ರತಿಭಟನೆ ಮಾಡುತ್ತೇವೆ. ಆದರೆ ಜಿಂದಾಲ್ ಕಂಪನಿ ಖುದ್ದಾಗಿ ಇದರಿಂದ ಹಿಂದೆ ಸರಿಯಬೇಕು. ಈ ಸರ್ಕಾರ ಎಷ್ಟು ದಿನ ಇರುತ್ತೋ ಬಿದ್ದ ಹೋಗುತ್ತೋ ಗೊತ್ತಿಲ್ಲ. ಆದ್ದರಿಂದ ಗೌರವ ಪೂರ್ವಕವಾಗಿ ಭೂಮಿ ಬಿಟ್ಟುಕೊಡಬೇಕು. ಯಾಕೆಂದರೆ ಮುಂದಿನ ಸರ್ಕಾರ ಯಾವುದೇ ಕಾರಣಕ್ಕೂ ಭೂಮಿ ಕೊಡೋದಿಲ್ಲ ಎಂದು ಎಚ್ಚರಿಸಿದರು.

    ಮಾಧ್ಯಮಗಳ ಮೇಲೆ ಸಿಎಂ ಧಮ್ಕಿ ಹಾಕಿರುವ ಬಗ್ಗೆ ಕೇಳಿದಾಗ, ಮಾಧ್ಯಮದವರ ಬಗ್ಗೆ ಸಿಎಂ ಮಾತನಾಡುವುದು ಮೂರ್ಖತನ, ಮಾಧ್ಯಮಕ್ಕೆ ಧಮ್ಕಿ ಹಾಕೋದು ಸರಿಯಲ್ಲ. ಕುಮಾರಸ್ವಾಮಿಯ ಮಾಧ್ಯಮದವರ ಮೇಲೆ ಧಮ್ಕಿ ಹಾಕೋ ಧೋರಣೆ ತಪ್ಪು. ಕೂಡಲೇ ಸಿಎಂ ಮಾಧ್ಯಮ ಹಾಗೂ ಜನರ ಕ್ಷಮಾಪಣೆ ಕೇಳಬೇಕೆಂದು ಆಗ್ರಹಿಸಿದರು.

  • ಬರ ಅಧ್ಯಯನ ಪ್ರವಾಸ – ತಹಸೀಲ್ದಾರರಿಗೆ ಕಪಾಳಕ್ಕೆ ಹೊಡೆಯುತ್ತೇನೆ ಎಂದ ಬಿಎಸ್‍ವೈ

    ಬರ ಅಧ್ಯಯನ ಪ್ರವಾಸ – ತಹಸೀಲ್ದಾರರಿಗೆ ಕಪಾಳಕ್ಕೆ ಹೊಡೆಯುತ್ತೇನೆ ಎಂದ ಬಿಎಸ್‍ವೈ

    ರಾಯಚೂರು: ರಾಜ್ಯದಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಂಡಿರುವ ಮಾಜಿ ಸಿಎಂ ಯಡಿಯೂರಪ್ಪನವರು ಇಂದು ಜನರಿಗೆ ಮೂಲಭೂತ ಸೌಕರ್ಯಗಳನ್ನು ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಇಂದು ಯಡಿಯೂರಪ್ಪ ಜಿಲ್ಲೆಯ ಲಿಂಗಸುಗೂರಿನ ಛತ್ತರ ತಾಂಡಾದಲ್ಲಿ ಬರ ಅಧ್ಯಯನ ಮಾಡಿದರು. ಈ ವೇಳೆ ಅಧಿಕಾರಿಗಳು ಕುಡಿಯುವ ನೀರು, ಉದ್ಯೋಗಗಳನ್ನು ಸರಿಯಾಗಿ ನೀಡಿಲ್ಲ ಎಂದು ಗ್ರಾಮಸ್ಥರು ಅಹವಾಲುಗಳನ್ನು ನೀಡಿದ್ದಾರೆ. ಇದಕ್ಕೆ ಕೋಪಗೊಂಡ ಬಿಎಸ್‍ವೈ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಈ ಸಮಯದಲ್ಲಿ ಕುಡಿಯುವ ನೀರಿನ ಪೂರೈಕೆ ಸರಿಯಾಗಿ ಆಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಇದಕ್ಕೆ ಸ್ಥಳದಲ್ಲಿ ಇದ್ದ ತಹಶೀಲ್ದಾರ್ ಚಂದ್ರಕಾಂತ್ ಅವರ ಮೇಲೆ ಕೋಪಗೊಂಡ ಯಡಿಯೂರಪ್ಪ ತಹಶೀಲ್ದಾರ್ ಕಪಾಳಕ್ಕೆ ಹೊಡೆಯುತ್ತೇನೆ ಎಂದು ಎಚ್ಚರಿಕೆ ನೀಡಿದರು. ನಂತರ ಸರಿಯಾಗಿ ನೀರು ಪೂರೈಕೆ ಮಾಡುವಂತೆ ತಾಕೀತು ಮಾಡಿದರು.

    ಇದೇ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಯಾವ ಕಾರಣಕ್ಕೆ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ ಆದರೂ ಗ್ರಾಮ ವಾಸ್ತವ್ಯ ಮಾಡಲು ಹೊರಟಿದ್ದಾರೆ. ಕೇವಲ ಶಾಲೆಯಲ್ಲಿ ವಾಸ್ತವ್ಯ ಹೂಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ರಾಜ್ಯ ಸರ್ಕಾರದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಮೈತ್ರಿ ಸರಕಾರ ಬರ ನಿರ್ವಹಣೆ, ಕುಡಿಯುವ ನೀರು ಹಾಗು ಉದ್ಯೋಗ ನೀಡಲು ವಿಫಲವಾಗಿದೆ ಎಂದು ವಾಗ್ದಾಳಿ ಮಾಡಿದರು.

    https://www.youtube.com/watch?v=ICaTbsE2JyA

    ಮಾಧ್ಯಮಗಳ ವಿರುದ್ಧ ಮುಖ್ಯಮಂತ್ರಿಗಳ ಕ್ರಮದ ಬಗ್ಗೆ ಕೇಳಿದಾಗ, ಸಿಎಂ ಮಾಧ್ಯಮಗಳಿಗೆ ಏನು ಮಾಡಲು ಸಾಧ್ಯವಿಲ್ಲ. ನಿಮ್ಮೊಂದಿಗೆ ನಾವು ಇದ್ದೇವೆ, ಮುಂದೆ ಸದನದಲ್ಲಿ ಮಾಧ್ಯಮಗಳ ಪರವಾಗಿ ನಾನು ಮಾತನಾಡುತ್ತೇನೆ ಎಂದು ಹೇಳಿದರು.

  • ತಿಂಗಳ 4ನೇ ಶನಿವಾರ ಸರ್ಕಾರಿ ರಜೆ – ಸಿಇಟಿ ಮಾದರಿಯಲ್ಲಿ ಸಿ, ಡಿ ನೌಕರರ ವರ್ಗಾವಣೆ

    ತಿಂಗಳ 4ನೇ ಶನಿವಾರ ಸರ್ಕಾರಿ ರಜೆ – ಸಿಇಟಿ ಮಾದರಿಯಲ್ಲಿ ಸಿ, ಡಿ ನೌಕರರ ವರ್ಗಾವಣೆ

    ಬೆಂಗಳೂರು: ರಾಜ್ಯದಲ್ಲಿ ಇನ್ಮುಂದೆ ಸರ್ಕಾರಿ ಉದ್ಯೋಗಿಗಳಿಗೆ 4ನೇ ಶನಿವಾರವೂ ಸರ್ಕಾರಿ ರಜೆ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ.

    ಸರ್ಕಾರವನ್ನು ಮತ್ತೆ ಅಭಿವೃದ್ಧಿ ಹಳಿಗೆ ತರಲು ಹಾಗೂ ತಮ್ಮ ಗ್ರಾಮವಾಸ್ತವ್ಯಕ್ಕೆ ಮುಂಚೆ ಎಂಬಂತೆ ಸಿಎಂ ಕುಮಾರಸ್ವಾಮಿ ಅವರು ಇವತ್ತು ಕ್ಯಾಬಿನೆಟ್ ಸಭೆ ನಡೆಸಿದರು. ಸಭೆಯ ಬಳಿಕ ಮಾಧ್ಯಮಗಳಿಗೆ ಸಚಿವ ಕೃಷ್ಣಬೈರೇಗೌಡ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರದ ಬಗ್ಗೆ ಮಾಹಿತಿ ನೀಡಿದರು.

    ಸಂಪುಟದ ನಿರ್ಧಾರಗಳು
    17 ರಿಂದ 18 ರಾಜ್ಯಗಳು ಐದು ದಿನಗಳ ಕೆಲಸದ ದಿನಗಳನ್ನು ಪಾಲನೆ ಮಾಡುತ್ತಿವೆ. ಇನ್ನು ಕೆಲವು ರಾಜ್ಯಗಳಲ್ಲಿ ಎರಡು ಶನಿವಾರ ರಜೆ ದಿನ ನೀಡುತ್ತಿವೆ. ನಮ್ಮ ರಾಜ್ಯದಲ್ಲಿ ನಾಲ್ಕನೇ ಶನಿವಾರ ಸರ್ಕಾರಿ ರಜೆ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಇನ್ನು ಮುಂದೆ ನಾಲ್ಕನೇ ಶನಿವಾರ ಸರ್ಕಾರಿ ರಜೆ ದಿನವಾಗಿದೆ. ಆದರೆ ಸರ್ಕಾರಿ ನೌಕರರಿಗೆ ನೀಡಿದ್ದ ವರ್ಷಕ್ಕೆ 15 ದಿನಗಳ ಸಾಂದರ್ಭಿಕ ರಜೆ(ಸಿಎಲ್) 10 ದಿನಗಳಿಗೆ ಇಳಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

    ಜಿಂದಾಲ್ ಸಂಸ್ಥೆಯಲ್ಲಿ ಕನ್ನಡಿಗರು ಮತ್ತು ಸ್ಥಳೀಯರಿಗೆ ಉದ್ಯೋಗ ಕೊಡುವುದನ್ನು ಖಾತ್ರಿ ಪಡಿಸಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಜಿಂದಾಲ್ ಸಂಸ್ಥೆಗೆ 3,600 ಎಕರೆ ಜಮೀನನ್ನು ಲೀಸ್ ಕಂ ಸೇಲ್ ಡೀಡ್ ಮಾಡಿಕೊಡಬೇಕು ಎಂದು 2006ರಲ್ಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದದ ಮೇರೆಗೆ ಜಿಂದಾಲ್ ಸಂಸ್ಥೆ ಕರಾರು ಒಪ್ಪಂದದ ಷರತ್ತುಗಳನ್ನು ಪೂರ್ಣಗೊಳಿಸಿರುವ ಕಾರಣ ಅನಿವಾರ್ಯವಾಗಿ ಭೂಮಿ ಕ್ರಯ ಮಾಡಿಕೊಡಲಾಗುತ್ತಿದೆ ಎಂದು ಸಚಿವರು ಸ್ಪಷ್ಟನೆ ಕೊಟ್ಟರು.

    ಗ್ರೂಪ್ ಸಿ ಮತ್ತು ಡಿ ನೌಕಕರ ವರ್ಗಾವಣೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ತೀರ್ಮಾನ ಮಾಡಿದ್ದು. ಅದಕ್ಕಾಗಿ ಕರಡು ಕಾನೂನು ಜಾರಿಗೆ ತರಲು ಸಂಪುಟ ನಿರ್ಧಾರ ಮಾಡಿದೆ. ಈ ಕಾನೂನು ಬರುವ ಅಧಿವೇಶನದಲ್ಲಿ ಜಾರಿಗೆ ಮಾಡಿ ಸಿಇಟಿ ಮಾದರಿಯಲ್ಲೇ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲಾಗುತ್ತದೆ. ಆದರೆ ಸಿ ಗ್ರೂಪ್‍ಗೆ 5 ವರ್ಷ ಡಿ ಗ್ರೂಪ್‍ಗೆ 7 ವರ್ಷ ಕನಿಷ್ಠ ವರದಿ ನಿಗದಿ ಮಾಡಲಾಗಿದೆ. ಬೀದರ್, ಕಲಬುರ್ಗಿ, ಯಾದಗಿರಿ, ಉತ್ತರ ಕನ್ನಡ, ಕೊಡಗು, ಉಡುಪಿ, ಮಂಗಳೂರು ಜಿಲ್ಲೆಗಳಲ್ಲಿ ಖಾಲಿ ಹುದ್ದೆಗಳಿದ್ದು, ಖಾಲಿ ಇರುವ ಎಲ್ಲ ಜಿಲ್ಲೆಗಳಿಗೂ ನೌಕರರನ್ನು ನೇಮಕಾತಿ ಮಾಡಲು ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

    ರಾಜ್ಯದಲ್ಲಿ 16 ಸಾವಿರ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣ ಮಾಡಿ ಅವುಗಳ ನಿರ್ವಹಣೆ ಮಾಡಲು ಗ್ರಾಮ ಪಂಚಾಯತ್‍ಗಳಿಗೆ ವಹಿಸಲಾಗಿತ್ತು. ಆದರೆ ಗ್ರಾಮ ಪಂಚಾಯತ್‍ಗಳು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಆದರ ಮೇಲೆ ಆರೋಪಗಳು ಬಂದಿವೆ. ಹೀಗಾಗಿ ಮಾರ್ಗಸೂಚಿ ಸಿದ್ದಪಡಿಸಿ, ನಿರ್ವಹಣೆ ಮಾಡಲು ಟೆಂಡರ್ ಮೂಲಕ ಖಾಸಗಿಯವರಿಗೆ ಹೊರಗುತ್ತಿಗೆ ನೀಡಲು ನಿರ್ಧಾರ ಮಾಡಲಾಗಿದೆ. ಶುದ್ಧಕುಡಿಯುವ ನೀರಿನ ಘಟಕಗಳಲ್ಲಿ ಕಾಯಿನ್‍ನಿಂದ ಸ್ಮಾರ್ಟ್ ಕಾರ್ಡ್‍ಗೆ ಮಾರ್ಪಾಡು ಮಾಡಲು ತೀರ್ಮಾನ ಮಾಡಲಾಗಿದೆ. ಘಟಕದ ರಿಪೇರಿಗೆ ಸರಾಸರಿ 3 ಸಾವಿರ ನೀಡಲು ಒಪ್ಪಿಗೆ ನೀಡಿದ್ದು 5 ವರ್ಷಕ್ಕೆ 233 ಕೋಟಿ ಅನುದಾನ ಇದಕ್ಕಾಗಿ ನೀಡಲಾಗಿದೆ ಎಂದು ವಿವರಿಸಿದರು.

    ಕೆಪಿಎಸ್ಸಿ 1998 ಗೆಜೆಟೆಡ್ ಪ್ರೊಬೆಷನರಿ ನೇಮಕ ವಿವಾದ ಬಗ್ಗೆ ಕ್ಯಾಬಿನೆಟ್‍ನಲ್ಲಿ ಚರ್ಚೆ ಮಾಡಿದ್ದು, ಅಧಿಕಾರ ಪಡೆದವರು, ವಂಚಿತರು ಇಬ್ಬರಿಗೂ ಅನ್ಯಾಯವಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಇದರ ಬಗ್ಗೆ ಕಳೆದ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಆದರೆ ಆ ತೀರ್ಮಾನದ ವಿರುದ್ಧ 1999, 2004 ರಲ್ಲಿ ಪ್ರಮೋಷನ್ ಆದವರು ದೂರು ನೀಡಿದ್ದರು. ಹೀಗಾಗಿ ಅವರಿಗೂ ತೊಂದರೆಯಾಗದಂತೆ ಅನುಷ್ಠಾನದ ವೇಳೆ ಭರ್ತಿ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

    ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆಲ ಭಾಗಕ್ಕೆ ಅಂತರ್ಜಲಮಟ್ಟ ಹೆಚ್ಚಳಕ್ಕೆ ಬೆಂಗಳೂರು ತ್ಯಾಜ್ಯ ಸಂಸ್ಕರಣ ನೀರು ಮೂಲಕ ಕೆರೆ ತುಂಬಿಸುವ ಮೊದಲನೇ ಹಂತದಲ್ಲಿ 20 ಕೆರೆಗಳು ತುಂಬಿವೆ. ಈಗ ಎರಡನೇ ಹಂತದ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದ್ದು ಟೆಂಡರ್ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಬೆಂಗಳೂರಿನಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ತ್ಯಾಜ್ಯ ಸಂಸ್ಕರಣ ನೀರು ಹರಿಸುವ ಎರಡನೇ ಹಂತದ ಯೋಜನೆಗೆ 455 ಕೋಟಿ ರೂನ್ನು ಬಿಡುಗಡೆ ಮಾಡಲು ಸಂಪುಟ ಒಪ್ಪಿಗೆ ಸೂಚಿಸಿದೆ ಎಂದರು.

    ಈ ಸಚಿವ ಸಂಪುಟ ಸಭೆಯಲ್ಲಿ ಸಚಿವಾಲಯದ ವರ್ಗಾವಣೆ ಬಗ್ಗೆ ಚರ್ಚೆಯಾಗಿಲ್ಲ. ಏಕೆಂದರೆ ಆದಕ್ಕೆ ಪ್ರತ್ಯೇಕ ನಿಯಮಾವಳಿಗಳಿವೆ ಇಲ್ಲೇ ಭರ್ತಿಯಾಗುತ್ತದೆ ಮತ್ತು ಇಲ್ಲೇ ವರ್ಗಾವಣೆಯಾಗಲಿದೆ. ಚರ್ಚೆಯಾಗುವುದಕ್ಕೆ ಮುಕ್ತ ಅವಕಾಶವಿದೆ ಆದ್ದರಿಂದ ಚರ್ಚೆಯಾಗಿಲ್ಲ. ಕೊಪ್ಪಳ ಮೆಡಿಕಲ್ ಕಾಲೇಜಿಗೆ 450 ಹೆಚ್ಚುವರಿ ಹಾಸಿಗೆ ನಿರ್ಮಾಣಕ್ಕೆ ಈ ಹಿಂದೆ ಒಪ್ಪಿಗೆ ನೀಡಲಾಗಿತ್ತು. ಈ ಹಿಂದೆ ನೀಡಿದ್ದ 90 ಕೋಟಿ ಕಾಮಗಾರಿ ಜೊತೆಗೆ ಹೆಚ್ಚುವರಿ 14 ಕೋಟಿ ರೂ. ಕಾಮಗಾರಿಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.

  • ಸಬ್ ಅರ್ಬನ್ ರೈಲ್ವೇ ಯೋಜನೆಯ ಚೆಂಡು ಕೇಂದ್ರದ ಅಂಗಳದಲ್ಲಿದೆ – ಡಿವಿಎಸ್‍ಗೆ ಸಿಎಂ ಟಾಂಗ್

    ಸಬ್ ಅರ್ಬನ್ ರೈಲ್ವೇ ಯೋಜನೆಯ ಚೆಂಡು ಕೇಂದ್ರದ ಅಂಗಳದಲ್ಲಿದೆ – ಡಿವಿಎಸ್‍ಗೆ ಸಿಎಂ ಟಾಂಗ್

    ಬೆಂಗಳೂರು: ಸಬ್ ಅರ್ಬನ್ ರೈಲು ಯೋಜನೆಗೆ ರಾಜ್ಯ ಸರ್ಕಾರದಿಂದ ವಿಳಂಬವಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಸಚಿವ ಡಿ.ವಿ ಸದಾನಂದಗೌಡ ಅವರು ಆರೋಪಿಸಿದ್ದರು. ಈ ಆರೋಪವನ್ನು ತಳ್ಳಿಹಾಕಿರುವ ಸಿಎಂ ಕುಮಾರಸ್ವಾಮಿ ಅವರು ಚೆಂಡು ಈಗ ಕೇಂದ್ರದ ಅಂಗಳದಲ್ಲಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಸಬ್ ಅರ್ಬನ್ ಯೋಜನೆಗೆ ಕೇಂದ್ರದಿಂದ ಆಗಬೇಕಾದ ಎಲ್ಲಾ ಕೆಲಸಗಳನ್ನು ಮಾಡಿಕೊಡಲಾಗಿದೆ. ಆದರೆ ಯೋಜನೆ ಮುಂದಕ್ಕೆ ಹೋಗುತ್ತಿಲ್ಲ. ಇದಕ್ಕೆ ರಾಜ್ಯ ಸರ್ಕಾರ ಕಾರಣ ಎಂದು ಡಿ.ವಿ ಸದಾನಂದಗೌಡ ಆರೋಪ ಮಾಡಿದ್ದರು. ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು, ರಾಜ್ಯದ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲದೆ ಕೇಂದ್ರ ಸಚಿವರು ಮಾತನಾಡುವುದು ಶೋಭೆಯಲ್ಲ ಎಂದು ತಿರುಗೇಟು ನೀಡಿದ್ದಾರೆ.

    “ರಾಜ್ಯ ಸರ್ಕಾರದಿಂದ ಮೇಕೆದಾಟು ಯೋಜನೆ ಸಮಗ್ರ ಯೋಜನಾ ವರದಿ(ಡಿಪಿಆರ್) ಈಗಾಗಲೇ ಕೇಂದ್ರಕ್ಕೆ ಸಲ್ಲಿಸಿದ್ದೇವೆ. ಸಬ್ ಅರ್ಬನ್ ರೈಲು ಯೋಜನೆಯ ಕುರಿತು ಚರ್ಚೆಯಾಗಿದೆ. ಫೆಬ್ರವರಿ ಕೊನೆಯ ವಾರದಲ್ಲಿ ಸ್ವತಃ ರೈಲ್ವೆ ಸಚಿವ ಪಿಯೂಷ್ ಗೋಯಲ್ ಜೊತೆ ಸಭೆ ನಡೆದಿದೆ. ಎಲ್ಲ ತೊಡಕುಗಳನ್ನು ನಿವಾರಿಸುವ ಕುರಿತು ಚರ್ಚೆ ನಡೆಸಿದ್ದರು. ಅದರಂತೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಂದದ ಷರತ್ತುಗಳನ್ನು ಅನುಮೋದಿಸಿ ಕಳುಹಿಸಲಾಗಿತ್ತು. ಚೆಂಡು ಈಗ ಕೇಂದ್ರದ ಅಂಗಳದಲ್ಲಿದೆ. ನಿಜವಾಗಿಯೂ ಕಾಳಜಿ ಇದ್ದರೆ ‘ರಾಜಕೀಯ ಬೇಡ’ ಎನ್ನುವವವರು ರಾಜಕೀಯ ಬಿಟ್ಟು ರಾಜ್ಯದ ಯೋಜನೆಗಳಿಗೆ ನೆರವು ಒದಗಿಸುವುದು ಉತ್ತಮ” ಎಂದು ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ.

    ಡಿವಿಎಸ್ ಆರೋಪವೇನು?
    ಸೋಮವಾರ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಸದಾನಂದಗೌಡರು, ನಾನು ಕೇಂದ್ರ ರೈಲ್ವೆ ಮಂತ್ರಿಯಾಗಿದ್ದಾಗ ಐದು ವರ್ಷದಿಂದ ನಿರಂತರ ಚರ್ಚೆ ಮಾಡಿ ಕೇಂದ್ರ ಬಜೆಟ್‍ನಲ್ಲಿಲ್ಲಿ 17 ಸಾವಿರ ಕೋಟಿ ರೂ ಬಿಡುಗಡೆ ಮಾಡಿಸಿದ್ದೆ. ಆದರಂತೆ ಸಬ್ ಅರ್ಬನ್ ರೈಲು ಯೋಜನೆಯ ವೆಚ್ಚದಲ್ಲಿ ಕೇಂದ್ರ ರಾಜ್ಯಕ್ಕೆ 50:50 ವೆಚ್ಚಕ್ಕೆ ಇಳಿಸಿ ಆರು ಪ್ರಾಥಮಿಕ ರೈಲು ಕೊಟ್ಟು ಯೋಜನೆಯನ್ನು ಆರಂಭ ಮಾಡಿದ್ದೆವು. ಆದರೆ ಈ ಯೋಜನೆ ಇನ್ನೂ ಮುಂದಕ್ಕೆ ಹೋಗಿಲ್ಲ ಇದಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪ ಮಾಡಿದ್ದರು.

    ಸಬ್ ಅರ್ಬನ್ ಯೋಜನೆಗೆ ಕೇಂದ್ರ ಸರ್ಕಾದಿಂದ ಆಗಬೇಕಾದ ಎಲ್ಲ ಕೆಲಸಗಳನ್ನು ಮಾಡಿಕೊಡಲಾಗಿದೆ. ಆದರೆ ಯೋಜನೆ ಮುಂದಕ್ಕೆ ಹೋಗುತ್ತಿಲ್ಲ. ಈ ಸಂಬಂಧ ನಾನು ಸದ್ಯದಲ್ಲೇ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆಯುತ್ತೇನೆ ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಜೊತೆ ಸೇರಿ ಯೋಜನೆ ಸಂಬಂಧ ಮಾತನಾಡುತ್ತೇನೆ ಎಂದು ಹೇಳಿದ್ದರು.

  • ಸಬ್ ಅರ್ಬನ್ ರೈಲು ಯೋಜನೆಗೆ ರಾಜ್ಯ ಸರ್ಕಾರದಿಂದ ವಿಳಂಬ – ಡಿವಿಎಸ್ ಆರೋಪ

    ಸಬ್ ಅರ್ಬನ್ ರೈಲು ಯೋಜನೆಗೆ ರಾಜ್ಯ ಸರ್ಕಾರದಿಂದ ವಿಳಂಬ – ಡಿವಿಎಸ್ ಆರೋಪ

    ಬೆಂಗಳೂರು: ಸಬ್ ಅರ್ಬನ್ ರೈಲು ಯೋಜನೆಗೆ ಕೇಂದ್ರ ಸರ್ಕಾದಿಂದ ಹಣ ಬಿಡುಗಡೆಯಾಗಿದ್ದರೂ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಸಚಿವ ಡಿ.ವಿ ಸದಾನಂದಗೌಡ ಆರೋಪ ಮಾಡಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಕೇಂದ್ರ ರೈಲ್ವೆ ಮಂತ್ರಿಯಾಗಿದ್ದಾಗ ಐದು ವರ್ಷದಿಂದ ನಿರಂತರ ಚರ್ಚೆ ಮಾಡಿ ಕೇಂದ್ರ ಬಜೆಟ್‍ನಲ್ಲಿಲ್ಲಿ 17 ಸಾವಿರ ಕೋಟಿ ರೂ ಬಿಡುಗಡೆ ಮಾಡಿಸಿದ್ದೆ. ಆದರಂತೆ ಸಬ್ ಅರ್ಬನ್ ರೈಲು ಯೋಜನೆಯ ವೆಚ್ಚದಲ್ಲಿ ಕೇಂದ್ರ – ರಾಜ್ಯಕ್ಕೆ 50:50 ವೆಚ್ಚಕ್ಕೆ ಇಳಿಸಿ ಆರು ಪ್ರಾಥಮಿಕ ರೈಲು ಕೊಟ್ಟು ಯೋಜನೆಯನ್ನು ಆರಂಭ ಮಾಡಿದ್ದೆವು. ಆದರೆ ಈ ಯೋಜನೆ ಇನ್ನೂ ಮುಂದಕ್ಕೆ ಹೋಗಿಲ್ಲ ಇದಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪ ಮಾಡಿದರು.

    ಸಬ್ ಅರ್ಬನ್ ಯೋಜನೆಗೆ ಕೇಂದ್ರ ಸರ್ಕಾದಿಂದ ಆಗಬೇಕಾದ ಎಲ್ಲ ಕೆಲಸಗಳನ್ನು ಮಾಡಿಕೊಡಲಾಗಿದೆ. ಆದರೆ ಯೋಜನೆ ಮುಂದಕ್ಕೆ ಹೋಗುತ್ತಿಲ್ಲ. ಈ ಸಂಬಂಧ ನಾನು ಸದ್ಯದಲ್ಲೇ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆಯುತ್ತೇನೆ ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಜೊತೆ ಸೇರಿ ಯೋಜನೆ ಸಂಬಂಧ ಮಾತನಾಡುತ್ತೇನೆ ಎಂದರು.

    ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಅವರು ಈಗಾಗಲೇ ನನ್ನ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯಲ್ಲಿ ಹಲವು ಮಹತ್ತರ ಕೆಲಸ ಮಾಡಿದ್ದಾರೆ. ನಾನು ಇಲಾಖೆಯ ಕೆಲಸಗಳಿಗೆ ಇನ್ನಷ್ಟು ವೇಗ ಒದಗಿಸುತ್ತೇನೆ. ಜನೌಷಧಿ ಕೇಂದ್ರಗಳು ಜನರ ನಡುವೆ ಮೆಚ್ಚುಗೆ ಗಳಿಸಿವೆ. ಕೆಲವು ಕಡೆ ಜನೌಷಧಿ ಕೇಂದ್ರಗಳಿಗೆ ಔಷಧಿಗಳ ಕೊರತೆ ಆಗಿದ್ದು ಔಷಧಿಗಳ ಕೊರತೆ ನಿವಾರಿಸಲು ಕ್ರಮಕೈಗೊಳ್ಳುತ್ತೇನೆ. ಕ್ಯಾನ್ಸರ್ ಸಂಬಂಧಿ ಔಷಧಿಗಳನ್ನೂ ಜನೌಷಧಿಗೆ ತರುತ್ತೇವೆ ಎಂದು ಭರವಸೆ ನೀಡಿದರು.

    ಇದೇ ವೇಳೆ ಪ್ರಥಮ ಕೇಂದ್ರ ಕ್ಯಾಬಿನೆಟ್ ಸಭೆಯ ಬಗ್ಗೆ ಮಾತನಾಡಿ, ಈ ಸಭೆಯಲ್ಲಿ ಪ್ರಧಾನಿ ಮೋದಿ ಅವರು ರೈತಪರ ನಿಲುವುಗಳನ್ನು ಕೈಗೊಂಡಿದ್ದಾರೆ. ಇದು ಕೇಂದ್ರ ಸರ್ಕಾರದ ಮುಂದಿನ ನಡೆಗೆ ದಿಕ್ಸೂಚಿಯಾಗಿದೆ. ಮುಂದಿನ 15 ದಿನಗಳಲ್ಲಿ ನನ್ನ ಗೃಹ ಕಚೇರಿಯಲ್ಲಿ ಸಣ್ಣ ಕಾರ್ಯಾಲಯ ಸ್ಥಾಪನೆ ಮಾಡುತ್ತೇವೆ. ನಾವು ನಾಲ್ವರು ಕೇಂದ್ರ ಮಂತ್ರಿಗಳು ರಾಜ್ಯದ ಜನರಿಗೆ ಸದಾ ಲಭ್ಯ. ಮುಂದಿನ ನೂರು ದಿನಗಳಲ್ಲಿ ಏನಾಗಬೇಕು ಎನ್ನುವ ರೂಪುರೇಷೆ ಸಿದ್ಧಪಡಿಸಲು ಪ್ರಧಾನಿಯವರು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

    ಸಿಎಂ ಕುಮಾರಸ್ವಾಮಿ ಅವರು ಗ್ರಾಮವಾಸ್ತವ್ಯದ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಹಿಂದೆ ಕುಮಾರಸ್ವಾಮಿ ಮಾಡಿದ ಗ್ರಾಮವಾಸ್ತವ್ಯ ಅವರಿಗೆ ಸರಿಯಾದ ಫಲಕೊಟ್ಟಿಲ್ಲ. ಅವರು ವಾಸ್ತವ್ಯ ಮಾಡಿದ್ದ ಹಳ್ಳಿಗಳಲ್ಲೇ ಅವರಿಗೆ ತಿರುಗು ಬಾಣವಾಗಿತ್ತು. ಹಾಗಾಗಿ ಈಗ ಶಾಲೆಯಲ್ಲಿ ವಾಸ್ತವ್ಯ ಮಾಡಲು ಹೊರಟಿದ್ದಾರೆ. ಹುಡುಗರು ಶಾಲೆಗಳಿಗೆ ಕಲಿಯಲು ಹೋಗುತ್ತಾರೆ. ಈಗ ಕುಮಾರಸ್ವಾಮಿಯವರೂ ಸಹ ಶಾಲಾ ವಾಸ್ತವ್ಯವದ ಮೂಲಕ ಕಲಿಯಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.

    ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸಿಎಂ ಅವರ ಕಾಲೆಳೆದ ಡಿವಿಎಸ್, ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ 24 ಗಂಟೆಗಳಲ್ಲಿ ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎಂದು ನಾನು ಭವಿಷ್ಯ ಹೇಳಿದ್ದು ನಿಜ. ಅದರಂತೆ ಕುಮಾರಸ್ವಾಮಿ ರಾಜೀನಾಮೆಗೆ ಮುಂದಾಗಿದ್ದು ನಿಜ. ಆದರೆ ಬೇರೆಯವರು ಬಾಗಿಲು ಬಂದ್ ಮಾಡಿ ಅವರನ್ನು ಒಳಗೆ ಕೂರುವಂತೆ ಮಾಡಿದರು. ನಾನೇನು ಮಾಡಲಿ? ಭವಿಷ್ಯ ಕೇಳಿಕೊಂಡು ಬಂದು ಗೆಲ್ಲುತ್ತೇನೆ ಎಂದ ದೇವೇಗೌಡರೇ ಸೋತುಹೋದರು. ಇನ್ನು ನಮ್ಮ ಭವಿಷ್ಯ ಹೇಗೆ ಸತ್ಯವಾಗುತ್ತದೆ ಎಂದು ವ್ಯಂಗ್ಯವಾಡಿದರು.

    ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಸುಳಿವು ನೀಡಿದ ಸದಾನಂದಗೌಡರು, ನಾವು ಮೈತ್ರಿ ಸರ್ಕಾರ ಬೀಳಿಸಲು ಹೋಗಲ್ಲ. ಅವರಾಗಿಯೇ ಬೀಳಿಸಿದರೆ ನಾವು ಹೊಣೆಯಲ್ಲ. ಹಾಗೇನಾದರೂ ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿದೆ. ರಾಜ್ಯದಲ್ಲಿ ನಾವು ಮತ್ತೆ ಬಹುದೊಡ್ಡ ಪಕ್ಷವಾಗಿ ಅಧಿಕಾರ ಹಿಡಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ವಿಷವಾಗಿದೆ ಜೀವಜಲ – ಗ್ರಾಮದಲ್ಲಿ ನೀರು ಕುಡಿದ್ರೆ ಬರುತ್ತೆ ಕ್ಯಾನ್ಸರ್!

    ವಿಷವಾಗಿದೆ ಜೀವಜಲ – ಗ್ರಾಮದಲ್ಲಿ ನೀರು ಕುಡಿದ್ರೆ ಬರುತ್ತೆ ಕ್ಯಾನ್ಸರ್!

    ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ, ಏವೂರ ದೊಡ್ಡ ತಾಂಡದ ಜನರಿಗೆ ಕುಡಿಯುವ ನೀರು ವಿಷವಾಗಿ ಪರಿಣಮಿಸಿದೆ. ಈ ಗ್ರಾಮದ ನೀರು ಕುಡಿಯಲು ಯೋಗ್ಯವಲ್ಲ ಎಂದು ಸ್ವತಃ ಜಿಲ್ಲಾಡಳಿತವೇ ಒಪ್ಪಿಕೊಂಡಿದೆ.

    ಏವೂರ ಗ್ರಾಮದ ಕುಡಿಯುವ ನೀರಿನಲ್ಲಿ ಕ್ಯಾನ್ಸರ್ ಕಾರಕ ಆರ್ಸೆನಿಕ್ ಪತ್ತೆಯಾಗಿದ್ದು, ಈ ಊರಿನ ಜನ ನಿತ್ಯ ಕುಡಿಯುವ ನೀರಿನ ಬದಲು ವಿಷ ಕುಡಿಯುತ್ತಿದ್ದಾರೆ. ಏವೂರ ತಾಂಡದ ನೀರು ಕುಡಿಯಲು ಯೋಗ್ಯವಲ್ಲ ಅಂತ ಸ್ವತಃ ಜಿಲ್ಲಾಡಳಿತ ಒಪ್ಪಿಕೊಂಡಿದೆ. ಆದರೆ ಕುಡಿಯುವ ನೀರನ್ನು ಸರಬರಾಜು ಮಾಡುವಲ್ಲಿ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದ್ದು, ಜನರ ಜೀವನದ ಜೊತೆ ಆಟವಾಡುತ್ತಿದೆ.

    ಗ್ರಾಮದ ನೀರಿನಲ್ಲಿ ಕೇವಲ ಆರ್ಸೆನಿಕ್ ಮಾತ್ರವಲ್ಲದೆ, ಅತಿ ಹೆಚ್ಚು ಫ್ಲೋರೈಡ್, ಮತ್ತು ವಿವಿಧ ವಿಷಕಾರಿ ಅಂಶಗಳ ಮಿಶ್ರಣವಾಗಿದ್ದು, ನಿತ್ಯ ನೀರನ್ನು ಕುಡಿಯುವ ಊರಿನ ಜನರಲ್ಲಿ ಕ್ಯಾನ್ಸರ್ ಮಾತ್ರವಲ್ಲದೆ ಬುದ್ಧಿಮಾಂದ್ಯತೆ, ವಿಕಲಾಂಗ, ಮೂಳೆ ರೋಗ, ಚರ್ಮ ರೋಗಗಳು ತಾಂಡವಾಡುತ್ತಿದೆ. ಅಷ್ಟೇ ಅಲ್ಲದೆ ನೀರನ್ನು ಶುದ್ಧೀಕರಣ ಮಾಡಿದರೂ ಕೂಡ ವಿಷಕಾರಿ ಅಂಶ ಕಡಿಮೆ ಆಗುವುದಿಲ್ಲವಂತೆ. ಹೀಗಾಗಿ ಬೇರೆ ದಾರಿ ಇಲ್ಲದೆ ಏವೂರ ತಾಂಡದ ಜನ ಇದೇ ನೀರನ್ನು ಕುಡಿಯುತ್ತಿದ್ದಾರೆ.

    ಇದರಿಂದ ಅಕ್ಕ-ಪಕ್ಕದ ಊರಿನವರು ಈ ತಾಂಡವನ್ನು ರೋಗಸ್ತ ತಾಂಡ ಎಂದು ಕರೆಯುವಂತಾಗಿದೆ. ಇಷ್ಟೇ ಅಲ್ಲದೇ ಈ ಊರಿನ ಹೆಣ್ಣು ಮಕ್ಕಳನ್ನು ಮದುವೆ ಆಗಲು ಸಹ ಯಾರು ಮುಂದಾಗುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಈ ಊರಿನ ಜನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

    ಈ ಬಗ್ಗೆ 2018ರಲ್ಲಿ ನ್ಯಾಷನಲ್ ಸೇವಾ ಡಾಕ್ಟರ್ ಅಸೋಸಿಯೇಷನ್ ಮತ್ತು ತಾಂಡ ಅಭಿವೃದ್ಧಿ ನಿಗಮ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ, ಏವೂರು ತಾಂಡದ ಜನ ನಿತ್ಯ ಕಣ್ಣಿನೀರಿನಲ್ಲಿ ಕೈತೊಳೆಯುವಂತಾಗಿದೆ.

  • ಈ ರಾಜ್ಯ ಸರ್ಕಾರ ಜನರ ಪಾಲಿಗೆ ಬದುಕಿಲ್ಲ, ಸತ್ತೋಗಿದೆ: ಬಿಎಸ್‍ವೈ

    ಈ ರಾಜ್ಯ ಸರ್ಕಾರ ಜನರ ಪಾಲಿಗೆ ಬದುಕಿಲ್ಲ, ಸತ್ತೋಗಿದೆ: ಬಿಎಸ್‍ವೈ

    ಶಿವಮೊಗ್ಗ: ಈ ರಾಜ್ಯದಲ್ಲಿ ಮೈತ್ರಿ ಸರ್ಕಾರ ಬದುಕಿಲ್ಲ ಸತ್ತು ಹೋಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಶಿವಮೊಗ್ಗ ಗ್ರಾಮಾಂತರ ಮತದಾರರಿಗೆ ಮತ್ತು ಸಾರ್ವಜನಿಕರಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಯಡಿಯೂರಪ್ಪನವರು, ಈ ಹಿಂದೆ ಗುತ್ತಿಗೆ ನೀಡಲಾಗಿದ್ದ 3,667 ಎಕರೆ ಜಾಗವನ್ನು ಜಿಂದಾಲ್ ಸಂಸ್ಥೆಗೆ ಒಳವ್ಯವಹಾರ ಮಾಡಿಕೊಂಡು ಮಾರಲು ಹೊರಟಿದ್ದಾರೆ. ಸರ್ಕಾರಿ ಆಸ್ತಿ ಮಾರಾಟ ಮಾಡಲು ಹೊರಟಿರುವ ಈ ರೀತಿಯ ಸರ್ಕಾರ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

    ರಾಜ್ಯದಲ್ಲಿ ಕೆಟ್ಟ ಪರಿಸ್ಥಿತಿ ಇದೆ. ಧರ್ಮಸ್ಥಳದಲ್ಲಿ ಕುಡಿಯಲು ನೀರಿಲ್ಲ ಬರಬೇಡಿ ಎಂದು ಅಲ್ಲಿನ ಧರ್ಮಾಧಿಕಾರಿ ಹೇಳುವ ಪರಿಸ್ಥಿತಿ ಬಂದಿದೆ. ನನಗೆ ನೆನಪು ಇರುವ ಹಾಗೆ 45 ವರ್ಷದಿಂದ ಈ ಪರಿಸ್ಥಿತಿ ಬಂದಿರಲಿಲ್ಲ. ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಇತಿಹಾಸ ಬರೆಯಲು ಯಾರಾದರೂ ಕುಳಿತರೆ ಎಷ್ಟು ಬರೆದರೂ ಸಾಲದು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರ ಕ್ಷೇತ್ರದಲ್ಲಿ 7 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಇತಿಹಾಸ ನಿರ್ಮಿಸಿದೆ. ಪ್ರಧಾನಿ ಮೋದಿ ಮತ್ತು ನನ್ನ ಬಗ್ಗೆ ಹಲವಾರು ಜನರು ಕೇವಲವಾಗಿ ಮಾತನಾಡಿದರು. ಆದರೆ ಮತದಾರರು ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ನಮ್ಮ ಪರವಾಗಿದ್ದಾರೆ. ಸುಮಲತಾ ಸೇರಿ ನಾವು 26 ಕ್ಷೇತ್ರ ಗೆದ್ದಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

    ಇದೇ ವೇಳೆ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧ ಲೇವಡಿ ಮಾಡಿದ ಯಡಿಯೂರಪ್ಪ, ಲೋಕಸಭೆಗೆ ಹೋಗುತ್ತೇನೆ ಎಂದುಕೊಂಡು ಹಿಂದಿ ಕಲಿಯಲು ಆರಂಭಿಸಿದರು. ಹಿಂದಿ ಕಲಿಯೋದು ಬಿಡಬೇಡಿ, ಮುಂದಿನ ಐದು ವರ್ಷದ ನಂತರ ಮತ್ತೆ ಬೇಕಾಗುತ್ತದೆ ಎಂದು ಕಾಲೆಳೆದರು.

    ಯಾವುದೇ ರಾಜಕೀಯ ಪಕ್ಷ ಮತ್ತೊಮ್ಮೆ ಶಿವಮೊಗ್ಗದಲ್ಲಿ ನಮ್ಮ ಎದುರು ಸ್ಪರ್ಧೆ ಮಾಡಬಾರದು. ಆ ರೀತಿಯ ಪಾಠವನ್ನು ನಮ್ಮ ಕಾರ್ಯಕರ್ತರು ಕಲಿಸಿದ್ದಾರೆ. ಮೋದಿ ಮುಂದೆ ಯಾರು ಚುನಾವಣೆಯಲ್ಲಿ ನಿಲ್ಲಲು ಆಗಲಿಲ್ಲ. ಲೋಕಸಭಾ ಚುನಾವಣೆಗೆ ಮೂರು ತಿಂಗಳ ಮೊದಲೇ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿತ್ತು. ಇದೇ ಬಿಜೆಪಿ ಗೆಲುವಿನ ಗುಟ್ಟು ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ರೈತರಿಗೆ ಅನ್ಯಾಯ ಆಗೋಕೆ ಬಿಡಲ್ಲ – ಸತೀಶ್ ಜಾರಕಿಹೊಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಟಾಂಗ್

    ರೈತರಿಗೆ ಅನ್ಯಾಯ ಆಗೋಕೆ ಬಿಡಲ್ಲ – ಸತೀಶ್ ಜಾರಕಿಹೊಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಟಾಂಗ್

    ಬೆಳಗಾವಿ: ಸರ್ಕಾರದ ಯೋಜನೆಯಿಂದ ಅನ್ಯಾಯ ಆದರೆ ಆಗಲಿ, ತೊಂದರೆ ಆಗಿದ್ದರೆ ಸಹಿಸಿಕೊಳ್ಳಬೇಕೇ ವಿನಃ ಪರ್ಯಾಯ ಮಾರ್ಗವಿಲ್ಲ ಎಂದಿದ್ದ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಟಾಂಗ್ ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಸರ್ಕಾರ ತೆಗೆದುಕೊಳ್ಳುವ ನಿರ್ಧಾರ ರೈತರ ವಿರುದ್ಧವಾಗಿದ್ದರೆ ನಾನು ನನ್ನ ರೈತರ ಪರ ನಿಲ್ಲುತ್ತೇನೆ. ಏಕಾಏಕಿ ರೈತರ ಅನುಮತಿ ಇಲ್ಲದೇ ಯಾವುದೇ ಯೋಜನೆ ಕೈಗೊಳ್ಳಲು ಆಗಲ್ಲ. ಆದ್ದರಿಂದ ಈ ಬಗ್ಗೆ ಕೂಗು ಎದ್ದಿದೆ ಎಂದರು.

    ರೈತರ ಜಮೀನಿಗೆ ಕೇವಲ 3 ಲಕ್ಷ ರೂ. ಮಾತ್ರ ಮಾಡಿದ್ದು, 2009 ರಲ್ಲಿಯೇ ಇದರ ಅನುಮತಿ ಲಭಿಸಿದೆ. ಆದರೆ ಇಷ್ಟು ಕಡಿಮೆ ಹಣ ನೀಡಿ ರೈತನಿಗೆ ಮೋಸ ಮಾಡಲಾಗುತ್ತಿದೆ. ನಾನು ರೈತರ ಪರ ನಿಲ್ಲುತ್ತಿದ್ದು, ಇದುವರೆಗೂ ಸರ್ಕಾರದ ಕಡೆಯಿಂದ ರೈತರ ಒಂದು ಸಭೆಯನ್ನ ನಡೆಸಿಲ್ಲ. ನಾನು ಈ ಬಗ್ಗೆ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿದ್ದು, ಈಗ ರೈತರ ಪರಿಹಾರ ಹಣ ಹೆಚ್ಚಿಸುವ ಹಾಗೂ ಬೇರೆ ಜಮೀನು ನೀಡುವ ಆಶ್ವಾಸನೆ ನೀಡಿದ್ದಾರೆ ಎಂದರು.

    ನಾನು ರೈತರ ಪರ ನಿಂತಿತ್ತು, ಜಮೀನು ಈಗಾಗಲೆ ಸರ್ಕಾರದ ಕೈ ಸೇರಿದೆ. ರೈತರಿಗೆ ಕಾನೂನು ಪ್ರಜ್ಞೆ ಕಡಿಮೆ ಇರುವುದರಿಂದ ಈ ಸಮಸ್ಯೆ ಆಗಿದೆ. ಕಡಿಮೆ ಪರಿಹಾರ ನೀಡಿ ಅವರ ಜೀವನಕ್ಕೆ ಆಧಾರವಾಗಿದ್ದ ನೆಲೆಯನ್ನು ತೆಗೆದುಕೊಂಡಿದ್ದಾರೆ. ಸಚಿವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಿಲ್ಲ. ಆದರೆ ರೈತರಿಗೆ ಅನ್ಯಾಯವಾದರೆ ರಾಜ್ಯ ಸರ್ಕಾರ, ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕಿಯಾಗಿ ನಾವೇ ಹೊಣೆ ತೆಗೆದುಕೊಳ್ಳಬೇಕಾಗುತ್ತದೆ. ರೈತರು ಯಾವುದೇ ಕಠಿಣ ಕ್ರಮಕ್ಕೆ ಮುಂದಾದರೆ ಅದಕ್ಕೆ ಸರ್ಕಾರವೇ ಹೊಣೆ. ಜಿಲ್ಲೆಯ ಅಭಿವೃದ್ಧಿಯೊಂದಿಗೆ ನನಗೆ ರೈತರ ಕ್ಷೇಮವೂ ಮುಖ್ಯ ಎಂದು ಸ್ಪಷ್ಟಪಡಿಸಿದರು. ಇದನ್ನು ಓದಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸತೀಶ್ ಜಾರಕಿಹೊಳಿ ಕಿಡಿ