Tag: State Government

  • ಅಕಾಡೆಮಿಗಳ ಅಧ್ಯಕ್ಷ, ಸದಸ್ಯರ ನೇಮಕಾತಿ ರದ್ದು

    ಅಕಾಡೆಮಿಗಳ ಅಧ್ಯಕ್ಷ, ಸದಸ್ಯರ ನೇಮಕಾತಿ ರದ್ದು

    ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ 15 ವಿವಿಧ ಅಕಾಡೆಮಿಗಳ ಅಧ್ಯಕ್ಷರ ಮತ್ತು ಸದಸ್ಯರ ನೇಮಕಾತಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ.

    ಇತ್ತೀಚೆಗಷ್ಟೇ ಎಲ್ಲ ಪ್ರಾಧಿಕಾರ ಹಾಗೂ ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಆಡಳಿತ ಮಂಡಳಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿತ್ತು. ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 15 ವಿವಿಧ ಅಕಾಡೆಮಿಗಳ ಅಧ್ಯಕ್ಷರುಗಳ ನೇಮಕಾತಿಯನ್ನು ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

    ಹಿಂದಿನ ಸರ್ಕಾರದ ಎಲ್ಲ ಯೋಜನೆಗಳನ್ನು ಬದಲಾಯಿಸುತ್ತಿರುವ ಬಿಜೆಪಿ ಸರ್ಕಾರ ಟಿಪ್ಪು ಜಯಂತಿಯನ್ನು ಸಹ ರದ್ದುಗೊಳಿಸಿತ್ತು. ಹಿಂದಿನ ಸರ್ಕಾರದ ವಿವಿಧ ಕಾರ್ಯಕ್ರಮಗಳು ಹಾಗೂ ಯೋಜನೆಗಳಲ್ಲಿ ಕೆಲವನ್ನು ರದ್ದುಗೊಳಿಸುತ್ತಿದೆ. ಕೆಲವನ್ನು ಮಾರ್ಪಾಡು ಮಾಡಲು ಹಾಗೂ ಹೆಸರು ಬದಲಾಯಿಸಲು ಚಿಂತನೆ ನಡೆಸಿದೆ.

  • ಟಿಪ್ಪು ಮಹಾನ್ ಸ್ವಾತಂತ್ರ್ಯ ಹೋರಾಟಗಾರ – ಕೋಲಾರದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ

    ಟಿಪ್ಪು ಮಹಾನ್ ಸ್ವಾತಂತ್ರ್ಯ ಹೋರಾಟಗಾರ – ಕೋಲಾರದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ

    ಕೋಲಾರ: ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ರದ್ದು ಪಡಿಸಿ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಟಿಪ್ಪು ಸೆಕ್ಯುಲರ್ ಸೇನೆ ಕಾರ್ಯಕರ್ತರು ಕೋಲಾರದಲ್ಲಿ ಪ್ರತಿಭಟನೆ ನಡೆಸಿದರು.

    ಕೋಲಾರ ನಗರದ ಮೆಕ್ಕೆ ವೃತ್ತದಲ್ಲಿ ನೂರಾರು ಕಾರ್ಯಕರ್ತರು ಮಾನವ ಸರಪಳಿ ರಚಿಸಿ ರಾಜ್ಯ ಸರ್ಕಾರ ಅನುಸರಿಸುತ್ತಿರುವ ಅಲ್ಪಸಂಖ್ಯಾತ ವಿರೋಧಿ ನೀತಿಯನ್ನು ಖಂಡಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಘೋಷಣೆ ಕೂಗಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತ ಪಡಿಸಿದರು.

    ಟಿಪ್ಪು ಒಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಮೈಸೂರು ಕೆಆರ್‍ಎಸ್ ನಿರ್ಮಾಣ ಮಾಡುವಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದ ಟಿಪ್ಪು ಜಯಂತಿಯನ್ನು ಆಚರಣೆ ನಿಷೇಧಿಸಿರುವುದು ಖಂಡನೀಯ. ಈ ಕೂಡಲೇ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಪಡಿಸಿರುವುದನ್ನು ಹಿಂಪಡೆದು ಟಿಪ್ಪು ಜಯಂತಿಯನ್ನು ಆಚರಣೆ ಮಾಡಲು ಅನುಮತಿ ನೀಡಿ ಸ್ವಾತಂತ್ರ್ಯ ಹೋರಾಟಗಾರನಿಗೆ ಸಿಗಬೇಕಾದ ಗೌರವವನ್ನು ನೀಡಬೇಕು ಎಂದು ಒತ್ತಾಯಿಸಿದರು.

    ಈ ಕೂಡಲೇ ಸರ್ಕಾರದ ತನ್ನ ಆದೇಶವನ್ನ ವಾಪಸ್ ಪಡೆಯಬೇಕು ಇಲ್ಲವಾದಲ್ಲಿ ಸಿಎಂ ಯಡಿಯೂರಪ್ಪ ಅವರು ಹೋದ ಕಡೆಯಲೆಲ್ಲ ಕಪ್ಪು ಪಟ್ಟಿ ಪ್ರದರ್ಶನ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

  • ಸರ್ಕಾರ ರದ್ದು ಪಡಿಸಿದ್ರೂ ಪಕ್ಷದ ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಿಸುತ್ತೇವೆ: ಎಚ್‍ಡಿಡಿ

    ಸರ್ಕಾರ ರದ್ದು ಪಡಿಸಿದ್ರೂ ಪಕ್ಷದ ಕಚೇರಿಯಲ್ಲಿ ಟಿಪ್ಪು ಜಯಂತಿ ಆಚರಿಸುತ್ತೇವೆ: ಎಚ್‍ಡಿಡಿ

    ಬೆಂಗಳೂರು: ಟಿಪ್ಪು ಜಯಂತಿಯನ್ನು ಬಿಜೆಪಿ ರದ್ದು ಮಾಡಿದ್ದು, ನಾವು ನಮ್ಮ ಕಚೇರಿಯಲ್ಲೇ ಟಿಪ್ಪು ಜಯಂತಿ ಆಚರಿಸುತ್ತೇವೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಿಳಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಜಯಂತಿಯನ್ನು ಬಿಜೆಪಿ ರದ್ದು ಮಾಡಿದೆ. ಆದರೆ, ನಾವು ನಮ್ಮ ಕಚೇರಿಯಲ್ಲೇ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡುತ್ತೇವೆ. ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರ ಟಿಪ್ಪು ಜಯಂತಿಯನ್ನು ಜಾರಿಗೆ ತಂದಿತ್ತು. ಮೈತ್ರಿ ಸರ್ಕರದ ನಂತರವೂ ಸಹ ಇದನ್ನು ಮುಂದುವರಿಸಲಾಗಿತ್ತು. ಇದೀಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಅವರು ರದ್ದು ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಾವು ಟಿಪ್ಪು ಜಯಂತಿಯನ್ನು ಹಳೆಯ ಜೆಡಿಎಸ್ ಕಚೇರಿಯಲ್ಲಿದ್ದಾಗಿನಿಂದಲೂ ಆಚರಿಸುತ್ತಾ ಬಂದಿದ್ದೇವೆ. ಸಿದ್ದರಾಮಯ್ಯನವರು ಅಧ್ಯಕ್ಷರಾಗಿದ್ದಾಗಲೂ ಆಚರಣೆ ಮಾಡಿದ್ದೇವೆ. ರಾಜಕೀಯಕ್ಕಾಗಿ ಇಂತಹ ನಿರ್ಧಾರ ಕೈಗೊಳ್ಳಬಾರದು. ನಾನು ಮುಖ್ಯಮಂತ್ರಿಯಗಿದ್ದಾಗ ಮತೀಯ ಅಲ್ಪ ಸಂಖ್ಯಾತರಿಗೆ 5 ರೆಶಿಡೆನ್ಸಿಯಲ್ ಶಾಲೆ ಪ್ರಾರಂಭಿಸಿ ಟಿಪ್ಪು ಹೆಸರನ್ನೇ ಇಟ್ಟಿದ್ದೆ. ಹೀಗಾಗಿ ಇನ್ನು ಮುಂದೆಯೂ ಸಹ ನಮ್ಮ ಜೆಡಿಎಸ್ ಕಚೇರಿಯಲ್ಲಿ ಟಿಪ್ಪು ಜಯಂತಿಯನ್ನು ಆಚರಿಸುತ್ತೇವೆ ಎಂದು ತಿಳಿಸಿದ್ದಾರೆ.

    ದ್ವೇಷದ ರಾಜಕಾರಣ ಮಾಡುವುದಿಲ್ಲ, ಎಂದು ಹೇಳುತ್ತಾರೆ. ಆದರೆ, ಇಂತಹ ನಿರ್ಧಾರ ಕೈಗೊಳ್ಳುತ್ತಾರೆ. ಮೂರೇ ದಿನದಲ್ಲಿ ಅವರ ಬಗ್ಗೆ ಏಕೆ ಮಾತನಾಡಬೇಕು. ಇನ್ನೂ ಸಮಯವಿದೆ ಈಗಲೇ ಏಕೆ ವಿರೋಧ ವ್ಯಕ್ತಪಡಿಸಬೇಕು. ಇನ್ನೂ ಮೂರು ವರ್ಷ ಎಂಟು ತಿಂಗಳುಗಳ ಕಾಲ ಆಡಳಿತ ನಡೆಸುತ್ತಾರೆ. ಹೇಗೆ ನಡೆಸುತ್ತಾರೋ ಕಾದು ನೋಡುತ್ತೇನೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಯಡಿಯೂರಪ್ಪನವರ ವಿರುದ್ಧ ಹರಿಹಾಯ್ದರು.

    2016 ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಣೆಯನ್ನು ಸಿದ್ದರಾಮಯ್ಯ ಅವರ ಸರ್ಕಾರ ಜಾರಿಗೆ ತಂದಿತ್ತು. ಮೊದಲು ಟಿಪ್ಪು ಜಯಂತಿಯನ್ನ ಅಲ್ಪಸಂಖ್ಯಾತ ಇಲಾಖೆಯಿಂದ ಆಚರಣೆ ಮಾಡಲಾಗುತ್ತಿದ್ದು, ಆ ಬಳಿಕ ಕನ್ನಡ ಸಂಸ್ಕೃತಿ ಇಲಾಖೆಯಿಂದ ಜಯಂತಿ ಆಚರಿಸಲಾಗುತ್ತಿತ್ತು. ಮಾಜಿ ಸಿಎಂ ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರವೂ ಆಚರಣೆಯನ್ನು ಮುಂದುವರಿಸಿತ್ತು.

    2018ರ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿಯನ್ನು ರದ್ದುಗೊಳಿಸುವುದಾಗಿ ಹೇಳಿತ್ತು. ಅಷ್ಟೇ ಅಲ್ಲದೇ ಸರ್ಕಾರದ ವತಿಯಿಂದಲೇ ನಡೆಯುತ್ತಿದ್ದ ಟಿಪ್ಪು ಜಯಂತಿ ಆಚರಿಸುತ್ತಿರುವ ಬಗ್ಗೆ ಬಿಜೆಪಿ ನಾಯಕರು ಪ್ರತಿಭಟಿಸಿದ್ದರು.

  • ಧರ್ಮ ಸಂಕಟದಲ್ಲಿ ಅಮಿತ್ ಶಾ – ಇನ್ನೂ ಸಿಕ್ಕಿಲ್ಲ ಗ್ರೀನ್ ಸಿಗ್ನಲ್

    ಧರ್ಮ ಸಂಕಟದಲ್ಲಿ ಅಮಿತ್ ಶಾ – ಇನ್ನೂ ಸಿಕ್ಕಿಲ್ಲ ಗ್ರೀನ್ ಸಿಗ್ನಲ್

    ನವದೆಹಲಿ: ಮೈತ್ರಿ ಸರ್ಕಾರದ ಪತನದ ಬಳಿಕ ಸರ್ಕಾರ ರಚಿಸುವ ಉತ್ಸಾಹದಲ್ಲಿ ಇರುವ ಬಿಜೆಪಿ ಪಕ್ಷದ ನಾಯಕರಿಗೆ ಹೈಕಮಾಂಡ್ ಬ್ರೇಕ್ ಹಾಕಿದ್ದು, ಸರ್ಕಾರ ರಚನೆಗೆ ಯಾವುದೇ ಸ್ಪಷ್ಟ ಸೂಚನೆ ನೀಡಿಲ್ಲ.

    ರಾಜ್ಯ ನಾಯಕರದ ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ವಿಜಯೇಂದ್ರ ಮತ್ತು ಮಾಧುಸ್ವಾಮಿ ಅವರು ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಅವಧಿಗಳ ಕಾಲ ಸಭೆ ನಡೆಸಲಾಗಿದೆ. ಸಭೆಯ ಬಳಿಕ ಹೈಕಮಾಂಡ್ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ನಾಳೆ ಸಂಸತ್ತಿನ ಅಧಿವೇಶನ ಪೂರ್ಣಗೊಳ್ಳಲಿರುವ ಕಾರಣ ಹಲವು ಮಸೂದೆಗಳು ಮಂಡನೆಯಾಗಬೇಕಿದೆ. ಹೀಗಾಗಿ ಸಂಜೆ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಶಾ ತಿಳಿಸಿದ್ದಾರೆ.

    ಬಿಎಸ್ ಯಡಿಯೂರಪ್ಪನವರು ಈಗ ಸರ್ಕಾರ ರಚನೆಗೆ ಮುಂದಾದರೆ ಬಹುಮತ ಸಾಬೀತು ಪಡಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಅಂಶಗಳನ್ನು ರಾಜ್ಯ ನಾಯಕರು ಹೈಕಮಾಂಡ್‍ಗೆ ವಿವರಿಸಿದ್ದಾರೆ. ರಾಜ್ಯ ನಾಯಕರ ಮಾಹಿತಿ ಪಡೆದಿರುವ ಹೈಕಮಾಂಡ್ ರಾಜ್ಯದಿಂದ ತಮ್ಮದೇ ವರದಿಯನ್ನು ಪಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಅಮಿತ್ ಶಾ ಭೇಟಿಯ ಬಳಿಕ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, ರಾಜ್ಯದ ರಾಜಕೀಯ ಬೆಳೆವಣಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ನಾಯಕರು ನಮ್ಮ ಮಾಹಿತಿಯನ್ನು ಪಡೆದಿದ್ದಾರೆ. ಮಧ್ಯಾಹ್ನದ ಬಳಿಕ ಮತ್ತೊಂದು ಸುತ್ತಿನ ಚರ್ಚೆಗೆ ಕರೆದಿದ್ದಾರೆ. ಸಭೆಯಲ್ಲಿ ಜೆಪಿ ನಡ್ಡಾ ಅವರು ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯದಲ್ಲಿ ಮುಂದಿನ ಅವಧಿಯಲ್ಲಿ ರಾಜ್ಯದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುವುದರ ಬಗ್ಗೆ ಚರ್ಚೆ ನಡೆಸಿದ್ದೇವೆ. ನಾಯಕರೊಂದಿಗೆ ಚರ್ಚೆ ನಡೆಸಿದ ಬಳಿಕ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

    ಸಭೆಗೂ ಮುನ್ನ ಮಾತನಾಡಿದ್ದ ಶಾಸಕ ಮಾಧುಸ್ವಾಮಿ ಅವರು, ಮೈತ್ರಿ ಸರ್ಕಾರ ವಿಶ್ವಾಸ ಕಳೆದುಕೊಂಡು ಪತನವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಬೇಕಿದೆ. ಈ ಕಾರಣದಿಂದ ಹೈಕಮಾಂಡ್ ಭೇಟಿಗೆ ಬಂದಿದ್ದು, ಅಮಿತ್ ಶಾ ಅವರಿಗೆ ರಾಜ್ಯ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಶಾಸಕರ ರಾಜೀನಾಮೆ ಸಂಬಂಧ ಗೊಂದಲಗಳಿದ್ದು, ಸ್ಪೀಕರ್ ಅವರು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ಬಗ್ಗೆ ಹೈಕಮಾಂಡ್ ಅವರಿಗೂ ಗೊಂದಲಗಳಿವೆ. ಪರಿಣಾಮ ಚರ್ಚೆ ನಡೆಸಿ ಮಾಹಿತಿ ನೀಡುತ್ತೇವೆ. ಬಿಎಸ್ಪಿ ಶಾಸಕ ಮಹೇಶ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಪರಿಣಾಮ ಬಿಜೆಪಿ ಸರ್ಕಾರ ರಚನೆಗೆ ಅನುಕೂಲ ಆಗಲಿದೆ ಎಂದು ವಿವರಿಸುವುದಾಗಿ ತಿಳಿಸಿದ್ದರು.

    2018ರ ವಿಧಾನಸಭೆ ಚುನಾವಣೆಯಲ್ಲಿ 104 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಅನ್ಯ ಪಕ್ಷದ ಶಾಸಕರನ್ನು ಸೆಳೆದು ಅಥವಾ ಜೆಡಿಎಸ್ ಬೆಂಬಲ ಪಡೆದು ಸಿಎಂ ಆಗಬಹುದು ಎಂಬ ವಿಶ್ವಾಸದಲ್ಲಿದ್ದ ಯಡಿಯೂರಪ್ಪ ಸರ್ಕಾರ ರಚನೆಯ ಹಕ್ಕು ಮಂಡಿಸಿದರು. ಆದರೆ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ನಿಂತು ಮೈತ್ರಿ ಸರ್ಕಾರ ರಚಿಸುವ ತಯಾರಿ ನಡೆಸಿದರು. ಇದರಿಂದಾಗಿ ಬಹುಮತ ಸಾಬೀತುಪಡಿಸಲು ಅಸಾಧ್ಯವೆಂದರಿತ ಯಡಿಯೂರಪ್ಪ, ವಿದಾಯ ಭಾಷಣ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಡೆದಿದ್ದರು. ಇದರಿಂದ ಇಡೀ ದೇಶದಲ್ಲಿ ಬಿಜೆಪಿಗೆ ಮುಖಭಂಗವಾಗಿತ್ತು.

    ಈ ಕಾರಣಕ್ಕೆ ಈ ಬಾರಿ ಎಚ್ಚರಿಕೆಯ ಹೆಜ್ಜೆ ಇಡಲು ಹೈಕಮಾಂಡ್ ಮುಂದಾಗುತ್ತಿದೆ. ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆ ಬಳಿಕ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದಾರೆ.

  • ರಾಜ್ಯಕ್ಕೆ ಒಳ್ಳೆದಾಗಬೇಕು, ಸ್ಥಿರ ಸರ್ಕಾರ ರಚನೆಯಾಗಬೇಕು : ಯಶ್

    ರಾಜ್ಯಕ್ಕೆ ಒಳ್ಳೆದಾಗಬೇಕು, ಸ್ಥಿರ ಸರ್ಕಾರ ರಚನೆಯಾಗಬೇಕು : ಯಶ್

    ಬೆಂಗಳೂರು: ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ನಟ ರಾಕಿಂಗ್ ಸ್ಟಾರ್ ಯಶ್ ಮಾತನಾಡಿದ್ದು, ರಾಜ್ಯಕ್ಕೆ ಒಳ್ಳೆದಾಗಬೇಕು, ಸ್ಥಿರ ಸರ್ಕಾರ ರಚನೆ ಆಗಬೇಕು ಎಂಬುದು ಎಲ್ಲರ ಆಶಯ ಎಂದು ಹೇಳಿದ್ದಾರೆ.

    ಕೆಜಿಎಫ್ 2 ನಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಯಶ್ ಅವರು, ರಾಜಕೀಯದಲ್ಲಿ ಆಗುತ್ತಿರುವ ಗೊಂದಲಗಳಿಂದ ಸಹಜವಾಗಿ ಬೇಸರ ಆಗಿದೆ. ಮುಂದೆ ಬರುವ ಸರ್ಕಾರ ರಾಜ್ಯದ ಜನರ ಕಷ್ಟಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕು. ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಬಹಳಷ್ಟು ಯೋಜನೆಗಳು ಆಗಬೇಕಿದೆ ಎಂದು ಜನರು ಕಾಯುತ್ತಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ ಎಂದರು.

    ಪಕ್ಷಗಳ ಆಂತರಿಕ ಸಮಸ್ಯೆಯಿಂದ ರಾಜ್ಯದ ಜನರಿಗೆ ಅನ್ಯಾಯ ಆಗುವುದು ಒಳ್ಳೆದಲ್ಲ ಎಂಬುವುದು ಅಷ್ಟೇ ನಮ್ಮ ಉದ್ದೇಶ. ಯಾರು ಅಧಿಕಾರಕ್ಕೆ ಬಂದರೂ ಕೂಡ ಒಂದು ನಿಶ್ಚಿತ ಸರ್ಕಾರ ರಚನೆ ಆಗಬೇಕು. ಆ ಮೂಲಕ ಒಳ್ಳೆಯ ಯೋಜನೆಗಳು ಜಾರಿ ಆಗಬೇಕು. ಇಂತಹ ಸಂದರ್ಭದಲ್ಲಿ ಎಲ್ಲರಂತೆ ನಮಗೂ ಬೇಸರ ಆಗುತ್ತದೆ. ಆದರೆ ಮುಂದೆ ಬರುವ ಸರ್ಕಾರ ಉತ್ತಮವಾಗಿ ಇರಬೇಕಿದೆ ಎಂದು ಅಭಿಪ್ರಾಯ ಪಟ್ಟರು.

    ಲೋಕಸಭಾ ಚುನಾವಣೆಯಲ್ಲಿ ಮಂಡ್ಯದ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸಿದ್ದ ಯಶ್, ಸಂಸದೆಯಾಗಿ ಕಾರ್ಯನಿರ್ವಹಿಸುತ್ತಿರುವ ಸುಮಲತಾ ಅವರ ಕೆಲಸಗಳ ಬಗ್ಗೆಯೂ ಇದೇ ಸಂದರ್ಭದಲ್ಲಿ ಮಾತನಾಡಿದರು. ಮಂಡ್ಯಕ್ಕೆ ಹೊಸ ಯೋಜನೆಗಳನ್ನು ತರುವ ನಿಟ್ಟಿನಲ್ಲಿ ಕೇಂದ್ರ ನಾಯಕರ ಸಲಹೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

    ಸುಮಲತಾ ಅವರ ಕೆಲಸ ನೋಡಿ ಖುಷಿ ಆಗುತ್ತಿದೆ, ಅವರು ಎಲ್ಲೆ ಹೋದರೂ ನನಗೆ ಆಗಾಗ ಮಾಹಿತಿ ನೀಡುತ್ತಾರೆ. ಜನತೆಗೆ ಬೇಕಾದ ಉತ್ತಮ ಕೆಲಸಗಳನ್ನು ಮಾಡುತ್ತಾರೆ ಎಂಬ ನಂಬಿಕೆ ಇದೆ. ಕೇಂದ್ರ ಸರ್ಕಾರದ ನಾಯಕರು ಕೂಡ ಉತ್ತಮವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದಿದ್ದಾರೆ. ಸುಮಲತಾರ ಕಾರ್ಯ ನಮಗೇ ಖುಷಿ ತಂದಿದೆ ಎಂದರು. ಇದನ್ನು ಓದಿ: ಜಿಲ್ಲೆಯ ಸಮಸ್ಯೆ ಬಗೆಹರಿಸಿಕೊಡಿ – ಅಮಿತ್ ಶಾ ಬಳಿ ಸುಮಲತಾ ಮನವಿ

  • ಮತ್ತೊಮ್ಮೆ ಸಾಬೀತು – ಚಿಂಚೋಳಿಯಲ್ಲಿ ಗೆದ್ದವರಿಗೆ ವಿಧಾನಸಭೆಯ ಗದ್ದುಗೆ

    ಮತ್ತೊಮ್ಮೆ ಸಾಬೀತು – ಚಿಂಚೋಳಿಯಲ್ಲಿ ಗೆದ್ದವರಿಗೆ ವಿಧಾನಸಭೆಯ ಗದ್ದುಗೆ

    ಕಲಬುರಗಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಮಹಿಮೆಯೋ ಅಥವಾ ಕಾಕತಾಳೀಯವೋ ಗೊತ್ತಿಲ್ಲ. ಈ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಯಾವ ಪಕ್ಷ ಆಯ್ಕೆ ಆಗುತ್ತೋ ಅದೇ ಪಕ್ಷ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುತ್ತಿರುವುದು ವಿಶೇಷ.

    ಚಿಂಚೋಳಿ ವಿಧಾನಸಭಾ ಕ್ಷೇತ್ರ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೇ ಅತ್ಯಂತ ವಿಶಿಷ್ಟ ಮತ್ತು ವಿಶೇಷ. ಚಿಂಚೋಳಿ ವಿಧಾನಸಭಾ ಕ್ಷೇತ್ರದ ಇತಿಹಾಸದ ಪುಟಗಳನ್ನು ಬಿಚ್ಚಿದ್ದಾಗ ಚಿಂಚೋಳಿಯ ಮಹಿಮೆ ಏನು ಎನ್ನುವುದು ಅರ್ಥವಾಗುತ್ತದೆ. ಯಾಕೆಂದರೆ 1957 ರಿಂದ ಇಲ್ಲಿಯವರೆಗೆ ಚಿಂಚೋಳಿಯಿಂದ ರಾಜ್ಯ ವಿಧಾನಸಭೆಗೆ ಯಾವ ಪಕ್ಷ ಆಯ್ಕೆಯಾಗಿದೆಯೋ ಅದೇ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸಿರುವುದು ನೂರಕ್ಕೆ ನೂರರಷ್ಟು ಸತ್ಯವಾಗಿದೆ.

    1957 ರಿಂದ 2019ರವರೆಗೆ ನಡೆದ 15 ವಿಧಾನಸಭೆ ಚುನಾವಣೆಯ ಫಲಿತಾಂಶ ಅವಲೋಕಿಸಿದಾಗ ಇತಂಹದೊಂದು ಅಚ್ಚರಿಯ ಸಂಗತಿ ರಾಜ್ಯದ ಜನರ ಮುಂದೆ ತೆರೆದುಕೊಂಡಿದೆ. ಯಾಕೆಂದರೆ 1957 ರಿಂದ 2018ರವರೆಗೆ ಚಿಂಚೋಳಿ ಕ್ಷೇತ್ರದಲ್ಲಿ ಗೆದ್ದಂತಹ ಪಕ್ಷವೇ ರಾಜ್ಯದಲ್ಲಿ ಆಡಳಿತ ನಡೆಸಿದೆ. 2019ರ ಮೇ ನಲ್ಲಿ ನಡೆದ ವಿಧಾನಸಭೆಯ ಉಪಚುನಾವಣೆಯ ಫಲಿತಾಂಶ ಪ್ರಕಟವಾದಗಲೇ ಈ ಕ್ಷೇತ್ರದಲ್ಲಿ ದೋಸ್ತಿ ಸರ್ಕಾರ ಪತನವಾಗಲಿದೆ ಎನ್ನುವ ಚರ್ಚೆ ಆರಂಭವಾಗಿತ್ತು. ಅದರಂತೆ ದೋಸ್ತಿ ಸರ್ಕಾರ ಪತನವಾಗಿ ಇದೀಗ ಬಿಜೆಪಿ ಸರ್ಕಾರ ಆಡಳಿಕ ಚಿಕ್ಕಾಣಿ ಹಿಡಿಯಲು ಸಜ್ಜಾಗಿದೆ. ಈ ಮೂಲಕ ಮತ್ತೊಮ್ಮೆ ಕ್ಷೇತ್ರದ ಮಹಿಮೆ ಇತಿಹಾಸದ ಪುಟ ಸೇರುವಂತೆ ಮಾಡಿದೆ.

    ಯಾವ ವರ್ಷ ಗೆದ್ದವರು ಯಾರು?
    1. 1957 – ಕಾಂಗ್ರೆಸ್‍ನ ವೀರೆಂದ್ರ ಪಾಟೀಲ್ ಗೆದ್ದಿದ್ದರು. ಆಗ ರಾಜ್ಯದಲ್ಲಿ ಬಿಡಿ ಜತ್ತಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಿತ್ತು.

    2. 1962- ಕಾಂಗ್ರೆಸ್‍ನ ವೀರೆಂದ್ರ ಪಾಟೀಲ್ ಜಯಗಳಿಸಿದ್ದರು. ಈ ವೇಳೆ ಎಸ್.ಆರ್ ಕಂಠಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಇತ್ತು.

    3. 1967- ಮತ್ತೆ ಕಾಂಗ್ರೆಸ್‍ನ ವೀರೆಂದ್ರ ಪಾಟೀಲ್ ಗೆದ್ದಾಗ ಎಸ್ ನಿಜಲಿಂಗಪ್ಪ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು.

    4. 1972 ಮತ್ತು 1977ರಲ್ಲಿ ಕಾಂಗ್ರೆಸ್‍ನ ದೇವೇಂದ್ರಪ್ಪ ಘಾಳಪ್ ಗೆದ್ದು, ದೇವರಾಜು ಅರಸು ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಿತ್ತು.

    5. 1983 – ದೇವೇಂದ್ರಪ್ಪ ಘಾಳಪ್ಪ ಗೆದ್ದಿದ್ದು, ಆಗ ಆರ್ ಗುಂಡುರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿತ್ತು.

    6. 1989 – ವೀರೇಂದ್ರ ಪಾಟೀಲ್ ಮತ್ತೆ ಜಯಗಳಿಸಿದ್ದರು. ಈ ವೇಳೆ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು.

    7. 1994 – ಜನತಾದಳದಿಂದ ಸ್ಪರ್ಧಿಸಿದ್ದ ವೈಜನಾಥ್ ಪಾಟೀಲ್ ಗೆದ್ದಿದ್ದರು. ಈ ವೇಳೆ ದೇವೇಗೌಡರ ನೇತೃತ್ವದ ಜನತಾದಳ ಸರ್ಕಾರ ಇತ್ತು.

    8. 1999 – ಕಾಂಗ್ರೆಸ್‍ನ ಕೈಲಾಸ್‍ನಾಥ್ ಪಾಟೀಲ್ ಜಯಗಳಿಸಿ, ಎಸ್ ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಿತ್ತು.

    9. 2004 – ಜೆಡಿಎಸ್‍ನಿಂದ ವೈಜನಾಥ್ ಪಾಟೀಲ್ ಗೆದ್ದಿದ್ದರು. ಧರ್ಮಸಿಂಗ್ ನೇತೃತ್ವದ ಮೈತ್ರಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದಿತ್ತು.

    10. 2008- ಬಿಜೆಪಿ ಸುನೀಲ್ ವಲ್ಯಾಪುರೆ ಆಯ್ಕೆಯಾಗಿ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಂದಿತ್ತು.

    11. 2013 – ಕಾಂಗ್ರೆಸ್ ಉಮೇಶ್ ಜಾಧವ್ ಗೆದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರ ಪಡೆದಿತ್ತು.

    12. 2018 – ಉಮೇಶ್ ಜಾಧವ್ ಎರಡನೇ ಬಾರಿ ಜಯಗಳಿಸಿದ್ದು, ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಆಡಳಿತಕ್ಕೆ ಬಂತು.

    13. 2019 – ಉಪಚುನಾವಣೆಯಲ್ಲಿ ಉಮೇಶ್ ಜಾಧವ್ ಪುತ್ರ ಬಿಜೆಪಿ ಅವಿನಾಶ್ ಜಾಧವ್ ಗೆಲುವು ಸಾಧಿಸಿದ್ದರು. ಈಗ ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಲು ಸಿದ್ಧತೆ ನಡೆಸುತ್ತಿದೆ.

    ಇದೀಗ ಅವಿನಾಶ್ ಜಾಧವ್ ಆಯ್ಕೆಯ ಬಳಿಕ ಬಿಜೆಪಿ ಅಧಿಕಾರಕ್ಕೆ ಬರುತ್ತಿರುವುದನ್ನು ನೋಡಿದರೆ, ಚಿಂಚೋಳಿಯ ಇತಿಹಾಸ ಮತ್ತೆ ಮತ್ತೆ ಹೌದು ಎನ್ನುವಂತಾಗಿದೆ. ಆದರೆ ಇಷ್ಟೆಲ್ಲಾ ಇತಿಹಾಸ ಹೊಂದಿರುವ ಚಿಂಚೋಳಿ ಕ್ಷೇತ್ರ ರಾಜ್ಯದ 224 ಕ್ಷೇತ್ರಗಳಲ್ಲೆ ಅತ್ಯಂತ ಹಿಂದುಳಿದಂತಹ ಕ್ಷೇತ್ರವಾಗಿರುವುದು ದುರಾದೃಷ್ಟಕರ ಸಂಗತಿಯಾಗಿದೆ.

    ಕಲಬುರಗಿ ಜಿಲ್ಲೆಯಿಂದ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ್ದರೂ ಕೂಡ ಚಿಂಚೋಳಿ ಮಾತ್ರ ಇದುವರೆಗೂ ಅಭಿವೃದ್ಧಿ ಆಗಿಲ್ಲ. ಅಷ್ಟೇ ಅಲ್ಲದೆ ಸ್ವತಃ ಚಿಂಚೋಳಿ ವಿಧಾನಸಭೆಯಿಂದ ಆಯ್ಕೆಯಾದತಂಹ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಆದಂತಹ ಸಂದರ್ಭದಲ್ಲೂ ಯಾವುದೇ ಅಭಿವೃದ್ಧಿ ಆಗಿಲ್ಲ. ಇನ್ನು ಮುಂದೆ ಬರುವಂತಹ ಸರ್ಕಾರವಾದರೂ ಚಿಂಚೋಳಿಯ ಅಭಿವೃದ್ಧಿಯತ್ತ ಗಮನ ಹರಿಸಲಿ ಎಂದು ಜನ ಕೇಳಿಕೊಂಡಿದ್ದಾರೆ.

  • ಕಾರ್ಟೂನ್ ರೀತಿ ಟಿವಿಯಲ್ಲಿ ರಾಜಕೀಯ ಹೈಡ್ರಾಮಾ ನೋಡುವ ಸ್ಥಿತಿ ಬಂದಿದೆ: ರೈತರ ಆಕ್ರೋಶ

    ಕಾರ್ಟೂನ್ ರೀತಿ ಟಿವಿಯಲ್ಲಿ ರಾಜಕೀಯ ಹೈಡ್ರಾಮಾ ನೋಡುವ ಸ್ಥಿತಿ ಬಂದಿದೆ: ರೈತರ ಆಕ್ರೋಶ

    – ತೆರಿಗೆ ಹಣ ಕೊಳ್ಳೆಹೊಡಿಯಲು ರಾಜಕೀಯ
    – ಕಿತ್ತಾಡೋ ಬದಲು ಸಮಸ್ಯೆ ಕೇಳಿದ್ರೆ ರೈತರ ಜೀವ ಉಳೀತಿತ್ತು

    ಬಳ್ಳಾರಿ: ಕಳೆದ 20 ದಿನಗಳಿಂದ ನಡೆಯುತ್ತಿರುವ ರಾಜ್ಯ ರಾಜಕಾರಣದ ಹೈಡ್ರಾಮಾದ ವಿರುದ್ಧ ಬಳ್ಳಾರಿಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿ, ರಾಜ್ಯದಲ್ಲಿ ಮಳೆ ಇಲ್ಲದೆ, ಬೆಳೆಗೆ ನೀರಿಲ್ಲದೆ ಪರದಾಡುತ್ತಿದ್ದಾರೆ. ಡ್ಯಾಮ್‍ಗಳಲ್ಲಿ ನೀರಿಲ್ಲದೆ ರೈತರು ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ. ರಾಜ್ಯದಲ್ಲಿ ಇಷ್ಟೆಲ್ಲಾ ಸಮಸ್ಯೆ ಇದ್ದರೂ ಕೂಡ ಮೂರು ಪಕ್ಷಗಳು ವಿಧಾನಸೌಧದಲ್ಲಿ ಕಿತ್ತಾಡುತ್ತಾ ಕಾಲಹರಣ ಮಾಡುತ್ತಿವೆ. ರೈತರ ಸಮಸ್ಯೆಗೆ ಒಂದು ದಿನವೂ ಹೀಗೆ ಚರ್ಚೆ ನಡೆಸಲಿಲ್ಲ. ಶಾಸಕರನ್ನು 30-40-50 ಕೋಟಿ ಹಣ ಕೊಟ್ಟು ಖರೀದಿ ಮಾಡುತ್ತಿದ್ದಾರೆ. “ನಮ್ಮ ತೆರಿಗೆ ಹಣವನ್ನು ಕೊಳ್ಳೆ ಹೊಡೆಯಲು ರಾಜಕಾರಣ ಮಾಡೋದಾದರೆ ಯಾಕ್ರಿ ಬರ್ತೀರಾ? ಎಲ್ಲರು ರಾಜಿನಾಮೆ ಕೊಟ್ಟು ಮನೆಗೆ ಹೋಗ್ರಿ?” ಎಂದು ರೈತರು ರಾಜಕೀಯ ಹೈಡ್ರಾಮಕ್ಕೆ ಬೇಸತ್ತು ಕೆಂಡಾಮಂಡಲರಾಗಿದ್ದಾರೆ.

    ಮೂರು ಪಕ್ಷದವರು ಸೇರಿಕೊಂಡು ರಾಜ್ಯದ ಮಾನ ಹರಾಜು ಹಾಕುತ್ತಿದ್ದಾರೆ. ಸದನದಲ್ಲಿ ಮೋಡ ಬಿತ್ತನೆ ಬಗ್ಗೆ ಚರ್ಚೆ ಆಗಬೇಕಿದ್ದ ಸಮದಲ್ಲಿ ಹೈಡ್ರಾಮ ಆಡುತ್ತಿದ್ದಾರೆ. ರಾಜಕಾರಣಿಗಳು ಅಕ್ರಮವಾಗಿ ಆಸ್ತಿ ಸಂಪಾದಿಸಿ ಅದರ ರಕ್ಷಣೆಗಾಗಿ ಅವರಿಗೆ ಕುರ್ಚಿ ಅವಶ್ಯಕತೆ ಇದೆ. ಅವರ ಆಟಗಳನ್ನ ಕಾರ್ಟೂನ್ ರೀತಿ ಟಿವಿಯಲ್ಲಿ ನೋಡುವ ರೀತಿ ಆಗಿದೆ ಎಂದು ರೈತರು ಹರಿಹಾಯ್ದರು.

    ಅತ್ತ ಅಧಿಕಾರದಿಂದ ಕೆಳಗೆ ಇಳಿಸಲು ಬಿಜೆಪಿಯವರು ಕಿತ್ತಾಡುತ್ತಿದ್ದರೆ ಇತ್ತ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಪ್ಲಾನ್ ಮಾಡುತ್ತಿದೆ. ಸೋಮವಾರ ರಾತ್ರಿ 12 ಗಂಟೆಯವರೆಗೂ ಸದನ ನಡೆಸಿದ್ದಾರೆ. ಅದೇ ಸದನವನ್ನು ರಾಜ್ಯದ ಅಭಿವೃದ್ಧಿ, ರೈತರ ಹೋರಾಟಗಳ ಬಗ್ಗೆ ಮಾತಾಡಿದ್ದರೆ ನಮ್ಮ ರಾಜ್ಯದಲ್ಲಿ ಯಾವ ರೈತರು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.

  • ಐಎಂಎ ಪ್ರಕರಣ ಮುಚ್ಚಲು ಎಸ್‍ಐಟಿ ಬಳಕೆ: ಸೊಗಡು ಶಿವಣ್ಣ

    ಐಎಂಎ ಪ್ರಕರಣ ಮುಚ್ಚಲು ಎಸ್‍ಐಟಿ ಬಳಕೆ: ಸೊಗಡು ಶಿವಣ್ಣ

    ತುಮಕೂರು: 40 ಸಾವಿರಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿರುವ ಐಎಂಎ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ.

    ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರವೇ ಇಲ್ಲಾ, ಮಳೆ ಬೆಳೆ ಇಲ್ಲಾ, ಶವ ಸಂಸ್ಕಾರಕ್ಕೂ ನೀರಿಲ್ಲದ್ದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಸ್ಥಿತಿಯಲ್ಲಿ 40 ಸಾವಿರ ಜನರ ಹಣವನ್ನು ಮನ್ಸೂರ್ ಅಲಿಖಾನ್ ತಿಂದು ಬಿಟ್ಟಿದ್ದಾನೆ ಎಂದು ಕಿಡಿಕಾರಿದರು.

    ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಈ ಪ್ರಕರಣದಲ್ಲಿ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಕೋಟ್ಯಾಂತರ ರೂಪಾಯಿ ಹೋಗಿರುವ ಅನುಮಾನ ಇದೆ. ಪ್ರಕರಣವನ್ನು ಮುಚ್ಚಿಹಾಕುವ ದೃಷ್ಠಿಯಲ್ಲಿ ಎಸ್‍ಐಟಿಯನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಐಎಂಎ ಕೇಸನ್ನು ಕೂಡಲೇ ಸಿಬಿಐಗೆ ವಹಿಸಲೇಬೇಕು ಎಂದು ಆಗ್ರಹಿಸಿದರು.

  • ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಮೂರೂ ಬಿಟ್ಟಿವೆ: ಕೋಡಿಹಳ್ಳಿ ಆಕ್ರೋಶ

    ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಮೂರೂ ಬಿಟ್ಟಿವೆ: ಕೋಡಿಹಳ್ಳಿ ಆಕ್ರೋಶ

    -ಮರ್ಯಾದೆ ಬಿಟ್ಟು ಶಾಸಕರು ರೆಸಾರ್ಟ್ ಸೇರಿದ್ದಾರೆ

    ಧಾರವಾಡ: ನಮ್ಮ ರಾಜ್ಯದಲ್ಲಿ ಮೂರು ರಾಜಕೀಯ ಪಕ್ಷಗಳು ಮೂರೂ ಬಿಟ್ಟಿವೆ. ಇದನ್ನು ನೋಡಲಿಕ್ಕೆ ಅಸಹ್ಯ ಆಗುತ್ತಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ರಾಜಕೀಯ ಹೈಡ್ರಾಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರು ಫ್ರಿಡಂ ಪಾರ್ಕ್ ನಲ್ಲಿ ಛೀ, ಥೂ ಅಂತಾ ಉಗಿದು ಚಳವಳಿ ಮಾಡಿದ್ವಿ. ಇಂತಹ ಕನಿಷ್ಠ ಮಟ್ಟದ ರಾಜಕಾರಣ ಕರ್ನಾಟಕದಲ್ಲಿ ಎಂದಿಗೂ ಆಗಿಲ್ಲ. ಈಗ ರೆಸಾರ್ಟಿನಲ್ಲಿ ಮಾನ ಮರ್ಯಾದೆ ಬಿಟ್ಟು ಶಾಸಕರು ಕುಳಿತಿದ್ದಾರೆ ಎಂದು ಕಿಡಿಕಾರಿದರು.

    ರಾಜ್ಯದಲ್ಲಿ ನಡೆಯುತ್ತಿರುವುದನ್ನು ನೋಡಲಿಕ್ಕೆ ಕೇಳೋದಿಕ್ಕೆ ಅಸಹ್ಯವಾಗುತ್ತೆ. ಹೀಗಾಗಿ ಬದಲಾದ ರಾಜಕೀಯ ಚಿಂತನೆ ನಮ್ಮ ನಾಡಿಗೆ ಬೇಕಿದೆ. ಈ ಬಗ್ಗೆ ನಾಡಿನ ಜನ ವಿಚಾರ ಮಾಡಬೇಕು ಎಂದು ಕೋಡಿಹಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.

  • ಕ್ಯಾಬ್‍ಗಳಲ್ಲಿ ಇನ್ಮುಂದೆ ಶೇರಿಂಗ್ ಡೌಟು- ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್

    ಕ್ಯಾಬ್‍ಗಳಲ್ಲಿ ಇನ್ಮುಂದೆ ಶೇರಿಂಗ್ ಡೌಟು- ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್

    ಬೆಂಗಳೂರು: ಓಲಾ, ಉಬರ್‌ನಲ್ಲಿ ಶೇರಿಂಗ್ ಮಾಡಿಕೊಂಡು ಓಡಾಡುವುದು ಡೌಟಾಗಿದೆ. ಯಾಕೆಂದರೆ ಬೆಂಗಳೂರಿನಲ್ಲಿ ಸೀಟ್ ಶೇರಿಂಗ್ ಸೌಲಭ್ಯವನ್ನು ರಾಜ್ಯ ಸರ್ಕಾರ ಬ್ಯಾನ್ ಮಾಡಿದೆ.

    ಓಲಾ ಮತ್ತು ಉಬರ್‌ನಲ್ಲಿ ಶೇರಿಂಗ್ ಮಾಡಿಕೊಂಡು ಓಡಾಡುವುದು ನಿಯಮಬಾಹಿರವಾಗಿದೆ. ಏನೇ ಹೊಸ ಸೌಲಭ್ಯ ನೀಡುವುದಾದರೂ ಕಾನೂನು ವ್ಯಾಪ್ತಿಯಲ್ಲೇ ನೀಡಬೇಕೆಂದು ಸಾರಿಗೆ ಇಲಾಖೆ ತಿಳಿಸಿದೆ. ಅಲ್ಲದೆ ಈ ಸೌಲಭ್ಯದ ವಿರುದ್ಧ ಓಲಾ ಮತ್ತು ಊಬರ್ ಕ್ಯಾಬ್ ಡ್ರೈವರ್ ಗಳು ಕೂಡ ದೂರು ನೀಡಿದ್ದರು.

    ಶೇರಿಂಗ್ ನಿಂದಾಗಿ ಮಹಿಳೆಯರ ಸುರಕ್ಷತೆಗೆ ತೊಂದರೆ ಸೇರಿದಂತೆ ಅನೇಕು ಅನಾನುಕೂಲತೆ ಆಗಿದ್ದರಿಂದ ಶೇರಿಂಗ್ ಸೌಲಭ್ಯವನ್ನು ಬ್ಯಾನ್ ಮಾಡಲಾಗಿದೆ. 2017ರಲ್ಲಿ ಶೇರಿಂಗ್ ಸೌಲಭ್ಯ ನಿಷೇಧಕ್ಕೆ ಸಾರಿಗೆ ತಜ್ಞರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದೀಗ ಮತ್ತೆ ಶೇರಿಂಗ್ ಮಾಡಿಕೊಂಡು ಓಡಾಡುವುದರ ಬಗ್ಗೆ ಕಾರು ಚಾಲಕರು ದೂರು ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬ್ಯಾನ್ ಮಾಡಿದೆ.

    ಒಂದು ವೇಳೆ ಬ್ಯಾನ್ ಬಳಿಕವೂ ಕಂಪನಿಗಳು ಈ ಸೌಲಭ್ಯ ನಿಲ್ಲಿಸದಿದ್ದರೆ ಅವುಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅರ್ಜಿ ಸಲ್ಲಿಸುತ್ತೇವೆ ಎಂದು ಕಾರು ಚಾಲಕರ ಸಂಘದ ಮುಖಂಡರು ತಿಳಿಸಿದ್ದಾರೆ.