Tag: State Government

  • ದಿನಕ್ಕೊಂದು ದೇಶ, ಗಳಿಗೆಗೊಂದು ವೇಷ ಬದಲಿಸುವ ಪ್ರಧಾನಿ ಎಲ್ಲಿದ್ದಾರೆ: ಸಿದ್ದರಾಮಯ್ಯ

    ದಿನಕ್ಕೊಂದು ದೇಶ, ಗಳಿಗೆಗೊಂದು ವೇಷ ಬದಲಿಸುವ ಪ್ರಧಾನಿ ಎಲ್ಲಿದ್ದಾರೆ: ಸಿದ್ದರಾಮಯ್ಯ

    – ಹೇಡಿ ರಾಜ್ಯ ಸರ್ಕಾರಕ್ಕೆ ಕೇಂದ್ರವನ್ನು ಪ್ರಶ್ನಿಸುವ ಧೈರ್ಯ ಇಲ್ಲ

    ಬೆಂಗಳೂರು: ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್ ಮೂಲಕ ಬಿಜೆಪಿ ಪಕ್ಷದ ಮೇಲೆ ಕಿಡಿಕಾರಿದ್ದಾರೆ. ದಿನಕ್ಕೊಂದು ದೇಶ, ಗಳಿಗೆಗೊಂದು ವೇಷ ಬದಲಿಸುವ ಪ್ರಧಾನಿ ಎಲ್ಲಿದ್ದಾರೆ ಎಂದು ಹೇಳುವ ಮೂಲಕ ಮೋದಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

    ಇಂದು ಬೆಳಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ದಿನಕ್ಕೊಂದು ದೇಶ ಸುತ್ತುವ, ಗಳಿಗೆಗೊಂದು ವೇಷ ಬದಲಿಸುವ ಈಗಿನ ಪ್ರಧಾನಿಗಳಿಗೆ ಒಂದು ಘಳಿಗೆ ಬಂದು ಸಂತ್ರಸ್ತರ ಗೋಳು ಕೇಳುವ ಕನಿಷ್ಠ ಮಾನವೀಯತೆ ಇಲ್ಲದಿರುವುದು ದುರಂತ ಎಂದು ಟ್ವೀಟ್ ಮಾಡುವ ಮೂಲಕ ಮೋದಿ ಅವರ ಮೇಲೆ ಗುಡುಗಿದ್ದಾರೆ.

    ನಮ್ಮ ಪ್ರತಿಭಾವಂತ ವಿಜ್ಞಾನಿಗಳು ಹಗಲಿರುಳು ಶ್ರಮಿಸಿ ನಡೆಸಿದ ಚಂದ್ರಯಾನ-2 ಪ್ರಯೋಗ, ನರೇಂದ್ರ ಮೋದಿ ಹಾಜರು ಹಾಕಿದರೂ ವಿಫಲವಾಯಿತು. ಪ್ರಧಾನಿಗಳು ಅಷ್ಟೇ ಸಮಯವನ್ನು ಅತಿವೃಷ್ಟಿ ಪೀಡಿತ ಪ್ರದೇಶದ ಭೇಟಿಗೂ ನೀಡಿದ್ದರೆ ಪ್ರಾಯಶ್ಚಿತ ಮಾಡಿಕೊಂಡಂತಾಗುತಿತ್ತು ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

    ಅತಿವೃಷ್ಟಿಯಿಂದ ಮನೆ, ತೋಟ, ಗದ್ದೆಯನ್ನು ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹಾವೇರಿ, ಗದಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಐವರು ರೈತರ ಕುಟುಂಬಕ್ಕೆ ನನ್ನ ಸಂತಾಪಗಳು. ಇದೇ ರೀತಿ ನೂರಾರು ರೈತರು ಅಸಹಾಯಕರಾಗಿ ಆತ್ಮಹತ್ಯೆಯ ದಾರಿಯಲ್ಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದ್ದೂ ಸತ್ತಂತಿವೆ. ಅತಿವೃಷ್ಟಿ ಪೀಡಿತ ರೈತರ ಬ್ಯಾಂಕುಗಳಲ್ಲಿನ ಸಾಲ ಬಾಕಿಗಾಗಿ ನೋಟಿಸ್ ಜಾರಿ ಮಾಡಿ ಕಿರುಕುಳ ನೀಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯ ಸರ್ಕಾರಕ್ಕೇನಾದರೂ ಒಂದಿಷ್ಟು ಮಾನವೀಯತೆ ಎನ್ನುವುದಾದರೂ ಇದ್ದರೆ ಇಂತಹ ಕ್ರೌರ್ಯವನ್ನು ತಕ್ಷಣ ನಿಲ್ಲಿಸಬೇಕು ಎಂದು ಟ್ವಿಟ್ಟರ್ ಮೂಲಕ ಹೇಳಿದ್ದಾರೆ.

    ರಾಜ್ಯಕ್ಕೆ ಬಂದೆರಗಿದ ಅತಿವೃಷ್ಟಿಯಿಂದ ರೂ.36 ಸಾವಿರ ಕೋಟಿ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ ನಯಾಪೈಸೆ ನೆರವು ಬಂದಿಲ್ಲ. ರಾಜ್ಯದ ಹೇಡಿ ಸರ್ಕಾರಕ್ಕೆ ಕೇಂದ್ರವನ್ನು ಪ್ರಶ್ನಿಸುವ ಧೈರ್ಯ ಇಲ್ಲ. 2009ರಲ್ಲಿ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿದ್ದಾಗ ಸಂಭವಿಸಿದ ಅತಿವೃಷ್ಟಿಯ ಸಂದರ್ಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಧಾವಿಸಿ ಬಂದು ಸಮೀಕ್ಷೆ ನಡೆಸಿ ತಕ್ಷಣ ರೂ.1500 ಕೋಟಿ ರೂ. ಪರಿಹಾರ ಘೋಷಿಸಿದ್ದರು. ಈಗಿನ ಪ್ರಧಾನಿ ಎಲ್ಲಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.

    ಕಾಲ್ಗುಣದಂತಹ ಮೌಢ್ಯದಲ್ಲಿ ನನಗೆ ನಂಬಿಕೆ ಇಲ್ಲ. ಆದರೆ 2009ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗಲೇ ಅತಿವೃಷ್ಟಿ ಬಂದೆರಗಿತು. ನಮ್ಮ ಕಾಲದಲ್ಲಿ ರೈತರು ಆತ್ಮಹತ್ಯೆಯ ದಾರಿ ಹಿಡಿದಾಗ ನಮ್ಮ ಸರ್ಕಾರ ಕೃಷಿಭಾಗ್ಯ, ಅನ್ನಭಾಗ್ಯ, ಕ್ಷೀರಧಾರೆಯಂತ ಯೋಜನೆಗಳ ಮೂಲಕ ನೆರವಾಗಿ ಆತ್ಮಹತ್ಯೆಯ ಸರಣಿಯನ್ನು ತಡೆದಿದ್ದೆವು. ಅತಿವೃಷ್ಠಿ ಪೀಡಿತ ಪ್ರದೇಶಕ್ಕೆ ಪರಿಹಾರಕ್ಕಾಗಿ ಒತ್ತಾಯಿಸಿದಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಕೇಂದ್ರ ಸರ್ಕಾರ ದಿವಾಳಿಯಾಗಿ ಹೋಗಿರುವ ಸೂಚನೆ ಇದು. ಇದು ನಿಜವಲ್ಲದೆ ಇದ್ದರೆ ಮೊದಲು ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಒತ್ತಯ ಮಾಡಿದ್ದಾರೆ.

  • ರಾಜ್ಯ ಸರ್ಕಾರದಿಂದ ಕೊಡಗಿನ 4257 ರೈತರ ಸಾಲಮನ್ನಾ

    ರಾಜ್ಯ ಸರ್ಕಾರದಿಂದ ಕೊಡಗಿನ 4257 ರೈತರ ಸಾಲಮನ್ನಾ

    ಮಡಿಕೇರಿ: ಸಹಕಾರಿ ಸಾಲಾ ಮನ್ನಾ ಯೋಜನೆಯಡಿ ಜಿಲ್ಲೆಯ 4,257 ರೈತರ 32.64 ಕೋಟಿ ರೂ. ಸಾಲದ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ್ದು ಸಾಲಮನ್ನಾ ನಿರೀಕ್ಷೆಯಲ್ಲಿದ್ದ ರೈತರ ಮೊಗದಲ್ಲಿ ಇದೀಗ ಮಂದಹಾಸ ಮೂಡಿದೆ.

    ಈ ಬಗ್ಗೆ ಡಿಸಿಸಿ ಬ್ಯಾಂಕ್ ತಿಳಿಸಿದ್ದು, 2018ರಲ್ಲಿ ಘೋಷಿಸಿದ ಸಾಲಮನ್ನಾದ 32,903 ರೈತರು ಫಲಾನುಭವಿಗಳು ಜಿಲ್ಲೆಯಲ್ಲಿದ್ದರೂ 254.81 ಕೋಟಿ ಹಣವನ್ನು ಬಿಡುಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಹಿಂದಿನ ಸರ್ಕಾರ ಈಗಾಗಲೇ 10,421 ರೈತರ 68.45 ಕೋಟಿ ಹಣವನ್ನು ಬಿಡುಗಡೆಗೊಳಿಸಿ ಸಾಲಮನ್ನಾಕ್ಕೆ ಅರ್ಹರೆಂದು ಪರಿಗಣಿಸಿತ್ತು.

    16,673 ರೈತರ ಪೈಕಿ 6,252 ರೈತರ 48.25 ಕೋಟಿ ರೂ. ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿತ್ತು. ಸಾಲ ಮನ್ನಾಕ್ಕೆ ಅರ್ಹತೆ ಪಡೆದಿರುವ ಜಿಲ್ಲೆಯ 16,673 ರೈತರ ಪೈಕಿ ಈ ವರೆಗೂ ಬಾಕಿ ಉಳಿಸಿಕೊಂಡಿದ್ದ 6,252 ರೈತರ 48.25 ಕೋಟಿ ರೂ. ಮೊತ್ತದಲ್ಲಿ 4,257 ರೈತರಿಗೆ ಸಂಬಂಧಿಸಿದ 32.64 ಕೋಟಿ ರೂ. ಹಣವನ್ನು ಸೆ.13 ರಂದು ಫಲಾನುಭವಿ ರೈತರ ಖಾತೆಗೆ ಬಿಡುಗಡೆಗೊಳಿಸಲಾಗಿದೆ.

    ಈ ಬಗ್ಗೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಪಬ್ಲಿಕ್ ಟಿವಿಯೊಂದಿಗೆ ಮಾತಾನಾಡಿ ಸರ್ಕಾರ ಹಣ ಬಿಡುಗಡೆ ಮಾಡಿದೆ. ಸುಮಾರು 25% ರೈತರ ಅಕೌಂಟ್ ಗೆ ಜಮೆ ಯಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಪ್ರಕೃತಿಕ ವಿಕೋಪಕ್ಕೆ ನಲುಗಿ ಹೋಗಿದ ಕೊಡಗಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

  • ಎಷ್ಟು ದಿನ ಇರ್ತಿವೋ ಗೊತ್ತಿಲ್ಲ, ಇರಷ್ಟು ದಿನ ಜನಪರ ಕೆಲಸ ಮಾಡ್ತೀವಿ- ಸಿ.ಟಿ.ರವಿ

    ಎಷ್ಟು ದಿನ ಇರ್ತಿವೋ ಗೊತ್ತಿಲ್ಲ, ಇರಷ್ಟು ದಿನ ಜನಪರ ಕೆಲಸ ಮಾಡ್ತೀವಿ- ಸಿ.ಟಿ.ರವಿ

    ಚಿತ್ರದುರ್ಗ: ಯಾರ ಹಣೆ ಬರಹವನ್ನು ಯಾರೂ ನಿರ್ಧರಿಸಿರುವುದಿಲ್ಲ. ಎಲ್ಲಾ ಭಗವಂತನೇ ನಿರ್ಧರಿಸಿ ಭೂಮಿಗೆ ಕಳಿಸಿರುತ್ತಾನೆ. ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇವೆ ಎನ್ನುವುದು ಮುಖ್ಯವಲ್ಲ, ಅಧಿಕಾರದಲ್ಲಿದ್ದಾಗ ಜನಪರ ಕೆಲಸ ಮಾಡಬೇಕು ಎಂದು ಸರ್ಕಾರದ ಅಸ್ಥಿತ್ವದ ಕುರಿತು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ.

    ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕೊಟ್ಟಿರುವುದು ನ್ಯಾಯಾಲಯ. ಕಾನೂನು, ನ್ಯಾಯಾಲಯಕ್ಕಿಂತ ಯಾರೂ ಹಿರಿಯರಲ್ಲ. ಕೆಲವರು ಕಾನೂನಿಗಿಂತ ದೊಡ್ಡವರು ಅಂದುಕೊಳ್ಳುತ್ತಾರೆ. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು. ಡಿಕೆಶಿ ವಿಚಾರದಲ್ಲಿ ಯಾರೇ ಅವರ ಬೆನ್ನಿಗೆ ನಿಂತರೂ ನ್ಯಾಯಾಲಯವೇ ತೀರ್ಪು ಕೊಡಲಿದೆ. ಇದರಲ್ಲಿ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಕೋರ್ಟ್ ತೀರ್ಪಿಗೆ ಎಲ್ಲರೂ ತೆಲೆ ಬಾಗಲೇಬೇಕು ಎಂದರು.

    ರಾಮ ಮಂದಿರವನ್ನು ಕಟ್ಟುವುದು ನಮ್ಮ ಆದ್ಯತೆಯ ವಿಷಯ. ನಾವು ಪ್ರತಿಪಾದಿಸಿದ ವಿಚಾರವನ್ನು ಎಂದೂ ಕೈ ಬಿಟ್ಟಿಲ್ಲ. ಅಕ್ರಮಣಕಾರಿ ಅಕ್ಬರ್ ನನ್ನು ವೈಭವೀಕರಿಸುವದನ್ನು ದೇಶ ಭಕ್ತರು ಸಹಿಸಲ್ಲ. ನ್ಯಾಯಾಲಯ ಇದೀಗ ವಿಚಾರಣೆ ನಡೆಸುತ್ತಿದೆ. ರಾಮಮಂದಿರ ವಿವಾದವನ್ನು ಪರಿಹರಿಸುವ ರೀತಿಯ ತೀರ್ಪು ಸುಪ್ರೀಂ ಕೋರ್ಟ್‍ನಿಂದ ಹೊರಬೀಳಲಿದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.

    ಬ್ಯಾಂಕಿಂಗ್ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಯಲ್ಲಿ ಕೊಡಬೇಕು ಎಂದು ಆಗ್ರಹಿಸಿದ್ದೆವು. ಈ ಕುರಿತು ನಿರ್ಮಲಾ ಸೀತಾರಮನ್ ಜೊತೆಗೂ ಚರ್ಚಿಸಿದ್ದೆವು. ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿ ತಿದ್ದುಪಡಿಗೆ ಒತ್ತಾಯಿಸುತ್ತೇವೆ. ಈ ರೀತಿಯಾಗುತ್ತಿರುವುದು ಇದೇ ಮೊದಲ ಬಾರಿಯಲ್ಲ ಈ ಹಿಂದೆಯೂ ಇದೇ ರೀತಿಯಾಗಿತ್ತು. ಆಗಿನಿಂದಲೂ ಒತ್ತಾಯಿಸುತ್ತ ಬಂದಿದ್ದೇವೆ. ಈಗಲೂ ಸಹ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸುತ್ತೇವೆ ಎಂದು ತಿಳಿಸಿದರು.

  • ಇಷ್ಟು ಪ್ರವಾಹವಾದ್ರೂ ಮೋದಿ ನಯಾಪೈಸೆ ನೀಡದೇ ತೆಪ್ಪಗಿರೋದು ದುರ್ದೈವ: ಹೆಚ್‍ಕೆ ಪಾಟೀಲ್

    ಇಷ್ಟು ಪ್ರವಾಹವಾದ್ರೂ ಮೋದಿ ನಯಾಪೈಸೆ ನೀಡದೇ ತೆಪ್ಪಗಿರೋದು ದುರ್ದೈವ: ಹೆಚ್‍ಕೆ ಪಾಟೀಲ್

    ಗದಗ: ಪ್ರವಾಹ ಬಂದು ಮುಗಿದು ಹೋದ ಮೇಲೆ ಇನ್ನೂ ಯಾವುದೇ ಅನುದಾನ ಪ್ರಕಟಿಸಿದ್ದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಎಚ್.ಕೆ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗದಗದಲ್ಲಿ ಮಾತನಾಡಿದ ಅವರು, ಪ್ರವಾಹ ಪೀಡಿತ ಪ್ರದೇಶದ ಜನರ ಸಂಕಷ್ಟಕ್ಕೆ ಸಹಾಯ ಮಾಡದಿರೋದು ದುರ್ದೈವ ಸ್ಥಿತಿ. ಇದು ರಾಷ್ಟ್ರೀಯ ವಿಪತ್ತು ಅಂತ ಘೋಷಣೆ ಮಾಡಬೇಕಿತ್ತು. ಭಾರೀ ಪ್ರಮಾಣದ ಪ್ರವಾಹವಾದರೂ ಕೇಂದ್ರ ಸರ್ಕಾರ ನಯಾಪೈಸೆ ನೀಡದೇ ತೆಪ್ಪಗಿರೋದು ಅತ್ಯಂತ ದುರ್ದೈವ ಪ್ರಸಂಗ ಎಂದು ಆಕ್ರೋಶ ಹೊರ ಹಾಕಿದರು.

    2009 ರಲ್ಲಿ ನೆರೆ ಬಂದಾಗ ಮನಮೋಹನ್ ಸಿಂಗ್ ಅವರು 1600 ಕೋಟಿ ರೂ. ನೀಡಿದ್ದರು. ಆದರೆ ಈ ಭಾರಿ ಪ್ರವಾಹ ಬಂದು ತಿಂಗಳ ಮೇಲಾಯಿತು. ಕವಡೆಕಾಸಿನ ಹಣ ಮೋದಿ ನೀಡಿಲ್ಲ. ಇದೆನಾ ಮೋದಿ ಜನರಿಗೆ ಕೊಡುವ ಗೌರವ? ಇದೆನಾ ಜನರ ನೋವು, ಸಂಕಷ್ಟಕ್ಕೆ ಸ್ಪಂದಿಸುವ ರೀತಿ ಎಂದು ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡರು.

    ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಯಡಿಯೂರಪ್ಪ ಸರ್ವಪಕ್ಷ ನಿಯೋಗ ಒಯ್ಯದೇ ಲೋಪ ಮಾಡಿದ್ದಾರೆ. ಕೂಡಲೇ ಸರ್ವಪಕ್ಷ ನಿಯೋಗ ಕೊಂಡೊಯ್ಯಿರಿ ಎಂದು ಹೆಚ್.ಕೆ ಪಾಟೀಲ್ ಸಿಎಂಗೆ ಒತ್ತಾಯಮಾಡಿದರು.

  • ಭ್ರಷ್ಟಾಚಾರಿ, ಗೂಂಡಾಗಳನ್ನು ಸರ್ಕಾರ ರಕ್ಷಿಸಲ್ಲ: ಕೆ.ಎಸ್.ಈಶ್ವರಪ್ಪ

    ಭ್ರಷ್ಟಾಚಾರಿ, ಗೂಂಡಾಗಳನ್ನು ಸರ್ಕಾರ ರಕ್ಷಿಸಲ್ಲ: ಕೆ.ಎಸ್.ಈಶ್ವರಪ್ಪ

    ಧಾರವಾಡ/ಹುಬ್ಬಳ್ಳಿ: ಭ್ರಷ್ಟಾಚಾರಿ, ಗೂಂಡಾಗಳು ಹಾಗೂ ಕೊಲೆಗಡುಕರಿಗೆ ಸರ್ಕಾರದ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆ ದೇಶದಲ್ಲಿತ್ತು. ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಅಂತಹವರಿಗೆ ರಕ್ಷಣೆ ನೀಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

    ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಯೋಗೀಶ್ ಗೌಡ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ಕುರಿತು ತನಿಖೆ ನಡೆಸಲಾಗುತ್ತಿದೆ. ತಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು ಈ ಪ್ರಕರಣವನ್ನು ಸಿಬಿಐಗೆ ನೀಡಲಾಗಿದೆ. ಗೂಂಡಾಗಳ ಬೆನ್ನಿಗೆ ನಮ್ಮ ಸರ್ಕಾರ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಭಾನುವಾರ ಹಾಗೂ ಸೋಮವಾರ ಬೆಳಗಾವಿಯ ಸುವರ್ಣಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇಂದು ಬೆಳಗಾವಿ, ಚಿಕ್ಕೋಡಿ ವಿಭಾಗದದಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದು ಇದೇ ವೇಳೆ ತಿಳಿಸಿದರು.

    ನೆರೆ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಧಿಕಾರಗಳ ತಂಡ ಕಳುಹಿಸಿ ಸಮೀಕ್ಷೆ ಮಾಡಿದೆ. ಆದಷ್ಟು ಬೇಗ ಕೇಂದ್ರ ಸರ್ಕಾರ ನೇರೆ ಪರಿಹಾರದ ಹಣವನ್ನು ಬಿಡುಗಡೆ ಮಾಡುತ್ತದೆ ಎಂಬ ನಂಬಿಕೆ ಇದೆ. ನೆರೆ ಹಾವಳಿಗೆ ಸಂಬಂಧಿಸಿದಂತೆ ಈಗ ತಾತ್ಕಾಲಿಕವಾಗಿ ಸಮಸ್ಯೆಗಳನ್ನು ಬಗೆಹರಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ಶೇ.99 ಭಾಗ ವಿತರಣೆಯಾಗಿದೆ. ಈಗ ತಾತ್ಕಾಲಿಕ ಸಮಸ್ಯೆ ನಿವಾರಣೆ ಮಾಡಲಾಗಿದೆ. ಮುಂದೆ ನಿರಾಶ್ರಿತರಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವದು ಎಂದರು.

  • ರಾಜ್ಯದಲ್ಲಿ ಪ್ರವಾಹ ಭೀತಿ- ಹೊಸ ಸಚಿವರಿಗೆ ದುಬಾರಿ ಕಾರಿನ ಶೋಕಿ

    ರಾಜ್ಯದಲ್ಲಿ ಪ್ರವಾಹ ಭೀತಿ- ಹೊಸ ಸಚಿವರಿಗೆ ದುಬಾರಿ ಕಾರಿನ ಶೋಕಿ

    ಬೆಂಗಳೂರು: ರಾಜ್ಯದಲ್ಲಿ ಪ್ರವಾಹದ ಭೀಕರತೆಗೆ ಜನರು ತತ್ತರಿಸಿ ಹೋಗಿದ್ದಾರೆ. ಅರ್ಧ ಕರ್ನಾಟಕದ ಜನರ ಬದುಕು ಪ್ರವಾಹದಿಂದ ಬೀದಿಗೆ ಬಂದಿದೆ. ಇತ್ತ ಕೇಂದ್ರದಿಂದ ರಾಜ್ಯಕ್ಕೆ ಬಿಡಿಗಾಸು ಪರಿಹಾರ ಸಿಕ್ಕಿಲ್ಲ. ಆದರೆ ನೂತನ ಸಚಿವರಿಗೆ ಮಾತ್ರ ಕಾಸ್ಟ್ಲಿ ಕಾರಿನ ವ್ಯಾಮೋಹ ಶುರುವಾಗಿದೆ.

    ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೂ ಕೂಡ ಪ್ರವಾಹ ಪರಿಹಾರ ಧನವನ್ನು ಬಿಜೆಪಿ ನಾಯಕರಿಗೆ ಕೊಡಿಸಲು ವಿಳಂಬವಾಗುತ್ತಿದೆ. ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟದ ಹೊಸ ಸಚಿವರಿಗೆ ಓಡಾಡೋಕೆ ಮಾತ್ರ ದುಬಾರಿ ಕಾರು ಬೇಕಂತೆ. ಸದ್ಯ 15 ಲಕ್ಷದಿಂದ 23 ಲಕ್ಷದ ಇನ್ನೋವಾ ಕಾರನ್ನು ನೂತನ ಸಚಿವರುಗಳಿಗೆ ನೀಡಲಾಗಿದ್ದು, ನಮಗೆ ಇದರಲ್ಲಿ ಓಡಾಡೋಕೆ ಆಗಲ್ಲ 40-45 ಲಕ್ಷದ ಫಾರ್ಚೂನರ್ ಕಾರೇ ಬೇಕು ಎಂದು ಸಚಿವರು ಕೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.

    ಅರ್ಧ ರಾಜ್ಯದ ಜನ ಸೂರಿಲ್ಲದೇ ಕಣ್ಣೀರಿನಲ್ಲಿ ಕೈತೊಳೆಯುವ ಈ ಪರಿಸ್ಥಿತಿಯಲ್ಲಿ ಪ್ರಭಾವಿ ಮುಖಂಡರು ಕಾಸ್ಟ್ಲಿ ಕಾರಿಗೆ ಡಿಮ್ಯಾಂಡ್ ಇಟ್ಟಿದ್ದು ಚರ್ಚೆಗೆ ಗ್ರಾಸವಾಗಿದೆ. ಸಚಿವರಿಗೆ ಈವರೆಗೂ ಖಾತೆಯೇ ಹಂಚಿಕೆಯಾಗಿಲ್ಲ, ಅಷ್ಟರಲ್ಲೇ ಶೋಕಿ ಶುರು ಮಾಡಿಕೊಂಡಿರುವ ಪ್ರಭಾವಿ ಸಚಿವರುಗಳ ಕಾರು ಕ್ಯಾತೆಗೆ ಜನ ಕೆಂಡಾಮಂಡಲರಾಗಿದ್ದಾರೆ.

  • ರಾಜಧಾನಿಯಲ್ಲಿ ದಿನೇ ದಿನೇ ಹೆಚ್ಚಾಗ್ತಿದೆ ಸೈಬರ್ ಕ್ರೈಂ- ಹೊಸ ಠಾಣೆ ತೆರೆಯಲು ಚಿಂತನೆ

    ರಾಜಧಾನಿಯಲ್ಲಿ ದಿನೇ ದಿನೇ ಹೆಚ್ಚಾಗ್ತಿದೆ ಸೈಬರ್ ಕ್ರೈಂ- ಹೊಸ ಠಾಣೆ ತೆರೆಯಲು ಚಿಂತನೆ

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಸೈಬರ್ ಕ್ರೈಂಗಳು ಹೆಚ್ಚಾಗುತ್ತಲೇ ಇದೆ. ಆದರೆ ಈ ಪ್ರಕರಣ ದಾಖಲಿಸಿಕೊಳ್ಳಲು ಒಂದೇ ಸೈಬರ್ ಕ್ರೈಂ ಪೊಲೀಸ್ ಠಾಣೆ ಇರುವ ಕಾರಣಕ್ಕೆ ಹೊಸ ಸೈಬರ್ ಪೊಲೀಸ್ ಠಾಣೆಗಳನ್ನ ತೆರೆಯುವ ಚಿಂತನೆ ನಡೆಯುತ್ತಿದೆ.

    ಟೆಕ್ನಾಲಜಿ ಮುಂದುವರಿದಂತೆ ಆನ್‍ಲೈನ್ ವಂಚಕರು, ಸಾಮಾಜಿಕ ಜಾಲಾತಣದಲ್ಲಿ ಹೆಣ್ಣು ಮಕ್ಕಳಿಗೆ ಕಿರುಕುಳ ಪ್ರಕರಣ ಹೀಗೆ ಹಲವು ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಈ ಪ್ರಕರಣಗಳು ಸೈಬರ್ ಕ್ರೈಂ ವ್ಯಾಪ್ತಿಗೆ ಬರುವುದರಿಂದ ಪ್ರತಿನಿತ್ಯ 30 ರಿಂದ 40 ಬೇರೆ ಬೇರೆ ಪ್ರಕರಣಗಳು ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗುತ್ತಿವೆ. ನಗರದಲ್ಲಿ ಒಂದೇ ಸೈಬರ್ ಕ್ರೈಂ ಠಾಣೆ ಇರುವುದರಿಂದ ದಾಖಲಾಗಿರುವ ದೂರುಗಳನ್ನ ಬೇಧಿಸಲು ಸಾಕಷ್ಟು ವಿಳಂಬವಾಗುತ್ತಿದೆ.

    ಅನ್ಯಾಯಕ್ಕೆ ಒಳಗಾಗಿರುವವರಿಗೆ ನ್ಯಾಯ ದೊರಕಿಸಿಕೊಡಲು ಬೆಂಗಳೂರಿನ ಬೇರೆ ಬೇರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯನ್ನ ಮಾಡಲು ಸರ್ಕಾರಕ್ಕೆ ಅನುಮತಿ ಕೇಳಲಾಗಿದೆ. ಸರ್ಕಾರ ಕೂಡ ಬಜೆಟ್‍ನಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದೆ ಎನ್ನಲಾಗಿದೆ. ಈಗಿರುವ ಸೈಬರ್ ಪೊಲೀಸ್ ಠಾಣೆ ಸೇರಿದಂತೆ ಹೊಸದಾಗಿ ಎಂಟು ಸೈಬರ್ ಪೊಲೀಸ್ ಠಾಣೆಯನ್ನ ತೆರೆಯಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.

  • ರಾಜ್ಯ ಸರ್ಕಾರಕ್ಕೆ ಮತಿಯಿಲ್ಲ, ಜನಕ್ಕೆ ಗತಿಯಿಲ್ಲ, ಈ ಸರ್ಕಾರ ಹೆಚ್ಚುದಿನ ಉಳಿಯಲ್ಲ:  ಖಾದರ್

    ರಾಜ್ಯ ಸರ್ಕಾರಕ್ಕೆ ಮತಿಯಿಲ್ಲ, ಜನಕ್ಕೆ ಗತಿಯಿಲ್ಲ, ಈ ಸರ್ಕಾರ ಹೆಚ್ಚುದಿನ ಉಳಿಯಲ್ಲ: ಖಾದರ್

    ಉಡುಪಿ: ರಾಜ್ಯ ಸರ್ಕಾರಕ್ಕೆ ಮತಿಯಿಲ್ಲ, ಜನಕ್ಕೆ ಗತಿಯಿಲ್ಲ ಎಂದು ಹೇಳುವ ಮೂಲಕ ಮಾಜಿ ಸಚಿವ ಯು.ಟಿ ಖಾದರ್ ರಾಜ್ಯ ಸರ್ಕಾರವನ್ನ ಟೀಕಿಸಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಖಾದರ್, ಈ ಸರ್ಕಾರ ಹೆಚ್ಚು ದಿನ ಉಳಿಯಲ್ಲ. ಅವರ ಪಕ್ಷದ ನಾಯಕರ ಹೇಳಿಕೆಯಿಂದ ಇದು ಸಾಬೀತಾಗುತ್ತಿದೆ. ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆಯೇ ಇದಕ್ಕೆ ಸಾಕ್ಷಿ ಎಂದರು.

    ರಾಜ್ಯಾದ್ಯಂತ ನೆರೆ ಪರಿಹಾರ ಹಂಚಿಕೆ ವಿಚಾರದಲ್ಲಿ ಬಿಜೆಪಿ ಚೌಕಾಶಿ ಮಾಡುತ್ತಿದೆ. ಪ್ರತಿ ಮನೆಗೆ 50 ಸಾವಿರ ಪ್ರಾಥಮಿಕ ಪರಿಹಾರ ಕೊಡಿ. ಸಿದ್ದರಾಮಯ್ಯ ಸರ್ಕಾರದ ಕಾಲದಲ್ಲಿ ನಾವು 35 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದೇವೆ. ನಿಮಗೆ ಒಂದು ಸಾವಿರ ಕೋಟಿ ಕೊಡಲು ಏನು ಕಷ್ಟ ಎಂದು ಚಾಟಿ ಬೀಸಿದರು.

    ನಳಿನ್ ಕುಮಾರ್ ಕಟೀಲ್‍ಗೆ ಬಿಜೆಪಿ ಅಧ್ಯಕ್ಷ ಸ್ಥಾನಕೊಟ್ಟ ಬಗ್ಗೆ, ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶಾಸಕ ಯು.ಟಿ, ಸಂಸದರಾಗಿ ನಳೀನ್ ಕುಮಾರ್ ಕಟೀಲ್ ಕೆಲಸ ಮಾಡಿಲ್ಲ. ರಾಜ್ಯಾಧ್ಯಕ್ಷರ ಪ್ರಭಾವ ಬಳಸಿ ಕೇಂದ್ರ-ರಾಜ್ಯ ಸರ್ಕಾರಗಳ ಸಹಾಯ ಪಡೆದು ಅಭಿವೃದ್ಧಿ ಕೆಲಸ ಮಾಡಲಿ ಎಂದು ಹಾರೈಸಿದರು.

  • ಪಿಎಂ ಹತ್ರ ಮಾತಾಡೋಕೆ ಸಿಎಂಗೆ ಧೈರ್ಯವಿಲ್ಲದಿದ್ದರೇ ನಮ್ಮನ್ನ ಕರೆದುಕೊಂಡು ಹೋಗ್ಲಿ: ಸಿದ್ದರಾಮಯ್ಯ

    ಪಿಎಂ ಹತ್ರ ಮಾತಾಡೋಕೆ ಸಿಎಂಗೆ ಧೈರ್ಯವಿಲ್ಲದಿದ್ದರೇ ನಮ್ಮನ್ನ ಕರೆದುಕೊಂಡು ಹೋಗ್ಲಿ: ಸಿದ್ದರಾಮಯ್ಯ

    ಬಾಗಲಕೋಟೆ: ಪ್ರವಾಹ ಬಂದು ರಾಜ್ಯದಲ್ಲಿ ಸಾಕಷ್ಟು ಹಾನಿಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಈವರೆಗೂ ಹಣ ಬಿಡುಗಡೆ ಮಾಡಿಲ್ಲ. ಪ್ರಧಾನಿ ಜೊತೆ ಸಿಎಂ ಯಡಿಯೂರಪ್ಪ ಅವರಿಗೆ ಮಾತನಾಡಲು ಧೈರ್ಯವಿಲ್ಲದಿದ್ದರೆ ನಮ್ಮನಾದರೂ ಕರೆದುಕೊಂಡು ಹೋಗಲಿ. ನಾವಾದರೂ ಮಾತನಾಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

    ಬಾದಾಮಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರವಾಹದಿಂದ ಅಂದಾಜು 1 ಲಕ್ಷ ಕೋಟಿ ರೂ. ನಷ್ಟವಾಗಿದೆ. ಆದರೆ ಸದ್ಯಕ್ಕೆ ನಾವು ಪ್ರವಾಹ ಪರಿಹಾರಕ್ಕೆ ಐದು ಸಾವಿರ ಕೋಟಿ ಕೊಡಿ ಎಂದು ಕೇಳಿದ್ದೇವೆ. ಆ ಮೇಲೆ ವರದಿ ಆಧಾರದ ಮೇಲೆ ಹೆಚ್ಚಿನ ಪರಿಹಾರ ಕೊಡಲಿ. ಕೇಂದ್ರ ಸರ್ಕಾರ ಕೊಡದಿದ್ದರೆ ರಾಜ್ಯ ಸರ್ಕಾರವಾದರೂ ಕೊಡಲಿ. ಪ್ರಧಾನಿ ಜೊತೆ ಸಿಎಂ ಯಡಿಯೂರಪ್ಪ ಅವರಿಗೆ ಮಾತನಾಡಲು ಧೈರ್ಯವಿಲ್ಲದಿದ್ದರೆ ನಮ್ಮನಾದರೂ ಕರೆದುಕೊಂಡು ಹೋಗಲಿ, ನಾವಾದರೂ ಮಾತನಾಡುತ್ತೇವೆ. ಜನರು ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸದೇ ನಿರ್ಲಕ್ಷ್ಯ ಮಾಡಿದೆ, ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ. ಬಿಜೆಪಿ ಸರ್ಕಾರ ಪ್ರವಾಹ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ದೂರಿದರು.

    ಕೇಂದ್ರ ಗೃಹ ಸಚಿವ ಅಮಿತ್ ಶಾ ವರು ರಾಜ್ಯಕ್ಕೆ ಭೇಟಿ ಕೊಟ್ಟು ಪ್ರವಾಹದ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಅವರಾದರೂ ಈ ಬಗ್ಗೆ ಮಾತನಾಡಿ ಪರಿಹಾರ ಬಿಡುಗಡೆ ಮಾಡಬೇಕಿತ್ತು. ಆದರೆ ಈವರೆಗೂ ಹಣ ಬಿಡುಗಡೆ ಮಾಡಿಲ್ಲ. ಅಮಿತ್ ಶಾ ಅವರು ಬಹಳ ಪವರ್‍ಪುಲ್ ಮ್ಯಾನ್. ಮೋದಿಗೆ ಆಪ್ತರು, ಅವರೂ ಕೂಡ ಪರಿಹಾರದ ಬಗ್ಗೆ ಗಮನಕೊಟ್ಟಿಲ್ಲ. ರಾಜ್ಯದ ಜನ 25 ಸಂಸದರನ್ನ ಆಯ್ಕೆ ಮಾಡಿ ಕಳಿಸಿದ್ದಾರೆ ಅವರೆಲ್ಲಾ ಏನು ಮಾಡುತ್ತಿದ್ದಾರೆ? ಪ್ರಧಾನಮಂತ್ರಿ ಮೋದಿ ಅವರು ರಾಜ್ಯಕ್ಕೆ ಭೇಟಿ ಕೊಡದೆ ನಿರ್ಲಕ್ಷಿಸಿದ್ದಾರೆ. ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತೋರಿದ್ದಾರೆ. ಪ್ರವಾಹ ಎದುರಾಗಿ 15 ದಿನ ಕಳೆದರೂ 1 ರೂಪಾಯಿ ಹಣ ಬಿಡುಗಡೆ ಮಾಡಿಲ್ಲ. ರಾಜ್ಯದಲ್ಲಿ, ಕೇಂದ್ರದಲ್ಲಿ ಒಂದೇ ಸರ್ಕಾರವಿದ್ದರೂ ಹೀಗಾಗುತ್ತಿದೆ. ಹಿಂದೆ ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ರಾಜ್ಯದಲ್ಲಿ ಪ್ರವಾಹ ಬಂದಾಗ ಇಲ್ಲಿಗೆ ಭೇಟಿಕೊಟ್ಟು, ಪರಿಹಾರ ಬಿಡುಗಡೆ ಮಾಡಿದ್ದರು. ಆದರೆ ಈಗಿನ ಪ್ರಧಾನಿ ಆ ಕೆಲಸ ಮಾಡಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

    ಪ್ರವಾಹಕ್ಕೆ ಬಾದಾಮಿ ತತ್ತರಿಸಿ ಹೋಗಿದೆ. ಎಲ್ಲಾ ಕಡೆ ಶೆಡ್ ಹಾಕಿಕೊಡಿ ಎಂದು ಸಂತ್ರಸ್ತರು ಗೋಳಾಡುತ್ತಿದ್ದಾರೆ. 43 ಹಳ್ಳಿಯ ಜನರು ನಮ್ಮನ್ನ ಸ್ಥಳಾಂತರಿಸಿ ಎಂದು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಸರ್ಕಾರ ನಡೆಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ದೂರಿದರು.

    ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಮನೆ ಮೇಲೆ ಐಟಿ ಹಾಗೂ ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಗೊತ್ತಿಲ್ಲಪ್ಪ, ಅವರು ಕೋರ್ಟಿಗೆ ಹೋಗಿದ್ದಾರೆ ಎಂದರು. ಬಳಿಕ ಬಿಜೆಪಿ ಸರ್ಕಾರ ಸಚಿವ ಸಂಪುಟ ಅಸಮಾಧಾನದ ಬಗ್ಗೆ ಪ್ರಶ್ನಿಸಿದಾಗ ಮಾತನಾಡದೇ ಸಿದ್ದರಾಮಯ್ಯ ಅವರು ಹೊರಟುಹೋದರು.

  • 6 ಬಾರಿ ಗೆದ್ರೂ ಸಚಿವ ಸ್ಥಾನ ನೀಡದಿರುವುದು ಆಘಾತವಾಗಿದೆ: ತಿಪ್ಪಾರೆಡ್ಡಿ

    6 ಬಾರಿ ಗೆದ್ರೂ ಸಚಿವ ಸ್ಥಾನ ನೀಡದಿರುವುದು ಆಘಾತವಾಗಿದೆ: ತಿಪ್ಪಾರೆಡ್ಡಿ

    – ಬೈಕಿಗೆ ಬೆಂಕಿ ಹಚ್ಚಿ ತಿಪ್ಪಾರೆಡ್ಡಿ ಬೆಂಬಲಿಗರ ಆಕ್ರೋಶ

    ಚಿತ್ರದುರ್ಗ: ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ತಿಪ್ಪಾರೆಡ್ಡಿ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ತಳಮಟ್ಟದವರೆಗೆ ಬೇರೂರಲು ಶಕ್ತಿಯಾಗಿದ್ದ ತಿಪ್ಪಾರೆಡ್ಡಿ ಬಿಜೆಪಿ ಹೈಕಮಾಂಡ್ ಹಾಗು ಯಡಿಯೂರಪ್ಪನವರ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪದೇ ಪದೇ ಈ ಜಿಲ್ಲೆಗೆ ವಲಸಿಗರೇ ಉಸ್ತುವಾರಿ ಸಚಿವರಾಗ್ತಿರೋದು ಚಿತ್ರದುರ್ಗದ ದೌರ್ಭಾಗ್ಯ ಎಂದಿದ್ದಾರೆ. ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗಿದ್ದ ಅವರು ಇಂದು ಮಧ್ಯಾಹ್ನ ಬೆಂಗಳೂರಿನ ಶಾಸಕರ ಭವನದಲ್ಲಿ ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರೊಂದಿಗೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.

    ನಾನು ಸುಮಾರು 50 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. 6 ಬಾರಿ ಶಾಸಕನಾಗಿದ್ದೇನೆ. ಕಳೆದ 16-17 ವರ್ಷದಿಂದ ಹೊರಗಿನವರೇ ನಮ್ಮ ಜಿಲ್ಲೆಯ ಉಸ್ತವಾರಿ ಸಚಿವರಾಗುತ್ತಿರೋದು ದುರಂತ. ನಮ್ಮಲ್ಲಿ ಒಂದು ಅಭಿವೃದ್ಧಿ ಕೆಲಸ ಕೂಡ ಆಗಿರುವ ಉದಾಹರಣೆ ಇಲ್ಲ. ನನ್ನ ರಾಜಕೀಯ ಇತಿಹಾಸದಲ್ಲಿ ಯಾವುದೇ ಮೈನಸ್ ಪಾಯಿಂಟ್ ಇಲ್ಲ. ಯಾರೊಬ್ಬರು ಬೆರಳು ಮಾಡಿ ತೋರಿಸುವಂತ ಕೆಲಸ ಕೂಡ ನಾನು ಮಾಡಿಲ್ಲ. ನಿಷ್ಪಕ್ಷಪಾತವಾಗಿ ಪಕ್ಷದ ಸಂಘಟನೆಗೆ ನಾವು ದುಡಿದಿದ್ದೇವೆ. ಪಕ್ಷ ಸೋತಾಗಲೂ ಜಿಲ್ಲೆಯಲ್ಲಿ ನಾವು ಲೀಡ್ ಪಡೆದು ಗೆದ್ದಿದ್ದೇವೆ. ನಾವು ಆರು ಬಾರಿ ಗೆದ್ದು, ಜನರ ವಿಸ್ವಾಸ ಗಳಿಸಿ, ಜಿಲ್ಲೆಯ ಎಲ್ಲಾ ಜನಾಂಗಕ್ಕೆ ಭೇದ ಭಾವ ಮಾಡದೇ ಕೆಲಸ ಮಾಡಿದ್ದೇವೆ. ನಮಗೆ ಯಾವಾಗ ಅವಕಾಶ ಕೊಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

    ಬೇರೆಯವರ ಹಾಗೆ ಜನ ಕಟ್ಟಿಕೊಂಡು ಲಾಬಿ ಮಾಡುವ ಅವಶ್ಯಕತೆ ನನಗಿಲ್ಲ. ಯಾಕೆಂದರೆ ನಾನು ವಯಸ್ಸಿನಲ್ಲಿ ಹಾಗೂ ಶಾಸಕರಲ್ಲಿ ಅತ್ಯಂತ ಹಿರಿಯ ನಾಯಕ. ಈ ರೀತಿ ಇರುವಾಗ ನಮಗೆ ಅವಕಾಶ ಕೊಡದಿರುವುದು ಬಹಳ ನೋವಿನ ಸಂಗತಿ. ಈ ವಿಚಾರದಲ್ಲಿ ನಮ್ಮ ಸಿಎಂ ಹಾಗೂ ಕೇಂದ್ರದ ನಾಯಕರಿಗೆ ನಾನು ವಿನಂತಿ ಮಾಡಿಕೊಳ್ಳುತ್ತೇನೆ. ಸದ್ಯದಲ್ಲೇ ಹಿರಿಯ ನಾಯಕರೆಲ್ಲ ಸೇರಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ. ಇಂದು ಪ್ರಮಾಣ ವಚನ ಸಮಾರಂಭಕ್ಕೆ ಹೋಗಬಾರದೆಂದು ನಾನು ನಿರ್ಧರಿಸಿದ್ದೆ. ಆದರೆ ನಮ್ಮ ಸ್ನೇಹಿತರು ಹಾಗೂ ಶಾಸಕರು ಕರೆ ಮಾಡಿ ಬರಲು ಹೇಳಿದ್ದಾರೆ, ಹೀಗಾಗಿ ಬೆಂಗಳೂರಿಗೆ ತೆರೆಳುತ್ತೇನೆ. ಅಲ್ಲಿ ರಾಜ್ಯದ ಅಭಿವೃದ್ಧಿಗೆ, ಪಕ್ಷಕ್ಕೆ ಅನುಕೂಲವಾಗುವ ರೀತಿ ಹೇಗೆ ನಮ್ಮ ನೋವನ್ನು ಹಿರಿಯ ನಾಯಕರಿಗೆ ತಿಳಿಸಬೇಕು ಎನ್ನುವುದನ್ನು ಚರ್ಚೆ ಮಾಡುತ್ತೇವೆ ಎಂದರು.

    ಜಿಲ್ಲೆಯಲ್ಲಿ ಎಲ್ಲರೂ ಪಕ್ಷಕ್ಕಾಗಿ ಕೆಲಸ ಮಾಡಿದ್ದೇವೆ. ಆದರೆ ಕೆಲ ಜನಾಂಗಕ್ಕೆ ಮಾನ್ಯತೆ ಕೊಡುತ್ತಿಲ್ಲ. ಹಿಂದಿನ ಕ್ಯಾಬಿನೆಟ್‍ನಲ್ಲಿ ಹಿಂದುಳಿದ ಜನಾಂಗದವರು ಕೆಲಸ ಮಾಡಿದ್ದಾರೆ. ಆದರೆ ಈಗ ಯಾವ ದೃಷ್ಟಿಯಿಂದ ನಮಗೆ ಅವಕಾಶ ಕೊಡುತ್ತಿಲ್ಲ ಎಂದು ಗೊತ್ತಿಲ್ಲ. ನಾನು ಬೇರೆಯವರಿಗೆ ಸಚಿವ ಸ್ಥಾನ ಕೊಟ್ಟಿರುವ ಬಗ್ಗೆ ಟೀಕೆ ಮಾಡಲ್ಲ. ಆದರೆ ನನಗೆ ಸಚಿವ ಸ್ಥಾನ ಕೊಡದಿದ್ದಕ್ಕೆ ನನ್ನ ನೋವನ್ನು ವ್ಯಕ್ತಪಡಿಸುತ್ತಿದ್ದೇನೆ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದರು.

    ಸಿಎಂ ಯಡಿಯೂರಪ್ಪ ಅವರಿಗೆ ನನ್ನ ಮೇಲೆ ಯಾವುದೇ ಮುನಿಸು, ದ್ವೇಷವಿಲ್ಲ. ಹಾಗೆಯೇ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬಗ್ಗೆ ಯಾರಾದರೂ ಕುತಂತ್ರ ನಡೆಸಿದ್ದಾರೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ಪಡೆಯುತ್ತೇವೆ. ಕಳೆದ 4-5 ಸರ್ಕಾರದ ಬಂದ ಅವಧಿಯಲ್ಲೂ ನಮ್ಮ ಜಿಲ್ಲೆಯವರು ಸಚಿವರಾಗದಿರುವುದು ದುರಂತ. ಹೊಸ ಸರ್ಕಾರ ರಚನೆಯಾದಗಲೆಲ್ಲಾ 4ರಿಂದ 5 ಮಂದಿ ಸಚಿವರಾಗುತ್ತಾರೆ ಆದರೆ ಎಲ್ಲರೂ ಹೊರ ಜಿಲ್ಲೆಯವರು. ಹೀಗಾಗಿ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದರು.

    ಯಾವೆಲ್ಲ ಹಿರಿಯ ಶಾಸಕರು ಸೇರಿ ಸಭೆ ನಡೆಸುತ್ತೇವೆ ಎಂದು ಮುಂದಿನ ದಿನಗಳಲ್ಲಿ ನಿಮಗೆ ತಿಳಿಯುತ್ತೆ. ಈಗಲೇ ಅದರ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ. ಎಬಿವಿಪಿ, ಭಜರಂಗದಳ, ಹಿಂದೂ ಸಂಘಟನೆ, ಆರ್‍ಎಸ್‍ಎಸ್ ಹೀಗೆ ಹಲವು ಸಂಘಟನೆ ಜೊತೆ ಸಕ್ರಿಯವಾಗಿದ್ದೇನೆ. ಬಿಜೆಪಿಯ ಯಾವುದೇ ಕಾರ್ಯಾಕ್ರವಿದ್ದರೂ ಕ್ರಿಯಾಶೀಲವಾಗಿ ಭಾಗಿಯಾಗಿದ್ದೇನೆ. ಆದರೂ ಸಚಿವ ಸ್ಥಾನ ಸಿಗದೇ ಇರುವುದು ಅಘಾತವಾಗಿದೆ ಎಂದು ನೋವನ್ನು ಹಂಚಿಕೊಂಡರು.

    ಇತ್ತ ಶಾಸಕ ತಿಪ್ಪಾರೆಡ್ಡಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಅವರ ಬೆಂಬಲಿಗರು ಪ್ರತಿಭಟನೆ ಮಾಡಿದ್ದಾರೆ. ಚಿತ್ರದುರ್ಗದ ಗಾಂಧಿಸರ್ಕಲ್‍ನಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರು, ನಗರಸಭೆ ಸದಸ್ಯರು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಸೇರಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಹೀರೋ ಸ್ಕೂಟಿ ಬೈಕಿಗೆ ಬೆಂಕಿ ಹಚ್ಚಿ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಸ್ಥಳಕ್ಕೆ ಚಿತ್ರದುರ್ಗ ಎಸ್‍ಪಿ ಡಾ.ಕೆ.ಅರುಣ್ ಹಾಗೂ ಇತರೆ ಪೊಲೀಸರು ಭೇಟಿ ನೀಡಿ, ಪ್ರತಿಭಟನಾ ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಪರಿಣಾಮ ದಿಕ್ಕಾಪಾಲಾಗಿ ಪ್ರತಿಭಟನಾಕಾರರು ಓಡಿಹೋಗಿದ್ದಾರೆ. ಅಲ್ಲದೆ ಮುಂಜಾಗೃತ ಕ್ರಮವಾಗಿ 10ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕರಕಲಾದ ಸ್ಕೂಟಿಯನ್ನು ಪೊಲೀಸರು ಸ್ಥಳಾಂತರಿಸಿದ್ದಾರೆ.