Tag: State Government

  • ಮಳೆಯ ರೌದ್ರಾವತಾರಕ್ಕೆ ಗ್ರಾಮವೇ ಕೆರೆಯಾಯ್ತು

    ಮಳೆಯ ರೌದ್ರಾವತಾರಕ್ಕೆ ಗ್ರಾಮವೇ ಕೆರೆಯಾಯ್ತು

    ರಾಯಚೂರು: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯು ಸಾಕಷ್ಟು ಅವಾಂತರ ಸೃಷ್ಟಿಸಿದೆ. ಸಿಂಧನೂರು ತಾಲೂಕಿನ ಸಾಲಗುಂದದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಇಡೀ ಗ್ರಾಮದಲ್ಲಿ ನೀರು ಮೊಣಕಾಲುವರೆಗೂ ರಭಸವಾಗಿ ಹರಿಯುತ್ತಿದ್ದು, ಇಡೀ ಗ್ರಾಮ ಕೆರೆಯಾಗಿ ಮಾರ್ಪಾಡಾಗಿದೆ.

    ಗ್ರಾಮದಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮಸ್ಥರು ರಾತ್ರಿ ಇಡೀ ಜಾಗರಣೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಇಷ್ಟೆಲ್ಲಾ ಅವಾಂತರಗಳಾಗಿದ್ದರೂ ಸರ್ಕಾರ ಕಣ್ತೆರೆಯದೇ ಇರೋದಕ್ಕೆ ಜನರು ಆಕ್ರೋಶವನ್ನ ಹೊರಹಾಕಿದ್ದಾರೆ. ಭೀಕರ ಪ್ರವಾಕ್ಕೂ ಪರಿಹಾರ ನೀಡದ ಸರ್ಕಾರ ನಮಗೇನು ಪರಿಹಾರ ನೀಡುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ. ಅಕ್ಕಿ, ಜೋಳ ನಮ್ಮಲ್ಲಿವೆ, ನೀವೇನು ಕೊಡಬೇಡಿ ಎಂದು ಸರ್ಕಾರದ ಕಿವಿ ಹಿಂಡಿದ್ದಾರೆ.

    ಮತ್ತೊಂದೆಡೆ ರಾಯಚೂರಿನ ಯಾಪಲದಿನ್ನಿ ಸೋಲಾರ್ ಪ್ಲ್ಯಾಂಟ್ ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿದ್ಯುತ್ ಘಟಕದಿಂದ ಹೊರಬರುವ ನೀರೆಲ್ಲಾ ರೈತರ ಜಮೀನಿಗೆ ನುಗ್ಗಿ ಹತ್ತಿ ಬೆಳೆ ನಾಶವಾಗಿದೆ. ಮಾನ್ವಿ ತಾಲೂಕಿನ ಉಟಕನೂರು ದೋತರಬಂಡಿ ಮಧ್ಯದ ಹಳ್ಳ ತುಂಬಿ ಹರಿಯುತ್ತಿದ್ದು, ವಿದ್ಯಾರ್ಥಿಗಳು ಶಾಲಾ- ಕಾಲೇಜಿಗೆ ತೆರೆಳಲು ಪರದಾಡುತ್ತಿದ್ದಾರೆ. ಇದರಿಂದ ಪರೀಕ್ಷೆಗಳಿದ್ದರೂ ಶಾಲೆಗೆ ಹೋಗದ ಸ್ಥಿತಿ ನಿರ್ಮಾಣವಾಗಿದೆ. ಹಳ್ಳದ ಪಕ್ಕದ ಜಮೀನುಗಳಿಗೂ ನೀರು ನುಗ್ಗಿ ನೂರಾರು ಎಕ್ರೆ ಬೆಳೆ ಹಾನಿಯಾಗಿದೆ.

  • ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಒಲವು -ಗ್ರೀನ್ ಸಿಗ್ನಲ್ ಕೊಡ್ತಾರಾ ಅನರ್ಹರು?

    ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಒಲವು -ಗ್ರೀನ್ ಸಿಗ್ನಲ್ ಕೊಡ್ತಾರಾ ಅನರ್ಹರು?

    ಬೆಂಗಳೂರು: ರಾಜ್ಯದಲ್ಲಿ ಅರ್ಧ ಸರ್ಕಾರವಿದ್ದು, ಪೂರ್ಣ ಸರ್ಕಾರ ಮಾಡಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೊರಟಿದ್ದಾರೆ. ಆದರೆ ಬಿಎಸ್‍ವೈರ ಈ ನಿರ್ಧಾರಕ್ಕೆ ಹೈಕಮಾಂಡ್ ಹಾಗೂ ಅನರ್ಹ ಶಾಸಕರು ಒಪ್ಪಿಗೆ ನೀಡುತ್ತಾರಾ ಎಂಬ ಅನುಮಾನ ಮೂಡಿದೆ.

    ಸದ್ಯ ಸಿಎಂ ಬಿಎಸ್‍ವೈ ಅವರ ಬಳಿ 46 ಖಾತೆಗಳಲ್ಲಿ 23 ಖಾತೆಗಳಿದ್ದು, ಇದರಲ್ಲಿ ಪ್ರಮುಖ ಖಾತೆಗಳನ್ನು ಹಂಚಿಕೆ ಮಾಡಲು ಚಿಂತನೆ ನಡೆಸಿದ್ದಾರೆ. ಆ ಮೂಲಕ ರಾಜ್ಯದ ಅಭಿವೃದ್ಧಿ ಕಾರ್ಯಗಳ ವೇಗವನ್ನು ಹೆಚ್ಚಿಸುವ ಚಿಂತನೆಯನ್ನು ಬಿಎಸ್‍ವೈ ಹೊಂದಿದ್ದು, ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದರೆ 1 ವಾರದಲ್ಲೇ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ.

    ಸಂಪುಟ ವಿಸ್ತರಣೆಗೆ ಇಬ್ಬರಿಂದಲೂ ಅನುಮತಿ ಸಿಗದಿದ್ದರೆ ಸಿಎಂ ಬಿಎಸ್‍ವೈ ‘ಪ್ಲಾನ್ ಬಿ’ ಕೂಡ ಸಿದ್ಧಪಡಿಸಿಕೊಂಡಿದ್ದಾರೆ. ಇದರಂತೆ ಹೈಕಮಾಂಡ್, ಅನರ್ಹ ಶಾಸಕರ ಒಪ್ಪಿಗೆ ಸಿಗದಿದ್ದರೆ ‘ಪ್ಲಾನ್ ಬಿ’ ಅಳವಡಿಕೊಳ್ಳಲು ಮುಂದಾಗಲಿದ್ದಾರೆ. ಈಗಾಗಲೇ ಸಂಪುಟ ಸಚಿವ ಖಾತೆ ಪಡೆದಿರುವ ಸಚಿವರಿಗೆ ಹೆಚ್ಚುವರಿ ಜವಾಬ್ದಾರಿಯನ್ನು ಷರತ್ತಿನ ಅನ್ವಯ ನೀಡಲು ಬಿಎಸ್‍ವೈ ‘ಪ್ಲಾನ್ ಬಿ’ ಅಡಿ ನಿರ್ಧರಿಸಿದ್ದಾರೆ. ಪ್ರಮುಖ ಖಾತೆಗಳಾದ ಜಲಸಂಪನ್ಮೂಲ, ಇಂಧನ, ಕೃಷಿ, ಬೆಂಗಳೂರು ಅಭಿವೃದ್ಧಿ ಖಾತೆಗಳು ಸಿಎಂ ಅವರ ಬಳಿಯೇ ಇದ್ದು, ಈ ಖಾತೆಗಳನ್ನು ಹೆಚ್ಚುವರಿ ಜವಾಬ್ದಾರಿಯಾಗಿ ನೀಡಲು ಸಿಎಂ ಚಿಂತನೆ ನಡೆಸಿದ್ದಾರೆ. ಅನರ್ಹ ಚುನಾವಣೆಗೆ ಸ್ಪರ್ಧೆ ಮಾಡಿ ಗೆದ್ದು ಬಂದ ಸಂದರ್ಭದಲ್ಲಿ ಖಾತೆಗಳನ್ನು ಬಿಟ್ಟು ಕೊಡುವ ಷರತ್ತಿನ ಅನ್ವಯ ‘ಪ್ಲಾನ್ ಬಿ’ ಜಾರಿ ಮಾಡಲಿದ್ದಾರೆ ಎನ್ನಲಾಗಿದೆ.

    ಹೆಚ್ಚುವರಿ ಖಾತೆ ಯಾರಿಗೆ ಸಿಗುತ್ತೆ?
    ಸಂಪುಟ ವಿಸ್ತರಣೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿರುವ ಸಿಎಂ ಬಿಎಸ್‍ವೈ, ಸದ್ಯ ತಮ್ಮ ಬಳಿ ಇರುವ 23 ಖಾತೆಗಳನ್ನು ಹಂಚಿಕೆ ಮಾಡಿದರೆ ಪ್ರಮುಖ ಖಾತೆಗಳ ಹೆಚ್ಚಿನ ಜವಾಬ್ದಾರಿ ಸಚಿವರಿಗೆ ಸಿಗಲಿದೆ ಎಂಬ ಅಂಶವೂ ಪ್ರಮುಖವಾಗಿದೆ. ಈಗಾಗಲೇ ಕಾನೂನು ಮತ್ತು ಸಂಸದೀಯ ವ್ಯವಹಾರ ಸೇರಿದಂತೆ ಸಣ್ಣ ನೀರಾವರಿ ಖಾತೆ ಹೊಂದಿರುವ ಸಚಿವ ಮಾಧುಸ್ವಾಮಿ ಅವರಿಗೆ ಹೆಚ್ಚುವರಿಯಾಗಿ ಕೃಷಿ ಖಾತೆ ಸಿಗುವ ಸಾಧ್ಯತೆ ಇದೆ. ಸಿ.ಸಿ.ಪಾಟೀಲ್- ಅರಣ್ಯ ಖಾತೆ, ಆರ್.ಅಶೋಕ್- ರೇಷ್ಮೆ ಖಾತೆ, ಸಹಕಾರ ಖಾತೆ, ವಿ.ಸೋಮಣ್ಣ-ನಗರಾಭಿವೃದ್ಧಿ ಖಾತೆ, ಕೆಎಸ್ ಈಶ್ವರಪ್ಪ- ಪೌರಾಡಳಿತ ಖಾತೆ, ಬಸವರಾಜ ಬೊಮ್ಮಾಯಿ- ಜಲಸಂಪನ್ಮೂಲ ಖಾತೆ, ಶ್ರೀರಾಮುಲು- ಕಾರ್ಮಿಕ ಖಾತೆ, ಲಕ್ಷ್ಮಣ ಸವದಿ- ಸಕ್ಕರೆ ಖಾತೆ, ಸುರೇಶ್ ಕುಮಾರ್- ಕೌಶಲ್ಯಾಭಿವೃದ್ಧಿ ಖಾತೆ ಹಾಗೂ ಪ್ರಭು ಚವ್ಹಾಣ್-ಯುವಜನ ಸೇವೆ ಮತ್ತು ಕ್ರೀಡೆ ಖಾತೆ ಲಭಿಸುವ ಸಾಧ್ಯತೆಗಳಿವೆ.

  • ಜಯಂತಿ ಆಚರಣೆಗಳಿಗೆ ಬ್ರೇಕ್ ಹಾಕುವ ಕುರಿತು ಚರ್ಚಿಸಿ ನಿರ್ಧಾರ – ಸಿ.ಟಿ.ರವಿ

    ಜಯಂತಿ ಆಚರಣೆಗಳಿಗೆ ಬ್ರೇಕ್ ಹಾಕುವ ಕುರಿತು ಚರ್ಚಿಸಿ ನಿರ್ಧಾರ – ಸಿ.ಟಿ.ರವಿ

    ತುಮಕೂರು: ಮಹಾತ್ಮರ ಜಯಂತಿಗಳ ಆಚರಣೆಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಲಿದೆಯಾ ಎಂಬ ಅನುಮಾನ ಇದೀಗ ಎದ್ದಿದ್ದು, ಈ ಕುರಿತು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸುಳಿವು ನೀಡಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಜಯಂತಿಗಳ ಕುರಿತು ಮಾಹಿತಿ ಸಂಗ್ರಹಣೆ ಮಾಡಲಾಗುತ್ತಿದೆ. ಜಯಂತಿಯ ಸ್ವರೂಪ ಹೇಗೆ ಇರಬೇಕು ಎಂಬುದರ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ, ನಂತರ ಆ ವರದಿಯನ್ನು ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಎಷ್ಟೋ ಜಯಂತಿಗಳು ಸಂಘಟಕರು ಹಾಗೂ ಜನರು ಇಲ್ಲದೆ ಸೊರಗಿ ಹೋಗಿವೆ. ಕೆಲ ಜಯಂತಿಗಳು ಜಾತಿಗೆ ಸೀಮಿತವಾಗಿವೆ. ಜಾತಿ ಮೀರಿ ಬದುಕುವ ಮಹಾತ್ಮರನ್ನು ಜಾತಿಯ ಫ್ರೇಮ್‍ಗೆ ತಂದು ಕಟ್ಟಿ ಹಾಕುವುದು ಅವರ ತತ್ವಕ್ಕೆ ಮಾಡಿದ ಅಪಮಾನ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಜಯಂತಿ ರದ್ದಾದರೆ ಅದನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಾರೆ. ಇದಕ್ಕೆ ಆಸ್ಪದ ಕೊಡದ ರೀತಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎನ್ನುವ ಮೂಲಕ ಜಯಂತಿಗಳನ್ನು ರದ್ದು ಮಾಡುವ ಚಿಂತನೆ ಸರ್ಕಾರದ ಮುಂದಿದೆ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಜೊತೆಗೆ ಟಿಪ್ಪು ಜಯಂತಿಯನ್ನು ಈಗಾಗಲೇ ರದ್ದು ಮಾಡಲಾಗಿದೆ. ಅದನ್ನು ಪುನರ್ ವಿಮರ್ಶೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಸಿ.ಟಿ.ರವಿ ಖಡಕ್ಕಾಗಿ ಹೇಳಿದ್ದಾರೆ.

    ಡಿಕೆಶಿ ಜೈಲಿನಲ್ಲಿದ್ದರೆ ಬಿಜೆಪಿಗೆ ಬಲ ಬರುತ್ತಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಡಿಕೆಶಿ ಇದ್ದಾಗಲೇ ಲೋಕಸಭಾ ಚುನಾವಣೆಯಲ್ಲಿ 25 ಸೀಟ್ ಗೆಲ್ಲಲಿಲ್ಲವೇ? 104 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲಲಿಲ್ಲವೇ? ಅವರು ಹೊರಗಿದ್ದಾಗ ಅವರ ಜಿಲ್ಲೆಯಲ್ಲಿ ಗೆದ್ದಿದ್ದು ಒಂದು ಕ್ಷೇತ್ರ, ಅದೂ ಅವರು ಗೆದ್ದ ಕ್ಷೇತ್ರ ಮಾತ್ರ. ಅವರಿಗೆ ತಾಕತ್ತಿಲ್ಲ ಎಂದು ನಾವು ಭಾವಿಸಿಲ್ಲ. ಆದರೆ, ಅತಿಮಾನುಷ ಶಕ್ತಿ ಇದೆ ಎಂದು ಭಾವಿಸಿದರೆ ಅದು ತಪ್ಪು ಎಂದು ಹೇಳಿದ್ದಾರೆ.

    ಎರಡೂ ರಾಜ್ಯದ ಜನರಿಗೆ ಹದ್ದುಗಳು
    ರಾಜ್ಯದ ಪಾಲಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳೂ ಹದ್ದುಗಳೆ. ಎರಡೂ ಪಕ್ಷಗಳು ರಾಜ್ಯವನ್ನು ಕಿತ್ತು ತಿನ್ನುವ ಕೆಲಸ ಮಾಡುತ್ತಿವೆ. ಹೀಗಾಗಿ ಎರಡೂ ಪಕ್ಷಗಳು ಸಹ ಜನರ ಪಾಲಿಗೆ ಹದ್ದುಗಳಾಗಿವೆ. ಆದರೆ, ವ್ಯಕ್ತಿಗತವಾಗಿ ಯಾರನ್ನೂ ಹದ್ದು ಎಂದು ಹೇಳಲಾರೆ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಜನರು ಹುಷಾರಾಗಿರಬೇಕು ಎಂದು ಚಾಠಿ ಬೀಸಿದ್ದಾರೆ. ಕೆಲವೇ ತಿಂಗಳುಗಳಲ್ಲಿ ಸರ್ಕಾರ ಬೀಳಲಿದೆ ಎಂಬ ಕೋಡಿ ಮಠದ ಶ್ರೀಗಳ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನದಿ ಹಾಗೂ ಋಷಿ ಮೂಲ ಕೆಣಕಬಾರದು. ಹಾಗಾಗಿ ನಾನು ಕೆಣಕಲ್ಲ. ಕೋಡಿಮಠದ ಸ್ವಾಮೀಜಿ ಹೇಳಿದ ಭವಿಷ್ಯ ಎಷ್ಟು ನಿಜವಾಗಿದೆ, ಎಷ್ಟು ಸುಳ್ಳಾಗಿದೆ ಎಂಬುದನ್ನು ಜನರ ತೀರ್ಮಾನಕ್ಕೆ ಬಿಡುತ್ತೇನೆ ಎಂದರು.

  • ಇಂದಿರಾ ಕ್ಯಾಂಟೀನ್‍ಗೆ ಅನುದಾನ ನೀಡಲು ಬಿಜೆಪಿ ಸರ್ಕಾರ ನಕಾರ

    ಇಂದಿರಾ ಕ್ಯಾಂಟೀನ್‍ಗೆ ಅನುದಾನ ನೀಡಲು ಬಿಜೆಪಿ ಸರ್ಕಾರ ನಕಾರ

    ಬೆಂಗಳೂರು: ಮಹಾನಗರದ ಬಡಜನತೆಯ ಹೊಟ್ಟೆ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟೀನ್‍ಗೆ ಅನುದಾನದ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ. ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಸರ್ಕಾರದ ನಡುವೆ ಅನುದಾನಕ್ಕಾಗಿ ಹಗ್ಗಜಗ್ಗಾಟ ನಡೆಯುತ್ತಿದೆ.

    ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಅನುದಾನ ನೀಡುವಂತೆ ಬಿಬಿಎಂಪಿ ಸಲ್ಲಿಸಿದ್ದ ಮನವಿಗೆ ರಾಜ್ಯ ಸರ್ಕಾರ ನಕಾರ ಎಂದಿದೆ. ಕೇವಲ ಶೇ. 25ರಷ್ಟು ಅನುದಾನ ಕೊಡುವುದಕ್ಕೆ ಸರ್ಕಾರದ ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದ್ದು, ಶೇ. 100ರ ಬದಲು ಐವತ್ತು ಪರ್ಸೆಂಟ್ ಆದರೂ ಅನುದಾನ ಕೊಡುವಂತೆ ಮನವಿ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.

    ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರ ಅವಧಿಯು ಆಗಸ್ಟ್ ತಿಂಗಳಿಗೆ ಮುಗಿದಿದ್ದು, ಹೊಸ ಟೆಂಡರ್ ಕರೆಯುವವರೆಗೂ ಹಳೆಯ ಗುತ್ತಿಗೆದಾರರನ್ನೇ ಮುಂದುವರಿಸುವಂತೆ ಮನವಿ ಮಾಡಿದ್ದಾರೆ. ಈ ಮಧ್ಯೆ ಇಂದಿರಾ ಕ್ಯಾಂಟೀನ್‍ನ ಅವ್ಯವಹಾರ ಆರೋಪದ ಹಿನ್ನಲೆ ಸರ್ಕಾರ ತನಿಖೆಗೂ ಆದೇಶ ನೀಡಿದೆ. ಆದರೆ 150 ಕೋಟಿ ರೂ. ಇಂದಿರಾ ಕ್ಯಾಂಟೀನ್ ನಿರ್ವಹಣಾ ವೆಚ್ಚ ಬಿಬಿಎಂಪಿಗೆ ಹೊರೆಯಾಗಿದೆ ಎಂದು ಹೇಳಿದರು.

    ಸರ್ಕಾರದ ಆರ್ಥಿಕ ಇಲಾಖೆಯ ತೀರ್ಮಾನದ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತರಲಾಗುವುದು. ಬಳಿಕ ಅವರ ತೀರ್ಮಾನದ ಮೇಲೆ ಇಂದಿರಾ ಕ್ಯಾಂಟೀನ್ ಅನುದಾನದ ಬಗ್ಗೆ ಅಂತಿಮ ಕೈಗೊಳ್ಳಲಾಗುವುದು ಎಂದು ಬಿ.ಹೆಚ್ ಅನಿಲ್ ಕುಮಾರ್ ತಿಳಿಸಿದರು.

    ಈ ಹಿಂದೆ ಬಿಬಿಎಂಪಿ ಆಯುಕ್ತರಾಗಿದ್ದ ಮಂಜುನಾಥ್ ಪ್ರಸಾದ್ ಅವರು, ಇಂದಿರಾ ಕ್ಯಾಂಟೀನ್ ನಡೆಸಲು ದುಡ್ಡಿಲ್ಲ, ಮುಚ್ಚುವ ಹಂತ ತಲುಪಿವೆ ಎಂದು ಹೇಳಿದ್ದರು.

    ಆಗಸ್ಟ್ 28ರಂದು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಉತ್ತರಿಸಿದ್ದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 173 ಇಂದಿರಾ ಕ್ಯಾಂಟೀನ್, 18 ಮೊಬೈಲ್ ಕ್ಯಾಂಟೀನ್‍ಗಳಿವೆ. 14.40 ಕೋಟಿ ಜನ ಈವರೆಗೆ ಊಟ ಮಾಡಿದ್ದಾರೆ. ಈ ಹಿಂದೆ ರಾಜ್ಯ ಸರ್ಕಾರ ಘೋಷಣೆ ಮಾಡಿ ಹಣ ಬಿಡುಗಡೆ ಮಾಡಿತ್ತು. ವಿವಿಧ ಕಾಮಗಾರಿಗೆ ಹೆಚ್ಚುವರಿಯಾಗಿ 24.37 ಕೋಟಿ ರೂ. ಖರ್ಚಾಗಿದೆ. ರಾಜ್ಯ ಸರ್ಕಾರ 15 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿತು ಎಂದು ಮಾಹಿತಿ ನೀಡಿದ್ದರು.

    2019-20ರ ಸಾಲಿನ ಬಜೆಟ್‍ನಲ್ಲಿ 210 ಕೋಟಿ ರೂ. ಅನುದಾನ ಮೀಸಲಿಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆದರೆ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್‍ಗೆ ಯಾವುದೇ ಹಣ ಮೀಸಲಿಡಲಿಲ್ಲ. ಎರಡು ಮತ್ತು ಮೂರನೇ ಪತ್ರವನ್ನು ಕೂಡ ಬರೆದಿದ್ದೆ. ಇವತ್ತಿಗೂ ಸರ್ಕಾರವಾಗಲಿ, ಪಾಲಿಕೆಯಲ್ಲಾಗಲಿ ಹಣ ಮೀಸಲಿಟ್ಟಿಲ್ಲ. ಇದೀಗ ಮುಚ್ಚುವ ಪರಿಸ್ಥಿತಿ ಬಂದಿದ್ದು, ನೀವು ಚರ್ಚಿಸಿ ನಿರ್ಧಾರ ಮಾಡಿ ಎಂದು ಬಿಬಿಎಂಪಿ ಸದಸ್ಯರ ಮುಂದೆ ವಿವರಿಸಿದ್ದರು.

  • ಇದು ಚರ್ಮಗೇಡಿ ಸರ್ಕಾರ, ಇದಕ್ಕೆ ಪಂಚೇಂದ್ರಿಯಗಳಿಲ್ಲ: ಎಚ್.ಆರ್ ಪಾಟೀಲ್ ಕಿಡಿ

    ಇದು ಚರ್ಮಗೇಡಿ ಸರ್ಕಾರ, ಇದಕ್ಕೆ ಪಂಚೇಂದ್ರಿಯಗಳಿಲ್ಲ: ಎಚ್.ಆರ್ ಪಾಟೀಲ್ ಕಿಡಿ

    ಬೆಳಗಾವಿ: ರಾಜ್ಯ ಸರ್ಕಾರಕ್ಕೆ ಪಂಚೇಂದ್ರಿಯ ಇಲ್ಲ. ಸರ್ಕಾರಕ್ಕೆ ಕಿವಿ, ಕಣ್ಣು ಬಾಯಿ ಎನೂ ಇಲ್ಲ. ಇದು ಚರ್ಮಗೇಡಿ ಸರ್ಕಾರ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶತಮಾನದಲ್ಲಿ ಕಂಡು ಕೇಳರಿಯದ ಪ್ರವಾಹವನ್ನು ರಾಜ್ಯ ಎದುರಿಸಿದೆ. ಆದರೆ ಸರ್ಕಾರ ಈವರೆಗೂ ಪರಿಹಾರ ನೀಡಿಲ್ಲ. ದಾನಿಗಳು 95% ಸಂತ್ರಸ್ತರ ನೆರವಿಗೆ ದಾನ ಮಾಡಿದ್ದರೆ ಸರ್ಕಾರ ಐದು ಪರ್ಸೆಂಟ್ ಕೊಟ್ಟಿದೆ. ರಾಜ್ಯ ಸರ್ಕಾರಕ್ಕೆ ಪಂಚೇಂದ್ರಿಯ ಇಲ್ಲ. ಸರ್ಕಾರಕ್ಕೆ ಕಿವಿ, ಕಣ್ಣು ಬಾಯಿ ಎನೂ ಇಲ್ಲ. ಇದು ಚರ್ಮಗೇಡಿ ಸರ್ಕಾರ ಎಂದು ಹರಿಹಾಯ್ದರು.

    ಸರ್ಕಾರ ಪರಿಹಾರ ನೀಡದ ಹಿನ್ನಲೆಯಲ್ಲಿ ಮೂರು ದಿನಗಳಲ್ಲಿ ಜಮಖಂಡಿಯಿಂದ ಬೆಳಗಾವಿಗೆ ಬಂದಿದ್ದೇವೆ. ನಿತ್ಯವೂ ನಲವತ್ತೈದರಿಂದ ಐವತ್ತು ಕಿ.ಮೀ ನಡೆದಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಇಲ್ಲಿಯವರೆಗೂ ಒಂದು ನಯಾಪೈಸೆ ಬಿಡುಗಡೆ ಮಾಡಿಲ್ಲ. ರಾಜ್ಯದ ಸಿಎಂ ಭೇಟಿಗೆ ಅವಕಾಶ ಕೊಡುತ್ತಿಲ್ಲ. ಚಂದ್ರಯಾನ ವೀಕ್ಷಣೆಗೆ ಮೋದಿ ಬಂದಾಗಲೂ ನೆರೆ ಹಾವಳಿ ಕುರಿತು ಕೇಳುವ ಸೌಜನ್ಯ ತೋರಲಿಲ್ಲ ಎಂದು ಕಿಡಿಕಾರಿದರು.

    25 ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದ ಜನ ಆಯ್ಕೆ ಮಾಡಿದ್ದರೂ ಕೇಂದ್ರ ಸರ್ಕಾರ ರಾಜ್ಯದ ಪ್ರವಾಹಕ್ಕೆ ಒಂದು ಬಿಡಿಗಾಸು ಕೊಟ್ಟಿಲ್ಲ. ಹಿಂದಿನ ಬಾರಿ ಪ್ರವಾಹ ಬಂದಾಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವೈಮಾನಿಕ ಸಮೀಕ್ಷೆ ಮಾಡಿ ಪರಿಹಾರ ಕೊಟ್ಟಿದ್ದರು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಮಾತಿನ ಚಾಟಿ ಬೀಸಿದರು.

  • ಮನೆಗಳ ಪರಿಹಾರದಲ್ಲೂ ರಾಜಕೀಯ : ಗದಗ ಸಂತ್ರಸ್ತರ ಆರೋಪ

    ಮನೆಗಳ ಪರಿಹಾರದಲ್ಲೂ ರಾಜಕೀಯ : ಗದಗ ಸಂತ್ರಸ್ತರ ಆರೋಪ

    ಗದಗ: ಜಿಲ್ಲೆಯ ನರಗುಂದ ತಾಲೂಕಿನ ವಾಸನ ಗ್ರಾಮದ ಅನೇಕ ನೆರೆ ಸಂತ್ರಸ್ತರಿಗೆ ಇನ್ನೂ ಮೊದಲ ಹಂತದ ಪರಿಹಾರ ಸಿಕ್ಕಿಲ್ಲ.

    ನೆರೆ ಹಾವಳಿಯಿಂದ ಮನೆ-ಮಠ ಕಳೆದುಕೊಂಡ ಸಾವಿರಾರು ಜನರು ಬೀದಿಗೆ ಬಿದ್ದಿದ್ದಾರೆ. ನೆರೆ ಬಂದು ಹೋಗಿ ಒಂದುವರೆ ತಿಂಗಳಾದ್ರೂ ನೆರೆ ಸಂತ್ರಸ್ತರ ಕಣ್ಣೀರು ಮಾತ್ರ ನಿಲ್ಲುತ್ತಿಲ್ಲ. ಕಾರಣ ಇನ್ನು ಸಂತ್ರಸ್ತರಿಗೆ 10 ಸಾವಿರ ರೂ. ಪರಿಹಾರ ಕೂಡುವಲ್ಲಿ ಸರ್ಕಾರ ವಿಫಲವಾಗಿದೆ. ನಾವು ಸಂತ್ರಸ್ತರ ಜೊತೆಗಿದ್ದೇವೆ ಎನ್ನುವ ಜನಪ್ರತಿನಿಧಿಗಳಿಗೆ ಸಂತ್ರಸ್ತರು ಕಣ್ಣೀರಿನ ಮೂಲಕ ಹಿಡಿಶಾಪ ಹಾಕುತ್ತಿದ್ದಾರೆ.

    ಕ್ಷೇತ್ರದ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್ ಅವರು ಕ್ಯಾರೆ ಎನ್ನುತ್ತಿಲ್ಲ. ನೊಂದ ಜನರ ಕಷ್ಟ ಆಲಿಸಲ್ಲ ಎನ್ನುವುದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಬಿದ್ದ ಮನೆಗಳ ಪರಿಹಾರ ನೀಡುವಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಕೆಲವರ ಸಂಪೂರ್ಣ ಮನೆ ಬಿದರೂ “ಬಿ”-“ಸಿ” ಗ್ರೇಡ್ ಹಾಕಿದ್ದಾರೆ. ಅಲ್ಪ ಸ್ವಲ್ಪ ಬಿದ್ದ ಮನೆಗಳಿಗೆ “ಎ” ಎಂದು ನಮೊದನೆ ಮಾಡಿದ್ದಾರೆ. ಮನೆಗಳ ಪರಿಹಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.

    ವಾಸನ ಗ್ರಾಮದಲ್ಲಿ 480 ಮನೆಗಳಿದ್ದು, 2500ಕ್ಕೂ ಅಧಿಕ ಜನಸಂಖ್ಯೆಯಿದೆ. 180 ಜನರಿಗೆ 10 ಸಾವಿರ ರೂ. ಪರಿಹಾರ ಚೆಕ್ ಬಂದಿಲ್ಲ ಎಂದು ಸಂತ್ರಸ್ತರು ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರ ಎಲ್ಲವೂ ಜನರ ಕಣ್ಣೊರೆಸುವ ತಂತ್ರ ಅನುಸರಿಸುತ್ತೆ. ಸಿ.ಎಂ ಯಡಿಯೂರಪ್ಪ ಮಾತ್ರ ಎಲ್ಲರಿಗೂ ಮೊದಲ ಹಂತದ ಪರಿಹಾರ ನೀಡಿದ್ದೇವೆ ಎಂದು ಹೇಳುತ್ತಾರೆ. ಆದರೆ ಇಲ್ಲಿ ನೂರಾರು ಜನರಿಗೆ ಚೆಕ್ ನೀಡದಕ್ಕೆ ಕಣ್ಣಿರಿಡುತ್ತಿದ್ದಾರೆ.

  • ಕಡ್ಡಾಯ ವರ್ಗಾವಣೆಗೆ ಹೆದರಿ ಕೋಮಾಗೆ ಜಾರಿದ ಮುಖ್ಯ ಶಿಕ್ಷಕ

    ಕಡ್ಡಾಯ ವರ್ಗಾವಣೆಗೆ ಹೆದರಿ ಕೋಮಾಗೆ ಜಾರಿದ ಮುಖ್ಯ ಶಿಕ್ಷಕ

    ಹುಬ್ಬಳ್ಳಿ: ರಾಜ್ಯ ಸರ್ಕಾರದ ಕಡ್ಡಾಯ ವರ್ಗಾವಣೆಗೆ ಹೆದರಿ ಹುಬ್ಬಳ್ಳಿಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಕೋಮಾ ಸ್ಥಿತಿಯಲ್ಲಿದ್ದಾರೆ.

    ರಾಜ್ಯದಲ್ಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕಲಿಕಾ ಮಟ್ಟ ಸುಧಾರಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸದ್ಯ ಕಡ್ಡಾಯ ವರ್ಗಾವಣೆ ನೀತಿಯನ್ನ ಜಾರಿಗೆ ತಂದಿದೆ. ಆದರೆ ಹುಬ್ಬಳ್ಳಿಯ ಆನಂದ ನಗರದ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕ ಸುಭಾಷ್ ತರ್ಲಘಟ್ಟ ಕಡ್ಡಾಯ ವರ್ಗವಣೆಗೆ ಹೆದರಿ ಕೋಮಾ ಸ್ಥಿತಿಯಲ್ಲಿದ್ದಾರೆ. ಸದ್ಯ ಕೋಮಾ ಸ್ಥಿತಿ ತಲುಪಿರುವ ಸುಭಾಷ್ ಅವರಿಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ರಾಮಗಿರಿಗೆ ಸುಭಾಷ್ ಅವರು ವರ್ಗಾವಣೆಗೊಂಡಿದ್ದರು. ಇದರಿಂದ ಮನನೊಂದು ಶಿಕ್ಷಕ ಕೋಮಾ ಸ್ಥಿತಿಗೆ ಜಾರಿದ್ದಾರೆ ಎಂದು ಅವರ ಪತ್ನಿ ಹಾಗೂ ಸಂಬಂಧಿಕರು ಹೇಳುತ್ತಿದ್ದಾರೆ. ಖಾಸಗಿ ಆಸ್ಪತ್ರೆ ಮುಂದೆ ಜಮಾಯಿಸಿರೋ ಶಿಕ್ಷಕರು ಹಾಗೂ ಸಂಬಂಧಿಕರು ಹಾಗೂ ಸುಭಾಷ್ ಪತ್ನಿ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಸುಭಾಷ್ ಅವರನ್ನು ವರ್ಗಾವಣೆ ಮಾಡಿದ್ದೇ ಅವರ ಈ ಸ್ಥಿತಿಗೆ ಕಾರಣ ಎಂದು ಆರೋಪಿಸಿದ್ದಾರೆ.

  • ನೆರೆ ಸಂತ್ರಸ್ತರನ್ನು ಕಾಪಾಡಿದ್ದು ರಾಜ್ಯದ ಜನ, ನೀವಲ್ಲ: ಸರ್ಕಾರದ ವಿರುದ್ಧ ಉಮಾಶ್ರೀ ಕಿಡಿ

    ನೆರೆ ಸಂತ್ರಸ್ತರನ್ನು ಕಾಪಾಡಿದ್ದು ರಾಜ್ಯದ ಜನ, ನೀವಲ್ಲ: ಸರ್ಕಾರದ ವಿರುದ್ಧ ಉಮಾಶ್ರೀ ಕಿಡಿ

    ಬಾಗಲಕೋಟೆ: ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಮಾಜಿ ಸಚಿವೆ ಉಮಾಶ್ರೀ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

    ಬನಹಟ್ಟಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೇ ಗಾಂಧಿ ವೃತ್ತದಲ್ಲಿ ಟೈರ್ ದಹಿಸಿ ಆಕ್ರೋಶ ಹೊರ ಹಾಕಿದರು.

    ಈ ವೇಳೆ ಮಾತನಾಡಿದ ಮಾಜಿ ಸಚಿವೆ ಉಮಾಶ್ರೀ, ಸಂತ್ರಸ್ತರಿಗೆ ರಾಜ್ಯದ ಜನ ಅನೇಕ ಅವಶ್ಯಕ ವಸ್ತುಗಳನ್ನು ನೀಡಿದ್ದಾರೆ. ಅದರಲ್ಲಿ ಬಟ್ಟೆ, ಊಟ ಉಪಹಾರ ಹಾಸಿಗೆ ಹೊದಿಕೆ ಕೂಡ ಇವೆ. ಆದರೆ ರಾಜ್ಯ, ಕೇಂದ್ರ ಸರ್ಕಾರ ಏನೂ ಮಾಡಲಿಲ್ಲ. ಸಂತ್ರಸ್ತರನ್ನು ಕಾಪಾಡಿದ್ದು ರಾಜ್ಯದ ಜನ ನೀವಲ್ಲ ಎಂದು ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೂಡಲೇ ನೆರೆ ಸಂತ್ರಸ್ತರಿಗೆ ಪರಿಹಾರ ಘೋಷಣೆ ಮಾಡಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ನೆರೆ ಪೀಡಿತ ಪ್ರದೇಶಗಳಿಗೆ 1,000 ಕೋಟಿ ರೂ. ಬಿಡುಗಡೆ

  • ರಾಜ್ಯ ಸರ್ಕಾರದಿಂದ ನೆರೆ ಪೀಡಿತ ಪ್ರದೇಶಗಳಿಗೆ 1,000 ಕೋಟಿ ರೂ. ಬಿಡುಗಡೆ

    ರಾಜ್ಯ ಸರ್ಕಾರದಿಂದ ನೆರೆ ಪೀಡಿತ ಪ್ರದೇಶಗಳಿಗೆ 1,000 ಕೋಟಿ ರೂ. ಬಿಡುಗಡೆ

    ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ನೆರೆ ಪೀಡಿತ ಪ್ರದೇಶಗಳಿಗೆ 1,000 ಕೋಟಿ ರೂ. ಬಿಡುಗಡೆ ಮಾಡಿದೆ.

    ಪ್ರವಾಹದಿಂದಾಗಿ ಹಾನಿಗೊಳಗಾದ ಮನೆಗಳ ನಿರ್ಮಾಣಕ್ಕಾಗಿ 13 ಜಿಲ್ಲೆಗಳಿಗೆ 1,000 ಕೋಟಿ ರೂ.ವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಬೆಳಗಾವಿ ಜಿಲ್ಲೆಗಷ್ಟೇ 500 ಕೋಟಿ ರೂ. ಪರಿಹಾರ ನೀಡಲಾಗಿದ್ದು, ಉಡುಪಿ ಜಿಲ್ಲೆಗೆ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಗೂ ಪರಿಹಾರ ನೀಡಲಾಗಿದೆ.

    ಜಿಲ್ಲಾಧಿಕಾರಿಗಳ ಅನುಮೋದನೆ ಪ್ರಕಾರ ಪ್ರವಾಹದಿಂದಾಗಿ ವಿವಿಧ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ 8,586 ಮನೆಗಳು ಹಾನಿಗೊಳಗಾಗಿವೆ. ಉಳಿದಂತೆ 23,942 ಮನೆಗಳು ಭಾಗಶಃ ಹಾಗೂ 59,344 ಮನೆಗಳು ಅಲ್ಪ ಸ್ವಲ್ಪ ಹಾನಿಗೊಳಗಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 91,872 ಮನೆಗಳು ಪ್ರವಾಹಕ್ಕೆ ತುತ್ತಾಗಿವೆ. ಆದರೆ ಆನ್‍ಲೈನ್ ನಮೂದಾಗಿರುವ ಪ್ರಕಾರ ಒಟ್ಟು 1,08,643 ಮನೆಗಳು ಪ್ರವಾಹದ ಹಾನಿಗೆ ಒಳಗಾಗಿವೆ.

    ಯಾವ ಜಿಲ್ಲೆ ಎಷ್ಟು?:
    ಬೆಳಗಾವಿಗೆ 500 ಕೋಟಿ ರೂ., ಬಾಗಲಕೋಟೆಗೆ 135 ಕೋಟಿ ರೂ., ಹಾವೇರಿಗೆ 70 ಕೋಟಿ ರೂ, ಧಾರವಾಡಕ್ಕೆ 55 ಕೋಟಿ, ಚಿಕ್ಕಮಗಳೂರಿಗೆ 25 ಕೋಟಿ ರೂ., ದಕ್ಷಿಣ ಕನ್ನಡ ಜಿಲ್ಲೆಗೆ 15 ಕೋಟಿ ರೂ., ಗದಗ ಜಿಲ್ಲೆಗೆ 30 ಕೋಟಿ ರೂ., ಹಾಸನಕ್ಕೆ 20 ಕೋಟಿ ರೂ., ಕೊಡಗು 25 ಕೋಟಿ ರೂ., ಮೈಸೂರು ಜಿಲ್ಲೆಗೆ 30 ಕೋಟಿ ರೂ., ಉತ್ತರ ಕನ್ನಡ ಜಿಲ್ಲೆಗೆ 30 ಕೋಟಿ ರೂ. ಹಾಗೂ ಉಡುಪಿಗೆ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

  • ವರ್ಷ ಕಳೆದರೂ ಕಾರವಾರದ ಹುತಾತ್ಮ ಯೋಧನ ಕುಟುಂಬಕ್ಕೆ ಇನ್ನೂ ಸಿಕ್ಕಿಲ್ಲ ಪರಿಹಾರ

    ವರ್ಷ ಕಳೆದರೂ ಕಾರವಾರದ ಹುತಾತ್ಮ ಯೋಧನ ಕುಟುಂಬಕ್ಕೆ ಇನ್ನೂ ಸಿಕ್ಕಿಲ್ಲ ಪರಿಹಾರ

    – ಛತ್ತಿಸ್‍ಗಢ ಸರ್ಕಾರ ಪರಿಹಾರ ನೀಡಿದರೂ ರಾಜ್ಯ ಸರ್ಕಾರ ನೀಡಿಲ್ಲ

    ಕಾರವಾರ: 2018ರಲ್ಲಿ ಛತ್ತಿಸ್‍ಗಢದಲ್ಲಿ ನಡೆದ ನಕ್ಸಲ್ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿ ಬಾಂಬ್ ದಾಳಿಯಿಂದಾಗಿ ಸಾವನ್ನಪ್ಪಿದ್ದ ಬಿಎಸ್‍ಎಫ್ ವೀರ ಯೋಧ ಕಾರವಾರದ ಸಾಯಿಕಟ್ಟ ನಿವಾಸಿ ವಿಜಯಾನಂದ ಹುತಾತ್ಮರಾಗಿ ಒಂದು ವರ್ಷಗಳು ಕಳೆದರೂ ರಾಜ್ಯ ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ.

    ಹುತಾತ್ಮರಾಗಿ ಒಂದು ವರ್ಷ ಕಳೆದಿದ್ದು, ನಿಧನರಾದ ಕುರಿತು ಇಲಾಖೆಯಿಂದ ತನಿಖೆ ನಡೆದು ಸರ್ಕಾರಕ್ಕೆ ವರದಿ ಸಹ ನೀಡಲಾಗಿದೆ. ಛತ್ತಿಸ್‍ಗಢ ಸರ್ಕಾರ ಪರಿಹಾರ ನೀಡಿದೆ. ಆದರೆ ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬರಬೇಕಾದ ಪರಿಹಾರ ಈವರೆಗೂ ಬಂದಿಲ್ಲ. ಅಲ್ಲದೆ ಇವರ ತಾಯಿಗೆ ಬರಬೇಕಿದ್ದ ಪಿಂಚಣಿ ಹಣ ಸಹ ಬಾರದೇ ಕುಟುಂಬ ರೋಧಿಸುವಂತಾಗಿದೆ.

    ಈ ಕುರಿತು ಸಂಬಂಧಪಟ್ಟ ಇಲಾಖೆಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಹ ನೀಡಿದ್ದು ಈವರೆಗೂ ಹಣ ಬಿಡುಗಡೆಯಾಗಿಲ್ಲ. ವೀರ ಯೋಧನ ಸಾವಿಗೆ ಪರಿಹಾರದ ಆಶ್ವಾಸನೆ ನೀಡಿ ಗೌರವ ಸಲ್ಲಿಸಿ ಸರ್ಕಾರ ಮೌನವಹಿಸಿರುವುದಕ್ಕೆ ಹುತಾತ್ಮ ಯೋಧನ ಕುಟುಂಬ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಮಗ ನಕ್ಸಲ್ ವಿರುದ್ಧ ಹೋರಾಡಿ ಹುತಾತ್ಮನಾಗಿ ಒಂದು ವರ್ಷ ಕಳೆದಿದೆ. ಆತನ ಪುತ್ಥಳಿ ಮಾಡುವುದಾಗಿ ಕೂಡ ಸರ್ಕಾರ ಹೇಳಿತ್ತು. ಆದರೆ ಪರಿಹಾರ ನೀಡುವುದಿರಲಿ ಪುತ್ಥಳಿಯನ್ನು ಸಹ ಮಾಡಲಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದರು.