Tag: State Government

  • ಎಷ್ಟಿಂಚು ಎದೆಯಿದ್ದರೇನು ಪ್ರಯೋಜನ, ಮಾತೃ ಹೃದಯವಿರಬೇಕು: ಮೋದಿಗೆ ಸಿದ್ದು ಟಾಂಗ್

    ಎಷ್ಟಿಂಚು ಎದೆಯಿದ್ದರೇನು ಪ್ರಯೋಜನ, ಮಾತೃ ಹೃದಯವಿರಬೇಕು: ಮೋದಿಗೆ ಸಿದ್ದು ಟಾಂಗ್

    – ರಮೇಶ್ ಸಾವು ನಿಗೂಢವಾಗಿ ಕಾಣಿಸ್ತಿದೆ
    – ವಿಧಾನಸಭೆಯಲ್ಲಿ ಮಾಧ್ಯಮ ನಿಷೇಧಕ್ಕೆ ಕಿಡಿ

    ಚಿಕ್ಕಮಗಳೂರು: ಕರ್ನಾಟಕ ಪ್ರವಾಹಕ್ಕೆ ಸರಿಯಾಗಿ ಸ್ಪಂದಿಸದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಎಷ್ಟಿಂಚು ಎದೆಯಿದ್ದರೇನು ಪ್ರಯೋಜನ, ಮಾತೃ ಹೃದಯವಿರಬೇಕು. ಜನರ ಕಷ್ಟಕ್ಕೆ ಸ್ಪಂದಿಸುವ ಮನಸ್ಸಿರಬೇಕು ಎಂದು ಮೋದಿಗೆ ಟಾಂಗ್ ಕೊಟ್ಟಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ, ಈ ವರ್ಷ ರಾಜ್ಯದಲ್ಲಿ ಪ್ರವಾಹ ಹಾಗೂ ಬರ ಎರಡೂ ಇದೆ. ಇದನ್ನು ಸಚಿವ ಆರ್. ಅಶೋಕ್ ಅವರೇ ಒಪ್ಪಿಕೊಂಡಿದ್ದಾರೆ. ಪ್ರವಾಹದ ಪರಿಹಾರ ಎಷ್ಟು ದಿನಕ್ಕೆ ಬಂದಿದೆ ಎಂದು ಗೊತ್ತಾ? 60 ದಿನಗಳಾದ ಮೇಲೆ 1,200 ಕೋಟಿ ರೂ. ಕೇಂದ್ರ ಸರ್ಕಾರದಿಂದ ಕೊಟ್ಟಿದ್ದಾರೆ. ಧೂಪ ಹಾಕ್ತಾರಲ್ಲ ಆ ರೀತಿ 1,200 ಕೋಟಿ ಕೊಟ್ಟಿದ್ದಾರೆ. ನೆರೆ ಬಂದು ಜನರು ಸಂಕಷ್ಟಕ್ಕೆ ಸಿಲುಕಿ ಸಾಕಷ್ಟು ಸಾವು-ನೋವುಗಳು ಆದರೂ ಮೋದಿ ಕರ್ನಾಟಕಕ್ಕೆ ಬಂದೇ ಇಲ್ಲ. ಸುಮಾರು 2 ಕೋಟಿ ಜನರು ಕರ್ನಾಟಕದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಮೋದಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಬಿಹಾರದಲ್ಲಿ ನೆರೆ ಬಂದಾಗ ತಕ್ಷಣ ಟ್ವೀಟ್ ಮಾಡುತ್ತಾರೆ ಎಂದು ಹರಿಹಾಯ್ದರು.

    ಎದೆ ಎಷ್ಟು ಇಂಚು ಇದ್ದರೇನು, ಜನರ ಕಷ್ಟಕ್ಕೆ ಸ್ಪಂದಿಸಲು ಮಾತೃ ಹೃದಯ ಇರಬೇಕು. ನೂರು ಇಂಚು ಎದೆ ಬೇಕಾದರೆ ಇಟ್ಟುಕೊಳ್ಳಿ ಆದರೆ ಮಾತೃ ಹೃದಯ ಇರಬೇಕು ಅಷ್ಟೆ ಎಂದು ಮೋದಿಯರನ್ನು ಟೀಕಿಸಿದರು.

    ಇದೇ ವೇಳೆ ವಿಧಾನಸಭೆಯಲ್ಲಿ ಮಾಧ್ಯಮ ನಿಷೇಧ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರನ್ನ ದೂರ ಇಟ್ಟು ಏನು ಮಾಡೋಕೆ ಆಗಲ್ಲ. ವಿಧಾನಸಭೆಯಲ್ಲಿ ನಡೆಯುವ ಕಲಾಪ ಎಲ್ಲರಿಗೂ ಗೊತ್ತಾಗಬೇಕು. ಕಲಾಪ ಗೌಪ್ಯವಾಗಿ ನಡೆಯೋದಿಲ್ಲ, ಎಲ್ಲರಿಗೂ ಗೊತ್ತಾಗಲಿ ಎಂದು ನಾವು ಚರ್ಚೆ ಮಾಡೋದು. ಆದ್ದರಿಂದ ಮಾಧ್ಯಮಕ್ಕೆ ನಿರ್ಬಂಧ ಹೇರಿರುವುದು ಸರಿಯಲ್ಲ. ಈ ನಿರ್ಧಾರ ಸಿಎಂ ಹಾಗೂ ಸ್ಪೀಕರ್ ಇಬ್ಬರೂ ಸೇರಿಯೇ ಮಾಡಿರುವುದು. ಸರ್ಕಾರಕ್ಕೆ ಗೊತ್ತಿಲ್ಲದೆ ಏನು ಮಾಡೋಕೆ ಆಗಲ್ಲ. ಬಿಜೆಪಿಯವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಅಲ್ಲದೆ ಬಿಜೆಪಿ ಸರ್ಕಾರ ಸರ್ವಾಧಿಕಾರ ಧೋರಣೆ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ, ಪ್ರಜಾಪ್ರಭುತ್ವದ ಕೊಲೆ ಎಂದು ಕಿಡಿಕಾರಿದರು.

    ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ನಾಲ್ಕು ಅಂಗಗಳು ಮುಖ್ಯ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗ ಮುಖ್ಯ ಪಾತ್ರವಹಿಸುತ್ತದೆ. ಪ್ರತಿ ನಿಯಮಾವಳಿಗಳನ್ನ ನಾವೇ ಮಾಡಿಕೊಂಡಿರೋದು. ನಿಯಮಾವಳಿಗಳು ದೇವಲೋಕದಿಂದ ಇಳಿದು ಬಂದಿಲ್ಲ. ನಿಯಮಗಳ ಬಗ್ಗೆ ಬಿಜೆಪಿಯವರಿಗೇ ನಂಬಿಕೆ ಇಲ್ಲ. ಸರ್ಕಾರದ ಹುಳುಕು, ವೈಫಲ್ಯಗಳು ಗೊತ್ತಾಗುತ್ತದೆ ಎಂದು ಮಾಧ್ಯಮದವರನ್ನ ದೂರ ಇಟ್ಟಿದ್ದಾರೆ ಎಂದು ಆರೋಪಿಸಿದರು.

    ವಿರೋಧ ಪಕ್ಷದ ನಾಯಕರು ಮಾತಾನಾಡುವಾಗ ತಡೆಯೋದು ಸರಿಯಲ್ಲ. ನಾನು ಯಾವತ್ತೂ ಈ ರೀತಿಯ ಸ್ಪೀಕರ್ ನೋಡಿಲ್ಲ. ಮುಂದೆ ಇದೇ ರೀತಿ ನಡೆದರೆ ವಿಧಾನಸಭೆ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಜೊತೆಗೆ ಈ ಸಲ ಒಪ್ಪಿಕೊಂಡಿದ್ದೇನೆ. ಆದರೆ ಮೋದಿ, ಅಮಿತ್ ಶಾ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಆರ್‍ಎಸ್‍ಎಸ್ ಅವರಿಗೆ ನಂಬಿಕೆ ಬರೋಕೆ ಸಾಧ್ಯವಿಲ್ಲ ಎಂದು ಗುಡುಗಿದರು.

    ಹಾಗೆಯೆ ಪರಮೇಶ್ವರ್ ಪಿ.ಎ. ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿ, ರಮೇಶ್ ಸಾವು ನಿಗೂಢವಾಗಿ ಕಾಣಿಸುತ್ತದೆ. ಡೆತ್ ನೋಟ್‍ನಲ್ಲಿ ನನಗೆ ಕಿರುಕುಳ ಕೊಟ್ಟಿದ್ದಾರೆಂದು ಉಲ್ಲೇಖಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಪ್ರಕರಣದ ಸೂಕ್ತ ತನಿಖೆಯಾಗಬೇಕು. ಈ ಸಂಬಂಧ ಯಾವ ಏಜೆನ್ಸಿ ತನಿಖೆ ಮಾಡಬೇಕು ಅನ್ನೋದು ಸರ್ಕಾರಕ್ಕೆ ಬಿಟ್ಟಿದ್ದು. ರಮೇಶ್ ಸಾವಿಗೆ ಕಾರಣರಾದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

  • ನಮ್ಮ ಶಾಸಕರಿಗೆ ತಲೆ ಇದೆಯೋ ಇಲ್ವೋ ಗೊತ್ತಿಲ್ಲ: ಯತ್ನಾಳ್ ವಿರುದ್ಧ ಜಿಗಜಿಣಗಿ ಕಿಡಿ

    ನಮ್ಮ ಶಾಸಕರಿಗೆ ತಲೆ ಇದೆಯೋ ಇಲ್ವೋ ಗೊತ್ತಿಲ್ಲ: ಯತ್ನಾಳ್ ವಿರುದ್ಧ ಜಿಗಜಿಣಗಿ ಕಿಡಿ

    ಗದಗ: ನಮ್ಮ ಶಾಸಕರಿಗೆ ತಲೆ ಇದೆಯೋ ಇಲ್ವೋ ಗೊತ್ತಿಲ್ಲ ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಂಸದ ರಮೇಶ್ ಜಿಗಜಿಣಗಿ ಪರೋಕ್ಷವಾಗಿ ಗುಡುಗಿದ್ದಾರೆ.

    ಇಂದು ನಗರದ ತೋಂಟದಾರ್ಯ ಮಠದ ಕಾರ್ಯಕ್ರಮಕ್ಕೆ ಆಗಮಿಸಿದ ಜಿಗಜಿಣಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಶಾಸಕರಿಗೆ ತಲೆ ಇದೆಯೋ ಇಲ್ವೋ ಗೊತ್ತಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇದೆ. ಸರ್ಕಾರದ ವಿರುದ್ಧ ಸಾರ್ವಜನಿಕವಾಗಿ ಹಾದಿ ಬೀದಿಯಲ್ಲಿ ಮಾತನಾಡೋದು ಸರಿನಾ? ಈ ರೀತಿ ತಲೆ ಇಲ್ಲದವರು ಹೇಳುತ್ತಾರೆ ಅಷ್ಟೇ. ತಲೆ ಇದ್ದವರು ಯಾರೂ ಈ ರೀತಿ ಮಾತನಾಡಲ್ಲ ಎಂದು ಕಿಡಿಕಾರಿದರು.

    ನಾನು 40 ವರ್ಷ ರಾಜಕೀಯ ನೋಡಿದ್ದೇನೆ. ನಮ್ಮ ಪಕ್ಷದಲ್ಲಿ ಇದ್ದು ಸರ್ಕಾರದ ವಿರುದ್ಧ ಹೇಳಿಕೆ ನೀಡುವ ಅರ್ಥ ಏನು? ಇದು ಪಕ್ಷ ವಿರೋಧಿ ಹೇಳಿಕೆ ಆಗಲ್ವಾ? ಹೀಗಾಗಿ ಪಕ್ಷ ನೋಟಿಸ್ ನೀಡಿದೆ. ನಾವೂ ಪರಿಹಾರ ವಿಷಯದಲ್ಲಿ ಪ್ರಧಾನಿ ಕಚೇರಿಗೆ ಮಾಹಿತಿ ನೀಡಿದ್ದೇವೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ಸದಾನಂದ ಗೌಡ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ನಾವೆನೂ ಮಲಗಿಲ್ಲ. ಧೈರ್ಯ ಅವರಿಗೆ ಮಾತ್ರ ಇಲ್ಲ ನಮಗೂ ಇದೆ. ಮತದ ಮೂಲಕ ಜನ ಧೈರ್ಯ ಕೊಟ್ಟಿದ್ದಾರೆ ಎಂದು ಯತ್ನಾಳ್ ಅವರನ್ನು ಜಿಗಜಿಣಗಿ ಕುಟುಕಿದರು.

  • ಅಧಿವೇಶನದಲ್ಲಿ ಮಾಧ್ಯಮ ನಿರ್ಬಂಧಕ್ಕೆ ಸರ್ಕಾರ ಚಿಂತನೆ

    ಅಧಿವೇಶನದಲ್ಲಿ ಮಾಧ್ಯಮ ನಿರ್ಬಂಧಕ್ಕೆ ಸರ್ಕಾರ ಚಿಂತನೆ

    ಬೆಂಗಳೂರು: ವಿಧಾನಸೌಧದಲ್ಲಿ ಇದೇ 10ರಿಂದ 3 ದಿನ ನಡೆಯುವ ಅಧಿವೇಶನದಲ್ಲಿ ದೃಶ್ಯ ಮಾಧ್ಯಮಕ್ಕೆ ನಿರ್ಬಂಧ ಹೇರುವ ಬಗ್ಗೆ ಸರ್ಕಾರ ಚಿಂತಿಸಿದೆ ಎನ್ನಲಾಗುತ್ತಿದೆ.

    ಸರ್ಕಾರದ ಈ ಚಿಂತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಚಿಕ್ಕಮಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿ, ಬಹಳಷ್ಟು ಮಾಧ್ಯಮಗಳು ಬಿಜೆಪಿ ಪರವಾಗಿ ಕೆಲಸ ಮಾಡಿದ್ದವು. ಆ ಕಾರಣದಿಂದ ನಿಷೇಧ ಹೇರಲು ಹೊರಟಿದ್ದಾರೆ. ನಮ್ಮ ಸರ್ಕಾರ ಇದ್ದಾಗ ನಿರ್ಬಂಧ ಹೇರಲು ಚಿಂತಿಸಿರಲಿಲ್ಲ ಎಂದು ಹೇಳಿದ್ದಾರೆ.

    ಇತ್ತ ಮಡಿಕೇರಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಮಾಧ್ಯಮಗಳಿಗೆ ನಿರ್ಬಂಧ ಹೇರುವುದು ಸಾಧ್ಯವಿಲ್ಲದ ಮಾತು. ವಿಧಾನಸೌಧದಲ್ಲಿ ಮೀಡಿಯಾ ಗ್ಯಾಲರಿ ಇದೆ ಎಂದು ತಿಳಿಸಿದರು.

    ಈ ಹಿಂದೆಯೂ ಕೂಡ ಬಿಜೆಪಿ ಸರ್ಕಾರ ಆಡಳಿತ ಅವಧಿಯಲ್ಲಿ ವಿಧಾನಸೌಧ ಕಲಾಪದಲ್ಲಿ ದೃಶ್ಯ ಮಾಧ್ಯಮ ನಿರ್ಬಂಧಕ್ಕೆ ಚಿಂತನೆ ನಡೆಸಲಾಗಿತ್ತು. ಆದರೆ ಅಂದು ಕೂಡ ವಿರೋಧ ಪಕ್ಷ ಹಾಗೂ ಮಾಧ್ಯಮಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿಂತನೆಯನ್ನು ಕೈಬಿಡಲಾಗಿತ್ತು. ಆದರೆ ಸದ್ಯ ಈ ಚಿಂತನೆ ಮತ್ತೆ ನಡೆದಿದೆ ಎನ್ನಲಾಗಿದೆ. ಆ ಮೂಲಕ ಲೋಕಸಭಾ ಮಾದರಿಯಲ್ಲಿ ಕಲಾಪದ ನೇರ ಪ್ರಸಾರ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಸದನದಲ್ಲಿ ಮಾಡುವ ತಪ್ಪುಗಳನ್ನು ಮಾಧ್ಯಮಗಳು ತೋರಿಸುವ ಭಯದಿಂದ ಮಾಧ್ಯಮಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ.

  • ಕೇಂದ್ರಕ್ಕೆ ಹೆದರಿ 3 ಸಾವಿರ ಕೋಟಿ ರೂ. ಪರಿಹಾರ ಮೊತ್ತ ಕಡಿತಗೊಳಿಸಿದ ರಾಜ್ಯ ಸರ್ಕಾರ

    ಕೇಂದ್ರಕ್ಕೆ ಹೆದರಿ 3 ಸಾವಿರ ಕೋಟಿ ರೂ. ಪರಿಹಾರ ಮೊತ್ತ ಕಡಿತಗೊಳಿಸಿದ ರಾಜ್ಯ ಸರ್ಕಾರ

    ಬೆಂಗಳೂರು: ನೆರೆಹಾನಿ ಕುರಿತು ಪರಿಷ್ಕರಣೆ ಮಾಡಿದ ಅಂದಾಜು ಮೊತ್ತವನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿದ್ದು, ಪರಿಷ್ಕೃತ ವರದಿಯಲ್ಲಿ 3 ಸಾವಿರ ಕೋಟಿ ರೂ.ಗಳನ್ನು ಕಡಿತಗೊಳಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ರಾಜ್ಯ ಸರ್ಕಾರದ ಸಲ್ಲಿಸಿದ ನಷ್ಟದ ಅಂದಾಜಿಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ರಾಜ್ಯದ ವರದಿಗೂ, ಕೇಂದ್ರ ಅಧ್ಯಯನ ತಂಡದ ವರದಿಗೂ ತಾಳೆಯಾಗುತ್ತಿಲ್ಲ ಎಂದು ಪರಿಷ್ಕರಣೆಗೆ ಸೂಚಿಸಿತ್ತು. ಮೊದಲು ಸಲ್ಲಿಸಿದ್ದ ನಷ್ಟದ ಅಂದಾಜು ವರದಿಗೂ ಈಗ ಸಲ್ಲಿಸಿರುವ ನಷ್ಟದ ವರದಿ 3 ಸಾವಿರ ಕೋಟಿ ರೂ. ಕಡಿಮೆಯಾಗಿದೆ. ರಾಜ್ಯ ಸರ್ಕಾರ ಮೊದಲು 38,451 ಕೋಟಿ ರೂ. ಅಂದಾಜು ನಷ್ಟವಾಗಿದೆ ಎಂದು ವರದಿ ಸಲ್ಲಿಸಿತ್ತು. ಇದರನ್ವಯ ಎನ್‍ಡಿಆರ್ ಎಫ್‍ನಿಂದ 3,818 ಕೋಟಿ ಪರಿಹಾರಕ್ಕೆ ಮನವಿ ಮಾಡಲಾಗಿತ್ತು.

    ಒಟ್ಟು 2,47,628 ಮನೆಗಳು ಹಾನಿಯಾಗಿವೆ ಈ ಕಟ್ಟಡಗಳಲ್ಲಿ ಖಾಸಗಿ, ಸಂಘ ಸಂಸ್ಥೆಗಳ ಹಾನಿ ಪಟ್ಟಿಯೂ ಸೇರಿತ್ತು. 2,193 ಸೇತುವೆಗಳು, 10,988 ಸರ್ಕಾರಿ ಕಟ್ಟಡಗಳು ಹಾನಿಯಾಗಿವೆ ಎಂದು ರಾಜ್ಯ ಸರ್ಕಾರ ವರದಿ ಸಲ್ಲಿಸಿತ್ತು.

    ರಾಜ್ಯ ವರದಿಗೆ ಕೇಂದ್ರ ಸರ್ಕಾರದ ಆಕ್ಷೇಪ ವ್ಯಕ್ತಪಡಿಸಿ, ಒಟ್ಟು ನಷ್ಟದ ಅಂದಾಜು ಲೆಕ್ಕದಲ್ಲಿ ತಪ್ಪಿರುವ ಬಗ್ಗೆ ಅನುಮಾನವಿದೆ. ಸಣ್ಣಪುಟ್ಟ ಮನೆ ಹಾನಿಗಳನ್ನು ಸಂಪೂರ್ಣ ಹಾನಿಗೆ ಸೇರಿಸಿದ್ದೀರಿ. ಆ ಮನೆಗಳ ಹಾನಿ ಸಂಖ್ಯೆ ಲಕ್ಷಕ್ಕಿಂತ ಕಡಿಮೆ ಆಗುತ್ತದೆಯೇ ಎನ್ನುವುದನ್ನು ಪರಿಷ್ಕರಿಸಿ. ಅಲ್ಲದೆ ಖಾಸಗಿ ಸಂಘ ಸಂಸ್ಥೆ ಕಟ್ಟಡಗಳನ್ನು ಸೇರಿಸಿದ್ದು ಸರಿ ಇಲ್ಲ. ಫಲವತ್ತಾದ ಜಮೀನು, ಬೆಳೆ ನಾಶದ ವಿಂಗಡಣೆಯೂ ಸರಿ ಇಲ್ಲ ಎಂದು ಕೇಂದ್ರ ಸರ್ಕಾರ ಪರಿಹಾರ ಮೊತ್ತದ ವರದಿಯನ್ನು ಪರಿಷ್ಕರಿಸುವಂತೆ ಸೂಚಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಕೇಂದ್ರ ಸರ್ಕಾರ ಸೂಚನೆ ಮೇರೆ ರಾಜ್ಯ ಸರ್ಕಾರ ನಷ್ಟದ ಪರಿಷ್ಕೃತ ಅಂದಾಜನ್ನು 35,168 ಕೋಟಿ ರೂ.ಗೆ ಇಳಿಕೆ ಮಾಡಿದೆ. ಮೊದಲ ವರದಿಗಿಂತ ಎರಡನೇ ವರದಿಯಲ್ಲಿ 3 ಸಾವಿರ ಕೋಟಿ ರೂ. ಕಡಿತಗೊಳಿಸಿದೆ. ಎನ್‍ಡಿಆರ್ ಎಫ್ ನಿಯಾಮಾವಳಿ ಪ್ರಕಾರ 3,200 ಕೋಟಿ ಪರಿಹಾರಕ್ಕೆ ಮನವಿ ಮಾಡಲಾಗಿದೆ. ಒಟ್ಟು 1.16 ಲಕ್ಷ ಮನೆಗಳು ಹಾನಿಯಾಗಿವೆ ಎಂದು ಪರಿಷ್ಕೃತ ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೆ, 2,193 ಸೇತುವೆಗಳು ಹಾನಿಯಾದ ಬಗ್ಗೆ ವರದಿ ನೀಡಲಾಗಿದೆ. ಈ ಪರಿಷ್ಕೃತ ಪ್ರಸ್ತಾವನೆಯಲ್ಲಿ ಖಾಸಗಿ, ಸಂಘ ಸಂಸ್ಥೆಗಳ ಕಟ್ಟಡಗಳನ್ನು ಕೈ ಬಿಡಲಾಗಿದೆ ಎಂದು ತಿಳಿದು ಬಂದಿದೆ.

  • ಪ್ರವಾಹ ವರದಿಯನ್ನು ಕೇಂದ್ರ ತಿರಸ್ಕಾರ ಮಾಡೇ ಇಲ್ಲ- ಸಿಎಂ ಬಿಎಸ್‍ವೈ

    ಪ್ರವಾಹ ವರದಿಯನ್ನು ಕೇಂದ್ರ ತಿರಸ್ಕಾರ ಮಾಡೇ ಇಲ್ಲ- ಸಿಎಂ ಬಿಎಸ್‍ವೈ

    ಬೆಳಗಾವಿ: ರಾಜ್ಯದ ಪ್ರವಾಹ ಪರಿಹಾರದ ವರದಿಯನ್ನು ಕೇಂದ್ರ ತಿರಸ್ಕಾರ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ರಾಜ್ಯದ ಪ್ರಸ್ತಾಪ ಹಾಗೂ ಕೇಂದ್ರ ತಂಡದ ವರದಿ ಹೊಂದಾಣಿಕೆ ಆಗುತ್ತಿಲ್ಲ. ಈ ಕಾರಣಕ್ಕೆ ಪರಿಶೀಲಿಸಬೇಕಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದಕ್ಕಾಗಿ ನಮ್ಮ ಇಬ್ಬರು ಅಧಿಕಾರಿಗಳನ್ನು ದೆಹಲಿಗೆ ಕಳುಹಿಸಲಾಗಿದೆ ಎಂದರು.

    ಈ ದೇಶದಲ್ಲಿ ಅನೆಕ ರಾಜ್ಯಗಳ ಪರಿಸ್ಥಿತಿ ಹೀಗೆ ಇದೆ. ನಾವೂ ಬಜೆಟ್ ನಲ್ಲಿ ಹಣ ನೀಡುವ ಮೂಲಕ ಎಲ್ಲ ಇಲಾಖೆಯಿಂದ ಪರಿಹಾರ ಕೊಡಲಾಗುವುದು. ದೇಶದಲ್ಲಿ ನಮ್ಮ ರಾಜ್ಯದಲ್ಲಿ ಅತೀ ಹೆಚ್ಚು ಹಾನಿಯಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‍ಡಿಆರ್ ಎಪ್‍) ನಿಂದ ಹೆಚ್ಚಿನ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

    ಕೇಂದ್ರ ಸರ್ಕಾರ ರಾಜ್ಯದ ವರದಿಯನ್ನು ತಿರಸ್ಕರಿಸಿದೆ ಎಂಬುದು ಸುಳ್ಳು. ಈಗಾಗಲೇ ಕೇಂದ್ರದ ಎಲ್ಲ ಸಚಿವರೊಂದಿಗೆ ಮಾತನಾಡಿದ್ದೇನೆ. ಮೂರ್ನಾಲ್ಕು ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ಕೇಂದ್ರದ ಪರಿಹಾರ ಹಣ ಬಿಡುಗಡೆ ಆಗಲಿದೆ ಎಂದು ಭರವಸೆ ನೀಡಿದರು.

    ದೇಶದ ಯಾವ ಪ್ರವಾಹಪೀಡಿತ ರಾಜ್ಯಗಳಿಗೆ ಪರಿಹಾರ ಬಿಡುಗಡೆ ಆಗಿಲ್ಲ. ರಾಜ್ಯಕ್ಕೆ ಕೇಂದ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಬಿಡುಗಡೆ ಆಗುವ ವಿಶ್ವಾಸ ಇದೆ. ರಾಜ್ಯ ಸರ್ಕಾರದ ಬೊಕ್ಕಸ ಖಾಲಿ ಆಗಿಲ್ಲ. ಖಾಲಿ ಆಗಿದ್ದರೆ ಪ್ರವಾಹ ಪರಿಹಾರಕ್ಕೆ ಇಷ್ಟೊಂದು ಹಣ ನೀಡಲು ಆಗುತ್ತಿರಲಿಲ್ಲ. ಮುಂದಿನ ಬಜೆಟ್ ನಲ್ಲಿ ಪ್ರವಾಹ ಪುನರ್ವಸತಿಗೆ ಹೆಚ್ಚಿನ ಹಣ ಮೀಸಲಿಡುತ್ತೇವೆ ಎಂದರು.

    ಇದೇ ವೇಳೆ ಮಧ್ಯಂತರ ಚುನಾವಣೆಯ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ದೇವೇಗೌಡ ಅವರು ಬೇಜವಾಬ್ದಾರಿ ಹೇಳಿಕೆಗಳನ್ನ ಕೊಟ್ಟಿದ್ದಾರೆ. ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ರಾಜ್ಯ ಸರ್ಕಾರದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಎಲ್ಲಿ ಕೆಲಸ ನಿಂತಿದೆ ಅದನ್ನ ತೋರಿಸಲಿ. ಲೂಟಿ ಮಾಡುವವರ ವಿರುದ್ಧ ಕ್ರಮ ತೆಗೆದುಕ್ಕೊಳ್ಳಲಾಗುತ್ತಿದೆ ಎಂದರು.

    ಕೇಂದ್ರ ತಿರಸ್ಕಾರ:
    ರಾಜ್ಯ ಸರ್ಕಾರ ನೀಡಿದ ನೆರೆ ವರದಿಯನ್ನು ಕೇಂದ್ರ ತಿರಸ್ಕರಿಸಿದೆ. ರಾಜ್ಯ ಸರ್ಕಾರ ಇಷ್ಟು ದಿನ ಸಮಯ ತೆಗೆದುಕೊಂಡ ನೆರೆ ಸ್ಥಳಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ವರದಿಯನ್ನು ಸಿದ್ಧಪಡಿಸಿತ್ತು. ಇತ್ತ ಕೇಂದ್ರ ನೇಮಕ ಮಾಡಿದ್ದ ಅಧಿಕಾರಿಗಳು ಸಹ ಸಮೀಕ್ಷೆ ನಡೆಸಿ ವರದಿಯನ್ನು ಸಿದ್ಧಪಡಿಸಿಕೊಂಡಿದ್ದರು. ಇದೀಗ ರಾಜ್ಯ ನೀಡಿದ ವರದಿಯಲ್ಲಿ ಅಂಕಿ ಅಂಶಗಳು ತಪ್ಪಾಗಿದೆ. ಪ್ರಮಾಣೀಕರಿಸಿ ಮತ್ತೊಮ್ಮೆ ಹೊಸ ವರದಿ ನೀಡಿ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್‍ಗೆ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಸಂದೇಶ ರವಾನಿಸಿದ್ದಾರೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿತ್ತು.

    ಅಲ್ಲದೇ ಕೇಂದ್ರ ತಿರಸ್ಕಾರ ಮಾಡಿದೆ ಎಂದು ಕಾಂಗ್ರೆಸ್ ಕೂಡ ತಮ್ಮ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದೆ. ಕೇಂದ್ರಕ್ಕೆ ಹೆಚ್ಚು ತೆರಿಗೆ ನೀಡುತ್ತಿರುವ ದೇಶದ 4ನೇ ಅತಿ ದೊಡ್ಡ ರಾಜ್ಯ ಕರ್ನಾಟಕ. ನಮ್ಮ ತೆರಿಗೆ ಹಣವನ್ನು ನೆರೆ ಪರಿಹಾರಕ್ಕಾಗಿ ಕೇಳುವುದು ನಮ್ಮ ಹಕ್ಕು. ಸಿಎಂ ಯಡಿಯೂರಪ್ಪ ಅವರು ಮಾತು ಕೊಟ್ಟಂತೆ 3 ದಿನಗಳಲ್ಲಿ ಕೇಂದ್ರದಿಂದ ಪರಿಹಾರ ಬರದೇ ಇದ್ದಲ್ಲಿ ರಾಜ್ಯಾದ್ಯಂತ ‘ಕರ ನಿರಾಕರಣೆ’ ಚಳುವಳಿಗೆ ಕರೆ ನೀಡಲಾಗುವುದು ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.

  • ರಾಜ್ಯ ಸರ್ಕಾರದ ನೆರೆ ವರದಿ ತಿರಸ್ಕರಿಸಿದ ಕೇಂದ್ರ ಸರ್ಕಾರ?

    ರಾಜ್ಯ ಸರ್ಕಾರದ ನೆರೆ ವರದಿ ತಿರಸ್ಕರಿಸಿದ ಕೇಂದ್ರ ಸರ್ಕಾರ?

    ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದರು ಇನ್ನೆರೆಡು ದಿನಗಳಲ್ಲಿ ಪರಿಹಾರ ಬರುತ್ತಾ ಎಂದು ಹೇಳುತ್ತಾ ಎರಡು ತಿಂಗಳು ಕಳೆದಿದ್ದಾರೆ. ಪ್ರವಾಹ ಪರಿಹಾರದ ದಾರಿ ನೋಡುತ್ತಿರುವ ಸಂತ್ರಸ್ತರಿಗೆ ಮತ್ತೊಂದು ಶಾಕ್ ಎದುರಾಗಿದೆ. ರಾಜ್ಯ ಸರ್ಕಾರ ನೀಡಿದ ನೆರೆ ವರದಿಯನ್ನು ಕೇಂದ್ರ ತಿರಸ್ಕರಿಸಿದೆ.

    ಇಷ್ಟು ದಿನ ಸಮಯ ತೆಗೆದುಕೊಂಡ ರಾಜ್ಯ ಸರ್ಕಾರ ನೆರೆ ಸ್ಥಳಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ವರದಿಯನ್ನು ಸಿದ್ಧಪಡಿಸಿತ್ತು. ಇತ್ತ ಕೇಂದ್ರ ನೇಮಕ ಮಾಡಿದ್ದ ಅಧಿಕಾರಿಗಳು ಸಹ ಸಮೀಕ್ಷೆ ನಡೆಸಿ ವರದಿಯನ್ನು ಸಿದ್ಧಪಡಿಸಿಕೊಂಡಿದ್ದರು. ಇದೀಗ ರಾಜ್ಯ ನೀಡಿದ ವರದಿಯಲ್ಲಿ ಅಂಕಿ ಅಂಶಗಳು ತಪ್ಪಾಗಿದೆ. ಪ್ರಮಾಣೀಕರಿಸಿ ಮತ್ತೊಮ್ಮೆ ಹೊಸ ವರದಿ ನೀಡಿ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್‍ಗೆ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಸಂದೇಶ ರವಾನಿಸಿದ್ದಾರೆ.

    ಈಗ ಮತ್ತೊಮ್ಮೆ ವರದಿ ನೀಡಲು ಇನ್ನೆಷ್ಟು ದಿನ ಬೇಕಾಗುತ್ತದೆ ಎಂಬ ಪ್ರಶ್ನೆಯೊಂದು ಪ್ರವಾಹ ಸಂತ್ರಸ್ತರಲ್ಲಿ ಮೂಡಿದೆ. ತಮ್ಮದೇ ಬಿಜೆಪಿ ಸರ್ಕಾರ ನೀಡಿದ ವರದಿಯನ್ನು ಕೇಂದ್ರ ತಿರಸ್ಕರಿಸಿದ್ದು ಯಾಕೆ? ರಾಜ್ಯ ಸರ್ಕಾರದ ನೀಡಿದ ವರದಿಯ ಮೇಲೆ ಕೇಂದ್ರಕ್ಕೆ ನಂಬಿಕೆ ಇಲ್ವಾ? ರಾಜ್ಯ ಸರ್ಕಾರ ಪರಿಹಾರದ ವರದಿಯನ್ನು ಸಿದ್ಧಪಡಿಸಲು ವಿಫಲವಾಯ್ತಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

    ಕಾಂಗ್ರೆಸ್ ಆಕ್ರೋಶ: ರಾಜ್ಯ ನೀಡಿದ ನೆರೆ ವರದಿ ತಿರಸ್ಕರಿಸಿದ ಬೆನ್ನಲ್ಲೇ ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದೆ. ಪರಿಹಾರ ಕೋರಿ ರಾಜ್ಯ ಸಲ್ಲಿಸಿರುವ ನೆರೆಯ ನಷ್ಟದ ವರದಿಯನ್ನು ಕೇಂದ್ರವು ತಿರಸ್ಕರಿಸುವುದು ಖಂಡನೀಯ. ಪರಿಹಾರ ಬಿಡುಗಡೆ ಮಧ್ಯಂತರವೂ ಇಲ್ಲ. ವರದಿ ನಂತರವೂ ಇಲ್ಲ. ರಾಜ್ಯಕ್ಕೆ ಮಾಡುತ್ತಿರುವ ದ್ರೋಹವನ್ನು ಸಹಿಸುವುದೇಗೆ? 25 ಮಂದಿ ಉತ್ತರ ಕುಮಾರರೇ ನಿಮ್ಮ ಉತ್ತರವೇನು? ಸಿಎಂ ಯಡಿಯೂರಪ್ಪನವರೇ ಪರಿಹಾರ ಕಾರ್ಯ ಸರಿಯಾಗಿ ನಿರ್ವಹಿಸಿ ಇಲ್ಲ ನಿರ್ಗಮಿಸಿ ಎಂದು ಟ್ವೀಟ್ ಮಾಡಿದೆ.

    ಕೇಂದ್ರಕ್ಕೆ ಹೆಚ್ಚು ತೆರಿಗೆ ನೀಡುತ್ತಿರುವ ದೇಶದ 4ನೇ ಅತಿ ದೊಡ್ಡ ರಾಜ್ಯ ಕರ್ನಾಟಕ. ನಮ್ಮ ತೆರಿಗೆ ಹಣವನ್ನು ನೆರೆ ಪರಿಹಾರಕ್ಕಾಗಿ ಕೇಳುವುದು ನಮ್ಮ ಹಕ್ಕು. ಸಿಎಂ ಯಡಿಯೂರಪ್ಪ ಅವರು ಮಾತು ಕೊಟ್ಟಂತೆ 3 ದಿನಗಳಲ್ಲಿ ಕೇಂದ್ರದಿಂದ ಪರಿಹಾರ ಬರದೇ ಇದ್ದಲ್ಲಿ ರಾಜ್ಯಾದ್ಯಂತ ‘ಕರ ನಿರಾಕರಣೆ’ ಚಳುವಳಿಗೆ ಕರೆ ನೀಡಲಾಗುವುದು ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.

  • ಸರ್ಕಾರದ ಪರಿಹಾರ ಬಡಾಯಿ ಜಗಜ್ಜಾಹೀರು – ಪಬ್ಲಿಕ್ ಟಿವಿ ಬಿಚ್ಚಿಡ್ತಿದೆ ಅನುದಾನದ ಅಂಕಿ ಅಂಶ

    ಸರ್ಕಾರದ ಪರಿಹಾರ ಬಡಾಯಿ ಜಗಜ್ಜಾಹೀರು – ಪಬ್ಲಿಕ್ ಟಿವಿ ಬಿಚ್ಚಿಡ್ತಿದೆ ಅನುದಾನದ ಅಂಕಿ ಅಂಶ

    ಬೆಂಗಳೂರು: ಪ್ರವಾಹ ಸಂತ್ರಸ್ತರ ಕಣ್ಣೀರೋಸುವ ಕೆಲಸವನ್ನು ಸರ್ಕಾರ ಮಾಡಿದೆ. ತಾತ್ಕಾಲಿಕ ಪರಿಹಾರ ಕೊಟ್ಟಿದ್ದೇವೆ, ಕೇಂದ್ರಕ್ಕಾಗಿ ಕಾದಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಮುಖ್ಯಮಂತ್ರಿಯಿಂದ ಎಲ್ಲ ಸಚಿವರು ಕೂಡ ಈ ಬಗ್ಗೆ ಸಮರ್ಥನೆಯ ಹೇಳಿಕೆಗಳನ್ನು ನೀಡಿದ್ದು, 1500 ಕೋಟಿ ರೂ. ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ.

    ಸಂತ್ರಸ್ತರ ಕುಟುಂಬಗಳಿಗೆ ತಕ್ಷಣಕ್ಕೆ 10 ಸಾವಿರ, ಸಂಪೂರ್ಣ ಮನೆ ಹಾನಿಗೆ 5 ಲಕ್ಷ ರೂ. ಕೊಟ್ಟಿದ್ದೇವೆ ಎಂದು ಸಿಎಂ ಹೇಳಿದ್ದು, ಆದರೆ ಸರ್ಕಾರವೇ ಹೇಳಿರುವ ಅಧಿಕೃತ ದಾಖಲೆ ಪ್ರಕಾರ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಕೊಟ್ಟಿರುವುದು ಕೇವಲ 128.41 ಕೋಟಿ ಮಾತ್ರ. ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ತಾನು ಕೊಟ್ಟಿರುವ ಪರಿಹಾರವನ್ನ ಅಧಿಕೃತವಾಗಿ ತನ್ನ ವೆಬ್‍ಸೈಟ್‍ನಲ್ಲಿ ಹಾಕಿದೆ. ಇದರ ಪ್ರಕಾರ ಅಂಕಿ ಅಂಶಗಳು ಇಂತಿದೆ.

    ಇದುವರೆಗೂ 41,459 ಫಲಾನುಭವಿಗಳ ಖಾತೆಗೆ ಪರಿಹಾರ ಹಣ ಜಮೆಯಾಗಿದ್ದು, 128.41 ಕೋಟಿ ರೂ. ಪರಿಹಾರ ಹಣ ಜಮೆಯಾಗಿರುವ ಮಾಹಿತಿ ಲಭಿಸಿದೆ. ಗ್ರಾಮೀಣ ಭಾಗದ 37,132 ಫಲಾನುಭವಿಗಳ ಖಾತೆಗೆ 110.27 ಕೋಟಿ ರೂ. ಪರಿಹಾರ ಹಣ ಜಮೆಯಾಗಿದೆ. ಆದರೆ ಈ ಹಣ ತಾಂತ್ರಿಕ ದೋಷಗಳಿಂದ ಖಾತೆಗಳಿಗೆ ಜಮೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

    ನಗರ ಪ್ರದೇಶ 4,327 ಫಲಾನುಭವಿಗಳ ಖಾತೆಗೆ 18.14 ಕೋಟಿ ರೂ. ಪರಿಹಾರ ಹಣ ಜಮೆ ಎಂದಿದ್ದು, ಆದರೆ ಈ ಹಣ ತಾಂತ್ರಿಕ ದೋಷಗಳಿಂದ ಜಮೆ ಆಗಿಲ್ಲ ಎಂದ ಅಧಿಕಾರಿಗಳು ತಿಳಿಸಿದ್ದಾರೆ.

    ಇದರಲ್ಲಿ ಕೆಲವರ ಖಾತೆಗೆ 10 ಸಾವಿರ, 25 ಸಾವಿರ, ಕೆಲವರಿಗೆ 1 ಲಕ್ಷ ರೂ.ವರೆಗೆ ಪರಿಹಾರ ಹಣವನ್ನು ಜಮೆ ಮಾಡಿದ್ದೇವೆ ಎಂಬ ಮಾಹಿತಿ ಲಭಿಸಿದೆ. ಈ ಅಂಕಿ ಅಂಶಗಳನ್ನೇ ಗಮನಿಸುವುದಾದರೆ, ಸರ್ಕಾರ ಹೇಳಿರುವ 1500 ಕೋಟಿ ರೂ. ಪೈಕಿ ಕೇವಲ 128.41 ಕೋಟಿ ಮಾತ್ರ ಜನರ ಖಾತೆಗೆ ಜಮೆಯಾಗಿದೆ. ಉಳಿದ 1,370 ಕೋಟಿಯನ್ನು ಎಲ್ಲಿ ಖರ್ಚು ಮಾಡಿದೆ? ಯಾರು ಖರ್ಚು ಮಾಡಿದ್ದಾರೆ? ಯಾರಿಗೆ ಪರಿಹಾರ ಕೊಟ್ಟಿದ್ದಾರೆ? ಉಳಿದ 1 ಲಕ್ಷಕ್ಕೂ ಹೆಚ್ಚು ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಪರಿಹಾರ ಕೊಡುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಬೇಕಿದೆ.

  • ಕೇಂದ್ರದಿಂದ ಹಣ ಬಿಡುಗಡೆಯಾಗಿಲ್ಲ ಎಂದು ಯಾವುದೇ ಪರಿಹಾರ ಕಾರ್ಯ ನಿಂತಿಲ್ಲ: ಸಿಎಂ ಬಿಎಸ್‍ವೈ

    ಕೇಂದ್ರದಿಂದ ಹಣ ಬಿಡುಗಡೆಯಾಗಿಲ್ಲ ಎಂದು ಯಾವುದೇ ಪರಿಹಾರ ಕಾರ್ಯ ನಿಂತಿಲ್ಲ: ಸಿಎಂ ಬಿಎಸ್‍ವೈ

    ಬೆಳಗಾವಿ: ಪ್ರವಾಹದಿಂದ ಉಂಟಾಗಿರುವ ನಷ್ಟದಿಂದ ಜನರು ಎದುರಿಸುತ್ತಿರುವ ಸಂಕಷ್ಟವನ್ನು ನಿಭಾಯಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂಬ ವಿರೋಧಿ ಪಕ್ಷಗಳ ಆರೋಪಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಉತ್ತರಿಸಿದ್ದು, ಜನರ ಸಂಕಷ್ಟವನ್ನು ನಿವಾರಿಸುವ ಬಗ್ಗೆ ಕ್ರಮಕೈಗೊಂಡಿದ್ದೇವೆ. ಈಗಾಗಲೇ ಮೂರುವರೆ ಸಾವಿರ ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದು ಹೇಳಿದ್ದಾರೆ.

    ಇದೇ ವೇಳೆ ಕೇಂದ್ರ ಸರ್ಕಾರದಿಂದ ಅನುದಾನ ಲಭಿಸಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಎಸ್‍ವೈ ಅವರು, ಇಂದು ನಾನು ಜಿಲ್ಲೆಯಲ್ಲಿ ಮಾಧ್ಯಮಗಳ ಎದುರೇ ಸಭೆ ನಡೆಸಿದ್ದು, ಯಾವ ಕ್ರಮಗಳನ್ನು ಕೈಗೊಂಡಿದ್ದೇವೆ ಎಂಬ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಇದೆ. ಈಗಾಗಲೇ ರಾಜ್ಯ ಸರ್ಕಾರ ಮೂರುವರೆ ಸಾವಿರ ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಇನ್ನೂ ಹೆಚ್ಚು ಹಣವನ್ನು ನಾವು ಬಿಡುಗಡೆ ಮಾಡುತ್ತೇವೆ, ಇದು ನಮ್ಮ ಕರ್ತವ್ಯವಾಗಿದೆ. ಹೆಚ್ಚಿನ ಹಾನಿಯಾದ ಕುರಿತು ವರದಿಯನ್ನ ಮಾಡುತ್ತಿದ್ದೇವೆ. ಹಂತ ಹಂತವಾಗಿ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡುತ್ತಿದೆ ಎಂದರು.

    ಈಗಾಗಲೇ ಕೇಂದ್ರದಲ್ಲಿ ಮನವಿ ಸಲ್ಲಿಕೆ ಮಾಡಿದ್ದು, ಕೇಂದ್ರದಿಂದ ಬರುವ ಹಣವನ್ನು ಬೆಳೆ ನಷ್ಟ ಪರಿಹಾರ ಸೇರಿದಂತೆ, ವಿವಿಧ ಭಾಗಗಳಲ್ಲಿ ಹಾನಿಯಾಗಿರುವ ರಸ್ತೆ ಸೇರಿದಂತೆ ಬೃಹತ್ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತೇವೆ. ಅತಿವೃಷ್ಟಿಗೆ ಸಿಕ್ಕಿರುವ ರೈತರಿಗೆ ನ್ಯಾಯ ನೀಡುವುದು ನಮ್ಮ ಕರ್ತವ್ಯ. ನಾನು ರೈತನ ಮಗನೇ ಎಂದರು.

    ಈಗಾಗಲೇ ಮನೆ ನೆರೆಯಿಂದ ಮನೆ ಕಳೆದುಕೊಂಡವರಿಗೆ ಮನೆಯ ಫೌಂಡೇಷನ್ ಹಾಕಿಕೊಳ್ಳುವರಿಗೆ 1 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ. ಹತ್ತು ಸಾವಿರ ರೂ. ಚೆಕ್‍ಗಳನ್ನು ಬಹುತೇಕರಿಗೆ ನೀಡಿದ್ದೇವೆ. ಪ್ರಧಾನಿ ಮೋದಿ ಹೊರ ದೇಶದಲ್ಲಿರುವುದರಿಂದ ಇದುವರೆಗೂ ಸಭೆ ನಡೆಸಲಾಗಲಿಲ್ಲ. ನೆರೆ ಸಮಸ್ಯೆ ಅನುಭವಿಸಿದ ಯಾವುದೇ ರಾಜ್ಯಕ್ಕೂ ಹಣ ಬಿಡುಗಡೆ ಮಾಡಿಲ್ಲ. ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಅವರೊಂದಿಗೆ ಚರ್ಚೆ ನಡೆಸಿದ್ದು, ಶೀಘ್ರವೇ ಹಣ ಬಿಡುಗಡೆಯಾಗಲಿದೆ ಎಂದರು.

    ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಬೇಕಿತ್ತು, ಸಿಎಂ ಅವರಿಗೆ ತಾಕತ್ತಿಲ್ಲ ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಇದು ತಾಕತ್ತಿನ ಪ್ರಶ್ನೆ ಅಲ್ಲ, ಶಾಂತ ರೀತಿಯಿಂದ ಕೇಂದ್ರದಿಂದ ಅನುದಾನ ಪಡೆದುಕೊಳ್ಳುವುದಾಗಿದೆ. ಕಾಂಗ್ರೆಸ್ ಪಕ್ಷದವರು ಹೇಗೆ ಡರ್ಟಿ ಪಾಲಿಟಿಕ್ಸ್ ಮಾಡ್ತಿದ್ದಾರಾ ಎಂಬುದನ್ನ ನನ್ನ ಬಾಯಿಂದ ಹೇಳಲು ನಾನು ಸಿದ್ಧವಾಗಿಲ್ಲ. ವಿರೋಧ ಪಕ್ಷದವರು ಅವರ ಕೆಲಸ ಮಾಡುತ್ತಾರೆ ಅದಕ್ಕೆ ನಾನು ವಿರೋಧ ಮಾಡುವುದಿಲ್ಲ. ಮೂರು ದಿನ ಅಧಿವೇಶನ ಕರೆದಿದ್ದೇವೆ ಅಲ್ಲಿ ಈ ಚರ್ಚೆಯಾಗಲಿ. ಕೇಂದ್ರಕ್ಕೆ ಯಾವುದೇ ನಿಯೋಗ ಕರೆದುಕೊಂಡು ಹೋಗುವ ಅಗತ್ಯವಿಲ್ಲ. 2-3 ದಿನಗಳಲ್ಲಿ ಕೇಂದ್ರದಿಂದ ಹಣ ಬಿಡುಗಡೆಯಾಗುತ್ತದೆ ಎಂದರು.

    ಸರ್ಕಾರ ಮತ್ತು ಪಕ್ಷದ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂಬ ವಿಚಾರವಾಗಿ ಉತ್ತರಿಸಿದ ಅವರು, ಬೆಳಗ್ಗೆ ರಾಜ್ಯಾಧ್ಯಕ್ಷರು ನಮ್ಮ ಮನೆಗೆ ಬಂದು ಉಪಾಹಾರ ಸೇವಿಸಿ ಹೋಗಿದ್ದಾರೆ. ಮುಸುಕಿನ ಗುದ್ದಾಟ ನಡೆಯುತ್ತಿರುವುದು ಯಾವ ಪಕ್ಷದಲ್ಲಿ ಎಂದು ನಮ್ಮ ಬಾಯಿಂದ ಹೇಳಿಸಬೇಡಿ ಎಂದರು.

    ನೆರೆ ಸಮಸ್ಯೆಯನ್ನು ಎದುರಿಸಲು ಸರ್ಕಾರ ಕೈಗೊಂಡಿರುವ ಪ್ರತಿಕ್ರಮವನ್ನು ಜನರ ಕಣ್ಣ ಮುಂದಿಡುತ್ತೇವೆ. ಬೆಳೆ ನಾಶವಾಗಿದ್ದರೆ ಹೆಕ್ಟರ್ ಗೆ ಆರೂವರೆ ಸಾವಿರ, ನೀರಾವರಿ ಜಮೀನಿನಲ್ಲಿ ಬೆಳೆ ಹಾನಿಯಾದರೆ ಹೆಕ್ಟರ್ ಗೆ ಹನ್ನೆರಡು ಸಾವಿರ ನೀಡುತ್ತೇವೆ. ಪ್ರತಿ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಹಣವನ್ನು ನೀಡುತ್ತಿದ್ದು, ಹಂತ ಹಂತವಾಗಿ ಹಣ ಬಿಡುಗಡೆಯಾಗಲಿದೆ. ಅಲ್ಲದೇ ಮಳೆಯಿಂದ ಶಾಲಾ ಕಟ್ಟಡಕ್ಕೆ ಹಾನಿಯಾಗಿದ್ದಾರೆ ಹೊಸ ಕಟ್ಟಡ ನಿರ್ಮಾಣ ಮಾಡಲು 5 ರೂ. ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದು, ಕೆಇಬಿ ಇಲಾಖೆಗೂ ಕೂಡ ಜಿಲ್ಲೆಯಲ್ಲಿ ನಡೆಯಬೇಕಾದ ಕ್ರಮಗಳನ್ನು ಶೀಘ್ರ ಪೂರ್ಣಗೊಳಿಸಲು ಆದೇಶ ನೀಡಿದ್ದೇನೆ ಎಂದು ಸಭೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಉತ್ತರಿಸಿದರು.

  • ಬ್ಯಾಂಕಿನಿಂದ ರೈತರಿಗೆ ನೋಟಿಸ್ ನೀಡೋದು ತಪ್ಪಲ್ಲ- ಸಚಿವ ಮಾಧುಸ್ವಾಮಿ

    ಬ್ಯಾಂಕಿನಿಂದ ರೈತರಿಗೆ ನೋಟಿಸ್ ನೀಡೋದು ತಪ್ಪಲ್ಲ- ಸಚಿವ ಮಾಧುಸ್ವಾಮಿ

    – ನಮ್ಮ ಸರ್ಕಾರ ಇನ್ನು ಸಾಲ ಮನ್ನಾ ನಿರ್ಧಾರ ತೆಗೊಂಡಿಲ್ಲ

    ತುಮಕೂರು: ಬ್ಯಾಂಕ್‍ನಿಂದ ರೈತರಿಗೆ ನೋಟಿಸ್ ನೀಡುವುದು ತಪ್ಪಲ್ಲ. “ಕಮರ್ಷಿಯಲ್ ಬ್ಯಾಂಕ್‍ಗೆ ರೈತರ ಸಾಲ ವಸೂಲಿ ಮಾಡಬೇಡಿ ಎಂದು ಹೇಳುವುದು ಕಷ್ಟ” ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಾಲ ಮನ್ನಾ ಮಾಡಿದರೂ ರೈತರಿಗೆ ನೋಟಿಸ್ ನೀಡುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ರೈತರಿಗೆ ಸಾಲದ ಕುರಿತು ನೋಟಿಸ್ ನೀಡಬೇಡಿ ಎಂದು ನಮ್ಮ ಸಹಕಾರಿ ಬ್ಯಾಂಕ್‍ಗಳಿಗೆ ನಿರ್ದೇಶನ ಕೊಡಬಹುದು. ಆದರೆ ಕಮರ್ಷಿಯಲ್ ಬ್ಯಾಂಕ್‍ಗಳಿಗೆ ರೈತರ ಸಾಲ ವಸೂಲಿ ಮಾಡಬೇಡಿ ಎಂದು ಹೇಳುವುದು ಕಷ್ಟ. ಅಲ್ಲದೆ ಸಾಲ ಮನ್ನಾ ನಿರ್ಧಾರವನ್ನು ನಮ್ಮ ಸರ್ಕಾರ ಇನ್ನು ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಸಾಲ ವಸೂಲಾತಿಗೆ ಬ್ಯಾಂಕ್‍ಗಳು ಪ್ರತಿ ಸಾರಿ ಅದಾಲತ್ ಮಾಡುತ್ತವೆ. ಸಾಲ ಕಟ್ಟದೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡಿರಬಹುದು. ಸರ್ಕಾರ ಸಾಲಮನ್ನಾ ಯೋಜನೆಯ ಹಣವನ್ನು ಬ್ಯಾಂಕಿಗೆ ತುಂಬದೆ ಬ್ಯಾಂಕಿನವರಿಗೆ ನೋಟಿಸ್ ಕೊಡಬೇಡಿ ಎಂದು ಹೇಳಲು ಆಗುವುದಿಲ್ಲ. ಬ್ಯಾಂಕಿನವರು ಸಾಲದ ನೋಟಿಸ್ ಕೊಡುವುದರಲ್ಲಿ ತಪ್ಪಿಲ್ಲ. ಆದರೆ ರೈತರ ಆಸ್ತಿಗಳನ್ನು ಜಪ್ತಿ ಮಾಡಿ ಕಿರುಕುಳ ನೀಡದಂತೆ ಎಚ್ಚರಿಕೆ ನೀಡಿದ್ದೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

  • ಕಡ್ಡಾಯ ವರ್ಗಾವಣೆಗೆ ಹೆದರಿ ಕೋಮಾಗೆ ಜಾರಿದ್ದ ಶಿಕ್ಷಕ ಸಾವು

    ಕಡ್ಡಾಯ ವರ್ಗಾವಣೆಗೆ ಹೆದರಿ ಕೋಮಾಗೆ ಜಾರಿದ್ದ ಶಿಕ್ಷಕ ಸಾವು

    ಹುಬ್ಬಳ್ಳಿ: ರಾಜ್ಯ ಸರ್ಕಾರದ ಕಡ್ಡಾಯ ವರ್ಗಾವಣೆಗೆ ಹೆದರಿ ಕೋಮಾಗೆ ಜಾರಿದ್ದ ಮುಖ್ಯ ಶಿಕ್ಷಕ ಮೃತಪಟ್ಟಿದ್ದಾರೆ.

    48 ವರ್ಷದ ಸುಭಾಷ್ ತಲಘಟ್ಟ ಇಂದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸುಭಾಷ್, ಆನಂದ ನಗರದ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.

    ರಾಜ್ಯದಲ್ಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕಲಿಕಾ ಮಟ್ಟ ಸುಧಾರಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸದ್ಯ ಕಡ್ಡಾಯ ವರ್ಗಾವಣೆ ನೀತಿಯನ್ನ ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಸುಭಾಷ್ ಅವರು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ರಾಮಗಿರಿಗೆ ವರ್ಗಾವಣೆಗೊಂಡಿದ್ದರು. ಇದರಿಂದ ಮನನೊಂದು ಶಿಕ್ಷಕ ಕೋಮಾ ಸ್ಥಿತಿಗೆ ಜಾರಿದ್ದಾರೆ ಎಂದು ಅವರ ಪತ್ನಿ ಹಾಗೂ ಸಂಬಂಧಿಕರು ಆರೋಪ ಮಾಡಿದ್ದರು.

    ಅಲ್ಲದೆ ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆ ಮುಂದೆ ಶಿಕ್ಷಕರು, ಸಂಬಂಧಿಕರು ಹಾಗೂ ಸುಭಾಷ್ ಪತ್ನಿ ಜಮಾಯಿಸಿ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಸರ್ಕಾರ ಸುಭಾಷ್ ಅವರನ್ನು ವರ್ಗಾವಣೆ ಮಾಡಿದ್ದೇ ಅವರ ಈ ಸ್ಥಿತಿಗೆ ಕಾರಣ ಎಂದು ಆರೋಪ ಮಾಡಲಾಗಿತ್ತು.