Tag: State Government

  • ತನ್ವೀರ್ ಸೇಠ್‍ಗೆ 3 ಪಟ್ಟು ಭದ್ರತೆ ಹೆಚ್ಚಿಸಿದ ರಾಜ್ಯ ಸರ್ಕಾರ

    ತನ್ವೀರ್ ಸೇಠ್‍ಗೆ 3 ಪಟ್ಟು ಭದ್ರತೆ ಹೆಚ್ಚಿಸಿದ ರಾಜ್ಯ ಸರ್ಕಾರ

    ಮೈಸೂರು: ಹಲ್ಲೆಗೆ ಒಳಗಾಗಿ ಆಸ್ಪತ್ರೆ ಸೇರಿರುವ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರಿಗೆ ರಾಜ್ಯ ಸರ್ಕಾರ ಮೂರು ಪಟ್ಟು ಭದ್ರತೆಯನ್ನು ಹೆಚ್ಚಿಸಿದೆ.

    ಭಾನುವಾರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತನ್ವೀರ್ ಸೇಠ್ ಗೆ ಯುವಕನೋರ್ವ ಕುತ್ತಿಗೆಗೆ ಚಾಕು ಹಾಕಿದ್ದ. ಈ ಘಟನೆಯ ಹಿನ್ನೆಲೆಯಲ್ಲಿ ಬುಧವಾರ ಅವರ ಹಾಲಿ ಗನ್‍ಮ್ಯಾನ್ ಫೈರೋಜ್ ಖಾನ್‍ನನ್ನು ಅಮಾನತು ಮಾಡಲಾಗಿತ್ತು. ಈಗ ತನ್ವೀರ್ ಸೇಠ್ ಅವರಿಗೆ ಮೂರು ಪಟ್ಟು ಭದ್ರತೆಯನ್ನು ಹೆಚ್ಚಿಸಲಾಗಿದೆ.

    ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ತನ್ವೀರ್ ಸೇಠ್ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು, ನಾಲ್ಕನೆ ದಿನವು ಐಸಿಯೂನಲ್ಲಿ ಚಿಕಿತ್ಸೆ ಮುಂದುವರಿದಿದೆ. ಸಮರ್ಪಕವಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿರುವ ತನ್ವೀರ್ ಸೇಠ್ ಅವರನ್ನು ಇಂದು ಅಥವಾ ನಾಳೆ ವಾರ್ಡ್ ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಆದೇಶಿಸಿರುವ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ದಿನದ 24 ಗಂಟೆ ಮೂರು ಪಾಳಿಯದಲ್ಲಿ ಕರ್ತವ್ಯ ನಿರ್ವಹಿಸಲು ಗನ್‍ಮ್ಯಾನ್‍ಗಳಿಗೆ ಸೂಚನೆ ನೀಡಿದ್ದಾರೆ. ಇದನ್ನು ಓದಿ: ‘ಗಣ್ಯರನ್ನು ಕೊಲೆ ಮಾಡಿ ಫೇಮಸ್ ಆಗ್ತೀನಿ’ – ಸ್ನೇಹಿತರ ಬಳಿ ಕೊಚ್ಚಿಕೊಂಡಿದ್ದ ಫರಾನ್

    ಭಾನುವಾರ ತನ್ವೀರ್ ಸೇಠ್ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಮೈಸೂರು ಪೊಲೀಸರು, ಹಲವಾರು ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ. ಈ ವೇಳೆ ಆರೋಪಿ ತನ್ವೀರ್ ಸೇಠ್ ಅವರ ಮೇಲೆ ಹಲ್ಲೆ ಮಾಡುವ ಮುನ್ನ ಬಾಲಿವುಡ್ ಸಿನಿಮಾವೊಂದನ್ನು ಐದಾರು ಬಾರಿ ನೋಡಿದ್ದ ಎಂದು ಆತನ ಸ್ನೇಹಿತರು ಹೇಳಿದ್ದರು.

    ಆರೋಪಿ ಫರಾನ್ ಪಾಷಾ ತನ್ವೀರ್ ಸೇಠ್ ಅವರ ಹತ್ಯೆಗೆ ಯತ್ನ ಮಾಡುವ ಹಿಂದಿನ ರಾತ್ರಿ ಬಾಲಿವುಡ್‍ನ ‘ವಾಸ್ತವ್’ ಸಿನಿಮಾವನ್ನು ಐದಾರು ಬಾರಿ ನೋಡಿದ್ದ. ಇದು ಬಾಲಿವುಡ್ ನಟ ಸಂಜಯ್ ದತ್ ನಟನೆಯ ಗ್ಯಾಂಗ್ ಸ್ಟಾರ್ ಸಿನಿಮಾವಾಗಿದ್ದು, ಸಿನಿಮಾವನ್ನು ಹಲ್ಲೆ ಮಾಡುವ ಹಿಂದಿನ ರಾತ್ರಿ ಐದಾರು ಬಾರಿ ನೋಡಿದ್ದ ಎಂದು ಆರೋಪಿ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದೇ ಸಿನಿಮಾ ಯಾಕೆ ನೋಡ್ತಿದ್ದೀಯಾ ಎಂದು ಪ್ರಶ್ನಿಸಿದಾಗ ಆ ಸಿನಿಮಾ ಹೀರೋ ಥರ ನಾನು ಆಗಬೇಕು. ನನಗೆ ಇದು ಪ್ರೇರಣೆ ಆಗ್ತಿದೆ ಎಂದು ಫರಾನ್ ಹೇಳಿದ್ದನಂತೆ. ಇದನ್ನು ಓದಿ: ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದಾನೆ ಎಂದುಕೊಂಡ್ವಿ, ಆದ್ರೆ ಮಚ್ಚಿನಿಂದ ಹೊಡೆದು ಓಡಿ ಹೋದ: ಪ್ರತ್ಯಕ್ಷದರ್ಶಿ

    ಭಾನುವಾರ ರಾತ್ರಿ ತನ್ವೀರ್ ಸೇಠ್ ಮೈಸೂರಿನ ಬನ್ನಿ ಮಂಟಪ ಸಮೀಪದ ಪಾರ್ಟಿ ಹಾಲಿಗೆ ತಮ್ಮ ಆತ್ಮೀಯ ಮಗನ ಮದುವೆಯ ಬೀಗರೂಟಕ್ಕೆ ಆಗಮಿಸಿದ್ದರು. ಈ ವೇಳೆ ಯುವಕ ಫರಾನ್ ಚಾಕುವಿನಿಂದ ಹಲ್ಲೆ ಮಾಡಿದ್ದ. ಅವರ ಕತ್ತಿಗೆ ಭಾಗಕ್ಕೆ ಚಾಕು ಹಾಕಿ ಪರಾರಿಯಾಗುತ್ತಿದ್ದ ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ನಂತರ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸೇಠ್ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

  • ಶ್ರೀಶೈಲಂನಲ್ಲಿ ರಾಜ್ಯದ ಭಕ್ತರಿಗೆ ಅನ್ಯಾಯ – ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಭಕ್ತರ ಪರದಾಟ

    ಶ್ರೀಶೈಲಂನಲ್ಲಿ ರಾಜ್ಯದ ಭಕ್ತರಿಗೆ ಅನ್ಯಾಯ – ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಭಕ್ತರ ಪರದಾಟ

    ರಾಯಚೂರು: ಶ್ರೀಶೈಲ ಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನ ಎಂದರೆ ದೇಶದ ಮೂಲೆ ಮೂಲೆಯಲ್ಲೂ ಭಕ್ತರಿದ್ದಾರೆ. ಆದರೆ ಶ್ರೀಶೈಲದಲ್ಲಿ ಕರ್ನಾಟಕದ ಭಕ್ತರಿಗೆ ಮಾತ್ರ ಅನ್ಯಾಯವಾಗುತ್ತಿದೆ. ಹೀಗಾಗಿ ರಾಯಚೂರಿನ ನೂರಾರು ಭಕ್ತರು ಹೋರಾಟಕ್ಕೆ ಮುಂದಾಗಿದ್ದಾರೆ.

    ಕರ್ನಾಟಕ ಸರ್ಕಾರ ಪರಭಾರೆಯಿರುವ 4 ಎಕರೆ 13 ಗುಂಟೆ ಜಾಗ ಈಗ ಆಂಧ್ರಪ್ರದೇಶ ಪಾಲಾಗುತ್ತಿದೆ. ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಇದ್ದ ಅವಧಿಯಲ್ಲಿ ಕರ್ನಾಟಕ ಭಕ್ತರಿಗಾಗಿ 99 ವರ್ಷ ಕಾಲ ರಾಜ್ಯಕ್ಕೆ ನೀಡಿದ ಭೂಮಿ ರಾಜ್ಯ ಸರ್ಕಾದಿಂದಲೇ ನಿರ್ಲಕ್ಷ್ಯಕ್ಕೊಳಗಾಗಿದೆ. ಹೀಗಾಗಿ ಶ್ರೀಶೈಲಂ ಆಡಳಿತ ಮಂಡಳಿ ಕರ್ನಾಟಕಕ್ಕೆ ಮಾಹಿತಿಯನ್ನು ನೀಡದೆ ಕಟ್ಟಡ ನಿರ್ಮಿಸಿಕೊಳ್ಳುತ್ತಿದ್ದಾರೆ.

    ಶ್ರೀಶೈಲಂನಲ್ಲಿರುವ ಕರ್ನಾಟಕ ಛತ್ರ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದ್ದು, ಭಕ್ತರಿಗೆ ಯಾವುದೇ ವ್ಯವಸ್ಥೆ ಇಲ್ಲದಂತಾಗಿದೆ. ರಾಜ್ಯದಿಂದ ತೆರಳುವ ಸಾವಿರಾರು ಭಕ್ತರು ವಸತಿ ವ್ಯವಸ್ಥೆ ಇಲ್ಲದೆ ಶ್ರೀಶೈಲಂನಲ್ಲಿ ಪರದಾಡುತ್ತಿದ್ದಾರೆ. ಹೀಗಾಗಿ ರಾಯಚೂರಿನ ಭಕ್ತರು ಶ್ರೀಶೈಲಂನಲ್ಲಿ ಇಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ರಾಜ್ಯಕ್ಕೆ ನೀಡಿದ ಜಾಗವನ್ನು ಅಭಿವೃದ್ಧಿಪಡಿಸಿ ರಾಜ್ಯದ ಭಕ್ತರಿಗೆ ಸೌಲಭ್ಯ ಕಲ್ಪಿಸಿಕೊಡಲು ಆಗ್ರಹಿಸಿದ್ದಾರೆ.

  • ಮೋದಿಗೆ ಅಮೆರಿಕದಲ್ಲಿ ಬುದ್ಧ ಬೇಕು, ಭಾರತದಲ್ಲಿ ಯುದ್ಧ ಬೇಕು: ಮಹದೇವಪ್ಪ ಕಿಡಿ

    ಮೋದಿಗೆ ಅಮೆರಿಕದಲ್ಲಿ ಬುದ್ಧ ಬೇಕು, ಭಾರತದಲ್ಲಿ ಯುದ್ಧ ಬೇಕು: ಮಹದೇವಪ್ಪ ಕಿಡಿ

    ಮಂಡ್ಯ: ಟಿಪ್ಪು ಸುಲ್ತಾನ್ ಜಯಂತಿಯನ್ನು ವಿರೋಧಿಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಮಂಡ್ಯದಲ್ಲಿ ಮಾಜಿ ಸಚಿವ ಎಸ್.ಸಿ ಮಹದೇವಪ್ಪ ಕಿಡಿಕಾರಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕದಲ್ಲಿ ಬುದ್ಧ ಬೇಕು, ಭಾರತದಲ್ಲಿ ಯುದ್ಧ ಬೇಕು ಎಂದು ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಟಿಪ್ಪು ಸುಲ್ತಾನ್ ರಾಜ್ಯದಲ್ಲಿ ಮೊದಲ ಬಾರಿಗೆ ಭೂ ಸುಧಾರಣೆಯನ್ನ ಜಾರಿಗೆ ತಂದ ವ್ಯಕ್ತಿ. ಆತ ದೇಶದ ಸ್ವಾತಂತ್ರ್ಯ ಸೇನಾನಿ. ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಒಬ್ಬ ಶ್ರೀಮಂತನಿಗೂ ಜಮೀನು ಕೊಟ್ಟಿರಲಿಲ್ಲ. ದೇವದಾಸಿ ಪದ್ಧತಿಯನ್ನು ಅಳಿಸಿ ಹಾಕಿ ರೇಷ್ಮೆ ಕೃಷಿಯನ್ನು ಪರಿಚಯಿಸಿದ್ದ. ವಾಣಿಜ್ಯ ವಹಿವಾಟಿಗಾಗಿ ಹರಿಹರ, ಗುಬ್ಬಿಯನ್ನು ಕೇಂದ್ರವನ್ನಾಗಿ ಮಾಡಿಕೊಂಡಿದ್ದ. ಶೃಂಗೇರಿಯ ಶಾರದಾ ಪೀಠದಲ್ಲಿ ಮರಾಠರು ದಾಳಿ ಮಾಡಿ ಚಿನ್ನದ ಕಳಶವನ್ನು ಹೋತ್ತುಕೊಂಡು ಹೋಗಿದ್ದರು. ಆಗ ಟಿಪ್ಪು ಮರಾಠರ ವಿರುದ್ಧ ಹೋರಾಡಿ ಚಿನ್ನದ ಕಳಸವನ್ನು ಮತ್ತೆ ಶೃಂಗೇರಿ ಮಠಕ್ಕೆ ತಂದು ಕೊಟ್ಟಿದ್ದ ಎಂದು ಹೇಳಿದರು. ಇದನ್ನೂ ಓದಿ: ಟಿಪ್ಪು ಕಾಲದಲ್ಲಿರುತ್ತಿದ್ದರೆ ಅಬ್ದುಲ್ ಸಿದ್ದರಾಮಯ್ಯ ಆಗ್ತಿದ್ರು- ಅಶೋಕ್

    ಹಿಂದೂ ಮತಾಂದರು ಈಗ ಮತಾಂದ ಕೆಲಸಕ್ಕೆ ಕೈ ಹಾಕಿದ್ದಾರೆ. ಟಿಪ್ಪು ಅಂತಹ ಚಾರಿತ್ರಿಕ ಪುರಷನನ್ನು ಚರಿತ್ರೆಯಿಂದ ಹೋಗಲಾಡಿಸಲು ಮುಂದಾಗಿದ್ದಾರೆ. ಹಾಗೆಯೇ ರಾಜ್ಯ ಸರ್ಕಾರ ಬೌದ್ಧಿಕ ದಿವಾಳಿಯಿಂದ ಟಿಪ್ಪುವನ್ನು ಪಠ್ಯದಿಂದ ತೆಗೆಯಲು ಮುಂದಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಜೆಪಿಗೆ ಟಿಪ್ಪು ಬೇಡ, ಬಿಎಸ್‍ವೈ ಜೈಲಿಗೆ ಹೋದ ವಿಚಾರವನ್ನು ಮಕ್ಕಳು ಓದಬೇಕಿದೆ – ತನ್ವೀರ್ ಸೇಠ್

  • ರಾಜ್ಯದ 18 ಜಿಲ್ಲೆಗಳ 49 ತಾಲೂಕುಗಳು ಬರ ಪೀಡಿತ!

    ರಾಜ್ಯದ 18 ಜಿಲ್ಲೆಗಳ 49 ತಾಲೂಕುಗಳು ಬರ ಪೀಡಿತ!

    ಬೆಂಗಳೂರು: ರಾಜ್ಯದ 18 ಜಿಲ್ಲೆಗಳ 49 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ರಾಜ್ಯ ಸರ್ಕಾರ ಘೋಷಿಸಿದೆ.

    ಈ ಕುರಿತು ಪ್ರಕಟಣೆ ಹೊರಡಿಸಿರುವ ರಾಜ್ಯ ಸರ್ಕಾರ, 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 18 ಜಿಲ್ಲೆಗಳ 49 ತಾಲೂಕುಗಳು ಮಳೆ ಕೊರತೆ ಹಾಗೂ ಅಂತರ್ಜಲ ಕುಸಿತ ಎದುರಿಸುತ್ತಿವೆ ಎಂದು ತಿಳಿಸಿದೆ.

    ಬೆಂಗಳೂರು ನಗರ ಜಿಲ್ಲೆಯ ಆನೇಕಲ್, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ನೆಲಮಂಗಲ, ದೊಡ್ಡಬಳ್ಳಾಪುರ, ರಾಮನಗರ ಜಿಲ್ಲೆಯ ಕನಕಪುರ, ರಾಮನಗರ, ಕೋಲಾರ ಜಿಲ್ಲೆಯ ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ ಬರ ಪೀಡಿ ತಾಲೂಕುಗಳಾಗಿವೆ.

    ಉಳಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ, ತುಮಕೂರು ಜಿಲ್ಲೆಯ ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ತುರುವೇಕೆರೆ, ತುಮಕೂರು, ಚಿತ್ರದುರ್ಗ ಜಿಲ್ಲೆಯ ಚಳ್ಳೇಕೆರೆ, ಚಿತ್ರದುರ್ಗ, ಮೊಳಕಾಲ್ಮೂರು, ದಾವಣಗೆರೆ ಜಿಲ್ಲೆಯ ಜಗಳೂರು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಹೊಸಪೇಟೆ, ಸಂಡೂರು, ಸಿರುಗುಪ್ಪ, ಕೊಪ್ಪಳ ಜಿಲ್ಲೆಯ ಗಂಗಾವತಿ, ರಾಯಚೂರು ಮಾನ್ವಿ, ರಾಯಚೂರು, ಸಿಂಧನೂರು, ಕಲಬುರಗಿ ಜಿಲ್ಲೆಯ ಚಿಂಚೋಳಿ, ಜೇವರ್ಗಿ, ಸೇಡಂ, ಯಾದಗಿರಿ ತಾಲೂಕು, ಬೆಳಗಾವಿ ಜಿಲ್ಲೆಯ ಅಥಣಿ, ಬಾಗಲಕೋಟೆ ಬಾದಾಮಿ, ಬೀಳಗಿ, ಜಮಖಂಡಿ, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಇಂಡಿ, ಸಿಂಧಗಿ, ವಿಜಯಪುರ ಹಾಗೂ ಗದಗ ಜಿಲ್ಲೆಯ ನಗರಗುಂದ ತಾಲೂಕುಗಳು ಬರ ಪೀಡಿತ ಎಂದು ಸರ್ಕಾರ ಘೋಷಿಸಿದೆ.

  • ‘ಬರೀ ಕೇಳಬೇಡಯ್ಯ, ಏನ್ ಹೇಳ್ತೀನೋ ಬರೆದುಕೊ’- ತಹಶೀಲ್ದಾರ್ ಮೇಲೆ ಸಿದ್ದು ಗರಂ

    ‘ಬರೀ ಕೇಳಬೇಡಯ್ಯ, ಏನ್ ಹೇಳ್ತೀನೋ ಬರೆದುಕೊ’- ತಹಶೀಲ್ದಾರ್ ಮೇಲೆ ಸಿದ್ದು ಗರಂ

    ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಕ್ಷೇತ್ರ ಬಾದಾಮಿಗೆ ಆಗಮಿಸಿದ್ದು, ಮೊದಲಿಗೆ ಮಲಪ್ರಭಾ ಪ್ರವಾಹಕ್ಕೆ ತುತ್ತಾಗಿರುವ ಕರ್ಲಕೊಪ್ಪ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು.

    ಸಿದ್ದರಾಮಯ್ಯ ಅವರು ಆಗಮಿಸುತ್ತಿದಂತೆ ಕರ್ಲಕೊಪ್ಪ ಗ್ರಾಮದಲ್ಲಿ ಮಳೆ ಆರಂಭವಾಯಿತು. ಮಳೆಯಿಂದ ರಕ್ಷಣೆಗಾಗಿ ಅಲ್ಲಿಯೇ ಇದ್ದ ದೇವಸ್ಥಾನದೊಳಗೆ ಸಿದ್ದರಾಮಯ್ಯ ತೆರಳಿದರು. ಆ ಬಳಿಕ ಅಲ್ಲಿಯೇ ಕುಳಿತು, ನೆರೆ ಸಂತ್ರಸ್ತರ ಅಹವಾಲು ಆಲಿಸಿದರು.

    ಸಿದ್ದರಾಮಯ್ಯ ಅವರ ಎದುರು ತಮ್ಮ ಅಳಲು ತೊಡಿಕೊಂಡ ಗ್ರಾಮಸ್ಥರು, ಮಳೆಯಿಂದ ನೆಲಕ್ಕೆ ಉರುಳಿದ ಮನೆಗಳ ಸರ್ವೆಯಲ್ಲಿ ಲೋಪವಾಗಿದೆ. ಅಲ್ಲದೇ ತಾತ್ಕಾಲಿಕ ಪರಿಹಾರದಲ್ಲಿ ದೋಷದ ಉಂಟಾಗಿದೆ ಎಂದು ಅಳಲು ತೋಡಿಕೊಂಡರು. ಈ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಿದ್ದರಾಮಯ್ಯ ಅವರು, ತಾತ್ಕಾಲಿಕ ಪರಿಹಾರ ಪಡಿತರ ಚೀಟಿ ಆಧರಿಸಿ ವಿತರಿಸಬೇಕು ಎಂದರು. ಈ ವೇಳೆ ಸಿದ್ದರಾಮಯ್ಯರ ಸೂಚನೆಗಳನ್ನು ಪಡೆದ ಅಧಿಕಾರಿ ಕ್ರಮಕೈಗೊಳ್ಳುವುದಾಗಿ ಹೇಳಿದರು. ಆದರೆ ಅಧಿಕಾರಿಯ ಉತ್ತರದಿಂದ ಸಂತೃಪ್ತರಾಗದ ಅವರು, ನಾನು ಹೇಳೋದನ್ನ ಬರೀ ಕೇಳಬೇಡಯ್ಯ, ಏನ್ ಹೇಳ್ತೀನೋ ಅದನ್ನು ಬರೆದುಕೊ. ಸರ್ವೆ ಆದ ಮೇಲೂ ಹಲವರ ಮನೆ ಬಿದ್ದಿವೆ. ಆದ್ದರಿಂದ ರೀ ಸರ್ವೆ ಆಗಬೇಕು. ಒಂದೇ ಮನೆಯಲ್ಲಿ ಅಣ್ಣ-ತಮ್ಮ ಇದ್ದರೆ ಪರಿಹಾರ ಹಂಚಿ, ಒಬ್ಬರಿಗೆ ಪರಿಹಾರ ಕೊಟ್ಟರೆ ಮನೆಯಲ್ಲಿ ಉಳಿದವರು ನಾಮ ಹಾಕಿಕೊಳ್ಳಬೇಕಾ? ಎಂದು ತರಾಟೆಗೆ ತೆಗೆದುಕೊಂಡರು.

    ಬಿದ್ದ ಮನೆಯಲ್ಲಿ ಎರಡು ಹಂತದ ಪರಿಹಾರ ನೀಡಿ, ಶೇ. 25ಕ್ಕಿಂತ ಕಡಿಮೆ ಬಿದ್ದಿದ್ದರೆ 50 ಸಾವಿರ ರೂ. ಹಾಗೂ ಶೇ.25 ಕ್ಕಿಂತ ಹೆಚ್ಚು ಹಾನಿಯಾಗಿದ್ದರೆ ಎಲ್ಲಾ ಮನೆಗಳಿಗೂ ಐದು ಲಕ್ಷ ರೂ. ಪರಿಹಾರ ನೀಡಿ. ಇದಕ್ಕೆ ವಿಧಾನಸೌಧದಲ್ಲಿ ಸರ್ಕಾರವೂ ಒಪ್ಪಿಗೆ ನೀಡಿದೆ. ಆ ಪ್ರಕಾರವೇ ಸರ್ವೆ ಮಾಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

  • ಸಿಎಂ V/S ಸಿದ್ದರಾಮಯ್ಯ- ಕಾವೇರಿ ನಿವಾಸದ ಬೋರ್ಡ್ ತೆಗೆದ ಅಧಿಕಾರಿಗಳು

    ಸಿಎಂ V/S ಸಿದ್ದರಾಮಯ್ಯ- ಕಾವೇರಿ ನಿವಾಸದ ಬೋರ್ಡ್ ತೆಗೆದ ಅಧಿಕಾರಿಗಳು

    ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ `ಕಾವೇರಿ’ ಜಟಾಪಟಿ ಮುಂದುವರಿದಿದ್ದು, ಇದೀಗ ಅಧಿಕಾರಿಗಳು ಸಿದ್ದರಾಮಯ್ಯನವರ ಕಾವೇರಿ ನಿವಾಸದ ಬೋರ್ಡ್ ತೆಗೆದು ಹಾಕಿದ್ದಾರೆ.

    ಈ ಮೂಲಕ ಸರ್ಕಾರ ವರ್ಸಸ್ ಸಿದ್ದರಾಮಯ್ಯ ಎನ್ನುವಂತಾಗಿದ್ದು, ಈ ಹಿಂದೆ ಮನೆ ಖಾಲಿ ಮಾಡುವಂತೆ ಸಿದ್ದರಾಮಯ್ಯನವರಿಗೆ ತಿಳಿಸಲಾಗಿತ್ತು. ಆದರೆ ತುಂಬಾ ದಿನಗಳಿಂದ ಅದೇ ಮನೆಯಲ್ಲಿ ಇರುವುದರಿಂದ ಸಿದ್ದರಾಮಯ್ಯನವರು ಖಾಲಿ ಮಾಡಿರಲಿಲ್ಲ. ಇನ್ನೂ ನಿವಾಸ ಖಾಲಿ ಮಾಡದ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳು ಸಿದ್ದರಾಮಯ್ಯ ನಿವಾಸದ ಬೋರ್ಡ್ ತೆಗೆದು ಹಾಕಿದ್ದಾರೆ.

    ಡಿಪಿಎಆರ್ ಸಿಬ್ಬಂದಿಯಿಂದ ಸಿದ್ದು ನಿವಾಸದ ಬೋರ್ಡ್ ತೆರವುಗೊಳಿಸಲಾಗಿದ್ದು, ಈ ಮೂಲಕ ಕಾವೇರಿ ನಿವಾಸವನ್ನು ಖಾಲಿ ಮಾಡುವಂತೆ ಮತ್ತೆ ಸೂಚನೆ ನೀಡಿದ್ದಾರೆ. ಅಲ್ಲದೆ ಇನ್ನೂ ಮೂರ್ನಾಲ್ಕು ದಿನಗಳೊಳಗೆ ಕಾವೇರಿ ನಿವಾಸ ಬಿಟ್ಟುಕೊಡುವಂತೆ ಸೂಚಿಸಿದ್ದಾರೆ. ಕಾವೇರಿಯಲ್ಲಿ ಸಿಎಂ ವಾಸ್ತವ್ಯ ಮಾಡಲಿದ್ದು, ಹೀಗಾಗಿ ನಿವಾಸವನ್ನು ಬಿಟ್ಟುಕೊಡುವಂತೆ ತಿಳಿಸಿದ್ದಾರೆ.

    ಮೂರ್ನಾಲ್ಕು ದಿನಗಳಲ್ಲಿ ನಿವಾಸ ಖಾಲಿ ಮಾಡದಿದ್ದಲ್ಲಿ ನೀರಿನ ಸಂಪರ್ಕವನ್ನು ಸಹ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಮನೆ ಖಾಲಿ ಮಾಡುತ್ತಾರಾ ಅಥವಾ ಸಿಎಂಗೆ ಸೆಡ್ಡು ಹೊಡೆಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

    ಇತ್ತ ಕಾವೇರಿ ನಿವಾಸವನ್ನು ಖಾಲಿ ಮಾಡಲು ಸಿದ್ದರಾಮಯ್ಯ ಒಪ್ಪುತ್ತಿಲ್ಲ. ವಿಪಕ್ಷ ನಾಯಕನಾದ ನಂತರ ಕಾವೇರಿ ನಿವಾಸದಲ್ಲಿ ಮುಂದುವರಿಯಲು ಸಿದ್ದರಾಮಯ್ಯ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಸಿದ್ದರಾಮಯ್ಯರ ರಾಜಕೀಯ ಏಳಿಗೆಯಲ್ಲಿ ಆ ಮನೆ ಮಹತ್ವದ ಪಾತ್ರ ವಹಿಸಿದೆ. ಈಗ ಪುನಃ ವಿಪಕ್ಷ ನಾಯಕನ ಸ್ಥಾನ ಸಿಕ್ಕಿದೆ. ಆದ್ದರಿಂದ ಕಾವೇರಿ ನಿವಾಸದಲ್ಲೇ ಮುಂದುವರಿದರೆ ಮತ್ತಷ್ಟು ರಾಜಕೀಯ ಉನ್ನತಿ ಸಿಗಬಹುದು ಎಂಬುದು ಸಿದ್ದರಾಮಯ್ಯ ಪತ್ನಿಯ ನಂಬಿಕೆ ಎಂದು ಹೇಳಲಾಗಿತ್ತು.

    ಕಾವೇರಿ ಪಕ್ಕದಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾ ಇರುವುದರಿಂದ ಕಾವೇರಿಯಲ್ಲಿ ಸಿಎಂ ಇದ್ದರೆ ಓಡಾಟ ಸುಲಭ ಎನ್ನುವ ಲೆಕ್ಕಾಚಾರದಲ್ಲಿ ಕಾವೇರಿ ನಿವಾಸವನ್ನು ಸಿಎಂಗೆ ನೀಡಲಾಗಿದೆ. ವಿಪಕ್ಷ ನಾಯಕರಾದ ಸಿದ್ದರಾಮಯ್ಯಗೆ ರೇಸ್ ಕೋರ್ಸ್ ರಸ್ತೆಯ ನಿವಾಸವನ್ನು ನೀಡಲಾಗಿದೆ. ಆದರೆ ಕಳೆದ ಆರೂವರೆ ವರ್ಷದಿಂದ ಕಾವೇರಿ ನಿವಾಸದಲ್ಲೇ ಇರುವ ಸಿದ್ದರಾಮಯ್ಯ ಮಾತ್ರ ಕಾವೇರಿ ನಿವಾಸದಲ್ಲೇ ಮುಂದುವರಿಯುವ ಕಸರತ್ತು ಮುಂದುವರಿಸಿದ್ದರಿಂದ ಇಂದು ಅಧಿಕಾರಿಗಳು ಬೋರ್ಡ್ ಕಿತ್ತು ಹಾಕಿದ್ದಾರೆ.

  • ಅಂತಾರಾಷ್ಟ್ರೀಯ ಚೆಸ್ ಪ್ರತಿಭೆಗೆ ಬೇಕಿದೆ ನೆರವು

    ಅಂತಾರಾಷ್ಟ್ರೀಯ ಚೆಸ್ ಪ್ರತಿಭೆಗೆ ಬೇಕಿದೆ ನೆರವು

    ಶಿವಮೊಗ್ಗ: ಚೆಸ್ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸತತ 9 ವರ್ಷದಿಂದ ಭಾರತವನ್ನು ಪ್ರತಿನಿಧಿಸಿ ದೇಶಕ್ಕೆ ಚಿನ್ನದ ಪದಕ ಗಳಿಸಿಕೊಟ್ಟ ಅಂಧ ಚೆಸ್ ಆಟಗಾರನಿಗೆ ಸರಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರದ ಕೀರ್ತಿ ಬೆಳಗಿಸಿದ ಈ ಆಟಗಾರನ ಗುರುತಿಸುವ ಪ್ರಯತ್ನ ಸಹ ನಡೆದಿಲ್ಲ.

    ರಾಜ್ಯದ ಕ್ರೀಡಾ ಸಚಿವರ ತವರು ಶಿವಮೊಗ್ಗ ಜಿಲ್ಲೆಯ ಪ್ರತಿಭೆ, ಅಂತರರಾಷ್ಟ್ರೀಯ ಮಟ್ಟದ ಚೆಸ್ ಆಟಗಾರ ಕಿಶನ್ ಗಂಗೊಳ್ಳಿ ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾದ ಕೀಡಾಪಟು. ಶಿವಮೊಗ್ಗದ ವಿನೋಬ ನಗರ ನಿವಾಸಿಯಾಗಿರುವ ಕಿಶನ್, ಹುಟ್ಟಿನಿಂದಲೇ ಶೇ.75% ಭಾಗ ದೃಷ್ಟಿ ಸಮಸ್ಯೆ ಹೊಂದಿದ್ದಾರೆ. ಆದರೂ ಛಲ ಬಿಡದೆ ಜೀವನದಲ್ಲಿ ಏನಾದರೂ ಸಾಧಿಸಬೇಕು, ತಾಯ್ನಾಡಿಗೆ, ದೇಶಕ್ಕೆ ಕೀರ್ತಿ ತರಬೇಕು ಎಂಬ ಕಾರಣದಿಂದ ಕಿಶನ್ ಚೆಸ್ ಕಲಿತಿದ್ದಾರೆ.

    ಚೆಸ್ ಕಲಿತು ಕೇವಲ ಜಿಲ್ಲೆ ಹಾಗೂ ರಾಜ್ಯಕ್ಕಷ್ಟೇ ಸೀಮಿತವಾಗದೇ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಹತ್ತು ಹಲವು ಪ್ರಶಸ್ತಿ, ಚಿನ್ನದ ಪದಕ ಗಳಿಸಿದ್ದಾರೆ. ಇಷ್ಟೆಲ್ಲಾ ಪ್ರತಿಭೆ ಇದ್ದರೂ ರಾಜ್ಯ ಸರಕಾರದಿಂದ ಸಿಗಬೇಕಾದ ಮನ್ನಣೆ, ಅವಕಾಶ, ಸಹಾಯ ಮಾತ್ರ ಇದುವರೆಗೂ ಕಿಶನ್ ಅವರಿಗೆ ಲಭಿಸಿಲ್ಲ.

    2018 ರಲ್ಲಿ ಜಕಾರ್ತಾದಲ್ಲಿ ನಡೆದ ಮೂರನೇ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆ ಪಡೆದಿರುವ ಕಿಶನ್ ಅವರಿಗೆ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ಸನ್ಮಾನ ಮಾಡಿದ್ದರು. ಆದರೆ ರಾಜ್ಯ ಸರಕಾರ ಮಾತ್ರ ಈ ಪ್ರತಿಭೆಯನ್ನು ಗುರುತಿಸಿಲ್ಲ. ಭವಿಷ್ಯದಲ್ಲಿ ವಿಶ್ವ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಬೇಕು ಎಂಬ ಕನಸು ಹೊತ್ತಿರುವ ಕಿಶನ್ ಕುಟುಂಬ ಸದ್ಯ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.

    ಈ ಕುರಿತು ಮಾತನಾಡಿರುವ ಕಿಶನ್ ಅವರ ತಾಯಿ ತನ್ನ ಮಗನಿಗೆ ಚೆಸ್ ತರಬೇತಿ ಕೊಡಿಸಲು ಬಡ್ಡಿ ಸಾಲ ಮಾಡಿ, ಮನೆಯಲ್ಲಿದ್ದ ಅಲ್ಪ ಸ್ವಲ್ಪ ಚಿನ್ನವನ್ನು ಗಿರವಿಯಿಟ್ಟು ತರಬೇತಿ ಕೊಡಿಸುತ್ತಿದ್ದೇವೆ. ಮುಂದೆ ಉನ್ನತ ತರಬೇತಿ ಪಡೆಯಲು ಹೆಚ್ಚಿನ ಹಣದ ಅವಶ್ಯಕತೆ ಇದೆ. ಸಂಘ ಸಂಸ್ಥೆಗಳು, ಸರಕಾರ ಪ್ರತಿಭೆಯನ್ನು ಗುರುತಿಸಿ ಸಹಾಯ ಮಾಡಬೇಕಿದೆ ಎಂದು ಮನವಿ ಮಾಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರದ ಪತಾಕೆ ಹಾರಿಸಿಸಲು ಸಿದ್ಧವಾಗುತ್ತಿರುವ ಕಿಶನ್ ಅವರನ್ನು ಗುರುತಿಸಿ ಕ್ರೀಡಾ ಸಚಿವ ಈಶ್ವರಪ್ಪ ನೆರವಿಗೆ ಧವಿಸಬೇಕು ಎಂಬುವುದು ನಮ್ಮ ಆಶಯವಾಗಿದೆ.

  • ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್- ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಆದೇಶ

    ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್- ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಆದೇಶ

    ಬೆಂಗಳೂರು: ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್ ನೀಡಲಾಗಿದ್ದು, ತುಟ್ಟಿ ಭತ್ಯೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಹೆಚ್ಚಳ ಮಾಡಲಾಗಿದ್ದು, ಶೇ.4.35 ರಷ್ಟು ತುಟ್ಟಿ ಭತ್ಯೆ ಹೆಚ್ಚಿಸಿ ಸರ್ಕಾರ ಆದೇಶಿಸಿದೆ. ಆದರೆ ರಾಜ್ಯ ಪೋಲಿಸರಿಗೆ ಸ್ವಲ್ಪ ಸಿಹಿ, ಸ್ವಲ್ಪ ಕಹಿ ಎನ್ನುವಂತಾಗಿದ್ದು, ದೀಪಾವಳಿಗೂ ಔರಾದ್ಕರ್ ವರದಿ ಜಾರಿಯಾಗಿಲ್ಲ ಎಂಬ ಬೇಸರ ಒಂದು ಕಡೆ ಮನೆಮಾಡಿದೆ. ಈ ಮೂಲಕ ರಾಜ್ಯ ಪೊಲೀಸರಿಗೆ ಸರ್ಕಾರ ಶಾಕ್ ಕೊಟ್ಟಿದೆ.

    ಕಷ್ಟ ಪರಿಹಾರ ಭತ್ಯೆಯನ್ನು 1 ಸಾವಿರ ರೂಪಾಯಿ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನವೆಂಬರ್ 1ರಿಂದ ಅನ್ವಯವಾಗುವಂತೆ ಕಷ್ಟ ಪರಿಹಾರ ಭತ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಔರಾದ್ಕರ್ ವರದಿ ಜಾರಿಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಪೋಲೀಸರಿಗೆ ಸ್ವಲ್ಪ ಮಟ್ಟಿಗೆ ಬೇಸರವಾಗಿದೆ. ಆದರೆ ಜಮೇದಾರ್, ಪೊಲೀಸ್ ಪೇದೆ, ಮುಖ್ಯ ಪೇದೆ, ಎಎಸ್‍ಐ, ಎಸ್‍ಐಗಳಿಗೆ 1 ಸಾವಿರ ರೂ. ರಿಸ್ಕ್ ಅಲೋಯೆನ್ಸ್(ಕಷ್ಟ ಪರಿಹಾರ ಭತ್ಯೆ) ಹೆಚ್ಚಳ ಮಾಡುವ ಮೂಲಕ ಸ್ವಲ್ಪ ಮಟ್ಟಿಗೆ ಖುಷಿ ಪಡಿಸಿದೆ.

    ಜಮೇದಾರ್, ಮುಖ್ಯ ಪೇದೆ, ಎಎಸ್‍ಐ, ಎಸ್‍ಐಗಳಿಗೆ ಈ ಹಿಂದೆ 1 ಸಾವಿರ ರೂ. ಕಷ್ಟ ಪರಿಹಾರ ಭತ್ಯೆ ಇತ್ತು. ಈಗ 2 ಸಾವಿರ ರೂ. ಕಷ್ಟ ಪರಿಹಾರ ಭತ್ಯೆ ಸಿಗಲಿದೆ. ಪೇದೆಗಳಿಗೆ 2 ಸಾವಿರ ಕಷ್ಟ ಪರಿಹಾರ ಭತ್ಯೆ ಇತ್ತು, ಈಗ 3 ಸಾವಿರ ಭತ್ಯೆ ಸಿಗಲಿದೆ. ಅಲ್ಲದೆ ಹೊಸ ಪೊಲೀಸ್ ಇನ್ಸ್‍ಪೆಕ್ಟರ್ ಗಳಿಗೂ 1 ಸಾವಿರ ರೂ. ಕಷ್ಟ ಪರಿಹಾರ ಭತ್ಯೆ ನೀಡುವುದಾಗಿ ಸರ್ಕಾರ ಆದೇಶ ಹೊರಡಿಸಿದೆ.

  • ದೇಶದಲ್ಲೇ ಮೊದಲ ಬಾರಿಗೆ ಖಾಸಗಿ ಶಾಲಾ ಶಿಕ್ಷಕಿಯರಿಗೂ ಸಿಕ್ತು ವೇತನ ಸಹಿತ ಪ್ರಸೂತಿ ರಜೆ

    ದೇಶದಲ್ಲೇ ಮೊದಲ ಬಾರಿಗೆ ಖಾಸಗಿ ಶಾಲಾ ಶಿಕ್ಷಕಿಯರಿಗೂ ಸಿಕ್ತು ವೇತನ ಸಹಿತ ಪ್ರಸೂತಿ ರಜೆ

    ತಿರುವನಂತಪುರಂ: ಕೇರಳ ರಾಜ್ಯವು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ನಿರ್ಮಿಸಿದೆ. ಈ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಖಾಸಗಿ ಶಾಲಾ ಶಿಕ್ಷಕಿಯರಿಗೂ ವೇತನ ಸಹಿತ ಪ್ರಸೂತಿ ರಜೆಯನ್ನು ಕೇರಳ ಸರ್ಕಾರ ಕಲ್ಪಿಸಿದೆ.

    ಸರ್ಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕಿಯರಿಗೆ 26 ವಾರಗಳ ಕಾಲ ಮಾತ್ರ ವೇತನ ಸಹಿತ ರಜೆ ಸಿಗುತ್ತಿತ್ತು. ಆದರೆ ಈ ಸೌಲಭ್ಯ ಕೇರಳದ ಖಾಸಗಿ ಶಾಲಾ ಶಿಕ್ಷಕಿಯರಿಗೂ ಅನ್ವಯವಾಗಲಿದೆ. ಕೇರಳ ಸರ್ಕಾರದ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

    1961ರ ‘ಮಾತೃತ್ವ ಸೌಲಭ್ಯ ಕಾಯಿದೆ’ ಅಡಿ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ನೌಕರರು ಪ್ರಸೂತಿ ರಜೆ ನೀಡಬೇಕೆಂದು ದೀರ್ಘಕಾಲದಿಂದ ಒತ್ತಾಯಿಸಿದ್ದರು. ಈ ವಿಚಾರವಾಗಿ ಕೇರಳ ಸರ್ಕಾರವು ಕೇಂದ್ರ ಸರ್ಕಾರದಿಂದ ಅನುಮತಿ ಕೋರಿತ್ತು. ಸದ್ಯ ಕೇಂದ್ರ ಸರ್ಕಾರವು ಇದಕ್ಕೆ ಅನುಮೋದನೆ ನೀಡಿದೆ.

    ಹೊಸ ಕಾಯ್ದೆ ಪ್ರಕಾರ, ಖಾಸಗಿ ಶಿಕ್ಷಣ ಸಂಸ್ಥೆಗಳ ಸಾವಿರಾರು ಶಿಕ್ಷಕಿಯರು, ಮಹಿಳಾ ಉದ್ಯೋಗಿಗಳು ಈಗಿನಿಂದ ಸರ್ಕಾರಿ ಶಾಲಾ ಶಿಕ್ಷಕಿಯರು ಹಾಗೂ ಮಹಿಳಾ ಉದ್ಯೋಗಿಗಳಂತೆ 26 ವಾರಗಳ ಮಾತೃತ್ವ ರಜೆ ತೆಗೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಶಿಕ್ಷಣ ಸಂಸ್ಥೆಯು ಉದ್ಯೋಗಿಗೆ ತಿಂಗಳಿಗೆ 1,000 ರೂ.ಗಳ ವೈದ್ಯಕೀಯ ಭತ್ಯೆಯನ್ನು ಸಹ ಪಾವತಿಸಬೇಕಾಗುತ್ತದೆ.

    ಭಾರತದಲ್ಲಿ 1961ರ ‘ಮಾತೃತ್ವ ಸೌಲಭ್ಯ ಕಾಯಿದೆ’ಯು ಉದ್ಯೋಗದಲ್ಲಿರುವ ತಾಯಂದಿರಿಗೆ ಹೆರಿಗೆ ರಜೆ ಮತ್ತು ಇತರೆ ಸೌಲಭ್ಯ ಕಲ್ಪಿಸಿಕೊಟ್ಟಿತು. ಆದರೆ ಅಗತ್ಯದಷ್ಟು ರಜೆ, ಶಿಶುವಿಗೆ ಹಾಲುಣಿಸಲು ಬಿಡವು, ಕುಂದು ಕೊರತೆಗಳನ್ನಾಲಿಸಲು ಸೌಲಭ್ಯಗಳಿಲ್ಲದೆಯೇ ಕಾನೂನು ಅಪೂರ್ಣವಾಗಿತ್ತು. ಇದರಿಂದಾಗಿ 2017ರಲ್ಲಿ ಈ ಕಾನೂನಿಗೆ ತಿದ್ದುಪಡಿ ತಂದು, 26 ವಾರಗಳ (ಆರು ತಿಂಗಳು) ಹೆರಿಗೆ ರಜೆಯನ್ನು ಮೊದಲ ಎರಡು ಹೆರಿಗೆಗೆ ನೀಡಲಾಗಿದೆ.

    ಇದರ ಜೊತೆಗೆ ಅನುದಾನಿತ ಶಿಕ್ಷಣ ಸಂಸ್ಥೆಗಳ ಉದ್ಯೋಗಿಗಳಿಗೆ ಕನಿಷ್ಠ ವೇತನ ಪ್ರಮಾಣವನ್ನು ನಿಗದಿಪಡಿಸುವತ್ತ ಕೇರಳ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಆಗಸ್ಟ್ 29ರಂದು ಕರೆದಿದ್ದ ಕ್ಯಾಬಿನೆಟ್ ಸಭೆಯಲ್ಲಿ ಈ ಸಂಬಂಧ ಚರ್ಚೆಯಾಗಿದೆ. ಈ ಮೂಲಕ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ. ಕಾರ್ಮಿಕರ ಪ್ರಸ್ತುತ ನಿಗದಿತ ವೇತನ ಭತ್ಯೆಯನ್ನು ದಿನಕ್ಕೆ 150 ರೂ.ಗಳಿಂದ 600 ರೂ.ಗೆ ಹೆಚ್ಚಿಸಲು ಕೇರಳ ಸರ್ಕಾರ ಒತ್ತಾಯಿಸಿದೆ.

  • ಬಡವರಿಗೆ ಬಂಪರ್ ಗಿಫ್ಟ್ – ಇನ್ಮುಂದೆ ಸರ್ಕಾರವೇ ಮಾಡುತ್ತೆ ಬಡವರ ಮದ್ವೆ

    ಬಡವರಿಗೆ ಬಂಪರ್ ಗಿಫ್ಟ್ – ಇನ್ಮುಂದೆ ಸರ್ಕಾರವೇ ಮಾಡುತ್ತೆ ಬಡವರ ಮದ್ವೆ

    ಬೆಂಗಳೂರು: ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಡವರಿಗಾಗಿ ಹೊಸ ಯೋಜನೆ ತರುತ್ತಿದೆ. ಹೊಸ ಸರ್ಕಾರದ ಮೊದಲ ಯೋಜನೆ ಇದಾಗಿದ್ದು, ಮುಂದಿನ ವರ್ಷವೇ ನೂತನ ಯೋಜನೆ ಜಾರಿಗೆ ಬರುವ ಸಾಧ್ಯತೆಗಳಿವೆ.

    ಹೌದು. ಆರ್ಥಿಕವಾಗಿ ಹಿಂದುಳಿದ ಬಡವರಿಗಾಗಿ ಉಚಿತ ಸಾಮೂಹಿಕ ವಿವಾಹ ಯೋಜನೆಯನ್ನು ಬಿಜೆಪಿ ಸರ್ಕಾರ ಜಾರಿಗೆ ತರುತ್ತಿದೆ. ಮುಜರಾಯಿ ಇಲಾಖೆ ನೇತೃತ್ವದಲ್ಲಿ ಪ್ರತಿ ವರ್ಷ 10 ಸಾವಿರ ಉಚಿತ ಸಾಮೂಹಿಕ ಮದುವೆ ಮಾಡಿಸುವ ನೂತನ ಯೋಜನೆ ಇದಾಗಿದ್ದು, ಇದರ ಸಿದ್ಧತೆಯೂ ಆರಂಭವಾಗಿದೆ.

    ಮುಜರಾಯಿ ಇಲಾಖೆಯ ಎ ದರ್ಜೆ ನೂರು ದೇವಾಲಯಗಳಲ್ಲಿ ಪ್ರತಿ ವರ್ಷ ಒಂದೊಂದು ದೇವಾಲಯದಲ್ಲಿ 100 ಜೋಡಿಗೆ ಮದುವೆ ಮಾಡಿಸುವ ಗುರಿ ಹೊಂದಲಾಗಿದೆ. ಹೀಗೆ ಪ್ರತಿ ವರ್ಷ 10 ಸಾವಿರ ಜೋಡಿಗೆ ಮದುವೆ ಮಾಡಿಸುವ ಯೋಜನೆ ಇದಾಗಿದೆ. ಯಾವುದೇ ಜಾತಿ-ಭೇದವಿಲ್ಲದೆ, ಎಲ್ಲಾ ವರ್ಗದ ಬಡವರಿಗಾಗಿ ಈ ಯೋಜನೆ ಜಾರಿಗೆ ತರಲಾಗುತ್ತಿದ್ದು, ಹಿಂದು ಸಂಪ್ರದಾಯದಂತೆ ವಿವಾಹ ನಡೆಯಲಿದೆ.

    ಒಂದು ಜೋಡಿಗೆ 25-30 ಸಾವಿರ ಖರ್ಚಾಗಲಿದ್ದು, ಪ್ರತಿ ವರ್ಷ 25-30 ಕೋಟಿ ರೂ. ಈ ಯೋಜನೆಗೆ ಖರ್ಚಾಗಲಿದೆ. ಹಾಗೆಯೇ ವಧು-ವರರಿಗೆ ವಸ್ತ್ರ, ಮಾಂಗಲ್ಯ, ಆರ್ಥಿಕ ಸಹಾಯ ಸರ್ಕಾರವೇ ನೀಡಲಿದೆ. ಚಾಮುಂಡೇಶ್ವರಿ, ಕಟೀಲು ದುರ್ಗೆ, ನಂಜನಗೂಡು ನಂಜುಂಡೇಶ್ವರ, ಕುಕ್ಕೆ ಸುಬ್ರಹ್ಮಣ್ಯ, ಮಲೆ ಮಹದೇಶ್ವರ ಸೇರಿದಂತೆ ಎ ದರ್ಜೆಯ 100 ದೇವಾಲಯಗಳಲ್ಲಿ ಈ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲು ನಿರ್ಧಾರ ಮಾಡಲಾಗಿದೆ.

    ಪ್ರಾರಂಭಿಕ ಹಂತದಲ್ಲಿ ಸರ್ಕಾರವೇ ಈ ಯೋಜನೆ ನಡೆಸಲಿದೆ. ಮುಂದಿನ ದಿನಗಳಲ್ಲಿ ಇನ್ಫೋಸಿಸ್ ಸೇರಿದಂತೆ ಹಲವು ಸಂಘ-ಸಂಸ್ಥೆಗಳನ್ನ ಭಾಗಿಯಾಗಿಸಿಕೊಂಡು ಯೋಜನೆ ಮುಂದುವರಿಸಲು ಇಲಾಖೆ ತೀರ್ಮಾನ ಮಾಡಿದೆ.