Tag: State Government

  • ಶಿಕ್ಷಣದಲ್ಲಿ ಕಡ್ಡಾಯ ಕನ್ನಡ ಭಾಷಾ ಮಾಧ್ಯಮ ಜಾರಿಗೆ ಸರ್ಕಾರ ಚಿಂತನೆ?

    ಶಿಕ್ಷಣದಲ್ಲಿ ಕಡ್ಡಾಯ ಕನ್ನಡ ಭಾಷಾ ಮಾಧ್ಯಮ ಜಾರಿಗೆ ಸರ್ಕಾರ ಚಿಂತನೆ?

    ಬೆಂಗಳೂರು: ಶಿಕ್ಷಣದಲ್ಲಿ ಮತ್ತೊಮ್ಮೆ ಕಡ್ಡಾಯ ಮಾತೃ ಭಾಷಾ ಮಾಧ್ಯಮ ಜಾರಿಗೆ ತರುವ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಈ ಮಹತ್ವದ ಚರ್ಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ನಾಂದಿ ಹಾಡಿದ್ದಾರೆ.

    ರಾಜ್ಯ ಸರ್ಕಾರ ಕಾಲು ಶತಮಾನದಷ್ಟು ಹಿಂದೆ ತಂದಿದ್ದ ಮಹತ್ವದ ಆದೇಶವನ್ನು ಮತ್ತೊಮ್ಮೆ ಅನುಷ್ಠಾನಕ್ಕೆ ತರುತ್ತಾ ಅನ್ನುವ ಕುತೂಹಲಕ್ಕೆ ಸಚಿವ ಸಿ.ಟಿ ರವಿಯವರ ಹೇಳಿಕೆ ಇಂಬುಕೊಟ್ಟಿದೆ. ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆಯಾ ಅನ್ನುವ ಅನುಮಾನವೂ ಹುಟ್ಟಿಕೊಂಡಿದೆ.

    ಬೆಂಗಳೂರಿನಲ್ಲಿ ಈ ಬಗ್ಗೆ ಮಾತಾಡಿದ ಸಿ.ಟಿ ರವಿ, 2014 ರಲ್ಲಿ ಸುಪ್ರೀಂ ಕೋರ್ಟ್ ಮಾತೃಭಾಷಾ ಮಾಧ್ಯಮ ಕುರಿತು ಕೊಟ್ಟಿದ್ದ ತೀರ್ಪನ್ನು ಪ್ರಶ್ನೆ ಮಾಡಿ ಮೇಲ್ಮನವಿ ಸಲ್ಲಿಸುವ ಸುಳಿವು ಕೊಟ್ಟರು. ಶಿಕ್ಷಣದಲ್ಲಿ ಕನ್ನಡ ಭಾಷಾ ಮಾಧ್ಯಮ ಕಡ್ಡಾಯಗೊಳಿಸುವ ಅನಿವಾರ್ಯತೆಯಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ಭಾಷಾ ಮಾಧ್ಯಮದ ಆಯ್ಕೆ ಪೋಷಕರ ವಿವೇಚನೆಗೆ ಬಿಟ್ಟಿದ್ದು. ಇದರಲ್ಲಿ ಸರ್ಕಾರ ಬಲವಂತ ಮಾಡುವಂತಿಲ್ಲ ಎಂಬ ತೀರ್ಪು ಕೊಟ್ಟಿದೆ. ಈ ತೀರ್ಪು ಪ್ರಶ್ನಿಸಿ ಮತ್ತೆ ಸುಪ್ರೀಂ ಕೋರ್ಟ್ ಗೆ ಹೋಗುವ ಕುರಿತು ಸಿಎಂ ಯಡಿಯೂರಪ್ಪ ಜೊತೆ ಚರ್ಚೆ ನಡೆಸುವುದಾಗಿ ಸಚಿವ ಸಿ.ಟಿ ರವಿ ಹೇಳಿದರು. ಅಷ್ಟೇ ಅಲ್ಲ ಮಾತೃಭಾಷಾ ಮಾಧ್ಯಮ ಕುರಿತು ಬೇರೆ ರಾಜ್ಯಗಳ ಜೊತೆಗೂ ಮಾತುಕತೆ ನಡೆಸುವುದಾಗಿ ತಿಳಿಸಿದರು. ಸಚಿವ ಸಿ.ಟಿ ರವಿಯವರ ಈ ಹೇಳಿಕೆ ಮತ್ತೆ ಕನ್ನಡಪ್ರಿಯರ, ಸಾಹಿತಿಗಳ ನಿರೀಕ್ಷೆ ಗರಿಗೆದರುವಂತೆ ಮಾಡಿದೆ. ಈ ಸಂಬಂಧ ಸರ್ಕಾರದ ಮುಂದಿನ ನಡೆಯನ್ನು ಎದುರು ನೋಡಬೇಕಾಗಿದೆ.

    ಹಿನ್ನೆಲೆ:
    ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ಕನ್ನಡ ಭಾಷೆ ಕಲಿಕೆಯ ಮಾಧ್ಯಮ ಆಗಬೇಕೆಂದು 1994 ರಲ್ಲಿ ರಾಜ್ಯ ಸರ್ಕಾರ ಮಹತ್ತರ ಆದೇಶ ಹೊರಡಿಸಿತ್ತು. 1994-95ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಮಾನ್ಯತೆ ಪಡೆದ ಎಲ್ಲಾ ಶಾಲೆಗಳಲ್ಲಿ ಮಾತೃಭಾಷೆ ಇಲ್ಲವೇ ಕನ್ನಡವೇ ಕಲಿಕೆಯ ಮಾಧ್ಯಮ ಆಗಿರತಕ್ಕದ್ದು. ಈ ಆದೇಶವನ್ನು ಪಾಲಿಸದ ಶಾಲೆಗಳು ಬಾಗಿಲು ಹಾಕತಕ್ಕದ್ದು ಎಂದು ರಾಜ್ಯ ಸರ್ಕಾರ 1994ರಲ್ಲಿ ಆದೇಶ ಹೊರಡಿಸಿತ್ತು.

    ಮಾತೃಭಾಷಾ ಶಿಕ್ಷಣ ಮಾಧ್ಯಮವನ್ನು ಕಡ್ಡಾಯ ಮಾಡಿದ್ದ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಖಾಸಗಿ ಶಾಲೆಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದವು. ಸರ್ಕಾರವು ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷೆ ಇಲ್ಲವೇ ಪ್ರಾದೇಶಿಕ ಭಾಷೆಯನ್ನು ಏಕೈಕ ಶಿಕ್ಷಣ ಮಾಧ್ಯಮವನ್ನಾಗಿ ಹೇರಲು ಬರುವುದಿಲ್ಲ ಎಂಬ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿತ್ತು. ಆ ಮೂಲಕ ಸರ್ಕಾರದ ಆದೇಶಕ್ಕೆ ತಡೆ ಬಿದ್ದಿತ್ತು.

  • ಗೋಲಿಬಾರ್ ಪರಿಹಾರ ವಾಪಸ್ ಪಡೆದಿದ್ದು, ರಾಜ್ಯ ಸರ್ಕಾರದ ಕೆಟ್ಟ ನಿರ್ಧಾರ: ಸಸಿಕಾಂತ್ ಸೆಂಥಿಲ್

    ಗೋಲಿಬಾರ್ ಪರಿಹಾರ ವಾಪಸ್ ಪಡೆದಿದ್ದು, ರಾಜ್ಯ ಸರ್ಕಾರದ ಕೆಟ್ಟ ನಿರ್ಧಾರ: ಸಸಿಕಾಂತ್ ಸೆಂಥಿಲ್

    ಮಂಗಳೂರು: ಗೋಲಿಬಾರ್ ಗೆ ನೇರ ಕಾರಣ ಕರ್ನಾಟಕ ರಾಜ್ಯ ಸರ್ಕಾರವಾಗಿದ್ದರೂ ಘೋಷಿಸಿದ ಪರಿಹಾರವನ್ನು ವಾಪಸ್ ಪಡೆದಿರೋದು ರಾಜ್ಯ ಸರ್ಕಾರದ ಕೆಟ್ಟ ನಿರ್ಧಾರ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಬೇಸರ ವ್ಯಕ್ತಪಡಿಸಿದ್ದಾರೆ.

    ಮಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಬಂದಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಕೇವಲ 300 ಮಂದಿ ಪ್ರತಿಭಟನಾಕಾರರನ್ನು ಕಂಟ್ರೋಲ್ ಮಾಡಲು ಆಗದಿದ್ದ ಪೊಲೀಸರು ಯಾಕೆ ಬೇಕು? ಪೊಲೀಸರು ಈ ರೀತಿಯಾಗಿ ಗೋಲಿಬಾರ್ ಮಾಡಬಾರದಿತ್ತು ಎಂದು ಹೇಳಿದ್ದಾರೆ.

    ನಾನು ಜಿಲ್ಲಾಧಿಕಾರಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಈ ರೀತಿ ಗೋಲಿಬಾರ್ ಆಗಿ ಎರಡು ಜೀವಗಳು ಬಲಿಯಾಗಿರೋದು ತುಂಬಾ ಬೇಸರ ತಂದಿದೆ. ಪೊಲೀಸ್ ಗೋಲಿಬಾರ್ ನಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಕೊಡೋದು ಹಿಂದಿನಿಂದಲೂ ಇದೆ. ಆದರೆ ಇದೇ ಮೊದಲ ಬಾರಿಗೆ ಘೋಷಿಸಿದ ಪರಿಹಾರ ಮೊತ್ತವನ್ನು ವಾಪಸ್ ಪಡೆಯಲಾಗಿದೆ. ರಾಜ್ಯದಲ್ಲಿ ಮೊದಲು ಮಾನವೀಯತೆ ನೋಡಬೇಕು. ಅದರ ಬದಲು ಈ ತರದ ನಿರ್ಧಾರ ಮಾಡೋದು ಸರ್ಕಾರದ ಸರಿಯಾದ ಕ್ರಮವಲ್ಲ ಎಂದರು.

    ಸಿಎಎ ಹಾಗೂ ಎನ್.ಆರ್.ಸಿ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಈ ಮಸೂದೆಯಿಂದ ದೇಶ ವಿಭಜನೆಯಾಗುತ್ತದೆ. ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ತುಂಬಾ ತೊಂದರೆಯಾಗುತ್ತದೆ. ದೇಶಕ್ಕೆ ಈಗ ಈ ಮಸೂದೆಯ ಅವಶ್ಯಕತೆ ಇಲ್ಲ. ಮುಂದೆ ಬೇಕಾದರೆ ಯೋಚಿಸಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ಮಂಗಳೂರಿನಲ್ಲಿ ಆಸ್ತಿಪಾಸ್ತಿ ಹಾನಿಗೈದವರ ಆಸ್ತಿ ಜಪ್ತಿ ಮಾಡಿ: ಸಿಟಿ ರವಿ

    ಮಂಗಳೂರಿನಲ್ಲಿ ಆಸ್ತಿಪಾಸ್ತಿ ಹಾನಿಗೈದವರ ಆಸ್ತಿ ಜಪ್ತಿ ಮಾಡಿ: ಸಿಟಿ ರವಿ

    ಮಂಗಳೂರು: ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟು ಮಾಡಿದವರ ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕುತ್ತಿದೆ. ಅದೇ ರೀತಿಯಲ್ಲಿ ಮಂಗಳೂರಿನ ಹಿಂಸಾಚಾರದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟು ಮಾಡಿದವರಿಗೆ ಪುಂಡು ಕಂದಾಯ ಹೇರಿ. ಆಸ್ತಿಯನ್ನು ಜಪ್ತಿ ಮಾಡುವ ಕಾನೂನು ತರಬೇಕೆಂದು ಸಚಿವ ಸಿ.ಟಿ.ರವಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪೌರತ್ವ ಮಸೂದೆಯನ್ನು ವಿರೋಧಿಸಿ ಉತ್ತರ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಆಸ್ತಿಪಾಸ್ತಿ ಹಾನಿ ಮಾಡಿದವರನ್ನು ಗುರುತಿಸಿ ಅವರ ಆಸ್ತಿಗಳನ್ನು ಜಪ್ತಿ ಮಾಡಲಾರಂಭಿಸಿದ್ದಾರೆ. ಹೀಗಾಗಿ ನಮ್ಮ ರಾಜ್ಯ ಸರ್ಕಾರವೂ ಇಂತಹ ಕ್ರಮಕ್ಕೆ ಮುಂದಾಗಬೇಕು. ಆಗ ಮಾತ್ರ ಮುಂದಿನ ದಿನಗಳಲ್ಲಿ ನಡೆಯುವ ಗಲಭೆಯನ್ನು ನಿಯಂತ್ರಿಸಬಹುದು ಎಂದು ಹೇಳಿದರು.

    ಯಾವುದೇ ಚಳುವಳಿ ಇರಬಹುದು, ಯಾವುದೇ ಪಕ್ಷದ ಚಟುವಟಿಕೆ ಇರಬಹುದು. ಬೆಂಕಿ ಹಾಕುತ್ತೇವೆ ಎನ್ನುವವರ ಮತ್ತು ಬೆಂಕಿ ಹಾಕುವ ಗಲಭೆಕೋರರಿಗೆ ಈ ಮೂಲಕ ಮೂಗುದಾರ ತೊಡಿಸಬಹುದು. ಈ ಬಗ್ಗೆ ಮುಖ್ಯಮಂತ್ರಿಗೆ ಮನವಿ ಮಾಡುವುದಾಗಿ ಹೇಳಿದರು.

    ಇದಲ್ಲದೆ ಗಲಭೆ ಪ್ರಕರಣದಲ್ಲಿ ಅಮಾಯಕರು ಸತ್ತರೆ ಪರಿಹಾರ ನೀಡೋದು ಸಹಜ. ಆದರೆ ಕ್ರಿಮಿನಲ್ ಚಟುವಟಿಕೆ ಮಾಡಿದ್ದರೂ ಪರಿಹಾರ ನೀಡಬೇಕೇ ಎಂದು ಕಾಂಗ್ರೆಸ್ಸಿಗರನ್ನು ಪ್ರಶ್ನೆ ಮಾಡಿದ ಸಿಟಿ ರವಿ, ಸರ್ಕಾರವನ್ನು ಅಸ್ಥಿರ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಚುನಾವಣೆ ಸೋತಾಗ ಇವಿಎಂ ಮೇಲೆ ಅನುಮಾನ. ಈಗ ಪೊಲೀಸರ ಮೇಲೆ ಅನುಮಾನ ಬಂದಿದೆ ಎಂದು ವ್ಯಂಗ್ಯವಾಡಿದರು.

  • ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಆಫರ್

    ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಆಫರ್

    ಶಿವಮೊಗ್ಗ: ಸರ್ಕಾರಿ ನೌಕರರಿಗೆ ಬಂಪರ್ ಆಫರ್ ನೀಡಲು ರಾಜ್ಯ ಸರ್ಕಾರಿ ನೌಕರರ ಸಂಘ ಮುಂದಾಗಿದೆ.

    ಇದುವರೆಗೆ ಸೈನಿಕರಿಗೆ ಮಿಲಿಟರಿ ಕ್ಯಾಂಟೀನ್, ಪೊಲೀಸರಿಗೆ ಪೊಲೀಸ್ ಕ್ಯಾಂಟೀನ್ ಮೂಲಕ ರಿಯಾಯಿತಿ ದರದಲ್ಲಿ ದಿನಬಳಕೆ ವಸ್ತುಗಳನ್ನು ನೀಡಲಾಗಿತ್ತು. ಇದೇ ಮಾದರಿಯಲ್ಲಿ ಸರ್ಕಾರಿ ನೌಕರರ ಕ್ಯಾಂಟೀನ್ ಆರಂಭಿಸಿ ಸರ್ಕಾರಿ ನೌಕರರಿಗೆ ಶೇಕಡಾ 10 ರಿಂದ 40ರಷ್ಟು ರಿಯಾಯಿತಿ ದರದಲ್ಲಿ ದಿನಬಳಕೆ ವಸ್ತುಗಳನ್ನು ನೀಡಲು ಸರ್ಕಾರಿ ನೌಕರರ ಸಂಘ ತೀರ್ಮಾನಿಸಿದೆ.

    ನಗರದಲ್ಲಿ ಇಂದು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು, ಪ್ರಾಯೋಗಿಕವಾಗಿ ಆರಂಭದಲ್ಲಿ ಶಿವಮೊಗ್ಗದಲ್ಲಿ ಸರ್ಕಾರಿ ನೌಕರರ ಕ್ಯಾಂಟೀನ್ ಆರಂಭಿಸಲಾಗುವುದು. ಬಳಿಕ ಇತರೆ ಜಿಲ್ಲೆಗಳಿಗೂ ಕ್ಯಾಂಟೀನ್ ವಿಸ್ತರಿಸಲಾಗುವುದು ಎಂದು ಹೇಳಿದರು.

  • ಸರ್ಕಾರದ ಹಣ ಪೋಲು – ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

    ಸರ್ಕಾರದ ಹಣ ಪೋಲು – ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

    ಬೆಳಗಾವಿ: ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಬೆಳಗಾವಿ ನಗರದಲ್ಲಿ ಕಮಾಂಡೆಂಟ್ ಕಂಟ್ರೋಲ್ ಸೆಂಟರ್ ಇಲ್ಲದೆ ಬಸ್ ಶೆಲ್ಟರ್ ಗಳನ್ನು ನಿರ್ಮಾಣ ಮಾಡಿರುವ ಅಧಿಕಾರಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಕೇಂದ್ರ ಸರ್ಕಾರದ ಮೊದಲ 20 ನಗರಗಳಲ್ಲಿ ಬೆಳಗಾವಿ ಮಹಾನನಗರ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿ ನಾಲ್ಕು ವರ್ಷ ಕಳೆದರೂ ಕೇವಲ ನಾಲ್ಕೇ ಕಾಮಗಾರಿ ಮಾಡಲಾಗಿದೆ. ಬೆಳಗಾವಿ ನಗರದ ಸ್ಮಾರ್ಟ್ ಸಿಟಿ ಅಧಿಕಾರಿಗಳು ಈ ಯೋಜನೆಯಲ್ಲಿ ಬಸ್ ಶೆಲ್ಟರ್ ಗಳ ನಿರ್ಮಾಣ ಮಾಡಿದ್ದಾರೆ. ಆದರೆ ಸ್ಮಾರ್ಟ್ ಸಿಟಿಯ ಈ ಶೆಲ್ಟರ್ ನಿರ್ಮಾಣ ಮಾಡುವ ಮುನ್ನ ಪ್ರಯಾಣಿಕರಿಗೆ ಬಸ್ ಬರುವ ವೇಳೆ ಹಾಗೂ ನಿಲ್ದಾಣದ ಬಗ್ಗೆ ತಿಳಿಸಬೇಕಿತ್ತು. ಆದರೆ ಆ ವ್ಯವಸ್ಥೆ ಸ್ಮಾರ್ಟ್ ಸಿಟಿ ಬಸ್ ಶೆಲ್ಟರ್ ನಲ್ಲಿ ಇರದಿರುವುದಕ್ಕೆ ಪ್ರಯಾಣಿಕರು ಅಸಮಾಧಾನ ಹೊರಹಾಕಿದ್ದಾರೆ.

    ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಧಿಕಾರಿಗಳು ನಿರ್ಮಾಣ ಮಾಡುತ್ತಿರುವ ಬಸ್ ಶೆಲ್ಟರ್ ಗೆ 44.50 ಕೋಟಿ ರೂಪಾಯಿಗಳು ವೆಚ್ಚ ಮಾಡಲಾಗಿದೆ. ವೆಚ್ಚದ ಬಗ್ಗೆ ಮಾತನಾಡುವ ಸ್ಮಾರ್ಟ್ ಸಿಟಿ ಅಧಿಕಾರಿಗಳು ಇಲ್ಲಿ ಪ್ರಯಾಣಿಕರಿಗೆ ಯಾವುದೇ ವ್ಯವಸ್ಥೆ ಮಾಡದೇ ಶೆಲ್ಟರ್ ನಿರ್ಮಾಣ ಮಾಡಿ, ಬೆಳಗಾವಿ ನಗರದ ಅಂದವನ್ನು ಕೆಡಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

    ಕಮಾಂಡೆಂಟ್ ಕಂಟ್ರೋಲ್ ಸೆಂಟರ್ ನಿರ್ಮಾಣಕ್ಕೆ ಬೆಳಗಾವಿ ಸ್ಮಾರ್ಟ್ ಸಿಟಿ ಅಧಿಕಾರಿಗಳು 80.15 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಅದೇ ಕಮಾಂಡೆಂಟ್ ಸೆಂಟರ್ ನಿರ್ಮಾಣ ಮಾಡಲು ಬೇರೆ ಸ್ಮಾರ್ಟ್ ಸಿಟಿಯಲ್ಲಿ 45 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದ್ದಾರೆ. ಬೆಳಗಾವಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ವಿನಾಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿವೆ.

  • ಶೌಚಾಲಯವಿದ್ದರೂ ಬಳಸದ ಸಾರ್ವಜನಿಕರು- ವಿಜಯ್ ಭಾಸ್ಕರ್ ಫುಲ್ ಕ್ಲಾಸ್

    ಶೌಚಾಲಯವಿದ್ದರೂ ಬಳಸದ ಸಾರ್ವಜನಿಕರು- ವಿಜಯ್ ಭಾಸ್ಕರ್ ಫುಲ್ ಕ್ಲಾಸ್

    ಯಾದಗಿರಿ: ಸರ್ಕಾರ ಪ್ರತಿ ಮನೆಗೆ ಸಾವಿರಾರು ರೂಪಾಯಿ ನೀಡಿ, ಸಾರ್ವಜನಿಕರಿಗೆ ಮನೆಗೊಂದು ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆದರೆ ಇದನ್ನು ಬಳಸಲು ಸಾರ್ವಜನಿಕರು ನಿರ್ಲಕ್ಷ್ಯ ವಹಿಸುತ್ತಿದ್ದು, ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ವಿಜಯ ಭಾಸ್ಕರ್ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಯಾದಗಿರಿ ಜಿಲ್ಲೆಯ ಪ್ರವಾಸದಲ್ಲಿರುವ ವಿಜಯ್ ಭಾಸ್ಕರ್, ಇಂದು ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆಗೆ ಆಗಮಿಸಿದ್ದರು. ಈ ವೇಳೆ ಬಂದಳ್ಳಿ ಗ್ರಾಮದ ಮಾರ್ಗ ಮಧ್ಯೆ ಬಹಿರ್ದೆಸೆಗೆ ಹೋಗುತ್ತಿದ್ದ ವ್ಯಕ್ತಿಯನ್ನು ಕಂಡು ತಮ್ಮ ವಾಹನ ನಿಲ್ಲಿಸಿ, ವ್ಯಕ್ತಿಯನ್ನು ತಡೆದು ಶೌಚಾಲಯ ಬಳಕೆ ಬಗ್ಗೆ ಪಾಠ ಮಾಡಿದ್ದಾರೆ.

    ಈ ಗ್ರಾಮದಲ್ಲಿ ಗ್ರಾ.ಪಂ ವತಿಯಿಂದ ಮನೆಗೊಂದು ಶೌಚಾಲಯ ನಿರ್ಮಾಣ ಮಾಡಲಾಗಿದೆ. ಅದನ್ನು ಬಳಸಲು ಗ್ರಾಮಸ್ಥರು ಆಸಕ್ತಿ ತೋರುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಶೌಚಾಲಯ ಬಳಸದಿದ್ದರೆ ಪಡಿತರ ಚೀಟಿ, ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ವಿಜಯ್ ಭಾಸ್ಕರ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಶೌಚಾಲಯ ನಿರ್ಮಾಣಕ್ಕಾಗಿ ಸರ್ಕಾರ ನೀಡಿದ ಪ್ರೋತ್ಸಾಹ ಧನ ಮರುಪಾವತಿ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಜಯ್ ಭಾಸ್ಕರ್ ಜೊತೆ ಧ್ವನಿಗೂಡಿಸಿದ, ಜಿ.ಪಂ ಸಿಇಓ ಶಿಲ್ಪಾ ಶರ್ಮಾ ಮತ್ತು ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಶೌಚಾಲಯ ಬಳಕೆ ಬಗ್ಗೆ ಗ್ರಾಮಸ್ಥರಿಗೆ ತಿಳಿ ಹೇಳಿದರು.

  • ಸರ್ಕಾರದ ಸಾಧನೆ ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ಡಿಸಿ ಚಾಲನೆ

    ಸರ್ಕಾರದ ಸಾಧನೆ ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ಡಿಸಿ ಚಾಲನೆ

    ಚಾಮರಾಜನಗರ: ರಾಜ್ಯ ಸರ್ಕಾರ ನೂರು ದಿನಗಳನ್ನು ಪೂರೈಸಿ ಮುನ್ನಡೆದಿದೆ. ಈ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ನೆರೆ, ಪ್ರವಾಹ ಸಂದರ್ಭದಲ್ಲಿ ಕೈಗೊಂಡ ಪರಿಹಾರ ಕಾರ್ಯಗಳ ಕುರಿತ ಮೂರು ದಿನಗಳ ಛಾಯಾಚಿತ್ರ ಪ್ರದರ್ಶನ ಚಾಮರಾಜನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಇಂದಿನಿಂದ ಆರಂಭಗೊಂಡಿದೆ.

    ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯ ಸರ್ಕಾರದ ಯೋಜನೆಗಳು ಹಾಗೂ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡುವ ವಸ್ತು ಪ್ರದರ್ಶನವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

    ರಾಜ್ಯ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾರ್ಯಕ್ರಮಗಳು, ಸಾಧನೆ ಕುರಿತ ಮಾಹಿತಿ ಫಲಕಗಳನ್ನು ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವೀಕ್ಷಿಸಿದರು. ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎ.ರಮೇಶ್, ಕೆಎಸ್‍ಆರ್‍ಟಿಸಿ ಸಿಬ್ಬಂದಿ ಹಾಜರಿದ್ದರು.

  • ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಕೆಪಿಸಿಸಿ ದೂರು

    ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಕೆಪಿಸಿಸಿ ದೂರು

    – ಸಿಟಿ ರವಿ, ರೇಣುಕಾಚಾರ್ಯ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

    ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ನಡೆಸಿದ ಪ್ರತಿಭಟೆಯಲ್ಲಿ ಗೋಲಿಬಾರ್ ಮಾಡಿ, ಇಬ್ಬರನ್ನ ಬಲಿ ಪಡೆದು ರಾಜ್ಯ ಸರ್ಕಾರ ಮಾನವ ಹಕ್ಕು ಉಲ್ಲಂಘನೆ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ. ಜನಾರ್ದನ್ ದೂರು ನೀಡಿದ್ದಾರೆ.

    ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯ ಮೂಲಕ ಪ್ರತಿಭಟನೆಗೆ ತಡೆಯೊಡ್ಡಿ, ಪ್ರಗತಿಪರ ಹೋರಾಟಗಾರರನ್ನು ಬಂಧಿಸಿದೆ. ಪೌರತ್ವ ಕಾಯ್ದೆ ವಿರುದ್ಧ ಹೋರಾಟ ಮಾಡುತ್ತಿದ್ದ ಇಬ್ಬರ ಯುವಕರಿಗೆ ಗುಂಡು ಹಾರಿಸಿ, ಬಲಿ ಪಡೆಯಲಾಗಿದೆ. ಇದಕ್ಕೆ ರಾಜ್ಯ ಸರ್ಕಾರವೇ ಮೂಲ ಕಾರಣ ಹಾಗೂ ಮಾನವ ಹಕ್ಕುಗಳನ್ನು ಸಂಪೂರ್ಣವಾಗಿ ಧಮನ ಮಾಡಿದೆ. ಅಲ್ಲದೇ ಪೊಲೀಸ್ ಇಲಾಖೆಯ ಮೂಲಕ ದೌರ್ಜನ್ಯ ಎಸಗಿ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿದೆ ಎಂದು ಜಿ.ಜನಾರ್ದನ್  ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ಗೋಲಿಬಾರ್, ಇಬ್ಬರು ಬಲಿ- ಗುಂಡು ಹಾರಿಸಿದ್ದಕ್ಕೆ ಪೊಲೀಸ್ ಆಯುಕ್ತರಿಂದ ಸ್ಪಷ್ಟನೆ

    ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿಟಿ ರವಿ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಈ ಇಬ್ಬರ ನಾಯಕರು ಪೌರತ್ವ ಕಾಯ್ದೆಯ ಪರ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ಹೆಸರನ್ನು ಪ್ರಸ್ತಾಪಿಸಿ ಪೌರತ್ವ ಕಾಯ್ದೆ ವಿರೋಧ ಮಾಡುವವರು ಪಾಕಿಸ್ತಾನಕ್ಕೆ ಹೋಗಲಿ ಅಂತ ಬೆದರಿಕೆ ಹಾಕಿದ್ದಾರೆ. ಅವರ ಹೇಳಿಕೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಿದೆ. ಹಾಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಜಿ. ಜನಾರ್ದನ್ ಆಗ್ರಹಿಸಿದ್ದಾರೆ.

  • ಯತ್ನಾಳ್‍ಗೆ ಸಚಿವ ಸ್ಥಾನ ನೀಡ್ಲೇಬೇಕು- ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹ

    ಯತ್ನಾಳ್‍ಗೆ ಸಚಿವ ಸ್ಥಾನ ನೀಡ್ಲೇಬೇಕು- ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹ

    ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೇವಲ ಪಂಚಮಸಾಲಿ ಸಮಾಜದ ಮುಖಂಡರಲ್ಲ. ಅವರು ಉತ್ತರ ಕರ್ನಾಟಕ ಜನರ ಪರವಾಗಿ ನಿಂತವರು. ಅವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ವಿಜಯಪುರದಲ್ಲಿ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಯತ್ನಾಳ್ ಪರ ಬ್ಯಾಟಿಂಗ್ ಮಾಡಿದ್ದಾರೆ.

    15 ಜನ ಪಂಚಮಸಾಲಿ ಸಮುದಾಯದವರಲ್ಲಿ 15 ಜನ ಆಯ್ಕೆಯಾಗಿದ್ದಾರೆ. ಇದರಲ್ಲಿ ಮೂವರಿಗಾದರೂ ಸಚಿವ ಸ್ಥಾನ ನೀಡಲೇಬೇಕು. ಯತ್ನಾಳ್ ಹಿರಿಯ ನಾಯಕ ಜೊತೆಗೆ ಯಡಿಯೂರಪ್ಪನವರ ಕಷ್ಟ ಕಾಲದಲ್ಲಿ ಬೆನ್ನೆಲುಬಾಗಿ ನಿಂತವರು. ಅವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.

    ಉಭಯ ಜಿಲ್ಲೆಗಳ ಪರವಾಗಿ ನಿರಾಣಿ ಹಾಗೂ ಯತ್ನಾಳ್ ಅವರಿಗೆ ಸಚಿವ ಸ್ಥಾನ ನೀಡಲೇಬೇಕು. ಅದರ ಜೊತೆ ಸಾಧ್ಯವಾದರೆ ಸಿದ್ದು ಸವದಿಗೂ ಸಚಿವ ಸ್ಥಾನ ಕೊಡಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು. ಒಂದು ವೇಳೆ ಸಚಿವ ಸ್ಥಾನ ಸಿಗದೇ ಹೋದರೆ ಸಮುದಾಯದ ಮುಖಂಡರೊಂದಿಗೆ ಡಿ. 29ರಂದು ಚರ್ಚಿಸಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದು ಬಿಜೆಪಿ ಸರ್ಕಾರಕ್ಕೆ ಸ್ವಾಮೀಜಿ ಎಚ್ಚರಿಕೆ ನೀಡಿದರು.

    ವೀರ ರಾಣಿ ಕಿತ್ತೂರು ಚೆನ್ನಮ್ಮ ಜಯಂತಿಗೆ 70 ಲಕ್ಷ ರೂ. ಸರ್ಕಾರ ಪ್ರತಿ ವರ್ಷ ಪರಿಹಾರ ಕೊಡುತ್ತಿತ್ತು. ಆದರೆ ಈ ಬಾರಿ ಸರ್ಕಾರ ಸರಳವಾಗಿ ಚೆನ್ನಮ್ಮ ಜಯಂತಿಯನ್ನು ಆಚರಿಸುವ ಮೂಲಕ ಸಂಪೂರ್ಣ ಅನುದಾನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಪ್ರವಾಹ ಹಾಗೂ ಬರಗಾಲದ ಹಿನ್ನೆಲೆಯಲ್ಲಿ ಅನುದಾನವನ್ನು ಬಳಸಿಕೊಳ್ಳಬೇಕು ಎಂದರು. ಇದೇ ಡಿ. 29ರಂದು ವಿಜಯಪುರದಲ್ಲಿ ವೀರ ರಾಣಿ ಕಿತ್ತೂರು ಚೆನ್ನಮ್ಮ ಜಯಂತಿಯನ್ನು ಆಚರಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.

    ಪೌರತ್ವ ಕಾಯ್ದೆ ವಿಚಾರವಾಗಿ ಪ್ರತಿಕ್ರಿಯೆ ನೀಡಲ್ಲ. ಯಾವುದೇ ವಿಚಾರವಾದರೂ ಕುಳಿತು ಚರ್ಚೆ ಮಾಡಬೇಕು. ಕೆಲ ಧರ್ಮಗಳು ಅದರ ಪರ ಹಾಗೂ ವಿರೋಧವಾಗಿ ಮಾತನಾಡುತ್ತಿದ್ದಾರೆ ಇದು ಸರಿಯಲ್ಲ ಎಂದು ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

  • ಶ್ರೀನಿವಾಸ್ ಪ್ರಸಾದ್ ಅಳಿಯ ಕೂಡ ಸಚಿವ ಸ್ಥಾನದ ಆಕಾಂಕ್ಷಿ

    ಶ್ರೀನಿವಾಸ್ ಪ್ರಸಾದ್ ಅಳಿಯ ಕೂಡ ಸಚಿವ ಸ್ಥಾನದ ಆಕಾಂಕ್ಷಿ

    ಮೈಸೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ದಿನದಿನಕ್ಕೂ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಮೈಸೂರಿನ ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್ ತಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಈ ಬಗ್ಗೆ ಸಿಎಂ ಅವರಿಗೂ ಖುದ್ದಾಗಿ ಹೇಳಿದ್ದೇನೆ ಎಂದು ಹೇಳುವ ಮೂಲಕ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬೆಳೆಸಿದ್ದಾರೆ.

    ಹರ್ಷವರ್ಧನ್ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಅಳಿಯ. ಹೀಗಾಗಿ, ಇವರ ಹೇಳಿಕೆ ಗಂಭೀರತೆ ಪಡೆದು ಕೊಂಡಿದೆ. ಕೇಂದ್ರದಲ್ಲಿ ಇನ್ನೊಮ್ಮೆ ಮಂತ್ರಿ ಆಗಬೇಕು ಎಂಬ ಆಸೆ ಹೊಂದಿದ್ದ ಶ್ರೀನಿವಾಸ್ ಪ್ರಸಾದ್ ಅವರಿಗೆ ಅದು ಸಾಧ್ಯವಾಗಿಲ್ಲ. ಹೀಗಾಗಿ, ರಾಜ್ಯದಲ್ಲಿ ತಮ್ಮ ಅಳಿಯನ ಮಂತ್ರಿ ಮಾಡಲು ಲಾಬಿ ಆರಂಭಿಸಿದ್ದಾರಾ ಎಂಬ ಚರ್ಚೆ ಈಗ ಶುರುವಾಗಿದೆ.

    ತಮ್ಮ ಮನದ ಬಯಕೆ ಹೇಳಿಕೊಂಡ ಹರ್ಷವರ್ಧನ್, ಕೇಂದ್ರದಲ್ಲಿ ಮಾಜಿ ಮಂತ್ರಿ ವಿ.ಶ್ರೀನಿವಾಸ್ ಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಲಿಲ್ಲ. ಹಾಗಾಗಿ ರಾಜ್ಯದಲ್ಲಿ ಪ.ಜಾ. ಬಲಗೈ ಜನಾಂಗದಿಂದ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಚಾಮರಾಜನಗರ ಲೋಕಸಭಾ ವ್ಯಾಪ್ತಿಯಲ್ಲಿ ವಿ.ಶ್ರೀನಿವಾಸ್ ಪ್ರಸಾದ್ ರವರ ಪ್ರಭಾವ ಅಗಾಧವಾಗಿದೆ. ಚಾಮರಾಜನಗರ ಲೋಕಸಭಾ ಮತ್ತು ನಂಜನಗೂಡಿನ ವಿಧಾನಸಭಾ ಕ್ಷೇತ್ರದಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಪಕ್ಷದ ಬಾವುಟವನ್ನು ಹಾರಿಸಿದ್ದೇವೆ. ಹೀಗಾಗಿ ಈ ಲೋಕಸಭಾ ಕ್ಷೇತ್ರ ಮತ್ತು ವಿಧಾನಸಭಾ ಕ್ಷೇತ್ರ ಹೆಚ್ಚು ಹೆಚ್ಚು ಅಭಿವೃದ್ಧಿಯಾಗಬೇಕಾದರೆ ಸಚಿವ ಸ್ಥಾನ ಇರಲೇಬೇಕು. ಇದು ಕ್ಷೇತ್ರದ ಜನರ ಬಯಕೆ ಕೂಡ ಎಂದರು.

    ಸಮುದಾಯದ ಬಲಗೈ ಜನಾಂಗದ ಪರವಾಗಿ ನನಗೆ ಸಚಿವ ಸ್ಥಾನ ನೀಡಿದರೆ ಚಾಮರಾಜನಗರ ಲೋಕಸಭಾ ಕ್ಷೇತ್ರ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಇನ್ನಷ್ಟು ಪಕ್ಷವನ್ನು ಪ್ರಬಲ ಗೊಳಿಸಿ ಅಭಿವೃದ್ಧಿಕಾರ್ಯ ಮಾಡುತ್ತೇನೆ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ರವರಿಗೆ ನಮ್ಮ ಸಚಿವ ಸ್ಥಾನಗಳು ಬಯಕೆಯನ್ನು ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.