Tag: State Government

  • ಸಿಐಡಿಯಿಂದ ಮಂಗಳೂರು ಗೋಲಿಬಾರ್ ತನಿಖೆ ಪ್ರಾರಂಭ

    ಸಿಐಡಿಯಿಂದ ಮಂಗಳೂರು ಗೋಲಿಬಾರ್ ತನಿಖೆ ಪ್ರಾರಂಭ

    ಬೆಂಗಳೂರು: ರಾಜ್ಯ ಸರ್ಕಾರದ ಆದೇಶದ ಮೇರೆಗೆ ಸಿಐಡಿ ವಿಶೇಷ ತನಿಖಾ ತಂಡದಿಂದ ಮಂಗಳೂರು ಗೋಲಿಬಾರ್ ಬಗ್ಗೆ ತನಿಖೆ ಶುರುವಾಗಿದೆ.

    ಸಿಐಡಿಯ ಎಸ್‍ಪಿ ರಾಹುಲ್ ಕುಮಾರ್ ಮತ್ತು ಡಿಎಸ್‍ಪಿ ಬಾಲರಾಜ್ ನೇತೃತ್ವದ ತಂಡದಿಂದ ತನಿಖೆ ಪ್ರಾರಂಭವಾಗಿದೆ. ಪೌರತ್ವ ತಿದ್ದುಪಡಿ ವಿರೋಧಿಸಿ ನಡೆದಿದ್ದ ಭಾರಿ ಪ್ರತಿಭಟನೆ ಗಲಭೆಯಾಗಿ ಪರಿವರ್ತನೆಯಾಗಿತ್ತು. ಡಿಸೆಂಬರ್ 19 ರಂದು ಪೊಲೀಸರು ನಡೆಸಿದ್ದ ಗೋಲಿಬಾರ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಅಬ್ದುಲ್ ಜಲೀನ್ ಹಾಗೂ ನೌಶೀನ್ ಗೋಲಿಬಾರ್ ನಲ್ಲಿ ಸಾವನ್ನಪ್ಪಿದ್ದರು.

    ಸಾವನ್ನಪ್ಪಿದವರನ್ನು ಸೇರಿಸಿ ಆರೋಪಿಗಳನ್ನಾಗಿಸಿ ಒಟ್ಟು 29 ಮಂದಿಯ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿತ್ತು. ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಗೋಲಿಬಾರ್ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಮಂಗಳೂರಿಗೆ ತೆರಳಿದ ಸಿಐಡಿ ತಂಡ, ಗೋಲಿಬಾರ್ ನಡೆದ ಸ್ಥಳ ಹಾಗೂ ಸಿಸಿಟಿವಿ ಸಾಕ್ಷಿಗಳನ್ನು ಈಗ ಕಲೆ ಹಾಕಿ ತನಿಖೆ ಆರಂಭಿಸಿದೆ.

  • ಖಡಕ್ ಅಧಿಕಾರಿ ರಶ್ಮಿ ಮಹೇಶ್ ಮತ್ತೆ ಎತ್ತಂಗಡಿ

    ಖಡಕ್ ಅಧಿಕಾರಿ ರಶ್ಮಿ ಮಹೇಶ್ ಮತ್ತೆ ಎತ್ತಂಗಡಿ

    ಬೆಂಗಳೂರು: ಖಡಕ್ ಐಎಎಸ್ ಅಧಿಕಾರಿ ವಿ.ರಶ್ಮಿ ಮಹೇಶ್ ಅವರನ್ನು ರಾಜ್ಯ ಸರ್ಕಾರ ಮತ್ತೆ ಎತ್ತಂಗಡಿ ಮಾಡಿದೆ. ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿಯಾಗಿದ್ದ ರಶ್ಮಿ ಮಹೇಶ್ ಅವರನ್ನು ಸಾರ್ವಜನಿಕ ಉದ್ದಿಮೆಗಳ ಇಲಾಖೆ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.

    ನೇರ ನಿಷ್ಠುರ ಅಧಿಕಾರಿ ಎಂದೇ ಹೆಸರು ಗಳಿಸಿರುವ ರಶ್ಮಿ ಅವರನ್ನು ವರ್ಗಾವಣೆ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಉತ್ತಮ ಅಧಿಕಾರಿಯೊಬ್ಬರನ್ನು ಕೆಲಸಕ್ಕೆ ಬಾರದ ಇಲಾಖೆಗೆ ವರ್ಗಾಯಿಸಿ ಮೂಲೆಗುಂಪು ಮಾಡಲು ಹೊರಟಿರುವ ಸರ್ಕಾರದ ಕ್ರಮ ಅಧಿಕಾರಿಗಳ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

    ಪಶುಸಂಗೋಪನಾ ಖಾತೆ ಸಚಿವ ಪ್ರಭುಚೌಹಾಣ್ ಅವರಿಗೆ ಅನುಕೂಲವಾಗುಂತೆ ನಡೆದುಕೊಂಡಿಲ್ಲ ಎನ್ನುವುದೇ ರಶ್ಮಿ ವರ್ಗಾವಣೆಗೆ ಕಾರಣ ಎನ್ನಲಾಗಿದೆ. ಇಲಾಖೆಯ ವಿಚಾರದಲ್ಲಿ ನಿಯಮಬಾಹಿರವಾಗಿ ನಿರ್ಧಾರ ತೆಗೆದುಕೊಳ್ಳಬೇಕೆಂಬ ಸಚಿವರ ಒತ್ತಡಕ್ಕೆ ರಶ್ಮಿ ಸಮ್ಮತಿಸಿಲ್ಲ ಎನ್ನಲಾಗಿದೆ. ಇದು ರಶ್ಮಿ ಎತ್ತಂಗಡಿಗೆ ಕಾರಣವಾಗಿದೆ ಎಂದು ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

    ಹಿಂದಿನ ಸರ್ಕಾರದ ಅವಧಿಯಲ್ಲೂ ವಿವಿಧೆಡೆ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಕಟ್ಟುನಿಟ್ಟಿನ ಕ್ರಮಕೈಗೊಂಡು ಆಡಳಿತರೂಢರ ಕೆಂಗಣ್ಣಿಗೆ ಗುರಿಯಾಗಿ ರಶ್ಮಿ ಮಹೇಶ್ ಪದೇಪದೇ ವರ್ಗಾವಣೆಯ ಶಿಕ್ಷೆಗೆ ಒಳಗಾಗಿದ್ದರು.

    ವೈದ್ಯಕೀಯ ಇಲಾಖೆ ಕಾರ್ಯದರ್ಶಿಯಾಗಿದ್ದಾಗ ವೈದ್ಯಕೀಯ ಕಾಲೇಜುಗಳ ಸೀಟ್ ಬ್ಲಾಕಿಂಗ್ ದಂಧೆ, ಅಕ್ರಮ ಶುಲ್ಕ ವಸೂಲಿ ಮತ್ತು ಅಡ್ಡದಾರಿಯಲ್ಲಿ ಸರ್ಕಾರಕ್ಕೆ ವಂಚಿಸುತ್ತಿದ್ದ ಕಾಲೇಜುಗಳ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದರು. ಖಾಸಗಿ ವೈದ್ಯಕೀಯ ಕಾಲೇಜುಗಳ ಲಾಬಿಗೆ ರಶ್ಮಿ ಎತ್ತಂಗಡಿಯಾಗಿತ್ತು.

    ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿದ್ದಾಗ ಅಲ್ಲಿನ ಸಿಬ್ಬಂದಿ ಗುಂಪೊಂದು ರಶ್ಮಿಯವರ ಮೇಲೆ ಮಾಧ್ಯಮಗಳು ಮತ್ತು ಪೊಲೀಸರ ಮುಂದೆ ದೈಹಿಕ ಹಲ್ಲೆ ನಡೆಸಿತ್ತು. ಆ ಸಂದರ್ಭದಲ್ಲಿ ಅಧಿಕಾರಿಯ ಬಗ್ಗೆ ಅನುಕಂಪ ತೋರಿದ್ದ ಬಿಜೆಪಿ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಕಾಂಗ್ರೆಸ್ ನಾಯಕರನ್ನು ಟೀಕಿಸಿ ಕಾಂಗ್ರೆಸ್ ನಲ್ಲಿ ದಕ್ಷ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಅಂತ ಬೊಬ್ಬೆ ಹೊಡೆದಿದ್ದರು. ಈಗ ಕಾಂಗ್ರೆಸ್ ಹಾದಿಯನ್ನೇ ಹಿಡಿದಿರುವ ಬಿಜೆಪಿ ಸರ್ಕಾರ ದಕ್ಷ ಪ್ರಾಮಾಣಿಕ ಅಧಿಕಾರಿಗೆ ವರ್ಗಾವಣೆಯ ಶಿಕ್ಷೆ ನೀಡಿ ಮೂಲೆಗುಂಪು ಮಾಡಲು ಹೊರಟಿರುವುದು ವಿಪರ್ಯಾಸ.

  • ಗುಡಿಸಲು ಮುಕ್ತ ರಾಜ್ಯದ ಕನಸಿಗೆ ಬ್ರೇಕ್

    ಗುಡಿಸಲು ಮುಕ್ತ ರಾಜ್ಯದ ಕನಸಿಗೆ ಬ್ರೇಕ್

    ಬೆಂಗಳೂರು: ಗುಡಿಸಲು ಮುಕ್ತ ರಾಜ್ಯದ ಕನಸಿಗೆ ಸ್ವತಃ ರಾಜ್ಯ ಸರ್ಕಾರದೇ ಬ್ರೇಕ್ ಹಾಕಿದೆ. ಸಿದ್ದರಾಮಯ್ಯನವರ ಸರ್ಕಾರವಿದ್ದಾಗ ವಸತಿ ಇಲಾಖೆಯಿಂದ ವಸತಿ ರಹಿತರಿಗೆ 16,38,564 ಮನೆ ನಿರ್ಮಿಸಲಾಗಿತ್ತು. ಸಾಮಾನ್ಯ ವಸತಿ ರಹಿತರಿಗೆ 1.20 ಲಕ್ಷ, ಪರಿಶಿಷ್ಟರಿಗೆ 1.70 ಲಕ್ಷ ಹಣದಲ್ಲಿ ಮನೆ ನಿರ್ಮಾಣ ಯೋಜನೆ ಇದಾಗಿದೆ.

    ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಳೆದ 6 ತಿಂಗಳಿನಲ್ಲಿ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ. ಮಂಜೂರಾಗಿದ್ದ ಮನೆಗಳಿಗೆ ಅನುದಾನವನ್ನು ತಡೆಹಿಡಿಯಲಾಗಿದೆ. ಕುಮಾರಸ್ವಾಮಿ ಸರ್ಕಾರದ ಕೊನೆಯ 2 ತಿಂಗಳು ಸೇರಿದಂತೆ ಕಳೆದ 8 ತಿಂಗಳಿಂದ ಯೋಜನೆಯ ಅನುದಾನ ನಿಲ್ಲಿಸಲಾಗಿದೆ.

    2 ವರ್ಷದ ಹಿಂದೆ ಒಟ್ಟು 13,97,115 ಮನೆಗಳಿಗೆ ಅನುಮತಿ ನೀಡಲಾಗಿತ್ತು. ಒಟ್ಟು 1,36,741 ಮನೆ ಬ್ಲಾಕ್ ಮಾಡಲಾಗಿದೆ. ಒಟ್ಟು 3.59919 ಮನೆಗಳು ಪ್ರೊಗ್ರೆಸ್ ಇವೆ. 3,60,412 ಮನೆಗಳಿಗೆ ಅವಕಾಶ ನಿರಾಕರಿಸಲಾಗಿದೆ. ಹೀಗೆ ಕಳೆದ 8 ತಿಂಗಳಿನಿಂದ ಬಡವರ ಪಾಲಿನ ವಸತಿ ಯೋಜನೆಗೆ ಹಣವೇ ಬಿಡುಗಡೆ ಮಾಡದೇ ಲಕ್ಷಾಂತರ ಜನರ ಕನಸಿನ ಗುಡಿಸಲು ಮುಕ್ತ ಯೋಜನೆ ಜಾರಿಯಾಗದೆ ಅರ್ಧಕ್ಕೆ ನಿಂತಿದೆ.

  • ಸಾವರ್ಕರ್ ಬಗ್ಗೆ ವಿವಾದಾತ್ಮಕ ಪುಸ್ತಕ ಪ್ರಕಟಿಸಿರೋ ಕಾಂಗ್ರೆಸ್ ವಿರುದ್ಧ ಕ್ರಮಕ್ಕೆ ಮನವಿ

    ಸಾವರ್ಕರ್ ಬಗ್ಗೆ ವಿವಾದಾತ್ಮಕ ಪುಸ್ತಕ ಪ್ರಕಟಿಸಿರೋ ಕಾಂಗ್ರೆಸ್ ವಿರುದ್ಧ ಕ್ರಮಕ್ಕೆ ಮನವಿ

    – ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ ಪತ್ರ

    ಬೆಂಗಳೂರು: ಸಾವರ್ಕರ್ ಬಗ್ಗೆ ಅಶ್ಲೀಲವಾಗಿ ಪುಸ್ತಕವನ್ನು ಬರೆಯುವ ಲೇಖಕ ಹಾಗೂ ಅದನ್ನು ಪ್ರಕಟಿಸುವವರ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಸಿಎಂ ಮತ್ತು ಪ್ರಧಾನಿಗೆ ಮನವಿ ಪತ್ರ ಸಲ್ಲಿಸಲಾಗಿದ್ದು, ಪುಸ್ತಕವನ್ನು ದೇಶಾದ್ಯಂತ ತಕ್ಷಣ ನಿಷೇಧಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಆಗ್ರಹಿಸಿದೆ.

    ಹಿಂದೂ ಜನಜಾಗೃತಿ ಸಮಿತಿ, ಹಿಂದೂ ಮಹಾಸಭಾದ ವತಿಯಿಂದ ವೀರ ಸಾವರ್ಕರ್ ಬಗ್ಗೆ ಕೆಟ್ಟದಾಗಿ ಪುಸ್ತಕದಲ್ಲಿ ಬರೆದಿರುವ ಬಗ್ಗೆ ಬೆಂಗಳೂರು ಜಿಲ್ಲಾಧಿಕಾರಿ ಮೂಲಕ ಕರ್ನಾಟಕ ಸಿಎಂ ಯಡಿಯೂರಪ್ಪ ಮತ್ತು ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಜಯಂತ್ ಮತ್ತು ಹಿಂದೂ ಮಹಾಸಭೆಯ ಲೋಹಿತ್ ಮುಂತಾದವರು ಉಪಸ್ಥಿತರಿದ್ದರು.

    ಭೋಪಾಲ್‍ನಲ್ಲಿ ಕಾಂಗ್ರೆಸ್ಸಿನ ಸೇವಾದಳದ ತರಬೇತಿ ಶಿಬಿರದಲ್ಲಿ ವೀರ್ ಸಾವರ್ಕರ್ ಕಿತನೆ ವೀರ್? (ವೀರ ಸಾವರ್ಕರ್ ಎಷ್ಟು ವೀರರು?) ಹೆಸರಿನಲ್ಲಿ ವಿತರಿಸಿದ್ದ ಪುಸ್ತಕದಲ್ಲಿ ಅತ್ಯಂತ ತ್ಯುಚ್ಛವಾಗಿ ದ್ವೇಷ ಪೂರಕವಾಗಿ ಕಟ್ಟುಕಥೆಗಳನ್ನು ಬರೆಯಲಾಗಿದೆ. ಇದರಿಂದ ಕಾಂಗ್ರೆಸ್ಸಿನವರು ಸ್ವಾತಂತ್ರ್ಯವೀರರನ್ನು ಅವಮಾನಿಸಲು ಎಷ್ಟು ಕೀಳು ಮಟ್ಟಕ್ಕೆ ಹೋಗಬಹುದು ಎಂಬುದು ಇದರಿಂದ ಗಮನಕ್ಕೆ ಬರುತ್ತದೆ. ಸಾವರ್ಕರ್ ಮಾತ್ರವಲ್ಲದೇ ಯಾವುದೇ ರಾಷ್ಟ್ರಪುರುಷರು ಹಾಗೂ ಕ್ರಾಂತಿಕಾರರ ಅವಮಾನವು ಯಾರಿಂದಲೂ ಆಗದಿರಲಿ. ಅದಕ್ಕಾಗಿ ಕೇಂದ್ರ ಸರ್ಕಾರವು ಇದರ ಬಗ್ಗೆ ಕೂಡಲೇ ಕಾನೂನನ್ನು ರೂಪಿಸುವ ಅವಶ್ಯಕತೆ ಇದೆ ಎಂದು ಹಿಂದೂ ಜನಜಾಗೃತಿ ಸಮಿತಿ ಮನವಿ ಮಾಡಿದೆ.

    ಕಾಂಗ್ರೆಸ್ಸಿನ ಶಿಬಿರದಲ್ಲಿ ದೇಶದ ಕ್ರಾಂತಿಕಾರರು ಸಲಿಂಗ ಸಂಬಂಧವನ್ನು ಇಟ್ಟುಕೊಳ್ಳುವ, ಮಸೀದಿಯ ಮೇಲೆ ಕಲ್ಲೆಸೆಯುವ, ಅದೇ ರೀತಿ ಅಲ್ಪಸಂಖ್ಯಾತ ಮಹಿಳೆಯರ ಬಲಾತ್ಕಾರ ಮಾಡುವವರಿದ್ದರು ಎಂದು ಹೇಳುವ ಅತ್ಯಂತ ಕೀಳುಮಟ್ಟದ ಪುಸ್ತಕವನ್ನು ವಿತರಿಸಿದ್ದಾರೆ. ಇದನ್ನ ಕೂಡಲೇ ನಿಷೇಧಿಸಿ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

  • ಮಂಗ್ಳೂರು ಗೋಲಿಬಾರ್ ರಾಜ್ಯ ಸರ್ಕಾರದ ಪ್ರಾಯೋಜಿತ ಕೃತ್ಯ: ಡಿವೈಎಫ್‍ಐ ರಾಷ್ಟ್ರೀಯ ಅಧ್ಯಕ್ಷ

    ಮಂಗ್ಳೂರು ಗೋಲಿಬಾರ್ ರಾಜ್ಯ ಸರ್ಕಾರದ ಪ್ರಾಯೋಜಿತ ಕೃತ್ಯ: ಡಿವೈಎಫ್‍ಐ ರಾಷ್ಟ್ರೀಯ ಅಧ್ಯಕ್ಷ

    ಮಂಗಳೂರು: ಪೌರತ್ವ ಮಸೂದೆ ಜಾರಿಯ ವಿರುದ್ಧ ಡಿ. 19ರಂದು ಮಂಗಳೂರಿನಲ್ಲಿ ನಡೆದ ಗೊಲೀಬಾರ್ ರಾಜ್ಯದ ಬಿಜೆಪಿ ಸರ್ಕಾರದ ಪ್ರಾಯೋಜಿತ ಹತ್ಯೆ, ಪೊಲೀಸರಿಗೆ ರಾಜ್ಯ ಸರ್ಕಾರ ಕುಮ್ಮಕ್ಕು ನೀಡಿ ಅಮಾಯಕ ಪ್ರತಿಭಟನಾಕಾರರನ್ನು ಹತ್ಯೆ ಮಾಡಿಸಿದೆ ಎಂದು ಡಿವೈಎಫ್‍ಐನ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್ ರಿಯಾಝ್ ಆರೋಪಿಸಿದ್ದಾರೆ.

    ಮಂಗಳೂರಿಗೆ ಆಗಮಿಸಿದ ಡಿವೈಎಫ್‍ಐನ ರಾಷ್ಟ್ರೀಯ ನಿಯೋಗ, ಗೊಲೀಬಾರ್ ನಡೆದ ಸ್ಥಳಕ್ಕೆ ತೆರಳಿ ಪರಿಸೀಲನೆ ನಡೆಸಿತು. ಬಳಿಕ ಗೊಲೀಬಾರ್ ನಲ್ಲಿ ಮೃತಪಟ್ಟ ಜಲೀಲ್ ಕಂದುಕ ಹಾಗೂ ನೌಶೀನ್ ಕುದ್ರೋಳಿಯವರ ಮನೆಗೆ ಭೇಟಿ ನೀಡಿ ಮೃತರ ಕುಟುಂಬಿಕರಿಗೆ ಸಾಂತ್ವನ ಹೇಳಿದರು.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಹಮ್ಮದ್ ರಿಯಾಝ್, ಪೊಲೀಸ್ ಗೊಲೀಬಾರ್ ಗೆ ಬಲಿಯಾದವರು ಅಮಾಯಕರು. ಮಂಗಳೂರಿನ ಪೊಲೀಸ್ ಆಯುಕ್ತರು ಆರ್‍ಎಸ್‍ಎಸ್ ಹಾಗೂ ಬಿಜೆಪಿಯವರೊಂದಿಗೆ ಸಂಪರ್ಕದಲ್ಲಿದ್ದು, ರಾಜ್ಯ ಸರ್ಕಾರದ ಪ್ರಾಯೋಜಿತ ಹತ್ಯೆಯ ಏಜೆಂಟರಾಗಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

    ಪೊಲೀಸರು ಘಟನೆಯ ಎಫ್‍ಐಆರ್ ನಲ್ಲಿ ಅಪರಿಚಿತ ಮುಸ್ಲಿಂ ಯುವಕರು ಎಂದು ದಾಖಲಿಸಿಕೊಂಡಿರೋದು ದೇಶದ ಬೇರೆಲ್ಲೂ ಇಲ್ಲ. ಧರ್ಮದ ಆಧಾರದಲ್ಲಿ ಪೊಲೀಸರು ಹಾಗೂ ರಾಜ್ಯ ಸರ್ಕಾರ ಯುವ ಶಕ್ತಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿದೆ. ಪೊಲೀಸರು ನಡೆಸಿದ ಗೊಲೀಬಾರ್ ಪ್ರಕರಣವನ್ನು ಸಿಓಡಿಗೆ ನೀಡಿದ್ದು ಸರಿಯಲ್ಲ. ಇದರಿಂದ ನ್ಯಾಯ ಸಿಗದು. ಹೀಗಾಗಿ ನ್ಯಾಯಾಂಗ ತನಿಖೆ ಆಗಬೇಕೆಂದರು.

    ಗೊಲೀಬಾರ್ ನಲ್ಲಿ ಮೃತರಾದ ಇಬ್ಬರಿಗೂ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಅಮಾಯಕರ ಮೇಲಿನ ಪ್ರಕರಣವನ್ನು ಕೈ ಬಿಡಬೇಕೆಂದು ಎಂದು ಇದೇ ವೇಳೆ ಆಗ್ರಹಿಸಿದರು.

    ಡಿವೈಎಫ್‍ಐ ರಾಷ್ಟ್ರೀಯ ನಿಯೋಗದಲ್ಲಿ ಡಿವೈಎಫ್‍ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಕೇರಳ ರಾಜ್ಯಾಧ್ಯಕ್ಷ ಎ.ಸತೀಶ್, ಕಾರ್ಯದರ್ಶಿ ಎ.ಎ.ರಹೀಂ,ಕೇಂದ್ರ ಸಮಿತಿಯ ಸದಸ್ಯರಾದ ಎಸ್.ಕೆ.ಸಾಜಿಶ್, ಯು.ಕೆ.ಜ್ಞಾನೇಶ್ ಕುಮಾರ್ ಹಾಗೂ ಸ್ಥಳೀಯ ನಾಯಕರು ಜೊತೆಗಿದ್ದರು.

  • ರಾಮನಗರಕ್ಕೆ ‘ನವಬೆಂಗಳೂರು’ ಎಂದು ಹೆಸರಿಡಲು ಸರ್ಕಾರ ಚಿಂತನೆ

    ರಾಮನಗರಕ್ಕೆ ‘ನವಬೆಂಗಳೂರು’ ಎಂದು ಹೆಸರಿಡಲು ಸರ್ಕಾರ ಚಿಂತನೆ

    – ಹೂಡಿಕೆದಾರರನ್ನ ರಾಮನಗರದತ್ತ ಸೆಳೆಯಲು ಬಿಜೆಪಿ ಪ್ಲ್ಯಾನ್
    – ಮರುನಾಮಕರಣದ ಬಗ್ಗೆ ಬಿಜೆಪಿ ನಾಯಕರಿಂದ ಸಿಎಂ ಬಳಿ ಪ್ರಸ್ತಾಪ

    ರಾಮನಗರ: ರೇಷ್ಮೆನಗರಿ ರಾಮನಗರ ಜಿಲ್ಲೆಯನ್ನು ಇದೀಗ ನವ ಬೆಂಗಳೂರು ಎಂದು ಮರುನಾಮಕರಣ ಮಾಡುವುದಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಸದ್ದಿಲ್ಲದೇ ಈ ಚರ್ಚೆ ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಂಗಳಕ್ಕೆ ಕಾಲಿಟ್ಟಿದ್ದು, ಪ್ರಾರಂಭಿಕ ಹಂತದಲ್ಲಿ ಚರ್ಚೆಯನ್ನ ನಡೆಸಲಾಗಿದೆ.

    ಮರುನಾಮಕರಣ ವಿಚಾರವಾಗಿ ಸಿಎಂ ಯಡಿಯೂರಪ್ಪ ಅವರ ಬಳಿ ಬಿಜೆಪಿ ನಾಯಕರೇ ಇಂತಹದೊಂದು ಪ್ರಸ್ತಾಪನ್ನಿಟ್ಟಿದ್ದಾರೆ. ರಾಮನಗರದ ಸಮಗ್ರ ಅಭಿವೃದ್ಧಿಯ ಜೊತೆಗೆ ಐಟಿ-ಬಿಟಿ ಹಾಗೂ ಹೂಡಿಕೆದಾರರನ್ನು ಜಿಲ್ಲೆಯತ್ತ ಸೆಳೆಯುವುದರ ಮೂಲಕ ಇಂಡಸ್ಟ್ರಿಯಲ್ ಹಬ್ ಸೃಷ್ಟಿಸುವುದು ಮರುನಾಮಕರಣದ ಉದ್ದೇಶ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ರಾಮನಗರ ಜಿಲ್ಲೆ ಇದೀಗ ಮರುನಾಮಕರಣವಾಗಲಿದೆ ಎನ್ನುವ ಚರ್ಚೆ ಗುಸುಗುಸು ಇದೀಗ ಜಿಲ್ಲೆ ಅಲ್ಲದೇ ರಾಜ್ಯ ಸರ್ಕಾರದ ಮಟ್ಟದಲ್ಲೂ ಹರಿದಾಡುತ್ತಿದೆ. ಅಂದಹಾಗೇ ಸಿಲಿಕಾನ್ ಸಿಟಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ರಾಮನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಇಂಥದೊಂದು ಚರ್ಚೆಗೆ ಕಾರಣವಾಗಿದೆ. ಮರುನಾಮಕರಣದ ವಿಚಾರ ಇದೀಗ ಸರ್ಕಾರದ ಮಟ್ಟದಲ್ಲಿ ಪ್ರಾರಂಭಿಕ ಹಂತದಲ್ಲಿದೆ. ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಬಳಿ ಕೆಲವು ಬಿಜೆಪಿ ಮುಖಂಡರು ಪ್ರಸ್ತಾಪ ಮಾಡಿದ್ದಾರೆ.

    ನವ ದೆಹಲಿ, ನವ ಮುಂಬೈ ರೀತಿ ನವ ಬೆಂಗಳೂರು ಸೃಷ್ಟಿಸುವುದು, ಆ ಮೂಲಕ ಬೆಂಗಳೂರಿನ ಮೇಲಿರುವ ಭಾರವನ್ನ ಇಳಿಸುವುದು ಮುಖ್ಯ ಉದ್ದೇಶವಾಗಿದೆ. ಇತ್ತ ಬಿಜೆಪಿ ಮುಖಂಡರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದರೂ ಸದ್ಯಕ್ಕೆ ಪ್ರಾರಂಭಿಕ ಹಂತದಲ್ಲೇ ಚರ್ಚೆಯಾಗುತ್ತಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ರಾಮನಗರ ಹೆಸರಿನ ವಿಚಾರವಾಗಿ ಕಳೆದ ಡಿಸೆಂಬರ್ 25ರಂದು ಮಾತನಾಡಿದ್ದರು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆ ಮಾಡಿ ಒಂದು ತಪ್ಪು ಮಾಡಿಬಿಟ್ಟರು. ಅದು ರಾಮನಗರ ಜಿಲ್ಲೆಯನ್ನಾಗಿ ಮಾಡಿದ್ದು ತಪ್ಪಲ್ಲ. ಆದರೆ ರಾಮನಗರ ಎಂದು ಹೆಸರಿಟ್ಟಿದ್ದು ತಪ್ಪು. ಬೆಂಗಳೂರು ದಕ್ಷಿಣ ಅಂತ ಹೆಸರಿಡಬೇಕಿತ್ತು. ನಾವು ಬೆಂಗಳೂರಿನವರೇ ಬೆಂಗಳೂರು ಗ್ರಾಮಾಂತರದಲ್ಲಿದ್ದವರು. ಬೆಂಗಳೂರು ದಕ್ಷಿಣ ಅಂತ ಹೆಸರಿಟ್ಟಿದ್ದರೆ ರೈತರ ಭೂಮಿಯ ಬೆಲೆಯೂ ಸಹ ಹೆಚ್ಚಾಗುತ್ತಿತ್ತು ಎಂದು ಹೇಳಿದ್ದರು.

    ಅಂದಹಾಗೇ ಸಿಲಿಕಾನ್ ಸಿಟಿ ಬೆಂಗಳೂರು ದಿನೇ ದಿನೇ ಬೆಳೆಯುತ್ತಿದ್ದು, ಹೂಡಿಕೆದಾರರಿಗೆ ಜಾಗವೇ ಸಿಗದಂತಾಗುತ್ತಿದೆ. ಹೂಡಿಕೆಗೆ ಮುಂದಾದರೂ ಜಾಗ ಸಿಗದೇ ಹೂಡಿಕೆದಾರರು ಬೇರೆಡೆ ಮುಖ ಮಾಡುವಂತಾಗಿದೆ. ಇತ್ತ ರಾಮನಗರ ಅಂದ್ರೆ ಹೂಡಿಕೆದಾರರಲ್ಲಿ ಬೇರೆ ಜಿಲ್ಲೆ ಎಂಬ ಮನೋಭಾವವಿದ್ದು, ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ರಾಮನಗರವನ್ನ ನವ ಬೆಂಗಳೂರು ಅಂತ ಮರುನಾಮಕರಣ ಮಾಡಿದರೆ ಬೆಂಗಳೂರು ಮಾದರಿಯಲ್ಲೇ ಐಟಿ-ಬಿಟಿ ಹಾಗೂ ಇಂಡಸ್ಟ್ರಿಯಲ್ ಹಬ್ ಸೃಷ್ಟಿಯಾಗಲಿದೆ. ವಿದೇಶಗಳಿಂದ ಕೋಟ್ಯಾಂತರ ರೂಪಾಯಿಗಳ ಹೂಡಿಕೆಯಾಗಲಿದೆ. ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಲಿದೆ. ಜೊತೆಗೆ ರೈತರ ಭೂಮಿಗೆ ಚಿನ್ನದ ಬೆಲೆ ಕೂಡ ಸಿಗುವುದಲ್ಲದೇ ಪ್ರವಾಸೋದ್ಯಮ ಅಭಿವೃದ್ದಿಯಾಗಲಿದೆ. ಹೀಗಾಗಿ ರಾಮನಗರ ಜಿಲ್ಲೆಗೆ ನವ ಬೆಂಗಳೂರು ಎಂದು ಮರುನಾಮಕರಣ ಮಾಡಲು ಚಿಂತನೆಗಳು ಜೋರಾಗಿಯೇ ಚರ್ಚೆಯಾಗುತ್ತಿದೆ.

    ರಾಮನಗರ ಸೇರಿದಂತೆ ಐದು ತಾಲೂಕುಗಳನ್ನು ನವ ಬೆಂಗಳೂರಿಗೆ ಸೇರಿಸಲು ಚಿಂತನೆ ನಡೆಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ಹೊಸಕೋಟೆ ತಾಲೂಕುಗಳನ್ನು ಸೇರಿಸಿಕೊಳ್ಳಬೇಕೋ ಬೇಡವೋ ಎನ್ನುವ ಬಗ್ಗೆ ಚರ್ಚೆಯಾಗುತ್ತಿದೆ.

  • ಪುಟ್ಟ ಕಂದಮ್ಮಗಳೊಂದಿಗೆ ಆಶಾ ಕಾರ್ಯಕರ್ತೆಯರ ಬದುಕು ಬೀದಿಯಲ್ಲಿ!

    ಪುಟ್ಟ ಕಂದಮ್ಮಗಳೊಂದಿಗೆ ಆಶಾ ಕಾರ್ಯಕರ್ತೆಯರ ಬದುಕು ಬೀದಿಯಲ್ಲಿ!

    ಬೆಂಗಳೂರು: ಆರೋಗ್ಯ ಇಲಾಖೆಯ ಆಧಾರಸ್ತಂಭ ಆಶಾ ಕಾರ್ಯಕರ್ತೆಯರು ಇಂದು ಪುಟಾಣಿ ಕಂದಮ್ಮಗಳನ್ನು ಮಡಿಲಲ್ಲಿ ಹಾಕಿಕೊಂಡು ಬೀದಿಯಲ್ಲಿ ಪರದಾಡುವಂತಾಯ್ತು. ವೇತನ ಪರಿಷ್ಕರಣೆ ಸೇರಿದಂತೆ ನಾನಾ ಬೇಡಿಕೆ ಮುಂದಿಟ್ಟು ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಕಿಚ್ಚು ಹೆಚ್ಚಾಗಿದೆ.

    ದೂರದೂರಿನಿಂದ ಬಂದಿರುವ ಆಶಾ ಕಾರ್ಯಕರ್ತೆಯರು ಪುಟಾಣಿ ಕಂದಮ್ಮಗಳನ್ನು ಕರೆದುಕೊಂಡು ಬಂದು ಪ್ರತಿಭಟನೆ ಮಾಡಿದರು. ಮಡಿಲಲ್ಲಿ ಕಂದಮ್ಮಗಳನ್ನು ಇಟ್ಟಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕನಿಷ್ಟ ವೇತನ, ದುಡಿದ ದುಡ್ಡನ್ನು ಕೊಡೋದಕ್ಕೆ ಆಗದಷ್ಟು ರಾಜ್ಯ ಹಾಗೂ ಕೇಂದ್ರ ಸರ್ಕಾರ ಬರಗೆಟ್ಟಿದೆಯೇ? ಮೋದಿ ಬೆಂಗಳೂರಿನಲ್ಲಿ ಇದ್ದಾರೆ. ನಮ್ಮ ಬೇಡಿಕೆ ಅವರಿಗೆ ತಲುಪಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬೆಳ್ಳಂಬೆಳಗ್ಗೆ ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಕೆ.ಆರ್ ಸರ್ಕಲ್ ಮಾರ್ಗವಾಗಿ ತೆರಳುವವರಿಗೆ ಟ್ರಾಫಿಕ್ ಬಿಸಿ ಇಂದು ಕೊಂಚ ಜೋರಾಗಿಯೇ ತಟ್ಟಿದೆ. ಇಂದು ಎಲ್ಲೆಲ್ಲೂ ಗುಲಾಬಿ ರಂಗಿನ ಸೀರೆ ಧರಿಸಿ ಬಂದ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ. ಮಾಸಿಕ ವೇತನ 12 ಸಾವಿರ ರೂಪಾಯಿಗೆ ಆಗ್ರಹಿಸಿ ಹಾಗೂ ಹದಿನೈದು ತಿಂಗಳಿಂದ ಪ್ರೋತ್ಸಾಹ ಧನ ಬಾಕಿ ಬಿಡುಗಡೆಗೆ ಆಗ್ರಹಿಸಿ ರಾಜ್ಯಾದ್ಯಂತ ಇಂದು ಆಶಾ ಕಾರ್ಯಕರ್ತೆಯರು ಬೀದಿಗಿಳಿದಿದ್ದರು.

    ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್‍ವರೆಗೆ ಕಾಲ್ನಡಿಗೆಯಲ್ಲಿಯೇ ಸುಮಾರು ಹತ್ತು ಸಾವಿರ ಮಂದಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಇದರಿಂದ ಬೆಂಗಳೂರು ಟ್ರಾಫಿಕ್ ಜಾಮ್‍ಗೆ ಸಿಲುಕಿ ಹೈರಾಣಾಯ್ತು.

    ನೃಪತುಂಗ ರೋಡ್, ಆನಂದ್ ರಾವ್ ಸರ್ಕಲ್, ಶೇಷಾದ್ರಿಪುರಂ ರಸ್ತೆ, ಅರಮನೆ ಮೈದಾನದ ಮುಂಭಾಗದ ರಸ್ತೆ, ಕೆ.ಆರ್ ಸರ್ಕಲ್‍ನಲ್ಲಿ ವಾಹನ ಸವಾರರು ಭರ್ತಿ ಎರಡು ಮೂರು ಗಂಟೆಗಳ ಕಾಲ ಟ್ರಾಫಿಕ್‍ನಲ್ಲಿ ಸಿಲುಕಿಕೊಂಡರು. ಈ ಮಧ್ಯೆ ಅಂಬುಲೆನ್ಸ್ ಕೂಡ ಪರದಾಟ ಪಡುವಂತಾಯ್ತು.

    ಆಶಾ ಕಾರ್ಯಕರ್ತೆಯರು ಆಹೋರಾತ್ರಿ ಧರಣಿಗೆ ನಿರ್ಧರಿಸಿದ್ದು, ಇಡೀ ಬೆಂಗಳೂರು ಟ್ರಾಫಿಕ್ ಬಿಸಿ ಅನುಭವಿಸಿದರೂ ಸರ್ಕಾರ ಮಾತ್ರ ತಲೆಕೆಡಿಸಿಕೊಳ್ಳದೇ ಕನಿಷ್ಠ ಅಹವಾಲನ್ನು ಸ್ವೀಕರಿಸಲು ಕೂಡ ಪ್ರತಿಭಟನಾ ಸ್ಥಳಕ್ಕೆ ಬರಲಿಲ್ಲ. ರಾತ್ರಿ ಹಾಗೂ ನಾಳೆ ಬೆಳಗ್ಗೆ ಫ್ರೀಡಂ ಪಾರ್ಕ್ ಮುಂಭಾಗದ ರಸ್ತೆಯಲ್ಲಿ ಆಶಾ ಕಾರ್ಯಕರ್ತೆಯರು ವಾಸ್ತವ್ಯ ಮಾಡೋದರಿಂದ ಇನ್ನಷ್ಟು ಟ್ರಾಫಿಕ್ ಬಿಸಿ ವಾಹನ ಸವಾರರಿಗೆ ತಟ್ಟಲಿದೆ.

  • ವರಕವಿ ದ.ರಾ.ಬೇಂದ್ರೆ ಪ್ರಶಸ್ತಿ ಮೊತ್ತ ಕಡಿತ – ಸಾಹಿತಿಗಳ ಆಕ್ರೋಶ

    ವರಕವಿ ದ.ರಾ.ಬೇಂದ್ರೆ ಪ್ರಶಸ್ತಿ ಮೊತ್ತ ಕಡಿತ – ಸಾಹಿತಿಗಳ ಆಕ್ರೋಶ

    ಧಾರವಾಡ: ವರಕವಿ ದ.ರಾ. ಬೇಂದ್ರೆ ಅವರನ್ನು ಯುಗದ ಕವಿ, ಜಗದ ಕವಿ ಎಂದು ಕರೆಯಲಾಗುತ್ತೆ. ಇದೇ ಕಾರಣಕ್ಕೆ ಬೇಂದ್ರೆಯವರ ಕವನಗಳು ದೇಶದ ಪ್ರಧಾನಿಯ ನಾಲಿಗೆಯ ಮೇಲೂ ನಲಿದಾಡಿದೆ. ಆದರೆ ಬೇಂದ್ರೆಯವರ ಹೆಸರಿನಲ್ಲಿ ಕೊಡುವ ಪ್ರಶಸ್ತಿಯ ಮೊತ್ತವನ್ನು ಕಡಿತ ಗೊಳಿಸಿ ರಾಜ್ಯ ಸರ್ಕಾರ ಆದೇಶ ನೀಡಿದೆ.

    ಈ ಹಿಂದೆ ಬೇಂದ್ರೆ ಅವರ ಪ್ರಶಸ್ತಿಗೆ 1 ಲಕ್ಷ ರೂ. ಇದ್ದ ಮೊತ್ತವನ್ನು ಏಕಾಏಕಿಯಾಗಿ 10 ಸಾವಿರಕ್ಕೆ ಇಳಿಸಲಾಗಿದೆ. ಸರ್ಕಾರದ ನಡೆ ಸಾಹಿತ್ಯ ವಲಯದ ಆಕ್ರೋಶಕ್ಕೆ ಕಾರಣವಾಗಿದೆ.

    ಕುವೆಂಪು ಮತ್ತು ಬೇಂದ್ರೆ ಕನ್ನಡ ಸಾಹಿತ್ಯದ ಎರಡು ಕಣ್ಣುಗಳಿದ್ದಂತೆ. ಆದರೆ ಈಗಿನ ರಾಜ್ಯ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವ ವರ್ತನೆ ತೋರುತ್ತಿದ್ದು, ಇದರ ಪರಿಣಾಮ ಧಾರವಾಡದ ಸಾಧನಕೆರೆಯಲ್ಲಿರುವ ದ.ರಾ.ಬೇಂದ್ರೆ ಭವನಕ್ಕೆ ಸುಣ್ಣ ಬಳಿಯೋಕು ಹಣ ಇಲ್ಲದಂತಾಗಿದೆ.

    ಇದೇ ಜ.31ಕ್ಕೆ ಬೇಂದ್ರೆಯವರ ಜನ್ಮದಿನ ಇದೆ. ಈ ವೇಳೆಗಾಗಲೇ 31ರಂದು ಬೇಂದ್ರೆಯವರ ಹೆಸರಿನಲ್ಲಿ ನೀಡಲಾಗುವ ‘ಅಂಬಿಕಾತನಯದತ್ತ ಪ್ರಶಸ್ತಿ’ ಪ್ರಕಟಿಸಬೇಕಾಗಿತ್ತು. ಆದರೆ ಪ್ರಶಸ್ತಿಯ ಮೊತ್ತವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಡಿಮೆ ಮಾಡಿದ್ದು, ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅವರು ಪ್ರಶಸ್ತಿ ಪ್ರಕಟಿಸುವ ವಿಷಯದಲ್ಲಿ ಇಕ್ಕಟ್ಟಿಗೆ ಸಿಲುಕಿಕೊಂಡಂತಾಗಿದೆ. ಮೇಲಾಗಿ ಈ ಟ್ರಸ್ಟಿಗೆ ನೀಡುತ್ತಿದ್ದ ವಾರ್ಷಿಕ 10 ಲಕ್ಷ ರೂಪಾಯಿ ಅನುದಾನವನ್ನು 4 ಲಕ್ಷ ರೂಪಾಯಿಗೆ ಇಳಿಸಿದ್ದಾರೆ.

    ಇಷ್ಟು ದಿನ 10 ಲಕ್ ರೂ. ಹಾಗೂ ಪ್ರಶಸ್ತಿ ಕೊಟ್ಟು, ಈಗ 10 ಸಾವಿರ ರೂಪಾಯಿ ಎಂದಾಕ್ಷಣ ನಮಗೆ ಆಘಾತವಾಗಿದೆ ಎಂದು ಟ್ರಸ್ಟಿನ ಅಧ್ಯಕ್ಷ ಡಿ.ಎಂ.ಹಿರೇಮಠ ಅವರು ಹೇಳಿದ್ದು, ಬೇಂದ್ರೆಯವರು ವಾಸವಿದ್ದ ಸಾಧನಕೆರೆ ಮನೆಯೇ ಈಗ ಮ್ಯೂಸಿಯಂ ಆಗಿದೆ. ಪಕ್ಕದಲ್ಲಿರೋ ಬೇಂದ್ರೆ ಭವನದಲ್ಲಿ ಸಾಹಿತ್ಯ ಭಂಡಾರ, ಗ್ರಂಥಾಲಯ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ಇದೆಲ್ಲ ನಡೆಯೋದಕ್ಕೆ ಸಿಬ್ಬಂದಿಯನ್ನೂ ನೇಮಿಸಿಕೊಂಡಿದ್ದು, ಆ ಸಿಬ್ಬಂದಿ ವೇತನ, ಖರ್ಚು ವೆಚ್ಚ ಸೇರಿ ವರ್ಷಕ್ಕೆ ಆರೂವರೆ ಲಕ್ಷ ಆಗುತ್ತೆ. ಆದರೆ ಈಗ ಸರ್ಕಾರ ವರ್ಷಕ್ಕೆ 4 ಲಕ್ಷ ಮಾತ್ರ ನಿಡುತ್ತೇವೆ ಎಂದು ಹೇಳಿದೆ. ಟ್ರಸ್ಟ್‍ಗೆ ಉಳಿದ ಹಣ ಎಲ್ಲಿಂದ ತರೋದು ಎಂದು ಚಿಂತೆಯಾಗಿದೆ.

    ಬೇಂದ್ರೆಯವರ ಶ್ರಾವಣ ಕವನ ಹಾಗೂ ಕುರುಡು ಕಾಂಚಾಣ ಕುಣಿಯುತ್ತಲಿತ್ತು ಎಂಬ ಕಾವ್ಯವನ್ನೂ ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಈ ಹಿಂದೆ ವಾಚಿಸಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬೇಂದ್ರೆ ನಿವಾಸಕ್ಕೂ ಭೇಟಿ ನೀಡಿದ್ರು. ಆದರೆ ಈಗ ಅವರದೇ ಪಕ್ಷದ ಸರ್ಕಾರವೇ ಈ ರೀತಿ ಮಾಡುವ ಮೂಲಕ ಬೇಂದ್ರೆಯವರ ವ್ಯಕ್ತಿತ್ವಕ್ಕೆ ಅಗೌರವ ತೋರುವ ಕೆಲಸ ಮಾಡುತ್ತಿದ್ದಾರೆ ಎಂದು ಸಾಹಿತಿ ರಾಜಕುಮಾರ ಮಡಿವಾಡರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವರ್ಷದಿಂದ ವರ್ಷಕ್ಕೆ ಸಾಹಿತ್ಯ ಪ್ರಶಸ್ತಿಗಳ ಮೊತ್ತ ಹೆಚ್ಚಿಸುವ ಮೂಲಕ ಆಯಾ ಸಾಹಿತಿ ಘನತೆಗೆ ಗೌರವ ದೊರಕಿಸಿಕೊಡುವ ಕಾರ್ಯ ಇಲ್ಲಿಯವರೆಗೆ ನಡೆಯುತ್ತ ಬಂದಿತ್ತು. ಈಗ ಇರುವ ಮೊತ್ತವನ್ನೇ ಗಣನಿಯವಾಗಿ ಇಳಿಸುವ ಮೂಲಕ ಸಾಹಿತ್ಯಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲ ಎಂಬ ವರ್ತನೆಯನ್ನು ಸರ್ಕಾರ ತೋರುತ್ತಿದೆ. ಇದಕ್ಕೆ ಈಗ ಸರ್ಕಾರ ಏನು ಉತ್ತರ ಕೊಡುತ್ತೆ ಎಂಬುವುದು ಸಾಹಿತಿಗಳ ಪ್ರಶ್ನೆಯಾಗಿದೆ.

  • ರೈತರಿಗೆ ಮೋದಿ ಕೊಡುಗೆ ಶೂನ್ಯವೆಂದು ತಲೆಬೋಳಿಸಿಕೊಂಡ ಅನ್ನದಾತರು

    ರೈತರಿಗೆ ಮೋದಿ ಕೊಡುಗೆ ಶೂನ್ಯವೆಂದು ತಲೆಬೋಳಿಸಿಕೊಂಡ ಅನ್ನದಾತರು

    ಬೆಂಗಳೂರು: ರೈತರಿಗೆ ಮೋದಿ ಕೊಡುಗೆ ಶೂನ್ಯ ಎಂದು ಹೇಳಿಕೊಂಡು ರೈತರು ತಲೆ ಬೋಳಿಸಿಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.

    ರತ್ನ ಭಾರತ ರೈತ ಸಮಾಜ ಸಂಘಟನೆಯ ರಾಜ್ಯಾಧ್ಯಕ್ಷ ಲಕ್ಷ್ಮಣ ನೇತೃತ್ವದಲ್ಲಿ ಬೆಂಗಳೂರು ಹೊರವಲಯ ಕೆ.ಆರ್.ಪುರ ಬಸ್ ನಿಲ್ದಾಣದಲ್ಲಿ ಮೋದಿ ಕರ್ನಾಟಕ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ರೈತರಿಗೆ ಮೋದಿ ಅವರ ಕೊಡುಗೆ ಶೂನ್ಯ ಎಂದು ಹೇಳಿಕೊಂಡು ರೈತರು ತಲೆ ಬೋಳಿಸಿಕೊಳ್ಳುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

    ಇದೆ ವೇಳೆ ಮಾತನಾಡಿದ ಲಕ್ಷ್ಮಣ್, ಮೋದಿ ಇದುವರೆಗೂ ರೈತರಿಗೆ ನೀಡಿದ ಕೊಡುಗೆ ಶೂನ್ಯ. ಅವರು ರೈತರಿಗೆ ಯೋಜನೆಗಳನಷ್ಟೇ ಸೃಷ್ಟಿಸುತ್ತಿದ್ದು, ಯೋಜನೆಗಳು ರೈತರಿಗೆ ತಲುಪಿಸುವ ಕೆಲಸ ಮಾಡುತ್ತಿಲ್ಲ. ಮಹದಾಯಿ ವಿಚಾರದಲ್ಲಿ ಮೋದಿ ಕರ್ನಾಟಕದ ರೈತರನ್ನು ನಿರ್ಲಕ್ಷಿಸಿದ್ದಾರೆ. ಜೊತೆಗೆ ಪ್ರವಾಹದ ವೇಳೆ ರೈತರ ಸಂಕಷ್ಟ ಅಲಿಸಲಿಲ್ಲ. ರೈತರ ಆತ್ಮಹತ್ಯೆ ತಡೆಯುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು.

    ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡುತ್ತೇವೆ ಅಂತ ಹೇಳಿತ್ತು. ಆದರೆ ಇದುವರೆಗೂ ರೈತರ ಸಾಲ ಮನ್ನಾ ಮಾಡಿಲ್ಲ. ಕೂಡಲೇ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

  • ಇದು ಲಜ್ಜೆಗೆಟ್ಟ ಸರ್ಕಾರ, ಪರಿಹಾರ ಹಣವನ್ನು ಪಕ್ಷ ಜಾತಿ ನೋಡಿ ನೀಡಲಾಗುತ್ತಿದೆ: ವಿನಯ್ ಕುಲಕರ್ಣಿ

    ಇದು ಲಜ್ಜೆಗೆಟ್ಟ ಸರ್ಕಾರ, ಪರಿಹಾರ ಹಣವನ್ನು ಪಕ್ಷ ಜಾತಿ ನೋಡಿ ನೀಡಲಾಗುತ್ತಿದೆ: ವಿನಯ್ ಕುಲಕರ್ಣಿ

    ಧಾರವಾಡ: ಇದು ಲಜ್ಜೆಗೆಟ್ಟ ಸರ್ಕಾರ, ಪರಿಹಾರ ಹಣವನ್ನು ಪಕ್ಷ ಜಾತಿ ನೋಡಿ ನೀಡಲಾಗುತ್ತಿದೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ವಾಗ್ದಾಳಿ ನಡೆಸಿದ್ದಾರೆ.

    ಧಾರವಾಡದ ಜಿಲ್ಲಾ ಪಂಚಾಯ್ತಿ ಸದಸ್ಯರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ವಿನಯ್ ಕುಲಕರ್ಣಿ, ಸರ್ಕಾರದ ಮೇಲೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಧಿಕಾರಿಗಳ ಮೇಲೆ ಸರ್ಕಾರದ ಹಿಡಿತ ಇರಬೇಕು. ಮನೆಯಲ್ಲಿ ಕುಳಿತು ಅಧಿಕಾರ ನಡೆಸಲು ಆಗುವುದಿಲ್ಲ. ಕಷ್ಟದಲ್ಲಿ ಇರುವವರ ಸ್ಥಳಕ್ಕೆ ಭೇಟಿ ನೀಡಿದರೆ ಜನರ ಕಷ್ಟ ಅರ್ಥವಾಗುತ್ತೆ. ಇವರಿಗೆ ಯಾವ ಕಲ್ಪನೆ ಇಲ್ಲ ಎಂದು ಸರ್ಕಾರದ ಮೇಲೆ ಕಿಡಿಕಾರಿದರು.

    ಪ್ರವಾಹದಲ್ಲಿ ಮನೆ ಕಳೆದುಕೊಂಡವರು ಪರಿಸ್ಥಿತಿ ಕೆಟ್ಟಿದೆ. ಇದು ಲಜ್ಜೆಗೆಟ್ಟ ಸರ್ಕಾರ ಇವರಿಗೆ ನಾಚಿಕೆಯಾಗಬೇಕು. ಬಡವರು ಬಗ್ಗೆ ಕಳಕಳಿ ಇಲ್ಲ. ರೈತರಿಗೆ ಪರಿಹಾರ ಸಿಕ್ಕಿಲ್ಲ. ಮಳೆಯಿಂದ ಹಾನಿಯಾದ ಪರಿಹಾರ ತಮ್ಮ ಪಕ್ಷದ ಕಾರ್ಯಕರ್ತರಿಗೆ ನೀಡಲಾಗುತ್ತಿದೆ ಎಂದು ಹೇಳಿದ ಅವರು, ಬೇಕಿದ್ದರೆ ಹಳ್ಳಿಗಳಿಗೆ ನೀವೇ ಹೋಗಿ ಮಾತನಾಡಿ ನೋಡಿ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.

    ನಾವು ಯಾವ ಪಕ್ಷ ಜಾತಿ ನೋಡಿಲ್ಲ. ಆದರೆ ಇವರು ಮನುಷ್ಯತ್ವ ಇಲ್ಲದವರು ಜಾತಿ ಪಕ್ಷ ನೋಡಿ ಪರಿಹಾರ ಕೊಡುತ್ತಿದ್ದಾರೆ. ನಾನು ಕೂಡಾ ನಿಮಗೆ ಹೊರಗೆ ಕರೆದುಕೊಂಡು ಹೋಗಿ ತೋರಿಸುತ್ತೇನೆ. ಮಾಧ್ಯಮ ಮಿತ್ರರಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ ಜನರ ಪರಿಸ್ಥಿತಿ ತೋರಿಸಿ. ಅದನ್ನು ನೋಡಿಯಾದರೂ ಪ್ರಚಾರ ಪ್ರಿಯರು ಹೊರ ಬಂದು ನೋಡ್ತಾರೆ ಎಂದು ಸರ್ಕಾರದ ಮೇಲೆ ಹರಿಹಾಯ್ದರು.

    ಜಿಲ್ಲಾ ಉಸ್ತುವಾರಿ ಸಚಿವರು ಈಗಲಾದರೂ ಅವಘಡ ಆದ ಸ್ಥಳಕ್ಕೆ ಭೇಟಿ ನೀಡಲಿ. ನೀವು ಸಿಎಂ ಆಗಿದ್ದವರು, ಅಧಿಕಾರಿಗಳಿಗೆ ಹಿಡಿತದಲ್ಲಿ ಇಟ್ಟುಕೊಳ್ಳಿ ಎಂದು ಹೇಳಿದ ವಿನಯ ಕುಲಕರ್ಣಿ, ಅಧಿಕಾರ ಇದ್ದಂತ ಸಮಯದಲ್ಲಿ ಬಡವರಿಗೆ ಸಹಾಯ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶಟ್ಟರ್‍ಗೆ ಕಿವಿಮಾತು ಹೇಳಿದರು.