ಬೆಂಗಳೂರು: ಕೊರೊನಾ ಹರಡುವಿಕೆ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆ ಮಾಡಿದೆ.
ಕೊರೊನಾ ವೈರಸ್ ದೇಶದಲ್ಲಿ ಜಾಸ್ತಿಯಾದ ಕಾರಣ ಈ ಮೊದಲೇ ಶಾಲೆಗಳಿಗೆ ಏಪ್ರಿಲ್ 11ರ ವರೆಗೆ ರಜೆ ಘೋಷಣೆ ಮಾಡಲಾಗಿತ್ತು. ಈಗ ಕೊರೊನಾ ವೈರಸ್ ಹರಡುವಿಕೆ ಹೆಚ್ಚಳವಾದ ಕಾರಣ ಏಪ್ರಿಲ್ 12ರಿಂದ ರಾಜ್ಯದ ಎಲ್ಲಾ ಶಾಲೆಗಳಿಗೆ ಬೇಸಿಗೆ ರಜೆಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ಇದರ ಜೊತೆಗೆ ಸುತ್ತೋಲೆಯಲ್ಲಿ ಶಿಕ್ಷಕರಿಗೆ ಕೆಲ ನಿಯಮಗಳನ್ನು ಸೂಚಿಸಿರುವ ಸರ್ಕಾರ, ಶಿಕ್ಷಕರು ಕೇಂದ್ರ ಸ್ಥಾನ ಬಿಡುವಂತಿಲ್ಲ ಹಾಗೂ ಅವರ ತಮ್ಮ ಮೊಬೈಲ್ ನಂಬರ್ ಗಳನ್ನ ಬಿಇಓಗಳಿಗೆ ನೀಡಬೇಕು. ಅಗತ್ಯ ತುರ್ತು ಸೇವೆ ಇದ್ದರೆ ಕರೆ ಮಾಡಿದಾಗ ಬಂದು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸರ್ಕಾರ ಆದೇಶ ನೀಡಿದೆ.
ಬೆಂಗಳೂರು: ಕೊರೊನಾ ಕುರಿತು ಇಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ವಪಕ್ಷಣಗಳ ಸಭೆ ನಡೆದಿದೆ. ಈ ಸಭೆಯಲ್ಲಿ ಕೊರೊನಾ ವಿರುದ್ಧ ರಾಜ್ಯ ಹೋರಾಡಲು ಬೇಕಾದ ಕೆಲ ನಿರ್ಣಯಗಳನ್ನು ತಗೆದುಕೊಳ್ಳಲಾಗಿದೆ.
ಸಭೆ ಬಳಿಕ ಟ್ವೀಟ್ ಮಾಡಿರುವ ಯಡಿಯೂರಪ್ಪ ಅವರು, ಸರ್ವ ಪಕ್ಷಗಳ ಸಭೆಯಲ್ಲಿ ನಾಯಕರು ಉಪಯುಕ್ತ ಸಲಹೆಗಳನ್ನು ನೀಡಿರುತ್ತಾರೆ. ಸರ್ಕಾರ ಅವುಗಳನ್ನು ಗಂಭೀರವಾಗಿ ಪರಿಗಣಿಸಿ ಅನುಷ್ಠಾನಕ್ಕೆ ತರಲಿದೆ. ಸರ್ವ ಪಕ್ಷದ ಮುಖಂಡರು ಸರ್ಕಾರದ ಕ್ರಮಗಳಿಗೆ ಒಕ್ಕೊರಲಿನ ಬೆಂಬಲ ವ್ಯಕ್ತಪಡಿಸಿ, ಈ ಸಂಕಷ್ಟದ ಸನ್ನಿವೇಶದಲ್ಲಿ ಸರ್ಕಾರದ ಜೊತೆ ಕೈಜೋಡಿಸುವುದಾಗಿ ಸಹಮತ ವ್ಯಕ್ತಪಡಿಸಿದರು ಎಂದು ತಿಳಿಸಿದ್ದಾರೆ.
ಜೊತೆಗೆ ಸಭೆಯಲ್ಲಿ ನಾಯಕರು ಸಲಹೆ ನೀಡಿದಂತೆ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ನರ್ಸ್‍ಗಳು ಹಾಗೂ ಅರೇ ವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್, ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಾಟಲಿಗಳನ್ನು ಸರಬರಾಜು ಮಾಡಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ರಕ್ಷಣಾ ಸಾಧನಗಳನ್ನು ಒದಗಿಸಲು ಕೂಡಲೇ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ವ ಪಕ್ಷಗಳ ಸಭೆ ನಡೆಯಿತು.
ರಾಜ್ಯದ ಗಡಿಗಳಲ್ಲಿ ಸಿಕ್ಕಿಕೊಂಡಿರುವ ಜನರ ವೈದ್ಯಕೀಯ ತಪಾಸಣೆ ನಡೆಸಿ, ಅವರಿಗೆ ಆಶ್ರಯ ಕಲ್ಪಿಸಲು ವ್ಯವಸ್ಥೆ ಮಾಡಲಾಗುವುದು. ಸೋಂಕಿಗೊಳಗಾಗಿರುವ ಪ್ರಯಾಣಿಕರಿಗೆ ಕ್ವಾರಂಟೈನ್ ವ್ಯವಸ್ಥೆಗೆ ಒಳಪಡಿಸಲು ಹಾಗೂ ಆರೋಗ್ಯವಾಗಿರುವ ಪ್ರಯಾಣಿಕರನ್ನು ಅವರ ಸ್ಥಳಗಳಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಅಗತ್ಯ ಸಂಖ್ಯೆಯಲ್ಲಿ ಟೆಸ್ಟಿಂಗ್ ಕಿಟ್ (ಪರೀಕ್ಷಾ ಸಾಧನಗಳು) ವಿತರಿಸಲಾಗುವುದು ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ರೈತರ ಕೃಷಿ ಉತ್ಪನ್ನಗಳ, ಸಾಗಣೆ, ಮಾರಾಟ ಮತ್ತು ಒಳಕೆದಾರರಿಗೆ ಸೂಕ್ತವಾಗಿ ವಿತರಿಸಲು ವ್ಯವಸ್ಥೆ ಮಾಡಲಾಗುವುದು. ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಇತ್ಯಾದಿಗಳ ವಿತರಣೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಪಡಿತರವನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಸಲಹೆಯನ್ನು ವಿರೋಧ ಪಕ್ಷದ ನಾಯಕರು ನೀಡಿದ್ದು, ಆ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು. ಮುಸ್ಲಿಂ ಬಾಂಧವರ ಜೊತೆ ನಾನು ಸಭೆ ನಡೆಸಿದ್ದು, ಅವರೆಲ್ಲರೂ ತಮ್ಮ ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆಯನ್ನು ನಡೆಸಲು ಒಪ್ಪಿ ಸಹಕರಿಸಿರುತ್ತಾರೆ. ಅವರನ್ನು ಅಭಿನಂದಿಸುತ್ತೇನೆ ಎಂದು ಸಿಎಂ ಸರ್ವ ಪಕ್ಷಗಳ ಸಭೆಯಲ್ಲಿ ತಗೆದುಕೊಂಡ ನಿರ್ಧಾರಗಳನ್ನು ತಿಳಿಸಿದರು.
ಈ ಸಭೆಯಲ್ಲಿ ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ನಾಯಕರಾದ ಹೆಚ್.ಡಿ.ರೇವಣ್ಣ, ಬಸವರಾಜ್ ಹೊರಟ್ಟಿ, ಮಾಜಿ ಸಿಎಂ ಕುಮಾರಸ್ವಾಮಿ, ಸಚಿವರಾದ ಶ್ರೀರಾಮುಲು, ಸುಧಾಕರ್, ಬೊಮ್ಮಾಯಿ, ಲಕ್ಷ್ಮಣ್ ಸವದಿ, ಅಧಿಕಾರಿಗಳು ಉಪಸ್ಥಿತಿರಿದ್ದರು.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆದ ಆರ್‌ಎಸ್ಎಸ್ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಮೂರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಸಿಎಎ ಜಾರಿ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿ, ರಾಮ ಮಂದಿರ ನಿರ್ಮಾಣ ಹಸಿರು ನಿಶಾನೆಗೆ ಆರ್‌ಎಸ್ಎಸ್ ಸಂತಸ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದೆ. ರಾಜಕೀಯ ಪಕ್ಷಗಳು ಸಿಎಎ ಬಗ್ಗೆ ಗೊಂದಲ ಸೃಷ್ಟಿಸುತ್ತಿವೆ. ಆದರೆ ಸಿಎಎ ಜಾರಿಗೆ ತಂದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಆರ್‌ಎಸ್ಎಸ್ ಕಾರ್ಯವಾಹಕ ಸುರೇಶ್ ಭೈಯಾಜೀ ಜೋಷಿ ಹೇಳಿದ್ದಾರೆ.
ಅಂದಹಾಗೆ ಬೆಂಗಳೂರು ಹೊರವಲಯದ ಜನಸೇವಾ ಕೇಂದ್ರದಲ್ಲಿ ಆರ್‌ಎಸ್ಎಸ್ ಅಖಿಲ ಭಾರತ ಪ್ರತಿನಿಧಿ ಸಭೆಯನ್ನು ರದ್ದುಗೊಳಿಸಲಾಗಿತ್ತು. ಕೊರೊನಾ ವೈರಸ್ ನಿಂದ ಹೆಚ್ಚು ಜನ ಸೇರಬಾರದು ಎಂದು ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಪ್ರತಿನಿಧಿ ಸಭೆ ರದ್ದುಗೊಳಿಸಲಾಗಿತ್ತು. ಆದರೆ ಆರ್‌ಎಸ್ಎಸ್ ಕಾರ್ಯಕಾರಿ ಮಂಡಳಿ ಸಭೆ ನಡೆಯಿತು. ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೂರು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದೆ. ಸಿಎಎ ಜಾರಿ, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಗೆ ಸಂತಸ ವ್ಯಕ್ತಪಡಿಸಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವ ಎರಡು ನಿರ್ಣಯಗಳಾದ್ರೆ, ರಾಮನ ಜನ್ಮಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಹಸಿರು ನಿಶಾನೆ ತೀರ್ಪು ಕೊಟ್ಟಿರುವ ಸುಪ್ರೀಂಕೋರ್ಟ್ ತೀರ್ಪನ್ನು ಅಭಿನಂದಿಸಿ ನಿರ್ಣಯ ಕೈಗೊಂಡಿದ್ದಾರೆ.
ಆರ್‌ಎಸ್ಎಸ್ ಕಾರ್ಯಕಾರಿ ಮಂಡಳಿ 3 ನಿರ್ಣಯಗಳು:
* ಭಾರತ ಸಂವಿಧಾನವನ್ನು ಜಮ್ಮು ಕಾಶ್ಮೀರಕ್ಕೆ ವಿಸ್ತರಿಸಿದ್ದು ಮತ್ತು ಅದರ ಪುನಾರಚನೆ ಒಂದು ಶ್ಲಾಘನೀಯ ಹೆಜ್ಜೆ, ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಕೆ
* ರಾಮನ ಜನ್ಮಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ರಾಷ್ಟ್ರೀಯ ಅಭಿಮಾನದ ಸಂಕೇತ, ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂಕೋರ್ಟ್ ಗೆ ಅಭಿನಂದನೆ ಸಲ್ಲಿಕೆ
* ಭಾರತ ಪೌರತ್ವ ತಿದ್ದುಪಡಿ ಕಾಯ್ದೆ 2019, ಭಾರತದ ನೈತಿಕ ಮತ್ತು ಸಾಂವಿಧಾನಿಕ ಬಾಧ್ಯತೆ, ಸಿಎಎ ಜಾರಿಗೆ ತಂದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಕೆ
ಜನಸೇವಾ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌ಎಸ್ಎಸ್ ಕಾರ್ಯವಾಹಕ ಸುರೇಶ್ ಭೈಯಾಜೀ ಜೋಷಿ, ಮೂರು ನಿರ್ಣಯಗಳನ್ನ ಕೈಗೊಂಡಿದ್ದೇವೆ. ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ ಅನ್ನು ಅಭಿನಂದಿಸುತ್ತೇವೆ ಎಂದರು. ಅಲ್ಲದೆ ಸಿಎಎ ವಿಚಾರವಾಗಿ ರಾಜಕೀಯ ಪಕ್ಷಗಳೇ ಗೊಂದಲ ಸೃಷ್ಟಿಸುತ್ತಿವೆ. ಮೂರು ದೇಶಗಳಲ್ಲಿ ದೌರ್ಜನ್ಯಕ್ಕೆ ಒಳಗಾದ ಹಿಂದೂ, ಸಿಖ್, ಪಾರ್ಸಿಗಳಿಗೆ ಪೌರತ್ವದ ಅಗತ್ಯತೆ ಇತ್ತು ಅಂತ ಹೇಳಿದರು. ಅಲ್ಲದೆ ಆರ್‌ಎಸ್ಎಸ್ ನ ತರಬೇತಿ ಕೇಂದ್ರಗಳು, ಅವುಗಳ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ್ರು.
ರಾಮನಗರ: ರಾಜ್ಯ ಸರ್ಕಾರ ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಒಂದು ವಾರ ಕರ್ನಾಟಕ ಸ್ಥಬ್ದಗೊಳಿಸಿರುವುದು ಸುಮ್ಮನೆ ಪ್ರಚಾರಕ್ಕೋಸ್ಕರ ಹೀಗೆ ಮಾಡುವುದು ಸರಿಯಲ್ಲ. ಇಲ್ಲಿಯ ತನಕ ಆಸ್ಪತ್ರೆಯ ವಿಚಾರದಲ್ಲಿ ಮೆಡಿಕಲ್ ಕಾಲೇಜುಗಳ ಚೇರ್‍ಮನ್‍ಗಳ ಸಭೆ ನಡೆಸಿಲ್ಲ. ಏನ್ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ. ಬೇಸಿಕ್ ಕಾಮನ್‌ಸೆನ್ಸ್‌ನಲ್ಲಿ ನಮ್ಮ ರಾಜ್ಯ ಸರ್ಕಾರ ಎಡವಿದೆ ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿಕೆ ಶಿವಕುಮಾರ್ ಕನಕಪುರದಲ್ಲಿ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರ ಕನಕಪುರಕ್ಕೆ ಇಂದು ಭೇಟಿ ನೀಡಿದರು. ಮೊದಲಿಗೆ ಮನೆ ದೇವತೆ ಕೆಂಕೇರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ತಮ್ಮ ನಿವಾಸಕ್ಕೆ ತೆರಳಿ ಸ್ವಾಗತ ಹಾಗೂ ಶುಭಾಶಯ ಕೋರಲು ಬಂದಿದ್ದ ಕಾರ್ಯಕರ್ತರು, ಮುಖಂಡರನ್ನು ಭೇಟಿ ಮಾಡಿದರು.
ಇದೇ ವೇಳೆ ಮಾತನಾಡಿದ ಅವರು ಕೊರೊನಾ ವೈರಸ್ ತಡೆಗಟ್ಟುವ ವಿಚಾರದಲ್ಲಿ ರಾಜ್ಯ ಸರ್ಕಾರ ಮೊದಲು ಮೆಡಿಕಲ್ ಕಾಲೇಜುಗಳ ಚೇರ್‍ಮನ್‍ಗಳ, ಆಸ್ಪತ್ರೆ ಹೆಡ್‍ಗಳನ್ನು ಕರೆದು ಏನ್ ಕೆಲಸ ಮಾಡಬೇಕೋ ಅದನ್ನು ಮಾಡಬೇಕು. ಹೊರಗಡೆಯಿಂದ ಬರುವವರನ್ನು ಹೇಗೆ ನಿಲ್ಲಿಸಬೇಕು. ಅವರನ್ನ ಹೇಗೆ ಚೆಕಫ್ ಮಾಡಬೇಕೋ ಅದನ್ನ ಮಾಡಿ. ಅದನ್ನ ಏನೂ ಮಾಡದೇ ಸುಮ್ಮನೇ ಹಳ್ಳಿಯಲ್ಲಿ ವಾಸ್ತವ್ಯ ಹೂಡುವುದರಿಂದ ಏನು ಪ್ರಯೋಜನವಿಲ್ಲ ಎಂದು ರಾಜ್ಯ ಸರ್ಕಾರ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಆರೋಗ್ಯ ವಿಚಾರದಲ್ಲಿ ಮುಂಜಾಗ್ರತಾ ಕ್ರಮ ಏನೇನು ಬೇಕು ತೆಗೆದುಕೊಳ್ಳಲಿ ಅದಕ್ಕೆ ನಮ್ಮದು ಸಂಪೂರ್ಣ ಸಹಕಾರವಿದೆ. ಆದರೆ ರಾಜ್ಯ, ಕೇಂದ್ರ ಸರ್ಕಾರಗಳು ಜನರಲ್ಲಿ ಆತಂಕ, ಭಯ ಹುಟ್ಟಿಸುವ ಕೆಲಸ ಮಾಡುತ್ತಿವೆ ಇದು ಸರಿಯಲ್ಲ. ದಿನಕ್ಕೆ ನೂರು ಜನರಿಗೆ ಫೋನ್ ಮಾಡಿದರು ಒಂದೊಂದು ನಿಮಿಷ ಕೆಮ್ಮುವುದೇ ಕೇಳುತ್ತೆ. ಕೆಮ್ಮುವುದು ಕೇಳಿ ನಿಮಗೂ ಕೆಮ್ಮು ಜ್ವರ ಬಂದುಬಿಡುತ್ತದೆ. ನನಗೂ ಕೆಮ್ಮು ಜ್ವರ ಬರುತ್ತಿದೆ ಎಂದರು.
ಆರೋಗ್ಯ ಸಚಿವ ಹಾಗೂ ವೈದ್ಯಕೀಯ ಸಚಿವರ ನಡುವೆ ಹೊಂದಾಣಿಕೆಯಿಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರು, ಯಾವ ಆರೋಗ್ಯ ಸಚಿವರೋ, ವೈದ್ಯಕೀಯ ಸಚಿವರೋ ನಾನ್ಯಾಕೆ ಅವರ ಸುದ್ದಿಗೆ ಹೋಗಲಿ. ಸರ್ಕಾರಗಳು ಕೊರೊನಾ ವಿಚಾರವಾಗಿ ಪ್ರತ್ಯೇಕ ಬಜೆಟ್ ಇಡಲಿ ನಷ್ಟವಾಗಿರುವ ಜನರ ಬದುಕಿಗೆ ನೆರವಾಗುವಂತಹ ಕೆಲಸ ಮಾಡಲಿ ಎಂದು ಹೇಳಿದರು.
ಕೊರೊನಾ ಎಫೆಕ್ಟ್ ನಿಂದ ನಮ್ಮಲ್ಲಿ ಕೋಳಿ 20 ರೂಪಾಯಿ ಆದರೂ ಕೇಳುವವರೇ ಇಲ್ಲದಂತಾಗಿದೆ. ಅಲ್ಲದೇ ತರಕಾರಿ 5 ರೂಪಾಯಿಗೆ ಕೊಡುವವರಿಲ್ಲದಂತಾಗಿದೆ. ಸರ್ಕಾರ ಈ ಬಗ್ಗೆ ಪ್ರತ್ಯೇಕ ಬಜೆಟ್ ಮಂಡಿಸಲಿ. ನಷ್ಟವಾಗಿರುವವರ ನೆರವಿಗೆ ಸರ್ಕಾರ ಮುಂದಾಗಬೇಕಿದೆ. ಒಂದು ವಾರ, 15 ದಿನ ಬಂದ್ ಮಾಡಿದ್ದೀರಲ್ಲ. ಬ್ಯಾಂಕ್‍ಗಳಲ್ಲಿ ರೈತರಿಗೆ, ಜನರಿಗೆ ಬಡ್ಡಿ ಕೊಟ್ಟವರೇ, ಅದನ್ನು ಬಂದ್ ಮಾಡಲಿ. ಬಡ್ಡಿ ಮಾತ್ರ ಹಗಲು ರಾತ್ರಿ ಓಡುತ್ತಾನೆ ಇರುತ್ತೆ, ಸಾಲ ತೆಗೆದುಕೊಂಡವರ ಪರಿಸ್ಥಿತಿ ಏನಾಗಬೇಕು. ವ್ಯವಹಾರ ಮಾಡಿದವರ ಬದುಕು ಏನಾಗಬೇಕು. ಅವರ ಬದುಕಿಗೆ ನಾವು ನೆರವಾಗಬೇಕು ಎಂದರು.
ಹಳೇ ಮೈಸೂರು ಭಾಗದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜೊತೆಗಿನ ಸ್ನೇಹದ ಜೊತೆಗೆ ಪಕ್ಷ ಸಂಘಟನೆ ಯಾವ ರೀತಿ ಮಾಡುತ್ತೀರಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಕಾರ್ಯಕರ್ತರನ್ನು ಉಳಿಸಬೇಕಿದೆ ಪಕ್ಷದ ಸಿದ್ಧಾಂತಗಳು ವಿಭಿನ್ನವಾಗಿರುತ್ತೆ. ಅವರವರ ಪಕ್ಷದ ಸಿದ್ಧಾಂತ ಅವರವರು ಪಾಲಿಸುತ್ತಾರೆ. ನಾವು ನಮ್ಮ ಪಕ್ಷದ ಸಿದ್ಧಾಂತ ಪಾಲಿಸುತ್ತಾರೆ. ಅಷ್ಟೇ ಅಲ್ಲದೆ ಈಗ ವಿರೋಧ ಪಕ್ಷದಲ್ಲಿದ್ದೇವೆ. ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ನಾಯಕರಿದ್ದಾರೆ. ನಮಗೆ ಇದು ಒಂದು ಹುದ್ದೆ ಅಲ್ಲ ಒಂದು ಜವಾಬ್ದಾರಿ ಎಂದು ತಿಳಿಸಿದರು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ತೀರ್ಥ ಕ್ಷೇತ್ರಕ್ಕೆ ಮಧ್ಯಪ್ರದೇಶದ ಭೋಪಾಲ್‍ನ ಸಂಸದೆ ಸ್ವಾಧ್ವಿ ಪ್ರಜ್ಞಾ ಸಿಂಗ್ ಅವರು ಭೇಟಿ ನಿಡಿದ್ದಾರೆ.
ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಳ್ಳಲು ಸಾಧ್ವಿ ಪ್ರಜ್ಞಾ ಸಿಂಗ್ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದರು. ಹಿಂದೂ ಸಮಾಜೋತ್ಸವ ಮುಂದೂಡಿದ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯ ಪುತ್ತೂರು ಲಕ್ಷ್ಮಿದೇವಿ ಬೆಟ್ಟದ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.
ಕೊರೊನಾ ವೈರಸ್ ಹರಡದಂತೆ ರಾಜ್ಯ ಸರ್ಕಾರ ಸಾರ್ವಜನಿಕವಾಗಿ ಯಾವುದೇ ಸಭೆ, ಸಮಾರಂಭಗಳನ್ನು ನಡೆಸದಂತೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ನಾಳೆ ವಿಶ್ವ ಹಿಂದೂ ಪರಿಷತ್ ಭಜರಂಗ ದಳದ ವತಿಯಿಂದ ದಕ್ಷಿಣ ಕನ್ನಡದ ವಿಟ್ಲದ ಪಂಚಲಿಂಗೇಶ್ವರ ದೇವರ ರಥದ ಗದ್ದೆಯಲ್ಲಿ ಇಂದು ನಡೆಯಬೇಕಿದ್ದ ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮವನ್ನು ಸಂಘಟಕರು ಮುಂದೂಡಿದ್ದರು. ಆದರೆ ನಿಗದಿಯಂತೆ ಶನಿವಾರವೇ ಮಂಗಳೂರಿಗೆ ಆಗಮಿಸಿರುವ ಸಾಧ್ವಿ ಪ್ರಜ್ಞಾಸಿಂಗ್ ಜಿಲ್ಲೆಯ ಹಲವು ದೇವಸ್ಥಾನಗಳಿವೆ ಹೋಗಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವದರ ಮೂಲಕ ಮಾಜಿ ಸಚಿವ ತನ್ವೀರ್ ಸೇಠ್ ಅವರು ಅಸಮಾಧಾನ ಹೊರಹಾಕಿದ್ದಾರೆ.
ಇತ್ತೀಚೆಗೆ ಅವರ ಮೇಲೆ ನಡೆದ ಹಲ್ಲೆ ವಿಚಾರವಾಗಿ ಗೃಹ ಸಚಿವರಿಗೆ ಪತ್ರ ಬರೆದ ತನ್ವೀರ್ ಸೇಠ್, ನನ್ನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನ ಮಾತ್ರ ಪೊಲೀಸರು ಬಂಧಿಸಿದ್ದಾರೆ. ಆದರೆ ಈ ಪ್ರಕರಣದ ಹಿಂದೆ ಯಾರು ಇದ್ದಾರೆ ಅನ್ನೋದು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.
ನನ್ನ ಮೇಲೆ ಹಲ್ಲೆ ಮಾಡಿರುವ ಪ್ರಕರಣದಲ್ಲಿ ಸೂಕ್ತವಾಗಿ ತನಿಖೆ ನಡೆಯುತ್ತಿಲ್ಲ. ಈ ಪ್ರಕರಣದವನ್ನು ನಾನು ಗಂಭೀರವಾಗಿ ಪರಿಗಣಿಸುತ್ತೇನೆ. ನನ್ನ ಮೇಲೆ ಹಲ್ಲೆ ಮಾಡಿದ ಉದ್ದೇಶವನ್ನು ಪತ್ತೆ ಮಾಡಬೇಕು. ಇದರ ಹಿಂದೆ ಯಾರು ಇದ್ದಾರೆ ಎಂದು ಪತ್ತೆ ಹಚ್ಚಿ ನನಗೆ ನ್ಯಾಯ ಒದಗಿಸಬೇಕೆಂದು ಗೃಹ ಸಚಿವ ಬಸವರಾಜ ಬೊಮ್ಮಯಿಗೆ ತನ್ವೀರ್ ಸೇಠ್ ಪತ್ರ ಬರೆದು ಮನವಿ ಮಾಡಿದ್ದಾರೆ. ಇದನ್ನು ಓದಿ: ತನ್ವೀರ್ ರೀತಿಯಲ್ಲೇ ಖಾದರ್ ಹತ್ಯೆಗೆ ಸಂಘಟನೆಯಿಂದ ಸ್ಕೆಚ್
ಕಳೆದ ವರ್ಷದ ನವೆಂಬರ್ 18ರಂದು ರಾತ್ರಿ 11 ಗಂಟೆ ಸುಮಾರಿನಲ್ಲಿ ಮೈಸೂರಿನ ಬನ್ನಿಮಂಟಪದಲ್ಲಿ ನೂರಾರು ಜನರ ಮುಂದೆಯೇ ಶಾಸಕರ ಮೇಲೆ ಕೊಲೆ ಯತ್ನ ನಡೆದಿತ್ತು. ಘಟನೆಯಲ್ಲಿ ಕುತ್ತಿಗೆ ಭಾಗಕ್ಕೆ ಮಚ್ಚಿನ ಪೆಟ್ಟು ಬಿದ್ದು ತನ್ವೀರ್ ಸೇಠ್ ಜೀವನ್ಮರಣ ಹೋರಾಟ ಆರಂಭಿಸಿದ್ದರು. ಹಲ್ಲೆಯ ನಂತರ ಮೈಸೂರಿನಲ್ಲಿ ಚಿಕಿತ್ಸೆ ಪಡೆದಿದ್ದ ಶಾಸಕ ತನ್ವೀರ್ ಸೇಠ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ ಕಳುಹಿಸಲಾಗಿತ್ತು. ಚಿಕಿತ್ಸೆ ಸಂಪೂರ್ಣ ಯಶಸ್ವಿಯಾದ ನಂತರ ದುಬೈನಲ್ಲೇ ಅವರು ವಿಶ್ರಾಂತಿ ಪಡೆದಿದ್ದರು. ಬಳಿಕ ಭಾರತಕ್ಕೆ ವಾಪಸ್ ಬಂದಿದ್ದರು.
ಈ ಹಿಂದೆ ಈ ವಿಚಾರವಾಗಿ ಮಾತನಾಡಿದ್ದ ಅವರು, ನನ್ನ ಮೇಲೆ ನಡೆದ ಹಲ್ಲೆ ಪ್ರಕರಣ ಅನಿರೀಕ್ಷಿತ. ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಅದರ ಪ್ರತಿಯನ್ನು ಪಡೆದುಕೊಂಡಿದ್ದೇನೆ. ತನಿಖೆ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ಪೊಲೀಸರು ತಮ್ಮ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದವರು ಯಾರು ಎಂಬುದು ಗೊತ್ತಿಲ್ಲ. ಇದೆಲ್ಲವು ಸಾರ್ವಜನಿಕವಾಗಿ ಬಹಿರಂಗವಾಗಬೇಕು. ಇದನ್ನು ಪೊಲೀಸರು ಜನರಿಗೆ ತಿಳಿಸಬೇಕು ಎಂದಿದ್ದರು.
ಹಾಸನ: ರಾಜ್ಯ ಸರ್ಕಾರದ ಬಜೆಟ್ ಮಂಡನೆ ಹಾಸನ ಜಿಲ್ಲೆಯ ಮಟ್ಟಿಗೆ ನಿರಾಶದಾಯಕವಾಗಿದೆ ಎಂದು ಹಾಸನ ಚೇಂಬರ್ ಆಫ್ ಕಾಮರ್ಸ್ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರು ಬಜೆಟ್ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಎತ್ತಿನಹೊಳೆಗೆ 1,500 ಕೋಟಿ ಹಣ ಮೀಸಲಿಟ್ಟಿರುವುದು ಯಾವುದೇ ಪ್ರಯೋಜನವಿಲ್ಲ. ಬಜೆಟ್ ನಲ್ಲಿ ಹಾಸನ ಜಿಲ್ಲೆಗೆ ಹೆಚ್ಚು ಒತ್ತು ಕೊಟ್ಟಿದ್ದರೆ ಅಕ್ಕಪಕ್ಕದ ಜಿಲ್ಲೆಗೆ ವರದಾನವಾಗುತ್ತಿತ್ತು ಎಂದರು.
ಹಾಸನ ವಿಮಾನ ನಿಲ್ದಾಣ ಸೇರಿದಂತೆ, ಈ ಹಿಂದೆ ಹಾಸನ ಜಿಲ್ಲೆಗೆ ಘೋಷಣೆಯಾಗಿದ್ದ ಯೋಜನೆಗಳಿಗೆ ಅನುದಾನದ ನಿರೀಕ್ಷೆಯಲ್ಲಿದ್ದೇವು. ನಮ್ಮ ನಿರೀಕ್ಷೆ ಈಡೇರಿಲ್ಲ ಎಂದು ಹಾಸನ ಜನ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯದ ದೃಷ್ಟಿಕೋನದಿಂದಲೂ ಬಜೆಟ್ ಆಶಾದಾಯಕವಾಗಿಲ್ಲ ಎಂದು ಆರ್ಥಿಕ ತಜ್ಞ ಚಂದ್ರಶೇಖರ್ ಹೇಳಿದ್ದಾರೆ.
-ನಾಲ್ವರು ಪತ್ರಕರ್ತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ
ಬೆಂಗಳೂರು: ಅಕಾಲಿಕವಾಗಿ ಸಾವನ್ನಪ್ಪಿರುವ ನಾಲ್ವರು ಪತ್ರಕರ್ತರ ಕುಟುಂಬಗಳಿಗೆ ರಾಜ್ಯ ಸರ್ಕಾರ ನೆರವು ಘೋಷಿಸಿದೆ. ಇತ್ತೀಚೆಗೆ ನಿಧನರಾದ ನಾಲ್ವರು ಪತ್ರಕರ್ತರ ಕುಟುಂಬಗಳಿಗೆ ತಲಾ 5 ಲಕ್ಷ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಆದೇಶ ಮಾಡಿದ್ದಾರೆ. ತಮ್ಮನ್ನು ಭೇಟಿಯಾದ ಪತ್ರಕರ್ತರ ನಿಯೋಗದ ಮನವಿಯಂತೆ ತಲಾ 5 ಲಕ್ಷ ರೂ ಪರಿಹಾರ ಧನ ನೀಡಲು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ಇಂದು ಬೆಳಗ್ಗೆ ಬೆಂಗಳೂರಿನ ಶಕ್ತಿಭವನದಲ್ಲಿ ಹಿರಿಯ ಪತ್ರಕರ್ತರು ಮತ್ತು ರಾಜಕೀಯ ವರದಿಗಾರರ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿತು. ಇತ್ತೀಚೆಗೆ ನಿಧನರಾದ ರಾಜಕೀಯ ವರದಿಗಾರ ರವಿರಾಜ್ ವಳಲಂಬೆ, ಕ್ರೀಡಾ ಪತ್ರಕರ್ತ ದಿಗಂಬರ್ ಗರುಡಾ, ವರದಿಗಾರ ರೋಹೀತ್ ಬಿ.ಆರ್, ಟಿವಿ ನಿರೂಪಕರಾಗಿದ್ದ ಗಜಾನನ ಹೆಗಡೆ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ನಿಯೋಗದಿಂದ ಮನವಿ ಮಾಡಲಾಯಿತು. ಪತ್ರಕರ್ತರ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಕ್ಷಣವೇ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ನೀಡುವಂತೆ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ಪರಿಹಾರದ ಮೊತ್ತ ಮೃತರ ಕುಟುಂಬ ಸದಸ್ಯರಿಗೆ ತಕ್ಷಣ ಸಿಗುವಂತೆ ಸೂಕ್ತ ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡಿದ್ದಾರೆ.
ಅಕಾಲಿಕ ಮೃತರಾಗುವ ಪತ್ರಕರ್ತರ ಕುಟುಂಬಗಳಿಗೆ ವಿಶೇಷ ನಿಧಿ ಸ್ಥಾಪಿಸುವಂತೆ ಪತ್ರಕರ್ತರ ನಿಯೋಗ ಮನವಿಯನ್ನು ಸಿಎಂ ಯಡಿಯೂರಪ್ಪ ಅವರಿಗೆ ಮಾಡಲಾಯಿತು. ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆ ಮಾಡುವಂತೆಯೂ ಕೋರಲಾಯಿತು. ಈ ಮನವಿಯನ್ನು ಪರಿಗಣಿಸುವುದಾಗಿ ಸಿಎಂ ಪತ್ರಕರ್ತರ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ಕುರಿತ ಕೇಂದ್ರ ಸರ್ಕಾರದಿಂದ ಗೆಜೆಟ್ ನೋಟಿಫಿಕೇಶನ್ ಹೊರಬಿದ್ದ ಬೆನ್ನಲ್ಲೇ ರಾಜ್ಯ ಸರ್ಕಾರ ಸರ್ವ ರೀತಿಯಲ್ಲೂ ಅಲರ್ಟಾಗಿದೆ. ಈಗಾಗಲೇ ಮಹದಾಯಿ ನದಿ ಯೋಜನೆಗಳ ಜಾರಿಗೆ ರಾಜ್ಯ ಸರ್ಕಾರ ಪ್ರಕ್ರಿಯೆಗಳನ್ನು ಆರಂಭಿಸಿದೆ. ಈ ಬೆನ್ನಲ್ಲೇ ಸಾಧ್ಯವಾದಷ್ಟರ ಮಟ್ಟಿಗೆ ಮಹದಾಯಿ ಯೋಜನೆಯಿಂದಾಗುವ ರಾಜಕೀಯ ಲಾಭ ಪಡೆಯಲು ಸರ್ಕಾರ ಹೊರಟಿದೆ. ಆ ಮೂಲಕ ಮಹದಾಯಿ ಯೋಜನೆ ಜಾರಿಗೊಳಿಸಿದ ಸಂಪೂರ್ಣ ಕ್ರೆಡಿಟ್ ಪಡೆದುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಬೃಹತ್ ರೈತ ಸಮಾವೇಶವೊಂದನ್ನು ಆಯೋಜಿಸಲು ಸರ್ಕಾರ ಪ್ರಾಥಮಿಕ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಬೃಹತ್ ರೈತ ಸಮಾವೇಶ ನಡೆಸಲು ಸರ್ಕಾರ ಮುಂದಾಗಿದೆ. ಹುಬ್ಬಳ್ಳಿ ಅಥವಾ ಬೆಳಗಾವಿಯಲ್ಲಿ ಬೃಹತ್ ರೈತ ಸಮಾವೇಶ ಆಯೋಜಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಕಳೆದ ವರ್ಷ ಕಿಸಾನ್ ಸಮ್ಮಾನ್ ಯೋಜನೆಯ ಎರಡನೇ ಹಂತದ ಜಾರಿಗೆ ತುಮಕೂರಿನಲ್ಲಿ ಆಯೋಜಿಸಿದ್ದ ಬೃಹತ್ ರೈತರ ಸಮಾವೇಶದ ಮಾದರಿಯಲ್ಲೇ ಮಹದಾಯಿ ಕುರಿತ ಸಮಾವೇಶವನ್ನೂ ನಡೆಸಲು ಸರ್ಕಾರ ತೀರ್ಮಾನ ಮಾಡಿದೆ. ಈ ಸಮಾವೇಶದಲ್ಲಿ 2 ಲಕ್ಷಕ್ಕೂ ಅಧಿಕ ರೈತರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಲು ಯೋಜಿಸಲಾಗಿದೆ. ಬಜೆಟ್ ಅಧಿವೇಶನ ಬಳಿಕ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗುತ್ತದೆ. ಇದಕ್ಕೂ ಮುನ್ನ ಕೇಂದ್ರದ ಬಿಜೆಪಿ ನಾಯಕರ ಗಮನಕ್ಕೆ ಮೊದಲು ಈ ವಿಚಾರ ತಂದು ಅನುಮತಿ ಪಡೆಯಲು ರಾಜ್ಯ ನಾಯಕರು ಮುಂದಾಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಮಹದಾಯಿ ಬೃಹತ್ ಸಮಾವೇಶಕ್ಕೆ ಕೇಂದ್ರದಿಂದ ಪ್ರಧಾನಿ ನರೇಂದ್ರ ಮೋದಿ ಅಥವಾ ಅಮಿತ್ ಶಾರನ್ನೇ ಕರೆಸಲು ರಾಜ್ಯ ಸರ್ಕಾರ ಚಿಂತನೆ ಮಾಡುತ್ತಿದೆ ಎನ್ನಲಾಗಿದೆ. ಮಹದಾಯಿ ಯೋಜನೆ ಜಾರಿಗೊಳಿಸೇ ತೀರ್ತೀವಿ ಅಂತ ಸಿಎಂ ಬಿಎಸ್ ಯಡಿಯೂರಪ್ಪ ಪ್ರಮಾಣ ಮಾಡಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ್ರೆ ಮಹದಾಯಿ ಯೋಜನೆ ಜಾರಿಗೊಳಿಸಿ ರೈತರಿಗೆ ನೀರು ಒದಗಿಸುವುದಾಗಿ ಬಿಎಸ್ ವೈ ಭರವಸೆ ನೀಡಿದ್ದರು. ಇದೀಗ ಸುಪ್ರೀಂಕೋರ್ಟ್ ಆದೇಶ ನೀಡಿದ ಒಂದು ವಾರದಲ್ಲಿ ಕೇಂದ್ರ ಸರ್ಕಾರದಿಂದ ಗೆಜೆಟ್ ನೋಟಿಫಿಕೇಶನ್ ಹೊರಡಿಸಲಾಗಿದೆ. ಈ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯದ ರೈತರ ಸಂಕಷ್ಟ ಆಲಿಸಿದೆ ಅಂತ ಬಿಂಬಿಸಲು ಬೃಹತ್ ಸಮಾವೇಶಕ್ಕೆ ರೂಪುರೇಷೆ ಹಾಕಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರು: ಕಳೆದ 30 ವರ್ಷದಿಂದ ಸೇವೆ ಸಲ್ಲಿಸಿ, ಆರ್ಥಿಕ ಸಂಕಷ್ಟಕ್ಕೀಡಾಗಿ ಎಂಟು ದಿನಗಳಿಂದ ಬೀಗ ಹಾಕಿದ್ದ ಏಷ್ಯಾದ ಮೊದಲ ಸಹಕಾರಿ ಸಂಸ್ಥೆ ಹಾಗೂ ದೇಶದ ಹೆಮ್ಮೆಯಾಗಿದ್ದ ಜಿಲ್ಲೆಯ ಕೊಪ್ಪ ತಾಲೂಕಿನ ಸಹಕಾರ ಸಾರಿಗೆ ಸಂಸ್ಥೆ ಬಸ್‍ಗಳು ಮತ್ತೆ ಓಡುವ ಸೂಚನೆ ಸಿಕ್ಕಿದ್ದು, ಪ್ರತಿಭಟನಾಕಾರರು ಅನಿರ್ದಿಷ್ಟಾವಧಿ ಮುಷ್ಕರವನ್ನ ತಾತ್ಕಾಲಿಕವಾಗಿ ಹಿಂದೆ ಸರಿದಿದ್ದಾರೆ.
ಕಾರ್ಮಿಕರೇ ಮಾಲೀಕರಾಗಿ 30 ವರ್ಷಗಳಿಂದ ಹಳ್ಳಿಗರಿಗೆ ಸೇವೆ ಸಲ್ಲಿಸುತ್ತಿದ್ದ ಸಾರಿಗೆ ಸಂಸ್ಥೆ ಆರ್ಥಿಕ ನಷ್ಟದಿಂದ ಸಂಸ್ಥೆಗೆ ಬೀಗ ಹಾಕಿ, 75 ಬಸ್‍ಗಳನ್ನು ಶೆಡ್‍ನಲ್ಲಿ ನಿಲ್ಲಿಸಿ, ಸರ್ಕಾರದ ನೆರವಿಗಾಗಿ ಪ್ರತಿಭಟನೆಗೆ ಮುಂದಾಗಿದ್ದರು. ಕಳೆದ ಎಂಟು ದಿನಗಳಿಂದ ಕೊಪ್ಪ ತಾಲೂಕು ಕಚೇರಿ ಎದುರು ಪ್ರತಿಭಟನೆಗೆ ಮುಂದಾಗಿದ್ದ ನೌಕರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇಂದು ಸ್ಥಳಕ್ಕೆ ಆಗಮಿಸಿದ ಮಾಜಿ ಸಚಿವ ಡಿ.ಎನ್.ಜೀವರಾಜ್ ಸ್ಥಳದಲ್ಲೇ ಸಹಕಾರ ಸಚಿವರ ಜೊತೆ ಮಾತುಕತೆ ನಡೆಸಿದರು. ಜೀವರಾಜ್ ಸರ್ಕಾರದಿಂದ ಸಹಕಾರ ಕೊಡಿಸುವ ಭರವಸೆ ನೀಡಿದ ಮೇಲೆ ಕಾರ್ಮಿಕರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ಆದರೆ, ಬಸ್‍ಗಳನ್ನು ರಸ್ತೆಗಿಳಿಸದಿರಲು ನಿರ್ಧರಿಸಿದ್ದು, ಸರ್ಕಾರದಿಂದ ಸಹಕಾರ ದೊರೆತ ಮೇಲೆ ಬಸ್‍ಗಳನ್ನ ರಸ್ತೆಗಿಳಿಸಲು ತೀರ್ಮಾನಿಸಿದ್ದಾರೆ.
ಕಳೆದೊಂದು ವಾರದಿಂದ ಬಸ್‍ಗಿಳಿಲ್ಲದೆ ಜನ ಹೈರಾಣಾಗಿದ್ದು, ಜೀವರಾಜ್ ಅವರ ಭರವಸೆಯ ಮಾತುಗಳಿಂದ ಮಲೆನಾಡಿಗರು ನಿಟ್ಟುಸಿರು ಬಿಟ್ಟಿದ್ದು, ಕೂಡಲೇ ಸರ್ಕಾರದ ನೆರವು ನೀಡಿಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸಮಸ್ಯೆ ಬಗೆಹರಿಯುತ್ತೆ ಎಂದಿದ್ದ ವಿನಯ್ ಗುರೂಜಿ: ಕಾರ್ಮಿಕರ ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿದ್ದ ಅವಧೂತ ವಿನಯ್ ಗುರೂಜಿ ಅವರು ಕಾರ್ಮಿಕರ ಸಮಸ್ಯೆ ಬಗೆಹರಿಯುತ್ತೆ ಎಂದಿದ್ದರು. ನಿಮ್ಮೆಲ್ಲರ ಧ್ವನಿಯಾಗಿ ಸಿಎಂ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಕಾರ್ಮಿಕರಿಗೆ ಭರವಸೆ ನೀಡಿದ್ದರು. ಒಂದು ವೇಳೆ, ಸಮಸ್ಯೆ ಬಗೆಹರಿಯದಿದ್ದರೆ ನಿಮ್ಮ ಜೊತೆ ನಾನು ಹಾಗೂ ಆಶ್ರಮದ ಎಲ್ಲರೂ ಉಪವಾಸ ಕುಳಿತುಕೊಳ್ಳುತ್ತೇವೆ ಎಂದಿದ್ದರು. ಇಂದು ಜೀವರಾಜ್ ಅವರು ಸರ್ಕಾರದಿಂದ ಸಹಕಾರ ಕೊಡಿಸುವ ಭರವಸೆ ನೀಡಿದ್ದು, ಮಲೆನಾಡಿಗರ ಮೊಗದಲ್ಲಿ ಮಂದಹಾಸ ಮೂಡಿದೆ.