Tag: State Government

  • ಮದ್ಯ ಮಾರಾಟದ ಬಗ್ಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯೆ

    ಮದ್ಯ ಮಾರಾಟದ ಬಗ್ಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯೆ

    -‘ತಬ್ಲಿಘಿಗಳು ಫ್ರಂಟ್ ಲೈನ್ ವಾರಿಯರ್ಸ್ ಅಲ್ಲ’

    ಚಿತ್ರದುರ್ಗ: ರಾಜ್ಯದಲ್ಲಿ ಸರ್ಕಾರದ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟಾಗಿದ್ದರೂ ಜನರ ಜೀವ ಉಳಿಸುವ ಉದ್ದೇಶದಿಂದ ಮದ್ಯ ಮಾರಾಟ ಆರಂಭಿಸಿಲ್ಲ. ಈ ವಿಚಾರದಲ್ಲಿ ಇಲ್ಲಿ ರಾಜಕಾರಣ ಸಲ್ಲದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

    ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಗೌರಸಮುದ್ರ ಗ್ರಾಮದಲ್ಲಿ ಆಹಾರದ ಕಿಟ್ ವಿತರಿಸಿ ಮಾತನಾಡಿದ ಅವರು, ದೇಶದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಬಂದ್ ಬಳಿಕ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದೆವು. ಆದರೆ ದೆಹಲಿ ನಿಜಾಮುದ್ದೀನ್ ಸಭೆ ಬಳಿಕ ಮತ್ತೆ ಆತಂಕ ಸೃಷ್ಠಿ ಆಯಿತು. ಹೀಗಾಗಿ ತಬ್ಲಿಘಿ ಗಳನ್ನು ಫ್ರಂಟ್ ಲೈನ್ ವಾರಿಯರ್ಸ್ ಅಂತ ಕರೆಯಲ್ಲ. ಅಲ್ಲದೇ ಕೋವಿಡ್ ಹರಡದಂತೆ ಹಗಲಿರುಳು ಶ್ರಮಿಸುತ್ತಾ, ಅವರ ಕುಟುಂಬವನ್ನು ತೊರೆದು ಸೇವೆ ಮಾಡುತ್ತಿರುವ ಪೊಲೀಸರು, ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು, ಪತ್ರಕರ್ತರು ನಿಜವಾದ ಫ್ರಂಟ್ ಲೈನ್ ವಾರಿಯರ್ಸ್ ಎಂದರು.

    ಇದೇ ವೇಳೆ ಮಂಡ್ಯದಲ್ಲಿ ಪತ್ರಕರ್ತರ ಮೇಲಿನ ಹಲ್ಲೆಯನ್ನು ಖಂಡಿಸಿದ ಸಚಿವರು, ಕೊರೊನಾ ಜಾಗೃತಿಯಲ್ಲಿ ಮಾಧ್ಯಮಗಳ ಕಾರ್ಯ ಮಹತ್ವದ್ದಾಗಿದೆ. ರಾಜ್ಯದಲ್ಲಿ ಕಡಿಮೆ ಸಂಖ್ಯೆಯ ಕೊರೊನಾ ಪಾಸಿಟಿವ್ ಬರಲು ಪತ್ರಕರ್ತರು ಸಹ ಕಾರಣರಾಗಿದ್ದಾರೆಂದು ಶ್ಲಾಘಿಸಿದರು.

    ರಾಜ್ಯದಲ್ಲಿ ಕೋವಿಡ್-19 ಸೋಂಕು ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಹಲವಾರು ಕ್ರಮ ಕೈಗೊಂಡಿದೆ. ಆಶಾ ಕಾರ್ಯಕರ್ತೆಯರು, ವೈದ್ಯರು ಹಾಗೂ ರಾಜಕಾರಣಿಗಳು ಕೂಡ ಪಕ್ಷಾತೀತವಾಗಿ ಕೊರೊನಾ ವಿರುದ್ಧದ ಸಮರಕ್ಕೆ ಸಿದ್ಧರಾಗಿದ್ದಾರೆ. ವೈದ್ಯರು, ಪೊಲೀಸರು ಹಾಗೂ ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ ತಡೆಯಲು ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವಂತೆ ಕಾನೂನು ರೂಪಿಸಲಾಗಿದೆ ಎಂದರು.

  • ಐಟಿ ವೃತ್ತಿಪರರ ವರ್ಕ್ ಫ್ರಮ್ ಹೋಮ್ ಜುಲೈ 31ರ ವರೆಗೆ ವಿಸ್ತರಣೆ

    ಐಟಿ ವೃತ್ತಿಪರರ ವರ್ಕ್ ಫ್ರಮ್ ಹೋಮ್ ಜುಲೈ 31ರ ವರೆಗೆ ವಿಸ್ತರಣೆ

    ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಐಟಿ ವೃತ್ತಿಪರರು ಮುಂದಿನ ಜುಲೈ 31ರ ವರೆಗೆ ಮನೆಯಿಂದಲೇ ಕೆಲಸ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

    ಕೊರೊನಾ ಲಾಕ್‍ಡೌನ್ ನಿರ್ಬಂಧದಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಸಮಸ್ಯೆಗಳ ಕುರಿತಂತೆ ಎಲ್ಲಾ ರಾಜ್ಯಗಳ ಮಾಹಿತಿ ತಂತ್ರಜ್ಞಾನ ಸಚಿವರ ಜತೆ ನಡೆಸಿದ ವೀಡಿಯೋ ಕಾನ್ಫರೆನ್ಸ್ ನಲ್ಲಿ ಕೇಂದ್ರ ಐಟಿ ಮತ್ತು ದೂರಸಂಪರ್ಕ ಖಾತೆ ಸಚಿವ ರವಿ ಶಂಕರ್ ಪ್ರಸಾದ್ ಅವರು ಈ ವಿಷಯ ಪ್ರಕಟಿಸಿದ್ದಾರೆ.

    ಲಾಕ್ ಡೌನ್ ಬಳಿಕ ರಾಜ್ಯ ಐಟಿ ವಲಯ ಎದುರಿಸುತ್ತಿರುವ ಸವಾಲುಗಳು, ಕಂಡುಕೊಂಡಿರುವ ಪರಿಹಾರಗಳು ಹಾಗೂ ರಾಜ್ಯ ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತು ಕೇಂದ್ರ ಸಚಿವರಿಗೆ ವಿವರಿಸಿದ ಐಟಿ-ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ, ರಾಜ್ಯದ ಐಟಿ ವೃತ್ತಿ ಪರರಿಗೆ ಮುಂದಿನ ವರ್ಷ ಮಾರ್ಚ್ ವರೆಗೂ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕೆಂದು ಕೋರಿದರು. ಈ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು, ಸದ್ಯ ಜುಲೈ 31ರ ವರೆಗೆ ವರ್ಕ್ ಫ್ರಮ್ ಹೋಂ ಸೌಲಭ್ಯ ವಿಸ್ತರಣೆ ಮಾಡಲಾಗುವುದು. ಪರಿಸ್ಥಿತಿ ನೋಡಿಕೊಂಡು ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಐಟಿ ವಲಯ ಸದ್ಯ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದು, ರಾಜ್ಯದ ಐಟಿ ವೃತ್ತಿಪರರ ಜತೆ ಪ್ರತ್ಯೇಕ ವೀಡಿಯೋ ಕಾನ್ಫರೆನ್ಸ್ ನಡೆಸಬೇಕೆಂಬ ಡಾ. ಅಶ್ವತ್ಥನಾರಾಯಣ ಅವರ ಮನವಿಗೂ ಸಕಾರಾತ್ಮಕವಾಗಿ ಸ್ಪಂದಿಸಿದ ರವಿ ಶಂಕರ್ ಪ್ರಸಾದ್, ಶೀಘ್ರದಲ್ಲೇ ವೀಡಿಯೋ ಕಾನ್ಫರೆನ್ಸ್ ನಡೆಸುವ ಭರವಸೆ ನೀಡಿದರು.

    ಕಾರ್ಯ ತಂತ್ರ ಸಮಿತಿ:
    ‘ಕೋವಿಡ್‍ನಂಥ ಪರಿಸ್ಥಿತಿ ಎದುರಾದಾಗ ಐಟಿ ಹಾಗೂ ಸಂಬಂಧಿತ ವಲಯಗಳು ಯಾವ ರೀತಿ ಕಾರ್ಯ ನಿರ್ವಹಿಸಬೇಕು. ವಿಪತ್ತಿನ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿ, ಪರಿಹಾರ ಕ್ರಮಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲು ರಾಷ್ಟ್ರ ಮಟ್ಟದ ಕಾರ್ಯತಂತ್ರ ಸಮಿತಿ ರಚಿಸಲಾಗುವುದು,’ ಎಂದು ಕೆಂದ್ರ ಸಚಿವರು ತಿಳಿಸಿದರು.

    ‘ಐಟಿ ವಲಯ ಮಾತ್ರವಲ್ಲದೆ, ಎಲ್ಲಾ ರಾಜ್ಯಗಳು ಅನ್ವೇಷಣೆ, ಸ್ಟಾರ್ಟ್ ಅಪ್‍ಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇ-ಆಡಳಿತ, ಇ-ಪಾಸ್‍ಗಳ ಪರಿಣಾಮಕಾರಿ ಜಾರಿಗೆ ಗಮನ ಹರಿಸಲಾಗುವುದು. ಜತೆಗೆ, ಕೋವಿಡ್ ಸಮಸ್ಯೆ ಎದುರಾದಾಗಿನಿಂದ ಬಹುತೇಕ ಎಲ್ಲ ವಲಯಗಳ ಕೆಲಸದ ರೀತಿ ನೀತಿ ಬದಲಾಗಿದ್ದು, ಶೇ. 80ರಷ್ಟು ಐಟಿ ವೃತ್ತಿಪರರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಎಲ್ಲ ಕೆಲಸ ಕಾರ್ಯಗಳು ಆನ್‍ಲೈನ್ ಮೂಲಕವೇ ನಡೆಯುತ್ತಿದೆ. ಇದಕ್ಕೆ ಅನುಕೂಲವಾಗುವಂತೆ ಭಾರತ್ ನೆಟ್ ಯೋಜನೆ ಮೂಲಕ ದೇಶದ ಮೂಲೆಮೂಲೆಗೂ ಇಂಟರ್ ನೆಟ್ ಸಂಪರ್ಕ ಜಾಲ ಬಲಪಡಿಸಲಾಗುತ್ತದೆ,’ ಎಂದು ರವಿ ಶಂಕರ್ ಪ್ರಸಾದ್ ಹೇಳಿದರು.

    ಮೇಕ್ ಇನ್ ಇಂಡಿಯಾ:
    ‘ಮೇಕ್ ಇನ್ ಇಂಡಿಯಾ ಯೋಜನೆಗಳ ಕಾರ್ಯರೂಪಕ್ಕೆ ಇದು ಸಕಾಲ. ಕೋವಿಡ್ ನಂತರದಲ್ಲಿ ದೇಶದ ಆರ್ಥಿಕತೆಯ ಪುನಶ್ಚೇತನಕ್ಕೆ ಮೇಕ್ ಇನ್ ಇಂಡಿಯಾ ಯೋಜನೆಗೆ ಹೆಚ್ಚು ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ನಾವು ತಕ್ಕ ಮಟ್ಟಿನ ಯಶಸ್ಸು ಪಡೆದಿದ್ದರೂ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬರುವುದಕ್ಕೂ ಮೊದಲು ದೇಶದಲ್ಲಿ ಇದ್ದ ಮೊಬೈಲ್ ಉತ್ಪಾದಕ ಸಂಸ್ಥೆಗಳ ಸಂಖ್ಯೆ 2 ರಿಂದ 268ಕ್ಕೆ ಏರಿದೆ. ಮೇಕ್ ಇನ್ ಇಂಡಿಯಾ ಯೋಜನೆ ಯಶಸ್ಸಿಗೆ ಇದು ಅತ್ಯುತ್ತಮ ಉದಾಹರಣೆ,’ ಎಂದು ವಿವರಿಸಿದರು.

    ಆನ್‍ಲೈನ್ ಆರೋಗ್ಯ ಸೇವೆ:
    ‘ಕೋವಿಡ್ ನಂತರ ಆರೋಗ್ಯ ಸೇವೆಯಲ್ಲೂ ತಂತ್ರಜ್ಞಾನದ ಬಳಕೆ ಹೆಚ್ಚಿದ್ದು ಆನ್‍ಲೈನ್ ಆರೋಗ್ಯ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಲಾಗಿದೆ. ಕರ್ನಾಟಕ ಸೇರಿಂದಂತೆ ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಆನ್‍ಲೈನ್ ಆರೋಗ್ಯ ಸೇವೆ ಉತ್ತಮವಾಗಿದ್ದು, ಇತರ ರಾಜ್ಯಗಳಲ್ಲೂ ಇದು ವಿಸ್ತರಣೆ ಆಗಬೇಕು,’ ಎಂದರು.

    ಆಪ್ತ ಮಿತ್ರ ಹೆಲ್ಪ್ ಲೈನ್:
    ಶಿಕ್ಷಣ, ಅಗತ್ಯ ವಸ್ತುಗಳ ಪೂರೈಕೆ ಮುಂತಾದ ಹಲವು ಕಾರ್ಯಗಳಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಪರಿಹಾರ ಒದಗಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂಬುದನ್ನು ಡಾ. ಅಶ್ವತ್ಥನಾರಾಯಣ ವೀಡಿಯೋ ಕಾನ್ಫರೆನ್ಸ್ ನಲ್ಲಿ ವಿವರಿಸಿದರು.

    ‘500ಕ್ಕೂ ಹೆಚ್ಚು ವೃತ್ತಿಪರರು ‘ಆಪ್ತ ಮಿತ್ರ ಹೆಲ್ಪ್ ಲೈನ್’ನ ಕಾಲ್ ಸೆಂಟರ್ ನಲ್ಲಿ ಹಗಲಿರುಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ನಿತ್ಯ ಸುಮಾರು 50 ಸಾವಿರ ಕರೆಗಳನ್ನು ಸ್ವೀಕರಿಸಿ, ಜನರ ಅಗತ್ಯಗಳಿಗೆ ಸ್ಪಂದಿಸುತ್ತಿದ್ದಾರೆ. ಇ-ಕಾಮರ್ಸ್ ಗೆ ಪರ್ಯಾಯವಾದ ವ್ಯವಸ್ಥೆ ಕಂಡುಕೊಂಡಿದ್ದು, ರೆಡ್ ಝೋನ್‍ನಲ್ಲಿರುವ ಜನ ಮನೆಯಿಂದ ಹೊರ ಬರುವ ಅಗತ್ಯ ಬಾರದಂತೆ ಎಲ್ಲಾ ವಸ್ತುಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಆಗುತ್ತಿದೆ. ದಿನಸಿ, ಹಾಲು, ಔಷಧ, ತರಕಾರಿ ಮುಂತಾದ ವಸ್ತುಗಳನ್ನು ಮನೆಗೆ ತಲುಪಿಸಲು ವಿಧಿಸುತ್ತಿರುವ ದರ ಕೇವಲ 10 ರೂಪಾಯಿ. ಒಂದೇ ರೀತಿಯ ಸೇವೆ (ಪರಿಹಾರ ಸಾಮಗ್ರಿಗಳು) ಬೇರೆ ಬೇರೆ ಇಲಾಖೆಗಳಿಂದ ಪುನರಾವರ್ತನೆ ಆಗದಂತೆ ತಡೆಯಲು ತಂತ್ರಜ್ಞಾನದ ಮೊರೆ ಹೋಗಲಾಗಿದೆ,’ ಎಂದು ಉಪಮುಖ್ಯಮಂತ್ರಿ ತಿಳಿಸಿದರು.

  • ರಾಜ್ಯದಲ್ಲಿ 4 ಮಂದಿ ಕೊರೊನಾ ಸಚಿವರಿದ್ದಾರೆ: ಪ್ರಿಯಾಂಕ್ ಖರ್ಗೆ

    ರಾಜ್ಯದಲ್ಲಿ 4 ಮಂದಿ ಕೊರೊನಾ ಸಚಿವರಿದ್ದಾರೆ: ಪ್ರಿಯಾಂಕ್ ಖರ್ಗೆ

    ಕಲಬುರಗಿ: ರಾಜ್ಯದಲ್ಲಿ 4 ಮಂದಿ ಕೊರೊನಾ ಸಚಿವರಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾಲ್ಕು ಮಂದಿ ಕೊರೊನಾ ಸಚಿವರಿದ್ದಾರೆ. ಸುರೇಶ್ ಕುಮಾರ್ ಬರ್ತಾರೆ ನ್ಯೂಸ್ ಬುಲೆಟಿನ್ ಓದಿ ಹೇಳ್ತಾರೆ. ಹಾಗೆ ನೋಡಿದರೆ ಸುರೇಶ್ ಕುಮಾರ್ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಇಲ್ಲ ಎಂದು ಕಿಡಿಕಾರಿದರು.

    ಪ್ರತಿ ಜಿಲ್ಲೆಗೆ ಲ್ಯಾಬ್ ತೆಗೆಯುವುದಾಗಿ ಹೇಳಿದರು. ಆದರೆ ಇಲ್ಲಿಯವರೆಗೆ ಸರ್ಕಾರ ಆ ಕೆಲಸ ಮಾಡಿಲ್ಲ. ಈ ಕೊರೊನಾ ಯುದ್ಧ ಗೆಲ್ಲಬೇಕು ಅಂದ್ರೆ ರಕ್ಷಕರಿಗೆ ರಕ್ಷಣೆಯಿಲ್ಲ. ಕ್ವಾಲಿಟಿ ಪ್ರಕಾರ ಪಿಪಿಇ ಕಿಟ್ ವಿತರರಣೆಯನ್ನು ನೀಡಿಲ್ಲ. ಕೊರೊನಾ ವಾರ್ಡಿನಲ್ಲಿ ಎಸಿ ಸಹ ಹಾಕಲು ಆಗಿಲ್ಲ. ಹೀಗಾಗಿ ಬೆವರು ಬಂದು ಚಿಕಿತ್ಸೆ ನೀಡಲು ನಮಗೆ ತೊಂದೆರೆಯಿದೆ. ಅಲ್ಲಿನ ರೋಗಿಗಳಿಗೂ ಸಹ ತೊಂದರೆಯಾಗುತ್ತಿದೆ. ಕೊರೊನಾ ವಾರ್ಡಿನಲ್ಲಿ ಸ್ಯಾನಿಟೈಸರ್ ಸಹ ನೀಡಿಲ್ಲ. ರೋಗಿಗಳಿಗೆ ನೀಡುವ ಆಹಾರ ಸಹ ಸರಿಯಾಗಿಲ್ಲ. ಹೀಗೆ ಹಲವು ಸಮಸ್ಯೆಗಳ ಬಗ್ಗೆ ಈಗಾಗಲೇ ಇಎಸ್‍ಐ ಸಿಬ್ಬಂದಿ ದೂರು ನೀಡಿದ್ದಾರೆ ಎಂದರು.

    ಕಲಬುರಗಿ ಇಎಸ್‍ಐಗೆ ಇಲ್ಲಿಯವರೆಗೆ ಒಂದು ರೂಪಾಯಿ ಬಂದಿಲ್ಲ. ಈ ಬಗ್ಗೆ ಸಂಸದ ಉಮೇಶ್ ಜಾಧವ್ ಕೇಂದ್ರಕ್ಕೆ ಕೇಳುತ್ತಿಲ್ಲ. ಹೀಗಾಗಿ ಜಾಧವ್ ಸುಮ್ಮನೆ ರಾಜೀನಾಮೆ ನೀಡಿ ಆಸ್ಪತ್ರೆ ತೆಗೆಯಲಿ ಎಂದು ಜಾಧವ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

  • ರಾಜ್ಯದಲ್ಲಿ ಲಾಕ್‍ಡೌನ್ ಮತ್ತಷ್ಟು ಸಡಿಲ- ನಗರ ಪ್ರದೇಶದಲ್ಲಿಯೂ ಕಟ್ಟಡ ನಿರ್ಮಾಣಕ್ಕೆ ಅನುಮತಿ

    ರಾಜ್ಯದಲ್ಲಿ ಲಾಕ್‍ಡೌನ್ ಮತ್ತಷ್ಟು ಸಡಿಲ- ನಗರ ಪ್ರದೇಶದಲ್ಲಿಯೂ ಕಟ್ಟಡ ನಿರ್ಮಾಣಕ್ಕೆ ಅನುಮತಿ

    – ಐಸ್‍ಕ್ರೀಂ, ಜ್ಯೂಸ್, ಪುಸ್ತಕ ಮಾರಾಟಕ್ಕೆ ಗ್ರೀನ್ ಸಿಗ್ನಲ್

    ಬೆಂಗಳೂರು: ಕೇಂದ್ರ ಸರ್ಕಾರದ ಬುಧವಾರ ನೀಡಿದ್ದ ಮಾರ್ಗಸೂಚಿಗಳ ಅನ್ವಯ ಒಂದಿಷ್ಟು ಕೊರೊನಾ ಲಾಕ್‍ಡೌನ್ ನಿಯಮಗಳನ್ನು ಸಡಿಲ ಮಾಡಿದ್ದ ರಾಜ್ಯ ಸರ್ಕಾರ, ಇವತ್ತು ಇನ್ನೊಂದಿಷ್ಟು ವಿನಾಯಿತಿ ನೀಡಿ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ.

    ಬೆಂಗಳೂರು ಸೇರಿದಂತೆ ನಗರ ಹಲವು ನಗರಗಳಲ್ಲಿ ಕೊರೊನಾ ಸೋಂಕಿನ ತೀವ್ರತೆ ಕಡಿಮೆ ಆಗದಿದ್ದರೂ ರಾಜ್ಯ ಸರ್ಕಾರ ರಿಸ್ಕ್ ತೆಗೆದುಕೊಂಡಂತೆ ಕಾಣುತ್ತಿದೆ. ಮೊಬೈಲ್ ಅಂಗಡಿ, ಜ್ಯೂಸ್ ಅಂಗಡಿ, ಕಟ್ಟಡ ನಿರ್ಮಾಣ ಹೀಗೆ ಹಲವುಗಳಿಗೆ ಮಹಾನಗರ, ನಗರಸಭೆಗಳ ವ್ಯಾಪ್ತಿಯಲ್ಲಿ ಷರತ್ತುಬದ್ಧ ಅನುಮತಿ ನೀಡಿದೆ.

    ಬೆಂಗಳೂರು ಸೇರಿದಂತೆ ಮಹಾನಗರ, ನಗರಸಭೆಗಳ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಬುಧವಾರ ಅವಕಾಶ ನೀಡಿರಲಿಲ್ಲ. ಇದಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯುಡಿಯೂರಪ್ಪ ನೇತೃತ್ವದ ಸರ್ಕಾರ ಮಣಿದಂತೆ ಕಾಣುತ್ತಿದೆ. ರಾಜ್ಯ ಸರ್ಕಾರ ಇವತ್ತು ನೀಡಿರುವ ಲಾಕ್‍ಡೌನ್ ವಿನಾಯ್ತಿಗಳನ್ನು ಘೋಷಿಸಿದೆ.

    ಲಾಕ್‍ಡೌನ್‍ನಿಂದ ಮತ್ತಷ್ಟು ವಿನಾಯ್ತಿ..!
    * ನಗರ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ
    * ಕಾರ್ಮಿಕರು ಸೈಟ್‍ನಲ್ಲಿಯೇ ಇರಬೇಕು (ಕಾರ್ಮಿಕರಿಗೆ ಅಲ್ಲಿಯೇ ಉಳಿದುಕೊಳ್ಳಲು ಅಗತ್ಯ ಸೌಲಭ್ಯ ಕಲ್ಪಿಸಬೇಕು, ಹೊರಗಿನಿಂದ ಕಾರ್ಮಿಕರನ್ನು ಕರೆಸುವಂತಿಲ್ಲ)
    * ನೀರು ಪೂರೈಕೆ ಮತ್ತು ಒಳಚರಂಡಿ ರಿಪೇರಿ
    * ಟೆಲಿಕಾಮ್, ಕೇಬಲ್ ಸಂಬಂಧಿ ಕೆಲಸಗಳು

    * ಬ್ಯಾಂಕೇತರ ಹಣಕಾಸು ಸಂಸ್ಥೆಗಳು
    * ಸಹಕಾರ ಬ್ಯಾಂಕ್/ಸೊಸೈಟಿಗಳು
    * ಸ್ಟೇಷನರಿ ಮತ್ತು ಬುಕ್ ಶಾಪ್
    * ಎಲೆಕ್ಟ್ರಿಕ್ ಅಂಗಡಿ (ಫ್ಯಾನ್ ಮಾರಲು ಅವಕಾಶ)
    * ನಗರ ಪ್ರದೇಶದಲ್ಲಿ ಆಹಾರ ಸಂಸ್ಕರಣೆ ಘಟಕ (ಬ್ರೆಡ್, ಹಾಲು, ಬೇಳೆ, ಫ್ಲೋರ್‍ಮಿಲ್)
    * ಪ್ರಿಪೇಡ್ ಮೊಬೈಲ್ ರಿಚಾರ್ಜ್‍ಗೆ ಅಂಗಡಿ
    * ಐಸ್ ಕ್ರರೀಂ, ಡ್ರೈ ಫ್ರೂಟ್ಸ್, ಜ್ಯೂಸ್ ಅಂಗಡಿ (ಪಾರ್ಸಲ್‍ಗಷ್ಟೇ ಅವಕಾಶ)
    * ಹಿರಿಯ ನಾಗರಿಕರು ಇರುವ ಮನೆಗಳಿಗೆ ಸಹಾಯಕಿಯರು

  • ಕೊರೊನಾ ವಿರುದ್ಧ ಹೋರಾಡಲು ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಕೊಡಿ – ಕೇಂದ್ರಕ್ಕೆ ಕಾಂಗ್ರೆಸ್ ಒತ್ತಾಯ

    ಕೊರೊನಾ ವಿರುದ್ಧ ಹೋರಾಡಲು ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಕೊಡಿ – ಕೇಂದ್ರಕ್ಕೆ ಕಾಂಗ್ರೆಸ್ ಒತ್ತಾಯ

    ನವದೆಹೆಲಿ: ಕೊರೊನಾ ವಿರುದ್ಧ ಹೋರಾಡಲು ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಅಧಿಕಾರ ಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಒತ್ತಾಯ ಮಾಡಿದೆ.

    ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಿ, ಕೇಂದ್ರ ಸರ್ಕಾರ ಕೊರೊನಾ ವೈರಸ್ ವಿರುದ್ಧ ಹೋರಾಡಲು ರಾಜ್ಯಗಳಿಗೆ ಹೆಚ್ಚಿ ಅರ್ಥಿಕ ನೆರವು ನೀಡಬೇಕು ಮತ್ತು ರಾಜ್ಯಗಳಿಂದ ಬಂದ ಜಿಎಸ್‍ಟಿ ತೆರಿಗೆಯನ್ನು ಸಂಪೂರ್ಣವಾಗಿ ಅವುಗಳಿಗೇ ವಾಪಸ್ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.

    ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ರಾಜ್ಯಗಳನ್ನು ಸಬಲೀಕರಣಗೊಳಿಸಲು ಕೇಂದ್ರ ಸರ್ಕಾರವು ಸಾಕಷ್ಟು ಆರ್ಥಿಕ ನೆರವು ನೀಡಬೇಕು. ಇದನ್ನು ಜಿಎಸ್‍ಟಿಯ ಸಂಪೂರ್ಣ ಮೊತ್ತವನ್ನು ರಾಜ್ಯಗಳಿಗೆ ಹಿಂದಿರುಗಿಸುವ ಮೂಲಕ ಮತ್ತು ಸಾಲ ತೆಗೆದುಕೊಳ್ಳಲು ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯವನ್ನು ರಾಜ್ಯಗಳಿಗೆ ನೀಡುವ ಮೂಲಕ ಪ್ರಾರಂಭಿಸಬಹುದು ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ರಂದೀಪ್ ಸುರ್ಜೆವಾಲಾ ಅವರು ತಿಳಿಸಿದ್ದಾರೆ.

    ಇದೇ ವೇಳೆ ದೇಶವೇ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದರೆ ಬಿಜೆಪಿ ಪಕ್ಷ ಮಾತ್ರ ಕೋಮುವಾದಲ್ಲಿ ಮುಳುಗಿ ಹೋಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಈ ವಿಚಾರವಾಗಿ ಮಾತನಾಡಿರುವ ಕಾಂಗ್ರೆಸ್ ಪಕ್ಷದ ನಾಯಕ ಕೆಸಿ ವೇಣುಗೋಪಾಲ್, ಇಡೀ ದೇಶ ಕೊರೊನಾ ವಿರುದ್ಧ ಹೋರಾಡುತ್ತಿದ್ದರೆ ಬಿಜೆಪಿ ಕೋಮು ವಿಭಜನೆಯನ್ನು ಮಾಡಲು ಪ್ರಯತ್ನ ಮಾಡುತ್ತಿದೆ. ಆದರೆ ಈ ವೈರಸ್ ಜಾತಿ ಧರ್ಮ ಮತ್ತು ಲಿಂಗದ ಅಧಾರದ ಮೇಲೆ ತಾರತಮ್ಮ ಮಾಡುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

    ಕೊರೊನಾ ದೇಶದಲ್ಲಿ ಹೆಚ್ಚಾಗುತ್ತಿರುವ ಸಮಯದಲ್ಲಿ ನಾವು ಇನ್ನು ದೃಢವಾದ ಮತ್ತು ನಿಖರವಾದ ಟೆಸ್ಟಿಂಗ್ ಮಾಡುವಲ್ಲಿ ವಿಫಲವಾಗಿರುವುದು ದುರಂತ. ಈ ಸೋಂಕನ್ನು ತಡೆಯಲು ಟೆಸ್ಟ್ ಮಾಡುವುದು, ಸೋಂಕಿತರನ್ನು ಪತ್ತೆಹಚ್ಚುವುದು ಅವರನ್ನು ಕ್ವಾರಂಟೈನ್ ಮಾಡುವುದು ಇದರ ಜೊತಗೆ ಸೋಂಕಿತರಿಗೆ ಸೂಕ್ತವಾದ ಚಿಕಿತ್ಸೆ ನೀಡುವುದು ನಿರ್ಣಾಯಕವಾಗಿದೆ ಎಂದು ವೇಣುಗೋಪಾಲ್ ಹೇಳಿದರು.

    ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಏಪ್ರಿಲ್ 16ರಂದು ಇಬ್ಬರು ಸಾಧುಗಳು ಮತ್ತು ಅವರ ಚಾಲಕನ ಮೇಲೆ 200 ಜನರು ದೊಣ್ಣೆ ಮತ್ತು ಕಲ್ಲುಗಳಿಂದ ಹಲ್ಲೆ ಮಾಡಿ ಸಾಯಿಸಿ ಹಾಕಿದ್ದರು. ಇದರ ಬಗ್ಗೆ ಬೇಗ ತನಿಖೆ ನಡೆಸುವಂತೆ ಬಿಜೆಪಿ ಮಹಾ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಇದನ್ನು ಮಾಡುವಲ್ಲಿ ವಿಳಂಬ ಮಾಡಿದ್ದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆರೋಪ, ಪ್ರತ್ಯಾರೋಪ ನಡೆಯುತ್ತಿದೆ.

    ಈ ವಿಚಾರವಾಗಿ ನೆನ್ನೆ ಮಾತನಾಡಿದ್ದ ಮಹಾರಾಷ್ಟ್ರದ ಗೃಹ ಮಂತ್ರಿ ಅನಿಲ್ ದೇಶ್ಮುಖ್, ಸಾಧು ಮೇಲೆ ದಾಳಿಯಲ್ಲಿ ಭಾಗಿಯಾದ 101 ಜನರನ್ನು ನಮ್ಮ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ಅದರಲ್ಲಿ ಒಬ್ಬರೂ ಮುಸ್ಲಿಂ ಸಮಾಜಕ್ಕೆ ಸೇರಿದ ವ್ಯಕ್ತಿಗಳು ಇಲ್ಲ. ಆದರೆ ಈ ಘಟನೆಗೆ ಕೋಮು ಬಣ್ಣ ಬಳಿಯಲು ಪ್ರಯತ್ನಿಸಿದ ಬಿಜೆಪಿ ಇದು ಮುಸ್ಲಿಮರೇ ಮಾಡಿರುವ ಕೃತ್ಯ ಎಂದು ಬಿಂಬಿಸಲು ಹೊರಟಿತ್ತು. ರಾಜಕೀಯವಾಗಿ ಹೊಡೆದಾಡಿಕೊಳ್ಳುವ ಸಮಯವಿದಲ್ಲ. ನಾವೆಲ್ಲ ಸೇರಿ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದಿದ್ದರು.

  • ಕೊರೊನಾ ವಾರಿಯರ್ಸ್ ಮೇಲೆ ದಾಳಿ ನಡೆಸಿದ್ರೆ ಹುಷಾರ್- ರಾಜ್ಯದಲ್ಲಿ 3 ವರ್ಷ ಜೈಲು, ಆಸ್ತಿ ಜಪ್ತಿ

    ಕೊರೊನಾ ವಾರಿಯರ್ಸ್ ಮೇಲೆ ದಾಳಿ ನಡೆಸಿದ್ರೆ ಹುಷಾರ್- ರಾಜ್ಯದಲ್ಲಿ 3 ವರ್ಷ ಜೈಲು, ಆಸ್ತಿ ಜಪ್ತಿ

    – ಕೇಂದ್ರದಿಂದಲೂ 7 ವರ್ಷ ಶಿಕ್ಷೆಗೆ ಸುಗ್ರೀವಾಜ್ಞೆ

    ಬೆಂಗಳೂರು: ನಗರದ ಪಾದರಾಯನಪುರ ಗಲಭೆ ಬೆನ್ನಲ್ಲೇ ಕೊರೊನಾ ವಾರಿಯರ್ಸ್ ಮೇಲಿನ ದಾಳಿ ತಡೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.

    ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ತಕ್ಷಣದಿಂದಲೇ ಜಾರಿಗೆ ಬಂದಿದೆ. ಇನ್ಮೇಲೆ, ಸರ್ಕಾರಿ ಅಧಿಕಾರಿಗಳು, ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದರೆ ಅಂಥವರಿಗೆ ಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ಶಿಕ್ಷೆ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಕೂಡ 1897ರ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನಕ್ಕೆ ಬಂದಿದ್ದು, ಕೊರೋನಾ ವಾರಿಯರ್ಸ್ ಮೇಲೆ ನಡೆಯುತ್ತಿರುವ ಕೃತ್ಯಗಳು `ಸಹಿಸುವಂತ ಪ್ರಕರಣ’ಗಳೇ ಅಲ್ಲ ಅಂತ ಸ್ಪಷ್ಟಪಡಿಸಿದೆ. ಏಪ್ರಿಲ್ 27ರಂದು ಪ್ರಧಾನಿ ಮೋದಿ ಅವರು, ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಈ ನಡುವೆಯೂ ಇಂದು ಪಾದರಾಯನಪುರದ ಗಲಭೆಯಂತಹ ಘಟನೆ ಪಶ್ಚಿಮ ಬಂಗಾಳದ ಬದುರಿಯಾದಲ್ಲಿ ನಡೆದಿದೆ. ಲಾಕ್‍ಡೌನ್ ಕಾವಲಿಗೆ ಇದ್ದ ಪೊಲೀಸರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ.

    ರಾಜ್ಯದ ಸುಗ್ರೀವಾಜ್ಞೆಯಲ್ಲಿ ಏನಿದೆ?
    ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ್ರೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆಸ್ತಿ ನಷ್ಟ ಉಂಟುಮಾಡಿದರೆ ಆಸ್ತಿ ಮಟ್ಟುಗೋಲು ಹಾಕಲಾಗುತ್ತದೆ. ಆಸ್ತಿ ಇಲ್ಲದಿದ್ದರೆ ಆರೋಪಿಗಳು ಬಂಧನ, ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. ಜಿಲ್ಲಾ ದಂಡಾಧಿಕಾರಿಗಳಿಗೆ ಅಧಿಕಾರ ಚಲಾಯಿಸಲು ಅವಕಾಶ ನೀಡಲಾಗಿದೆ. ಈ ಮೂಲಕ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಬಂಧನ ಮಾಡಬಹುದು. ಹಲ್ಲೆಗೊಳಗಾದ ಕೊರೊನಾ ವಾರಿಯರ್ಸ್ ದೂರು ದಾಖಲಿಸಬೇಕಿಲ್ಲ.

    ಕೇಂದ್ರದ ಸುಗ್ರೀವಾಜ್ಞೆಯಲ್ಲಿ ಏನಿರುತ್ತೆ?
    ಹೆಲ್ತ್ ವಾರಿಯರ್ಸ್ ಮೇಲಿನ ಹಲ್ಲೆಗೆ 6 ತಿಂಗಳಿಂದ 7 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ. 50 ಸಾವಿರ ರೂ.ದಿಂದ 5 ಲಕ್ಷ ರೂಪಾಯಿವರೆಗೂ ದಂಡ ವಿಧಿಸಲಾಗುವುದು. ವಾಹನಗಳು, ಆಸ್ಪತ್ರೆಗಳ ಮೇಲೆ ದಾಳಿ ನಡೆದು ಆಸ್ತಿ ನಷ್ಟ ಸಂಭವಿಸಿದರೆ ಅವುಗಳ ಮಾರುಕಟ್ಟೆ ಮೌಲ್ಯದ ದುಪ್ಪಟ್ಟು ದಂಡವನ್ನು ವಸೂಲಿ ಮಾಡಲಾಗುತ್ತದೆ. ಇಂತಹ ಪ್ರಕರಣವನ್ನು ಒಂದು ವರ್ಷದೊಳಗೆ ವಿಚಾರಣೆ ಮುಗಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗುತ್ತದೆ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಸಂಪೂರ್ಣ ಭದ್ರತೆ ನೀಡಲಾಗುತ್ತದೆ.

  • ಗುರುವಾರದಿಂದ ಕರ್ನಾಟಕದಲ್ಲಿ ಏನಿರುತ್ತೆ? ಏನಿರಲ್ಲ? ಕಡ್ಡಾಯ ಏನು?

    ಗುರುವಾರದಿಂದ ಕರ್ನಾಟಕದಲ್ಲಿ ಏನಿರುತ್ತೆ? ಏನಿರಲ್ಲ? ಕಡ್ಡಾಯ ಏನು?

    ಬೆಂಗಳೂರು: ರಾಜ್ಯ ಸರ್ಕಾರ ಕೊನೆಗೂ ಕೊರೋನಾ ಲಾಕ್‍ಡೌನ್ ಸಡಿಲಿಕೆ ಮಾಡಿದೆ. ಪಾದರಾಯನಪುರ ಗಲಭೆ ಬಳಿಕ ಮೇ ಮೂರವರೆಗೂ ಯಾವುದೇ ಸಡಿಲಿಕೆ ಇಲ್ಲ ಎಂದಿದ್ದ ಯಡಿಯೂರಪ್ಪ ನೇತೃತ್ವದ ಸರ್ಕಾರ ಇವತ್ತು ಯೂಟರ್ನ್ ತೆಗೆದುಕೊಂಡಿದೆ.

    ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಭಾಗಷಃ ಲಾಕ್‍ಡೌನ್ ಸಡಿಲಿಕೆ ಮಾಡಿ ತೀರ್ಮಾನ ತೆಗೆದುಕೊಂಡಿದೆ. ಹಾಟ್ ಸ್ಪಾಟ್, ನಾನ್ ಹಾಟ್‍ಸ್ಪಾಟ್ ಮತ್ತು ಹಸಿರು ವಲಯದ ಸೂತ್ರಗಳನ್ನು ಪಕ್ಕಕ್ಕೆ ಇಟ್ಟ ರಾಜ್ಯ ಸರ್ಕಾರ, ಕೊರೋನಾ ಸೋಂಕು ಹೆಚ್ಚಿರುವ ಕಂಟೈನ್‍ಮೆಂಟ್ ಜೋನ್‍ಗಳನ್ನು ಹೊರತುಪಡಿಸಿ ಉಳಿದ ಕಡೆ ಲಾಕ್‍ಡೌನ್ ಸಡಿಲ ಮಾಡುತ್ತಿದೆ.

    ಸಡಿಲಿಕೆ ನೀಡಿದರೂ ಷರತ್ತುಗಳು ಅನ್ವಯ ಆಗುತ್ತವೆ. ಕ್ವಾರಂಟೇನ್‍ನಲ್ಲಿರುವವರು ಹೊರ ಬರುವಂತೆ ಇಲ್ಲ. ಬೆಂಗಳೂರಿನಲ್ಲಿ ತಂಬಾಕು, ಗುಟ್ಕಾ, ಸಿಗರೇಟು ಮಾರಾಟ ನಿಷೇಧಿಸಿ ಬಿಬಿಎಂಪಿ ಸಹ ಆದೇಶ ಹೊರಡಿಸಿದೆ.

    ನಾಳೆಯಿಂದ ಏನಿರುತ್ತೆ..?
    * ತುರ್ತು ಸಂದರ್ಭಗಳಲ್ಲಿ ಖಾಸಗಿ ವಾಹನಗಳ ಸಂಚಾರ
    * ಮನೆ – ಕಚೇರಿ ನಡುವೆ ಸಂಚಾರಕ್ಕೆ ಪಾಸ್ ಕಡ್ಡಾಯ
    * ಎಲ್ಲಾ ರೀತಿಯ ಕೃಷಿ, ತೋಟಗಾರಿಕಾ ಚಟುವಟಿಕೆ
    * ಎಪಿಎಂಸಿ, ಬೀಜ, ಗೊಬ್ಬರ, ಕ್ರಿಮಿನಾಶಕಗಳ ಅಂಗಡಿ
    * ಮೀನುಗಾರಿಕೆ, ಹೈನೋದ್ಯಮ, ಕುಕ್ಕಟೋದ್ಯಮ
    * ಬ್ಯಾಂಕ್ ಚಟುವಟಿಕೆ, ಎಟಿಎಂ, ಷೇರುಪೇಟೆ

    * ಎಲ್ಲಾ ರೀತಿಯ ಪಿಂಚಣಿ ವಿತರಿಸಲು ಅವಕಾಶ
    * ಅಂಗನವಾಡಿಗಳಿಗೆ ಷರತ್ತುಬದ್ಧ ಅನುಮತಿ (ಮಕ್ಕಳು, ಗರ್ಭಿಣಿಯರ ಮನೆಗಳಿಗೆ ಪೌಷ್ಠಿಕಾಂಶ ಆಹಾರ ತಲುಪಿಸುವ ಕ್ರಮ)
    * ಆನ್‍ಲೈನ್ ತರಗತಿ, ಕೋರಿಯರ್ ಸೇವೆ
    * ಎಲೆಕ್ಟ್ರಿಷಿಯನ್, ಮೋಟಾರ್ ಮೆಕಾನಿಕ್, ಪ್ಲಂಬರ್, ಕಾರ್ಪೆಂಟರ್ ಸೇವೆ
    * ನರೇಗಾ ಯೋಜನೆಯಡಿ ನೀರಾವರಿ ಕಾಮಗಾರಿ
    * ತುರ್ತು ಮತ್ತು ಅಗತ್ಯ ವಸ್ತುಗಳ ತಯಾರಿಕಾ ಘಟಕ
    * ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ಸಂಸ್ಕರಣೆ ಘಟಕ

    * ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಕಟ್ಟಡ ನಿರ್ಮಾಣ, ನೀರಾವರಿ ಕಾಮಗಾರಿ
    * ಕೈಗಾರಿಕಾ ಪ್ರದೇಶಗಳಲ್ಲಿ ಸ್ಥಳೀಯ ಕಾರ್ಮಿಕ ಬಳಸಿಕೊಂಡು ನಿರ್ಮಾಣ
    * ಮೆಟ್ರೋ ರೈಲು ಕಾಮಗಾರಿ (ಸ್ಥಳೀಯ ಕಾರ್ಮಿಕರನ್ನು ಮಾತ್ರ ಬಳಸಿಕೊಳ್ಳಬೇಕು)
    * ಸೀಮೆಂಟ್, ಸ್ಟೀಲ್, ಜಲ್ಲಿ, ಟೈಲ್ಸ್, ಇಟ್ಟಿಗೆ ಸಾಗಿಸಲು ಅವಕಾಶ (ಇಬ್ಬರು ಚಾಲಕರು, ಓರ್ವ ಕ್ಲೀನರ್)
    * ಹೈವೇ ಪಕ್ಕದ ಡಾಬಾ, ಟ್ರಕ್ ರಿಪೇರಿ ಶಾಪ್‍ಗಳು (20 ಕಿಲೋಮೀಟರ್ ಅಂತರ)
    * ಪಾರ್ಸೆಲ್ ಮತ್ತು ಸರಕು ಸಾಗಣೆ ರೈಲು, ಕಾರ್ಗೋ ವಿಮಾನ

    * ಇ-ಕಾಮರ್ಸ್ ಸೇವೆ (ಅಗತ್ಯ ವಸ್ತುಗಳ ಪೂರೈಕೆಗಷ್ಟೇ ಅವಕಾಶ)
    * ತುರ್ತು ಮತ್ತು ಅಗತ್ಯ ಸೇವೆ ಒದಗಿಸುವ ಸರ್ಕಾರಿ ಕಚೇರಿಗಳು
    * ಸಚಿವರು, ಉನ್ನತಧಿಕಾರಿಗಳು ಕಚೇರಿಗೆ ಹಾಜರಾಗುವುದು ಕಡ್ಡಾಯ
    * ಶೇ.33ರಷ್ಟು ಕೆಳ ಹಂತದ ಅಧಿಕಾರಿಗಳಿಂದ ಕಚೇರಿ ನಡೆಸಬೇಕು
    * ಶೇ.33ರಷ್ಟು ನೌಕರರೊಂದಿಗೆ ಐಟಿ-ಬಿಟಿ ಕಚೇರಿಗಳು ಓಪನ್

    ಯಾವುದಕ್ಕೆ ಇಲ್ಲ ರಿಲೀಫ್..?
    > ಬಸ್, ರೈಲು, ನಮ್ಮ ಮೆಟ್ರೋ, ವಿಮಾನ ಸಂಚಾರ
    > ಅಂತರ್ ಜಿಲ್ಲೆ, ಅಂತರ್ ರಾಜ್ಯಗಳ ನಡುವಣ ಸಂಚಾರ
    > ಶೈಕ್ಷಣಿಕ ಸಂಸ್ಥೆಗಳು, ತರಬೇತಿ ಕೇಂದ್ರಗಳು
    > ಕೈಗಾರಿಕೆ, ವಾಣಿಜ್ಯ ಚಟುವಟಿಕೆ (ಅಗತ್ಯ ಸೇವೆ ಹೊರತುಪಡಿಸಿ)
    > ಆತಿಥ್ಯ ಸೇವೆಗಳು (ಅಗತ್ಯ ಸೇವೆ ಹೊರತುಪಡಿಸಿ)
    > ಓಲಾ, ಉಬರ್ ಕ್ಯಾಬ್, ಟ್ಯಾಕ್ಸಿ, ಆಟೋ ರಿಕ್ಷಾ
    > ಥಿಯೇಟರ್, ಶಾಪಿಂಗ್ ಮಾಲ್, ಜಿಮ್, ಈಜುಕೊಳ
    > ಹೋಟೆಲ್, ರೆಸ್ಟೋರೆಂಟ್, ಬಾರ್, ವೈನ್ ಶಾಪ್
    > ಎಲ್ಲಾ ರೀತಿಯ ಸಭೆ ಸಮಾರಂಭಗಳು
    > ಅಂತ್ಯಕ್ರಿಯೆಯಲ್ಲಿ 20ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವಂತಿಲ್ಲ

    ಕಡ್ಡಾಯವಾಗಿ ಏನು ಪಾಲಿಸಬೇಕು?
    > ಕಚೇರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು
    > ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ನಿಷೇಧ, ಸಾಮಾಜಿಕ ಅಂತರ
    > ಸಾರ್ವಜನಿಕ ಸ್ಥಳಗಳಲ್ಲಿ 5ಕ್ಕಿಂತ ಹೆಚ್ಚು ಮಂದಿ ನಿಲ್ಲುವಂತಿಲ್ಲ
    > ಕಚೇರಿಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಸರ್
    > 65 ವರ್ಷ ಮೇಲ್ಪಟ್ಟವರು, ಚಿಕ್ಕ ಮಕ್ಕಳ ತಾಯಂದಿರಿಗೆ ಮನೆಯಿಂದಲೇ ಕೆಲಸ
    > ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯ, ದೊಡ್ಡ ಸಭೆ ಮಾಡುವಂತಿಲ್ಲ
    > ಡಿಸಿ ಅನುಮತಿ ಪಡೆದು ಮದುವೆ, ಇತ್ಯಾದಿ ಸಮಾರಂಭ

  • ಶೋಭಾ ಕರಂದ್ಲಾಜೆ ವಿರುದ್ಧ ಎಚ್‍ಎಂ ರೇವಣ್ಣ ವಾಗ್ದಾಳಿ

    ಶೋಭಾ ಕರಂದ್ಲಾಜೆ ವಿರುದ್ಧ ಎಚ್‍ಎಂ ರೇವಣ್ಣ ವಾಗ್ದಾಳಿ

    ಚಿಕ್ಕಬಳ್ಳಾಪುರ: ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ರಾಜ್ಯ ಸರ್ಕಾರ ವಿರುದ್ಧ ಮಾಜಿ ಸಚಿವ ಎಚ್‍ಎಂ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

    ಚಿಕ್ಕಬಳ್ಳಾಪುರ ನಗರದಲ್ಲಿ ಕಾಂಗ್ರೆಸ್ ಪಕ್ಷದ ಕೋವಿಡ್-19 ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್‍ಎಂ ರೇವಣ್ಣ, ರಾಜ್ಯ ಸರ್ಕಾರದ ಕೆಲ ಸಚಿವರು ಸುಖಾಸುಮ್ಮನೆ ಬಾಯಿ ಹರಿದುಕೊಳ್ಳುತ್ತಿದ್ದಾರೆ, ಅದರಲ್ಲೂ ಶೋಭಾ ಕರಂದ್ಲಾಜೆ ಕೆಲವರನ್ನು ನೇಣು ಹಾಕಿ ಅಂತಿದ್ದಾರೆ. ಒಬ್ಬ ಜನಪ್ರತಿನಿಧಿಯಾದವರು ಈ ರೀತಿ ಮಾತನಾಡುವುದು ಸರಿಯಾ ಎಂದು ಪ್ರಶ್ನೆ ಮಾಡಿದರು.

    ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಎಚ್‍ಎಂ ರೇವಣ್ಣ, ರಾಜ್ಯ ಸರ್ಕಾರ ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ಆರಂಭದಲ್ಲೇ ಎಡವಿದೆ. ವಿದೇಶದಿಂದ ಬಂದವರನ್ನ ವಿಮಾನ ನಿಲ್ದಾಣದಲ್ಲೇ ಟೆಸ್ಟ್ ಮಾಡಿಸಿ 14 ದಿನಗಳ ಕಾಲ ಕ್ವಾರಂಟೈನ್ ಮಾಡಿ ಮನೆಗಳಿಗೆ ಬಿಡಬೇಕಿತ್ತು. ಅದು ಮಾಡದೆ ಉಡಾಫೆ ಮಾಡಿದ್ದಲ್ಲದೇ, ಸಮರ್ಪಕ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಸದ್ಯ ವೈದ್ಯರಿಗೆ ಪಿಪಿಇ ಕಿಟ್ ಹಾಗೂ ಮಾಸ್ಕ್ ಸಹ ನೀಡುತ್ತಿಲ್ಲ ಎಂದು ಆರೋಪಿಸಿದರು.

    7 ಕೆಜಿ ಕೊಡುತ್ತಿದ್ದ ಅಕ್ಕಿಯನ್ನ 2 ತಿಂಗಳು ಎಂದು 5-5 ಅಂತ 10 ಕೆಜಿ ಕೊಟ್ರೆ ಸಾಕಾಗುತತಾ? ಅಕ್ಕಿ ಗೋಧಿ ಜೊತೆಗೆ ಎಣ್ಣೆ ಬೇಳೆ ಬೇರೆ ಪದಾರ್ಥಗಳು ಕೊಡೋದು ಬೇಡವಾ? ಲಾಕ್‍ಡೌನ್ ಎಂದು ಜನ ಮನೆಯಲ್ಲೇ ಇರಿ ಅಂತೀರಿ ಆಚೆ ಬಂದರೆ ಪೊಲೀಸರು ಹೊಡಿತಾರೆ. ಹೀಗಿದ್ದಾಗ ಜನ ಬದುಕುವುದು ಹೇಗೆ ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು.

  • 388ಕ್ಕೆ ಏರಿದ ಸೋಂಕಿತರ ಸಂಖ್ಯೆ – ಮೈಸೂರಿನಲ್ಲಿ ನಾಲ್ವರಿಗೆ ಕೊರೊನಾ

    388ಕ್ಕೆ ಏರಿದ ಸೋಂಕಿತರ ಸಂಖ್ಯೆ – ಮೈಸೂರಿನಲ್ಲಿ ನಾಲ್ವರಿಗೆ ಕೊರೊನಾ

    ಬೆಂಗಳೂರು: ದಿನೇ ದಿನೇ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇವತ್ತು ನಾಲ್ವರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ 388ಕ್ಕೆ ಏರಿಕೆ ಕಂಡಿದೆ.

    ಬೆಳಗ್ಗೆ ಒಟ್ಟು ನಾಲ್ವರಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ದೆಹಲಿಗೆ ತಬ್ಲಿಘಿ ಜಮಾತ್‍ಗೆ ಹೋಗಿದ್ದ ಮೈಸೂರಿನ ಇಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಇನ್ನೂ ನಂಜನಗೂಡಿನ ಇಬ್ಬರಲ್ಲಿ ಸೋಂಕು ಇರುವುದು ದೃಢವಾಗಿದೆ.

    ಸೋಂಕಿತರ ವಿವರ:
    1. ರೋಗಿ- 385: 46 ವರ್ಷದ ಪುರುಷ, ಮೈಸೂರು ನಿವಾಸಿ. ದೆಹಲಿಗೆ ಪ್ರಯಾಣ ಮಾಡಿದ್ದ.
    2. ರೋಗಿ- 386: 20 ವರ್ಷದ ಯುವಕ, ಮೈಸೂರು ನಿವಾಸಿ. ದೆಹಲಿಗೆ ಪ್ರಯಾಣ ಮಾಡಿದ್ದ.
    3. ರೋಗಿ- 387: 39 ವರ್ಷದ ಪುರುಷ, ಮೈಸೂರಿನ ನಂಜನಗೂಡು ನಿವಾಸಿ. ರೋಗಿ ನಂಬರ್ 52ರ ದ್ವಿತೀಯ ಸಂಪರ್ಕ.
    4. ರೋಗಿ- 388: 23 ವರ್ಷದ ಯುವತಿ, ಮೈಸೂರಿನ ನಂಜನಗೂಡು ನಿವಾಸಿ. ರೋಗಿ ನಂಬರ್ 319ರ ಸಂಪರ್ಕ.

  • ಉಚಿತ ಹಾಲು ಪಡೆಯಲು 1.5 ಕಿ.ಮೀ ಕ್ಯೂ

    ಉಚಿತ ಹಾಲು ಪಡೆಯಲು 1.5 ಕಿ.ಮೀ ಕ್ಯೂ

    ಬೆಂಗಳೂರು: ರಾಜ್ಯ ಸರ್ಕಾರ ಜನರ ಜೀವದ ಜೊತೆ ಆಟವಾಡುತ್ತಿದೆಯಾ? ಸರ್ಕಾರವೇ ಕೊರೊನಾ ಸೋಂಕು ಹರಡಿಸುತ್ತಿದೆಯಾ ಎಂಬ ಅನುಮಾನ ಶುರುವಾಗಿದೆ.

    ಹೌದು, ಸರ್ಕಾರ ನೀಡುತ್ತಿರುವ ಉಚಿತ ಹಾಲು ಪಡೆಯಲು ಜನರು ಕಿಲೋ ಮೀಟರ್ ಗಟ್ಟಲೇ ಕ್ಯೂ ನಿಲ್ಲುತ್ತಿದ್ದಾರೆ. ಕೆಲವೊಮ್ಮೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದ ಪ್ರಸಂಗಗಳು ವರದಿಯಾಗಿವೆ. ಇಂತಹದ್ದೇ ಸನ್ನಿವೇಶವೊಂದು ಇಂದು ಮಲ್ಲೇಶ್ವರಂನ ದತ್ತಾತ್ರೇಯ ವಾರ್ಡ್ ನಲ್ಲಿ ನಡೆದಿದೆ.

    ಮಲ್ಲೇಶ್ವರಂನ ದತ್ತಾತ್ರೇಯ ವಾರ್ಡ್‍ನಲ್ಲಿ ಕಳೆದ ಕೆಲವು ದಿನಗಳಿಂದ ಬೆಳಗ್ಗೆ 7 ಗಂಟೆಗೆ ಉಚಿತ ಹಾಲು ವಿತರಣೆ ಮಾಡಲಾಗುತ್ತಿದೆ. ಈ ಹಾಲನ್ನು ಪಡೆಯಲು ಜನರು ಬೆಳಗ್ಗೆ 5 ಗಂಟೆಗೆ ಕ್ಯೂ ನಿಲ್ಲುತ್ತಿದ್ದಾರೆ. ಇಂದು ಕೂಡ ಉಚಿತ ಹಾಲು ಪಡೆಯಲು ಒಂದೂವರೆ ಕಿ.ಮೀ ಕ್ಯೂ ಉಂಟಾಗಿತ್ತು. ಅಷ್ಟೇ ಅಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ನೂರಾರು ಜನರು ಕ್ಯೂನಲ್ಲಿ ನಿಂತಿದ್ದರು.