Tag: State Government

  • ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದ ಕೊರೊನಾ ವಾರಿಯರ್ಸ್

    ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದ ಕೊರೊನಾ ವಾರಿಯರ್ಸ್

    ದಾವಣಗೆರೆ: ಹೆಮ್ಮಾರಿ ಕೊರೊನಾ ವೈರಸ್ ತಡೆಗಟ್ಟಲು ವೈದ್ಯರು ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದು, ಅವರ ಜೊತೆ ವೈದ್ಯಕೀಯ ವಿದ್ಯಾರ್ಥಿಗಳು ಕೂಡ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅಂತಹ ಕೊರೊನಾ ವಾರಿಯರ್ಸ್ ಗಳ ಸರ್ಕಾರ ನಿರ್ಲಕ್ಷ್ಯವಹಿಸಿದೆ.

    15 ತಿಂಗಳ ಶಿಷ್ಯವೇತನಕ್ಕೆ ಒತ್ತಾಯಿಸಿ ದಾವಣಗೆರೆಯ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಕಪ್ಪುಪಟ್ಟಿ ಧರಿಸಿ ಕೋವಿಡ್ ವಾರ್ಡ್‍ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದೆರಡು ದಿನದ ಹಿಂದಷ್ಟೇ ಶಿಷ್ಯವೇತನ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾಸ್ಪತ್ರೆಯ ಮುಂಭಾಗ ಕ್ಯಾಂಡಲ್ ಲೈಟ್ ಹಿಡಿದು ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳು ಇಂದು ಕಪ್ಪು ಪಟ್ಟಿ ಧರಿಸಿ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.

    ಮೆರಿಟ್ ಸೀಟ್ ಪಡೆದ ವಿದ್ಯಾರ್ಥಿಗಳ ಶಿಷ್ಯವೇತನವು 2019ರ ಫೆಬ್ರವರಿಯಿಂದ ಪಾವತಿಯಾಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕಾಲೇಜು, ಹಾಸ್ಟಲ್ ಶುಲ್ಕ ಪಾವತಿಸಲು ಪರದಾಡುವ ಸ್ಥಿತಿಯಲ್ಲಿದ್ದಾರೆ. ಸರ್ಕಾರ ಈ ಕೂಡಲೇ ಶಿಷ್ಯ ವೇತನ ನೀಡಿದರೆ ನಮ್ಮ ಕಷ್ಟ ನಿವಾರಣೆಯಾಗಲಿದೆ ಎಂದು ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ 100ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳಿದ್ದಾರೆ. ನಮ್ಮ ಹೋರಾಟ ನಮ್ಮ ಹಕ್ಕಿಗಾಗಿ, ರೋಗಿಗಳ ವಿರುದ್ಧವಲ್ಲ ಎಂಬ ಘೋಷಣೆಯೊಂದಿಗೆ ಕಪ್ಪು ಪಟ್ಟಿ ಧರಿಸಿ ಸೇವೆಗೆ ಹಾಜರಾಗಿದ್ದಾರೆ.

    ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಾಗಿದ್ದೇವೆ. ನಾವು ಮೆರಿಟ್‍ನಲ್ಲಿ ಸೀಟ್ ಪಡೆದು ವ್ಯಾಸಂಗ ಮಾಡುತ್ತಿದ್ದೇವೆ. ನಮ್ಮ ಮೆರಿಟ್ ಆಧರಿಸಿ ನಮಗೆ ಶಿಷ್ಯವೇತನ ನೀಡಲಾಗುತ್ತದೆ. ಆದರೆ ಕಳೆದ ಫೆಬ್ರವರಿ ತಿಂಗಳಿನಿಂದ ಶಿಷ್ಯವೇತನವಿಲ್ಲದೇ ನಮ್ಮ ಖರ್ಚು, ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಬೇಕೆಂದು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

  • ಮೂರ್ನಾಲ್ಕು ಸಚಿವರನ್ನು ಬಿಟ್ಟು ಉಳಿದವರಿಗೆ ಕೊರೊನಾ ಭಯವಿದೆ- ಎಂಎಲ್‍ಸಿ ಗೋಪಾಲಸ್ವಾಮಿ ವ್ಯಂಗ್ಯ

    ಮೂರ್ನಾಲ್ಕು ಸಚಿವರನ್ನು ಬಿಟ್ಟು ಉಳಿದವರಿಗೆ ಕೊರೊನಾ ಭಯವಿದೆ- ಎಂಎಲ್‍ಸಿ ಗೋಪಾಲಸ್ವಾಮಿ ವ್ಯಂಗ್ಯ

    ಹಾಸನ: ಗ್ರೀನ್‍ಝೋನ್‍ನಲ್ಲಿರುವ ಹಾಸನ ಜಿಲ್ಲೆಗೆ ಹೊಸ ಸವಾಲು ಎದುರಾಗಿದೆ. ಮುಂಬೈನಿಂದ ಚನ್ನರಾಯಪಟ್ಟಣಕ್ಕೆ ಮೂರು ಸಾವಿರ ಜನ ಆಗಮಿಸಲು ಕಾಯುತ್ತಿರುವ ಬಗ್ಗೆ ಎಂಎಲ್‍ಸಿ ಗೋಪಾಲಸ್ವಾಮಿ ಮಾಹಿತಿ ನೀಡಿದ್ದು, ಅವರೆಲ್ಲರನ್ನು ಸಮರ್ಪಕವಾಗಿ ಕ್ವಾರಂಟೈನ್ ಮಾಡುವ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.

    ಮುಂಬೈನಿಂದ ಆಗಮಿಸಿದ್ದ ಮಂಡ್ಯ ಜಿಲ್ಲೆ, ನಾಗಮಂಗಲ ಮೂಲದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿತ್ತು. ಆತ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ 5 ಗ್ರಾಮಗಳಿಗೆ ಭೇಟಿ ನೀಡಿ ಸ್ನೇಹಿತರು, ಸಂಬಂಧಿಕರನ್ನು ಭೇಟಿ ಮಾಡಿ ಹೋಗಿದ್ದ. ಈ ಹಿನ್ನೆಲೆಯಲ್ಲಿ 5 ಗ್ರಾಮಗಳನ್ನು ಸೀಲ್‍ಡೌನ್ ಮಾಡಿದ್ದರಿಂದ ಎಂಎಲ್‍ಸಿ ಗೋಪಾಲಸ್ವಾಮಿ ಗ್ರಾಮದ ಜನರಿಗೆ ಅಗತ್ಯ ವಸ್ತುಗಳಿಗೆ ತೊಂದರೆ ಆಗಬಾರದು ಎಂದು ಆಹಾರ ಸಾಮಗ್ರಿ ಕಿಟ್ ವಿತರಣೆ ಮಾಡಿದರು.

    ಇದೇ ವೇಳೆ ಹಾಸನ ಜಿಲ್ಲೆ ಗ್ರೀನ್‍ಝೋನ್‍ನಲ್ಲಿದ್ದರೂ ಮುಂದಿನ ದಿನಗಳಲ್ಲಿ ಎದುರಿಸಬೇಕಾದ ಸವಾಲುಗಳ ಬಗ್ಗೆ ಮಾತನಾಡಿದರು. ಮುಂಬೈನಿಂದ ಜಿಲ್ಲೆಯ ಚನ್ನರಾಯಪಟ್ಟಣಕ್ಕೆ ಬರಲು 3 ಸಾವಿರ ಜನ ಅರ್ಜಿ ಹಾಕಿಕೊಂಡಿದ್ದಾರೆ. ಚನ್ನರಾಯಪಟ್ಟಣದ ಪಕ್ಕದ ತಾಲೂಕುಗಳಾದ ಕೆ.ಆರ್.ಪೇಟೆ ಮತ್ತು ನಾಗಮಂಗಲಕ್ಕೆ ಸುಮಾರು 10 ಸಾವಿರ ಜನ ಬರುವ ಮಾಹಿತಿ ಇದೆ. ಅವರ ಆರೋಗ್ಯ ಪರಿಶೀಲನೆ ಕಟ್ಟುನಿಟ್ಟಾಗಿ ಆಗಬೇಕು. ಆರ್ಥಿಕವಾಗಿ ಚೆನ್ನಾಗಿರುವವರಿಗೆ ಅವರ ಖರ್ಚಿನಲ್ಲೇ ಹೋಟೆಲ್‍ಗಳಲ್ಲಿ ಕ್ವಾರಂಟೈನ್‍ನಲ್ಲಿ ಮಾಡಬೇಕು. ಬಡ ಜನರಿಗೆ ಸರ್ಕಾರದ ಸಹಾಯದಲ್ಲಿ ಕ್ವಾರಂಟೈನ್ ಮಾಡಬೇಕು ಎಂದರು.

    ಕೊರೊನಾದಂತಹ ಸಂದಿಗ್ಧ ಸಂದರ್ಭದಲ್ಲಿ ಸರ್ಕಾರ ಸಚಿವರ ಬಗ್ಗೆ ಬೇಸರ ವ್ಯಕ್ತಪಡಿಸಿದ ಗೋಪಾಲಸ್ವಾಮಿ ಅವರು, ಮೂರು-ನಾಲ್ಕು ಜನ ಸಚಿವರು ಬಿಟ್ಟು ಬೇರೆಯವರಿಗೆ ಕೊರೊನಾ ಭಯವಿದೆ. ನಮಗೆ ಕೊರೊನ ಬಂದುಬಿಡುತ್ತೆ ಎಂಬ ರೀತಿಯ ಭೀತಿ ಸಚಿವರಲ್ಲಿದೆ ಎಂದು ವ್ಯಂಗ್ಯವಾಡಿದರು.

  • ಗೋವಾದಲ್ಲಿ ಸಿಲುಕಿದ್ದ ಹತ್ತು ಸಾವಿರ ಮಂದಿ ಕರ್ನಾಟಕಕ್ಕೆ ವಾಪಸ್

    ಗೋವಾದಲ್ಲಿ ಸಿಲುಕಿದ್ದ ಹತ್ತು ಸಾವಿರ ಮಂದಿ ಕರ್ನಾಟಕಕ್ಕೆ ವಾಪಸ್

    ಕಾರವಾರ: ಲಾಕ್‍ಡೌನ್‍ನಿಂದ ಗೋವಾದಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ಜನರಿಗೆ ತಮ್ಮ ಊರುಗಳಿಗೆ ತೆರಳಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದ್ದು, ಇಂದಿನಿಂದ ಗೋವಾದಿಂದ ಕರ್ನಾಟಕಕ್ಕೆ ಬರುವ ಜನರಿಗೆ ಕಾರವಾರ-ಗೋವಾ ಗಡಿಭಾಗದ ಮಾಜಾಳಿ ತಪಾಸಣಾ ಕೇಂದ್ರದಲ್ಲಿ ಪಾಸ್ ನೀಡುವ ಮೂಲಕ ತಮ್ಮ ಊರುಗಳಿಗೆ ತೆರಳಲು ಅನುಕೂಲ ಮಾಡಿಕೊಡಲಾಗುತ್ತಿದೆ.

    ಗೋವಾ ರಾಜ್ಯದಿಂದ ಕರ್ನಾಟಕಕ್ಕೆ ತೆರಳಲು ಹತ್ತು ಸಾವಿರ ಜನ ನೊಂದಣಿ ಮಾಡಿಕೊಂಡಿದ್ದು, ಇವರಿಗೆ ಕಾರವಾರ ಜಿಲ್ಲೆ ಹಾಗೂ ಬೆಳಗಾವಿ ಜಿಲ್ಲೆಯ ಮೂಲಕ ಪ್ರವೇಶ ನೀಡಲಾಗುತ್ತಿದೆ. ಜೊತೆಗೆ ಆರೋಗ್ಯ ತಪಾಸಣೆ, ಊಟ ಹಾಗೂ ಸಂಚಾರದ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದ್ದು, ಆನ್‍ಲೈನ್ ಮೂಲಕ ನೊಂದಣಿ ಮಾಡಿಕೊಳ್ಳದ ಜನರಿಗೂ ಸಹ ಉತ್ತರಕನ್ನಡ ಜಿಲ್ಲೆಯ ಜಿಲ್ಲಾಡಳಿತ ಸ್ಥಳದಲ್ಲೇ ಅವರವರ ಜಿಲ್ಲೆ ಹಾಗೂ ರಾಜ್ಯಗಳಿಗೆ ತೆರಳಲು ಇಂದಿನಿಂದ ವ್ಯವಸ್ಥೆ  ಮಾಡಿಕೊಡುತ್ತಿದೆ.

    ಕರ್ನಾಟಕದ ಹತ್ತು ಸಾವಿರ ಜನರು ಮೊದಲ ಹಂತದಲ್ಲಿ ನೊಂದಣಿ ಮಾಡಿಕೊಂಡಿದ್ದು, ರಾಜ್ಯಕ್ಕೆ ಬರುತ್ತಿರುವ ಮಂದಿಗೆ ಆರೋಗ್ಯ ತಪಾಸಣೆ ನಡೆಸಿ, ನಂತರ 14 ದಿನ ಹೋಮ್ ಕ್ವಾರಂಟೈನ್ ಇರುವಂತೆ ಸೂಚಿಸಿ, ಕೈಗಳಿಗೆ ಸೀಲ್ ಹಾಕುವ ಮೂಲಕ ಅವರ ಸ್ಥಳಗಳಿಗೆ ಕಳುಹಿಸಿಕೊಡಲಾಗುತ್ತಿದೆ.

    ಇಂದಿನಿಂದ ಗಡಿಭಾಗದ ಗೋವಾ-ಕಾರವಾರದ ಮಾಜಾಳಿ ಚೆಕ್‍ಪೋಸ್ಟ್ ಬಳಿ ಜಿಲ್ಲಾಡಳಿತ ಪಾಸ್‍ಗಳಿಗಾಗಿ ಕೇಂದ್ರಗಳನ್ನು ತೆರದಿದ್ದು, ಅನಿರ್ದಿಷ್ಟಾವಧಿ ಪಾಸ್ ನೀಡಲಾಗುತ್ತಿದೆ.

  • ಚೈನಾದಿಂದ ಹೊರ ಬರುತ್ತಿರುವ ಕಂಪನಿಗಳನ್ನ ಸೆಳೆಯಲು ರಾಜ್ಯ ಸರ್ಕಾರದಿಂದ ಪ್ಲಾನ್

    ಚೈನಾದಿಂದ ಹೊರ ಬರುತ್ತಿರುವ ಕಂಪನಿಗಳನ್ನ ಸೆಳೆಯಲು ರಾಜ್ಯ ಸರ್ಕಾರದಿಂದ ಪ್ಲಾನ್

    – ಕೈಗಾರಿಕೋದ್ಯಮಿಗಳೊಂದಿಗೆ ಸಚಿವ ಜಗದೀಶ್ ಶೆಟ್ಟರ್ ಸಮಾಲೋಚನೆ

    ಬೆಂಗಳೂರು: ಕೋವಿಡ್-19 ಲಾಕ್‍ಡೌನ್ ನಂತರ ರಾಜ್ಯದ ಆರ್ಥಿಕತೆಗೆ ಉತ್ತೇಜನ ನೀಡಲು ಹಾಗೂ ಚೈನಾ ದೇಶದಿಂದ ಹೊರ ಬರುತ್ತಿರುವ ಕಂಪನಿಗಳನ್ನು ರಾಜ್ಯಕ್ಕೆ ಸೆಳೆಯುವ ಬಗ್ಗೆ ಇಂದು ವಿಧಾನಸೌಧದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.

    ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಜೊತೆಯಲ್ಲಿ ರಾಜ್ಯದ ಪ್ರಮುಖ ಕೈಗಾರಿಕೋದ್ಯಮಿಗಳಾದ ಇನ್ಫೋಸಿಸ್‍ನ ನಾನ್ ಎಕ್ಸಿಕ್ಯೂಟಿವ್ ಚೇರ್ಮನ್ ನಂದನ್ ನೀಲೇಕಣಿ, ಬಯೋಕಾನ್ ಚೇರ್ ಪರ್ಸನ್ ಕಿರಣ್ ಮಜುಂದಾರ್ ಷಾ ಹಾಗೂ ಇನ್ಫೋಸಿಸ್‍ನ ಸಿಇಓ ಕ್ರಿಸ್ ಗೋಪಾಕೃಷ್ಣನ್ ಅವರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆಯನ್ನು ನಡೆಸಲಾಯಿತು.

    ವಿಡಿಯೋ ಕನ್ಫರೆನ್ಸ್ ನಲ್ಲಿ ಮಾತನಾಡಿದ ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್, ಲಾಕ್‍ಡೌನ್ ಸಮಯದಲ್ಲಿ ಕೈಗಾರಿಕೆಗಳ ಪ್ರಾರಂಭಕ್ಕೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳು ಹಾಗೂ ಮುತುವರ್ಜಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಇದೇ ವೇಳೆ ರಾಜ್ಯ ಸರ್ಕಾರ ರಾಜ್ಯಕ್ಕೆ ಕೈಗಾರಿಕೆಗಳನ್ನು ಸೆಳೆಯುವ ನಿಟ್ಟಿನಲ್ಲಿ ಹೂಡಿಕೆ ಸ್ನೇಹಿ ಕ್ರಮಗಳನ್ನು ಕೈಗೊಳ್ಳುತ್ತಿರುವ ಬಗ್ಗೆ ತಿಳಿಸಿದರು.

    ಕೈಗಾರಿಕೋದ್ಯಮಿಗಳಾದ ನಂದನ್ ನೀಲೇಕಣಿ, ಕಿರಣ್ ಮಜುಂದಾರ್ ಷಾ ಹಾಗೂ ಕ್ರಿಸ್ ಗೋಪಾಕೃಷ್ಣನ್ ಕೊರೊನಾ ಮಹಾಮಾರಿಯನ್ನು ನಿಯಂತ್ರಣದಲ್ಲಿಡಲು ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದ ಕೈಗಾರಿಕಾ ಕ್ಷೇತ್ರದ ಸಕಾರಾತ್ಮಕ ಮನೋಭಾವನೆಯನ್ನು ಬೆಳೆಸುವ ನಿಟ್ಟಿನಲ್ಲಿ ಹಲವಾರು ಸಲಹೆಗಳನ್ನು ನೀಡಿದರು. ಏಕಗವಾಕ್ಷಿ ಅರ್ಜಿಗಳ ವಿಲೇವಾರಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವುದು, ಭೂಮಿಯನ್ನು ಕೊಳ್ಳುವ ಹಾಗೂ ಪರಭಾರೆ ಮಾಡಿಕೊಳ್ಳುವ ನಿಯಮಗಳ ಸಡಲಿಕೆ, ರಾಜ್ಯದಲ್ಲಿ ನೂತನ ಕಾರ್ಖಾನೆಯನ್ನು ಪ್ರಾರಂಭಿಸಲು ಇರುವ ನಿಯಮಗಳಲ್ಲಿ ಸ್ಪಷ್ಟತೆ ತರುವುದು ಹೀಗೆ ಹತ್ತು ಹಲವು ಸಲಹೆಗಳನ್ನು ನೀಡಿದರು.

    ಕೊರೊನಾ ಮಹಮಾರಿಯ ನಂತರ ಹಲವಾರು ಕಂಪನಿಗಳು ಚೈನಾ ದೇಶದಿಂದ ತಮ್ಮ ಉತ್ಪಾದನಾ ಕಾರ್ಖಾನೆಗಳನ್ನು ಹೊರ ಬರಲು ಯೋಚನೆ ನಡೆಸುತ್ತಿವೆ. ಈ ಸನ್ನಿವೇಶದ ಸದುಪಯೋಗವನ್ನು ಪಡೆದುಕೊಳ್ಳವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕು. ಹೊರ ಬರುತ್ತಿರುವ ನೂರು ಕಂಪನಿಗಳ ಲಿಸ್ಟ್ ಅನ್ನು ತಯಾರಿಸಿ ಆ ಕಂಪನಿಗಳ ಜೊತೆ ಚರ್ಚೆ ಮಾಡಬೇಕು. ಈ ಹಂತದಲ್ಲಿ ಆ ಕೈಗಾರಿಕೆಗಳ ಸಿಇಓಗಳ ಜೊತೆ ಸಭೆ ನಡೆಸಲು ಕೈಗಾರಿಕೋದ್ಯಮಿಗಳು ಅಗತ್ಯ ಸಹಾಯ ನೀಡುವ ಭರವಸೆಯನ್ನು ನೀಡಿದರು.

    ಕೈಗಾರಿಕೋದ್ಯಮಿಗಳು ನೀಡಿದ ಸಲಹೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಮುಂದಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜೊತೆಗೆ ನೂತನ ಕೈಗಾರಿಕಾ ನೀತಿ ಸದ್ಯದಲ್ಲೇ ಹೊರ ಬೀಳಲಿದ್ದು, ಎಂಎಸ್‍ಎಂಇ ಕೈಗಾರಿಕೆಗಳಿಗೆ ಪರಿಹಾರ ನೀಡುವ ಪ್ಯಾಕೇಜ್ ತರುವ ಬಗ್ಗೆ ಸರ್ಕಾರದ ಜೊತೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

    ಸಭೆಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಗೌರವ್ ಗುಪ್ತಾ, ಕೈಗಾರಿಕಾ ಇಲಾಖೆಯ ಆಯುಕ್ತೆ ಶ್ರಿಮತಿ ಗುಂಜನ್ ಕೃಷ್ಣ ಪಾಲ್ಗೊಂಡಿದ್ದರು.

  • ಹಸಿದವರಿಗೆ ಹೋಳಿಗೆ, ಪಲಾವ್, ಬಜ್ಜಿ ಬಡಿಸಿದ ಎಚ್‍ಡಿಡಿ

    ಹಸಿದವರಿಗೆ ಹೋಳಿಗೆ, ಪಲಾವ್, ಬಜ್ಜಿ ಬಡಿಸಿದ ಎಚ್‍ಡಿಡಿ

    ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಇಂದು ಬೆಂಗಳೂರು ಹೊರವಲಯ ಹೆಗ್ಗನಹಳ್ಳಿಗೆ ಭೇಟಿ ನೀಡಿ ಹಸಿದವರಿಗೆ ಹೋಳಿಗೆ, ಪಲಾವ್, ಬಜ್ಜಿ ಬಡಿಸಿ ಖುಷಿ ಪಟ್ಟಿದ್ದಾರೆ.

    ಕೊರೊನಾ ಲಾಕ್‍ಡೌನ್ ಹಿನ್ನೆಲೆ ಸ್ಥಳೀಯ ಜೆಡಿಎಸ್ ಮುಖಂಡ ಗಂಗಾಧರ್ ನೇತೃತ್ವದಲ್ಲಿ 4 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಸ್ವತಃ ದೇವೇಗೌಡರೇ ಜನರಿಗೆ ಹೋಳಿಗೆ, ಪಲಾವ್, ಬಜ್ಜಿ ಬಡಿಸಿದರು. ಆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಜನರಿಗೆ ಆಹಾರ ಕಿಟ್‍ಗಳನ್ನು ವಿತರಿಸಿದರು.

    ಈ ಬಗ್ಗೆ ಮಾತನಾಡಿದ ಎಚ್‍ಡಿಡಿ, ಈ ಭಾಗದಲ್ಲಿ ಹೆಚ್ಚು ಕೂಲಿ ಕಾರ್ಮಿಕರು ಹಾಗೂ ಬಡ ವರ್ಗದ ಜನರು ಇದ್ದಾರೆ. ಹೀಗಾಗಿ ಲಾಕ್‍ಡೌನ್ ಸಮಯದಲ್ಲಿ ಜನರಿಗೆ ಕೆಲಸವಿಲ್ಲದೆ ಕಷ್ಟದಲ್ಲಿದ್ದಾರೆ. ಈ ಜನರಿಗೆ ನಮ್ಮ ಗಂಗಾಧರ್ ಹಾಗೂ ದಾಸರಹಳ್ಳಿಯ ಶಾಸಕ ಮಂಜುನಾಥ್ ಸಹಾಯ ಮಾಡಿ ಜನರ ಹಸಿವನ್ನ ನೀಗಿಸುವ ಕೆಲಸ ಮಾಡುತ್ತಿದ್ದಾರೆ, ಇದು ಬಹಳ ಸಂತಸ ತಂದಿದೆ ಎಂದು ಹೇಳಿದರು.

    ಬಳಿಕ ಕಾರ್ಮಿಕರ ಸ್ಥಳಾಂತರ ವಿಚಾರದಲ್ಲಿ ಶನಿವಾರ ರಾಜ್ಯ ಸರ್ಕಾರ ತಪ್ಪು ಮಾಡಿದೆ. ರೈಲಿನಲ್ಲಿ 1,200 ಕಾರ್ಮಿಕರನ್ನು ಕಳುಹಿಸಿದ್ದಾರೆ. ಕಾರ್ಮಿಕರು ಊಟ, ವಸತಿ ಇಲ್ಲದೆ ಹಸಿವಿನಿಂದ ಬಳಲಿದ್ದಾರೆ. ಜನರ ಪ್ರತಿಭಟನೆ ಹಿನ್ನೆಲೆ ಇಂದು ಸರ್ಕಾರ ಎಲ್ಲಾ ವ್ಯವಸ್ಥೆ ಮಾಡಿದೆ. ಬಹುಶಃ ಇನ್ನೂ ಹೆಚ್ಚಿನ ರೈಲಿನ ವ್ಯವಸ್ಥೆ ಮಾಡಬಹುದು ಎಂದರು. ಇದೇ ವೇಳೆ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಹೆಚ್ಚು ಪ್ರತಿಕ್ರಿಯಿಸದೆ, ಅವರು ಯಾಕೆ ಪ್ರತಿಭಟನೆ ಮಾಡಬೇಕಿತ್ತು ನನಗೆ ಗೊತ್ತಿಲ್ಲ ಎಂದು ಎಚ್‍ಡಿಡಿ ಸುಮ್ಮನಾದರು.

  • ಸಣ್ಣ ಕೈಗಾರಿಕೆಗಳ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ದಂತಿಲ್ಲ: ಸಿದ್ದರಾಮಯ್ಯ

    ಸಣ್ಣ ಕೈಗಾರಿಕೆಗಳ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ದಂತಿಲ್ಲ: ಸಿದ್ದರಾಮಯ್ಯ

    ಬೆಂಗಳೂರು: ಲಾಕ್‍ಡೌನ್‍ನಿಂದ ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಪೀಣ್ಯ ಕೈಗಾರಿಕೆಗಳ ಸಂಘದ ಪದಾಧಿಕಾರಿಗಳ ಜೊತೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಚರ್ಚೆ ನಡೆಸಿದರು. ಚರ್ಚೆಯ ಬಳಿಕ ಟ್ವೀಟ್ ಮಾಡಿರುವ ಸಿದ್ದರಾಮಯ್ಯನವರು ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದ್ದಾರೆ.

    ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಪೀಣ್ಯ ಕೈಗಾರಿಕೆಗಳ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ತೀವ್ರ ನಷ್ಟಕ್ಕೆ ಒಳಗಾಗಿರುವ ರಾಜ್ಯದ ಸಣ್ಣ ಕೈಗಾರಿಕೆಗಳ ನೆರವಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಶೇಷ ಯೋಜನೆ ರೂಪಿಸುವ ಅಗತ್ಯವಿದೆ. ಕಳೆದ ನಲವತ್ತು ದಿನಗಳಿಂದ ಸಣ್ಣ ಕೈಗಾರಿಕೆಗಳಲ್ಲಿ ಉತ್ಪಾದನಾ ಚಟುವಟಿಕೆ ಬಂದ್ ಆಗಿದ್ದು, ಸರ್ಕಾರಕ್ಕೆ ಬರಬೇಕಾದ ಆದಾಯವೂ ನಿಂತು ಹೋಗಿದೆ. ಸಣ್ಣ ಕೈಗಾರಿಕೆಗಳಲ್ಲಿ ಮತ್ತೆ ಉತ್ಪಾದನಾ ಚಟುವಟಿಕೆಗಳು ಆರಂಭವಾಗಬೇಕಾದರೆ ಸರ್ಕಾರ ಆರ್ಥಿಕ ನೆರವು ಒದಗಿಸಬೇಕು.

    ಸಣ್ಣ ಕೈಗಾರಿಕೆಗಳ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ದಂತಿಲ್ಲ. ಇಲ್ಲಿಯವರೆಗೂ ಕೈಗಾರಿಕಾ ಸಂಘಗಳ ಜೊತೆ ಸರ್ಕಾರ ಮಾತುಕತೆಯನ್ನೇ ನಡೆಸಿಲ್ಲ. ನಷ್ಟದಲ್ಲಿರುವ ಸಣ್ಣ ಕೈಗಾರಿಕೆಗಳು ಚೇತರಿಸಿಕೊಳ್ಳಬೇಕಾದರೆ ಕೆಲವೊಂದು ರಿಯಾಯಿತಿ – ವಿನಾಯಿತಿಗಳನ್ನು ಸರ್ಕಾರ ಈ ಕೂಡಲೇ ಘೋಷಣೆ ಮಾಡಬೇಕು. ಕಾರ್ಖಾನೆ ಮಾಲೀಕರು ಬ್ಯಾಂಕ್‍ಗಳ ಮೂಲಕ ಪಡೆದಿರುವ ಸಾಲದ ಮೇಲಿನ ಬಡ್ಡಿ ಮನ್ನಾ, ಮಾಸಿಕ ಕಂತು ಪಾವತಿಗೆ ವಿನಾಯಿತಿ, ಉತ್ಪನ್ನಗಳ ರಫ್ತಿಗೆ ಉತ್ತೇಜನ ಸೇರಿದಂತೆ ವಿಶೇಷ ಸೌಲಭ್ಯಗಳನ್ನು ಒದಗಿಸಿದರೆ ಮಾತ್ರ ಸಣ್ಣ ಕೈಗಾರಿಕೆಗಳು ಮತ್ತು ಆ ಕೈಗಾರಿಕೆಗಳನ್ನು ಅವಲಂಭಿಸಿರುವ ಕಾರ್ಮಿಕರಿಗೆ ಅನುಕೂಲವಾಗುತ್ತದೆ.

    ಈಗಾಗಲೇ ನಷ್ಟ ಅನುಭವಿಸಿರುವ ಕೆಲ ಕಾರ್ಖಾನೆಗಳು ಮತ್ತೆ ಉತ್ಪಾದನೆ ಆರಂಭಿಸಬೇಕಾದರೆ ಬಂಡವಾಳ ಅಗತ್ಯ. ಹಾಗಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲದ ವ್ಯವಸ್ಥೆ ಮಾಡಬೇಕು. ಸರ್ಕಾರ ನೆರವು ಒದಗಿಸದಿದ್ದರೆ ಸಾವಿರಾರು ಕಾರ್ಖಾನೆಗಳು ಮುಚ್ಚುವುದರ ಜೊತೆಗೆ ಅವುಗಳನ್ನೇ ನಂಬಿಕೊಂಡಿರುವ ಕಾರ್ಮಿಕರ ಬದುಕು ಬೀದಿಪಾಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

  • ಮೇ 3ರ ನಂತರ ರಾಜ್ಯ ಸರ್ಕಾರದ ಭರ್ಜರಿ ಪ್ಲಾನ್

    ಮೇ 3ರ ನಂತರ ರಾಜ್ಯ ಸರ್ಕಾರದ ಭರ್ಜರಿ ಪ್ಲಾನ್

    – ಆರ್ಥಿಕತೆಗಾಗಿ ಇಲಾಖೆ, ನಿಗಮಗಳ ವಿಲೀನ

    ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ರಾಜ್ಯ ಸರ್ಕಾರದ ಆದಾಯಕ್ಕೆ ಭಾರೀ ಹೊಡೆತ ಬಿದ್ದಿದೆ. ಹೀಗಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರವು ಭರ್ಜರಿ ಪ್ಲಾನ್ ರೂಪಿಸಿದೆ.

    ಮೇ 3ರ ನಂತರ ಆರ್ಥಿಕ ಮಿತವ್ಯಯಕ್ಕಾಗಿ ಇಲಾಖೆಗಳಿಗೆ ಮೇಜರ್ ಸರ್ಜರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಇಲಾಖೆಗಳ ವಿಲೀನ, ಮತ್ತೆ ಕೆಲವು ಬರ್ಖಾಸ್ತು ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಸಚಿವ ಸಂಪುಟ ಉಪಸಮಿತಿಯ ವರದಿಯನ್ನು ಸಿಎಂ ಬಿಎಸ್‍ವೈ ತರಿಸಿಕೊಂಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ಬಿಎಸ್‍ವೈ ಮಾಸ್ಟರ್ ಪ್ಲಾನ್?
    ಅನಗತ್ಯ ಹುದ್ದೆಗಳ ರದ್ದು, ಬಿಳಿ ಆನೆಗಳಂತೆ ಬೊಕ್ಕಸಕ್ಕೆ ಭಾರವಾಗಿದ್ದ ಹುದ್ದೆಗಳು ರದ್ದುಗೊಳಿಸುವುದು. ಪ್ರಮುಖ ಇಲಾಖೆಗಳ ಜೊತೆ ಕೆಲವು ಇಲಾಖೆಗಳ ವಿಲೀನಗೊಳಿಸುವುದು ಮುಖ್ಯ ಪ್ಲಾನ್‍ಗಳಾಗಿವೆ ಎನ್ನಲಾಗುತ್ತಿದೆ. ಇದರಿಂದ ವಾರ್ಷಿಕ 2ರಿಂದ 3 ಸಾವಿರ ಕೋಟಿ ರೂ. ಹೊರೆ ಕಡಿಮೆಯಾಗುತ್ತದೆ.

    ಕೆಲವು ಇಲಾಖೆಯ ಅನಗತ್ಯ ನಿಗಮಗಳ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಆಯುಕ್ತರು, ನಿರ್ದೇಶಕ ಹುದ್ದೆ ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ. ಈ ಹುದ್ದೆಗಳಿಗೆ ತಗಲುತ್ತಿದ್ದ ಖರ್ಚು-ವೆಚ್ಚ ಕಡಿತಕ್ಕೆ ಸರ್ಕಾರದ ಲೆಕ್ಕಾಚಾರ ಹಾಕಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಸರ್ಕಾರದ ಲೆಕ್ಕಾಚಾರದಲ್ಲಿ ತೋಟಗಾರಿಕೆ, ರೇಷ್ಮೆ, ಕೈಗಾರಿಕೆ, ಕಂದಾಯ, ನೀರಾವರಿ, ಗ್ರಾಮೀಣಾಭಿವೃದ್ಧಿ, ಇಂಧನ ಇಲಾಖೆಗಳಲ್ಲಿ ಕೆಲವು ವಿಲೀನ, ಕೆಲವು ನಿಗಮಗಳು ರದ್ದು ಮಾಡಲು ನಿರ್ಧಾರ ಮಾಡಲಾಗಿದೆ ಎನ್ನಲಾಗುತ್ತಿದೆ.

    ಯಾವೆಲ್ಲಾ ಇಲಾಖೆಗಳು ವಿಲೀನ ಸಾಧ್ಯತೆ?
    ತೋಟಗಾರಿಕೆ ಜೊತೆ ರೇಷ್ಮೆ ಇಲಾಖೆ, ಕೈಗಾರಿಕೆ ಜೊತೆ ಸಾರ್ವಜನಿಕ ಉದ್ಯಮ, ಗ್ರಾಮೀಣಾಭಿವೃದ್ಧಿಯಲ್ಲಿ ಕುಡಿಯುವ ನೀರಿನ ಯೋಜನೆ ನಿಗಮ, ಕಂದಾಯ ಇಲಾಖೆ ವ್ಯಾಪ್ತಿಯಲ್ಲಿನ ಪ್ರಾದೇಶಿಕ ಆಯುಕ್ತರ ಹುದ್ದೆ ರದ್ದಿಗೆ ಗಂಭೀರ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ.

    ಜೊತೆಗೆ ಕಂದಾಯ ಇಲಾಖೆಯಲ್ಲಿ ಪ್ರಾಕೃತಿಕ ವಿಕೋಪ ಪ್ರತ್ಯೇಕ ನಿಗಮ, ಕೆಲವು ಇಲಾಖೆಗಳ ವಿಲೀನ, ಮತ್ತೆ ಕೆಲವು ಇಲಾಖೆಗಳ ನಿಗಮಗಳೇ ಬರ್ಖಾಸ್ತು, ಆಯುಕ್ತರು, ಕಾರ್ಯದರ್ಶಿಗಳು, ನಿರ್ದೇಶಕರು, ಪ್ರಾದೇಶಿಕ ಆಯುಕ್ತರು, ಹೆಚ್ಚುವರಿ ಆಯುಕ್ತರ ಹುದ್ದೆಯೆಂಬ ಬಿಳಿಆನೆಗೆ ಗೇಟ್ ಪಾಸ್ ನೀಡಲು ಬಿಎಸ್‍ವೈ ಸರ್ಕಾರ ಚಿಂತನೆ ನಡೆಸಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

  • ವಿದ್ಯುತ್ ಬಿಲ್ ಸಂಗ್ರಹಕ್ಕೆ ಸರ್ಕಾರದ ಆದೇಶ

    ವಿದ್ಯುತ್ ಬಿಲ್ ಸಂಗ್ರಹಕ್ಕೆ ಸರ್ಕಾರದ ಆದೇಶ

    ಬೆಂಗಳೂರು: ಲಾಕ್‍ಡೌನ್ ನಿಂದ ಸ್ಥಗಿತಗೊಂಡಿದ್ದ ವಿದ್ಯುತ್ ಬಿಲ್ ಸಂಗ್ರಹಕ್ಕೆ ಎಸ್ಕಾಂಗೆ ಸರ್ಕಾರ ಆದೇಶ ನೀಡಿದೆ.

    ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗೆ ಸರ್ಕಾರ ನಿರ್ದೇಶನ ನೀಡಿದ್ದು, ಸಾರ್ವಜನಿಕರ ಸಮರ್ಪಕ ಮಾಹಿತಿ ನೀಡಿ ಬಿಲ್ ಸಂಗ್ರಹಿಸುವಂತೆ ಆದೇಶಿಸಿದೆ. ಆನ್‍ಲೈನ್, ವಾಟ್ಸಪ್, ಈ ಮೇಲ್ ಗಳ ಮೂಲಕ ವಿದ್ಯುತ್ ಬಳಕೆಯ ಬಗ್ಗೆ ಬಿಲ್ ಗಳನ್ನು ಸಾರ್ವಜನಿಕರಿಗೆ ನೀಡಲು ಸೂಚನೆ ನೀಡಲಾಗಿದೆ. ಗ್ರಾಹಕರು ಎಸ್ಕಾಂ ಮೊಬೈಲ್ ಆ್ಯಪ್ ಮೂಲಕ ಬಿಲ್ ಪಡೆಯಬಹುದು ಅಥವಾ 1912 ಹೆಲ್ಪ್ ಲೈನ್ ನಂಬರ್‍ಗೆ ಕರೆ ಮಾಡಿ ನಿಮ್ಮ ವಿದ್ಯುತ್ ಬಿಲ್ ಮಾಹಿತಿ ಪಡೆಯಬಹುದಾಗಿದೆ.

    ಎಸ್ಕಾಂಗೆ ಸಾರ್ವಜನಿಕರು ನೀಡಿದ ಫೋನ್, ವಾಟ್ಸಪ್, ಈ ಮೇಲ್‍ಗಳಿಗೆ, ಮೆಸ್ಸೆಜ್ ಗಳ ಮೂಲಕ ವಿದ್ಯುತ್ ಬಿಲ್, ಎಪ್ರಿಲ್ ತಿಂಗಳ ವಿದ್ಯುತ್ ಬಳಕೆ ವಿವರ ಕಳಿಸಲು ಸರ್ಕಾರ ಸೂಚಿಸಿದೆ. ಗ್ರಾಹಕರು ಆನ್‍ಲೈನ್ ಮೂಲಕ, ವಿದ್ಯುತ್ ನಿಗಮದ ಕಚೇರಿ ಕ್ಯಾಶ್ ಕೌಂಟರ್, ಕರ್ನಾಟಕ ಒನ್ ವೆಬ್ ಸೈಟ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಸ್ಪಾಟ್ ಬಿಲ್ಲಿಂಗ್ ಮಷೀನ್ ಮೂಲಕ ಬಿಲ್ ಪಾವತಿಸಬಹುದು.

  • ಮದ್ಯ ಪ್ರಿಯರಿಗೆ ಗುಡ್‍ನ್ಯೂಸ್!

    ಮದ್ಯ ಪ್ರಿಯರಿಗೆ ಗುಡ್‍ನ್ಯೂಸ್!

    ಬೆಂಗಳೂರು: ಕೊರೊನಾ ವೈರಸ್ ಲಾಕ್‍ಡೌನ್‍ನಿಂದಾಗಿ ಕಳೆದ ಒಂದು ತಿಂಗಳಿನಿಂದ ಎಣ್ಣೆ ಸಿಗದೆ ಮದ್ಯ ಪ್ರಿಯರು ಕಂಗಾಲಾಗಿದ್ದಾರೆ. ಅವರಿಗೆ ಈಗ ಸರ್ಕಾರ ಗುಡ್‍ನ್ಯೂಸ್ ಕೊಡಲು ಮುಂದಾಗಿದೆ ಎಂಬ ಮಾಹಿತಿ ಲಭಿಸಿದೆ.

    ಒಂದುಕಡೆ ಮದ್ಯ ವ್ಯಾಪಾರಿಗಳು, ಇನ್ನೊಂದುಕಡೆ ಎಣ್ಣೆ ಪ್ರಿಯರ ಒತ್ತಾಯವು ಫಲ ನೀಡುತ್ತಾ? ಮತ್ತೆ ಮದ್ಯ ಮಾರಾಟ ಆರಂಭವಾಗುತ್ತಾ? ಇಷ್ಟು ದಿನ ಲಾಕ್‍ಡೌನ್ ಮುಗಿಯುವವರೆಗೆ ಓಪನ್ ಮಾಡುವ ಪ್ರಶ್ನೆಯೇ ಇಲ್ಲಾ ಎನ್ನುತ್ತಿದ್ದ ಸರ್ಕಾರ ಈಗ ಮದ್ಯದಂಗಡಿ ತೆರೆಯಲು ಮುಂದಾಗುತ್ತಾ ಎನ್ನುವ ಪ್ರಶ್ನೆ ಎದ್ದಿದೆ.

    ಸಂಪೂರ್ಣ ಲಾಕ್‍ಡೌನ್ ಸಡಲಿಕೆಗೆ ಮುನ್ನವೇ ಮದ್ಯದ ವ್ಯಾಪಾರ ಶುರು ಮಾಡಬೇಕಾ, ಬೇಡವಾ ಎಂಬ ತೀರ್ಮಾನ ಇಂದಿನ ಸಚಿವ ಸಂಪುಟದಲ್ಲಿ ಆಗಲಿದೆ. ಇಡೀ ರಾಜ್ಯದ ಲಾಕ್‍ಡೌನ್ ಸಡಲಿಕೆ ಆಗದಿದ್ದರೂ ಗ್ರೀನ್ ಹಾಗೂ ಯೆಲ್ಲೋ ಝೋನ್‍ಗಳಲ್ಲಿ ಲಾಕ್‍ಡೌನ್ ಸಡಿಲಿಕೆ ಜೊತೆಗೆ ಮದ್ಯ ಮಾರಾಟ ಆರಂಭಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ಪರ-ವಿರೋಧ ವಾದ ಏನೇ ಇದ್ದರೂ ಆರ್ಥಿಕ ಲೆಕ್ಕಾಚಾರದಿಂದ ಮದ್ಯ ವ್ಯಾಪಾರಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಡುವ ಸಾಧ್ಯತೆ ಇದೆ. ತಾಲೂಕು ಆಧಾರದ ಮೇಲೆ ಝೋನ್‍ಗಳನ್ನು ವಿಭಾಗಿಸಲು ಮುಂದಾದ ರಾಜ್ಯ ಸರ್ಕಾರ ಗ್ರೀನ್ ಹಾಗೂ ಯೆಲ್ಲೋ ಝೋನ್‍ಗಳಲ್ಲಿ ಮದ್ಯ ವ್ಯಾಪಾರಕ್ಕೆ ಅವಕಾಶ ಕೊಡುವ ಬಗ್ಗೆಯು ಚಿಂತನೆ  ಮಾಡಿದೆ ಎನ್ನಲಾಗುತ್ತದೆ.

    ಲಾಕ್‍ಡೌನ್‍ನಿಂದಾಗಿ ಅಬಕಾರಿ ಇಲಾಖೆ ಒಂದರಿಂದಲೇ ಸರ್ಕಾರ 2 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದೆ. ನಷ್ಟದ ಪ್ರಮಾಣ ತಗ್ಗಿಸಲು ಗ್ರೀನ್ ಹಾಗೂ ಯೆಲ್ಲೋ ಝೋನ್‍ನಲ್ಲಿ ಮದ್ಯ ವ್ಯಾಪಾರ ಆರಂಭಿಸುವ ಚಿಂತನೆಯನ್ನು ಸರ್ಕಾರ ಹೊಂದಿದೆ ಎಂದು ಹೇಳಲಾಗುತ್ತಿದೆ.

    ಒಂದು ವೇಳೆ ರೆಡ್ ಝೋನ್‍ನ ಜನರು ಮದ್ಯಕ್ಕಾಗಿ ಗ್ರೀನ್ ಹಾಗೂ ಯೆಲ್ಲೋ ಝೋನ್‍ಗಳಿಗೆ ಬಂದರೆ ಅಪಾಯ ಎಂಬ ಆತಂಕವು ಸರ್ಕಾರಕ್ಕಿದೆ. ಅದರ ಬಗ್ಗೆ ಯೋಚಿಸಿ ಮದ್ಯ ಮಾರಾಟಕ್ಕೆ ಅವಕಾಶ ಕೊಡದಿದ್ದರೆ ಸರ್ಕಾರದ ಆದಾಯದ ಮೂಲ ಕಡಿಮೆ ಆಗಲಿದೆ. ನಷ್ಟದ ಪ್ರಮಾಣವು ಹೆಚ್ಚಲಿದೆ. ಆದ್ದರಿಂದ ರೆಡ್ ಝೋನ್ ಹೊರತುಪಡಿಸಿ ಕೇವಲ ಗ್ರೀನ್ ಹಾಗೂ ಯೆಲ್ಲೋ ಝೋನ್‍ನಲ್ಲಿ ಅಷ್ಟೇ ಮದ್ಯದಂಗಡಿಗೆ ಅನುಮತಿ ಕೊಡುವುದು ಹೇಗೆ ಎಂಬ ಗೊಂದಲದಲ್ಲಿ ಸರ್ಕಾರವು ಇದೆ ಎನ್ನಲಾಗುತ್ತಿದೆ.

    ಇದೆಲ್ಲಾ ಆಗಬೇಕಾದರೆ ಮೊದಲು ಕೇಂದ್ರ ಸರ್ಕಾರ ಒಪ್ಪಬೇಕು. ಲಾಕ್‍ಡೌನ್‍ಗೆ ದೇಶಾದ್ಯಂತ ಒಂದೇ ನಿಯಮದ ಬದಲು ರಾಜ್ಯವಾರು ನಿರ್ಧಾರಕ್ಕೆ ಸಮ್ಮತಿಸಬೇಕು. ಕೇಂದ್ರದ ನಿರ್ಧಾರದ ಮೇಲೆ ರಾಜ್ಯದ ನಿರ್ಧಾರ ತೀರ್ಮಾನವಾಗಲಿದೆ. ಆದರೆ ಹಣಕಾಸಿನ ದೃಷ್ಟಿಯಿಂದ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟರೆ ಒಳಿತು ಎಂಬ ಲೆಕ್ಕಾಚಾರವಂತು ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ ಎಂಬ ಮಾಹಿತಿ ಲಭಿಸಿದೆ.

  • ರೆಡ್‍ಝೋನ್ ಪಟ್ಟಿಯಲ್ಲಿ 14 ಜಿಲ್ಲೆಗಳ 29 ತಾಲೂಕುಗಳು

    ರೆಡ್‍ಝೋನ್ ಪಟ್ಟಿಯಲ್ಲಿ 14 ಜಿಲ್ಲೆಗಳ 29 ತಾಲೂಕುಗಳು

    ಬೆಂಗಳೂರು: ಕೊರೊನಾ ಪೀಡಿತ ಭಾಗಗಳಿಗೆ ಹೊಸ ಮಾನದಂಡವನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ವಲಯಗಳ ವಿಂಗಡಣೆ ಮಾಡಲಾಗಿದೆ. ಹೊಸ ಪಟ್ಟಿಯಲ್ಲಿ ರೆಡ್ ಝೋನ್‍ಗಳ ಸಂಖ್ಯೆ 8 ರಿಂದ 14ಕ್ಕೆ ಏರಿಕೆಯಾಗಿದೆ.

    ರಾಜ್ಯದ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳು ರಾಜ್ಯದ ರೆಡ್ ಝೋನ್‍ಗಳಾಗಿವೆ. ಒಟ್ಟಾರೆ ರಾಜ್ಯದ 14 ಜಿಲ್ಲೆಗಳ 29 ತಾಲೂಕುಗಳು ರೆಡ್‍ಝೋನ್‍ನಲ್ಲಿದೆ.

    ಕೊರೊನಾ ಸೋಂಕಿನ ತೀವ್ರತೆ ಆಧಾರದ ಮೇಲೆ ರಾಜ್ಯದಲ್ಲಿ ಕೆಂಪು ವಲಯಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಕೊರೊನಾ ವಲಯಗಳ ವಿಂಗಡಣೆಗೆ ರಾಜ್ಯ ಸರ್ಕಾರ ಹೊಸ ಮಾನದಂಡ ಬಳಸಿದೆ. ನಾಲ್ಕು ವಲಯಗಳ ಬದಲು ಮತ್ತೆ ಮೂರು ವಲಯಗಳ ಸೂತ್ರಕ್ಕೆ ಜೋತುಬಿದ್ದಿದೆ. ಹಳದಿ ವಲಯವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. 28 ದಿನಗಳ ಅವಧಿಯಲ್ಲಿ ಕೊರೊನಾ ಸೋಂಕು ಕಾಣಿಸದಿದ್ದರೆ ಆ ತಾಲೂಕನ್ನು ಗ್ರೀನ್ ಝೋನ್ ಎಂದು ಪರಿಗಣಿಸಲಾಗುತ್ತದೆ. 14 ದಿನದಲ್ಲಿ ಒಂದೇ ಒಂದು ಹೊಸ ಕೇಸ್ ಕಂಡು ಬರದೇ ಇದ್ದರೆ ಅದನ್ನು ಆರೆಂಜ್ ಝೋನ್ ಎಂದು ಪರಿಗಣಿಸಲಾಗುತ್ತದೆ. 14 ದಿನಗಳ ಅವಧಿಯಲ್ಲಿ ಒಂದು ಕೇಸ್ ಕಂಡು ಬಂದರೂ ಅದನ್ನು ರೆಡ್ ಝೋನ್ ಎಂದು ಪರಿಗಣಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರ ಅನ್ವಯ ಇದೀಗ 14 ಜಿಲ್ಲೆಗಳ 29 ತಾಲೂಕುಗಳು ರೆಡ್‍ಝೋನ್ ವ್ಯಾಪ್ತಿಗೆ ಬರುತ್ತವೆ. ಈ ಪಟ್ಟಿಯಲ್ಲಿ ನಿನ್ನೆ ತಾಲೂಕುಗಳ ಸಂಖ್ಯೆ 14 ಇತ್ತು.

    ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರ, ಗದಗ ತಾಲೂಕು, ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಸಿರಗುಪ್ಪ, ಬಳ್ಳಾರಿ ತಾಲೂಕು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಚಿಕ್ಕಬಳ್ಳಾಪುರ ತಾಲೂಕು, ತುಮಕೂರು ತಾಲೂಕು, ಮೈಸೂರು ತಾಲೂಕು, ನಂಜನಗೂಡು, ಮಂಡ್ಯ ಜಿಲ್ಲೆಯ ಮಳವಳ್ಳಿ, ನಾಗಮಂಗಲ, ಮಂಡ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರು, ಬಂಟ್ವಾಳ ತಾಲೂಕುಗಳು, ಬೀದರ್ ತಾಲೂಕು, ಕಲಬುರಗಿ ತಾಲೂಕು, ಶಹಾಬಾದ್ ತಾಲೂಕು, ವಿಜಯಪುರ ತಾಲೂಕು, ಬಾಗಲಕೋಟೆ ಜಿಲ್ಲೆಯ ಮುಧೋಳ, ಜಮಖಂಡಿ, ಬಾಗಲಕೋಟೆ ತಾಲೂಕು, ಬೆಳಗಾವಿ ಜಿಲ್ಲೆಯ ರಾಯಭಾಗ, ಹುಕ್ಕೇರಿ, ಬೆಳಗಾವಿ ತಾಲೂಕು, ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ ಪ್ರದೇಶಗಳು ಪಟ್ಟಿಯಲ್ಲಿದೆ.

    ಉಳಿದಂತೆ ಕೊರೊನಾ ಸೋಂಕಿಲ್ಲದ 14 ಜಿಲ್ಲೆಗಳ ಪೈಕಿ ರಾಮನಗರ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಇಂದಿನಿಂದ ಲಾಕ್‍ಡೌನ್ ಸಡಿಲಿಕೆ ಆಗಿದೆ. ಬೆಳಗ್ಗೆಯಿಂದ್ಲೇ ವ್ಯಾಪಾರ ವಹಿವಾಟು, ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆಗಳು ಆರಂಭವಾಗಿವೆ. ರಾಯಚೂರು, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಹಾವೇರಿ, ಕೋಲಾರ, ಕೊಪ್ಪಳ, ಶಿವಮೊಗ್ಗ, ಯಾದಗಿರಿಯಲ್ಲಿ ಅಂಗಡಿ ಮುಂಗಟ್ಟು ಓಪನ್ ಆಗಿವೆ. ಪೊಲೀಸರು ಸಾಮಾಜಿಕ ಅಂತರ ಪಾಲಿಸುವಂತೆ, ಮಾಸ್ಕ್ ಧರಿಸುವಂತೆ ಎಲ್ಲಾ ಕಡೆ ಮೈಕ್‍ಗಳ ಮೂಲಕ ಜಾಗೃತಿ ಮೂಡಿವ ಕಾರ್ಯ ಮಾಡಿದರು.