Tag: State Government

  • ನನ್ನ ವಿರುದ್ಧ ತನಿಖೆ ನಡೆಸಿ – ರಾಜ್ಯ ಸರ್ಕಾರಕ್ಕೆ ಜಮೀರ್ ಸವಾಲ್

    ನನ್ನ ವಿರುದ್ಧ ತನಿಖೆ ನಡೆಸಿ – ರಾಜ್ಯ ಸರ್ಕಾರಕ್ಕೆ ಜಮೀರ್ ಸವಾಲ್

    ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಅವರು ರಾಜ್ಯ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.

    ಇಂದು ಸರಣಿ ಟ್ವೀಟ್ ಮಾಡಿರುವ ಜಮೀರ್, 2019 ಜೂನ್ 08ರಂದು ನಾನು, ಸಂಜನಾ ಅವರ ಜೊತೆ ಶ್ರೀಲಂಕಾಕ್ಕೆ ಹೋಗಿದ್ದೆ ಎಂದು ಆರೋಪಿಸಲಾಗಿದೆ. ಹಾಗಿದ್ದಲ್ಲಿ ವಿಮಾನ ಪ್ರಯಾಣದ ಟಿಕೆಟ್‍ಗಳಿರಬೇಕಲ್ಲಾ? ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದರೆ ಅಲ್ಲಿಯೂ ದಾಖಲೆಗಳು ಇರಬೇಕಲ್ಲಾ? ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ನನ್ನ ಓಡಾಟದ ಚಿತ್ರಗಳೂ ಇರಬೇಕಲ್ವಾ? ಈ ಬಗ್ಗೆಯೂ ತನಿಖೆ ನಡೆಯಲಿ ಎಂದಿದ್ದಾರೆ.

    ನಾನು ರಾಜಕೀಯದಲ್ಲಿರುವ ವ್ಯಕ್ತಿ, ಸುಳ್ಳು ಆರೋಪಗಳು, ಚಾರಿತ್ರ್ಯ ಹರಣದ ಪ್ರಯತ್ನಗಳು ನನಗೆ ಹೊಸತೇನಲ್ಲ. ಅವೆಲ್ಲವನ್ನು ಜನಾಶೀರ್ವಾದದ ಬಲದಿಂದ ಎದುರಿಸುತ್ತಾ ಬಂದಿದ್ದೇನೆ. ನಾನು ಏನೆನ್ನುವುದು ನಾನು ನಂಬಿರುವ ಜನ ಮತ್ತು ನನ್ನ ಆತ್ಮಸಾಕ್ಷಿಗೆ ಗೊತ್ತಿದೆ ಎಂದು ಇನ್ನೊಂದು ಟ್ವೀಟ್ ಮಾಡಿರುವ ಜಮೀರ್ ತಮ್ಮ ಮೇಲೆ ಆರೋಪ ಮಾಡುವವರ ಮೇಲೆ ಕಿಡಿಕಾರಿದ್ದಾರೆ.

    ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ ಸರ್ಕಾರ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ನಾನೇನೋ ಪ್ರಭಾವ ಬೀರುತ್ತಿದ್ದೆ ಎಂದು ಹೇಳಬಹುದಿತ್ತು. ಈಗ ನಟಿ ಸಂಜನಾ ಪೊಲೀಸರ ವಶದಲ್ಲಿದ್ದಾರೆ. ಆದ್ದರಿಂದ ಪೊಲೀಸರು ಆಕೆಯನ್ನು ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಳ್ಳಲಿ. ಅದೇ ರೀತಿ ಶ್ರೀಲಂಕಾ ಪ್ರವಾಸದ ಬಗ್ಗೆಯೂ ತನಿಖೆ ನಡೆಸಲಿ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

    ಪೊಲೀಸರು ನಡೆಸುವ ತನಿಖೆಯಲ್ಲಿ ಸಂಬರಗಿ ಮಾಡಿರುವ ಆರೋಪಗಳು ಸಾಬೀತಾದರೆ ನನ್ನ ಸಂಪೂರ್ಣ ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ಬರೆದುಕೊಡಲು ಸಿದ್ಧನಿದ್ದೇನೆ. ನನ್ನ ಮೇಲಿನ ಆರೋಪಗಳು ಸುಳ್ಳು ಎಂದು ಕಂಡುಬಂದರೆ ಆರೋಪಿಗಳನ್ನು ಈ ನೆಲದ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಲಿ. ಡ್ರಗ್ಸ್ ನಂಟಿಗೆ ಸಂಬಂಧಿಸಿದಂತೆ ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದುದ್ದು. ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಸಿಎಂ ಯಡಿಯೂರಪ್ಪ ಅವರಿಗೆ ಹಾಗೂ ಗೃಹ ಸಚಿವ ಬೊಮ್ಮಾಯಿಯವರಿಗೆ ಒತ್ತಾಯಿಸುತ್ತೇನೆ ಎಂದು ಜಮೀರ್ ಟ್ವೀಟ್ ಮಾಡಿದ್ದಾರೆ.

  • ದೀಪ ಹಚ್ಚಿದೆವು, ಗಂಟೆ ಬಾರಿಸಿದೆವು, ಇನ್ನು ಸುಮ್ಮನಿರಲ್ಲ- ಡಿಕೆಶಿ ಕಿಡಿ

    ದೀಪ ಹಚ್ಚಿದೆವು, ಗಂಟೆ ಬಾರಿಸಿದೆವು, ಇನ್ನು ಸುಮ್ಮನಿರಲ್ಲ- ಡಿಕೆಶಿ ಕಿಡಿ

    – ಬಡವರ ಹೆಣದ ಮೇಲೆ ಸರ್ಕಾರ ಹಣ ಹೊಡೆದಿದೆ

    ಬಳ್ಳಾರಿ: ದೀಪ ಹಚ್ಚಿ ಎಂದಾಗ ಹಚ್ವಿದೆವು, ಗಂಟೆ ಬಾರಿಸಿ ಎಂದಾಗ ಬಾರಿಸೆದುವು, ಇನ್ನುಮುಂದೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹರಿಹಾಯ್ದರು.

    ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾರ್ಚ್ ತಿಂಗಳಿಂದ ರಾಜ್ಯ ಹಾಗೂ ರಾಷ್ಟ್ರ ಕೊರೊನಾ ಸಂಕಷ್ಟದ ನೋವಿನಿಂದ ಬಳಲುತ್ತಿದೆ. ಕೇಂದ್ರ ಸರ್ಕಾರ ಗಂಟೆ ಬಾರಿಸಿ, ದೀಪ ಹಚ್ಚಿ ಎಂದು ಹೇಳಿದ ಹಾಗೆ ನಾವು ಕುಣಿದಿದ್ದೂ ಆಗಿದೆ. ಆದರೆ ಇನ್ನು ಮುಂದೆ ಸರ್ಕಾರ ಕೊರೊನಾ ನಿಯಂತ್ರಣದ ಹೆಸರಲ್ಲಿ ಲೂಟಿ ಹೊಡೆಯಲು ಬಿಡುವುದಿಲ್ಲ ಎಂದು ತಿವಿದರು.

    ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಸರ್ಕಾರದ ಬ್ರೇಕ್ ಫೇಲ್ ಆಗಿದೆ. ರಾಜ್ಯದಲ್ಲಿ ಸೋಂಕಿತ ಗೋಳಿನ ಕಥೆಯನ್ನು ಸಾಕಷ್ಟು ಸಿನಿಮಾ ತೆಗೆಯಬಹುದು ಅಷ್ಟು ಜನ ನರಳುತಿದ್ದಾರೆ. ಒಬ್ಬ ಮಾಜಿ ಮಂತ್ರಿ ಕೋವಿಡ್-19 ಆಸ್ಪತ್ರೆ ಬಿಲ್ 17 ಲಕ್ಷ ರೂ. ಆಗಿದೆ. ಹೀಗಿರುವಾಗ ಬಡವರ ಪರಿಸ್ಥಿತಿ ಹೇಗೆ ಎಂದು ಪ್ರಶ್ನಿಸಿದರು.

    ಕೋವಿಡ್-19 ನಿಯಂತ್ರಣ ವಿಚಾರದಲ್ಲಿ ಸರ್ಕಾರ ಸಾವಿರಾರು ಕೋಟಿ ರೂ. ಲೂಟಿ ಹೊಡೆದಿದೆ. ಕೊರೊನಾ ಬಾರದ ಜನರನ್ನು ಸಹ ಕೋವಿಡ್ ಕೇರ್ ಗೆ ಕರೆತಂದು ಅವರ ಹೆಸರಲ್ಲಿ ಲಕ್ಷಾಂತರ ಹಣ ಲೂಟಿ ಮಾಡಿದ್ದಾರೆ. ಸರ್ಕಾರ ಖಾಸಗಿ ಆಸ್ಪತ್ರೆಯ ಜೊತೆಯಲ್ಲಿ ಶಾಮೀಲಾಗಿ ಜನರ ದುಡ್ಡು ಕೊಳ್ಳೆ ಹೊಡೆದಿದೆ. ಬಳ್ಳಾರಿಯಲ್ಲಿ ಅಮಾನವೀಯವಾಗಿ ಶವಗಳನ್ನು ಹೂತು ಹಾಕಿದೆ ಈ ಸರ್ಕಾರ. ಜನರ ಶವದ ಮೇಲೆ ಹಣ ಲೂಟಿ ಮಾಡಿದ್ದಾರೆ. ಕೊರೊನಾ ನಿಯಂತ್ರಿಸಲು ಸರ್ಕಾರಕ್ಕೆ ಬೆಂಬಲ ಕೊಡುತ್ತೇವೆ. ಆದರೆ ಜನರ ದುಡ್ಡು ಹೊಡೆಯಲು ಬಿಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಗುಡುಗಿದ್ದಾರೆ.

  • ರಾಜ್ಯದಲ್ಲಿ ಸರ್ಕಾರ ಇದೆ ಅಂತಾ ಯಾರಾದ್ರು ನಂಬ್ತಿರಾ?- ಬಸವರಾಜ್ ಹೊರಟ್ಟಿ

    ರಾಜ್ಯದಲ್ಲಿ ಸರ್ಕಾರ ಇದೆ ಅಂತಾ ಯಾರಾದ್ರು ನಂಬ್ತಿರಾ?- ಬಸವರಾಜ್ ಹೊರಟ್ಟಿ

    ಧಾರವಾಡ: ರಾಜ್ಯದಲ್ಲಿ ಸರ್ಕಾದ ಇದೆ ಅಂತಾ ಯಾರಾದ್ರು ನಂಬ್ತಿರಾ, ಎಲ್ಲಿದೆ ಸರ್ಕಾರ ಎಂದು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಮಳೆಯಿಂದ ಬೆಳಗಾವಿ, ಚಿಕ್ಕೋಡಿ ಎಲ್ಲ ಹಳ್ಳ ಹಿಡಿದಿವೆ, ನೀವೇನು ಮಾತಾಡ್ತಿರೊ ಆ ಪ್ರಕಾರ ನಡಿದುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಹಿಂದೆ ಕೂಡಾ ಈ ಸರ್ಕಾರ ಇದ್ದಾಗ ಗಲಾಟೆ ನಡೆದಿವೆ, ಈಗ ಮತ್ತೇ ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೊಡುತಿದ್ದಾರೆ. ಕಳೆದ ವರ್ಷ ಬಿದ್ದ ಒಂದು ಮನೆ ಕಟ್ಟಿಲ್ಲ, ಈ ಬಗ್ಗೆ ಬರುವ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ. ಸಿಎಂ ಇದ್ದವರು ಅಧಿಕಾರಿಗಳಿಗೆ ಸೂಚನೆ ನೀಡಬೇಕು, ಕೆಲಸ ಆಗದೇ ಇದ್ದಲ್ಲಿ ಕ್ರಮಕೈಗೊಳ್ಳಬೇಕು. ಆದರೆ ಇದೊಂದು ರೀತಿ ಡ್ರಾಮಾ ಕಂಪನಿಯಾಗಿದೆ ಎಂದು ವ್ಯಂಗ್ಯವಾಡಿದರು.

    ಇದೇ ವೇಳೆ ಉತ್ತರ ಕರ್ನಾಟಕಕ್ಕೆ ಇಲಾಖೆಗಳ ಸ್ಥಳಾಂತರ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಮೈಸೂರಿನವರು, ಕುಮಾರಸ್ವಾಮಿ ಹಾಸನದವರು, ಅವರೆಲ್ಲ ಅಭಿವೃದ್ಧಿ ಮಾಡಿಕೊಳ್ತಾರೆ. ನಮ್ಮ ಕಡೆ ಆ ರೀತಿ ಇಲ್ಲ, ನಮ್ಮ ವೈಯಕ್ತಿಕವಾಗಿ ಇರ್ತೆವೆ ಎಂದ ಹೊರಟ್ಟಿ, ಹಳೆ ಮೈಸೂರು ಭಾಗದಲ್ಲಿ ಎಲ್ಲರೂ ಒಂದಾಗ್ತಾರೆ, ನಮ್ಮಲ್ಲಿ ಆಗಲ್ಲ. ಇನ್ನು ನಮ್ಮಲ್ಲಿ ಹಲವರು ಸಿಎಂ ಆಗಿ ಹೋಗಿದ್ದಾರೆ. ಅಧಿಕಾರವಿದ್ದಾಗ ನಾನು ಹೈಕೋರ್ಟ್ ಹಾಗೂ ಕಾನೂನು ವಿವಿ ತಂದೆ. ನಮ್ಮ ಕಡೆ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಇಲಾಖೆ ಸ್ಥಳಾಂತರ ವಿಚಾರದಲ್ಲಿ ಕ್ಯಾಬಿನೆಟ್ ನಿರ್ಣಯ ಆಗಬೇಕು. ವಿರೋಧ ಪಕ್ಷದಲ್ಲಿ ಇದ್ದಾಗ ಎಲ್ಲ ಮಾತಾಡ್ತೆವೆ, ಅಧಿಕಾರಕ್ಕೆ ಬಂದ ಮೇಲೆ ಅದನ್ನೇ ವಿರೋಧ ಮಾಡುತ್ತೇವೆ. ಹಿರಿಯ ಅಧಕಾರಿಯೊಬ್ಬರು ಸರ್ಕಾರಕ್ಕೆ ಇಲಾಖೆ ಸ್ಥಳಾಂತರ ಮಾಡಬಾರದು ಎಂದು ಸಲಹೆ ನೀಡಿದ್ದಾರೆ, ಸಿಎಂ ಸ್ಥಳಾಂತರ ಅಂತಾರೆ, ಯಾರನ್ನ ನಂಬಬೇಕು ನಾವು ಎಂದು ಪ್ರಶ್ನೆ ಮಾಡಿದರು.

  • ಕೊಬ್ಬರಿಗೆ ಸಹಾಯ ಧನ ನೀಡದಿದ್ದರೆ ಸಿಎಂ ಮನೆ ಮುಂದೆ ಪ್ರತಿಭಟನೆ: ಶಿವಲಿಂಗೇಗೌಡ ಎಚ್ಚರಿಕೆ

    ಕೊಬ್ಬರಿಗೆ ಸಹಾಯ ಧನ ನೀಡದಿದ್ದರೆ ಸಿಎಂ ಮನೆ ಮುಂದೆ ಪ್ರತಿಭಟನೆ: ಶಿವಲಿಂಗೇಗೌಡ ಎಚ್ಚರಿಕೆ

    – ಇದು ಅಂಬೇಡ್ಕರ್ ಬರೆದ ಪ್ರಜಾಪ್ರಭುತ್ವದ ರಾಜಕಾರಣ ಅಲ್ಲ

    ಹಾಸನ: ಕೊಬ್ಬರಿಗೆ ಕೇಂದ್ರದ ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರ 1,200 ರೂಪಾಯಿ ಸಹಾಯ ಧನ ನೀಡದಿದ್ದರೆ ಸಿಎಂ ಯಡಿಯೂರಪ್ಪ ಮನೆಮುಂದೆ ಹೋಗಿ ಧಿಕ್ಕಾರ ಕೂಗುತ್ತೇನೆ. ಜೊತೆಗೆ ಅವರ ಮನೆ ಮುಂದೆ ಕುಳಿತು ಹೋರಾಟ ಮಾಡುವುದಾಗಿ ಶಾಸಕ ಶಿವಲಿಂಗೇಗೌಡ ಎಚ್ಚರಿಕೆ ನೀಡಿದ್ದಾರೆ.

    ಕೊಬ್ಬರಿಗೆ ರಾಜ್ಯ ಸರ್ಕಾರ ಸಹಾಯಧನ ನೀಡಬೇಕು ಮತ್ತು ಕೇಂದ್ರ ಸರ್ಕಾರ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಕೊಳ್ಳುವ ಅವಧಿ ವಿಸ್ತರಣೆ ಮಾಡಬೇಕು ಎಂದು ಶಾಸಕ ಶಿವಲಿಂಗೇಗೌಡ ನೇತೃತ್ವದಲ್ಲಿ ಅರಸೀಕೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯ್ತು. ಈ ವೇಳೆ ಮಾತನಾಡಿದ ಶಾಸಕರು ನಫೆಡ್‍ನಲ್ಲಿ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಕೊಳ್ಳಲು ಕೇವಲ 800 ಜನ ರೈತರ ಹೆಸರು ನೋಂದಣಿ ಮಾಡಿಕೊಂಡು ನೋಂದಣಿ ಸಮಯ ಮುಗಿದಿದೆ ಅಂತಿದ್ದಾರೆ. ಇದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

    ಕೊರೊನಾ ಇಲ್ಲದಿದ್ದರೆ ಬಸ್ ನಿಲ್ಲಿಸಿ, ಬಂದ್ ಮಾಡಿ ರಾಜ್ಯ ಸರ್ಕಾರಕ್ಕೆ ಏನು ಎಚ್ಚರಿಕೆ ನೀಡಬೇಕೋ ನೀಡುತ್ತಿದ್ದೆವು. ಗೌರವದಿಂದ ಬೀದಿಯಲ್ಲಿ ನಡೆದು ಬಂದು ನಿಮ್ಮ ಮಾನ ಮರ್ಯಾದೆ ಉಳಿಸಿದ್ದೇವೆ. ಕೂಡಲೇ ಕೊಬ್ಬರಿಗೆ ರಾಜ್ಯ ಸರ್ಕಾರ 1,200 ಪ್ರೋತ್ಸಾಹ ಧನ ನೀಡಿ ರೈತರ ಹಿತ ಕಾಯಬೇಕು ಎಂದು ಶಾಸಕ ಶಿವಲಿಂಗೇಗೌಡ ಆಗ್ರಹಿಸಿದ್ದಾರೆ. ಇದೇ ವೇಳೆ ಬಿಜೆಪಿ ಸರ್ಕಾರದ ರಾಜಕೀಯದ ಬಗ್ಗೆ ಆಕ್ರೋಶ ಹೊರಹಾಕಿದ ಶಾಸಕರು, ಈ ರಾಜಕೀಯದ ಬಗ್ಗೆ ಮಾತನಾಡಿ ಬಾಯಿ ಹೊಲಸು ಮಾಡಿಕೊಳ್ಳಲ್ಲ. ಇದು ಕೆಟ್ಟ ರಾಜಕಾರಣ. ಇದು ಅಂಬೇಡ್ಕರ್ ಬರೆದ ಪ್ರಜಾಪ್ರಭುತ್ವದ ರಾಜಕಾರಣ ಅಲ್ಲ ಎಂದರು.

    ಇಂದಿರಾಗಾಂಧಿ ಎಮರ್ಜೆನ್ಸಿ ಡಿಕ್ಲೇರ್ ಮಾಡಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ಪ್ರತಿಫಲ ಅನುಭವಿಸಿದ್ದಾರೆ. ಇವರು ಅನುಭವಿಸುವುದಾದರೆ ಅನುಭವಿಸಲಿ. ಇಂದಿನ ರಾಜಕೀಯ ಪರಿಸ್ಥಿತಿ ನೋಡಿದರೆ ಇವರ್ಯಾರಿಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎನಿಸುತ್ತಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ಆ ಬಗ್ಗೆ ಮಾತನಾಡಲು ಮನಸ್ಸಿಗೆ ಬೇಸರ ಮತ್ತು ಸಂಕಟ ಆಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

  • ಟಿಪ್ಪು ಸುಲ್ತಾನ್ ಪಠ್ಯವನ್ನ ಕೈ ಬಿಟ್ಟ ಸರ್ಕಾರಕ್ಕೆ ಶಾಸಕ ಅಪ್ಪಚ್ಚು ರಂಜನ್ ಧನ್ಯವಾದ

    ಟಿಪ್ಪು ಸುಲ್ತಾನ್ ಪಠ್ಯವನ್ನ ಕೈ ಬಿಟ್ಟ ಸರ್ಕಾರಕ್ಕೆ ಶಾಸಕ ಅಪ್ಪಚ್ಚು ರಂಜನ್ ಧನ್ಯವಾದ

    ಮಡಿಕೇರಿ: ಏಳನೇ ತರಗತಿಯ ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಅಧ್ಯಾಯವನ್ನು ತೆಗೆದು ಹಾಕಿರುವುದರಿಂದ ರಾಜ್ಯ ಸರ್ಕಾರಕ್ಕೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಧನ್ಯವಾದ ಸಮರ್ಪಿಸಿದ್ದಾರೆ. ಇದನ್ನೂ ಓದಿ: 7ನೇ ತರಗತಿಯಲ್ಲಿದ್ದ ಟಿಪ್ಪು ಸುಲ್ತಾನ್‌ ಪಠ್ಯವನ್ನು ಕೈ ಬಿಟ್ಟ ಸರ್ಕಾರ

    ಟಿಪ್ಪು ಸುಲ್ತಾನ್ ಎನ್ನುವ ಹೆಸರೇ ಕೊಡಗಿಗೆ ಒಂದು ಅಪಮಾನ. ಆತ ಏನನ್ನೂ ಮಾಡದಿದ್ದರೂ ಪಠ್ಯದಲ್ಲಿ ಆತನ ವಿಷಯವನ್ನಿಟ್ಟು ಐತಿಹಾಸಿಕವಾಗಿ ವಿಜೃಂಭಿಸುವ ಕೆಲಸವನ್ನು ಮಾಡಲಾಗಿತ್ತು. ಟಿಪ್ಪು ಮಾಡಿರುವುದು ಎಲ್ಲವೂ ಅನ್ಯಾಯದ ಕೆಲಸಗಳು. ಈ ಹಿನ್ನೆಲೆ ಜಿಲ್ಲೆಯ ಜನರು ಸೇರಿದಂತೆ ಅನೇಕರು ಟಿಪ್ಪು ಪಠ್ಯ ಕ್ರಮವನ್ನು ತರಬಾರದು ಎಂದು ಹೋರಾಟ ನಡೆಸಿದ್ದರು. ಇದೀಗ ರಾಜ್ಯ ಸರ್ಕಾರ ತಜ್ಞರ ಸಭೆ ನಡೆಸಿ ಏಳನೇ ತರಗತಿಯ ಪಠ್ಯದಿಂದ ಕೈ ಬಿಟ್ಟಿರುವುದು ಸಂತಸದ ವಿಷಯವಾಗಿದೆ ಎಂದರು.

    ಅಷ್ಟೇ ಅಲ್ಲದೇ ದೇಶ ವಿರೋಧಿ ಟಿಪ್ಪು ಸುಲ್ತಾನ್ ಪಠ್ಯವನ್ನ ಪುಸ್ತಕದಿಂದ ತೆಗೆದು ಹಾಕುವಂತೆ ನಾವೂ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಅದರಂತೆ ರಾಜ್ಯ ಸರ್ಕಾರ ತೀರ್ಮಾನವನ್ನು ತೆಗೆದುಕೊಂಡಿದೆ. ಇದಕ್ಕೆ ಸಹಕರಿಸಿದ ಟಿಪ್ಪು ವಿರೋಧಿ ಹೋರಾಟ ಸಮಿತಿ, ಸಂಘ ಪರಿವಾರದ ಮುಖಂಡರು ಹಾಗೂ ಸಿಎಂ ಯಡಿಯೂರಪ್ಪ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಶಾಸಕ ಅಪ್ಪಚ್ಚು ರಂಜನ್ ಧನ್ಯವಾದ ತಿಳಿಸಿದ್ದಾರೆ.

  • ರಾಜಕೀಯ ನಾಯಕರು, ಸಿನಿಮಾ ನಟರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ- ಸರ್ಕಾರಕ್ಕೆ ಹೈಕೋರ್ಟ್ ತರಾಟೆ

    ರಾಜಕೀಯ ನಾಯಕರು, ಸಿನಿಮಾ ನಟರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ- ಸರ್ಕಾರಕ್ಕೆ ಹೈಕೋರ್ಟ್ ತರಾಟೆ

    ಬೆಂಗಳೂರು: ರಾಜಕೀಯ ನಾಯಕರು, ಸಿನಿಮಾ ನಟರೇ ಕೊರೊನಾ ಮಾರ್ಗಸೂಚಿ, ನಿಯಮ ಉಲ್ಲಂಘಿಸುತ್ತಿದ್ದಾರೆ. ಆದರೂ ಯಾಕೆ ಕ್ರಮ ಕೈಗೊಂಡಿಲ್ಲ ಅಂತ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ.

    ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ಪ್ರವೇಶ ನಿರಾಕರಿಸಿದ್ದು, ಸಂಸದೆ ಶೋಭಾ ಕರಂದ್ಲಾಜೆ, ನಟ ದರ್ಶನ್‍ಗೆ ಯಾಕೆ ಅವಕಾಶ ಕೊಟ್ರಿ. ಸೆಲೆಬ್ರಿಟಿಗಳು, ರಾಜಕಾರಣಿಗಳಿಗೆ ಪ್ರತ್ಯೇಕ ಕಾನೂನು ಇದೆಯಾ ಎಂದು ಮುಜರಾಯಿ ಇಲಾಖೆಗೆ ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಚಾಮುಂಡಿ ತಾಯಿಯ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್

    ಕೆಂಪೇಗೌಡ ಪುತ್ಥಳಿ ಶಿಲಾನ್ಯಾಸ ಕಾರ್ಯಕ್ರಮ, ಡಿಕೆಶಿ ಪುತ್ರಿ ವಿವಾಹ ನಿಶ್ಚಿತಾರ್ಥ ವೇಳೆಯೂ ರೂಲ್ಸ್ ಬ್ರೇಕ್ ಆಗಿದೆ. ಈ ಬಗ್ಗೆಯೂ ಆಗಸ್ಟ್ 21ರ ಒಳಗೆ ವಿಚಾರಣಾ ವರದಿ ನೀಡಿ ಎಂದು ಸೂಚಿಸಿದೆ. ಇದರ ಮಧ್ಯೆ ಕಾಂಗ್ರೆಸ್ ನಾಯಕರ ಇಂದಿನ ಪ್ರತಿಭಟನೆಯಲ್ಲೂ ಸಾಮಾಜಿಕ ಅಂತರ ಕಾಣಲಿಲ್ಲ. ಬಿಜೆಪಿ ಮುಖಂಡ ರುದ್ರೇಶ್ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮಗಳ ಉಲ್ಲಂಘನೆಯಾಗಿದೆ. ಇದನ್ನೂ ಓದಿ: ಸಾರ್ವಜನಿಕ ಪ್ರವೇಶ ನಿಷೇಧ- ಬರಿಗಾಲಲ್ಲಿ ಚಾಮುಂಡಿ ಬೆಟ್ಟ ಹತ್ತಿದ ಶೋಭಾ ಕರಂದ್ಲಾಜೆ

  • ಕಳೆದ 5 ತಿಂಗ್ಳಿಂದ ವೃದ್ಧಾಪ್ಯ, ವಿಧವಾ, ಅಂಗವಿಕಲರನ್ನು ಸರ್ಕಾರ ಅಲೆದಾಡಿಸ್ತಿದೆ: ಹೆಚ್‍ಡಿಕೆ

    ಕಳೆದ 5 ತಿಂಗ್ಳಿಂದ ವೃದ್ಧಾಪ್ಯ, ವಿಧವಾ, ಅಂಗವಿಕಲರನ್ನು ಸರ್ಕಾರ ಅಲೆದಾಡಿಸ್ತಿದೆ: ಹೆಚ್‍ಡಿಕೆ

    ಬೆಂಗಳೂರು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷದ ಸಂಭ್ರಮದಲ್ಲಿದ್ದರೆ, ಇತ್ತ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರಾಕ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಸರ್ಕಾರ ಕಳೆದ 5 ತಿಂಗಳಿನಿಂದ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಫಲಾನುಭವಿಗಳನ್ನು ಅಲೆದಾಡಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದು, ತಕ್ಷಣ ಅವರಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.

    ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಹೆಚ್‍ಡಿಕೆ, ಐದಾರು ತಿಂಗಳಿನಿಂದ ಪಿಂಚಣಿ ಹಣ ಪಾವತಿಯಾಗದೇ ಅಂಗವಿಕಲರು, ವೃದ್ಧರು ಹಾಗೂ ವಿಧವೆಯರು ಪರಿತಪಿಸುತ್ತಿದ್ದಾರೆ. ಅಂಗವಿಕಲ, ವೃದ್ಧಾಪ್ಯ ಮತ್ತು ವಿಧವಾ ವೇತನವನ್ನು ತಕ್ಷಣ ಬಿಡುಗಡೆ ಮಾಡಲು ಸರ್ಕಾರ ತುರ್ತು ಆದೇಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

    ಕೊರೋನಾ ಸಂಕಷ್ಟದ ಸಮಯದಲ್ಲಿ ಸಕಾಲಕ್ಕೆ ಪಿಂಚಣಿ ಕೈಗೆ ಸಿಗದೇ ಅಗತ್ಯ ಔಷಧಗಳನ್ನು ಕೊಳ್ಳಲೂ ಈ ಫಲಾನುಭವಿಗಳು ಪರದಾಡುತ್ತಿದ್ದಾರೆ. ಹಲವು ಮಂದಿಗೆ ಊಟಕ್ಕೂ ತತ್ವಾರವಾಗಿದೆ. ವರ್ಷಾಚರಣೆಯ ಸಂಭ್ರಮದಲ್ಲಿರುವ ಬಿಜೆಪಿ ಸರ್ಕಾರ ಮೊದಲು ಹಣ ಬಿಡುಗಡೆಗೆ ಆದೇಶ ಮಾಡುವಂತೆ ಆಗ್ರಹಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ನಮ್ಮ ಸಾಧನೆ ಬಗ್ಗೆ ಪ್ರಧಾನಿ ಸಂಸದರಿಂದ ಚಪ್ಪಾಳೆ ಹೊಡೆಸಿದ್ರು – ಸಿಎಂ

    ಪಿಂಚಣಿ ಹಣಕ್ಕಾಗಿ ಕಳೆದ 5 ತಿಂಗಳಿಂದ ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲ ಫಲಾನುಭವಿಗಳನ್ನು ಅಲೆದಾಡಿಸಲಾಗುತ್ತಿದೆ. ಇದು ನಾಚಿಕೆಗೇಡು. ಈ ಸರ್ಕಾರಕ್ಕೆ ಕಣ್ಣು ಮತ್ತು ಕಿವಿಗಳು ಇಲ್ಲ. ಸವಾಲುಗಳ ವರ್ಷ; ಪರಿಹಾರದ ಸ್ಪರ್ಶ ಎಂಬ ಬೀಜ ಮಂತ್ರ ಪಠಿಸುತ್ತಿರುವ ಬಿಜೆಪಿ ಸರ್ಕಾರದ ಬಡವರ ವಿರೋಧಿ ನೀತಿಗೆ ಇದಕ್ಕಿಂತ ಉದಾಹರಣೆ ಬೇಕೆ? ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂದು ಪ್ರಶ್ನಿಸುವ ಮೂಲಕ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

    ಒಟ್ಟಿನಲ್ಲಿ ಸರ್ಕಾರ ವರ್ಷದ ಸಂಭ್ರಮದಲ್ಲಿದ್ದರೆ ವಿರೋಧಪಕ್ಷಗಳು ಸರ್ಕಾರದ ವೈಫಲ್ಯಗಳನ್ನು ಹಿಡಿದುಕೊಂಡು ಟೀಕಿಸುತ್ತಿವೆ. ಇದನ್ನೂ ಓದಿ: 24 ಬಿಜೆಪಿ ಶಾಸಕರಿಗೆ ಒನ್ ಇಯರ್ ಗಿಫ್ಟ್ ನೀಡಿದ ಸಿಎಂ

  • ಸರ್ಕಾರದ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ತಿಳಿಸುವೆ: ಮಾಜಿ ಸಚಿವ ಹೆಚ್.ಡಿ.ರೇವಣ್ಣ

    ಸರ್ಕಾರದ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ತಿಳಿಸುವೆ: ಮಾಜಿ ಸಚಿವ ಹೆಚ್.ಡಿ.ರೇವಣ್ಣ

    ಹಾಸನ: ಸರ್ಕಾರ ದ್ವೇಷದ ರಾಜಕಾರಣ ಮಾಡಿದರೆ ಹೋರಾಟ ಅನಿವಾರ್ಯ ಎಂದು ಮಾಜಿ ಸಚಿವ ರೇವಣ್ಣ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು ಜುಲೈ ತಿಂಗಳು ಕಳೆದರೂ ನಾಲೆಗಳಿಗೆ ನೀರು ಬಿಟ್ಟಿಲ್ಲ. ಸರ್ಕಾರ ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆಯಬೇಕು. ಹನ್ನೆರಡು ತಿಂಗಳಿಂದ ಯಾವುದೇ ಹೊಸ ನೀರಾವರಿ ಯೋಜನೆ ಆರಂಭಿಸಿಲ್ಲ. ಕೊರೊನದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಸನ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಹಾಸನ ಜಿಲ್ಲೆಯ ಜನ ಏನು ಮಾಡಿದ್ದಾರೆ. ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಅಂಬುಲೆನ್ಸ್ ಸೇವೆಗೆ ದರ ನಿಗದಿ ಮಾಡುತ್ತೇವೆಂದ ರಾಮುಲು

    ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರ ಸಭೆ ಕರೆದು, ಎಲ್ಲರ ಅಭಿಪ್ರಾಯ ಪಡೆದು ಸಿಎಂಗೆ ಪತ್ರ ಬರೆಯುತ್ತೇನೆ. ನಮ್ಮ ಪತ್ರಕ್ಕೆ ಸ್ಪಂದಿಸದಿದ್ದರೆ ದೇವೇಗೌಡರೊಂದಿಗೆ ಶಾಂತಿಯಿಂದ ಹೋರಾಟ ಮಾಡಬೇಕಾಗುತ್ತದೆ. ತಾಳ್ಮೆಯಿಂದ ಹನ್ನೆರಡು ತಿಂಗಳು ಕಾದಿದ್ದೇವೆ. ಜೆಡಿಎಸ್ ಶಾಸಕರು ಸುಮ್ಮನಿದ್ದಾರೆ ಎಂದು ಭಾವಿಸುವುದು ಸರಿಯಲ್ಲ ಎಂದರು.

    ಇದೇ ವೇಳೆ ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸಮಯ ಬಂದಾಗ ಎಳೆಎಳೆಯಾಗಿ ತಿಳಿಸುವೆ. ಅಧಿಕಾರಿಗಳ ವರ್ಗಾವಣೆಯಲ್ಲಿ ದಂಧೆ ನಡೆಯುತ್ತಿದೆ. ಹಾಸನ-ಬೇಲೂರು-ಚಿಕ್ಕಮಗಳೂರು ರೈಲ್ವೆ ಮಾರ್ಗ, ವಿಮಾನ ನಿಲ್ದಾಣ ಸೇರಿದಂತೆ ಯಾವ ಕಾಮಗಾರಿಗಳು ಆರಂಭಗೊಂಡಿಲ್ಲ ಎಂದು ರೇವಣ್ಣ ಸರ್ಕಾರದ ವಿರುದ್ಧ ಕಿಡಿಕಾರಿದರು.

  • ವಿರೋಧ ಪಕ್ಷದ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸ್ತಿಲ್ಲ: ಸಿದ್ದರಾಮಯ್ಯ

    ವಿರೋಧ ಪಕ್ಷದ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸ್ತಿಲ್ಲ: ಸಿದ್ದರಾಮಯ್ಯ

    ಬೆಂಗಳೂರು: ಕೊರೊನಾ ಎಂಬ ಚೀನಿ ವೈರಸ್ ರಾಜ್ಯಕ್ಕೆ ಕಾಲಿಟ್ಟ ಬಳಿಕ ಒಂದಲ್ಲ ಒಂದು ರೀತಿಯಲ್ಲಿ ವಿರೋಧ ಪಕ್ಷಗಳು ಸರ್ಕಾರದ ಕಾಲೆಳೆಯುತ್ತಲೇ ಇವೆ. ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮ್ಯ ಅವರು ಸರ್ಕಾರದ ವಿರುದ್ಧ ಗುಡುಗಿದ್ದಾರೆ.

    ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ, ರಾಜ್ಯ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ವಿರೋಧ ಪಕ್ಷದ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

    ಸಿದ್ದು ಮಾಡಿದ ಸರಣಿ ಟ್ವೀಟ್:
    ಟ್ವೀಟ್ 1: ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಕೊರೊನಾ ಆರೈಕೆ ಕೇಂದ್ರ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದರೆ ಇದರಿಂದ ಸಾಕಷ್ಟು ಅನುಕೂಲವಾಗುತ್ತಿತ್ತು. ಇಂಥದ್ದೊಂದು ವ್ಯವಸ್ಥೆ ನಿರ್ಮಾಣ ಮಾಡುವಂತೆ ಮಾರ್ಚ್ ತಿಂಗಳಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲೇ ನಾವು ಸರ್ಕಾರಕ್ಕೆ ಸಲಹೆ ನೀಡಿದ್ದೆವು.

    ಟ್ವೀಟ್ 2: ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಸಿದ್ಧವಾಗುತ್ತಿರುವ ಕೊರೊನಾ ಚಿಕಿತ್ಸಾ ಕೇಂದ್ರಕ್ಕೆ ಅಗತ್ಯವಿರುವ 1,800 ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿಗಳ ನೇಮಕ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಹಾಗೆಯೇ ಹಾಸಿಗೆ, ಮಂಚ ಖರೀದಿ ಪ್ರಕ್ರಿಯೆಯಲ್ಲೂ ಸಾಕಷ್ಟು ಗೊಂದಲವಿದೆ. ಇದರಿಂದ ಇನ್ನಷ್ಟು ವಿಳಂಬವಾಗಬಹುದು.

    ಟ್ವೀಟ್ 3: ರಾಜ್ಯ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ವಿರೋಧ ಪಕ್ಷದ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ, ಅಧಿವೇಶನ ಕರೆದು ಚರ್ಚಿಸಿ ಕೊರೊನಾ ನಿಯಂತ್ರಣಕ್ಕೆ ಒಟ್ಟಾಗಿ ಶ್ರಮಿಸೋಣ ಎಂದರೆ ಅದನ್ನೂ ಮಾಡುತ್ತಿಲ್ಲ. ಸರ್ಕಾರದ ಈ ಧೋರಣೆಯಿಂದ ರಾಜ್ಯದ ಜನ ಕಷ್ಟ ಅನುಭವಿಸುವಂತಾಗಿದೆ.

    ಟ್ವೀಟ್ 4: ಕೊರೊನಾ ಆರಂಭವಾದಾಗಿಂದ ನಾವು ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಿದ್ದೇವೆ. ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಕಣ್ಣೆದುರೇ ಭ್ರಷ್ಟಾಚಾರ ನಡೆದರೂ ಪ್ರತಿಪಕ್ಷವಾಗಿ ಸುಮ್ಮನೆ ಕೂರಬೇಕೇ? ರಾಜ್ಯದ ಜನರಿಗೆ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸುವುದು ಕೆಟ್ಟ ರಾಜಕಾರಣವಾದರೆ, ಒಳ್ಳೆ ರಾಜಕಾರಣ ಯಾವುದು ಅಂತ ಅವರೇ ಹೇಳಲಿ ಎಂದು ಬರೆದುಕೊಳ್ಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

  • ಅಂತಿಮ ತರಗತಿ ವಿದ್ಯಾರ್ಥಿಗಳಿಗೆ ಹೊರತು ಪಡಿಸಿ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ಎಕ್ಸಾಂ ರದ್ದು

    ಅಂತಿಮ ತರಗತಿ ವಿದ್ಯಾರ್ಥಿಗಳಿಗೆ ಹೊರತು ಪಡಿಸಿ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ಎಕ್ಸಾಂ ರದ್ದು

    – ಡಿಪ್ಲೊಮಾ, ಪಿಜಿ ಸಿಇಟಿ ನಿಗದಿಯಂತೆ ನಡೆಯಲಿದೆ
    – ಅಕ್ಟೋಬರ್ 1 ರಿಂದ ಆಫ್‍ಲೈನ್ ತರಗತಿ ಆರಂಭ

    ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಕೊಂಡಿರುವ ರಾಜ್ಯ ಸರಕಾರವು, 2019-20ನೇ ಸಾಲಿನಲ್ಲಿ ಎಂಜಿನಿಯರಿಂಗ್ ಸೇರಿ ಇತರ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಧ್ಯಂತರ ಸೆಮಿಸ್ಟರ್ (intermediate Semester) ವಿದ್ಯಾರ್ಥಿಗಳನ್ನು ಅಂತಿಮ ಪರೀಕ್ಷೆ ಇಲ್ಲದೆಯೇ ಮುಂದಿನ ಹಂತಕ್ಕೆ ಉತ್ತೀರ್ಣಗೊಳಿಸುವುದಾಗಿ ಪ್ರಕಟಿಸಿದೆ. ಜೊತೆಗೆ ಪ್ರಸಕ್ತ ಶೈಕ್ಷಣಿಕ ವರ್ಷದ ಅಂತಿಮ ಸೆಮಿಸ್ಟರ್ ಅಥವಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಯುಜಿಸಿ ಮಾರ್ಗಸೂಚಿ ಅನ್ವಯ ಸೆಪ್ಟೆಂಬರ್ ಅಂತ್ಯದೊಳಗೆ ಪರೀಕ್ಷೆ ನಡೆಸಲೂ ನಿರ್ಧರಿಸಿದೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಮತ್ತು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ, ಎಂಜಿನಿಯರಿಂಗ್, ಪದವಿ, ಸ್ನಾತ್ತಕೋತ್ತರ ಪದವಿಗೆ ಪರೀಕ್ಷೆ ನಡೆಸಬೇಕಾಗಿತ್ತು. ಆದರೆ ಕೊರೊನಾದಿಂದ ತಡವಾಗಿತ್ತು. ಹೀಗಾಗಿ ವಿದ್ಯಾರ್ಥಿಗಳಿಗೆ ಅನಾನುಕೂಲ ಆಗದಂತೆ ಕ್ರಮವಹಿಸಿದ್ದೇವೆ. ಆನ್‍ಲೈನ್ ಶಿಕ್ಷಣ, ಡಿಜಿಟಲ್ ಮೂಲಕ ಶಿಕ್ಷಣ ನೀಡಲಾಗಿದೆ. ಅನೇಕ ಮಾರ್ಗದಲ್ಲಿ ಶಿಕ್ಷಣ ನೀಡಲಾಗಿದೆ. ವಿವಿಗಳಲ್ಲಿ ಅಗತ್ಯ ಪಾಠ ಮಾಡಲಾಗಿದೆ. ಕೆಲವರಿಗೆ ನೆಟ್ ಸಮಸ್ಯೆ ಅಂತ ಹೇಳಲಾಗುತ್ತಿದೆ ಎಂದರು.

    ಎಂಜಿನಿಯರಿಂಗ್ 1, 2, 3 ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲ. ಪದವಿ 1, 2 ವರ್ಷದ ವಿದ್ಯಾರ್ಥಿಗಳಿಗೂ ಪರೀಕ್ಷೆ ಇಲ್ಲ. ಅದೇ ರೀತಿ ಡಿಪ್ಲೋಮಾ 1, 2, ವರ್ಷದ ವಿದ್ಯಾರ್ಥಿಗಳಿಗೂ ಪರೀಕ್ಷೆ ಇಲ್ಲ. ಮೊದಲ ವರ್ಷದ ಸ್ನಾತಕೋತ್ತರ ಪದವಿ ಪರೀಕ್ಷೆ ಇಲ್ಲ. ಅಂತಿಮ ವರ್ಷದ ಪರೀಕ್ಷೆ ಬಿಟ್ಟು ಯಾರಿಗೂ ಪರೀಕ್ಷೆ ಇಲ್ಲ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ವಿವಿಗಳು ಪರೀಕ್ಷೆ ಮಾಡಬೇಕು.
    ಬ್ಯಾಕ್ ಸಬ್ಜೆಕ್ಟ್ ಇದ್ದರೆ ಫೈನಲ್ ಪರೀಕ್ಷೆಯಲ್ಲಿ ಬರೆಯಬೇಕು. ಸೆಪ್ಟೆಂಬರ್‍ನಲ್ಲಿ ಅಂತಿಮ ವರ್ಷದ ಪರೀಕ್ಷೆ ಮಾಡಬೇಕು ಎಂದು ಸರ್ಕಾರ ಅಧಿಕೃತ ಘೋಷಣೆ ಮಾಡಿದೆ.

    ಸೆಪ್ಟೆಂಬರ್ ನಲ್ಲಿ ಪರೀಕ್ಷೆ ಬರೆಯಲು ಇಷ್ಟ ಇಲ್ಲದೆ ಇರೋರಿಗೆ ಮುಂದಿನ ಪರೀಕ್ಷೆ ಬರೆಯಲು ಅವಕಾಶ. ಫ್ರೆಶ್ ಅಭ್ಯರ್ಥಿಗಳಾಗಿ ಬರೆಯಬಹುದು. ಇಂಟರನಲ್ ಅಸೆಸ್ಮೆಟ್, ಹಿಂದಿನ ವರ್ಷದ ಪರೀಕ್ಷೆ ಆಧಾರದಲ್ಲಿ ಪಾಸ್ ಮಾಡುತ್ತೇವೆ. ಇಂಟರನಲ್ ಅಸೆಸ್ಮೆಟ್ 50% ಹಿಂದಿನ ಪರೀಕ್ಷೆ 50% ಆಧಾರದಲ್ಲಿ ಪಾಸ್ ಮಾಡುತ್ತೀವಿ. ಆರೋಗ್ಯ, ಸುರಕ್ಷಿತೆ ದೃಷ್ಟಿಯಿಂದ ಪರೀಕ್ಷೆ ರದ್ದು ಮಾಡಿದ್ದೇವೆ. ಕೇಂದ್ರ ಸರ್ಕಾರ ನಮಗೆ ಅವಕಾಶ ಕೊಟ್ಟಿತ್ತು. ಹೀಗಾಗಿ ನಾವು ಈ ನಿರ್ಧಾರ ಮಾಡಿದ್ದೇವೆ ಎಂದರು.

    ಇಂಟರನಲ್ ಅಸೆಸ್ಮೆಟ್ ಮಾಡಲು ಅವಕಾಶ ಮಾಡಲು ಅವಕಾಶ ಇದೆ. ಆನ್‍ಲೈನ್, ಆಫ್‍ಲೈನ್ ಮೂಲಕ ಮಾಡಬಹುದು. ಪರೀಕ್ಷೆ ಕೂಡ ಆನ್‍ಲೈನ್, ಆಫ್‍ಲೈನ್ ಮಾಡಬಹುದು ಎಂದು ತಿಳಿಸಿದರು.

    2020-21ರ ಶೈಕ್ಷಣಿಕ ಸಾಲಿನ ಮೊದಲ ಸೆಮಿಸ್ಟರ್‍ಗೆ ಸೆಪ್ಟೆಂಬರ್ 1 ರಿಂದಲೇ ಆನ್‍ಲೈನ್ ತರಗತಿಗಳು ಹಾಗೂ ಅಕ್ಟೋಬರ್ 1 ರಿಂದ ಆಫ್‍ಲೈನ್ ತರಗತಿಗಳು ಆರಂಭವಾಗುತ್ತವೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ವಿವಿಗಳು, ಕಾಲೇಜುಗಳಿಗೆ ಸೂಚಿಸಲಾಗಿದೆ. ಪ್ರತಿ ವಿವಿಯಲ್ಲಿ ಹೆಲ್ತ್‍ಲೈನ್ ಪ್ರಾರಂಭ ಮಾಡಲಾಗಿದೆ. ಅಗತ್ಯ ಮಾಹಿತಿ ಸಂಗ್ರಹ ಮಾಡಲು ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಳ್ಳಲು ಹೆಲ್ಪ್‍ಲೈನ್‍ಗೆ ಫೋನ್ ಮಾಡಬಹುದು ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

    ಸಿಇಟಿ ಪರೀಕ್ಷೆ ಜುಲೈ 30, 31ಕ್ಕೆ ನಡೆಯುತ್ತೆ. ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಸಿಇಟಿ ಪರೀಕ್ಷೆಗೂ ಹೆಲ್ತ್ ಲೈನ್ ಮಾಡುತ್ತೇವೆ. ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಳ್ಳಬಹುದು. ಪಿಜಿಸಿಇಟಿ ಆಗಸ್ಟ್ 8, 9 ನಡೆಯುತ್ತೆ. ಡಿಪ್ಲೋಮಾ ಸಿಇಟಿ ಆಗಸ್ಟ್ 9ಕ್ಕೆ ನಡೆಯುತ್ತೆ. ಈ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಕುಲಪತಿಗಳು, ಶಿಕ್ಷಣ ತಜ್ಞರ ಜೊತೆ ಚರ್ಚೆ ಮಾಡಿ ಈ ನಿರ್ಧಾರ ಮಾಡಲಾಗಿದೆ. ರಾಜ್ಯಪಾಲರ ಅನುಮತಿ ಪಡೆದು, ಯುಜಿಸಿ ಸಲಹೆ ಪಡೆದು ಈ ನಿರ್ಧಾರ ಮಾಡಲಾಗಿದೆ ಎಂದು ಡಿಸಿಎಂ ತಿಳಿಸಿದರು.