Tag: State Government

  • ಮರಾಠ ಅಭಿವೃದ್ಧಿಗೆ 50 ಕೋಟಿ – ಸರ್ಕಾರದ ನಿರ್ಧಾರಕ್ಕೆ ಸಾ.ರಾ ಗೋವಿಂದ್ ವಿರೋಧ

    ಮರಾಠ ಅಭಿವೃದ್ಧಿಗೆ 50 ಕೋಟಿ – ಸರ್ಕಾರದ ನಿರ್ಧಾರಕ್ಕೆ ಸಾ.ರಾ ಗೋವಿಂದ್ ವಿರೋಧ

    – ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ, ಪ್ರತಿಭಟನೆ ಮಾಡ್ತೇವೆ

    ಬೆಂಗಳೂರು: ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ 50 ಕೋಟಿ ರೂಪಾಯಿ ಅನುದಾನ ನೀಡಿರುವುದನ್ನು ನಾನು ವಿರೋಧಿಸುತ್ತೇನೆ ಎಂದು ಸಾ.ರಾ ಗೋವಿಂದ್ ಅವರು ಹೇಳಿದ್ದಾರೆ.

    ಇಂದು ನಗರದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಸಿಎಂ ನಿರ್ಧಾರವನ್ನು ಖಂಡಿಸಿ ನಾಡಿದ್ದು ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪ್ರತಿಭಟನೆ ಮಾಡುತ್ತೇವೆ. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ, ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಮುಂದಾಗಿ ಎಂದು ಮನವಿ ಮಾಡಿದರು.

    ಬೇರೆ ರಾಜ್ಯಗಳಲ್ಲಿ ಭಾಷೆಯನ್ನು ಅಭಿವೃದ್ಧಿ ಮಾಡುವ ಕೆಲಸವಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಆಗಲೇ ಇಲ್ಲ. ಮರಾಠಿ ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂಪಾಯಿ ಕೊಟ್ಟಿದ್ದಾರೆ. 2020-21ರಲ್ಲಿ ಕನ್ನಡ ಅನುಷ್ಟಾನ ಮತ್ತು ಅಭಿವೃದ್ಧಿಗಾಗಿ ಪ್ರಯತ್ನ ಮಾಡೋಣ ಅಂತ ಸಿಎಂ ಹೇಳಿದ್ದರು, ಆದರೆ ಇಲ್ಲಿಯವರೆಗೆ 2 ಕೋಟಿ ಕೇಳಿದರೂ ಕನ್ನಡ ಅಭಿವೃದ್ಧಿಗೆ ಕೊಡುವುದಕ್ಕೆ ಆಗಲಿಲ್ಲ. ಆದರೆ ಮರಾಠ ಅಭಿವೃದ್ಧಿಗೆ 50 ಕೋಟಿ ಕೊಟ್ಟಿದ್ದಾರೆ ಎಂದು ಗುಡುಗಿದರು.

    ನಿಮ್ಮ ಈ ನಿರ್ಧಾರಕ್ಕೆ ಸಲಹೆ ಕೊಟ್ಟವರು ಯಾರು? ಮರಾಠಿಗರು ನವೆಂಬರ್ 1ಕ್ಕೆ ಕರಾಳ ದಿನ ಆಚರಣೆ ಮಾಡುತ್ತಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ನೀಡುವ ಮೂಲಕ ಕನ್ನಡ ಪ್ರಾಧಿಕಾರವನ್ನು ಮುಚ್ಚುತ್ತಿರಾ? ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದು ಮಾಡಿ. ಕನ್ನಡ ಪರ ಹೋರಾಟಗಾರನಾಗಿ ನಾನು ವಿರೋಧ ಮಾಡುತ್ತೇನೆ ಎಂದು ಹೇಳಿದರು.

    ಬೆಳಗಾವಿ ಬಸವ ಕಲ್ಯಾಣ ಉಪ ಚುನಾವಣೆ ಘೋಷಣೆಗೂ ಮುನ್ನವೇ, ಮರಾಠ ಸಮುದಾಯ ಓಲೈಸುವ ಸಲುವಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಸಿಎಂ ಬಿಎಸ್‍ವೈ ಆದೇಶ ಹೊರಡಿಸಿದ್ದರು. ಅಲ್ಲದೇ 50 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದಾರೆ.

  • ಮೊದಲು ರಕ್ತವಿಲ್ಲದ ಬಕ್ರೀದ್ ಮಾಡಿ ಬಳಿಕ ಪಟಾಕಿಯನ್ನು ನಿಷೇಧಿಸಿ – ಋಷಿಕುಮಾರ ಸ್ವಾಮೀಜಿ ಕಿಡಿ

    ಮೊದಲು ರಕ್ತವಿಲ್ಲದ ಬಕ್ರೀದ್ ಮಾಡಿ ಬಳಿಕ ಪಟಾಕಿಯನ್ನು ನಿಷೇಧಿಸಿ – ಋಷಿಕುಮಾರ ಸ್ವಾಮೀಜಿ ಕಿಡಿ

    ಚಿಕ್ಕಮಗಳೂರು: ರಕ್ತರಹಿತವಾದ ಬಕ್ರೀದ್ ಆಚರಿಸೋಣ, ನಿಶ್ಶಬ್ದವಾದ ಶುಕ್ರವಾರ ಆಚರಣೆ ಮಾಡೋಣ. ಆಗ ಶಬ್ದವಿಲ್ಲದ, ಪಟಾಕಿ ಇಲ್ಲದ ದೀಪಾವಳಿ ಆಚರಿಸೋಣ ಎಂದು ಕಾಳಿಮಠದ ಋಷಿಕುಮಾರ ಸ್ವಾಮೀಜಿ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಮಾತನಾಡಿದ ಅವರು, ಪಟಾಕಿ ನಿಷೇಧದ ಬಗ್ಗೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಹಸಿರು ಪಟಾಕಿಯಂತೆ. ಇದ್ಯಾವುದು ಹೊಸದು. ಎಲೆ ಸುತ್ತಬೇಕಾ ಅಥವಾ ಪೇಪರ್ ಹರಿದು ಹಸಿರು ಬಣ್ಣದ ಪೇಪರ್ ಸುತ್ತಬೇಕಾ ಎಂದು ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಬಿಎಸ್‍ವೈ ಪೂರ್ಣಾವಧಿ ಸಿಎಂ ಎಂದು ಯಾವಾಗಲೂ ಹೇಳುತ್ತಿರುತ್ತೇನೆ. ಹಿಂದೂಗಳಿಗೆ ಹೀಗೆ ಮಾಡಿದರೆ ಮೂರು ತಿಂಗಳೂ ಇರುವುದಿಲ್ಲ. ಉಂಡುಂಡು ಮಲಗೋದು, ದಿನಕ್ಕೊಂದು ಕಾನೂನು ತರೋದಷ್ಟೆ ಸರ್ಕಾರದ ಸಾಧನೆಯಾಯ್ತು. ಯೋಗಿ ಸರ್ಕಾರವನ್ನು ನೋಡಿ ಕಲಿಯರಿ. ಅವರು 6 ಲಕ್ಷ ದೀಪ ಹಚ್ಚುತ್ತಿದ್ದಾರೆ ಎಂದು ಬಿಎಸ್‍ವೈ ವಿರುದ್ಧ ಕಿಡಿಕಾರಿದರು.

    ಮೊದಲು ರಕ್ತವಿಲ್ಲದ ಬಕ್ರೀದ್ ಮಾಡೋಣ, ನಿಶ್ಶಬ್ದವಾದ ಶುಕ್ರವಾರ ಆಚರಣೆ ಮಾಡೋಣ. ಆಗ ಶಬ್ದವಿಲ್ಲದ, ಪಟಾಕಿ ಇಲ್ಲದ ದೀಪಾವಳಿ ಮಾಡೋಣ. ಮೊದಲು ಅವೆಲ್ಲವನ್ನೂ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ದತ್ತಮಾಲಾ ಅಭಿಯಾನಕ್ಕೆ ಕಡಿಮೆ ಜನ ಸೇರಿಸಿ ಎಂದು ಹೇಳಿರುವ ಜಿಲ್ಲಾಡಳಿತದ ವಿರುದ್ಧವೂ ರಿಷಿಕುಮಾರ ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದಾರೆ.

    ನೀವು ಹೇಳುವ ಕೋವಿಡ್ ನಿಯಂತ್ರಣಕ್ಕೆ ನಾವು ಬದ್ಧ. ಅದಕ್ಕೆ ಈ ಬಾರಿ ರೋಡ್ ಶೋ ನಿಲ್ಲಿಸಿದ್ದೇವೆ. ಅಂತರ ಕಾಪಾಡಾಲು ಬದ್ಧ. ಹಿಂದೂ ಕಾರ್ಯಕ್ರಮಗಳಿಗೆ ಏಕೆ ತಡೆ ಒಡ್ಡುತ್ತೀರಾ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಇದೇ ತಿಂಗಳ 26ರಂದು ದತ್ತಮಾಲಾ ಅಭಿಯಾನ ನಡೆಯಲಿದೆ. ಈ ವರ್ಷ ಜಿಲ್ಲಾಡಳಿತ ತಡೆಯೊಡ್ಡುತ್ತಿದೆ. ಜನರನ್ನ ಸೇರಿಸಿ ಆದರೆ, ಕಡಿಮೆ ಜನರನ್ನ ಸೇರಿಸಿ. ನೀವು ಮಾತ್ರ ಹೋಗಿ ಬನ್ನಿ ಎಂದು ಹೇಳಿದೆ ಎಂದು ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದರು.

    ಇದು ಇಡೀ ರಾಜ್ಯ ಕಾಯುತ್ತಿರುವ ದಿನಗಳು. ಇಡೀ ರಾಜ್ಯ, ರಾಜ್ಯದ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಕೆಲಸವನ್ನ ಚಿಕ್ಕಮಗಳೂರು ಜಿಲ್ಲಾಡಳಿತ ಮಾಡುತ್ತಿದೆ. ಸಿ.ಟಿ.ರವಿ ನಮ್ಮವರು ನಮ್ಮವರು ಎಂದು ಹೇಳುತ್ತಲೇ ಕಳೆದ ವರ್ಷ ವಿಗ್ರಹವನ್ನು ಬೀದಿಯಲ್ಲಿ ಇಡುವ ಕೆಲಸ ಮಾಡಿದ್ದರು. ನಾವು ಅದನ್ನ ದೇವಾಸ್ಥಾನದಲ್ಲಿಟ್ಟು, ತ್ರಿಕಾಲ ಪೂಜೆ ಮಾಡುತ್ತಿದ್ದೇವೆ. ನಾವು ದತ್ತಮಾಲಾ ಅಭಿಯಾನಕ್ಕೆ ಇಡೀ ರಾಜ್ಯಕ್ಕೆ ಕರೆ ಕೊಟ್ಟಿದ್ದೇವೆ. ಸರ್ಕಾರ ದತ್ತಮಾಲಾ ಅಭಿಯಾನಕ್ಕೆ ಪೂರ್ಣ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಡಾ. ಬಾಲಾಜಿ ಚಿಕಿತ್ಸೆಗೆ ಸರ್ಕಾರದಿಂದ 25 ಲಕ್ಷ ಬಿಡುಗಡೆ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಡಾ. ಬಾಲಾಜಿ ಚಿಕಿತ್ಸೆಗೆ ಸರ್ಕಾರದಿಂದ 25 ಲಕ್ಷ ಬಿಡುಗಡೆ

    ಬೆಂಗಳೂರು: ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿ ಕೊನೆಗೆ ತಾವೇ ಕೊರೊನಾಗೆ ಒಳಗಾಗಿ ಚಿಕಿತ್ಸೆಗೆ ಒದ್ದಾಡ್ತಿದ್ದ ಡಾ. ಬಾಲಾಜಿ ಪ್ರಸಾದ್‍ಗೆ ಪಬ್ಲಿಕ್ ಟಿವಿ ವರದಿ ಬಳಿಕ ರಾಜ್ಯ ಸರ್ಕಾರ ಸ್ಪಂದಿಸಿದೆ.

    ಶ್ವಾಸಕೋಸ ಸಮಸ್ಯೆಯಿಂದ ಬಳಲ್ತಿದ್ದ ಬಾಲಾಜಿ ಪ್ರಸಾದ್ ಚಿಕಿತ್ಸೆಗೆ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದು, ಅವರನ್ನು ಏರ್ ಅಂಬುಲೆನ್ಸ್ ಮೂಲಕ ಚೆನ್ನೈಗೆ ಶಿಫ್ಟ್ ಮಾಡಲಾಗಿದೆ. ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದಕ್ಕೆ ಆರೋಗ್ಯ ಸಚಿವ ಡಾ. ಸುಧಾಕರ್ ಸೂಚನೆ ನೀಡಿದ್ದಾರೆ.

    ಕೊರೊನಾ ಅಟ್ಟಹಾಸದ ಹೊತ್ತಲ್ಲಿ 100ಕ್ಕೂ ಅಧಿಕ ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದ ಮೂತ್ರಪಿಂಡ ತಜ್ಞರೂ ಆಗಿರುವ ಬಾಲಾಜಿ ಪ್ರಸಾದ್ ಚಿಕಿತ್ಸೆಗೆ 1 ಕೋಟಿ ರೂಪಾಯಿ 20 ಲಕ್ಷ ರೂಪಾಯಿಯ ಅಗತ್ಯ ಇತ್ತು. ಈ ಬಗ್ಗೆ ಪಬ್ಲಿಕ್ ಟಿವಿ ವಿಸ್ತೃತ ವರದಿ ಮಾಡಿತ್ತು. ಇದನ್ನೂ ಓದಿ: ಕೊರೊನಾ ಚಿಕಿತ್ಸೆ ನೀಡಿದ್ದ ಡಾಕ್ಟರ್​​ಗೆ ಸೋಂಕು – ಶ್ವಾಸಕೋಶ ಸಮಸ್ಯೆಯಿಂದ ನರಳಾಟ

  • ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ 65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

    ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ 65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

    ಬೆಂಗಳೂರು: ಕನ್ನಡ ರಾಜ್ಯೋತ್ಸವದ 65ನೇ ವರ್ಷಾಚರಣೆಯ ಸಂದರ್ಭದಲ್ಲಿ 65 ಮಂದಿ ಸಾಧಕರಿಗೆ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ಘೋಷಣೆ ಮಾಡಿದೆ.

    ಪ್ರಶಸ್ತಿ ವಿವರ ಇಂತಿದೆ:
    ಸಾಹಿತ್ಯ: ಪ್ರೊ. ಸಿ.ಪಿ ಸಿದ್ದಾಶ್ರಮ (ಧಾರವಾಡ), ವಿ. ಮುನಿವೆಂಕಟಪ್ಪ (ಕೋಲಾರ), ರಾಮಣ್ಣ ಬ್ಯಾಟಿ (ಗದಗ), ವೆಲೇರಿಯನ್ ಡಿಸೋಜ(ವಲ್ಲಿವಗ್ಗ), ಡಿ.ಎನ್ ಅಕ್ಕಿ (ಯಾದಗಿರಿ).

    ಸಂಗೀತ: ಹಂಬಯ್ಯ ನೂಲಿ (ರಾಯಚೂರು), ಅನಂತ ತೇರದಾಳ (ಬೆಳಗಾವಿ), ಬಿ.ವಿ ಶ್ರೀನಿವಾಸ್ (ಬೆಂಗಳೂರು ನಗರ), ಗಿರಿಜಾ ನಾರಾಯಣ (ಬೆಂಗಳೂರು ನಗರ), ಕೆ. ಲಿಂಗಪ್ಪ ಶೆರಿಗಾರ ಕಟೀಲು (ದಕ್ಷಿಣ ಕನ್ನಡ).

    ನ್ಯಾಯಾಂಗ: ಕೆ.ಎನ್ ಭಟ್ (ಬೆಂಗಳೂರು), ಎಂ.ಕೆ ವಿಜಯ ಕುಮಾರ (ಉಡುಪಿ).

    ಮಾಧ್ಯಮ: ಸಿ. ಮಹೇಶ್ವರನ್ (ಮೈಸೂರು), ಟಿ. ವೆಂಕಟೇಶ್ (ಬೆಂಗಳೂರು ನಗರ).

    ಯೋಗ: ಡಾ. ಎ.ಎಸ್ ಚಂದ್ರಶೇಖರ್ (ಮೈಸೂರು).

    ಶಿಕ್ಷಣ: ಎಂ.ಎನ್ ಷಡಕ್ಷರಿ (ಚಿಕ್ಕಮಗಳೂರು), ಡಾ. ಆರ್ ರಾಮಕೃಷ್ಣ (ಚಾಮರಾಜನಗರ), ಡಾ. ಎಂ.ಜಿ ಈಶ್ವರಪ್ಪ (ದಾವಣಗೆರೆ), ಡಾ. ಪುಟ್ಟಸಿದ್ದಯ್ಯ (ಮೈಸೂರು), ಅಶೋಕ್ ಶೆಟ್ಟರ್ (ಬೆಳಗಾವಿ), ಡಿ.ಎಸ್ ದಂಡಿನ್ (ಗದಗ).

    ಹೊರನಾಡು ಕನ್ನಡಿಗ: ಕುಸುಮೋದರದೇರಣ್ಣ ಶೆಟ್ಟಿ ಕೇಲ್ತಡ್ಕ (ದಕ್ಷಿಣ ಕನ್ನಡ), ವಿದ್ಯಾ ಸೀಮಹಾಚಾರ್ಯ ಮಾಹುಲಿ (ಮಹಾರಾಷ್ಟ್ರ ಮುಲುಂಡ ಮುಂಬೈ).

    ಕ್ರೀಡೆ: ಹೆಚ್.ಬಿ ನಂಜೇಗೌಡ (ತುಮಕೂರು), ಉಷಾರಾಣಿ (ಬೆಂಗಳೂರು ನಗರ).

    ಸಂಕೀರ್ಣ: ಡಾ. ಕೆ.ವಿ ರಾಜು (ಕೋಲಾರ), ನಂ ವೆಂಕೋಬರಾವ್ (ಹಾಸನ), ಡಾ. ಕೆ.ಎಸ್ ರಾಜಣ್ಣ (ವಿಶೇಷ ಚೇತನ) ಮಂಡ್ಯ, ವಿ. ಲಕ್ಷ್ಮೀ ನಾರಾಯಣ (ನಿರ್ಮಾಣ್) ಮಂಡ್ಯ.

    ಸಂಘ ಸಂಸ್ಥೆ: ಯುತ್ ಫಾರ್ ಸೇವಾ (ಬೆಂಗಳೂರು ನಗರ), ದೇವದಾಸಿ ಸ್ವಾವಲಂಬನ ಕೇಂದ್ರ (ಬಳ್ಳಾರಿ), ಬೆಟರ್ ಇಂಡಿಯಾ (ಬೆಂಗಳೂರು ನಗರ), ಯುವ ಬ್ರಿಗೇಡ್ (ಬೆಂಗಳೂರು ಗ್ರಾಮಾಂತರ), ಧರ್ಮೋತ್ತಾನ ಟ್ರಸ್ಟ್, ಧರ್ಮಸ್ಥಳ (ದಕ್ಷಿಣ ಕನ್ನಡ).

    ಸಮಾಜ ಸೇವೆ: ಎನ್.ಎಸ್. (ಕುಂದರಗಿ) ಹೆಗಡೆ (ಉತ್ತರ ಕನ್ನಡ), ಪ್ರೇಮಾ ಕೋದಂಡರಾಮ ಶ್ರೇಷ್ಟಿ (ಚಿಕ್ಕಮಗಳೂರು), ಮಣೆಗಾರ್ ಮೀರಾನ್ ಸಾಹೇಬ್ (ಉಡುಪಿ), ಮೋಹಿನಿ ಸಿದ್ದೇಗೌಡ (ಚಿಕ್ಕಮಗಳೂರು).

    ವೈದ್ಯಕೀಯ: ಡಾ. ಅಶೋಕ್ ಸೊನ್ನದ್ (ಬಾಗಲಕೋಟೆ), ಡಾ. ಬಿ.ಎಸ್ ಶ್ರೀನಾಥ (ಶಿವಮೊಗ್ಗ), ಡಾ. ಎ ನಾಗರತ್ನ (ಬಳ್ಳಾರಿ), ಡಾ. ವೆಂಕಟಪ್ಪ (ರಾಮನಗರ).

    ಕೃಷಿ: ಸುರತ್ ಸಿಂಗ್ ಕನೂರ್ ಸಿಂಗ್ ರಜಪುತ್ (ಬೀದರ್), ಎಸ್.ವಿ ಸಮಂಗಲಮ್ಮ ವೀರಭದ್ರಪ್ಪ (ಚಿತ್ರದುರ್ಗ), ಡಾ. ಸಿದ್ರಾಮಪ್ಪ ಬಸವಂತರಾವ್ ಪಾಟೀಲ್ (ಕಲಬುರಗಿ).

    ಪರಿಸರ: ಅಮರ ನಾರಾಯಣ (ಚಿಕ್ಕಬಳ್ಳಾಪುರ), ಎನ್.ಡಿ ಪಾಟೀಲ್ (ವಿಜಯಪುರ).

    ವಿಜ್ಞಾನ/ತಂತ್ರಜ್ಞಾನ: ಪ್ರೊ. ಉಡುಪಿ, ಶ್ರೀನಿವಾಸ (ಉಡುಪಿ), ಡಾ. ಚಿಂದಿ ವಾಸುದೇವಪ್ಪ (ಶಿವಮೊಗ್ಗ).

    ಸಹಕಾರ: ಡಾ. ಸಿ.ಎನ್ ಮಂಚೇಗೌಡ (ಬೆಂಗಳೂರು ನಗರ).

    ಬಯಲಾಟ: ಕೆಂಪವ್ವ ಹರಿಜನ (ಬೆಳಗಾವಿ), ಚೆನ್ನಬಸಪ್ಪ ಬೆಂಡಿಗೇರಿ (ಹಾವೇರಿ).

    ಯಕ್ಷಗಾನ: ಬಂಗಾರ್ ಆಚಾರಿ (ಚಾಮರಾಜನಗರ), ಎಂ.ಕೆ ರಮೆಶ್ ಆಚಾರ್ಯ (ಶಿವಮೊಗ್ಗ).

    ರಂಗಭೂಮಿ: ಅನಸೂಯಮ್ಮ (ಹಾಸನ), ಹೆಚ್ ಷಡಾಕ್ಷರಪ್ಪ (ದಾವಣಗೆರೆ), ತಿಪ್ಪೇಸ್ವಾಮಿ (ಚಿತ್ರದುರ್ಗ).

    ಚಲನಚಿತ್ರ: ಬಿ.ಎಸ್ ಬಸವರಾಜ್ (ತುಮಕೂರು), ಆಪಾಢಾಂಡ ತಿಮ್ಮಯ್ಯ ರಘು (ಕೊಡಗು).

    ಚಿತ್ರಕಲೆ: ಎಂ.ಜೆ ವಾಚೇದ್ ಮಠ (ಧಾರವಾಡ).

    ಜಾನಪದ: ಗುರುರಾಜ ಹೊಸಕೋಟೆ (ಬಾಗಲಕೋಟೆ), ಡಾ. ಹಂಪನಹಳ್ಳಿ ತಿಮ್ಮೇಗೌಡ (ಹಾಸನ).

    ಶಿಲ್ಪಕಲೆ: ಎನ್.ಎಸ್ ಜನಾರ್ದನ ಮೂರ್ತಿ (ಮೈಸೂರು).

    ನೃತ್ಯ: ನಾಟ್ಯ ವಿದುಷಿ ಜ್ಯೋತಿ ಪಟ್ಟಾಭಿರಾಮ್.

    ಜಾನಪದ/ತೊಗಲು ಗೊಂಬೆಯಾಟ: ಕೇಶಪ್ಪ ಶಿಳ್ಳೆಕ್ಯಾತರ (ಕೊಪ್ಪಳ).

  • ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಫೇಲ್ – ರಾಜ್ಯಕ್ಕೆ ಬರಲಿದೆ ಕೇಂದ್ರದ ತಜ್ಞರ ತಂಡ

    ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಫೇಲ್ – ರಾಜ್ಯಕ್ಕೆ ಬರಲಿದೆ ಕೇಂದ್ರದ ತಜ್ಞರ ತಂಡ

    ನವದೆಹಲಿ: ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಫೇಲ್ ಆಗಿದೆ. ಈ ಹಿನ್ನೆಲೆ ರಾಜ್ಯದ ಕೊರೊನಾ ವೈರಸ್ ನಿಯಂತ್ರಣ ಉಸ್ತುವಾರಿಗೆ ಕೇಂದ್ರ ಸರ್ಕಾರ ವಿಶೇಷ ತಂಡವನ್ನು ನಿಯೋಜಿಸಿದೆ.

    ಕರ್ನಾಟಕವೂ ಸೇರಿ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕೇರಳ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸಗಢ ರಾಜ್ಯಗಳಿಗೆ ಪ್ರತ್ಯೇಕ ತಜ್ಞರ ತಂಡಗಳನ್ನು ಕೇಂದ್ರ ಆರೋಗ್ಯ ಇಲಾಖೆ ನಿಯೋಜಿಸಿದೆ. ಕೇಂದ್ರದಿಂದ ನಿಯೋಜನೆಗೊಂಡಿರುವ ತಜ್ಞರ ತಂಡ ಕರ್ನಾಟಕಕ್ಕೆ ಎರಡನೇ ಬಾರಿ ಬರಲಿದ್ದು ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ಮತ್ತು ಸಲಹೆಗಳನ್ನು ನೀಡಲಿದೆ.

    ಕಳೆದ ಮೇ ತಿಂಗಳಲ್ಲಿ ಕೇಂದ್ರದ ಕೋವಿಡ್ ತಜ್ಞರ ತಂಡ ರಾಜ್ಯಕ್ಕೆ ಭೇಟಿ ಕೊಟ್ಟಿತ್ತು ಮತ್ತು ರಾಜ್ಯದ ಕೊರೊನಾ ನಿರ್ವಹಣೆ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ಆದರೆ ಕೇಂದ್ರದ ತಂಡ ಭೇಟಿ ಬಳಿಕ ರಾಜ್ಯದಲ್ಲಿ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿದ್ದು ಕೈ ಮೀರಿ ಹೋಗುತ್ತಿದೆ. ಈ ಹಿನ್ನೆಲೆ ಮತ್ತೊಮ್ಮೆ ಕೇಂದ್ರ ಸರ್ಕಾರ ರಾಜ್ಯಕ್ಕೆ ತಜ್ಞರ ನಿಯೋಜನೆ ಮಾಡಿದೆ.

    ಕೇಂದ್ರದಿಂದ ನಿಯೋಜನೆಗೊಂಡಿರುವ ತಂಡ, ರಾಜ್ಯದಲ್ಲಿ ಸಕ್ರಿಯ ಸೋಂಕು ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣಗಳನ್ನು ಪಟ್ಟಿ ಮಾಡಲಿದೆ. ಜೊತೆಗೆ ಸೋಂಕು ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಿದೆ.

    ಇದಲ್ಲದೆ ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸಂಪರ್ಕಿತರ ಪತ್ತೆ ತೀವ್ರಗೊಳಿಸುವುದು, ಕೊ-ಮಾರ್ಬಿಡ್ ವ್ಯಕ್ತಿಗಳನ್ನು ಗುರುತಿಸಿ, ಚಿಕಿತ್ಸೆ ಕೊಡುವುದು, ಕೊರೊನಾಗಾಗಿಯೇ ನಿಯೋಜನೆಗೊಂಡಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಕರ್ಯ ಹೆಚ್ಚಿಸುವುದು, ಕ್ವಾರಂಟೈನ್, ಐಸೊಲೇಷನ್ ವ್ಯವಸ್ಥೆ ಸುಧಾರಿಸುವುದು, ಟೆಸ್ಟಿಂಗ್ ವ್ಯವಸ್ಥೆ ಇನ್ನಷ್ಟು ಬಲಪಡಿಸುವುದು, ಕಂಟೈನ್ಮೆಂಟ್ ವಲಯಗಳಲ್ಲಿ ಹೆಚ್ಚಿನ ನಿಗಾ ಇಡುವ ಟಾಸ್ಕ್ ಗಳನ್ನು ರಾಜ್ಯ ಸರ್ಕಾರಕ್ಕೆ ನೀಡಲಿದೆ.

    ಪ್ರತಿಯೊಂದು ತಂಡದಲ್ಲಿ ಜಂಟಿ ಕಾರ್ಯದರ್ಶಿ (ಆಯಾ ರಾಜ್ಯಕ್ಕೆ ನೋಡಲ್ ಅಧಿಕಾರಿ), ಸಾರ್ವಜನಿಕ ಆರೋಗ್ಯ ಅಂಶಗಳನ್ನು ನೋಡಿಕೊಳ್ಳಲು ಒಬ್ಬ ಸಾರ್ವಜನಿಕ ಆರೋಗ್ಯ ತಜ್ಞರು, ಸೋಂಕು ತಡೆಗಟ್ಟಲು ರಾಜ್ಯವು ಅನುಸರಿಸುತ್ತಿರುವ ಕ್ಲಿನಿಕಲ್ ನಿರ್ವಹನಾ ಶಿಷ್ಟಾಚಾರವನ್ನು ನೋಡಿಕೊಳ್ಳಲು ಒಬ್ಬ ವೈದ್ಯರು ಇರುತ್ತಾರೆ.

    ನಿಗ್ರಹ, ಕಣ್ಗಾವಲು, ಪರೀಕ್ಷೆ, ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳು ಮತ್ತು ಸಕಾರಾತ್ಮಕ ಪ್ರಕರಣಗಳ ಸಮರ್ಥ ಕ್ಲಿನಿಕಲ್ ನಿರ್ವಹಣೆಯನ್ನು ಬಲಪಡಿಸಲು ರಾಜ್ಯಗಳ ಪ್ರಯತ್ನಗಳನ್ನು ತಂಡಗಳು ಬೆಂಬಲಿಸುತ್ತವೆ. ಸಮಯೋಚಿತ ರೋಗನಿರ್ಣಯ ಮತ್ತು ಅನುಸರಣೆಗೆ ಸಂಬಂಧಿಸಿದ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕೇಂದ್ರ ತಂಡಗಳು ಮಾರ್ಗದರ್ಶನ ನೀಡುತ್ತವೆ.

    ಕರ್ನಾಟಕದಲ್ಲಿ ಒಟ್ಟು 7,43,848 ಪ್ರಕರಣಗಳು ವರದಿಯಾಗಿವೆ. ಇದು ದೇಶದ ಒಟ್ಟು ಪ್ರಕರಣಗಳಲ್ಲಿ ಶೇ.10.1 ಆಗಿದೆ. ಕರ್ನಾಟಕವು ಪ್ರತಿ ಮಿಲಿಯನ್ ಜನಸಂಖ್ಯೆಗೆ 11,010 ಪ್ರಕರಣಗಳನ್ನು ಹೊಂದಿದೆ. ರಾಜ್ಯದಲ್ಲಿ 6,20,008 ರೋಗಿಗಳು ಗುಣಮುಖರಾಗಿದ್ದಾರೆ. ಇದರ ಪರಿಣಾಮವಾಗಿ ಚೇತರಿಕೆ ದರವು ಶೇ.83.35 ಆಗಿದೆ. ಸಕ್ರಿಯ ಪ್ರಕರಣಗಳು 1,13,557 (ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇ.14.1). ರಾಜ್ಯದಲ್ಲಿ ಒಟ್ಟು 10,283 ಸಾವು ಸಂಭವಿಸಿವೆ. ಒಟ್ಟು ಪ್ರಕರಣಗಳ ಸಾವಿನ ಸಂಖ್ಯೆ ಶೇ.1.38 ನಷ್ಟು ಮತ್ತು ಪ್ರತಿ ಮಿಲಿಯನ್ ಜನಸಂಖ್ಯೆಗೆ 152 ಸಾವುಗಳು ಸಂಭವಿಸಿವೆ. ಪ್ರತಿ ಹತ್ತು ಲಕ್ಷಕ್ಕೆ ಪರೀಕ್ಷೆಯ ಪ್ರಮಾಣ 95674 ಮತ್ತು ಪಾಸಿಟಿವ್ ದರ ಶೇ.11.5 ಆಗಿದೆ.

  • ದೀಪಾವಳಿ ಮಾರ್ಗಸೂಚಿ – ಈ 10 ನಿಯಮಗಳನ್ನು ಅಂಗಡಿಗಳು ಪಾಲಿಸಲೇಬೇಕು

    ದೀಪಾವಳಿ ಮಾರ್ಗಸೂಚಿ – ಈ 10 ನಿಯಮಗಳನ್ನು ಅಂಗಡಿಗಳು ಪಾಲಿಸಲೇಬೇಕು

    ಬೆಂಗಳೂರು: ಕೊರೊನಾ ನಡುವೆ ದೀಪಾವಳಿ ಹಬ್ಬ ಆಚರಿಸಲು ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

    ಈ ವರ್ಷದ ದೀಪಾವಳಿ ಹಬ್ಬಕ್ಕೆ ಕೊರೊನಾ ಕಾರ್ಮೋಡ ಕವಿದಿದೆ. ರಾಜ್ಯದಲ್ಲಿ ಕೊರೊನಾ ಅಬ್ಬರದ ನಡುವೆ ಸರಳವಾಗಿ ಹಬ್ಬ ಮಾಡಲು ರಾಜ್ಯ ಸರ್ಕಾರ 10 ನಿಯಮಗಳಿರುವ ಒಂದು ಮಾರ್ಗಸೂಚಿಯನ್ನು ಹೊರಡಿಸಿದೆ.

    10 ನಿಯಮಗಳು
    1. ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರಗಳಿಂದ ಅಧಿಕೃತ ಪರವಾನಗಿಯನ್ನು ಪಡೆದ ಮಾರಾಟಗಾರರು ಮಾತ್ರ ಪಟಾಕಿಯನ್ನು ಮಾರಾಟ ಮಾಡತಕ್ಕದ್ದು.
    2. ಪಟಾಕಿ ಮಾರಾಟದ ಮಳಿಗೆಗಳನ್ನು ನವೆಂಬರ್ 1ರಿಂದ 17ರವರೆಗೆ ಮಾತ್ರ ತೆರೆದಿರತಕ್ಕದ್ದು,
    3. ಪರವಾನಿಗೆದಾರರು ಸಂಬಂಧಪಟ್ಟ ಇಲಾಖೆಯ/ಪ್ರಾಧಿಕಾರದಿಂದ ನೀಡುವ ಪರವಾನಗಿಯಲ್ಲಿ ನಿಗದಿಪಡಿಸಿರುವ ದಿನಾಂಕ ಮತ್ತು ಸ್ಥಳದಲ್ಲಿ ಮಾತ್ರ ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ಇಡಬೇಕು. ಬೇರೆ ಸ್ಥಳದಲ್ಲಿ ಮತ್ತು ದಿನಾಂಕಗಳಲ್ಲಿ ಅಂಗಡಿಯನ್ನು ತೆರೆಯಬಾರದು.

    4. ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಪಟಾಕಿ ಮಳಿಗೆಗಳನ್ನು ಸ್ಥಾಪಿಸಲು ಸಂಬಂಧಿಸಿದ ಇಲಾಖೆ, ಪ್ರಾಧಿಕಾರಗಳ ಅನುಮತಿ ಅಗತ್ಯ.
    5. ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು. ಒಂದು ಮಾರಾಟ ಮಳಿಗೆಯಿಂದ ಮತ್ತೊಂದು ಮಾರಾಟ ಮಳಿಗೆಗೆ 6 ಮೀಟರ್ ಅಂತರವಿರಬೇಕು.
    6. ಪ್ರತಿಯೊಂದು ಮಳಿಗೆಗಳಲ್ಲಿ ಸಂಬಂಧಪಟ್ಟ ಇಲಾಖೆಯ/ಪ್ರಾಧಿಕಾರದಿಂದ ನೀಡುವ ಪರವಾನಗಿ ಪ್ರತಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸುವುದು. ಪರವಾನಗಿ ಪತ್ರವನ್ನು ಪಡೆದಂತವರು ಕಡ್ಡಾಯವಾಗಿ ಮಳಿಗೆಗಳಲ್ಲಿ ಹಾಜರಿರಬೇಕು.

    7. ಪಟಾಕಿ ಸಿಡಿಮದ್ದುಗಳನ್ನು ಮಾರಾಟ ಮಾಡುವ ಮಳಿಗೆಗಳ ಸುತ್ತಮುತ್ತ ದಿನನಿತ್ಯ ಸ್ಯಾನಿಟೈಸೇಷನ್ ಮಾಡುವುದು ಹಾಗೂ ಪಟಾಕಿಗಳ ಖರೀದಿಗೆ ಬರುವ ಸಾರ್ವಜನಿಕರಿಗೆ ಸ್ಮಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಕಲ್ಪಿಸುವುದರ ಜೊತೆಗೆ ಕನಿಷ್ಟ 6 ಅಡಿ ಸಾಮಾಜಿಕ ಅಂತರವನ್ನು ಗುರುತಿಸುವುದು ಹಾಗೂ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳತಕ್ಕದ್ದು. ಪಟಾಕಿ ಮಾರುವ ವ್ಯಾಪಾರಸ್ಥರು ಮತ್ತು ಖರೀದಿಗೆ ಇರುವ ಸಾರ್ವಜನಿಕರು ಕಡ್ಡಾಯವಾಗಿ ಮುಖಗವಸು ಧರಿಸಿರತಕ್ಕದ್ದು.

    8. ಪಟಾಕಿ ಖರೀದಿ ಸಂದರ್ಭದಲ್ಲಿ ಯಾವುದೇ ರೀತಿಯ ಜನದಟ್ಟಣೆ ಆಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳುವುದು.
    9. ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿ ಗಳನ್ನು ತಪ್ಪದೇ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ಅಲ್ಲದೇ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ, ಜಿಲ್ಲಾಡಳಿತ ಹಾಗೂ ಇತರೆ ಇಲಾಖೆ/ ಕಾರ್ಪೊರೇಷನ್/ ಪ್ರಾಧಿಕಾರಗಳಿಂದ ಹೊರಡಿಸಲಾದ ಸೂಚನೆ ಹಾಗೂ ಮಾರ್ಗಸೂಚಿಗಳನ್ನು ಸಹ ಕಡ್ಡಾಯವಾಗಿ ಪಾಲಿಸತಕ್ಕದ್ದು,


    10. ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಆದೇಶ/ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿ ಶಿಸ್ತು/ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪ ಬಂಧಗಳ ಮೇರೆಗೆ ಕ್ರಮ ಜರುಗಿಸಲಾಗುವುದು.

  • ಮೀಸಲು ನಿಗದಿಯಲ್ಲಿ ನ್ಯಾಯ ದೇವತೆಗೆ ಅನ್ಯಾಯ – ರೇವಣ್ಣ ಕಿಡಿ

    ಮೀಸಲು ನಿಗದಿಯಲ್ಲಿ ನ್ಯಾಯ ದೇವತೆಗೆ ಅನ್ಯಾಯ – ರೇವಣ್ಣ ಕಿಡಿ

    ಹಾಸನ: ಹಾಸನ ನಗರಸಭೆ ಅಧ್ಯಕ್ಷಗಾದಿಯನ್ನು ಎಸ್‍ಟಿ ಅಭ್ಯರ್ಥಿಗೆ ಮೀಸಲಿರಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಹಾಸನದಲ್ಲಿ ಶಾಸಕ ಹೆಚ್‍ಡಿ.ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.

    ಹಾಸನ ನಗರಸಭೆ ಅಧ್ಯಕ್ಷರಾಗಿ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗುವುದು ಖಚಿತವಾಗಿದ್ದು, ಬಹುಮತವಿದ್ದರೂ ಜೆಡಿಎಸ್ ಪಕ್ಷ ಅಧ್ಯಕ್ಷ ಸ್ಥಾನದಿಂದ ವಂಚಿತವಾಗಿದೆ. ಈ ಬಗ್ಗೆ ಹಾಸನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ರೇವಣ್ಣ, ಮೀಸಲು ನಿಗದಿಯಲ್ಲಿ ನ್ಯಾಯ ದೇವತೆಗೆ ಅನ್ಯಾಯ ಮಾಡಿದ್ದಾರೆ ಎಂದರು. ಇದನ್ನು ಓದಿ: ಬಹುಮತ ಇಲ್ಲದಿದ್ದರೂ ಬಿಜೆಪಿಗೆ ಸಿಕ್ತು ಹಾಸನ, ಅರಸೀಕೆರೆ ನಗರಸಭೆ ಅಧ್ಯಕ್ಷ ಪಟ್ಟ

    ಎರಡು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಬೆಳೆಯುತ್ತದೆ ಎಂಬ ಭಯ ಇರಬಹುದು. ಜಿಲ್ಲೆಯಲ್ಲಿ ಹಿಂದೆ ಕಾಂಗ್ರೆಸ್ ಮಾಡಿದ್ದನ್ನು ಈಗ ಬಿಜೆಪಿಯವರು ಮಾಡಿದ್ದಾರೆ. ಹರಿಹರ ನಗರಸಭೆಗೆ ಮೀಸಲಾಗಿದ್ದ ಎಸ್‍ಟಿ ಮೀಸಲಾತಿಯನ್ನು ಹಾಸನ ನಗರಸಭೆಗೆ ಹಾಕಿದ್ದಾರೆ. ರಾಜ್ಯದಲ್ಲಿ ಎಸ್‍ಟಿಗೆ ಮೀಸಲು ಇರುವುದು ಎರಡೇ ಸ್ಥಾನ. ಅದು ಕೊಪ್ಪಳ ಮತ್ತು ಹರಿಹರಕ್ಕೆ ಇದನ್ನು ಅಡ್ವೋಕೇಟ್ ಜನರಲ್ ಹೈಕೋರ್ಟಿಗೂ ನೀಡಿದ್ದರು. ಆದರೀಗ ರಾತ್ರೋರಾತ್ರಿ ಬದಲು ಮಾಡಿದ್ದಾರೆ ಎಂದು ಆರೋಪ ಮಾಡಿದರು.

    ನ್ಯಾಯಾಲಯ ಇದನ್ನು ಗಮನಿಸಿ ಸ್ವಯಂಪ್ರೇರಿತ ಕೇಸ್ ತಗೆದುಕೊಳ್ಳಬೇಕು. ಕೋರ್ಟಿಗೆ ಮರೆ ಮಾಚಿರುವ ಅಡ್ವೋಕೇಟ್ ಜನರಲ್‍ಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಬೇಕು. ಜೆಡಿಎಸ್ ಬಹುಮತ ಇದೆ ಎಂದು ಬೇಕಂತಲೇ ಅಧಿಕಾರ ತಪ್ಪಿಸಿದ್ದಾರೆ. ಇದಕ್ಕಾಗಿ 7 ತಿಂಗಳಿಂದ ಸರ್ಕಸ್ ಮಾಡಿದ್ದಾರೆ. ಯಡಿಯೂರಪ್ಪಗೆ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇದೆಯೇ? ಇದರ ವಿರುದ್ಧ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ. ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ತಿಳಿಸಿದರು.

  • ಮಾತು ತಪ್ಪಿದ ಸಿಎಂ – ಕೊಟ್ಟ ಅನುದಾನ ಬಡ್ಡಿ ಸಮೇತ ವಾಪಸ್ ಪಡೆದ ರಾಜ್ಯ ಸರ್ಕಾರ

    ಮಾತು ತಪ್ಪಿದ ಸಿಎಂ – ಕೊಟ್ಟ ಅನುದಾನ ಬಡ್ಡಿ ಸಮೇತ ವಾಪಸ್ ಪಡೆದ ರಾಜ್ಯ ಸರ್ಕಾರ

    – ಯಾದಗಿರಿ ಜನರಿಗೆ ಕೈ ಕೊಟ್ಟ ಸರ್ಕಾರ

    ಯಾದಗಿರಿ: ಮೊದಲ ಬಾರಿಗೆ ಸಿಎಂ ಆಗಿದ್ದ ವೇಳೆ ಯಾದಗಿರಿಯನ್ನು ರಾಜ್ಯದ 30ನೇಯ ಜಿಲ್ಲೆಯಾಗಿ ಮಾಡಿದ್ದ ಸಿಎಂ ಯಡಿಯೂರಪ್ಪ, ಕಡಿಮೆ ಅವಧಿಯಲ್ಲಿ ಜಿಲ್ಲೆಯನ್ನು ಅಭಿವೃದ್ಧಿಪಡಿಸಿ ರಾಜ್ಯಕ್ಕೆ ಮಾದರಿ ಜಿಲ್ಲೆಯಾಗಿ ಮಾಡುತ್ತೆನೆಂದು ಜನರಿಗೆ ಮಾತು ಕೊಟ್ಟಿದ್ದರು.

    ಈ ಮಾತನ್ನು ಮುಖ್ಯಮಂತ್ರಿಗಳು ಈಗ ಸಂಪೂರ್ಣವಾಗಿ ಮರೆತಿದ್ದು, ಕುಂಟು ನೆಪ ಹೇಳಿ ಜಿಲ್ಲೆಯ ಅಭಿವೃದ್ಧಿಗೆ ಸ್ವತಃ ಅವರೇ ಕೊಡಲಿ ಪೆಟ್ಟನ್ನು ನೀಡುತ್ತಿದ್ದಾರೆ. ಯಾದಗಿರಿ ಜಿಲ್ಲೆ ಈಗಾಗಲೇ ಭಾರತ ದೇಶದಲ್ಲಿಯೇ ಅತಿ ಹಿಂದುಳಿದ ಜಿಲ್ಲೆಯೆಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಹೀಗಾಗಿ ಕೇಂದ್ರ ಸರ್ಕಾರದ ಶೈಕ್ಷಣಿಕ ಮಹತ್ವಾಕಾಂಕ್ಷೆಯ ಜಿಲ್ಲೆ ಎನ್ನಿಸಿಕೊಂಡಿದೆ. ಎಲ್ಲ ಮಾದರಿಯ ಪರೀಕ್ಷೆಗಳಲ್ಲಿ ಜಿಲ್ಲೆ ಶೈಕ್ಷಣಿಕ ಮಟ್ಟದಲ್ಲಿ ಕೊನೆ ಸ್ಥಾನದಲ್ಲಿದೆ.

    ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗಾಗಿ ವಿಜ್ಞಾನ ಕೇಂದ್ರ ಆರಂಭ ಮಾಡಲು, ವಿಜ್ಞಾನ ಪರಿಷತ್ತು ಸಂಸ್ಥೆಗೆ ಸರ್ಕಾರ ಹಣ ಬಿಡುಗಡೆ ಮಾಡಿತ್ತು. ಆದರೆ ಈಗ ಬಿಡುಗಡೆ ಮಾಡಿದ್ದ ಅನುದಾನವನ್ನು ಹಾಗೂ ಅನುದಾನಕ್ಕೆ ಇಲ್ಲಿಯವರಗೆ ದೊರೆತ ಬ್ಯಾಂಕ್ ಬಡ್ಡಿಯನ್ನು ವಾಪಸ್ ರಾಜ್ಯ ಸರ್ಕಾರದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕೆಂದು ಅಪಾರ ಮುಖ್ಯಕಾರ್ಯದರ್ಶಿ ಅವರು ಯಾದಗಿರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಈಗ ಜಿಲ್ಲೆಗೆ ಮಂಜೂರಾಗಿದ್ದ ವಿಜ್ಞಾನ ಕೇಂದ್ರವನ್ನು ಕೂಡ ಕೈಬಿಟ್ಟಿದ್ದು ಮತ್ತಷ್ಟು ಶೈಕ್ಷಣಿಕ ಮಟ್ಟದ ಹಿನ್ನೆಡೆಗೆ ಕಾರಣವಾಗಲಿದೆ.

    ಜಿಲ್ಲೆಗೆ ಮಂಜೂರಾಗಿದ್ದ ಉಪಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಬಿಎಸ್‍ವೈ ಸರ್ಕಾರ ಕೋವಿಡ್ ಆರ್ಥಿಕ ಸಂಕಷ್ಟದ ನೆಪ ಹೇಳಿ ವಾಪಸ್ ಪಡೆದಿದೆ. ಈಗಾಗಲೇ ಯಾದಗಿರಿ ನಗರದ ಹೊರಭಾಗದ ಮುಂಡರಗಿಯಲ್ಲಿ 10 ಎಕರೆ ಜಾಗದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ವಿಜ್ಞಾನ ಕೇಂದ್ರ ನಿರ್ಮಾಣಕ್ಕೆ ಮಂಜೂರು ಪಡೆಯಲಾಗಿತ್ತು. ಈಗ ಏಕಾಏಕಿ ಹಣಕಾಸಿನ ಕೊರತೆ ಹಾಗೂ ವಿವಿಧ ಕಾರಣಗಳಿಟ್ಟುಕೊಂಡು ವಿಜ್ಞಾನ ಕೇಂದ್ರ ಕೈಬಿಟ್ಟಿರುವುದಕ್ಕೆ ಜಿಲ್ಲೆಯ ಜನರ ಅಕ್ರೋಶ ವ್ಯಕ್ತಪಡಿಸಿದ್ದಾರೆ.

  • ಈ ಸರ್ಕಾರ ಯಾವಾಗ ಇರುತ್ತೋ, ಯಾವಾಗ ಹೋಗುತ್ತೋ ಗೊತ್ತಿಲ್ಲ – ಆನಂದ್ ಸಿಂಗ್

    ಈ ಸರ್ಕಾರ ಯಾವಾಗ ಇರುತ್ತೋ, ಯಾವಾಗ ಹೋಗುತ್ತೋ ಗೊತ್ತಿಲ್ಲ – ಆನಂದ್ ಸಿಂಗ್

    ಬಳ್ಳಾರಿ: ಸರ್ಕಾರದ ಅಸ್ತಿತ್ವದ ಬಗ್ಗೆ ಅರಣ್ಯ ಸಚಿವ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಆನಂದ್ ಸಿಂಗ್ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಬಳ್ಳಾರಿಯ ಹೊಸಪೇಟೆ ತಾಲೂಕಿನ ಕಮಾಲಾಪುರದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯದಲ್ಲಿ ನಡೆದ 66ನೇ ವನ್ಯ ಜೀವಿ ಸಂರಕ್ಷಣಾ ಸಪ್ತಾಹದ ಅಂಗವಾಗಿ ಆಯೋಜನೆ ಮಾಡಿದ್ದ ಕಾರ್ಯಕ್ರಮ ಹೇಳಿಕೆ ನೀಡಿರುವ ಅವರು, ಈ ಸರ್ಕಾರ ಯಾವಾಗ ಇರುತ್ತೋ, ಯಾವಾಗ ಹೋಗುತ್ತೋ ಗೊತ್ತಿಲ್ಲ ಎಂದರು.

    ನಂತರ ಇದೇ ಹೇಳಿಕೆಗೆ ಸ್ಪಷ್ಟನೆ ನೀಡಿದ ಆನಂದ್ ಸಿಂಗ್ ಅವರು, ನನ್ನ ಹೇಳಿಕೆಯನ್ನು ಅನ್ಯತಾ ಭಾವಿಸಬೇಡಿ ಎಂದು ಸಹ ಸ್ಪಷ್ಟಪಡಿಸಿದ್ದಾರೆ. ಆನಂದ್ ಸಿಂಗ್ ಈ ರೀತಿ ಏಕಾಏಕಿ ಹೇಳಲು ಕಾರಣವೇನು? ಸರ್ಕಾರದಲ್ಲಿ ಅಭದ್ರತೆ ಕಾಡುತ್ತಿದೆಯಾ ಅಥವಾ ಈ ಸ್ಫೋಟಕ ಹೇಳಿಕೆಯಿಂದ ಇದೆ ರಾಜಕೀಯ ತಂತ್ರಗಾರಿಕೆ ಇದೆಯಾ ಎನ್ನುವ ಅನುಮಾನಗಳು ಕಾಡಲಾರಂಭಿಸಿವೆ. ಜೊತೆಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಆನಂದ್ ಸಿಂಗ್ ಅವರನ್ನು ಕೈ ಬಿಡುವ ಸಾಧ್ಯತೆಯಿದ್ಯಾ ಎಂಬ ನಾನಾ ಚರ್ಚೆಗಳಿಗೆ ಅವರ ಹೇಳಿಕೆ ಕಾರಣವಾಗಿದೆ.

    ಈ ಹಿಂದೆ ಸಮ್ಮಿಶ್ರ ಸರ್ಕಾರ ಉರುಳಲು ಸಚಿವ ಆನಂದ್ ಸಿಂಗ್ ಮೊದಲಿಗರಾಗಿದ್ದರು. ವಿಜಯನಗರ ಜಿಲ್ಲೆ ಮತ್ತು ಜಿಂದಾಲ್ ಭೂಮಿ ಪರಭಾರೆ ನೆಪವೊಡ್ಡಿ ಸಮ್ಮಿಶ್ರ ಸರ್ಕಾರ ಉರಳಲು ಮೊದಲಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇವರು ರಾಜೀನಾಮೆ ನೀಡಿದ ಬಳಿಕ ಒಬ್ಬೊಬ್ಬರಾಗಿ 14 ಜನ ಶಾಸಕರು ಕೂಡ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಮತ್ತೆ ಅವರೇ ಸರ್ಕಾರ ಅಸ್ಥಿರತೆಯ ಬಗ್ಗೆ ಮಾತನಾಡಿರುವುದು ನಾನಾ ಚರ್ಚೆಗಳಿಗೆ ಕಾರಣವಾಗಿದೆ.

  • ವಶಪಡಿಸಿಕೊಂಡ ಡ್ರಗ್ಸ್, ಗಾಂಜಾ ವಿಲೇವಾರಿ ಹೇಗೆ? ನಿಯಮ ಏನು?

    ವಶಪಡಿಸಿಕೊಂಡ ಡ್ರಗ್ಸ್, ಗಾಂಜಾ ವಿಲೇವಾರಿ ಹೇಗೆ? ನಿಯಮ ಏನು?

    ಬೆಂಗಳೂರು: ನಗರ ಪೊಲೀಸರು ಗುರುವಾರ ಕಲಬುರಗಿಯಲ್ಲಿ ಒಂದು ಟನ್‍ಗೂ ಅಧಿಕ ಗಾಂಜಾವನ್ನು ಕುರಿ ಸಾಕುವ ಕೊಟ್ಟಿಗೆಯಲ್ಲಿ ವಶಪಡಿಸಿಕೊಂಡಿದ್ದಾರೆ. ಇಷ್ಟು ಬೃಹತ್ ಪ್ರಮಾಣದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದ ಬಳಿಕ ಅದರ ವಿಲೇವಾರಿಯನ್ನು ಹೇಗೆ ಮಾಡಲಾಗುತ್ತದೆ ಎಂಬ ಪ್ರಶ್ನೆ ಏಳುವುದು ಸಹಜ ಸಂದರ್ಭದಲ್ಲಿ

    2018ಕ್ಕೂ ಮುನ್ನ ಬೆಂಗಳೂರು ಪೊಲೀಸರು ನ್ಯಾಯಾಲಯದ ಆದೇಶವನ್ನು ಪಡೆದು ಸೀಜ್ ಮಾಡಿದ್ದ ಮಾದಕ ವಸ್ತುಗಳನ್ನು ಆಯಾ ಪೊಲೀಸ್ ಠಾಣೆಗಳ ಬಳಿ ಸುಡುತ್ತಿದ್ದರು. ಆದರೆ ಬೃಹತ್ ಪ್ರಮಾಣದ ಮಾದಕ ದ್ರವ್ಯಗಳನ್ನು ಸುಡುವುದು ನಾರ್ಕೊಟಿಕ್ ಡ್ರಗ್ಸ್ ಆ್ಯಂಡ್ ಸೈಕೊಟ್ರಾಫಿಕ್ ಸಬ್‍ಸ್ಟೆನ್ಸಸ್ (ಎನ್‍ಡಿಪಿಎಸ್) ಕಾಯ್ದೆಗೆ ವಿರುದ್ಧವಾಗಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಮತ್ತು ಉಪ ಪೊಲೀಸ್ ಆಯುಕ್ತರು ನೋಡಲ್ ಅಧಿಕಾರಿಗಳೊಂದಿಗೆ ಮಾದಕ ವಸ್ತುಗಳನ್ನು ಪರಿಸರ ಸ್ನೇಹಿಯಾಗಿ ವಿಲೇವಾರಿ ಮಾಡುತ್ತಾರೆ. ಇದನ್ನೂ ಓದಿ: ಕೋತಿ ಮೊಸರು ತಿಂದು ಮೇಕೆಯ ಮೂತಿಗೆ ಮೆತ್ತಿದಂತೆ- ಬಿಜೆಪಿಗೆ ಕೈ ಟಾಂಗ್

    ಬೃಹತ್ ಪ್ರಮಾಣದ ಮಾದಕ ವಸ್ತು ಸೀಜ್ ಮಾಡಿದಾಗ ಏನಾಗುತ್ತೆ?
    2015ರಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಕಂದಾಯ ಇಲಾಖೆಯ ಎಲ್ಲಾ ರಾಜ್ಯ ಸರ್ಕಾರಗಳಿಗೆ ಯಾವುದೇ ಸಂದರ್ಭದಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ತಕ್ಷಣವೇ ವಿಲೇವಾರಿ ಮಾಡಬೇಕು ಎಂದು ಆದೇಶ ಹೊರಡಿಸಿದೆ. ಮಾದಕ ವಸ್ತುಗಳ ದುರುಪಯೋಗ ತಪ್ಪಿಸಲು ಕೇಂದ್ರ ಆದೇಶ ನೀಡಿದೆ. ಸಣ್ಣ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದ ಸಂದರ್ಭದಲ್ಲಿ ಸಂಗ್ರಹಿಸಿಟ್ಟ ಸ್ಥಳದಿಂದಲೇ ಹಲವು ಬಾರಿ ಅವು ನಾಪತ್ತೆಯಾಗಿರುವ ಉದಾಹರಣೆಗಳಿವೆ. ಆದ್ದರಿಂದ ವಶಪಡಿಸಿಕೊಂಡ ವಸ್ತುಗಳ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ ನಂತರ ಅದನ್ನು ನಾಶಪಡಿಸಬೇಕಿದೆ.

    ಸದ್ಯ ಬೆಂಗಳೂರಿನ ಪೊಲೀಸರು ವಶಕ್ಕೆ ಪಡೆದಿರುವ ಮಾದಕ ದ್ರವ್ಯಗಳನ್ನು ಪೊಲೀಸ್ ಆಯುಕ್ತರ ಕಟ್ಟಡದಲ್ಲಿ ಸಂಗ್ರಹಿಸಿಡಲಾಗಿದೆ. ಈ ರೀತಿ ಸಂಗ್ರಹಿಸಿದ ಎಲ್ಲಾ ವಸ್ತುಗಳ ಫೋಟೋ ಹಾಗೂ ವಿಡಿಯೋ ಮಾಡಿ ಮ್ಯಾಜಿಸ್ಟ್ರೇಟರ್ ಗೆ ಸಲ್ಲಿಸಲಾಗುತ್ತದೆ. ಆ ಬಳಿಕ ಅವರು ಮಾದಕ ವಸ್ತುಗಳನ್ನು ವಿಲೇವಾರಿ ಮಾಡಲು ಆದೇಶ ನೀಡುತ್ತಾರೆ. ನ್ಯಾಯಾಲಯದ ಆದೇಶವಿಲ್ಲದೇ ವಶಕ್ಕೆ ಪಡೆದ ಮಾದಕ ವಸ್ತುಗಳನ್ನು ನಾಶಪಡಿಸಲು ಅವಕಾಶವಿಲ್ಲ ಎಂದು 2015ರ ಸರ್ಕಾರದ ಆದೇಶ ತಿಳಿಸುತ್ತದೆ. ಇದನ್ನೂ ಓದಿ: 6 ಕೋಟಿ ಗಾಂಜಾ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಕಾರ್ಯಕರ್ತ

    ವಿಲೇವಾರಿ ಪ್ರಕ್ರಿಯೆ ಹೇಗೆ?
    2015ರ ಆದೇಶದ ಅನ್ವಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾನದಂಡಗಳಿಗೆ ಅನುಗುಣವಾಗಿ ಮಾದಕ ವಸ್ತುಗಳ ವಿಲೇವಾರಿ ಪ್ರತಿಕ್ರಿಯೆ ನಡೆಯುತ್ತದೆ. ಈ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಸಮಿತಿಯನ್ನು ಸ್ಥಾಪಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಸಮಿತಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ, ಕಸ್ಟಮ್ಸ್ ಮತ್ತು ಕೇಂದ್ರ ಅಬಕಾರಿ ಜಂಟಿ ಆಯುಕ್ತರು ಹಾಗೂ ಪಿಸಿಬಿ ಅಧಿಕಾರಿಗಳೊಂದಿಗೆ ಕಂದಾಯ ಇಲಾಖೆಯ ಗುಪ್ತಚರ ನಿರ್ದೇಶನಾಲಯದ ಜಂಟಿ ನಿರ್ದೇಶಕರು ಇರುತ್ತಾರೆ. ಮಾದಕ ವಸ್ತುಗಳು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಹೊಂದಿದ್ದಾರೆ ಮಾತ್ರ ಪೊಲೀಸರಿಗೆ ವಿಲೇವಾರಿ ಮಾಡಲು ಅನುಮತಿ ಇದೆ.

    ಮಾದಕ ವಸ್ತುಗಳಾದ ಹೆರಾಯಿನ್ 5 ಕೆಜಿ, ಚರಸ್ 100 ಕೆಜಿ, ಹಶೀಶ್ ಆಯಿಲ್ 20 ಕೆಜಿ, ಗಾಂಜಾ 1 ಟನ್, ಕೊಕೇನ್ 2 ಕೆಜಿ, ಮ್ಯಾಂಡ್ರಾಕ್ಸ್ 3 ಟನ್, ಪೋಪಿಪಿ ಸ್ಟ್ರಾ 3 ಟನ್ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡರೆ ನಿಯಮಗಳ ಅನ್ವಯ ವಿಲೇವಾರಿ ಮಾಡಬೇಕಾಗುತ್ತದೆ.

    ವಿಲೇವಾರಿ ಹೇಗೆ?
    2018ರಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯದಿಂದ ಮಾಗಡಿಯಲ್ಲಿ ಕಾರ್ಖಾನೆಯನ್ನು ಗುರುತಿಸಲಾಗಿದ್ದು, ಅಲ್ಲಿ ಮಾದಕ ವಸ್ತುಗಳ ವಿಲೇವಾರಿ ಮಾಡಲಾಗುತ್ತದೆ. ಇಲ್ಲಿ ಸುಮಾರು 1000 ಡಿಗ್ರಿ ತಾಪಮಾನ ಹೊಂದಿರುವ ಬಾಯ್ಲರ್ ಬಳಸಿ ವಿಲೇವಾರಿ ಮಾಡಲಾಗುತ್ತದೆ. ಆದರೆ ಸಿಂಥೆಟಿಕ್ ಡ್ರಗ್ಸ್ ಗಳನ್ನು ಮರುಬಳಕೆ ಮಾಡಲು ಎನ್‍ಡಿಪಿಎಸ್ ಕಾಯ್ದೆಯ ಅನ್ವಯ ಹರಾಜು ಹಾಕಲು ಅವಕಾಶವಿದೆ. ಆದರೆ ಡ್ರಗ್ಸ್ ದುರುಪಯೋಗವಾಗುವ ಭಯದಿಂದ ನಾವು ಹರಾಜು ಹಾಕಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ‘ಕೆಜಿಎಫ್’ ರೌಡಿ ತಂಗಂ ಕುಟುಂಬದವರಿಂದ ಗಾಂಜಾ ದಂಧೆ

    ಉಳಿದಂತೆ ಸಣ್ಣ ಪ್ರಮಾಣದಲ್ಲಿ ಪೊಲೀಸರು ವಶಪಡಿಸಿಕೊಳ್ಳುವ, ಅಂದರೆ 100 ಅಥವಾ 200 ಗ್ರಾಂ ತೂಕದ ಗಾಂಜಾ, ಹಶೀಶ್ ಅಥವಾ ಹ್ಯಾಶ್ ಆಯಿಲ್ ಗಳಂತಹ ಮಾದಕ ವಸ್ತುಗಳನ್ನು ಪೊಲೀಸರೇ ವಿಲೇವಾರಿ ಮಾಡುತ್ತಾರೆ. ಈ ಪ್ರಕ್ರಿಯೆಯನ್ನು ಖಾಲಿ ಸ್ಥಳದಲ್ಲಿ, ಅದು ತಡರಾತ್ರಿಯಲ್ಲಿ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.