Tag: Starlink

  • ಭಾರತಕ್ಕೆ ಬಂದೇ ಬಿಡ್ತು ಸ್ಟಾರ್‌ಲಿಂಕ್‌ – ಇದರ ಬೆಲೆ, ಇಂಟರ್ನೆಟ್‌ ಸ್ಪೀಡ್‌ ಎಷ್ಟು ಗೊತ್ತಾ?

    ಭಾರತಕ್ಕೆ ಬಂದೇ ಬಿಡ್ತು ಸ್ಟಾರ್‌ಲಿಂಕ್‌ – ಇದರ ಬೆಲೆ, ಇಂಟರ್ನೆಟ್‌ ಸ್ಪೀಡ್‌ ಎಷ್ಟು ಗೊತ್ತಾ?

    ನವದೆಹಲಿ: ಎಲಾನ್ ಮಸ್ಕ್ (Elon Musk) ಒಡೆತನದ ಉಪಗ್ರಹ ಆಧಾರಿತ ಇಂಟರ್ನೆಟ್ (Internet) ಕಂಪನಿ ಸ್ಟಾರ್‌ಲಿಂಕ್ (Starlink) ಭಾರತದಲ್ಲಿ (India) ತನ್ನ ಸೇವೆ ಒದಗಿಸಲು ಸಿದ್ಧವಾಗುತ್ತಿದೆ. ಭಾರತ ಸರ್ಕಾರವು ಸ್ಟಾರ್‌ಲಿಂಕ್‌ಗೆ ಅನುಮತಿ ನೀಡಿದೆ. ಈ ಬಗ್ಗೆ ದೂರಸಂಪರ್ಕ ಇಲಾಖೆ (DoT) ಸ್ಟಾರ್‌ಲಿಂಕ್‌ಗೆ ಅನುಮತಿ ಪತ್ರವನ್ನು (LoI) ನೀಡಿದೆ ಎಂದು ವರದಿಯಾಗಿದೆ.

    ಸ್ಟಾರ್‌ಲಿಂಕ್ ಉಪಗ್ರಹಗಳ ಸಮೂಹವನ್ನು ಬಳಸಿಕೊಂಡು ಇಂಟರ್ನೆಟ್ ಒದಗಿಸುತ್ತದೆ. ಈ ಉಪಗ್ರಹಗಳು ಬೇರೆ ಉಪಗ್ರಹಗಳಿಗಿಂತ ಭೂಮಿಗೆ ಹೆಚ್ಚು ಹತ್ತಿರದಲ್ಲಿರುತ್ತವೆ. ಇದರಿಂದಾಗಿ ಗ್ರಾಹಕರಿಗೆ ವೇಗವಾದ ಇಂಟರ್ನೆಟ್ ಸೌಲಭ್ಯ ಸಿಗುತ್ತದೆ. ಸ್ಟಾರ್‌ಲಿಂಕ್ ಈಗಾಗಲೇ 100 ಕ್ಕೂ ಹೆಚ್ಚು ದೇಶಗಳಲ್ಲಿ ಸಕ್ರಿಯವಾಗಿದೆ. ಈಗ ಭಾರತಕ್ಕೂ ಕಾಲಿಡುತ್ತಿದ್ದು, ಮುಖ್ಯವಾಗಿ ಗ್ರಾಮೀಣ ಭಾಗಗಳಿಗೆ ಇಂಟರ್ನೆಟ್‌ ಸೇವೆ ಒದಗಿಸುವ ಉದ್ದೇಶಹೊಂದಿದೆ.

    ಇಂಟರ್ನೆಟ್‌ ಬೆಲೆ, ವೇಗ ಎಷ್ಟಿರತ್ತೆ?
    ಸ್ಟಾರ್‌ಲಿಂಕ್ ಭಾರತದಲ್ಲಿ ಅನಿಯಮಿತ ಡೇಟಾ ಯೋಜನೆಗಳನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಇದಕ್ಕೆ ಸರಿಸುಮಾರು 840 ರೂ., ನಗರ ಪ್ರದೇಶಗಳಲ್ಲಿನ ಬಳಕೆದಾರರಿಗೆ ಮಾಸಿಕ 500ರೂ. ಶುಲ್ಕ, ವಾರ್ಷಿಕ 3,500 ರೂ. ಕನಿಷ್ಠ ಶುಲ್ಕವನ್ನು TRAI ಪ್ರಸ್ತಾಪಿಸಿದೆ. ಇದು ಆರಂಭಿಕ ಹಂತಗಳಲ್ಲಿ ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಆಕರ್ಷಿಸುವ ಪ್ರಯತ್ನವಾಗಿದೆ. ಭಾರತದಲ್ಲಿ ವಾಣಿಜ್ಯಿಕವಾಗಿ ಸೇವೆಗಳನ್ನು ನೀಡಲು ಸ್ಟಾರ್‌ಲಿಂಕ್ 8% ಪರವಾನಗಿ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ.

    ಭಾರತದಲ್ಲಿ ಸ್ಟಾರ್‌ಲಿಂಕ್‌ ಇಂಟರ್ನೆಟ್‌ ಪಡೆಯಲು ಬೇಕಾಗುವ ಸಾಧನಗಳ ಬೆಲೆಯನ್ನು ಇದು ಬಹಿರಂಗಪಡಿಸಿಲ್ಲ. ಅಮೆರಿಕಾದಲ್ಲಿ ಸ್ಟಾರ್‌ಲಿಂಕ್ ಕಿಟ್‌ನ ಬೆಲೆ 30,000 ರೂ. ಮತ್ತು ಕಾಂಪ್ಯಾಕ್ಟ್ ಸ್ಟಾರ್‌ಲಿಂಕ್ ಸಾಧನದ ಬೆಲೆ ಸುಮಾರು ರೂ. 43,000 ಆಗಿದೆ. ಭಾರತದಲ್ಲಿ ಇಂಟರ್ನೆಟ್ ವೇಗವು ಸ್ಥಳ ಮತ್ತು ಉಪಗ್ರಹ ವ್ಯಾಪ್ತಿಯನ್ನು ಅವಲಂಬಿಸಿ 25 Mbps ನಿಂದ 220 Mbps ವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.

    ಭಾರತದಲ್ಲಿ ಸ್ಟಾರ್‌ಲಿಂಕ್ ಯಾವಾಗ ಬಿಡುಗಡೆಯಾಗುತ್ತದೆ?
    ಸ್ಟಾರ್‌ಲಿಂಕ್ ಕಂಪನಿಯು ಇನ್ನೂ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದಿಂದ ಅಂತಿಮ ಅನುಮೋದನೆಯನ್ನು ಪಡೆಯಬೇಕಾಗಿದೆ. ಅದು ಜಾರಿಗೆ ಬಂದ ನಂತರ, ಸ್ಟಾರ್‌ಲಿಂಕ್ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ತನ್ನ ಸೇವೆಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

    ಸ್ಟಾರ್‌ಲಿಂಕ್ ಎಂದರೇನು?
    ಸ್ಟಾರ್‌ಲಿಂಕ್ ಅನ್ನೋದು ಎಲೋನ್ ಮಸ್ಕ್ ಸ್ಥಾಪಿಸಿದ ಏರೋಸ್ಪೇಸ್ ಕಂಪನಿಯಾದ ಸ್ಪೇಸ್‌ಎಕ್ಸ್‌ನಿಂದ ಪ್ರಾರಂಭಿಸಲಾದ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯಾಗಿದೆ. ಈ ಸೇವೆ ಪಡೆಯಬೇಕಾದರೆ ಕಂಪನಿಯ ಡಿಶ್‌ ಮತ್ತು ರೂಟರ್‌ ಬೇಕಾಗುತ್ತದೆ.

    ಬ್ರಾಡ್‌ಬ್ಯಾಡ್‌ ಸೇವೆ ಪಡೆಯಬೇಕಾದ್ರೆ ಫೈಬರ್‌ ಆಪ್ಟಿಕ್‌ ಕೇಬಲ್‌ ನೆಲಕ್ಕೆ ಹಾಕಬೇಕಾಗುತ್ತದೆ. ಆದ್ರೆ ಈ ಸ್ಟಾರ್‌ ಲಿಂಕ್‌ಗೆ ಗುಂಡಿ ತೋಡಿ ಆಪ್ಟಿಕಲ್‌ ಕೇಬಲ್‌ ಹಾಕುವ ಅಗತ್ಯ ಇಲ್ಲ. ಸ್ಟಾರ್‌ಲಿಂಕ್ 50 Mbps ನಿಂದ 150 Mbps ವರೆಗಿನ ವೇಗ ವೇಗದ ಇಂಟರ್ನೆಟ್ ನೀಡುತ್ತೆ. ಕೇಬಲ್‌ಗಳನ್ನು ಹಾಕುವುದು ತುಂಬಾ ದುಬಾರಿಯಾಗಿರುವ ಗ್ರಾಮೀಣ, ದೂರದ ಅಥವಾ ತಲುಪಲು ಕಷ್ಟಕರವಾದ ಪ್ರದೇಶಗಳಿಗೆ ಈ ಸ್ಯಾಟಲೈಟ್‌ ಇಂಟರ್‌ನೆಟ್‌ ಉತ್ತಮ.

    ಡಿಶ್‌ ಇದೆ ಹೌದು ಮಳೆ ಬಂದ್ರೆ ಇಂಟರ್‌ನೆಟ್‌ ಸಮಸ್ಯೆ ಆಗಲ್ವ ಅಂತ ನೀವು ಕೇಳಬಹುದು. ಸ್ಟಾರ್‌ಲಿಂಕ್‌ನಲ್ಲಿ ಸಮಸ್ಯೆ ಆಗಲ್ಲ. ತೀವ್ರ ಶೀತ ಮತ್ತು ಶಾಖ, ಹಿಮಪಾತ, ಭಾರೀ ಮಳೆ ಮತ್ತು ಬಿರುಗಾಳಿ ಬೀಸಿದ್ರೂ ಯಾವುದೇ ಸಮಸ್ಯೆ ಆಗಲ್ಲ.

  • Public TV Explainer: ಭಾರತಕ್ಕೆ ಎಂಟ್ರಿ ಕೊಡಲಿದೆ ಸ್ಟಾರ್‌ಲಿಂಕ್‌: ಸಿಗುತ್ತಾ ಕೇಬಲ್‌, ಟವರ್‌ ರಹಿತ ಹೈಸ್ಪೀಡ್‌ ಇಂಟರ್ನೆಟ್‌? – ದರ ಎಷ್ಟು?

    Public TV Explainer: ಭಾರತಕ್ಕೆ ಎಂಟ್ರಿ ಕೊಡಲಿದೆ ಸ್ಟಾರ್‌ಲಿಂಕ್‌: ಸಿಗುತ್ತಾ ಕೇಬಲ್‌, ಟವರ್‌ ರಹಿತ ಹೈಸ್ಪೀಡ್‌ ಇಂಟರ್ನೆಟ್‌? – ದರ ಎಷ್ಟು?

    ಭಾರತದ ಇಂಟರ್ನೆಟ್‌ ವ್ಯವಸ್ಥೆಯಲ್ಲಿ ಕ್ರಾಂತಿ ಸೃಷ್ಟಿಸುವ ಕಾಲ ಸನ್ನಿಹಿತವಾಗಿದೆ. ಟವರ್‌ ರಹಿತ ಹೈಸ್ಪೀಡ್‌ ಇಂಟರ್ನೆಟ್‌ ಸೇವೆಯನ್ನು ಭಾರತಕ್ಕೆ ಪರಿಚಯಿಸಲು ದೇಶದ ಎರಡು ದೈತ್ಯ ಕಂಪನಿಗಳು ಮುಂದಾಗಿವೆ. ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ (Elon Musk) ಅವರ ಸ್ಟಾರ್‌ಲಿಂಕ್‌ (Starlink) ಜೊತೆ ಮಹತ್ವದ ಒಪ್ಪಂದಕ್ಕೆ ರಿಲಯನ್ಸ್‌ ಜಿಯೋ ಮತ್ತು ಭಾರ್ತಿ ಏರ್ಟೆಲ್‌ ಸಹಿ ಹಾಕಿವೆ. ಭಾರತಕ್ಕೆ ಉಪಗ್ರಹ ಆಧರಿತ ಇಂಟರ್ನೆಟ್‌ ಸೇವೆ ಒದಗಿಸಲು ಸಿದ್ಧತೆ ನಡೆಸಿರುವ ಕಂಪನಿಗಳು ಮೊದಲ ಹೆಜ್ಜೆಯನ್ನಿಟ್ಟಿವೆ. ಟೆಕ್ ಬಿಲಿಯನೇರ್ ಮಸ್ಕ್ ಅವರ ಇಂಟರ್ನೆಟ್ ಸೇವೆಯ ಸ್ಟಾರ್‌ಲಿಂಕ್ ಭಾರತೀಯ ಮಾರುಕಟ್ಟೆಯಲ್ಲಿ ಪಾದಾರ್ಪಣೆ ಮಾಡಲು ಸಜ್ಜಾಗಿದೆ.

    ಏನಿದು ಸ್ಟಾರ್‌ಲಿಂಕ್?‌ ಇದು ಹೇಗೆ ಕೆಲಸ ಮಾಡುತ್ತದೆ? ಇಂಟರ್ನೆಟ್‌ ಸ್ಪೀಡ್‌ ಹೇಗಿರುತ್ತೆ? ವೆಚ್ಚ ಎಷ್ಟಾಗುತ್ತೆ? ಭಾರತಕ್ಕೆ ಯಾವಾಗ ಬರುತ್ತೆ? ಒಪ್ಪಂದ ಏನು? ಭಾರತಕ್ಕೆ ಇದು ಯಾಕೆ ಮಹತ್ವದ್ದಾಗಿದೆ? ಬನ್ನಿ ತಿಳಿಯೋಣ.

    ಸ್ಟಾರ್‌ಲಿಂಕ್‌ ಎಂದರೇನು?
    ಸ್ಟಾರ್‌ಲಿಂಕ್‌ ಎನ್ನುವುದು ಸ್ಪೇಸ್‌ಎಕ್ಸ್ ನಿರ್ವಹಿಸುವ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯಾಗಿದೆ.

    ಪರಿಚಯಿಸಿದ್ದು ಯಾವಾಗ?
    ಎಲಾನ್‌ ಮಸ್ಕ್‌ ಸ್ಥಾಪಿಸಿದ ಏರೋಸ್ಪೇಸ್‌ ಕಂಪನಿ ಸ್ಪೇಸ್‌ಎಕ್ಸ್‌ನಿಂದ 2019ರಲ್ಲಿ ಪ್ರಾರಂಭಿಸಲಾಯಿತು.

    ಹೇಗೆ ಕೆಲಸ ಮಾಡುತ್ತೆ?
    ಬಳಕೆದಾರ ಸಾಧನವು (User Device) ಬಾಹ್ಯಾಕಾಶದಲ್ಲಿರುವ ಉಪಗ್ರಹಕ್ಕೆ ಸಂಕೇತಗಳನ್ನು ಕಳುಹಿಸುತ್ತದೆ. ಅದು ಇಂಟರ್ನೆಟ್‌ಗೆ ಸಂಪರ್ಕಗೊಂಡಿರುವ ಗ್ರೌಂಡ್‌ ಸ್ಟೇಷನ್‌ಗೆ ಡೇಟಾವನ್ನು ಪ್ರಸಾರ ಮಾಡುತ್ತದೆ. ಡೇಟಾವನ್ನು ಉಪಗ್ರಹಕ್ಕೆ ಹಿಂತಿರುಗಿಸಲಾಗುತ್ತದೆ. ಅದು ಮತ್ತೆ ಬಳಕೆದಾರರ ಮೋಡೆಮ್ ಮತ್ತು ಉಪಗ್ರಹ ಡಿಶ್‌ಗೆ ಹಿಂದಿರುಗುತ್ತದೆ. ಇದು ತಡೆರಹಿತ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಕೇಬಲ್‌ಗಳು, ಫೈಬರ್ ಅಥವಾ ಫೋನ್ ಲೈನ್‌ಗಳ ಅಗತ್ಯವಿರಲ್ಲ. ಕೇಬಲ್‌ಗಳು ಅಥವಾ ಫೈಬರ್-ಆಪ್ಟಿಕ್ ಮೂಲಸೌಕರ್ಯವನ್ನು ಅವಲಂಬಿಸಿರುವ ಸಾಂಪ್ರದಾಯಿಕ ಇಂಟರ್ನೆಟ್ ಪೂರೈಕೆದಾರರಂತಲ್ಲದೆ, ಸ್ಟಾರ್‌ಲಿಂಕ್ ಭೂಮಿಯ ಮೇಲೆ ಸುತ್ತುವ ಸಣ್ಣ ಉಪಗ್ರಹಗಳ ಸಮೂಹವನ್ನು ನೇರವಾಗಿ ಬಳಕೆದಾರರಿಗೆ ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ಬೀಮ್ ಮಾಡಲು ಬಳಸುತ್ತದೆ. ಕೇಬಲ್‌ಗಳನ್ನು ಹಾಕುವುದು ಅಪ್ರಾಯೋಗಿಕ ಅಥವಾ ತುಂಬಾ ದುಬಾರಿಯಾಗಿರುವ ಗ್ರಾಮೀಣ, ದೂರದ ಅಥವಾ ತಲುಪಲು ಕಷ್ಟಕರವಾದ ಪ್ರದೇಶಗಳಿಗೆ ಇದು ಸೂಕ್ತ ಪರಿಹಾರವಾಗಿದೆ.

    ಇಂಟರ್ನೆಟ್‌ ಸ್ಪೀಡ್‌ ಎಷ್ಟಿರುತ್ತೆ?
    ಸ್ಟಾರ್‌ಲಿಂಕ್ ಇಂಟರ್ನೆಟ್‌ ವೇಗವು 220 Mbps ವರೆಗೆ ತಲುಪಿಸುತ್ತದೆ. ಇದು ವೀಡಿಯೊ ಕಾನ್ಫರೆನ್ಸಿಂಗ್, ಸ್ಟ್ರೀಮಿಂಗ್, ಗೇಮಿಂಗ್ ಮತ್ತು ವೃತ್ತಿಪರ ಕೆಲಸದಂತಹ ಚಟುವಟಿಕೆಗಳಿಗೆ ಸೂಕ್ತವಾಗಿದೆ. ಇದು ನೆಲ-ಆಧಾರಿತ ಮೂಲಸೌಕರ್ಯವನ್ನು ಅವಲಂಬಿಸಿಲ್ಲದ ಕಾರಣ, ಭಾರತದ ವಿಶಾಲವಾದ ಗ್ರಾಮೀಣ ಭಾಗಗಳನ್ನು ಒಳಗೊಂಡಂತೆ ಇಂಟರ್ನೆಟ್ ಪ್ರವೇಶದೊಂದಿಗೆ ಆಗಾಗ್ಗೆ ಹೋರಾಡುವ ಸ್ಥಳಗಳಿಗೆ Starlink ಸೂಕ್ತವಾಗಿದೆ.

    ಪ್ರಸ್ತುತ ಎಲ್ಲೆಲ್ಲಿ ಬಳಕೆ?
    2024 ರ ಅಂತ್ಯದ ವೇಳೆಗೆ ವಿಶ್ವಾದ್ಯಂತ ಸುಮಾರು 7,000 ಉಪಗ್ರಹಗಳು ಕಾರ್ಯನಿರ್ವಹಿಸುತ್ತಿವೆ. 100ಕ್ಕೂ ಹೆಚ್ಚು ದೇಶಗಳಲ್ಲಿ ಸ್ಟಾರ್‌ಲಿಂಕ್‌ ಸೇವೆ ನೀಡುತ್ತಿದ್ದು, 46 ಲಕ್ಷ ಬಳಕೆದಾರರನ್ನು ಹೊಂದಿವೆ. ಭಾರತದಲ್ಲೂ ಸ್ಟಾರ್‌ಲಿಂಕ್‌ ಇಂಟರ್ನೆಟ್‌ ಸೇವೆಗೆ ಮಾತುಕತೆ ನಡೆಯುತ್ತಿದೆ.

    ದರ ಎಷ್ಟಿದೆ?
    ಅಮೆರಿಕದಲ್ಲಿ ಪ್ರತಿ ತಿಂಗಳಿಗೆ ಪ್ರಮಾಣಿತ ಸೇವೆಗೆ 120 ಡಾಲರ್‌ (10,430 ರೂ.) ಇದೆ. ಉಪಕರಣಗಳಿಗೆ 349 ಡಾಲರ್ (30,334‌ ರೂ.) ಇದೆ. ಮೊಬೈಲ್ ಯೋಜನೆಗಳು ಅಗ್ಗವಾಗಿವೆ ಆದರೆ ಕಡಿಮೆ ವೇಗವನ್ನು ನೀಡುತ್ತವೆ.

    ಆಫ್ರಿಕಾ ದೇಶಗಳಲ್ಲಿ ಕಡಿಮೆ ದರ?
    ಕೀನ್ಯಾದಲ್ಲಿ ಪ್ರತಿ ತಿಂಗಳಿಗೆ 10 ಡಾಲರ್‌ (ಅಂದಾಜು 844 ರೂ.) ದರವನ್ನು ವಿಧಿಸಿದೆ. ಬೋಟ್ಸ್ವಾನಾ, ಮಡಗಾಸ್ಕರ್, ಜಾಂಬಿಯಾ ಮೊದಲಾದ ದೇಶಗಳಲ್ಲಿ ಅಂದಾಜು 2,433 ರೂ. ನಷ್ಟಿದೆ.

    ಭಾರತಕ್ಕೆ ಬಂದ್ರೆ ದರ ಎಷ್ಟಾಗಬಹುದು?
    ಸ್ಥಿರ ಬ್ರಾಡ್‌ಬ್ಯಾಂಡ್‌ನಿಂದ ಪ್ರತಿ ಬಳಕೆದಾರರಿಗೆ ಸರಾಸರಿ ದರ ಸುಮಾರು 6ರಿಂದ 8 ಡಾಲರ್‌ ಆಗುವ ಸಾಧ್ಯತೆ ಇದೆ. ಆದರೆ, ದರಕ್ಕೆ ಸಂಬಂಧಿಸಿದಂತೆ ಜಿಯೋ ಮತ್ತು ಏರ್‌ಟೆಲ್‌ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    5ಜಿ ಗಿಂತಲೂ ವೇಗ?
    5G ಸಾಮಾನ್ಯವಾಗಿ ಸ್ಟಾರ್‌ಲಿಂಕ್‌ಗಿಂತ ವೇಗವಾಗಿರುತ್ತದೆ. ಆದರೆ ಎರಡೂ ವೇಗದ ಸಂಪರ್ಕಗಳನ್ನು ನೀಡುತ್ತವೆ. ನಗರ ಪ್ರದೇಶಗಳಿಗೆ 5G ಉತ್ತಮವಾಗಿದ್ದರೆ, ಗ್ರಾಮೀಣ ಪ್ರದೇಶಗಳಿಗೆ ಸ್ಟಾರ್‌ಲಿಂಕ್ ಉತ್ತಮವಾಗಿದೆ. 5ಜಿಯು 2 Gbps ವರೆಗಿನ ವೇಗವನ್ನು ತಲುಪಬಹುದು. ಸರಾಸರಿ ಡೌನ್‌ಲೋಡ್ ವೇಗ 50 Mbps ಮತ್ತು 1 Gbps ನಡುವೆ ಇರುತ್ತದೆ. ಸ್ಟಾರ್‌ಲಿಂಕ್‌, ಸಾಮಾನ್ಯವಾಗಿ 250 Mbps ವರೆಗಿನ ವೇಗವನ್ನು ತಲುಪುತ್ತದೆ. ನೆಟ್‌ವರ್ಕ್ ಲೋಡ್ ಮತ್ತು ಹವಾಮಾನವನ್ನು ಅವಲಂಬಿಸಿ ಬದಲಾಗಬಹುದು.

    ಭಾರತಕ್ಕೂ ಬರುತ್ತಾ ಸ್ಟಾರ್‌ಲಿಂಕ್?‌
    ದೇಶದ ಗ್ರಾಹಕರಿಗೆ ಸ್ಟಾರ್‌ಲಿಂಕ್‌ನ ಉಪಗ್ರಹ ಆಧಾರಿತ ಇಂಟರ್ನೆಟ್‌ ಸೇವೆ ಒದಗಿಸಲು ಮಸ್ಕ್‌ ಒಡೆತನದ ಸ್ಪೇಸ್‌ಎಕ್ಸ್‌ ಜೊತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ರಿಲಯನ್ಸ್‌ ಜಿಯೋ (Jio) ಮತ್ತು ಭಾರ್ತಿ ಏರ್‌ಟೆಲ್‌ (Airtel) ತಿಳಿಸಿವೆ. ಸ್ಪೇಸ್‌ಎಕ್ಸ್, ಭಾರತೀಯ ಗೃಹ ಸಚಿವಾಲಯದಿಂದ ಭದ್ರತಾ ಅನುಮತಿಗಾಗಿ ಅರ್ಜಿ ಸಲ್ಲಿಸಿದೆ. ಸಾಂಪ್ರದಾಯಿಕ ಮೂಲಸೌಕರ್ಯಗಳಿಗೆ ಸೀಮಿತವಾಗಿರುವ ಭಾರತದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಹೆಚ್ಚಿನ ವೇಗದ ಇಂಟರ್ನೆಟ್ ಸೇವೆ ಒದಗಿಸುವ ಗುರಿಯನ್ನು ಹೊಂದಿದೆ.

    ಭಾರತಕ್ಕೆ ಏಕೆ ಮುಖ್ಯ?
    ಭಾರತವು ಎರಡನೇ ಅತಿದೊಡ್ಡ ಇಂಟರ್ನೆಟ್ ಮಾರುಕಟ್ಟೆಯಾಗಿದೆ. ಆದರೆ 67 ಕೋಟಿ ಜನರಿಗೆ ಈಗಲೂ ಇಂಟರ್ನೆಟ್ ಪ್ರವೇಶವಿಲ್ಲ (2024ರ GSMA ವರದಿ ಪ್ರಕಾರ). ಸಾಂಪ್ರದಾಯಿಕ ನೆಟ್‌ವರ್ಕ್‌ಗಳು ವಿರಳವಾಗಿರುವ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಡಿಜಿಟಲ್ ಅಂತರವನ್ನು ಸ್ಟಾರ್‌ಲಿಂಕ್ ಕಡಿಮೆ ಮಾಡಬಹುದು. ಸ್ಟಾರ್‌ಲಿಂಕ್ ರಾಷ್ಟ್ರವ್ಯಾಪಿ ಸಂಪರ್ಕಕ್ಕೆ ಸಹಾಯ ಮಾಡುತ್ತದೆ. ಇಂಟರ್ನೆಟ್‌ ಸೌಲಭ್ಯದಿಂದ ವಂಚಿತವಾಗಿರುವ ಪ್ರದೇಶಗಳಿಗೆ ಇದು ತಲುಪಲು ಸಹಕಾರಿಯಾಗಿದೆ ಎಂಬುದು ಟೆಲಿಕಾಂ ಕಂಪನಿಗಳ ಅಭಿಪ್ರಾಯ.

    ವಿಳಂಬ ಯಾಕಾಯ್ತು?
    ಭಾರತದಲ್ಲಿ ಸ್ಟಾರ್‌ಲಿಂಕ್‌ನ ಪೂರ್ಣ-ಪ್ರಮಾಣದ ವಾಣಿಜ್ಯ ಉಡಾವಣೆಯು ಕೆಲವು ವಿಳಂಬಗಳನ್ನು ಎದುರಿಸಿದೆ. ಪ್ರಾಥಮಿಕವಾಗಿ ನಿಯಂತ್ರಕ ಸವಾಲುಗಳಿಂದಾಗಿ. ಕಂಪನಿಯು 2020 ರಿಂದ ಆಯ್ದ ಪ್ರದೇಶಗಳಲ್ಲಿ ಬೀಟಾ ಸೇವೆಗಳನ್ನು ನೀಡಲು ಆರಂಭಿಸಿತ್ತು. ಕೊನೆಗೆ ಸರ್ಕಾರ ಬೀಟಾ ಸೇವೆಯನ್ನು ನಿಲ್ಲಿಸಿತ್ತು. ವಿಶ್ವದಲ್ಲಿ ಉಪಗ್ರಹ ಆಧಾರಿತ ಸಂಪನ್ಮೂಲಗಳನ್ನು ಇಂಟರ್‌ನ್ಯಾಷನಲ್‌ ಟೆಲಿಕಾಂ ಯೂನಿಯನ್‌(ITU) ನೋಡಿಕೊಳ್ಳುತ್ತದೆ. ಭಾರತದಲ್ಲಿ ಉಪಗ್ರಹಗಳ (Satellite) ಬಳಕೆ ಮತ್ತು ಬಳಕೆದಾರರ ಲಿಂಕ್‌ಗಳನ್ನು ಸ್ಪೆಕ್ಟ್ರಂ ಹರಾಜು ಮೂಲಕವೇ ಹಂಚಿಕೆ ಮಾಡುತ್ತಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಜಿಯೋ ಹರಾಜು ಪ್ರಕ್ರಿಯೆ ಮೂಲಕವೇ ಪರವಾನಗಿ ಹಂಚಿಕೆಗೆ ಪಟ್ಟು ಹಿಡಿದಿದ್ದರಿಂದ ಬಿಕ್ಕಟ್ಟು ಸೃಷ್ಟಿಯಾಗಿತ್ತು.

    ಆತಂಕ ಏನು?
    ಅಮೆರಿಕ ಸರ್ಕಾರದ ಪ್ರಭಾವ: US ಸರ್ಕಾರ ಮತ್ತು ಅದರ ಗುಪ್ತಚರ ಏಜೆನ್ಸಿಗಳಿಗೆ ಸ್ಟಾರ್‌ಲಿಂಕ್‌ನ ನಿಕಟ ಸಂಬಂಧಗಳು ಕಣ್ಗಾವಲು ಮತ್ತು ಡೇಟಾ ಪ್ರತಿಬಂಧಕ್ಕೆ ಸಂಭಾವ್ಯವಾಗಿ ಅವಕಾಶ ನೀಡಬಹುದು. ಮಸ್ಕ್‌ನ ಕಂಪನಿಗಳು ಮತ್ತು US ಏಜೆನ್ಸಿಗಳ ನಡುವಿನ ಕೆಲವು ಒಪ್ಪಂದಗಳು ನಡೆದಿದೆ. ಇದು ಅಮೆರಿಕದ ಕಾನೂನಿನ ಅನ್ವಯವೇ ಕೆಲಸ ಮಾಡುತ್ತದೆ.‌

    ಡ್ಯುಯಲ್-ಯೂಸ್ ಟೆಕ್ನಾಲಜಿ: ನಾಗರಿಕ ಮತ್ತು ಮಿಲಿಟರಿ ಉದ್ದೇಶಗಳಿಗಾಗಿ ಸೇವೆ ಸಲ್ಲಿಸುವ ತಂತ್ರಜ್ಞಾನದ ಸಾಮರ್ಥ್ಯವು ಅದರ ಸಂಭಾವ್ಯ ದುರುಪಯೋಗದ ಬಗ್ಗೆ ಅಲ್ಲಗೆಳೆಯುವಂತಿಲ್ಲ.

    ಭೌಗೋಳಿಕ ರಾಜಕೀಯ ಪರಿಣಾಮಗಳು: ಸ್ಟಾರ್‌ಲಿಂಕ್‌ನ ಜಾಗತಿಕ ವ್ಯಾಪ್ತಿಯು ಮತ್ತು ಭೌಗೋಳಿಕ ರಾಜಕೀಯ ಡೈನಾಮಿಕ್ಸ್‌ನ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವು ಭಾರತದ ಕಾರ್ಯತಂತ್ರದ ಹಿತಾಸಕ್ತಿಗಳಿಗೆ ಅಪಾಯವನ್ನು ಉಂಟುಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿವೆ.

  • ಮಾದಕ ವಸ್ತು ಕಳ್ಳಸಾಗಾಣಿಕೆ ಜಾಲ ಪತ್ತೆಗೆ ಮಸ್ಕ್‌ನ ಸ್ಟಾರ್‌ಲಿಂಕ್ ಮೊರೆ ಹೋದ ಅಂಡಮಾನ್ ಪೊಲೀಸರು

    ಮಾದಕ ವಸ್ತು ಕಳ್ಳಸಾಗಾಣಿಕೆ ಜಾಲ ಪತ್ತೆಗೆ ಮಸ್ಕ್‌ನ ಸ್ಟಾರ್‌ಲಿಂಕ್ ಮೊರೆ ಹೋದ ಅಂಡಮಾನ್ ಪೊಲೀಸರು

    ಪೋರ್ಟ್ ಬ್ಲೇರ್: ಅಂಡಮಾನ್ (Andaman) ಮತ್ತು ನಿಕೋಬಾರ್‌ನಲ್ಲಿ ಇತ್ತೀಚೆಗೆ ಪೊಲೀಸರು ವಶಪಡಿಸಿಕೊಂಡ 360 ಶತಕೋಟಿ ರೂ. ಮೌಲ್ಯದ ಮಾದಕ ವಸ್ತು ಕಳ್ಳಸಾಗಾಣಿಕೆ ಜಾಲದ ಮಾಹಿತಿ ಕಲೆ ಹಾಕಲು ಅಂಡಮಾನ್‌ ಪೊಲೀಸರು ಎಲೋನ್ ಮಸ್ಕ್‌ನ (Elon Musk) ಸ್ಟಾರ್‌ಲಿಂಕ್‌ (Starlink) ಮೊರೆ ಹೋಗುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಭಾರತೀಯ ಸಮುದ್ರ ಗಡಿಗೆ ಮಾದಕವಸ್ತು ತರಲು ಆರೋಪಿಗಳು ಉಪಗ್ರಹ ಆಧಾರಿತ ಇಂಟರ್ನೆಟ್ ಸಾಧನವನ್ನು ಬಳಸಿದ್ದಾರೆ. ಅವರ ಮಾಹಿತಿ ಕಲೆಹಾಕಲು ಪೊಲೀಸರು ಎಲೋನ್ ಮಸ್ಕ್‌ನ ಸ್ಟಾರ್‌ಲಿಂಕ್‌ನಿಂದ ವಿವರಗಳನ್ನು ಪಡೆಯಲಿದ್ದಾರೆ ಎಂದು ಅಂಡಮಾನ್ ದ್ವೀಪದ ಉನ್ನತ ಪೊಲೀಸ್ ಅಧಿಕಾರಿ ಹರಗೋಬಿಂದರ್ ಎಸ್. ಧಲಿವಾಲ್ ತಿಳಿಸಿದ್ದಾರೆ.

    ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಮೀಪ ಮ್ಯಾನ್ಮಾರ್ ಬೋಟ್‌ನಲ್ಲಿ ಸಾಗಿಸುತ್ತಿದ್ದ 6,000 ಕೆಜಿ ಗಿಂತ ಹೆಚ್ಚಿನ ಮಾದಕ ವಸ್ತು ಮೆತ್‌ನ್ನು ವಶಪಡಿಸಿಕೊಂಡಿದ್ದರು. ಅಲ್ಲದೇ ಆರು ಮ್ಯಾನ್ಮಾರ್ ಪ್ರಜೆಗಳನ್ನು ಬಂಧಿಸಿದ್ದರು.

    ಈ ಪ್ರಕರಣದಲ್ಲಿ ಮೊದಲ ಬಾರಿಗೆ ಸ್ಟಾರ್‌ಲಿಂಕ್‌ನ ಸಾಧನವನ್ನು ಭಾರತೀಯ ಜಲಭಾಗವನ್ನು ತಲುಪಲು ಆರೋಪಿಗಳು ಬಳಿಸಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಸ್ಟಾರ್‌ಲಿಂಕ್ ಉಪಗ್ರಹ ಆಧಾರಿತ ಇಂಟರ್‌ನೆಟ್‌ ಒದಗಿಸುತ್ತದೆ. ಅಲ್ಲದೇ ಅಂತರರಾಷ್ಟ್ರೀಯ ಸಂಪರ್ಕವನ್ನು ಇದು ಒದಗಿಸುತ್ತದೆ. ಈ ಸಾಧನವನ್ನು ಯಾರು ಮತ್ತು ಯಾವಾಗ ಖರೀದಿಸಿದ್ದಾರೆ ಎಂದು ಸ್ಟಾರ್‌ಲಿಂಕ್‌ನಿಂದ ವಿವರಗಳನ್ನು ಪಡೆಯಲು ಪೊಲೀಸರು ಮುಂದಾಗಿದ್ದಾರೆ.

  • ಮಸ್ಕ್‌ನ ಸ್ಟಾರ್‌ಲಿಂಕ್‌ಗೆ ಅನುಮತಿ ನೀಡುವ ಮುನ್ನ ನಿರ್ಧಾರ ಪರಿಶೀಲಿಸಿ: ಕೇಂದ್ರಕ್ಕೆ ಜಿಯೋ ಪತ್ರ

    ಮಸ್ಕ್‌ನ ಸ್ಟಾರ್‌ಲಿಂಕ್‌ಗೆ ಅನುಮತಿ ನೀಡುವ ಮುನ್ನ ನಿರ್ಧಾರ ಪರಿಶೀಲಿಸಿ: ಕೇಂದ್ರಕ್ಕೆ ಜಿಯೋ ಪತ್ರ

    ನವದೆಹಲಿ: ವಿಶ್ವದ ನಂಬರ್‌ ಒನ್‌ ಶ್ರೀಮಂತ ಎಲಾನ್‌ ಮಸ್ಕ್‌ (Elon Musk) ಒಡೆತನದ ಸ್ಟಾರ್‌ಲಿಂಕ್‌ಗೆ (Starlink) ಅನುಮತಿ ನೀಡುವ ಮುನ್ನ ಸಂಭಾವ್ಯ ವ್ಯಾಪ್ತಿಯನ್ನು ಪರಿಶೀಲಿಸುವಂತೆ ಮುಕೇಶ್‌ ಅಂಬಾನಿ (Mukesh Ambani) ಒಡೆತನದ ರಿಲಯನ್ಸ್‌ ಜಿಯೋ (Reliance Jio) ಸರ್ಕಾರವನ್ನು ಕೇಳಿಕೊಂಡಿದೆ.

    ಸ್ಟಾರ್‌ಲಿಂಕ್‌ಗೆ ಅನುಮತಿ ನೀಡಿದರೆ ದೇಶೀಯ ಕಂಪನಿಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇರುವ ಕಾರಣ ನಿರ್ಧಾರವನ್ನು ಪರಿಶೀಲಿಸುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ (TRAI) ಜಿಯೋ ಪತ್ರ ಬರೆದಿದೆ.

    ಮಸ್ಕ್‌ ಉಪಗ್ರಹ ಆಧಾರಿತ ಇಂಟರ್‌ನೆಟ್‌ ಕಂಪನಿ ಸ್ಟಾರ್‌ಲಿಂಕ್‌ ಸ್ಥಾಪಿಸಿದ್ದು ಈ ಕಂಪನಿ ಭಾರತದಲ್ಲಿ ಸೇವೆ ನೀಡಲು ಕೇಂದ್ರ ಸರ್ಕಾರವನ್ನು ಕೇಳಿದೆ. ಹಿಂದೆ ಕೇಂದ್ರ ಸರ್ಕಾರ ಸ್ಟಾರ್‌ಲಿಂಕ್‌ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ. ಆದರೆ ಈಗ ಅನುಮತಿ ನೀಡಲು ಮುಂದಾಗಿದೆ. ಈ ಹಿಂದೆ ಪ್ರತಿಕ್ರಿಯಿ ನೀಡಿದ್ದ ಕೇಂದ್ರ ಸಂವಹನ ಮತ್ತು ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia), ಸ್ಟಾರ್‌ಲಿಂಕ್ ಸರ್ಕಾರದ ಎಲ್ಲಾ ಷರತ್ತುಗಳನ್ನು ಅನುಸರಿಸಿದರೆ ನಾವು ಪರವಾನಗಿ ನೀಡುತ್ತೇವೆ ಎಂದು ಹೇಳಿದ್ದರು.

     

    ಬಿಕ್ಕಟ್ಟು ಸೃಷ್ಟಿಯಾಗಿದ್ದು ಯಾಕೆ?
    ವಿಶ್ವದಲ್ಲಿ ಉಪಗ್ರಹ ಆಧಾರಿತ ಸಂಪನ್ಮೂಲಗಳನ್ನು ಇಂಟರ್‌ನ್ಯಾಷನಲ್‌ ಟೆಲಿಕಾಂ ಯೂನಿಯನ್‌(ITU) ನೋಡಿಕೊಳ್ಳುತ್ತದೆ. ಭಾರತದಲ್ಲಿ ಉಪಗ್ರಹಗಳ (Satellite) ಬಳಕೆ ಮತ್ತು ಬಳಕೆದಾರರ ಲಿಂಕ್‌ಗಳನ್ನು ಸ್ಪೆಕ್ಟ್ರಂ ಹರಾಜು ಮೂಲಕವೇ ಹಂಚಿಕೆ ಮಾಡುತ್ತಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಜಿಯೋ ಹರಾಜು ಪ್ರಕ್ರಿಯೆ ಮೂಲಕವೇ ಪರವಾನಗಿ ಹಂಚಿಕೆಗೆ ಪಟ್ಟು ಹಿಡಿದಿರುವುದರಿಂದ ಬಿಕ್ಕಟ್ಟು ಸೃಷ್ಟಿಯಾಗಿದೆ.

    2ಜಿ ಹಗರಣ ಆರೋಪಗಳು ಕೇಳಿ ಬಂದ ನಂತ ಭಾರತದಲ್ಲಿ 2010ರ ನಂತರ ದೂರಸಂಪರ್ಕ ಕ್ಷೇತ್ರದಲ್ಲಿನ ಸೇವಾ ಅನುಮತಿಯನ್ನು ಹರಾಜು ಪ್ರಕ್ರಿಯೆ ಮೂಲಕವೇ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಹಂಚಿಕೆ ಮಾಡುತ್ತಿದೆ. ಜಿಯೋ ಈಗ ಹರಾಜು ಮೂಲಕವೇ ಹಂಚಿಕೆ ಹಂಚಿಕೆ ಮಾಡಬೇಕೆಂದು ಬೇಡಿಕೆ ಇರಿಸಿದ್ದರಿಂದ ಈ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದನ್ನೂ ಓದಿ: ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾಗೆ 7,100 ಕೋಟಿ ದಂಡ ವಿಧಿಸಿದ ಯುರೋಪ್‌

    ಜಿಯೋದ ಆತಂಕ ಏನು?
    ಈಗಾಗಲೇ ಜಿಯೋ ಸ್ಪೆಕ್ಟ್ರಂ ಖರೀದಿಗಾಗಿ ಭಾರೀ ಪ್ರಮಾಣದ ಬಂಡವಾಳವನ್ನು ಹೂಡಿದೆ. ಒಂದು ವೇಳೆ ಸ್ಯಾಟ್‌ಲೈಟ್‌ ಆಧಾರಿತ ಕಂಪನಿಗಳು ಭಾರತವನ್ನು ಪ್ರವೇಶಿಸಿದರೆ ದೇಶೀಯ ಟೆಲಿಕಾಂ ಕಂಪನಿಗಳಿಗೆ ಸಮಸ್ಯೆಯಾಗಬಹುದು ಎಂಬ ಆತಂಕವನ್ನು ಜಿಯೋ ಹೊರ ಹಾಕಿದೆ.

    ಮಸ್ಕ್‌ ವಾದ ಏನು?
    ವಿಶ್ವದಲ್ಲಿ ಸರ್ಕಾರಗಳು ಆಡಳಿತಾತ್ಮಕ ಹಂಚಿಕೆಯ ಮೂಲಕ ಸರ್ಕಾರ ಉಪಗ್ರಹ ಆಧಾರಿತ ಇಂಟರ್‌ನೆಟ್‌ಗೆ ಸೇವೆಗೆ ಅನುಮತಿ ನೀಡುತ್ತದೆ. ಆದರೆ ಭಾರತದಲ್ಲಿ ಹರಾಜು ಮೂಲಕ ಹಂಚಿಕೆ ಮಾಡುವುದು ಸರಿಯಲ್ಲ.  ಹರಾಜು ಪ್ರಕ್ರಿಗೆ ಗೆದ್ದು ಇಂಟರ್‌ನೆಟ್‌ ಸೇವೆ ನೀಡಿದರೆ ಬೆಲೆ ಬಹಳ ದುಬಾರಿಯಾಗುತ್ತದೆ. ಕಡಿಮೆ ಬೆಲೆಗೆ ದೂರದ ಪ್ರದೇಶಗಳಿಗೆ ಗುಣಮಟ್ಟದ ಇಂಟರ್‌ನೆಟ್‌ ಸೇವೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

    ಮತ್ತೆ ದರ ಸಮರ ಆಗುತ್ತಾ?
    ಒಂದು ವೇಳೆ ಸ್ಟಾರ್‌ಲಿಂಕ್‌ ಸೇರಿದಂತೆ ಬೇರೆ ಉಪಗ್ರಹ ಆಧಾರಿತ ಕಂಪನಿಗಳಿಗೆ ಭಾರತದಲ್ಲಿ ಅನುಮತಿ ನೀಡಿದರೆ ಮತ್ತೊಮ್ಮೆ ಡೇಟಾ ಸಮರ ಆರಂಭವಾಗುವ ಸಾಧ್ಯತೆಯಿದೆ. ಮಸ್ಕ್‌ ಒಡೆತನದ ಸ್ಟಾರ್‌ಲಿಂಕ್‌ ಜನರನ್ನು ಸೆಳೆಯಲು ಒಂದೊಂದು ದೇಶದಲ್ಲಿ ಒಂದೊಂದು ಡೇಟಾ ಪ್ಲ್ಯಾನ್‌ ರಿಲೀಸ್‌ ಮಾಡಿದೆ. ಅಮೆರಿಕದಲ್ಲಿ ಪ್ರತಿ ತಿಂಗಳಿಗೆ 120 ಡಾಲರ್‌ (ಅಂದಾಜು 10,000 ರೂ) ವಿಧಿಸಿದ್ದರೆ ಕೀನ್ಯಾದಲ್ಲಿ ಪ್ರತಿ ತಿಂಗಳಿಗೆ 10 ಡಾಲರ್‌ (ಅಂದಾಜು 844 ರೂ.) ದರವನ್ನು ವಿಧಿಸಿದೆ. ಸ್ಟಾರ್‌ಲಿಂಕ್‌ ಒಟ್ಟು 6,400 ಉಪಗ್ರಹವನ್ನು ಹಾರಿಸಿದ್ದು ವಿಶ್ವದಲ್ಲಿ 40 ಲಕ್ಷ ಗ್ರಾಹಕರಿದ್ದಾರೆ.

     

  • ಭೂಕಾಂತೀಯ ಬಿರುಗಾಳಿಗೆ ಸ್ಟಾರ್‌ಲಿಂಕ್ನ 40 ಉಪಗ್ರಹಗಳು ನಾಶ

    ಭೂಕಾಂತೀಯ ಬಿರುಗಾಳಿಗೆ ಸ್ಟಾರ್‌ಲಿಂಕ್ನ 40 ಉಪಗ್ರಹಗಳು ನಾಶ

    ವಾಷಿಂಗ್ಟನ್: ಸ್ಟಾರ್‌ಲಿಂಕ್ ಕಂಪನಿ ಅಗ್ಗದ ಇಂಟರ್‍ನೆಟ್ ಒದಗಿಸುವ ನಿಟ್ಟಿನಲ್ಲಿ ಉಡಾಯಿಸಿದ್ದ 40 ಉಪಗ್ರಹಗಳು ಭೂಕಾಂತೀಯ ಬಿರುಗಾಳಿಗೆ ಸಿಲುಕಿ ನಾಶವಾಗಿವೆ ಎಂದು ಕಂಪನಿ ತಿಳಿಸಿದೆ.

    ವಿಶ್ವದ ಶ್ರೀಮಂತ ಎಲೋನ್ ಮಸ್ಕ್‍ನ ಸ್ಪೇಸ್‍ಎಕ್ಸ್ ಸ್ಟಾರ್‍ಲಿಂಕ್‍ನ 40 ಉಪಗ್ರಹಗಳು ಭೂಕಾಂತೀಯ ಬಿರುಗಾಳಿಗೆ ಸಿಲುಕಿ ನಾಶವಾಗಿವೆ. ಇವುಗಳನ್ನು ಕಳೆದ ವಾರ ಉಡಾವಣೆ ಮಾಡಲಾಗಿತ್ತು ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಶುಭ ಸುದ್ದಿ – ಅಂತಿಮ ಹಂತದಲ್ಲಿದೆ 5ಜಿ ನೆಟ್ವರ್ಕ್

    ಬಿರುಗಾಳಿಯ ತೀವ್ರತೆ ಹೆಚ್ಚಿದ್ದ ಕಾರಣ ವಾತಾವರಣದ ಸೆಳೆತವನ್ನು ತಡೆಯಲಾರದೇ ಉಪಗ್ರಹಗಳು ಹಾಳಾಗಿವೆ. ಸ್ಟಾರ್‍ಲಿಂಕ್ ತಂಡ ಉಪಗ್ರಹಗಳನ್ನು ರಕ್ಷಿಸಲು ಸುರಕ್ಷಿತ ಮೋಡ್‍ಗೆ ಚಾಲನೆ ನೀಡಿತ್ತು ಎಂದಿದೆ.

    ಈಗಾಗಲೇ ಸ್ಪೇಸ್‍ಎಕ್ಸ್ 2,000 ಉಪಗ್ರಹಗಳನ್ನು ಉಡಾಯಿಸುವಲ್ಲಿ ಯಶಸ್ವಿಯಾಗಿದೆ. ಪ್ರಪಂಚದ ವಿವಿಧ ಭಾಗಗಳಿಗೆ ಅಗ್ಗದ ಇಂಟರ್‍ನೆಟ್ ಸೇವೆ ಒದಗಿಸಲು 12,000 ಉಪಗ್ರಹಗಳನ್ನು ಹಾರಿಸುವ ಯೋಜನೆ ಮಾಡಿದೆ. ಇದನ್ನೂ ಓದಿ: ಖಾಸಗಿ ಸಂಸ್ಥೆಯಲ್ಲಿ ಭಾರೀ ಅಗ್ನಿ ಅವಘಡ

    ಉಪಗ್ರಹಗಳು ಹಾಳಾದರೂ ಅದರ ಭಾಗಗಳು ಭೂಮಿಗೆ ಅಪ್ಪಳಿಸುವ ಭೀತಿ ಇಲ್ಲ. ಏಕೆಂದರೆ ಅವು ಮತ್ತೆ ಭೂಮಿಯ ವಾತಾವರಣವನ್ನು ಪ್ರವೇಶಿಸಿದ್ದಲ್ಲಿ ಅವುಗಳ ರೂಪ ಅವನತಿ ಹೊಂದುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

  • ಸ್ಟಾರ್‌ಲಿಂಕ್ ಇಂಡಿಯಾದ ಮುಖ್ಯಸ್ಥ ಸಂಜಯ್ ಭಾರ್ಗವ ರಾಜೀನಾಮೆ

    ಸ್ಟಾರ್‌ಲಿಂಕ್ ಇಂಡಿಯಾದ ಮುಖ್ಯಸ್ಥ ಸಂಜಯ್ ಭಾರ್ಗವ ರಾಜೀನಾಮೆ

    ನವದೆಹಲಿ: ವಿಶ್ವದ ಶ್ರೀಮಂತ ಎಲೋನ್ ಮಸ್ಕ್‌ನ ಕಂಪನಿ ಸ್ಟಾರ್‌ಲಿಂಕ್ ಇಂಡಿಯಾದ ಮುಖ್ಯಸ್ಥ ಸಂಜಯ್ ಭಾರ್ಗವ ರಾಜಿನಾಮೆ ನೀಡಿರುವುದಾಗಿ ಮಂಗಳವಾರ ಘೋಷಿಸಿದ್ದಾರೆ.

    2021ರ ಡಿಸೆಂಬರ್ 31ಕ್ಕೆ ತಾವು ಕೊನೆಯದಾಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿದ್ದಾಗಿ ಹೇಳಿ, ತಮ್ಮ ವೈಯಕ್ತಿಕ ಕಾರಣಗಳಿಂದ ಹುದ್ದೆಯನ್ನು ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ.

    ಭಾರತದಲ್ಲಿ ಉಪಗ್ರಹ-ಬ್ರಾಡ್‌ಬ್ಯಾಂಡ್ ಸೇವೆಯ ಪ್ರಿ-ಬುಕ್ಕಿಂಗ್ ಮಾಡಿದವರಿಗೆ ಕಂಪನಿ ಮರುಪಾವತಿ (ರೀಫಂಡ್) ಮಾಡಲಾಗುವುದು ಎಂದು ಕೆಲವು ದಿನಗಳ ಹಿಂದೆ ಘೋಷಿಸಿತ್ತು. ಇದಾದ ಬಳಿಕ ಸಂಜಯ್ ಭಾರ್ಗವ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಚೆನ್ನೈ ವಿಮಾನ ನಿಲ್ದಾಣದ ಕಾರ್ಯಕ್ಷಮತೆಗೆ ವಿಶ್ವದಲ್ಲೇ 8ನೇ ಸ್ಥಾನ

    ಸ್ಟಾರ್‌ಲಿಂಕ್ ಇಂಡಿಯಾದ ನಿರ್ದೇಶಕ ಹಾಗೂ ಅಧ್ಯಕ್ಷ ಸ್ಥಾನದಿಂದ ನಾನು ವೈಯಕ್ತಿಕ ಕಾರಣಗಳಿಂದ ಕೆಳಗಿಳಿದಿದ್ದೇನೆ. ನನ್ನ ಕೊನೆಯ ಕೆಲಸದ ದಿನ 2021ರ ಡಿಸೆಂಬರ್ 31. ಮಾಧ್ಯಮಗಳಿಗೆ ಹಾಗೂ ಜನರಿಗೆ ನಾನು ಯಾವುದೇ ಕಾಮೆಂಟ್ ನೀಡಲು ಬಯಸುವುದಿಲ್ಲ. ಆದ್ದರಿಂದ ದಯವಿಟ್ಟು ನನ್ನ ಗೌಪ್ಯತೆಯನ್ನು ಗೌರವಿಸಿ ಎಂದು ಭಾರ್ಗವ ತಡವಾಗಿ ತಮ್ಮ ಲಿಂಕ್ಡ್ಇನ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಚಾಕೋಲೇಟ್ ರಾಕೆಟ್- ವೀಡಿಯೋ ವೈರಲ್

    ಭಾರ್ಗವ 1 ಅಕ್ಟೋಬರ್ 2021ರಂದು ಸ್ಟಾರ್‌ಲಿಂಕ್ ಇಂಡಿಯಾದ ಕಂಟ್ರಿ ಡೈರೆಕ್ಟರ್ ಆಗಿ ಸ್ಪೇಸ್‌ಎಕ್ಸ್‌ಗೆ ಸೇರಿದ್ದರು. 2000 ಇಸವಿಯಲ್ಲಿ ಎಲೋನ್ ಮಸ್ಕ್ ಅವರೊಂದಿಗೆ ಕೆಲಸ ಮಾಡಿದ್ದಾಗಿ ಅವರು ಹಿಂದೆ ತಿಳಿಸಿದ್ದರು.

  • ಮಸ್ಕ್‌ ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ಬಳಸಿದರೆ ರಷ್ಯಾದಲ್ಲಿ ದಂಡ

    ಮಸ್ಕ್‌ ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ಬಳಸಿದರೆ ರಷ್ಯಾದಲ್ಲಿ ದಂಡ

    ಮಾಸ್ಕೋ: ಎಲೆಕ್ಟ್ರಿಕ್‌ ಕಾರು ಕಂಪನಿ ಟೆಸ್ಲಾದ ಸ್ಥಾಪಕ ಎಲೋನ್‌ ಮಸ್ಕ್‌ ಅವರ ಸ್ಪೇಸ್‌ ಎಕ್ಸ್‌ ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ಬಳಸುವ ಜನರ ಮೇಲೆ ರಷ್ಯಾ ಸರ್ಕಾರ ದಂಡ ವಿಧಿಸುವ ಸಾಧ್ಯತೆಯಿದೆ.

    ಸ್ಪೇಸ್‌ ಎಕ್ಸ್‌ ಸ್ಟಾರ್‌ಲಿಂಕ್‌ ಸರ್ವಿಸ್‌, ಒನ್‌ವೆಬ್‌ ಅಲ್ಲದೇ ರಷ್ಯಾ ಉಪಗ್ರಹ ಹೊರತಾದ ವಿದೇಶಿ ಉಪಗ್ರಹ ಬಳಸಿ ಇಂಟರ್‌ನೆಟ್‌ ಬಳಕೆಗೆ ನಿರ್ಬಂಧ ಹೇರುವ ಸಂಬಂಧ ಕಾನೂನು ತರಲು ರಷ್ಯಾ ಸರ್ಕಾರ ಮುಂದಾಗಿದೆ. ಈ ಉಪಗ್ರಹ ಇಂಟರ್‌ನೆಟ್‌ಗಳಿಂದ ದೇಶಕ್ಕೆ ಭವಿಷ್ಯದಲ್ಲಿ ಬೆದರಿಕೆಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ನಿಷೇಧ ಹೇರಲು ಮುಂದಾಗಿದೆ.

    ರಷ್ಯಾ ಮಾಧ್ಯಮಗಳಲ್ಲಿ ಪ್ರಕಟವಾದಂತೆ ಸಾಮಾನ್ಯ ಜನರು ವಿದೇಶಿ ಉಪಗ್ರಹಗಳ ಇಂಟರ್‌ನೆಟ್‌ ಬಳಕೆ ಮಾಡಿದರೆ 135 ಡಾಲರ್‌ನಿಂದ 405 ಡಾಲರ್‌(ಅಂದಾಜು 9 ಸಾವಿರದಿಂದ 29 ಸಾವಿರ ರೂ.), ಕಂಪನಿಗಳು ಬಳಕೆ ಮಾಡಿದರೆ 6,750 ಡಾಲರ್‌ ನಿಂದ 13,500( ಅಂದಾಜು 4.90 ಲಕ್ಷದಿಂದ 9.84 ಲಕ್ಷ ರೂ.) ದಂಡ ವಿಧಸುವ ಸಾಧ್ಯತೆಯಿದೆ.

    ರಷ್ಯಾದ ನಿರ್ಧಾರಕ್ಕೆ ಎಲೋನ್‌ ಮಸ್ಕ್‌ ಪ್ರತಿಕ್ರಿಯಿಸಿ, ನಾವು ಜನರನ್ನು ಮಂಗಳ ಗ್ರಹಕ್ಕೆ ಸೇರಿಸಲು ಪ್ರಯತ್ನಿಸುತ್ತಿದ್ದೇವೆ. ಸಹಾಯ ಮಾಡುವವರನ್ನು ಪ್ರಶಂಸಿಸುತ್ತೇವೆ ಎಂದು ಹೇಳಿದ್ದಾರೆ.

    ಸ್ಪೇಸ್‌ ಎಕ್ಸ್‌ ಕಂಪನಿ ತನ್ನ ಫಾಲ್ಕನ್‌ 9 ರಾಕೆಟ್‌ನಿಂದ 944 ಉಪಗ್ರಹವನ್ನು ಉಡಾವಣೆ ಮಾಡಿದೆ. ಒಟ್ಟು 42 ಸಾವಿರ ಸ್ಟಾರ್‌ಲಿಂಕ್‌ ಉಪಗ್ರಹವನ್ನು ಉಡಾವಣೆ ಮಾಡಿ ವಿಶ್ವಕ್ಕೆ ಸೂಪರ್‌ ಫಾಸ್ಟ್‌ ಇಂಟರ್‌ನೆಟ್‌ ನೀಡುವ ಮಹತ್ವದ ಯೋಜನೆಗೆ ಮಸ್ಕ್‌ ಕೈ ಹಾಕಿದ್ದಾರೆ.