Tag: Star Kannadiga

  • ಕನ್ನಡ ರಾಜ್ಯೋತ್ಸವದಂದೇ ಅಬ್ಬರಿಸಲಿದ್ದಾನೆ ಸ್ಟಾರ್ ಕನ್ನಡಿಗ!

    ಕನ್ನಡ ರಾಜ್ಯೋತ್ಸವದಂದೇ ಅಬ್ಬರಿಸಲಿದ್ದಾನೆ ಸ್ಟಾರ್ ಕನ್ನಡಿಗ!

    ರ್ನಾಟಕದಲ್ಲಿ ಕನ್ನಡಿಗರೇ ನಿಜವಾದ ಸ್ಟಾರ್​​​ಗಳೆಂಬುದು ವಾಸ್ತವ. ಕನ್ನಡಕ್ಕೆ ಕುತ್ತುಂಟಾದರೆ ಕನ್ನಡಿಗರೆಲ್ಲರೂ ಒಗ್ಗಟಾಗಿ ನಿಂತು ಹೋರಾಡುತ್ತಾರೆಂಬುದೂ ನಿರ್ವಿವಾದ. ಅಂಥಾ ಅಪ್ಪಟ ಕನ್ನಡತನದೊಂದಿಗೆ, ಸಹಜ ಸುಂದರವಾದ ದೇಸೀ ಕಥೆಯೊಂದಿಗೆ ಮೂಡಿ ಬಂದಿರುವ ಚಿತ್ರ ಸ್ಟಾರ್ ಕನ್ನಡಿಗ. ವಿ ಆರ್ ಮಂಜುನಾಥ್ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿರುವ ಈ ಚಿತ್ರವನ್ನು ಆಟೋ ಡ್ರೈವರ್‌ಗಳು, ಶ್ರಮ ಜೀವಿಗಳೆಲ್ಲ ಕಾಸು ಹೊಂದಿಸಿ ನಿರ್ಮಾಣ ಮಾಡಿದ್ದಾರೆ. ಇಂಥಾ ಕಲಾ ಪ್ರೇಮವಿದ್ದಲ್ಲಿ ಒಂದೊಳ್ಳೆ ಚಿತ್ರ ರೂಪುಗೊಂಡಿರುತ್ತದೆ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ. ಅದಕ್ಕೆ ತಕ್ಕುದಾಗಿಯೇ ಮೈ ಕೈ ತುಂಬಿಕೊಂಡಿರುವ ಸ್ಟಾರ್ ಕನ್ನಡಿಗ ಇದೇ ನವೆಂಬರ್ ಒಂದರ ಕನ್ನಡ ರಾಜ್ಯೋತ್ಸವದಂದೇ ಅಬ್ಬರಿಸಲು ತಯಾರಾಗಿದ್ದಾನೆ.

    ಇದು ವಿ ಆರ್ ಮಂಜುನಾಥ್ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿರುವ ಚಿತ್ರ. ಶಾಲಿನಿ ಭಟ್ ಇಲ್ಲಿ ನಾಯಕಿಯಾಗಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಆಟೋ ಡ್ರೈವರ್‌ಗಳೇ ಬೆವರಿನ ಹಣದಿಂದ ನಿರ್ಮಾಣ ಮಾಡಿರುವ ಈ ಚಿತ್ರ ಹೆಸರಿಗೆ ತಕ್ಕುದಾಗಿಯೇ ಕನ್ನಡಾಭಿಮಾನದ ಕಥೆ ಹೊಂದಿರೋ ಚಿತ್ರ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಇದು ಕನ್ನಡ ಪರವಾದ ಹೋರಾಟವನ್ನು ಮಾತ್ರವೇ ಆಧಾರವಾಗಿಸಿಕೊಂಡಿರುವ ಚಿತ್ರವಲ್ಲ. ಇಲ್ಲಿ ಬದುಕನ್ನೇ ಹೋರಾಟವೆಂದುಕೊಂಡ ಜೀವಗಳ ಮನ ಮಿಡಿಯುವ ಕಥೆಯಿದೆ. ಅದು ಪ್ರತಿಯೊಬ್ಬರನ್ನೂ ಮುಟ್ಟುವಂತೆ ಮೂಡಿ ಬಂದಿದೆ.

    ಇಲ್ಲಿ ವೈಭವೀಕರಣಕ್ಕೆ ಆಸ್ಪದ ಕೊಟ್ಟಿಲ್ಲ. ಅದನ್ನೆಲ್ಲ ಇಲ್ಲಿರೋ ಸಹಜ ಸುಂದರ ಕಥೆಯೇ ಮಾಡುತ್ತದೆ. ಚಿತ್ರತಂಡವೇ ಹೇಳಿಕೊಳ್ಳುವ ಪ್ರಕಾರ ಈ ಕಥೆಯನ್ನು ಅತ್ಯಂತ ಸಹಜವಾಗಿ ಅಣಿಗೊಳಿಸಲಾಗಿದೆ. ನೋಡುಗರಿಗೆ ಕಣ್ಣಮುಂದೊಂದು ಕಥೆ ನಡೆಯುತ್ತದೆ ಅನ್ನಿಸೋದಕ್ಕಿಂತ ತಮ್ಮ ನಡುವಿನದ್ದೇ ಕಥೆಗಳು ತೆರೆ ಮೇಲೆ ಸುರುಳಿ ಬಿಚ್ಚಿಕೊಳ್ಳುತ್ತಿದೆ ಅನ್ನುವಷ್ಟು ಸಹಜವಾಗಿ ಮೂಡಿ ಬಂದಿದೆಯಂತೆ. ಇದೆಲ್ಲದರಾಚೆಗೂ ಹೆಸರಿಗೆ ತಕ್ಕುದಾದ ಗುಣ ಲಕ್ಷಣಗಳು ಈ ಸಿನಿಮಾದಲ್ಲಿವೆ. ಕನ್ನ ಪ್ರೀತಿಯ ಸ್ಟಾರ್ ಕನ್ನಡಿಗ ಚಿತ್ರ ಕನ್ನಡ ರಾಜ್ಯೋತ್ಸವದಂದೇ ಬಿಡುಗಡೆಗೊಳ್ಳುತ್ತಿರೋದು ನಿಜಕ್ಕೂ ಕನ್ನಡದ ಪ್ರೇಕ್ಷಕರ ಪಾಲಿಗೆ ಹಬ್ಬದಂಥಾ ಸಂಗತಿ.

  • ಘರ್ಜಿಸಿದ ‘ಸ್ಟಾರ್ ಕನ್ನಡಿಗ’ ನ ಹಿಂದೆ ಸವಾಲುಗಳ ಸಂತೆಯಿದೆ!

    ಘರ್ಜಿಸಿದ ‘ಸ್ಟಾರ್ ಕನ್ನಡಿಗ’ ನ ಹಿಂದೆ ಸವಾಲುಗಳ ಸಂತೆಯಿದೆ!

    ಕಳೆದ ಕೆಲ ತಿಂಗಳುಗಳಿಂದ ‘ಸ್ಟಾರ್ ಕನ್ನಡಿಗ’ ಎಂಬೊಂದು ಚಿತ್ರ ಜನರ ನಡುವಿನ ಚರ್ಚೆಗಳ ಮೂಲಕ, ಈ ಸಿನಿಮಾದಲ್ಲೇನೋ ಇದೆ ಎಂಬಂಥಾ ನಂಬಿಕೆಯ ಮೂಲಕ ಮಿರ ಮಿರನೆ ಮಿಂಚುತ್ತಿದೆ. ವಿ ಆರ್ ಮಂಜುನಾಥ್ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿರೋ ಈ ಚಿತ್ರವನ್ನು ಸಿನಮಾ ಪ್ರೇಮ ಹೊಂದಿರುವ ಆಟೋ ಚಾಲಕರೇ ಸೇರಿಕೊಂಡು ನಿರ್ದೇಶನ ಮಾಡಿರೋದು ವಿಶೇಷ. ಸಿನಿಮಾವನ್ನೇ ಉಸಿರಾಗಿಸಿಕೊಂಡು ಈ ಹಾದಿಯ ತುಂಬಾ ಹತ್ತಾರು ಸವಾಲುಗಳನ್ನು ಎದುರಿಸುತ್ತಲೇ ಸಾಗಿ ಬಂದಿರುವವರು ಮಂಜುನಾಥ್. ಅದೆಂಥಾದ್ದೇ ಅಡೆತಡೆಗಳು ಬಂದರೂ ಆತ್ಮಸ್ಥೈರ್ಯ ಒಂದಿದ್ದರೆ ಗುರಿ ಸಾಧಿಸಬಹುದೆಂಬುದಕ್ಕೆ ಉದಾಹಣೆಯೆಂಬಂತೆ ಸ್ಟಾರ್ ಕನ್ನಡಿಗ ಚಿತ್ರ ಇದೇ ನವೆಂಬರ್ ಒಂದರಂದು ಬಿಡುಗಡೆಗೆ ತಯಾರಾಗಿದೆ.

    ಬೆಂಗಳೂರಿನ ಜಯನಗರದ ಒಡಲಲ್ಲಿರುವ ಸ್ಲಂ ಒಂದರಲ್ಲಿ ಬೆಳೆದ ಮಂಜುನಾಥ್ ಎದೆಯಲ್ಲಿ ಸಿನಿಮಾ ಕನಸು ಮೊಳಕೆಯೊಡೆದದ್ದು ಮತ್ತು ಅವರದನ್ನು ಎಂಥಾ ಸಂಕಷ್ಟಗಳೆದುರಿಗೂ ಮಂಡಿಯೂರದಂತೆ ಸಾಗಿ ಬಂದದ್ದೊಂದು ಕಥೆಯಾದರೆ, ಗುರಿಯ ನೇರಕ್ಕೆ ನಿಂತು ಈ ಸಿನಿಮಾವನ್ನು ರೂಪಿಸಿದ್ದ ಮತ್ತೊಂದು ಸಾಹಸ. ಮಂಜುನಾಥ್‍ಗಿರೋ ಸಿನಿಮಾ ಕನಸು, ಶ್ರದ್ಧೆ ಮತ್ತು ಪ್ರತಿಭೆಗಳನ್ನು ಕಂಡಿದ್ದ ಗೆಳೆಯರೇ ಒಂದಷ್ಟು ಮಂದಿ ಕಾಸು ಹೊಂದಿಸಿ ಈ ಸಿನಿಮಾ ನಿರ್ಮಾಣ ಮಾಡಲು ಮುಂದೆ ಬಂದಿದ್ದರು. ಅಷ್ಟಕ್ಕೂ ಅವರ್ಯಾರೂ ಕೈ ತುಂಬಾ ಕಾಸಿರುವ ಉದ್ಯಮಿಗಳಲ್ಲ. ಅವರೆಲ್ಲರೂ ಹೊಟ್ಟೆಪಾಡಿಗಾಗಿ ಆಟೋ ಡ್ರೈವರ್ ಕೆಲಸ ಮಾಡಿಕೊಂಡಿದ್ದವರು.

    ಅಂಥಾ ಎಲ್ಲರೂ ಅಪ್ಪಟ ಸಿನಿಮಾ ಪ್ರೇಮದೊಂದಿಗೇ ಈ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದರು. ಆದರೆ ಅವರು ಹೊಂದಿಸಿದ ಕಾಸು ಕಣ್ಣೆದುರೇ ಕರಗಿ ಹೋಗುತ್ತಿತ್ತು. ಕಡೆ ಕಡೆಗೆ ಈ ಸಿನಿಮಾ ಒಂದು ಸಲ ಹೇಗಾದರೂ ಪೂರ್ತಿಗೊಂಡರೆ ಸಾಕೆಂಬಂಥೆ ಹಪಾಹಪಿಸೋ ಪರಿಸ್ಥಿತಿಯೂ ಬಂದಿತ್ತು. ಕಾಸೆಲ್ಲ ಖಾಲಿಯಾದಾಗ ಚಿತ್ರೀಕರಣ ನಿಲ್ಲಿಸಿ, ನಂತರ ಹೇಗೋ ಹರಸಾಹಸ ಮಾಡಿ ಕಾಸು ಹೊಂದಿಸಿ ಚಿತ್ರೀಕರಣ ಆರಂಭಿಸಿ ಅಂತೂ ಈ ಸಿನಿಮಾ ಮುಗಿಸಿಕೊಂಡಿದ್ದೇ ದೊಡ್ಡ ಸಾಹಸ. ಇಲ್ಲಿ ವ್ಯಾವಹಾರಿಕತೆಗ ಗಂಧ ಗಾಳಿಯೂ ಇಲ್ಲದ ಕಲಾಪ್ರೇಮ ಮಾತ್ರವೇ ಇದ್ದುದರಿಂದಲೇ ಸ್ಟಾರ್ ಕನ್ನಡಿಗ ಭರವಸೆಯ ಚಿತ್ರವಾಗಿ ಬಿಡುಗಡೆಗೆ ಸಿದ್ಧಗೊಂಡಿದೆ.

    ಇದು ಕನ್ನಡ ಪ್ರೇಮಿಗಳು ನಿರ್ಮಾಣ ಮಾಡಿರುವ ಅಪ್ಪಟ ಕನ್ನಡ ಪ್ರೇಮ ಹೊಂದಿರೋ ಕಥೆಯ ಚಿತ್ರ. ಇಲ್ಲಿ ಯಾವುದೇ ಥರದ ವಿನಾ ಕಾರಣ ಬಿಲ್ಡಪ್ಪುಗಳ ಹಂಗಿಲ್ಲದೆ ಸಾದಾ ಸೀದಾ ಸ್ವರೂಪದಲ್ಲಿ ಕಥೆ ಹೇಳಲಾಗಿದೆಯಂತೆ. ನಮ್ಮದೇ ಕಥೆಯೆನ್ನಿಸಿ ಅದರಲ್ಲಿಯೇ ಕಳೆದು ಹೋಗಿಸುವಷ್ಟು ಪರಿಣಾಮಕಾರಿಯಾಗಿ ಇಡೀ ಚಿತ್ರ ಮೂಡಿ ಬಂದಿದೆಯಂತೆ. ಇಲ್ಲಿರೋ ಪಾತ್ರಗಳು, ಸನ್ನಿವೇಶಗಳೆಲ್ಲವೂ ನೈಜತೆಗೆ ಹತ್ತಿರಾಗಿರುವಂಥಾದ್ದು. ಇಲ್ಲಿ ನವಿರಾದ ಪ್ರೀತಿಯಿದೆ. ಅದನ್ನುಳಿಸಿಕೊಳ್ಳೋ ಪಾಡಿಪಾಟಲುಗಳೂ ಇವೆ. ಇದೆಲ್ಲದರೊಂದಿಗೆ ಕುಟುಂಬ ಸಮೇತರಾಗಿ ಕೂತು ನೋಡುವಂತೆ ಮೂಡಿ ಬಂದಿರೋ ಈ ಚಿತ್ರ ಇದೇ ನವೆಂಬರ್ ಒಂದರಂದು ತೆರೆಗಾಣಲಿದೆ.

  • ಸ್ವಾತಂತ್ರ್ಯ ದಿನದಿಂದ ಶುರುವಾಗಲಿದೆ ಸ್ಟಾರ್ ಕನ್ನಡಿಗನ ಹಾಡುಹಬ್ಬ!

    ಸ್ವಾತಂತ್ರ್ಯ ದಿನದಿಂದ ಶುರುವಾಗಲಿದೆ ಸ್ಟಾರ್ ಕನ್ನಡಿಗನ ಹಾಡುಹಬ್ಬ!

    ಬೆಂಗಳೂರು: ಸ್ಟಾರ್ ಕನ್ನಡಿಗ ಎಂಬ ಸಿನಿಮಾ ಪೋಸ್ಟರ್‍ಗಳೂ ಸೇರಿದಂತೆ ಒಂದಷ್ಟು ಕ್ರಿಯೇಟಿವ್ ಕೆಲಸ ಕಾರ್ಯಗಳಿಂದ ಆಗಾಗ ಸದ್ದು ಮಾಡುತ್ತಾ ಸಾಗಿ ಬಂದಿತ್ತು. ಇದೀಗ ಸ್ಟಾರ್ ಕನ್ನಡಿಗ ಸಂಪೂರ್ಣ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ರೆಡಿಯಾಗಿ ನಿಂತಿದೆ. ಇದೇ ಹೊತ್ತಿನಲ್ಲಿ ಸ್ವಾತಂತ್ರ್ಯೋತ್ಸವದ ದಿನದಿಂದ ಹಂತ ಹಂತವಾಗಿ ಒಂದೊಂದೇ ಹಾಡುಗಳನ್ನು ಪ್ರೇಕ್ಷಕರಿಗೆ ಕೇಳಿಸಲು ಚಿತ್ರತಂಡ ನಿರ್ಧರಿಸಿದೆ.

    ಇದು ವಿ.ಆರ್ ಮಂಜುನಾಥ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರ. ಈಗಾಗಲೇ ಹಲವಾರು ಚಿತ್ರಗಳಲ್ಲಿ ಕಾರ್ಯ ನಿರ್ವಹಿಸಿರೋ ಅನುಭವ ಹೊಂದಿರುವ ಮಂಜುನಾಥ್ ಇಲ್ಲಿ ಹಲವಾರು ಜವಾಬ್ದಾರಿಗಳನ್ನು ಹೊತ್ತುಕೊಂಡು ಈ ಚಿತ್ರವನ್ನು ರೂಪಿಸಿದ್ದಾರೆ. ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡು ನಾಯಕನಾಗಿಯೂ ನಟಿಸೋ ಮೂಲಕ ಅವರು ಅಚ್ಚರಿಗೆ ಕಾರಣರಾಗಿದ್ದಾರೆ. ಕಥೆಗೆ ಪೂರಕವಾಗಿ ಹೊಸತನದೊಂದಿಗೆ ರೂಪುಗೊಂಡಿರೋ ಹಾಡುಗಳನ್ನು ಒಂದೊಂದಾಗಿ ಪ್ರೇಕ್ಷಕರ ಮುಂದಿಡಲು ಮಂಜುನಾಥ್ ಮುಂದಾಗಿದ್ದಾರೆ.

    ಸ್ಟಾರ್ ಕನ್ನಡಿಗ ಎಂಬ ಹೆಸರು ಕೇಳಿದರೇನೇ ಇದು ಕನ್ನಡಾಭಿಮಾನದ ತಿರುಳು ಹೊಂದಿರೋ ಕಥಾನಕ ಎಂಬ ಸೂಚನೆ ಸಿಗುತ್ತದೆ. ಆದರೆ ಅದನ್ನು ಇಲ್ಲಿ ಸಿನಿಮಾದೊಳಗೊಂದು ಸಿನಿಮಾ ತೋರಿಸಿ, ಅದರಲ್ಲೊಂದು ವಿಶೇಷವಾದ ಪ್ರೇಮಕಥಾನಕವನ್ನು ಸಾದರಪಡಿಸಿ ಆ ಮೂಲಕವೇ ಪ್ರೇಕ್ಷಕರಲ್ಲಿ ಹೊಸಾ ಬಗೆಯ ಚಿತ್ರ ನೋಡಿದ ಅನುಭೂತಿ ಹುಟ್ಟಿಸುವಂತೆ ಈ ಸಿನಿಮಾ ಮೂಡಿ ಬಂದಿದೆಯಂತೆ. ಮಂಜುನಾಥ್ ಈ ಚಿತ್ರವನ್ನು ತಮ್ಮ ಹಲವಾರು ಸಮಾನಮನಸ್ಕ ಸ್ನೇಹಿತರ ಸಾಥ್‍ನೊಂದಿಗೆ ರೂಪಿಸಿದ್ದಾರೆ. ತಿಂಗಳೊಪ್ಪತ್ತಿನಲ್ಲಿಯೇ ಬಿಡುಗಡೆಯಾಗಲಿರೋ ಈ ಚಿತ್ರವೀಗ ಹಾಡುಗಳ ಒಡ್ಡೋಲಗದೊಂದಿಗೆ ಥೇಟರಿನತ್ತ ಪಯಣ ಬೆಳೆಸಲು ರೆಡಿಯಾಗಿದೆ.