Tag: staff

  • ಧಾರವಾಡ ಜಿಲ್ಲಾ ಪಂಚಾಯಿತಿ ಮಹಿಳಾ ಸಿಬ್ಬಂದಿಗೆ ಕೊರೊನಾ

    ಧಾರವಾಡ ಜಿಲ್ಲಾ ಪಂಚಾಯಿತಿ ಮಹಿಳಾ ಸಿಬ್ಬಂದಿಗೆ ಕೊರೊನಾ

    ಧಾರವಾಡ: ಧಾರವಾಡದ ಜಿಲ್ಲಾ ಪಂಚಾಯಿತಿ ಮಹಿಳಾ ಸಿಬ್ಬಂದಿಯೊಬ್ಬರಿಗೆ ಕೊರೊನಾ ದೃಢಪಟ್ಟಿದ್ದು, ಉಳಿದ ಸಿಬ್ಬಂದಿಗೂ ಆತಂಕ ಎದುರಾಗಿದೆ.

    ಮಹಿಳಾ ಸಿಬ್ಬಂದಿಗೆ ಸೋಂಕು ಪತ್ತೆಯಾದ ಹಿನ್ನೆಲೆ ಇಂದು ಇಡೀ ಜಿಲ್ಲಾ ಪಂಚಾಯಿತಿ ಆವರಣ ಹಾಗೂ ಕೊಠಡಿಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ. ಹೊರಗುತ್ತಿದೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಯೊಬ್ಬರಿಗೆ ಕೊರೊನಾ ತಗುಲಿದೆ. ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲೇ ಜಿಲ್ಲಾ ಪಂಚಾಯಿತಿ ಕಟ್ಟಡ ಇದ್ದು, ಅಲ್ಲಿನ ಸಿಬ್ಬಂದಿ ಹಾಗೂ ಸಾರ್ವಜನಿಕರೂ ಭಯಪಡುವಂತಾಗಿದೆ.

    ಜಿಲ್ಲಾ ಪಂಚಾಯಿತಿ ಕಟ್ಟಡ ಹಾಗೂ ಆವರಣವನ್ನು ಸ್ಯಾನಿಟೈಸ್ ಮಾಡುವ ವರೆಗೆ ಸಿಬ್ಬಂದಿ ಕೆಲಸಕ್ಕೆ ಬರಬಾರದು ಎಂದು ಎಚ್ಚರಿಕೆ ನೀಡಲಾಗದೆ. ಜಿಲ್ಲೆಯಲ್ಲಿ ಮೂರು ದಿನದ ಮಗುವಿಗೂ ಕೊರೊನಾ ಸೋಂಕು ತಗುಲಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಜಿಲ್ಲೆಯಲ್ಲಿ ಈ ವರೆಗೆ 345 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 186 ಜನ ಗುಣಮುಖರಾಗಿ ಡಿಸ್ಚಾರ್ಜ್‍ಆಗಿದ್ದಾರೆ. ಇನ್ನೂ 151 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾದಿಂದಾಗಿ ಜಿಲ್ಲೆಯಲ್ಲಿ 8 ಜನ ಸಾವನ್ನಪ್ಪಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಬಳ್ಳಾರಿಯಲ್ಲಿ ಅಮಾನವೀಯವಾಗಿ ಶವ ಸಂಸ್ಕಾರ ಮಾಡಿದವರು ಅಮಾನತು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಬಳ್ಳಾರಿಯಲ್ಲಿ ಅಮಾನವೀಯವಾಗಿ ಶವ ಸಂಸ್ಕಾರ ಮಾಡಿದವರು ಅಮಾನತು

    – ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್

    ಬಳ್ಳಾರಿ: ಕೊರೊನಾ ಸೋಂಕಿನಿಂದ ಮೃತಪಟ್ಟವರ ದೇಹವನ್ನು ಅಮಾನವೀಯವಾಗಿ ಗುಂಡಿಗೆ ಎಸೆದು ಅಂತ್ಯಸಂಸ್ಕಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಮಾನವೀಯತೆಗಿಂತ ದೊಡ್ಡ ಧರ್ಮ ಯಾವುದೂ ಇಲ್ಲ- ಸಿಎಂ

    ಈ ಬಗ್ಗೆ ಸಚಿವ ಶ್ರೀರಾಮು ಟ್ವೀಟ್ ಮಾಡಿದ್ದು, ಶವ ಸಂಸ್ಕಾರ ಮಾಡಿದ್ದ 8 ಜನರನ್ನು ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಮೊದಲಿಗೆ, “ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ವೇಳೆ ಸಿಬ್ಬಂದಿ ಅಮಾನವೀಯವಾಗಿ ನಡೆದುಕೊಂಡಿರುವುದು ತೀವ್ರ ಖಂಡನಿಯ” ಎಂದು ಶವ ಸಂಸ್ಕಾರ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಪ್ರಕರಣದ ಮಾಹಿತಿ ಪಡೆದುಕೊಳ್ಳಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಅಂತ್ಯಸಂಸ್ಕಾರ ನಡೆಸಿದ ಎಲ್ಲ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಅಲ್ಲದೇ ಜಿಲ್ಲಾಡಳಿತ ಈ ಘಟನೆ ಖಂಡಿಸಿ ಕ್ಷಮೆ ಯಾಚಿಸಿದೆ. ಕೋವಿಡ್-19 ರಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಪ್ರತ್ಯೇಕ ನಿಯಮಾವಳಿಗಳಿದ್ದು, ಅವುಗಳನ್ನು ಪಾಲಿಸಲು ಇಲಾಖೆಯ ಎಲ್ಲ ಸಿಬ್ಬಂದಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಅಂತ್ಯ ಸಂಸ್ಕಾರವನ್ನು ಸೂಕ್ತ ಹಾಗೂ ಸಕಲ ಗೌರವಗಳಿಂದ ನೆರವೇರಿಸುವುದು ನಮ್ಮ ಸಂಸ್ಕೃತಿ. ಸೋಂಕಿನಿಂದ ಮೃತಪಟ್ಟವರು ಎಂಬ ಕಾರಣಕ್ಕೆ ನಿರ್ಲಕ್ಷ್ಯ ಮಾಡದೆ ಸಲ್ಲಿಸಬೇಕಾದ ಗೌರವ ಸಲ್ಲಿಸೋಣ. ಮಾನವೀಯತೆ ಮೆರೆಯೋಣ ಎಂದು ಶ್ರೀರಾಮುಲು ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ.

    ಏನಿದು ಪ್ರಕರಣ?
    ಸೋಮವಾರ ಒಂದೇ ದಿನ ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾಗೆ 9 ಜನ ಸಾವನ್ನಪ್ಪಿದ್ದರು. ಇವರ ಮೃತ ದೇಹವನ್ನು ಅಮಾನವೀಯವಾಗಿ ಬೇಕಾಬಿಟ್ಟಿಯಾಗಿ ಗುಂಡಿಗೆ ಎಸೆದು ಮಣ್ಣು ಮಾಡಲಾಗಿತ್ತು. ಈ ದೃಶ್ಯವನ್ನು ಕಂಡರೆ ಎಂಥವರಿಗೂ ಕರುಳು ಹಿಂಡುವಂತಿತ್ತು. ಒಂದೇ ಬಾರಿ ಶವ ಸಂಸ್ಕಾರ ಮಾಡಬೇಕಾದರೆ ಆರೋಗ್ಯ ಇಲಾಖೆಯ ಸಿಬ್ಬಂದಿ ಶವವನ್ನು ಮೇಲಿಂದ ಎಸೆದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವಿಡಿಯೋ ವೈರಲ್ ಆಗಿತ್ತು. ಅಲ್ಲದೆ ಆಕ್ರೋಶ ಸಹ ವ್ಯಕ್ತವಾಗಿತ್ತು.

    ಜಿಲ್ಲಾಧಿಕಾರಿ ಕ್ಷಮೆ
    ಪ್ರಕರಣದ ಕುರಿತು ತನಿಖೆ ನಡೆಸುವಂತೆ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶಿಸಿದ್ದು, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ನೇತೃತ್ವದಲ್ಲಿ ತನಿಖೆ ನಡೆಸುವಂತೆ ತಿಳಿಸಿದ್ದಾರೆ. ಎರಡು ದಿನಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದಾರೆ.

    ಅಮಾನವೀಯ ಘಟನೆ ಕುರಿತು ಬಳ್ಳಾರಿ ಜಿಲ್ಲಾಧಿಕಾರಿ ಸಹ ಬೇಸರ ವ್ಯಕ್ತಪಡಿಸಿ, ಬಹಿರಂಗವಾಗಿ ಕುಟುಂಬಸ್ಥರು ಹಾಗೂ ಸಾರ್ವಜನಿಕರ ಬಳಿ ಕ್ಷಮೆಯಾಚಿಸಿದ್ದಾರೆ. ಅಲ್ಲದೆ ಮಾರ್ಚುರಿ ಸ್ಟ್ಯಾಫ್ ಬದಲಾವಣೆ ಮಾಡಿ ಡಿಸಿ ಆದೇಶಿಸಿದ್ದಾರೆ. ಇನ್ನು ಮುಂದೆ ಶವಗಳ ನಿರ್ವಹಣೆಗೆ ವಿಧಿವಿಜ್ಞಾನ ಮತ್ತು ವಿಮ್ಸ್ ನ ನುರಿತ ತಂಡ ನೇಮಕ ಮಾಡುವಂತೆ ಸೂಚಿಸಿದ್ದಾರೆ.

  • ಚಿಕ್ಕಬಳ್ಳಾಪುರ ತಾಲೂಕು ಕಚೇರಿಯ ನಾಲ್ವರಿಗೆ ಕೊರೊನಾ-ಕಚೇರಿ ಸಿಬ್ಬಂದಿಗೆ ಆತಂಕ

    ಚಿಕ್ಕಬಳ್ಳಾಪುರ ತಾಲೂಕು ಕಚೇರಿಯ ನಾಲ್ವರಿಗೆ ಕೊರೊನಾ-ಕಚೇರಿ ಸಿಬ್ಬಂದಿಗೆ ಆತಂಕ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕು ಕಚೇರಿಯ 4 ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಕಚೇರಿಯಲ್ಲಿನ 50ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಆತಂಕ ಶುರುವಾಗಿದೆ.

    ತಾಲೂಕು ಕಚೇರಿಯ ಭೂ ದಾಖಲೆಗಳ ವಿಭಾಗದ ಸಹಾಯಕ ನಿರ್ದೇಶಕಿ ಹಾಗೂ ಇಬ್ಬರು ಮಹಿಳಾ ಕೇಸ್ ವರ್ಕರ್ಸ್ ಸೇರಿದಂತೆ ಒರ್ವ ಸರ್ವೇಯರ್‍ಗೆ ಸೋಂಕು ದೃಢವಾಗಿದೆ. ಹೀಗಾಗಿ ತಾಲೂಕು ಕಚೇರಿಯಗೆ ಸಂಪೂರ್ಣ ಸೋಂಕು ನಿವಾರಕ ರಾಸಾಯನಿಕ ದ್ರಾವಣ ಸಿಂಪಡಿಸಲಾಗಿದೆ. ಅಲ್ಲದೆ ಇಡೀ ತಾಲೂಕು ಕಚೇರಿ ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

    ಇಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 13 ಪ್ರಕರಣಗಳು ಪತ್ತೆಯಾಗಿದ್ದು, ಸೋಮವಾರ 15 ಪ್ರಕರಣಗಳು ಕಂಡು ಬಂದಿದ್ದವು. ಜಿಲ್ಲೆಯಲ್ಲಿ 214 ಜನರಿಗೆ ಸೋಂಕು ತಗುಲಿದ್ದು, ಇದರಲ್ಲಿ 165 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 4 ಜನ ಮೃತಪಟ್ಟಿದ್ದಾರೆ. ಸದ್ಯ 44 ಸಕ್ರಿಯ ಪ್ರಕರಣಗಳಿವೆ.

  • ಕೊಡಗಿನಲ್ಲಿ ಮಳೆಗಾಲ ಎದುರಿಸಲು ಚೆಸ್ಕಾಂ ಇಲಾಖೆ ಸನ್ನದ್ಧವಾಗಿದೆ: ಬಿ.ಸೋಮಶೇಖರ್

    ಕೊಡಗಿನಲ್ಲಿ ಮಳೆಗಾಲ ಎದುರಿಸಲು ಚೆಸ್ಕಾಂ ಇಲಾಖೆ ಸನ್ನದ್ಧವಾಗಿದೆ: ಬಿ.ಸೋಮಶೇಖರ್

    ಮಡಿಕೇರಿ: ಕೊಡಗಿನ ಮಳೆಗಾಲದಲ್ಲಿ ಎದುರಾಗುವ ವಿದ್ಯುತ್ ಸಮಸ್ಯೆಗಳನ್ನು ಎದುರಿಸಲು ಈಗಾಗಲೇ ಚೆಸ್ಕಾಂ ಇಲಾಖೆ ಸನ್ನದ್ಧವಾಗಿದೆ ಎಂದು ಚೆಸ್ಕಾಂ ಕಾರ್ಯನಿರ್ವಹಕ ಎಂಜಿನಿಯರ್.ಬಿ.ಸೋಮಶೇಖರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆಗಾಲದಲ್ಲಿ ವಿಪರೀತ ಗಾಳಿ-ಮಳೆ ಆಗುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಎದುರಾಗುವ ವಿದ್ಯುತ್ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ಇಲಾಖೆ ಸನ್ನದ್ಧವಾಗಿದೆ. ವಿದ್ಯುತ್ ಇಲಾಖೆ ಪ್ರತೀ ಮಳೆಗಾಲವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ. 2018ರಿಂದ ಜಿಲ್ಲೆಯಲ್ಲಿ ಪ್ರವಾಹದ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ ಎಂದರು.

    ಇಂತಹ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಲು ಚೆಸ್ಕಾಂ ಸಿಬ್ಬಂದಿ ರೆಡಿಯಾಗಿದ್ದಾರೆ. ಈಗಾಗಲೇ ನಿಗದಿಪಡಿಸಿರುವ ಸ್ಥಳಗಳಲ್ಲಿ ವಿದ್ಯುತ್ ಕಂಬಗಳನ್ನು ಸಂಗ್ರಹಿಸಿದ್ದೇವೆ. ಮಳೆಗಾಲದಲ್ಲಿ ಅಧಿಕ ಕೆಲಸ ಇರುವುದರಿಂದ ಅಗತ್ಯವಿರುವ ಸಿಬ್ಬಂದಿಯ ಜೊತೆಗೆ 150 ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲು ಟೆಂಡರ್ ಕರೆಯಲಾಗಿದೆ. ಸಾಮಾನ್ಯವಾಗಿ 5 ವಾಹನಗಳನ್ನು ಬಳಸುತ್ತಿದ್ದ ಸಿಬ್ಬಂದಿ ಈ ಸಂದರ್ಭದಲ್ಲಿ 20 ವಾಹನಗಳನ್ನು ಬಳಸಿಕೊಳ್ಳುತ್ತೇವೆ ಎಂದು ತಿಳಿಸಿದರು.

    ಸಾಮಾನ್ಯವಾಗಿ ಅತಿ ಹೆಚ್ಚು ಮಳೆಯಾಗುವ ಪ್ರದೇಶಗಳದ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ, ಸೂರ್ಲಬ್ಬಿ, ಮಾದಾಪುರ, ಮಡಿಕೇರಿ ತಾಲೂಕಿನ ಭಾಗಮಂಡಲ ಹಾಗೂ ಪಾಲಿಬೆಟ್ಟ ಭಾಗಗಳಲ್ಲಿ ಹೆಚ್ಚಿನ ಸಮಸ್ಯೆಗಳು ಕಂಡುಬರುತ್ತವೆ. ಟ್ರಾನ್ಸ್ ಫಾರ್ಮರ್ನಿಂದ ವಿದ್ಯುತ್ ಲೈನ್‍ಗಳು 50 ರಿಂದ 60 ಕಿ.ಮೀಟರ್ ದೂರಕ್ಕೆ ಸಂಪರ್ಕ ಕಲ್ಪಿಸಿರುವುದರಿಂದ ಸಮಸ್ಯೆಗಳು ಎದುರಾಗುತ್ತವೆ ಎಂದರು.

  • ಯಾವುದೇ ಕಾರಣಕ್ಕೂ ಸಾರಿಗೆ ಸಿಬ್ಬಂದಿ ಸಂಬಳ ಕಟ್ ಮಾಡಲ್ಲ: ಲಕ್ಷ್ಮಣ್ ಸವದಿ

    ಯಾವುದೇ ಕಾರಣಕ್ಕೂ ಸಾರಿಗೆ ಸಿಬ್ಬಂದಿ ಸಂಬಳ ಕಟ್ ಮಾಡಲ್ಲ: ಲಕ್ಷ್ಮಣ್ ಸವದಿ

    – ಕೊರೊನಾಗೆ ಸಿಬ್ಬಂದಿ ಬಲಿಯಾದ್ರೆ 50 ಲಕ್ಷ ಪರಿಹಾರ

    ಬಾಗಲಕೋಟೆ: ಯಾವುದೇ ಕಾರಣಕ್ಕೂ ಸಾರಿಗೆ ಸಿಬ್ಬಂದಿ ವೇತನ ತಡೆ ಹಿಡಿಯಲ್ಲ. ಸಂಬಳ ಕಟ್ ಮಾಡಲ್ಲ. ಪೂರ್ಣ ಸಂಬಳ ಕೊಡುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಭರವಸೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾದಿಂದಾಗಿ ಸಾರಿಗೆ ಸಂಸ್ಥೆಗೆ ಬಹಳ ಹಾನಿಯಾಗಿದೆ. ಎರಡು ತಿಂಗಳು ಸಾರಿಗೆ ಸಿಬ್ಬಂದಿಗೆ ಸರ್ಕಾರ ಸಂಬಳ ಕೊಟ್ಟಿದೆ. ಸಿಬ್ಬಂದಿ ಸಂಬಳಕ್ಕಾಗಿ ರಾಜ್ಯ ಸರ್ಕಾರ 651 ಕೋಟಿ ರೂ. ಕೊಟ್ಟಿದೆ. ಮುಂದಿನ ತಿಂಗಳು ಸಂಬಳ ಕೊಡಲು ಕಷ್ಟಸಾಧ್ಯವಾಗಬಹುದು. ಇಲಾಖೆ ಸಿಬ್ಬಂದಿಗೆ ಸಂಬಳ ಕೊಡಲು ಹಣ ನೀಡುವಂತೆ ಸಿಎಂ ಜೊತೆ ಚರ್ಚೆ ಮಾಡುವೆ ಎಂದು ತಿಳಿಸಿದ್ದಾರೆ.

    ಅಲ್ಲದೆ ಯಾವುದೇ ಕಾರಣಕ್ಕೂ ಸಾರಿಗೆ ಸಿಬ್ಬಂದಿ ವೇತನ ತಡೆ ಹಿಡಿಯಲ್ಲ. ಸಂಬಳ ಕಟ್ ಮಾಡಲ್ಲ. ಪೂರ್ಣ ಸಂಬಳ ಕೊಡುತ್ತೇವೆ. ಕೊರೊನಾ ಭಯದಿಂದ ಸೇವೆಗೆ ಹಾಜರಾಗದೇ ಇರುವವರು ಕೂಡಲೇ ಹಾಜರಾಗಿ. ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿ. ಇಲಾಖೆ ಸುರಕ್ಷತೆಗಾಗಿ ನೀಡಿರುವ ಸೌಲಭ್ಯ ಬಳಕೆ ಮಾಡಿಕೊಳ್ಳಿ. ಒಂದು ವೇಳೆ ಕೊರೋನಾಕ್ಕೆ ನಮ್ಮ ಇಲಾಖೆ ಸಿಬ್ಬಂದಿ ಬಲಿಯಾದ್ರೆ, ಆ ಕುಟುಂಬಕ್ಕೆ 30 ಲಕ್ಷ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

    ಎರಡು ದಿನಗಳಲ್ಲಿ ಅಂತಾರಾಜ್ಯ ಪ್ರಯಾಣ ಆರಂಭವಾಗುತ್ತದೆ. ರಾಜ್ಯದ ಸುತ್ತಮುತ್ತ ರಾಜ್ಯಗಳಿಗೆ ಪತ್ರ ಬರೆದಿದ್ದೇನೆ. ಸದ್ಯಕ್ಕೆ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಇಲ್ಲ. ಪತ್ರವನ್ನು ಕೂಡ ಬರೆದಿಲ್ಲ. ಈಗಾಗಲೇ ಆಂಧ್ರ ಪ್ರದೇಶದಿಂದ ಒಪ್ಪಿಗೆ ಸಿಕ್ಕಿದೆ. ರಾಜ್ಯದಿಂದ ಮಂತ್ರಾಲಯ, ತಿರುಪತಿ, ಶ್ರೀಶೈಲಕ್ಕೆ ಬಸ್ ಆರಂಭ ಆಗಲಿವೆ. ಬೇರೆ ರಾಜ್ಯಗಳು ಒಪ್ಪಿಗೆ ನೀಡಿದ ಮೇಲೆ ಅಲ್ಲೂ ಸಂಚಾರ ಆರಂಭ. ಹಸಿರು ವಲಯದ ಹೊರ ರಾಜ್ಯಗಳಿಗೆ ರಾಜ್ಯದಿಂದ ಬಸ್ ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದರು.

    ಇದೇ ವೇಳೆ ಚೀನಾ-ಭಾರತ ಸಂಘರ್ಷದ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಪ್ರಶ್ನೆಗೆ ಉತ್ತರ ಕೊಟ್ಟರೆ ನಾವು ರಾಹುಲ್ ಗಾಂಧಿ ಆಗಬೇಕಾಗುತ್ತೆ. ಯಾರಾದ್ರೂ ಬುದ್ಧಿವಂತರ ಪ್ರಶ್ನೆ ಇದ್ದರೆ ಉತ್ತರ ಕೊಡ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ರಾಹುಲ್ ಗಾಂಧಿಗೆ ಬುದ್ದಿ ಇಲ್ಲ ಎಂದ ಅವರು, ನಮ್ಮ ದೇಶ ಬಲಾಢ್ಯವಾಗಿದೆ. ಚೀನಾ ಪುಕ್ಕಲು ದೇಶ. ಅದಕ್ಕೆ ಹೆದರಲ್ಲ. ಚೀನಾ ಎದುರಿಸುವ ಶಕ್ತಿ ನಮ್ಮ ಸೈನಿಕರಿಗೆ ಇದೆ.

  • ಕರ್ತವ್ಯದ ವೇಳೆ ಮೊಬೈಲ್ ಇಟ್ಟುಕೊಳ್ಳಲು ಸಿಬ್ಬಂದಿಗೆ ಬಿಎಂಟಿಸಿ ಸಮ್ಮತಿ

    ಕರ್ತವ್ಯದ ವೇಳೆ ಮೊಬೈಲ್ ಇಟ್ಟುಕೊಳ್ಳಲು ಸಿಬ್ಬಂದಿಗೆ ಬಿಎಂಟಿಸಿ ಸಮ್ಮತಿ

    ಬೆಂಗಳೂರು: ಕರ್ತವ್ಯದ ವೇಳೆ ಮೊಬೈಲ್ ಇಟ್ಟುಕೊಳ್ಳಲು ಸಿಬ್ಬಂದಿಗೆ ಬಿಎಂಟಿಸಿ ಪರ್ಮಿಷನ್ ನೀಡಿದೆ.

    ಈ ಹಿಂದೆ ಡ್ರೈವಿಂಗ್ ವೇಳೆ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿತ್ತು. ಮಾರ್ಗ ಮಧ್ಯೆ ಸಂಭವಿಸಿದ ಅಪಘಾತ, ಅವಘಡ, ಘಟನೆ, ಗಲಭೆ ಹಾಗೂ ಇತರೆ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಮತ್ತು ಪ್ರಸ್ತುತ ಸಂಸ್ಥೆಯಲ್ಲಿ ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಟಿಕೆಟಿಂಗ್ ಅಳವಡಿಸಲಾದ ಹಿನ್ನೆಲೆಯಲ್ಲಿ ಮೊಬೈಲ್ ಅವಶ್ಯಕತೆ ಇದೆ. ಇದರಿಂದಾಗಿ ಬಿಎಂಟಿಸಿ ನಿರ್ದೇಶನಗಳನ್ನು ಸೂಚಿಸಿ ಮೊಬೈಲ್ ಬಳಕೆಗೆ ಅವಕಾಶ ನೀಡಲಾಗಿದೆ.

    ನಿರ್ದೇಶನಗಳು:
    1. ಬಿಎಂಟಿಸಿ ಮಾರ್ಗಸೂಚಿಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಚಾಲನಾ ಸಿಬ್ಬಂದಿ ತಮ್ಮ ಕರ್ತವ್ಯದ ಅವಧಿಯಲ್ಲಿ ಮೊಬೈಲ್ ದೂರವಾಣಿಯನ್ನು ತಮ್ಮ ಬಳಿ ಇಟ್ಟುಕೊಳ್ಳಲು ಅನುಮತಿ ನೀಡಲಾಗಿದೆ.
    2. ಚಾಲಕ, ಚಾಲಕ-ಕಂ-ನಿರ್ವಾಹಕರು ವಾಹನವನ್ನು ಚಾಲನೆ ಮಾಡುವಾಗ ಮೊಬೈಲ್ ದೂರವಾಣಿಯ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
    3. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಿದ್ದಲ್ಲಿ, ಕೆಂಪು ಗುರುತಿನ ಪ್ರಕರಣ (ಆರ್‍ಎಂಸಿ) ಎಂದು ಪರಿಗಣಿಸಿ ಶಿಸ್ತು ಕ್ರಮ ತೆಗೆದುಕೊಳ್ಳುವುದು.
    4. ನಿರ್ವಾಹಕರು, ಚಾಲಕ-ಕಂ-ನಿರ್ವಾಹಕರು ಕರ್ತವ್ಯದ ಸಮಯದಲ್ಲಿ ಮೊಬೈಲ್‍ನಲ್ಲಿ ಸಂಭಾಷಣೆ ಮಾಡುವಂತಿಲ್ಲ.
    5. ಕರ್ತವ್ಯದ ಸಮಯದಲ್ಲಿ ಡಿಜಿಟಲ್ ಟಿಕೆಟಿಂಗ್‍ಗೆ ಸಂಬಂಧಿಸಿದಂತೆ ಮಾತ್ರ ಮೊಬೈಲ್ ಬಳಸಲು ಅನುಮತಿ ನೀಡಲಾಗಿದೆ.
    6. ನಿರ್ವಾಹಕರು ಕರ್ತವ್ಯದ ಸಮಯದಲ್ಲಿ ಮೊಬೈಲ್‍ನಲ್ಲಿ ಸಂಭಾಷಿಸುತ್ತಿರುವುದು ಕಂಡುಬಂದಲ್ಲಿ ಕೆಂಪು ಗುರುತಿನ ಪ್ರಕರಣ (ಆರ್‍ಎಂಸಿ) ಎಂದು ಪರಿಗಣಿಸಿ ಶಿಸ್ತು ಕ್ರಮ ತೆಗೆದುಕೊಳ್ಳುವುದು.

    7. ನಿಯಮಗಳನ್ನ ಉಲ್ಲಂಘಿಸಿದ್ದಲ್ಲಿ, ತನಿಖಾ ಸಿಬ್ಬಂದಿ ಪ್ರಕರಣ ದಾಖಲಿಸಿ ಮೆಮೋದಲ್ಲಿ ಸೂಕ್ತ ಷರಾ ಬರೆದು ಮೊಬೈಲ್ ಅನ್ನು ಸ್ಥಳದಲ್ಲಿಯೇ ಸಂಬಂಧಿಸಿದ ಚಾಲನಾ ಸಿಬ್ಬಂದಿಗೆ ಹಿಂದಿರುಗಿಸುವುದು.
    8. ತನಿಖಾ ಸಿಬ್ಬಂದಿ ತನಿಖೆ ಸಂದರ್ಭದಲ್ಲಿ, ಕರ್ತವ್ಯ ನಿರತ ಚಾಲನಾ ಸಿಬ್ಬಂದಿ ಮೊಬೈಲ್‍ನಲ್ಲಿ ಸಂಭಾಷಿಸುತ್ತಿರುವುದನ್ನು ಗಮನಿಸಿದ್ದಲ್ಲಿ ಮಾತ್ರ ಪ್ರಕರಣ ದಾಖಲಿಸಬೇಕು. ಆರ್‍ಎಂಸಿ ಪೂರಕವಾಗಿ ಸಂಬಂಧಪಟ್ಟ ನೌಕರರಿಗೆ ಆಪಾದನಾ ಪತ್ರವನ್ನು ನಿಯಮ-22ರ ಅಡಿಯಲ್ಲಿ ಜಾರಿ ಮಾಡಿ ನಿಯಮಾನುಸಾರ ಮುಂದಿನ ಸೂಕ್ತ ಕ್ರಮವಹಿಸುವುದು ಹಾಗೂ ಕಡ್ಡಾಯವಾಗಿ ಘಟಕ ಬದಲಾವಣೆ ಮಾಡಬೇಕು.
    10. ಈ ವಿಷಯವನ್ನು ಎಲ್ಲಾ ಚಾಲನಾ ಸಿಬ್ಬಂದಿ ಗಮನಕ್ಕೆ ತರುವುದು ಹಾಗೂ ಘಟಕಗಳ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಬೇಕು.

  • ಕೊರೊನಾ ಕರ್ತವ್ಯ ಮರೆತು ಇಸ್ಪೀಟ್ ಆಟ- ಶಿಕ್ಷಣ ಇಲಾಖೆಯ 7 ಜನ ಸಿಬ್ಬಂದಿ ಅಮಾನತು

    ಕೊರೊನಾ ಕರ್ತವ್ಯ ಮರೆತು ಇಸ್ಪೀಟ್ ಆಟ- ಶಿಕ್ಷಣ ಇಲಾಖೆಯ 7 ಜನ ಸಿಬ್ಬಂದಿ ಅಮಾನತು

    ದಾವಣಗೆರೆ: ಕೊರೊನಾ ಕರ್ತವ್ಯ ಮರೆತು ಇಸ್ಪೀಟ್ ಆಟ ಆಡಿದ್ದ ಉತ್ತರ ವಲಯದ ಬಿಇಒ ಕಚೇರಿಯ 7 ಜನ ಸಿಬ್ಬಂದಿಯನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.

    ದಾವಣಗೆರೆ ಉತ್ತರ ವಲಯದ ಅಧೀಕ್ಷಕ ಎಚ್.ಎಸ್.ಬಸವರಾಜ್, ಪ್ರಥಮ ದರ್ಜೆ ಸಹಾಯಕ ಎಂ.ಸುಧಾಕರ್, ದ್ವಿತೀಯ ದರ್ಜೆ ಸಹಾಯಕ ಕೊಟ್ರೇಶ್, ದ್ವಿತೀಯ ದರ್ಜೆ ಸಹಾಯಕ ಬೆರಳಚ್ಚು ಗಾರ ಮಲ್ಲಿಕಾರ್ಜುನ್ ಮಠದ, ಶಿಕ್ಷಣ ಸಂಯೋಜಕ ಎಸ್.ಸೋಮಶೇಖರಪ್ಪ, ಡಿ.ಗ್ರೂಪ್ ನೌಕರ ಹರ್ಷವರ್ಧನ್, ಗುಮ್ಮನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಕೆ.ಎಂ.ವೃಷಬೇಂದ್ರಪ್ಪ ಅಮಾನತುಗೊಂಡವರು.

    ಕೊರೊನಾ ಕರ್ತವ್ಯಕ್ಕಾಗಿ ಜಿಲ್ಲಾಡಳಿತವು ಶಿಕ್ಷಣ ಇಲಾಖೆಯ ಕಳೆದ ಕೆಲ ದಿನಗಳ ಹಿಂದೆ ಸಿಬ್ಬಂದಿಯನ್ನು ನೇಮಕ ಮಾಡಿತ್ತು. ಆದರೆ ಕರ್ತವ್ಯವನ್ನು ಮರೆತು ಹಾಗೂ ಲಾಕ್‍ಡೌನ್ ಸಮಯದಲ್ಲಿ ಪಿಬಿ ರಸ್ತೆಯಲ್ಲಿನ ಬಿಲಾಲ್ ಕಾಂಪೌಂಡ್ ಆವರಣದಲ್ಲಿ ಸಿಬ್ಬಂದಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದರು.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಕೆಟಿಜೆ ನಗರ ಪೊಲೀಸರು ದಾಳಿ ನಡೆಸಿ 7 ಜನ ಶಿಕ್ಷಣ ಇಲಾಖೆ ಸಿಬ್ಬಂದಿಯನ್ನು ಬಂಧಿಸಿದ್ದರು. ಅಲ್ಲದೆ ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  • ರೂಮ್‍ನಲ್ಲಿ ಕೈತೊಳೆಯುತ್ತಿದ್ದ ಟೋಲ್ ಕಾರ್ಮಿಕನನ್ನ ಎಳೆದೊಯ್ದ ಲಾರಿ

    ರೂಮ್‍ನಲ್ಲಿ ಕೈತೊಳೆಯುತ್ತಿದ್ದ ಟೋಲ್ ಕಾರ್ಮಿಕನನ್ನ ಎಳೆದೊಯ್ದ ಲಾರಿ

    – ಸಾವಿನ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

    ಬೆಂಗಳೂರು: ಲಾರಿ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಕಾರ್ಮಿಕ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ನೆಲಮಂಗಲದ ನವಯುಗ ಟೋಲ್‍ನಲ್ಲಿ ನಡೆದಿದೆ.

    ಗೋಪಾಲ್ ಮೃತ ದುರ್ದೈವಿ. ಭೀಕರ ಅಪಘಾತದ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಮಂದಿನ ಕಾರಿನಲ್ಲಿದ್ದ ಚಾಲಕ ಹಾಗೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಚಾಲಕ ನಿಯಂತ್ರಣದ ತಪ್ಪಿದ ಲಾರಿ ನೆಲಮಂಗಲದ ನವಯುಗ ಟೋಲ್‍ನಲ್ಲಿ ನುಗ್ಗಿತ್ತು. ಈ ವೇಳೆ ಟೋಲ್‍ನ ಕೌಂಟರ್ ರೂಮ್‍ನಲ್ಲಿ ಗೋಪಾಲ್ ಅವರು ಕೈತೊಳೆಯುತ್ತಿದ್ದರು. ಆದರೆ ವೇಗವಾಗಿ ಬಂದ ಲಾರಿ ಅವರನ್ನು ಎಳೆದೊಯ್ದ ಪರಿಣಾಮ ಗೋಡೆ ಹಾಗೂ ಲಾರಿಯ ಮಧ್ಯೆ ಸಿಲುಕಿ ಗೋಪಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಚಾಲಕನ ನಿಯಂತ್ರಣ ತಪ್ಪಿದ ಲಾರಿ ಮುಂದೆ ನಿಂತಿದ್ದ ಕಾರಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಮುಂದಿದ್ದ ಡಿವೈಡರ್ ಏರಿ ನಿಂತಿತ್ತು. ಅದೃಷ್ಟವಶಾತ್ ಕಾರಿನಲ್ಲಿದ್ದ ಚಾಲಕ, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಈ ಘಟನೆಗೆ ಟೋಲ್ ನಿರ್ಮಾಣ ಸಹ ಕಾರಣವಾಗಿದೆ. ಟೋಲ್ ಕೌಂಟರ್ ರೂಮ್ ಬಾಗಿಲು ರಸ್ತೆ ಕಡೆಗೆ ಇರದೇ ಬೇರೆಕಡೆ ಇದ್ದಿದ್ದರೇ ಇಂತಹ ಘಟನೆ ನಡೆಯುತ್ತಿರಲಿಲ್ಲ. ಅವೈಜ್ಞಾನಿಕ ಮಾದರಿ ಟೋಲ್ ನಿರ್ಮಾಣ ಕೂಡ ಕಾರಣವಿರಬಹುದು. ಟೋಲ್‍ಗಳ ಬಾಗಿಲನ್ನು ಮತ್ತು ಕೆಲಸಗಾರರ ಸಂಚಾರಕ್ಕೆ ಬೇರೆ ಮಾರ್ಗದ ವ್ಯವಸ್ಥೆ ಮಾಡಬೇಕಾಗಿದೆ ಎಂದು ಟೋಲ್ ಸಿಬ್ಬಂದಿ ತಿಳಿಸಿದ್ದಾರೆ.

  • ಗ್ಲೌಸ್ ಇಲ್ಲ, ನಾಳೆ ಬನ್ನಿ ಅಂತ ಕಳುಹಿಸಿದ್ರು- ಹೊಟ್ಟೆಯಲ್ಲೇ ಮಗು ಸಾವು

    ಗ್ಲೌಸ್ ಇಲ್ಲ, ನಾಳೆ ಬನ್ನಿ ಅಂತ ಕಳುಹಿಸಿದ್ರು- ಹೊಟ್ಟೆಯಲ್ಲೇ ಮಗು ಸಾವು

    – ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಗು ದುರ್ಮರಣ

    ಲಕ್ನೋ: ಉತ್ತರಪ್ರದೇಶದ ಆಗ್ರಾದಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ದೇಶದಲ್ಲಿ ಆರೋಗ್ಯ ರಕ್ಷಣಾ ವ್ಯವಸ್ಥೆ ಹೇಗಿದೆ ಎಂಬುದನ್ನು ಬಹಿರಂಗಪಡಿಸಿದೆ. ಶಸ್ತ್ರಚಿಕಿತ್ಸೆಗೆ ಬೇಕಾದ ಗ್ಲೌಸ್ ಗಳು ಇಲ್ಲ ಎಂದು ಹೇಳಿ ಸಿಬ್ಬಂದಿ ಗರ್ಭಿಣಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ.

    ಉತ್ತರಪ್ರದೇಶ ಆಗ್ರಾದಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಗರ್ಭಿಣಿಯನ್ನು ಗುಡ್ಡಿ ದೇವಿ ಹಾಗೂ ಆಕೆಯ ಪತಿ ಅನಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಇವರು ಈ ಸಮುದಾಯ ಆರೋಗ್ಯ ಕೇಂದ್ರದ ಆಸು-ಪಾಸಿನಲ್ಲಿಯೇ ವಾಸವಾಗಿದ್ದಾರೆ.

    ಮೇ 18ರಂದು ರಾತ್ರಿ 9.30ರ ಸುಮಾರಿಗೆ ಗುಡ್ಡಿ ದೇವಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರು ಹತ್ತಿರವೇ ಇರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿದ್ದಾರೆ. ಆದರೆ ಅಲ್ಲಿ ಗುಡ್ಡಿ ದೇವಿಯನ್ನು ಪರೀಕ್ಷಿಸಿದ ಮಹಿಳಾ ಸಿಬ್ಬಂದಿ ಮನೆಗೆ ವಾಪಸ್ ಕರೆದುಕೊಂಡು ಹೋಗುವಂತೆ ಅನಿಲ್ ಕುಮಾರ್ ಗೆ ತಿಳಿಸಿದ್ದಾರೆ. ಅಲ್ಲದೆ ನಾಳೆ ಬನ್ನಿ ಎಂದು ಹೇಳಿದ್ದಾರೆ.

    ಇತ್ತ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಪತಿ ಅನಿಲ್, ಆಸ್ಪತ್ರೆಗೆ ದಾಖಲಿಸಿಕೊಳ್ಳುವಂತೆ ಸಿಬ್ಬಂದಿಯಲ್ಲಿ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಆದರೆ ಅನಿಲ್ ಮಾತನ್ನು ಸಿಬ್ಬಂದಿ ಕೇಳಲು ತಯಾರಿರಲಿಲ್ಲ. ತನ್ನ ಮನವಿಯನ್ನು ಯಾರೂ ಆಲಿಸದಿದ್ದಾಗ ಅನಿಲ್ ಸಹಾಯಕ್ಕಾಗಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಮೊರೆ ಹೋದರು. ಈ ವಿಚಾರ ತಿಳಿದ ಸಿಬ್ಬಂದಿ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಲ್ಲದೇ, ಅನಿಲ್ ಜೊತೆ ಅನುಚಿತವಾಗಿ ವರ್ತಿಸಲು ಆರಂಭಿಸಿದ್ದಾರೆ.

    ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಚಿಕಿತ್ಸೆ ನೀಡಲು ಆರಂಭಿಸಿದ ವೈದ್ಯರು ಒಂದು ಜೊತೆ ಗ್ಲೌಸ್ ತರುವಂತೆ ಅನಿಲ್ ಗೆ ಹೇಳಿದ್ದಾರೆ. ಆದರೆ ದುರಾದೃಷ್ಟ ಅಂದರೆ ಲಾಕ್ ಡೌನ್ ಪರಿಣಾಮ 1 ಗಂಟೆ ಕಾಲ ಹುಡುಕಾಡಿದರೂ ಅನಿಲ್‍ಗೆ ಎಲ್ಲಿಯೂ ಗ್ಲೌಸ್ ಸಿಗಲಿಲ್ಲ. ಹೀಗಾಗಿ ವೈದ್ಯರು ಗಿಡ್ಡು ದೇವಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಪರಿಣಾಮ ದಂಪತಿ ನಸುಕಿನ ಜಾವ 3 ಗಂಟೆ ಸುಮಾರಿಗೆ ತಮ್ಮ ಮನೆಗೆ ವಾಪಸ್ಸಾಗಿದ್ದಾರೆ.

    ಮರುದಿನ ಗುಡ್ಡಿ ದೇವಿ ಏಕಾಏಕಿ ಪ್ರಜ್ಞಾಹೀನಳಾಗಿ ಬಿದ್ದಳು. ಹೀಗಾಗಿ ಕೂಡಲೇ ಆಕೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಆಕೆಯನ್ನು ಪರೀಕ್ಷಿಸಿದ ವೈದ್ಯರು, ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿದೆ ಎಂಬ ಆಘಾತಕಾರಿ ಸುದ್ದಿಯನ್ನು ನೀಡಿದರು. ಇದನ್ನು ಕೇಳಿದ ಪತಿ ಅನಿಲ್ ದಂಗಾಗಿ ಹೋದರು.

    ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅನಿಲ್, ಮೊದಲು ಹೋದ ಆಸ್ಪತ್ರೆಯಲ್ಲೇ ಸರಿಯಾದ ಚಿಕಿತ್ಸೆ ಸಿಗುತ್ತಿದ್ದರೆ ನನ್ನ ಮಗು ಬದುಕುಳಿಯುತ್ತಿತ್ತು. ಆದರೆ ಸಿಬ್ಬಂದಿಯಿಂದಾಗಿ ಇಂದು ನನ್ನ ಮಗು ಬದುಕಲಿಲ್ಲ. ಹೀಗಾಗಿ ಅಧಿಕಾರಿಗಳು ಅಕಲ್ಲಿನ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ತಿಳಿಸಿದ್ದಾರೆ.

    ಘಟನೆಯ ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ ಪರಿಣಾಮ ಎಟ್ಮಾಡ್ಪುರದ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಜ್ಯೋತಿ ರೈ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೋಟಿಸ್ ಕಳುಹಿಸಿದ್ದಾರೆ.

  • ಮೇ 18ರ ನಂತರ ಬಸ್ ಸೇವೆ ಪ್ರಾರಂಭದ ಸುಳಿವು ಕೊಟ್ಟ ಬಿಎಂಟಿಸಿ

    ಮೇ 18ರ ನಂತರ ಬಸ್ ಸೇವೆ ಪ್ರಾರಂಭದ ಸುಳಿವು ಕೊಟ್ಟ ಬಿಎಂಟಿಸಿ

    ಬೆಂಗಳೂರು: ಮೇ 17ಕ್ಕೆ ಲಾಕ್‍ಡೌನ್ ಅವಧಿ ಮುಗಿಯುತ್ತಿರುವ ಹಿನ್ನೆಲೆ ಸಿಬ್ಬಂದಿಗೆ ಬಿಎಂಟಿಸಿ ಆದೇಶ ಹೊರಡಿಸಿದ್ದು, ಲಾಕ್‍ಡೌನ್‍ನಿಂದ ಸ್ಥಗಿತಗೊಂಡಿದ್ದ ಬಸ್ ಸೇವೆ ಮತ್ತೆ ಆರಂಭವಾಗುವ ಸುಳಿವನ್ನು ನೀಡಿದೆ.

    ಮೇ 18ರಿಂದ ಎಲ್ಲಾ ಸಿಬ್ಬಂದಿ ಕೆಲಸಕ್ಕೆ ಹಾಜರಾಗುವಂತೆ ಬಿಎಂಟಿಸಿ ಆದೇಶ ಹೊರಡಿಸಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಲಾಕ್‍ಡೌನ್ ಜಾರಿಗೊಳಿಸಿದ ಹಿನ್ನೆಲೆ ಬಿಎಂಟಿಸಿ ಸೇರಿದಂತೆ ಎಲ್ಲಾ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಸೇವೆಗಳನ್ನು ಸ್ಥಗಿತಗೊಂಡಿದ್ದವು. ಕೆಲ ಬಿಎಂಟಿಸಿ ಬಸ್‍ಗಳು ತುರ್ತು ಆರೋಗ್ಯ ಸೇವೆಗಾಗಿ ರಸ್ತೆಗೆ ಇಳಿದಿದ್ದವು. ಅದನ್ನು ಹೊರತುಪಡೆಸಿ ಸಾರ್ವಜನಿಕರ ಓಡಾಟಕ್ಕೆ ಬಿಎಂಟಿಸಿ ಲಭ್ಯವಿರಲಿಲ್ಲ.

    ಈಗ ಸರ್ಕಾರವು ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆ ಸಾರಿಗೆ ಇಲಾಖೆಯನ್ನು ಅಗತ್ಯ ಸೇವೆ ಸಲ್ಲಿಸುವ ಇಲಾಖೆ ಎಂದು ಪರಿಗಣಿಸಿದೆ. ಸದರಿ ಇಲಾಖೆಯಲ್ಲಿ ಬಿಎಂಟಿಸಿಯು ಒಳಪಡುತ್ತದೆ. ಆದ್ದರಿಂದ ಮೇ 17ರಂದು ಲಾಕ್‍ಡೌನ್ ಅವಧಿ ಪೂರ್ಣಗೊಳ್ಳಲಿದ್ದು, ಮೇ 18ರಿಂದ ಅಧಿಕಾರಿಗಳು ಸೇರಿದಂತೆ ಎಲ್ಲಾ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಆದೇಶಿಸಿದೆ.

    ಸರ್ಕಾರದ ಅನುಮತಿಗೆ ಕಾಯುತ್ತಿರುವ ಬಿಎಂಟಿಸಿ:
    ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟರೆ ಬಸ್ ಸೇವೆ ಆರಂಭಿಸಲು ಬಿಎಂಟಿಸಿ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಇಲಾಖೆ, ಸಿಬ್ಬಂದಿ ತಪಾಸಣೆ ಮಾಡಿ ಸರ್ಟಿಫಿಕೇಟ್ ಕೊಡುತ್ತಿದೆ. ಬೆಂಗಳೂರಿನ 6 ಕಡೆ ಬಿಎಂಟಿಸಿ ಸಿಬ್ಬಂದಿ ತಪಾಸಣೆ ಮಾಡುತ್ತಿದ್ದಾರೆ. ಬಸ್‍ನಲ್ಲಿ ಸೀಟುಗಳು ಮಾತ್ರ ಭರ್ತಿ ಮಾಡಿ, ನಿಂತುಕೊಂಡು ಪ್ರಯಾಣ ಮಾಡೋದಕ್ಕೆ ಪ್ರಯಾಣಿಕರಿಗೆ ಅವಕಾಶ ನೀಡಬೇಡಿ ಎಂದು ಸೂಚಿಸಿದೆ. ಪ್ರತಿ ಟ್ರಿಪ್ ಆದ ಮೇಲೆ ರಾಸಾಯನಿಕ ಸಿಂಪಡಣೆ ಮಾಡಿ ಬಸ್ ಮತ್ತೆ ಸಂಚಾರ ಆರಂಭಿಸಲಿದೆ. ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದ್ದು, ಸರ್ಕಾರ ಅನುಮತಿ ಕೊಟ್ಟರೆ ಬಸ್ ಸಂಚಾರ ಪ್ರಾರಂಭ ಮಾಡಲಾಗುತ್ತೆ ಎಂದು ಬಿಎಂಟಿಸಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಅಲ್ಲದೇ ಚಾಲಕ, ನಿರ್ವಾಹರಿಗೆ ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ನೀಡಲು ಇಲಾಖೆ ನಿರ್ಧಾರ ಮಾಡಿದೆ. ಕ್ಯೂಆರ್(16) ಕೋಡ್ ಮೂಲಕ ಟಿಕೆಟ್ ಹಣ ಪಾವತಿ ಮಾಡುವ ವಿಧಾನಕ್ಕೂ ಸಿದ್ಧತೆ ಮಾಡಲಾಗುತ್ತಿದೆ. ಹೀಗಾಗಿ ತಿಂಗಳ ಪಾಸ್ ಮೂಲಕವೂ ಜನರಿಗೆ ಓಡಾಟ ಮಾಡಲು ಬಿಎಂಟಿಸಿ ನೆರವಾಗಿದೆ.