Tag: staff

  • ಕೋವಿಡ್ ಕೇರ್ ಸೆಂಟರ್‌ನಲ್ಲಿ ಒಂದು ಬೆಡ್‍ಗೆ 4 ಜನರಿದ್ದ ಪ್ರಕರಣ- ವೈದ್ಯರ ಕೊರತೆಯೇ ದುಸ್ಥಿತಿಗೆ ಕಾರಣ

    ಕೋವಿಡ್ ಕೇರ್ ಸೆಂಟರ್‌ನಲ್ಲಿ ಒಂದು ಬೆಡ್‍ಗೆ 4 ಜನರಿದ್ದ ಪ್ರಕರಣ- ವೈದ್ಯರ ಕೊರತೆಯೇ ದುಸ್ಥಿತಿಗೆ ಕಾರಣ

    ಮಡಿಕೇರಿ: ಕೊಡಗಿನಲ್ಲಿ ಕೋವಿಡ್ ಸೋಂಕು ಮಿತಿಮೀರಿ ಹರಡುತಿದ್ದು, ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆಯೂ ಎಲ್ಲೆ ಮೀರಿದೆ. ಹೀಗಾಗಿಯೇ ಕೊಡಗಿನಲ್ಲಿ ಕೋವಿಡ್ ರೋಗಿಗಳಿಗೆ ಬೆಡ್ ಗಳ ಸಮಸ್ಯೆ ತಲೆದೋರಿತ್ತು ಎನ್ನಲಾಗಿತ್ತು. ಶುಕ್ರವಾರ ತಡರಾತ್ರಿ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಒಂದು ಬೆಡ್‍ಗೆ ನಾಲ್ಕು ಜನರನ್ನು ಹಾಕಿದ ವೀಡಿಯೋ ಸಖತ್ ವೈರಲ್ ಆಗಿತ್ತು. ಇದಕ್ಕೆ ಕಾರಣ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಎಂಬುದು ಇದೀಗ ತಿಳಿದಿದೆ.

    ಒಂದು ಬೆಡ್‍ನಲ್ಲಿ ನಾಲ್ಕು ಸೋಂಕಿತರನ್ನು ಹಾಕಲಾಗಿದೆ ಎಂದು ಸ್ಥಳದಲ್ಲಿದ್ದ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲಿಂದಲೇ ವಿಡಿಯೋ ಮಾಡಿ ಹರಿಬಿಟ್ಟಿದ್ದ ಸೋಂಕಿತರು, ಜಿಲ್ಲಾಡಳಿತ, ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಮಸ್ಯೆಗೆ ಕಾರಣ ಇದೀಗ ತಿಳಿದಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಈ ದುಸ್ಥಿತಿ ಎದುರಾಗಿದೆ ಎಂಬುದು ಸ್ಪಷ್ಟವಾಗಿದೆ.

    ಕೋವಿಡ್ ಆಸ್ಪತ್ರೆಯ ಕೊಠಡಿಯಲ್ಲಿ ಒಂದೊಂದು ಬೆಡ್ ನಲ್ಲಿ ನಾಲ್ಕೈದು ಜನರಿದಿದ್ದು, ಸೋಂಕಿತರು ಗಲಾಟೆ ಮಾಡಿದ್ದ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಕೋವಿಡ್ ಆಸ್ಪತ್ರೆಯ ಮೆಡಿಕಲ್ ಸೂಪರಿಟಿಂಡೆಂಟ್ ಲೋಕೇಶ್, ಪ್ರಕರಣಗಳು ಜಾಸ್ತಿ ಬರುತ್ತಿರುವುದರಿಂದ ಸಿಟಿ ಸ್ಕ್ಯಾನಿಂಗ್, ಎಕ್ಸ್ ರೇ ಸೇರಿದಂತೆ ಇತರೆ ತಪಾಸಣೆಗಳು ತಡವಾಗುತ್ತಿರುವುದರಿಂದ ಸೋಂಕಿತರಿಗೆ ಸಮಸ್ಯೆ ಎನ್ನಿಸುತ್ತಿದೆ. ಹೀಗಾಗಿ ಖಾಸಗಿ ಸ್ಕ್ಯಾನಿಂಗ್ ಸೆಂಟರ್ ಗಳನ್ನು ಸ್ಕ್ಯಾನಿಂಗ್ ಗೆ ಬಳಕೆ ಮಾಡಿಕೊಳ್ಳಲಾಗುವುದು. ಅಲ್ಲದೆ ವೈದ್ಯರ ಕೊರತೆ ಇದ್ದು, ಸದ್ಯ ಎಂಬಿಬಿಎಸ್ ಪರೀಕ್ಷೆ ಪಡೆದಿರುವ ವಿದ್ಯಾರ್ಥಿಗಳನ್ನು ಕರ್ತವ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದರು.

    ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಎಚ್‍ಓ ಮೋಹನ್ ಕುಮಾರ್, ಜಿಲ್ಲೆಯಲ್ಲಿ ನಿಜವಾಗಿಯೂ ಬೆಡ್ ಗಳ ಸಮಸ್ಯೆ ಇಲ್ಲ. ಪಾಸಿಟಿವ್ ಬಂದಿರುವ ವ್ಯಕ್ತಿಗಳಿಗೆ ಹಲವು ತಪಾಸಣೆಗಳನ್ನು ಮಾಡಬೇಕಾಗಿರುತ್ತದೆ. ಅಂತಹವರನ್ನು ಹೊರಗೆ ಓಡಾಡಲು ಬಿಟ್ಟರೆ ಬೇರೆಯವರಿಗೆ ಸೋಂಕು ಹರಡಬಹುದೆಂದು ಒಂದು ಕೊಠಡಿಯಲ್ಲಿ ಕೂರಿಸಿದ್ದೆವು. ಅವರಿಗೆ ಇನ್ನೂ ಪ್ರತ್ಯೇಕ ಬೆಡ್ ಗಳನ್ನು ಕೊಟ್ಟಿರಲಿಲ್ಲ. ಎಲ್ಲ ತಪಾಸಣೆಗಳು ಮುಗಿದ ಬಳಿಕ ಯಾರಿಗೆ ಆರೋಗ್ಯದ ಗಂಭೀರ ಸಮಸ್ಯೆ ಇರುತ್ತದೆಯೋ ಅವರನ್ನು ಮಾತ್ರವೇ ಆಸ್ಪತ್ರೆಯಲ್ಲೇ ಪ್ರತ್ಯೇಕ ಕೊಠಡಿಗಳಲ್ಲಿ ಬೆಡ್ ನೀಡಿ ಉಳಿಸಿಕೊಳ್ಳಲಾಗುತ್ತದೆ. ಉಳಿದವರನ್ನು ಹೋಮ್ ಐಸೋಲೇಷನ್ ಮಾಡಲಾಗುತ್ತದೆ. ಶುಕ್ರವಾರ ರಾತ್ರಿಯೂ ಇದೇ ಸಮಸ್ಯೆ ಆಗಿತ್ತು. ಆದರೆ ಇದನ್ನೇ ಒಂದೊಂದೇ ಬೆಡ್ ನಲ್ಲಿ ನಾಲ್ಕೈದು ಜನರನ್ನು ಇರಿಸಲಾಗಿದೆ ಎಂದು ವೀಡಿಯೋ ಮಾಡಿದ್ದರು. ಇದು ಸುಳ್ಳು ಎಂದು ತಿಳಿಸಿದರು.

    ಹೆಚ್ಚಿನ ಕೋವಿಡ್ ತಪಾಸಣೆಗಳನ್ನು ಮಾಡುತ್ತಿರುವುದರಿಂದ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಬೆಡ್ ಗಳ ಕೊರತೆಯಾಗದಂತೆ, ಸೋಮವಾರಪೇಟೆ, ವಿರಾಜಪೇಟೆ ಪಾಲಿಬೆಟ್ಟಗಳಲ್ಲಿ ಆಕ್ಸಿಜನ್ ಬೆಡ್ ಗಳನ್ನು ರೆಡಿ ಮಾಡಲಾಗುತ್ತಿದೆ. ಆದರೆ ಇದರ ನಡುವೆ ಸೋಮವಾರಪೇಟೆ ಮತ್ತು ವಿರಾಜಪೇಟೆಗಳಲ್ಲಿ ತಜ್ಞವೈದ್ಯರ ಕೊರತೆ ಇದೆ ಎಂದು ಹೇಳಿದ್ದಾರೆ. ಹಲವೆಡೆ ಕೋವಿಡ್ ಕೇರ್ ಗಳನ್ನು ರೆಡಿ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಬೆಡ್ ಗಳ ಕೊರತೆ ಇಲ್ಲ ಎಂದು ಮೋಹನ್ ಕುಮಾರ್ ಸ್ಪಷ್ಟಪಡಿಸಿದರು.

  • ಪ್ರಾಣ ಪಣಕ್ಕಿಟ್ಟು ಮಗುವನ್ನು ರಕ್ಷಿಸಿದ ರೈಲ್ವೆ ಸಿಬ್ಬಂದಿಗೆ ಚಪ್ಪಾಳೆಯ ಸುರಿಮಳೆ

    ಪ್ರಾಣ ಪಣಕ್ಕಿಟ್ಟು ಮಗುವನ್ನು ರಕ್ಷಿಸಿದ ರೈಲ್ವೆ ಸಿಬ್ಬಂದಿಗೆ ಚಪ್ಪಾಳೆಯ ಸುರಿಮಳೆ

    ಮುಂಬೈ: ರೈಲಿನ ಹಳಿ ಮೇಲೆ ಆಯ ತಪ್ಪಿ ಬಿದ್ದ ಮಗು. ಎದುರಿನಲ್ಲಿ ಶರವೇಗದಲ್ಲಿ ಬರುತ್ತಿದ್ದ ರೈಲಿನಿಂದ ತನ್ನ ಪ್ರಾಣವನ್ನು ಪಣಕ್ಕಿಟ್ಟು ಮಗುವನ್ನು ರಕ್ಷಿಸಿದ ರೈಲ್ವೆ ಸಿಬ್ಬಂದಿಗೆ ಸೆಂಟ್ರಲ್ ರೈಲ್ವೇ ಕಚೇರಿಯಲ್ಲಿ ರೈಲ್ವೆ ಸಿಬ್ಬಂದಿ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮಹಾರಾಷ್ಟ್ರದ ಮುಂಬೈನ ವಂಗನಿ ರೈಲು ನಿಲ್ದಾಣದ ಎರಡನೇ ಪ್ಲಾಟ್‍ಫಾರ್ಮ್‍ನಲ್ಲಿ ಮಹಿಳೆ ಮತ್ತು ಮಗು ನಡೆದುಕೊಂಡು ಹೋಗುತ್ತಿದ್ದಾಗ ಮಗು ಆಯ ತಪ್ಪಿ ಹಳಿ ಮೇಲೆ ಬಿದ್ದಿದೆ. ಎದುರಿನಿಂದ ರೈಲು ಅತ್ಯಂತ ವೇಗವಾಗಿ ಮಗು ಬಿದ್ದ ಹಳಿ ಮೇಲೆಯೇ ಬರುತ್ತಿತ್ತು. ಮಗುವಿನ ಜೊತೆಗೆ ಇದ್ದ ಮಹಿಳೆ ಭಯಗೊಂಡು ತಕ್ಷಣಕ್ಕೆ ಏನು ಮಾಡಬೇಕೆಂದು ತಿಳಿದಿರಲಿಲ್ಲ. ಭಯದಿಂದ ಮಗುವನ್ನು ಕಾಪಾಡಲು ನೋಡುತ್ತಿದ್ದರು.

    ಮಗು ಹಳಿ ಮೇಲೆ ಬಿದ್ದಿರುವುದನ್ನು ಕಂಡು ರೈಲು ನಿಲ್ದಾಣದ ಕೆಲಸಗಾರ ಮಯೂರ್ ಶೆಲ್ಕೆ ಮಿಂಚಿನ ವೇಗದಲ್ಲಿ ಓಡಿ ಮಗುವನ್ನು ಎತ್ತಿ ಪ್ಲಾಟ್‍ಫಾರ್ಮ್ ಮೇಲೆ ಹಾಕಿದರು. ರೈಲು ಡಿಕ್ಕಿ ಹೊಡೆಯುತ್ತದೆ ಎನ್ನುವಷ್ಟರಲ್ಲಿ ಕೆಲವೇ ಸೆಕೆಂಡುಗಳಲ್ಲಿ ಪ್ಲಾಟ್‍ಫಾರ್ಮ್ ಮೇಲೆ ಹಾರಿ ತಮ್ಮ ಪ್ರಾಣ ಹಾಗೂ ಮಗುವಿನ ಪ್ರಾಣವನ್ನು ಉಳಿಸಿದ್ದರು.

    ಈ ಘಟನೆಯ ವಿಡಿಯೋವನ್ನು ಕೇಂದ್ರ ರೈಲ್ವೇ ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದು, ಮಗುವಿನ ಜೀವ ಉಳಿಸಲು ತನ್ನ ಪ್ರಾಣವನ್ನು ಪಣಕ್ಕಿಟ್ಟಿದ್ದಾರೆ. ನೌಕರನ ಧೈರ್ಯ ಮತ್ತು ಕರ್ತವ್ಯದ ಬಗ್ಗೆ ಅತ್ಯಂತ ಭಕ್ತಿಗೆ ನಮಸ್ಕರಿಸುತ್ತೇವೆ. ನೌಕರನಿಗೆ ಅಭಿನಂದನೆಗಳು ಎಂದು ಬರೆದುಕೊಂಡು ವೀಡಿಯೋವನ್ನು ಶೇರ್ ಮಾಡಿದೆ. ರೈಲ್ವೆ ಸಿಬ್ಬಂದಿಯ ಕಾರ್ಯವನ್ನು ಮೆಚ್ಚಿ ಉಳಿದ ಸಿಬ್ಬಂದಿ ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ.

  • ರೈಲು ಹಳಿ ಮೇಲೆ ಬಿದ್ದ ಮಗು – ತನ್ನ ಪ್ರಾಣವನ್ನು ಪಣಕ್ಕಿಟ್ಟು ಮಗುವನ್ನು ರಕ್ಷಿಸಿದ

    ರೈಲು ಹಳಿ ಮೇಲೆ ಬಿದ್ದ ಮಗು – ತನ್ನ ಪ್ರಾಣವನ್ನು ಪಣಕ್ಕಿಟ್ಟು ಮಗುವನ್ನು ರಕ್ಷಿಸಿದ

    ಮುಂಬೈ: ರೈಲಿನ ಹಳಿ ಮೇಲೆ ಆಯ ತಪ್ಪಿ ಬಿದ್ದ ಮಗು. ಎದುರಿನಲ್ಲಿ ಶರವೇಗದಲ್ಲಿ ಬರುತ್ತಿದ್ದ ರೈಲಿನಿಂದ ಮಗುವಿನ ಪ್ರಾಣ ಉಳಿಸುವ ರೈಲ್ವೆ ನೌಕರನ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಮಹಾರಾಷ್ಟ್ರದ ಮುಂಬೈನ ವಂಗನಿ ರೈಲು ನಿಲ್ದಾಣದ ಎರಡನೇ ಪ್ಲಾಟ್‍ಫಾರ್ಮ್‍ನಲ್ಲಿ ಮಹಿಳೆ ಮತ್ತು ಮಗು ನಡೆದುಕೊಂಡು ಹೋಗುತ್ತಿದ್ದಾಗ ಮಗು ಆಯ ತಪ್ಪಿ ಹಳಿ ಮೇಲೆ ಬಿದ್ದಿದೆ. ಎದುರಿನಿಂದ ರೈಲು ಅತ್ಯಂತ ವೇಗವಾಗಿ ಮಗು ಬಿದ್ದ ಹಳಿ ಮೇಲೆಯೇ ಬರುತ್ತಿತ್ತು. ಮಗುವಿನ ಜೊತೆಗೆ ಇದ್ದ ಮಹಿಳೆ ಭಯಗೊಂಡು ತಕ್ಷಣಕ್ಕೆ ಏನು ಮಾಡಬೇಕೆಂದು ತಿಳಿದಿರಲಿಲ್ಲ. ಭಯದಿಂದ ಮಗುವನ್ನು ಕಾಪಾಡಲು ನೋಡುತ್ತಿದ್ದರು.

    ಮಗು ಹಳಿ ಮೇಲೆ ಬಿದ್ದಿರುವುದನ್ನು ಕಂಡು ರೈಲು ನಿಲ್ದಾಣದ ಕೆಲಸಗಾರ ಮಯೂರ್ ಶೆಲ್ಕೆ ಮಿಂಚಿನ ವೇಗದಲ್ಲಿ ಓಡಿ ಮಗುವನ್ನು ಎತ್ತಿ ಪ್ಲಾಟ್‍ಫಾರ್ಮ್ ಮೇಲೆ ಹಾಕಿದರು. ರೈಲು ಡಿಕ್ಕಿ ಹೊಡೆಯುತ್ತದೆ ಎನ್ನುವಷ್ಟರಲ್ಲಿ ಕೆಲವೇ ಸೆಕೆಂಡುಗಳಲ್ಲಿ ಪ್ಲಾಟ್‍ಫಾರ್ಮ್ ಮೇಲೆ ಹಾರಿ ತಮ್ಮ ಪ್ರಾಣ ಹಾಗೂ ಮಗುವಿನ ಪ್ರಾಣವನ್ನು ಉಳಿಸಿದ್ದಾರೆ.

    ಈ ಘಟನೆಯ ವಿಡಿಯೋವನ್ನು ಕೇಂದ್ರ ರೈಲ್ವೇ  ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಮಗುವಿನ ಜೀವ ಉಳಿಸಲು ತನ್ನ ಪ್ರಾಣವನ್ನು ಪಣಕ್ಕಿಟ್ಟಿದ್ದಾರೆ. ನೌಕರನ ಧೈರ್ಯ ಮತ್ತು ಕರ್ತವ್ಯದ ಬಗ್ಗೆ ಅತ್ಯಂತ ಭಕ್ತಿಗೆ ನಮಸ್ಕರಿಸುತ್ತೇವೆ. ನೌಕರನಿಗೆ ಅಭಿನಂದನೆಗಳು ಎಂದು ಬರೆದುಕೊಂಡು ವೀಡಿಯೋವನ್ನು ಶೇರ್ ಮಾಡಿದೆ.

  • KSRTC ಚಾಲಕ ಸಾವು ಪ್ರಕರಣ- ಪೂರ್ವನಿಯೋಜಿತ ಕೃತ್ಯ, ಬಸ್‍ನಲ್ಲೇ ಇದ್ದ ಓರ್ವ ಆರೋಪಿ

    KSRTC ಚಾಲಕ ಸಾವು ಪ್ರಕರಣ- ಪೂರ್ವನಿಯೋಜಿತ ಕೃತ್ಯ, ಬಸ್‍ನಲ್ಲೇ ಇದ್ದ ಓರ್ವ ಆರೋಪಿ

    – ಬಸ್‍ನಲ್ಲಿದ್ದು ಉಳಿದ ಆರೋಪಿಗಳು ಕಲ್ಲೆಸೆಯಲು ನಿರ್ದೇಶನ

    ಬಾಗಲಕೋಟೆ: ಜಮಖಂಡಿಯ ಕೆಎಸ್‍ಆರ್ ಟಿಸಿ ಬಸ್ ಚಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯಾನಕ ಮಾಹಿತಿ ಹೊರ ಬಿದ್ದಿದ್ದು, ಈ ಸಾವು ಆಕಸ್ಮಿಕವಲ್ಲ, ಬದಲಿಗೆ ಪಕ್ಕಾ ಪ್ಲಾನ್ ಮಾಡಿದ ಕೃತ್ಯ. ಅಲ್ಲದೆ ಆರೋಪಿಗಳ ಪೈಕಿ ಒಬ್ಬ ಬಸ್‍ನಲ್ಲಿಯೇ ಇದ್ದ ಎಂಬ ಆಘಾತಕಾರಿ ಮಾಹಿತಿ ತನಿಖೆ ವೇಳೆ ಬಹಿರಂಗವಾಗಿದೆ.

    ಎಸ್ಪಿ ಲೋಕೇಶ್ ಜಗಲಾಸರ್ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದು, ನಬಿರಸೂಲಸಾಬ್ ಚಲಿಸುತ್ತಿದ್ದ ಬಸ್ ಗೆ ಕಲ್ಲು ತೂರಲು ಪಕ್ಕಾ ಪ್ಲಾನ್ ನಡೆಸಲಾಗಿತ್ತು. ಓರ್ವ ಆರೋಪಿ ಬಸ್ ನಲ್ಲೇ ಇದ್ದ, ನಬಿರಸೂಲಸಾಬ್ ಅವರು ಚಲಿಸುತ್ತಿದ್ದ ಬಸ್ ಗೆ ಅಚಾನಕ್ ಆಗಿ ಕಲ್ಲು ತೂರಿದ್ದಲ್ಲ. ಇದು ಪೂರ್ವನಿಯೋಜಿತ ಕೃತ್ಯವಾಗಿತ್ತು. ಮೊದಲೇ ಪ್ಲಾನ್ ಮಾಡಲಾಗಿತ್ತು ಎಂದು ತನಿಖೆ ವೇಳೆ ಬಯಲಾಗಿದೆ. ಬಸ್ ಸಂಚಾರ ತಡೆಯಬೇಕೆಂಬ ಉದ್ದೇಶದಿಂದ ಕೆಎಸ್‍ಆರ್ ಟಿಸಿಯ ಐವರು ಸಿಬ್ಬಂದಿ ಪಕ್ಕಾ ಪ್ಲಾನ್ ಮಾಡಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದರು.

    ಕೃತ್ಯ ಎಸಗಲು ಅರುಣ್ ಅರಕೇರಿ ಈ ಮಾಸ್ಟರ್ ಪ್ಲಾನ್ ಮಾಡಿದ್ದ, ವಿಜಯಪುರ ನಗರದಿಂದ ಅದೇ ಬಸ್ ನಲ್ಲೇ ಪ್ರಯಾಣಿಸುತ್ತಿದ್ದ ಅರಕೇರಿ, ಬಸ್ ನಲ್ಲೇ ಕೂತು ಕಲ್ಲು ತೂರೋದಕ್ಕೆ ಸ್ಕೆಚ್ ರೂಪಿಸಿದ್ದ. ಬಸ್ ನ ರೂಟ್, ಚಲಿಸುತ್ತಿದ್ದ ಸ್ಥಳದ ಬಗ್ಗೆ ಮಾಹಿತಿ ನೀಡುತ್ತಿದ್ದ. ಬಸ್ ಇಂತಹ ಸ್ಥಳಕ್ಕೆ ರೀಚ್ ಆಗಿದೆ ಎಂದು ಇನ್ನುಳಿದ ನಾಲ್ವರಿಗೆ ಡೈರೆಕ್ಷನ್ ನೀಡುತ್ತಿದ್ದ. ಅರುಣ್ ಅರಕೇರಿ ಡೈರೆಕ್ಷನ್ ಪ್ರಕಾರ ಮಲ್ಲಪ್ಪ ತಳವಾರ, ಚೇತನ್ ಕರ್ವೆ, ಸದಾಶಿವ ಕಂಕಣವಾಡಿ, ರೋಹಿತ್ ದಾಸರ ಅಲರ್ಟ್ ಆಗಿ ಬಸ್ ಕವಟಗಿ ಪುನರ್ವಸತಿ ಕೇಂದ್ರದ ಬಳಿ ಬರುತ್ತಿದ್ದಂತೆ ಅಡ್ಡಬಂದು ಬಸ್‍ಗೆ ಕಲ್ಲೆಸೆದಿದ್ದಾರೆ. ಬಳಿಕ ನಾಲ್ವರೂ ಎಸ್ಕೇಪ್ ಆಗಿದ್ದದ್ದರು.

    ವರ್ಗಾವಣೆಯಿಂದ ಕ್ರೋಧಗೊಂಡು ಕೃತ್ಯ
    ಕೆಎಸ್‍ಆರ್‍ಟಿಸಿ ಸಿಬ್ಬಂದಿ ವರ್ಗಾವಣೆ ಮಾಡಿದ್ದೇ ಕ್ರೋಧಕ್ಕೆ ಕಾರಣವಾಗಿದ್ದು, ಬಸ್ ಸಂಚರಿಸುವುದನ್ನು ತಡೆಯೋದಕ್ಕೆ ಪಣ ತೊಟ್ಟಿದ್ದರು. ಅಥಣಿಯಲ್ಲಿನ ಬಸ್ ಗೆ ಕಲ್ಲೆಸೆತದಲ್ಲೂ ಇವರ ಶಾಮೀಲು ಇದೆ. ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿ ಪರ ಜಿಲ್ಲೆಗಳಿಗೆ ವರ್ಗಾವಣೆ ಮಾಡಿದ್ದರಿಂದ ಆಕ್ರೋಶಗೊಂಡಿದ್ದರು. ಅರುಣ್ ಅರಕೇರಿಯನ್ನು ಕೂಡ ಪರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಅರಕೇರಿ, ಬೆಳಗಾವಿ ಜಿಲ್ಲೆ ಅಥಣಿಯಲ್ಲೂ ಕೆಎಸ್‍ಆರ್ ಟಿಸಿ ಬಸ್ ಗೆ ಇತ್ತೀಚೆಗೆ ಕಲ್ಲು ತೂರಿದ್ದ ಎನ್ನಲಾಗಿದ್ದು, ಇತ್ತೀಚೆಗೆ ಅಥಣಿ ಬಸ್ ಗೆ ಕಲ್ಲು ತೂರಾಟದಲ್ಲೂ ಅರಕೇರಿ ಪಾತ್ರ ಇದೆ. ಈಗ ಐವರಿಂದ ಕೃತ್ಯ ನಡೆದಿದೆ ಎಂದು ಎಸ್‍ಪಿ ವಿವರಿಸಿದ್ದಾರೆ.

  • KSRTC ಬಸ್ ಅಡ್ಡಗಟ್ಟಿದ ಮುಷ್ಕರ ನಿರತ ಸಿಬ್ಬಂದಿ, ಕುಟುಂಬಸ್ಥರು

    KSRTC ಬಸ್ ಅಡ್ಡಗಟ್ಟಿದ ಮುಷ್ಕರ ನಿರತ ಸಿಬ್ಬಂದಿ, ಕುಟುಂಬಸ್ಥರು

    ಚಾಮರಾಜನಗರ: ಸಾರಿಗೆ ನೌಕರರ ಮುಷ್ಕರ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಚಾಮರಾಜಗರದ ಗುಂಡ್ಲುಪೇಟೆಯಲ್ಲಿ ಮುಷ್ಕರದ ನಡುವೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‍ಗಳನ್ನು ಅಡ್ಡಗಟ್ಟಿದ ಮುಷ್ಕರ ನಿರತ ನೌಕರರ ಪತ್ನಿಯರು, ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

    ಮೈಸೂರಿನಿಂದ ಗುಂಡ್ಲುಪೇಟೆಗೆ ಬರುತ್ತಿದ್ದ ಬಸ್ ಗಳನ್ನು ಅಡ್ಡಗಟ್ಟಿದ ಮಹಿಳೆಯರು, ಬಸ್ ಚಲಾಯಿಸುತ್ತಿದ್ದ ಚಾಲಕ ಹಾಗೂ ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡರು. ಚಾಲಕನಿಗೆ ಹೂವಿನ ಹಾರ ಹಾಕಲು ಯತ್ನಿಸಿ ಮುಷ್ಕರವಿದ್ದರೂ ಕರ್ತವ್ಯಕ್ಕೆ ಹಾಜರಾಗಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

    ಬಳಿಕ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮೂವರು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗದವರನ್ನು ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದು ಎಚ್ಚರಿಕೆ ನೀಡಿ ಕಳುಹಿಸಲಾಯಿತು.

  • ಚಾಲಕನಿಗೆ ಮಾಂಗಲ್ಯ ಹಾಕಲು ಯತ್ನಿಸಿದ ಮಹಿಳೆ- ಬೆಳಗಾವಿಯಲ್ಲಿ ಹೈಡ್ರಾಮಾ

    ಚಾಲಕನಿಗೆ ಮಾಂಗಲ್ಯ ಹಾಕಲು ಯತ್ನಿಸಿದ ಮಹಿಳೆ- ಬೆಳಗಾವಿಯಲ್ಲಿ ಹೈಡ್ರಾಮಾ

    ಬೆಳಗಾವಿ: ಸಾರಿಗೆ ಸಿಬ್ಬಂದಿ ಮುಷ್ಕರ ಇಂದು ತಾರಕಕ್ಕೇರಿದ್ದು, ಭಿಕ್ಷೆ ಬೇಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಮಹಿಳೆಯೊಬ್ಬರು ಬಸ್ ಓಡಿಸುತ್ತಿದ್ದ ಚಾಲಕನಿಗೆ ತಾಳಿ ಹಾಕಲು ಯತ್ನಿಸಿದ್ದಾರೆ. ಬಳಿಕ ಬಸ್ ಸ್ಟೀಯರಿಂಗ್‍ಗೆ ಮಾಂಗಲ್ಯ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ.

    ನಗರದ ಬಸ್ ನಿಲ್ದಾಣದತ್ತ ಬರುತ್ತಿದ್ದ ಸರ್ಕಾರಿ ಬಸ್ ತಡೆದು ಪ್ರತಿಭಟನೆ ನಡೆಸಿದ್ದು, ಈ ವೇಳೆ ಬಸ್ ಒಳಗೆ ಹತ್ತಿ ಚಾಲಕನಿಗೆ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಬಸ್ ಯಾಕೆ ಓಡಿಸುತ್ತಿದೀಯಾ, ನಿಮ್ಮ ಕುಟುಂಬ ಚೆನ್ನಾಗಿರಲಿ. ನಮ್ಮ ಕುಟುಂಬ ಬೀದಿಗೆ ಬೀಳಲಿ ಅಂತನಾ? ಬಳೆ ಹಾಕಿ, ತಾಳಿ ಕಟ್ಟಿಕೋ ಎಂದು ಪ್ರತಿಭಟನಾನಿರತ ಮಹಿಳೆ ಹೇಳಿದ್ದಾರೆ. ಅಲ್ಲದೆ ಬಸ್ ಓಡಿಸುತ್ತಿದ್ದ ಚಾಲಕನಿಗೆ ಮಾಂಗಲ್ಯ ತೆಗೆದು ಹಾಕಲು ಮಹಿಳೆ ಯತ್ನಿಸಿದ್ದಾರೆ. ಬಳಿಕ ಬಸ್ ಸ್ಟೀಯರಿಂಗ್‍ಗೆ ಮಾಂಗಲ್ಯ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಕೆಲ ಕಾಲ ಹೈಡ್ರಾಮಾ ನಡೆಯಿತು.

    ಮತ್ತೊಂದೆಡೆ ಅಶೋಕ ವೃತ್ತದಲ್ಲಿ ಬಸ್ ತಡೆದು ಚಾಲಕನಿಗೆ ಹೂವಿನ ಹಾರ ಹಾಕಿ ಮಹಿಳೆ ತರಾಟೆ ತೆಗೆದುಕೊಂಡಿದ್ದಾರೆ. ಚಲಿಸುತ್ತಿದ್ದ ಬಸ್ ಎದುರು ನಿಂತು ಬಸ್ ತಡೆದಿದ್ದು, ಬಳಿಕ ಬಸ್ ಏರಿ ಓಡೋಡಿ ಹೋಗಿ ಮಹಿಳೆ ಚಾಲಕನಿಗೆ ಹಾರ ಹಾಕಿದ್ದಾರೆ. ನಾವೆಲ್ಲ ಮಕ್ಕಳ ಜೊತೆ ಭಿಕ್ಷೆ ಬೇಡುತ್ತಿದ್ದೇವೆ, ನೀನು ಡ್ಯೂಟಿ ಮಾಡ್ತೀಯಾ ಎಂದು ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಚಾಲಕ ಉತ್ತರಿಸಿ, ನಾನು ಡ್ಯೂಟಿ ಮಾಡಲು ಬಂದಿಲ್ಲ, ಡಿಪೋಗೆ ಬಸ್ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.

    ಮತ್ತೊಂದೆಡೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಾರಿಗೆ ಸಿಬ್ಬಂದಿ ಪುತ್ರನ ಮೇಲೆ ಪೊಲೀಸರು ದರ್ಪ ತೋರಿದ್ದು, ಯುವಕನಿಗೆ ಏಟು ನೀಡಿ ವಶಕ್ಕೆ ಪಡೆದಿದ್ದಾರೆ. ಸಾರಿಗೆ ಸಿಬ್ಬಂದಿ ಪತ್ನಿಯರ ಮೇಲೆ ಸಹ ಪೊಲೀಸರು ದರ್ಪ ತೋರಿದ್ದಾರೆ. ಮಾರ್ಕೆಟ್ ಪೊಲೀಸರು ಬೇದರಿಕೆ ಹಾಕಿ ಮಹಿಳೆಯರನ್ನು ವಾಪಸ್ ಕಳುಹಿಸಿದ್ದಾರೆ.

  • ಮುಷ್ಕರ ನಿರತರಿಂದ ಬಸ್ ಮೇಲೆ ಕಲ್ಲು ತೂರಾಟ- ಮೂವರ ಬಂಧನ

    ಮುಷ್ಕರ ನಿರತರಿಂದ ಬಸ್ ಮೇಲೆ ಕಲ್ಲು ತೂರಾಟ- ಮೂವರ ಬಂಧನ

    ಕಲಬುರಗಿ: ಮುಷ್ಕರನಿರತ ಸಾರಿಗೆ ಸಿಬ್ಬಂದಿ ಕೆಎಸ್‍ಆರ್ ಟಿಸಿ ಬಸ್ ಮೇಲೆ ಕಲ್ಲು ತುರಾಟ ನಡೆಸಿದ್ದು, ಚಾಲಕನ ಬೆರಳಿಗೆ ಗಂಭೀರ ಗಾಯವಾಗಿದೆ. ಕಲ್ಲು ತೂರಾಟ ನಡೆಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ದರ್ಗಾ ಬಳಿ ಘಟನೆ ನಡೆದಿದ್ದು, ಮುಷ್ಕರದ ಮಧ್ಯೆ ಕರ್ತವ್ಯಕ್ಕೆ ಹಾಜರಾಗಿ ಚಾಲಕ ರವಿ ಬಸ್ ಓಡಿಸುತ್ತಿದ್ದ. ಸಾರಿಗೆ ಸಂಸ್ಥೆ ಬಸ್ ಕಲಬುರಗಿಯಿಂದ ಯಾದಗಿರಿಗೆ ಹೊರಟಿತ್ತು. ಈ ವೇಳೆ ಉದ್ರಿಕ್ತ ಮೂವರು ಎನ್‍ಈಕೆಆರ್ ಟಿಸಿ ಚಾಲಕರಿಂದ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ. ಕಲ್ಲು ತೂರಾಟ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಮೂವರು ಚಾಲಕರನ್ನು ಬಂಧಿಸಲಾಗಿದೆ.

    ಸೇಡಂ ಡಿಪೋದ ವಿಶ್ವನಾಥ್ ಚೌವ್ಹಾಣ್, ಚಿತ್ತಾಪುರ ಡಿಪೋದ ಬಸವರಾಜ್ ಜಾಧವ್ ಮತ್ತು ಅಶೋಕ್ ಮೇಲಕೇರಿ ಬಂಧನಕ್ಕೊಳಗಾದವರು. ಚಾಲಕ ರವಿ ಬೆರಳಿಗೆ ಗಂಭೀರ ಗಾಯವಾಗಿದೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸುಪ್ರೀಂ ಕೋರ್ಟ್‍ನ ಶೇ.50ರಷ್ಟು ಸಿಬ್ಬಂದಿಗೆ ಕೊರೊನಾ

    ಸುಪ್ರೀಂ ಕೋರ್ಟ್‍ನ ಶೇ.50ರಷ್ಟು ಸಿಬ್ಬಂದಿಗೆ ಕೊರೊನಾ

    ನವದೆಹಲಿ: ಭಾರತದಾದ್ಯಂತ ಹೆಚ್ಚಾಗುತ್ತಿರುವ ಕೊರೊನಾ ಇದೀಗ ಸುಪ್ರೀಂಕೋರ್ಟ್ ಸಿಬ್ಬಂದಿಯನ್ನೂ ಬಿಟ್ಟಿಲ್ಲ. ಸುಪ್ರೀಂ ಕೋರ್ಟ್ ಸಿಬ್ಬಂದಿಗೆ ನಡೆಸಿದ ಕೊರೊನಾ ಪರೀಕ್ಷೆಯಲ್ಲಿ ಶೇ.50ರಷ್ಟು ಮಂದಿಗೆ ಪಾಸಿಟಿವ್ ಬಂದಿದೆ.

    ಇದೀಗ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆಗಳನ್ನು ಮನೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗುತ್ತಿದೆ. ಅಲ್ಲದೇ ಕೋರ್ಟ್ ಆವರಣ ಹಾಗೂ ಕೋರ್ಟ್ ಕೊಠಡಿಗಳಿಗೆ ಸ್ಯಾನಿಟೈಸ್ ಮಾಡಿಸಲಾಗುತ್ತಿದೆ.

    ಶನಿವಾರ ಪರೀಕ್ಷೆಗೆ ಒಳಗಾದ 90 ಸಿಬ್ಬಂದಿಯಲ್ಲಿ 44 ಮಂದಿಗೆ ಕೋವಿಡ್-19 ಪಾಸಿಟಿವ್ ಬಂದಿದ್ದು, ಕೆಲವು ನ್ಯಾಯಾಧೀಶರಲ್ಲಿ ಆತಂಕವನ್ನುಂಟು ಮಾಡಿದೆ. ಆದರೆ ಈ ಬಗ್ಗೆ ಆತಂಕಗೊಳ್ಳುವ ಅಗತ್ಯವೇನಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಹೆಚ್ಚಿನ ಸಿಬ್ಬಂದಿ ಹಾಗೂ ಕಾನೂನು ಗುಮಾಸ್ತರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿಂದೆ ಕೆಲವು ನ್ಯಾಯಾಧೀಶರಿಗೂ ಕೊರೊನಾ ಸೋಂಕು ಧೃಡಪಟ್ಟಿತ್ತು. ಇದೀಗ ಚೇತರಿಸಿಕೊಂಡಿದ್ದಾರೆ ಎಂದು ನ್ಯಾಯಾಧೀಶರೊಬ್ಬರು ಪ್ರತಿಕ್ರಿಯಿಸಿದ್ದಾರೆ.

  • ಉತ್ತರ ಕನ್ನಡ ಸಾರಿಗೆ ನೌಕರರಿಗೆ ವರ್ಗಾವಣೆ ಶಿಕ್ಷೆ

    ಉತ್ತರ ಕನ್ನಡ ಸಾರಿಗೆ ನೌಕರರಿಗೆ ವರ್ಗಾವಣೆ ಶಿಕ್ಷೆ

    – ಕರ್ತವ್ಯಕ್ಕೆ ಹಾಜರಾಗದ್ದಕ್ಕೆ ವರ್ಗಾವಣೆ

    ಕಾರವಾರ: ಕಳೆದ ನಾಲ್ಕು ದಿನಗಳಿಂದ ಸಾರಿಗೆ ನೌಕರರ ಪ್ರತಿಭಟನೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿಲ್ಲ. ಇಂತಹ ಸಾರಿಗೆ ಸಿಬ್ಬಂದಿಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ.

    ಉತ್ತರ ಕನ್ನಡ ಜಿಲ್ಲೆಯಿಂದ 40 ಸಾರಿಗೆ ನೌಕರರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಸಾರ್ವಜನಿಕ ಹಿತಾಸಕ್ತಿ ಹಾಗೂ ಆಡಳಿತಾತ್ಮಕ ಕಾರಣ ನೀಡಿ ಇಂದು ವರ್ಗಾವಣೆ ಮಾಡಲಾಗಿದೆ.

    ವಾಯುವ್ಯ ಸಾರಿಗೆ ವಿಭಾಗದ ಹುಬ್ಬಳ್ಳಿ ವ್ಯವಸ್ಥಾಪಕ ನಿರ್ದೇಶಕರು ವರ್ಗಾವಣೆ ಆದೇಶ ನೀಡಿದ್ದು, 10 ತಾಂತ್ರಿಕ ಸಿಬ್ಬಂದಿ, 30 ಚಾಲಕ, ನಿರ್ವಾಕರು ಸೇರಿ ಒಟ್ಟು 40 ಸಿಬ್ಬಂದಿಯನ್ನು ವಿವಿಧ ಡಿಫೋದಿಂದ ಬೇರೆ ಡೀಪೋಗಳಿಗೆ ವರ್ಗಾವಣೆ ಮಾಡಲಾಗಿದೆ.

  • ಕೋವಿಡ್ ಟೆಸ್ಟ್ ಮಾಡದೆ ಸಾಮಗ್ರಿಗಳ ವ್ಯರ್ಥ- ಇಬ್ಬರು ಆರೋಗ್ಯ ಸಿಬ್ಬಂದಿ ಅಮಾನತು

    ಕೋವಿಡ್ ಟೆಸ್ಟ್ ಮಾಡದೆ ಸಾಮಗ್ರಿಗಳ ವ್ಯರ್ಥ- ಇಬ್ಬರು ಆರೋಗ್ಯ ಸಿಬ್ಬಂದಿ ಅಮಾನತು

    ಬೆಂಗಳೂರು: ಕೋವಿಡ್ ಟೆಸ್ಟ್ ಮಾಡದೆ ಸಾಮಗ್ರಿಗಳನ್ನು ವ್ಯರ್ಥ ಮಾಡುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಆರೋಗ್ಯ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

    ಯಲಹಂಕ ವಲಯದ ಕೊಡಿಗೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಟೆಸ್ಟ್ ಮಾಡದೆ ಟೆಸ್ಟಿಂಗ್ ಸಾಮಗ್ರಿಗಳನ್ನು ವ್ಯರ್ಥ ಮಾಡುತ್ತಿದ್ದರು. ಅಲ್ಲದೆ ಹೆಚ್ಚು ಟೆಸ್ಟ್ ಮಾಡಿದಂತೆ ಲೆಕ್ಕ ನೀಡುತ್ತಿದ್ದರು. ಈ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.

    ದೃಶ್ಯಾವಳಿ ಗಮನಿಸಿದ ಆಧಾರದ ಮೇಲೆ ಇಬ್ಬರು ಸ್ವಾಬ್ ಕಲೆಕ್ಟರ್ ಗಳನ್ನು ಅಮಾನತು ಮಾಡಲಾಗಿದೆ. ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳನ್ನು ನಿರೀಕ್ಷಣಾ ವಿಚಾರಣೆ ಬಳಿಕ ಕಡ್ಡಾಯವಾಗಿ ಅಮಾನತುಗೊಳಿಸುವಂತೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಆದೇಶ ಹೊರಡಿಸಿದ್ದಾರೆ.

    ನಗರದ ಆಡುಗೋಡಿ ಔಷಧಾಲಯಕ್ಕೆ ಮುಖ್ಯ ಆಯುಕ್ತರು ಇಂದು ಬೆಳಗ್ಗೆ ಭೇಟಿ ನೀಡಿ ಕೋವಿಡ್ ಪರೀಕ್ಷೆ ಹಾಗೂ ಲಸಿಕೆ ನೀಡುವ ಪ್ರಕ್ರಿಯೆಯನ್ನು ಪರಿಶೀಲನೆ ನಡೆಸಿದು. ಈ ವೇಳೆ ಲಸಿಕೆ ಪಡೆಯಲು ಬಂದ ನಾಗರಿಕರ ಜೊತೆ ಮಾತನಾಡಿ, ಲಸಿಕೆ ನೀಡುವ ಬಗ್ಗೆ ಹಾಗೂ ಪಡೆದ ನಂತರ ಅಭಿಪ್ರಾಯ ಪಡೆದರು. 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದ್ದು, ಪ್ರಮುಖವಾಗಿ 60 ವರ್ಷ ಮೇಲ್ಪಟ್ಟವರಿಗೆ ಬೇಗ ಲಸಿಕೆ ಪಡೆಯಲು ತಿಳಿಸಿ ಎಂದು ಮನವಿ ಮಾಡಿದರು.

    ವ್ಯಾಕ್ಸಿನೇಷನ್ ಗಾಗಿ ನಗರದಲ್ಲಿ ಸುಮಾರು 500 ಸೈಟ್‍ಗಳಿದ್ದು, ಪ್ರತಿ ಸೈಟ್‍ನಲ್ಲಿಯೂ ಕನಿಷ್ಟ 100 -150 ವ್ಯಾಕ್ಸಿನೇಷನ್ ನೀಡುವ ಗುರಿ ಹೊಂದಲಾಗಿದೆ. ಅಲ್ಲದೆ ಈಗಿರುವ ಸೈಟ್ ಗಳ ಜೊತೆಗೆ ಹೆಚ್ಚುವರಿಯಾಗಿ ಅಗತ್ಯವಿರುವ ಕಡೆ ಸೈಟ್ ಗಳನ್ನು ತೆರೆದು ಹೆಚ್ಚು ವ್ಯಾಕ್ಸಿನೇಷನ್ ನೀಡಲು ಪಾಲಿಕೆ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಲಸಿಕೆ ಪಡೆಯುವವರಿಗೆ ಅವಶ್ಯಕವಿರುವ ಕಡೆ ವಾಹನಗಳ ವ್ಯವಸ್ಥೆಯನ್ನೂ ಅಯಾ ವಲಯ ಆಯುಕ್ತರ ಮಟ್ಟದಲ್ಲಿ ಮಾಡಲಾಗುವುದು ಎಂದರು.

    ಬಾಷ್ ಸಂಸ್ಥೆ ಸಹಭಾಗಿತ್ವದಲ್ಲಿ ಕೋವಿಡ್ ಆರೈಕೆ ಕೇಂದ್ರವನ್ನು ಸ್ಥಾಪಿಸಿದ್ದು, ಇದನ್ನು ಪಾಲಿಕೆಗೆ ಪಡೆಯಲಿದ್ದೇವೆ. ಈ ಸಂಬಂಧ ಬಾಷ್ ಸಂಸ್ಥೆ ಹಾಗೂ ಪಾಲಿಕೆ ಜೊತೆ ಚರ್ಚೆ ನಡೆಯುತ್ತಿದ್ದು, ಕೋವಿಡ್ ಆರೈಕೆ ಕೇಂದ್ರ ಪ್ರಾರಂಭಿಸಲು ಇನ್ನೆರಡು ದಿನದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಆಯುಕ್ತರು ರವರು ತಿಳಿಸಿದರು.

    ನಗರದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಎಲ್ಲ ವಲಯಗಳಲ್ಲಿ ಸುಮಾರು 50 ಹಾಸಿಗೆ ಸಾಮಥ್ರ್ಯದ 2 ಅಥವಾ 3 ಕೋವಿಡ್ ಆರೈಕೆ ಕೇಂದ್ರಗಳನ್ನು ಶೀಘ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಸಣ್ಣ ಪ್ರಮಾಣದ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಿ ಮನೆಯಲ್ಲಿ ಪ್ರತ್ಯೇಕವಾಗಿರಲು ಸಾಧ್ಯವಾಗದಂತಹ ಸೋಂಕಿತರನ್ನು ಆರೈಕೆ ಕೇಂದ್ರಗಳಲ್ಲಿರಿಸಿ, ಚಿಕಿತ್ಸೆ ನೀಡಿ, ಆರೈಕೆ ಮಾಡಲಾಗವುದು ಎಂದರು.

    ಕೋರಮಂಗಲದ ಫೋರಂ ಮಾಲ್ ಹತ್ತಿರವಿರುವ ಪ್ರೆಸ್ಟೀಜ್ ಅಪಾರ್ಟ್‍ಮೆಂಟ್ ನಲ್ಲಿನ ಟೆಸ್ಟಿಂಗ್ ಕಾರ್ಯ ವೀಕ್ಷಿಸಿದರು. ಅಪಾರ್ಟ್‍ಮೆಂಟ್ ನ ಪದಾಧಿಕಾರಿಗಳೊಂದಿಗೆ ಮಾತನಾಡಿ, ಎಲ್ಲರೂ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಕೋರಿದರು.