Tag: staff

  • ಅರಣ್ಯ ಇಲಾಖೆ ಕಚೇರಿ ಮುಂದೆಯೇ ಬರ್ಬರವಾಗಿ ಸಿಬ್ಬಂದಿ ಕೊಲೆಗೈದ ದುಷ್ಕರ್ಮಿಗಳು!

    ಅರಣ್ಯ ಇಲಾಖೆ ಕಚೇರಿ ಮುಂದೆಯೇ ಬರ್ಬರವಾಗಿ ಸಿಬ್ಬಂದಿ ಕೊಲೆಗೈದ ದುಷ್ಕರ್ಮಿಗಳು!

    ಬೀದರ್: ಅರಣ್ಯ ಇಲಾಖೆ ಕಚೇರಿ ಮುಂದೆಯೇ ರಾಡ್ ಮತ್ತು ಕಟ್ಟಿಗೆಯಿಂದ ಹೊಡೆದು ಓರ್ವ ಸಿಬ್ಬಂದಿಯನ್ನು ಬರ್ಬರವಾಗಿ ಕೊಲೆಗೈದ ಘಟನೆ ಬೀದರ್ ತಾಲೂಕಿನ ಶಾಪೂರ್ ಸಮೀಪದಲ್ಲಿ ನಡೆದಿದೆ.

    ಶಾಪೂರ್ ಸಮೀಪ ಅರಣ್ಯ ಇಲಾಖೆಯ ಪ್ರಭು (61) ಕೊಲೆಯಾದ ಸಿಬ್ಬಂದಿ. ದುಷ್ಕರ್ಮಿಗಳು ಇಂದು ಬೆಳಗ್ಗೆ ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಆದರೆ ಕೊಲೆಗೆ ಸೂಕ್ತ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಭು ಅವರು ಈ ಹಿಂದೆ ಪಶು ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದರು. ಬಳಿಕ ಗುತ್ತಿಗೆ ಆಧಾರದ ಮೇಲೆ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದರು. ಘಟನಾ ಸ್ಥಳದಲ್ಲಿ ಮೃತ ಪ್ರಭು ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.

    ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಮಾರ್ಕೆಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಎಸ್‍ಪಿ ಶ್ರೀಧರ್ ಅವರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಆನೇಕಲ್‍ನಲ್ಲಿ ಅನಾಥ ಮಕ್ಕಳ ರಕ್ಷಣೆ

    ಆನೇಕಲ್‍ನಲ್ಲಿ ಅನಾಥ ಮಕ್ಕಳ ರಕ್ಷಣೆ

    ಬೆಂಗಳೂರು: ಪುಟ್ಟಪುಟ್ಟ ಮಕ್ಕಳು ತಂದೆ-ತಾಯಿ ನೆರಳಿನಲ್ಲಿ ಆಟವಾಡುತ್ತಾ ಕಾಲ ಕಳಿಬೇಕಿತ್ತು. ಕೈ ತುತ್ತು ಕೊಡೋ ಅಮ್ಮ ಒಂದು ತಿಂಗಳಿಂದ ನಾಪತ್ತೆ ಇನ್ನು ತಂದೆ ಇದ್ದು ಇಲ್ಲದಂತಾಗಿದ್ದ ಇಂತಹ ಮಕ್ಕಳಿಗೆ ಇನ್ಯಾರು ಗತಿ ಅನ್ನೋ ಸಮಯಕ್ಕೆ ಆ ಮಕ್ಕಳ ಬಾಳಿಗೆ ಗ್ರಾಮಸ್ಥರು ಪಬ್ಲಿಕ್ ಟಿವಿಯ ಬಳಿ ಸಹಾಯ ಕೊರಿದ್ದಾರೆ.

    ಕಳೆದ 10 ವರ್ಷಗಳ ಹಿಂದೆ ದೂರದ ನೇಪಾಳದಿಂದ ಬಿಜೆಶ್ ದಂಪತಿ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ತಿರುಮಗೊಂಡಹಳ್ಳಿ ಗ್ರಾಮಕ್ಕೆ ವಲಸೆ ಬಂದಿದ್ರು. ಇಲ್ಲಿ ಕೂಲಿ-ನಾಲಿ ಮಾಡುತ್ತಾ ಬದುಕು ಕಟ್ಟಿಕೊಂಡಿದ್ರು. ಈ ದಂಪತಿಗೆ ಮುದ್ದಾದ ನಾಲ್ಕು ಮಕ್ಕಳು ಹುಟ್ಟಿದ್ದು ಬಂದ ಹಣದಲ್ಲಿ ಸಂಸಾರ ನಡೆಸುತ್ತಿದ್ದರು.

    ಆದ್ರೆ ಇತ್ತೀಚೆಗೆ ಈ ಮಕ್ಕಳ ತಂದೆ ಕುಡುಕನಾಗಿದ್ದನು. ದಿನಾ ಕುಡಿದು ಹೆಂಡತಿಗೆ ಹೊಡೆಯುತ್ತಿದ್ದನು. ಇದರಿಂದ ಗಂಡನ ಹಿಂಸೆ ತಾಳಲಾರದೆ ಕಳೆದ ಒಂದು ತಿಂಗಳ ಹಿಂದೆ ಗಂಡ ಹಾಗೂ ಮಕ್ಕಳನ್ನು ಬಿಟ್ಟು ಹೋಗಿದ್ದಾಳೆ. ಇತ್ತ ತಾಯಿಯನ್ನು ಬಿಟ್ಟ ಮಕ್ಕಳನ್ನು ನೋಡಿಕೊಳ್ಳಬೇಕಾದ ತಂದೆ ಕುಡಿದು ಎಲ್ಲಂದರಲ್ಲಿ ಬಿದ್ದಿರುತ್ತಿದ್ದನು. ಈ ಸಮಯದಲ್ಲಿ ಗ್ರಾಮಸ್ಥರು ಮಕ್ಕಳಿಗೆ ಊಟ ತಿಂಡಿ ಜಾಗ ಕೊಟ್ಟು ನೋಡಿಕೊಂಡಿದ್ದರು. ಎಷ್ಟು ದಿನಾ ಅಂತ ಈ ಮಕ್ಕಳನ್ನ ನೋಡಿಕೊಳ್ಳೋದು ಅಂತಿದ್ದ ಗ್ರಾಮಸ್ಥರು ಕೊನೆಗೆ ಪಬ್ಲಿಕ್ ಟಿವಿಗೆ ಕರೆಮಾಡಿ ಸಹಾಯ ಕೇಳಿದ್ದರು. ಸ್ಥಳಕ್ಕೆ ಭೇಟಿ ಕೊಟ್ಟ ಪಬ್ಲಿಕ್ ಟಿವಿ ಸಿಬ್ಬಂದಿ ಮಕ್ಕಳನ್ನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕಳುಹಿಸಲು ತೀರ್ಮಾನಿಸಿ ಇಲಾಖೆಗೆ ಮಾಹಿತಿ ನೀಡಿದ್ರು.


    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕೇಂದ್ರದಿಂದ ಬಂದಿದ್ದ ಅಧಿಕಾರಿಗಳು ನಾಲ್ಕು ಮಕ್ಕಳನ್ನು ತಮ್ಮ ವಶಕ್ಕೆ ಪಡೆದು ಮಕ್ಕಳನ್ನು ಬೆಂಗಳೂರಿನ ಡೈರಿ ಸರ್ಕಲ್ ನಲ್ಲಿರುವ ಬಾಲಮಂದಿರಕ್ಕೆ ಕರೆದೊಯ್ದರು. ಇನ್ನು ಗ್ರಾಮಸ್ಥರು ಮಕ್ಕಳ ಯೋಗಕ್ಷೇಮದ ಬಗ್ಗೆ ಅಧಿಕಾರಿಗಳನ್ನು ತೀವ್ರ ವಿಚಾರಿಸಿದ್ದು ಕೊನೆಗೆ ಎಲ್ಲ ರೀತಿಯ ವ್ಯವಸ್ಥೆ ಇದೆ ಎಂಬ ನಂಬಿಕೆ ಬಂದ ನಂತರ ಮಕ್ಕಳನ್ನು ಅಧಿಕಾರಿಗಳಿಗೆ ಒಪ್ಪಿಸಿದರು. ಇನ್ನು ಮಕ್ಕಳನ್ನು ವಶಕ್ಕೆ ಪಡೆದ ಅಧಿಕಾರಿ ಮಕ್ಕಳನ್ನು ಸದ್ಯ ಬಾಲಮಂದಿರದಲ್ಲಿ ಇಟ್ಟು ಅವರಿಗೆ 18 ವರ್ಷ ವಯಸ್ಸಾಗುವವರೆಗೂ ಉಚಿತ ಶಿಕ್ಷಣ ಹಾಗೂ ವಸತಿ ನೀಡಲಾಗುವುದು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಸಿಬಿ ಕಚೇರಿಯಲ್ಲಿ ಸಿಬ್ಬಂದಿಗೆ ಅಲೋಕ್ ಕುಮಾರ್ ಫುಲ್ ಕ್ಲಾಸ್!

    ಸಿಸಿಬಿ ಕಚೇರಿಯಲ್ಲಿ ಸಿಬ್ಬಂದಿಗೆ ಅಲೋಕ್ ಕುಮಾರ್ ಫುಲ್ ಕ್ಲಾಸ್!

    ಬೆಂಗಳೂರು: ನಗರದ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಭೇಟಿ ನೀಡಿದ ಖಡಕ್ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಸಿಬ್ಬಂದಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಕಚೇರಿಗೆ ಇಂದು ದಿಢೀರ್ ಭೇಟಿ ನೀಡಿದ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಲಾಗ್ ಬುಕ್ ಪರಿಶೀಲನೆ ಮಾಡಿದರು. ಅದರಲ್ಲಿ ಕಚೇರಿಗೆ ಬಂದ ವ್ಯಕ್ತಿಗಳ ಹೆಸರು, ಭೇಟಿಯ ಉದ್ದೇಶ ನಮೂದಿಸಿರಲಿಲ್ಲ. ಜೊತೆಗೆ ಸರಿಯಾಗಿ ಮಾಹಿತಿ ಕೂಡ ಇರಲಿಲ್ಲ. ಇದರಿಂದ ಕೋಪಗೊಂಡ ಅವರು ಕಚೇರಿಗೆ ಯಾರು ಬಂದಿದ್ದರು? ಯಾರನ್ನು ಭೇಟಿ ಮಾಡಲು ಹಾಗೂ ಯಾವ ಉದ್ದೇಶಕ್ಕಾಗಿ ಬಂದಿದ್ದರು ಅಂತಾ ಲಾಗ್‍ಬುಕ್‍ನಲ್ಲಿ ದಾಖಲಾಗಬೇಕು ಎನ್ನುವ ನಿಯಮ ಇದ್ದರೂ ಯಾಕೆ ನಮೂದು ಮಾಡಿಲ್ಲ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

    ಹೊಸ ವ್ಯವಸ್ಥೆಗೆ ಬದಲಾಗಿ ಎಂದು ನಾನು ಅಂದೇ ಹೇಳಿದ್ದೆ. ಆದರೆ ನೀವು ಇನ್ನೂ ಹಳೆ ವ್ಯವಸ್ಥೆಯಲ್ಲೇ ಇದ್ದೀರಿ. ಕಚೇರಿಗೆ ಬಂದ ಎಲ್ಲರೂ ಅಫೀಶಿಯಲ್ ಅಂತಾ ಬರೆದಿದ್ದಾರೆ. ಲಾಗ್ ಬುಕ್‍ನಲ್ಲಿ ಇರುವವರು ಯಾರು ಎಂದು ಪ್ರಶ್ನಿಸಿ ಸಿಬ್ಬಂದಿಗೆ ತರಾಟೆ ತೆಗೆದುಕೊಂಡರು. ಕೂಡಲೇ ಸಿಸ್ಟಮ್ ಬದಲಾಗಬೇಕು ಎಂದು ಸಿಸಿಬಿ ಕಚೇರಿ ಉಸ್ತುವಾರಿ ಎಸಿಪಿ ಅವರಿಗೆ ಖಡಕ್ ಎಚ್ಚರಿಕೆ ಕೊಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಳ್ಳಾರಿ ಉಪಚುನಾವಣೆ- ಇಬ್ಬರ ದುರ್ಮರಣ

    ಬಳ್ಳಾರಿ ಉಪಚುನಾವಣೆ- ಇಬ್ಬರ ದುರ್ಮರಣ

    ಬಳ್ಳಾರಿ: ಉಪಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಚುನಾವಣಾ ಕಾರ್ಯಕ್ಕೆ ನೇಮಕವಾಗಿದ್ದ ಹೆಚ್ಚುವರಿ ಸಿಬ್ಬಂದಿ ಮೃತಪಟ್ಟರೆ, ಇನ್ನೊಬ್ಬರು ಮತದಾನ ಮಾಡಿ ಬಂದು ಸಾವನ್ನಪ್ಪಿದ್ದಾರೆ.

    ಮೃತ ದುರ್ದೈವಿಗಳನ್ನು ವೈ.ಎಂ ಮಂಜುನಾಥ್(50) ಹಾಗೂ ಬಂಡಿ ನಾರಾಯಣಪ್ಪ (70) ಎಂದು ಗುರುತಿಸಲಾಗಿದೆ. ಅನಾರೋಗ್ಯದಿಂದ ಮಂಜುನಾಥ್ ಅವರು ಬಳ್ಳಾರಿ ಜಿಲ್ಲೆ ಕುರುಗೋಡು ಗ್ರಾಮದಲ್ಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ, ಬಳ್ಳಾರಿ, ಮಂಡ್ಯ ಉಪಚುನಾವಣೆಯ ವಿವರ

    ಇಂದು ಉಪಚುನಾವಣೆ ನಡೆಯುತ್ತಿರೋ ಹಿನ್ನೆಲೆಯಲ್ಲಿ ಮಂಜುನಾಥ್ ಅವರು ಹೊಸಪೇಟೆಯ ಆಕಾಶವಾಣಿ ಪ್ರದೇಶದಲ್ಲಿ 132ಂ ಬೂತ್ ಗೆ ನಿಯೋಜನೆ ಆಗಿದ್ದರು. ಆದ್ರೆ ಶುಕ್ರವಾರ ಮಸ್ಟರಿಂಗ್ ಸೆಂಟರ್ ನಲ್ಲಿ ಮಂಜುನಾಥ್ ಅವರ ಆರೋಗ್ಯ ಪರಿಸ್ಥಿತಿ ಗಮನಿಸಿದ ಹೊಸಪೇಟೆ ಎ.ಸಿ.ಲೋಕೇಶ್ ಹೆಚ್ಚುವರಿ ಸಿಬ್ಬಂದಿಯಾಗಿ ನಿಯೋಜಿಸಿ ಮನೆಗೆ ಕಳುಹಿಸಿದ್ದರು. ಆದ್ರೆ ಮಂಜುನಾಥ್ ಅವರು ರಾತ್ರಿ ಮನೆಯಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಇವರು ಕುರುಗೊಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ರಾಮನಗರ, ಜಮಖಂಡಿ ಉಪಚುನಾವಣಾ ಕ್ಷೇತ್ರದ ವಿವರ

    ಬಂಡಿ ನಾರಾಯಣಪ್ಪ ಎಂಬವರು ಹೊಸಪೇಟೆಯ 7 ನೇ ವಾರ್ಡ್, ಅನಂತಶಯನ ಗುಡಿ ಏರಿಯಾದ ಪಂಡರಾಪುರ ಕಾಲೋನಿ ಹತ್ತಿರ ಬೂತ್ ಸಂಖ್ಯೆ 22 ರಲ್ಲಿ ಮತದಾನ ಮಾಡಿ ಬಂದು ಮನೆಯಲ್ಲಿ ಮೃತಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಟೋಲ್ ಬಂದ್ ಮಾಡಿ ಹುಟುಹಬ್ಬ ಆಚರಿಸಿಕೊಂಡ ಸಿಬ್ಬಂದಿ!

    ಟೋಲ್ ಬಂದ್ ಮಾಡಿ ಹುಟುಹಬ್ಬ ಆಚರಿಸಿಕೊಂಡ ಸಿಬ್ಬಂದಿ!

    ಬೆಂಗಳೂರು: ಟೋಲ್ ಎಂದಾಕ್ಷಣ ಅಲ್ಲಿ ದಾದಾಗಿರಿ, ಗೂಂಡಾಗಿರಿ, ಟ್ರಾಫಿಕ್ ಜಾಮ್ ಇನ್ನಿತರ ಸಮಸ್ಯೆಯಿಂದ ವಾಹನ ಸವಾರರು ಹೈರಾಣಗಿರುತ್ತಾರೆ. ಆದರೆ ಇವೆಲ್ಲವನ್ನ ಮೆಟ್ಟಿನಿಲ್ಲುವಂತೆ ಟೋಲ್ ಸಿಬ್ಬಂದಿಯೊಬ್ಬರ ಹುಟ್ಟು ಹಬ್ಬ ಆಚರಿಸಲು ಟೋಲ್ ಗೇಟ್ ದುರ್ಬಳಕೆ ಮಾಡಿಕೊಳ್ಳಲಾಗಿದೆ.

    ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ನವಯುಗ ಟೋಲ್ ಸಿಬ್ಬಂದಿ ಟೋಲ್‍ಗೇಟ್ ದುರ್ಬಳಕೆ ಮಾಡಿಕೊಂಡಿರುವ ಘಟನೆ ನೆಲಮಂಗಲ ಪಟ್ಟಣದಲ್ಲಿ ನಡೆದಿದೆ. ಸಿಬ್ಬಂದಿ ಗಂಗರಾಜು ಎಂಬವರು ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ನವಯುಗ ಟೋಲ್‍ನಲ್ಲಿ ಸಿಬ್ಬಂದಿಯ ಹುಟ್ಟುಹಬ್ಬ ಆಚರಿಸಲು ಒಂದು ಟೋಲ್ ಲೈನ್ ಕ್ಲೋಸ್ ಮಾಡಿದ್ದಾರೆ.

    ಸುಮಾರು ಒಂದು ಗಂಟೆಗಳ ಕಾಲ ಟೋಲ್ ಬಂದ್ ಮಾಡಿ ಸಿಬ್ಬಂದಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಟೋಲ್ ಸಿಬ್ಬಂದಿಗಳ ನಡೆಗೆ ವಾಹನ ಸವಾರರು ಬೇಸರ ವ್ಯಕ್ತಪಡಿಸಿದ್ದು, ಸಿಬ್ಬಂದಿಯ ಈ ನಡೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಾರಿ ಬಿಡದಿದ್ದಕ್ಕೆ ಬೆಸ್ಕಾಂ ಸಿಬ್ಬಂದಿ ಗೂಂಡಾಗಿರಿ- ಓಮ್ನಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿತ

    ದಾರಿ ಬಿಡದಿದ್ದಕ್ಕೆ ಬೆಸ್ಕಾಂ ಸಿಬ್ಬಂದಿ ಗೂಂಡಾಗಿರಿ- ಓಮ್ನಿ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿತ

    ಬೆಂಗಳೂರು: ದಾರಿ ಬಿಡಲಿಲ್ಲಾ ಅಂತಾ ಓಮ್ನಿ ಚಾಲಕನೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿ ಬೆಸ್ಕಾಂ ಸಿಬ್ಬಂದಿ ಗೂಂಡಾಗಿರಿ ಮೆರೆದ ಘಟನೆ ನಗರದ ವೀರಪ್ಪನರೆಡ್ಡಿ ಪಾಳ್ಯದಲ್ಲಿ ನಡೆದಿದೆ.

    ಪ್ರದೀಪ್ ಹಲ್ಲೆಗೆ ಒಳಗಾದ ಓಮ್ನಿ ಚಾಲಕ. ಪ್ರವೀಣ್ ಬೆಳ್ಳಂದೂರಿನ ಐಟಿ ಉದ್ಯೋಗಿಗಳನ್ನು ಡ್ರಾಪ್ ಮಾಡಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಬೆಸ್ಕಾಂ ಮೂವರು ಸಿಬ್ಬಂದಿ ಈ ಕೃತ್ಯ ಎಸಗಿದ್ದು, ಸ್ಥಳದಲ್ಲಿಯೇ ವ್ಯಕ್ತಿಯೊಬ್ಬರು ಮೊಬೈಲ್‍ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ.

    ಬೆಳ್ಳಂದೂರು ಸ್ಟೇಷನ್‍ನಲ್ಲಿ ವಿದ್ಯುತ್ ಕಂಬದ ರಿಪೇರಿಗೆ ಬೆಸ್ಕಾಂ ಸಿಬ್ಬಂದಿ ಬಂದಿದ್ದರು. ಹೀಗೆ ಕೆಲಸ ಮುಗಿಸಿ ಮರಳುತ್ತಿದ್ದಾಗ ಮುಂದೆ ಚಲಿಸುತ್ತಿದ್ದ ಓಮ್ನಿಯವನಿಗೆ ದಾರಿ ಬಿಡುವಂತೆ ಹಾರ್ನ್ ಹಾಕಿದ್ದಾರೆ. ಪಕ್ಕದಲ್ಲಿ ದಾರಿ ಇದ್ದರೂ ಹಾರ್ನ್ ಮಾಡಿದ್ದಕ್ಕೆ, ಚಾಲಕ ಪ್ರದೀಪ್ ನೀವೇ ಪಕ್ಕದಲ್ಲಿ ಹೋಗಿ ಅಂತಾ ಹೇಳಿದ್ದಾನೆ.

    ಪ್ರದೀಪ್ ಹೇಳಿದ್ದಕ್ಕೆ ಕೋಪಗೊಂದ ಬೆಸ್ಕಾಂ ಸಿಬ್ಬಂದಿ ಓಮ್ನಿಯನ್ನು ತಡೆದು ನಿಲ್ಲಿಸಿದ್ದಾರೆ. ಬಳಿಕ ಪ್ರದೀಪ್ ಜೊತೆಗೆ ವಾಗ್ವಾದಕ್ಕೆ ಇಳಿದ ಮೂವರು, ಆತನನ್ನು ಹೊರಗೆ ಎಳೆದುಕೊಂಡು ಮನಬಂದಂತೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬೆಸ್ಕಾಂ ಸಿಬ್ಬಂದಿಯ ಕೃತ್ಯದಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/1qMWps-DCis

  • ತಾಯಿಯನ್ನ ಹೊರಗೆ ನಿಲ್ಲಿಸಿ ಸರ್ಕಾರಿ ಆಸ್ಪತ್ರೆಯಲ್ಲೇ 11ರ ಬಾಲಕಿ ಮೇಲೆ ರೇಪ್

    ತಾಯಿಯನ್ನ ಹೊರಗೆ ನಿಲ್ಲಿಸಿ ಸರ್ಕಾರಿ ಆಸ್ಪತ್ರೆಯಲ್ಲೇ 11ರ ಬಾಲಕಿ ಮೇಲೆ ರೇಪ್

    ನವದೆಹಲಿ: 11 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಸರ್ಕಾರಿ ಆಸ್ಪತ್ರೆಯಲ್ಲಿಯೇ ಸಿಬ್ಬಂದಿ ಅತ್ಯಾಚಾರ ಮಾಡಿರುವ ಘಟನೆ ಶುಕ್ರವಾರ ದೆಹಲಿಯಲ್ಲಿ ನಡೆದಿದೆ.

    ಸೆಪ್ಟೆಂಬರ್ 13 ರಂದು ರೋಹಿಣಿಯ ಇಎಸ್‍ಐ ಆಸ್ಪತ್ರೆಗೆ ಸಂತ್ರಸ್ತೆ ಚಿಕಿತ್ಸೆಗೆಂದು ದಾಖಲಾಗಿದ್ದಳು. ಅಂದಿನಿಂದಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆರೋಪಿ ಆಸ್ಪತ್ರೆಯ ಸಿಬ್ಬಂದಿಯಾಗಿದ್ದು, 40 ವರ್ಷದ ರಾಧೆ ಶ್ಯಾಮ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶುಕ್ರವಾರ ಮುಂಜಾನೆ ಸುಮಾರು 4.30ಕ್ಕೆ ಸಿಬ್ಬಂದಿ ರಾಧೆ ಶ್ಯಾಮ್, ವಾರ್ಡ್ ನಲ್ಲಿದ್ದ ಸಂತ್ರಸ್ತೆಯನ್ನು ಪಕ್ಕದ ಕೋಣೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ತಾಯಿಯನ್ನು ಹೊರಗೆ ನಿಲ್ಲಿಸಿ, ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಡಿಸಿಪಿ ರಾಜ್ನೀಶ್ ಗುಪ್ತಾ ತಿಳಿಸಿದ್ದಾರೆ.

    ಅತ್ಯಾಚಾರ ಮಾಡಿ ಈ ಬಗ್ಗೆ ಯಾರಿಗೂ ಹೇಳಬಾರದು ಎಂದು ಹೇಳಿ ಸಂತ್ರಸ್ತೆಯನ್ನು ಮೊದಲಿದ್ದ ಬೆಡ್ ಗೆ ಕರೆತಂದು ಮಲಗಿಸಿದ್ದಾನೆ. ಬಳಿಕ ತಾಯಿಯೂ ಹಿಂದಿರುಗಿ ಮಗಳ ಬಳಿ ಬಂದಿದ್ದಾರೆ. ಆಗ ತಾಯಿಗೆ ನಡೆದ ಘಟನೆಯ ಬಗ್ಗೆ ಸಂತ್ರಸ್ತೆ ಹೇಳಿದ್ದಾಳೆ. ನಂತರ ಸಂತ್ರಸ್ತೆಯ ಕುಟುಂಬವು ಪೊಲೀಸರಿಗೆ ಬೆಳಗ್ಗೆ 6 ಗಂಟೆಗೆ ಕರೆ ಮಾಡಿ ದೂರು ನೀಡಿದ್ದಾರೆ.

    ಮಾಹಿತಿ ತಿಳಿದ ಪೊಲೀಸರು ಆಸ್ಪತ್ರೆಗೆ ಬಂದು ರಾಧೆ ಶ್ಯಾಮ್ ನನ್ನು ಬಂಧಿಸಿದ್ದಾರೆ. ಸದ್ಯಕ್ಕೆ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಗುಪ್ತಾ ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಡಾಕ್ಟರ್ ಆದ್ರು ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ

    ಡಾಕ್ಟರ್ ಆದ್ರು ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ

    ಚಿಕ್ಕಮಗಳೂರು: ಗಣಪತಿ ವಿಸರ್ಜನೆ ವೇಳೆ ಗುಂಪು ಘರ್ಷಣೆಯಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಪೊಲೀಸರ ಯೋಗ ಕ್ಷೇಮ ವಿಚಾರಸಿದ ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ, ವೈದ್ಯರಂತೆ ತನ್ನ ಮೊಬೈಲ್‍ನಲ್ಲಿದ್ದ ಟಾರ್ಚ್ ಮೂಲಕ ಸಿಬ್ಬಂದಿಗಳಿಗೆ ಆದ ಪ್ರತಿಯೊಂದು ಸಣ್ಣ ಗಾಯವನ್ನೂ ನೋಡಿ ಪೊಲೀಸರಿಗೆ ಧೈರ್ಯ ಹೇಳಿದ್ದಾರೆ.

    ಮಂಗಳವಾರ ತರೀಕೆರೆಯಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಉಂಟಾದ ಗಲಭೆಯಿಂದ ಪೊಲೀಸರು ಹಾಗೂ ಜನಸಾಮಾನ್ಯರು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಗಲಭೆ ಜೋರಾಗುತ್ತಿದ್ದಂತೆ ಸ್ಥಳಕ್ಕೆ ಬಂದ ತಹಶೀಲ್ದಾರ್ ಧರ್ಮೋಜಿ ರಾವ್ ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದರು.

    ರಾತ್ರಿ ಸುಮಾರು 9 ಗಂಟೆ ವೇಳೆಗೆ ತರೀಕೆರೆಗೆ ಬಂದ ಎಸ್‍ಪಿ ಅಣ್ಣಾಮಲೈ ನಗರದಲ್ಲಿ ಗಸ್ತು ತಿರುಗಿ, ಠಾಣೆಯಲ್ಲಿ ಪೊಲೀಸರೊಂದಿಗೆ ಚರ್ಚೆ ನಡೆಸಿ ಘಟನೆ ವಿವರ ತಿಳಿದುಕೊಂಡಿದ್ದಾರೆ. ನಂತರ ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ಬಂದು ತನ್ನ ಸಿಬ್ಬಂದಿಯ ಯೋಗ ಕ್ಷೇಮ ವಿಚಾರಿಸಿ, ಧೈರ್ಯ ತುಂಬಿದ್ದಾರೆ.

    ನಡೆದಿದ್ದೇನು?
    ಮಂಗಳವಾರ ಸಂಜೆ ತರೀಕೆರೆಯ ಹಿಂದೂ ಮಹಾಸಭಾ ಗಣಪತಿಯನ್ನು ವಿಸರ್ಜನೆಗೆಂದು ಕೋಡಿಕ್ಯಾಂಪ್‍ನಲ್ಲಿ ಮೆರವಣಿಗೆ ಬರುವಾಗ ಎರಡು ಗುಂಪುಗಳ ನಡುವೆ ಉಂಟಾದ ಘರ್ಷಣೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಎರಡು ಗುಂಪುಗಳು ಪರಸ್ಪರ ಕಲ್ಲನ್ನು ತೂರಿಕೊಂಡಿದ್ದರು. ಪರಿಸ್ಥಿತಿ ಕೈಮೀರುವಂತಹ ಸ್ಥಿತಿ ನಿರ್ಮಾಣವಾಗಿದ್ದರಿಂದ ಪೊಲೀಸರು ಎರಡು ಬಾರಿ ಲಾಠಿ ಪ್ರಹಾರ ನಡೆಸಿದ್ದರು. ಈ ವೇಳೆ ಎರಡು ಗುಂಪಿನವರು ಹಾಗೂ ಗುಂಪು ಘರ್ಷಣೆಯಲ್ಲಿ ಪೊಲೀಸರಿಗೂ ಗಾಯಗಳಾಗಿದ್ದವು.

    ಸಂಜೆ ವೇಳೆಗೆ ನಗರ ಸೇರಿದಂತೆ ಕೋಡಿಕ್ಯಾಂಪ್ ಸುತ್ತಲೂ ಪೊಲೀಸರು ಸರ್ಪಗಾವಲಿದ್ದು ಯಾವುದೇ ಅಹಿತರಕರ ಘಟನೆ ನಡೆಯದಂತೆ ಬಂದೋಬಸ್ತ್ ಕಲ್ಪಿಸಿದ್ದರು. ಸಂಜೆ 6 ಗಂಟೆಯಿಂದಲೇ ನಗರ ಸಂಪೂರ್ಣ ಸ್ಥಬ್ಧವಾಗಿದ್ದು ಕೋಡಿಕ್ಯಾಂಪ್‍ನಲ್ಲಿ ಇಡೀ ರಾತ್ರಿ ಪೊಲೀಸರು ಗಸ್ತು ತಿರುಗಿದ್ದು, ಒಬ್ಬರೂ ನಿಲ್ಲದಂತೆ ಕಟ್ಟೆಚ್ಚರ ವಹಿಸಿದ್ದರು. 9 ಗಂಟೆ ಸುಮಾರಿಗೆ ತರೀಕೆರೆಗೆ ಬಂದ ಎಸ್‍ಪಿ ಅಣ್ಣಾಮಲೈ ಘಟನೆಯ ವಿವರ ತಿಳಿದುಕೊಂಡು, ಪೊಲೀಸರಿಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ, ನಂತರ ಆಸ್ಪತ್ರೆ ಸೇರಿದ್ದ ತನ್ನ ಸಿಬ್ಬಂದಿಗಳಿಗೆ ಸಾಂತ್ವಾನ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡಾಂಬರು ಡಬ್ಬಿಗೆ ಬಿದ್ದಿದ್ದ ನಾಯಿಯನ್ನು ರಕ್ಷಿಸಿದ ಸಿಬ್ಬಂದಿ

    ಡಾಂಬರು ಡಬ್ಬಿಗೆ ಬಿದ್ದಿದ್ದ ನಾಯಿಯನ್ನು ರಕ್ಷಿಸಿದ ಸಿಬ್ಬಂದಿ

    ಮಂಗಳೂರು: ಡಾಂಬರು ಡಬ್ಬಿಗೆ ಬಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ನಾಯಿಯನ್ನು ಮಂಗಳೂರಿನ ಅನಿಮಲ್ ಕೇರ್ ಟ್ರಸ್ಟ್ ಸಿಬ್ಬಂದಿ ರಕ್ಷಿಸಿದ್ದಾರೆ.

    ನಗರ ಹೊರವಲಯದ ಬಜ್ಪೆ ಬಳಿ ರಸ್ತೆ ಡಾಂಬರೀಕರಣಕ್ಕಾಗಿ ಡಾಂಬರು ಡಬ್ಬಿಗಳನ್ನು ಇಡಲಾಗಿತ್ತು. ಈ ವೇಳೆ ಬೀದಿ ನಾಯಿಯೊಂದು ಆಕಸ್ಮಿಕವಾಗಿ ಡಾಂಬರು ಡಬ್ಬಿ ಒಳಗೆ ಬಿದ್ದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಕ್ತಿ ನಗರದ ಅನಿಮಲ್ ಕೇರ್ ಟ್ರಸ್ಟ್ ಸದಸ್ಯರು, ಡಾಂಬರಿನಲ್ಲಿ ಅದ್ದಿ ಹೋಗಿದ್ದ ನಾಯಿಯನ್ನು ಮೇಲೆತ್ತಿದ್ದಾರೆ. ಕೂಡಲೇ ತಮ್ಮ ಶಕ್ತಿನಗರದ ಅನಿಮಲ್ ಕೇರ್ ಸೆಂಟರಿಗೆ ಕೊಂಡೊಯ್ದು ಸುಮಾರು ಹತ್ತು ಲೀಟರ್‍ನಷ್ಟು ಅಡುಗೆ ಎಣ್ಣೆಯನ್ನು ನಾಯಿಯ ಮೈಗೆ ಸುರಿದಿದ್ದಾರೆ. ನಿಧಾನಕ್ಕೆ ನಾಯಿ ಮೈಯಲ್ಲಿ ಅಂಟಿದ್ದ ಹತ್ತು ಕೆಜಿಯಷ್ಟು ಡಾಂಬರನ್ನು ಬಟ್ಟೆಯಿಂದ ಉಜ್ಜಿ ತೆಗೆದಿದ್ದಾರೆ.

    ಸದ್ಯ ನಾಯಿ ಚೇತರಿಕೆ ಕಂಡಿದ್ದು ಮರುಜನ್ಮ ಪಡೆದಂತಾಗಿದೆ. ಡಾಂಬರು ಮೆತ್ತಿಕೊಂಡರೆ ಸುಲಭದಲ್ಲಿ ಬಿಡಿಸಲು ಸಾಧ್ಯವಾಗಲ್ಲ. ಅದರಲ್ಲೂ ಡಾಂಬರು ಡಬ್ಬಿಗೆ ಯಾವುದೇ ಪ್ರಾಣಿ ಬಿದ್ದರೆ ಅಲ್ಲಿಗೇ ಗತಿ ಮುಗಿಯುತ್ತೆ. ಈ ನಾಯಿ ಬಿದ್ದಾಗ ಕೂಡಲೇ ಸಾರ್ವಜನಿಕರು ನೋಡಿದ್ದರಿಂದ ಮರು ಜೀವ ಸಿಕ್ಕಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರೈಲಿನಲ್ಲೇ ಹೆರಿಗೆ – ಮಾನವೀಯತೆ ಮೆರೆದ ರೈಲ್ವೇ ಸಿಬ್ಬಂದಿ

    ರೈಲಿನಲ್ಲೇ ಹೆರಿಗೆ – ಮಾನವೀಯತೆ ಮೆರೆದ ರೈಲ್ವೇ ಸಿಬ್ಬಂದಿ

    ಚಿಕ್ಕೋಡಿ: ತೈಲ ಬೆಲೆ ಏರಿಕೆ ಖಂಡಿಸಿ ಇಂದು ದೇಶಾದ್ಯಂತ ಕರೆ ನೀಡಿರುವ ಬಂದ್ ಸಾರ್ವಜನಿಕ ಜನಜೀವನದ ಮೇಲೆ ಎಫೆಕ್ಟ್ ಬೀರಿದ್ದು, ಬಂದ್ ಕಾರಣ ವಾಹನ ಸೌಲಭ್ಯವಿಲ್ಲದೇ ಸಂಕಷ್ಟ ಅನುಭವಿಸಿದ್ದ ಗರ್ಭಿಣಿಯೊಬ್ಬರು ರೈಲಿನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಯಲ್ಲವಾ ಪಾತ್ರೋಟ ಎಂಬವರು ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ್ದು, ಕೊಲ್ಲಾಪುರ – ಹೈದರಾಬಾದ್ ಎಕ್ಸ್‍ಪ್ರೆಸ್ ರೈಲಿನ ಪ್ರಯಾಣದ ವೇಳೆ ಜಿಲ್ಲೆಯ ರಾಯಭಾಗ ರೇಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ. ಇದನ್ನುಓದಿ: ಗರ್ಭಿಣಿಯನ್ನ ಹೊತ್ತು ಆಸ್ಪತ್ರೆಗೆ ಸಾಗಿಸ್ತಿದ್ದಾಗ ಅರಣ್ಯದಲ್ಲೇ ಹೆರಿಗೆ: ತಾಯಿ, ಮಗು ಆರೋಗ್ಯ

    ನಡೆದಿದ್ದು ಏನು?
    ಭಾರತ್ ಬಂದ್ ನಿಂದ ವಾಹನ ಸಂಪರ್ಕವಿಲ್ಲದೇ ಸಂಕಷ್ಟ ಎದುರಿಸಿದ ಗರ್ಭಿಣಿ ಯಲ್ಲಮ್ಮರನ್ನ ರೈಲಿನ ಮೂಲಕ ಮಹಾರಾಷ್ಟ್ರದ ಮಿರಜನಿಂದ ಆಸ್ಪತ್ರೆಗೆ ದಾಖಲಿಸಲು ಕರೆತರಲಾಗುತ್ತಿತ್ತು. ಈ ವೇಳೆ ಅವರಿಗೆ ಕುಡಚಿ ರೈಲ್ವೆ ನಿಲ್ದಾಣದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ. ವಿಷಯದ ತಿಳಿದ ರೈಲ್ವೇ ಸಿಬ್ಬಂದಿ ತಕ್ಷಣ 108 ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ನಿಯಮಗಳ ಪ್ರಕಾರ ರೈಲು ಆ ವೇಳೆಗೆ ಅಲ್ಲಿಂದ ತೆರಳಬೇಕಾಗಿತ್ತು. ಅದರೂ ಮಾನವೀಯತೆ ಮೆರೆದ ರೈಲ್ವೇ ಸಿಬ್ಬಂದಿ ಅರ್ಧ ಗಂಟೆ ಕಾಲ ನಿಲ್ದಾಣದಲ್ಲಿ ರೈಲು ನಿಲ್ಲಿಸಿದ್ದಾರೆ. ಆ ವೇಳೆಗೆ ಸ್ಥಳಕ್ಕೆ ಬಂದ 108ರ ಸಿಬ್ಬಂದಿ ಮಹಿಳೆಯ ಸ್ಥಿತಿ ಕಂಡು ರೈಲಿನಲ್ಲೇ ಹೆರಿಗೆ ಮಾಡಿಸಿದ್ದಾರೆ.

    ಹೆರಿಗೆ ಬಳಿಕ ತಾಯಿ ಹಾಗೂ ಮಗುವನ್ನು 108 ವಾಹನದ ಮೂಲಕ ರಾಯಭಾಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಸದ್ಯ ಗರ್ಭಿಣಿಯ ನೋವು ಕಂಡು ಮಾನವೀಯತೆ ಮೆರೆದ ರೈಲ್ವೇ ಸಿಬ್ಬಂದಿ ಹಾಗೂ 108 ಸೇವೆಯ ಸಿಬ್ಬಂದಿ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನುಓದಿ: ಸರ್ಕಾರಿ ಬಸ್ಸಿನಲ್ಲೇ ಹೆರಿಗೆ – ಮಾನವೀಯತೆ ಮೆರೆದ ಚಾಲಕ, ನಿರ್ವಾಹಕ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv