Tag: staff

  • ಬಿಸಿಯೂಟ ತಡವಾಗಿ ಮಾಡಿದಕ್ಕೆ ಮಾರಣಾಂತಿಕ ಹಲ್ಲೆಗೈದ ಅಧ್ಯಕ್ಷ

    ಬಿಸಿಯೂಟ ತಡವಾಗಿ ಮಾಡಿದಕ್ಕೆ ಮಾರಣಾಂತಿಕ ಹಲ್ಲೆಗೈದ ಅಧ್ಯಕ್ಷ

    ಯಾದಗಿರಿ: ಮಧ್ಯಾಹ್ನದ ಬಿಸಿಯೂಟದ ತಡವಾಗಿ ಮಾಡಿದಕ್ಕೆ ಸಿಬ್ಬಂದಿ ಮೇಲೆ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಗುಂಡಾಪುರ ದಲ್ಲಿ ನಡೆದಿದೆ.

    ಈ ಘಟನೆ ಶನಿವಾರ ಗುಂಡಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ಎಸ್‍ಡಿಎಂಸಿ ಅಧ್ಯಕ್ಷ ಭೀಮಣ್ಣ ಈ ಕೃತ್ಯ ಎಸೆಗಿದ್ದಾನೆ. ಶನಿವಾರ ಮಧ್ಯಾಹ್ನ ಅಡುಗೆ ಮಾಡುವುದು ತಡವಾಗಿತ್ತು. ಈ ಕಾರಣದಿಂದ ಬಿಸಿಯೂಟ ಮಾಡುವ ಸಿಬ್ಬಂದಿ ಮತ್ತು ಎಸ್‍ಡಿಎಂಸಿ ಸದಸ್ಯರ ಮಧ್ಯೆ ಗಲಾಟೆಯಾಗಿತ್ತು.

    ಈ ವಿಚಾರವನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಭೀಮಣ್ಣ ತಡರಾತ್ರಿ ಗುಂಪು ಕಟ್ಟಿಕೊಂಡು ಅಡುಗೆ ಮಾಡುವ ಕಮಲಬಾಯಿ ಮನೆಗೆ ತೆರಳಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಕಮಲಬಾಯಿ ಕುಟುಂಬಸ್ಥರ ಮೇಲೆ ಭೀಮಣ್ಣ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಘಟನೆಯಲ್ಲಿ ಕಮಲಬಾಯಿ ಪತಿಗೆ ಗಂಭೀರ ಗಾಯವಾಗಿದ್ದು, ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಕಮಲಬಾಯಿ ಕುಟುಂಬಸ್ಥರು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಸಂಬಂಧ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಝೊಮೆಟೊದಲ್ಲಿ ಮತ್ತೆ ವಿವಾದ – ದನ, ಹಂದಿ ಮಾಂಸ ಡೆಲಿವರಿ ಮಾಡಲ್ಲ ಎಂದ ಸಿಬ್ಬಂದಿ

    ಝೊಮೆಟೊದಲ್ಲಿ ಮತ್ತೆ ವಿವಾದ – ದನ, ಹಂದಿ ಮಾಂಸ ಡೆಲಿವರಿ ಮಾಡಲ್ಲ ಎಂದ ಸಿಬ್ಬಂದಿ

    ಕೊಲ್ಕತ್ತಾ: ಝೊಮೆಟೊ ಆನ್‍ಲೈನ್ ಫುಡ್ ಡೆಲಿವರಿ ಸಂಸ್ಥೆ ಇತ್ತೀಚಿಗೆ ಒಂದಲ್ಲ ಒಂದು ವಿವಾದಕ್ಕೆ ಸಿಲುಕಿಕೊಳ್ಳುತ್ತಿದೆ. ಕಳೆದ ತಿಂಗಳಷ್ಟೇ ಹಿಂದೂ ಗ್ರಾಹಕರೊಬ್ಬರು ಮುಸ್ಲಿಂ ಯುವಕ ಆಹಾರ ತಂದಿದಕ್ಕೆ ಆರ್ಡರ್ ಕ್ಯಾನ್ಸಲ್ ಮಾಡಿದ್ದರು. ಇದು ಧಾರ್ಮಿಕ ವಿವಾದವಾಗಿ ದೇಶದೆಲ್ಲೆಡೆ ಭಾರೀ ಚರ್ಚೆಯಾಗಿತ್ತು.

    ಈಗ ಮತ್ತೆ ಇದೇ ರೀತಿಯ ಧಾರ್ಮಿಕ ವಿಚಾರದಲ್ಲೇ ಝೊಮೆಟೊ ಸಂಕಷ್ಟಕ್ಕೆ ಸಿಲುಕಿದೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಹಿಂದೂ ಮತ್ತು ಮುಸ್ಲಿಂ ಸಿಬ್ಬಂದಿ ನಾವು ನಮ್ಮ ಧರ್ಮಕ್ಕೆ ವಿರುದ್ಧವಾದ ಗೋಮಾಂಸ ಮತ್ತು ಹಂದಿ ಮಾಂಸವನ್ನು ಡೆಲಿವರಿ ಮಾಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.

    ಸೋಮವಾರದಿಂದ ಆಚರಣೆ ಮಾಡುವ ಬಕ್ರಿದ್ ಹಬ್ಬಕ್ಕೆ ನಾವು ಗೋಮಾಂಸ ಮತ್ತು ಹಂದಿ ಮಾಂಸವನ್ನು ಡೆಲಿವರಿ ಮಾಡುವುದಿಲ್ಲ. ಇದು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆ. ಝೊಮೆಟೊ ಸಂಸ್ಥೆ ನಮ್ಮ ಉದ್ಯೋಗ ಮತ್ತು ಭಾವನೆಗಳ ಜೊತೆ ಆಟವಾಡುತ್ತಿದೆ ಎಂದು ಸೋಮವಾರ ಹಿಂದೂ ಮತ್ತು ಮುಸ್ಲಿಂ ಹುಡುಗರು ಝೊಮೆಟೊ ವಿರುದ್ಧ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಹಿಂದೂ ಆಹಾರ ವಿತರಣಾ ಸಿಬ್ಬಂದಿ ಬಜರಾಜ್ ನಾಥ್ ಬ್ರಹ್ಮ, ನಾನು ಹಿಂದೂ. ಇಲ್ಲಿ ಮುಸ್ಲಿಂ ಡೆಲಿವರಿ ಹುಡುಗರೂ ಇದ್ದಾರೆ. ಒಟ್ಟಿಗೆ ಕೆಲಸ ಮಾಡುವಲ್ಲಿ ನಮಗೆ ಯಾವುದೇ ಸಮಸ್ಯೆಗಳಿಲ್ಲ. ಝೊಮೆಟೊ ಪ್ರಸ್ತುತ ಕೆಲವು ಹೊಸ ರೆಸ್ಟೋರೆಂಟ್‍ಗಳೊಂದಿಗೆ ಸಂಬಂಧ ಹೊಂದಿದ್ದು, ಗೋಮಾಂಸ ಮತ್ತು ಹಂದಿ ಮಾಂಸವನ್ನು ವಿತರಣೆ ಮಾಡುತ್ತಿದೆ. ಇದರಿಂದ ಹಿಂದೂ ವಿತರಣಾ ಸಿಬ್ಬಂದಿ ಮತ್ತು ಮುಸ್ಲಿಂ ವಿತರಣಾ ಸಿಬ್ಬಂದಿ ಇಬ್ಬರಿಗೂ ಸಮಸ್ಯೆಯಾಗುತ್ತಿದೆ. ನಮ್ಮ ಧಾರ್ಮಿಕ ಭಾವನೆಗೆ ನೋವಾಗುತ್ತಿದೆ. ಇದ್ದರಿಂದ ತಕ್ಷಣವೇ ಈ ಯೋಜನೆಯನ್ನು ಸಂಸ್ಥೆ ನಿಲ್ಲಿಸಬೇಕು ಎಂದು ನಾವು ಕೇಳಿಕೊಳ್ಳುತ್ತೇವೆ. ಈ ವಿಚಾರವಾಗಿ ನಾವು ಸೋಮವಾರ ಕೆಲಸ ಮಾಡದೇ ಮುಷ್ಕರ ನಡೆಸುತ್ತೇವೆ ಎಂದು ಹೇಳಿದ್ದಾರೆ.

    ಮುಸ್ಲಿಂ ಆಹಾರ ವಿತರಣಾ ಸಿಬ್ಬಂದಿ ಮೌಸಿರ್ ಅಖ್ತರ್ “ನಾವು ಈ ಸಮಸ್ಯೆಯ ಬಗ್ಗೆ ಸಂಸ್ಥೆಯ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ, ಆದರೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚಿಗೆ ಕೆಲ ಮುಸ್ಲಿಂ ಹೋಟೆಲ್‍ಗಳನ್ನು ಝೊಮೆಟೊ ತನ್ನ ವಿತರಣಾ ಅಪ್ಲಿಕೇಶನ್‍ಗೆ ಸೇರಿಸಿಕೊಂಡಿದೆ. ಅಲ್ಲಿ ಮಾಡುವ ಗೋಮಾಂಸವನ್ನು ಕೆಲ ಹಿಂದೂ ಹುಡುಗರು ವಿತರಣೆ ಮಾಡುವುದಿಲ್ಲ ಎಂದು ನಿರಾಕರಿಸಿದ್ದಾರೆ. ಹಾಗೆಯೇ ನಾವು ಕೂಡ ಹಂದಿ ಮಾಂಸವನ್ನು ವಿತರಣೆ ಮಾಡುವುದಿಲ್ಲ. ಇದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುತ್ತಿದೆ. ಈ ವಿಚಾರದ ಬಗ್ಗೆ ಕಂಪನಿಗೆ ಎಲ್ಲ ತಿಳಿದಿದ್ದರು. ನಮಗೆ ಯಾವುದೇ ಸಹಾಯ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಈ ವಿಚಾರದಲ್ಲಿ ಝೊಮೆಟೊ ಹುಡುಗರ ಬೆಂಬಲಕ್ಕೆ ನಿಂತಿರುವ ಪಶ್ಚಿಮ ಬಂಗಾಳದ ಸಚಿವ ಮತ್ತು ಟಿಎಂಸಿ ಶಾಸಕರ ಹೌರಾ ರಾಜೀಬ್ ಬ್ಯಾನರ್ಜಿ, ಈ ರೀತಿಯ ಯೋಚನೆಗಳನ್ನು ಸಂಸ್ಥೆ ಜಾರಿಗೆ ತರುವಾಗ ಸ್ವಲ್ಪ ಯೋಚಿಸಬೇಕು. ಯಾವ ವ್ಯಕ್ತಿಯನ್ನು ಅವರ ಧಾರ್ಮಿಕ ಭಾವನೆಗಳ ವಿರುದ್ಧ ನಡೆಸಿಕೊಳ್ಳಬಾರದು. ಇದು ತಪ್ಪು. ಈ ವಿಚಾರದ ಬಗ್ಗೆ ನನಗೆ ತಿಳಿದಿರಲಿಲ್ಲ. ಈಗ ನನ್ನ ಗಮನಕ್ಕೆ ಬಂದಿದೆ ನಾನು ಇದರ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

  • ಮೆಸ್ಕಾಂಗೆ ಸವಾಲಾಗಿರುವ ಮಲೆನಾಡ ಮಳೆ- ಸಿಬ್ಬಂದಿ ಮೇಲೆ ಬಿದ್ದ ಮರ

    ಮೆಸ್ಕಾಂಗೆ ಸವಾಲಾಗಿರುವ ಮಲೆನಾಡ ಮಳೆ- ಸಿಬ್ಬಂದಿ ಮೇಲೆ ಬಿದ್ದ ಮರ

    ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಲವು ಕಡೆ ಅವಾಂತರ ಸೃಷ್ಟಿಸಿದೆ. ಮೆಳೆಯ ಅಬ್ಬರಕ್ಕೆ ಆಗುತ್ತಿರುವ ಅನಾಹುತಗಳು ಮೆಸ್ಕಾಂಗೆ ತಲೆನೋವಾಗಿದೆ.

    ಹೌದು. ಮಲೆನಾಡಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ಥಗೊಂಡಿದ್ದು, ರಸ್ತೆಗಳ ಮೇಲೆ ಬೃಹತ್ ಮರಗಳು ಉರುಳಿ ಬಿದ್ದು ಭಾರೀ ಅವಾಂತರ ಸೃಷ್ಟಿಯಾಗಿದೆ. ಅಲ್ಲದೆ ಧರೆಗುರುಳಿರುವ ಮರಗಳ ಜೊತೆಗೆ ಹಲವು ಕಡೆ ವಿದ್ಯುತ್ ಕಂಬಗಳು ಕೂಡ ನೆಲಕ್ಕುರುಳಿದೆ. ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಬಂಡೀಗಡಿ ಬಳಿ ರಸ್ತೆಗೆ ಬೃಹತ್ ಮರ ಉರುಳಿ ಬಿದ್ದಿದೆ.

    ಈ ಹಿನ್ನೆಲೆ ಮಳೆಯಲ್ಲೇ ಮರ ತೆರವು ಕಾರ್ಯಾಚರಣೆ ಮಾಡಿ, ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಲೈನ್ ರಿಪೇರಿ ಕೆಲಸವನ್ನು ಮಾಡುತ್ತಿದ್ದಾರೆ. ಹೀಗೆ ಲೈನ್ ರಿಪೇರಿ ಮಾಡುತ್ತಿದ್ದ ಮೆಸ್ಕಾಂ ಸಿಬ್ಬಂದಿ ಮೇಲೆ ಮರವೊಂದು ಬಿದ್ದಿದ್ದು, ತಕ್ಷಣ ಸ್ಥಳದಲ್ಲಿದ್ದವರು ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಸಿಬ್ಬಂದಿ ಪಾರಾಗಿದ್ದಾರೆ.

    ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಳೆದ ಬಾರಿ 17 ಬಾರಿ ಮುಳುಗಿದ್ದ ಹೆಬ್ಬಾಳೆ ಸೇತುವೆ ಈ ವರ್ಷ ಮೊದಲ ಬಾರಿ ಮುಳುಗಡೆಯಾಗಿದ್ದು, ಮಹಾಮಳೆಗೆ ಜನ ಮನೆಯಿಂದ ಹೊರಬರದಂತ ಸ್ಥಿತಿ ನಿರ್ಮಾಣವಾಗಿದೆ.

    ರಾಜ್ಯದ ಹಲವೆಡೆ ಮಳೆರಾಯನ ರೌದ್ರನರ್ತನಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಅಲ್ಲದೆ ಭಾರೀ ಮಳೆಯ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಸುರಿಯುತ್ತಿದ್ದು, ಉತ್ತರ ಕರ್ನಾಟಕದ ಭಾಗದಲ್ಲಿ ಪ್ರವಾಹ ಸೃಷ್ಟಿಸಿದೆ. ಮಳೆಯ ಅಬ್ಬರಕ್ಕೆ ರಾಜ್ಯದ ನದಿಗಳು ಭೋರ್ಗರೆದು ಹರಿಯುತ್ತಿದ್ದು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಸೇತುವೆಗಳು ಮುಳುಗಡೆಯಾಗಿದೆ, ರಸ್ತೆಗಳ ಮೇಲೆ ಮರಗಳು, ಗುಡ್ಡಗಳು ಕುಸಿದು ಸಂಚಾರ ಸ್ಥಗಿತಗೊಂಡಿದೆ.

  • 108 ವಾಹನದಲ್ಲೇ ಹೆರಿಗೆ ಮಾಡಿಸಿ 2 ಜೀವ ಉಳಿಸಿದ ಸಿಬ್ಬಂದಿ

    108 ವಾಹನದಲ್ಲೇ ಹೆರಿಗೆ ಮಾಡಿಸಿ 2 ಜೀವ ಉಳಿಸಿದ ಸಿಬ್ಬಂದಿ

    ವಿಜಯಪುರ: ಕಳೆದ ರಾತ್ರಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ತುಂಬು ಗರ್ಭಿಣಿಗೆ ಆಸ್ಪತ್ರೆಗೆ ರವಾನಿಸುತ್ತಿದ್ದ ವೇಳೆ 108 ವಾಹನದಲ್ಲಿಯೇ ಸಿಬ್ಬಂದಿ ಹೆರಿಗೆ ಮಾಡಿಸಿ ತಾಯಿ, ಮಗುವಿನ ಜೀವ ಉಳಿಸಿದ್ದಾರೆ.

    ವಿಜಯಪುರ ತಾಲೂಕಿನ ಹಡಗಲಿ ಗ್ರಾಮದ ಬಳಿ 108 ಅಂಬುಲೆನ್ಸ್ ಸಿಬ್ಬಂದಿ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದಾರೆ. ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕಣಮೇಶ್ವರ ಗ್ರಾಮದ ನಿವಾಸಿ ದಿಲಶಾದ್ ಇಸ್ಮಾಯಿಲ್ ಹಚಡದ ಅವರಿಗೆ ಸಿಬ್ಬಂದಿ ಹೆರಿಗೆ ಮಾಡಿಸಿದ್ದು, ಗಂಡು ಮಗು ಜನನವಾಗಿದೆ. ಬಳಿಕ ಸಿಬ್ಬಂದಿ ತಾಯಿ-ಮಗುವನ್ನು ಸುರಕ್ಷಿತವಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಹೆರಿಗೆ ನೋವಿನಿಂದ ದಿಲಶಾದ್ ಅವರು ಯಂಕಂಚಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ್ದರು. ದಿಲಶಾದ್ ಅವರಿಗೆ ಮೊದಲನೇ ಹೆರಿಗೆ ಸಿಸೇರಿಯನ್ ಆಗಿತ್ತು, ಹೀಗಾಗಿ ಎರಡನೇ ಹೆರಿಗೆ ನಾರ್ಮಲ್ ಡೆಲಿವರಿ ಆಗುವುದು ಕಷ್ಟವೆಂದು ವೈದ್ಯರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಎಂದು ಸೂಚಿಸಿದ್ದರು. ಆದ್ದರಿಂದ 108 ಅಂಬುಲೆನ್ಸ್ ನಲ್ಲಿ ಮಹಿಳೆಯನ್ನು ಜಿಲ್ಲಾಸ್ಪತ್ರಗೆ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಮಾರ್ಗ ಮಧ್ಯದಲ್ಲಿಯೇ ದಿಲಶಾದ್ ಅವರಿಗೆ ಹೆರಿಗೆ ನೋವು ತೀವ್ರವಾಗಿದ್ದು, ಸರಿಯಾದ ಸಮಯಕ್ಕೆ 108 ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಶಿಯನ್ ಶೋಭಾ ಕೋಳಿ ಹಾಗೂ 108 ಚಾಲಕ ಬಾವುರಾಜ ಮಂಗಳವೆಡೆ ಅವರು ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.

    ಬಳಿಕ ಸುರಕ್ಷಿತವಾಗಿ ತಾಯಿ-ಮಗುವನ್ನು ಜಿಲ್ಲಾಸ್ಪತ್ರಗೆ ದಾಖಲಿಸಿದ್ದಾರೆ. ಸಿಬ್ಬಂದಿ ಸರಿಯಾದ ಸಮಯಕ್ಕೆ ಸಹಾಯ ಮಾಡಿ ಎರಡು ಜೀವಗಳನ್ನು ಉಳಿಸಿದ್ದಕ್ಕೆ ದಿಲಶಾದ್ ಹಾಗೂ ಅವರ ಕುಟುಂಬಸ್ಥರು ಧನ್ಯವಾದ ಹೇಳಿದ್ದಾರೆ.

  • ಹಿಂದಿನ ಸಿಎಂ ಟೈಂ ಬೇಕಿಲ್ಲ – ದಿಢೀರ್ ಭೇಟಿ ಕೊಟ್ಟು ಅಧಿಕಾರಿಗಳಿಗೆ ಸಿಎಂ ಕ್ಲಾಸ್

    ಹಿಂದಿನ ಸಿಎಂ ಟೈಂ ಬೇಕಿಲ್ಲ – ದಿಢೀರ್ ಭೇಟಿ ಕೊಟ್ಟು ಅಧಿಕಾರಿಗಳಿಗೆ ಸಿಎಂ ಕ್ಲಾಸ್

    ಬೆಂಗಳೂರು: ಹಿಂದಿನ ಸಿಎಂ ಟೈಂ ನನಗೆ ಬೇಕಿಲ್ಲ, ನಿಗದಿಯಾಗಿದ್ದ ಸಮಯಕ್ಕೆ ಸಭೆ ನಡೆಸುತ್ತೇನೆ. ಎಲ್ಲ ಅಧಿಕಾರಿಗಳು ಶಿಸ್ತು ಪಾಲಿಸುವುದು ಕಡ್ಡಾಯ ಎಂದು ವಿಧಾನಸೌಧದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ವಿಧಾನಸೌಧದ ನೆಲಮಹಡಿಯಲ್ಲಿರುವ ಸ್ವೀಕೃತಿ ಮತ್ತು ರವಾನೆ ಶಾಖೆಗೆ ದಿಢೀರ್ ಭೇಟಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಆಗಮಿಸದ ಹಿನ್ನೆಲೆಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಸರಿಯಾದ ಸಮಯಕ್ಕೆ ಕೆಲಸಕ್ಕೆ ಆಗಮಿಸದ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.

    ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ವೇಳೆ ಅಧಿಕಾರಿಗಳು ಇನ್ನೂ ಆಗಮಿಸಿರಲಿಲ್ಲ. ತಡವಾದರೂ ಆಗಮಿಸದ ಸಿಬ್ಬಂದಿಯ ವರ್ತನೆಗೆ ಸಿಎಂ ಕೆಂಡಾಮಂಡಲರಾಗಿದ್ದು, ಸರ್ಕಾರಿ ಕೆಲಸದ ವೇಳೆಯಲ್ಲಿ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಕಚೇರಿಯಲ್ಲಿ ಹಾಜರಿರಬೇಕು. ಸರಿಯಾದ ಸಮಯಕ್ಕೆ ಕೆಲಸಕ್ಕೆ ಬರಬೇಕು. ಇಲ್ಲವಾದಲ್ಲಿ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಇದೇ ವೇಳೆ ಮೇಲಧಿಕಾರಿಗಳಿಗೂ ಸಿಎಂ ವಾರ್ನ್ ಮಾಡಿದ್ದಾರೆ. ಹಿಂದಿನ ಸಿಎಂ ಟೈಂ ನನಗೆ ಬೇಕಿಲ್ಲ. ನಿಗದಿಯಾಗಿದ್ದ ಸಮಯಕ್ಕೆ ನಾನು ಸಭೆ ನಡೆಸುತ್ತೇನೆ. ಎಲ್ಲ ಅಧಿಕಾರಿಗಳು ಸಮಯ ಹಾಗೂ ಶಿಸ್ತು ಪಾಲಿಸುವುದು ಕಡ್ಡಾಯ. ನಿಮ್ಮ ಕೆಳ ಸಿಬ್ಬಂದಿಗೂ ಈ ಕುರಿತು ಎಚ್ಚರಿಕೆ ನೀಡಿ ಎಂದು ಸ್ಥಳದಲ್ಲೇ ಅಧಿಕಾರಿಗಳಿಗೆ ಸಿಎಂ ಗುಡುಗಿದ್ದಾರೆ.

    ಆರ್ಥಿಕ ಇಲಾಖೆ ಸಭೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ರಾಜ್ಯದ ಹಣಕಾಸು ಪರಿಸ್ಥಿತಿ ಕುರಿತು ಮಾಹಿತಿ ಪಡೆದರು. ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ಮುಖ್ಯಮಂತ್ರಿಯವರ ಸಲಹೆಗಾರ ಎಂ.ಲಕ್ಷ್ಮೀನಾರಾಯಣ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಸಿದ್ಧಾರ್ಥ್ ಆದಷ್ಟು ಬೇಗ ನಮ್ಮ ಕಣ್ಮುಂದೆ ಬರಲಿ – ಕಾಫಿ ಡೇ ಸಿಬ್ಬಂದಿ

    ಸಿದ್ಧಾರ್ಥ್ ಆದಷ್ಟು ಬೇಗ ನಮ್ಮ ಕಣ್ಮುಂದೆ ಬರಲಿ – ಕಾಫಿ ಡೇ ಸಿಬ್ಬಂದಿ

    ಬೆಂಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಹೆಗಡೆ ನಾಪತ್ತೆಯಾಗಿದ್ದು, ಇದೀಗ ಅವರ ಸುರಕ್ಷಿತವಾಗಿ ವಾಪಸ್ ಬರಲಿ ಎಂದು ಸಿಬ್ಬಂದಿ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.

    ನಗರದ ಮಲ್ಲೇಶ್ವರಂ ಕಾಫಿ ಡೇಯ ಮಹಿಳಾ ಸಿಬ್ಬಂದಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಸಾಮಾನ್ಯವಾಗಿ ಸಿದ್ಧಾರ್ಥ್ ಅವರು ಒಳ್ಳೆಯ ವ್ಯಕ್ತಿತ್ವದವರು. ಅವರು ನಮ್ಮ ಜೊತೆ ಚೆನ್ನಾಗಿದ್ದರು. ಅಂಥವರು ಇದೀಗ ಕಾಣೆಯಾಗಿದ್ದಾರೆ ಎಂದರೆ ನಮಗೆ ನಂಬಲು ಸಾಧ್ಯವಾಗುತ್ತಿಲ್ಲ. ಅವರು ಆದಷ್ಟು ಬೇಗ ಅವರು ನಮ್ಮ ಕಣ್ಣ ಮುಂದೆ ಬರಲಿ ಎಂದು ನಾವು ದೇವರಲ್ಲಿ ಬೇಡಿಕೊಳ್ಳುವುದಾಗಿ ತಿಳಿಸಿದರು.

    ತುಂಬಾ ಸರಳ ವ್ಯಕ್ತಿಯಾಗಿದ್ದಾರೆ. ತನ್ನ ಸಿಬ್ಬಂದಿಯನ್ನು ಅವರು ತುಂಬಾನೇ ಚೆನ್ನಾಗಿಯೇ ಉಪಚರಿಸುತ್ತಿದ್ದರು. ಆದರೆ ಇದೀಗ ಅವರು ದಿಢೀರ್ ನಾಪತ್ತೆಯಾಗಿರುವುದು ನಮಗೆಲ್ಲ ಬೇಸರ ತಂದಿದೆ. ಹೀಗಾಗಿ ನಮಗೆ ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

    ಸಿದ್ಧಾರ್ಥ್ ಅವರು ನಾಪತ್ತೆಯಾಗಿರುವ ಸುದ್ದಿ ನಮಗೆ ನಮ್ಮ ವಾಟ್ಸಪ್ ಗ್ರೂಪಿನಿಂದಾಗಿ ಬೆಳಗ್ಗೆ ಗೊತ್ತಾಯಿತು. ಈ ವಿಚಾರ ತಿಳಿದ ತಕ್ಷಣವೇ ನನಗೆ ತುಂಬಾನೆ ದುಃಖವಾಯಿತು. ಯಾಕೆಂದರೆ ಅವರು ತುಂಬಾನೆ ಚೆನ್ನಾಗಿ ಸಿಬ್ಬಂದಿಯನ್ನು ನೋಡಿಕೊಳ್ಳುತ್ತಾರೆ ಹಾಗೆಯೇ ಮಾತನಾಡಿಸುತ್ತಾರೆ. ಹೀಗಾಗಿ ಅವರು ಆದಷ್ಟು ಬೇಗ ಅವರು ಸುರಕ್ಷಿತವಾಗಿ ಬರಲಿ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ.

    ಅವರು ಹೆಣ್ಣು- ಗಂಡು ಎಂಬ ಬೇಧ-ಭಾವವಿಲ್ಲದೆ ಎಲ್ಲರಿಗೂ ಕಾಫಿ ಡೇಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತಾರೆ. ಚಿಕ್ಕಮಗಳೂರಲ್ಲಿ ಅವರ ಸಂಸ್ಥೆಯೊಂದಿದೆ. ಅಲ್ಲಿ ನಮಗೆ ತರಬೇತಿ ಕೊಡುತ್ತಾರೆ ಎಂದರು.

    ತರಬೇತಿ ಪಡೆದು ಬಂದು ಸುಮಾರು 6 ತಿಂಗಳು ಆಯ್ತು. ಮಲ್ಲೇಶ್ವರಂನಲ್ಲಿರುವ ಇನ್ನೊಂದು ಕಾಫಿ ಡೇಗೆ ಒಂದು ಬಾರಿ ಅವರು ಬಂದಿದ್ದರು. ತುಂಬಾ ಸರಳವಾಗಿರುವ ಅವರು ನಗುನಗುತ್ತಾ ಸಿಬ್ಬಂದಿಯನ್ನು ಮಾತನಾಡಿಸಿದ್ದರು. ದೊಡ್ಡ ವ್ಯಕ್ತಿಯೆಂಬ ಅಹಂಕಾರ ಅವರಲ್ಲಿ ಇಲ್ಲ. ಹೀಗಾಗಿ ಅವರನ್ನು ನೋಡಿದ್ದರೆ ನಮಗೆ ಪಾಸಿಟಿವ್ ಥಿಂಕಿಂಗ್ ಬರುತ್ತದೆ ಎಂದು ತಮ್ಮ ಬಾಸ್ ಬಗ್ಗೆ ಹೇಳಿಕೊಂಡರು.

    https://www.youtube.com/watch?v=UN-UV3nFFwo

  • 2 ದಿನಗಳ ಹಿಂದೆಯಷ್ಟೇ ಪತ್ರ ಬರೆದಿದ್ದ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡ್ರಾ?

    2 ದಿನಗಳ ಹಿಂದೆಯಷ್ಟೇ ಪತ್ರ ಬರೆದಿದ್ದ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡ್ರಾ?

    ಬೆಂಗಳೂರು: ದಿಢೀರ್ ನಾಪತ್ತೆಯಾಗಿರುವ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ತಮ್ಮ ಕಂಪನಿಯ ಸಿಬ್ಬಂದಿ ಹಾಗೂ ನಿರ್ದೇಶಕರಿಗೆ ಪತ್ರವನ್ನು ಬರೆದಿದ್ದಾರೆ. ಈ ಪತ್ರ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಎರಡು ದಿನಗಳಷ್ಟೇ ಸಿದ್ಧಾರ್ಥ್ ಅವರು ಕಂಪನಿ ಸಿಬ್ಬಂದಿ ಹಾಗೂ ನಿರ್ದೇಶಕರಿಗೆ ತುಂಬಾ ನೋವಿನಿಂದ ಪತ್ರವನ್ನು ಬರೆದಿದ್ದಾರೆ.

    ಸಿದ್ಧಾರ್ಥ್ ಪತ್ರ:
    ನಾನು ಕಳೆದ 37 ವರ್ಷದಲ್ಲಿ ಕಠಿಣ ಪರಿಶ್ರಮದಿಂದ ಕೆಲಸ ಮಾಡಿದ್ದೇನೆ. ಕಾಫಿ ಡೇ ಮೂಲಕ 30 ಸಾವಿರ ಜನರಿಗೆ ಕೆಲಸ ಕೊಟ್ಟಿದ್ದೇನೆ. ಅಷ್ಟೇ ಅಲ್ಲದೆ ನನ್ನ ಐಟಿ ಕಂಪನಿ ಮೂಲಕ 20 ಸಾವಿರ ಜನರಿಗೆ ಕೆಲಸ ಕೊಟ್ಟಿದ್ದೇನೆ. ಆದರೆ ನನ್ನ ಪರಿಶ್ರಮದ ಹೊರತಾಗಿಯೂ ಆ ಎರಡೂ ಕಂಪನಿಗಳು ಲಾಭದಲ್ಲಿ ನಡೆಯಲಿಲ್ಲ. ನನಗೆ ಅನೇಕ ಕಡೆಯಿಂದ ಒತ್ತಡ ಹೆಚ್ಚಾಗಿದ್ದು, ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಬರೆದಿದ್ದಾರೆ.

    ಕಂಪನಿಯಲ್ಲಿ ಷೇರು ಹೂಡಿದ್ದ ಖಾಸಗಿ ಪಾಟ್ನರ್ ಗಳು ತಮ್ಮ ಷೇರನ್ನು ವಾಪಸ್ ಕೊಡುವಂತೆ ಒತ್ತಾಯ ಹಾಕುತ್ತಿದ್ದಾರೆ. ಸ್ನೇಹಿತರೊಬ್ಬರ ಬಳಿ ನಾನು ದೊಡ್ಡ ಮಟ್ಟದಲ್ಲಿ ಸಾಲ ಮಾಡಿದ್ದೇನೆ. ಇತರೆ ಸಾಲಗಾರರ ಒತ್ತಡದಿಂದ ಇಂದು ನನಗೆ ಈ ಪರಿಸ್ಥಿತಿ ಬಂದಿದೆ. 6 ತಿಂಗಳ ಹಿಂದೆಯಷ್ಟೇ ಅಪಾರ ಪ್ರಮಾಣದಲ್ಲಿ ಸಾಲ ಪಡೆದಿದ್ದೇನೆ. ಸಾಲಗಾರರು ತುಂಬಾ ಕಿರುಕುಳ ಕೊಡುತ್ತಿದ್ದಾರೆ.

    ಇನ್ನೊಂದೆಡೆ ಆದಾಯ ತೆರಿಗೆ ಇಲಾಖೆ ಅವರು ಕಿರುಕುಳ ನೀಡುತ್ತಿದ್ದಾರೆ. ಪತ್ರದಲ್ಲಿ ಈ ಹಿಂದಿನ ಐಟಿಯ ಡಿಜಿ ವಿರುದ್ಧ ನೇರವಾಗಿ ಆರೋಪ ಮಾಡಿದ್ದಾರೆ. ಎರಡು ಬಾರಿ ನನ್ನ ಕಂಪನಿಯ ಷೇರುಗಳನ್ನು ಜಪ್ತಿ ಮಾಡಿದ್ದರು. ಈ ಮೂಲಕ ಮೈಂಡ್ ಟ್ರೀ ಮಾರಾಟದ ಡೀಲ್‍ಗೆ ಅಡ್ಡಿಯಾದರು. ಅದಾದ ಬಳಿಕ ಕಾಫಿ ಡೇ ಷೇರಿಗೂ ಐಟಿ ಕಣ್ಣು ಹಾಕಿತ್ತು. ನನಗೆ ಖಾಸಗಿ ಕಂಪನಿ ಕಿರುಕುಳ ನೀಡುತ್ತಿದೆ. ನಾನು ಸಾಕಷ್ಟು ಹೋರಾಟ ಮಾಡಿದೆ. ಆದರೆ ಅವರ ಕಿರುಕುಳವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

    ನಾನು ಮೋಸ ಹೋದೆ. ನಮಗೆ ಕೆಲವರು ನಂಬಿಕೆ ದ್ರೋಹ ಮಾಡಿದ್ದಾರೆ. ನಾನು ಸಿಬ್ಬಂದಿಯ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಷೇರುಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿಲ್ಲ. ಇದರಿಂದ ನಾನು ಖಾಸಗಿಯಿಂದ ಸಾಲ ತೆಗೆದುಕೊಂಡಿದ್ದೆ. ನಾನು ಯಾರಿಗೂ ಮೋಸ ಮಾಡಬೇಕೆಂದು ಈ ಪತ್ರ ಬರೆಯುತ್ತಿಲ್ಲ. ಓರ್ವ ಉದ್ದಿಮೆದಾರನಾಗಿ ನಾನು ಸೋತಿದ್ದೇನೆ ಎಂದಿದ್ದಾರೆ.

    ನಾನು ನಿಮ್ಮ ಎಲ್ಲರಲ್ಲೂ ಕೇಳಿಕೊಳ್ಳುತ್ತೇನೆ, ಈ ಎಲ್ಲ ಉದ್ಯಮಗಳನ್ನು ನೀವು ಹೊಸ ಆಡಳಿತ ಮಂಡಳಿಯೊಂದಿಗೆ ಮುಂದುವರೆಸಿ. ಈಗ ಆಗಿರುವ ಎಲ್ಲ ತಪ್ಪುಗಳಿಗೂ ನಾನೇ ಹೊಣೆಯಾಗಿದ್ದು, ಪ್ರತಿಯೊಂದು ಹಣಕಾಸು ವ್ಯವಹಾರಕ್ಕೂ ನಾನೇ ಹೊಣೆ. ನನ್ನ ತಂಡ ಆಡಿಟರ್ಸ್ ಹಾಗೂ ಹಿರಿಯ ಆಡಳಿತ ಮಂಡಳಿಗೂ ಹಣಕಾಸು ವ್ಯವಹಾರಕ್ಕೂ ಸಂಬಂಧವಿಲ್ಲ ಎಂದು ಬರೆದಿದ್ದಾರೆ.

    ನನ್ನ ಉದ್ದಿಮೆಯನ್ನು ಲಾಭದಾಯಕವಾಗಿ ಮಾಡಲು ಎಲ್ಲಾ ಬಾಗಿಲುಗಳು ಮುಚ್ಚಿವೆ. ಹೀಗಾಗಿ ನಾನು ಕಂಪನಿ ನಡೆಸುವುದರಲ್ಲಿ ವಿಫಲನಾದೆ. ಇದು ನನ್ನ ಪರಿಸ್ಥಿತಿಯಾಗಿದೆ. ಕೆಲವರು ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಭರವಸೆ ಇದೆ. ಎಲ್ಲರೂ ನನ್ನನ್ನು ಕ್ಷಮಿಸಿ ಬಿಡಿ ಎಂದು ಬರೆದಿದ್ದು, ಇದೀಗ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ವಿದಾಯ ಪತ್ರ ಬರೆದಿದ್ದಾರೆಯೋ ಎಂಬ ಅನುಮಾನ ಮೂಡಿದೆ.

    https://www.youtube.com/watch?v=uz6xiFzo-_Q

  • ಒಂಟಿ ಸಲಗದ ದಾಳಿಗೆ ಎರಡನೇ ಬಲಿ

    ಒಂಟಿ ಸಲಗದ ದಾಳಿಗೆ ಎರಡನೇ ಬಲಿ

    ಹಾಸನ: ಜಿಲ್ಲೆಯಲ್ಲಿ ಒಂಟಿ ಸಲಗದ ದಾಳಿಗೆ ಎರಡನೇ ಬಲಿಯಾಗಿದೆ. ನಾಡಿಗೆ ನುಗ್ಗಿದ್ದ ಆನೆಯನ್ನು ಕಾಡಿಗೆ ಓಡಿಸುತ್ತಿದ್ದಾಗ ಘಟನೆ ನಡೆದಿದೆ.

    ಅರಣ್ಯ ಇಲಾಖೆ ವಾಚರ್ ಅಣ್ಣೇಗೌಡ (52) ಮೃತ ವ್ಯಕ್ತಿ. ಒಂಟಿ ಸಲಗವು ಮಂಗಳವಾರ ಬೆಳಗಿನ ಜಾವ 3 ಗಂಟೆಗೆ ಹಾಸನ ನಗರಕ್ಕೆ ಬಂದಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಸತತ ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ, ಆನೆಯನ್ನು ಸೀಗೆಗುಡ್ಡ ಅರಣ್ಯಕ್ಕೆ ಓಡಿಸಿದ್ದರು. ಈ ವೇಳೆ ಆನೆಯು ಏಕಾಏಕಿ ದಾಳಿ ಆರಂಭಿಸಿತು. ತಕ್ಷಣವೇ ಅಣ್ಣೇಗೌಡ ಅವರನ್ನು ಹೊರತು ಪಡಿಸುವಂತೆ ಏಳು ಮಂದಿ ಆನೆ ದಾಳಿಯಿಂದ ತಪ್ಪಿಸಿಕೊಂಡಿದ್ದರು.

    ಆನೆಯ ದಾಳಿಗೆ ಸಿಕ್ಕ ಅಣ್ಣೇಗೌಡ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಿಬ್ಬಂದಿಯ ಸಾವಿಗೆ ಡಿಸಿಎಫ್ ಸಿವರಾಂಬಾಬು ಕಣ್ಣೀರಿಟ್ಟಿದ್ದು, ಶೀಘ್ರವೇ ಹಂತಕ ಆನೆಯನ್ನು ಸೆರೆ ಹಿಡಿಯುವುದಾಗಿ ಭರವಸೆ ನೀಡಿದ್ದಾರೆ. ಹಾಸನ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಕೊನೆಗೂ ಹೋಟೆಲ್‍ಗೆ ಟ್ರಬಲ್ ಶೂಟರ್ ಎಂಟ್ರಿ

    ಕೊನೆಗೂ ಹೋಟೆಲ್‍ಗೆ ಟ್ರಬಲ್ ಶೂಟರ್ ಎಂಟ್ರಿ

    ಮುಂಬೈ: ಅತೃಪ್ತ ಶಾಸಕರಿದ್ದ ಹೋಟೆಲ್ ಪ್ರವೇಶಿಸಲು ಡಿ.ಕೆ.ಶಿವಕುಮಾರ್ ಅವರಿಗೆ ಪೊಲೀಸರು ಅನುಮತಿ ನೀಡಿರಲಿಲ್ಲ. ಆದರೂ ಇಂದು ಬೆಳಗ್ಗೆಯಿಂದ ಹೋಟೆಲ್ ಮುಂದೆಯೇ ಧರಣಿ ಕುಳಿತ್ತಿದ್ದರು. ಕೊನೆಗೂ ಹೋಟೆಲ್ ಸಿಬ್ಬಂದಿ ಡಿಕೆಶಿ ಹಠಕ್ಕೆ ಮಣಿದು ರೂಮ್ ಕೊಡಲು ನಿರ್ಧಾರ ಮಾಡಿದ್ದಾರೆ.

    ಹೋಟೆಲ್ ಸಿಬ್ಬಂದಿ ಮತ್ತು ಪೊಲೀಸರು ನಡುವೆ ಮಾತುಕತೆ ನಡೆದಿದ್ದು, ಡಿ.ಕೆ.ಶಿವಕುಮಾರ್ ಅವರಿಗೆ ಹೋಟೆಲ್‍ನಲ್ಲಿ ರೂಮ್ ಕೊಡಲು ಒಪ್ಪಿಗೆ ನೀಡಲಾಗಿದೆ. ಆದರೆ ಅತೃಪ್ತ ಶಾಸಕರ ತಂಗಿರುವ ಬಿಲ್ಡಿಂಗ್ ಬಿಟ್ಟು ಬೇರೆ ಬಿಲ್ಡಿಂಗ್‍ನಲ್ಲಿ ಡಿಕೆಶಿಗೆ ರೂಮ್ ಕೊಡಲು ಸಿಬ್ಬಂದಿ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಹೋಟೆಲ್ ಅವರ ವಾದವನ್ನು ಶಿವಕುಮಾರ್ ತಳ್ಳಿ ಹಾಕಿದ್ದಾರೆ.

    ನನಗೆ ಶಾಸಕರು ಇರುವ ಬಿಲ್ಡಿಂಗ್‍ನಲ್ಲೇ ರೂಮ್ ಬೇಕೇಬೇಕು ಎಂದು ಹೋಟೆಲ್ ಸಿಬ್ಬಂದಿ ಬಳಿ ಶಿವಕುಮಾರ್ ಬಿಗಿ ಪಟ್ಟು ಹಿಡಿದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಸಿಬ್ಬಂದಿ ಡಿಕೆಶಿ ಅವರ ಮನವೊಲಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಡಿಕೆಶಿ ಬೇರೆ ರೂಮ್ ನೀಡುವುದರ ಬಗ್ಗೆ ಒಪ್ಪಿಗೆ ನೀಡಲಿಲ್ಲ. ಕೊನೆಗೂ ಅತೃಪ್ತ ಶಾಸಕರು ಇರುವ ಹೋಟೆಲ್ ಬಿಲ್ಡಿಂಗ್‍ನಲ್ಲಿ ಶಿವಕುಮಾರ್ ಅವರಿಗೆ ರೂಮ್ ಸಿಕ್ಕಿದೆ.

    ಡಿಐಜಿ ಮನವಿ:
    ಮಹಾರಾಷ್ಟ್ರ ದಕ್ಷಿಣ ವಲಯ ಡಿಐಜಿ ಮನೋಜ್ ಶರ್ಮಾ ಅವರು ಮುಂಬೈ ಹೋಟೆಲ್‍ಗೆ ಬಂದು ಡಿ.ಕೆ.ಶಿವಕುಮಾರ್ ಅವರಿಗೆ ಮನವರಿಕೆ ಮಾಡಲು ಯತ್ನಿಸಿದ್ದರು. ತುರ್ತು ಪರಿಸ್ಥಿತಿಯ ಕಾರಣ ರೂಮ್ ಬುಕ್ ಕ್ಯಾನ್ಸಲ್ ಮಾಡಲಾಗಿದೆ. ಇದರಲ್ಲಿ ಹೋಟೆಲ್ ಆಡಳಿತ ಮಂಡಳಿಯ ತಪ್ಪಿಲ್ಲ. ಯಾವುದೇ ಕಾರಣಕ್ಕೂ ಒಳ ಬಿಡಲು ಸಾದ್ಯವಿಲ್ಲ. ಇದರ ಮೇಲೆ ನಿಮ್ಮ ಇಷ್ಟ, ಯಾವುದೇ ಕಾರಣಕ್ಕೂ ನಾವು ನಿಮ್ಮನ್ನು ಒಳ ಬಿಡುವುದಿಲ್ಲ. ಹೋಟೆಲ್ ಸುತ್ತ ಮುತ್ತ 144 ಸೆಕ್ಷನ್ ಹಾಕಲಾಗಿದೆ ಎಂದು ಮನೋಜ್ ಶರ್ಮಾ ಅವರು ಡಿಕೆಶಿ ಅವರಿಗೆ ಮನವರಿಕೆ ಮಾಡಿ ಸ್ಥಳದಿಂದ ತೆರಳಿದ್ದರು. ಆದರೆ ಡಿಐಜಿ ಹೇಳಿದರೂ ಡಿ.ಕೆ.ಶಿವಕುಮಾರ್ ಸ್ಥಳವನ್ನು ಮಾತ್ರ ಬಿಟ್ಟು ಹೋಗಿರಲಿಲ್ಲ.

  • ಗದಗ ಜಿಲ್ಲಾಸ್ಪತ್ರೆಯಲ್ಲಿ ಇರುವೆಗಳ ಕಾಟ

    ಗದಗ ಜಿಲ್ಲಾಸ್ಪತ್ರೆಯಲ್ಲಿ ಇರುವೆಗಳ ಕಾಟ

    ಗದಗ: ನಗರದ ಜಿಲ್ಲಾಸ್ಪತ್ರೆಯಲ್ಲಿ ಕಪ್ಪು ಇರುವೆಗಳ ಹಾವಳಿಯಿಂದ ಬಾಣಂತಿಯರು ಮತ್ತು ಹಸುಗೂಸುಗಳು ರಾತ್ರಿ ನಿದ್ರೆಯಿಲ್ಲದೆ ಹೈರಾಣಾಗುತ್ತಿದ್ದಾರೆ.

    ನಗರದ ಜಿಮ್ಸ್ ಆಸ್ಪತ್ರೆ ಸ್ವಚ್ಛತೆ ಇಲ್ಲದಿರೋದರಿಂದ ಬಹುತೇಕ ವಾರ್ಡ್ ಗಳಲ್ಲಿ ಇರುವೆಗಳ ಲೋಕವೇ ಸೃಷ್ಟಿಯಾಗುತ್ತದೆ. ಇರುವೆಗಳಿಂದ ತಪ್ಪಿಸಿಕೊಳ್ಳಲು ಬಾಣಂತಿಯರು ಕಷ್ಟಪಡುವ ದೃಶ್ಯಗಳು ಜಿಮ್ಸ್ ನಲ್ಲಿ ಕಾಣಸಿಗುತ್ತವೆ. ಇತ್ತ ಬಾಣಂತಿಯರಿಗೆ ನಮಗೆ ಕಚ್ಚಿದ್ರೆ ಸಹಿಸಿಕೊಳ್ಳಬಹುದು, ನವಜಾತ ಶಿಶುಗಳಿಗೆ ಕಚ್ಚಿದರೆ ಮುಂದೇನು ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

    ಈ ಸಂಬಂಧ ರೋಗಿಗಳು ವೈದ್ಯರು ಮತ್ತು ಸಿಬ್ಬಂದಿಗೆ ತಿಳಿಸಿದರೂ ಸ್ವಚ್ಛತಾ ಕಾರ್ಯಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಇಂದು ಆಸ್ಪತ್ರೆಯಲ್ಲಿ ಮಾಧ್ಯಮಗಳ ಕ್ಯಾಮೆರಾ ಕಂಡ ಕೂಡಲೇ ಸಿಬ್ಬಂದಿ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು.