Tag: staff

  • ಆಸ್ಪತ್ರೆಗೆ ಬರೀ ಭೇಟಿ ಕೊಟ್ರೆ ಪ್ರಯೋಜನವಿಲ್ಲ, ಕ್ರಮ ತಗೊಳ್ಬೇಕು: ದತ್ತಾತ್ರೇಯ ಪಾಟೀಲ್ ಕಿಡಿ

    ಆಸ್ಪತ್ರೆಗೆ ಬರೀ ಭೇಟಿ ಕೊಟ್ರೆ ಪ್ರಯೋಜನವಿಲ್ಲ, ಕ್ರಮ ತಗೊಳ್ಬೇಕು: ದತ್ತಾತ್ರೇಯ ಪಾಟೀಲ್ ಕಿಡಿ

    ಕಲಬುರಗಿ: ಜಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಕಂಡು ಸಿಬ್ಬಂದಿ ಮತ್ತು ಪಾಲಿಕೆ ಅಧಿಕಾರಿಗಳನ್ನು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ತರಾಟೆ ತೆಗೆದುಕೊಂಡಿದ್ದಾರೆ. ಜೊತೆಗೆ ಆಸ್ಪತ್ರೆಗೆ ಬರೀ ಭೇಟಿ ಕೊಟ್ಟರೆ ಪ್ರಯೋಜನವಿಲ್ಲ, ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸದ ಡಾ.ಉಮೇಶ್ ಜಾಧವ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

    ಸ್ವಚ್ಛತಾ ಅಭಿಯಾನ ಕಾಮಗಾರಿಗೆ ತೆರಳಿದಾಗ ಅಲ್ಲಿನ ಅವ್ಯವಸ್ಥೆ ಕಂಡು ಸಂಸದ ಡಾ.ಉಮೇಶ್ ಜಾಧವ್ ಮತ್ತು ಶಾಸಕ ದತ್ತಾತ್ರೇಯ ಪಾಟೀಲ್ ಕೆಂಡಾಮಂಡಲರಾದರು. ಈ ವೇಳೆ ಶಾಸಕರು, ಜಾಧವ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟು ಸಂಸದರ ಎದುರೇ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.

    ನೀವು ಬರೀ ವಿಸಿಟ್ ಮಾಡಿದ್ರೆ ಪ್ರಯೋಜನವಿಲ್ಲ. ನಿರ್ಲಕ್ಷ್ಯ ತೋರಿದ ಒಂದಿಬ್ಬರು ಅಧಿಕಾರಿ, ಸಿಬ್ಬಂದಿ ಸಂಸ್ಪೆಂಡ್ ಮಾಡಿದರೆ ಮಾತ್ರ ಎಲ್ಲವೂ ಸರಿ ಹೋಗುತ್ತೆ. ಇಲ್ಲ ಅಂದರೆ ನೀವು ಬರೀ ಭೇಟಿ ನೀಡುತ್ತೀರಿ ಎಂದು ಅಧಿಕಾರಿಗಳು ಸಮ್ಮನಾಗುತ್ತಾರೆ ಎಂದು ಸಂಸದರ ಎದುರೇ ಹರಿಹಾಯ್ದಿದ್ದಾರೆ. ಇದನ್ನೂ ಓದಿ:ಕಾರಿಡಾರ್‌ನಲ್ಲೇ ರೋಗಿಗಳಿಗೆ ಚಿಕಿತ್ಸೆ- ಗದಗ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ

    ಇದೇ ವೇಳೆ ದತ್ತಾತ್ರೇಯ ಪಾಟೀಲ್‍ಗೆ ದನಿಗೂಡಿಸಿದ ಜಾಧವ್ ಸಹ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಸ್ಥಳಕ್ಕಾಗಮಿಸಿದ ಪಾಲಿಕೆ ಎಂಜಿನಿಯರನ್ನೂ ಸಖತ್ ತರಾಟೆಗೆ ತೆಗೆದುಕೊಂಡರು. ನಾವಿಲ್ಲಿ ಕೆಲಸ ಮಾಡಲು ಬಂದ್ರೆ ಮುಖಕ್ಕೆ ಪೌಡರ್ ಹಚ್ಚಿಕೊಳ್ಳಲು ಹೋಗಿದ್ರಾ ಎಂದು ಸ್ಥಳಕ್ಕೆ ತಡವಾಗಿ ಬಂದ ಅಧಿಕಾರಿಗೆ ಮಂಗಳಾರತಿ ಮಾಡಿದ್ದಾರೆ.

  • ಪೊಲೀಸ್ ಸಿಬ್ಬಂದಿಗೆ ಹಿಗ್ಗಾಮುಗ್ಗ ಥಳಿಸಿದ ರೌಡಿ ಶೀಟರ್

    ಪೊಲೀಸ್ ಸಿಬ್ಬಂದಿಗೆ ಹಿಗ್ಗಾಮುಗ್ಗ ಥಳಿಸಿದ ರೌಡಿ ಶೀಟರ್

    ಮೈಸೂರು: ಪೊಲೀಸ್ ಸಿಬ್ಬಂದಿಗೆ ರೌಡಿಶೀಟರ್ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಕರ್ತವ್ಯದಲ್ಲಿದ್ದ ಮುಖ್ಯಪೇದೆ ಮಂಜುನಾಥ್‍ಗೆ ರೌಡಿಶೀಟರ್ ಸೋಮಶೇಖರ್ ಅಲಿಯಾಸ್ ಸೋಮು ಟೀಂನಿಂದ ಹಲ್ಲೆ ಮಾಡಲಾಗಿದೆ. ರೌಡಿಶೀಟರ್ ಸೋಮು ಸಹೋದರಿ ಲತಾ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದು ಶುಕ್ರವಾರ ರಾತ್ರಿ 11 ಗಂಟೆಯಾದರೂ ಅಂಗಡಿ ತೆರೆಯಲಾಗಿತ್ತು. ಈ ವೇಳೆ ಅಂಗಡಿ ಮುಚ್ಚುವಂತೆ ಪೊಲೀಸ್ ಮುಖ್ಯ ಪೇದೆ ಹೇಳಿದ್ದಾರೆ.

    ಈ ವೇಳೆ ವಾಗ್ವಾದಕ್ಕೆ ತಿರುಗಿ ಪೊಲೀಸ್ ಮುಖ್ಯಪೇದೆ ಮಂಜುನಾಥ್ ಮೇಲೆ ರೌಡಿಶೀಟರ್ ಸೋಮ ಮತ್ತು ಅವನ ಸ್ನೇಹಿತರು ಹಲ್ಲೆ ಮಾಡಿದ್ದಾರೆ. ಹಲ್ಲೆ ಸಂಬಂಧ ಸೋಮು ಹಾಗೂ ಆತನ ಸಹೋದರ ಚಂದ್ರಶೇಖರ್, ಸಹೋದರಿ ಲತಾ ವಿರುದ್ಧ ದೇವರಾಜ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸೋಮು ನಾಪತ್ತೆಯಾಗಿದ್ದಾನೆ.

  • ಶಿವನ್ ಜೊತೆ ವಿಮಾನದ ಸಿಬ್ಬಂದಿ ಸೆಲ್ಫಿ- ಇಸ್ರೋ ಅಧ್ಯಕ್ಷರ ವಿಡಿಯೋ ವೈರಲ್

    ಶಿವನ್ ಜೊತೆ ವಿಮಾನದ ಸಿಬ್ಬಂದಿ ಸೆಲ್ಫಿ- ಇಸ್ರೋ ಅಧ್ಯಕ್ಷರ ವಿಡಿಯೋ ವೈರಲ್

    ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಅಧ್ಯಕ್ಷ ಕೆ ಶಿವನ್ ಅವರು ಇಡೀ ದೇಶದ ಜನರ ಮನಸ್ಸನ್ನು ಗೆದ್ದಿದ್ದು, ಯಾವುದೇ ಸೆಲೆಬ್ರಿಟಿಗಳಿಗೆ ಕಮ್ಮಿ ಇಲ್ಲ. ಚಂದ್ರಯಾನ 2 ಉಡಾವಣೆಯ ಸಂದರ್ಭದಲ್ಲಿ ಶಿವನ್ ಹಾಗೂ ಅವರ ತಂಡ ಪಟ್ಟ ಶ್ರಮಕ್ಕೆ ದೇಶವೇ ಹೆಮ್ಮೆ ವ್ಯಕ್ತಪಡಿಸಿದೆ.

    ಶಿವನ್ ಅವರ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಮೂಲಕ ಅವರು ಜನರ ಹೀರೋ ಎನಿಸಿಕೊಂಡಿದ್ದಾರೆ. ಶಿವನ್ ಅವರ ಸಿಂಪ್ಲಿಸಿಟಿ ಬಗ್ಗೆ ವಿಡಿಯೋವೊಂದನ್ನು ಶೆಫಾಲಿ ವೈದ್ಯ ಎಂಬವರು ತಮ್ಮ ಟ್ವಿಟ್ಟರ್‍ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅಲ್ಲದೆ ಇಸ್ರೋ ಅಧ್ಯಕ್ಷ ಶಿವನ್ ಅವರನ್ನು ನೋಡಿ ಹೃದಯ ತುಂಬಿ ಬಂತು ಎಂದು ಬರೆದುಕೊಂಡಿದ್ದಾರೆ.

    ವಿಡಿಯೋದಲ್ಲೇನಿದೆ..?
    90 ಸೆಕೆಂಡಿನ ಈ ವಿಡಿಯೋದಲ್ಲಿ ಶಿವನ್ ಅವರು ಇಂಡಿಗೋ ವಿಮಾನದಲ್ಲಿರುವುದನ್ನು ಕಾಣಬಹುದು. ಶಿವನ್ ಅವರನ್ನು ಗಮನಿಸಿದ ಸಿಬ್ಬಂದಿ ಅವರನ್ನು ಮುಂಬಾಗಕ್ಕೆ ಕರೆದುಕೊಂಡು ಸೆಲ್ಫಿ ತೆಗೆದುಕೊಂಡಿದ್ದಾರೆ. ಅಲ್ಲದೆ ಸಿಬ್ಬಂದಿ ಕೈಕುಲುಕಿದ್ದಾರೆ. ಈ ವೇಳೆ ಸಿಬ್ಬಂದಿ ತಮ್ಮನ್ನು ಪರಿಚಯಿಸಿಕೊಂಡಿದ್ದಾರೆ. ನಂತರ ತನ್ನ ಸೀಟ್ ಗೆ ಬಂದು ಕುಳೀತುಕೊಂಡಿದ್ದಾರೆ. ಈ ವೇಳೆ ವಿಮಾನದಲ್ಲಿದ್ದ ಸಿಬ್ಬಂದಿ ಚಪ್ಪಾಳೆ ತಟ್ಟಿ ಇಸ್ರೋ ಅಧ್ಯಕ್ಷರ ಸಿಂಪ್ಲಿಸಿಟಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸದ್ಯ ಈ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿದ್ದು, ಇಸ್ರೋ ಅಧ್ಯಕ್ಷ ಸರಳತೆಯನ್ನು ಕೊಂಡಾಡಿದ್ದಾರೆ.

  • ಕೊಪ್ಪಳ ಪಂಚಾಯತ್ ರಾಜ್ ಕಚೇರಿಯ ಲಂಚಬಾಕ ಅಧಿಕಾರಿ, ಸಿಬ್ಬಂದಿ ಅಮಾನತು

    ಕೊಪ್ಪಳ ಪಂಚಾಯತ್ ರಾಜ್ ಕಚೇರಿಯ ಲಂಚಬಾಕ ಅಧಿಕಾರಿ, ಸಿಬ್ಬಂದಿ ಅಮಾನತು

    ಕೊಪ್ಪಳ: ಸಿಎಂ ಯಡಿಯೂರಪ್ಪ ಅವರಿಂದ ನಾಮಕರಣಗೊಂಡ ಕಲ್ಯಾಣ ಕರ್ನಾಟಕದಲ್ಲಿನ ಮೊದಲ ಲಂಚಾವತಾರ ಪ್ರಕರಣದ ಅಧಿಕಾರಿ ಮತ್ತು ಸಿಬ್ಬಂದಿಯನ್ನ ಅಮಾನತುಗೊಳಿಸಿ ಕೊಪ್ಪಳ ಸಿಇಓ ಆದೇಶ ಹೊರಡಿಸಿದ್ದಾರೆ.

    ಈ ಕುರಿತು ಮಾಧ್ಯಮಕ್ಕೆ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಕೊಪ್ಪಳ ಎಚ್.ಕೆ.ಆರ್.ಡಿ.ಬಿ ನಿಗಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಲೆಕ್ಕಾಧಿಕಾರಿ ನಾರಾಯಣ ಸ್ವಾಮಿ ಮತ್ತು ಕಂಪ್ಯೂಟರ್ ಆಪರೇಟರ್ ಆದೆಪ್ಪ ಲಂಚಕ್ಕೆ ಬೇಡಿಕೆ ಇಟ್ಟ ವೀಡಿಯೋ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಕುರಿತು  ಸೆ. 29ರಂದು ಪಬ್ಲಿಕ್ ಟಿವಿ ಸುದ್ದಿ ಪ್ರಸಾರ ಮಾಡಿತ್ತು. ವರದಿ ನೋಡಿ ಎಚ್ಚೆತ್ತ ಕೊಪ್ಪಳ ಜಿಲ್ಲಾಡಳಿತ ಇಬ್ಬರನ್ನೂ ಅಮಾನತುಗೊಳಿಸಿ ಆದೇಶಿಸಿದೆ.

    ಎಚ್.ಕೆ.ಆರ್.ಡಿ.ಬಿ ನಿಗಮದಲ್ಲಿ ಕಾಮಗಾರಿಗಳ ಕಡತ ವಿಲೇವಾರಿಗಾಗಿ ಮೇಲಾಧಿಕಾರಿಗಳಿಗೆ ಲಂಚವನ್ನು ಕೊಡಬೇಕು ಎಂದು ಕೇಳಿದ್ದ ಅಧಿಕಾರಿ ನಾರಾಯಣ ಸ್ವಾಮಿಯ ಬಂಡವಾಳ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಹಾಗೆಯೇ ಕಂಪ್ಯೂಟರ್ ಆಪರೇಟರ್ ಸಹ ಕಡತ ವಿಲೇವಾರಿಗಾಗಿ ಹಣ ಕೇಳಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಪ್ರಕರಣವು ಕಲ್ಯಾಣ ಕರ್ನಾಟಕದ ಮೊದಲ ಲಂಚಾವತಾರದ ಪ್ರಕರಣವಾಗಿದೆ.

    ಕಾಮಗಾರಿಗೆ ಅನುಮತಿ ನೀಡಬೇಕು ಎಂದರೆ 30% ಲಂಚ ಕೊಡಲೇಬೇಕೆಂದು ಇಲ್ಲಿನ ಅಧಿಕಾರಿ ನಾರಾಯಣಸ್ವಾಮಿ ಮುಲಾಜಿಲ್ಲದೆ ಗುತ್ತಿಗೆದಾರರ ಬಳಿ ಬೇಡಿಕೆ ಇಟ್ಟಿದ್ದರು. ಗುತ್ತಿಗೆದಾರರು ನಮಗೆ ಏನೂ ಉಳಿಯೋದಿಲ್ಲ ಸರ್ ಕೊಡಕ್ಕೆ, ತಲೆಕೆಟ್ಟುಹೋಗಿದೆ. ನಮಗೆ 31 ಪರ್ಸೆಂಟೇಜ್ ಬರುತ್ತೆ, ಅದರಲ್ಲಿ ನಿಮಗೆಲ್ಲಿಂದ ಕೊಡೋದು ಎಂದರೆ, ಅಧಿಕಾರಿ ನಾರಾಯಣಸ್ವಾಮಿ ನಾವು ಇಲ್ಲಿ ತುಂಬಾ ಜನಕ್ಕೆ ಕೊಡಬೇಕು ಹಣ ಕೊಟ್ಟು ಕಾಮಗಾರಿ ಮಾಡಿ ಎಂದು ನೇರವಾಗಿ ಹಣ ಕೇಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿತ್ತು.

    ಇಲ್ಲಿನ ಅಧಿಕಾರಿಗಳಿಗೆ ಲಂಚ ನೀಡಿದ್ದಲ್ಲದೇ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಂಪ್ಯೂಟರ್ ಆಪರೇಟರ್ ಗಳು ಕೂಡ ಲಂಚ ಹೇಳಿರುವ ಬಗ್ಗೆ ವರದಿಯಾಗಿತ್ತು. ಅತ್ತ ಅಧಿಕಾರಿ ಹಣ ಪೀಕಿದರೆ, ಇತ್ತ ಪಂಚಾಯತ್ ರಾಜ್ ಕಚೇರಿಯ ಕಂಪ್ಯೂಟರ್ ಆಪರೇಟರ್ ಆದೇಪ್ಪನಿಗೆ ಮಾಮೂಲಿ ಕೊಟ್ಟರೇನೆ ಆತ ಫೈಲ್ ಮುಂದಕ್ಕೆ ಕಳಿಹಿಸುತ್ತಾನೆ. ಇಲ್ಲದಿದ್ದರೆ ಯಾವ ಕೆಲಸನೂ ಆಗಲ್ಲ. ಯಾರು ಮೊದಲು ಕಮಿಷನ್ ಕೊಡುತ್ತಾರೋ ಅವರ ಕೆಲಸ ಬೇಗ ಆಗುತ್ತೆ. ಹಣ ಕೊಡು ನಿನ್ನ ಕೆಲಸ ನಾನು ಮಾಡಿಸಿ ಕೊಡುತ್ತೇನೆ ಎಂದು ಆದೇಪ್ಪ ಗುತ್ತಿಗೆದಾರರಿಗೆ ಹೇಳಿದ ದೃಶ್ಯಗಳು ಕೂಡ ವಿಡಿಯೋದಲ್ಲಿ ಸೆರೆಯಾಗಿತ್ತು. ಈ ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಲಂಚ ಪಡೆದ ಅಧಿಕಾರಿ ಹಾಗೂ ಸಿಬ್ಬಂದಿಯನ್ನ ಅಮಾನತುಗೊಳಿಸಿದೆ.

  • ಕೊಪ್ಪಳದ ಪಂಚಾಯತ್ ರಾಜ್ ಕಚೇರಿಯಲ್ಲಿ ಲಂಚಬಾಕರ ದರ್ಬಾರ್

    ಕೊಪ್ಪಳದ ಪಂಚಾಯತ್ ರಾಜ್ ಕಚೇರಿಯಲ್ಲಿ ಲಂಚಬಾಕರ ದರ್ಬಾರ್

    -ಹಣ ಕೊಟ್ಟಿಲ್ಲ ಅಂದ್ರೆ ಮುಂದಕ್ಕೋಗಲ್ಲ ಫೈಲು

    ಕೊಪ್ಪಳ: ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ರಾಜ್ಯ ಸರ್ಕಾರ ನೂರಾರು ಕೋಟಿ ರೂಪಾಯಿ ಮೀಸಲಿಡುತ್ತೆ. ಆದರೆ ಅಧಿಕಾರಿಗಳ ಲಂಚಬಾಕತನದಿಂದ ಈ ಭಾಗದ ಜಿಲ್ಲೆಗಳಲ್ಲಿ ಪ್ರತಿಯೊಂದು ಕಾಮಗಾರಿಗೂ ಪರ್ಸೆಂಟೆಜ್ ಲೆಕ್ಕದಲ್ಲಿ ಲಂಚ ನೀಡಬೇಕಾದ ಪರಿಸ್ಥಿತಿ ಇದೆ.

    ಹೌದು. ಅಭಿವೃದ್ಧಿಯ ದೃಷ್ಠಿಯಿಂದ ಸಿಎಂ ಯಡಿಯೂರಪ್ಪ ಅವರು ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿದ್ದಾರೆ. ಆದರೆ ಅಭಿವೃದ್ಧಿ ಮಾತ್ರ ಆಗುತ್ತಿಲ್ಲ. ಕೊಪ್ಪಳದ ಪಂಚಾಯತ್ ರಾಜ್ ಕಚೇರಿಯಲ್ಲಿರುವ ಎಚ್.ಕೆ.ಆರ್.ಡಿ.ಬಿ ನಿಗಮದಲ್ಲಿ ಲಂಚಾವತಾರಕ್ಕೆ ಬ್ರೇಕ್ ಬಿದ್ದಿಲ್ಲ. ಕಾಮಗಾರಿ ನಡೆಯಬೇಕು ಎಂದರೆ 30% ಲಂಚ ಕೊಡಲೇಬೇಕೆಂದು ಇಲ್ಲಿನ ಅಧಿಕಾರಿ ನಾರಾಯಣಸ್ವಾಮಿ ಮುಲಾಜಿಲ್ಲದೆ ಗುತ್ತಿಗೆದಾರರ ಬಳಿ ಬೇಡಿಕೆ ಇಡುತ್ತಾರೆ.

    ಗುತ್ತಿಗೆದಾರರು ನಮಗೆ ಏನೂ ಉಳಿಯೋದಿಲ್ಲ ಸರ್ ಕೊಡಕ್ಕೆ, ತೆಲೆಕೆಟ್ಟುಹೋಗಿದೆ. ನಮಗೆ 31 ಪರ್ಸೆಂಟೇಜ್ ಬರುತ್ತೆ, ಅದರಲ್ಲಿ ನಿಮಗೆಲ್ಲಿಂದ ಕೊಡೋದು ಎಂದರೆ, ಅಧಿಕಾರಿ ನಾರಾಯಣಸ್ವಾಮಿ ನಾವು ಇಲ್ಲಿ ತುಂಬಾ ಜನಕ್ಕೆ ಕೊಡಬೇಕು ಹಣ ಕೊಟ್ಟು ಕಾಮಗಾರಿ ಮಾಡಿ ಎಂದು ನೇರವಾಗಿ ಹಣ ಕೇಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

    ಇಲ್ಲಿನ ಅಧಿಕಾರಿಗಳಿಗೆ ಲಂಚ ನೀಡಿದ್ದಲ್ಲದೇ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡೋ ಕಂಪ್ಯೂಟರ್ ಆಪರೇಟರ್‌ಗಳಿಗೂ ಲಂಚ ನೀಡಬೇಕಾಗಿದೆ. ಅತ್ತ ಅಧಿಕಾರಿ ಹಣ ಪೀಕಿದರೆ, ಇತ್ತ ಕಂಪ್ಯೂಟರ್ ಆಪರೇಟರ್ ಕೂಡ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಪಂಚಾಯತ್ ರಾಜ್ ಕಚೇರಿಯ ಕಂಪ್ಯೂಟರ್ ಆಪರೇಟರ್ ಆದೇಪ್ಪನಿಗೆ ಮಾಮೂಲಿ ಕೊಟ್ಟರೇನೆ ಆತ ಫೈಲ್ ಮುಂದಕ್ಕೆ ಕಳಿಹಿಸುತ್ತಾನೆ. ಇಲ್ಲದಿದ್ದರೆ ಯಾವ ಕೆಲಸನೂ ಆಗಲ್ಲ. ಯಾರು ಮೊದಲು ಕಮಿಷನ್ ಕೊಡುತ್ತಾರೋ ಅವರ ಕೆಲಸ ಬೇಗ ಆಗುತ್ತೆ. ಹಣ ಕೊಡು ನಿನ್ನ ಕೆಲಸ ನಾನು ಮಾಡಿಸಿ ಕೊಡುತ್ತೇನೆ ಎಂದು ಆದೇಪ್ಪ ಗುತ್ತುಗೆದಾರರಿಗೆ ಹೇಳಿದ ದೃಶ್ಯಗಳು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.

    ರಾಜ್ಯಸರ್ಕಾರ ಹೈದರಾಬಾದ್ ಕರ್ನಾಟಕದ 6 ಜಿಲ್ಲೆಗಳ ಅಭಿವೃದ್ಧಿಗೆ ಪ್ರತಿ ವರ್ಷ 300 ಕೋಟಿ ಹಣ ಮೀಸಲಿಡುತ್ತೆ. ಆದರೆ ಅಧಿಕಾರಿಗಳು, ಗುತ್ತಿಗೆದಾರರ ಲಂಚಬಾಕತನದಿಂದ ಯೋಜನೆಗಳು ಹಳ್ಳ ಹಿಡಿಯುತ್ತಿವೆ. ಈಗಲಾದರು ಸರ್ಕಾರ ಇಂತಹ ಲಂಚಕೋರರ ವಿರುದ್ಧ ಕ್ರಮ ಕೈಗೊಂಡು, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪಣತೊಡಬೇಕಾಗಿದೆ.

  • ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ ಶ್ರೀರಾಮುಲು

    ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ ಶ್ರೀರಾಮುಲು

    – ಸಿಬ್ಬಂದಿಗೆ ಸಂಬಳ ಹೆಚ್ಚಳದ ಭರವಸೆ
    – ಸಚಿವರ ಕೆಲಸಕ್ಕೆ ಶ್ಲಾಘನೆ

    ಚಾಮರಾಜನಗರ: ಮಂಗಳವಾರ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ ಆರೋಗ್ಯ ಸಚಿವ ಶ್ರೀರಾಮುಲು ಅವರು ಆಸ್ಪತ್ರೆಯಲ್ಲೇ ಸ್ನಾನ ಮುಗಿಸಿ, ಶಿವಪೂಜೆ ನೆರವೇರಿಸಿದ್ದಾರೆ.

    ಜಿಲ್ಲಾಸ್ಪತ್ರೆಯಲ್ಲಿ ಇರುವ ಸಮಸ್ಯೆ, ಕುಂದುಕೊರತೆಗಳನ್ನು ಅರಿಯಲು ಸ್ವತಃ ಆರೋಗ್ಯ ಸಚಿವರೇ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ರೋಗಿಗಳ ಸಮಸ್ಯೆಗಳನ್ನು ಹತ್ತಿರದಿಂದ ತಿಳಿಯಲು ಶ್ರೀರಾಮುಲು ಆಸ್ಪತ್ರೆಯಲ್ಲಿ ತಂಗಿದ್ದಾರೆ. ಬೆಳಗ್ಗೆ ಎದ್ದು ಆಸ್ಪತ್ರೆಯ ಶೌಚಾಲಯದಲ್ಲೇ ಸ್ನಾನ ಮುಗಿಸಿ, ತಾವು ಉಳಿದಿದ್ದ ಕೊಠಡಿಯಲ್ಲೇ ಸಚಿವರು ಶಿವಪೂಜೆ ಮಾಡಿದರು.

    ಪೂಜೆಯ ಬಳಿಕ ಆಸ್ಪತ್ರೆ ಆವರಣದಲ್ಲಿ ಶ್ರೀರಾಮುಲು ಅವರು ಸಿಬ್ಬಂದಿ ಜೊತೆ ಕುಂದುಕೊರತೆ ಸಭೆ ನಡೆಸಿದ್ದು, ಶುಶ್ರೂಷಕರ ಡಿ ದರ್ಜೆ ನೌಕರರ ಸಮಸ್ಯೆಗಳನ್ನು ಆಲಿಸಿದರು. ಜೊತೆಗೆ ಸೇವಾಭದ್ರತೆ, ಸಂಬಳದ ಕೊರತೆ ಬಗ್ಗೆ ಸಚಿವರಲ್ಲಿ ಶುಶ್ರೂಷಕಿಯರು ಮನವಿ ಮಾಡಿದರು.

    ಆಸ್ಪತ್ರೆಯ ಸಮಸ್ಯೆ, ಸಿಬ್ಬಂದಿ ಸಮಸ್ಯೆಗಳನ್ನು ಆಲಿಸಿದ ಸಚಿವರು, ಕೇಂದ್ರ ಸರ್ಕಾರದ ನೂತನ ಯೋಜನೆ ಬಗ್ಗೆ ತಿಳಿಸಿ ಸಂಬಳ ಹೆಚ್ಚಿಸುವ ಬಗ್ಗೆ ಭರವಸೆ ನೀಡಿದರು. ಶ್ರೀರಾಮುಲು ಅವರ ಈ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸ್ವತಃ ಸಚಿವರೇ ಹೀಗೆ ಸಮಸ್ಯೆಗಳನ್ನು ಕಣ್ಣಾರೆ ಕಂಡು ಪರಿಹಾರ ನೀಡುವುದು ಒಂದೊಳ್ಳೆ ಪ್ರಯತ್ನ ಎಂದು ಶ್ಲಾಘಿಸಿದ್ದಾರೆ.

  • ಮದ್ಯದಂಗಡಿಯಾದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ

    ಮದ್ಯದಂಗಡಿಯಾದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ

    ಚಿಕ್ಕಮಗಳೂರು: ಒಂದೆಡೆ ಆರೋಗ್ಯ ಸಮಸ್ಯೆ ಇಟ್ಟುಕೊಂದು ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ. ಇನ್ನೊಂದೆಡೆ ಕುಡುಕರ ಹಾವಳಿಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯೇ ಮದ್ಯದಂಗಡಿ ರೀತಿ ಆಗಿಬಿಟ್ಟಿದೆ.

    ಹೌದು. ಚಿಕಿತ್ಸೆಗಾಗಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು ಸರಿಯಾದ ಸೌಲಭ್ಯ ಸಿಗದೇ ಕಷ್ಟಪಡುತ್ತಿದ್ದಾರೆ. ಅಲ್ಲದೆ ಜಿಲ್ಲಾಸ್ಪತ್ರೆ ನಿರ್ವಹಣೆಯನ್ನು ಸಿಬ್ಬಂದಿ ಸರಿಯಾಗಿ ಮಾಡದೇ ನಿರ್ಲಕ್ಷ್ಯ ತೋರಿರುವುದಕ್ಕೆ ಆಸ್ಪತ್ರೆ ಕುಡುಕರಿಗೆ ಮದ್ಯ ಸೇವಿಸೋ ಅಡ್ಡೆಯಾಗಿಬಿಟ್ಟಿದೆ. ಆಸ್ಪತ್ರೆಯ ಸುತ್ತಮುತ್ತಲ ಆವರಣ, ಶೌಚಾಲಯಗಳು ಹೀಗೆ ಎಲ್ಲೆಂದರಲ್ಲಿ ಮದ್ಯದ ಬಾಟಲಿ ಹಾಗೂ ಪ್ಯಾಕೆಟ್‍ಗಳೇ ರಾರಾಜಿಸುತ್ತಿದೆ. ಎಲ್ಲೆಂದರಲ್ಲಿ ಮದ್ಯ ಸೇವಿಸಿ ಆಸ್ಪತ್ರೆ ಆವರಣವನ್ನು ಕುಡುಕರು ಗಬ್ಬೆಬ್ಬಿಸಿದ್ದಾರೆ.

    ಅಷ್ಟೇ ಅಲ್ಲದೆ ಮದ್ಯ ಕುಡಿದು ಆಸ್ಪತ್ರೆಯ ಗೋಡೆ ಮೇಲೆ ಬಾಟಲಿಗಳನ್ನು ಕುಡುಕರು ಸಾಲಾಗಿ ಜೋಡಿಸಿಟ್ಟಿದ್ದಾರೆ. ಇದನ್ನೆಲ್ಲಾ ನೋಡಿಕೊಂಡು ಜಿಲ್ಲಾಸ್ಪತ್ರೆ ಸಿಬ್ಬಂದಿ ಸುಮ್ಮನಿದ್ದು, ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸಿಬ್ಬಂದಿ ನಿರ್ಲಕ್ಷ್ಯಕ್ಕೆ ರೋಗಿಗಳು ಹೈರಾಣಾಗಿದ್ದಾರೆ. ಆಸ್ಪತ್ರೆ ಶೌಚಾಲಯಕ್ಕೆ ಹೋಗಲು ರೋಗಿಗಳಿಗೆ ವಾಕರಿಕೆ ಬರುವ ದುಸ್ಥಿತಿ ಇದೆ.

    ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಕಂಡು ಬೇಸತ್ತು ಹೋದ ಕೆಲ ರೋಗಿಗಳು ಆಸ್ಪತ್ರೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಯ ಮದ್ಯದ ಅವಾಂತರ ಎಲ್ಲೆಡೆ ವೈರಲ್ ಆಗಿದ್ದು, ಸ್ವಚ್ಛತೆಗೆ ಆದ್ಯತೆ ಕೊಡದ ಅಧಿಕಾರಿ, ಸಿಬ್ಬಂದಿ ವಿರುದ್ಧ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಆರೋಗ್ಯ ಸಚಿವರು ಗಮನಹರಿಸಿ, ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅವ್ಯವಹಾರಕ್ಕೆ ಬ್ರೇಕ್ ಹಾಕಬೇಕಿದೆ.

  • ರೋಗಿಗಳ ಆರೈಕೆಗೂ ಲಂಚ ಕೇಳುವ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ

    ರೋಗಿಗಳ ಆರೈಕೆಗೂ ಲಂಚ ಕೇಳುವ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ

    ರಾಯಚೂರು: ರೋಗಿಗಳ ಆರೈಕೆಗೆ ದುಡ್ಡು ವಸೂಲಿ ಮಾಡುತ್ತಿದ್ದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ತಿರುಗಿಬಿದ್ದ ಘಟನೆ ರಾಯಚೂರಿನ ದೇವದುರ್ಗದ ಜಾಲಹಳ್ಳಿಯಲ್ಲಿ ನಡೆದಿದೆ.

    ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಇಂಜಿಕ್ಷನ್ ಮಾಡಲು 50 ರೂಪಾಯಿ, ಉಚಿತ ಔಷಧಿ ನೀಡಲು ಸಹ ಹಣ ವಸೂಲಿ ಮಾಡುತ್ತಿದ್ದ ಹಿನ್ನೆಲೆ ರೋಗಿಗಳ ಕಡೆಯವರು ಜಗಳ ಮಾಡಿದ್ದಾರೆ. ಬಹಿರಂಗವಾಗಿ ಹಣ ವಸೂಲಿ ಮಾಡುತ್ತಿರುವ ನರ್ಸ್ ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

    ರೋಗಿಗಳ ಗಲಾಟೆಗೆ ಸೊಪ್ಪು ಹಾಕದ ಸಿಬ್ಬಂದಿ ನಿಮ್ಮ ಹಣ ನೀವು ತೆಗೆದುಕೊಂಡು ಸುಮ್ಮನಿರಿ ಎಂದು ಗದರಿ, ಹಣ ವಾಪಸ್ ಕೊಟ್ಟಿದ್ದಾರೆ. ಇದನ್ನು ತಮ್ಮ ಮೊಬೈಲ್‍ಗಳಲ್ಲಿ ಚಿತ್ರೀಕರಿಸಿರುವ ಸಾರ್ವಜನಿಕರು ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆಸ್ಪತ್ರೆಯಲ್ಲಿ ಔಷಧಿ ಇದ್ದರೂ ಹೊರಗಡೆ ಬರೆದುಕೊಡುತ್ತಿದ್ದಾರೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮೈದಾನದ ಸಿಬ್ಬಂದಿಗೆ ಒಂದೂವರೆ ಲಕ್ಷ ರೂ. ದಾನ ಮಾಡಿದ ಸಂಜು

    ಮೈದಾನದ ಸಿಬ್ಬಂದಿಗೆ ಒಂದೂವರೆ ಲಕ್ಷ ರೂ. ದಾನ ಮಾಡಿದ ಸಂಜು

    ತಿರುವಂನಂತಪುರಂ: ಭಾರತದ ಕ್ರಿಕೆಟ್ ತಂಡದ ಆಟಗಾರ ಸಂಜು ಸ್ಯಾಮ್‍ಸನ್ ಅವರು ತಮ್ಮ ಎರಡು ಪಂದ್ಯದ ಫೀಸ್ ಅಂದರೆ ಒಂದೂವರೆ ಲಕ್ಷ ರೂ. ಮೈದಾನದ ಸಿಬ್ಬಂದಿಗೆ ದಾನ ಮಾಡಿದ್ದಾರೆ.

    ಶುಕ್ರವಾರ ತಿರುವನಂತಪುರಂನ ಗ್ರೀನ್‍ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ಎ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ವಿಕೆಟ್‍ಕೀಪರ್, ಬ್ಯಾಟ್ಸ್ ಮೆನ್ ಸಂಜು ಸ್ಯಾಮ್‍ಸನ್ ಭಾರತ ಎ ಪರ ಅದ್ಭುತವಾಗಿ ಆಡಿದ್ದಾರೆ. ಸಂಜು 48 ಎಸೆತಗಳಲ್ಲಿ 91 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತ ಎ ತಂಡ 4-1 ಸರಣಿಯಿಂದ ಗೆದ್ದಿದೆ.

    ಸಂಜು ಸ್ಯಾಮ್‍ಸನ್ ಅವರ ಅತ್ಯುತ್ತಮ ಆಟವಾಗಿದ್ದಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಇದಾದ ಬಳಿಕ ಅವರು ತಮ್ಮ ಎರಡೂ ಪಂದ್ಯದ ಫೀಸ್ ಅಂದರೆ ಒಂದೂವರೆ ಲಕ್ಷ ರೂ. ವನ್ನು ತಿರುವನಂತಪುರಂ ಕ್ರೀಡಾಂಗಣದ ಸಿಬ್ಬಂದಿಗೆ ದಾನ ಮಾಡಿದ್ದಾರೆ. ಸಂಜು ಅವರು ಮೈದಾನದ ಸಿಬ್ಬಂದಿಯ ಕೆಲಸದಿಂದ ಪ್ರಭಾವಿತರಾಗಿದ್ದಾರೆ. ಮಳೆ ಅಡ್ಡಿಪಡಿಸಿದ ಪಂದ್ಯವನ್ನು ಪೂರ್ಣಗೊಳಿಸಲು ಅವರು ಶ್ರಮಿಸಿದ್ದರು.

    ಪಂದ್ಯ ಮುಗಿದ ನಂತರ ಮಾತನಾಡಿದ ಸಂಜು ಸ್ಯಾಮ್‍ಸನ್, ಈ ಪಂದ್ಯವನ್ನು ಪೂರ್ಣಗೊಳಿಸಿದ ಶ್ರೇಯಸ್ಸು ಸಂಪೂರ್ಣವಾಗಿ ಕ್ರೀಡಾಂಗಣದ ಸಿಬ್ಬಂದಿಗೆ ಸಲ್ಲುತ್ತದೆ. ಏಕೆಂದರೆ ಅವರಿಂದಾಗಿ ನಾವು ಈ ಪಂದ್ಯವನ್ನು ಆಡಲು ಸಾಧ್ಯವಾಯಿತು. ಕ್ರೀಡಾಂಗಣ ಪಂದ್ಯ ಆಡಲು ಅಂಪೈರ್ ಅನುಮತಿ ನೀಡುತ್ತಿರಲಿಲ್ಲ. ಸಿಬ್ಬಂದಿಯ ಕಠಿಣ ಪರಿಶ್ರಮದಿಂದಾಗಿ ಈ ಪಂದ್ಯ ಆಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

  • ಟೋಲ್ ಕೇಳಿದ್ದಕ್ಕೆ ಗುಂಡು ಹಾರಿಸಿದ ಕಾರು ಚಾಲಕ

    ಟೋಲ್ ಕೇಳಿದ್ದಕ್ಕೆ ಗುಂಡು ಹಾರಿಸಿದ ಕಾರು ಚಾಲಕ

    ಚೆನ್ನೈ: ತಮಿಳುನಾಡಿನ ಮಧುರೈ ಜಿಲ್ಲೆಯ ಟೋಲ್ ಪ್ಲಾಜಾದಲ್ಲಿ ಚಾಲಕನೊಬ್ಬ ಟೋಲ್ ಸಿಬ್ಬಂದಿ ಹಣ ಕೇಳುತ್ತಿದ್ದಂತೆ ಕಾರಿನಿಂದ ಇಳಿದು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ.

    ಶಶಿಕುಮಾರ್(25) ಇನ್ನೊಬ್ಬ ವ್ಯಕ್ತಿಯೊಂದಿಗೆ ಎಸ್‍ಯುವಿ ಕಾರಿನಲ್ಲಿ ತೆರಳುತ್ತಿದ್ದ, ಟೋಲ್ ಗೇಟ್ ಬಳಿ ಕಾರ್ ನಿಲ್ಲಿಸಿದ ನಂತರ ಸಿಬ್ಬಂದಿ ಟೋಲ್ ಹಣವನ್ನು ಪಾವತಿಸುವಂತೆ ಕೇಳಿದ್ದಾರೆ. ನಂತರ ಯುವಕ ತನ್ನ ಎಸ್‍ಯುವಿ ಕಾರಿನಿಂದ ಇಳಿದು ತನ್ನ ಪಿಸ್ತೂಲನ್ನು ಆಕಾಶಕ್ಕೆ ಮುಖಮಾಡಿ ಗುಂಡು ಹಾರಿಸಿದ್ದಾನೆ. ಆಗ ಡ್ರೈವರ್ ಸೀಟ್‍ನಲ್ಲಿದ್ದ ವ್ಯಕ್ತಿ ಶಶಿಕುಮಾರ್‍ನನ್ನು ಸ್ಥಳದಲ್ಲಿಯೇ ಬಿಟ್ಟು ಕಾರ್ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.

    ಶಶಿಕುಮಾರ್ ಪಿಸ್ತೂಲಿಗೆ ಪರವಾನಗಿ ಪಡೆದಿದ್ದಾನಾ ಎಂಬುದು ತಿಳಿದು ಬಂದಿಲ್ಲ. ಸ್ಥಳದಲ್ಲೇ ಇದ್ದ ಶಶಿಕುಮಾರ್‍ನನ್ನು ಬಂಧಿಸಲಾಗಿದ್ದು, ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಯಾವುದೇ ಪ್ರಾಣ ಹಾನಿ ಹಾಗೂ ಆಸ್ತಿ ಹಾನಿ ಸಂಭವಿಸಿಲ್ಲ. ತನಿಖೆ ನಡೆಸಲಾಗುತ್ತಿದೆ. ಶಶಿಕುಮಾರ್ ತಿರುಚಿರಾಪಳ್ಳಿಯಿಂದ ವಿರುಧುನಗರಕ್ಕೆ ತೆರಳುತ್ತಿದ್ದ. ಘಟನೆಯು ಚೆನ್ನೈ ದಕ್ಷಿಣದಿಂದ 450 ಕಿ.ಮೀ. ದೂರದಲ್ಲಿರುವ ಕಪ್ಪಲೂರು ಟೋಲ್ ಪ್ಲಾಜಾದಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.