Tag: staff

  • ರಾಯಚೂರಿನ ಸಾರಿಗೆ ಸಿಬ್ಬಂದಿ ಕಷ್ಟಕ್ಕೆ ಸಿಕ್ಕಿತು ಪರಿಹಾರ – ಪಬ್ಲಿಕ್ ಟಿವಿ ವರದಿಗೆ ಅಧಿಕಾರಿಗಳ ಸ್ಪಂದನೆ

    ರಾಯಚೂರಿನ ಸಾರಿಗೆ ಸಿಬ್ಬಂದಿ ಕಷ್ಟಕ್ಕೆ ಸಿಕ್ಕಿತು ಪರಿಹಾರ – ಪಬ್ಲಿಕ್ ಟಿವಿ ವರದಿಗೆ ಅಧಿಕಾರಿಗಳ ಸ್ಪಂದನೆ

    ರಾಯಚೂರು: ನಗರದ ಕೇಂದ್ರ ಬಸ್ ನಿಲ್ದಾಣದ ಅವ್ಯವಸ್ಥೆ ಹಾಗೂ ರಾತ್ರಿ ತಂಗುವ ಸಿಬ್ಬಂದಿ ನರಕಯಾತನೆ ಕುರಿತ ಪಬ್ಲಿಕ್ ಟಿವಿ ವರದಿಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸ್ಪಂದಿಸಿದೆ. ಶೀಘ್ರದಲ್ಲೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಾಗಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.

    ರಾಯಚೂರು ಬಸ್ ನಿಲ್ದಾಣದಲ್ಲಿ ರಾತ್ರಿ ವಸತಿ ಮಾಡುವ ಸಾರಿಗೆ ಸಿಬ್ಬಂದಿಗಳಿಗೆ ಮಲಗಲು ಸುರಕ್ಷಿತ ಸ್ಥಳವಿಲ್ಲದೇ ಬಸ್‍ನಲ್ಲಿಯೇ ಸಿಬ್ಬಂದಿ ಸೊಳ್ಳೆ ಕಾಟದಲ್ಲಿ ಮಲಗುತ್ತಾರೆ. ಪ್ರಯಾಣಿಕರ ಟಿಕೆಟ್ ದುಡ್ಡಿಗೆ ಸುರಕ್ಷತೆಯಿಲ್ಲ. ಕುಡಿಯಲು ನೀರು, ಸ್ನಾನಕ್ಕೆ ಕೋಣೆ, ಶೌಚಾಲಯವೂ ಸರಿಯಾಗಿಲ್ಲ ಎನ್ನುವುದರ ಕುರಿತು ರಾಯಚೂರು ಕೇಂದ್ರ ಬಸ್ ನಿಲ್ದಾಣದಲ್ಲಿನ ರಾತ್ರಿ ವಸತಿಯ ದುಸ್ಥಿತಿ ಬಗ್ಗೆ ವಿವರಿಸಲಾಗಿತ್ತು. ಇದಕ್ಕೆ ಸ್ಪಷ್ಟಿಕರಣ ನೀಡಿರುವ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸಾರಿಗೆ ಸಿಬ್ಬಂದಿ ಘಟಕಕ್ಕೆ ತೆರಳಿ ಸೌಲಭ್ಯವನ್ನು ಉಪಯೋಗಿಸಿಕೊಳ್ಳದೇ ಬಸ್ ನಿಲ್ದಾಣದಲ್ಲಿ ವಸತಿ ಮಾಡುತ್ತಿದ್ದಾರೆ ಹಾಗೂ ಕೆಲವೊಂದು ಸಿಬ್ಬಂದಿ ಬಸ್ ನಿಲ್ದಾಣದ ಮತ್ತು ಘಟಕಗಳು ಸಮೀಪವಿಲ್ಲದ ಕಾರಣದಿಂದ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದಾರೆ ಎಂದಿದ್ದಾರೆ. ಜೊತೆಗೆ ಬಸ್ ನಿಲ್ದಾಣದಲ್ಲಿ ಸಿಬ್ಬಂದಿಗೆ ರೆಸ್ಟ್ ರೂಂ ಹಾಗೂ ಇತರೆ ಸೌಲಭ್ಯಗಳು ಇಲ್ಲದೇ ಇರುವುದನ್ನು ಒಪ್ಪಿಕೊಂಡಿದ್ದಾರೆ.

    2018-19ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಯ ಹೊಸ ಕಾಮಗಾರಿಗಳ ಕ್ರಿಯಾ ಯೋಜನೆ ಅಡಿಯಲ್ಲಿ ರಾಯಚೂರು ಬಸ್ ನಿಲ್ದಾಣದಲ್ಲಿ ಹೆಚ್ಚುವರಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು 75 ಲಕ್ಷ ಮಂಜೂರಾಗಿತ್ತು. ಮಂಜೂರಾದ ಮೊತ್ತದಲ್ಲಿ ಬಸ್ ನಿಲ್ದಾಣದ ಉತ್ತರ ಹಾಗೂ ದಕ್ಷಿಣ ದಿಕ್ಕಿನಲ್ಲಿ ಬಾಕಿ ಉಳಿದ ಆವರಣಕ್ಕೆ ಕಾಂಕ್ರೀಟ್, ಬಸ್ ನಿಲ್ದಾಣ ಮುಖ್ಯ ಕಟ್ಟಡದ ಮೊದಲನೇ ಅಂತಸ್ತಿನ ಎಡಭಾಗದಲ್ಲಿ ಸಿಬ್ಬಂದಿಗಳಿಗೆ ವಿಶ್ರಾಂತಿ ಗೃಹವನ್ನು ಶೌಚಾಲಯಗಳನ್ನೊಳಗೊಂಡಂತೆ ಮತ್ತು ಬಸ್ ನಿಲ್ದಾಣ ಮುಖ್ಯ ಕಟ್ಟಡಕ್ಕೆ ಸುಣ್ಣ-ಬಣ್ಣ ಹಾಗೂ ಹಾಲಿ ಇರುವ ಸೈಕಲ್ ಸ್ಟಾಂಡ್‍ನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಿದೆ ಮತ್ತು ವಿದ್ಯುತ್ ಕೆಲಸವನ್ನು ನಿರ್ವಹಿಸಲು ಯೋಜಿಸಲಾಗಿದೆ. ಆದರೆ 4 ಬಾರಿ ಟೆಂಡರ್ ಕರೆಯಲಾಗಿದ್ದು, 3 ಟೆಂಡರ್ ನಲ್ಲಿ ಗುತ್ತಿಗೆದಾರರು ಭಾಗವಹಿಸಿರುವುದಿಲ್ಲ ಕಾರಣ ಕಾಮಗಾರಿ ಕೆಲಸವನ್ನು ಕೈಗೆತ್ತಿಕೊಳ್ಳುವಲ್ಲಿ ವಿಳಂಭವಾಗಿದೆ. ಮತ್ತು 4ನೇ ಟೆಂಡರ್ ನಲ್ಲಿ ಭಾಗವಹಿಸಿದ ಗುತ್ತಿಗೆದಾರರು ಅಂತಿಮವಾಗುವ ಸಾಧ್ಯತೆಯಿದೆ. ಸದರಿ ಪಕ್ರಿಯೆ ಮುಗಿದ ನಂತರ ಬಸ್ ನಿಲ್ದಾಣದಲ್ಲಿ ಸಾರಿಗೆ ಸಿಬ್ಬಂದಿಗಳಿಗೆ ವಿಶ್ರಾಂತಿ ಕೋಣೆ, ಶೌಚಾಲಯ, ಸ್ನಾನದ ಕೋಣೆ ಹಾಗೂ ಇನ್ನಿತರ ಕೆಲಸಗಳನ್ನು ಕೈಗೊಳ್ಳುವುದಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ರಾಯಚೂರು ವಿಭಾಗೀಯ ನಿಯಂತ್ರಣಾಧಿಕಾರಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

  • ಬಸ್ ಓಡ್ಸಿ ತಗ್ಲಾಕ್ಕೊಂಡ್ರಾ ರೇಣುಕಾಚಾರ್ಯ – ಶಾಸಕರ ವಿರುದ್ಧ ಸಾರಿಗೆ ಸಿಬ್ಬಂದಿ ದೂರು

    ಬಸ್ ಓಡ್ಸಿ ತಗ್ಲಾಕ್ಕೊಂಡ್ರಾ ರೇಣುಕಾಚಾರ್ಯ – ಶಾಸಕರ ವಿರುದ್ಧ ಸಾರಿಗೆ ಸಿಬ್ಬಂದಿ ದೂರು

    ಬೆಂಗಳೂರು: ಸಾರಿಗೆ ಸಿಬ್ಬಂದಿ ಬಿಟ್ಟರೆ ಬೇರೆಯವರಿಗೆ ಸಾರಿಗೆ ಬಸ್ ಒಡಿಸಲು ಅವಕಾಶವಿಲ್ಲ. ಆದರೆ ಶಾಸಕ ರೇಣುಕಾಚಾರ್ಯ ಅವರು ಕೆಎಸ್‌ಆರ್‌ಟಿಸಿ ಬಸ್ ಚಲಾಯಿಸಿದ್ದಾರೆ, ಇದು ತಪ್ಪು ಎಂದು ಸಾರಿಗೆ ಸಿಬ್ಬಂದಿ ಶಾಸಕರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

    ಹೊನ್ನಾಳಿ ಶಾಸಕ ರೇಣುಕಾಚಾರ್ಯಗೂ ವಿವಾದಗಳಿಗೂ ಬಿಡಲಾರದ ನಂಟು. ಸದಾ ಒಂದಿಲ್ಲೊಂದು ಗಾಸಿಪ್ ಗಳಿಂದಲೇ ಸುದ್ದಿಯಾಗೋರು ರೇಣುಕಾಚಾರ್ಯ ಅವರು ಪ್ರವಾಹದ ವೇಳೆಯಲ್ಲಿ ಅಂಬಿಗನಾಗಲು ಹೋಗಿ ಭಾರೀ ಟೀಕೆಗೆ ಒಳಗಾಗಿದ್ದರು. ತದನಂತರ ಜನವರಿ 5ರಂದು ಹೊನ್ನಾಳಿಯಲ್ಲಿ ಬಸ್ ಉದ್ಘಾಟನೆ ವೇಳೆ ಕೆಎಸ್‌ಆರ್‌ಟಿಸಿ ಡ್ರೈವರ್ ಡ್ರೆಸ್ ಹಾಕ್ಕೊಂಡು ಸುಮಾರು 60 ಕಿ.ಮೀ ಬಸ್ ಓಡಿಸಿದ್ದು ಎಲ್ಲೆಡೆ ಭಾರೀ ವಿವಾದವಾಗಿತ್ತು. ಇದನ್ನೂ ಓದಿ: 60 ಕಿ.ಮೀ. ಬಸ್ ಓಡಿಸಿದ್ದು ರೇಣುಕಾಚಾರ್ಯ, ನೋಟಿಸ್ ಬಂದಿದ್ದು ಡಿಪೋ ಮ್ಯಾನೇಜರ್‌ಗೆ

    ಈ ವಿಷಯಕ್ಕೆ ಸಂಬಂಧಿಸಿದಂತೆ ರೇಣುಕಾಚಾರ್ಯ ವಿರುದ್ಧ ಕೇಸ್ ಹಾಕಲು ಸಾರಿಗೆ ಸಿಬ್ಬಂದಿ ನಿರ್ಧರಿಸಿದ್ದಾರೆ. ಶಾಸಕರು ಅನ್ಯ ವ್ಯಕ್ತಿಗಳು ಬಸ್ ಓಡಿಸಬಹುದೇ ಎಂದು ಬಸ್ ಕಂಡೆಕ್ಟರ್ ಆಗಿರೋ ಯೋಗೇಶ್ ಗೌಡ ಆರ್‌ಟಿಐ ಮೂಲಕ ಮಾಹಿತಿ ಕೋರಿ ಸಾರಿಗೆ ಇಲಾಖೆಗೆ ಅರ್ಜಿ ಸಲ್ಲಿಸಿದರು. ಆರ್‌ಟಿಐ ನಿಯಮದ ಮಾಹಿತಿ ಪ್ರಕಾರ ಸರ್ಕಾರಿ ಬಸ್ಸನ್ನು ಈ ರೀತಿ ಶಾಸಕರು ಬಸ್ ಓಡಿಸುವಂತಿಲ್ಲ. ಸಾರಿಗೆಯ ನುರಿತ ಸಿಬ್ಬಂದಿಗಷ್ಟೇ ಬಸ್ ಓಡಿಸಲು ಅವಕಾಶವಿದೆ ಎಂಬುದು ತಿಳಿದು ಬಂದಿದೆ. ಇದನ್ನೂ ಓದಿ: ದಡ ಸೇರಿದ್ದ ತೆಪ್ಪಕ್ಕೆ ಹುಟ್ಟು ಹಾಕಿ ಪೋಸ್- ರೇಣುಕಾಚಾರ್ಯ ಟ್ರೋಲ್

    ಇದನ್ನೇ ಆಧರಿಸಿ ಯೋಗೇಶ್ ಅವರು ರೇಣುಕಾಚಾರ್ಯ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ. ಹೀಗೆ ಹೊನ್ನಾಳಿ ಶಾಸಕ ರೇಣುಕಾಚಾರ್ಯರ ಹೊಸ ಅವತಾರಗಳು ಅವರ ಪಾಲಿಗೆ ಮುಳುವಾಗಿತ್ತಿರೋದಂತೂ ಸತ್ಯ.

  • ಅವ್ಯವಸ್ಥೆಯ ಆಗರವಾಗಿದೆ ಬೆಳಗಾವಿ ಉಪ ನೋಂದಣಿ ಕಚೇರಿ

    ಅವ್ಯವಸ್ಥೆಯ ಆಗರವಾಗಿದೆ ಬೆಳಗಾವಿ ಉಪ ನೋಂದಣಿ ಕಚೇರಿ

    ಬೆಳಗಾವಿ: ಪ್ರತಿ ನಿತ್ಯ ಸಾವಿರಾರು ಜನರು ವಿವಾಹ ನೋಂದಣಿ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಬೆಳಗಾವಿ ಸಬ್ ರಿಜಿಸ್ಟರ್ ಕಚೇರಿಗೆ ಆಗಮಿಸುತ್ತಾರೆ. ಆದರೆ ಈ ಕಚೇರಿಯಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತವಾಗಿದೆ.

    ಸರ್ಕಾರಕ್ಕೆ ದಿನಕ್ಕೆ ಲಕ್ಷಾಂತರ ರೂ. ಆದಾಯ ಬರುವುದು ಈ ವಿವಾಹ ನೋಂದಣಿ ಕಚೇರಿಯಿಂದ. ಆದರೆ ಇಲ್ಲಿನ ಅಧಿಕಾರಿಗಳ ಒಣ ರಾಜಕಾರಣದಿಂದ ಇಲ್ಲಿ ಬರುವ ಜನರಿಗೆ ಕುಡಿಯುವ ನೀರು, ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡದಿರುವುದಕ್ಕೆ ಜನರು ಹಿಡಿಶಾಪ ಹಾಕಿಕೊಂಡು ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಬೆಳಗಾವಿ ಉಪ ನೋಂದಣಿ ಕಚೇರಿ ಬರೋಬ್ಬರಿ 140 ವರ್ಷ ಹಳೆಯದಾದ ಕಟ್ಟಡದಲ್ಲಿದೆ. ಅಮೂಲ್ಯ ದಾಖಲೆಗಳಿರುವ ಕಚೇರಿಯ ಮಾಡು ಸೋರುತ್ತಿದ್ದರೂ ಹೊಸ ಕಟ್ಟಡ ನಿರ್ಮಾಣವಾಗಿಲ್ಲ. ಕೇಂದ್ರದಲ್ಲಿ ಕುಳಿತುಕೊಳ್ಳಲು ಬೇಕಾದ ಆಸನದ ವ್ಯವಸ್ಥೆ ಇಲ್ಲ. ಇದರಿಂದ ಹೆಚ್ಚಿನ ಸಂಖ್ಯೆಯ ಜನರು ಬಂದರೆ ಕಟ್ಟಡದ ಬದಿಯಲ್ಲೇ ನಿಲ್ಲಬೇಕಿದೆ. ತುರ್ತಾಗಿ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಾಗಿದೆ. ಕಂಪ್ಯೂಟರ್, ಸ್ಕ್ಯಾನರ್ ಇನ್ನಿತರ ಉಪಕರಣ ಮೇಲ್ದರ್ಜೆಗೇರಬೇಕಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

    ಒಟ್ಟಾರೆ ತಮ್ಮ ಕೆಲಸ ಬೇಗ ಇತ್ಯರ್ಥವಾಗಲು ವಿವಾಹ ನೋಂದಣಿ ಕಚೇರಿಗೆ ಬಂದರೆ ಸರ್ವರ್ ಸಮಸ್ಯೆ ಸೇರಿದಂತೆ ವಿವಿಧ ಕಾರಣ ನೀಡಿ ಜನರಿಗೆ ರಸ್ತೆಯ ಮಧ್ಯದಲ್ಲೇ ಕಾಯುವ ಸ್ಥಿತಿ ಬದಲಾಗಬೇಕು. ಶೀಘ್ರದಲ್ಲೇ ಇಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

  • ಮಹಾನಗರ ಪಾಲಿಕೆ ಉಗ್ರಾಣಕ್ಕೆ ಪಾಲಿಕೆ ಸದಸ್ಯರಿಗೆ ಎಂಟ್ರಿ ಇಲ್ಲ

    ಮಹಾನಗರ ಪಾಲಿಕೆ ಉಗ್ರಾಣಕ್ಕೆ ಪಾಲಿಕೆ ಸದಸ್ಯರಿಗೆ ಎಂಟ್ರಿ ಇಲ್ಲ

    ಮೈಸೂರು: ಜಿಲ್ಲೆಯ ಮಹಾನಗರ ಪಾಲಿಕೆಯ ಉಗ್ರಾಣದ ಪರಿಶೀಲನೆಗೆ ಹೋದ ನಗರಪಾಲಿಕೆ ಸದಸ್ಯರಿಗೆ ಸಿಬ್ಬಂದಿ ತಡೆ ಹಾಕಿದ್ದಾರೆ. ಏಕಾಏಕಿ ಉಗ್ರಾಣಕ್ಕೆ ಹೋದ ಪಾಲಿಕೆ ಸದಸ್ಯರುಗಳನ್ನು ಉಗ್ರಾಣ ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ.

    ಸದಸ್ಯರನ್ನು ತಡೆದ ಉಗ್ರಾಣದ ಸಿಬ್ಬಂದಿ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ನಗರಪಾಲಿಕೆ ಸದಸ್ಯರನ್ನು ಕಳ್ಳರ ರೀತಿ ನೋಡಿ ಅವಮಾನ ಮಾಡುತ್ತಿದ್ದಾರೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ. ಉಗ್ರಾಣದ ಸಿಬ್ಬಂದಿ ದೊಡ್ಡಯ್ಯ ಏರು ಧ್ವನಿಯಲ್ಲಿ ಪ್ರಶ್ನೆ ಮಾಡಿದ್ದನ್ನು ಖಂಡಿಸಿ ಉಗ್ರಾಣ ಸಿಬ್ಬಂದಿಯನ್ನು ಪಾಲಿಕೆ ಸದಸ್ಯರು ತರಾಟೆಗೆ ತೆಗೆದುಕೊಂಡರು.

    ಅವಧಿ ಮುಗಿದಿರುವ ಸೊಳ್ಳೆ ಔಷದಿ, ಪೌಡರ್ ಬಳಕೆ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಉಗ್ರಾಣಕ್ಕೆ ಇಬ್ಬರು ಮಹಿಳಾ ಪಾಲಿಕೆ ಸದಸ್ಯರು ಭೇಟಿ ನೀಡಿದ್ದರು. ನಗರ ಪಾಲಿಕೆ ಸದಸ್ಯರ ಪರಿಸ್ಥಿತಿಯೇ ಹೀಗಾದರೆ ಇನ್ನೂ ಸಾಮಾನ್ಯ ಜನರ ಕಥೆ ಏನು ಎಂದು ನಗರಪಾಲಿಕೆ ಸದಸ್ಯೆ ಡಾ. ಅಶ್ವಿನಿ ಶರತ್ ಹಾಗೂ ಬೇಗಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಲ್ಲದೆ ನಗರಪಾಲಿಕೆ ಸದಸ್ಯರನ್ನು ಅವಾಯ್ಡ್ ಮಾಡಲು ಕಾರಣ ಏನು? ಉಗ್ರಾಣದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಸಿಬ್ಬಂದಿಗೆ ಪ್ರಶ್ನಿಸಿದರೆ ನಗರಪಾಲಿಕೆ ಸ್ಥಾಯಿ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳ ಗಮನಕ್ಕೆ ತರದೇ ಏಕಾಏಕಿ ಸದಸ್ಯರು ಉಗ್ರಾಣಕ್ಕೆ ಭೇಟಿ ನೀಡಲು ಅವಕಾಶವಿಲ್ಲ ಎಂದು ಉಗ್ರಾಣದ ಅಧಿಕಾರಿಗಳ ಸಮಜಾಯಿಷಿ ನೀಡಿದ್ದಾರೆ.

  • ವಿಕ್ಟೋರಿಯಾ ಆಸ್ಪತ್ರೆ ನಿರ್ಲಕ್ಷ್ಯ- 7 ಗಂಟೆ ಅಂಬುಲೆನ್ಸ್‌ನಲ್ಲೇ ನರಳಾಡಿದ ಗಾಯಾಳು

    ವಿಕ್ಟೋರಿಯಾ ಆಸ್ಪತ್ರೆ ನಿರ್ಲಕ್ಷ್ಯ- 7 ಗಂಟೆ ಅಂಬುಲೆನ್ಸ್‌ನಲ್ಲೇ ನರಳಾಡಿದ ಗಾಯಾಳು

    – ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಆಸ್ಪತ್ರೆ

    ಬೆಂಗಳೂರು: ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯೊಬ್ಬರನ್ನು ಸತತ 7 ಗಂಟೆಗಳ ಕಾಲ ಅಡ್ಮಿಟ್ ಮಾಡಿಕೊಳ್ಳದೆ ಅಂಬುಲೆನ್ಸ್‌ನಲ್ಲಿಯೇ ಬಿಟ್ಟು ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ಅಮಾನವೀಯತೆ ಮೆರೆದಿದ್ದಾರೆ.

    ಕೋಲಾರ ತಾಲೂಕಿನ ಮಾಲೂರು ಮೂಲದ ಶ್ರೀನಿವಾಸ್ ಅವರು ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯ ಆಸ್ಪತ್ರೆ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ಮಧ್ಯಾಹ್ನ 2 ಗಂಟೆಗೆ ಶ್ರೀನಿವಾಸ್ ಕುಟುಂಬದವರು ಅವರನ್ನು ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆತಂದರು. ಆದರೆ ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಎನ್ನುವ ಕಾರಣಕ್ಕೆ ರಾತ್ರಿ 9 ಗಂಟೆಯಾದರೂ ಸಿಬ್ಬಂದಿ ಗಾಯಾಳು ಶ್ರೀನಿವಾಸ್ ನನ್ನು ಅಡ್ಮಿಟ್ ಮಾಡಿಕೊಂಡಿರಲಿಲ್ಲ. ಇದನ್ನೂ ಓದಿ: ದಟ್ಟಾರಣ್ಯ, ಕಲ್ಲು ಮುಳ್ಳಿನ ಹಾದಿ – ಆಸ್ಪತ್ರೆಗೆ ಸಾಗಲು ಗರ್ಭಿಣಿಯರಿಗೆ ಡೋಲಿಯೇ ಸವಾರಿ

    ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆಯೇ ತಕ್ಷಣ ಎಚ್ಚತ್ತ ವೈದ್ಯರು, ಗಾಯಾಳು ಶ್ರೀನಿವಾಸ್‍ನನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಿಕೊಂಡಿದ್ದಾರೆ. ಮಧ್ಯಾಹ್ನದಿಂದ ಇಲ್ಲದ ಬೆಡ್ ದಿಢೀರ್ ಅಂತ ಹೇಗೆ ಬಂತು ಅನ್ನೋದು ಸದ್ಯದ ಪ್ರಶ್ನೆಯಾಗಿದೆ. ಇದನ್ನೂ ಓದಿ: ಹೆರಿಗೆ ಬಳಿಕ ಬಾಣಂತಿಯರಿಗೆ ನರಕ ದರ್ಶನ – ಬೆಡ್‍ಗಳಿಲ್ಲದೆ ನೆಲದ ಮೇಲೆಯೇ ನರಳಾಟ

    ಜೀವ ಕೈಯಲ್ಲಿ ಇಟ್ಟುಕೊಂಡು ಚಿಕಿತ್ಸೆಗಾಗಿ ದೂರದ ಊರುಗಳಿಂದ ಬಂದ ರೋಗಿಗಳಿಗೆ ಈ ರೀತಿ ಕನಿಷ್ಠ ಚಿಕಿತ್ಸೆಯೂ ಸಿಗದೇ ಅಂಬುಲೆನ್ಸ್‌ನಲ್ಲೇ ಬಿಡೋದು ಎಷ್ಟು ಸರಿ? ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ಈ ನಿರ್ಲಕ್ಷ್ಯ ದ ಬಗ್ಗೆ ಆರೋಗ್ಯ ಸಚಿವರು ಉತ್ತರ ನೀಡಬೇಕಿದೆ.

  • ಕಾರವಾರ ನಗರದಲ್ಲಿ ದಿಢೀರ್ ಬೇಸಿಕ್ ಮೊಬೈಲ್‍ಗೆ ಹೆಚ್ಚಾಯ್ತು ಬೇಡಿಕೆ

    ಕಾರವಾರ ನಗರದಲ್ಲಿ ದಿಢೀರ್ ಬೇಸಿಕ್ ಮೊಬೈಲ್‍ಗೆ ಹೆಚ್ಚಾಯ್ತು ಬೇಡಿಕೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾ ಬಳಿ ಇರುವ ಕದಂಬ ನೌಕಾನೆಲೆ ಸೇರಿದಂತೆ ಭಾರತೀಯ ನೌಕಾದಳದಲ್ಲಿ ಇಂದಿನಿಂದಲೇ ಜಾರಿ ಬರುವಂತೆ ಸ್ಮಾರ್ಟ್ ಫೋನ್ ಬಳಕೆ, ಫೇಸ್‍ಬುಕ್ ಬಳಕೆ ಹಾಗೂ ಇಂಟರ್ನೆಟ್ ಬಳಕೆಗೆ ನೌಕಾಪಡೆ ನಿಷೇಧ ಹೇರಿದೆ. ಈ ಹಿನ್ನಲೆಯಲ್ಲಿ ಕಾರವಾರ ಕದಂಬ ನೌಕಾ ನೆಲೆಯ ಸಿಬ್ಬಂದಿ ಬೇಸಿಕ್ ಸೆಟ್ ಕೊಂಡುಕೊಳ್ಳಲು ನಗರದಲ್ಲಿ ಮುಗಿಬಿದ್ದಿದ್ದು ಅಂಗಡಿಗಳಲ್ಲಿ ಮೊಬೈಲ್ ಸೆಟ್ ಸಿಗದೇ ನೌಕಾ ಸಿಬ್ಬಂದಿ ಪರದಾಡಿದ್ದಾರೆ.

    ಪಾಕಿಸ್ತಾನದ ಹನಿಟ್ರ್ಯಾಪ್ ಬಲೆಗೆ ಸಿಲುಕಿ ಭಾರತದ ಭದ್ರತೆಗೆ ಸಂಬಂಧಿಸಿದ ಬಹುಮುಖ್ಯ ರಹಸ್ಯ ಮಾಹಿತಿಗಳನ್ನು ರವಾನಿಸುತ್ತಿದ್ದ ಆರೋಪದ ಮೇಲೆ ಕಾರವಾರದ ಕದಂಬ ನೌಕಾನೆಲೆಯ ಇಬ್ಬರು ಸೇರಿದಂತೆ ಭಾರತೀಯ ನೌಕಾಪಡೆಯ ಒಟ್ಟು 7 ಸಿಬ್ಬಂದಿ ಹಾಗೂ ಓರ್ವ ಹವಾಲ ವ್ಯವಹಾರದ ವ್ಯಕ್ತಿಯನ್ನು ಕೆಲ ದಿನಗಳ ಹಿಂದೆ ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದರು.

    ಇದರ ಬೆನ್ನಲ್ಲೇ ಭಾರತೀಯ ನೌಕಾಪಡೆ ಮಹತ್ವದ ನಿರ್ಧಾರ ತೆಗೆದುಕೊಂಡದ್ದು, ನೌಕಾ ಸಿಬ್ಬಂದಿ ಸಮುದ್ರ ನೆಲೆಯಲ್ಲಿ ಸಾಮಾಜಿಕ ಜಾಲತಾಣ ಹಾಗೂ ಸ್ಮಾರ್ಟ್ ಫೋನ್ ಬಳಸುವುದನ್ನು ನಿಷೇಧಿಸಿದೆ. ಈ ಹಿಂದೆ ಇಂಟರ್‍ನೆಟ್, ಸ್ಮಾರ್ಟ್ ಫೋನ್ ಬಳಸುವುದಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಆದರೇ ಏಳು ಜನ ನೌಕಾ ಸಿಬ್ಬಂದಿ ಬಂಧನದ ನಂತರ ಮೊಬೈಲ್ ಬಳಕೆಯಿಂದಲೇ ದೊಡ್ಡ ದೊಡ್ಡ ಮಾಹಿತಿ ಪಾಕಿಸ್ತಾನ ಗುಪ್ತ ದಳಕ್ಕೆ ಹಂಚಿಕೆಯಾಗಿತ್ತು. ಇದಲ್ಲದೇ ದೊಡ್ಡ ಅಧಿಕಾರಿಗಳು ಸಹ ಹನಿಟ್ರ್ಯಾಪ್ ಮೂಲಕ ಬಲೆಗೆ ಬೀಳಿಸಿಕೊಂಡ ಪಾಕಿಸ್ತಾನ ಗುಪ್ತದಳ ಇಲಾಖೆ ನೌಕಾದಳದವರಿಂದ ಹಲವು ಮಾಹಿತಿ ಪಡೆದಿತ್ತು. ಈ ಹಿನ್ನಲೆಯಲ್ಲಿ ಭಾರತೀಯ ನೌಕಾದಳ ಈ ನಿರ್ಧಾರ ಕೈಗೊಂಡಿದೆ.

    ನೌಕಾದಳದ ಸಿಬ್ಬಂದಿ ಬೇಡಿಕೆಗಾಗಿ ಹೋಲ್‍ಸೇಲ್ ಡೀಲರ್ ಗಳು ನೆರೆಯ ಗೋವಾ, ಮಹಾರಾಷ್ಟ್ರದಿಂದ ಮೊಬೈಲ್ ತಂದು ಮಾರಾಟ ಮಾಡುತ್ತಿದ್ದು, ಹಲವು ಮೊಬೈಲ್ ಶಾಪ್ ಗಳಲ್ಲಿ ಬೇಸಿಕ್ ಸೆಟ್‍ಗಳು ಸಿಗದೇ ನೌಕಾದಳದ ಸಿಬ್ಬಂದಿಗಳು ಪರದಾಡಿದ್ದಾರೆ. ಕಾರವಾರ ನಗರದಲ್ಲಿಯೇ ಒಂದು ದಿನಕ್ಕೆ 20 ಸಾವಿರಕ್ಕೂ ಹೆಚ್ಚು ಬೇಸಿಕ್ ಮೊಬೈಲ್ ಸೆಟ್ ಬಿಕರಿಯಾಗಿದೆ.

    ನಿನ್ನೆ ರಾತ್ರಿಯೇ ಸಾಕಷ್ಟು ಜನ ನೌಕಾ ಸಿಬ್ಬಂದಿ ಮೊಬೈಲ್ ಖರೀದಿಸಿದ್ದಾರೆ. ಹಾಗಾಗಿ ಈ ನಿರೀಕ್ಷೆಯನ್ನೇ ಇಟ್ಟುಕೊಳ್ಳದ ಮೊಬೈಲ್ ಶಾಪ್ ನವರು ಹೆಚ್ಚು ಬೇಡಿಕೆ ಇಲ್ಲದ ಬೇಸಿಕ್ ಸೆಟ್ ಗಳನ್ನು ತರಿಸಿರಲಿಲ್ಲ. ಹೀಗಾಗಿ ಏಕಾಏಕಿ ಬೇಡಿಕೆ ಬಂದಿದ್ದು ಮೊಬೈಲ್ ಪೂರೈಕೆ ಮಾಡಲು ಅಂಗಡಿಯವರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

  • ಎನ್ಆರ್​ಸಿ, ಸಿಎಎ ಮೇನಿಯಾ- ಆರ್ಥಿಕ ಗಣತಿಗೆ ಮುಸ್ಲಿಮರಿಂದ ಅಡ್ಡಿ

    ಎನ್ಆರ್​ಸಿ, ಸಿಎಎ ಮೇನಿಯಾ- ಆರ್ಥಿಕ ಗಣತಿಗೆ ಮುಸ್ಲಿಮರಿಂದ ಅಡ್ಡಿ

    ತುಮಕೂರು: ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್​ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದಾರೆಂದು ಅನುಮಾನಿಸಿ ಮುಸ್ಲಿಮರು ಆರ್ಥಿಕ ಗಣತಿ ಮಾಡಲು ಬಂದಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಜಿಲ್ಲೆಯ ಮುಸ್ಲಿಮರಲ್ಲಿ ಈ ಹೊಸ ಕಾಯ್ದೆಯ ಮೇನಿಯಾ ಕಾಡುತ್ತಿದ್ದು, ಆರ್ಥಿಕ ಗಣತಿ ಮಾಡಲು ಬಂದಿದ್ದ ಸಿಎಸ್‍ಸಿ ಏಜೆನ್ಸಿ ಸಿಬ್ಬಂದಿ ಕಂಡು ಮುಸ್ಲಿಮರು ಆತಂಕಗೊಂಡಿದ್ದಾರೆ. ಮನೆಮನೆಗೆ ಭೇಟಿ ಕೊಟ್ಟು ಆರ್ಥಿಕ ಗಣತಿಗಾಗಿ ಮಾಹಿತಿ ಕಲೆ ಹಾಕುತ್ತಿದ್ದ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. ಎನ್ಆರ್​ಸಿ ಜಾರಿ ಕುರಿತು ಸಮೀಕ್ಷೆ ಮಾಡುತ್ತಿರಬಹುದು ಎಂದು ಆತಂಕಗೊಂಡು ಸಿಬ್ಬಂದಿ ಐಡಿ ಕಾರ್ಡ್, ಮಾನ್ಯತಾ ಪತ್ರ ಎಲ್ಲವನ್ನೂ ಪರಿಶೀಲಿಸಿದ್ದಾರೆ. ಆದರೂ ಸಮಾಧಾನ ಆಗದೆ ಗಣತಿ ಮಾಡುತ್ತಿದ್ದ ಸಿಬ್ಬಂದಿಯನ್ನ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

     

    ಸಿಎಸ್ಸಿ ಸಿಬ್ಬಂದಿ ಜಿ.ಸಿ.ಆರ್ ಕಾಲೋನಿ, ಪೂರ್ ಹೌಸ್ ಕಾಲೋನಿ ಹಾಗೂ ಬಿಬಿಜಾನ್ ಲೇಔಟ್‍ಗಳಲ್ಲಿ ಆರ್ಥಿಕ ಗಣತಿ ಮಾಡುತ್ತಿದ್ದರು. ಕೇವಲ ಮುಸ್ಲಿಮರು ಹೆಚ್ಚಾಗಿರುವ ಬಡಾವಣೆಗಳಲ್ಲೇ ಸರ್ವೆ ನಡೆಯುತ್ತಿದ್ದದ್ದು ಇನ್ನಷ್ಟು ಆತಂಕ್ಕೆ ಕಾರಣವಾಗಿತ್ತು. ಸಿಬ್ಬಂದಿ ಎಷ್ಟೇ ಮನವೊಲಿಸಿದರೂ ಸ್ಥಳೀಯರಿಗೆ ಸಮಾಧಾನ ತಂದಿಲ್ಲ. ಬಳಿಕ ಸಿಬ್ಬಂದಿಯನ್ನು ನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಆಗ ಸತ್ಯಾಸತ್ಯತೆ ತಿಳಿದಿದೆ. ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಸಿಎಸ್ಸಿ ಏಜೆನ್ಸಿ ರಾಷ್ಟ್ರೀಯ 7ನೇ ಆರ್ಥಿಕ ಗಣತಿ ಕಾರ್ಯಕ್ರಮದ ಅನ್ವಯ ಆರ್ಥಿಕ ಗಣತಿ ನಡೆಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಮೂಲ ಕೂಡ ಸ್ಪಷ್ಟಪಡಿಸಿದೆ.

    2019ರ ನವೆಂಬರಿನಿಂದ ದೇಶಾದ್ಯಂತ ಆರ್ಥಿಕ ಗಣತಿ ಕಾರ್ಯ ನಡೆಯುತ್ತಿದೆ. ರಾಜ್ಯದಲ್ಲಿ ನವೆಂಬರ್ 6 ರಿಂದ ಆರಂಭಗೊಂಡಿದೆ. ಇದೇ ರೀತಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆರ್ಥಿಕ ಗಣತಿ ನಡೆಯುತ್ತಿದೆ. ಆದರೆ ಎನ್ಆರ್​ಸಿ ಹಾಗೂ ಪೌರತ್ವ ಕಾಯ್ದೆ ಬಗ್ಗೆ ಪ್ರತಿಪಕ್ಷಗಳು ಭಯಹುಟ್ಟಿಸಿರುವುದು ಹಾಗೂ ಕೇಂದ್ರ ಸರ್ಕಾರ ಸಾರ್ವಜನಿಕರಲ್ಲಿ ಸರಿಯಾಗಿ ಅರಿವು ಮೂಡಿಸದಿರುವುದು ಅವಾಂತರಕ್ಕೆ ಕಾರಣವಾಗಿದೆ.

  • ಸ್ವಚ್ಛ ಶುಕ್ರವಾರ ಅಭಿಯಾನ – ಪೊರಕೆ ಹಿಡಿದು ಆವರಣ ಸ್ವಚ್ಛಗೊಳಿಸಿದ ಅಧಿಕಾರಿಗಳು

    ಸ್ವಚ್ಛ ಶುಕ್ರವಾರ ಅಭಿಯಾನ – ಪೊರಕೆ ಹಿಡಿದು ಆವರಣ ಸ್ವಚ್ಛಗೊಳಿಸಿದ ಅಧಿಕಾರಿಗಳು

    ರಾಮನಗರ: ಸ್ವಚ್ಛ ಶುಕ್ರವಾರ ಅಭಿಯಾನ ಇದೀಗ ರಾಮನಗರ ಜಿಲ್ಲೆಯಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ತಾಲೂಕು ಮಟ್ಟದಲ್ಲಿ ಆರಂಭವಾದ ಸ್ವಚ್ಛ ಶುಕ್ರವಾರ ಇದೀಗ ನಾಲ್ಕೇ ವಾರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸುವಂತೆ ಮಾಡಿದೆ.

    ಜಿಲ್ಲೆಯಲ್ಲಿ ಸ್ವಚ್ಛ ಶುಕ್ರವಾರದ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಪಂಚಾಯತಿಯ ಸಿಇಒ ಇಕ್ರಂ ಅವರಿಂದ ಹಿಡಿದು, ಗ್ರಾಮ ಪಂಚಾಯಿತಿಯ ತಳ ಹಂತದ ಸಿಬ್ಬಂದಿವರೆಗೂ ಶುಕ್ರವಾರ ಒಂದು ಗಂಟೆಗಳ ಕಾಲ ಶ್ರಮದಾನ ಮಾಡುವ ಮೂಲಕ ತಮ್ಮ ತಮ್ಮ ಕಚೇರಿ, ಕಟ್ಟಡದ ಆವರಣಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸಿಇಒ ಇಕ್ರಂ, ಉಪ ಕಾರ್ಯದರ್ಶಿ ಉಮೇಶ್, ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಸಹಾಯಕರು ತಮ್ಮ ಜಿಲ್ಲಾ ಪಂಚಾಯಿತಿ ಆವರಣದಲ್ಲಿನ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿದರು.

    ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಗಾಣಕಲ್ ನಟರಾಜು ನೇತೃತ್ವದಲ್ಲಿ ತಾಲೂಕು ಪಂಚಾಯತ್‍ನ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ವಚ್ಛ ಶುಕ್ರವಾರ ಕಾರ್ಯಕ್ರಮದಲ್ಲಿ ಬೆವರು ಸುರಿಸಿದರೇ, ಉಪ ವಿಭಾಗಾಧಿಕಾರಿ ದಾಕ್ಷಾಯಿಣಿ ಸ್ವಚ್ಛ ಕಾರ್ಯಕ್ಕೆ ಕೈ ಜೋಡಿಸಿದರು. ತಾಲೂಕು ಪಂಚಾಯಿತಿ ಆವರಣದಲ್ಲಿ ಒಂದು ಗಂಟೆಗಳ ಕಾಲ ಶ್ರಮದಾನ ಮಾಡುವುದರ ಮೂಲಕ ಪೊರಕೆ ಹಿಡಿದು ನಿಂತ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸ್ವಚ್ಛಗೊಳಿಸುವಂತೆ ಸೂಚನೆ ನೀಡುವುದರ ಜತೆಗೆ ಉಪವಿಭಾಗಧಿಕಾರಿ ದಾಕ್ಷಾಯಿಣಿ ಸ್ವತಃ ಪೊರಕೆ ಹಿಡಿದು ತಾವು ಕೂಡ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು.

    ಶುಕ್ರವಾರ ಕಚೇರಿ ಆರಂಭಕ್ಕೂ ಮುನ್ನಾ ಸ್ವಚ್ಛ ಕಾರ್ಯದಲ್ಲಿ ತೊಡಗಿಸಿಕೊಂಡ ಅಧಿಕಾರಿಗಳು, ಒಂದು ಗಂಟೆಗಳ ಕಾಲದಲ್ಲಿ ಸುತ್ತಮುತ್ತಲಿನ ಪ್ರದೇಶವನ್ನು ಚೊಕ್ಕಗಳಿಸಿದರು. ಕಚೇರಿಯಲ್ಲಿ ಫೈಲ್ ಹಿಡಿದು ಮಗ್ನರಾಗುತ್ತಿದ್ದ ಅಧಿಕಾರಿಗಳು ಪೊರಕೆ ಹಿಡಿದು ತೋರಿದ ಗಾಂಧಿಗಿರಿಗೆ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಯಿತು. ರಾಮನಗರ ತಾಲೂಕು ಪಂಚಾಯಿತಿ ವ್ಯಾಪ್ತಿಯ ಪ್ರತಿ ಅಂಗನವಾಡಿ ಕೇಂದ್ರ ಶಿಕ್ಷಕಿಯರು, ತಮ್ಮ ತಮ್ಮ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿದ್ದಾರೆ. ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು, ಪಂಚಾಯಿತಿ ಕಾರ್ಯಾಲಯಗಳಲ್ಲಿಯೂ ಶುಕ್ರವಾರ ಸ್ವಚ್ಛ ಶುಕ್ರವಾರವಾಗಿ ಮಾಡಿವೆ.

    ಸಂಜೀವಿನಿ ಸ್ವಸಹಾಯ ಮಹಿಳಾ ಗುಂಪಿನ ಸದಸ್ಯರು ಆಯಾ ವ್ಯಾಪ್ತಿಯ ದೇವಾಲಯಗಳನ್ನು ಸ್ವಚ್ಛಗೊಳಿಸಿ, ರಂಗೋಲಿ ಕೂಡ ಹಾಕಿದ್ದಾರೆ. ಒಟ್ಟಾರೆ ಕಚೇರಿಯ ಆವರಣಕ್ಕೆ ಮಾತ್ರ ಸಿಮೀತವಾಗಿದ್ದ ಸ್ವಚ್ಛತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದು ದೇಗುಲಗಳತ್ತ ಮುಖ ಮಾಡಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

    ಇದೇ ವೇಳೆ ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ ಮಾತನಾಡಿ, ಮೊದಲ ಬಾರಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಸ್ವಚ್ಛ ಶುಕ್ರವಾರ ಕಾರ್ಯಕ್ರಮವನ್ನು ಮಾಡಿದ್ದೇವೆ. ಮೊದಲ ವಾರ ಆಗಿರುವ ಕಾರಣ ಕಚೇರಿ ಹಾಗೂ ಕಟ್ಟಡದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿದ್ದೇವೆ. ರಾಮನಗರ ಚನ್ನಪಟ್ಟಣ ಹಾಗೂ ಮಾಗಡಿ ತಾಲೂಕು ಪಂಚಾಯಿತಿಗಳಲ್ಲಿ ಈ ಕಾರ್ಯ ಏರ್ಪಡಿಸಲಾಗಿದೆ. ಮುಂದಿನ ವಾರದಿಂದ ಬಸ್ ಹಾಗೂ ರೈಲ್ವೆ ನಿಲ್ದಾಣ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛ ಶುಕ್ರವಾರ ಏರ್ಪಡಿಸಲಾಗುತ್ತದೆ ಎಂದು ತಿಳಿಸಿದರು.

    ಹೊಸ ವರ್ಷವನ್ನು ಪ್ಲಾಸ್ಟಿಕ್ ಮುಕ್ತ ನಮ್ಮ ಮನೆ ಎಂಬ ಶೀರ್ಷಿಕೆಯಡಿ ಮೂರು ದಿನಗಳ ಕಾಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ತಾ.ಪಂ ವ್ಯಾಪ್ತಿಯ ವಿದ್ಯಾರ್ಥಿಗಳು ತಮ್ಮ ಮನೆಯ ಪ್ಲಾಸ್ಲಿಕ್ ವಸ್ತುಗಳನ್ನು ಶಾಲೆಗೆ ತಂದು ಶೇಖರಣೆ ಮಾಡಿದರೇ, ಅದನ್ನು ತಾಲೂಕು ಪಂಚಾಯಿತಿನಿಂದ ವಿಲೇವಾರಿ ಮಾಡಲಾಗುತ್ತದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜು ತಿಳಿಸಿದರು.

  • ಸಕಾಲಕ್ಕೆ ವೇತನ, ಹುದ್ದೆ ಖಾಯಂಗೊಳಿಸಲು ಆಗ್ರಹ : ಮೆಗ್ಗಾನ್ ಆಸ್ಪತ್ರೆ ನೌಕರರ ಪ್ರತಿಭಟನೆ

    ಸಕಾಲಕ್ಕೆ ವೇತನ, ಹುದ್ದೆ ಖಾಯಂಗೊಳಿಸಲು ಆಗ್ರಹ : ಮೆಗ್ಗಾನ್ ಆಸ್ಪತ್ರೆ ನೌಕರರ ಪ್ರತಿಭಟನೆ

    ಶಿವಮೊಗ್ಗ: ಸಕಾಲಕ್ಕೆ ವೇತನ ನೀಡುವಂತೆ ಹಾಗೂ ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿ ಶಿವಮೊಗ್ಗದಲ್ಲಿ ಇಂದು ಮೆಗ್ಗಾನ್ ಆಸ್ಪತ್ರೆಯ ಹೊರಗುತ್ತಿಗೆಯ ನೂರಾರು ಸಿಬ್ಬಂದಿ ಪ್ರತಿಭಟನೆ ನಡೆಸಿದರು.

    ಕರ್ತವ್ಯಕ್ಕೆ ಗೈರು ಹಾಜರಾಗಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದ ಸಿಬ್ಬಂದಿಯವರು ನಮಗೆ ಸಮಯಕ್ಕೆ ಸರಿಯಾಗಿ ವೇತನ ನೀಡುತ್ತಿಲ್ಲ ಹಾಗೂ ಕೆಲಸದಿಂದ ತೆಗೆಯುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ ಎಂದು ಆರೋಪಿಸಿದರು.

    ಅಲ್ಲದೇ ಹಲವು ವರ್ಷದಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ನಮ್ಮನ್ನೆ ಖಾಯಂಗೊಳಿಸಬೇಕು ಇಲ್ಲದಿದ್ದರೆ ಹೊರಗುತ್ತಿಗೆ ತೆಗೆದು ಹಾಕಿ ಸರ್ಕಾರವೇ ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಸಿಬ್ಬಂದಿ ಆಗ್ರಹಿಸಿದರು.

    ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ್ದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ರಾಜ್ಯದಲ್ಲಿ ಹೊರ ಗುತ್ತಿಗೆಯದ್ದು ಒಂದು ದೊಡ್ಡ ಮಾಫಿಯವೇ ಇದೆ. ಸರ್ಕಾರವೇ ವೇತನ ನೀಡುತ್ತಿರಬೇಕಾದರೆ ಹೊರಗುತ್ತಿಗೆ ಏಕೆ ಬೇಕು ಎಂದು ಪ್ರಶ್ನಿಸಿದರು. ಈ ಬಗ್ಗೆ ಮುಖ್ಯಮಂತ್ರಿ ಅವರ ಜೊತೆ ಚರ್ಚಿಸಿ ಹೊರಗುತ್ತಿಗೆ ತೆಗೆದುಹಾಕಿ ನೇರ ನೇಮಕಾತಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡುವುದಾಗಿ ತಿಳಿಸಿದರು.

  • ಸರ್ಕಾರಿ ಕಚೇರಿಯಲ್ಲಿ ಸಿಬ್ಬಂದಿ ಗುಂಡು-ತುಂಡಿನ ಭರ್ಜರಿ ಪಾರ್ಟಿ

    ಸರ್ಕಾರಿ ಕಚೇರಿಯಲ್ಲಿ ಸಿಬ್ಬಂದಿ ಗುಂಡು-ತುಂಡಿನ ಭರ್ಜರಿ ಪಾರ್ಟಿ

    – ಪೊಲೀಸ್ ಬರುತ್ತಿದ್ದಂತೆ ಕಚೇರಿಗೆ ಬೀಗ ಹಾಕಿ ಪರಾರಿ

    ಗದಗ: ಗದಗ ನಗರದ ಎಪಿಎಂಸಿ ಯಾರ್ಡ್ ನಲ್ಲಿರುವ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ “ಓರಿಯೆಂಟಲ್ ಇನ್ಸೂರೆನ್ಸ್ ಕಂಪನಿ”ಯ ಕಚೇರಿಯಲ್ಲಿ ಸಿಬ್ಬಂದಿ ಹಾಗೂ ಏಜೆಂಟ್ ಇಬ್ಬರು ಸೇರಿಕೊಂಡು ಭರ್ಜರಿ ಎಣ್ಣೆ ಪಾರ್ಟಿ ನಡೆಸಿದ್ದಾರೆ.

    ಈ ಓರಿಯಂಟಲ್ ಇನ್ಸೂರೆನ್ಸ್ ಕಂಪನಿಯ ಸಿಬ್ಬಂದಿಗಳಾದ ಅಶೋಕ್ ಮತ್ತು ಏಜೆಂಟರಾದ ವಿಶ್ವನಾಥ್ ಗುಂಡು-ತುಂಡಿನ ಜೊತೆಯಲ್ಲಿ ತಲ್ಲೀನರಾಗಿದ್ದರು. ಸರ್ಕಾರಿ ಕೆಲಸ ಅಂದರೆ ದೇವರ ಕೆಲಸ ಅಂತಾರೆ. ಆದರೆ ಈ ಸಿಬ್ಬಂದಿ ಅನ್ನ ಕೊಡುವ ಕಚೇರಿಯನ್ನ ಬಾರ್ ಮಾಡಿಕೊಂಡಿದ್ದಾರೆ. ಈ ಇಬ್ಬರು ಸಿಬ್ಬಂದಿ, ಎಜೆಂಟ್ ಅನೇಕ ದಿನಗಳಿಂದ ಇದೇ ರೀತಿ ಪಾರ್ಟಿ ಮಾಡಿಕೊಂಡು ಬಂದಿದ್ದಾರೆ ಎನ್ನುವ ವಿಚಾರ ಕೂಡ ಬೆಳಕಿಗೆ ಬಂದಿದೆ.

    ಅಷ್ಟೇ ಅಲ್ಲದೆ ಕೆಲವು ಬಾರಿ ಹಾಡಹಗಲೇ ಕಚೇರಿಯಲ್ಲಿ ಎಣ್ಣೆ ಪಾರ್ಟಿ ಮಾಡುವ ಮೂಲಕ ಮೋಜು ಮಸ್ತಿಗೆ ಮುಳುಗುತ್ತಿದ್ದರು ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಕಚೇರಿಯಲ್ಲಿ ಪಾರ್ಟಿ ನಡೆಯುತ್ತಿದ್ದ ವೇಳೆ ಓರಿಯಂಟಲ್ ಇನ್ಸೂರೆನ್ಸ್ ಕಂಪನಿಗೆ ಗದಗದ ಬಡಾವಣೆ ಠಾಣೆ ಪೋಲಿಸರು ಬಂದಾಗ ಇವರಿಬ್ಬರು ಕಂಗಾಲಾದರು. ಈ ದೃಶ್ಯಗಳನ್ನು ಮೊಬೈಲ್‍ನಲ್ಲಿ ಸೆರೆಹಿಡಿಯುವ ವೇಳೆ ಈ ಸಿಬ್ಬಂದಿ, ಎಜೆಂಟ್ ಅಡ್ಡಿಪಡಿಸಿದರು. ಅಲ್ಲದೆ ಕಚೇರಿಗೆ ಬೀಗ ಹಾಕಿ ಇಬ್ಬರೂ ಸ್ಥಳದಿಂದಲೇ ಪರಾರಿಯಾದರು. ಆದ್ದರಿಂದ ಗದಗ ಬೆಟಗೇರಿ ಬಡಾವಣೆ ಪೊಲೀಸರು ಇವರಿಬ್ಬರ ಮೇಲೆ ಈಗ ಹದ್ದಿನ ಕಣ್ಣಿಟ್ಟಿದ್ದಾರೆ.