ಶ್ರೀನಗರ: ಜಮ್ಮು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಿಂದ ಅಪಹರಿಸಲ್ಪಟ್ಟಿದ್ದ ಪೊಲೀಸ್ ಪೇದೆಯ ಮೃತದೇಹ ಪತ್ತೆಯಾಗಿದ್ದು, ಉಗ್ರರು ಗುಂಡಿಟ್ಟು ಪೊಲೀಸ್ ಪೇದೆಯನ್ನು ಕೊಲೆ ಮಾಡಿ ವಿಕೃತಿ ತೋರಿದ್ದಾರೆ.
ಸಲೀಮ್ ಶಾಹ್ ಮೃತ ಪೊಲೀಸ್ ಪೇದೆ. ರಜೆಯಲ್ಲಿದ್ದ ಪೊಲೀಸ್ ಪೇದೆಯನ್ನು ಶುಕ್ರವಾರ ರಾತ್ರಿ ಅಪಹರಣ ಮಾಡಲಾಗಿತ್ತು. ಶನಿವಾರ ಸಂಜೆ ವೇಳೆಗೆ ಮೃತ ದೇಹ ಪತ್ತೆಯಾಗಿದೆ.
ಪೊಲೀಸ್ ಪೇದೆ ಅಪಹರಣಗೊಂಡ ಮಾಹಿತಿ ತಿಳಿದ ತಕ್ಷಣ ಪೇದೆಯ ಪತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಆದರೆ ಈ ವೇಳೆಗೆ ಉಗ್ರರು ಪೇದೆಯನ್ನು ಕೊಲೆ ಮಾಡಿದ್ದಾರೆ. ಮೃತ ದೇಹದ ಮೇಲೆ ಕೆಲ ಗಾಯದ ಗುರುತು ಪತ್ತೆಯಾಗಿದ್ದು, ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದು ಸೇನೆ ವಕ್ತಾರರು ತಿಳಿಸಿದ್ದಾರೆ.
ಶಾಹ 2016 ರಲ್ಲಿ ತರಬೇತಿ ಬಳಿಕ ಪೊಲೀಸ್ ಕರ್ತವ್ಯಕ್ಕೆ ಸೇರಿದ್ದು, ಪುಲ್ವಾಮ ಡಿಪಿಎಲ್ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ವೃದ್ಧ ಪೋಷಕರಿದ್ದು, ಇಬ್ಬರು ಸಹೋದದರು ಹಾಗೂ ಸಹೋದರಿ ಹೊಂದಿದ್ದಾರೆ. ಈ ಕುಟುಂಬಲ್ಲಿ ಶಾಹ ಒಬ್ಬರೇ ದುಡಿದು ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದರು.
ಸದ್ಯ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೊಲೆ ಮಾಡಿದ ದುಷ್ಕರ್ಮಿಗಳಿಗಾಗಿ ತನಿಖೆ ನಡೆಸಿದ್ದಾರೆ. ನಿಷೇಧಿತ ಭಯೋತ್ಪಾದನಾ ಸಂಘಟನೆ ಕೃತ್ಯ ನಡೆಸಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದು, ಮೃತ ಪೇದೆಯ ಸಾವಿಕೆ ನ್ಯಾಯ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಘಟನೆಯನ್ನು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಖಂಡಿಸಿ ಟ್ವೀಟ್ ಮಾಡಿದ್ದು, ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಮೃತ ಪೇದೆಯ ಕುಟುಂಬಕ್ಕೆ ನೋವು ಬರಿಸುವ ಶಕ್ತಿ ದೇವರು ನೀಡಲಿ ಎಂದು ಬರೆದುಕೊಂಡಿದ್ದಾರೆ.