-ಶಾಲೆಗೆ ಶಿಕ್ಷಕರನ್ನ ನೇಮಿಸಿ ಎಂದ ವಿದ್ಯಾರ್ಥಿ
-ಮನೆಗೆ ಭೇಟಿ ನೀಡಿ ಶಿಕ್ಷಣ ಸಚಿವರಿಂದ ಸನ್ಮಾನ
ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಐದು ದಿನ ಮೊದಲು ಕೂಲಿ ಕೆಲಸದಿಂದ ರಜೆ ಪಡೆದು ಓದಿದ್ದ ವಿದ್ಯಾರ್ಥಿ ಮಹೇಶ್ ಬಿ. 625ಕ್ಕೆ 616 ಅಂಕ ಪಡೆದಿದ್ದಾನೆ. ಮಹೇಶ್ ಕಟ್ಟಡ ಕಾಮಗಾರಿಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಸೋಮವಾರ ಪ್ರಕಟಗೊಂಡ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಟಾಪರ್ ಗಳಲ್ಲಿ ಮಹೇಶ್ ಸಹ ಒಬ್ಬನಾಗಿದ್ದಾನೆ.

ಮಹೇಶ್ ಮೂಲತಃ ಯಾದಗಿರಿ ಜಿಲ್ಲೆಯವರು. ತನ್ನ ತಾಯಿ ಹಾಗೂ ಇಬ್ಬರು ಸಹೋದರರೊಂದಿಗೆ ಮಹೇಶ್ ಬೆಂಗಳೂರಿನ ಮಲ್ಲೇಶಪಾಳ್ಯದಲ್ಲಿ ವಾಸವಾಗಿದ್ದು, ಜೀವನಭೀಮಾನಗರದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾನೆ. ಮನೆಯಿಂದ ಐದು ಕಿಲೋ ಮೀಟರ್ ದೂರದಲ್ಲಿರುವ ಶಾಲೆಗೆ ಮಹೇಶ್ ಬಿಎಂಟಿಸಿ ಬಸ್ ಮೂಲಕ ತೆರಳುತ್ತಿದ್ದನು. ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ರಿಸಲ್ಟ್ – ಈ ಬಾರಿ ಜಿಲ್ಲೆಗಳಿಗೆ ಗ್ರೇಡ್ ನೀಡಿದ್ದು ಯಾಕೆ?
ಮಹೇಶ್ ಯಾವುದೇ ಟ್ಯೂಷನ್ ಸಹ ಪಡೆದುಕೊಂಡಿಲ್ಲ. ಇನ್ನು ಮಹೇಶ್ ಶಾಲೆಯಲ್ಲಿ ಕನ್ನಡ ಮತ್ತು ಹಿಂದಿ ಭಾಷೆಗೆ ಶಿಕ್ಷಕರು ಇರಲಿಲ್ಲ. ಸಮಾಜದ ಶಿಕ್ಷಕರೇ 10ನೇ ತರಗತಿಯ ಕನ್ನಡ ಪಠ್ಯ ಮಾಡಿದ್ದಾರೆ. ಆದರೆ ಹಿಂದಿಯನ್ನ ಮಕ್ಕಳೇ ಅಭ್ಯಾಸ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಆಟೋ ಚಾಲಕನ ಮಗ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ

ಮಹೇಶ್ ಐದು ವರ್ಷದ ಮಗು ಇದ್ದಾಗಲೇ ತಂದೆಯನ್ನ ಕಳೆದುಕೊಂಡಿದ್ದು, ತಾಯಿ ಮಲ್ಲಮ್ಮ ಅನಕ್ಷರಸ್ಥೆಯಾಗಿದ್ದು ಅವರಿವರ ಮನೆಗಳಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಇನ್ನು ಮಹೇಶ್ ಕಿರಿಯ ಸೋದರತ ಎಂಟನೇ ತರಗತಿ ಓದುತ್ತಿದ್ದು, ಅಣ್ಣ ಕಟ್ಟಡ ಕೆಲಸಗಳಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಮಹೇಶ್ ಸೋದರ ಟೆಂಪೋ ತೆಗದುಕೊಂಡು ಯಾದಗಿರಿಗೆ ಹೋದಾಗ ಲಾಕ್‍ಡೌನ್ ನಿಂದಾಗಿ ಅಲ್ಲಿಯೇ ಸಿಲುಕಿಕೊಂಡಿದ್ದನು.

ಇತ್ತ ಮಹೇಶ್ ತಾಯಿ ಸಹ ಕೆಲಸ ಕಳೆದುಕೊಂಡು ಮನೆಯಲ್ಲಿ ಕೂರುವಂತಾಗಿತ್ತು. ಲಾಕ್‍ಡೌನ್ ಕಷ್ಟದ ಸಮಯದಲ್ಲಿ ಅಮ್ಮನ ಬಳಿ ಕೆಲಸವೂ ಇರಲಿಲ್ಲ, ಹಣವೂ ಇರಲಿಲ್ಲ. ಈ ವೇಳೆ ಬಿಬಿಎಂಪಿ ನೀಡಿದ ರೇಷನ್ ಕಿಟ್ ನಮಗೆ ಆಸರೆಯಾಯ್ತು.
ಸಕ್ಸಸ್ ಮಂತ್ರ?: ಹೆಚ್ಚು ಕಠಿಣ ಪಾಠಗಳನ್ನು ಅಭ್ಯಾಸ ಮಾಡುತ್ತಿದ್ದೆ. ಶಾಲೆಯಲ್ಲಿ ನೀಡಿದ ನೋಟ್ಸ್ ಮತ್ತು ಪುಸ್ತಕಗಳನ್ನು ಓದಿದ್ದೇನೆ. ಶೇ.90ಕ್ಕಿಂತ ಹೆಚ್ಚು ಅಂಕ ಬರುತ್ತೆ ಎಂದು ಲೆಕ್ಕ ಹಾಕಿದ್ದೆ. ಆದ್ರೆ 616 ಅಂಕಗಳ ಬಂದಿದ್ದಕ್ಕೆ ಖುಷಿಯಾಗಿದೆ ಎಂದು ಮಹೇಶ್ ಹೇಳುತ್ತಾನೆ.

ಮುಂದೆ ಶಿಕ್ಷಕನಾಗುವ ಕನಸು ಕಂಡಿರುವ ಮಹೇಶ್, ಶಾಲೆಗೆ ಶಿಕ್ಷಕರನ್ನು ನೇಮಿಸುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬಳಿ ವಿದ್ಯಾರ್ಥಿ ಮನವಿ ಮಾಡಿಕೊಂಡಿದ್ದಾನೆ. ತಾನು ಅನುಭವಿಸಿದ ಕಷ್ಟ ಮುಂದಿನ ವಿದ್ಯಾರ್ಥಿಗಳಿಗೆ ಬರೋದು ಬೇಡ ಎಂದು ಮಹೇಶ್ ಹೇಳುತ್ತಾನೆ.
ಇನ್ನೂ ಮಹೇಶ್ ಸಾಧನೆ ಕಂಡ ಶಿಕ್ಷಣ ಸಚಿವರು, ಫೋನ್ ಮಾಡಿ ವಿದ್ಯಾರ್ಥಿ ಜೊತೆ ಮಾತನಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ ಖುದ್ದು ಸಚಿವರು ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿದ್ದಾರೆ.

ಸಚಿವರ ಫೋಸ್ಟ್: ಮಹೇಶ್ ಯಾದಗಿರಿಯಿಂದ ಬೆಂಗಳೂರಿಗೆ ಗುಳೆ ಬಂದಿರುವ ಕುಟುಂಬಕ್ಕೆ ಸೇರಿದ ಬಾಲಕ. ಇಂದಿರಾನಗರದ ಜೀವನಭೀಮಾನಗರದ ವ್ಯಾಪ್ತಿಯಲ್ಲಿರುವ ಕರ್ನಾಟಕ ಸರ್ಕಾರದ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿ. ಇಂದು ಮಹೇಶ್ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 616 ಅಂಕಗಳನ್ನು ಪಡೆದು ಎಲ್ಲರಿಂದ ಭೇಶ್ ಎನಿಸಿಕೊಂಡಿದ್ದಾನೆ.
ಅವರ ತಾಯಿ ಮಲ್ಲಮ್ಮ ಅವರಿವರ ಮನೆ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದಾರೆ. ಮಹೇಶ್ ಸಹ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕೂಲಿ ಕೆಲಸ ಮಾಡಿಕೊಂಡೇ ವಿದ್ಯಾಭ್ಯಾಸವನ್ನು ಇದುವರೆಗೆ ಮುಗಿಸಿದ್ದಾನೆ. ಇಂದು ಅವನ ಮನೆಯೆಂದು ಕರೆಯಬಹುದಾದ ಪುಟ್ಟ ಗುಡಿಸಲಿಗೆ ನಾನೇ ಹೋಗಿದ್ದೆ. ಮನೆಯಲ್ಲಿ ಕುಳಿತುಕೊಳ್ಳಲು ಜಾಗವಿಲ್ಲ. ಮಹೇಶನಿಗೆ ಶಿಕ್ಷಣ ಇಲಾಖೆಯ ಪರವಾಗಿ ಅಭಿನಂದನೆ ಸಲ್ಲಿಸಿ ಕಾಲೇಜು ಶಿಕ್ಷಣಕ್ಕೆ ವ್ಯವಸ್ಥೆ ಮಾಡುವುದಾಗಿ ಧೈರ್ಯ ತುಂಬಿ ಬಂದಿದ್ದೇನೆ.
ಮಹೇಶನಿಗೆ ಪಿಯುಸಿ ತರಗತಿಗಳಲ್ಲಿ ವಿಜ್ಞಾನ ವಿಷಯಗಳನ್ನು ತೆಗೆದುಕೊಂಡು ಓದಬೇಕೆಂಬ ಮಹದಾಸೆಯಿದೆ. ಅವನ ಮನೆ, ಅವನ ಕುಟುಂಬ, ಅವರ ತಾಯಿಯ ಮುಗ್ಧತೆ, ಮಹೇಶನ ಸಾಧನೆ ಎಲ್ಲ ಕಂಡಾಗ ಕಣ್ತುಂಬಿ ಬಂತು – ಅದೇ ರೀತಿ ಹೃದಯ ತುಂಬಿ ಬಂತು ಎಂದು ಬರೆದುಕೊಂಡಿದ್ದಾರೆ.