Tag: SSLC Result

  • ಕಿರಾಣಿ ಅಂಗಡಿ ನಡೆಸುತ್ತಿದ್ದ ಮಹಾಂತೇಶ್ ರಾಯರ್ ಪುತ್ರಿ ಬೆಳಗಾವಿಗೆ ಟಾಪ್

    ಕಿರಾಣಿ ಅಂಗಡಿ ನಡೆಸುತ್ತಿದ್ದ ಮಹಾಂತೇಶ್ ರಾಯರ್ ಪುತ್ರಿ ಬೆಳಗಾವಿಗೆ ಟಾಪ್

    ಬೆಳಗಾವಿ: ಕಿರಾಣಿ ಅಂಗಡಿಯಿಂದ ಜೀವನ ನಡೆಸುತ್ತಿದ್ದ ಮಹಾಂತೇಶ್ ರಾಯರ್ ಅವರ ಪುತ್ರಿಯೊಬ್ಬಳು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಪ್ರತಿಶತ ಅಂಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

    ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದ ನಿವಾಸಿಗಳಾದ ಮಹಾಂತೇಶ ರಾಯರ್ ಹಾಗೂ ಭಾರತೀ ರಾಯರ್ ಅವರ ಪುತ್ರಿ ಸಹನಾ ಮಹಾಂತೇಶ ರಾಯರ್ 10ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಪೋಷಕರು ಹಾಗೂ ಶಾಲೆಯ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ. ಇದನ್ನೂ ಓದಿ: ಔಟ್‌ ಆಫ್‌ ಔಟ್‌ – ಚಿಕ್ಕಬಳ್ಳಾಪುರದ ಒಂದೇ ಶಾಲೆಯ ಮೂವರು ರಾಜ್ಯಕ್ಕೆ ಪ್ರಥಮ

    ಸತ್ತಿಗೇರಿ ಗ್ರಾಮದ ಸಹನಾ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಈಕೆ ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿ ಗ್ರಾಮೀಣ ಭಾಗದ ಜನರ ಆರೋಗ್ಯ ಕಾಪಾಡಬೇಕು ಎಂಬ ಮಹದಾಸೆ ಇಟ್ಟುಕೊಂಡಿದ್ದಾರೆ. ಸಹನಾ ತಂದೆ ಜೀವನ ನಿರ್ವಹಣೆಗಾಗಿ ಕಿರಾಣಿ ಅಂಗಡಿ ನಡೆಸಿ ಕುಟುಂಬ ಸಾಗಿಸುತ್ತಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಸಹನಾ, ಕೋವಿಡ್-19 ಸಂಕಷ್ಟದಿಂದ ತರಗತಿ ಸಮರ್ಪಕವಾಗಿ ನಡೆಯಲಿಲ್ಲ. ಆನ್‌ಲೈನ್ ತರಗತಿಗೆ ಹಾಜರಾಗಲು ನೆಟ್‌ವರ್ಕ್ ಸಮಸ್ಯೆಯೂ ಕಾಡುತಲಿತ್ತು. ಆದರೂ, ಎದೆಗುಂದದೆ ಆತ್ಮವಿಶ್ವಾಸದಿಂದ ಓದು ಮುಂದುವರಿಸಿದೆ. ನನ್ನ ಶಿಕ್ಷಕರು ಮತ್ತು ಪೋಷಕರು ಸಾಕಷ್ಟು ಪ್ರೋತ್ಸಾಹ ನೀಡಿದರು. ಅವರ ನಿರೀಕ್ಷೆಯಂತೆ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದಿದ್ದಾರೆ.

    9ನೇ ತರಗತಿ ವಾರ್ಷಿಕ ಪರೀಕ್ಷೆ ಮುಗಿಯುತ್ತಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದೆ. ಶಿಕ್ಷಕರ ಪಾಠವನ್ನು ಏಕಾಗ್ರತೆಯಿಂದ ಆಲಿಸುತ್ತಿದ್ದೆ. ನಿತ್ಯ ಮನೆಗೆಲಸ ಮಾಡುತ್ತಲೇ 8 ತಾಸು ಓದುತ್ತಿದ್ದೆ. ಸತತ ಪರಿಶ್ರಮಕ್ಕೆ ಈಗ ಫಲ ಸಿಕ್ಕಿದೆ ಎಂದು ಸಂತಸ ಹಚ್ಚಿಕೊಂಡಿದ್ದಾರೆ. ಇದನ್ನೂ ಓದಿ: ಎಸ್‍ಎಸ್‍ಎಲ್‍ಸಿಯಲ್ಲಿ ಔಟ್ ಆಫ್ ಔಟ್ ತೆಗೆದ ಬೆಂಗಳೂರಿನ ವಿದ್ಯಾರ್ಥಿಗಳು

    ಬಾಗಲಕೋಟೆಗೆ ಇಂದಿರಾ ಟಾಪ್: ಬಾಗಲಕೋಟೆ ತಾಲೂಕಿನ ಚಿಕ್ಕಸಂಶಿ ಗ್ರಾಮದ ವಿದ್ಯಾರ್ಥಿನಿ ಇಂದಿರಾ ನ್ಯಾಮಗೌಡರ್ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಮಂಗಳೂರು ಜಿಲ್ಲೆಯ ಮೂಡಬಿದರೆ ಆಳ್ವಾಸ್‌ನ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿನಿ ಈ ಸಾಧನೆ ಮಾಡಿದ್ದು, ಪೋಷಕರು ಹಾಗೂ ಶಾಲಾ ಶಿಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

  • SSLC ಫಲಿತಾಂಶ-ಶಿರಸಿ ಸನ್ನಿಧಿ, ಮಂಗಳೂರಿನ ಅನೂಷ್‌ಗೆ 625ಕ್ಕೆ 625 ಅಂಕ

    SSLC ಫಲಿತಾಂಶ-ಶಿರಸಿ ಸನ್ನಿಧಿ, ಮಂಗಳೂರಿನ ಅನೂಷ್‌ಗೆ 625ಕ್ಕೆ 625 ಅಂಕ

    ಕಾರವಾರ/ಮಂಗಳೂರು: ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿದ್ದು, ಪ್ರಥಮ ಸ್ಥಾನವನ್ನು ಇಬ್ಬರು ಹಂಚಿಕೊಂಡಿದ್ದಾರೆ. ಮಂಗಳೂರಿನ ಅನೂಷ್ ಎ.ಎಲ್ ಮತ್ತು ಶಿರಸಿ ಸನ್ನಿಧಿ ಎಲ್ಲ ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅನೂಷ್ ಸುಬ್ರಹ್ಮಣ್ಯದ ಕುಮಾರಸ್ವಾಮಿ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾನೆ.

    ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸನ್ನಿಧಿ ಮಹಾಬಲೇಶ್ವರ ಹೆಗಡೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದು, 625 ಕ್ಕೆ 625 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಶಿರಸಿಯ ಪ್ರಗತಿ ನಗರದ ಮಹಾಬಲೇಶ್ವರ ಹೆಗಡೆ ಹಾಗೂ ವೀಣಾ ಹೆಗಡೆ ದಂಪತಿಯ ಪುತ್ರಿಯಾಗಿರುವ ಸನ್ನಿಧಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದು, ಅವರ ತಂದೆ ಕಾರವಾರದ ಆರೋಗ್ಯ ಇಲಾಖೆಯಲ್ಲಿ ಹಿರಿಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಕಳೆದ ಹಲವು ವರ್ಷಗಳಿಂದ ಉತ್ತಮ ಸಾಧನೆ ಮಾಡಿಕೊಂಡು ಬಂದಿರುವ ಶಿರಸಿಯ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದು, ಆಕೆಯ ಸಾಧನೆಗೆ ಶಿಕ್ಷಕ ವೃಂದ ಹಾಗೂ ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.

    ರಾಜ್ಯದಲ್ಲಿ 11 ವಿದ್ಯಾರ್ಥಿಗಳು 624, 43 ಮಂದಿ 623, 56 ವಿದ್ಯಾರ್ಥಿಗಳು 622, 68 ಮಂದಿ 621 ಹಾಗೂ 117 ವಿದ್ಯಾರ್ಥಿಗಳು 620 ಅಂಕ ಪಡೆದಿದ್ದಾರೆ. ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಈ ಬಾರಿ ಪ್ರಥಮ ಹಾಗೂ ಯಾದಗಿರಿ ಕೊನೆಯ ಸ್ಥಾನ ಪಡೆದುಕೊಂಡಿದೆ.

    https://twitter.com/mla_sudhakar/status/1292762268606713856

    ಈ ಬಾರಿ 8,48,203 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದರು. 19,086 ವಿದ್ಯಾರ್ಥಿಗಳಿಗೆ ಹಾಜರಾತಿ ಕೊರತೆಯಾಗಿತ್ತು. 18,067 ವಿದ್ಯಾರ್ಥಿಗಳು ಕೊರೋನಾ ಕಾರಣದಿಂದ ಗೈರು ಹಾಜರಾಗಿದ್ದರು. 8,11,050 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 34 ಶೈಕ್ಷಣಿಕ ಜಿಲ್ಲೆಗಳ 227 ಕೇಂದ್ರಗಳಲ್ಲಿ 52,219 ಮೌಲ್ಯಮಾಪಕರು ಮೌಲ್ಯಮಾಪನ ನಡೆಸಿದ್ದರು.

  • ಎಸ್‍ಎಸ್‍ಎಲ್‍ಸಿ ರಿಸಲ್ಟ್ ಔಟ್- ತಮಿಳುನಾಡಿನಲ್ಲಿ ಶೇ.100ರಷ್ಟು ಫಲಿತಾಂಶ

    ಎಸ್‍ಎಸ್‍ಎಲ್‍ಸಿ ರಿಸಲ್ಟ್ ಔಟ್- ತಮಿಳುನಾಡಿನಲ್ಲಿ ಶೇ.100ರಷ್ಟು ಫಲಿತಾಂಶ

    -10ನೇ ತರಗತಿ ಪರೀಕ್ಷೆ ಬರೆದ ಎಲ್ಲರೂ ಪಾಸ್

    ಚೆನ್ನೈ: ತಮಿಳುನಾಡಿನಲ್ಲಿ ಇಂದು ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಗೆ ಹಾಜರಾಗಿದ್ದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2020ರಲ್ಲಿ ತಮಿಳುನಾಡು ಶೇ.100 ರಷ್ಟು ಫಲಿತಾಂಶ ದಾಖಲಿಸುವ ಮೂಲಕ ದಾಖಲೆ ಬರೆದಿದೆ.

    ಈ ವರ್ಷ ನಡೆದ ಪರೀಕ್ಷೆಗೆ 9 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 4,68,070 ವಿದ್ಯಾರ್ಥಿನಿಯರು, 4,71,7589 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಬಾರಿ ಪರೀಕ್ಷೆ ಬರೆದ 6,235 ದಿವ್ಯಾಂಗ ವಿದ್ಯಾರ್ಥಿಗಳು ಸಹ ಪಾಸ್ ಆಗಿದ್ದಾರೆ.

    ಮಾರ್ಚ್ 27ರಿಂದ ಏಪ್ರಿಲ್ 13ರವರೆಗೆ 10ನೇ ಕ್ಲಾಸ್ ಪರೀಕ್ಷೆಗಳು ನಡೆದಿದ್ದವು. ಕೊರೊನಾದಿಂದಾಗಿ ಫಲಿತಾಂಶ ತಡವಾಗಿ ಪ್ರಕಟಗೊಂಡಿದೆ. ಶೇ.80 ರಷ್ಟು ಅಂಕಗಳು ತ್ರೈಮಾಸಿಕ ಮತ್ತು ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಪಡೆದಿರುತ್ತಾರೆ. ಇನ್ನುಳಿದ ಶೇ.20 ಅಂಕಗಳು ವಿದ್ಯಾರ್ಥಿಗಳ ಹಾಜರಾತಿಗೆ ನೀಡಲಾಗಿರುತ್ತದೆ.

    ಇಂದು ಮಧ್ಯಾಹ್ನ ಮೂರು ಗಂಟೆಗೆ ನಮ್ಮ ರಾಜ್ಯದ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಲಿದೆ. ಜುಲೈ 3ರಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಗಿದಿದ್ದು, ಕೊರೊನಾ ಮಧ್ಯೆ ಯಶಸ್ವಿಯಾಗಿ ನಡೆದಿದ್ದ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಮುಗಿಯುತ್ತಿದ್ದಂತೆ ಮೌಲ್ಯಮಾಪನವನ್ನು ಸಹ ಅಷ್ಟೇ ವೇಗವಾಗಿ ಮುಗಿಸಲಾಗಿದೆ. ಸುಮಾರು 8.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

    ಫಲಿತಾಂಶ ಲಭ್ಯವಾಗೋ ವೆಬ್ ಸೈಟ್ ವಿವರ www.kseeb.kar.nic.in ಹಾಗೂ www.karresults.nic.in ವೆಬ್‍ಸೈಟ್‍ಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಫಲಿತಾಂಶ ನೋಡಬಹುದಾಗಿದೆ. ಅಲ್ಲದೆ ಪೋಷಕರ ಮೊಬೈಲ್‍ಗೆ ಫಲಿತಾಂಶದ ಎಸ್‍ಎಂಎಸ್ ಸಹ ಬರಲಿದೆ.

     

  • ಎಸ್‍ಎಸ್‍ಎಲ್‍ಸಿ ಫಲಿತಾಂಶ ದಿನಾಂಕ ಅಂತಿಮವಾಗಿಲ್ಲ- ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

    ಎಸ್‍ಎಸ್‍ಎಲ್‍ಸಿ ಫಲಿತಾಂಶ ದಿನಾಂಕ ಅಂತಿಮವಾಗಿಲ್ಲ- ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

    – ನಾಳೆ ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುದ್ದಿ ಸುಳ್ಳು

    ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶದ ದಿನಾಂಕ ಇನ್ನೂ ಅಂತಿಮವಾಗಿಲ್ಲ. ನಾಳೆ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟ ಎಂಬ ಸುದ್ದಿ ಸುಳ್ಳು ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅವರು, ನಾಳೆ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟ ಎಂಬ ಸುದ್ದಿ ಸತ್ಯವಲ್ಲ. ಇನ್ನೂ ದಿನಾಂಕ ನಿಶ್ಚಯವಾಗಿಲ್ಲ ಎಂದು ತಿಳಿಸಿದ್ದಾರೆ.

    “ನಾಳೆ SSLC ಫಲಿತಾಂಶ ಪ್ರಕಟ”
    ಎಂಬ ಸುದ್ಧಿ ಸತ್ಯವಲ್ಲ. ಇನ್ನೂ ದಿನಾಂಕ ನಿಶ್ಚಯವಾಗಿಲ್ಲ.

    Posted by Suresh Kumar S on Wednesday, August 5, 2020

    ಕೊರೊನಾ ಮಧ್ಯೆಯೂ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವ ಮೂಲಕ ಸರ್ಕಾರ ಸಾಹಸ ಮಾಡಿದೆ. ವಿದ್ಯಾರ್ಥಿಗಳು ಸಹ ಅಷ್ಟೇ ಧೈರ್ಯವಾಗಿ ಪರೀಕ್ಷೆ ಎದುರಿಸಿದ್ದು, ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ಆದರೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ದಿನಾಂಕವನ್ನು ಇನ್ನೂ ಅಂತಿಮಪಡಿಸಿಲ್ಲ. ಈ ಕುರಿತು ಸ್ವತಃ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

  • ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿ 3 ದಿನವಾದ್ರೂ ಇಲ್ಲಿ ಫಲಿತಾಂಶ ಸಿಕ್ಕಿಲ್ಲ

    ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿ 3 ದಿನವಾದ್ರೂ ಇಲ್ಲಿ ಫಲಿತಾಂಶ ಸಿಕ್ಕಿಲ್ಲ

    ಕಲಬುರಗಿ: ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಿ ಮೂರು ದಿನಗಳು ಕಳೆದಿವೆ. ಆದರೆ ಜಲ್ಲೆಯ ಚಿಂಚೋಳಿ ತಾಲೂಕಿನ ರಾಯಕೋಡ ಗ್ರಾಮದ ಶಾಲೆಯಲ್ಲಿ ಇನ್ನೂ ಫಲಿತಾಂಶ ಪ್ರಕಟವಾಗಿಲ್ಲ.

    ಈ ಶಾಲೆಯ ಶಿಕ್ಷಕರಿಬ್ಬರೂ ಹೆಡ್‍ಮಾಸ್ಟರ್ ನಾನಲ್ಲ ಅಂತ ಕಚ್ಚಾಡಿಕೊಂಡು ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟ ಆಡ್ತಿದ್ದಾರೆ. ಕಷ್ಟಪಟ್ಟು ಓದಿರೋ ಮಕ್ಕಳು ಕೆಲವೇ ಅಂಕಗಳಲ್ಲಿ ಫೇಲಾಗಿದ್ದಾರಂತೆ. ಹೀಗಾಗಿ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಲು ಪರದಾಡುತ್ತಿದ್ದಾರೆ.

    ಈ ಶಾಲೆಗೆ ಹಿಂದೆ ರಾಜಕುಮಾರ ಎಂಬವರು ಮುಖ್ಯೋಪಾಧ್ಯಾಯರಾಗಿದ್ದರು. 4 ತಿಂಗಳು ಹಿಂದೆ ವರ್ಗಾವಣೆಯಾಗಿ ಬೇರೊಂದು ಶಾಲೆಗೆ ಹೋಗಿದ್ದಾರೆ. ಅಂದಿನಿಂದ ಏಪ್ರಿಲ್ 10ರವರೆಗೆ ಶಿಕ್ಷಣ ಇಲಾಖೆ ಪ್ರಭಾರಿ ಮುಖ್ಯಗುರುಗಳಾಗಿ ಲಿಂಗಣ್ಣ ಅವರನ್ನು ನೇಮಕ ಮಾಡಿದೆ. ಆದ್ರೆ ಅವರು ಸಹ ನೇಮಕವಾದ ದಿನದಿಂದ ಶಾಲೆಯತ್ತ ಮುಖ ಮಾಡಿಲ್ಲ.

    ಇಲ್ಲಿನ ಶಿಕ್ಷಕರಿಗೂ ಸಹ 4 ತಿಂಗಳಿನಿಂದ ಸಂಬಳವಾಗಿಲ್ಲ. ಈ ಕುರಿತು ಶಿಕ್ಷಣ ಇಲಾಖೆಗೆ ಎಸ್‍ಡಿಎಂಸಿ ಅಧ್ಯಕ್ಷರು ಮತ್ತು ಗ್ರಾಮಸ್ಥರು ದೂರು ನೀಡಿದ್ದರೂ ಇಲಾಖೆ ಮಾತ್ರ ಇತ್ತ ಗಮನ ಹರಿಸುತ್ತಿಲ್ಲ.